ಬಸವಣ್ಣನವರು ಛಲ ಬೇಕು ಶರಣಂಗೆ ಎಂದು ಹೇಳಿದ ಮಾತನ್ನು ಪಂ. ಶೇಷಗಿರಿ ಹಾನಗಲ್‌ ಅವರು ಸಾಧಿಸಿ ತೋರಿಸಿದ್ದಾರೆ. ಅಂಗವಿಕಲತೆ ಇದ್ದರೂ ಛಲ ಹಾಗೂ ಪರಿಶ್ರಮದಿಂದ ಒಬ್ಬ ವ್ಯಕ್ತಿ ಏನೆಲ್ಲ ಸಾಧಿಸಬಹುದೆಂಬುದಕ್ಕೆ ಶೇಷಗಿರಿ ಹಾನಗಲ್‌ ಅವರು ಉದಾಹರಣೆಯಾಗಿದ್ದಾರೆ.

ಶೇಷಗಿರಿಯವರು ಶೈಶವದಿಂದಲೇ ಅಂಗವಿಕಲತೆಯ ಸಮಸ್ಯೆಯನ್ನು ಹೊತ್ತುಕೊಂಡು ಬಂದಿದ್ದಾರೆ. ಧಾರವಾಡದಲ್ಲಿ ೧೦-೧೦-೧೯೨೨ರಲ್ಲಿ ಜನಿಸಿದ ಇವರಿಗೆ ಪೋಲಿಯೊದಿಂದಾಗಿ ಎರಡು ಕಾಲೂ ನಿರ್ಬಲವಾಗಿದ್ದವು. ಆ ದಿನಗಳಲ್ಲಿ ಯಾವುದೇ ವೈದ್ಯಕೀಯ ಉಪಚಾರ ಗೊತ್ತಿರಲಿಲ್ಲ. ಕಂಕುಳಲ್ಲಿರಿಸುವ ಊರುಗೋಲು ಅವರ ಬದುಕಿಗೆ ಆಸರೆಯಾಯಿತು. ಎಲ್ಲಕ್ಕಿಂತ ಮನೋಬಲವೇ ಮಿಗಿಲಾದುದೆನ್ನುವುದು ಸತ್ಯ. ಶೇಷಗಿರಿಯವರ ಛಲದೆದುರು ಈ ಅಂಗವಿಕಲತೆ ಯಾವುದೇ ಪರಿಣಾಮ ಬೀರಲಿಲ್ಲ. ಯಾರಿಗೂ ಭಾರವಾಗದೇ ಸ್ವಾವಲಂಬನೆಯಿಂದ ಬದುಕಬೇಕೆನ್ನುವ ಅವರ ದೃಢ ನಿಶ್ಚಯ ಅವರನ್ನಿಂದು ಅಗ್ರಗಣ್ಯ  ಕಲಾವಿದರನ್ನಾಗಿ ರೂಪಿಸಿದೆ. ಅವರ ಬದುಕು ಅರ್ಥಪೂರ್ಣವಾಗಿದೆ.

ಶೇಷಗಿರಿಯವರ ತಂದೆ ಕೃಷ್ಣರಾವ್‌ ಹಾನಗಲ್‌, ತಾಯಿ ರಾಧಾಬಾಯಿ ಹಾನಗಲ್‌. ತಂದೆ ಕೃಷ್ಣರಾಯರು ಪ್ರಸಿದ್ಧ ವಕೀಲರಾಗಿದ್ದ ರಾವಬಹದ್ದೂರ ಪಾಟೀಲರಲ್ಲಿ ಕಾರಕೂನರಾಗಿದ್ದರು. ತಬಾಲವದನ ಶೇಷಣ್ಣನವರಿಗೆ ಮನೆತನದಕ ಬಳುವಳಿಯಾಗಿದೆ. ತಂದೆ ಕೃಷ್ಣರಾಯರು ಕರ್ನಾಟಕ ಶೈಲಿಯಲ್ಲಿ ತಬಲಾ ನುಡಿಸುವದನ್ನು ಅಭ್ಯಾಸ ಮಾಡಿದ್ದರು. ಚಿಕ್ಕಪ್ಪ ರಾಮರಾಯರು ಸಂಗೀತಶಾಸ್ತ್ರಜ್ಞರು ಮತ್ತು ತಬಲಾವಾದಕರಾಗಿದ್ದವರು. ಇವರ ಸೋದರತ್ತೆ ಅಂಬಾಬಾಯಿಯವರ ಮಗಳೇ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ- ಡಾ. ಗಂಗೂ ಬಾಯಿ ಹಾನಗಲ್‌ ಅವರು. ಈ ಕೌಟುಂಬಿಕ ಹಿನ್ನೆಲೆಯಲ್ಲಿ ಶೇಷಗಿರಿಯವರೂ ತಬಲಾವಾದಕರಾದದ್ದು ಸಹಜ.

ಶೇಷಗಿರಿಯವರು ತಮ್ಮ ಶಾಲಾ ಶಿಕ್ಷಣವನ್ನು ಐದನೆಯ ತರಗತಿಗೆ ಬರುತ್ತಿದ್ದಂತೆಯೆ ಮುಗಿಸಿದರು.ಕಂಕುಳಲ್ಲಿ ಅವರನ್ನು ಎತ್ತಿಕೊಂಡು ಹೋಗಿ ಶಾಲೆಗೆ ಕಳಿಸುವುದು ಅನಿವಾರ್ಯ ಸ್ಥಿತಿಯಾಗಿತ್ತು. ಆದ್ದರಿಂದ ಅವರ ಶಾಲೆಯ ಮುಕ್ತಾಯಕ್ಕೆಕ ಇದೂ ಒಂದು ಕಾರಣವಾಗಿತ್ತು. ಹೀಗಾಗಿ, ಶಾಲೆಗೆ ವಿದಾಯ ಹೇಳಿ ಮನೆಯಲ್ಲಿಯೇ ಹಾರ್ಮೋನಿಯಂ ಹಾಗೂ ಪಿಟೀಲು ಕಲಿಯತೊಡಗಿದರು. ಆಕಾಶವಾಣಿಯವರು ಪೇಟಿಯನ್ನು ನಿಷೇಧ ಮಾಡಿದ್ದರಿಂದ ಶೇಷಗಿರಿಯವರು ತಬಲಾವಾದನವನ್ನೆ ಮುಂದುವರಿಸಬೇಕೆಂಬ ದೃಢ ನಿರ್ಧಾರ ಮಾಡಿದರು. ಅಷ್ಟೊತ್ತಿಗಾಗಲೇ ಶೇಷಗಿರಿಯವರು ಎಲ್ಲ ತಾಳಗಳ ಠೇಕಾಗಳನ್ನು ಬಾರಿಸಲು ಕಲಿತುಕೊಂಡಿದ್ದರು. ಅಲ್ಲದೆ ಸಣ್ಣಸಣ್ಣ ಕಾರ್ಯಕ್ರಮಗಳಿಗೆ ತಬಲಾ ಸಾಥ ಕೂಡಾ ಮಾಡುತ್ತಿದ್ದರು. ಈ ಮಧ್ಯೆ ಅವರಿಗೆ ಸವಾಯಿ ಗಂಧರ್ವರಲ್ಲಿ ಗಾಯನ ಕಲಿಯುವ ಹಂಬಲವಾಯಿತು. ಗಂಧರ್ವರ ಧ್ವನಿ ಮುದ್ರಿಕೆಗಳ ಕೆಲ ಅಂಶಗಳನ್ನು ಅನುಕರಣೆ ಮಾಡಿ ಹಾಡಲೂ ಕಲಿತುಕೊಂಡಿದ್ದರು. ಗಂಧರ್ವರಲ್ಲಿ ಹೋಗಿ ತಾವು ಗಾಯನ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದಾಗಕ ಗಂಧರ್ವರು “ಎಲ್ಲಿ ಒಂದು ಹಾಡಿ ತೋರಿಸು” ಎಂದು ಕೇಳಿದಾಗ ತಾವು ಕಲಿತ ಅವರ ಹಾಡನ್ನು ಹಾಡಿ ತೋರಿಸಿದರು. ಮೆಚ್ಚಿಕೊಂಡ ಸವಾಯಿ ಗಂಧರ್ವರು ಶೇಷಗಿರಿಯವರಿಗೆ ಗಾಯನ ಕಲಿಸುವುದಕ್ಕೆ ಒಪ್ಪಿಕೊಂಡರು.

ಆದರೆ ದುರ್ದೈವವಶಾತ್‌ ಅದೇ ವೇಳೆಗೆ ಸವಾಯಿಗಂಧರ್ವರಿಗೆ ಪಾರ್ಶ್ವವಾಯುವಿನ ತೊಂದರೆಯಿಂದಾಗಿ ಅವರು ಚಿಕಿತ್ಸೆ ಪಡೆಯಲು ಪುಣೆಗೆ ಹೋದರು. ಇದರಿಂದಾಗಿ ಶೇಷಗಿರಿಯವರ ಗಾಯನ ಕಲಿಯುವ ಬಯಕೆ ಈಡೇರಲಿಲ್ಲ. ಮತ್ತೆ ತಬಲಾವಾದನಕ್ಕೆ ಹೆಚ್ಚು ಮಹತ್ವ ನೀಡಿ ಪ್ರಾರಂಭಿಕ ಶಿಕ್ಷಣವನ್ನು ರಾಮರಾವ ಹಾನಗಲ್‌ ಅವರಲ್ಲಿ ಮುಂದುವರಿಸಿದರು.

ಶೇಷಗಿರಿಯವರು ತಬಲಾದ ಉನ್ನತ ಶಿಕ್ಷಣಕ್ಕಗಿ ಗುರುವಿನ ಅನ್ವೇಷಣೆಯಲ್ಲಿದ್ದರು. ಈ ವಿಷಯವಾಗಿ ಸವಾಯಿಗಂಧರ್ವರ ಅಳಿಯಂದಿರದ ನಾನಾಸಾಹೇಬ ದೇಶಪಾಂಡೆಯವರು ತಮ್ಮ ಪರಿಚಯಸ್ಥರಾದ ಉಸ್ತಾದ ಗಾಮೇಖಾನರಲ್ಲಿ ಪ್ರಸ್ತಾಪಿಸಿದ್ದರು. ಗಾಮೇಖಾನರೂ ಶೇಷತಗಿರಿಯವರಿಗೆ ತಬಲಾ ಕಲಿಸಲು ಒಪ್ಪಿದ್ದರು. ಆದರೆ ಅದೇ ಸಂದರ್ಭದಲ್ಲಿ ಭಾರತದಲ್ಲಿ ಕೋಮುಗಲಭೆ ಪ್ರಾರಂಭವಾಗಿ ಕರ್ನಾಟಕದಲ್ಲೂ ಅದರ ಪ್ರಭಾವ ಹೆಚ್ಚಾಗಿತ್ತು. ಈ ಭಯದಿಂದ ಉಸ್ತಾದ ಗಾಮೇಖಾನರು ಶೇಷಗಿರಿಯವರಿಗೆ ತಬಲಾ ಕಲಿಸಲು ನಿರಾಕರಿಸಿದರು. ಶೇಷಗಿರಿಯವರು ಆಗಾಗ ಪುಣೆ, ಮುಂಬೈಗೆ ಕಾರ್ಯಕ್ರಮ ಕೊಡುವುದಕ್ಕೆ ಹೋಗುತ್ತಿದ್ದರು. ಆಗ ಪ್ರಸಿದ್ಧ ತಬಲಾವಾದಕರಾಗಿದ್ದ, ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದದ ಲಾಲಜಿ ಗೋಖಲೆಯವರು ತಬಲಾದಲ್ಲಿ ಉನ್ನತ ಶಿಕ್ಷಣ ನೀಡಲು ಶೇಷಗಿರಿಯವರಿಗೆ ಒಪ್ಪಿಗೆ ನೀಡಿದರಾದರೂ ಅವರಿಗೆ ದೆಹಲಿ ಆಕಾಶವಾಣಿಗೆ ವರ್ಗವಾದುದರಿಂದ ಅವರಲ್ಲಿ ಕಲಿಯುವ ಅವಕಾಶ ಶೇಷಗಿರಿಯವರಿಗೆ ತಪ್ಪಿದರೂ ಮುಂದೆ ಆ ಸುಯೋಗ ಪುನಃ ಒದಗಿ ತಬಲಾ ತರಬೇತಿ ಪಡೆದರ೪ಉ. ಅನಂತರ ಮಹಾರಾಷ್ಟ್ರದ ಪ್ರಸಿದ್ಧ ತಬಲಾವಾದಕರಾದ ನಾರಾಯಣರಾವ ಇಂದೊರಕರ ಅವರಲ್ಲಿ ತಬಲಾ ಶಿಕ್ಷಣಮುಂದುವರಿಸಿದರು.

ಇಂದೋರಕರರು ಉಸ್ತಾದ ಜಹಂಗೀರಖಾನರಲ್ಲಿ ತಬಲಾ ಶಿಕ್ಷಣಪಡೆದವರಾಗಿದ್ದರು. ಶೇಷಗಿರಿಯವರು ನಾರಾಯಣರಾವ್‌ ಇಂದೋರಕರರ ಬಳಿ ತಬಲಾ ಕಲಿತು ನಿಷ್ಣಾತರಾದರು. ಅಲ್ಲಿರುವಾಗಲೇ ಆಕಾಶವಾಣಿಯ ಆಡಿಶನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಶೇಷಗಿರಿಯವರ ಪ್ರಪ್ರಥಮ ಆಕಾಶವಾಣಿ ಕಾರ್ಯಕ್ರಮ ೧೯೪೯ ಡೆಸೆಂಬರಿನಲ್ಲಿ ಮುಂಬೈ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಯಿತು. ಅನಂತರ ಹುಬ್ಬಳ್ಳಿಗೆ ಬಂದ ಶೇಷಣ್ಣ ತಬವಾವಾದನದಲ್ಲಿ ಮತ್ತಷ್ಟು ಅಭ್ಯಾಸ ಮಾಡುತ್ತ ಆಗಾಗ್ಗೆ ಮುಂಬೈಗೆ ಹೋಗಿ ಕಲಿತು ಬರುತ್ತಿದ್ದರು. ೧೯೫೦ರಲ್ಲಿ ನಟಸಾಮ್ರಾಟ ಬಾಲಗಂಧರ್ವರ ಉಪಸ್ಥಿತಿಯಲ್ಲಿ ಹುಬ್ಬಳ್ಳಿಯಲ್ಲಿ ಶೇಷಗಿರಿಯವರದು ನಾರಾಯಣರಾವ್‌ ಇಂದೋರಕರವರಲ್ಲಿ ಗಂಡಾ-ಸಮಾರಂಭ ಜರುಗಿತು. ಶೇಷಣ್ಣ ಅದೊಂದು ಅವಿಸ್ಮರಣೀಯ ಸಮಾರಂಭವೆಂದು ನೆನಪಿಸಿಕೊಳ್ಳುತ್ತಾರೆ. ಹೀಗೆ ಇವರ ಜೀವನಕ್ಕೊಂದು ಸ್ಥಿರತೆ ಹಗೂ ನೆಮ್ಮದಿ ದೊರೆತದ್ದು ತಬಲಾ ನಿಷ್ಣಾತರಾದಾಗ ಹಾಗೂ ಹೆಚ್ಚಿನ ಸಾಧನೆಗೆ ಗತಿ ದೊರೆತಾಗ.

೧೯೫೧ರಲ್ಲಿ ಧಾರವಾಡ ಆಕಾಶವಾಣಿಯ ನಿಲಯ ಕಲಾವಿದರಾಗಿ ಇವರ ಸೇರ್ಪಡೆ ಆದಾಗ ಇವರು ಕಲಿತ ವಿದ್ಯೆಗೆ ಪುರಸ್ಕಾರ ದೊರೆತಂತಾಗಿ ನೆಮ್ಮದಿಯ ಜೀವನೋಪಾಯಕ್ಕೆ ಆಧಾರವೆನಿಸಿತು. ಆಗ ಧಾರವಾಡ ಆಕಾಶವಾಣಿಯಲ್ಲಿ ಲಪಂ. ಗುರುರಾವ ದೇಶಪಾಂಡೆಯವರು ಸಂಗೀತ ವಿಭಾಗದ ಮುಖ್ಯಸ್ಥರಾಗಿದ್ದರು. ಬೇರೆ ಬೇರೆ ರಾಜ್ಯಗಳಿಂದ ಬರುವ ಎಲ್ಲ ಕಲಾವಿದರಿಗೆ ಸಾಥ ಮಾಡುವ ಸದವಕಾಶ ಶೇಷಗಿರಿಯವರಿಗೆ ದೊರೆಯಿತು. ಅಕ್ಕ ಡಾ. ಗಂಗೂಬಾಯಿ ಹಾನಗಲ್‌ ಅವರ ಮಗಳು ಕೃಷ್ಣ ಹಾನಗಲ್‌ ಅವರಿಗಂತೂ ನಿರಂತರವಾಗಿ ತಬಲಾ ಸಾಥಿ ನೀಡಿದ್ದಾರೆ. ಭಾರತದ ಎಲ್ಲ ಅಗ್ರಶ್ರೇಣಿಯ ಹಿಂದುಸ್ತಾನಿ ಗಾಯಕ-ವಾದಕರಿಗೆ ತಬಲಾ ನುಡಿಸಿರುವ ಇವರು, ತಮ್ಮ ಸುದೀರ್ಘ ಕಲಾ ಸೇವಾವಧಿಯಲ್ಲಿ ಅನೇಕ ಹಿರಿಯ ಸಂಗೀತಗಾರರಿಗೆ ತಬಲಾ ಸಾಥ; ನೀಡಿದ ಅಪರೂಪದ ಕಲಾವಿದರಾಗಿದ್ದಾರೆ. ಸವಾಯಿಗಂಧರ್ವರು, ಉಸ್ತಾದ ಶಿಹಮತ್‌ ಖಾನ್‌, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ, ಜಸರಾಜ್‌, ವ್ಹಿ.ಜಿ. ಜೋಗ, ಬಸವರಾಜ ರಾಜಗುರು, ಝರೀನ ದಾರುವಾಲಾ, ರಾಜೀವ ತಾರಾನಾಥ, ಹೀರಾಬಾಯಿ ಬಡೋದೆಕರ, ಗಿರಿಜಾದೇವಿ, ಶೋಭಾ ಗುರ್ಟು, ಬೇಗಂ ಅಖ್ತರ, ವಿಠ್ಠಲರಾವ ಕೋರೆಗಾಂವಕರ ಹೀಗೆ ಇನ್ನೂ ಅನೇಕ ಗಾಯಕ-ವಾದಕರು ಶೇಷಗಿರಿಯವರ ಪಕ್ಕವಾದ್ಯದ ಸವಿಯನ್ನುಂಡು ಆನಂದಿಸಿದ್ದಾರೆ.

೧೯೫೩ರಲ್ಲಿ ಆಕಾಶವಾಣಿಯ ಉನ್ನತ ಶ್ರೇಣಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮಾನ್ಯತೆ ಪಡೆದರು. ಧಾರವಾಡ ಆಕಾಶವಾಣಿಯಲ್ಲಿ ೧೯೫೦ರಿಂದ ೧೯೮೩ರ ವರೆಗೆ ೩೩ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಶೇಷಗಿರಿಯವರು ದೂರದರ್ಶನದ ಸಾಕ್ಷ್ಯಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

೧೯೫೨ರಲ್ಲಿ ದೆಹಲಿಯಲ್ಲಿ ನಡೆದ ಮೂರನೆಯ ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಲ್ಲದೆ ಇಂಥ ಅನೇಕ ರಾಷ್ಟ್ರೀಯ ಕಾರ್ಯಕ್ರಮ ಹಾಗೂ ಸಂಗಈತ ಸಮ್ಮೇಳನಗಳಲ್ಲಿ ಭಾಗವಹಿಸಿ ನಾಡಿನ ಗೌರವ ಹೆಚ್ಚಿಸಿದ್ದಾರೆ. ೧೯೫೯ ಮತ್ತು ೧೯೬೧ರಲ್ಲಿ ನೇಪಾಳ ಮತ್ತು ಪಾಕಿಸ್ತಾನ ನಗರಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತದ ಪ್ರತಿನಿಧಿಗಳಾಗಿದ್ದರು. ೧೯೭೯ರಲ್ಲಿ ಅಮೆರಿಕಾ, ಕೆನಡಾಗಳಿಗೆ ಮತ್ತು ೧೯೮೫ರಲ್ಲಿ ಹಾಗೂ ೧೯೯೨ರಲ್ಲಿ ಭಾರತ ಉತ್ಸವದಲ್ಲಿ ಭಾಗವಹಿಸಿ ಫ್ರಾನ್ಸ್, ಜರ್ಮನಿ, ಲಂಡನ್‌ ಮತ್ತು ಹಾಲೆಂಡ್‌ ದೇಶಗಳಲ್ಲಿ ತಮ್ಮ ಕಲಾಪ್ರದರ್ಶನ ಮಾಡಿದ್ದಾರೆ. ಟೈಡಲ್‌ ಬೋರ್ ಎಂಬ ಸಾಕ್ಷ್ಯಚಿತ್ರಕ್ಕೆ ಹಾಗೂ ಗಂಗೂಬಾಯಿಯವರ ಧ್ವನಿ ಮುದ್ರಿಕೆಗಳಿಗೆ ತಬಲಾ ಸಾಥ ನೀಡಿದ್ದಾರೆ.

ಒಮ್ಮೆ ಹುಬ್ಬಳ್ಳಿಯ ಆರ್ಟ್ ಸರ್ಕಲ್ಲಿನಲ್ಲಿ ಪ್ರಸಿದ್ಧ ಸಿತಾರ ವಾದಕರಾದ ಪಂ. ರವಿಶಂಕರ್ ಅವರ ಕಾರ್ಯಕ್ರಮ ಏರ್ಪಾಟಾಗಿತ್ತು. ಕಾರ್ಯಕ್ರಮದ ಪ್ರಾರಂಭಕ್ಕೆ ಮೊದಲು ಪಂ. ರವಿಶಂಕರ ಅವರು ಯಾರನ್ನೋ ಹುಡುಕಾಡುವಂತೆ ತೋರಿತು. ಅಲ್ಲಿಯೇ ಇದ್ದ ಪದಾಧಿಕಾರಿಗಳೊಬ್ಬರು “ಯಾರು ಬೇಕಾಗಿತ್ತು”? ಎಂದು ಕೇಳಿದಾಗ ರವಿಶಂಕರಕ ಅವರು “ಶೇಷಗಿರಿಜಿ” ಎಂದರು. ತಬಲಾ ಸಾಥಗಾಗಿ ಬೇರೊಬ್ಬರು ಇದ್ದಾಗ್ಯೂ ಶೇಷಗಿರಿಯವರನ್ನೇಕೆ ಕೇಳುತ್ತಿರುವರೆಂದು ದಿಗಿಲಾಯಿತು. ನಂತರ ಗೊತ್ತಾಯಿತು ಅವರನ್ನು ಹುಡುಕುತ್ತಿದ್ದುದು ತಂಬೂರಿ ಶೃತಿಗೊಳಿಸಲು ಎಂದು. ಶೇಷಗಿರಿಯವರಿಗೆ ತಾಳಲಯಗಳಲ್ಲಿ ಇರುವ ಹಿಡಿತದಂತೆ ಸ್ವರ ಶೃತಿಯಲ್ಲಿಯೂ ಅಷ್ಟೇ ಹಿಡಿತವಿದೆ. ಮತ್ತೊಮ್ಮೆ ಪ್ರಸಿದ್ಧ ಕೊಳಲು ವಾದಕರಾದ ಪಂ. ಹರಿಪ್ರಸಾದ ಚೌರಾಸಿಯಾ ಅವರು ತಮ್ಮ ಕಾರ್ಯಕ್ರಮಕ್ಕೆ ಮೊದಲು ಗ್ರೀನ್‌ರೂಂಮಿನಲ್ಲಿ ತಯಾರಿ ನಡೆಸಿದ್ದರು. ತಂಬೂರಿ ಶ್ರುತಿ ಮಾಡಬೇಕಿತ್ತು. ಶೇಷಗಿರಿಯವರನ್ನು ಬರಮಾಡಿಕೊಂಡು ಅವರ ಕೈಯಲ್ಲಿ ತಂಬೂರಿ ಕೊಟ್ಟು ತಮ್ಮ ಕೊಳಲಿನ ಷಡ್ಜವನ್ನೊಮ್ಮೆ ನುಡಿಸಿ ತೋರಿಸಿ ಹೊರಗೆ ಹೋಗಿಬಿಟ್ಟರು. ಹದಿನೈದು ನಿಮಿಷಗಳ ನಂತರ ಹರಿಪ್ರಸಾದರು ಮರಳಿ ಬಂದಾಗ ತಂಬೂರಿ ಶ್ರುತಿಯಾಗಿತ್ತು. ಕಿವಿಯಲ್ಲಿ ಗುಂಯ್‌ ಗುಟ್ಟುವ ಶ್ರುತಿಯ ಎಳೆ ಹಿಡಿದು ತಂತಿಗಳನ್ನು ಶ್ರುತಿಗೊಳಿಸುವ ಪರಿಣತಿಯನ್ನು ಶೇಷಗಿರಿಯವರು ಹೊಂದಿದ್ದಾರೆ. ತಬಲಾದೊಂದಿಗೆ ಡಕ್ಕೆಯನ್ನೂ ಶೇಷಗಿರಿಯವರು ಶೃತಿಗೊಳಿಸುತ್ತಾರೆ. ಜರ್ಮನಿಯಲ್ಲಿ ಕಾರ್ಯಕ್ರಮಮುಗಿದ ಮೇಲೆ ಕೆಲ ಶ್ರೋತೃಗಳು ಇವರ ತಬಲಾ ಸಾಥಗೆ ಮೆಚ್ಚಿ, “ಗಾಯಕರ ಜೊತೆಗೆ ಸಹಗಾಯನದ ಪಾತ್ರವನ್ನು ನೀವು ತಬಲಾದ ಮೂಲಕ ಮಾಡಿಸುತ್ತೀರಿ!” ಎಂದು ಉದ್ಗಾರವನ್ನು ತೆಗೆದಿದ್ದಾರೆ.

ತಬಲಾ ವಾದನದಲ್ಲಿ ಶೇಷಗಿರಿಯವರು ಪ್ರಯೋಗಶೀಲರು. ಹಲವು ಕಾಯದಾ, ಚಕ್ರಧಾರ ಪರಣಗಳನ್ನು ಇವರು ಸ್ವತಃ ರಚಿಸಿದ್ದಾರೆ. ಅದರಂತೆ ತಾಳಗಳನ್ನೂ ರಚಿಸಿದ್ದಾರೆ.

ಶೇಷಗಿರಿಯವರು ತಮ್ಮ ಅಕ್ಕ ಡಾ. ಗಂಗೂಬಾಯಿ ಹಾನಗಲ್‌ ಅವರೊಂದಿಗೆ ಸುಮರು ೧೯೪೫ರಿಂದ ನಿರಂತರವಾಗಿಕ ತಬಲಾ ಸಾಥ ನೀಡಿದ್ದಾರೆ. ಅಕ್ಕ ಗಂಗೂಬಾಯಿಯವರಿಗೂ ಶೇಷಗಿರಿಯವರೇ ತಬಲಾಕ್ಕೆ ಇರಬೇಕು. ಇದೊಂದು ಅನ್ಯೋನ್ಯ ಸಂಬಂಧ. ೧೯೬೧ರಲ್ಲಿ ಗಂಗೂಬಾಯಿಯವರ ಪ್ರೀತಿಯ ದ್ಯೋತಕವಾಗಿ ಶೇಷಗಿರಿಯವರ ತಬಲಾವಾದನದಲ್ಲಿ “ಗಂಗಾಚಲನ” ಎಂಬ ಹೊಸ ಶೈಲಿಲಯನ್ನು ರೂಢಿಸಿದರು. ೧೯೬೪ರಲ್ಲಿ ಭಾರತದ ಆಗಿನ ಪ್ರಧಾನಮಂತ್ರಿಗಳಾಗಿದ್ದ ಇಂದಿರಾಗಾಂಧಿಯವರು ಕಲಾವಿದರಿಗೆಲ್ಲ ನಿವೃತ್ತಿವೇತನವನ್ನು ಜಾರಿಗೆ ತಂದರು. ಶೇಷಗಿರಿ ಅವರಿಗೂ ಅದು ಲಭಿಸಿ ಅದರಿಂದಲೇ ಈಗಿನ ನಿವೃತ್ತಿ ಜೀವನ ಸುಗಮವಾಗಿ ನಡೆಯುತ್ತದೆ ಎಂದು ಸ್ಮರಿಸುತ್ತಾರೆ. ಇಂದರಾಗಾಂಧಿಯವರ ಸ್ಮರಣಾರ್ಥವಾಗಿ ಒಂದು ಹೊಸ ತಾಳದ ಆವಿಷ್ಕಾರ ಮಾಡಿದ್ದಾರೆ. ಅದಕ್ಕೆ “ಇಂದಿರಾ ತಾಳ” ಎಂದು ನಾಮಕರಣ ಮಾಡಿದ್ದಾರೆ. ಈ ತಾಳಕ್ಕೆ ೯೧/೨ ಮಾತ್ರೆಗಳನ್ನು ಅಳವಡಿಸಿದ್ದಾರೆ. ಈ ಹೊಸ ಆವಿಷ್ಕಾರದ ತಾಳವನ್ನು ಪ್ರಪ್ರಥಮವಾಗಿ ೧೯೯೪ರಲ್ಲಿ ಪುಣೆಯ ಸವಾಯಿ ಗಂಧರ್ವರ ಪುಣ್ಯತಿಥಿಯಲ್ಲಿ ಪ್ರಸ್ತುತಪಡಿಸಿ ಪ್ರಶಂಸೆಗೆ ಪಾತ್ರರಾದರು.

ಶೇಷಗಿರಿಯವರು ಉತ್ತಮ ಬೋಧಕರೂ ಸಹ. ಇವರ ಶಿಷ್ಯ ಸಂಪತ್ತು ಅಪಾರ. ಇವರ ಶಿಷ್ಯರಲ್ಲಿ ರವೀಂದ್ರ ಯಾವಗಲ್ಲ ಆಕಾಶವಾಣಿ ಸಂಗೀತ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದಿದ್ದು “ಟಾಪ್‌” ಶ್ರೇಣಿಯ ಕಲಾವಿದರಾಗಿ ಬೆಂಗಳೂರಿನ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ರಾಜ್ಯ ಪ್ರಶಸ್ತಿ ವಿಜೇತರಾಗಿದ್ದಾರೆ. ಸಂಜೀವ ಪೋತದಾರಕ ಸಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಲ್ಲದೆ ಮಗ ಅಜಯ ಹಾನಗಲ್‌ ಅವರನ್ನು ಉತ್ತಮ ತಬಲಾ ವಾದಕರನ್ನಾಗಿ ರೂಪಿಸಿದ್ದಾರೆ. ಅಜಯ ಅವರು ತಬಲಾ ಸಾಥಿ ಮಾಡುವುದಲ್ಲದೆ ಅನೇಕ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಪಾಠ ಹೇಳಿಕೊಡುತ್ತಿದ್ದಾರೆ. ಅಲ್ಲದೆ ಶೇಷಗಿರಿಯವರಕ ಇತರ ಶಿಷ್ಯರಲ್ಲಿ ಸೂರಜ ಪುರಂದರೆ, ಪ್ರೊ. ಗೋಪಾಲಕೃಷ್ಣ ಹೆಗಡೆ, ರಮೇಶ ಜೋಶಿ,ರಾಮಚಂದ್ರ ಉಪಾಧ್ಯಾಯ, ವಿನಾಯಕ ಪಾಟೀಲ ಶ್ರೀಪಾದ ಮುಳಗುಂದ, ಎಂ. ನಾಗೇಶ, ಉದಯ ಕರ್ಪೂರ, ಸೋಮಶೇಖರ ಹೊಳೆಗುಂದಿ ಮುಂತಾದವರು ತಬಲಾವಾದನ ಕ್ಷೇತ್ರದಲ್ಲಿ ಹೆಸರಾಗಿದ್ದಾಋಎ.

೧೯೪೪ರಿಂದ ಶೇಷಗಿರಿ ಹಾನಗಲ್‌ ಅವರ ಹೆಸರಿನಲ್ಲಿ ಒಂದು ಶಿಷ್ಯವೇತನವನ್ನು ವಿಜಯ ಸಂಗೀತ ಸಂಸ್ಥೆ, ಬೆಂಗಳೂರು ಇವರು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಪ್ರತಿಭಾನ್ವಿತ ತಬಲಾ ಕಲಾವಿದರಿಗೆ ಪ್ರೋತ್ಸಾಹ ನೀಡಿ ಬೆಳಕಿಗೆ ತರುವ ಮೂಲ ಉದ್ದೇಶದಿಂದ ಶಿಷ್ಯವೇತನಗಳನ್ನು ನೀಡುತ್ತಿದೆ. ಒಟ್ಟು ಮೂರು ಶಿಷ್ಯವೇತನಗಳನ್ನು ಕೊಡಲಾಗುತ್ತಿದ್ದು ಅದರ ಮೊತ್ತ ೧೨೦೦ ರೂಪಾಯಿ ಆಗಿರುತ್ತದೆ.

ಶೇಷಗಿರಿಯವರ ಪ್ರತಿಭೆಯನ್ನು ಕಂಡು ಬೇರೆ ಬೇರೆ ಸಂಘ ಸಂಸ್ಥೆಗಳು ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಪ್ರಮುಖ ವಾದವುಗಳೆಂದರೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯವರು ೧೯೮೧-೮೨ರಲ್ಲಿ ಕರ್ನಾಟಕ ಕಲಾತಿಲಕ ಪ್ರಶಸ್ತಿ ನೀಡಿ ಸತ್ಕರಿಸಿದರೆ ೧೯೮೪ರಲ್ಲಿ ಕರ್ನಾಟಕ ರಾಜ್ಯ ಸರಕಾರವು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೯೧ರಲ್ಲಿ ಬೆಂಗಳೂರಿನ ಸಂಗೀತ ಕೃಪಾಕುಟೀರ ಸಂಸ್ಥೆಯು ಪ್ರಶಸ್ತಿ ನೀಡಿ ಸತ್ಕರಿಸಿದೆ. ೧೯೯೨ರಲ್ಲಿ ಬೆಂಗಳೂರಿನ ಹಿಂದುಸ್ತಾನಿ ಕಲಾಕಾರರ ಸಂಸ್ಥೆ ನಾದಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೯೩ರಲ್ಲಿ ಬೆಂಗಳೂರಿನಲ್ಲಿ ಶೇಷಗಿರಿ ಹಾನಗಲ್ಲರ ಸನ್ಮಾನ ಸಮಾರಂಭವನ್ನು ಅವರ ಶಿಷ್ಯರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ನಡೆಸಿದರು. ೧೯೯೯ರಲ್ಲಿ ಕರ್ನಾಟಕ ಸರಕಾರವು ಪ್ರತಿಷ್ಠಿತ ಕನಕ ಪುರಂದರ ಪ್ರಶಸ್ತಿಯನ್ನು ಹಾಗೂ ಒಂದು ಲಕ್ಷ ರೂಪಾಯಿಗಳನ್ನು ನೀಡಿ ಗೌರವಿಸಿದೆ.

ಶೇಷಗಿರಿ ಹಾನಗಲ್ಲರ ಕೌಟುಂಬಿಕ ಜೀವನವೂ ಸಂತೃಪ್ತಿದಾಯಕವಾಗಿದೆ. ೧೯೫೮ರಲ್ಲಿ ಕೈಹಿಡಿದ ಪತ್ನಿ ಶಾಂತಾಬಾಯಿಯವರು ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಶೇಷಗಿರಿಯವರ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ಇವರಿಗೆ ನಂದಾ, ರೇಣುಕಾ ಎಂಬ ಇಬ್ಬರು ಹೆಣ್ಣು ಮಕ್ಕಳು ಹಾಗೂ ಸುನೀಲ, ಅಜಯ ಇಬ್ಬರು ಗಂಡು ಮಕ್ಕಳಾಗಿದ್ದು ಎಲ್ಲರೂ ಒಳ್ಳೆಯ ಶಿಕ್ಷಣ ಪಡೆದು ಸುಸ್ಥಿತಿಯಲ್ಲಿರುವರು. ಮಗ ಅಜಯ ತಬಲಾಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡುತ್ತಿದ್ದಾನೆ. ಸದ್ಯ ಬೆಂಗಳೂರಿನಲ್ಲಿಯೇ ಶೇಷಗಿರಿಯವರು ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ.

ಶಾಂತಿ, ಸರಳ ಸ್ವಭಾವ, ಶಿಷ್ಯವಾತ್ಸಲ್ಯ, ಮುಚ್ಚುಮರೆಯಿಲ್ಲದ ಬಿಚ್ಚು ಮಾತು ಇವೇ ಇವರ ವ್ಯಕ್ತಿತ್ವದ ಹಿರಿಮೆಯಾಗಿವೆ. ಕಳೆದ ಏಳು ದಶಕಗಳ  ಕಾಲ ತಬಲಾದ ಬೆನ್ನು ಹತ್ತಿರ ಶೇಷಗಿರಿಯವರು ತಮ್ಮ ವೃತ್ತಿಯಲ್ಲಿ ಶೃತಿ, ಲಯ, ತಾಳಗಳ ಅಪ್ರತಿಮ ಕೌಶಲ್ಯ ರೂಢಿಸಿಕೊಂಡು ಶಾಸ್ತ್ರೀಯ೭ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನಿತ್ತು ಸೃಜನಶೀಲತೆಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ತಬಲಾವಾದನದಲ್ಲಿ ಸಿದ್ಧಹಸ್ತರಾದ ಇವರ ವಾದನದಲ್ಲಿ ಒಂದು ಇಂದ್ರಿಯಾತೀತ ಅನುಭವವಿದೆ, ಸಿದ್ಧಿಯಿದೆ.

ಈ ಇಳಿವಯಸ್ಸಿನಲ್ಲಿಯೂ ದಣಿಯದೆ ನಾದ ಸಾಧನೆಯನ್ನು ಮಾಡುತ್ತಿದ್ದಾರೆ. ನಾಡಿನ ತಬಲಾವಾದನ ಕಲಾಕಾರರಲ್ಲಿ ಅಗ್ರಗಣ್ಯರೆನಿಸಿದ್ದಾರೆ.