ಶ್ರದ್ಧೆಯಿಂದ ಸಂಗೀತ ಸಾಧನೆ ಮಾಡಿ ಅದನ್ನು ಶಿಷ್ಯರಿಗೆ ಉಚಿತವಾಗಿ ಹಂಚುವ ಕಾರ್ಯದಲ್ಲಿ ನಿರತರಾದವರು ಶ್ರೀ ಶೇಷಗಿರಿ ದಂಡಾಪೂರ ಅವರು. ದಿನಾಂಕ ೪-೩-೧೯೪೦ ರಂದು ಧಾರವಾಡದಲ್ಲಿ ಜನಿಸಿದ ಶ್ರೀ ಶೇಷಗಿರಿ ದಂಡಾಪೂರ ಅವರದು ಸಂಗೀತ ಮನೆತನ. ತಂದೆ ಶ್ರೀ ನಾರಾಯಣಚಾರ್ಯ ದಂಡಾಪೂರ ಅವರು ಸ್ವತಃ ಗಾಯಕರಾಗಿದ್ದು ಗ್ವಾಲಿಯರ್ ಘರಾಣಾದ ಗಾಯನಾಚಾರ್ಯರಾಗಿದ್ದ ಬಾಲಕೃಷ್ಣ ಬುವಾ ಚಂದೂರಕರ (ಈಚಲ ಕರಂಜಿಕರ) ಅವರಲ್ಲಿ ಶಾಸ್ತ್ರೀಯ ಸಂಗೀತ ಪಡೆದವರು.

ಶೇಷಗಿರಿಯವರಿಗೆ ತಂದೆ ನಾರಾಯಣಾಚಾರ್ಯರೇ ಸಂಗೀತದ ಗುರುಗಳೂ ಸಹ. ಸಂಗೀತ ವಿಶಾರದ ಹಾಗೂ ವಿದ್ವತ್‌ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಪ್ರಪ್ರಥಮ ಸಂಗೀತ ಕಾರ್ಯಕ್ರಮ ನಡೆದದ್ದು ಬೆಳಗಾವಿ ಜಿಲ್ಲೆಯ ಅಥಣಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅನಂತರದಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ‘ಬಿ -ಹೈ’ ದರ್ಜೆಯ ಕಲಾವಿದರಾಗಿರುವುದೇ ಅಲ್ಲದೆ ಸಂಗೀತ ಸಂಯೋಜಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಂ. ಭೀಮಸೇನ ಜೋಶಿಯವರು ಕುಂದಗೋಳದಲ್ಲಿ ನಡೆಸುವ ಸವಾಯಿ ಗಂಧರ್ವರ ಪುಣ್ಯತಿಥಿಯ ಉತ್ಸವದಲ್ಲಿ ಎರಡು ಬಾರಿ ಕಛೇರಿ ಮಾಡಿ ಜೋಶಿಯವರಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಅಲ್ಲದೆ ಹಿರಿಯ ಸಂಗೀತ ವಿದ್ವನ್ಮಣಿಗಳೆನಿಸಿದ್ದ ನಾನಾ ಸಾಹೇಬ ನಾಡಿಗೇರ ಅವರಿಂದ ಮೆಚ್ಚುಗೆ ಪಡೆದಿದ್ದಾರೆ.

ರಾಜ್ಯದ ಒಳಗೆ, ಹೊರಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ ಹೆಸರು ಗಳಿಸಿರುವ ಶೇಷಗಿರಿ ಅವರು ಮೈಸೂರು ದಸರಾ ಸಂಗೀತೋತ್ಸವದಲ್ಲಿ ಸತತವಾಗಿ ಎರಡು ವರ್ಷ ಕಾರ್ಯಕ್ರಮ ನೀಡಿದ್ದಾರೆ. ಹಿರಿಯ ಗಾಯಕಿ ಗಾಯನ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್‌ ಅವರಿಂದ ಸನ್ಮಾನಿತರಾಗಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದಲೂ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ದಂಡಾಪೂರವರು ‘ಸಂಗೀತ ದೀಪಿಕಾ’ ಎಂಬ ಶಾಸ್ತ್ರ ಗ್ರಂಥವನ್ನು ರಚಿಸಿ ಪ್ರಕಟಿಸಿದ್ದಾರೆ.

ಪ್ರಸ್ತುತ ತಮ್ಮದೇ ಆದ ಧರ್ಮಾರ್ಥ ಸಂಗೀತ ಪಾಠಶಾಲೆಯ ಪ್ರಾಂಶುಪಾಲರಾಗಿ ಆರ್ಥಿಕವಾಗಿ ಹಿಂದುಳಿದ ಅನೇಕ ಸಂಗೀತಾಸಕ್ತರಿಗೆ ಉಚಿತವಾಗಿ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.

ಹೀಗೆ ಸಂಗೀತದಲ್ಲೇ ತಮ್ಮನ್ನು ತೊಡಗಿಸಿಕೊಂಡು ಅಪಾರವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಶೇಷಗಿರಿ ದಂಡಾಪೂರ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೩ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.