ಎಲ್ಲ ಆಭಿವ್ಯಕ್ತಿ ಮೂಲತಃ ಪದಗಳಿಂದ ರೂಪಗೊಳ್ಳುವದರಿಂದ ಬರಹಕಾರರು ಬಳಸಿದ ಪದಗಳ ವೈಶಿಷ್ಟವೇನು ಎಂಬುದನ್ನು ವಿಶ್ಲೇಶಿಸುವದು ಆಭಿವ್ಯಕ್ತಿಯ ಮೇಲೆ ವಿಶೇಷ ಬೆಳಕು ಚೆಲ್ಲುತ್ತದೆ. ಪೂರ್ವದ ಕನ್ನಡ ಸಾಹಿತ್ಯ ಕಾವ್ಯವೇ ಆಗಿದ್ದುದರಿಂದ ಕಾವ್ಯಕ್ಕೆ ಇರುವ ಛಂದಸ್ಸು ಅಲಂಕಾರ ಮೊದಲಾದವುಗಳ ಕಟ್ಟುನಿಟ್ಟಿನೊಳಗೆ ಕಾವ್ಯವನ್ನು ನೋಡಬೇಕಾಗುತ್ತದೆ. ಹೀಗಾಗಿ ಪದಗಳ ಬಳಕೆಯಲ್ಲಿ ಸ್ವಾಭಾವಿಕವಾದ ನಿರ್ಭಂಧ ಕಂಡುಬರುತ್ತದೆ. ಇವೆಲ್ಲ ಸೀಮಾಬಂಧನಗಳೊಳಗೆ ಪದಗಳ ವೈಶಿಷ್ಟವೂ ಮುಕ್ತವಾಗಿ ಕಂಡುಬರುವುದಿಲ್ಲ. ಗದ್ಯ ಸಾಹಿತ್ಯದ ಸೃಷ್ಟಿಯಲ್ಲಿ ಇದು ಹೆಚ್ಚು ಸ್ಪಷ್ಟವಾಗಿ ಕಾಣಹತ್ತಿತ್ತು. ಹೊಸಗನ್ನಡಕ್ಕೆ ಬಂದಾಗ ಈ ಆಯಾಮ ಇನ್ನೂ ಸ್ಪಷ್ಟವಾಗಿ ಮೂಡುತ್ತದೆ. ಹೊಸಗನ್ನಡದಲ್ಲಿಯೂ ಕಾವ್ಯಕ್ಕಿಂತ ಗದ್ಯದಲ್ಲಿ ಇದು ಪ್ರಮುಖವಾಗಿ ಕಾಣುತ್ತದೆ. ಅದರಲ್ಲಿಯೂ ಕೆಲವು ಲೇಖಕರು ತಮ್ಮ ಮನೋಭಾವನೆಗಳನ್ನು ತಮ್ಮ ಆಡುಭಾಷೆಯಲ್ಲಿಯೇ ವ್ಯಕ್ತಪಡಿಸಿದರು. ಅಲ್ಲಿ ಭಾಷೆಯ ವಿಶಿಷ್ಟ ಮುಖದ ಪರಿಚಯವಾಗುತ್ತದೆ. ಈ ಆಯಾಮವನ್ನು ಇನ್ನೂ ವಿವರವಾಗಿ ನೋಡೋಣ.

೧೦.. ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಪದ ಪ್ರಯೋಗ

ಈ ವಿಭಾಗದಲ್ಲಿ ಕನ್ನಡದ ಕವಿಗಳು ಮತ್ತು ಸಾಹಿತಿಗಳು ಬಳಸಿದ ವಿಶಿಷ್ಟ ಪದಪ್ರಯೋಗಗಳನ್ನು ಚರ್ಚಿಸಲಾಗುತ್ತದೆ. ಸನ್ನಿವೇಶದ ಪರಿಣಾಮಕಾರಿ ಅಭಿವ್ಯಕ್ತಿಗೆ ಸೂಕ್ತ ಪದಗಳು ಬೇಕಾಗುತ್ತವೆ ಎಂಬುದು ಎಲ್ಲ ಲೇಖಕರ ಅನುಭವ. ಅದನ್ನು ಹಲವು ವಿಧದಲಿ ಸಾಧಿಸಲಾಗುತ್ತದೆ. ತನ್ನ ಶಬ್ಧಸಾಗರದಲ್ಲಿ ವಿಶಿಷ್ಟ ಇರದಿದ್ದರೆ ಒಮ್ಮೊಮ್ಮೆ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಪಂಪನೂ ಈ ಪ್ರಕ್ರಿಯೆಗೆ ಹೊರತಾಗಿರಲಿಲ್ಲ. ತನ್ನ ‘ವಿಕ್ರಮಾರ್ಜುನ ವಿಜಯ’ ಮತ್ತು ‘ಆದಿಪುರಾಣ’ ಗಳಲ್ಲಿ ಹಲವು ಪದಗಳನ್ನು ಸೃಷ್ಟಿಸುತ್ತಾನೆ. ಉದಾಹರಣೆಗೆ,

ಅಗವಡು ಸೆರೆ ಸಿಗು, ಕೈವಶನಾಗು (ಇದು ಅಚ್ಚ ದ್ರಾವಿಡ ಪದ) (ಅಗಂ=ಒಳಗೆ, ತಮಿಳು, ಮಲಯಾಳಂ ಭಾಷೆಗಳಲ್ಲಿದೆ.)
ಇೞ್ಕುೞ್‌ ಇಕ್ಕುಳ
ಉಡಲಿಕ್ಕು ಉಡುಗೊರೆ ಕೊಡು
ಉಂತೆ ನಿಷ್ಕಾರಣವಾಗಿ, ವ್ಯರ್ಥವಾಗಿ
ಎಗ್ಗ ಮೂಢ
ಎಱೆ  ಆಧಿಪತ್ಯ (ಎಱೆಯ = ಒಡೆಯ)
ಓಡ ದೋಣಿ ತೆಪ್ಪ
ಕಂಡರಿಸು ಕೆತ್ತನೆ ಕೆಲಸ ಮಾಡು
ಕರ್ಣಾಧಾರ ಹಡಗು ನಡೆಸುವವನು
ಕಾಕಳಿ ಇಂಪಾದ ಕಿರು ದನಿ
ಮಡ  ಕಾಲಿನ ಹರಡು, ಗುಲ್ಫ, (ಹಿಮ್ಮಡ ಲಕ್ಷಿಸಿ)
ಮಿಱ್ತುಗೊಡ್ಡಂ  ಅಪಾಯಕಾರದ ಹರಟೆ, ಗೊಡ್ಡುಹರಟೆ
ವಿಘೂರ್ಣಿಸು  ಅಳ್ಳಾಡು

ಇವು ಪಂಪನ ಮತ್ತು ಅವನ ಸಮಕಾಲಿನರ ಪದಪ್ರಯೋಗಗಳ ಮಾದರಿ. ಅವರಲ್ಲಿ ಪಾಂಡಿತ್ಯಪೂರ್ಣ ರಚನಗಳೇ ಸಾಮಾನ್ಯವಾಗಿದ್ದುದರಿಂದ ಶಬ್ಧರಚನೆಯಲ್ಲಿ ಹೆಚ್ಚು ವೈವಿಧ್ಯವಿಲ್ಲ. ಅದರೆ ವಚನಕಾರರಲ್ಲಿ ತೀರಾ ವೈವಿಧ್ಯಯುತವಾದ ಶಬ್ಧರಚನೆ ಕಂಡುಬರುತ್ತದೆ. ಏಕೆಂದರೆ ಜನರಿಂದ ಮತ್ತು ಜನರಿಗಾಗಿ ವಚನ ರಚನೆಯಾಗುತ್ತಿದ್ದುದರಿಂದ ಅವರ ಶಬ್ಧಭಾಂಡಾರ ರಚನೆಯಲ್ಲಿ ಹಲವು ಅಸ್ತ್ರಗಳಿದ್ದುದು ಕಂಡು ಬರುತ್ತದೆ.

ವಚನಕಾರರು ಅನೇಕ ವಿಶಿಷ್ಟ ಪದಗಳನ್ನು ಬಳಸುತ್ತಾರೆ ಮತ್ತು ಸೃಷ್ಟಿಸುತ್ತಾರೆ ಎಂಬುದು ವಚನಗಳನ್ನು ಸಂಪಾದಿಸಿದ, ಸಂಗ್ರಹಿಸಿದ ಎಲ್ಲ ವಿದ್ವಾಂಸರ ಗಮನಕ್ಕೆ ಬಂದಿದೆ. ಈ ಕಾರಣಕ್ಕಾಗಿಯೇ ಹೆಚ್ಚು ಕಡಿಮೆ ವಚನಗಳ ಎಲ್ಲ ಮಹತ್ತ್ವದ ಸಂಗ್ರಹಗಳ ಕೊನೆಗೆ ಪದಕೋಶ, ಶಬ್ಧಕೋಶ, ಅಥವಾ ಕಠಿಣ ಪದಗಳ ಕೋಶ ಎಂದು ಸಂಪಾದಕರು ಕೊಟ್ಟಿದ್ದಾರೆ. ಆ ಕೋಶಗಳ ನೆರವಿಲ್ಲದೇ ವಚನಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಸಂಪಾದಕರಿಗೆ ಮನವರಿಕೆಯಾಗಿದೆ. ಆ ಕೋಶಗಳ ಸಹಾಯ ಪಡೆದು ವಚನಕಾರರು ಪ್ರಯೋಗಿಸಿದ ಪದ ಸಾಮಗ್ರಿಯನ್ನು ಲಕ್ಷಿಸಿದಾಗ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ.

ವಚನಕಾರರು ಎರಡು ತರಹದ ಪದ ಸಾಮಗ್ರಿಯನ್ನು ಬಳಸುತ್ತಾರೆ ಎಂಬುದು ಗಮನಕ್ಕೆ ಬರುತ್ತದೆ.

. ಆ ಕಾಲದಲ್ಲಿ ಬಳಕೆಯಲ್ಲಿದ್ದ, ಕಾಲಾನುಕ್ರಮದಲ್ಲಿ, ವಿಶೇಷವಾಗಿ ಈಗ, ಬಳಕೆಯಲ್ಲಿಲ್ಲದ ಪದಗಳು.

. ವೀರಶೈವ ಧರ್ಮದ ತಿಳುವಳಿಕೆಗಾಗಿ ಮತ್ತು ಅದನ್ನು ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿ ರಚಿಸಿಕೊಂಡ ಅಥವಾ ಇದ್ದ ಪದಗಳಿಗೆ ಹೊಸಾರ್ಥ ಸಂಪತ್ತಿಯನ್ನು ಕೊಡುವ ಪದಗಳು.

೧೨ನೆಯ ಶತಮಾನದಲ್ಲಿ ಬಸವೇಶ್ವರರ ನೇತೃತ್ವದಲ್ಲಿ ರೂಪುಗೊಂಡ ಹೊಸ ಧರ್ಮದ ಅನುಯಾಯಿಗಳೆಲ್ಲ ಒಂದು ರೀತಿಯ ಅಭಿವ್ಯಕ್ತಿಯನ್ನು ಬಳಸುತ್ತಾರೆ. ಅವರು ಭಿನ್ನ ಭಿನ್ನ ಪ್ರದೇಶಗಳಿಂದ, ಭಿನ್ನ ಭಿನ್ನ  ಜಾತಿಗಳ ಹಿನ್ನೆಲೆಯಿಂದ ಬಂದಿದ್ದರೂ ಅವರು ತಮ್ಮ ಅನುಭವದ ನಿರೂಪಣೆಗಾಗಿ ಹೆಚ್ಚು ಕಡಿಮೆ ಒಂದೇ ವಿಧವಾದ ಭಾಷಾ ಪ್ರಯೋಗಗಳನ್ನು ಮಾಡುತ್ತಿದ್ದರು. ಅದರೂ ವಚನಗಳಲ್ಲಿ ವಿಧ ವಿಧ ರೀತಿಯ ಶಬ್ಧ ಪ್ರಯೋಗಗಳು ಕಂಡು ಬರುತ್ತವೆ. ಅವುಗಳ ವಿಸ್ತಾರದ ಕೆಲವು ಭಾಗಗಳನ್ನು ನೋಡೋಣ.

. ಪ್ರಾದೇಶಿಕ ಶಬ್ಧಗಳ ಪ್ರಯೋಗ

ಒದವು ಒದಗು
ಒಳ್ಳಿ ನೀರಹಾವು
ಓಡು ಹುರಿಯುವ ಹಂಚು
ಆಟ್ಟೆ ಮುಂಡ
ಉಂಡಲಿಗೆ ಅಕ್ಕಿಯ
ಅಕ್ಕು ಜೀರ್ಣವಾಗು
ಡವಿಗೆ ಬುರುಡೆ
ಏಣಕೆ ಜಿಂಕೆ
ಕುರು ಸಣ್ಣ
ಗುಡ್ಡ ಶಿಷ್ಯ
ಕಳಲೆ ಎಳೆಯ ಬಿದಿರು
ಒಚ್ಚತ ಎಮ್ಮೆ
ಒಪ್ಪ ಕಾಂತಿ
ಓಗರ ಅನ್ನ
ಒಗೆತನ ಕೂಡಿ ಬಾಳ್ವೆ
ಐದಾರೆ ಬಂದಿದ್ದಾರೆ
ಕಡಬು ಅದ್ದಗಾಣಿ ಅರ್ಧಕಾಣಿ
ಜೋಳವಾಳಿ ಹಂಗು
ಗುಡ್ದ ಶಿಷ್ಯ
ಒಳತಿ ಕೂಸಿಗೆ ಹಾಲು ಕುಡಿಸುವ ಪಾತ್ರೆ
ಕೇಣಸರ ಮತ್ಸರ
ಹಗಿನ ಕಷಾಯ
ಕತ್ತು ಉರಿಹತ್ತು
ಒತ್ತು ಸಮೀಪ, ಬದಿ

ಮೇಲಿನ ಶಬ್ಧ ಪ್ರಯೋಗಗಳನ್ನು ನೋಡಿದರೆ ಅವು ಯಾವ ಪ್ರದೇಶದಲ್ಲಿ ಬಳಕೆಯಾಗುತ್ತದೆ ಅಥವಾ ಬಳಕೆಯಾಗುತ್ತಿದ್ದವು ಎಂಬುದನ್ನು ನಿರ್ಥಿರಿಸುವುದು ಕಷ್ಟ ಆದರೂ ಈ ಶಬ್ಧಗಳು ವಚನಕಾರರಿಗೇ ವಿಶಿಷ್ಟವಾದ ಪ್ರಯೋಗಗಳೆಂದು ಹೇಳಬಹುದು.

. ಗ್ರಂಥಸ್ಥ ಶಬ್ಧಗಳ ಪ್ರಯೋಗ

ಓಸರಿಸು ಹಿಂಜರಿ
ಉಂಡಿಗೆ ಮುದ್ರೆ
ಅಂಕೆ ಅಧಿಕಾರ
ಅಱಕಟ ಅತ್ಯುಗ್ರವಾಗಿ
ಕೆತ್ತು ಹಾರು
ಕೆಯ್ ಬತ್ತದ ಗದ್ದೆ
ಎಲವ ಬೂರಲ
ಅಂಕ ವೀರ
ಕಡವರ ಬಂಗಾರ
ಕೆಡೆ ಬೀಳು
ಕೂರದ ಆಗದ
ಲೆಂಕ ಸೇವಕ

ಮೇಲಿನ ಶಬ್ಧಗಳು ಗ್ರಂಥಗಳಲ್ಲಿ ಬಳಕೆಯಾಗುತ್ತವೆ. ಇವುಗಳನ್ನು ನೋಡಿದರೆ ಕೆಲವು ವಚನಕಾರರಾದರೂ ಪ್ರಚಲಿತವಿರುವ ಗ್ರಂಥಗಳನ್ನು ಓದುವ ಅಭ್ಯಾಸವನ್ನಿಟ್ಟುಕೊಂಡಿದ್ದರೆಂದು ಹೇಳಬಹುದು. ಆದರೆ ಕೆಲವು ವಚನಕಾರರು ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸುವುದು ಕಾಣುತ್ತದೆಯೇ ಹೊರತು ಪುರಾತನ ಕಾವ್ಯಗಳಿಂದ ಉದ್ಧರಣೆಗಳು ಎಲ್ಲಿಯೂ ಕಾಣಸಿಗುವುದಿಲ್ಲ. ಮೇಲೆ ಉಲ್ಲೇಖಿಸಿದ ಶಬ್ಧಗಳಿಂದ ಅವರಿಗೆ ಸಮಕಾಲೀನ ಸಾಹಿತ್ಯದ ಪರಿಚಯವಿತ್ತೆಂದು ಹೇಳಬಹುದು.

. ಆಡು ನುಡಿಯ ಪ್ರಯೋಗ

ಐದಾರೆ ಇದ್ದಾರೆ
ಏಡಿಸು ನಿಂದಿಸು
ಊಸರವಳ್ಳಿ ಗೋಸುಂಬೆ
ಅಡಸು ಬಲಾತ್ಕಾರ ಮಾಡು
ಐದೆ ಮುತ್ತೈದೆ
ಎನ್ನು ಹೇಳು
ಹಿಂದಣ ಹಿಂದಿನ
ಕಾಣಿ ಅಲ್ಪ ನಾಣ್ಯ

ಮೇಲಿನ ಪದಪ್ರಯೋಗಗಳನ್ನು ಗಮನಿಸಿದಾಗ ವಚನಕಾರರು ಬಳಕೆಯಲ್ಲಿದ್ದ, ಪ್ರಚಲಿತವಿದ್ದ ಪದಗಳನ್ನು ತಮ್ಮ ಅನುಭವಗಳನ್ನು ಹೇಳುವಾಗ ಪರಿಣಾಮಕಾರಿಯಾದ ಅರ್ಥಪುಷ್ಠಿ ನೀಡಲು ಬಳಸುತ್ತಿದ್ದರು ಎಂದು ಹೇಳಬಹುದು. ಈ ಶಬ್ದಗಳು ಸಾಹಿತ್ಯದಲ್ಲಿ ಬಳಕೆಯಾಗುವುದು ವಿರಳ.

. ದ್ವಂದ್ವಾರ್ಥದ ಶಬ್ದ ಪ್ರಯೋಗ

ಬೆಸನ ೧. ವ್ಯಸನ, ೨. ವಿಧಾನ
ಒಮ್ಮನ ೧. ಒಂದು ಮನಸ್ಸು, ೨. ಒಂದು ಅಳತೆ
ಇಮ್ಮನ ೧. ಎರಡು ಮನಸ್ಸು, ೨. ಧಾನ್ಯದ ಅಳತೆ
ಉದರೆ ೧. ಉದ್ಧಾರ, ೨. ಉದ್ದರಿ, ಕೈಗಡ
ಆಳಿ ೧. ಸೇವಕ, ದಾಸಿ, ೨. ವಂಶ, ಮನೆತನ
ಕೂಟ ೧. ಕೂಡುವಿಕೆ, ೨. ಜ್ಯೋತಿಷ್ಯದಲ್ಲಿಯ ವೈಶಿಷ್ಟ್ಯ

ಈ ರೀತಿಯ ಎರಡೆರಡು ಅರ್ಥಗಳನ್ನು ಕೊಡುವ ಪದ ಪ್ರಯೋಗಗಳು ವಚನ ಸಾಹಿತ್ಯದಲ್ಲಿ ಕಾಣುತ್ತವೆ. ಕಾವ್ಯಶಾಸ್ತ್ರದಲ್ಲಿ ಇಂಥವುಗಳು ಶ್ಲೇಷಪ್ರಯೋಗಗಳು ಎನಿಸುತ್ತವೆ. ಆದರೆ ಇವುಗಳಿಗೂ ಶ್ಲೇಷಪ್ರಯೋಗಗಳಿಗೂ ಒಂದು ವ್ಯತ್ಯಾಸವಿದೆ.  ಶ್ಲೇಷಪ್ರಯೋಗದಲ್ಲಿ ಎರಡು ಅರ್ಥಗಳು ಏಕಕಾಲಕ್ಕೆ ಪ್ರಯೋಗವಾಗುವುದಿಲ್ಲ. ಅರ್ಥದ ಸಂದರ್ಭ ಎರಡರ‍ಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುತ್ತಿರುತ್ತದೆ. ಆದರೆ ಇಲ್ಲಿ ಎರಡು ಅರ್ಥಗಳು ಏಕಕಾಲಕ್ಕೆ ಪ್ರಸ್ತುತವಾಗಿರುತ್ತವೆ. ಆದುದರಿಂದ ಇವನ್ನು ಶ್ಲೇಷಾರ್ಥದ ಶಬ್ದಗಳು ಎಂದು ಕರೆಯದೇ ದ್ವಂದ್ವಾರ್ಥದ ಶಬ್ದಗಳು ಎಂದು ಕರೆಯಲಾಗಿದೆ.

. ವಿಶಿಷ್ಟ ರೀತಿಯ ತದ್ಭವಗಳು

ಚಮ್ಮಾವುಗೆ ಚರ್ಮದ ಪಾದುಕೆ
ಕುಚ್ಚಿತ ಕುತ್ಸಿತ
ದೇವುಲ ದೇಗುಲ
ಜನ್ನ ಯಜ್ಞ
ಕವಳಿಗೆ ಕಾಪಾಲಿಕೆ
ಅಂದಣ ಆಂದೋಲಿಕಾ

ಮೇಲಿನ ತದ್ಭವಗಳನ್ನು ನೋಡಿದಾಗ ವಚನಕಾರರು ವಿಶಿಷ್ಟ ರೀತಿಯಲ್ಲಿ ತದ್ಭವಗಳನ್ನು ರಚಿಸುತ್ತಿದ್ದರೆಂದು ತಿಳಿದುಬರುತ್ತದೆ. ಸಂದರ್ಭದಲ್ಲಿ ಮಾತ್ರ ಅವುಗಳ ಅರ್ಥ ಸ್ಪಷ್ಟವಾಗಬೇಕೇ ಹೊರತು ಸಂದರ್ಭದಿಂದ ಹೊರಗೆ ಅವುಗಳ ಅರ್ಥ ಸ್ಪಷ್ಟವಾಗುವುದಿಲ್ಲ.

. ಹೊಸ ತದ್ಧಿತಗಳ ಸೃಷ್ಟಿ

ಭೂತಿಗ ಭೂತ + ಇಗ
ಹರುಷಿತಿಕೆ ಹರುಷಿತ + ಇಕೆ

-ಇಗ ಮತ್ತು -ಇಕೆ ಎಂಬ ತದ್ಧಿತ ಪ್ರತ್ಯಗಳು ಸಾಮಾನ್ಯವಾಗಿ ಕನ್ನಡ ಪದಗಳಿಗೆ ಸೇರುತ್ತವೆ. ಆದರೆ ಇಲ್ಲಿ ಸಂಸ್ಕೃತ ಪದಗಳಿಗೆ ಸೇರಿಸಿರುವುದು ವಿಶೇಷವಾಗಿ ತೋರುತ್ತದೆ.

. ವಿಶಿಷ್ಟ ಪದಪ್ರಯೋಗ

ಏಗುವುದು ಏನಂ ಗೈವುದು, ಏನನ್ನು ಮಾಡುವುದು
ಏ ಬೆಸನ ಏನು ಬೆಸನ, ಏನು ಆಜ್ಞೆ
ಏವುದು ಏನು ಮಾಡುವುದು
ಏವೆ ಏನಂ ಗೈವೆ, ಏನನ್ನು ಮಾಡುವೆ
ಎನ್ನುವನು ನನ್ನನ್ನು
ಉಡುಹ ಬಟ್ಟೆಗಳನ್ನು ಧರಿಸುವಲ್ಲಿ ಆಸಕ್ತಿಯಿರುವವ
ಅನಕ, ಅನ್ನಕ್ಕ ವರೆಗೆ
ಅಣಲು (ಬಾಯಿಯ) ಅಂಗಳು
ಅಟ್ಟೆ ರುಂಡವಿಲ್ಲದ ಮುಂಡ
ಕಱಲು ಸವುಳು ನೆಲ
ಗುರುಸ್ವಾಯತ ತನುವಿಲ್ಲದಿರುವಿಕೆ

ಈ ಶಬ್ದಗಳನ್ನು ಗಮನಿಸಿದರೆ ಇವು ಕನ್ನಡ ಸಾಹಿತ್ಯದಲ್ಲಿ ಬೇರೆಡೆಗೆ ಹೆಚ್ಚು ಪ್ರಯೋಗದಲ್ಲಿಲ್ಲ. ಆ ಕಾಲದ ಭಾಷೆಯಲ್ಲಿ ಪ್ರಚಲಿತವಿದ್ದಿರಬಹುದೇ ಎಂಬ ಶಂಕೆ ಉಂಟಾಗುತ್ತದೆ. ಆದರೆ ಹಾಗೆಂದು ಖಚಿತವಾಗಿ ಹೇಳಲು ಆಧಾರ ಸಾಲವು.

. ಬೇರೆ ಭಾಷೆಯಿಂದ ಎರವಲು
ಕಪ್ಪಡ    ಬಟ್ಟೆ (ಕಪಡಾ) (ಹಿಂದಿಯಿಂದ)
ದೇವಲ  ದೇವಾಲಯ (ದೇವsಳ್‌) (ಮರಾಠಿಯಿಂದ)

ಇಂಥ ಇನ್ನೂ ಅನೇಕ ಶಬ್ದಗಳು ದೊರೆಯಬಹುದು.

ಕಲ್ಯಾಣ ಪ್ರದೇಶಕ್ಕೆ ಮರಾಠಿ ಮತ್ತು ತೆಲಗು ಭಾಷೆಗಳನ್ನಾಡುವ ಪ್ರದೇಶ ಹತ್ತಿರವಾಗಿರುವುದರಿಂದ ಆ ಭಾಷೆಯ ಶಬ್ದಗಳು ವಚನ ಸಾಹಿತ್ಯದಲ್ಲಿ ದೊರೆಯುತ್ತವೆ.

ಕುಮಾರವ್ಯಾಸ ಮತ್ತು ಅವನ ಸಮಕಾಲೀನರು ಮಾಡಿದ ಪದಪ್ರಯೋಗ ಇನ್ನೊಂದು ವಿಧದಲ್ಲಿ ಶಬ್ದ ರಚನೆಯ ಪ್ರಕ್ರಿಯೆಯನ್ನು ಎತ್ತಿ ತೋರಿಸುತ್ತದೆ.

ಸುಢಾಳ ಎದ್ದು ಕಾಣುವಂತೆ
ಮೇಳವಿಸು ಕೂಡು, ಕೈಗೆ ಬರು
ಡೊಳ್ಳಾಸ ಮೋಸ
ಹಿಡಿಗವಡೆ ಕವಡೆಯನ್ನು ಹಿಡಿಯುವ ಆಟ
ಚಿಣಿಕೋಲು ಎರಡು ಮರದ ತುಂಡುಗಳಿಂದ ಆಡುವ ಆಟ
ದೆಖ್ಖಾಳ ನೋಡತಕ್ಕ ನೋಟ
ಹೊಳಕು ಮಿಂಚಿನಂತೆ ಹೊರಬರು
ಬೇಳಂಬ ಯುಕ್ತಿ
ಭಾರಣೆ ತೂಕ, ಭಾರತ್ವ
ಸರಕು ಸಾಮಗ್ರಿ, ವಸ್ತು

ಒಂದೇ ಎರಡೇ! ಕುಮಾರವ್ಯಾಸನಲ್ಲಿಯಂತೂ ಇಂಥ ಪದಗಳು ಹೆಜ್ಜೆಹೆಜ್ಜೆಗೆ ದೊರಕುತ್ತವೆ. ಆ ಪದಗಳ ಶಕ್ತಿಯುತ ಪ್ರಯೋಗವನ್ನು ಸಂದರ್ಭದಲ್ಲಿಯೇ ಸವಿಯ ಬೇಕು.