ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಹುಟ್ಟಿ ಗದುಗಿನಲ್ಲಿ ಸಂಗೀತ ಶಿಕ್ಷಣ ಪಡೆದು ನಾಡಿನೆಲ್ಲೆಡೆ ಸಂಗೀತ ಸುಧೆ ಹರಿಸಿ ಕಲ್ಯಾಣ (ಹೈದ್ರಾಬಾದ್‌) ಕರ್ನಾಟಕ ಭಾಗದಲ್ಲಿ ಹಿಂದೂಸ್ಥಾನಿ ಸಂಗೀತ ಹುಲುಸಾಗಿ ಬೆಳೆಯಲು ಶ್ರಮಿಸುತ್ತಿರುವ ಶ್ರೀ ಶೇಷಪ್ಪ ಗಬ್ಬೂರ ಅವರು ನಾಡು ಕಂಡ ಅಪರೂಪದ ಕಲಾವಿದರು.

ಅವರು ಹುಟ್ಟಿದ್ದು ೧೯೨೪ ರ ಜೂನ್‌ ೨೮ ರಂದು. ತಂದೆ ನಾರಾಯಣಪ್ಪ. ತಾಯಿ ವೆಂಕಮ್ಮ. ಅವರದು ಸಂಗೀತ ಮತ್ತು ರಂಗಭೂಮಿ ಪರಂಪರೆಯ ಮನೆತನ. ಅವರ ಸೋದರಮಾವ ಹನುಮಂತಪ್ಪ ಹೀರಾ ಅವರೇ ಶೇಷಪ್ಪನವರ ಮೊದಲ ಸಂಗೀತದ ಗುರು. ನಂತರ ಅವರು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದು ಪಂ. ಡಾ. ಪುಟ್ಟರಾಜ ಗವಾಯಿಗಳಲ್ಲಿ ೧೫ ವರ್ಷ ಸಂಗೀತ ಶಿಕ್ಷಣ ಪಡೆದು ಪ್ರಬುದ್ಧ ಸಂಗೀತಗಾರರೆನಿಸಿದರು. ಸಂಗೀತದಲ್ಲಿ ಅವಿರತ ಸಾಧನೆ ಮಾಡಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ಸಂಗೀತ ವಿದ್ವತ್‌’ ಪದವಿ ಪಡೆದರು.

ಶ್ರೀ ಶೇಷಪ್ಪನವರು ರಂಗಭೂಮಿಯಲ್ಲಿ ನಟರಾಗಿ, ನಟ ಗಾಯಕರಾಗಿ ದುಡಿದದ್ದುಂಟು. ಹೇಮರೆಡ್ಡಿ ಮಲ್ಲಮ್ಮನ ನಾಟಕದಲ್ಲಿ ಮಲ್ಲಿಕಾರ್ಜುನನಾಗಿ, ಸಿದ್ಧ ರಾಮೇಶ್ವರ ನಾಟಕದಲ್ಲಿ ಸಿದ್ಧ ರಾಮೇಶ್ವರನಾಗಿ, ಅಕ್ಕಮಹಾದೇವಿ ನಾಟಕದಲ್ಲಿ ಅಕ್ಕ ಮಹಾದೇವಿಯ ತಂದೆ ಹಾಗೂ ಅಲ್ಲಮ ಪ್ರಭುವಾಗಿ, ಶ್ರೀ ಕೃಷ್ಣ ಗಾರುಡಿಯಲ್ಲಿ ನಾರದನಾಗಿ ಅವರು ನೀಡಿದ ನಟನೆ ಹಾಗೂ ಗಾಯನ ಸ್ಮರಣೀಯವಾಗಿವೆ.

೧೯೭೬ರಲ್ಲಿ ಅವರು ರಾಯಚೂರಿನಲ್ಲಿ ‘ಶ್ರೀ ಗುರು ಪಂಚಾಕ್ಷರಿ ಸಂಗೀತ ಪಾಠಶಾಲೆ’ ಸ್ಥಾಪಿಸಿ ನೂರಾರು ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಿ ಶಿಷ್ಯ ಪಡೆ ನಿರ್ಮಿಸಿದ್ದಾರೆ. ೧೯೮೧ ರಿಂದ ಬಸವ ಕಲ್ಯಾಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ರಾಯಚೂರು ಹಾಗೂ ಬಸವ ಕಲ್ಯಾಣಗಳಲ್ಲಿ ಕಳೆದ ಎರಡು ದಶಕಗಳಿಂದ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಪುಣ್ಯಶತಾಬ್ದಿ ನಿಮಿತ್ತ ಸಂಗೀತೋತ್ಸವ ನಡೆಸುತ್ತ ಬರುತ್ತಿದ್ದಾರೆ. ಆ ಮೂಲಕ ನಾಡಿನ ಹೆಸರಾಂತ ಸಂಗೀತಗಾರರು ಕಲ್ಯಾಣ ನಾಡಿನಲ್ಲಿ ಸಂಗೀತ ಸುಧೆ ಹರಿಸುತ್ತಿದ್ದಾರೆ.

ಶ್ರೀ ಶೇಷಣ್ಣನವರು ಬಸವ ಕಲ್ಯಾಣದಲ್ಲಿ ೧೯೯೦-೯೧ರಲ್ಲಿ ಪಂ. ಪುಟ್ಟರಾಜ ಗವಾಯಿಗಳ ತುಲಾಭಾರ ಹಾಗೂ ಪಂ. ಪುಟ್ಟರಾಜ ಗವಾಯಿಗಳು ರಚಿಸಿರುವ ಬಸವ ಪುರಾಣವನ್ನು ಆನೆ ಮೇಲೆ ಮೆರವಣಿಗೆ ಮಾಡಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ವಚನ, ದಾಸರ ಪದಗಳ ಗಾಯನದಲ್ಲೂ ಅವರು ನಿಷ್ಣಾತರು. ಗುಲಬರ್ಗಾ ಹಾಗೂ ಹೈದ್ರಾಬಾದ ಆಕಾಶವಾಣಿ ಕೇಂದ್ರದಿಂದ ಅವರ ಸಂಗೀತ ನಿರಂತರ ಪ್ರಸಾರಗೊಳ್ಳುತ್ತಿದೆ. ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಗದಗ, ರಾಯಚೂರು, ರಾಣಿಬೆನ್ನೂರು, ಹುಮನಾಬಾದ, ಭಾಲ್ಕಿ, ಹಾರಕೂಡ, ಹೈದ್ರಾಬಾದ, ಕಾರವಾರ – ಮುಂತಾದ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ರಾಯಚೂರಿನ ಪಂ. ಪಂಚಾಕ್ಷರಿ ಗವಾಯಿ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವರಿಗೆ ಅನೇಕ ಪ್ರಶಸ್ತಿ – ಪುರಸ್ಕಾರ ದೊರೆತಿವೆ. ಅವುಗಳಲ್ಲಿ ‘ಸಂಗೀತ ರತ್ನ’ (೨೦೦೧), ಬೀದರಜಿಲ್ಲಾ ‘ಉತ್ತಮ ಸಂಗೀತ ಶಿಕ್ಷಕ’ (೧೯೯೫), ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ (೧೯೯೮), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ ಪ್ರಶಸ್ತಿ’ (೨೦೦೦), ‘ಬಸವಶ್ರೀ ಪ್ರಶಸ್ತಿ’ (೨೦೦೩), ‘ಸಿದ್ಧರಾಮ ಜಂಬಲದಿನ್ನಿ ಪ್ರಶಸ್ತಿ’ (೨೦೦೩) ಮುಂತಾದವುಗಳು ಉಲ್ಲೇಖನೀಯವಾಗಿವೆ. ಅವರ ಶಿಷ್ಯರು, ಅಭಿಮಾನಿಗಳು ಸೇರಿ ಅವರಿಗೆ ‘ಕಲ್ಯಾಣ ಕಲಾಶ್ರೀ’ (೨೦೦೩) ಎಂಬ ಅಭಿನಂದನ ಗ್ರಂಥ ಬಸವ ಕಲ್ಯಾಣದ ಶ್ರೀ ಬಸವೇಶ್ವರ ಚಿತ್ರಕಲಾ ಮಹಾ ವಿದ್ಯಾಲಯದ ಕಲಾ ನಿಕೇತನ ಪ್ರಕಾಶನ ಈ ಗ್ರಂಥ ಪ್ರಕಟಿಸಿದೆ.