ಯಾರೇ ಭಾಷೆಯನ್ನು ಬಳಸುತ್ತಿರಲಿ ಅವರ ಭಾಷೆಯನ್ನು ಗಮನಿಸಿ ಕೆಲವು ಚಹರೆಗಳನ್ನು ಗೊತ್ತು ಮಾಡುವುದು ಸಾಧ್ಯ. ವ್ಯಕ್ತಿಯು ಗಂಡಸೋ, ಹೆಂಗಸೋ, ಯಾವ ಭೌಗೋಳಿಕ ಪ್ರದೇಶಕ್ಕೆ ಸೇರಿದವರು, ಸಾಮಾಜಿಕವಾಗಿ ಅವರ ಹಿನ್ನೆಲೆ ಏನು, ಈಗ ಮಾತಾಡುತ್ತಿರುವ ಸಂದರ್ಭದ ಸ್ವರೂಪವೇನು ಇವೇ ಮುಂತಾದ ಮಾಹಿತಿಗಳು ನಮಗೆ ಅವರ ಮಾತನ್ನು ಕೇಳುವುದರಿಂದಲೇ ಬಹುಮಟ್ಟಿಗೆ ತಿಳಿಯುತ್ತವೆ. ಇಷ್ಟೇ ಅಲ್ಲದೆ ಅವರ ಮಾತಿನಿಂದ ಅವರು ಯಾರು ಎಂಬುದನ್ನೂ ನಾವು ತಿಳಿಯುವುದು ಸಾಧ್ಯ. ಅಂದರೆ ಪ್ರತಿ ವ್ಯಕ್ತಿಗೂ ವಿಶಿಷ್ಟವಾದ, ಅನ್ಯರಲ್ಲಿ ಇಲ್ಲದ ಕೆಲವು ಭಾಷಾ ಲಕ್ಷಣಗಳು ಅವರ ಭಾಷಾ ಬಳಕೆಯಲ್ಲಿ ಕಾಣಸಿಗುತ್ತವೆ. ಆ ಲಕ್ಷಣಗಳನ್ನು ಗುರುತಿಸಿ ಆ ಮಾತನಾಡುವ ವ್ಯಕ್ತಿ ಇಂಥವರೇ ಎಂದು ನಾವು ಪತ್ತೆ ಮಾಡುತ್ತೇವೆ. ಫೋನಿನಲ್ಲಿ ಇನ್ನೊಂದು ತುದಿಯಲ್ಲಿರುವವರು ಯಾರೆಂದು, ಅವರು ಮೊದಲೇ ಪರಿಚಿತರಿದ್ದರೆ, ನಾವು ಗೊತ್ತು ಮಾಡುವುದು ಹೀಗೆ ತಾನೇ? ವ್ಯಕ್ತಿಯ ವಿಶಿಷ್ಟ ಚಹರೆಗಳು ಆಡುಮಾತಿನಲ್ಲಿ ಇರುವಂತೆ ಬರೆಹದಲ್ಲೂ ಇರುತ್ತವೆ. ಬರವಣಿಗೆಯಲ್ಲಿ ಈ ವಿಶಿಷ್ಟ ಚಹರೆ ಎರಡು ರೀತಿಗಳಲ್ಲಿ ಮೈದಳೆಯುತ್ತವೆ. ಕೈಬರೆಹದ ವಿಶೇಷ ಲಕ್ಷಣಗಳಾಗಿ ಕಾಣಬಹುದು. ಇಲ್ಲವೇ ಬರೆಹ ರೂಪದ ಭಾಷಾರಚನೆಯಲ್ಲಿ ಮೈಗೂಡಿಸಿಕೊಳ್ಳುವುದೂ ಸಾಧ್ಯ. ನಮಗೆ ಪರಿಚಿತರಾದವರ ಬರವಣಿಗೆಯನ್ನು ಕೇವಲ ‘ನೋಡಿ’ ಇದು ಯಾರದೆಂದು ಗೊತ್ತುಮಾಡುವುದು ಸಾಧ್ಯ. ಏಕೆಂದರೆ ಪ್ರತಿಯೊಬ್ಬರ ಕೈಬರೆಹದಲ್ಲೂ ಅವರದ್ದೇ ಆದ ವಿಶಿಷ್ಟ ಲಕ್ಷಣಗಳಿರುತ್ತವೆ. ಹಾಗೆಯೇ ಒಂದು ವೇಳೆ ಕೈಬರೆಹವಲ್ಲದೆ ಇತರ ರೂಪದಲ್ಲಿ ಉದಾ. ಬೆರಳಚ್ಚು, ಮುದ್ರಣ ಇದ್ದರೂ ಅದನ್ನು ಓದಿಯೂ ಬರವಣಿಗೆ ಯಾರದ್ದೆಂದು ಊಹಿಸುತ್ತೇವೆ. ಹೀಗೆ ಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ ವ್ಯಕ್ತಿಗೆ ವಿಶಿಷ್ಟವಾದ ಕೆಲವು ಲಕ್ಷಣಗಳು ಇರುತ್ತವೆಂದಾಯ್ತು. ಈ ಲಕ್ಷಣಗಳನ್ನು ಶೈಲಿ ಎನ್ನುತ್ತಾರೆ.

ಶೈಲಿಯ ವ್ಯಾಖ್ಯೆ ಬಲು ಕಠಿಣ. ಅತಿವ್ಯಾಪ್ತಿ ಅಥವಾ ಅವ್ಯಾಪ್ತಿ ದೋಷವಿಲ್ಲದೆ ಶೈಲಿಯನ್ನು ವಿವರಿಸುವುದು ಅಸಾಧ್ಯವೇ ಸರಿ. ಸಾಹಿತ್ಯ ಚಿಂತಕರು ‘ಶೀಲ’ ಪದದಿಂದ ಶೈಲಿಯನ್ನು ವಿವರಿಸುತ್ತಾರೆ. ಇದರಿಂದ ಏನೂ ಹೇಳಿದಂತಾಗಲಿಲ್ಲ. ಇಂಗ್ಲಿಷಿನಲ್ಲಿ ಸ್ಟೈಲ್ ಎಂಬುದು ಸಂವಾದಿ ಪದ. ಈ ಪದವೂ ಬರವಣಿಗೆಗೆ ಬಳಸುವ ಉಪಕರಣದ ಹೆಸರಿನಿಂದ ಬಂದಿದೆಯಂತೆ. ಅಲ್ಲಿಯೂ ಅರ್ಥ ಅಸ್ಪಷ್ಟ. ಶೈಲಿ ಪದವನ್ನು ಸ್ವತಂತ್ರವಾಗಿ ಬಳಸುವುದಕ್ಕಿಂತ ‘ಉಡುಪಿನ ಶೈಲಿ’, ‘ನಡಿಗೆಯ ಶೈಲಿ’, ‘ಮಾತಿನ ಶೈಲಿ’, ‘ನೋಡುವ ಶೈಲಿ’, ‘ಬರವಣಿಗೆಯ ಶೈಲಿ’, ‘ಜೀವನ ಶೈಲಿ’, ‘ನಟನೆಯ ಶೈಲಿ’ ಎಂದು ಹಲವು ಬಗೆಯ ಪದ ಸಂಯೋಗಳಲ್ಲಿ ಬಳಸುವುದೇ ಹೆಚ್ಚು. ಈ ಎಲ್ಲ ಸಂದರ್ಭಗಳಲ್ಲೂ ‘ವಿಶಿಷ್ಟ ಗುಣಲಕ್ಷಣ’ಗಳೆಂಬ ಸಾಮಾನ್ಯ ಅರ್ಥವೇ ಬಳಕೆಯಾಗಿರುತ್ತದೆ. ನಮಗೀಗ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ಶೈಲಿಯ ವ್ಯಾಖ್ಯಾನವಷ್ಟೇ ಮುಖ್ಯ.

ಶೈಲಿಯ ಅರ್ಥಕ್ಕೆ ಎರಡು ನೆಲೆಗಳಿವೆ. ಒಂದು ನೆಲೆ ವಿವರಣಾತ್ಮಕ, ಮತ್ತೊಂದು ನೆಲೆ ಮೌಲ್ಯಾತ್ಮಕ. ವಿವರಣಾತ್ಮಕ ನೆಲೆಯಲ್ಲಿ ಶೈಲಿಯನ್ನು ವ್ಯಾಖ್ಯಾನಿಸಿದರೆ ಆಗ ಒಬ್ಬರ ಭಾಷಾ ಶೈಲಿಯು ಇನ್ನೊಬ್ಬರ ಭಾಷಾ ಶೈಲಿಯಿಂದ ಹೇಗೆ ಭಿನ್ನ, ಆಯಾ ವ್ಯಕ್ತಿಗಳ ಭಾಷಾ ಶೈಲಿಗಳ ಲಕ್ಷಣಗಳೇನು ಎಂಬುದು ಮುಖ್ಯ ಆಸಕ್ತಿಯಾಗುತ್ತದೆ. ಎರಡು ವಿಭಿನ್ನ ಶೈಲಿಗಳನ್ನು ತರತಮ ಭಾವದಿಂದ ಈ ನೆಲೆಯಲ್ಲಿ ಪರಿಶೀಲಿಸುವುದಿಲ್ಲ. ಇದು ಹೀಗಿದೆ ಎಂದು ಹೇಳುವುದಷ್ಟೆ ಈ ನೆಲೆಯ ಕೆಲಸ. ಮೌಲ್ಯಾತ್ಮಕ ನೆಲೆಯ ವ್ಯಾಖ್ಯೆಗಳು ವಿಭಿನ್ನ ಶೈಲಿಗಳ ಲಕ್ಷಣಗಳನ್ನು, ವ್ಯತ್ಯಾಸಗಳನ್ನು ಗುರುತಿಸುವ ಜೊತೆಗೇ ಅವುಗಳಲ್ಲಿ ಯಾವುದು ಉತ್ತಮ, ಯಾವುದು ಅಧಮ, ಯಾವುದು ಮಧ್ಯಮ ಎಂಬ ತರತಮ ವಿವೇಚನೆಯಲ್ಲೂ ಆಸಕ್ತಿ ವಹಿಸುತ್ತವೆ. ಶಿಷ್ಟ ಮತ್ತು ಗ್ರಾಮ್ಯವೆಂಬ ಭಾಷಾ ಬಳಕೆಯ ವಿಭಜನೆಯನ್ನೇ ಗಮನಿಸಿ. ಅಲ್ಲಿ ಇವೆರಡರ ನಡುವಣ ವ್ಯತ್ಯಾಸವಷ್ಟೇ ಮುಖ್ಯವಾಗಿ ಉಳಿಯುವುದಿಲ್ಲ. ಜತೆಗೇ ಶಿಷ್ಟವಾದದ್ದು ಉತ್ತಮವೆಂದೂ ಹಾಗಾಗಿ ಅನುಸರಣೀಯವೆಂದೂ, ಗ್ರಾಮ್ಯವಾದದ್ದು ಅಧಮವೆಂದೂ ಹಾಗಾಗಿ ತ್ಯಾಜ್ಯವೆಂದೂ ತಿಳಿಸುವ ಉದ್ದೇಶವಿರುತ್ತದೆ. ಕೆಲವೊಮ್ಮೆ ಇಂಥ ಮೌಲ್ಯಾತ್ಮಕ ನಿರ್ಣಯಗಳು ಆಯಾ ಶೈಲಿಗೆ ಮಾತ್ರ ಸಂಬಂಧಿಸಿರದೆ ಹಲವಾರು ಸಾಮಾಜಿಕ ಸಂಗತಿಗಳನ್ನು ಆಧರಿಸಿರುತ್ತವೆ. ‘ಅಧಮ’ವೆನಿಸಿದ ಗ್ರಾಮ್ಯ ಶೈಲಿಯೂ ಕೆಲವು ಸಂದರ್ಭಗಳಲ್ಲಿ ಯುಕ್ತವೇ ಆಗುವುದು. ಆದ್ದರಿಂದ ‘ಅಧಮತೆ’ಯು ಭಾಷಾ ಬಳಕೆಯ ಅಂತರ್ಗತ ಗುಣವಾಗಿರುವುದಿಲ್ಲ.

ಸಾಹಿತ್ಯ ವಿಮರ್ಶೆಯಲ್ಲಿ ಶೈಲಿಯ ಚರ್ಚೆ ನಡೆಯುತ್ತದೆಯಷ್ಟೆ. ಬಹು ಮಟ್ಟಿಗೆ ಇಲ್ಲಿನ ವ್ಯಾಖ್ಯೆಯ ನೆಲೆ ಮೌಲ್ಯಾತ್ಮಕವಾದುದು. ಪಂಪನ ಶೈಲಿ, ಕುಮಾರವ್ಯಾಸನ ಶೈಲಿ ಎಂದು ಗುರುತಿಸುವವರು ಪರೋಕ್ಷವಾಗಿ ಪಂಪ, ಕುಮಾರವ್ಯಾಸರ ಭಾಷಾ ಬಳಕೆಯ ವಿಶಿಷ್ಟ ನೆಲೆಯಲ್ಲಿ ಯಾವುದು ಅನುಕರಣೀಯ ಎನ್ನುವುದನ್ನೂ ಸೂಚಿಸುತ್ತಿರುತ್ತಾರೆ. ಭಾಷಾಶಾಸ್ತ್ರಜ್ಞರು ವಿವಿಧ ಭಾಷಾ ಶೈಲಿಗಳನ್ನು ವಿವರಣಾತ್ಮಕ ನೆಲೆಯಲ್ಲಿ ವ್ಯಾಖ್ಯಾನಿಸುತ್ತಾರೆ.  ಶೈಲಿಗಳ ವಿಶಿಷ್ಟ ಭಾಷಾ ಲಕ್ಷಣಗಳನ್ನು ಗುರುತಿಸುವುದು, ಈ ಲಕ್ಷಣಗಳ ಸಂಬಂಧಾಂತರಗಳನ್ನು ಕಾಣುವುದು ಅವರಿಗೆ ಮುಖ್ಯವಾಗಿ ಕಂಡಿದೆ. ಭಾಷಾ ಬಳಕೆಯ ಅಸಂಖ್ಯ ಸಾಧ್ಯತೆಗಳ ಆವಿಷ್ಕಾರವಾಗಿ ಶೈಲಿಗಳನ್ನು ಭಾಷಾಶಾಸ್ತ್ರಜ್ಞರು ನೋಡುತ್ತಾರೆ. ಅನುಕರಣೆಯಲ್ಲಿ, ಅನುಸರಣೆಯಲ್ಲಿ ಯಾವಾಗಲೂ ಕುತೂಹಲವಿರುವ ಸಾಮಾನ್ಯರು ಶೈಲಿಯನ್ನು ಗುರುತಿಸುವಷ್ಟಕ್ಕೆ ನಿಲ್ಲುವುದಿಲ್ಲ. ಅದರ ಅನುಕರಣೆಗೆ ಹಾತೊರೆಯುತ್ತಾರೆ. ಅನುಕರಣೆಯನ್ನು ಮೆಚ್ಚುತ್ತಾರೆ. ಅನುಸರಣೆಯನ್ನು ಒಂದು ಸಾಧನೆಯೆಂದು ತಿಳಿಯುತ್ತಾರೆ. ಅನ್ಯರ ಮಾತಿನ ವರಸೆಗಳನ್ನು ನಕಲು ಮಾಡುವ ಮೂಲಕವೇ ನಗೆಯ ಸಂದರ್ಭಗಳನ್ನು ಸೃಷ್ಟಿಸುವುದುಂಟಷ್ಟೆ. ಹಾಗೆಯೇ ತಮ್ಮ ಮಾತಿನ ವರಸೆಗಳಲ್ಲಿ, ಅನ್ಯರಲ್ಲಿ ಅನುಕರಣೀಯವಾದ ವಿಶಿಷ್ಟ ಭಾಷಾ ಬಳಕೆಯ ಅಂಶಗಳನ್ನು ಅಳವಡಿಸಿ ಕೊಳ್ಳಲು ಪ್ರಯತ್ನಿಸುವುದೂ ಕಂಡಿದ್ದೇವೆ. ಅಂದರೆ ಭಾಷಾ ಬಳಕೆಯಲ್ಲಿ ವ್ಯಕ್ತಿ ವಿಶಿಷ್ಟವಾದ ಅಂಶಗಳನ್ನು ಸಾಮಾನ್ಯವಾಗಿ ಎಲ್ಲರೂ ಗುರುತಿಸುತ್ತಾರೆಂದಾಯ್ತು. ಹೀಗೆ ಗುರುತಿಸುವ ಉದ್ದೇಶ ಮಾತ್ರ ಬೇರೆ ಬೇರೆಯಾಗಿರಬಹುದು.

ಒಬ್ಬರೇ ವ್ಯಕ್ತಿಯ ಬೇರೆ ಬೇರೆ ಸಂದರ್ಭಗಳಲ್ಲಿ ಮಾತಾಡಿದ ಹಲವಾರು ಧ್ವನಿ ಮುದ್ರಣಗಳು ಲಭ್ಯವಿವೆ ಎನ್ನೋಣ. ಇವುಗಳಲ್ಲಿ ಒಂದೊಂದೂ ಸಾಕಷ್ಟು ದೀರ್ಘವಾದ ಭಾಷಾ ಮಾಹಿತಿ ಎಂದುಕೊಳ್ಳಿ. ಇವೆಲ್ಲನ್ನು ವಿಶ್ಲೇಷಣೆಗೆ ಗುರಿಪಡಿಸಿ ಯಾವ ಭಾಷಾಂಶಗಳು ಎಷ್ಟು ಪ್ರಮಾಣದಲ್ಲಿ ಬಳಕೆಯಾಗಿವೆ ಎಂಬ ಲೆಕ್ಕ ಹಾಕಲು ಸಾಧ್ಯ. ಈ ಸಂಖ್ಯಾಗಣನೆಯಿಂದ ಭಾಷಾಂಶಗಳ ಬಳಕೆಯ ಶೇಕಡಾವಾರು ಕೋಷ್ಠಕವೊಂದು ಸಿದ್ದಗೊಳ್ಳುತ್ತದೆ. ಆಡು ಮಾತಿನ ದಾಖಲೆಗಳನ್ನು ಬಳಸಿದ ಮಾದರಿಯಲ್ಲೇ ಬರೆಹದ ದಾಖಲೆಗಳನ್ನೂ ನಾವು ಬಳಸಿ ಭಾಷಾಂಶಗಳ ಬಳಸಿದ ಮಾದರಿಯಲ್ಲೇ ಬರೆಹದ ದಾಖಲೆಗಳನ್ನೂ ನಾವು ಬಳಸಿ ಭಾಷಾಂಶಗಳ ಬಳಕೆಯ ಪ್ರಮಾಣದ ಲೆಕ್ಕ ಹಾಕಿ ಕೋಷ್ಠಕವನ್ನು ಸಿದ್ಧಪಡಿಸುವುದು ಸಾಧ್ಯ. ಈ ಕೋಷ್ಠಕಗಳನ್ನು ನೋಡಿ ಆಯಾ ವ್ಯಕ್ತಿಯ ಭಾಷಾ ಬಳಕೆಯಲ್ಲಿ ಇರುವ ವಿಶಿಷ್ಟಾಂಶಗಳನ್ನು (ಹೆಚ್ಚಾಗಿ ಬಳಕೆಯಾಗುವ ಭಾಷಾಂಶಗಳನ್ನು) ಕಂಡು ಹಿಡಿಯುವುದು ಸಾಧ್ಯ.

ಹೀಗೆ ಲೆಕ್ಕ ಹಾಕುವಾಗ ಪದ, ಪದಾಂಗಳನ್ನು ಮುಖ್ಯವಾಗಿ ಗಮನಿಸುತ್ತಾರೆ. ಕೆಲವು ಬಗೆಯ ಪದರಚನೆಗಳೂ ತಃಖ್ತೆಯಲ್ಲಿ ಸೇರುತ್ತವೆ.  ಆಡುಮಾತಿನ ಮಾಹಿತಿಯಾದರೆ ಧ್ವನಿಗಳು, ಮಾತಿನ ಲಯಗಳೂ ಲೆಕ್ಕಕ್ಕೆ ಒಳಗಾಗುತ್ತವೆ. ಪದಗಳು ಎಂದಾಗ ಅರ್ಥಯುಕ್ತ ಭಾಷಾ ಘಟಕಗಳೆಂದೇ ತಿಳಿಯಬೇಕಿಲ್ಲ. ಮಾತಿನ ಓಘದಲ್ಲಿ ಸೇರುವ ಹಲವಾರು ನಿರರ್ಥಕ ರೂಪಗಳ ಬಳಕೆಯ ಆವರ್ತನೆಯನ್ನೂ ಪರಿಗಣಿಸಬೇಕು. ಹಾಂ, ಊಂ ಮತ್ತೆ, ಆದ್ರೆ ಎಂಬಿತ್ಯಾದಿ ರೂಪಗಳನ್ನು ಮಾತಿನಲ್ಲಿ ವಾಕ್ಯಗಳೊಳಗೆ ಬಳಸುವುದು ವಾಡಿಕೆಯಲ್ಲಿದೆ. ಇಂಥ ಘಟಕಗಳ ಬಳಕೆಯ ಪ್ರಮಾಣ ಮತ್ತು ವಿಧಾನಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವರು. ಇದರಿಂದಲೂ ಭಾಷಾ ಶೈಲಿಯನ್ನು ಗುರುತಿಸಲು ನೆರವು ದೊರಕುತ್ತದೆ.

ಹೀಗೆ ಭಾಷಾ ಘಟಕಗಳ ಬಳಕೆಯ ಆವರ್ತನೆಯನ್ನು ಲೆಕ್ಕ ಹಾಕುವುದು ಶ್ರಮದಾಯಕವಾದ ಕೆಲಸ. ಆದರೆ ಈಗ ಗಣಕಗಳು ಈ ಕೆಲಸವನ್ನು ಸರಳಗೊಳಿಸಿವೆ. ಮಿಲಿಯಗಟ್ಟಲೆ ಭಾಷಾ ಘಟಕಗಳನ್ನುಳ್ಳ ಮಾಹಿತಿ ಕಣಜದಿಂದ ಇಂಥ ಅಧ್ಯಯನಗಳು ಸುಲಭವಾಗಿ ನಡೆಯುವಂತಾಗಿದೆ.

ಈ ಸಂಖ್ಯಾಗಣನೆಯಿಂದ ಯಾವುದೇ ವ್ಯಕ್ತಿಯ ಭಾಷಾ ಶೈಲಿಯ ಲಕ್ಷಣಗಳನ್ನು ಗುರುತಿಸುವುದು ಸಾಧ್ಯವೆಂದು ತಿಳಿಯೋಣ. ಇದರ ಪ್ರಯೋಜನಗಳೇನು? ಎರಡು ರೀತಿಗಳಲ್ಲಿ ಇದರ ಪ್ರಯೋಜನ ಪಡೆಯುವುದು ಸಾಧ್ಯ. ಒಂದು ಸಾಮಾನ್ಯ ಬಗೆ. ಇನ್ನೊಂದು ವಿಶಿಷ್ಟ ಬಗೆ. ಇವೆರಡಕ್ಕೂ ಅಷ್ಟು ವ್ಯತ್ಯಾಸಗಳಿಲ್ಲ. ಮೊದಲ ಬಗೆಯಲ್ಲಿ ಯಾವುದೇ ಭಾಷಾಕೃತಿ (ಮಾತು/ಬರೆಹ)ಗಳನ್ನು ತೆಗೆದುಕೊಂಡರೆ ಎರಡನೆಯ ಬಗೆಯಲ್ಲಿ ಕೇವಲ ಸಾಹಿತ್ಯ ಕೃತಿಗಳನ್ನು ಮಾತ್ರ ಪರಿಗಣಿಸುವರು. ನ್ಯಾಯಾಲಯಗಳಲ್ಲಿ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಧ್ವನಿ ದಾಖಲೆಯೊಂದರ ಅಥವಾ ಬರೆವಣಿಗೆಯೊಂದರ ಕರ್ತೃವನ್ನು ಗುರುತಿಸಬೇಕಾಗುತ್ತದೆ. ಆಗ ಲಭ್ಯವಿರುವ ಭಾಷಾ ಸಾಮಗ್ರಿಯ ಶೈಲಿಯ ಅಂಶಗಳನ್ನು ಕಂಡುಕೊಳ್ಳುವ ವಿಧಾನ ಬಳಕೆಯಲ್ಲಿದೆ. ಇದರಿಂದ ಸಾಕ್ಷ್ಯವಾಗಿರುವ ಭಾಷಾ ಸಾಮಗ್ರಿಯ ಕರ್ತೃ ಯಾರೆಂದು ಹೇಳಲು ಸಾಧ್ಯವಾಗುತ್ತದೆ.

 

 

ಸಂಕೇತ ಭಾಷೆ : ಸಂಜ್ಞ ಭಾಷೆ

ಸಾಮಾನ್ಯ: ಬೇರೆ ಬೇರೆ ವಯೋಮಾನದವರು ಲಿಖಿತ ರೂಪದ ಸಂವಾದಗಳಲ್ಲಿ ಸಂಕೇತ ಭಾಷೆಯನ್ನು ರೂಪಿಸಿಕೊಂಡಿರುತ್ತಾರೆ. ಬರೆಹದ ಭಾಷೆಯ ಪದಗಳಿಗೆ ಪರ್ಯಾಯವಾದ ಪದಗಳನ್ನು ಬಳಸುವುದು ಒಂದು ಬಗೆ. ಪರ್ಯಾಯ ಪದಗಳು ಮೂಲ ಪದಗಳಿಂದಲೇ ಅಲ್ಪಸ್ವಲ್ಪ ಧ್ವನಿ ವ್ಯತ್ಯಾಸದಿಂದ ರೂಪುಗೊಂಡಿರಬಹುದು. ಅಥವಾ ಯಾರದೋ ನಿರರ್ಥಕ ಪದವೆಂಬಂತೆ ತೋರುವುದೂ ಸಾಧ್ಯ. ಕೆಲವೊಮ್ಮೆ ಬಳಕೆಯಲ್ಲಿರುವ ಮತ್ತೊಂದು ರೂಪವನ್ನಷ್ಟೇ ಪರ್ಯಾಯ ಪದವನ್ನಾಗಿ ಬಳಸಿ ಹೊಸ ಅರ್ಥವನ್ನು ನೀಡುವುದು ಉಂಟು. ಇಂಥದೇ ತಂತ್ರವನ್ನು ಆಡು ಮಾತಿನಲ್ಲೂ ಕೆಲವರು ಬೆಳಸಿಕೊಂಡಿರುತ್ತಾರೆ.

ವಾರಣಾಸಿಯ ಪಂಡರು ತಂತಮ್ಮಲ್ಲೇ ಮಾತಾಡುವಾಗ, ತಮ್ಮ ವ್ಯವಹಾರದ ರಹಸ್ಯವನ್ನು ಕಾಪಾಡಿಕೊಳ್ಳಲು, ಒಂದು ಸಂಕೇತ ಭಾಷೆಯನ್ನು ಬಳಸುತ್ತಾರೆ. ಒಂದು ಮಾದರಿ ಹೀಗಿದೆ.

ಪಂಡಾ (ಮತ್ತೊಬ್ಬ ಪಂಡಾನಿಗೆ) ಮರ್ತೀ ಜಬರೀ ಹೋ, ಕಲಾಗ್ ತಿಗಾವ್

ಮಾತನ್ನು ಹೇಳಿದ ಕೂಡಲೇ ಆತ ಎದುರಿಗಿದ್ದ ಪ್ರವಾಸಿಯೊಡನೆ ತನ್ನ ಎಂದಿನ ಹಿಂದಿ ಭಾಷೆಯಲ್ಲಿ ಮಾತು ಮುಂದುವರೆಸಿದ್ದಾನೆ. ಮೊದಲು ಹೇಳಿದ ಮಾತುಗಳ ಅರ್ಥ: ಗಿರಾಕಿ ಹಣವಂತ. ಬೇರೆಯಾಗಿ ಕೂರಿಸು. ಆತನ ವಾಕ್ಯಗಳಲ್ಲಿ ಬಂದ ಪದಗಳು ಪರ್ಯಾಯ ಪದಗಳೇ ಆಗಿವೆ. ಅಲಗ್ ಬದಲು ಕಲಗ್ ಎಂದೂ ಬಿಟಾವ್ಗೆ ಬದಲು ತಿಗಾವ್ ಎಂದಿರುವುದನ್ನು ಗುರುತಿಸುವುದು ಸಾಧ್ಯ.

ಸಂಖ್ಯೆಗಳಿಗೆ ಪರ್ಯಾಯವಾಗಿ ಬೇರೆ ಬೇರೆ ಪದಗಳನ್ನು ಬಳಸುವುದು ಇನ್ನೊಂದು ಬಗೆ. ವ್ಯಾಪಾರದಲ್ಲಿ ತೊಡಗಿದವರು ದರಗಳನ್ನು ನಿಗದಿಪಡಿಸುವಾಗ ದಲಾಲಿಗಳು, ವ್ಯಾಪಾರಿಗಳು ಗಿರಾಕಿಗೆ ತಿಳಿಯಬಾರದೆಂದು ಸಂಖ್ಯೆಗಳಿಗೆ ಬದಲು ಪದಗಳನ್ನು ಬಳಸುವುದುಂಟು. ಬೇರೆ ಬೇರೆ ವ್ಯಾಪಾರಿಗಳು ತಮ್ಮ ತಮ್ಮಲ್ಲೇ ಬೇರೆ ಬೇರೆ ಬದಲು ಪದಗಳನ್ನು ಬಳಸುವರು. ಮತ್ತೆ ವಾರಣಾಸಿಯ ನಿದರ್ಶನ : ಅಲ್ಲಿನ ವರ್ತಕರು 1 ರಿಂದ 5 ರವರೆಗೆ ಸಂಖ್ಯೆಗಳನ್ನು ಹೇಳಲು ಬಳಸುವ ಬದಲು ಪದಗಳು ಹೀಗಿವೆ.

ವಜ್ರ ವ್ಯಾಪಾರಿಗಳು : ಐರನೇ ಪಾ, ತಾಲ್ ಷಾ, ಬಾಬರ್ ಪಾ, ಆರ್ವನ್, ಸೂತ್ ಪಾ.

ರೇಶ್ಮೆ ವ್ಯಾಪಾರಿಗಳು : ಸಾಂಗ್, ಸ್ವಾನ್, ಇಕ್ಬಾಯ್, ಫೊಕ್, ಬುದ್

ತರಕಾರಿ ಮಾರುವವರು: ನಿಮಾ, ಜೋರ್, ರಗ್, ಫೊಕ್, ಬುದ್

ಪಂಡಾಗಳು : ಸಾಂಗ್, ಜವರ್, ಸಿಂಘಾರ, ಫೊಕ್, ಪಾನ್ರೊ.

ಸಾಹಿತ್ಯ ಕೃತಿಗಳ ವಿಷಯದಲ್ಲೂ ಕರ್ತೃ ಗೊತ್ತಿಲ್ಲದ ರಚನೆಗಳ ನಿಜಕರ್ತೃ ಯಾರೆಂದು ಪತ್ತೆಮಾಡಲು ಈ ಸಂಖ್ಯಾ ಗಣನೆಯ ವಿಧಾನವನ್ನು ಬಳಸುವುದುಂಟು. ಅಂಥ ಕೃತಿಗಳಿಗೆ ಗುಪ್ತನಾಮದ ಕರ್ತೃವಿದ್ದಾರೆಂದು ಕೊಳ್ಳೋಣ. ಆ ಕೃತಿಗೆ ಸಮಕಾಲೀನರಾದ ಕೃತಿಕಾರರಲ್ಲಿ ಯಾರ ಶೈಲಿಯ ಲಕ್ಷಣಗಳು ಈ ವಿವಾದಿತ ಕೃತಿಯಲ್ಲಿ ಕಾಣಸಿಗುತ್ತದೆಯೆಂದು ತಿಳಿಯುವುದಾದರೆ ಆಗ ಕರ್ತೃ ನಿರ್ಣಯ ಸುಲಭವಾಗುವುದು.

ಕುಮಾರವ್ಯಾಸ ರಚಿಸಿದ ‘ಕರ್ಣಾಟ ಭಾರತ ಕಥಾಮಂಜರಿ’ ಕಾವ್ಯದ ಕೆಲವು ಪ್ರತಿಗಳಲ್ಲಿ ಐರಾವತ ಪ್ರಸಂಗ, ತ್ರಿಪುರದಹನ ಪ್ರಸಂಗ, ಗೀತೋಪದೇಶ ಪ್ರಸಂಗಗಳಿವೆ. ಇವು ಕುಮಾರವ್ಯಾಸ ಕೃತವಲ್ಲ, ಬೇರೆ ಯಾರೋ ಆನಂತರ ತಾವೇ ಬರೆದು ಕುಮಾರವ್ಯಾಸನ ಕೃತಿಯಲ್ಲಿ ಸೇರಿಸಿದ್ದಾರೆಂದು ವಾದಿಸುವು ದುಂಟು. ಹೀಗೆ ಮಾಡುವುದು ಅಪರೂಪವೇನಲ್ಲ. ಹೀಗಿರುವಾಗ ಸತ್ಯವನ್ನು ಗೊತ್ತುಮಾಡುವುದು ಹೇಗೆ? ಇಂಥಲ್ಲಿ ಕುಮಾರವ್ಯಾಸನ ಭಾಷಾ ಶೈಲಿಯನ್ನು ವಿವಾದಕ್ಕೆ ಒಳಗಾಗಿರುವ ಬರೆವಣಿಗೆಯ ಭಾಷಾ ಶೈಲಿಯೊಡನೆ ಹೋಲಿಸುವುದು ಒಂದು ವಿಧಾನ. ಎರಡೂ ಶೈಲಿಗಳಿಗೂ ಸಮಾನ ಅಂಶಗಳಿದ್ದರೆ ಆಗ ವಿವಾದಕ್ಕೆ ಎಡೆಯೇ ಇಲ್ಲ. ಎಲ್ಲವನ್ನೂ ಕುಮಾರವ್ಯಾಸನೇ ಬರೆದನೆಂದು ತೀರ್ಮಾನಿಸಬಹುದು. ಎರಡೂ ಶೈಲಿಗಳೂ ವಿಭಿನ್ನವಾಗಿದ್ದರೆ ಆಗ ಯಾರೋ ಬರೆದದ್ದು ಎಂಬ ವಾದವೇ ನಿಲ್ಲುತ್ತದೆ

ಕರ್ತೃ ಯಾರೆಂದು ನಿರ್ಣಯಿಸಲು, ಈ ಸಂಖ್ಯಾ ಗಣನೆಯನ್ನು ಆಧರಿಸಿದ ಶೈಲಿಯ ಲಕ್ಷಣಗಳನ್ನು ಬಳಸುವ ವಿಧಾನಕ್ಕೆ ಹಲವು ಮಿತಿಗಳಿವೆ. ಎಷ್ಟೋ ವೇಳೆ ಕೃತಿಕಾರರು ಹಲವಾರು ದಶಕಗಳ ಅವಧಿಯಲ್ಲಿ ತಮ್ಮ ಕೃತಿಗಳನ್ನು ರಚಿಸಿದ್ದರೆ ಅವರ ಭಾಷಾ ಶೈಲಿಯಲ್ಲೂ ಹಲವು  ಬದಲಾವಣೆ ಗಳಾಗಿರುತ್ತವೆ. ಆದ್ದರಿಂದ ಕೃತಿಕಾರರ ಎಲ್ಲ ಕೃತಿಗಳಿಗೂ ಸಮಾನವಾದ ಭಾಷಾ ಶೈಲಿಯನ್ನು ಕಲ್ಪಿಸುವುದು ಯೋಗ್ಯವಾಗುವುದಿಲ್ಲ. ಕೆಲವೊಮ್ಮೆ ನಮಗೆ ಲಭ್ಯವಾಗುವ ಭಾಷಾ ಸಾಮಗ್ರಿ ಅಲ್ಪ ಪ್ರಮಾಣದಲ್ಲಿರುತ್ತದೆ. ಆಗ ಅದನ್ನು ಆಧರಿಸಿ ಭಾಷಾ ಶೈಲಿಯ ಲಕ್ಷಣಗಳನ್ನು ನಿರ್ಧರಿಸುವುದು ಅಸಾಧ್ಯ ವಾಗುತ್ತದೆ. ಒಂದು ವೇಳೆ ಹಾಗೆ ನಿರ್ಧರಿಸಿದರೂ ಆ ಲಕ್ಷಣಗಳು ಪರಿಪೂರ್ಣ ವಾಗಿರುವುದಿಲ್ಲ.

ಭಾಷಾ ಶೈಲಿಯ ನೆರವಿನಿಂದ ಕರ್ತೃವನ್ನು ಗುರುತಿಸುವ ವಿಧಾನದಲ್ಲಿ ‘ಇಂಥವರು ಕರ್ತೃವಲ್ಲ’ ಎಂದು ಹೇಳುವಷ್ಟು ಖಚಿತವಾಗಿ ‘ಇಂಥವರೇ ಕರ್ತೃ’ ಎಂದು ಹೇಳುವುದು ಕಷ್ಟವಾಗುತ್ತದೆ. ಒಂದು ಕೃತಿಯ ಭಾಷಾ ಶೈಲಿಯನ್ನು ಪರಿಶೀಲಿಸಿ ಅದು ನಮಗೆ ಪರಿಚಿತವಿರುವ ಇತರ ಕೃತಿಕಾರರಲ್ಲಿ ಯಾರ ಭಾಷಾ ಶೈಲಿಗೂ ಹೊಂದುವುದಿಲ್ಲವೆಂದು ಕಂಡುಕೊಳ್ಳುವುದು ಸುಲಭ. ಇಂಥವರ ಭಾಷಾಶೈಲಿಗೆ ಹೊಂದುತ್ತದೆಂದು ಖಂಡಿತವಾಗಿ ಹೇಳುವುದು ಕಷ್ಟ. ಹಾಗೆ ಹೇಳಿದರೂ ತಪ್ಪಾಗುವ ಸಂಭವ ಹೆಚ್ಚು.

ಪಾಶ್ಚಾತ್ಯ ದೇಶಗಳಲ್ಲಿ ಲಿಖಿತ ಭಾಷಾ ಸಾಮಗ್ರಿಯ ಪರಿಶೀಲನೆಯಿಂದ ಕೃತಿಕಾರರ ಭಾಷಾಶೈಲಿಯನ್ನು ಕಂಡುಕೊಳ್ಳುವ ವಿಧಾನ ಸಾಕಷ್ಟು ಬೆಳೆದಿದೆ. ಇದರಿಂದ ಸಾಹಿತ್ಯ ಚರಿತ್ರೆಕಾರರ ಹಲವು ಸಮಸ್ಯೆಗಳನ್ನು ಬಿಡಿಸುವುದು ಸಾಧ್ಯವಾಗಿದೆ.