ಶೃಂಗೇರಿ:- ವಿದ್ಯಾದಿದೇವತೆ ಶಾರದೆಯ ನೆಲೆವೀಡು

ಶ್ರೀ ಶಾರದಾಂಬ ದೇವಾಲಯ

ಜಿಲ್ಲೆಯಿಂದ ೧೦೦ ಕಿ.ಮೀ
ತಾಲ್ಲೂಕಿನಿಂದ ೦ ಕಿ.ಮೀ

ಶ್ರೀ ಮಠದ ಮಹಾ ದ್ವಾರದ ಮೂಲಕ ಒಳಕ್ಕೆ ಪ್ರವೇಶಿಸಿ ಸ್ವಲ್ಪ ಮುಂದೆ ಹೋದಡೆ ನಮ್ಮ ಬಲಗಡೆಗೆ ಕಾಣಿಸುವ ಮುಖ ಮಂಟಪ ಮತ್ತು ಪಂಚಕಳಸ ಗೋಪುರವುಳ್ಳ ಶಿಲಾಮಯ ದೇವಸ್ಥಾನವೇ ಶ್ರೀ ಶಾರದಾಂಭೆ ದೇವಾಲಯ. ಈ ದೇವಾಲಯವು ಚೌಕಾಕಾರದಲ್ಲಿದೆ. ಈ ಶಿಲಾಮಯ ದೇವಸ್ಥಾನ ಒಳಭಾಗವನ್ನು ಭವ್ಯ ಹಾಗೂ ಅದ್ಭುತವಾಗಿ ನಿರ್ಮಿಸಿದ್ದಾರೆ. ನಡುವೆ ಗಾಜಿನಂತೆ ಹೊಳಪುಳ್ಳ ಕಪ್ಪು ಕಲ್ಲಿನ ಗರ್ಭ ಗೃಹ ಇದೆ. ಆಚಾರ್ಯ ಶಂಕರರಿಂದ ಪ್ರತಿಷ್ಟಾಪಿಸಲ್ಪಟ್ಟಿರುವ ಶ್ರೀ ಶಾರದ ದೇವಿಯ ವಿಗ್ರಹ ಇಲ್ಲಿದೆ.

 

ಶ್ರೀ ವಿದ್ಯಾ ಶಂಕರ ದೇವಾಲಯ

ಜಿಲ್ಲೆಯಿಂದ ೧೦೦ ಕಿ.ಮೀ
ತಾಲ್ಲೂಕಿನಿಂದ ೦ ಕಿ.ಮೀ

ಶೃಂಗೇರಿ ಶಾರದಾಂಭ ದೇವಸ್ಥಾನದ ಪಕ್ಕದಲ್ಲಿ ಬಲ ಭಾಗಕ್ಕೆ ನೋಡಿದಾಗ ಬೃಹತ್ ಕಲ್ಲಿನ ರಥದಂತೆ ಕಾಣುವ ಆಕರ್ಷಕ ಶಿಲಾಮಯ ದೇವಾಲಯವೇ ಶ್ರೀ ವಿದ್ಯಾ ಶಂಕರ ದೇವಾಲಯ. ಶೃಂಗೇರಿ ಪೀಠದ ೧೦ ನೇ ಆಚಾರ್ಯ ಯೋಗಸಿದ್ದ ಶ್ರೀ ಶ್ರೀ ವಿದ್ಯಾತೀರ್ಥ (ವಿದ್ಯಾಶಂಕರ)ರು ನದಿ ತೀರದ ಗುಹೆಯನ್ನು ಪ್ರವೇಶಿಸಿ ಲಂಬಿಕಯೋಗ ನಿರತರಾದರು. ಅವರ ಸಮಾಧಿಯ ಮೇಲೆ ಅವರ ಶಿಷ್ಯರಾದ ಶ್ರೀ ಶ್ರೀ ಭಾರತೀಕೃಷ್ಣತೀರ್ಥರು ಕ್ರಿ.ಶ ೧೩೩೮ ರಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಿಸಿದರು. ಈ ದೇವಾಲಯವು ಹೊಯ್ಸಳ, ದ್ರಾವಿಡ ಹಾಗೂ ವಿಜಯನಗರ ಶಿಲ್ಪಕಲಾ ಚಾತುರ್ಯಕ್ಕೆ ತಾಂತ್ರಿಕ ನೈಪುಣ್ಯಗಳ ದೃಷ್ಟಿಯಿಂದ ಪ್ರಖ್ಯಾತಿ ಪಡೆದಿದೆ. ದೇವಸ್ಥಾನದ ಒಳಗಡೆ ಖಗೋಳ ಶಾಸ್ತ್ರಕ್ಕನುಸಾರವಾಗಿ ಮೇಷಾದಿ ೧೨ ರಾಶಿಗಳ ಸಂಕೇತವುಳ್ಳ ೧೨ ಕಂಬಗಳು ಆಯಾ ಮಾಸದಲ್ಲಿ ಉದಯ ರವಿಯ ಪ್ರಥಮ ಕಿರಣಗಳು ಆಯಾ ರಾಶಿ ಸಂಕೇತದ ಕಂಭದ ಮೇಲೆ ಬೀಳುವಂತೆ ಯೋಜಿಸಿರುವ ಶಿಲ್ಪಕಲಾಚಾರ್ಯ ಅತ್ಯದ್ಬುತವಾಗಿದೆ.

 

ಕಪ್ಪೆ ಶಂಕರ

ಸ್ನಾನ ಘಟ್ಟದಲ್ಲಿ ಸೋಪಾನಗಳನ್ನು ಇಳಿದುಹೊದರೆ ನದಿಗೆ ಸಮೀಪದಲ್ಲಿ ಒಂದು ಚಿಕ್ಕ ಮಂಟಪದಲ್ಲಿ ಶಿವಲಿಂಗ, ಕಪ್ಪೆ ಅದಕ್ಕೆ ಬಿಸಿಲಿನ ಜಳ ಬೀಳದಂತೆ ಹೆಡೆ ಬಿಚ್ಚಿ ನೆರಳು ನೀಡುತ್ತಿರುವ ಸರ್ಪ, ಈ ಶಿಲ್ಪ ದೃಶ್ಯವನ್ನು ನೋಡಬಹುದು. ಪಶ್ಚಿಮ ಘಟ್ಟದ ಅಂಚನ್ನು ಅನುಸರಿಸಿ ಶ್ರೀ ಶಂಕರರು ಶಿಷ್ಯರೊಡನೆ ಇಲ್ಲಿಗೆ ಬಂದಾಗ ನಡು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಸರ್ಪ ಒಂದು ಕಪ್ಪೆಯೊಂದಕ್ಕೆ ಹೆಡೆ ಬಿಚ್ಚಿ ನೆರಳು ಉಂಟುಮಾಡುತ್ತಿದ್ದುದನ್ನು ನಿರ್ವೈರ ಸ್ಥಳ ಎಂದು ನಿರ್ಧರಿಸಿಕೊಂಡು ಶ್ರೀ ಶಂಕರರು ಮಾದಲು ಧರ್ಮ ಪೀಠವನ್ನು ಇಲ್ಲಿಯೇ ಸ್ಥಾಪಿಸಿದರು. ಅದರ ಸಂಕೇತವೇ ಈ ಕಪ್ಪೆ ಶಂಕರದ ಶಿಲ್ಪ ದೃಶ್ಯ.

 

ನರಸಿಂಹ ವನ

ತುಂಗಾ ನದಿಯ ಬಲ ಭಾಗದ ದಂಡೆಯ ಮೇಲೆ ಕಾಲಭೈರವನ ಗುಡ್ಡದ ತಪ್ಪಲಿನಲ್ಲಿ ನರಸಿಂಹವನ ಕಂಗೊಳಿಸುತ್ತದೆ. ವಿದ್ಯಾ ಶಂಕರ ದೇವಾಲಯದ ಬಲ ಭಾಗದಲ್ಲಿರುವ ತುಂಗಾ ನದಿಯ ಸೇತುವೆ ಮೇಲೆ ಸ್ವಲ್ಪ ದೂರ ಸಂಚರಿಸಿದರೆ ಸಿಗುವುದೇ ನರಸಿಂಹ ವನ. ೩೩ ನೇ ಆಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತಿಗಳು ಏಕಾಂತದ ತಪಸ್ಸು, ಧ್ಯಾನ ಮಾಡಲು ಅನುಕೂಲವಾಗುವಂತೆ ಈ ಆಶ್ರಮವನ್ನು ನಿರ್ಮಾಣ ಮಾಡಿಸಿದರು. ಸಂಮೃದ್ದವಾದ ತೆಂಗಿನ ತೋಟ, ಫಲ ವೃಕ್ಷಗಳು ಹಾಗೂ ಹೂವಿನ ತೋಟಗಳಿಂದ ಕಂಗೊಳಿಸುವ ಈ ನರಸಿಂಹ ವನದಲ್ಲಿರುವ ಶ್ರೀ ಸಚ್ಚಿದಾನಂದ ವಿಲಾಸವು ನೋಡಲು ಆಕರ್ಷಣೀಯವಾಗಿದೆ.

 

ಇದು ನರಸಿಂಹ ವನದಲ್ಲೆ ಇದೆ. ದಕ್ಷಿಣಾಮ್ನಾಯ ಶ್ರೀ ಶಾರದ ಪೀಠದಲ್ಲಿ ವಿರಾಜಮಾನರಾಗಿರುವ ಶ್ರೀ ಜಗದ್ಗುರು ಮಹಾ ಸ್ವಾಮಿಗಳವರು ವಾಸಿಸುವ ದಿವ್ಯ ಸ್ಥಾನವೇ ಗುರು ನಿವಾಸ. ಈ ಭವ್ಯ ಮಂದಿರದಲ್ಲೆ ಶ್ರೀ ಶ್ರೀ ರವರು ಭಕ್ತ ಕೋಟಿಗೆ ದರ್ಶನವನ್ನು ನೀಡುವುದು. ಈ ಗುರು ನಿವಾಸವು ೧೫೦೦ ಜನ ಒಟ್ಟಿಗೆ ಕುಳಿತುಕೊಳ್ಳಬಹುದಾದ ವಿಶಾಲ ಮಂದಿರ. ಯಾವ ಕಂಬಗಳ ನೆರವು ಇಲ್ಲದೇ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿತವಾದ ಈ ಮಂದಿರದ ಮೇಲ್ಬಾಗದಲ್ಲಿರುವ ೧೫ ಅಡಿ ಎತ್ತರದ ದೊಡ್ಡ ತಾಮ್ರದ ಶಿಖರವು ಇದರ ಸೌಂದರ್ಯವನ್ನು ಹೆಚ್ಚಿಸಿದೆ.

 

ಕಿಗ್ಗಾ:

ಜಿಲ್ಲೆಯಿಂದ ೧೦೮ ಕಿ.ಮೀ
ತಾಲ್ಲೂಕಿನಿಂದ ೮ ಕಿ.ಮೀ

ಸಹ್ಯಾದ್ರಿಯ ತಪ್ಪಲಿನಲ್ಲಿರುವ ಕಿಗ್ಗಾವು ಋಷ್ಯಶೃಂಗರ ತಪೋಭೂಮಿ, ತುಂಗೆಯ ಉಪ ನದಿಯಾದ ನಂದಿನಿಯು ಇಲ್ಲಿ ಪ್ರವೇಶಿಸುತ್ತಾಳೆ. ಪ್ರಾಚೀನವಾದ ಐತಿಹಾಸಿಕ ಹಿನ್ನೆಲೆಯುಳ್ಳ ಕಿಗ್ಗ ಒಂದು ಪ್ರೆಕ್ಷಣೀಯ ಸ್ಥಳ. ಋಷ್ಯಶೃಂಗ ಮಹರ್ಷಿಗಳ ಪಾದದೂಳಿನಿಂದ ಪುನೀತವಾದ ಪುಣ್ಯಭೂಮಿ. ಅಯೋದ್ಯೆಯ ಮಹಾರಾಜನಾದ ದಶರಥನು ಇವರಿಂದ ಪುತ್ರ ಕಾಮೇಷ್ಟಿಯಾಗ ಮಾಡಿಸಿದ ನಂತರ ಶ್ರೀ ರಾಮ ಮುಂತಾದ ನಾಲ್ವರು ಪುತ್ರರ ಅನುಗ್ರಹವಾಯಿತು. ಋಷ್ಯಶೃಂಗರು ಐಕ್ಯರಾದ ಶಿವಲಿಂಗವನ್ನು ನೋಡಲು ನಯನ ಮನೋಹರವಾಗಿದೆ.

 

ಸದ್ವಿದ್ಯ ಸಂಜೀವಿನಿ ಸಂಸ್ಕೃತ ಪಾಠಶಾಲೆ

ಅಂತರರಾಷ್ಟ್ರೀಯ ಅದ್ವೈತ ಸಂಶೋಧನಾ ಕೇಂದ್ರದಿಂದ ಮುಂದೆ ಸಾಗಿದರೆ ನಿಸರ್ಗರಮ್ಯ ಶಾಂತಪರಿಸರದಲ್ಲಿ ಈ ಪಾಠಶಾಲೆ ನಿಜವಾಗಿಯು ವೇದಕಾಲೀನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದೊಂದು ವೇದ ಅಧ್ಯಯನ ಕೇಂದ್ರ.

 

ಸಿರಿಮನೆ ಜಲಪಾತ

ಜಿಲ್ಲೆಯಿಂದ ೧೧೨ ಕಿ.ಮೀ
ತಾಲ್ಲೂಕಿನಿಂದ ೧೨ ಕಿ.ಮೀ

ಶೃಂಗೇರಿಯಿಂದ ಕಿಗ್ಗಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸ್ವಲ್ಪ ಒಳ ಭಾಗದಲ್ಲಿ ಎಡಕ್ಕೆ ಪ್ರವೇಶಿಸಿದರೆ ಅಥವಾ ಕಿಗ್ಗದಿಂದ ಪ್ರಯಾಣ ಬೆಳಸಿದರೆ ನಮಗೊಂದು ಸುಂದರ ಜಲಪಾತ ಕಾಣಿಸುತ್ತದೆ. ಅದೇ ಸಿರಿಮನೆ ಜಲಪಾತ. ಸುಮಾರು ೪೦ ಅಡಿ ಎತ್ತರದಿಂದ ನೀರು ದುಮಿಕ್ಕುತ್ತದೆ. ಜಲ ವಿದ್ಯುತ್ ತಯಾರಿಸುವ ಪುಟ್ಟ ಘಟಕವೊಂದು ಕಾಣಸಿಗುತ್ತದೆ.

 

ಉಳುವೆ

ಜಿಲ್ಲೆಯಿಂದ ೧೦೦ ಕಿ.ಮೀ
ತಾಲ್ಲೂಕಿನಿಂದ ೨ ಕಿ.ಮೀ

ಇದೊಂದು ಪಕ್ಷಿಧಾಮ, ಒಂದು ಕೊಳವಿದ್ದು, ಸುತ್ತಲು ಇರುವ ಪ್ರಕೃತಿ ಸಹಜ ವಾತಾವರಣದಲ್ಲಿ ದೇಶವಿದೇಶಗಳಿಂದ ವಲಸೆ ಬಂದಿರುವ ಅನೇಕ ಪಕ್ಷಿಗಳು ಇಲ್ಲಿ ಕೆಲ ಕಾಲದವರೆಗೆ ವಾಸಿಸುತ್ತವೆ. ಸಂಜೆ ಸಮಯದಲ್ಲಿ ನೋಡಲು ಸುಂದರ.

 

ಅಂತರ ರಾಷ್ಟ್ರೀಯ ಅದ್ವೈತ ಸಂಶೋಧನಾ ಕೇಂದ್ರ

ಗುರು ನಿವಾಸದಿಂದ ಸ್ವಲ್ಪ ಮುಂದೆ ಸಾಗಿದರೆ ಕಣ್ಣಿಗೆ ಕಾಣುವ ಬೃಹತ್ ಕಟ್ಟಡವೇ ಅಂತರರಾಷ್ಟ್ರೀಯ ಅದ್ವೈತ ಸಂಶೋಧನಾ ಕೇಂದ್ರ. ಇಲ್ಲಿ ಗ್ರಂಥಾಲಯ ತಾಳೆಗರಿಗಳ ಸಂಗ್ರಹಗಳನ್ನು ನೋಡಬಹುದು.