ಕನ್ನಡದ ಬರವಣಿಗೆ ರೂಪಗೊಂಡುದಕ್ಕೆ ಕ್ರಿ. ಶ. ೪೫೦ರ ಹಲ್ಮಿಡಿ ಶಾಸನ ಅತ್ಯಂತ ಪುರಾತನ ದಾಖಲೆಯಾದರೂ ಭಾಷೆ ಅದಕ್ಕೂ ಮೊದಲೇ ರೂಪಗೊಂಡಿರಬೇಕೆಂಬುದು ತರ್ಕಬದ್ಧ ವಿಚಾರ. ಹೀಗೆ ಕನ್ನಡ ಭಾಷೆ ಮತ್ತು ಅದನ್ನಾಡುವ ಜನ ಕ್ರಿ. ಶ. ಪೂರ್ವದ ೩ನೆಯ ಶತಮಾನದಲ್ಲಿ ಇದ್ದುರೆಂಬುದಕ್ಕೆ ಎಲ್ಲರೂ ಒಪ್ಪಬಹುದಾದ ನಿದರ್ಶನಗಳಿವೆ ಎಂದು ರಂ. ಶ್ರೀ. ಮುಗಳಿ ಅವರು ಹೇಳುತ್ತಾರೆ. (ರಂ. ಶ್ರೀ. ಮುಗಳಿ, ೧೯೪೬, The Heritage of Karnataka.) ಅದಿದ್ದರೂ ಕ್ರಿ. ಶ. ಪೂರ್ವ ೩ನೆಯ ಶತಮಾನದಿಂದ ಕ್ರಿ. ಶ. ೪೫೦ರ ಹಲ್ಮಿಡಿ ಶಾಸನ ದೊರೆಯುವವರೆಗಿನ ೭೫೦ ವರ್ಷಗಳಲ್ಲಿ ಕನ್ನಡ ಭಾಷೆಯ ಸ್ವರೂಪ ಹೇಗಿತ್ತೆಂದು ಊಹಿಸಬಹುದೇ ಹೊರತು ಖಚಿತವಾಗಿ ಹೇಳಲು ದಾಖಲೆಗಳ ಆಧಾರವಿಲ್ಲ.

ಹಲ್ಮಿಡಿ ಶಾಸನದಲ್ಲಿಯ ಕೆಲವು ಸಾಲುಗಳನ್ನು ನೋಡಿ :

            ನಮಃ ಶ್ರೀಮತ್ಕದಂಬಪನ್ತ್ಯಾ ಸಂಪನ್ನನ್ಕಲಭೋರ(ನಾ) ಅರಿಕ
ಕುಸ್ಥಭಟ್ಟೋರನಾಳೆ ನರಿದಾವಿ(ಳೆ) ನಾಡುಳ್ ಮೃಗೇಶನಾ
ಗೇನ್ದ್ರಾಭೀಳರ್ಭ್ಭಟ ಹರಪ್ಪೋರ್ ಶ್ರೀಮೃಗೇಶನಾಗಾಹ್ವಯ
ರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪ
ಗಣಪಶುಪತಿಯಾ ದಕ್ಷಿಣಾಪಥ ಬಹುಶತಹವನಾ
ಹವದು(ಳ್ ) ಪಶುಪ್ರಧಾನ ಶೌರ್ಯ್ಯೋದ್ಯಮಭರಿತೋ(ನ್ದಾನ)
ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ
ನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯ
ಸುತನ್ಗೆ ಸೇನ್ದ್ರಕ ಬಣೋಭಯದೇಶದಾ ವೀರಾಪುರುಷ ಸಮಕ್ಷ
ದೆ ಕೇಕಯ ಪಲ್ಲವರಂ ಕಾದೆರಿದು ಪೆತ್ತಜಯನಾ ವಿಜ
ಅರಸನ್ಗೆ ಬಾಳ್ಗೞ್ಚು ಪಲ್ಮಿಡಿಉಂ ಮೂಳಿವಳ್ಳಿಉಂ ಕೊ
ಟ್ಟಾರ್ ಬಟಾರಿಕುಲದೊನಳಕದಮ್ಬನ್ಕಳ್ದೋನ್ ಮಹಾಪಾತಕನ್
ಇರ್ವ್ವರುಂ ಸೞ್ಬದರ್ ವಿಜಾರಸರುಂ ಪಲ್ಮಡಿಗೆ ಕುಱು
ಮ್ಬಿಡಿವಿಟ್ಟಾರ್ ಅದಾನಳಿವೊನ್ಗೆ ಮಹಾಪಾತಕಮ್

ಮೇಲಿನ ಹಲ್ಮಿಡಿ ಶಾಸನದ ಉದ್ಧರಣೆಯಲ್ಲಿಯ ನಾಡುಳ್, ಅಪ್ಪೋರ್, ಇರ್ವರಾ, ಆಹವದುಳ್, ಅದಾನ್, ಅೞುವೊನ್ಗೆ, ಕೊಟ್ಟಾರ್ ಮೊದಲಾದ ಕನ್ನಡ ಪ್ರತ್ಯಯ ಯುಕ್ತ ಪದಗಳಲ್ಲದೇ ಅನೇಕ ಸಂಸ್ಕೃತ ಪದಗಳೂ ಇವೆ. ಅವುಗಳಿಗೆ ಕನ್ನಡದ ಪ್ರತ್ಯಯಗಳು ಸೇರಿವೆ : ತಾರಾಧಿನಾಥನ್, ಸುತನ್ಗೆ ಹೀಗೆ ಅಲ್ಲಿ ಲಭ್ಯವಾದ ಮಾಹಿತಿಯಿಂದ ಕನ್ನಡದಲ್ಲಿ ಮೊದಲು ದ್ವೀತಿಯಾ ವಿಭಕ್ತಿ ಪ್ರತ್ಯಯ – ಆನ್,  ಚತುರ್ಥಿ ವಿಭಕ್ತಿ ಪ್ರತ್ಯಯ ಇಂದಿನಂತೆ -ಗೆ ಇತ್ತೆಂದೂ ಇಂದಿನ -ಆರು ಎಂಬ ಕ್ರಿಯಾವಿಭಕ್ತಿ ಪ್ರತ್ಯಯ ಅಂದು-ಆರೆಂದಿತ್ತೆಂದೂ ಮೊದಲಾಗಿ ಲಕ್ಷಣಿಸಬಹುದು. ಹೀಗೆಲ್ಲ ಇದ್ದರೂ ಅದು ಕನ್ನಡದ ಶಾಸನವೆಂಬುದರಲ್ಲಿ ಸಂಶಯವಿಲ್ಲ.

ಅನಂತರದ ಕನ್ನಡ ಸಾಹಿತ್ಯ ಪಂಪ ಪೂರ್ವಯುಗದಲ್ಲಿ ‘ಕವಿರಾಜಮಾರ್ಗ’ (ಸು. ೮೫೦) ದಿಂದ ಆರಂಭಗೊಳ್ಳುತ್ತದೆ. ಅದು ಅಲಂಕಾರಶಾಸ್ತ್ರ ಗ್ರಂಥ ಆಗಿರುವುದರಿಂದಾದರಲ್ಲಿ ಉಲ್ಲೇಖಗೊಂಡಿರುವ ಅನೇಕ ಶ್ಲೋಕಗಳು ಅದರ ಪೂರ್ವದಲ್ಲಿ ರಚಿತವಾದ ಸಾಹಿತ್ಯವನ್ನು ತೋರಿಸುತ್ತವೆ.  ಕವಿರಾಜಮಾರ್ಗಕಾರನ ಭಾಷಾದೃಷ್ಟಿ ಗಮನಾರ್ಹವಾಗಿತ್ತು. ಅವನ ಪ್ರಕಾರ ನೋಡುವೆನ್, ಬೇಡುವೆನ್ ಎಂಬ ರೂಪಗಳು ಉತ್ತರ ಮಾರ್ಗದಲ್ಲಿ ಪ್ರಚಲಿತವಿದ್ದರೆ ಆವೇ ರೂಪಗಳು ದಕ್ಷಿಣ ಮಾರ್ಗದಲ್ಲಿ ನೋೞ್ಪೆನ್, ಬೇೞ್ಪೆನ್ ಎಂದಿವೆ ಎಂದಿದ್ದಾನೆ. ಅವನು ಹೇಳಿದ ಉತ್ತರ ಮತ್ತು  ದಕ್ಷಿಣ ಮಾರ್ಗಗಳು ಇಂದಿಗೂ ಭಿನ್ನ ಸ್ವರೂಪದಿಂದ ವಾಸ್ತವವಾಗಿದೆ. ಇಂದು ಉತ್ತರ ಕರ್ನಾಟಕದಲ್ಲಿಯ ಕನ್ನಡದ ಪ್ರಕಾರ ದಕ್ಷಿಣದಲ್ಲಿಯ ಪ್ರಕಾರಕ್ಕಿಂತ ಸಾಕಷ್ಟು ವಿಧದಲ್ಲಿ ಭಿನ್ನವಾಗಿದೆ ಎಂದು ಉತ್ತರ ಮತ್ತು ದಕ್ಷಿಣ ಮಾತ್ರವಲ್ಲದೇ ಪೂರ್ವ ಮತ್ತು ಪಶ್ಚಿಮ ಭೇದಗಳೂ ಇವೆ ಎಂಬುದನ್ನು ನೋಡುತ್ತೇವೆ. ಕುಲಬುರ್ಗಿ ಮತ್ತು ಬಿದರೆ ಕಡೆಯ ಭಾಷೆ ಹಾಗೂ ಕಾರವಾರ ಮತ್ತು ಮಂಗಳೂರು ಕಡೆಯ ಭಾಷೆಗಳು ಇತರ ಪ್ರದೇಶದ ಪ್ರಕಾರಗಳಿಗಿಂತ ಸಾಕಷ್ಟು ಭಿನ್ನವಾಗಿವೆ. ನೃಪತುಂಗನು ಅಥವಾ ಕವಿರಾಜಮಾರ್ಗಕಾರನು ಕೊಟ್ಟ ಉದಾಹರಣೆಗಳು ಸರ್ವಸಮ್ಮತವಾಗಿಲ್ಲ ಎಂದು ಪಂಡಿತರ ಅಭಿಪ್ರಾಯ. ಏಕೆಂದರೆ ಪ್ರಾದೇಶಿಕವಾಗಿ ಉತ್ತರ ಮಾರ್ಗದವನಾದ ಪಂಪನಲ್ಲಿಯೂ ನೋೞ್ಪ  ಮಾೞ್ಪ, ಬೇೞ್ಪ ಎಂಬ ದಕ್ಷಿಣ ಮಾರ್ಗದ ರೂಪಗಳು ದೊರೆಯುವುದರಿಂದ ಈ ಭಾಷಾ ಲಕ್ಷಣ ನಿರ್ವಿವಾದವಾಗಿ ಸ್ವೀಕೃತವಾಗಲಿಲ್ಲ. ಈ ಉದಾಹರಣೆಗಳು ನಿಲ್ಲದಿದ್ದರೂ ಕವಿರಾಜಮಾರ್ಗಕಾರನ ಮಾರ್ಗಭೇದದ ಕಲ್ಪನೆಯನ್ನು ಅಲ್ಲಗಳೆಯುವಂತಿಲ್ಲ. ಕವಿರಾಜಮಾರ್ಗವು ದಂಡಿಯ ‘ಕಾವ್ಯದರ್ಶ’ವನ್ನು ಆಧರಿಸಿದುದರಿಂದ ಅಲ್ಲಿಯ ವೈದರ್ಭಿ, ಗೌಡೀ ರೀತಿಗಳ ಸ್ಫೂರ್ತಿಯಿಂದ ಮಾರ್ಗಗಳನ್ನು ಹೇಳಿದನೆಂದು ಊಹೆ ಮಾಡಬಹುದಾರೂ ಮಾರ್ಗಭೇದಗಳಿದ್ದವೆಂಬುದಕ್ಕೆ ಆಧಾರಗಳು ವ್ಯಾಕರಣ ಪ್ರಕ್ರಿಯೆಯಲ್ಲಿ ಅಷ್ಟೇ ಅಲ್ಲದೇ ಶಬ್ಧಗಳಲ್ಲಿಯೂ ದೊರೆಯಲು ಸಾಧ್ಯವಿದೆ. ಇದಕ್ಕಾಗಿ ಆ ಕಾಲದಲ್ಲಿ ವಿವಿಧ ಪ್ರದೇಶದಲ್ಲಿ ಸೃಷ್ಟಿಯಾದ ಸಾಹಿತ್ಯ ಮತ್ತು ಶಿಲಾಶಾಸನಗಳಲ್ಲಿ ಬಳಕೆಯಾದ ಪದಗಳ ಪಟ್ಟಿ ತಯಾರಾಗಬೇಕು.

ಇನ್ನು ಪಂಪಯುಗಕ್ಕೆ ಬರೋಣ. ಕನ್ನಡದ ಮೊದಲ ಮಾಹಾಕಾವ್ಯಗಳು ಆದಿಪಂಪನ ‘ವಿಕ್ರಮಾರ್ಜುನ ವಿಜಯ’ ಮತ್ತು ‘ಆದಿಪುರಾಣ’ ಅವನ ಕಾಲ ಕ್ರಿ. ಶ. ೯೪೧ ಎಂದಿದ್ದುದರಿಂದ ಆ ಕಾಲದ ಭಾಷೆಯನ್ನು ಅವನು ಬಳಸಿದ್ದಾನೆ. ಅದು ಕ್ರಿ.ಶ. ೪೫೦ರಲ್ಲಿ ಇದ್ದ ಭಾಷೆಗಿಂತ ಭಿನ್ನವಾಗಿದ್ದರೂ ಹಳಗನ್ನಡದ ರೂಪವನ್ನು ಚೆನ್ನಾಗಿ ಬಿಂಬಿಸುತ್ತದೆ.  ಉದಾಹರಣೆಗೆ ಹೀನಕುಲದವನೆಂದು ಪದೇ ಪದೇ ಅವಹೇಳನೆಗೆ ಒಳಗಾಗುತ್ತಿದ್ದ ಕರ್ಣನ ಆಕ್ರೋಶ ಭರಿತ ಮಾತುಗಳನ್ನು ನೋಡಿ,

            ಕುಲಮನೆ ಮುನ್ನ ಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂ ಗುಣಂ
ಕುಲಮಭಿಮಾನಮೊಂದೆ ಕುಲಮಣ್ಮು ಕುಲಂ ಬಗೆವಾಗಳೀಗಳೀ
ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟು ಮಾಡುಗುಂ
            (
ವಿಕ್ರಮಾರ್ಜುನ ವಿಜಯ, ಆಶ್ವಾಸ. ೧೧. ಪದ್ಯ ೨೧)

ಕುಲವೆಂದರೆ ಶೌರ್ಯ, ಆಭಿಮಾನ, ವೀರ್ಯವೇ ಹೊರತು ಅವನ ಜನ್ಮವಲ್ಲ. ಕುಲದ ಹೆಸರಿನಿಂದ ಅವಹೇಳನ ಮಾಡುವ ನಿಮಗೆ ‘ಕುಲ’ವು ‘ಆಕುಲ’ವನ್ನು ಉಂಟುಮಾಡುತ್ತದೆ ಎಂಬ ಮಾತಿನಲ್ಲಿ ಕುಲ, ಆಕುಲ ಶಬ್ಧಗಳ ಶಕ್ತಿಯುತ ಪ್ರಯೋಗ ಮರೆಯಾಲಾರಂದಂಥ ಅನುಭವ ನೀಡುತ್ತದೆ. ಪಂಪನಿಂದ ಇಂಥ ಅನೇಕ ಪ್ರಯೋಗಗಳನ್ನು ಉದ್ಧರಿಸಬಹುದು. ಶೈಲಿಯ ದೃಷ್ಟಿಯಿಂದ ಆ ಕಾಲದ ಸಾಹಿತ್ಯವನ್ನು ಅಭ್ಯಸಿಸುವ ಆಗತ್ಯವಿದೆ.

ಆ ಕಾಲದ ರಾಜಕೀಯ, ಸಮಾಜಿಕ ಮತ್ತು ಧಾರ್ಮಿಕ ಇತಿಹಾಸ ಅವರ ಧಾರ್ಮಿಕ ನಂಬುಗೆಯ ಮೇಲೆ ಮತ್ತು ಆಭಿವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ಕಾಲದ ಸಾಹಿತ್ಯದ ಮೇಲೆ ಆಯಾ ಕಾಲದ ಈ ಮೂರೂ ಪ್ರಬಾವವನ್ನೂ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಬೀರುತ್ತವೆ ಎಂಬುದನ್ನು ನಾವು ಪ್ರಪಂಚದ ಎಲ್ಲ ಸಾಹಿತ್ಯೇತಿಸಹಾಸದಲ್ಲಿ ನೋಡುತ್ತೇವೆ. ಕೆಲವು ಸಂದರ್ಭಗಳಲ್ಲಿ ರಾಜರು ಅಥವಾ ರಾಜಕಾರಣಿಗಳು ಇಂಥದೇ ಸಾಹಿತ್ಯವನ್ನು ರಚಿಸಬೇಕೆಂದು ಸಾಹಿತಿಗಳ ಮೇಲೆ ಒತ್ತಡ ತಂದುದನ್ನೂ ತತ್ಪರಿಣಾಮವಾಗಿ ಸಾಹಿತ್ಯಾಭಿವ್ಯಕ್ತಿ ಹೇರುಪೇರಾದುದನ್ನೂ ನೋಡುತ್ತೇವೆ. ತನ್ನನ್ನು ಆರ್ಜುನನ ಮೇಲೆ ಆರೋಪಿಸಿ ಮಹಾಭಾರತ ಕಥೆಯನ್ನು ಬರೆಯಬೇಕೆಂದು ಅರಿಕೇಸರಿ ಪಂಪನ ಮೇಲೆ ಒತ್ತಾಯ ಹೇರಿದಾಗ ಪಂಪನಿಗಾದ ಹಿಂಸೆ ಅಷ್ಟಿಷ್ಟಲ್ಲ. ಅದಕ್ಕಾಗಿ ಅವನು ಮೂಲ ಮಹಾಭಾರತದ ಕಥೆಯಲ್ಲಿ ಮಾರ್ಪಾಡುಗಳನ್ನೂ ಮಾಡಿಕೊಳ್ಳಬೇಕಾಯಿತು. ಇದರಿಂದಾಗಿ ಕೆಲವು ಅವಾಸ್ತವತೆಗಳು ಪಂಪಭಾರತದಲ್ಲಿ ನುಸುಳಿಕೊಂಡವು. ಮಹಾಭಾರತದಲ್ಲಿ ಐವರು ಪಾಂಡವರ ಪತ್ನಿಯಾದ ದ್ರೌಪದಿ ಇಲ್ಲಿ ಆರ್ಜುನನ ಪತ್ನಿ ಮಾತ್ರ ಆದಳು. ಇಂಥ ಅನೇಕ ಅಸಂಬದ್ಧತೆಗಳನ್ನು ಅವನ ಕಾವ್ಯ ವೈಖರಿಯ ಬೆಳಕಿನಲ್ಲಿ ಮನ್ನಿಸಲಾಗುತ್ತಿದೆ.

ಇನ್ನು ಆ ಕಾಲದ ರತ್ನತ್ರಯರಲ್ಲಿ ಉಳಿದಿಬ್ಬರು, ರನ್ನ ಮತ್ತು ಪೊನ್ನ, ತಮ್ಮ ಕವಿತ್ವದಿಂದ ಕನ್ನಡ ಸಾಹಿತ್ಯದಲ್ಲಿ ಮೆರೆದಿದ್ದಾರೆ. ರನ್ನನ ‘ಸಾಹಸ ಭೀಮ ವಿಜಯ’ವು ಭೀಮ ದುರ್ಯೋಧನರ ಗದಾಯುದ್ಧದ ಪ್ರಸಂಗವನ್ನೇ ಮುಖ್ಯವಾಗಿ ಹೊತ್ತಿದ್ದರೂ ಅವನ ಕಾವ್ಯ ಶೈಲಿ ಪಂಪ ಶೈಲಿಯನ್ನು ಹೆಚ್ಚು ಹೋಲುತ್ತದೆ. ಉದಾಹರಣೆಗೆ ಈ ರನ್ನನ ಈ ಪದ್ಯ ನೋಡಿ.

            ಇದು ಲಾಕ್ಷಾಗೇಹದಾಹಕ್ಕಿದು ವಿಷವನು ವಿಷಾನ್ನಕ್ಕಿದಾ ನಾಡಜೂದಿಂ
ಗಿದು ಪಾಂಚಲೀಪ್ರಪಂಚಕ್ಕಿದು ಕೃತಕ ಸಭಾಳೋಕನಭ್ರಾಂತಿಗೆಂದೋ
ವದೆ ಪೊಯ್ದುಂಕಾಲ್ಗಳಂ ತೋಳ್ಗಳನಗಲುರಮಂಕೆನ್ನೆಯಂನೆತ್ತಿಯಂ ಕೋ
ಪದಿನಯ್ದುಂ ದುರ್ನಯಕ್ಕಯ್ದೆಡೆಯನುರು ಗದಾದಂಡದಿಂ ಭೀಮಸೇನಂ
            (
ಕವಿ ರನ್ನನಗದಾಯುದ್ಧ ಸಂಗ್ರಹಂ‘, ೧೩)

ಭೀಮ ಮತ್ತು ದುರೋಧನರ ಗಧಾಯುದ್ಧದ ಬೀಕರತೆಯನ್ನು ಬಿಂಬಿಸಲು ಮಹಾಸ್ರಗ್ಧರೆಯಂಥ ದೊಡ್ಡ  ಸಾಲಿನ ಛಂದಸ್ಸನ್ನು ಬಳಸಿದುದು ಪರಿಣಾಮಕಾರಿಯಾಗಿದೆ. ರನ್ನನ ಭಾಷಾಶೈಲಿ ಪಂಪನ ಶೈಲಿಯನ್ನು ಹೋಲುತ್ತದೆ ಎಂಬುದನ್ನು ಮನಗಾಣಬಹುದು.

ಇನ್ನು ಅಭಿನವಪಂಪನೆಂಬ ಹೆಸರಿನ ನಾಗಚಂದ್ರನ ‘ಪಂಪರಾಮಾಣ’ವು  ಭಾಷಾಶೈಲಿಯ ದೃಷ್ಟಿಯಿಂದ ಪಂಪ ಮತ್ತು ರನ್ನರ ಕಾವ್ಯಗಳಿಗಿಂತ ಲಲಿತವಾಗಿದೆ. ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ  ‘ಪಂಪರಾಮಾಣ ಸಂಗ್ರಹ’ಕ್ಕೆ  (೧೯೩೬) ಮುನ್ನುಡಿ ಬರೆದ ತಿರುವಳ್ಳೂರ್ ಶ್ರೀನಿವಾಸರಾಘವಾಚಾರ್ ಮತ್ತು ಡಿ. ಎಲ್. ನರಸಿಂಹಾಚಾರ್ ಅವರು ಗ್ರಂಥಕ್ಕೆ ಬರೆದ ಪೀಠಿಕೆಯಲ್ಲಿ ‘ನಾಗಚಂದ್ರನ ಶೈಲಿಯ ಮುಖ್ಯ ಗುಣ ಅದರ ಅರ್ಥವ್ಯಕ್ತಿ ‘ ಎಂದು ಹೇಳುತ್ತಾರೆ. ನಾಗಚಂದ್ರನ  ಕಾವ್ಯದಲ್ಲಿ ಮೃದುತ್ವ, ಮಾಧುರ್ಯ, ಲಾಲಿತ್ಯಗಳನ್ನು ಅನುಭವಿಸಲು ಆ ಕಾವ್ಯದ ಈ ಒಂದು ಉದಾಹರಣೆಯೇ ಸಾಕು. ನೋಡಿ,

            ನಸುಬಿಸುಪೇಱೆ ಮೆಯ್ ಮಗುಳೆ ಕೆತ್ತುವ ತಾಣಮೆ ಕೆತ್ತೆ ಮಂದಮಾ
ದುಸಿರ್ಗಳೆ ನಾಸಿಕಾಮುಕುಳದಿಂದಿನಿಸುಂ ಪೊಱಪೊಣ್ಮೆ ತಳ್ತು ಸಂ
ದುಸಿದೆಮೆ ಬಿರ್ಚೆ ಕಣ್ಮಲರ್ಗಳುಳ್ಳರಲುತ್ತಿರೆ ಜಾನಕೀಯೆನು
ತ್ತುಸಿರ್ದುಸಿರ್ದೆೞ್ದನಾ ರಘಕುಲಾಂಬರ ಚಂಡಮರೀಚಿ ಮೂರ್ಛೆಯಿಂ
            (
ಪಂಪರಾಮಾಯಣ ಸಂಗ್ರಹ, ೭೩)

ಮೂರ್ಛೆಯಿಂದ ಎಚ್ಚೆತ್ತ ರಾಮ ‘ಜಾನಕೀ’ ಎಂದು ಅನ್ನುತ್ತ ಏಳುವ ರೀತಿ ಚಿತವತ್ತಾಗಿದೆ. ಹೀಗೆ ಆ ಕಾಲದ ಕಾವ್ಯಗಳನ್ನು ಲಕ್ಷಣಿಸಬಹುದು.

ಆನಂತರದ ಮಹತ್ತ್ವದ ಯುಗ ಬಸವ ಯುಗ ಅರ್ಥಾತ್ ವಚನಕಾರರ ಯುಗ, ಸಾಹಿತ್ಯಕರ್ಮಕ್ಕೆ ಯಾವ ಒತ್ತಡವೂ ಇರಬಾರದು. ಈ ದೃಷ್ಟಿಯಿಂದ ವಚನಗಳಿಗೆ ಇದ್ದ ಅಭಿವ್ಯಕ್ತಿ ಸ್ವಾತಂತ್ರ್ಯ ಬೇರೆ ಯಾವ ಸಾಹಿತ್ಯಕ್ಕೂ ಇರಲಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ‘ತನ್ನ ತಾನರಿದರೆ ತನ್ನರಿವೇ ಗುರು’ ಎಂದಿದ್ದುದರಿಂದ ಇತರರ ಅನುಕರಣೆಗೂ ಅಲ್ಲಿ ಅವಕಾಶವಿರಲಿಲ್ಲ.

೧೨ನೆಯ ಶತಮಾನದಲ್ಲಿ ಅಂದರೆ ೧೧೬೨ರಲ್ಲಿ ಕಳಚೂರಿ ಮನೆತನದ ಇಮ್ಮುಡಿ ಬಿಜ್ಜಳ ಮುಮ್ಮಡಿ ತೈಲನನ್ನು ಚಾಲುಕ್ಯರ ರಾಜಧಾನಿಯಾದ ಕಲ್ಯಾಣಿಯಿಂದ ಹೊರಹಾಕಿ ತನ್ನ ಆಧಿಪತ್ಯವನ್ನು ಸ್ಥಾಪಿಸಿದ. ಕಲ್ಯಾಣಿಗೆ ಬಸವಕಲ್ಯಾಣ ಎಂದೂ ಹೆಸರಿತ್ತು. ಬಿಜ್ಜಳ ತನ್ನ ಧಾರ್ಮಿಕ ಸಹಿಷ್ಣುತೆಗೆ ಹೆಸರಾಗಿದ್ದ. ವೀರಶೈವನಾದ ಬಸವೇಶ್ವರನನ್ನು ತನ್ನ ಮಂತ್ರಿಯಾಗಿ ಮಾಡಿಕೊಂಡ. ತಾನು ಸ್ವತಃ ಜೈನನಾಗಿದ್ದರೂ ಅಬಲೂರಿನಲ್ಲಿ ನಡೆದ ಜೈನ ಮತ್ತು ವೀರಶೈವ ವಿವಾವದಲ್ಲಿ ವೀರಶೈರ ಪರವಾಗಿ ತೀರ್ಪನ್ನಿತ್ತು ಧರ್ಮ ಸಹಿಷ್ಣುತೆಯನ್ನು ಮೆರೆದಿದ್ದ. ಅನೇಕ ಜೈನರು ವೀರಶೈವರಾಗಿ ಮತಾಂತರ ಹೊಂದಿದ್ದನ್ನೂ ಸಹಿಸಿದ್ದ. ಇಷ್ಟೆಲ್ಲ ಇದ್ದರೂ ಮುಂದೆ ವೀರಶೈವ ಧಾರ್ಮಿಕ  ಕ್ರಾಂತಿಯಲ್ಲಿ ಹತ್ಯೆಗೀಡಾದ. ರಾಜ ಮನೆತನದ ಜೈನರೂ ವೀರಶೈವರ ಹತ್ಯಾಕಾಂಡ ನಡೆಸಿದರು. ವೀರಶೈವರ ಮುಂದಾಳುವಾಗಿದ್ದ ಬಸವೇಶ್ವರರು ಕಲ್ಯಾಣ ಬಿಟ್ಟು ಓಡಿ ಹೋಗ ಬೇಕಾಯಿತು. ಇದು ಕಟುವಾಗಿ ಕಂಡರೂ ಐತಿಹಾಸಿಕ ಸತ್ಯ.

ಬಸವೇಶ್ವರರು ಬಿಜ್ಜಳನ ಮಂತ್ರಿಯಾಗಿದ್ದ ಕಾಲವೆಂದರೆ ಅದು ವೀರಶೈವ ಧರ್ಮದ ಉನ್ನತಿಕೆಯ ಕಾಲವಾಗಿತ್ತು. ಅದಕ್ಕೆ ಮುಖ್ಯ ಕಾರಣ ರಾಜ್ಯದ ಮಂತ್ರಿಯಾಗಿದ್ದ ಬಸವೇಶ್ವರರ ಬೆಂಬಲವಿತ್ತು. ವೀರಶೈವ ಧರ್ಮಕಾರ್ಯಗಳಿಗಾಗಿ ರಾಜ ಭಾಂಡಾರದಿಂದ ಹೇರಳ ಹಣ ಹರಿದು ಬರುತ್ತಿತ್ತು. ಬಸವೇಶ್ವರರು ನಿರೂಪಿಸಿ ಪ್ರಚಾರಗೊಳಿಸುತ್ತಿದ್ದ ಹೊಸ ಧರ್ಮಕ್ಕೆ ಸಾಮಾಜಿಕ ನೆಲೆಯಲ್ಲಿ ಬ್ರಾಹ್ಮಣ ಮತ್ತು ಜೈನ ಧರ್ಮಾನುಯಾಯಿಗಳಿಂದ ವಿರೋಧವೂ ಇರುತ್ತಿತ್ತು. ಆದರೆ ಆಧಿಕಾರ ಮತ್ತು ಧನದ ಬಲ ಅವನ್ನೆಲ್ಲ ಲೆಕ್ಕಿಸದೇ ಮುನ್ನುಗ್ಗುತ್ತಿತ್ತು. ಆದರೆ ಧರ್ಮ ರಾಜಕೀಯವಾಗಿ ಪ್ರಬಲವಾಗಿ ರಾಜನ ಹತ್ಯೆಯಲ್ಲಿ ಅವಸಾನಗೊಂಡಾಗ ಖಡ್ಗ ತನ್ನ ಕೈಚಳಕವನ್ನು ತೋರಿಸಿ ರಾಜಕೀಯದ ಮೇಲುಗೈಯನ್ನು ಸ್ಥಾಪಿಸಿತು. ಇದು ಧರ್ಮದ ಸೋಲಿನ ಪ್ರಶ್ನೆ ಎನ್ನುವುದಕ್ಕಿಂತ ಖಡ್ಗ ತನ್ನ ವರ್ಚಸ್ಸನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಯಿತೆಂದೇ ಅನ್ನಬೇಕಾಗುತ್ತದೆ.

ಇದು ವಿಶ್ವಾದ್ಯಂತ ನಾವು ನೋಡುವ ಪ್ರಕ್ರಿಯೆ. ಅದೇನೇ ಇದ್ದರೂ ೧೨ನೆಯ ಶತಮಾನದಲ್ಲಿ ಬಸವೇಶ್ವರರು ಪ್ರತಿಪಾದಿಸಿದ ಹೊಸ ಧರ್ಮದ ಮುಖ್ಯ ಮುಖ ಅವರು ಮತ್ತು ಅವರ ಅನುಯಾಯಿಗಳು ರಚಿಸಿದ ವಚನಗಳು. ಅವು ಇಂದಿಗೂ ಮುಂದೆಯೂ ಆಮೂಲ್ಯ ಸಂಪತ್ತಾಗಿ, ಕನ್ನಡದ ಆಸ್ತಿಯಾಗಿ ಉಳಿಯುತ್ತವೆ. ಭಾಷೆಯ ದೃಷ್ಟಿಯಿಂದಲೂ ಆಡು ಭಾಷೆಯ ಸ್ವರೂಪವನ್ನು ಸಾಹಿತ್ಯದ ಮಟ್ಟಕ್ಕೆ ಏರಿಸಿದ ಮೊದಲ ಪ್ರಕ್ರಿಯೆಯನ್ನು ಇಲ್ಲಿ ನೋಡುತ್ತೇವೆ.

ಆರಾಧ್ಯ ಬ್ರಾಹ್ಮಣರ ಮನೆತನದಲ್ಲಿ ಹುಟ್ಟಿದ ಬಸವೇಶ್ವರ ಉಪನಯನವನ್ನು ತಿರಸ್ಕರಿಸಿ ಮನೆಬಿಟ್ಟು ಹೋದನೆಂಬ ಪ್ರತೀತಿಯಿದೆ ತನಗಾದ ಹೊಸ ದರ್ಶನದಿಂದ ಹೊಸ ಧರ್ಮವ್ಯವಸ್ಥೆಯನ್ನು ರೂಪಿಸಿದ. ವೀರಶೈವದಲ್ಲಿ ದೀಕ್ಷೆಗೆ ತುಂಬಾ ಮಹತ್ತ್ವವಿದೆ. ದೀಕ್ಷೆ ಹೊಂದಿದವನು ಭಕ್ತ. ದೀಕ್ಷೆ ಬರಿ ಹೊರಮೈಯ ವ್ಯಾಪಾರ ವಾಗಿರಲಿಲ್ಲ. ಗುರುವು ತನ್ನ ಅಂತಃಶಕ್ತಿಯಿಂದ ಭಕ್ತನ ಅಂತರಂಗವನ್ನು ಉದ್ದೀಪನಗೊಳಿಸಿ ಅವನ ಆತ್ಮದ ಶಕ್ತಿಯನ್ನು ಹೊರತೆಗೆದು ಕೈಯಲ್ಲಿ ಕೊಟ್ಟ ಇಷ್ಟಲಿಂಗದಲ್ಲಿ ಪ್ರತಿಷ್ಠಾಪಿಸಿ ಶಿಷ್ಯನಿಗೆ ಸಾಧನೆಯ ಮಾರ್ಗವನ್ನು ತೋರಿಸುತ್ತಿದ್ದ. ಶಿಷ್ಯ ತನ್ನ ಸಾಧನೆಯಿಂದ ಇಷ್ಟಲಿಂಗದೊಡನೆ ತನ್ನ ಆತ್ಮದ ಸಂಯೋಗವನ್ನು ಸಾಧಿಸಿಕೊಳ್ಳುತ್ತಿದ್ದ. ಈ ಪ್ರಕ್ರಿಯೆ ಒಂದೇ ಹಂತದಲ್ಲಿ ನಡೆಯುತ್ತಿದ್ದಿಲ್ಲ. ಅದು ಹಂತಹಂತವಾಗಿ ನಡೆಯುತ್ತಿತ್ತು. ಈ ಹಂತಗಳನ್ನೇ ಆರು ಸ್ಥಲಗಳು ಎಂದು ಗುರುತಿಸಲಾಗಿದೆ. ಷಟ್‌ಸ್ಥಲಗಳಲ್ಲಿ ಶಿಷ್ಯನ ಅಂತರಂಗ ಅನುಭವಿಸುವ ವಿವಿಧ ಅನುಭವಗಳು ಆನೇಕ ಕಡೆ ವಿವವರಣೆಗೊಂಡಿವೆ. ಎಲ್ಲ ಶರಣರೂ ಈ ಆರು ಹಂತಗಳಲ್ಲಿ ಹಾಯ್ದು ಬಂದಿದ್ದರೂ ಅಲ್ಲಿಯ ಅನುಭಗಳ ನಿರೂಪಣೆಯಲ್ಲಿ ವೈವಿಧ್ಯವಿದೆ. ವೈವಿಧ್ಯವಿದ್ದರೂ ಆಯಾ ಅನುಭವದ ಹಂತವು ಯಾವುದು ಎಂಬುದನ್ನೂ ಗುರುತಿಸಲು ಸಾಧ್ಯವಾಗುತ್ತದೆ. ಬೇರೆ ಬೇರೆ ಶರಣರ ಅನುಭವದ ಆಭಿವ್ಯಕ್ತಿ ಬೇರೆ ಬೇರೆಯಾಗಿ ಇದ್ದರೂ ಆಧ್ಯಾತ್ಮಿಕ ಅನುಭವದ ನೆಲೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಯಾವುದೇ ಜಾತಿ ಅಥವಾ ಧರ್ಮದ ಹಿನ್ನೆಲೆಯಿಂದ ಬಂದಿದ್ದರೂ ದೀಕ್ಷೆ ಹೊಂದಿದ ಮೇಲೆ ಅವನು ಶರಣನಾಗುತ್ತಾನೆ. ಹೀಗೆ ಶರಣರಾದವರೆಲ್ಲ ಒಂದೇ ಜಾತಿ. ಅವರಲ್ಲಿ ಜಾತಿ ಭೇದವಿಲ್ಲ. ದೀಕ್ಷೆ ಹೊಂದದ ಉಳಿದವರು ಭವಿಗಳು. ಅವರಿಗೆ ಜನನ ಮರಣಗಳ ಚಕ್ರ ಹತ್ತಿಕೊಳ್ಳುತ್ತದೆ. ಒಂದು ರೀತಿಯಲ್ಲಿ ಬಸವೇಶ್ವರರು ಬೋಧಿಸಿದ ತತ್ತ್ವಗಳು ಅದ್ವೈತ ತತ್ತ್ವಜ್ಞಾನಕ್ಕೆ ಹತ್ತಿರ ಇವೆ.

ಹೀಗೆ ಶರಣರ ಸಾಮಾನ್ಯವಾದ ಆಧ್ಯಾತ್ಮಿಕ ತಿಳುವಳಿಕೆಯ ಅಭಿವ್ಯಕ್ತಿಯೇ ವಚನಗಳೆಂದು ಪ್ರತೀತವಾಗಿವೆ. ಅವುಗಳ ಆಭಿವ್ಯಕ್ತಿ ವಿಧಾನವನ್ನು ಅಭ್ಯಸಿಸುವುದು ಇಲ್ಲಿಯ ಉದ್ದೇಶ. ಅಭಿವ್ಯಕ್ತಿ ವಿಧಾನವೆಂದಾಗ ಅವುಗಳು ಹೇಳುವ ವಿಷಯಗಳ ತಾತ್ಪರ್ಯದ ಕಡೆಗೆ ಪ್ರಮುಖ ಗಮನವಿಟ್ಟು ವಿವರಣೆ ಸಾಗುತ್ತದೆ. ಭಾಷಾಶೈಲಿಯನ್ನೇ ಕೇಂದ್ರವನ್ನಾಗಿ ಇಟ್ಟುಕೊಂಡು ಕೆಲವು ವಚನಗಳನ್ನು ನೋಡೋಣ. ಬಸವೇಶ್ವರರ ಈ ವಚನ ನೋಡಿ.

            ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ:
ಎನ್ನುವನು ಕಾಯಯ್ಯಾ, ಕಾಯಯ್ಯಾ!
ಹುರುಳಿಲ್ಲ. ಹುರುಳಿಲ್ಲ.
ಕೂಡಲಸಂಗಮದೇವಾ, ಶಿವಧೋ! ಶಿವಧೋ!!
            (ಬಸವಣ್ಣನವರ ಷಟ್ಸ್ಥಲದ ವಚನಗಳು, ೧೩)

ಇಲ್ಲಿ ‘ಅಯ್ಯಾ’ ಎಂಬ ಸಂಬೊಧನೆ ಅಥವಾ ಆರ್ತ ಕರೆ ಭಾಷೆಯ ಆಡುರೂಪದ ಶಕ್ತಿಯನ್ನು ಬಿಂಬಿಸುತ್ತದೆ. ಸಂಸಾರದಲ್ಲಿ ಹುರುಳಿಲ್ಲ ಎಂಬ ವೈರಾಗ್ಯದ ಮಾತು ಅಂತಃಕರಣದಿಂದ ಹೊಮ್ಮಿದಂತೆಯೇ ವ್ಯಕ್ತವಾಗಿದೆ. ಅಲ್ಲದೇ ಛಂದಸ್ಸಿನ ಗೋಜಿಲ್ಲದೇ ಮನದಲ್ಲಿ ಬಂದ ಮಾತನ್ನು ಬಂದಂತೆಯೇ ಆಡುವ ಶೈಲಿ ಪರಿಣಾಮಕಾರಿಯಾಗಿದೆ. ಅಥವಾ ಅಲ್ಲಮಪ್ರಭುವಿನ ಈ ವಚನ ನೋಡಿ.

            ಎನಗೊಂದು ಲಿಂಗ, ನಿನಗೊಂದು ಲಿಂಗ,
ಮನೆಗೊಂದು ಲಿಂಗವಾಯಿತ್ತು.
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ,
ಉಳಿ ಮುಟ್ಟದ ಲಿಂಗವ
ಮನ ಮುಟ್ಟಬಲ್ಲುದೇ? ಗುಹೇಶ್ವರ.
            (ಅಲ್ಲಮನ ವಚನ ಚಂದ್ರಿಕೆ, ೨೦೭)

‘ಹೋಯಿತಲ್ಲಾ ಭಕ್ತಿ ಜಲವ ಕೂಡಿ’ ಎಂಬ ಮಾತು ನೇರ ನುಡಿಯ ಉದಾಹರಣೆ. ಅಲ್ಲದೇ ಭಾವನೆಯನ್ನು ನೇರ ಭಾಷೆಯಲ್ಲಿ ಹೇಳಿದ ರೀತಿ ಮೋಹಕವಾಗಿದೆ. ಅಥವಾ ಮೋಳಿಗೆಯ ಮಾರಯ್ಯನ ಈ ವಚನ ನೋಡಿ. ಆಡು ನುಡಿಯ ವೈಖರಿ ಇನ್ನೂ ಸ್ಪಷ್ಟವಾಗುತ್ತದೆ.

            ಎನ್ನ ಮಾಟ, ಕುರುಡ ಸಭೆಯಲ್ಲಿರ್ದು ನಗೆಯ ನಕ್ಕಂತಾಯ್ತು.
ಶ್ರೋತ್ರನಾಶನಲ್ಲಿ ಜಯ ಸ್ವರನ ಪಾಡಿದಂತಾಯ್ತು.
ಬೆಳ್ಳ ಹಣ್ಣಿಗೆ ತಾಳಿಹ ದೃಷ್ಟದಂತಾಯ್ತು.
ನಾ ಬಂದ ಲೀಲೆಯನ್ನಾರಿಗೆ ಹೇಳುವೆ
ನಿಃಕಳಂಕ ಮಲ್ಲಿಕಾರ್ಜುನಾ?
            (ಮೋಳಿಗೆಯ ಮಾರಯ್ಯನ ವಚನಗಳು, ೩೩)

ಮುಂದಿನ ಯುಗ ಷಟ್ಟದಿಯುಗ. ಅದರಲ್ಲಿ ಕುಮಾರವ್ಯಾಸ ಪ್ರಮುಖನೂ ಪ್ರಭಾವಶಾಲಿಯೂ ಆಗಿದ್ದುದರಿಂದ ಆ ಯುಗಕ್ಕೆ ಕುಮಾರವ್ಯಾಸಯುಗ ಎಂದು ರಂ. ಶ್ರೀ. ಮುಗಳಿ ಅವರು ತಮ್ಮ ಸಾಹಿತ್ಯ ಚರಿತ್ರೆಯಲ್ಲಿ ಕರೆದಿದ್ದಾರೆ. ಈ ಯುಗದಲ್ಲಿ ಕುಮಾರವ್ಯಾಸ, ಚಾಮರಸ, ರಾಘವಾಂಕ, ಲಕ್ಷೀಶ ಮೊದಲಾದವರು ಪ್ರಮುಖರು. ಕುಮಾರವ್ಯಾಸನ ಭಾಷಾಶೈಲಿ ಚಂಪೂ ಕಾವ್ಯಗಳ ಜಟಿಲ ರಚನೆಯಿಂದ ತೀರಾ ಭಿನ್ನವಾಗಿದೆ. ಧಾರವಾಡ ಕಡೆಯ ಕೋಳಿವಾಡ ಗ್ರಾಮದ ಸುತ್ತಲ ಭಾಷೆಯನ್ನು ಅಲ್ಲಲ್ಲಿ ಬಳಸುತ್ತದೆ. ಆದರೂ ಷಟ್ಟದಿಯ ಲಾಲಿತ್ಯ ಹಗುರವೆನಿಸಿ ಸುಲಭ ಅರ್ಥವೇದ್ಯವಾಗುತ್ತದೆ. ನೋಡಿ.

            ಡಾವರಿಸಿದುದು ವಿವಿಧ ವಾದ್ಯ ವಿ
ರಾವವಬುಜೋದ್ಭವನ ಭವನವ
ನಾ ವಿಗಡ ಭಟ ಕಟಕವಿದ್ದುದು ಬಲಿದ ಬೊಬ್ಬೆಯಲಿ
ಗೋವಳನ ಬರಹೇಳು ದಾರಿಯಲಿ
ದೇವ ಗಡ, ಬರಹೇಳು ತೋರಾ
ಕಾವವರ ತಾ ಕೊಲುವೆನೆಂದೊದರಿದನು ಕಲಿ ಚೈದ್ಯ.
            (ಭಾರತ ಕಥಾಮಂಜರಿ, ಸಭಾಪರ್ವ, ೫೮)

ಶಿಶುಪಾಲ ಕೃಷ್ಣನ ವಿರುದ್ಧ ಸಾರಿದ ವೈರತ್ವದ ಒಂದು ಪರಿಯನ್ನು ಹೇಳಲಾಗಿದೆ. ಕುಮಾರವ್ಯಾಸನ ವರ್ಣನೆಯ ವಿಶಿಷ್ಟ ರೀತಿಯ ಉದಾಹರಣೆ ಇಲ್ಲಿದೆ. ‘ಸೈನ್ಯ ಜೋರಾಗಿ ಕಿರಿಚಿತು’ ಎಂಬ ಮಾತನ್ನು ‘ಬಲಿದ ಬೊಬ್ಬೆಯಲಿ ಕಟಕವಿದ್ದುದು’ ಎಂದು ಹೇಳುತ್ತಾನೆ. ‘ಕೂಗು’ ಎಂದು ಹೇಳಬೇಕಾದಲ್ಲಿ ‘ಒದರು’ ಎಂಬ ಪದಪ್ರಯೋಗವೇ ಇವನು ಧಾರವಾಡ ಕಡೆಯವನು ಎಂದು ಹೇಳುತ್ತದೆ. ಇಂಥ ಅನೇಕ ಪದಗಳು ಸಿಗುತ್ತವೆ. ಮುದುಗೂಗೆ (ಮುದಿಗೂಬೆ), ಡೊಳ್ಳಾಸ (ಮೋಸ), ಸೇಕ (ಶಾಖ) ಮೊದಲಾದ ಪ್ರಾದೇಶಿಕ ಶಬ್ಧಗಳು ಕಾವ್ಯದ ಯಾವ ಭಾಗವನ್ನು ಎತ್ತಿಕೊಂಡರೂ ಕಾಣದೊರೆಯುತ್ತವೆ.

ಕುಮಾರವ್ಯಾಸನಂತೆ ಚಾಮರಸನೂ ಭಕ್ತಿ ಕಾವ್ಯದ ರಚನೆ ಮಾಡಿದ. ಮುಂದೆ ಬಂದ ಷಡಕ್ಷರಿ ಪಂಪನಿಗಿಂತಲೂ ಪ್ರೌಢವಾದ ‘ರಾಜಶೇಖರ ವಿಳಾಸ ‘ವನ್ನು ರಚಿಸಿದ. ಅವನ ರಚನೆ ಪಂಡಿತರಿಗೂ ಕಬ್ಬಿಣದ ಕಡಲೆಯಾಗಿತ್ತು. ನೋಡಿ,

            ಸಕ್ಷಮ ದಕ್ಷ ಶಿಕ್ಷಣ ವಿಚಕ್ಷಣ ಸುಕ್ಷಣ ಲಕ್ಷಣೇಕ್ಷಣಾ
ರಕ್ಷಿತ ಲಕ್ಷಿತೇಶ್ವರ ಮುಮುಕ್ಷು ಜಿತಾಕ್ಷ ಮಹೋಕ್ಷ ಲಕ್ಷ ಫಾ
ಲಾಕ್ಷ ತರಕ್ಷು ರಾಕ್ಷಸ ವಿಪಕ್ಷ ವಳಕ್ಷ ಸರಕ್ಷ ದೇಹ ಮೋ
ಹಕ್ಷಯ ದಕ್ಷ ರಕ್ಷಿಪುದಧೋಕ್ಷಜ ಪಕ್ಷ ಶಿವಾಕ್ಷಿ ಸಂಭವಾ
            (
ರಾಜಶೇಖರ ವಿಳಾಸಂ, ೧೦)

ಶಿವನ ಕಣ್ಣಿನಿಂದ ಜನಿಸಿದವನನ್ನು ‘ರಕ್ಷಿಪುದು’ ಎಂದು ಕೇಳುವ ಪದವನ್ನು ಬಿಟ್ಟರೆ ಉಳಿದ ಭಾಗದ ಅರ್ಥ ಕಠಿಣವಾಗಿದೆ.

ಹೀಗೆ ಹಳೆಯ ಕನ್ನಡ ಮತ್ತು ನಡುಗಾಲದ ಕನ್ನಡದಲ್ಲಿ ಪ್ರೌಢ ಕಾವ್ಯಗಳೇ ಪ್ರಮುಖವಾಗಿದ್ದವು. ಇದಕ್ಕೆ ಕಾರಣ ಸಾಹಿತ್ಯ ಪಂಡಿತರ ಸೊತ್ತು ಆಗಿದ್ದು ಪಂಡಿತರಿಗಾಗಿಯೇ ಸಾಹಿತ್ಯ ರಚನೆಯಾಗುತ್ತಿದ್ದಂತೆ ತೋರುತ್ತಿತ್ತು. ೧೮-೧೯ನೆಯ ಶತಮಾನಕ್ಕೆ ಬಂದಾಗ ಗದ್ಯ ಲೇಖನ ಪ್ರಾರಂಭವಾಗುತ್ತದೆ. ಆ ಕಾಲದಲ್ಲಿ ಕೆಂಪುನಾರಾಯಣನ ‘ಮುದ್ರಾಮಂಜೂಷ’ ಮತ್ತು ಮುದ್ದಣನ ‘ರಾಮಾಶ್ವಮೇಧ’  ಮೊದಲಾದವುಗಳು ಸುಲಲಿತ ಗದ್ಯದಲ್ಲಿ ರಚಿತವಾದ ಸುಂದರ ಕೃತಿಗಳು. ೧೯೦೦ರ ಸುಮಾರಿಗೆ ರಚಿತವಾದ ‘ರಾಮಾಶ್ವಮೇಧ’ವು ಮುದ್ದಣ ಮನೋರಮೆಯರ ಸಂವಾದ ರೂಪದಲ್ಲಿದೆ. ಆ ಹೊತ್ತಿಗೆ ಕನ್ನಡ ಇಂದಿನಂತೆ ಹೆಚ್ಚು ಕಡಿಮೆ ಹೊಸಗನ್ನಡದ ರೂಪ ತಾಳಿತ್ತು. ಆದರೂ ಮುದ್ದಣ ತನ್ನ ಭಾಷಾಶೈಲಿಯಲ್ಲಿ ಹಳಗನ್ನಡದ ಮೆರುಗನ್ನು ತರಲು ಪ್ರಯತ್ನಿಸಿದ್ದಾನೆ. ಅದರಿಂದ ಪಾಂಡಿತ್ಯದ ಸ್ಪರ್ಶ ಬಂದಂತಾಗುತ್ತದೆ. ಉದಾಹರಣೆಗೆ ನೋಡಿ,

ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ ರಸಮೊಸರೆ ಲಕ್ಕಣಂ ಮಿಕ್ಕಿರೆ ಎಡೆಯೆಡೆಯೊಳ್ ಸಕ್ಕದದ ನಲ್ನುಡಿ ಮೆಱೆಯೆ ತಿರುಳ್ಗನ್ನಡದೊಳೆ ಕತೆಯ ನುಸಿರ್ವೆಂ.

ಎಂದು ಹೇಳುತ್ತಾನೆ. ಇದು ಖಂಡಿತ ಮುದ್ದಣ ಮನೆಯಲ್ಲಿ, ಮಾತಾಡುತ್ತಿದ್ದ ಭಾಷಾಶೈಲಿಯಲ್ಲ. ಹೇಳಬೇಕೆಂದಿರುವ ಸರಳ ವರ್ಣನೆಯಲ್ಲಿ ‘ಮೆಱೆಯೆ’, ‘ಲಕ್ಕಣಂ ಮಿಕ್ಕಿರೆ’ ಮೊದಲಾದ  ಹಳಗನ್ನಡದ ರೂಪಗಳನ್ನು ತಂದಿರುವುದರಿಂದ ಶೈಲಿಗೆ ಗಾಂಭೀರ್ಯ ಬರುತ್ತದೆ. ಇದು ಸ್ವಾಭಾವಿಕ ಶೈಲಿಯಲ್ಲ, ಗಾಂಭೀರ್ಯಕ್ಕಾಗಿ ಸೃಷ್ಟಿಸಿದ ಶೈಲಿ. ಈ ಶೈಲಿಗೆ ಎಸ್. ವಿ. ರಂಗಣ್ಣ ಅವರು ವರ್ಣಿಸಿದಂತೆ ‘ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು’ ಎಂಬ ವರ್ಣನೆ ಯಥಾರ್ಥವಾಗಿದೆ.

ಇಲ್ಲಿ ಕನ್ನಡ ಸಾಹಿತ್ಯದ ವಿಶಾಲ ಸಾಗರದ ವಿವಿಧ ಅಲೆಗಳ ಶೈಲಿ ವೈವಿಧ್ಯವನ್ನು ವಿವರವಾಗಿ ಹೇಳುವ ಉದ್ದೇಶವಿಲ್ಲ. ಅದಕ್ಕೆ ಬೇರೆಯೇ ವೇದಿಕೆ ಬೇಕಾಗುತ್ತದೆ. ಅದರೆ ಕನ್ನಡ ಸಾಹಿತ್ಯ ನಡೆದು ಬಂದ ದಾರಿಯಲ್ಲಿ ಕಾಣುವ ಶೈಲಿ ವೈವಿಧ್ಯಗಳ ದಿಕ್ಸೂಚಿಯನ್ನು ಮಾತ್ರ ಇಲ್ಲಿ ಕೊಡಬಹುದಾಗಿದೆ.

ಇನ್ನು ಹೊಸಗನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಶೈಲಿಯನ್ನು ವಿಶ್ಲೇಷಿಸೋಣ. ಅದರ ಪೂರ್ವವಲ್ಲಿ ಶೈಲಿವಿಜ್ಞಾನ ಬಳಸುವ ವಿವಿಧ ಮಾನದಂಡಗಳನ್ನು ವಿವರವಾಗಿ ನೋಡೋಣ.