ಪಂಪಯುಗದ ಕಾವ್ಯದ ಲಕ್ಷಣಗಳನ್ನು ಚಂಪೂಯುಗ ಎಂದು ಸ್ಥೂಲವಾಗಿ ಹೇಳಬಹುದು. ಏಕೆಂದರೆ ಈ ಯುಗದಲ್ಲಿ ಚಂಪೂ ಕಾವ್ಯಗಳೇ ಹೆಚ್ಚು ರಚನೆಯಾಗಿವೆ.

ಆಗ ಸಂಸ್ಕೃತ ಸಾಹಿತ್ಯಭ್ಯಾಸ ಪ್ರಮುಖವಾಗಿತ್ತು. ಹೀಗಾಗಿ ಅಲ್ಲಿಯ ಪ್ರಭಾವಶಾಲಿ ಪುಸ್ತಕಗಳನ್ನು ಕನ್ನಡದಲ್ಲಿ ಸೃಷ್ಟಿಸಲಾಯಿತು. ಹಿಂದೂ ಪುರಾಣಗಳೂ ಜೈನ ಪುರಾಣಗಳೂ ಕನ್ನಡದಲ್ಲಿ ಅವತರಿಸಿದವು. ಆ ಕಾಲದ ಸಾಹಿತ್ಯದ ಪ್ರಮುಖ ಲಕ್ಷಣವೆಂದರೆ ಸಂಸ್ಕೃತ ಪದಗಳ ಧಾರಾಳ ಬಳಕೆ. ಸಂಸ್ಕೃತ ಭಾಷೆಯಲ್ಲಿ ಸಮೃದ್ಧ ಶಬ್ದ ಭಾಂಡಾರವಿದ್ದುದರಿಂದ ಛಂದೋಬದ್ಧ ರಚನೆಗೆ ಅನುಕೂಲವಾಗುವಂಥ ಪದಗಳು ಸಿಕ್ಕುಬಿಡುತ್ತಿದ್ದವು. ಇನ್ನೊಂದು ಲಕ್ಷಣವನ್ನು ನಾವು ಗಮನಿಸುತ್ತೇವೆ. ಪ್ರೌಢ ವಿಚಾರ, ವೀರಾವೇಶ ಮೊದಲಾದ ಸನ್ನಿವೇಶಗಳಲ್ಲಿ ಪ್ರೌಢ ಶೈಲಿಯನ್ನು ಬಳಸಿದರೆ ಅಂತಃಕರಣದ ಮಾತು ಬಂದಾಗ ಹೆಚ್ಚು ಅಚ್ಚ ಕನ್ನಡವನ್ನು ಬಳಸುತ್ತಿದ್ದರು. ರನ್ನನಂಥ ಮಹಾಕವಿಯೂ ಈ ಪ್ರಕ್ರಿಯೆಗೆ ಹೊರತಾಗಿರಲಿಲ್ಲ. ‘ಕರ್ಣ, ದುಶ್ಯಾಸನರಿಲ್ಲದೆ ನಾನು ಯಾರ ಮುಂದೆ ಮೆರೆಯಲಿ!!’ ಎಂಬ ಅಂತರಂಗದ ಮಾತನ್ನು ದುರ್ಯೋಧನ ಹೇಳುವ ಶೈಲಿಯನ್ನು ರನ್ನ ‘ಗದಾಯುದ್ಧ’ದಲ್ಲಿ ನೋಡಿ,

ಪುದುವಾೞಲ್ಕಣಮಾಗದೆಂತುಮವರೊಳ್ಸಂಧಾನಮಂ ಮಾಡಲಾ
ಗದು ನೀಮಿಲ್ಲದೆ ಯಜ್ಜ ಬಿಲ್ಲ ಗುರುಗಳ್ತಾಮಿಲ್ಲದಾ ಕರ್ಣನಿ
ಲ್ಲದೆ ದುಶ್ಯಾಸನನಿಲ್ಲದಾರೊಡನೆ ರಾಜ್ಯಂಗೆಯ್ವೆಯಾರ್ಗೆನ್ನ ಸಂ
ಪದಮಂ ತೋಱುವೆನಾರ್ಗೆ ತೋಱು ಮೆಱೆವೆಂ ನಾನಾವಿನೋದಂಗಳಂ
(‘
ಗದಾಯುದ್ಧ ಸಂಗ್ರಹಂ೧೯೪೯, ಸಂಧಿ, . ಪದ್ಯ ೧೦)

ಇಲ್ಲಿ ಸಂಧಾನ, ರಾಜ್ಯ, ಸಂಪದ, ವಿನೋದ ಈ ನಾಲ್ಕು ಪದಗಳನ್ನು ಬಿಟ್ಟು ಉಳಿದೆಲ್ಲ ಕನ್ನಡದಲ್ಲಿದೆ. ಅಲ್ಲದೇ ಅವು ದುರ್ಯೋಧನನ ಜೀವನದಲ್ಲಿ ಮತ್ತೆ ಮತ್ತೆ ಬಂದ ಪದಗಳು. ಆದುದರಿಂದ ಇವನ್ನು ಹಿಂದಿನ ಸಂದರ್ಭಗಳಿಂದಲೇ ಉದ್ಧರಿಸಿದ್ದಾನೆಂದೂ ಅರ್ಥ ಮಾಡಿದರೆ ಅವಕ್ಕೂ ಈ ಸಂದರ್ಭದಲ್ಲಿ ಹೊಸ ಪ್ರಯೋಗ ಬಲ ಬರುವುದಿಲ್ಲ.

ಇನ್ನು ನಾಗಚಂದ್ರ (ಅಭಿನವಪಂಪ)ನೂ ಈ ಪ್ರಕ್ರಿಯೆಗೆ ಹೊರತಾಗಿಲ್ಲ. ಸೀತೆಯನ್ನು ಕಾಣದೇ ದುಃಖದಿಂದ ರಾಮ ಮೂರ್ಛೆ ಹೋಗುತ್ತಾನೆ. ಸ್ವಲ್ಪ ಹೊತ್ತಿನ ಮೇಲೆ ಮೂರ್ಛೆ ತಿಳಿದೇಳುವ ವರ್ಣನೆಯನ್ನು ‘ಪಂಪರಾಮಾಯಣ’ದಲ್ಲಿ ನೋಡಿ,

ನಸು ಬಿಸುಪೇಱೆ ಮೆಯ್ಮಗುಳೆ ಕೆತ್ತುವ ತಾಣಮೆ ಕೆತ್ತೆ ಮಂದಮಾ
ದುಸಿರ್ಗಳೆ ನಾಸಿಕಾಮುಕುಲದಿಂದಿನಿಸುಂ ಪೊಱಪೊಣ್ಮೆ ತಳ್ತು ಸಂ
ದಿಸಿದೆಮೆ ಬಿರ್ಚೆ ಕಣ್ಮಲರ್ಗಳುಳ್ಳಲರುತ್ತಿರೆ ಜಾನಕೀಯೆನು
ತ್ತುಸುರ್ದುಸಿರ್ದೆೞ್ದನಾ ರಘುಕುಲಾಂಬರ ಚಂಡ ಮರೀಚಿ ಮೂರ್ಛೆಯಿಂ
            (‘
ಪಂಪರಾಮಾಯಣ ಸಂಗ್ರಹಂ‘, ಆಶ್ವಾಸ, , ಪದ್ಯ, ೭೩)

ಇಲ್ಲಿ ‘ನಾಸಿಕಾಮುಕುಲ, ರಘುಕುಲಾಂಬರ ಚರ ಮರೀಚಿ’ ಇವೆರೆಡು ಸಮಸ್ತ ಪದಗಳನ್ನು ಬಿಟ್ಟರೆ ಉಳಿದೆಲ್ಲ ಕನ್ನಡವಿದೆ. ಮೂಗುಮೊಗ್ಗೆ ಅಥವಾ ಮೊಗ್ಗೆಯಂಥ ಮೂಗು ಎಂಬ ಕನ್ನಡ ಪದವಿದ್ದರೂ ಇದಕ್ಕೆ ‘ನಾಸಿಕಮುಕುಲ’ದ ಸ್ಥಾಪಿತ ಕೋಮಲತೆಯಿಲ್ಲ ಎನಿಸಿರಬೇಕು. ಶೂರನಾದ ರಾಮನ ಸ್ಥಿತಿಯನ್ನು ಈ ಅವಸ್ಥೆಯಲ್ಲಿ ಶಕ್ತಿಯುತವಾಗಿ ಬಣ್ಣಿಸಲು ‘ರಘುಕುಲಾಂಬರ ಚಂಡ ಮರೀಚಿ’ ಎಂಬ ದೀರ್ಘ ಸಮಸ್ತ ಪದ ಬೇಕಿತ್ತು. ಹೀಗೆ ಮಹಾಕವಿಗಳು ಸೂಕ್ತವಾದ ಪದಪ್ರಯೋಗ ಮಾಡುವ ಶೈಲಿಯನ್ನು ನೋಡುತ್ತೇವೆ.

ಇನ್ನು ವಚನಕಾರರ ಮೂಲ ಧ್ಯೇಯ ಧೋರಣೆಗಳು ಹೊಸ ತಿಳುವಳಿಕೆಯ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವುದಾಗಿದ್ದುದರಿಂದ ಅವರ ಭಾಷೆ ವೈಯಕ್ತಿಕ ಸಂಪರ್ಕ ಮಾಧ್ಯಮದಂತಿತ್ತು. ಈ ಮಾಧ್ಯಮದ ರೀತಿಗಳು ಹಲವು ವಿಧವಾಗಿವೆ. ಕೆಲವನ್ನಿಲ್ಲಿ ನೋಡೋಣ:

. ತಮ್ಮ ಅನುಭವವನ್ನು ಸರಳ ಮಾತುಗಳಲ್ಲಿ ನಿರೂಪಿಸಿ ‘ಆ ಅನುಭವ ನಿಮಗೂ ಬೇಕಿದ್ದರೆ ಈ ರೀತಿಯ ಮಾರ್ಗ ಅನುಸರಿಸಿರಿ’ ಎಂಬ ಸೂಚನೆ ಇರುತ್ತಿತ್ತು.

ಲಿಂಗವನಱುಯದೆ ಏನನಱುದಡೆಯೂ ಫಲವಿಲ್ಲ,
ಲಿಂಗವನಱುದ ಬಳಿಕ ಮತ್ತೇನನಱುದಡೆಯೂ ಫಲವಿಲ್ಲ,
ಸರ್ವಕಾರಣ ಲಿಂಗವೆಂದುದಾಗಿ ಲಿಂಗವನೆ ಅಱುದೆ.
ಅಱುದಱುದು ಲಿಂಗಸಂಗವನೆ ಮಾಡುವೆ.
ಸಂಗಸುಖದೊಳಗೋಲಾಡುವೆ, ಗುಹೇಶ್ವರಾ.
(
ಅಲ್ಲಮನ ವಚನ ಚಂದ್ರಿಕೆ, . ೭೬೦)

ಇಲ್ಲಿಯ ಸರಳ ಮಾತಿನ ರೀತಿ ಮನವೊಲಿಸುವಂತಿದೆ. ಇಂಥ ವಚನಗಳು ನೇರ ಪರಿಣಾಮವನ್ನುಂಟುಮಾಡುತ್ತವೆ.

. ‘ಅಯ್ಯಾ, ಅಣ್ಣಾ, ಅಕ್ಕಾ, ಅವ್ವಾ, ಅಪ್ಪಾ’ ಮೊದಲಾದ ಆತ್ಮೀಯ ಸಂಬಂಧವಾಚಕಗಳಿಂದ ಸಂಬೋಧಿಸಿ ಕೇಳುಗರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಧಾನವನ್ನು ಬಳಸುತ್ತಿದ್ದರು.

ಕಣ್ಣಕೋಪಕ್ಕೆ ಮುಂದಱುಯದೆ ನುಡಿದೆ;
ಮನಮೆಚ್ಚಿ ಮರುಳಾದೆ, ನೋಡವ್ವಾ,
ಕೇಳು ಕೇಳುವ್ವಾ, ಕೆಳದೀ,
ಸಖಿಯರಿಲ್ಲದೆ ಸುಖವ ಬಯಸುವರುಂಟೇ? ಹೇಳಾ.
ಎನ್ನ ಮುನಿಸು ಎನ್ನಲ್ಲಿಯೆ ಅಡಗಿತ್ತು;
ಇನ್ನು ಬಾರಯ್ಯಾ, ಕೂಡಲಸಂಗಮದೇವಾ.
(
ಬಸವಣ್ಣನವರ ಷಟ್ಸ್ಥಲದ ವಚನಗಳು . ೫೧೯)

ಇಲ್ಲಿಯ ಪರಿ ತುಂಬಾ ಆತ್ಮೀಯವಾಗಿದೆ. ಇಲ್ಲಿ ಆಧ್ಯಾತ್ಮಿಕ ವಿಚಾರವೇನೂ ಇಲ್ಲ. ‘ಹೇಳಬೇಕೆಂದಿರುವ ವಿಷಯ ಇನ್ನೂ ಮುಂದಿದೆ. ಸಂಕೋಚ ಬಿಟ್ಟು ಬಾ’ ಎಂಬ ಕರೆ ಇದೆ.

. ಪ್ರಶ್ನಾರ್ಥಕ ವಾಕ್ಯಗಳನ್ನು ಬಳಸಿ ವಿಷಯದ ಬಗ್ಗೆ ಮನವೊಲಿಸುವ ಶೈಲಿ ಇರುತ್ತಿತ್ತು.

ಕರ್ಪೂರದ ಗಿರಿಯ ಉರಿಯು ಹಿಡಿದಡೆ ಇದ್ದಿಲುಂಟೆ?
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಶವುಂಟೇ?
ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ
ಮರಳಿ ಬಾಣವನಱಸಲುಂಟೇ?
ಗುಹೇಶ್ವರನೆಂಬ ಲಿಂಗವನಱುದು ಮರಳಿ ನೆನೆಯಲುಂಟೇ?
(
ಅಲ್ಲಮನ ವಚನ ಚಂದ್ರಿಕೆ. . ೬೮೩)

ಇಲ್ಲಿಯ ರೀತಿ ಪ್ರಶ್ನೆಗಳಿಂದ ಅನುಭವ ವೇದ್ಯವಾಗದ ಅಖಂಡ ಸತ್ಯವನ್ನು ಬಿಂಬಿಸುವುದಾಗಿದೆ. ಅದಕ್ಕೆ ಕೊಡುವ ಉದಾಹರಣೆಗಳು ಅನುಭವವೇದ್ಯವಾಗಿವೆ.

. ಹೇಳಬೇಕೆಂದಿರುವ ಮಾತನ್ನು ಅನೇಕ ಉದಾಹರಣೆಗಳನ್ನು ಕೊಟ್ಟು ಒಪ್ಪಿಗೆ ಯಾಗುವಂತೆ ಹೇಳುತ್ತಿದ್ದರು.

ಸತಿಯರ ಸಂಗವನು,
ಅತಿಶಯದ ಗ್ರಾಸವನು,
ಪೃಥ್ವಿಗೀಶ್ವರನ ಪೂಜೆಯನು,
ಅರಿವುಳ್ಳಡೆ ಹೆರರ ಕೈಯಿಂದ
ಮಾಡಿಸುವರೇ ರಾಮನಾಥಾ?
(
ದೇವರ ದಾಸಿಮಯ್ಯನ ವಚನಗಳು, . ೩೪)

ದೇವರಪೂಜೆಯನ್ನು ಸ್ವತಃ ಮಾಡಬೇಕೇ ಹೊರತು ಇತರರ ಕೈಯಿಂದ ಮಾಡಿಸಿದರೆ ಪುಣ್ಯವಿಲ್ಲ ಎಂಬ ಮಾತನ್ನು ಬಹು ಪರಿಣಾಮಕಾರಿಯಾಗಿ ಹೇಳಲಾಗಿದೆ.

. ಅನೇಕ ವಚನಗಳು ಮಧ್ಯಮ ಪರುಷದ ಕ್ರಿಯಾಪದವನ್ನು ಹೊಂದಿರುತ್ತವೆ. ಇದರ ಅರ್ಥ ಅವುಗಳ ಕರ್ತೃ ‘ನೀನು’ ಅಥವಾ ‘ನೀವು’ ಆಗಿರುವದರಿಂದ ನೇರವಾಗಿ ಕೇಳುಗನನ್ನು ಗುರಿಯಾಗಿ ಇಟ್ಟುಕೊಂಡು ಹೇಳಿದಂತೆ ಇರುತ್ತದೆ. ಸಾಮಾನ್ಯ ಹೇಳಿಕೆಗಳಿಗಿಂತ ಇವು ಕೇಳುಗನನ್ನು ನೇರವಾಗಿ ಮುಟ್ಟುತ್ತವೆ.

ವಿಷಯವೆಂಬ ಹಸುರೆನ್ನ ಮುಂದೆ ತಂದು ಪಸರಿಸಿದೆಯಯ್ಯಾ;
ಹಸುವೇನ ಬಲ್ಲದು? ಹಸುರೆಂದೆಳಸುವದು.
ವಿಷಯರಹಿತನ ಮಾಡಿ ಭಕ್ತಿರಸವ ದಣಿಯೆ ಮೇಯಿಸಿ
ಸುಬುದ್ಧಿಯೆಂಬುದಕವನೆಱೆದು ನೋಡಿ ಸಲಹಯ್ಯಾ,
ಕೂಡಲಸಂಗಮದೇವಾ.
            (
ಬಸವಣ್ಣನವರ ಷಟ್ಸ್ಥಲದ ವಚನಗಳು . ೫೧)

ಇಂಥ ಶೈಲಿ ಅನೇಕ ವಚನಗಳಲ್ಲಿ ಕಾಣುವ ಶಕ್ತಿಯುತ ರೀತಿ.

ಹೀಗೆ ಪ್ರತಿಯೊಬ್ಬ ವಚನಕಾರನ ಪ್ರತಿಯೊಂದು ವಚನವೂ ಒಂದಿಲ್ಲೊಂದು ವಿಶೇಷತೆಯನ್ನು ಸೂಚಿಸುತ್ತಲೇ ಇರುತ್ತದೆ. ವಚನ ಸಾಹಿತ್ಯದ ಭಾಷಾಶೈಲಿ ಈ ಅರ್ಥದಲ್ಲಿ ಅಪೂರ್ವವಾಗಿದೆ.

ಇನ್ನು ಕುಮಾರವ್ಯಾಸ, ಚಾಮರಸ, ರಾಘವಾಂಕ, ಲಕ್ಷ್ಮೀಶ ಮೊದಲಾದ ಷಟ್ಪದಿಕಾರರಲ್ಲಿ ಭಾಷೆಯನ್ನು ಮೇಣದಂತೆ ಮಿದ್ದಿ ತಮಗೆ ಬೇಕಾದ ರೂಪ ಕೊಡುವ ಕ್ರಿಯೆಯನ್ನು ನೋಡುತ್ತೇವೆ.

ಕುಮಾರವ್ಯಾಸ ಭಾರತದಲ್ಲಿ ಕೃಷ್ಞ ದೇವಾಂಶ ಸಂಭೂತನೆಂದು ಭೀಷ್ಮನಿಗೆ ಗೊತ್ತಿದೆ. ಆದರೂ ಕ್ಷತ್ರಿಯ ನೀತಿಗನುಸಾರವಾಗಿ ಯುದ್ಧಕ್ಕೆ ನಿಂತ ಭೀಷ್ಮ ‘ಚಕ್ರ ಹಿಡಿಯುವದಿಲ್ಲ’ ಎಂದು ಪ್ರತಿಜ್ಞೆ ಮಾಡಿದ ಕೃಷ್ಣನಿಂದ ಚಕ್ರ ಹಿಡಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಭೀಷ್ಮನ ಸಮ್ಮುಖಕ್ಕೆ ಕೃಷ್ಣ ರಥವನ್ನು ತರುವ ರೀತಿ ನೋಡಿ,

            ಎತ್ತಲೊಲೆದನದೆತ್ತ ಸರಿದನ
ದೆತ್ತ ಜಾರಿದನೆತ್ತ ತಿರುಗಿದ
ನೆತ್ತ ಹಿಂಗಿದನೆತ್ತಲೌಕಿದನೆತ್ತಲುರುಬಿದನು
ಅತ್ತಲತ್ತಲು ರಥ ಹಯವ ಬಿಡ
ದೊತ್ತಿ ಬೀದಿಗೆ ನೂಕಿ ಪಾರ್ಥನ
ಮುತ್ತಯನ ಸಂಮುಖಕೆ ಬಿಡದೌಕಿದದನು ಮುರವೈರಿ
            (
ಕರ್ಣಾಟ ಭಾರತ ಕಥಾಮಂಜರಿ, ಭೀಷ್ಮಪರ್ವ, ಪದ್ಯ, ೨೨)

ಇಲ್ಲಿಯ ಪದಯೋಜನೆಗೂ ಭಾವತೀವ್ರತೆಗೂ ಇರುವ ಸಂಬಂಧವನ್ನು ಗಮನಿಸಬೇಕು. ನಾವು ಯುದ್ಧರಂಗದಲ್ಲಿ ಹೋಗಿ ನಿಂತಿದ್ದೇವೆ ಎಂಬ ಭಾವ ಬರುತ್ತದೆ. ಭೀಷ್ಮನ ಯುದ್ಧ ಕೌಶಲ್ಯವನ್ನು ಸಹಿಸಲಾರದೇ ಕೊನೆಗೆ ಕೃಷ್ಣ ಚಕ್ರ ಹಿಡಿಯುತ್ತಾನೆ. ಪ್ರತಿಜ್ಞೆಯಲ್ಲಿ ತಾನು ಗೆದ್ದೆನೆಂಬ ಭಾವದಿಂದ ಭೀಷ್ಮ ಶಸ್ತ್ರ ಬಿಟ್ಟು ಕೃಷ್ಣನಿಗೆ ನಮಸ್ಕರಿಸಿ ಸ್ತುತಿಸುತ್ತಾನೆ. ಅದನ್ನು ಕೇಳಿ ಕೃಷ್ಣ,

ನಚ್ಚಿದಾಲಿನ ಬಿನ್ನಹಕೆ ಹರಿ
ಮೆಚ್ಚೆ ಮನದಲಿ ನಾಚಿ ಚಕ್ರವ
ಮುಚ್ಚಿದನು ಮುರಿದನು ಕಿರೀಟಿಯ ರಥದ ಹೊರೆಗಾಗಿ
ಬೆಚ್ಚಿ ಬೆದರುವ ಸೇನೆಗಭಯವ
ಹಚ್ಚಿಕೊಟ್ಟನು ವೀರಭೀಷ್ಮನ
ನಿಚ್ಚಟದ ಭಕ್ತಿಯನು ನೆನೆನೆನೆದೊಲೆದ ಹರಿ ಶಿರವ
(
ಕರ್ಣಾಟ ಭಾರತ ಕಥಾಮಂಜರಿ, ಭೀಷ್ಮಪರ್ವ, ಪದ್ಯ, ೪೬)

ಇಲ್ಲಿ ‘ಚ’ ಕಾರದ ಪ್ರಾಸ ಮತ್ತು ಅನುಪ್ರಾಸಗಳು ನಾ’ಚಿ’ದುದನ್ನು ಚೆನ್ನಾಗಿ ಬಿಂಬಿಸುತ್ತವೆ. ಹೀಗೆ ಭಾಷಾಶೈಲಿ ಧ್ವನಿಯ ಸೂಚನೆಗಳನ್ನು ಉಪಯೋಗಿಸಿದೆ.

ಹೊಸಗನ್ನಡದಲ್ಲಿಯೂ ಈ ಪ್ರಕ್ರಿಯೆಯ ರೂಪರೇಷೆಗಳನ್ನು ಗುರುತಿಸಬಹುದು. ಬೇಂದ್ರೆಯವರ ಈ ಸಾಲುಗಳು ಮಗುವನ್ನು ಆಡಿಸುವ ಭಾವವನ್ನು ಕೊಡುತ್ತದೆ.

ನನ್ನ ಮದ್ದಾನೆಯೇ! ನಿನ್ನ ತೋಳ ಸೊಂಡಿಲಾಡಿಸಪ್ಪಾ
ಮಗುವೆ! ಆಡು ಆಡು.
ನನ್ನ ಪಾರಿವಾಳವೆ! ನಿನ್ನ ಗೋಣನ್ನಾಡಿಸಪ್ಪಾ
ಮಗುವೆ ಆಡು ಆಡು.
(‘
ಉಯ್ಯಾಲೆ‘, ೧೯೩೮. ‘ಆಡುಪದ್ಯ. ಪು. ೯೧)

ಇಲ್ಲಿ ಗೋಣು ಎಂಬ ಧಾರವಾಡ ಪ್ರದೇಶದ ಶಬ್ದ ಪ್ರಯೋಗ ಹಾಗೂ ಮುದ್ದು ಶೈಲಿಯನ್ನು ನೋಡಬೇಕು.

ಇಂದಿನ ಸುಶಿಕ್ಷಿತರಿಗೆ ಇಂಗ್ಲೀಷು ಕನ್ನಡದ ಒಂದು ಭಾಗವೇ ಆದಂತಾಗಿದೆ. ಕಾಲೇಜು ಮೊದಲಾದಂಥ ವಾತಾವರಣದಲ್ಲಿ ಅಂತೂ ಕನ್ನಡ ಪದಗಳಿದ್ದರೂ ಇಂಗ್ಲೀಷ ಪದಗಳನ್ನೇ ಬಳಸುವ ಜಾಯಮಾನವಿದೆ. ಉದಾಹರಣೆಗೆ ಬಿ. ಜಿ. ಎಲ್‌. ಸ್ವಾಮಿ ಅವರ ‘ಕಾಲೇಜು ರಂಗ’ದಲ್ಲಿಯ ಈ ಉದ್ಧರಣೆಯನ್ನು ನೋಡಿ.

ನನ್ನ ಡೈರೆಕ್ಟರನ್ನು ಖುದ್ದಾಗಿ ಕಂಡುಇದೇನು ಸ್ವಾಮಿ, ಅಕೆಡೆಮಿಕ್ದೃಷ್ಟಿಯೂ ಕಾಮನ್ಸೆನ್ಸೂ ಪ್ರಿನ್ಸಿಪಾಲರಿಗೆ ಇರಕೂಡದುಎಂದು ವಾದ ಹಾಕಿದ್ದೀರಲ್ಲ? ನಾನು ಸೈನ್ಸನ್ನೋದಿದವನು ಮೇಲಿನ ಎರಡು ಗುಣಗಳೂ ನಾನು ಓದಿರುವ ಸಬ್ಜೆಕ್ಟಿಗೆ ಅತ್ಯವಶ್ಯವಾಗಿ ಬೇಕಾದದ್ದು‘. (‘ಕಾಲೇಜು ರಂಗ‘, ೧೯೭೩)

ಇಲ್ಲಿ ಬಳಸಿದ ಎಲ್ಲ ಇಂಗ್ಲೀಷ್‌ ಶಬ್ದಗಳಿಗೂ ಕನ್ನಡದ ರೂಪ ಇದ್ದರೂ ಸಂದರ್ಭಕ್ಕೆ ತಮ್ಮಂತೆ ಇಂಗ್ಲೀಷ್‌ ಮಿಶ್ರಿತ ಶೈಲಿ ಬಳಕೆಯಾಗಿದೆ. ಅದೇ ಕೃಷ್ಣಾನಂದ ಕಾಮತರ ‘ನಾನೂ ಅಮೇರಿಕೆಗೆ ಹೋಗಿದ್ದೆ’ಯಲ್ಲಿ ಇಂಗ್ಲೀಷ್‌ ಬಳಸಬಹುದಾದ ಸಂದರ್ಭವಿದ್ದರೂ ಅವರ ಬಳಸಿಲ್ಲ. ನೋಡಿ,

ನಾನು ಭಾರತೀಯರು. ಅರಾಮಶೂರರು. ಹೊಟ್ಟೆ ತುಂಬ ಅನ್ನ, ಮೈತುಂಬ ಬಟ್ಟೆಗಳಿಲ್ಲದಿದ್ದರೂ ಸುಖವಾಗಿ ಹೇಗಿರಬೇಕು ಎಂಬ ದಿವ್ಯ ಮಂತ್ರ ಕಲಿತವರು. ನಿಮ್ಮಂತೆ ಹಗಲು ರಾತ್ರಿ ದುಡಿದು ಸುಖವನ್ನು ಬೆನ್ನಟ್ಟಿಕೊಂಡು ಹೋಗುವವರಲ್ಲ. ಇದ್ದುದರಲ್ಲಿಯೇ ಸುಖಿಯಾಗಿರಬೇಕೆನ್ನುವವರು‘. ( ‘ನಾನೂ ಅಮೇರಿಕೆಗೆ ಹೋಗಿದ್ದೆ೧೯೭೯)

ಇಲ್ಲಿ ಇಂಗ್ಲೀಷ್‌ ಬಳಸಬಹುದಾದ ಪ್ರಬಲ ಸನ್ನಿವೇಶವಿದ್ದರೂ ಕನ್ನಡವನ್ನೇ ಬಳಸಲಾಗಿದೆ. ಒಮ್ಮೊಮ್ಮೆ ಇಂಥ ಪ್ರವೃತ್ತಿಗಳು ಸಾಹಿತ್ಯೇತರ ಮನೋವೃತ್ತಿಯನ್ನು ಹೇಳುತ್ತವೆ. ಹೀಗೆ ಶೈಲಿವಿಜ್ಞಾನದ ವಿವಿಧ ಆಯಾಮಗಳನ್ನು ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ನೋಡುವುದರಿಂದ ಕೆಲವು ಹೊಸ ತಿಳುವಳಿಕೆ, ಪರಿಜ್ಞಾನಗಳು ಮೂಡಬಲ್ಲವು. ಇಲ್ಲಿ ಆ ವಿಶಾಲ ಕ್ಷೇತ್ರದ ಅಧ್ಯಯನದ ಸಾಧ್ಯತೆಗಳನ್ನೂ ದಿಕ್ಕುಗಳನ್ನೂ ಇಲ್ಲಿ ತೆರೆದು ತೋರಿಸಲಾಗಿದೆ.