ದೇಶದ ಹೆಸರಾಂತ ತಬಲಾ ವಾದಕರಾಗಿರುವ ಪಂ. ಶೇಷಗಿರಿ ಹಾನಗಲ್ಲರು ಕರ್ನಾಟಕದ ತಬಲಾ ದಿಗ್ಗಜರಲ್ಲೊಬ್ಬರು. ಅವರು ಜನಿಸಿದ್ದು ಧಾರವಾಡದಲ್ಲಿ ೧೯೨೨ರ ಅಕ್ಟೋಬರ ೧೦ ರಂದು. ಹುಟ್ಟು ಅಂಗವಿಕಲರು. ಶಾಲಾ ವಿದ್ಯೆಗಿಂತ ತಬಲಾ ವಿದ್ಯೆಕಡೆಗೆ ಹೆಚ್ಚು ಗಮನ. ಅವರ ತಬಲಾ ವಿದ್ಯೆಯ ಮೊದಲ ಗುರು ಅವರ ತಂದೆ ಶ್ರೀ ಕೃಷ್ಣರಾವ ಹಾನಗಲ್ಲ, ನಂತರ ಚಿಕ್ಕಪ್ಪ ಶ್ರೀರಾಮರಾವ್‌ ಹಾನಗಲ್ಲ. ತಬಲಾದಲ್ಲಿ ಉನ್ನತ ತರಬೇತಿ ಪಡೆದದ್ದು ಪಂ. ನಾರಾಯಣರಾವ್‌ ಇಂದೋರ್ ಕರ ಮತ್ತು ಪಂ. ಲಾಲಜೀ ಗೋಖಲೆಯವರಿಂದ.

ಎಳವೆಯಲ್ಲಿ ತಬಲಾದ ದೀಕ್ಷೆ ಪಡೆದು, ತಬಲಾ ದಿಗ್ಗಜರಲ್ಲಿ ಶಿಕ್ಷಣ ಪಡೆದ ಅವರು ೧೯೪೯ ರಲ್ಲಿ ಮುಂಬೈ ಆಕಾಶವಾಣಿ ಕೇಂದ್ರದಿಂದ ಪ್ರಥಮ ತಬಲಾ ಸೋಲೋ ನುಡಿಸಿದರು. ಸತತ ಪರಿಶ್ರಮದಿಂದ ಆಕಾಶವಾಣಿಯ “ಏ” ಗ್ರೇಡ್‌ ಕಲಾವಿದರಾದರು ೧೯೫೧ ರಿಂದ ೧೯೮೩ ರವರೆಗೆ ೩ ವರ್ಷ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿ, ಈಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತ ಶಿಷ್ಯರಿಗೆ ತಬಲಾ ಶಿಕ್ಷಣ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಅವರ ತಬಲಾವಾದನದಲ್ಲಿ ಲಖನೌ ಮತ್ತು ಪೂರಬ್‌ ಬಾಜ್‌ದೊಂದಿಗೆ ದೆಹಲಿ, ಅಜರಾಡಾ ಮತ್ತು ಪಂಜಾಬ್‌ ಬಾಜ್‌ ಸಮ್ಮಿಳಿತವಾಗಿವೆ. ಅವರು ಒಂಭತ್ತುವರೆ ಮಾತ್ರಾದ ತಾಲ (೯ ೧/೨) ‘ಇಂದಿರಾ ತಾಲ’ ಮತ್ತು ‘ಗಂಗಾಚಲನ’ ವೆಂಬ ವಾದನ ಶೈಲಿ ಕಂಡು ಹಿಡಿದಿದ್ದಾರೆ. ಅನೇಕ ತಾಲಗಳಲ್ಲಿ ಪೇಷ್ಕಾರ, ಕಾಯದಾ, ಗತ್‌, ರೇಲಾ ಹಾಗೂ ಚಕ್ರದಾರಗಳನ್ನು ರಚಿಸಿದ್ದಾರೆ.

ದೇಶ ಹಾಗೂ ವಿದೇಶಗಳಲ್ಲಿ ಅನೇಕ ಸಾರ್ವಜನಿಕ ಹಾಗೂ ರೇಡಿಯೋ ಸಂಗೀತ ಸಮ್ಮೇಳನಗಳಲ್ಲಿ ಅನೇಕ ದಿಗ್ಗಜ ಸಂಗೀತಗಾರರಿಗೆ ತಬಲಾ ಸಾಥ್‌ ಹಾಗೂ ಸೋಲೊ ನುಡಿಸಿದ್ದಾರೆ. ರವೀಂದ್ರ ಯಾವಗಲ್ಲ, ಸೂರಜ್‌  ಪುರಂದರೆ, ಗೋಪಾಲಕೃಷ್ಣ ಹೆಗಡೆ, ಸಂಜೀವ ಪೋತದಾರ, ಯಾತ್ರಿಕ, ಎಂ. ನಾಗೇಶ, ಶ್ರೀಪಾದ ಮುಳಗುಂದ, ಅಜೇಯ ಹಾನಗಲ್ಲ(ಮಗ), ರಮೇಶ ಜೋಶಿ, ರಾಮಚಂದ್ರ ಉಪಾಧ್ಯಾಯ – ಮುಂತಾದ ಶಿಷ್ಯರನ್ನು ತಯಾರಿಸಿದ್ದಾರೆ.

ಅವರಿಗೆ ‘ಕರ್ನಾಟಕ ರಾಜ್ಯೋತ್ಸವ’ , ‘ಕನಕ-ಪುರಂದರ’ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ (೧೯೮೧-೮೨) ದೊರೆತಿವೆ. ಬೆಂಗಳೂರಿನ ‘ವಿಜಯಾ ಇನ್‌ ಸ್ಟಿಟ್ಯೂಟ್‌ ಆಫ್‌ ಮ್ಯೂಜಿಕಲ್‌ ಸಂಸ್ಥೆ ಅವರ ಹೆಸರಿನಲ್ಲಿ ಪ್ರತಿ ವರ್ಷ ಮೂರು ಜನ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತಿದೆ.