ಇನ್ನು ಹೊಸಗನ್ನಡಕ್ಕೆ ಬಂದರೆ ಅಲ್ಲಿ ಪ್ರಾದೇಶಿಕ ಶಬ್ದಗಳ ಗೂಡಾರವೇ ಬಿಚ್ಚುತ್ತದೆ. ಕೆಲವು ಲೇಖಕರು ಬಳಕೆಯಲ್ಲಿರುವ ಪದಗಳನ್ನು ಬಳಸಲು ಹಿಂಜರಿಯುತ್ತಾರೆ. ಬಹುಶಃ ಗ್ರಂಥಸ್ಥ ಪ್ರಕಾರವೇ ಸಾಧು, ಆಡು ಪ್ರಕಾರ ಅಸಂಸ್ಕೃತವಾದುದು ಎಂಬ ನಂಬುಗೆಯೂ ಇರಬಹುದು. ಈ ನಂಬುಗೆಯನ್ನು ಗಾಳಿಗೆ ತೂರಿದಂತೆ ರಾಮಚಂದ್ರ ಕೊಟ್ಟಲಗಿ ಅವರು ‘ದೀಪಹತ್ತಿತು’ (ಭಾಗ, ೨. ೧೯೬೮) ಎಂಬ ಕಾದಂಬರಿಯ ಎರಡು ಭಾಗಗಳಲ್ಲಿ ಧಾರವಾಡ ಕಡೆಯ ಮರಾಠಿ ಮಿಶ್ರಿತ ಬ್ರಾಹ್ಮಣರ ಭಾಷೆಯ ಪದಗಳನ್ನು ವಿಫುಲವಾಗಿ ಬಳಸುತ್ತಾರೆ. ಉದಾಹರಣೆಗೆ ನೋಡಿ,

ದಶಮಿ ಚಪಾತಿ
ಬಿನ್‌ಖರ್ಚು ಖರ್ಚಿಲ್ಲದ
ಟಾಕು ಲೆಕ್ಕಣಿಕೆ
ಕಾಯಂತರೀಕ ಕಾಯಂ ಆಗಿ
ಕಮಾಯ್‌ ಗಳಿಕೆ
ಫುಕಟ ಪುಕ್ಕಟೆ
ಬಾತಮಿ ಸುದ್ದಿ
ಢಕಲಾಯಿಸು ತಳ್ಳು
ಪುಷ್ಕಳ ಬಹಳ
ಬಾರದಾನ ಗೋಣಿ ಚೀಲ
ಟಿಬಿಕಿ ದಾಟು ಹೊಲಿಗೆ
ಚಲಾಯಿಸು ನಡೆಸು
ತಾರೀಫು ಹೊಗಳಿಕೆ
ಜಮಾಯಿಸು ಒಟ್ಟಾಗಿ ಸೇರು
ಶಂಭರ ನೂರು
ಫೇರೀ ಸುತ್ತುವಿಕೆ
ಶಿಕೋಣಿ ಮನೆಪಾಠ
ಖರೇ ನಿಜ

ಇಂಥ ಪುಷ್ಕಳ ಶಬ್ದಗಳು ಅಲ್ಲಿ ದೊರೆಯುತ್ತವೆ. ಎಂ. ಕೆ. ಇಂದಿರಾ ಅವರ ‘ಫಣಿಯಮ್ಮ’ ಕಾದಂಬರಿಯಲ್ಲಿಯೂ ಇಂಥ ಪ್ರಾದೇಶಿಕ ಪದಗಳು ದೊರೆಯುತ್ತವೆ.

ಲಾಳಸಂಕೋಲೆ ಡಿಪ್ತೀರಿಯಾ
ಗ್ಯಾನ ಎಚ್ಚರ
ಒದರು ಜಾಡಿಸು, ಕೊಡವು
ಒಂದಪ ಒಂದು ಸಲ
ಚೌಕಾಬಾರಾ ಒಂದು ಆಟ
ಈ ಪಾಟಿ ಇಷ್ಟೊಂದು
ಬಹುತೇಕ ಬಹುಶಃ
ಸಂವರಣೆ ಸಾವರಿಸುವಿಕೆ

ಇದೇ ರೀತಿಯ ಪದಗಳು ಅವರ ‘ಸದಾನಂದ’ ಕಾದಂಬರಿಯಲ್ಲಿಯೂ ದೊರೆಯುತ್ತವೆ. ಹೀಗೆ ಇವರ ಭಾಷೆಯಲ್ಲಿ ತೀರ್ಥಹಳ್ಳಿಯ ಸುತ್ತಲಿನ ವಿಶಿಷ್ಟ ಪದಪ್ರಯೋಗಗಳು ದೊರೆಯುತ್ತವೆ. ಈ ರೀತಿ ಅನೇಕ ಕೃತಿಗಳಲ್ಲಿ ಆಯಾ ಪ್ರದೇಶ ವಿಶಿಷ್ಟ ಪದಗಳು ದೊರೆಯುತ್ತವೆ.

೧೦.. ಧರ್ಮ ವಿಶಿಷ್ಟ ಪದಪ್ರಯೋಗ

ಪಂಪ, ರನ್ನ, ಪೊನ್ನರು ಜೈರಾಗಿದ್ದುದರಿಂದ ಅವರ ಕಾವ್ಯಗಳಲ್ಲಿ, ವಿಶೇಷವಾಗಿ ತೀರ್ಥಂಕರರ ಚರಿತ್ರೆಗಳಲ್ಲಿ, ಜೈನ ಧರ್ಮದ ಪರಿಭಾಷೆ ವಿಫುಲವಾಗಿ ಬಳಕೆಯಾಗುತ್ತದೆ. ಉದಾಹರಣೆಗೆ ಆದಿಪುರಾಣದಲ್ಲಿ ಬರುವ ಈ ಪದಗಳನ್ನು ಗಮನಿಸಿ,

ರತ್ನ ಚಕ್ರ ರತ್ನ
ಅಧರ್ಮ ಷಡ್ದ್ರವ್ಯಗಳಲ್ಲೊಂದು
ಈಶಾನ ಕಲ್ಪ ಎರಡನೆಯ ಸ್ವರ್ಗ
ಉಪಾಸಕ ಜೈನ ಗೃಹಸ್ಥ
ಕೇವಲಜ್ಞಾನ ಕೇವಲ ಬೋಧ
ಗಣಧರ ದೇವರು ಪ್ರಧಾನ ಶಿಷ್ಯರು
ಕಲ್ಪ ಸ್ವರ್ಗ
ಚಕ್ರಧರ ಚಕ್ರವರ್ತಿ
ಋದ್ಧಿ ತಪಸ್ಸಿದ್ಧಿ
ಆಸ್ರವ ಒಂದು ತತ್ತ್ವ
ಕೈವಲ್ಯಲಕ್ಷ್ಮಿ ಕೇವಲಿ ಪದ
ನಿರ್ಜರಾ ಕರ್ಮ ನಿರ್ಜರೆ

ವೀರಶೈವ ಧರ್ಮದ ಸ್ಪಷ್ಟ ತಿಳುವಳಿಕೆಗಾಗಿ ಮತ್ತು ಅದನ್ನು ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿ ಕೆಲವು ಹೊಸ ಪದಗಳನ್ನು ಸೃಷ್ಟಿಸಿಕೊಳ್ಳಲಾಗಿದೆ. ಹಾಗೆ ಹೊಸ ಪದಗಳ ಸೃಷ್ಟಿ ಅಗತ್ಯವಿಲ್ಲವೆನಿಸಿದಾಗ ಇದ್ದ ಪದಗಳಿಗೇ ಹೊಸ ಅರ್ಥ ಸಂಪತ್ತಿಯನ್ನು ಕೊಡುವ ಪ್ರಕ್ರಿಯೆಯೂ ನಡೆದಿದೆ. ಕೆಳಗಿನ ಪದಗಳನ್ನು ಗಮನಿಸಿರಿ:

ಅಗ್ಘವಣಿ ಅರ್ಘ್ಯಪಾನೀಯ
ಅಜಪೆ ಹಂಸವೆಂಬ ಮಂತ್ರ
ಅಡಿಯ ದಾಸ
ಅನಾಯತ ಆಕ್ರಮ
ನೋಂಪಿ ವ್ರತ
ಶಿವಕಳೆ ವಿಭೂತಿ
ಲಿಂಗವೇದಿ ದೇವರನ್ನು ತಿಳಿದವ
ಅಂಗವಣಿ ಧೈರ್ಯ,
ಅಂಜನ ದೋಷ, ಅಂಟು
ಅನಂಗಸಂಗಿ ಕಾಮವಿಕಾರಿ
ಉದಮದ ಸೊಕ್ಕು
ಪ್ರಮಾಣು ಸಾಕ್ಷಿ
ಶಿವದಾನ, ಶಿವರಸ ಮಜ್ಜಿಗೆ
ಪವನಭೇದ (ಇಡಾ, ಪಿಂಗಳಾ ಎಂಬ) ಉಸಿರಿನ ಭೇದ
ಪ್ರಸಾದ (ಅಷ್ಟಾವರಣದಲ್ಲಿ ಒಂದು) ಭಕ್ತರಿಂದ ಬಂದ ಆಹಾರ
ಪ್ರಸಾದಿ ಆಧ್ಯಾತ್ಮದ ಒಂದು ಸ್ಥಿತಿ ಮುಟ್ಟಿದವ
ಲಿಂಗಸಾರಾಯ ಲಿಂಗದ ಸಾರವನ್ನು ತಿಳಿದುಕೊಂಡವ
ಶಬ್ದಕ್ರಿ ಮಾತಿನಲ್ಲಿ ತಿಳಿಯುವ ಕ್ರಿಯೆ
ಶವಧೋ ಶಿವನನ್ನು ಕುರಿತು ಮೊರೆಯಿಡುವದು
ಕಾಲತ್ರಯ ಅತೀತ, ಅನಾಗತ, ವರ್ತಮಾನ
ತತ್ವಮಸಿ ತತ್‌ ಅಂದರೆ ಲಿಂಗ, ತ್ವಂ ಅಂದರೆ ಅಂಗ, ಅಸಿ ಅಂದರೆ ಐಕ್ಯ
ಈಷಣತ್ರಯ ಪುತ್ರೇಷಣ, ವಿತ್ತೇಷಣ, ದಾರೇಷಣ

ಇಂತಹ ಅನೇಕ ಶಬ್ದಗಳಿವೆ. ಅವೆಲ್ಲವನ್ನೂ ಪಟ್ಟಿ ಮಾಡುವದಕ್ಕಿಂತ ಅವುಗಳನ್ನು ಲಕ್ಷಣಿಸಲು ಕೆಲವನ್ನು ಇಲ್ಲಿ ಉದ್ಧರಿಸಲಾಗಿದೆ. ಅವುಗಳ ಮುಂದೆ ಕೊಟ್ಟ ಅರ್ಥಗಳಲ್ಲಿ ಈ ಶಬ್ದಗಳ ಪ್ರಯೋಗ ವೀರಶೈವ ವಚನಕಾರರಲ್ಲಿ ಪ್ರಚಲಿತವಿದೆ. ಕೆಲವು ಶಬ್ದಗಳು ಬೇರೆಡೆಗೂ ಪ್ರಯೋಗವಾಗುತ್ತವೆಯೆಂಬುದೂ ನಿಜ. ಆದರೆ ಇಲ್ಲಿ ಅವು ವಿಶಿಷ್ಟವಾದ ಅರ್ಥ ಹೊಂದಿವೆ ಎಂಬುದನ್ನು ಗಮನಿಸಬೇಕು. ಉದಾಹರಣೆಗೆ ನೋಂಪಿ = ವ್ರತ ಮೊದಲಾದ ಕೆಲವು ಶಬ್ದಗಳು ಬೇರೆಡೆಗು ಲಭ್ಯವಾಗಬಹುದಾದರೂ ವಚನಸಾಹಿತ್ಯದಲ್ಲಿ ಅದು ವಿಶಿಷ್ಟ ಮಹತ್ತ್ವದೊಂದಿಗೆ ಪ್ರಯೋಗವಾಗುತ್ತಿದೆ ಎಂಬುದನ್ನು ಕೆಳಗಿನ ವಚನದಲ್ಲಿಯ ‘ನೋಂಪಿ’ ಪ್ರಯೋಗದಲ್ಲಿ ಗಮನಿಸಬಹುದು :

            ಪುರಷದ ಹೊರೆಯಲ್ಲಿ ಕಬ್ಬುನವಿರ್ದು ಹೊನ್ನಾಯಿತ್ತು
ನೋಡಿರೇ;
ಅವ್ವಾ ಚಂಗಳೇ, ನೀನಿದ್ದೇಳು ಕೇರಿಯವರು
ಲಿಂಗದ ನೋಂಪಿಯ ನೋಂತರೆ? ಹೇಳಾ;
ಕೂಡಲ ಸಂಗಮ ದೇವಂಗೆ
ಚೀಲಾಳನೆಂಬ ಬಾಯಿನವನಿಕ್ಕಿದರೇ? ಹೇಳಾ.
(
ಬಸವಣ್ಣನವರ ಷಟ್ಸ್ಥಲದ ವಚನಗಳು, . ೧೫೨)

ಹೀಗೆ ವಚನ ಸಾಹಿತ್ಯದಲ್ಲಿ ಪ್ರಯೋಗವಾಗುವ ಶಬ್ದಗಳ ವಿಶಿಷ್ಟ ಅರ್ಥ ಸಂಪತ್ತಿಯನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡುವದು ಸಾಧ್ಯವಿದೆ.

ಮೇಲಿನ ‘ಪದ’ ಶಬ್ದದ ಚರ್ಚೆಯಿಂದ ಮತ್ತು ಉದಾಹರಣೆಗಳಿಂದ ವಚನಗಳಲ್ಲಿ ಬಳಸಿದ ಪದಗಳು ಆಯಾ ಸಂದರ್ಭದಲ್ಲಿ ಅಯಾ ಅರ್ಥ ಕೊಡುತ್ತವೆ ಎಂಬುದನ್ನು ನೋಡಬಹುದು. ಅವುಗಳಿಗೆ ಪರಂಪರೆಯಿಂದ ಬಂದ ಅರ್ಥವೂ ಇದೆ. ಇದನ್ನು ನೋಡಿದಾಗ ಐ. ಆರ್. ಗಾಲ್ಪರಿನ್‌ ಅವರು ಕೊಡುವ ‘ಪದ’ದ ಕೆಳಗಿನ ವ್ಯಾಖ್ಯೆ ನಿಜ ಎಂಬ ಅರಿವಾಗುತ್ತದೆ. ವ್ಯಾಖ್ಯೆಯನ್ನು ನೋಡಿ:

A word can be defined as a unit of language functioning within the sentence or within a part of it which by its sound of graphical form expresses a concrete or abstract notion or a grammatical notion through one of its meanings and which is capable of enriching its semantic structure by acquiring new meanings and losing old ones.

ಇಲ್ಲಿ ಹೇಳಿದ ಮಾತುಗಳು ವಚನ ಸಾಹಿತ್ಯದ ಅಭಿವ್ಯಕ್ತಿಯನ್ನು ಗಮನಿಸಿದರೆ ನಿಜವೆನಿಸುತ್ತದೆ. ಕೆಲವು ಶಬ್ದಗಳು ಅವ್ಯಾಕೃತವೆನಿಸಿದರೂ ಅವು ಬಹುಜನರ ಪ್ರಯೋಗದಿಂದ ಸಾದುವೆನಿಸುತ್ತವೆ. ಉದಾಹರಣೆಗೆ ‘ಲಿಂಗಸಾರಾಯ’ ಅಂದರೆ ‘ಲಿಂಗದ ಸಾರವನ್ನು ತಿಳಿದುಕೊಂಡವನು’ ಎಂಬ ಸಮಸ್ತಪದದ ವ್ಯುತ್ಪತ್ತಿಯನ್ನು ಕೊಡುವುದು ಕಷ್ಟ. ಅದೇ ಪ್ರಕಾರ ‘ತತ್ತ್ವಮಸಿ’ಯ ಅರ್ಥ ವಚನಕಾರರ ವಿಶಿಷ್ಟ ರೀತಿಯಲ್ಲಿದೆ. ಇದುವರೆಗೆ ಇದ್ದ ಪ್ರಸಿದ್ಧ ಅದ್ವೈತ ತತ್ತ್ವಜ್ಞಾನದ ಅರ್ಥ ಒಂದು ಕಡೆಗಾದರೆ ವೀರಶೈವ ಶರಣರು ಕೊಡುವ ಅರ್ಥ ‘ತತ್‌ = ಲಿಂಗ, ತ್ವಂ = ಅಂಗ, ಅಸಿ = ಐಕ್ಯ’ ಎಂದು. ಹೀಗೆ ವೈಯಾಕರಣರಿಗೂ ವಚನಗಳ ಭಾಷೆ ಅನೇಕ ಸಮಸ್ಯೆಗಳನ್ನು ಒಡ್ಡುತ್ತದೆ. ಆದರೆ ‘ವೈಯಾಕರಣರು ಪ್ರಯೋಗ ಶರಣ’ರಾದುದರಿಂದ ಮತ್ತು ವಚನಗಳ ಭಾಷೆ ಅನೇಕ ವಚನಕಾರರಿಂದ ಪ್ರಯೋಗವಾಗಿರುವುದರಿಂದ ಅವುಗಳಿಗೆ ಸೂಕ್ತ ವ್ಯುತ್ಪತ್ತಿಯನ್ನು ನೀಡುವದೇ ವೈಯಾಕರಣರ ಕತ್ಯವ್ಯವಾಗುತ್ತದೆ.

ನಡುಗನ್ನಡದ ಕಾಲದಲ್ಲಿ ಬ್ರಾಹ್ಮಣ, ವೀರಶೈವ ಮತ್ತು ಜೈನ ಧರ್ಮದ ಕವಿಗಳು ಕಾವ್ಯ ರಚಿಸಿದ್ದಾರೆ. ಕುಮಾರವ್ಯಾಸ, ಕುಮಾರ ವಾಲ್ಮೀಕಿ, ತಿಮ್ಮಣ್ಣ, ಲಕ್ಷ್ಮೀಶ, ತಿರುಮಲಾರ್ಯ, ಕೆಂಪುನಾರಾಯಣ ಮೊದಲಾದ ಪ್ರಮುಖ ಬ್ರಾಹ್ಮಣ ಕವಿಗಳ ಹೆಸರುಗಳು ಕೇಳಿಬಂದರೆ ಚಾಮರಸ, ವಿರೂಪಾಕ್ಷ ಪಂಡಿತ, ಗುಬ್ಬಿಯ ಮಲ್ಲಣಾರ್ಯ, ಷಡಕ್ಷರದೇವ, ಸರ್ವಜ್ಞ, ನಿಜಗುಣ ಶಿವಯೋಗಿ ಮೊದಲಾದ ಪ್ರಮುಖ ವೀರಶೈವ ಕವಿಗಳ ಹೆಸರುಗಳು ಕೇಳಿಬರುತ್ತವೆ. ಅಲ್ಲದೇ ರತ್ನಾಕರವರ್ಣಿ, ಸಾಳ್ವ, ಶಿಶುಮಾಯಣ, ಭಾಸ್ಕರ, ದೇವಚಂದ್ರ ಮೊದಲಾದ ಪ್ರಮುಖ ಜೈನ ಕವಿಗಳ ಹೆಸರುಗಳೂ ಕೇಳಿಬರುತ್ತವೆ. ಇವರೆಲ್ಲ ತಮ್ಮ ಕಾವ್ಯಗಳಲ್ಲಿ ತಮ್ಮ ಧರ್ಮದಲ್ಲಿ ಪ್ರಚಲಿತವಿರುವ ವಸ್ತುವನ್ನು ಕುರಿತು ಕಾವ್ಯರಚನೆ ಮಾಡಿದ್ದಾರೆ. ಆ ಕ್ರಿಯೆಯಲ್ಲಿ ತಮ್ಮ ಧರ್ಮದಲ್ಲಿ ಪ್ರಚಲಿತವಿರುವ ಪದಗಳನ್ನೂ ಪ್ರಯೋಗಿಸಿದ್ದಾರೆ. ಮಹಾಭಾರತ ರಾಮಾಯಣದಂಥ ಧರ್ಮನಿರಪೇಕ್ಷ ವಸ್ತುಗಳ ನಿರೂಪಣೆಯಲ್ಲಿಯೂ ತಮ್ಮ ಧರ್ಮದ ಛಾಯೆ ನುಸುಳುವುದುಂಟು.

ಇದೇ ಕಾಲದಲ್ಲಿದ್ದ ಕನಕದಾಸರು ಜಾತಿಯಿಂದ ಬೇಡನಾದರೂ ವೈಷ್ಣವ ಧರ್ಮವನ್ನು ಸ್ವೀಕರಿಸಿ ತನ್ನ ಸಮಕಾಲೀನರಾದ ವ್ಯಾಸರಾಯ, ಪುರಂದರದಾಸ ಮೊದಲಾದವರಿಗಿಂತ ಏನೂ ಕಡಿಮೆಯಿಲ್ಲದ ಕಾವ್ಯ ರಚಿಸಿದರು. ಅವರು ಪ್ರಮುಖ ರಚನೆಗಳಾದ ‘ಮೋಹನ ತರಂಗಿಣಿ’, ‘ನಳಚರಿತ್ರೆ’ಗಳು ಸಾಂಗತ್ಯದಲ್ಲಿ ಸುಂದರ ಗೇಯ ಕಾವ್ಯಗಳಾಗಿವೆ. ತನ್ನ ಮತವನ್ನು ಸಂಪೂರ್ಣ ಬದಲಾಯಿಸಿಕೊಂಡು ‘ಇವನು ಹುಟ್ಟಿನಿಂದ ಬೇಡ ಜಾತಿಯವನಾರಲು ಸಾಧ್ಯವೇ?’ ಎಂದು ಗಂಭೀರವಾಗಿ ಪ್ರಶ್ನಿಸುವಷ್ಟು ಪ್ರೌಢ ವೈಷ್ಣವನಾಗಿದ್ದಾನೆ. ಕನಕದಾಸರ ಉದಾಹರಣೆಯನ್ನು ನೋಡಿದರೆ ಧರ್ಮವೆಂಬುದು ಮಾನಸಿಕ ಸ್ಥಿತಿಯೇ ಹೊರತು ಬೇರೇನೂ ಅಲ್ಲ ಎಂಬ ಮಾತು ಸಿದ್ಧವಾಗುತ್ತದೆ.

ಹೊಸಗನ್ನಡದಲ್ಲಿ ಮತವಾಗಲಿ ಮತದ ಬಗೆಗೆ ವಿಚಾರವಾಗಲಿ ಪ್ರಮುಖವಾಗುವುದಿಲ್ಲ. ಆದರೆ ಕವಿತೆಯಲ್ಲಿ ಭಾವಭಿವ್ಯಕ್ತಿಯೇ ಪ್ರಧಾನವಾಗಿರುವಾಗ ಭಾಷೆ ಒಂದು ಮಾಧ್ಯಮವಾಗಿ ಅಲ್ಲಿ ಗ್ರಂಥಸ್ಥ ಪ್ರಯೋಗಗಳು ಬರಬಹುದು, ಆಡು ನುಡಿಯ ಪ್ರಯೋಗಗಳೂ ಬರಬಹುದು, ಅಥವಾ ಕಲ್ಪಿತ ರೂಪಗಳೂ ಬರಬಹುದು. ಉದಾಹರಣೆಗೆ ಜಿನದತ್ತ ದೇಸಾಯಿ ಅವರ ಕವಿತೆಗಳಲ್ಲಿ ಈ ಮೂರೂ ಪ್ರಕಾರಗಳನ್ನು ಕಾಣುತ್ತೇವೆ.

ಹೆದರಿ ಸಾಯುವ ಹೇಡಿಗಳ ನಾ ನೋಡಲಾರೆ, ನಾ ಮೆಚ್ಚುವದು
ಬದುಕುವ ಬಂಟರನ್ನು‘.
ಇಂಥ ಗ್ರಾಂಥಿಕ ಸಾಲುಗಳೂ
ನಮ್ಮ ನಿಮ್ಮಂತೆ ದೊಡ್ಡವರಲ್ಲ, ಆಡಿದ ಜಗಳ ಮುಂದವರಿಸಲಿಕ್ಕೆ‘,
ಇಂಥ ಆಡುಭಾಷಾ ಶೈಲಿಯೂ,
ಎಳೆಗಳನು, ಕಂಪನಕೆ, ಇರುಳಿನಲಿ
ಮೊದಲಾದ ಪದಗಳಲ್ಲಿ ಕವಿತೆಗಾಗಿ ಕಲ್ಪಿಸಿದ ರೂಪಗಳನ್ನು ಕಾಣಬಹುದು.
(‘
ಗುಣಾರ್ಣವ೨೦೦೮, ದಿಂದ)

ಈ ರೀತಿಯಲ್ಲಿ ಭಿನ್ನ ಭಿನ್ನ ಲಕ್ಷಣಗಳು ಅನೇಕರಲ್ಲಿ ಕಾಣುತ್ತವೆ.

ಪರಂಪರೆಯನ್ನು ವಿರೋಧಿಸುವ ಕೆಚ್ಚಿನಲ್ಲಿ ಗೋಪಾಲಕೃಷ್ಣ ಅಡಿಗರ ಭಾಷೆ ಅಗತ್ಯಕ್ಕಿಂತ ಹೆಚ್ಚು ಮಾತುಗಳನ್ನೊಳಗೊಂಡಿರುತ್ತದೆ ಎಂದೆನಿಸುತ್ತದೆ. ಕೆಳಗಿನ ಉದ್ದಹರಣೆಯನ್ನು ನೋಡಿ.

ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು:
ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ
ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ
ಅಳ್ಳಳ್ಳಾಯಿ ಜಪಿಸುವ ಬಿಸಿಲ ಕೋಲಿಗೆಗರಿ ತೆಕ್ಕಾಮುಕ್ಕಿ
ಹಾಯುತ್ತಿದೆ ತುಳಸಿ ವೃಂದಾವನದ ಹೊದರಿಗೂ
            ( ‘ಭುಮಿಗೀತ‘ (೧೯೫೯) ದಲ್ಲಿಭೂತಎಂಬ ಪದ್ಯ)

ಕಥೆ ಅಥವಾ ಕಾದಂಬರಿಗಳಲ್ಲಿಯೂ ಕಲ್ಪಿಸಿದ ಕಥೆಯ ಅಭಿವ್ಯಕ್ತಿಯಲ್ಲಿ ಭಾಷೆಯ ಸ್ವರೂಪದಿಂದ ಅವರವರ ಧರ್ಮ ಒಮ್ಮೊಮ್ಮೆ ವ್ಯಕ್ತವಾಗುವುದುಂಟು.

ರಂ. ಶಾ. ಲೋಕಾಪುರ ಅವರ ಕಾದಂಬರಿಯಲ್ಲಿಯ ಈ ಸಂಭಾಷಣೆಯನ್ನು ಗಮನಿಸಿ,

ಗಡಾನs ಒಂದು ಮಾತು ಕೇಳೇ ಬಿಡ್ರಿ, ಹದನ ದಿನಾ ಆತು ಬಂದು. ಇನ್ನ ಏಸು ದಿನಾ ಹಾದೀ ನೋಡೋದು?’ ರುಕ್ಕವ್ವ ಕೇಳಿದಳು
ನಿಂದು ಖರೇ ರುಕ್ಕವ್ವ, ಆದರ ಪಟ್ಟನs ಇಲ್ಲಾ ಅಂದರs ಏನು ಮಾಡೋದು‘?
ರಾಧವ್ವ ಯಾವ ಮಾರೀಲೆ ಇಲಂದಾರು? ನೀವೂ ಗೋವಿಂದಪ್ಪ ಅವರ್ನ ರಾಜಾ ರಾಣಿ ಹಾಂಗ ಇಟ್ಟೇರಿ. ಪಲ್ಲಕ್ಕ್ಯಾಗ ಕುಂಡರಿಸೋದೊಂದೇ ಉಳದೇತಿ‘.
ಅಷ್ಟರಲಿ ದೊಡ್ಡವರ ಕಾಲು ಹೆಜ್ಜೆ ಸದ್ದಾದಂತಾಯಿತು. ಗೋವಿಂದಪ್ಪ ಇಷ್ಟು ಬೇಗ ಬಂದಿರಬೇಕೇನು ಎನಿಸಿತು ನರ್ಮದೆಗೆ.
ಅವ್ವಾ ನನಗ ಹಸಿವಿ ಆಗೇದ. ತಿನ್ನಲಿಕ್ಕೆ ಕೊಡು‘. ನಾರಾಯಣನ ದನಿ.
ಯಾವಾಗ ಹೋಗೀದಿ ಮುಂಜಾನೆ. ಊಟದ ಹೊತ್ತಿಗರೇ ಬರಬಾರದೂ? ‘
(‘
ತಾಯೀಸಾಹೇಬ‘ (೧೯೭೨) ಕಾದಂಬರಿ)

ಮೇಲಿನ ಸಂಭಾಷಣೆಯಲ್ಲಿ ನರ್ಮದೆ ಮತ್ತು ನಾರಾಯಣರು ಬ್ರಾಹ್ಮಣರು : ರುಕ್ಕವ್ವ ಬ್ರಾಹ್ಮಣೇತರಳು ಎಂದು ತಿಳಿದುಬರುತ್ತದೆ. ರುಕ್ಕವ್ವನ ಮಾತಿನಲ್ಲಿಯ ಗಡಾನs, ಹದನ, ಏಸು, ಕುಂಡರಿಸು ಎಂಬ ಶಬ್ದಗಳೇ ಸಾಕು ಈ ಸೂಚನೆಗೆ. ನರ್ಮದೆ ಮತ್ತು ನಾರಾಯಣರ ಮಾತಿನಲ್ಲಿಯ ಖರೇ, ಆಗೇದ, ಹೊತ್ತಿಗೆರೆ ಎಂಬ ಶಬ್ದಗಳೂ ‘ಯಾವಾಗ ಹೋಗೀದಿ ಮುಂಜಾನೆ’ ಎಂಬ ವಾಕ್ಯದ ಶೈಲಿಯೂ ಅವರು ಬ್ರಾಹ್ಮರೆಂದು ಹೇಳುತ್ತವೆ. ಅಲ್ಲದೇ ‘ಅಷ್ಟರಲ್ಲಿ. . . .’ ಎಂಬ ಗ್ರಂಥಿಕ ಶೈಲಿಯ ಸಾಲನ್ನೂ ನೋಡಬಹುದು. ಹೀಗೆ ಸ್ವಾಭಾವಿಕವಾಗಿ ಚಿತ್ರಿಸಲ್ಪಟ್ಟ ದೃಶ್ಯಗಳಲ್ಲಿ ಭಾಷಾಶೈಲಿ ಧರ್ಮವನ್ನು ಸೂಚಿಸಿಯೇ ಬಿಡುತ್ತದೆ.

ಇನ್ನು ಕೆಲವು ಲೇಖಕರು ಎಲ್ಲ ಸನ್ನಿವೇಶಗಳಲ್ಲಿ ಗ್ರಂಥಿಕ ಭಾಷೆಯನ್ನು ಬಳಸಿರುವುದರಿಂದ ಈ ಸೂಚನೆ ಸಿಗುವ ಸಾಧ್ಯತೆ ಇಲ್ಲ. ವಿ. ಎಂ. ಇನಾಂದಾರರಂಥ ಪ್ರಸಿದ್ಧ ಲೇಖಕರು ಉದ್ದೇಶ ಪೂರ್ವಕವಾಗಿ ಗ್ರಾಂಥಿಕ ಶೈಲಿಯನ್ನು ಎಲ್ಲ ಕಡೆ ಬಳಸುತ್ತಾರೆ. ನೋಡಿ,

ಇನ್ನೊಬ್ಬರು ಹೀಗೆ ಎಂದುಕೊಂಡು ನಾನು ನನಗೆ ಅನಿಸಿದ್ದನ್ನು ಬರೆಯುವುದನ್ನು ನಿಲ್ಲಿಸಬೇಕಾಗಿತ್ತೆ ‘?
ಯಾಕೆ? ಹಾಗೆಲ್ಲ ಬರೆದರೆ ಮನಸ್ಸಿಗೆ ಸಮಾಧಾನವೆ ‘?
ನಿನಗಿಲ್ಲವೇನೋ‘!
ಅಂತೆಯೇ ಸುಮ್ಮನಿರುತಿದ್ದೆ. ಆದರೆ ಇನ್ನೊಬ್ಬರು ಓದಿರಬಹುದು ಎಂದಾಗ ಮಾತ್ರ ತೀರಾ ನಾಚಿಕೆಯಾಗುತ್ತಿತ್ತು.’
ಯಾರು ಓದುತ್ತಿದ್ದರು ‘?
ಇವರಿಗಾಗಿ ಓದುತ್ತಿದ್ದವಳು, ಲಕ್ಷ್ಮೀಬಾಯಿ, ಆಕೆಯ ಮಗಳು.’
ಸರಿಯಾಯಿತಲ್ಲ ಮತ್ತೆ!’
(‘
ಸ್ವರ್ಗದ ಬಾಗಿಲು೧೯೬೬ರ ಮರುಮುದ್ರಣ)

ಮೇಲಿನ ಸಂಭಾಷಣೆಯಲ್ಲಿ ತೊಡಗಿದ ವ್ಯಕ್ತಿಗಳು ಯಾವ ಧರ್ಮಗಳಿಗೆ ಸಂಬಂಧಪಟ್ಟವರು ಎಂದು ಊಹಿಸಲು ಸಾಧ್ಯವಾಗುವುದಿಲ್ಲ.