ಬೀಜೋತ್ಪಾದನಾ ಕ್ಷೇತ್ರಗಳ ನಡುವೆ ಇರಬೇಕಾದ ಅಂತರ

ನಮಗೆಲ್ಲಾ ತಿಳಿದಿರುವಂತೆ ಶೇಂಗಾ ಬೆಳೆಯಲ್ಲಿ ಪರಕೀಯ ಪರಾಗಸ್ಪರ್ಶ ಇರುವುದಿಲ್ಲ ಅಥವಾ ಅದು ತುಂಬಾ ವಿರಳವಾದ ಸಾಧ್ಯತೆ. ಕೆಲವೊಂದು ಪ್ರದೇಶಗಳಲ್ಲಿ ಜೇನುನೊಣಗಳ ಕ್ರಿಯಾಶೀಲತೆ ಹಾಗೂ ಚಟುವಟಿಕೆ ತುಂಬಾ ಇದ್ದರೆ ಅಂತಹ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪರಕೀಯ ಪರಾಗಸ್ಪರ್ಶದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದರೊಂದಿಗೆ ಬೆಳೆ ಬೆಳೆಯುವ ಹಂಗಾಮು, ಬಿತ್ತನೆಗೆ ಉಪಯೋಗಿಸುವ ತಳಿಗಳನ್ನು ಆಧರಿಸಿ ಸ್ವಲ್ಪ ಪ್ರಮಾಣದ ಪರಾಗಸ್ಪರ್ಶ ಕಂಡುಬರಬಹುದು. ಆದುದರಿಂದ ಇಂತಹ ಸಾಧ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಶೇಂಗಾ ಬೀಜೋತ್ಪಾದನೆಯಲ್ಲಿ ಪರಕೀಯ ಪರಾಗಸ್ಪರ್ಶದಿಂದಾಗಬಹುದಾದ ಮಿಶ್ರಣವನ್ನು ತಡೆಗಟ್ಟಲು ಎರಡು ಶೇಂಗಾ ಕ್ಷೇತ್ರಗಳ ಮಧ್ಯ ಸೂಕ್ತವಾದ ಅಂತರ ಕಾಪಾಡಿಕೊಂಡು ಬರುವುದು ಅವಶ್ಯವಾಗಿದೆ.

ಇದಲ್ಲದೇ ಎರಡು ವಿವಿಧ ಪ್ರಕಾರದ ತಳಿಗಳನ್ನು ಅಕ್ಕ ಪಕ್ಕದ ಜಮೀನುಗಳಲ್ಲಿ ಬೆಳೆದಾಗ ವಿವಿಧ ಹಂತದಲ್ಲಿ ಅಲ್ಲಿ ಮಿಶ್ರಣವಾಗುವ ಸಾಧ್ಯತೆಗಳಿವೆ. ಈ ಎಲ್ಲ ಪ್ರಕಾರದ ಮಿಶ್ರಣಗಳನ್ನು ಮತ್ತು ಗುಣಮಟ್ಟದ ಮೇಲೆ ಅವುಗಳ ಪ್ರಭಾವವನ್ನು ಕಡಿಮೆ ಮಾಡಲು ಕ್ಷೇತ್ರದಿಂದ ಕ್ಷೇತ್ರಕ್ಕೆ ಸುಮಾರು ೩ ಮೀಟರ್‌ನಷ್ಟು ಅಂತರವಿರಬೇಕು. ಈ ಅಂತರವನ್ನು ವಿವಿಧ ವರ್ಗದ ಬೀಜೋತ್ಪಾದನೆಗೆ ಭಾರತದಲ್ಲಿ ಶಿಫಾರಸು ಮಾಡಲಾಗಿದೆ. ಮೇಲಿನ ಶಿಫಾರಸು ಮೂರು ಮೀಟರುಗಳ ಅಂತರವಿದ್ದರೂ ಆ ಪ್ರದೇಶಕ್ಕೆ ಅನುಸಾರವಾಗಿ ಅಲ್ಲಿಯ ಸ್ಥಾನಿಕ ಪರಿಸ್ಥಿತಿಗಳನ್ನು ಅವಲೋಕಿಸಿ ಬೆಳೆಯನ್ನು ಬೆಳೆಯುವ ಹಂಗಾಮನ್ನು ಗಣನೆಗೆ ತೆಗೆದುಕೊಂಡು ಈ ಅಂತರವನ್ನು ನಿರ್ಧರಿಸಬೇಕಾಗುವುದು.

ಶೇಂಗಾ ಬೀಜೋತ್ಪಾದನೆಗೆ ಭೂಮಿ ತಯಾರಿ ಹಾಗೂ ಬಿತ್ತನೆ

ಶೇಂಗಾ ಬೀಜೋತ್ಪಾದನೆಗೆಂದು ಆಯ್ಕೆ ಮಾಡಿದ ಜಮೀನನ್ನು ಉತ್ತಮವಾಗಿ ತಯಾರಿಸುವುದು ತುಂಬಾ ಪ್ರಮುಖವಾದ ವಿಚಾರ. ಶೇಂಗಾವನ್ನು ಸಾಮಾನ್ಯವಾಗಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಏರಿ ಮಾಡಿದ ಮಣ್ಣಿನಲ್ಲಿ ಬಿತ್ತುವುದು ಅಷ್ಟೊಂದು ಪ್ರಚಲಿತವಿಲ್ಲದಿದ್ದರೂ ಈ ಪದ್ಧತಿಯಲ್ಲಿ ಬಿತ್ತನೆ ಮಾಡುವುದು ಸೂಕ್ತ. ಹೀಗೆ ಮಾಡುವುದರಿಂದ ಹಲಾವರು ರೀತಿಯ ಕ್ಷೇತ್ರ ಉಪಚಾರವನ್ನು ಮಾಡಲು ಹಾಗೂ ವಿವಿಧ ಪ್ರಕಾರದ ಉಳುಮೆಗಳನ್ನು ಕೈಗೊಳ್ಳಲು ಈ ಏರುಮಡಿ ಪದ್ಧತಿ (ರೇಸ್ಡ್ ಬೆಡ್ ಪದ್ಧತಿ) ಅನುಕೂಲ ಮಾಡಿಕೊಡುವುದು. ಈ ರೀತಿಯಾಗಿ ತಯಾರಿಸಿದ ಏರುಮಡಿಗಳಲ್ಲಿ ಶಿಫಾರಸು ಮಾಡಿದ ಬಿತ್ತನೆ ಅಂತರ ಹಾಗೂ ಬಿತ್ತನೆಯ ಆಳವನ್ನು ಪಾಲಿಸಬೇಕಾಗುವುದು. ಬಿತ್ತನೆ ಮಾಡುವಾಗ ಒಂದು ಅಂಶಕ್ಕೆ ಒಂದೇ ಬೀಜ ಬರುವ ಹಾಗೆ ನಾಟಿ ಮಾಡಬೇಕು. ಒಂದೊಂದಾಗಿ ಬೀಜ ನೆಡುವುದರಿಂದ ಮುಂದೆ ಅನವಶ್ಯಕ ಸಸಿಗಳನ್ನು ತೆಗೆಯುವಲ್ಲಿ ಸಹಕಾರಿಯಾಗುವುದು. ಬೆಳೆಯನ್ನು ಬಿತ್ತಲು ಶಿಫಾರಸು ಮಾಡಿದ ಸಮಯಕ್ಕೆ ಸರಿಯಾಗಿ ಹೊಂದುವಂತೆ ಮಾಡಿ ಮುಗಿಸಬೇಕು. ತದನಂತರ ವಾತಾವರಣ ಹಾಗೂ ಭೂಮಿಯಲ್ಲಿಯ ತೇವಾಂಶವನ್ನು ಗಮನಿಸಿ ನೀರಾವರಿ ನೀಡಬೇಕು. ಹೀಗೆ ಮಾಡುವುದರಿಮದ ಕ್ಷೇತ್ರದಲ್ಲಿ – ಸಮನಾದ ಬೆಳೆ ಪಡೆಯಲು ತುಂಬಾ ಸಹಕಾರಿಯಾಗುವುದು. ಬಿತ್ತನೆಯ ನಂತರ ಬೆಳೆಯು ಸಮನಾಗಿ ಬರದಿದ್ದರೆ ಅಂತಹ ಬೆಳೆಯ ಬೀಜ ಪ್ರಮಾಣೀಕರಣಕ್ಕೆ ಸೂಕ್ತವಾಗದೇ ಹೋಗಬಹುದು.

ಪೋಷಕಾಂಶಗಳ ನಿರ್ವಹಣೆ

ಬೀಜೋತ್ಪಾದನೆಯು ಸಂಪೂರ್ಣವಾಗಿ ಫಲಪ್ರದವಾಗಬೇಕೆಂದರೆ ಬೆಳೆಯ ಅವಶ್ಯಕತೆಗೆ ಅನುಸಾರವಾಗಿ ಪೋಷಕಾಂಶಗಳ ನಿರ್ವಹಣೆ ಮಾಡುವುದು ಅವಶ್ಯಕವಾದುದು. ಶೇಂಗಾ ಬೆಳೆಯು ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಪದಾರ್ಥ ಹೊಂದಿದ ಜಮೀನುಗಳಲ್ಲಿ ಉತ್ತಮವಾಗಿ ಬೆಳೆಯುವದು. ಮಣ್ಣು ಪರೀಕ್ಷೆನ್ನು ಆಧರಿಸಿ ಭೂಮಿಯಲ್ಲಿ ಕೊರತೆಯಿರುವ ಹಾಗೂ ಬೆಳೆಗೆ ಬೇಕಾದಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡಬೇಕಾಗುತ್ತದೆ. ಪೋಷಕಾಂಶದ ಅವಶ್ಯಕತೆಗೆ ನಾವು ಗುರಿಯಿಟ್ಟ ಬೆಳೆಯ ಇಳುವರಿ ಪ್ರಮಾಣವನ್ನು ಆಧರಿಸಿಯೂ ನಿರ್ಧರಿಸಲ್ಪಡಲಾಗುವುದು. ಬೆಳೆಗೆ ಅವಶ್ಯವಿರುವ ಪ್ರಧಾನ ಪೋಷಕಾಂಶವಿರುವ ಸಾರಜನಕ, ರಂಜಕ, ಹಾಗೂ ಪೊಟ್ಯಾಷ್‌ಗಳ ಜೊತೆಗೆ ಕ್ಯಾಲ್ಸಿಯಂ(ಸುಣ್ಣ) ಸಹಿತ ಬೆಳೆಗೆ ಅವಶ್ಯಕವಾಗಿದೆ. ಅದರಲ್ಲಿಯೂ ಭೂಮಿಯ ಮೇಲ್ಪದರಿನ ಸುಮಾರು ೮ – ೧೨ ಸೆಂ.ಮೀ. ಆಳದಲ್ಲಿ ಕಾಯಿ ಕಟ್ಟುವ ಪ್ರಾರಂಭದ ಹಂತದಲ್ಲಿ ಕ್ಯಾಲ್ಸಿಯಂ ಉತ್ತಮ ರೀತಿಯಲ್ಲಿ ಕಾಯಿ ಕಟ್ಟುವ ಗುಣಮಟ್ಟದ ಬೀಜ ಬರುವಲ್ಲಿ ಸಹಾಯಕವಾಗುವುದು. ಈ ಹಂತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಜಮೀನಿನಲ್ಲಿ ಕಡಿಮೆಯಾದರೆ ಅದು ಬೆಳೆಯ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ಕ್ಯಾಲ್ಸಿಯಂ ಪ್ರಮಾಣವು ಮಣ್ಣಿನಲ್ಲಿ ಕಡಿಮೆಯಾದಂತಹ ಪ್ರಸಂಗಗಳಲ್ಲಿ ಬೀಜದ ಮೊಳಕೆ ಒಡೆಯುವ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುವದು. ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿಚಾರವೇನೆಂದರೆ ಮಣ್ಣಿನಲ್ಲಿ ಕ್ಯಾಲ್ಸಿಯಂ ಹಾಗೂ ಪೊಟ್ಯಾಶಿಯಂನ ಪ್ರಮಾಣಗಳು ೩:೧ ಪ್ರಮಾಣದಲ್ಲಿರಬೇಕು. ಬೆಳೆಯು ಕಾಯಿ ಬಿಡುವ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲೇನಾದರೂ ಪೊಟ್ಯಾಶ್ ಇದ್ದರೆ ಅದು ಕ್ಯಾಲ್ಸಿಯಂನ್ನು ಬೆಳೆ ಪಡೆಯುವುದರಲ್ಲಿ ಅಡ್ಡಿ ಉಂಟುಮಾಡುವುದರಿಂದ ಕಾಯಿ ಕೊಳೆಯುವುದು ಹಾಗೂ ಕಾಯಿ ಜೊಳ್ಳಾಗುವುದಕ್ಕೆ ಕಾರಣವಾಗುವುದು. ಸಾಮಾನ್ಯವಾಗಿ ಉತ್ತಮ ಇಳುವರಿಯತ್ತ ಗುರಿ ಇಡುವುದಾದರೆ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ೧೫೦ – ೨೦೦ ಕಿ.ಗ್ರಾಂ. ಕ್ಯಾಲ್ಸಿಯಂನ್ನು ಶೇಂಗಾದ ಸಣ್ಣಕಾಳು ಹೊಂದಿದ ತಳಿಗಳಿಗೆ ಹಾಗೂ ಸುಮಾರು ೩೦೦ – ೪೦೦ ಕಿ.ಗ್ರಾಂ. ಸುಣ್ಣವನ್ನು ದೊಡ್ಡಕಾಳು ಹೊಂದಿದ ತಳಿಗಳನ್ನು ಬಿತ್ತಿದ ಜಮೀನುಗಳಿಗೆ ನೀಡಬೇಕು. ಜಮೀನಿಗೆ ಜಿಪ್ಸಂ ಹಾಕುವಾಗ ಚೆನ್ನಾಗಿ ಎಡೆ ಹೊಡೆದು ಮಣ್ಣಿನೊಳಗೆ ಜಿಪ್ಸ ಸೇರುವಂತೆ ಮಾಡಬೇಕು. ಹಾಗೂ ಜಮೀನಿನಲ್ಲಿ ಯಾವುದೇ ರೀತಿಯ ಕಳೆ – ಕಸಗಳು ಇರದ ಹಾಗೆ ನೋಡಿಕೊಳ್ಳಬೇಕು. ಮೇಲಿನ ಪೋಷಕಾಂಶಗಳ ಜೊತೆ ಜೊತೆಗೆ ಮಣ್ಣಿನಲ್ಲಿ ಮೆಗ್ನೇಶಿಯಂ, ಬೋರಾನ್, ಸತುಗಳ ಪ್ರಮಾಣವು ಸೂಕ್ತವಾಗಿದೆ ಎಂಬುದನ್ನು ಅರಿಯಬೇಕು. ಈ ಪೋಷಕಾಂಶಗಳ ಪ್ರಮಾಣವು ಮಣ್ಣಿನಲ್ಲಿ ಸೂಕ್ತವಾಗಿರದೇ ಇದ್ದರೆ ಅಥವಾ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಉಳಿದ ಪೋಷಕಾಂಶಗಳ ಉಪಯೋಗದಲ್ಲಿ ಅಡ್ಡಿಮಾಡಬಹುದಾಗಿದೆ.

ಕಳೆ ನಿಯಂತ್ರಣ

ಬೀಜೋತ್ಪಾದನೆ ಮಾಡುವ ಕ್ಷೇತ್ರವು ಕಳೆಗಳಿಂದ ಮುಕ್ತವಾಗಿರಬೇಕಾದುದು ತುಂಬಾ ಅವಶ್ಯಕ. ಕಳೆಗಳ ನಿಯಂತ್ರಣವು ಈ ಕೆಳಗೆ ನೀಡಿದ ಅಂಶಗಳಿಗಾಗಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ.

೧. ಕಳೆಗಳು ಬೆಳೆಯ ಜೊತೆಗೆ ಪೋಷಕಾಂಶ, ನೀರು ಇತ್ಯಾದಿ ಅವಶ್ಯಕತೆಗಳಿಗಾಗಿ ಸ್ಪರ್ಧೆ ಮಾಡುವದು.

೨. ಕ್ಷೇತ್ರದಲ್ಲಿ ಬೆಳೆದ ಮಿಶ್ರಣಗಳನ್ನು ಕಿತ್ತಿ ತೆಗೆಯಲು ಕಳೆಗಳು ಅಡ್ಡಿ ಮಾಡುವವು.

೩. ಒಟ್ಟಾರೆ ಬೆಳೆಯು ಇಳುವರಿ ಕಡಿಮೆಯಾಗಿ ಉತ್ಪನ್ನ ಕುಸಿಯುವದು.

೪. ಅತೀ ಹೆಚ್ಚಿನ ಪ್ರಮಾಣವನ್ನು ಕಳೆಗಳಿದ್ದರೆ ಅಂತಹ ಬೀಜೋತ್ಪಾದನೆ ಕ್ಷೇತ್ರಗಳನ್ನು ಮೇಲ್ವಿಚಾರಣೆ ಬಂದವರು ತಿರಸ್ಕರಿಸಬಹುದು. ಆದುದರಿಂದ ಬೀಜೋತ್ಪಾದನಾ ಕ್ಷೇತ್ರವನ್ನು ವಿವಿಧ ನಿರ್ವಹಣಾ ಪದ್ಧತಿಗಳಿಂದ (ಒಂದರಿಂದ ಎರಡು ಸಾಲು ಎಡೆ ಹೊಡೆಯುವುದು, ಕಸಗಳನ್ನು ಕೃಷಿ ಕಾರ್ಮಿಕರ ಸಹಾಯದಿಂದ ತೆಗೆಯುವುದು, ಕಳೆನಾಶಕಗಳನ್ನು ಬಳಕೆ ಮಾಡುವುದು ಇತ್ಯಾದಿ) ನಿಯಂತ್ರಣ ಮಾಡುವುದು ಪ್ರಮುಖವಾಗಿದೆ.

ನೀರು ನಿರ್ವಹಣೆ

ಬಿತ್ತನೆಯ ನಂತರ ಬೀಜ ಮೊಳಕೆಯೊಡೆದು ಸಮನಾದ ಬೆಳೆ ಬರಬೇಕಾದರೆ ಸೂಕ್ತ ಪ್ರಮಾಣದಲ್ಲಿ ನೀರು ಹಾಯಿಸುವುದು ಅವಶ್ಯಕ. ಸೂಕ್ತ ರೀತಿಯಲ್ಲಿ ನೀರು ನಿರ್ವಹಣೆ ಮಾಡುವುದರಿಂದ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ. ಬೀಜೋತ್ಪಾದನೆ ಕ್ಷೇತ್ರದಲ್ಲಿ ತೇವಾಂಶದ ಪ್ರಮಾಣ ತುಂಬಾ ಕಡಿಮೆಯಿದ್ದರೆ ಬಿತ್ತನೆ ಮಾಡುವುದಕ್ಕಿಂತ ಮೊದಲು ಅಥವಾ ಬಿತ್ತನೆ ಮಾಡಿದ ತಕ್ಷಣಕ್ಕೆ ನೀರಾವರಿ ನೀಡುವುದು ಸೂಕ್ತ. ಬೆಳೆಯ ಬೆಳವಣಿಗೆಯ ಹಂತದಲ್ಲಿ ಅಂದರೆ ಬಿತ್ತನೆಯ ನಂತರ ಸುಮಾರು ೩ ರಿಂದ ೪ ವಾರಗಳಲ್ಲಿ ತೇವಾಂಶದ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾದರೆ ಇಳುವರಿಯಲ್ಲಿ ಅಂತಹ ಬದಲಾವಣೆಗಳು ಕಂಡುಬರಲಿಕ್ಕಿಲ್ಲ. ಆದರೆ ಬೆಳೆಯು ಹೂ ಬಿಡುವ ಹಂತದಲ್ಲಿದ್ದಾಗ ತೇವಾಂಶದ ಕೊರತೆ ಕಂಡುಬಂದರೆ ಹೂ ಬಿಡುವ ಪ್ರಕ್ರಿಯೆ ತಡವಾಗಬಹುದು ಅಥವಾ ಹೂ ಬಿಡದೇ ಹೋಗಬಹುದು. ಒಂದು ವೇಳೆ ಹೂ ಬಿಟ್ಟ ನಂತರ ಮುಂದೆ ಕಾಯಿ ಕಟ್ಟುವ ಹಂತದಲ್ಲಿ ತೇವಾಂಶ ತುಂಬಾ ಅವಶ್ಯಕ. ಇದಕ್ಕಾಗಿ ಕಡಿಮೆ ಪ್ರಮಾಣದಲ್ಲಿ ನೀರಾವರಿ ಕೊಡುವುದರ ಮೂಖಾಂತರ ಭೂಮಿಯ ಮೇಲ್ಪದರಿನಲ್ಲಿ (೮ – ೧೨ ಸೆಂ.ಮೀ. ಆಳದವರೆಗೆ) ತೇವಾಂಶವಿರುವಂತೆ ನೋಡಿಕೊಳ್ಳಬೇಕು. ಈ ಪದರಿನಲ್ಲಿ ತೇವಾಂಶವಿರುವುದರಿಂದ ಬೆಳೆಯು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಪಡೆಯುವಲ್ಲಿ ಅನುಕೂಲವಾದುದು ಮತ್ತು ಇದರಿಂದ ಉತ್ತಮ ಬೀಜ ಬೆಳೆಯುವಲ್ಲಿ ಸಹಕಾರಿಯಾಗುವುದು. ಕಾಯಿ ಕಟ್ಟುವ ಹಂತದಲ್ಲಿ ಭೂಮಿಯ ಮೇಲ್ಪದರಿನಲ್ಲಿ ತೇವಾಂಶ ಇರದೇ ಹೋದರೆ ಒಂದೇ ಬೀಜ ಹೊಂದಿದ ಕಾಯಿಗಳು ಅಥವಾ ಜೊಳ್ಳು ಕಾಯಿಗಳ ಸಂಖ್ಯೆ ಹೆಚ್ಚಾಗುವುದು. ಇದಲ್ಲದೇ ಬೆಳೆಯ ಮಾಗುವಿಕೆಯ ಮೇಲೆ ಪರಿಣಾಮ ಉಂಟಾಗುವುದು ಮತ್ತು ಕಾಳುಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ ಮುಂದೆ ಆ ಬೀಜವನ್ನು ಬಿತ್ತನೆಗೆ ಉಪಯೋಗಿಸಿದಾಗ ಮೊಳಕೆಯ ಪ್ರಮಾಣ ತೀರ್ವತರವಾಗಿ ಕಡಿಮೆಯಾಗುವ ಸಾಧ್ಯತೆಗಳುಂಟು.

ಇನ್ನೂ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶವಿದ್ದರೆ ಅದು ಕೇವಲ ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸಿ ಮುಂದೆ ವಿವಿಧ ಪ್ರಕಾರದ ರೋಗಗಳಿಗೆ ತುತ್ತಾಗುವಂತೆ ಮಾಡುವುದು. ಕಾಯಿಹಿಡಿಯುವ ಹಂತದಲ್ಲೇನಾದರೂ ತೇವಾಂಶ ಹೆಚ್ಚಾದರೆ ಕಾಯಿಗಳು ಹಾಳಾಗಬಹುದು ಮುಂದೆ ಬೆಳೆಯು ಸಮನಾಗಿ ಮಾಗದೇ ಹೋಗಬಹುದು. ಒಟ್ಟಾರೆ ನೀರು ಜಮೀನಿನಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು.

ಸಸ್ಯ ಸಂರಕ್ಷಣೆ

ಬೀಜೋತ್ಪಾದನೆ ಮಾಡುವಾಗ ಉತ್ತಮ ಗುಣಮಟ್ಟದ ಬೆಳೆ ಬೆಳೆಯುವದು ಪ್ರಮುಖವಾದ ವಿಚಾರವಾಗಿರುವುದರಿಂದ ಬೆಳೆಯನ್ನು ವಿವಿಧ ಪ್ರಕಾರದ ರೋಗಗಳು ಹಾಗೂ ಕೀಟಗಳಿಂದ ರಕ್ಷಿಸುವುದು ಅನಿವಾರ್ಯ. ಬೆಳೆಗೆ ರೋಗರುಜಿನಗಳು ಬಂದರೆ ಅಥವಾ ಕೀಟಗಳು ಬಾಧೆ ಮಾಡಿದರೆ ಅಂತಹ ಬೆಳೆಯ ಗುಣಮಟ್ಟದಲ್ಲಿ ಸಾಕಷ್ಟು ಇಳಿಕೆ ಕಂಡುಬರಬಹದು ಮತ್ತು ಮುಂದೆ ಬೀಜಕ್ಕಾಗಿ ಈ ಬೆಳೆಯು ಪ್ರಮಾಣೀಕರಿಸಲ್ಪಡದೇ ಇರಬಹುದು. ಸೂಕ್ತವಾದ ಸಸ್ಯ ಸಂರಕ್ಷಣೆಯನ್ನು ಮಾಡದೇ ಹೋದರೆ

  • ಕಾಯಿ ಕಟ್ಟುವ ಪ್ರಕ್ರಿಯೆ ಸಮರ್ಪಕವಾಗಿ ಆಗದಿರಬಹುದು.
  • ಕಾಯಿಯಲ್ಲಿ ಕಾಳು ಸರಿಯಾಗಿ ಬೆಳೆಯದೇ ಹೋಗಬಹುದು.
  • ಬೀಜದ ಗಾತ್ರದಲ್ಲಿ ಇಳಿಕೆ ಯಾಗಬಹುದು.
  • ಅಸಮರ್ಪಕವಾಗಿ ಬೀಜ ಬೆಳೆಯುವುದು.
  • ಬೀಜದ ಬಣ್ಣ ಸರಿಯಾಗಿ ಅಭಿವೃದ್ಧಿಯಾಗದೇ ಹೋಗಬಹುದು.
  • ಬೀಜಕ್ಕೆ ಹಾನಿಯಾಗಬಾರದು.
  • ಬೀಜ ಬಿತ್ತನೆ ಮಾಡಿದರೆ ಮೊಳಕೆ ಕಡಿಮೆ ಪ್ರಮಾಣದಲ್ಲಿ ಬರಬಹುದು.

ಈ ಎಲ್ಲ ಕಾರಣಗಳಿಂದಾಗಿ ಬೀಜೋತ್ಪಾದನೆಗೆಂದು ಬೆಳೆಯನ್ನು ಬೆಳೆಯುವಾಗ ಸೂಕ್ತವಾದ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಕ್ಷೇತ್ರಕ್ಕೆ ಮೇಲಿಂದ ಮೇಲೆ ಭೇಟಿ ನೀಡಿ ಬೆಳೆಯ ಆರೋಗ್ಯವನ್ನು ಗಮನಿಸುತ್ತಿರಬೇಕು. ರೋಗ ಹಾಗೂ ಕೀಟಗಳ ಬಾಧೆ ನಿರ್ದಿಷ್ಟಪಡಿಸಿದ ಮಟ್ಟಕ್ಕಿಂತ ಮೇಲೇರಿದರೆ ತಕ್ಷಣ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಕೀಟ ಹಾಗೂ ರೋಗ ಹತೋಟಿ ಮಾಡಬೇಕು.

ಮಿಶ್ರತಳಿಗಳ ಸಸ್ಯಗಳನ್ನು ಗುರುತಿಸಿ ಕೀಳುವುದು

ಶೇಂಗಾ ಬೀಜೋತ್ಪಾದನಾ ಕ್ಷೇತ್ರದಲ್ಲಿ ತಳಿಗಳ ಮಿಶ್ರಣವನ್ನು ಹೋಗಲಾಡಿಸಲು ಸುಮಾರು ೨ ಸಲ ಈ ಪದ್ಧತಿಯನ್ನು ಅನುಸರಿಸುವ ಮೂಲಕ ಮಿಶ್ರತಳಿಯ ಸಸ್ಯಗಳನ್ನು ಗುರುತಿಸಿ ಕೀಳುವುದರ ಮುಖಾಂತರ ಮುಂದೆ ಆಗಬಹುದಾದ ಮಿಶ್ರಣವನ್ನು ಕಡಿಮೆಗೊಳಿಸಬಹುದಾಗಿದೆ.

ಸಸಿಯ ಹಂತದಲ್ಲಿ, ಅಶಕ್ತವಾದ, ರೋಗ ಹಾಗೂ ಕೀಟಭಾದೆಯನ್ನು ಬಳಲಿದ ಸಾಲಿನಲ್ಲಿ ಬೆಳೆಯಲಾರದ ಸಸಿಗಳನ್ನು ಗುರುತಿಸಿ ಕೀಳಬೇಕು. ನಂತರ ಹೂ ಬಿಡುವ ಹಂತದಲ್ಲಿ ಆ ತಳಿಗೆ ಸಂಬಂಧಿಸಿದಂತೆ ವರ್ಣಿಸಲಾಗದ ಗುಣಗಳನ್ನು ಹೊಂದಿರದೇ ಹೋದರೆ ಅಂತಹ ಸಸಿಗಳನ್ನೂ ಸಹಿತ ಕಿತ್ತುಹಾಕಬೇಕು. ಇನ್ನು ಕಾಯಿ ಕಟ್ಟುವ ಹಂತದಲ್ಲಿಯ ವೀಕ್ಷಣೆಯನ್ನು ಮುಂದುವರೆಸಿ ಯಾವುದೇ ರೀತಿಯಲ್ಲಿ ಬೇರೆ ಗುಣಧರ್ಮಗಳನ್ನು ಹೊಂದಿದ ಸಸಿಗಳನ್ನು ತಿರಸ್ಕರಿಸಬೇಕು. ಕೊನೆಯದಾಗಿ ಕೊಯ್ಲು ಮಾಡುವಾಗ ಜಮೀನಿನಿಂದ ಕೀಳಿದ ಸಸ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ರೋಗಗ್ರಸ್ತವಾದ ಕಾಯಿಗಳನ್ನು ಹೊಂದಿರುವ ವಿಭನ್ನವಾದ ಮೇಲ್ನೊಟ ಹೊಂದಿರುವ ಸಸಿಗಳ ಆಯ್ಕೆಮಾಡಿ ಬೀಜದ ಗುಂಪಿನಿಂದ ಬೇರ್ಪಡಿಸಬೇಕು. ಬೀಜೋತ್ಪಾದನೆಯ ಅತ್ಯಂತ ಪ್ರಮುಖ ಚಟುವಟಿಕೆ ಇದಾಗಿದ್ದು, ತಳಿಯ ಪರಿಶುದ್ಧತೆಯನ್ನು ಕಾಪಾಡಿಕೊಂಡು ಬರುವಲ್ಲಿ ಇದು ತುಂಬಾ ಸಹಕಾರಿಯಾಗುವುದು.

ಬೆಳೆಯ ಕೊಯ್ಲು

ಬೆಳೆಯು ಸಂಪೂರ್ಣವಾಗಿ ಮಾಗಿದ ನಂತರ ಕೊಯ್ಲು ಮಾಡಬೇಕು. ಶೇಂಗಾ ಬೆಳೆಯಲು ಬೆಳೆಯ ಕೊಯ್ಲಿನ ಹಂತ ಹಾಗೂ ಕೊಯ್ಲು ಮಾಡುವ ಸಮಯ ಬೆಳೆಯ ಒಟ್ಟಾರೆ ಇಳುವರಿ ಹಾಗೂ ಬೀಜದ ಗುಣಮಟ್ಟವನ್ನು ಕಾಪಾಡಿಕೊಂಡುಬರುವಲ್ಲಿ ಸಹಕಾರಿಯಾಗುವದು. ಬೆಳೆಯು ಸಂಪೂರ್ಣವಾಗಿ ಮಾಗುವುದಕ್ಕೆ ಮುಂಚೆ ಅಥವಾ ಬೆಳೆಯು ಸಂಪೂರ್ಣವಾಗಿ ಮಾಗಿದ ನಂತರ ತಡವಾಗಿ ಕೊಯ್ಲು ಮಾಡುವುದು ಸೂಕ್ತವಲ್ಲ. ಬೆಳೆಯು ಸರಿಯಾಗಿ ಮಾಗುವ ಹಂತ ತಲುಪುವಾಗ ಎಲೆಗಳು ಹಳದಿ ಬಣ್ಣಕ್ಕೆ ಬರಲು ಪ್ರಾರಂಭಿಸುತ್ತವೆ. ಮಾಗಿದ ಕಾಯಿಗಳಲ್ಲಿ ಬೀಜವು ಕಾಯಿಂದ ಬೇರ್ಪಟ್ಟು ಕಾಯಿಯ ಒಳಭಾಗ ನಿಧಾನವಾಗಿ ಗಾಢವಾದ ಬಣ್ಣಕ್ಕೆ ತಿರುಗುತ್ತದೆ. ಪ್ರತಿ ಗಿಡದಲ್ಲಿ ಸುಮಾರು ೭೦ ರಿಂದ ೭೫% ಪ್ರತಿಶತದಷ್ಟು ಕಾಯಿಗಳು ಮಾಗಿದಾಗ ಕೊಯ್ಲು ಮಾಡಲು ಸೂಕ್ತವಾದ ಹಂತ. ಇದನ್ನು ನಿರ್ಧರಿಸಲು ಕ್ಷೇತ್ರವನ್ನು ಪ್ರತಿನಿಧಿಸುವ ಪ್ರದೇಶಗಳಿಂದ ಕೆಲವು ಸಸಿಗಳನ್ನು ಕಿತ್ತು ಅವುಗಳ ಕಾಯಿಗಳನ್ನು ಸರಿಯಾಗಿ ವೀಕ್ಷಣೆ ಮಾಡಿ ಅವು ಕೊಯ್ಲಿಗೆ ಸೂಕ್ತವಾಗಿವೆಯೇ ಎಂದು ನಿರ್ಧರಿಸಬೇಕು. ಹೀಗೆ ನಿರ್ಧರಿಸಿ ಕೊಯ್ಲು ಮಾಡಿದ ನಂತರ ಅದೇ ಸಾಲಿನಲ್ಲಿ ಕೀಳಲಾದ ಎಲ್ಲಾ ಸಸ್ಯಗಳನ್ನು ಬಿಟ್ಟು ಬೇರೆ ವಿಧದ ಮಿಶ್ರಣವೇನಾದರೂ ಇದ್ದರೆ ಅದನ್ನು ಬೇರ್ಪಡಿಸಬೇಕು. ಈ ರೀತಿಯಾಗಿ ಆಯ್ಕೆ ಮಾಡಿದ ನಂತರ ಸಸ್ಯದಿಂದ ಕಾಯಿಗಳನ್ನು ಬೇರ್ಪಡಿಸಿ ಸಂಗ್ರಹಿಸಬೇಕು. ಈ ರೀತಿಯ ವೈಜ್ಞಾನಿಕ ಕೊಯ್ಲು ಬೀಜೋತ್ಪಾದನೆಯ ಗುಣಮಟ್ಟವನ್ನು ಕಾಪಾಡಿಕೊಂಡು ಬರುವಲ್ಲಿ ತುಂಬಾ ಸಹಕಾರಿಯಾಗುತ್ತದೆ.

ಕಾಯಿಗಳನ್ನು ಒಣಗಿಸುವುದು

ಕೊಯ್ಲು ಮಾಡಿದ ನಂತರ ಸಸಿಗಳನ್ನು ಹಾಗೂ ಕಾಯಿಗಳನ್ನು ಸೂಕ್ತವಾದ ಉಷ್ಣತೆಯಲ್ಲಿ ಒಣಗಲು ಬಿಡಬೇಕು. ಕೊಯ್ಲು ಮಾಡುವ ಹಂತದಲ್ಲಿ ಕಾಯಿಗಳಲ್ಲಿಯ ತೇವಾಂಶದ ಪ್ರಮಾಣವು ಸುಮಾರು ೩೫ ರಿಂದ ೬೦% ರಷ್ಟಿರುತ್ತದೆ. ಈ ತೇವಾಂಶವು ಸುಮಾರು ೧೦% ಕ್ಕಿಂತಾ ಕಡಿಮೆ ಬರುವ ಹಾಗೆ ಒಣಗಿಸಬೇಕು.ಈ ತೇವಾಂಶದ ಪ್ರಮಾಣ ಕಡಿಮೆ ಮಾಡದೇ ಹೋದರೆ ಬೂಜುಬರುವ ಸಾಧ್ಯತೆಗಳು ಇರುವುದು ಸಹಜ. ಆದ್ದರಿಂದ ಕೊಯ್ಲು ಮಾಡಿದ ಸಸ್ಯಗಳು ಗಾಳಿಗೆ ಸಾಲಿನಲ್ಲಿ ಇರುವುದು ಸೂಕ್ತ. ಯಾವಾಗ ಕಾಯಿಗಳಲ್ಲಿಯ ತೇವಾಂಶದ ಪ್ರಮಾಣ ಕಡಿಮೆಯಾಗುವುದೋ ಆವಾಗ ಸಸಿಗಳಿಂದ ಕಾಯಿಗಳನ್ನು ಬೇರ್ಪಡಿಸಬೇಕಾಗುವುದು. ಯಂತ್ರಗಳನ್ನು ಉಪಯೋಗಿಸಿ ಸಸಿಗಳಿಂದ ಕಾಯಿಗಳನ್ನು ಬೇರ್ಪಡಿಸುವ ಹಾಗಿದ್ದರೆ ಕಾಯಿಗಳಲ್ಲಿ ಸುಮಾರು ೧೮ – ೨೦% ತೇವಾಂಶವಿರುವಂತೆ ನೋಡಿಕೊಳ್ಳಬೇಕು. ಕೈಯಿಂದ ಕಾಯಿಗಳನ್ನು ಬೇರ್ಪಡಿಸುವ ವಿಚಾರವಿದ್ದರೆ ಕಾಯಿಗಳಲ್ಲಿ ಸುಮಾರು ೧೫% ತೇವಾಂಶವಿರುವಂತೆ ನೋಡಿಕೊಳ್ಳಬೇಕು. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಶೇಂಗಾ ಕೊಯ್ಲು ಮಾಡುವ ಹಂತದಲ್ಲಿ ಉಷ್ಣತೆ ಹೆಚ್ಚಿರುವ ಪ್ರಸಂಗಗಳಲ್ಲಿ ಶೇಂಗಾ ಕಾಯಿಗಳು ನೇರವಾಗಿ ಸೂರ್ಯ ಪ್ರಕಾಶಕ್ಕೆ ಬೀಳದಂತೆ ಎಚ್ಚರಿಕೆ ವಹಿಸಬೇಕು. ಇದನ್ನು ತುಂಬಾ ಸರಳವಾಗಿ ಮಾಡುವ ಪದ್ಧತಿಯೆಂದರೆ ಸಸಿಗಳನ್ನು ಜಮೀನಿನಿಂದ ಕೀಳಿದ ನಂತರ ಕಾಯಿಗಳು ಭೂಮಿಯ ಕಡೆಗೆ ಇರುವಂತೆ ಮಾಡಿ ವರ್ತುಲಾಕಾರದಲ್ಲಿ ಆ ಸಸಿಗಳನನು ಹೊಂದಿಸಿ ಒಣಗಲು ಬಿಡಬೇಕು.

ಕಾಯಿಗಳನ್ನು ಬೇರ್ಪಡಿಸಲು ಯಂತ್ರವನ್ನು ಉಪಯೋಗಿಸುತ್ತಿದ್ದರೆ ಅಂತಹ ಪ್ರಸಂಗಗಳಲ್ಲಿ ಒಂದು ತಳಿಯ ಕೊಯ್ಲು ಮುಗಿದ ನಂತರ ಯಂತ್ರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಎರಡನೆ ತಳಿಯ ಕೊಯ್ಲಿಗೆ ಉಪಯೋಗಿಸುವುದರಿಂದ ಮಿಶ್ರಣದ ಸಾಧ್ಯತೆಯನ್ನು ಕಡಿಮೆ ಮಾಡಬಹುದಾಗಿದೆ. ಕಾಯಿಗಳನ್ನು ಸಸಿಗಳಿಂದ ಬೇರ್ಪಡಿಸಿದ ನಂತರ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ತೇವಾಂಶವಿದ್ದರೆ ನೆರಳಿನಲ್ಲಿ ಹಾಕಿ ಅವುಗಳನ್ನು ಒಣಗಿಸಬೇಕು. ಸುಮಾರು ೪೫ ಡಿಗ್ರಿ ಸೆಲ್ಸಿಯಸ್ ಉಷ್ಣತೆಗಿಂತ ಹೆಚ್ಚಿನ ಪ್ರಮಾಣದ ಉಷ್ಣತೆಯ ಉಪಚಾರಕ್ಕೆ ಕಾಯಿಗಳು ಬಂದರೆ, ಮುಂದೆ ಬೀಜದ ಗುಣಮಟ್ಟ ತೀವ್ರವಾಗಿ ಕಡಿಮೆಯಾಗುವುದು. ಆದುದರಿಂದ ಸಂಗ್ರಹಕ್ಕೆ ಕಾಯಿಗಳು ಸೂಕ್ತವಾಗಬೇಕೆಂದರೆ ಅವುಗಳಲ್ಲಿಯ ತೇವಾಂಶದ ಪ್ರಮಾಣ ೮% ರಷ್ಟಿರಬೇಕು. ಇನ್ನು ಬೀಜದಲ್ಲಿ ತೇವಾಂಶದ ಪ್ರಮಾಣವು ೬% ಇರುವಂತೆ ನೋಡಿಕೊಳ್ಳಬೇಕು.

ಸೂಕ್ತವಾದ ಸಂಗ್ರಹಣೆ

ಶೇಂಗಾ ಕಾಯಿಗಳನ್ನು ಸಂಗ್ರಿಹಿಸಲು ಯಾವದೇ ರೀತಿಯ ನಿರ್ದಿಷ್ಟಪಡಿಸಿದ ಗಾತ್ರದ ಚೀಲಗಳಲ್ಲಿ ಹಾಕಬೇಕೆಂಬ ಷರತ್ತುಗಳೇನಿಲ್ಲ. ಸಂಪೂರ್ಣವಾಗಿ ಸ್ವಚ್ಛಗೊಳಿಸಿದ, ಒಣಗಿದ ಕಾಯಿಗಳನ್ನು ಪಾಲಿಥೀನ್ ಒಳಪದರಿರುವ ಗೋಣಿಚೀಲದಲ್ಲಿ ತುಂಬಬೇಕು ಹಾಗೂ ಈ ಚೀಲಗಳಿಗೆ ಪ್ರಮಾಣೀಕರರಣದ ಟ್ಯಾಗ್‌ಗಳನ್ನು ಕಟ್ಟಬೇಕು. ಪ್ರತಿ ಚೀಲವನ್ನು ಪ್ರಮಾಣೀಕರಣದ ಟ್ಯಾಗ್ ಸೇರಿಸಿ ಸೂಕ್ತವಾಗಿ ಹೊಲಿಯಬೇಕು. ಸಾಮಾನ್ಯವಾಗಿ ಉತ್ಪಾದಿಸಿದ ಬೀಜ ಬ್ರೀಡರ್ ಬೀಜವಾಗಿದ್ದರೆ ಅದಕ್ಕೆ ಉಪಯೋಗಿಸುವ ಟ್ಯಾಗ್‌ನ ಬಣ್ಣ ಬಂಗಾರದ ಹಳದಿಬಣ್ಣದ್ದಾಗಿರುತ್ತದೆ. ಒಂದು ವೇಳೆ ಬೀಜವು ಫೌಂಡೇಶನ್ ಬೀಜವಾಗಿದ್ದರೆ ಅದರ ಟ್ಯಾಗ್ ಬಿಳಿಯ ಬಣ್ಣದ್ದಾಗಿರುವುದಲ್ಲದೇ ಪ್ರಮಾಣೀಕರಿಸಿದ ಬೀಜವಾದಲ್ಲಿ ನೀಲಿಬಣ್ಣ ಹೊಂದಿರುವುದು. ಆದುದರಿಂದ ಬೀಜೋತ್ಪಾದನೆ ಮಾಡುವ ವ್ಯಕ್ತಿ ಅಥವಾ ಸಂಸ್ಥೆ ಸೂಕ್ತ ರೀತಿಯಲ್ಲಿ ಟ್ಯಾಗ್‌ಗಳನ್ನು ಉಪಯೋಗಿಸಬೇಕು. ಶೇಂಗಾ ಸಂಗ್ರಹಣೆಯ ಬೀಜದ ರೂಪದಲ್ಲಿಡುವುದಕ್ಕಿಂತ ಕಾಯಿಗಳ ರೂಪದಲ್ಲಿಡುವುದು ತುಂಬಾ ಸೂಕ್ತ ಹಾಗೂ ಸುರಕ್ಷಿತ. ಬೀಜದ ರೂಪದಲ್ಲಿ ಸಂಗ್ರಹ ಮಾಡಿದರೆ ಅಂತಹ ಬೀಜವು ಮುಂದೆ ತನ್ನ ಮೊಳೆಯುವ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಕಾಯಿಗಳ ಸಂಗ್ರಹಕ್ಕೆ ಕಡಿಮೆ ಉಷ್ಣತೆಯಿರುವುದು ಸೂಕ್ತ. ಕಡಿಮೆ ಉಷ್ಣತೆಯನ್ನು ಕಾಪಾಡುವುದರಿಂದ ಸಂಗ್ರಹಣೆಯನ್ನು ದೀರ್ಘ ಕಾಲದವರೆಗೆ ಮಾಡಬಹುದು. ಒಂದು ವೇಳೆ ಸಂಗ್ರಹಣೆಯ ಉಷ್ಣತೆಯು ೧೩ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದ್ದರೆ ಈ ಉಷ್ಣತಾಮಾನದಲ್ಲಿ ವಿವಿಧ ಪ್ರಕಾರದ ಕೀಟಗಳು ಬದುಕಲಾರದ್ದರಿಂದ ಬೀಜಕ್ಕೆ ಯಾವುದೇ ರೀತಿಯ ಹಾನಿಯು ಆಗುವುದಿಲ್ಲ. ಇನ್ನು ವಾತಾವರಣದ ತೇವಾಂಶದ ಪ್ರಮಾಣ ೬೫% ದಿಂದ ೭೦% ರಷ್ಟಿದ್ದರೆ ಸೂಕ್ತ. ಈ ವಾತಾವರಣದ ತೇವಾಂಶದ ಪ್ರಮಾಣವು ೬೫% ಕ್ಕಿಂತ ಕಡಿಮೆಯಾದರೆ ಕಾಯಿಗಳಲ್ಲಿಯ ತೇವಾಂಶದ ಪ್ರಮಾಣವು ಕಡಿಮೆಯಾಗುವುದಲ್ಲದೇ ಅದರಲ್ಲಿಯ ಕಾಳುಗಳು ಒಣಗಿ ಬಿರುಸಾಗಿ ಒಡೆಯುವ ಸಾಧ್ಯತೆ ಇರುವುದು. ಕೆಲವು ಪ್ರಸಂಗಗಳಲ್ಲಿ ಸೂಕ್ತವಾದ ಸಂಗ್ರಹಣ ಪರಿಸ್ಥಿತಿಗಳನ್ನು ನಿರ್ವಹಿಸಿವುದು ಕಷ್ಟವಾಗಿದ್ದರೆ ಅಂತಹ ಪ್ರಸಂಗಗಳಲ್ಲಿ ಕಾಯಿಯಿಂದ ಕಾಳುಗಳನ್ನು ಬೇರ್ಪಡಿಸದೇ ಅವುಗಳನ್ನು ಪಾಲಿಥಿನ್ ಒಳಪದರಿರುವ ಚೀಲಗಳಲ್ಲಿ ತುಂಬಿ ನಂತರ ಅವುಗಳ ಸಂಗ್ರಹದ ಮಧ್ಯದಲ್ಲಿ ವಿಶಾಲದ ಬಾಯಿಯುಳ್ಳ ಬಾಣಲೆಯೊಂದರಲ್ಲಿ ಪ್ರತಿ ಕಿ.ಗ್ರಾಂ. ಕಾಯಿಗಳಿಗೆ ಸುಮಾರು ೨೫೦ ಗ್ರಾಂ. ಪ್ಯುಸ್ಡ್ ಕ್ಯಾಲ್ಸಿಯಂ ಕ್ಲೋರೈಡ್‌ನ್ನು ತುಂಬಿ ಬಾಣೆಲೆಯ ಬಾಯಿಯನ್ನು ತೆಳುವವಾದ ಬಟ್ಟೆಯಿಂದ (ಮಸ್ಲಿನ್ ಬಟ್ಟೆ) ಕಟ್ಟಿ ಇಡಬೇಕು. ಇಂತಹ ಚೀಲಗಳನ್ನು ಸೂಕ್ತವಾಗಿ ಹವೆಯಾಡುವ ಸ್ವಚ್ಛ ಹಾಗೂ ಒಣಗಿದ ಕೋಣೆಗಳಲ್ಲಿ ಸಂಗ್ರಹಿಸಿಡಬೇಕು. ಶೇಂಗಾ ಕಾಯಿ ತುಂಬಿದ ಚೀಲಗಳನ್ನು ಕಟ್ಟಿಗೆಯ ಪಟ್ಟಿಗಳ ಮೇಲೆ ಸಂಗ್ರಹಿಸಿಡಬೇಕು. ಇಷ್ಟು ಕಾಳಜಿ ತೆಗೆದುಕೊಂಡ ನಂತರವೂ ಸಂಗ್ರಹಣಾ ಕೋಣೆಯಲ್ಲಿ ಸಂಗ್ರಹಣಾ ಕೀಟಗಳು ಕಾಣಿಸಿದರೆ ‘ಸೆಲ್ ಫಾಸ್’ ಗುಳಿಗೆಗಳಿಂದ ಹೊಗೆಯಾಡುವಂತೆ ಮಾಡುವ ಮೂಲಕ ಈ ರೀತಿಯಾಗಿ ಬೆಳೆದು ಸಂಗ್ರಹಿಸಿದ ಬೀಜವನ್ನು ಒಂದು ವರ್ಷದ ಒಳಗಡೆಯೇ ಬೀಜವಾಗಿ ಉಪಯೋಗಿಸಬೇಕು. ಕಾರಣಾಂತರಗಳಿಂದ ಒಂದು ವರ್ಷದಲ್ಲಿ ಅವುಗಳನ್ನು ಬಳಕೆ ಅಥವಾ ಮಾರಾಟ ಮಾಡದೇ ಹೋದರೆ ಅಂತಹ ಬೀಜಗಳು ಪ್ರಮಾಣೀಕರಿಸಿದ ಬೀಜವೆಂದು ಮಾರಾಟ ಮಾಡಲು ಬರುವುದಿಲ್ಲ.

ಕಾಯಿಯಿಂದ ಬೀಜ ಬೇರ್ಪಡಿಸುವುದು

ಬಿತ್ತನೆಗಾಗಿ ಬೀಜ ಬೇರ್ಪಡಿಸುವ ಕಾರ್ಯವನ್ನು ಯಂತ್ರದಿಂದ ಮಾಡುವದು ಸೂಕ್ತವಲ್ಲ. ವಯಕ್ತಿಕವಾಗಿ ಕಾಳು ಬೇರ್ಪಡಿಸುವುದರಿಂದ ಕಾಳಿಗೆ ಆಗಬಹುದಾದ ಹಾನಿಯು ತುಂಬಾ ಕಡಿಮೆ ಹಾಗೂ ಕಾಳು ಒಡೆಯುವುದನ್ನು ತಡೆಗಟ್ಟಬಹುದು. ಯಂತ್ರದ ಸಹಾಯದಿಂದ ಕಾಳುಗಳನ್ನು ಬೇರ್ಪಡಿಸಿದರೆ ಮೇಲೆ ಹೇಳಿದ ಎರಡು ಹಾನಿಗಳು ಆಗುವುದುಂಟು. ಕಾಯಿಯಿಂದ ಬೀಜವನ್ನು ಬೇರ್ಪಡಿಸುವ ಹಂತದಲ್ಲಿ ಬೀಜವು ಆಯ್ಕೆಗೊಂಡ ತಳಿಯ ಗುಣಧರ್ಮಗಳಿಗೆ ವ್ಯತಿರಿಕ್ತವಾಗಿದ್ದರೆ ಅಂತಹ ಕಾಳುಗಳನ್ನು ಬೇರ್ಪಡಿಸಬೇಕು. ಬಿತ್ತನೆಗೆ ಮುಂಚೆ ಬೀಜವನ್ನು ಸೂಕ್ತವಾದ ರಾಸಾಯನಿಕಗಳಿಂದ ಉಪಚರಿಸಬೇಕು.