ಪೀಠಿಕೆ

ಕೃಷಿಯೆಂದೊಡನೆ ಪ್ರಮುಖವಾಗಿ ವಿಚಾರಿಸಬೇಕಾದ ಅಂಶಗಳಲ್ಲಿ ಬೀಜವೂ ಒಂದು. ಕೃಷಿಯ ಪ್ರಮುಖ ಅವಶ್ಯಕ ಸಾಮಗ್ರಿಗಳಲ್ಲಿ ಬೀಜ ಅಗ್ರಗಣ್ಯವಾದದ್ದು. ರೈತರು ಮಾಡುತ್ತಿರುವ ಕೃಷಿಯ ಫಲಾಫಲಗಳು ಹಾಗೂ ಸ್ಥಿತಿ – ಗತಿಯ ಅಳತೆಗೋಲನ್ನು ಅವರು ಉಪಯೋಗಿಸುವಂತಹ ಬೀಜದ ಗುಣಮಟ್ಟದ ಆಧಾರದ ಮೇಲೆ ಮಾಡಬಹುದಾಗಿದೆ. “ಬೆಳೆಯ ಸಿರಿಯನ್ನು ಮೊಳಕೆಯಲ್ಲಿ ಕಾಣು” ಎಂಬ ನುಡಿಯಂತೆ ಉತ್ತಮ ಮೊಳಕೆ ಬಂದು ಮುಂದೆ ಉತ್ತಮ ಬೆಳೆ ಬರಬೇಕಾದರೆ ಬೀಜ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಕೃಷಿಯಲ್ಲಿ ಉತ್ತಮವಾದ ಫಸಲು, ಗುಣಮಟ್ಟದ ಉತ್ಪನ್ನ ಹಾಗೂ ಯೋಗ್ಯ ತಂತ್ರಜ್ಞಾನಗಳು ಒಂದಕ್ಕೊಂದು ಪೂರಕವಾಗಿ ವರ್ತಿಸಿ ಉತ್ಪಾದನೆಯ ಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತವೆ.

ನಮಗೆಲ್ಲ ತಿಳಿದಿರುವಂತೆ ಸುಧಾರಿತ ಬೀಜಗಳು ತುಂಬ ದುಬಾರಿಯಾದ ಕೃಷಿ ಸಾಮಗ್ರಿಯಾಗಿದ್ದು, ಕೃಷಿಯ ಒಟ್ಟಾರೆ ಖರ್ಚಿನಲ್ಲಿ ಸಿಂಹಪಾಲು ಪಡೆಯುವುದು ಶೇಂಗಾ ಬೆಳೆಯಲ್ಲಿ ಸಿದ್ಧವಾಗಿದೆ. ಶೇಂಗಾ ಬೆಳೆಯಲ್ಲಿ ಸುಧಾರಿತ ತಳಿಗಳ ಬೀಜದ ಲಭ್ಯತೆ ಕಠಿಣ ಕಾರ್ಯಗಳಲ್ಲಿ ಒಂದು. ಈ ಸಮಸ್ಯೆ ಭಾರತವಲ್ಲದೇ ಹಲವಾರು ಶೇಂಗಾ ಬೆಳೆಯುವ ರಾಷ್ಟ್ರಗಳಲ್ಲಿಯೂ ಕಂಡುಬರುವ ಸಮಸ್ಯೆಯಾಗಿದೆ. ಶೇಂಗಾ ಬೀಜೊತ್ಪಾದನೆಯಲ್ಲಿ ಖಾಸಗಿ ಕಂಪನಿಗಳು ಸಹಿತ ಅಷ್ಟೊಂದು ಆಸಕ್ತಿ ವಹಿಸಿ ಬೀಜೋತ್ಪಾದನೆ ಮಾಡದಿರುವುದಕ್ಕೆ ಹಲವಾರು ಕಾರಣಗಳುಂಟು. ಈ ಬೆಳೆಯಲ್ಲಿ ಬೀಜೋತ್ಪಾದನೆ ಪ್ರಮಾಣ ಕಡಿಮೆ ಇರುವುದು, ಶೇಂಗಾ ಕಾಯಿಗಳ ಗಾತ್ರ ಹೆಚ್ಚಾಗುವುದರಿಂದ ಸಂಗ್ರಹ ಮತ್ತು ಸಾರಿಗೆ ಮಾಡುವಲ್ಲಿ ಹೆಚ್ಚಿನ ಶ್ರಮ ಹಾಗೂ ಖರ್ಚು ತಗಲುವುದು. ಬೀಜ ಮೋಳಕೆಯೊಡೆಯುವ ಪ್ರಮಾಣವು ಬೇಗನೆ ಕುಸಿಯುವ ಗುಣ, ಕಡಿಮೆ ಲಾಭದ ಪ್ರಮಾಣ ಸ್ವಯಂ ಪರಾಗಸ್ಪರ್ಶ ಗುಣ, ಇತ್ಯಾದಿಗಳ ಪರಿಣಾಮವಾಗಿ ಖಾಸಗಿ ಸಂಸ್ಥೆಗಳು ಶೇಂಗಾ ಬೀಜೋತ್ಪಾದನೆಯಲ್ಲಿ ಅಷ್ಟೊಂದು ಅಭಿರುಚಿ ತೋರಿಸುತ್ತಿಲ್ಲ. ಪರಿಸ್ಥಿತಿ ಹೀಗಿರುವುದರಿಂದ ಶೇಂಗಾ ಬೆಳೆಯಲ್ಲಿ ಸುಧಾರಿತ ಬೀಜವನ್ನು ಉತ್ಪಾದಿಸುವ ಜವಾಬ್ದಾರಿಯು ಸರಕಾರಿ ಸಂಸ್ಥೆಗಳ ಮೇಲೆಯೇ ಬಿದ್ದಿದೆ. ಸರಕಾರಿ ಬೀಜೋತ್ಪಾದನಾ ಸಂಸ್ಥೆಗಳು ರೈತರ ಅವಶ್ಯಕತೆಗೆ ಅನುಗುಣವಾಗಿ ಬೀಜೋತ್ಪಾದನೆ ಮಾಡುವಲ್ಲಿ ಫಲಕಾರಿಯಾಗುತ್ತಿಲ್ಲ. ನಮ್ಮ ದೇಶವನ್ನೊಡಗೂಡಿ ಹಲವಾರು ಅಭಿವೃದ್ಧಿಶೀಲ ದೇಶಗಳಲ್ಲಿ ಶೇಂಗಾ ಬೀಜೋತ್ಪಾದನೆಯ ಸ್ಥಿತಿ – ಗತಿ ಒಂದೇ ಆಗಿದೆ. ಇದರ ಪರಿಣಾಮವಾಗಿ ಬೀಜಕ್ಕಿರುವ ಬೇಡಿಕೆ, ಉತ್ಪಾದನೆ ಮತ್ತು ಸರಬರಾಜಿನಲ್ಲಿ ಅಪಾರ ಅಂತರವಿದೆ. ಅದರಲ್ಲಿಯೂ ಸುಧಾರಿತ ತಳಿಗಳ ಅಡಿಯಲ್ಲಿಯ ಪ್ರದೇಶ ಹೆಚ್ಚಾಗುವಲ್ಲಿ ಪ್ರಗತಿ ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಸಮಸ್ಯೆಯು ಶೇಂಗಾ ಬೆಳೆಯ ಬೀಜೋತ್ಪಾದನಾ ಪ್ರಮಾಣವು ಕಡಿಮೆ ಇರುವ ವಿಶೇಷ ಗುಣದಿಂದ ಇನ್ನೂ ಹೆಚ್ಚಾಗಿದೆ.

ಪರಿಸ್ಥಿತಿ ಹೀಗಿರುವಾಗ ಬೀಜೋತ್ಪಾದನಾ ಕಾರ್ಯವನ್ನು ಪ್ರಗತಿಪರ ರೈತರು, ರೈತರ ಸಂಘಟನೆಗಳು, ರೈತರ ಬೀಜ ಬ್ಯಾಂಕ್‌ಗಳು, ಸರಕಾರೇತರ ಸಂಘ ಸಂಸ್ಥೆಗಳು ಕೈಗೆತ್ತಿಕೊಳ್ಳುವ ಮೂಲಕ ಬೀಜೋತ್ಪಾದನೆ ಹಾಗೂ ಬೀಜಕ್ಕಾಗಿ ಇರುವ ಬೇಡಿಕೆಯ ಮಧ್ಯದಲ್ಲಿರುವ ಅಂತರವನ್ನು ಕಡಿಮೆ ಮಾಡಬಹುದಾಗಿದೆ. ಹೀಗೆ ಮಾಡಬೇಕೆಂದರೆ ಶೇಂಗಾ ಬೀಜ ಉತ್ಪಾದನೆಯ ತಂತ್ರಜ್ಞಾನದ ಸಮರ್ಪಕ ಅರಿವು ಇದರಲ್ಲಿ ತೊಡಗಿಸಿಕೊಳ್ಳುವ ರೈತ ಬಾಂಧವರಿಗೆ ಹಾಗೂ ಸಂಘ – ಸಂಸ್ಥೆಗಳಿಗೆ ತಲುಪುವಂತೆ ಮಾಡುವ ವಿವಿಧ ಪ್ರಯತ್ನಗಳಲ್ಲಿ ಈ ಪ್ರಕಟಣೆಯೂ ಒಂದು. ಈ ಪ್ರಕಟಣೆಯಲ್ಲಿ ಶೇಂಗಾ ಬೀಜೋತ್ಪಾದನೆಗೆ ಅವಶ್ಯವಿರುವ ತಂತ್ರಜ್ಞಾನಗಳು ಮತ್ತು ವಿವಿಧ ಪ್ರಕಾರದ ವಿಧಿ – ವಿಜ್ಞಾನಗಳನ್ನು ಸರಳವಾಗಿ ನೀಡುವ ಪ್ರಯತ್ನ ಮಾಡುವ ಮುಖಾಂತರ ಶೇಂಗಾ ಬೆಳೆಯ ಬೀಜಗಳು ಸರ್ವರೈತರಿಗೆ ಸಿಗುವಂತಾಗಲಿ ಎಂಬುದು ನಮ್ಮ ಆಸೆ.

ಶೇಂಗಾಪ್ರಮುಖ ಎಣ್ಣೆಬೆಳೆ

ವಿಶ್ವದ ಪ್ರಮುಖ ಎಣ್ಣೆ ಬೆಳೆಗಳಲ್ಲಿ ತುಂಬಾ ಪ್ರಮುಖವಾದ ಬೆಳೆಗಳಲ್ಲಿ ಶೇಂಗಾ ಬೆಳೆಯು ಆರನೆಯ ಸ್ಥಾನದಲ್ಲಿದೆ. ಶೇಂಗಾ ಬೆಳೆಯು ಸುಮಾರು ೫೦% ರಷ್ಟು ಎಣ್ಣೆಯ ಅಂಶವನ್ನು ಹಾಗೂ ಸುಮಾರು ೫೦% ರಷ್ಟು ಎಣ್ಣೆಯ ಅಂಶವನ್ನು ಹಾಗೂ ಸುಮಾರು ೨೮% ರಷ್ಟು ಪ್ರೋಟೀನ್ ಪ್ರಮಾಣವನ್ನು ಹೊಂದಿದೆ. ಇದರಲ್ಲಿ ನೀರು ಖನಿಜಾಂಶಗಳು, ಹಾಗೂ ವಿಟ್ಯಾಮಿನ್‌ಗಳು ಹೇರಳವಾಗಿದ್ದು ದಿನಬಳಕೆಯಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ವಿಶ್ವದಲ್ಲಿ ಸುಮಾರು ೨೬.೪ ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾವನ್ನು ಬೆಳೆಯಲಾಗುತ್ತಿದ್ದು ಉತ್ಪಾದನೆಯ ಪ್ರಮಾಣವು ಸುಮಾರು ೩೭.೧ ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಇದ್ದು, ಪ್ರತಿ ಹೆಕ್ಟೇರಿನಿಂದ ಸರಾಸರಿ ೧.೫ ಮೆಟ್ರಿಕ್ ಟನ್ ಉತ್ಪಾದನೆ ಬರುತ್ತಲಿದೆ. ವಿಶ್ವದ ಸುಮಾರು ಒಂದುನೂರು ರಾಷ್ಟ್ರಗಳಲ್ಲಿ ಶೇಂಗಾ ಬೆಳೆಯನ್ನು ಬೆಳೆಯಲಾಗುತ್ತಿದೆ. ಅಭಿವೃದ್ಧಿಪರ ರಾಷ್ಟ್ರಗಳು ಸುಮಾರು ೯೭% ವಿಶ್ವದ ಶೇಂಗಾ ಪ್ರದೇಶವನ್ನು ಹೊಂದಿದ್ದು ಸುಮಾರು ೯೪% ಪ್ರತಿಶತದಷ್ಟು ವಿಶ್ವದ ಶೇಂಗಾ ಉತ್ಪಾದನೆಯನ್ನು ಮಾಡುತ್ತವೆ. ಶೇಂಗಾ ಬೆಳೆಯುವ ಪ್ರದೇಶವನ್ನು ವಿಶ್ಲೇಷಿಸಿ ನೋಡಿದಾಗ ಕಂಡುಬರುವುದೇನೆಂದರೆ, ಶೇಂಗಾ ಬೆಳೆಯು ಏಶಿಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ಹೆಚ್ಚು ಪ್ರಚಲಿತವಾದ ಬೆಳೆಯಾಗಿದ್ದು, ಏಶಿಯಾದಲ್ಲಿಯೇ ವಿಶ್ವದ ೫೬% ದಷ್ಟು ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದ್ದು ವಿಶ್ವದ ಸುಮಾರು ೬೮% ಉತ್ಪಾದನೆಯನ್ನು ಮಾಡಲಾಗುತ್ತದೆ. ಇನ್ನು ಆಫ್ರಿಕಾದ ಖಂಡವು ವಿಶ್ವದ ಸುಮಾರು ೪೦% ಪ್ರದೇಶವನ್ನು ಶೇಂಗಾ ಬೆಳೆಯಡಿಯಲ್ಲಿ ಹೊಂದಿದ್ದು ವಿಶ್ವದ ಸುಮಾರು ೨೫% ಉತ್ಪಾದನೆಯನ್ನು ಮಾಡುತ್ತದೆ.

ಶೇಂಗಾ ಸಸಿ ಹಾಗೂ ಬೀಜ

ಶೇಂಗಾ ಸ್ವಯಂ ಪರಾಗಸ್ಪರ್ಶ ಹೊಂದುವ ಗುಣವುಳ್ಳ ಉಷ್ಣವಲಯದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಜೇನುಹುಳುಗಳ ಚಟುವಟಿಕೆಗಳು ತುಂಬಾ ಕ್ರಿಯಾಶೀಲವಾಗಿದ್ದರೆ ಅಂತಹ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಪರಕೀಯ ಪರಾಗಸ್ಪರ್ಶಕ್ಕೆ ಅವಕಾಶವಿದೆ. ಶೇಂಗಾ ಬೆಳೆಯಲ್ಲಿ ಎರಡು ಪ್ರಮುಖ ಉಪಗುಂಪುಗಳಿವೆ, ಅವುಗಳನ್ನು ವೈಜ್ಞಾನಿಕವಾಗಿ ಹೈಪೋಜಿಯಾ ಹಾಗೂ ಫಾಸ್ಟಿಜಿಯೆಟಾ ಎಂದು ಕರೆಯಲಾಗುತ್ತದೆ. ಎರಡು ಉಪಗುಂಪುಗಳಲ್ಲಿ ಹೈಪೋಜಿಯಾ ಎರಡು ತಳಿಗಳನ್ನು ಹೊಂದಿದ್ದು ಅವುಗಳ ಹೆಸರು ಕ್ರಮವಾಗಿ ಹೈಪೋಜಿಯಾ ಹಾಗೂ ಹಿಡ್‌ಸುಟಾ ತಳಿಗಳಾಗಿವೆ. ಇನ್ನು ಫಾಸ್ಟಿಜಿಯೆಟಾ ಉಪಗುಂಪು ನಾಲ್ಕು ತಳಿಗಳನ್ನು ಹೊಂದಿದ್ದು ಅವುಗಳ ಹೆಸರು ಕ್ರಮವಾಗಿ ಫಾಸ್ಟಿಜಿಯೆಟಾ, ವಲ್‌ಗ್ಯಾರಿಸ್, ಪರ್‌ವಿನಿಯಾ, ಹಾಗೂ ಅಕ್ವೆಟೋರಿಯನಾ ಎಂದಿವೆ. ಪ್ರತಿಯೊಂದು ಸಸ್ಯತಳಿಗಳು ವಿವಿಧ ಪ್ರಕಾರದ ಗುಣ ಧರ್ಮಗಳನ್ನು ಹೊಂದಿವೆ. ಇವುಗಳ ಸಸ್ಯಗಳ ಗಾತ್ರ, ರೂಪ, ಕಾಳುಗಳ ರೂಪ, ಗಾತ್ರ, ಸಂಖ್ಯೆ ಹಾಗೂ ಬೀಜದ ವಿವಿಧ ಗುಣಧರ್ಮಗಳು ತಳಿಯಿಂದ ತಳಿಗೆ ಬೇರೆ ಬೇರೆಯಾಗಿರುತ್ತವೆ. ಸಾಮಾನ್ಯವಾಗಿ ವಾಣಿಜ್ಯ ಮಟ್ಟದಲ್ಲಿ ಬೆಳೆಯುವ ಶೇಂಗಾ ತಳಿಗಳು ಪ್ರಮುಖವಾಗಿ ಹೈಪೋಜಿಯಾ, ಫಾಸ್ಟಿಜಿಯೆಟಾ, ಹಾಗೂ ವಲ್‌ಗ್ಯಾರಿಸ್ ಗುಂಪುಗಳಿಗೆ ಸೇರಿವೆ.

ಬೀಜಗಳ ವರ್ಗಗಳು

ಔಪಚಾರಿಕವಾಗಿ ಬೀಜೋತ್ಪಾದನಾ ಪದ್ಧತಿಯಲ್ಲಿ ಬೀಜಗಳನ್ನು ಸುಮಾರು ೫ ವರ್ಗಗಳಾಗಿ ವಿಂಗಡಿಸುತ್ತಾರೆ.

೧. ನ್ಯೂಕ್ಲಿಯಸ್ ಬೀಜಗಳು

೨. ಬ್ರೀಡರ್‌ಬೀಜಗಳು (ತಳವರ್ಧಕ ಬೀಜಗಳು)

೩. ಫೌಂಡೇಶನ್ ಬೀಜಗಳು (ಮೂಲ ಬೀಜಗಳು)

೪. ರಜಿಸರ್ಡ್ ಬೀಜಗಳು (ನೋಂದಾಯಿತ ಬೀಜಗಳು)

೫. ಸರ್ಟಿಫೈಡ್ ಬೀಜಗಳು (ಪ್ರಮಾಣೀಕರಿಸಿದ ಬೀಜಗಳು)

ನ್ಯೂಕ್ಲಿಯಸ್ ಬೀಜಗಳು

ನ್ಯೂಕ್ಲಿಯಸ್ ಬೀಜಗಳು ಮೂಲ ಬೀಜದಿಂದ ಅಥವಾ ನ್ಯೂಕ್ಲಿಯಸ್ ಬೀಜದಿಂದ ಇಲ್ಲವೆ ತಳಿವರ್ಧಕ ಹತ್ತಿರವಿರುವ ಮೂಲ ಬೀಜದಿಂದ ಉತ್ಪಾದಿಸುವ ಬೀಜವಾಗಿದ್ದು ಇದನ್ನು ನೇರವಾಗಿ ತಳಿವರ್ಧಕರು ತಮ್ಮ ಸ್ವಂತ ಅವಗಾಹನೆಯಲ್ಲಿಯೇ ಉತ್ಪಾದಿಸುತ್ತಾರೆ. ಈ ಬೀಜವನ್ನು ಬೆಳೆಯಲು ‘ಪ್ರೊಜೆನಿ – ರೋ’ ಪದ್ಧತಿ ಅಥವಾ ಪ್ರೊಜೆನಿ ಸಾಲು ಪದ್ಧತಿಯನ್ನು ಅನುಸರಿಸಲಾಗುವದು. ಇದರಲ್ಲಿ ಮೂಲ ಬೀಜದ ಗುಣಹೊಂದಿದ ಸಸ್ಯಗಳನ್ನು ಒಂದೊಂದಾಗಿ ಆಯ್ಕೆ ಮಾಡಿ ತಳಿವರ್ಧಕರು ತಮ್ಮ ತಳಿವರ್ಧನಾ ಕ್ಷೇತ್ರಗಳಿಂದ ಉತ್ಪಾದಿಸುವರು. ಈ ರೀತಿಯಾಗಿ ಆಯ್ಕೆ ಮಾಡಲಾದ ಸಸ್ಯಗಳನ್ನು ಕೂಲಂಕುಷವಾಗಿ ಅವುಗಳ ಗುಣಧರ್ಮಗಳಿಗಾಗಿ ಅಧ್ಯಯನ ಮಾಡಿ ಕೇವಲ ಯಾವ ಸಸಿಗಳು ನಿರ್ದಿಷ್ಟಪಡಿಸಿದ ಎಲ್ಲಾ ಗುಣಗಳನ್ನು ಹೋಲುತ್ತವೆಯೋ ಅವುಗಳನ್ನು ವೈಯಕ್ತಿಕವಾಗಿ ಆಯ್ಕೆ ಮಾಡಲಾಗುವದು. ನಂತರ ಮುಂದಿನ ಬೆಳೆಯುವ ಹಂಗಾಮಿನಲ್ಲಿ ಆಯ್ಕೆಗೊಂಡ ಸಸಿಗಳ ಬೀಜಗಳನ್ನು ಸೂಕ್ತವಾಗಿ ಪ್ರೊಜೆನಿ ಸಾಲುಗಳಲ್ಲಿ ವೀಕ್ಷಿಸಲಾಗುವುದು. ಪರೀಕ್ಷೆಗೆ ಒಳಪಟ್ಟ ಪ್ರತಿಯೊಂದು ಪ್ರೊಜೆನಿ ಸಾಲುಗಳನ್ನು ಈ ರೀತಿಯಾಗಿ ಮೌಲ್ಯಮಾಪನ ಮಾಡಿದ ನಂತರ ಎಲ್ಲಾ ವಿಧದಲ್ಲಿ ಸಮವಾಗಿರುವ ಪ್ರೊಜೆನಿ ಸಾಲುಗಳನ್ನು ಕೊಯ್ಲು ಮಾಡಿ ಒಂದುಗೂಡಿಸಲಾಗುವುದು. ಈ ಮೌಲ್ಯ ಮಾಪನದಲ್ಲಿ ಯಾವುದಾದರೊಂದು ಸಾಲು ನಿರ್ದಿಷ್ಟಪಡಿಸಿದ ಗುಣಧರ್ಮಗಳಿಗೆ ವ್ಯತಿರಿಕ್ತವಾಗಿದ್ದರೆ ಅಂತಹ ಪ್ರೊಜೆನಿ ಸಾಲುಗಳನ್ನು ತಿರಸ್ಕರಿಸಲಾಗುವದು. ಈ ರೀತಿಯಾಗಿ ತಯಾರಿಸಿದ ಬೀಜವನ್ನು ನ್ಯೂಕ್ಲಿಯಸ್ ಬೀಜ ಎಂದು ಕರೆಯಲಾಗುವದು.

ತಳಿವರ್ಧಕ ಬೀಜ ಅಥವಾ ಬ್ರೀಡರ್ ಬೀಜಗಳು

ಬ್ರೀಡರ್ ಬೀಜವನ್ನು ಅದರ ಹೆಸರೇ ಸೂಚಿಸುವಂತೆ ಆ ಬೆಳೆಯ ತಳಿಯವರ್ಧನೆ ಮಾಡಿದ ವಿಜ್ಞಾನಿಯು ನ್ಯೂಕ್ಲಿಯಸ್ ಬೀಜವನ್ನು ಬಳಸಿ ತಮ್ಮ ಸಂಪೂರ್ಣ ಅವಗಾಹನೆಯಲ್ಲಿ ಉತ್ಪಾದಿಸುವ ಬೀಜವಾಗಿದೆ. ಈ ಬೀಜ ಫೌಂಡೇಶನ್ ಬೀಜದ ಪ್ರಮಾಣವನ್ನು ಹೆಚ್ಚಿಸಲು ಉಪಯೋಗವಾಗುವುದು. ತಳಿವರ್ಧಕರ ಬೀಜವು ಸಾಮಾನ್ಯ ಕೃಷಿ ಉತ್ಪಾದನೆಗೆ ಲಭ್ಯವಿರುವುದಿಲ್ಲ. ಶೇಂಗಾ ಬೀಜದಲ್ಲಿ ಬೀಜ ಉತ್ಪಾದನೆಯ ಪ್ರಮಾಣವು ಕಡಿಮೆ ಇರುವುದರಿಂದ, ಈ ಬೆಳೆಯಲ್ಲಿ, ಎರಡು ಹಂತದ ಬ್ರೀಡರ್ ಬೀಜ ಉತ್ಪಾದನೆಯನ್ನು ಭಾರತದಲ್ಲಿ ಸಮ್ಮತಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನ್ಯೂಕ್ಲಿಯಸ್ ಬೀಜವನ್ನು ಪ್ರಥಮ ಹಂತದ ಬ್ರೀಡರ್ ಬೀಜವನ್ನು ಉತ್ಪಾದಿಸಲು ಉಪಯೋಗಿಸಲಾಗುವುದು. ತದನಂತರ ಮೊದಲನೇ ಹಂತದ ಬ್ರೀಡರ್ ಬೀಜವನ್ನು ಎರಡನೇ ಹಂತದ ಬ್ರೀಡರ್ ಬೀಜವನ್ನು ಉತ್ಪಾದಿಸಲು ಬಳಸುವರು. ಇಲ್ಲಿ ಸೂಕ್ತವಾಗಿ ಪ್ರಮಾಣೀಕರಿಸಲಾದ ಪ್ರಥಮ ಹಂತದ ಬ್ರೀಡರ್ ಬೀಜವನ್ನು ಉಪಯೋಗಿಸಬೇಕು. ಬೀಜ ಉತ್ಪಾದನೆಯನ್ನು ಮಾಡುವಾಗ ಬೆಳೆಗೆ ಶಿಫಾರಸು ಮಾಡಲಾದ ಸಸ್ಯ ಸಂಖ್ಯೆ ದೊರೆಯುವಂತೆ ನಾಟಿ ಮಾಡಬೇಕು.

ಫೌಂಡೇಶನ್ ಬೀಜಗಳು

ಫೌಂಡೇಶನ್ ಬೀಜವನ್ನು ಮೂಲವಾಗಿ ಬ್ರೀಡರ್ ಬೀಜದಿಂದ ಉತ್ಪಾದಿಸಲಾಗುವುದು. ಈ ಬೀಜದ ಪರಿಶುದ್ಧತೆಯನ್ನು ಮತ್ತು ಗುರುತಿಸುವಿಕೆಯನ್ನು ಅವುಗಳಿಗೆ ನಿಗದಿಪಡಿಸಿದ ಲಕ್ಷಣಗಳಿಗೆ ಅನುಸಾರವಾಗಿ ಆ ಬೆಳೆಯ ತಳಿವರ್ಧಕರು ಕಾಪಾಡಬೇಕಾಗುವುದು.

ರಜಿಸ್ಟರ್ಡ ಬೀಜಗಳು

ರಜಿಸ್ಟರ್ಡ ಬೀಜವನ್ನು ಮೂಲವಾಗಿ ಫೌಂಡೇಶನ್ ಬೀಜದಿಂದ ಉತ್ಪಾದಿಸಲಾಗುತ್ತದೆ. ಈ ಬೀಜದ ಉತ್ಪಾದನೆಯನ್ನು ಸಾಮಾನ್ಯವಾಗಿ ಬೀಜೋತ್ಪಾದನೆ ಸಂಘಟನೆಯ ಸಂಪೂರ್ಣ ಮೇಲ್ವಿಚಾರಣೆಯಲ್ಲಿ ಮಾಡುವುದರ ಮೂಲಕ ಮೂಲ ಬೀಜದ ಪರಿಶುದ್ಧತೆ ಹಾಗೂ ಗುರುತನ್ನು ಕಾಪಾಡಿಕೊಂಡು ಬರುವಂತೆ ಮಾಡಲಾಗುವುದು.

ಪ್ರಮಾಣೀಕರಿಸಿದ ಬೀಜಗಳು

ಪ್ರಮಾಣೀಕರಿಸಿದ ಬೀಜವನ್ನು ರಜಿಸ್ಟರ್ಡ ಬೀಜದಿಂದ ಉತ್ಪಾದಿಸಲಾಗುತ್ತದೆ. ಸಾಮಾನ್ಯವಾಗಿ ರೈತರಿಗೆ ಬೆಳೆಯಲು ರಜಿಸ್ಟರ್ಡ ಅಥವಾ ಪ್ರಮಾಣೀಕರಿಸಿದ ಬೀಜವು ದೊರೆಯುವುದು.

ಕೇವಲ ಸಮಾನಾತ್ಮಕವಾಗಿ ಪ್ರಕಟಗೊಂಡ ತಳಿಗಳ ಬೀಜಗಳು ಮಾತ್ರ ಪ್ರಮಾಣೀಕರಿಸಲು ಯೋಗ್ಯವಾಗಿರುತ್ತವೆ. ಕೃಷಿ ವಿಶ್ವವಿದ್ಯಾಲಯಗಳು, ಸರಕಾರಿ ಹಾಗೂ ಖಾಸಗಿ ಬೀಜ ಉತ್ಪಾದನಾ ಸಂಸ್ಥೆಗಳು, ಅಂಗೀಕರಿಸಲ್ಪಟ್ಟ ರೈತ ಸಂಘಟನೆಗಳು, ಮತ್ತು ನೋಂದಾಯಿತ ರೈತರು ಮಾತ್ರ ಫೌಂಡೇಶನ್, ರಜಿಸ್ಟರ್ಡ ಹಾಗೂ ಪ್ರಮಾಣೀಕರಿಸಬಹುದಾದ ಬೀಜೋತ್ಪಾದನೆಯಲ್ಲಿ ಪಾಲ್ಗೊಳ್ಳಬಹುದು. ಈ ಮೇಲೆ ನಮೂದಿಸಿದ ಪ್ರತಿ ವರ್ಗದ ಬೀಜಕ್ಕೆ ತನ್ನದೇ ಆದ ವಿಶಿಷ್ಟ ಗುಣ ಧರ್ಮಗಳನ್ನು ಹೊಂದಿರಬೇಕಾದ ನಿಯಮಗಳಿಗೆ ಅನುಸಾರವಾಗಿ ಯಾವ ವ್ಯಕ್ತಿ ಅಥವಾ ಸಂಘಟನೆ ಬೀಜೋತ್ಪಾದನೆ ಮಾಡುವುದೋ ಅಂತಹ ಬೀಜವನ್ನು ಮಾತ್ರ ಪ್ರಮಾಣೀಕರಿಸಲಾಗುತ್ತದೆ.

ಇನ್ನು ಅಸಂಪ್ರದಾಯಿಕ ಬೀಜೋತ್ಪಾದನಾ ಪದ್ಧತಿಗಳಲ್ಲಿ ಪ್ರಗತಿಪರ ರೈತರು ಸಣ್ಣ ಪ್ರಮಾಣದಲ್ಲಿ ಬೀಜ ಉತ್ಪಾದನಾ ಹಾಗೂ ಮಾರಾಟ ಮಾಡುವವರು ಕಾನೂನಾತ್ಮಕವಾಗಿ ಕೃಷಿಗೆ ಬಿಡುಗಡೆಗೊಂಡ ತಳಿಗಳ ಬೀಜಗಳನ್ನು ಉತ್ಪಾದಿಸಿ ಇಲ್ಲವೇ ವಿವಿಧ ಉತ್ಪಾದಕರಿಂದ ಸಂಗ್ರಹಿಸಿ ‘ಟ್ರುಥ್‌ಫುಲ್‌ಸೀಡ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ಮಾರಾಟ ಮಾಡುತ್ತಾರೆ. ಭಾರತದಲ್ಲಿ ಟ್ರುಥ್‌ಫುಲ್ ಬೀಜದ ಮಾರಾಟವನ್ನು ಕಾನೂನಾತ್ಮಕವಾಗಿ ಅಂಗೀಕರಿಸಿದ್ದರೂ ಇಂತಹ ಬೀಜಗಳ ಪರಿಶುದ್ಧತೆ ಹಾಗೂ ಗುಣಗಳನ್ನು ಸರಕಾರ ಪ್ರಮಾಣೀಕರಿಸಿರುವುದಿಲ್ಲ ಹಾಗೂ ಯಾವುದೇ ರೀತಿಯ ಭಾದ್ಯತೆ ಹೊರುವುದಿಲ್ಲ. ಸಾಮಾನ್ಯವಾಗಿ ದ್ವಿದಳ ಧಾನ್ಯಗಳಲ್ಲಿ ಬೀಜ ಉತ್ಪಾದನಾ ಪ್ರಮಾಣವೇ ಕಡಿಮೆಯಾಗಿದ್ದು ಬೀಜದ ಗಾತ್ರ ತುಂಬಾ ಇರುವುದು. ಹೀಗಿರುವುದರಿಂದ ಅಸಾಂಪ್ರದಾಯಿಕ ಬೀಜ ಪದ್ಧತಿಯಿಂದಲೇ ಸ್ಥಳಿಯ ರೈತರು ಬೀಜ ಪಡೆಯುವುದು ಸರ್ವೇ ಸಾಮಾನ್ಯವಾಗಿದೆ.

ಬೀಜ ಪ್ರಮಾಣೀಕರಿಸುವ ಗುಣ ಮಟ್ಟಗಳು

ಪ್ರತಿ ದೇಶದಲ್ಲಿಯೂ ಬೀಜದ ವಿವಿಧ ಗುಣಮಟ್ಟಗಳನ್ನು ಮತ್ತು ಪರಿಶುದ್ಧತೆಯನ್ನು ನಿರ್ವಹಿಸಲು ವಿಶಿಷ್ಟ ಸಂಘಟನೆಯಿರುತ್ತದೆ. ಈ ಸಂಘಟನೆಯು ಆ ದೇಶದ ವಿವಿಧ ವರ್ಗಗಳ ಬೀಜೋತ್ಪಾದನೆಯ ಗುಣಮಟ್ಟವನ್ನು ಕಾಯ್ದುಕೊಂಡು ಬರುವಲ್ಲಿ ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುವುದು. ಹೀಗೆ ನಿರ್ದಿಷ್ಟಪಡಿಸಲಾದ ಗುಣಮಟ್ಟಗಳು ದೇಶದಿಂದ ದೇಶಕ್ಕೆ ವಿಭಿನ್ನವಾಗಿರುತ್ತದೆ. ಈ ಹಿಂದೆ ನೋಡಿದಂತೆ ನ್ಯೂಕ್ಲಿಯಸ್ ಬೀಜವು ಅತ್ಯುನ್ನತ ಮಟ್ಟದ ಗುಣಧರ್ಮಗಳನ್ನು ಅದರ ಪರಿಶುದ್ಧತೆ ಹಾಗೂ ಇತರ ಗುಣಮಟ್ಟಗಳಿಗೆ ಸಂಬಂಧಿಸಿದಂತೆ ಹೊಂದಿರಬೇಕಾಗುತ್ತದೆ. ಈ ಹಂತದಿಂದ ಮುಂದಿನ ವರ್ಗದ ಬೀಜಗಳಿಗೆ ಹೋದಾಗ ಈ ಗುಣಮಟ್ಟದ ಪ್ರಮಾಣಗಳು ಕಡಿಮೆಯಾಗುತ್ತಾ ಹೋಗುತ್ತವೆ. ಸಾಮಾನ್ಯವಾಗಿ ಬ್ರೀಡರ್ ಬೀಜಗಳಿಗೆ ಯಾವದೇ ರೀತಿಯ ನಿರ್ದಿಷ್ಟಪಡಿಸಿದ ಪ್ರಮಾಣೀಕರಣದ ಗುಣಮಟ್ಟಗಳನ್ನು ನಿರ್ಧರಿಸಲಾಗಿಲ್ಲ. ಆದಾಗ್ಯೂ ಭಾರತೀಯ ಕನಿಷ್ಟ ಬೀಜೋತ್ಪಾದನಾ ಪ್ರಮಾಣೀಕರಣ ಪದ್ಧತಿಯ ಪ್ರಕಾರ ಬ್ರೀಡರ್ ಬೀಜವು ತಳಿಗೆ ಸಂಬಂಧಿಸಿದಂತೆ ಆನುವಂಶೀಯವಾಗಿ ಪರಿಶುದ್ಧವಾಗಿರಬೇಕು.

ಶೇಂಗಾ ಬೆಳೆಯ ಬೀಜೋತ್ಪಾದನೆಗೆ ಸಂಬಂಧಿಸಿದಂತೆ ಈ ಬೀಜದ ಪ್ರಕ್ರಿಯೆಯಲ್ಲಿ ತೊಡಗಿದ ವಿವಿಧ ಕಾನೂನಾತ್ಮಕ ಸಂಘಟನೆಗಳು ನಿರ್ದಿಷ್ಟಪಡಿಸಿದ ಪ್ರಮಾಣೀಕರಣ ಗುಣಮಟ್ಟಗಳು ಈ ಕೆಳಗಿನಂತಿವೆ.

ಭಾರತದಲ್ಲಿ ಕೇಂದ್ರೀಯ ಬೀಜ ಪ್ರಮಾಣ ಮಂಡಳಿಯು ಕೃಷಿ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ಈ ಕೆಳಗೆ ನೀಡಿದ ಬೀಜ ಪ್ರಮಾಣೀಕರಣಿಕರಿಸುವ ಸಂಘಟನೆಯಾಗಿದೆ.

ಗುಣಮಟ್ಟದ ಸೂಚಕ ಬೀಜದ ವರ್ಗ
ಫೌಂಡೇಶನ್ ಬೀಜ ಪ್ರಮಾಣೀಕರಿಸಿದ ಬೀಜ
ಶುದ್ಧ ಬೀಜ(ಕನಿಷ್ಠ) ೯೬% ೯೬%
ಮಂದ ಪದಾರ್ಥ (ಗರಿಷ್ಠ) ೪% ೪%
ಕ್ಷೇತ್ರ ವಿಂಗಡಣೆಯಲ್ಲಿ ಬೇರೆ ವಿಧದ ಸಸ್ಯಗಳ ಸಂಖ್ಯೆ ೦.೧% ೦.೨%
ಬೇರೆ ಬೆಳೆಯ ಬೀಜ (ಗರಿಷ್ಠ)
ಕಳೆಯ ಬೀಜಗಳ (ಗರಿಷ್ಠ)
ಕೈಯಿಂದ ಕಾಳು ತೆಗೆದ ಬೀಜಗಳ ಮೊಳಕೆ ಪ್ರಮಾಣ (ಕನಿಷ್ಠ) ೭೦% ೭೦%
ತೇವಾಂಶದ ಪ್ರಮಾಣ (ಕನಿಷ್ಠ) ೯% ೯%

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶೇಂಗಾ ಬೀಜದ ಲಭ್ಯತೆ ಒಂದು ದೊಡ್ಡ ಸವಾಲಾಗಿದೆ. ನಮ್ಮ ದೇಶ ಇದಕ್ಕೆ ಹೊರತಾಗಿಲ್ಲ.

ಬೀಜೋತ್ಪಾದನೆಯ ಸಂದರ್ಭದಲ್ಲಿ ಮೇಲ್ವಿಚಾರಣೆ ಹಾಗೂ ಭೇಟಿ

ಬೀಜೋತ್ಪಾದನಾ ಪ್ರಕ್ರಿಯೆಯ ಫಲಪ್ರದವಾಗಬೇಕಾದರೆ ಈ ಸಂಪೂರ್ಣ ಪ್ರಕ್ರಿಯೆಯ ಸಮರ್ಪಕವಾದ ಮೇಲ್ವಿಚಾರಣೆ ಅಗತ್ಯವಾಗಿದೆ. ಬೀಜ ಪ್ರಮಾಣೀಕರಿಸುವ ಪ್ರಕ್ರಿಯೆಯಲ್ಲಿ ನ್ಯೂಕ್ಲಿಯಸ್ ಹಾಗೂ ಬ್ರೀಡರ್ ಬೀಜಗಳು ಬರುವುದಿಲ್ಲ, ಹಾಗೂ ಈ ಎರಡು ಪ್ರಕಾರದ ಬೀಜಗಳ ಉತ್ಪಾದನೆಗೆ ಯಾವುದೇ ರೀತಿಯಾದ ಮೇಲ್ವಿಚಾರಣೆಯ ಕಟ್ಟಳೆಗಳಿಲ್ಲ. ಆದಾಗ್ಯೂ ನ್ಯೂಕ್ಲಿಯಸ್ ಬೀಜ ಉತ್ಪಾದನೆಗೆ ಉಪಯೋಗಿಸಲಾಗುವ ವಂಶವಾಹಿನಿ ಬೀಜಗಳು ಯಾವ ತಳಿಯ ಬೀಜೋತ್ಪಾದನೆಗೆ ಬಳಸಲಾಗುತ್ತದೆಯೋ, ಅದಕ್ಕೆ ನಿರ್ದಿಷ್ಟವಾಗಿ ವ್ಯಾಖ್ಯಾನಿಸಿದ ಗುಣಧರ್ಮಗಳ ಕಟ್ಟಳೆಗಳಿಗೆ ಹೊಂದುವಂತಿರಬೇಕು. ಮತ್ತು ಶುದ್ಧತೆಗೆ ಸಂಬಂಧಿಸಿದಂತೆ ಅತಿ ಹೆಚ್ಚಿನ ಕಾಳಜಿಯಿಂದ ಉತ್ಪಾದಿಸಬೇಕು. ಬ್ರೀಡರ್ ಬೀಜ ಉತ್ಪಾದನೆಯ ಮೇಲ್ವಿಚಾರಣೆ ಮಾಡುವ ತಳಿವರ್ಧಕರು ಬೀಜ ಉತ್ಪಾದನೆಯ ವಿವಿಧ ಹಂತಗಳಲ್ಲಿ ಬೀಜೋತ್ಪಾದನಾ ಕ್ಷೇತ್ರಗಳಿಗೆ ಭೇಟಿ ನೀಡಬೇಕು. ಅದರಲ್ಲಿಯೂ ಮುಖ್ಯವಾಗಿ ಬೆಳೆಯು ಹೂ ಬಿಡುವ ಹಾಗೂ ಹೂ ಬಿಟ್ಟ ನಂತರ ತಪ್ಪದೇ ಕ್ಷೇತ್ರ ಭೇಟಿ ಮಾಡಲೇಬೇಕು. ಈ ಭೇಟಿಗಳ ಸಮಯದಲ್ಲಿ ಅನಾರೋಗ್ಯ, ಅಸಹಜ, ಹಾಗೂ ಮಿಶ್ರಸಸಿಗಳನ್ನು ಗುರುತಿಸಿ ತೆಗೆದುಹಾಕಬೇಕು. ಈ ಪ್ರಕ್ರಿಯೆಯಿಂದ ಬ್ರೀಡರ್ ಬೀಜದ ಜೈವಿಕ ಶುದ್ಧತೆಯನ್ನು ಕಾಪಾಡಿಕೊಂಡು ಬರಲು ಸಹಕಾರಿಯಾಗುವುದು. ಮತ್ತು ಮುಂದಿನ ಬೀಜವು ಉತ್ತಮವಾದ ಗುಣಮಟ್ಟ ಹೊಂದಲು ಸಹಾಯಕವಾಗುವುದು.

ಬೀಜೋತ್ಪಾದನಾ ಅವಧಿಯಲ್ಲಿ ಮೇಲ್ವಿಚಾರಣೆಯ ಭೇಟಿಗಳು ಕಡ್ಡಾಯವಾಗಿದ್ದು ಇದು ಮುಖ್ಯವಾಗಿ ಫೌಂಡೇಶನ್ ಬೀಜ, ರಜಿಸ್ಟರ್ಡ್‌ಬೀಜ, ಹಾಗೂ ಪ್ರಮಾಣೀಕರಿಸುವ ಬೀಜಗಳಲ್ಲಿ ಮುಖ್ಯವಾಗಿದೆ. ಪ್ರತಿ ರಾಜ್ಯದಲ್ಲಿ ರಾಜ್ಯ ಸರಕಾರದ ಅಧೀನದಲ್ಲಿ ಬೀಜ ಪ್ರಮಾಣೀಕರಿಸುವ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಈ ಸಂಸ್ಥೆಗಳಿಂದ ತಾಂತ್ರಿಕವಾಗಿ ಸಮರ್ಥರಾಗಿರುವ ತಜ್ಞರು ಬೀಜೋತ್ಪಾದನಾ ಕ್ಷೇತ್ರಗಳಿಗೆ ಕೊಯಿಲು ಮಾಡುವುದಕ್ಕಿಂತ ಪೂರ್ವದಲ್ಲಿ ಹಾಗೂ ಕೊಯಿಲಿನ ನಂತರವೂ ಭೇಟಿ ನೀಡಿ ಗುಣಮಟ್ಟವನ್ನು ಕಾಪಾಡಿಕೊಂಡು ಬಂದ ಕ್ರಮವನ್ನು ಪರಿಶೀಲಿಸುತ್ತಾರೆ. ತದನಂತರ ಬೀಜದ ವಿವಿಧ ಪ್ರಕಾರದ ಪರೀಕ್ಷೆಗಳನ್ನು ಮಾಡಿದ ನಂತರ ಆ ಬೀಜವು ಎಲ್ಲಾ ವಿಧವಾದ ಗುಣಮಟ್ಟಗಳನ್ನು ಹೊಂದಿದ್ದರೆ ಅವುಗಳನ್ನು ಪ್ರಮಾಣೀಕರಿಸಲಾಗುತ್ತದೆ.

ಒಂದು ವೇಳೆ ಉತ್ಪಾದಿಸಲ್ಪಟ್ಟ ಬೀಜವು ಸಂಸ್ಥೆ ನಿಗದಿಪಡಿಸಿದ ಗುಣಮಟ್ಟಗಳನ್ನು ಹೊಂದಿರದೇ ಇದ್ದರೆ ಅಂತಹ ಬೀಜವನ್ನು ಪ್ರಮಾಣೀಕರಿಸಲಾಗುವುದಿಲ್ಲ. ಈ ಸಂಸ್ಥೆಯು ಬೀಜವನ್ನು ಪ್ರಮಾಣೀಕರಿಸುವುದರ ಮೂಲಕ ಮುಂದೆ ಆ ಬೀಜವನ್ನು ಖರೀದಿಸಿ ಬಿತ್ತನೆಗೆ ಉಪಯೋಗಿಸುವ ರೈತರೇ ಆ ಬೀಜದ ಗುಣಮಟ್ಟವನ್ನು ದೃಢೀಕರಿಸಲಾಗುವುದು.

ಶೇಂಗಾ ಬೀಜೋತ್ಪಾದನೆಯಲ್ಲಿ ಗಮನಿಸಬೇಕಾದ ನಿರ್ವಹಣಾ ಕ್ರಮಗಳು

ಯಾವುದೇ ಪ್ರಕಾರದ ಬೀಜೋತ್ಪಾದನಾ ಬೆಳೆಯನ್ನು ಬೆಳೆಯಲು ವಿಶೇಷವಾದ ಕಾಳಜಿ ಅವಶ್ಯವಾದುದು. ಸಾಮಾನ್ಯ ಬೆಳೆಯಂತೆ ಈ ಬೆಳೆಯನ್ನು ಪರಿಗಣಿಸಬಾರದು. ಬೀಜೋತ್ಪಾದನಾ ಪ್ರಕ್ರಿಯೆಯಲ್ಲಿ ತುಂಬಾ ಆರೋಗ್ಯವಂತ ಬೆಳೆಯನ್ನು ಬೆಳೆದು ಫಲಪ್ರದವಾಗಿ ಅದರ ಬೀಜವನ್ನು ಆಯ್ಕೆ ಮಾಡುವಲ್ಲಿ ರೈತರು ಹಲವಾರು ರೀತಿಯ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಾಗುವುದು. ಪ್ರಮುಖ ನಿರ್ವಹಣಾ ಪದ್ಧತಿಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

) ಬೀಜೋತ್ಪಾದನೆಗೆ ಸೂಕ್ತವಾದ ಕ್ಷೇತ್ರದ ಆಯ್ಕೆ: ಉತ್ತಮ ಗುಣಮಟ್ಟದ ಬೀಜೋತ್ಪಾದನೆಗೆ ಆರೋಗ್ಯವಂತ ಮಣ್ಣು ಹೊಂದಿದ, ಮಣ್ಣು ಜನ್ಯ ರೋಗಗಳಿಂದ ಮುಕ್ತವಾದ, ಕೀಟ, ರೋಗಜಂತುಗಳು ಹಾಗೂ ಕಳೆಗಳಿಂದ ಮುಕ್ತವಾದಂತಹ ಕ್ಷೇತ್ರಗಳು ಬೀಜೋತ್ಪಾದನೆಗೆ ಸೂಕ್ತ. ಕ್ಷೇತ್ರವನ್ನು ಬೀಜೋತ್ಪಾದನೆಗೆ ಬಳಸುವುದಕ್ಕಿಂತ ಮೊದಲು ಅದನ್ನು ಸೂಕ್ತವಾದ ರೀತಿಯಲ್ಲಿ ಸಮಪಾತಳಿಯನ್ನು ಮಾಡಬೇಕು. ಉತ್ತಮ ಬಸಿಯುವಿಕೆಯ ಗುಣ ಹೊಂದಿದ, ಉಸುಕು ಮಿಶ್ರಿತ ರೇವೆಮಣ್ಣು ತುಂಬಾ ಸೂಕ್ತವಾದದ್ದು. ಬೀಜೋತ್ಪಾದನೆಗೆ ಆಯ್ಕೆ ಮಾಡುವ ಕ್ಷೇತ್ರವು ನೀರಾವರಿ ಸೌಲಭ್ಯ ಹೊಂದಿರಬೇಕು. ಇದರಿಂದ ಅವಶ್ಯಕವಿರುವಾಗ ರಕ್ಷಣಾ ನೀರಾವರಿ ನೀಡಲು ಅನುಕೂಲವಾಗುವುದು. ಒಣ ಬೇಸಾಯ ಪದ್ಧತಿಯಲ್ಲಿ ಬೀಜೋತ್ಪಾದನೆ ಮಾಡುವ ಯೋಜನೆ ಇದ್ದರೆ, ಅಲ್ಲಿ ಅವಶ್ಯಕ ನೀರಾವರಿ ನೀಡುವ ಸೌಲಭ್ಯವಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಬೇಕು. ಸಂಪೂರ್ಣವಾಗಿ ಮಳೆಯಾಧಾರಿತ ಕ್ಷೇತ್ರವಾಗಿದ್ದರೆ, ಅದು ಬೀಜೋತ್ಪಾದನೆಗೆ ಸೂಕ್ತವಲ್ಲ. ಇದಲ್ಲದೇ ಕ್ಷೇತ್ರ ಆಯ್ಕೆಯಲ್ಲಿ ಇನ್ನೂ ಹಲವಾರು ಅಂಶಗಳನ್ನು ಗಮನಿಸಬೇಕಾದುದು ಅವಶ್ಯಕ.

ಬೀಜೋತ್ಪಾದನೆ ಆಯ್ಕೆ ಮಾಡುವ ಕ್ಷೇತ್ರದಲ್ಲಿ ಹಿಂದಿನ ಎರಡು ಹಂಗಾಮುಗಳಲ್ಲಿ ಶೇಂಗಾ ಬೆಳೆಯನ್ನು ಬೆಳೆದಿರಬಾರದು. ಏಕೆಂದರೆ ಅಂತಹ ಕ್ಷೇತ್ರಗಳಲ್ಲಿ ಹಿಂದಿನ ಬೆಳೆಯಿಂದ ಉಳಿದ ಬೀಜಗಳು ಮೊಳಕೆಯೊಡೆದು ಈ ಬೆಳೆಯೊಂದಿಗೆ ಸೇರುವ ಸಾಧ್ಯತೆಗಳಿರುತ್ತವೆ. ಒಂದುವೇಳೆ ಇದು ಸಾದ್ಯವಿರದೇ ಹೋಗಿದ್ದರೆ ಹಿಂದಿನ ಹಂಗಾಮಿನಲ್ಲಿ ಬೆಳೆದ ಶೇಂಗಾ ತಳಿಯು ಹಾಗೂ ಈಗ ಬೀಜೋತ್ಪಾದನೆ ಮಾಡಲು ಆಯ್ಕೆ ಮಾಡುವ ತಳಿಯು ಒಂದೇ ಆಗಿರಬೇಕು. ಹಾಗೂ ಹಿಂದಿನ ಹಂಗಾಮುಗಳಲ್ಲಿ ಉತ್ತಮ ಗುಣಮಟ್ಟದ ಪ್ರಮಾಣೀಕರಿಸಿದ ಬೀಜವನ್ನು ಬಿತ್ತನೆಗೆ ಉಪಯೋಗಿಸಿರಬೇಕು. ಒಟ್ಟಾರೆ ಹೇಳುವುದಾದರೆ ಶೇಂಗಾ ಬೆಳೆಯ ನಂತರ ಮತ್ತೆ ಶೇಂಗಾ ಬೆಳೆ ಬೆಳೆಯುವುದು ಸೂಕ್ತವಲ್ಲ. ಇದು ಹಲವಾರು ರೀತಿಯ ರೋಗಜಂತುಗಳು ಹಾಗೂ ಕೀಟಗಳ ಅಭಿವೃದ್ಧಿಗೆ ಕಾರಣವಾಗುತ್ತದೆಯಲ್ಲದೇ ಒಂದೇ ಬಗೆಯ ಪೋಷಕಾಂಶಗಳನ್ನು ಬೆಳೆಗಳು ಹೀರುವುದರಿಂದ ಪೋಷಕಾಂಶಗಳ ಕೊರತೆಯೂ ಕಾಣಬಹುದು. ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸುವುದರ ಜೊತೆಗೆ ಬೀಜೋತ್ಪಾದನೆಗೆಂದು ಆಯ್ಕೆ ಮಾಡುವ ಕ್ಷೇತ್ರವು ಮೇಲಿಂದ ಮೇಲೆ ವಿಷಯ ತಜ್ಞರು ಬಂದು ಭೇಟಿ ಮಾಡಲು ಅನುಕೂಲವಾಗುವಂತೆ ರಸ್ತೆಗೆ ಹೊಂದಿಕೊಂಡು ಇರಬೇಕು.

ಬೀಜೋತ್ಪಾದನೆಗೆ ಸೂಕ್ತವಾದ ಹಂಗಾಮು

ವಿವಿಧ ರಾಷ್ಟ್ರಗಳಲ್ಲಿ ಶೇಂಗಾ ಬಿತ್ತನೆಗೆ ಕೇವಲ ಒಂದೇ ಹಂಗಾಮು ಲಭ್ಯವಿರುವುದಾದರೆ ನಮ್ಮ ದೇಶದಲ್ಲಿ ಎರಡು ಹಂಗಾಮಿನಲ್ಲಿ ಶೇಂಗಾ ಬೆಳೆಯಬಹುದು. ಈ ಅನುಕೂಲತೆಯನ್ನು ಬೆಳೆಸಿಕೊಂಡು ಯಾವ ಹಂಗಾಮಿನಲ್ಲಿ ಉತ್ತಮ ಗುಣಮಟ್ಟದ ಬೀಜದ ಗುಣಮಟ್ಟ ಬರಲು ಸಾಧ್ಯವೋ ಆ ಹಂಗಾಮಿನಲ್ಲಿ ಬೀಜೋತ್ಪಾದನೆ ಮಾಡಬೇಕು. ಹಂಗಾಮನ್ನು ಆಧರಿಸಿ ಬಿತ್ತನೆಯ ಬೀಜದ ಮೊಳಕೆಯ ಪ್ರಮಾಣವೂ ಹೆಚ್ಚು ಕಡಿಮೆ ಆಗುವ ಸಾಧ್ಯತೆಯುಂಟು. ಸಾಮಾನ್ಯವಾಗಿ ಮುಂಗಾರು ಹಂಗಾಮಿನ ನಂತರದ ಹಂಗಾಮಿನಲ್ಲಿ ಬಿತ್ತನೆ ಮಾಡುವುದರಿಂದ ಆ ಹಂಗಾಮುಗಳಲ್ಲಿ ಹೆಚ್ಚಿನ ಉಷ್ಣತೆ ಪ್ರಮುಖವಾಗಿ ಬೆಳೆ ಮಾಗುವಾಗ ಇರುವುದರಿಂದ ಅಂತಹ ಬೀಜಗಳಲ್ಲಿ ಮೊಳಕೆಯೊಡೆಯುವ ಪ್ರಮಾಣ ಕಡಿಮೆ ಇರುವದು ಎಂಬ ವಾದ ಒಂದೆಡೆಯಾದರೆ ಅಧ್ಯಯನಗಳ ಪ್ರಕಾರ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಶೇಂಗಾ ಬೀಜ ಬೆಳೆದು ತದನಂತರ ಬಿತ್ತನೆಗೆ ಬಳಸುವಾಗ ಯಾವುದೇ ರೀತಿಯ ಮೊಳಕೆಯ ಪ್ರಮಾಣದಲ್ಲಿ ಅಂತರವಿರಲಾರದು ಎಂಬುದು ಇನ್ನೊಂದು ವಿಚಾರ. ಒಟ್ಟಿನಲ್ಲಿ ಶೇಂಗಾ ಮಾಗಿದ ನಂತರ ಕ್ಷೇತ್ರಗಳಲ್ಲಿ ಸೂಕ್ತವಾಗಿ ಒಣಗಿಸಬೇಕು ಹಾಗೂ ಸಮರ್ಪಕವಾಗಿ ಸ್ವಚ್ಛಗೊಳಿಸಿ, ಸಂಗ್ರಹಿಸಿ, ಬಿತ್ತನೆ ಮಾಡಿದರೆ ಮೊಳಕೆಯೊಡೆಯುವುದರಲ್ಲಿ ಯಾವುದೇ ತೊಂದರೆಯಿಲ್ಲ. ಶೇಂಗಾ ಕಾಯಿಗಳನ್ನು ಹೊಲದಲ್ಲಿ ಒಣಗಿಸುವಾಗ ಬಿಸಿಲು ತೀವ್ರವಾಗಿದ್ದರೆ ಆಗ ಕಾಯಿಗಳನ್ನು ನೇರ ಸೂರ್ಯಪ್ರಕಾಶಕ್ಕೆ ಬೀಳದಂತೆ ಎಚ್ಚರಿಕೆ ವಹಿಸಬೇಕು.

ಮೂಲ ಬೀಜದ ಆಯ್ಕೆ ಹಾಗೂ ಅನುಸರಿಸಬೇಕಾದ ಕ್ರಮಗಳು:

ಮೂಲ ಹಾಗೂ ಪಾಲಕ ಬೀಜಗಳ ವರ್ಗವು ರೈತರು ಅಥವಾ ಸಂಸ್ಥೆಗಳು ಮುಂದೆ ಉತ್ಪಾದಿಸಲು ಇಚ್ಛಿಸಿದ ಬೀಜದ ವರ್ಗದ ಮೇಲೆ ಅವಲಂಬಿತವಾಗಿರುತ್ತದೆ. ಆದುದರಿಂದ ಯಾವದೇ ವರ್ಗದ ಬೀಜವನ್ನು ಉತ್ಪಾದನೆ ಮಾಡುವಂತಹ ಸಂದರ್ಭದಲ್ಲಿ ಸೂಕ್ತವಾದ ಪಾಲಕ ಬೀಜಗಳನ್ನು ಪಡೆಯುವದು ಅತಿ ಅವಶ್ಯ. ಒಮ್ಮೆ ಯಾವ ವರ್ಗದ ಬೀಜವನ್ನು ಉತ್ಪಾದಿಸುವುದೆಂದು ನಿರ್ಧಾರವಾದ ಮೇಲೆ ಅದಕ್ಕಾಗಿ ಅವಶ್ಯವಿರುವ ಪಾಲಕ ಬೀಜಗಳನ್ನು ಸೂಕ್ತವಾದ ಸಂಸ್ಥೆಗಳಿಂದ ಪಡೆಯಬೇಕು. ಹಾಗೂ ಇವುಗಳ ಗುಣಮಟ್ಟದ ವಿವರಣೆ ಇರುವ ಪ್ರಮಾಣಪತ್ರವನ್ನು ಹಾಗೂ ಅವುಗಳನ್ನು ಖರೀದಿಸಿದ ರಸೀದಿಯನ್ನು ಬೆಳೆಯನ್ನು ಬೆಳೆದು ಕೊಯ್ಲು ಮಾಡುವವರೆಗೂ ಕಾಯ್ದಿರಿಸಬೇಕು. ಪಾಲಕ ಬೀಜಗಳನ್ನು ಬಿತ್ತುವುದಕ್ಕೆ ಸ್ವಲ್ಪ ಮುಂಚೆಯೇ ಪಡೆದು ತಂದರೆ, ಆ ಬೀಜವನ್ನು ಒಣ ವಾತಾವರಣವಿರುವ ತಂಪಾದ ಪರಿಸ್ಥಿತಿಯಲ್ಲಿ ಸಂಗ್ರಹಿಸಿಡಬೇಕು. ಈ ರೀತಿಯಾಗಿ ಸಂಗ್ರಹಣೆ ಮಾಡಲು ತೊಂದರೆಯಿದ್ದರೆ ಆ ಪ್ರಸಂಗಗಳಲ್ಲಿ ಬಿತ್ತನೆ ಮಾಡುವ ಸಮಯಕ್ಕೆ ಸರಿಯಾಗಿ ತಂದು ಬಿತ್ತನೆ ಮಾಡಬೇಕು. ಬಿತ್ತನೆ ಬೀಜ ಹೊಂದಿದ ಚೀಲಗಳನ್ನು ಸೂಕ್ಷ್ಮವಾಗಿ ಉಪಚರಿಸದೇ ಹೊದರೆ, ಅಥವಾ ಮೇಲಿನಿಂದ ಚೀಲಗಳನ್ನು ಕೆಳಕ್ಕೆ ಎಸೆದರೆ ಬೀಜದ ತುದಿಗೆ ಹಾನಿಯಾಗಬಹುದು. ಮುಂದೆ ಈ ಬೀಜ ಮೊಳಕೆಯೊಡೆದಾಗ ಸೂಕ್ತವಾಗಿ ಬೇರು ಬಿಡುವದರಲ್ಲಿ ತೊಂದರೆಯಾಗಬಹುದು. ಬೀಜವನ್ನು ರೋಗ ಹಾಗೂ ಕೀಟನಾಶಕಗಳಿಂದ ಉಪಚರಿಸದೇ ಇದ್ದರೆ ಬಿತ್ತನೆಗೆ ಒಂದೆರಡು ದಿನ ಪೂರ್ವದಲ್ಲಿ ಅಂತಹ ಬೀಜವನ್ನು ಸೂಕ್ಷ್ಮವಾಗಿ ಉಪಚರಿಸುವುದರಿಂದ ಉತ್ತಮವಾದ ಮೊಳಕೆಯನ್ನು ಪಡೆಯುವಲ್ಲಿ ಸಾಧ್ಯವಾಗುವುದು. ಬೀಜವನ್ನು ವಿವಿಧ ರೋಗ ಹಾಗೂ ಕೀಟನಿರೋಧಕಗಳಿಂದ ಉಪಚಾರ ಮಾಡುವಾಗ ಸೂಕ್ಷ್ಮವಾಗಿ ಉಪಚರಿಸಬೇಕು ಹಾಗೂ ಯಾವುದೇ ರೀತಿಯ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಈ ರೀತಿಯಾಗಿ ಉಪಚರಿಸಿ ಬಿತ್ತನೆ ಮಾಡಿದರೆ ಆ ಬೀಜವು ಉತ್ತಮವಾಗಿ ಮೊಳಕೆಯೊಡೆದು ಆರೋಗ್ಯವಂತ ಸಸಿ ಬರುವುದರಲ್ಲಿ ಸಹಾಯ ಮಾಡುವುದು. ಪ್ರದೇಶದಿಂದ ಪ್ರದೇಶಕ್ಕೆ ಅಲ್ಲಿಯ ಪರಿಸ್ಥಿತಿಗಳಿಗೆ ಅನುಸಾರವಾಗಿ ಬೀಜದ ಪ್ರಮಾಣ ಹೆಚ್ಚು ಕಡಿಮೆಯಾಗಬಹುದು. ಸಾಮಾನ್ಯವಾಗಿ ಪ್ರತಿ ಹೆಕ್ಟೇರಿಗೆ ಬೇಕಾಗುವ ಬೀಜದ ಪ್ರಮಾಣವು ಸುಮಾರು ೮೦ ಕಿ.ಗ್ರಾಂ. ನಿಂದ ಹಿಡಿದು ೧೫೦ ಕಿ.ಗ್ರಾಂ. ವರೆಗೂ ಬೇಕಾಗಬಹುದು