ಸಂಗೀತಕ್ಕೆ ಪ್ರಾಶಸ್ತ್ಯ ಪಡೆದ ಮನೆತನದಲ್ಲಿ ಮಂತ್ರಿ ಸಂಪತ್ಕುಮಾರಾಚಾರ್ಯರ ಪುತ್ರರಾಗಿ ೧೯೧೫ರಲ್ಲಿ ಮೇಲುಕೋಟೆಯಲ್ಲಿ ಜನ್ಮತಾಳಿದ ಶೆಲ್ವಪುಳ್ಳೆ ಅಯ್ಯಂಗಾರ್ ಅವರು ತಮ್ಮ ಪ್ರಾರಂಭಿಕ ಸಂಗೀತ ಶಿಕ್ಷಣವನ್ನು ತಂದೆಯವರಿಂದಲೇ ಪಡೆದು ಮುಂದೆ ತಂಜಾವೂರಿನ ಎನ್‌. ರಾಮಸ್ವಾಮಿ ಅಯ್ಯರ್ ಹಾಗೂ ಬಿಡಾರಂ ಕೃಷ್ಣಪ್ಪನವರಲ್ಲಿ ಉನ್ನತಾಭ್ಯಾಸ ಮಾಡಿದರು. ಇಷ್ಟರಿಂದಲೇ ತೃಪ್ತರಾಗದೆ ಚಿದಂಬರಂನಲ್ಲಿನ ಸಂಗೀತ ಕಲಾ ಶಾಲೆಯಲ್ಲಿ ಸಭೇಶ ಐಯ್ಯರ್, ತಂಜಾವೂರು ಪೊನ್ನಪಿಳ್ಳೆಯಂತಹವರ ಮಾರ್ಗದರ್ಶನದಲ್ಲಿ ತಮ್ಮ ಸಂಗೀತ ಜ್ಞಾನವನ್ನು ವೃದ್ಧಿಸಿಕೊಂಡು ‘ಸಂಗೀತ ಭೂಷಣ’ ಪದವಿಯನ್ನು ಸಹ ಗಳಿಸಿದರು.

ಪ್ರಯೋಗದಂತೆಯೇ ಶಾಸ್ತ್ರ ಭಾಗದಲ್ಲೂ ಪರಿಣತಿ ಪಡೆದಿದ್ದ ಐಯ್ಯಂಗಾರರು ನಾಡಿನ ಅನೇಕಾನೇಕ ಪ್ರಮುಖ ಸಂಗೀತ ಸಮ್ಮೇಳನಗಳಲ್ಲಿ, ಸಭೆಗಳಲ್ಲಿ, ಗಾಯನ ಕಛೇರಿಗಳನ್ನು ನೀಡಿ ಜನಮನ್ನಣೆ ಪಡೆದರು. ಮೈಸೂರು ಅರಮನೆಯಲ್ಲಿ ಮಹಾರಾಜರ ಸಮಕ್ಷಮದಲ್ಲಿ ಹಾಡಿದ ಹೆಗ್ಗಳಿಕೆಗೂ ಪಾತ್ರರಾದರು.

೧೯೪೨ರಲ್ಲಿ ಮೈಸೂರು ಆಕಾಶವಾಣಿಯ ನಿಲಯದ ಕಲಾವಿದರಾಗಿ ಆರಂಭಿಸಿ ಮುಂದೆ ಬೆಂಗಳೂರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಅನೇಕ ಕಛೇರಿಗಳನ್ನು ಮಾಡಿದುದು ಮಾತ್ರವಲ್ಲದೆ ತಮ್ಮ ಸಂಗೀತ ನಿರ್ದೇಶನದ ಕಾರ್ಯಕ್ರಮಗಳ ಮೂಲಕವೂ, ಸಂಗೀತ ಶಿಕ್ಷಣ ನೀಡುವುದರ ಮೂಲಕವೂ ಜನಮಾನ್ಯತೆ ಪಡೆದರು.

ಬೆಂಗಳೂರು ಗಾಯನ ಸಮಾಜ, ಮೈಸೂರಿನ ಹನುಮಜ್ಜಯಂತಿ ಉತ್ಸವ ಸಮಿತಿಗಳಿಂದ ಸನ್ಮಾನಿತರಾದ ಶ್ರೀಯುತರು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಗೌರವ ಸಹ ಹೊಂದಿದರು.

ಸಂಪ್ರದಾಯ ಶುದ್ಧತೆಗೆ ಆಳವಾದ ಪಾಂಡಿತ್ಯ – ಜ್ಞಾನಗಳಿಗೆ ಹೆಸರಾಗಿದ್ದ ಇವರು ೨೫-೪-೧೯೯೩ ರಂದು ನಾದ ಬ್ರಹ್ಮನಲ್ಲಿ ಐಕ್ಯರಾದರು.