ವಾಕ್ಯರಚನೆ ಎಂಬುದು ಭಾಷೆಯಲ್ಲಿ ತನ್ನದೇ ಆದ ಗುಣಧರ್ಮಗಳನ್ನು ಹೊಂದಿರುತ್ತದೆ. ಪದಗಳು ಸೇರಿ ವಾಕ್ಯವಾಗುತ್ತದೆ. ಎಂದು ಸ್ಥೂಲವಾಗಿ ವಾಕ್ಯದ ಲಕ್ಷಣವನ್ನು ಹೇಳಿದರೂ ಮನಸ್ಸಿಗೆ ಬಂದಂತೆ ಪದಗಳನ್ನು ಆಯ್ದು ಜೋಡಿಸಿದರೆ ವಾಕ್ಯವಾಗುವುದಿಲ್ಲ ಎಂಬುದು ಎಲ್ಲರ ಅನುಭವ. ‘ವ್ಯಾಕ್ಯ’ ಎಂಬುದಕ್ಕೆ ಎರಡು ಆಯಾಮಗಳಿರುತ್ತವೆ. ೧. ಪ್ರತ್ಯಯಯುಕ್ತ ಪದಗಳ ಜೋಡಣೆ, ೨. ಸ್ವೀಕರಿಸಬಹುದಾದ ಒಟ್ಟು ಅರ್ಥ. ಇವೆರಡೂ ಆಯಾಮಗಳನ್ನು ಲಕ್ಷಿಸಿ ಮಾಡಿದ ವಾಕ್ಯ ಅರ್ಥಪೂರ್ಣವಾಗಿರುತ್ತದೆ. ಈ ಪ್ರಕ್ರಿಯೆಗೆ ಇಂಗ್ಲೀಷಿನಲ್ಲಿ ಒಂದು ಪ್ರಸಿದ್ಧ ಉದಾಹರಣೆಯನ್ನು ಕೊಡಲಾಗುತ್ತದೆ:

Colourless green ideas sleep furiously

ಇಲ್ಲಿ ಪದಗಳು ವ್ಯಾಕರಣದಲ್ಲಿ ಬೇರೆಡೆ ಬರುವಂತೆ ಯುಕ್ತವಾಗಿಯೇ ಬಂದಿವೆ. ಅಂದರೆ ಅವು ವ್ಯಾಕರಣಬದ್ಧವಾಗಿಯೇ ಬಂದಿವೆ. ಆದರೆ ಒಟ್ಟಿನಲ್ಲಿ ಈ ವಾಕ್ಯ ಸ್ವೀಕಾರವಾಗುವಂಥ ಅರ್ಥ ಕೊಡುವುದಿಲ್ಲ. ಅಂದರೆ ಪದಗಳನ್ನು ರೂಪಿಸಿಕೊಳ್ಳುವುದರ ಜೊತೆಗೆ ಅರ್ಥವತ್ತಾಗಿ ವಾಕ್ಯದಲ್ಲಿ ಜೋಡಿಸುವ ಶಾಸ್ತ್ರವೂ ಕೆಲಸ ಮಾಡುತ್ತಿರುತ್ತದೆ ಎಂದರ್ಥ. ಈ ಪ್ರಕ್ರಿಯೆಯ ಮುಖಗಳನ್ನು ಕನ್ನಡ ಸಾಹಿತ್ಯದ ವಿವಿಧ ಹಂತದಲ್ಲಿ ಪರೀಕ್ಷಿಸೋಣ.

ಇಲ್ಲಿ ಒಂದು ವಾಸ್ತವ ಸಂಗತಿಯನ್ನು ನಮೂದಿಸಬೇಕು. ಕನ್ನಡದಲ್ಲಿ ‘ಸ್ವೀಕೃತ’ ಎಂದೆನಿಸಕೊಳ್ಳುವ ವಾಕ್ಯರಚನಾ ವ್ಯವಸ್ಥೆಯೊಂದಿದೆ. ಆ ವ್ಯವಸ್ಥೆಯಲ್ಲಿ ಪದಗಳ ಕ್ರಮ ಸಾಮಾನ್ಯವಾಗಿ ಕರ್ತೃ, ಕರ್ಮ, ಕ್ರಿಯಾಪದ ಎಂದೂ ಕರ್ತೃವಿನ ವಿಶೇಷಣಗಳು ಕರ್ತೃ ಪದದ ಪೂರ್ವದಲ್ಲಿಯೂ ಕರ್ಮದ ವಿಶೇಷಣಗಳು ಕರ್ಮ ಪದದ ಪೂರ್ವದಲ್ಲಿಯೂ ಬರುತ್ತವೆ. ತೃತೀಯಾ, ಚತುರ್ಥಿ, ಪಂಚಮೀ ಮತ್ತು ಸಪ್ತಮೀ ವಿಭಕ್ತಿಯುಕ್ತ ಪದಗಳು ಕ್ರಿಯಾಪದದ ಪೂರ್ವದಲ್ಲಿ ಅಸಂದಿಗ್ಧವಾದ ಅರ್ಥ ಕೊಡುವಂಥ ಸ್ಥಳಗಳಲ್ಲಿ ಬರುತ್ತವೆ. ಅಂದರೆ ಸಾಮಾನ್ಯವಾಗಿ ಕರ್ತೃ ಮತ್ತು ಕ್ರಿಯಾಪದಗಳ ನಡುವೆ ಬರುತ್ತವೆ. ಈ ಲಕ್ಷಣಗಳು ಕನ್ನಡ ಸಾಹಿತ್ಯದ ವಿವಿಧ ಹಂತಗಳಲ್ಲಿ ಯಾವ ರೀತಿಯಲ್ಲಿ ಇತ್ತೆಂದು ಅವಲೋಕಿಸೋಣ.

ಹಳಗನ್ನಡದ ಕಾಲದಲ್ಲಿ ವಾಕ್ಯರಚನೆಗೆ ಹೆಚ್ಚು ಸ್ವಾತಂತ್ರ್ಯವಿರಲಿಲ್ಲ. ಅದಕ್ಕಿರುವ ಮುಖ್ಯ ಕಾರಣವೆಂದರೆ ಆ ಕಾಲದಲ್ಲಿ ಪ್ರಚಲಿತವಿದ್ದ ಚಂಪೂ ಶೈಲಿ. ಅಲ್ಲಿಯ ಪದ್ಯಗಳಲ್ಲಿ ಛಂದಸ್ಸಿನ ಕಟ್ಟುನಿಟ್ಟಿನಿಂದಾಗಿ ಪದಗಳ ಆಯ್ಕೆ ವಿಶಿಷ್ಟವಾಗಿರುತ್ತದೆ. ಅಲ್ಲದೇ ವಾಕ್ಯದಲ್ಲಿಯ ಪದಗಳ ಕ್ರಮದಲ್ಲಿಯೂ ಸ್ವಾತಂತ್ರ್ಯವಿರುವುದರಿಂದ ಛಂದಸ್ಸಿನ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿತ್ತು. ಅರ್ಥದ ಒತ್ತಡವಿರುವ ಪದಗಳನ್ನು ಪದ್ಯದ ಪ್ರಾರಂಭದಲ್ಲಿ ಹಾಕುವ ಶೈಲಿ ಇತ್ತು. ಪಂಪನ ‘ವಿಕ್ರಮಾರ್ಜುನ ವಿಜಯ’ದ ಈ ಪದ್ಯವನ್ನು ನೋಡಿ,

ನನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ, ಕರ್ಣನೊಳಾರ್ ದೊರೆ ಕರ್ಣನೇಱು
ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು
ರ್ಣನ ಪಡೆಮಾತಿನೊಳ್ಪುದಿದು ಕರ್ಣರಸಾಯನಮಲ್ತೆ ಭಾರತಂ
(
ವಿಕ್ರಮಾರ್ಜುನ ವಿಜಯಂ, ಅಶ್ವಾಸ, ೧೨. ಪದ್ಯ. ೨೧೭)

ಇಲ್ಲಿ ‘ನೆನೆಯದಿರು’ ಎಂಬ ಕ್ರಿಯಾಪದವನ್ನು ವಾಕ್ಯದ ಮೊದಲು ಹಾಕಲಾಗಿದೆ. ‘ಕರ್ಣನೊಳಾರ್ ದೊರೆ’, ‘ಕರ್ಣನೇಱು’ ಎಂಬ ಪದಪುಂಜಕ್ಕೆ ಕ್ರಿಯಾಪದವನ್ನು ಅಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ. ಇವೆಲ್ಲ ಲಕ್ಷಣಗಳಿಂದ ಪಂಪನ ವಾಕ್ಯ ರಚನಾ ಶೈಲಿಯನ್ನು ಗುರುತಿಸಬೇಕಾಗುತ್ತದೆ. ಇನ್ನು ಅವನ ಗದ್ಯದ ಉದಾಹರಣೆಯನ್ನು ನೋಡಿ.

ಅಗಲೆರಡುಂ ಪಗೆಗಳಪಹಾರ ತುರ್ಯಂಗಳಂ ಬಾಜಿಸಿ ಮುನ್ನೊತ್ತಿದ ವೇಳೆಗಳ್ಸಮುದ್ರಂಗಳಂ ಪುಗುವಂತೆ ತಂತಮ್ಮ ಬೀಡುಗಳಂ ಪೊಕ್ಕರಾಗಳ್

ಸೂರ್ಯಾಸ್ತವಾದಾಗ ಯುದ್ಧ ನಿಲ್ಲಿಸುವ ಸೂಚನೆಯ ವಾದ್ಯಗಳು ಮೊಳಗಿದ ಕೂಡಲೇ ಸೈನಿಕರು ತಮ್ಮ ತಮ್ಮ ಬೀಡುಗಳಿಗೆ ಹೋದರು ಎಂದು ವಿಷಯ ಮುಗಿದರೂ ‘ಆಗಳ್‌, ಆಗ’ ಎಂದು ವಾಕ್ಯ ನಿಂತು ಮುಂದಿನ ಶ್ಲೋಕದಲ್ಲಿ ಕಥೆ ಮುಂದುವರಿಯುತ್ತದೆ. ಅಥವಾ ‘ತೊಟ್ಟು, ಮಾಡೆ’ ಮೊದಲಾದ ಅಪೂರ್ಣ ಕ್ರಿಯಾಪದದಿಂದ ನಿಂತು ಮುಂದುವರಿಯುತ್ತದೆ ಅಥವಾ ‘ಇಂತೆಂದಂ’ ಎಂದು ನಿಂತು ಮುಂದಿನ ಪದ್ಯದಲ್ಲಿ ವಿವರಣೆ ಬರುತ್ತದೆ. ರನ್ನನ ಶೈಲಿಯೂ ಹೀಗೆಯೇ ಇದೆ. ಎಲ್ಲ ಚಂಪೂ ಕಾವ್ಯಗಳ ಶೈಲಿ ಹೆಚ್ಚು ಕಡಿಮೆ ಇದೇ ರೀತಿ ಇದೆಯೆಂದು ಹೇಳಬಹುದು.

ಇನ್ನು ವಚನಗಳ ವಾಕ್ಯ ರಚನಾ ಪ್ರಕಾರ ಭಿನ್ನವಾಗಿದೆ. ವಚನಗಳು ಅನುಭವವನ್ನು ಪರಿಣಾಮಕಾರಿಯಾಗಿ ಹೇಳುವ ಜನಪ್ರಿಯ ಮಾಧ್ಯಮವಾದ್ದರಿಂದ ಅರ್ಥದ ಸ್ಪಷ್ಟತೆಗಾಗಿ ವಾಕ್ಯದಲ್ಲಿಯ ಪದಗಳ ಕ್ರಮವನ್ನು ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಪರಿಪಾಠವೂ ಕಾಣುತ್ತದೆ. ಇಂಥ ಬದಲಾವಣೆಗಳಲ್ಲಿ ಅರ್ಥದ ಒತ್ತಡವನ್ನು (emphasis of meaning) ಹೊತ್ತುಕೊಂಡಿರುವ ಪದಗಳು ವಾಕ್ಯದ ಪ್ರಾರಂಭದಲ್ಲಿ ಬರುತ್ತವೆ. ಉದಾಹರಣೆಗೆ :

ಮನವು ತನ್ನಿಚ್ಛೆಯ ನುಡಿದರೆ ನಚ್ಚುವದು.
ಮನವು ಇದಿರಿಚ್ಛೆಯ ನುಡಿದರೆ ಮಚ್ಚದು.

ಇವು ಸರಳ ಅರ್ಥದ ವಾಕ್ಯಗಳು. ಈ ವಾಕ್ಯಗಳು ವಚನಕಾರರಲ್ಲಿ

ತನ್ನಿಚ್ಛೆಯ ನುಡಿದರೆ ನಚ್ಚುವದೀ ಮನವು.
ಇದಿರಿಚ್ಛೆಯ ನುಡಿದರೆ ಮಚ್ಚದೀ ಮನವು.’
(
ಬಸವಣ್ಣನವರ ಷಟ್ಸ್ಥಲದ ವಚನಗಳು, . ೩೯)

ಎಂದು ರೂಪ ತಾಳುತ್ತವೆ. ಈ ರೀತಿಯಲ್ಲಿ ಕೆಲವು ಶಬ್ದಗಳ ಸ್ಥಾನ ಪಲ್ಲಟ ಮಾಡಿರುವುದರಿಂದ ವಿಶಿಷ್ಟಾರ್ಥಗಳು ಬೋಧೆಯಾಗುತ್ತವೆ. ಮೊದಲನೆಯದಾಗಿ ‘ತನ್ನಿಚ್ಛೆಯ’ ಮತ್ತು ‘ಇದಿರಿಚ್ಛೆಯ’ ಎಂಬ ಪದಗಳನ್ನು ವಾಕ್ಯದ ಪ್ರಾರಂಭದಲ್ಲಿ ಪ್ರಯೋಗಿಸಿರುವುದರಿಂದ ಅವುಗಳಿಗೆ ಅರ್ಥದ ಒತ್ತಡ ಅಥವಾ ಮಹತ್ತ್ವ ಬರುತ್ತದೆ. ಮಾತಾಡುವಾಗ ಅರ್ಥದ ಒತ್ತಡ ಕೊಡಬೇಕೆಂದಿರುವ ಶಬ್ದಗಳನ್ನು ಒತ್ತು (emphasis) ಕೊಟ್ಟು ಉಚ್ಚರಿಸಬಹುದು. ಆದರೆ ಲಿಖಿತ ಸಾಹಿತ್ಯಕ್ಕೆ ಈ ಸೌಲಭ್ಯವಿಲ್ಲ. ಆದುದರಿಂದ ಒತ್ತಡ ಕೊಡಬೇಕೆಂದಿರುವ ಶಬ್ದವನ್ನು ವಾಕ್ಯದ ಪ್ರಾರಂಭದಲ್ಲಿ ಪ್ರಯೋಗಿಸುವುದು ಒಂದು ಉಪಾಯ. ಕ್ರಿಯಾಪದದ ನಂತರ ಪ್ರಯೋಗಿಸುವುದು ಇನ್ನೊಂದು ಉಪಾಯ. ಅದನ್ನೂ ಮೇಲಿನ ಉದಾಹರಣೆಯಲ್ಲಿ ಕಾಣಬಹುದು. ‘ಈ ಮನವು’ ಎಂಬ ಪದಕ್ಕೂ ಅರ್ಥದ ಮಹತ್ತ್ವವಿರುವುದರಿಂದ ಅದನ್ನು ಕ್ರಿಯಾಪದದ ನಂತರ ಪ್ರಯೋಗಿಸಲಾಗಿದೆ.

ಸಾಮಾನ್ಯವಾಗಿ ಷಷ್ಠೀ ವಿಭಕ್ತ್ಯಂತ ಪದಗಳನ್ನು ಅದರ ಮುಂದಿರುವ ನಾಮಪದದಿಂದ ಬೇರ್ಪಡಿಸುವುದು ವಿರಳ. ಹಾಗೆ ಬೇರ್ಪಡಿಸಿ ಇಟ್ಟರೆ ಅಪಾರ್ಥವಾಗುವ ಸಾಧ್ಯತೆ ಇರುತ್ತದೆ. ಆದರೆ ಅಕ್ಕಮಹಾದೇವಿಯ ಒಂದು ವಚನದಲ್ಲಿ ಅದನ್ನೂ ಕಾಣುತ್ತೇವೆ. ನೋಡಿ :

            ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕೊಂಡೆನ್ನ,
ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನೆದೆನ್ನ,
ಕಂಗಳು ಶುದ್ದವಾಯಿತ್ತು ಸಕಲ ಪುರಾತನರ ನೋಡಿಯೆನ್ನ,
ಶ್ರೋತ್ರ ಶುದ್ದವಾಯಿತ್ತು ಅವರ ಕೀರ್ತಿಯ ಕೇಳಿಯೆನ್ನ,
ಭಾವನೆಯೆನಗಿದು ಜೀವನವು ಕೇಳಾ,
ಲಿಂಗ ತಂದೆ, ನೆಟ್ಟನೆ ನಿಮ್ಮುವ ಪೂಜಿಸಿ ಭವಗೆಟ್ಟೆನು ಕಾಣಾ
ಚೆನ್ನಮಲ್ಲಿಕಾರ್ಜುನಾ.
(
ಅಕ್ಕಮಹಾದೇವಿಯ ವಚನಗಳು, . ೧೩೩)

ಇಲ್ಲಿ ‘ಎನ್ನ ತನು’, ‘ಎನ್ನ ಮನ’, ‘ಎನ್ನ ಕಂಗಳು’ ಮತ್ತು ‘ಎನ್ನ ಶ್ರೋತ್ರ’ ಎಂಬುದು ಹೇಳಬೇಕೆಂದಿರುವ ಕ್ರಮ. ಅದನ್ನು ಭಂಗ ಮಾಡಿ ‘ಎನ್ನ’ ಎಂಬ ಷಷ್ಟೀ ವಿಭಕ್ತಿಯುಕ್ತ ಪದವನ್ನು ವಾಕ್ಯದ ಕೊನೆಗೆ ಪ್ರಯೋಗಿಸಿದರೂ ಅರ್ಥ ಪ್ರತೀತವಾಗುತ್ತದೆ. ಅಷ್ಟೇಕೆ, ಅರ್ಥ ಪರಿಣಾಮಕಾರಿಯಾಗಿಯೇ ಪ್ರತೀತವಾಗುತ್ತದೆ. ವಾಕ್ಯದ ಕೊನೆಗೆ ಪ್ರಯೋಗವಾಗಿರುವುದರಿಂದ ಅಪಾರ್ಥವಾಗುವ ಸಂಭವವಿಲ್ಲ. ಅದು ವಾಕ್ಯದ ಮಧ್ಯದಲ್ಲಿ ಬಂದು ಅದರ ಮುಂದೆ ಸಂಬಂಧ ಪಡದ ನಾಮ ಬಂದರೆ ಖಂಡಿತ ಅಪಾರ್ಥವಾಗುತ್ತದೆ.

ವಚನಕಾರರ ಭಾಷಾಶೈಲಿಯಲ್ಲಿ ಈ ರೀತಿಯ ಪದಪ್ರಯೋಗದಿಂದ ಅರ್ಥದ ಒತ್ತಡವನ್ನು ನಿರೂಪಿಸುವ ಇನ್ನೂ ಅನೇಕ ವಿಧಾನಗಳನ್ನು ನೋಡಬಹುದು. ನೋಡಿ:

            ಹಾಲೆಂಜಲು ಪೆಯ್ಯನ,
ಉದಕವೆಂಜಲು ಮತ್ಸ್ಯದ,
ಪುಷ್ಪವೆಂಜಲು ತುಂಬಿಯ,
ಎಂತು ಪೂಜಿಸುವೆನಯ್ಯಾ, ಶಿವ ಶಿವಾ, ಎಂತು ಪೂಜಿಸುವೆ?
ಎಂಜಲವನತಿಗಳೆವಡೆ ಎನ್ನಳವಲ್ಲ,
ಬಂದುದ ಕೈಕೊ, ಕೂಡಲ ಸಂಗಮದೇವಾ.
(
ಬಸವಣ್ಣನವರ ಷಟ್ಸ್ಥಲದ ವಚನಗಳು, . ೮೮೫)

ಈ ವಚನದಲ್ಲಿಯ ಮೊದಲಿನ ಮೂರು ಸಾಲುಗಳಲ್ಲಿ ‘ಹಾಲು ಕರುವಿನ ಎಂಜಲು’, ‘ನೀರು ಮೀನಿನ ಎಂಜಲು’ ಮತ್ತು ‘ಹೂವು ಭ್ರಮರದ ಎಂಜಲು’ ಎಂಬ ಮಾತುಗಳಲ್ಲಿ ‘ಪೆಯ್ಯನ’, ‘ಮತ್ಸ್ಯದ’ ಮತ್ತು ‘ತುಂಬಿಯ’ ಎಂಬ ಪದಗಳನ್ನು ಕೊನೆಗೆ ಇಟ್ಟುದರಿಂದ ಅವು ಅರ್ಥದ ಒತ್ತಡವನ್ನು ಪಡೆದಿವೆ ಎಂಬುದನ್ನು ಸೂಚಿಸಲಾಗಿದೆ. ಸಾಮಾನ್ಯವಾಗಿ ಉಕ್ತಿಯ ಮೊದಲ ಪದ ಅಥವಾ ಕೊನೆಯ ಪದ ಅರ್ಥದ ಒತ್ತಡವನ್ನು ಪಡೆಯುವುದರಿಂದ ಅಲ್ಲಿ ಒತ್ತಡ ಪಡೆಯಬೇಕಾದ ಪದವನ್ನು ವಾಕ್ಯದ ಕೊನೆಗೆ ಪ್ರಯೋಗಿಸಲಾಗಿದೆ. ‘ಎಂತು ಪೂಜಿಸುವನಯ್ಯಾ’ ಎಂಬಲ್ಲಿ ‘ಎಂತು’ ಎಂಬ ಪದವೇ ಅರ್ಥದ ಒತ್ತಡವನ್ನು ಹೊರಬೇಕಾಗಿರುವುದರಿಂದ ಅದು ಪ್ರಾರಂಭದಲ್ಲಿ ಇದ್ದುದು ಸೂಕ್ತವಾಗಿದೆ. ‘ಈ ಎಂಜಲವನತಿಗಳೆವಡೆ’ ಎಂಬಲ್ಲಿಯೂ ಮೇಲಿನ ಮೂರು ಉಕ್ತಿಗಳಲ್ಲಿ ಬಂದ ‘ಎಂಜಲಿ’ನ ಪ್ರಸ್ತಾಪ ‘ಈ’ ಎಂಬ ಸರ್ವನಾಮದಲ್ಲಿ ಸಮಾವೇಶಗಳ್ಳುತ್ತವೆ.

ಮೇಲೆ ಷಷ್ಟೀ ವಿಭಕ್ತಿಯುಕ್ತ ಪದಗಳ ಸ್ಥಾನಪಲ್ಲಟವನ್ನು ನೋಡಿದಂತೆ ಅದೇ ರೀತಿಯಲ್ಲಿ ಕ್ರಿಯೆಗೆ ಕಾರಣವಾದ ತೃತೀಯಾ ವಿಭಕ್ತ್ಯಂತ ಪದಗಳನ್ನು ಉಕ್ತಿಯ ಕೊನೆಗೆ ಪ್ರಯೋಗಿಸಿದುದನ್ನು ಕೆಳಗೆ ನೋಡಬಹುದು :

ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದ.
ಮತಿಗೆಟ್ಟೆನು ಮನದ ವಿಕಾರದಿಂದ,
ಧೃತಿಗೆಟ್ಟೆನು ಕಾಯವಿಕಾರದಿಂದ,
ಶರಣುವೊಕ್ಕೆನು ಕೂಡಲ ಸಂಗಮದೇವಯ್ಯಾ.
(
ಬಸವಣ್ಣನವರ ಷಟ್ಸ್ಥಲದ ವಚನಗಳು, . ೪೩)

ವಿಕಳನಾಗಲು, ಮತಿಗೆಡಲು, ಧೃತಿಗೆಡಲು ಪಂಚೇಂದ್ರಿಯಧಾತು, ಮನದ ವಿಕಾರ ಮತ್ತು ಕಾಯವಿಕಾರ ಕಾರಣವಾಗಿವೆ. ಆದುದರಿಂದ ಅವುಗಳ ಮೇಲೆ ಅರ್ಥದ ಒತ್ತಡ ಹೇರಲು ಅವನ್ನು ಕೊನೆಗೆ ಪ್ರಯೋಗಿಸಲಾಗಿದೆ. ಅದೇ ಪ್ರಕಾರ ಕೂಡಲ ಸಂಗಮದೇವನಿಗೆ ಶರಣು ಹೋದುದನ್ನೂ ಪ್ರಾರಂಭದಲ್ಲಿ ಪ್ರಯೋಗಿಸಲಾಗಿದೆ.

ಇದೇ ಪ್ರಕ್ರಿಯೆಯಲ್ಲಿ ದ್ವಿತೀಯಾ ವಿಭಕ್ತಿಯುತ ಪದಗಳನ್ನೂ ಕೊನೆಗಿಟ್ಟು ಆ ವಾಕ್ಯದ ಕ್ರಿಯಾಪದವನ್ನು ಮೊದಲು ಇಡುವದನ್ನೂ ಕೆಳಗಿನ ವಚನದಲ್ಲಿ ನೋಡಬಹುದು.

            ಮಱೆಯಲಾಗದು ಹರಿಯ,
ಮಱೆಯಲಾಗದು ಬ್ರಹ್ಮನ,
ಮಱೆಯಲಾಗದು ತೆತ್ತೀಸಕೋಟಿ ದೇವರ್ಕಳ,
ನಮ್ಮ ಕೂಡಲಸಂಗಮದೇವರ ಮಱೆಯಲಹುದು!
(
ಬಸವಣ್ಣನವರ ಷಟ್ಸ್ಥಲದ ವಚನಗಳು, . ೫೫೧)

ಹರಿ, ಬ್ರಹ್ಮಾದಿ ದೇವತೆಗಳನ್ನು ಮರೆಯಲಾಗದು ಆದರೆ ಕೂಡಲಸಂಗಮ ದೇವರನ್ನು ಮಾತ್ರ ಮರೆಯಬಹುದೇ? ಎಂಬ ಅರ್ಥವನ್ನು ಕೊನೆಯ ಉದ್ಗಾರ ವಾಚಕದಿಂದ ಬೋಧಿಸುತ್ತಾರೆ. ಕೊನೆಯ ಉದ್ಗಾರವಾಚಕದ ಬದಲು ಪೂರ್ಣ ವಿರಾಮವಿದ್ದಿದ್ದರೆ ಅರ್ಥ ಅಭಿಪ್ರಾಯಕ್ಕೆ ವಿರುದ್ದವಾಗಿ ಹೊರಡುತ್ತಿತ್ತು. ಈ ರೀತಿಯ ವಿರಾಮ ಚಿಹ್ನೆಗಳ ಬಳಕೆ ತಾಳೆಗರಿಯಲ್ಲಿ ಕಾಣುವುದು ಅತಿ ವಿರಳ. ಸಂದರ್ಭದಲ್ಲಿ ಹೊರಡುವ ಅರ್ಥವನ್ನು ಗಮನಿಸಿ ಇತ್ತೀಚಿನ ಸಂಪಾದಕರು ಉದ್ಗಾರ ವಾಚಕವನ್ನು ಬಳಸಿರಬೇಕು.

ಇನ್ನು ಸಪ್ತಮೀ ವಿಭಕ್ತಿಯ ಪಲ್ಲಟವನ್ನು ನೋಡೋಣ.

            ಮೇರುಗುಣವನಱಸುವುದೆ ಕಾಗೆಯಲ್ಲಿ?
ಪರುಷಗುಣವನಱಸುವದೆ ಕಬ್ಬುನದಲ್ಲಿ?
ಸಾಧುಗುಣವನಱಸುವದೆ ಅವಗುಣಿಯಲ್ಲಿ?
ಚಂದನಗುಣವನಱಸುವದೆ ತರುಗಳಲ್ಲಿ?
ಸರ್ವಗುಣ ಸಂಪನ್ನ ಲಿಂಗವೆ,
ನೀನೆನ್ನಲ್ಲಿ ಅವಗುಣವನಱಸುವದೆ,
ಕೂಡಲ ಸಂಗಮದೇವಾ?
(
ಬಸವಣ್ಣನವರ ಷಟ್ಸ್ಥಲದ ವಚನಗಳು, . ೬೭)

‘ಅಪಾತ್ರದಲ್ಲಿ ಒಳ್ಳೆಯ ಗುಣಗಳನ್ನು ಅರಸಿದರೆ ಅವು ದೊರೆಯಲಾರವು’. ಎಂಬ ಅರ್ಥವನ್ನು ಪ್ರಶ್ನೆಯ ಮುಖಾಂತರ ವ್ಯಕ್ತಪಡಿಸಿದ್ದಾರೆ ‘ಅರಸಬೇಕೆ’ ಎಂಬ ಅರ್ಥವನ್ನು ‘ಅರಸುವದೆ’ ಎಂಬ ಪ್ರಯೋಗದಿಂದ ತಂದಿದ್ದಾರೆ. ಹೇಳಬೇಕೆಂದ ಅಭಿಪ್ರಾಯವನ್ನು ಸೂಕ್ತ ಉದಾಹರಣೆಗಳಿಂದ ನಿರೂಪಿಸುವುದು ವಚನಕಾರರ ವೈಶಿಷ್ಟ್ಯ.

ಇದೇ ರೀತಿ ಅರ್ಥದ ಪುಷ್ಟಿಗಾಗಿ ಚತುರ್ಥ್ಯಂತ ಪದಗಳನ್ನು ವಾಕ್ಯದ ಕೊನೆಗೆ ಪ್ರಯೋಗಿಸುವದೂ ಕಂಡುಬರುತ್ತದೆ. ನೋಡಿ :

ಕರಿಯಂಜುವದಂಕುಶಕ್ಕಯ್ಯಾ;
ಗಿರಿಯಂಜುವದು ಕುಲಿಶಕ್ಕಯ್ಯಾ;
ತಮಂಧವಂಜುವದು ಜ್ಯೋತಿಗಯ್ಯಾ;
ಕಾನನವಂಜುವದು ಬೇಗೆಗಯ್ಯಾ;
ಪಂಚಮಹಾಪಾತಕವಂಜುವದು
ಕೂಡಲ ಸಂಗನ ನಾಮಕ್ಕಯ್ಯಾ.
(
ಬಸವಣ್ಣನವರ ಷಟ್ಸ್ಥಲದ ವಚನಗಳು, . ೭೫)

ಹೇಳಬೇಕೆಂದಿರುವ ಮಾತನ್ನು ಮನಕ್ಕೆ ನಾಟುವಂತೆ ಉದಾಹರಣೆ ಕೊಟ್ಟು ಹೇಳಿದಾಗ ಅವು ಉಂಟುಮಾಡಬೇಕೆಂದಿರುವ ಪರಿಣಾಮವನ್ನು ಉಂಟುಮಾಡುತ್ತವೆ. ವಚನಗಳಲ್ಲಿ ಎಲ್ಲ ಮಾತುಗಳನ್ನು ಉದಾಹರಣೆ ಸಹಿತವಾಗಿ ಹೇಳಲಾಗುತ್ತದೆ. ‘ಪಂಚ ಮಹಾಪಾತಕಗಳೂ ಕೂಡ ಶಿವನ ನಾಮಕ್ಕೆ ಅಂಜುತ್ತವೆ.’ ಎಂದಿಷ್ಟೇ ಹೇಳಿದರೆ ಆಗುವ ಪರಿಣಾಮಕ್ಕಿಂತ ಉದಾಹರಣೆ ಸಹಿತವಾಗಿ ಹೇಳಿದ ಮಾತುಗಳಿಗೆ ಹೆಚ್ಚಿನ ಬಲವಿರುತ್ತದೆ. ಅಭಿಪ್ರಾಯ ಮನಸ್ಸಿಗೆ ನಾಟುತ್ತದೆ.

ಇನ್ನು ಸಂಬಂಧಾರ್ಥಕಗಳನ್ನು ವಾಕ್ಯದ ಕೊನೆಗೆ ಪ್ರಯೋಗಿಸುವುದನ್ನು ನೋಡೋಣ.

ಎರಡು ವಾಕ್ಯಗಳನ್ನು ‘ಮತ್ತು’, ‘ಆದರೆ’, ‘ಆದ್ದರಿಂದ’, ‘ವರೆಗೆ’ ಮೊದಲಾದ ಸಂಬಂಧ ಸೂಚಕ ಅವ್ಯಯಗಳಿಂದ ಜೋಡಿಸುವುದರಿಂದ ಹೇಳಬೇಕೆಂದಿರುವ ವಾಕ್ಯ ವೃಂದಕ್ಕೆ ತರ್ಕ ಬದ್ಧವಾದ ಅರ್ಥ ಹುಟ್ಟುತ್ತದೆ. ಕೆಲವೊಂದು ವಿಶಿಷ್ಟ ಶೈಲಿಯಲ್ಲಿ ಈ ಸಂಬಂದಾರ್ಥಕಗಳನ್ನು ಗುಪ್ತವಾಗಿ ಇಡುವುದರಿಂದಲೂ ಅದೇ ಅಭೀಪ್ಸಿತ ಅರ್ಥ ಹೊರಡಲು ಸಾಧ್ಯವಿದೆ. ಗುಪ್ತವಾಗಿ ಇಡುವುದೆಂದರೆ ಅವನ್ನು ವ್ಯಕ್ತಪಡಿಸಿರುವುದಿಲ್ಲ ಅಷ್ಟೇ. ಅವು ಅವ್ಯಕ್ತವಾಗಿ ವಾಕ್ಯಗಳ ಮಧ್ಯೆ ಇದ್ದೇ ಇರುತ್ತವೆ. ಅವುಗಳನ್ನು ಸಂದರ್ಭಕ್ಕನುಸಾರವಾಗಿ ಅಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ. ಕೆಳಗಿನ ಉದಾಹರಣೆಗಳನ್ನು ನೋಡಿ.

ಓದಿದರೇನು ಕೇಳಿದರೇನು ಶಿವಪಥವನಱುಯದನ್ನಕ್ಕ?
ಓದಿತ್ತು ಕಾಣಿರೋ ಶುಕನು.
ಓದಿದ ಫಲವು ಮಾದಾರ ಚೆನ್ನಯ್ಯಂಗಾಯಿತ್ತು.
ಕೂಡಲ ಸಂಗಮದೇವಾ.
(
ಬಸವಣ್ಣನವರ ಷಟ್ಸ್ಥಲದ ವಚನಗಳು, . ೧೪೩)

‘ಅನ್ನಕ್ಕ’ ಎಂಬ ಅವ್ಯಯದ ಪ್ರಯೋಗ ಉಕ್ತಿಯ ಕೊನೆಗೆ ಬಂದಿರುವುದರಿಂದ ಅದರ ಅರ್ಥಕ್ಕೆ ಒತ್ತಡ ಬಂದಿದೆ. ಅರ್ಥದ ಒತ್ತಡವನ್ನು ಹೊರಬೇಕಾದ ಪದವನ್ನು ಉಕ್ತಿಯ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ಪ್ರಯೋಗಿಸಲಾಗುತ್ತದೆ ಎಂಬುದನ್ನು ಈ ಮೊದಲು ಕೂಡ ಅನೇಕ ಸಂದರ್ಭಗಳಲ್ಲಿ ಗಮನಿಸಲಾಗಿದೆ.

ಕೆಳಗಿನ ಉದಾಹರಣೆಯಲ್ಲಿ ಸಂಬಂಧಾರ್ಥಕವಾದ ‘ಆದರೆ’ ಎಂಬ ಪದವನ್ನು ಅಧ್ಯಾಹಾರವಾಗಿ ಇಡಲಾಗಿದೆ. ನೋಡಿ :

ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ!
ವೇದ ಘನವೆಂಬೆನೆ? ಪ್ರಾಣವಧೆಯ ಹೇಳುತ್ತಿದೆ!
ಸ್ಮೃತಿ ಘನವೆಂಬೆನೆ? ಮುಂದಿಟ್ಟಱಸುತ್ತಿದೆ!
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ.
ತ್ರಿವಿಧ ದಾಸೋಹದಲ್ಲಲ್ಲದೆ
ಕಾಣಬಾರದು ಕೂಡಲ ಸಂಗಮದೇವನ!
(
ಬಸವಣ್ಣನವರ ಷಟ್ಸ್ಥಲದ ವಚನಗಳು, . ೨೦೮)

ಇಲ್ಲಿ ‘ಶಾಸ್ತ್ರ ಘನವೆಂಬನೆ? ಅದಂ ಅದು ಕರ್ಮವ ಭಜಿಸುತ್ತಿದೆ’ ಎಂದೂ ‘ವೇದ ಘನವೆಂಬೆನೆ? ಅದಂ ಅದು ಪ್ರಾಣಿವಧೆಯ ಹೇಳುತ್ತಿದೆ’ ಎಂದೂ ಇಲ್ಲಿಯ ಉಕ್ತಿಗಳನ್ನು ಅರ್ಥಯಿಸಕೊಳ್ಳಬೇಕಾಗುತ್ತದೆ. ಕರ್ತೃವನ್ನು ವಿವಕ್ಷೆ ಮಾಡದಿರುವ ಶೈಲಿ ಕನ್ನಡಕ್ಕೇನೂ ಹೊಸದಲ್ಲ ಆದರೆ ಸೂಕ್ತ ಸಂಬಂಧಾರ್ಥಕಗಳನ್ನು ವಿವಕ್ಷೆ ಮಾಡದೆ ಇರುವುದರಿಂದ ಹಿಂದು ಮುಂದಿನ ವಾಕ್ಯಗಳ ಸಂದರ್ಭದಿಂದ ಅವನ್ನು ಊಹಿಸಿಕೊಳ್ಳಬೇಕಾಗುತ್ತದೆ.

ಆದರೆ ಹೀಗೆ ಊಹಿಸಿಕೊಳ್ಳುವುದು ಸುಲಭವೇನಲ್ಲ. ಏಕೆಂದರೆ ಎರಡು ವಾಕ್ಯಗಳ ನಡುವೆ ಭಿನ್ನ ಸಂಬಂಧಾರ್ಥಕಗಳು ವಾಕ್ಯವೃಂದಕ್ಕೆ ವಿಭಿನ್ನ ಅರ್ಥಗಳನ್ನು ನೀಡಬಲ್ಲವು. ಉದಾಹರಣೆಗೆ ಕೆಳಗಿನ ವಾಕ್ಯಗಳನ್ನು ನೊಡಿ :

. ನಾಯಿಗೆ ಕಲ್ಲೆಸೆದೆ ಮತ್ತು ನನ್ನ ಕಾಲು ಕಲ್ಲಿಗೆ ತಾಕಿತು.
. ನಾಯಿಗೆ ಕಲ್ಲೆಸೆದೆ ಏಕೆಂದರೆ ನನ್ನ ಕಾಲು ಕಲ್ಲಿಗೆ ತಾಕಿತು.
. ನಾಯಿಗೆ ಕಲ್ಲೆಸೆದೆ ಆದರೆ ನನ್ನ ಕಾಲು ಕಲ್ಲಿಗೆ ತಾಕಿತು.
. ನಾಯಿಗೆ ಕಲ್ಲೆಸೆದೆ ಆದ್ದರಿಂದ ನನ್ನ ಕಾಲು ಕಲ್ಲಿಗೆ ತಾಕಿತು.
(‘
ಭಾಷೆ ಮತ್ತು ಅರ್ಥಗಳ ಗುಟ್ಟುರಾಜಪುರೋಹಿತ ಬಿ. ಬಿ. ‘ಸಮನ್ವಯದಲ್ಲಿ ಸಂ: ವಿ. ಕೃ. ಗೋಕಾಕ, ೧೯೬೮, ಬೆಂಗಳೂರು)

ಮೇಲಿನ ವಾಕ್ಯಗಳಲ್ಲಿ ದಪ್ಪಕ್ಷರಗಳಲ್ಲಿ ತೋರಿಸಿದ ಸಂಬಂಧಾರ್ಥಕಗಳೇ ಆಯಾ ವಾಕ್ಯವೃಂದಕ್ಕೆ ಭಿನ್ನ ಅರ್ಥಗಳನ್ನು ಕೊಡುವುದಕ್ಕೆ ಕಾರಣವಾಗಿವೆ ಎಂಬುದನ್ನು ಗಮನಿಸಬೇಕು. ವೃಂದ (೧)ರಲ್ಲಿ ಕೇವಲ ಎರಡು ವಿಷಯಗಳ ನಿರೂಪಣೆ; ವೃಂದ (೨)ರಲ್ಲಿ Saddistic ಮನೋವೃತ್ತಿ; ವೃಂದ (೩)ರಲ್ಲಿ ಒಂದು ದುಃಖದಿಂದ ಇನ್ನೊಂದು ದುಃಖವನ್ನು ಸಮತೋಲಿಸುವುದು; ವೃಂದ (೪)ರಲ್ಲಿ ಪಾಪದ ಕಲ್ಪನೆ. ಇವುಗಳಿಗೆ ಅಲ್ಲಿಯ ಸಂಬಂಧಾರ್ಥಕಗಳೇ ಹೊಣೆ ಎಂಬುದನ್ನು ಲಕ್ಷಿಸಬೇಕು. ಆದುದರಿಂದ ಸಂಬಂಧಾರ್ಥಕವು ಗುಪ್ತವಾಗಿವುರುವಾಗ ಇಂಥದೇ ಸಂಬಂದಾರ್ಥಕವಿದೆ ಎಂಬುದನ್ನು ಊಹಿಸುವುದು ಕಷ್ಟ. ಬೇಕಾದ ಅರ್ಥವನ್ನು ಗಮನದಲ್ಲಿಟ್ಟು ಕೆಲಮಟ್ಟಿಗೆ ಮಾಡಬಹುದು.

ಮೇಲಿನ ವಚನದ ಉದಾಹರಣೆಯನ್ನೇ ಪರೀಕ್ಷಿಸಿ. ಅವನ್ನು ಎರಡು ವಿಧವಾದ ಸಂಬಂಧಾರ್ಥಕಗಳಿಂದ ಜೋಡಿಸಬಹುದು.

            () ಶಾಸ್ತ್ರ ಘನವೆಂಬೆನೆ? ಆದರೆ ಅದು ಕರ್ಮವ ಭಜಿಸುತ್ತಿದೆ!
ವೇದ ಘನವೆಂಬೆನೆ? ಆದರೆ ಅದು ಪ್ರಾಣವಧೆಯ ಹೇಳುತ್ತಿದೆ!’

ಎಂದೂ

            () ಶಾಸ್ತ್ರ ಘನವೆಂಬೆನೆ? ಇಲ್ಲ. ಏಕೆಂದರೆ ಅದು ಕರ್ಮವ ಭಜಿಸುತ್ತಿದೆ!
ವೇದ ಘನವೆಂಬೆನೆ? ಇಲ್ಲ. ಏಕೆಂದರೆ ಅದು ಪ್ರಾಣವಧೆಯ ಹೇಳುತ್ತಿದೆ!’

ಎಂದು ಅರ್ಥ ಮಾಡಿಕೊಳ್ಳಬಹುದು.

ಮೇಲಿನ (ಅ)ದಲ್ಲಿ ವಿರೋಧಾರ್ಥವಿದ್ದರೆ (ಆ)ದಲ್ಲಿ ಕಾರ್ಯಕಾರಣ ಭಾವವಿದೆ. ಇನ್ನು ಆ ವಾಕ್ಯಗಳನ್ನು ‘ಆದ್ದರಿಂದ, ಮತ್ತು ಅಲ್ಲದೆ’ ಮೊದಲಾದ ಬೇರೆ ಯಾವ ಸಂಬಂಧಾರ್ಥಕಗಳಿಂದಲೂ ಜೋಡಿಸಲು ಸಾಧ್ಯವಾಗುವುದಿಲ್ಲ. ಜೋಡಿಸಿದರೂ ಒಟ್ಟು ಅರ್ಥಪ್ರತೀತಿಯಾಗುವುದಿಲ್ಲ.

ಈ ಸಂದರ್ಭದಲ್ಲಿ ಒಂದು ಮಾತನ್ನು ಗಮನಿಸಬೇಕು. ಇದುವರೆಗಿನ ಚರ್ಚೆಯಲ್ಲಿ ಉದಾಹರಿಸಿದ ವಚನಗಳಲ್ಲಿ ಬಹಳಷ್ಟು ವಚನಗಳನ್ನು ಬಸವೇಶ್ವರರ ವಚನಗಳಿಂದ ಆಯ್ದುಕೊಳ್ಳಲಾಗಿದೆ. ಉಳಿದ ಪ್ರಮುಖ ವಚನಕಾರರಾದ ಅಲ್ಲಮಪ್ರಭು, ಆದಯ್ಯ, ಮೋಳಿಗೆಯ ಮಾರಯ್ಯಾ, ಚೆನ್ನಬಸವಣ್ಣ, ಸಿದ್ಧರಾಮ, ಅಕ್ಕಮಹಾದೇವಿ ಮೊದಲಾದವರ ವಚನಗಳಲ್ಲಿ ಇಂಥ ಶೈಲಿಯ ಬರವಣಿಗೆ ಗೋಚರಿಸುವುದಿಲ್ಲ. ಹೀಗೆ ಏಕಿರಬೇಕು ಎಂದು ಗಂಭೀರವಾಗಿ ವಿಚಾರಿಸಿದರೆ ಬಸವೇಶ್ವರರ ವಚನಗಳಲ್ಲಿ ಕಾಣುವ ಆಡುಮಾತಿನ ಶೈಲಿ ಇತರರ ವಚನಗಳಲ್ಲಿ ಕಾಣುವುದಿಲ್ಲ ಎಂದು ಹೇಳಬೇಕಾಗುತ್ತದೆ. ಇದಕ್ಕೆ ಒಂದು ಮುಖ್ಯ ಕಾರಣವಿರಬಹುದು ಎಂದೆನಿಸುತ್ತದೆ. ಬಹುಶಃ ಬಸವೇಶ್ವರರು ವಚನಗಳನ್ನು ಆಡಿಯೇ ರಚಿಸಿರಬೇಕು. ಉಳಿದ ವಚನಕಾರರು ತಮ್ಮ ವಚನಗಳನ್ನು ಕುಳಿತು ಬರೆದು ರಚಿಸಿರಬೇಕು ಎಂದೆನಿಸುತ್ತದೆ. ಈ ಮಾತು ಹಿಂದಿನ ಒಂದು ಚರ್ಚೆಯಲ್ಲಿಯೂ ಬಂದಿದೆ. ಆದಯ್ಯನ ಮತ್ತು ಮೋಳಿಗೆಯ ಮಾರಯ್ಯನ ವಚನಗಳಂತೂ ಗ್ರಂಥಸ್ಥ ಭಾಷಾಶೈಲಿಯಲ್ಲಿವೆ. ಉದಾಹರಣೆಗೆ ನೋಡಿ :

ಕತ್ತೆ ಬತ್ತಲೆ ಇದ್ದಡೆ ನೆಟ್ಟನೆ ನಿರ್ವಾಣಿಯೇ?
ಹುಚ್ಚ ಹೊಟ್ಟೆಗೆ ಕಾಣದೆ ಎತ್ತಲೆಂದರಿಯದೆ
ಮರ್ತ್ಯದೊಳಗಿರ್ದಡೆ ವಿರಕ್ತನೇ?
ಇಂತಿವರ ತತ್ತು ಗೊತ್ತು ಬಲ್ಲವಂಗೆ ಇನ್ನೆತ್ತಣ ಮುಕ್ತಿಯೋ?
ಇನ್ನೆತ್ತಣ ವಿರಕ್ತಿಯೋ? ನಿಃಕಳಂಕ ಮಲ್ಲಿಕಾರ್ಜುನಾ.
(
ಮೋಳಿಗೆಯ ಮಾರಯ್ಯನ ವಚನಗಳು, . ೯೦)

ಎಂಬ ಮೋಳಿಗೆಯ ಮಾರಯ್ಯನ ವಚನವನ್ನು ಮತ್ತು ಕೆಳಗಿನ ಆದಯ್ಯನ ವಚನವನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ:

            ಅಂಗದ ಮೇಲಣ ಲಿಂಗ ಅಂಗದಲ್ಲಿ ಪೂರ್ಣವಾಗಿ
ತನುಗುಣವಳಿಯಿತ್ತು;
ಮನದ ಮೇಲಣ ಲಿಂಗ ಮನದಲ್ಲಿ ಪೂರ್ಣವಾಗಿ ನೆನಹಿನ
ಸಂಕಲ್ಪ ಕೆಟ್ಟಿತ್ತು;
ಪ್ರಾಣದ ಮೇಲಣ ಲಿಂಗ ಪ್ರಾಣದಲ್ಲಿ ಪೂರ್ಣವಾಗಿ
ಪ್ರಾಣಪ್ರಕೃತಿ ನಷ್ಟವಾಯಿತ್ತು;
ಭಕ್ತಿ ಜ್ಞಾನ ಲಿಂಗ ಸನ್ನಿಹಿತವಾಗಿರಬಲ್ಲರಾಗಿ,
ಸೌರಾಷ್ಟ್ರ ಸೋಮೇಶ್ವರಾ! ನಿಮ್ಮ ಶರಣರು ಸ್ವತಂತ್ರರು.
(
ಆದಯ್ಯನ ವಚನಗಳು, . ೩೧೩)

ಕನ್ನಡದ ವ್ಯಾಕ್ಯರಚನೆಯಲ್ಲಿ ಕಂಡುಬರುವ ಪದಕ್ರಮ ಇಲ್ಲಿ ಅಬಾಧಿತವಾಗಿರುವುದು ಗೋಚರಿಸುತ್ತದೆ. ಆದುದರಿಂದಲೇ ಆದಯ್ಯನಾಗಲಿ ಮೋಳಿಗೆಯ ಮಾರಯ್ಯನಾಗಲಿ ತಮ್ಮ ವಚನಗಳನ್ನು ಆಡಿರುವುದಕ್ಕಿಂತ ಕುಳಿತು ಬರೆದಿರುವ ಸಂಭವ ಹೆಚ್ಚಿದೆ. ಒಂದು ವೇಳೆ ಆಡಿಯೇ ರಚಿಸಿದ್ದರು ಎಂದಿಟ್ಟುಕೊಳ್ಳೋಣ. ಅವುಗಳನ್ನು ಲಿಪಿಗಿಳಿಸಿದ ಅಥವಾ ಸಂಪಾದಿಸಿದ ಮಹನೀಯರು ನಂತರ ತಿದ್ದುಪಡಿ ಮಾಡಿ ಸಂಗ್ರಹಿಸಿರಬಹುದು ಎಂದೂ ಇರುವ ಸಾಧ್ಯತೆ ಇದೆ.

ಇದೇ ಮಾತು ದೇವರ ದಾಸೀಮಯ್ಯನ ವಚನಗಳನ್ನು ನೋಡಿದರೂ ಅನಿಸುತ್ತದೆ. ನೋಡಿ :

ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ.
ಇರುಳೆಲ್ಲ ನಡೆದನಾ ಸುಂಕಕ್ಕಂಜಿ.
ಕಳವೆ ಎಲ್ಲ ಹೋಗಿ ಬರಿಯ ಗೋಣಿ ಉಳಿಯಿತ್ತು.
ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥಾ.
(
ಕಳವೆಕಳವು ಮಾಡಿ ತಂದ ಮಾಲು)
(
ದೇವರ ದಾಸಿಮಯ್ಯನ ವಚನಗಳು. . ೪೨)

            ಎಳ್ಳು ಇಲ್ಲದ ಗಾಣದಲ್ಲಿ ಎಣ್ಣೆಯುಂಟೇ?
ಜೊಳ್ಳು ತೂರಿದಲ್ಲಿ ಬತ್ತ ಉಂಟೇ?
ಕಳ್ಳ ಹಾದರಿಗರ ಸಂಪಾದನೆ
ಹೊಳ್ಳ ಕುಟ್ಟಿ ಕೈ ಹೊಟ್ಟಾದಂತೆ ಕಾಣಾ ರಾಮನಾಥಾ.
(
ದೇವರ ದಾಸಿಮಯ್ಯನ ವಚನಗಳು, . ೩೮)

ಮೇಲಿನ ಎರಡೂ ವಚನಗಳನ್ನು ಗಮನಿಸಿದರೆ ದಾಸಿಮಯ್ಯನ ಶೈಲಿಯಲ್ಲಿ ಜಾನಪದ ಶಬ್ದಗಳು ಶಕ್ತಿಯುತವಾಗಿ ಬಳಕೆಯಾದುದನ್ನು ನೋಡಬಹುದು. ಅಲ್ಲದೇ ಕಾವ್ಯಗಳಲ್ಲಿ ಬಳಸುವ ಆದಿಪ್ರಾಸವನ್ನು ಬಳಸಿದುದು ಕಂಡುಬರುತ್ತದೆ. ಮೊದಲನೆಯ ವಚನದಲ್ಲಿ ‘ರಿ’ ‘ರು’ ಮತ್ತು ‘ಳ’ ‘ಳಿ’ ಪ್ರಾಸ ಕಂಡರೆ ಎರಡನೆಯ ವಚನಲದಲ್ಲಿ ‘ಳ್ಳು’ ಮತ್ತು ‘ಳ್ಳ’ ಗಳ ಪ್ರಾಸ ಕಾಣುತ್ತದೆ. ಇಡೀ ವಚನ ಛಂದೋಬದ್ಧ ರಚನೆ ಯಾಗಿರದಿದ್ದರೂ ಆದಿಪ್ರಾಸ ಉಕ್ತಿಗೆ ಹೆಚ್ಚಿನ ಬಲ ತಂದುಕೊಡುತ್ತದೆ. ಈ ರೀತಿಯ ರಚನೆಯನ್ನು ದೇವರ ದಾಸಿಮಯ್ಯನ ಅನೇಕ ವಚನಗಳಲ್ಲಿ ಕಾಣಬಹುದು. ಇದರಿಂದ ಅವನು ವಚನಗಳನ್ನು ಪುಸ್ತಕ ಬರೆದಂತೆ ರಚಿಸಿರುವ ಸಂಭವ ಹೆಚ್ಚಾಗುತ್ತದೆ. ಬಸವೇಶ್ವರರು ಪದಕ್ರಮವನ್ನು ಯಶಸ್ವಿಯಾಗಿ ಬಳಸಿ ಅರ್ಥಪುಷ್ಟಿಯನ್ನು ಮಾಡಿದರೆ ದಾಸಿಮಯ್ಯ ಜಾನಪದ ಶಬ್ದಗಳನ್ನು ಬಳಸಿ ಮತ್ತು ಪ್ರಾಸವನ್ನು ಪ್ರಯೋಗಿಸಿ ಉಕ್ತಿಗೆ ಶಕ್ತಿಯನ್ನು ತಂದುಕೊಡುತ್ತಾನೆ.

ಅಲ್ಲಮನ ವಚನಗಳದು ಇನ್ನೊಂದು ಶೈಲಿ. ನೇರ ಮಾತುಗಳೊಡನೆ ಅನುಭಾವದ ಆಳವನ್ನು ಬಿತ್ತರಿಸುತ್ತಾನೆ.

ತೆಱಹಿಲ್ಲದ ಘನವು ಕುಱುಹಿಂಗೆ ಬಾರದ ಮುನ್ನ
ತೋಱುದವರಾರು ಹೇಳಾ?
ಮಹಾಘನ ಲಿಂಗೈಕ್ಯವನು ಆರೂಢದ ಕೂಟದಲ್ಲಿ
ನಾನಾರುವ ಸಾಕ್ಷಿಯನು ಕಾಣೆನು.
ಬೇಱೆ ಮಾಡಿ ನುಡಿಯಬಹುದೇ ಪ್ರಾಣಲಿಂಗವನು?
ಅಱುವು ಸಯವಾಗಿ ಮಱಹು ನಷ್ಟವಾದಲ್ಲಿ,
ಗುಹೇಶ್ವರ, ನಿಮ್ಮ ಶರಣನುಪಮಾತೀತನು.
(
ಅಲ್ಲಮನ ವಚನ ಚಂದ್ರಿಕೆ, . ೬೮೨)

ಇಲ್ಲಿ ‘ಱ್‌’ಕಾರದ ಅನುಪ್ರಾಸ ಕಂಡಂತಾದರೂ ಅದು ಕಿವಿಗೆ ಹೊಡೆಯುವಂತಿಲ್ಲ. ಇಂಥ ಅಕಸ್ಮಾತ್‌ ಪ್ರಯೋಗಗಳನ್ನು ಬಿಟ್ಟರೆ ನೂರಾರು ವಚನಗಳನ್ನು ಹುಡುಕಿದರೂ ಎಲ್ಲೂ ಇಂಥ ಪದಪ್ರಯೋಗ ಕಾಣುವುದಿಲ್ಲ. ಅಂದರೆ ಅಲ್ಲಮಪ್ರಭು ಹೇಳಬೇಕೆಂದಿರುವ ವಿಷಯದ ಕಡೆಗೇ ಗಮನ ಕೊಡುತ್ತಾರೆಯೇ ಹೊರತು ಹೇಳುವ ಮಾಧ್ಯಮದ ಭಾಷಾ ಶೈಲಿಯ ಕಡೆಗೆ ಕೊಡುವುದಿಲ್ಲ. ಅವರಿಗೆ ಗದ್ಯವೇ ಹೆಚ್ಚು ಇಷ್ಟ. ಗದ್ಯವೇ ನೇರ ಪರಿಣಾಮ ಮಾಡುತ್ತದೆಯೇ ಹೊರತು ಭಾಷೆಯ ಶಾಬ್ದಿಕ ಅಲಂಕಾರ ಅದಕ್ಕೆ ಅಗತ್ಯವಿಲ್ಲ ಎಂದು ಅವರು ನಂಬಿದಂತಿದೆ. ಒಂದು ರೀತಿಯಲ್ಲಿ ನೋಡಿದರೆ ಅವರ ವಚನಗಳಲ್ಲಿ ತಾವು ಕಂಡುಕೊಂಡ ದರ್ಶನವನ್ನು ನೇರವಾಗಿ ಹೇಳುವುದೇ ಮುಖ್ಯ ಗುರಿಯಾಗಿರುತ್ತದೆ. ಅವರ ಶೈಲಿಯ ನೇರತೆಯನ್ನು ಕೆಳಗಿನ ವಚನದಲ್ಲಿ ಕಾಣಬಹುದು:

            ನಾ ನೀನೆಂಬ ಭೇದ ಅಂದೂ ಇಲ್ಲ ಇಂದೂ ಇಲ್ಲ.
ಸಾಲೋಕ್ಯನಲ್ಲ, ಸಾಮೀಪ್ಯನಲ್ಲ ಶರಣ;
ಸಾರೂಪ್ಯನಲ್ಲ ಸಾಯುಜ್ಯನಲ್ಲ ಶರಣ;
ಸಕಾಯನಲ್ಲ ಅಕಾಯನಲ್ಲ ಗುಹೇಶ್ವರಲಿಂಗ ತಾನೆಯಾಗಿ.
(
ಅಲ್ಲಮನ ವಚನ ಚಂದ್ರಿಕೆ, . ೬೮೯)

ಇಲ್ಲಿ ‘ಸಾ’ ಕಾರದ ಅನುಪ್ರಾಸ ಕಂಡರೂ ಅದನ್ನು ಮೀರಿದ ಮಾತನ್ನು ಹೇಳುವ ಲವಲವಿಕೆ ಇದೆ. ಅನುಪ್ರಾಸವಿದ್ದಲ್ಲಿ ಸಾಮಾನ್ಯವಾಗಿ ಅವು ಗಮನ ಸೆಳೆಯುತ್ತವೆ. ಆದರೆ ಅಲ್ಲಮನ ವಚನಗಳಲ್ಲಿ ಭಾವ ಓದುಗನನ್ನು ಕೊಚ್ಚಿಕೊಂಡು ಹೋಗುತ್ತದೆ. ಅಭಿಪ್ರಾಯದ ನಿರೂಪಣೆಗಾಗಿ ಪದಕ್ರಮದ ಅಥವಾ ಅರ್ಥದ ಒತ್ತಿನ ಯಾವ ತಂತ್ರಗಳನ್ನೂ ಅಲ್ಲಮ ಬಳಸುವುದಿಲ್ಲ. ಶೈಲಿಯ ವಿಶ್ಲೇಷಣೆಗೆ ಒಂದರ್ಥದಲ್ಲಿ ಇಲ್ಲಿ ಸಾಮಗ್ರಿ ಸಿಗುವುದಿಲ್ಲ.

೧೫ನೆಯ ಶತಮಾನದ ಕೊನೆಯ ಭಾಗದಲ್ಲಿ ಜೀವಿಸಿದ್ದ ಗೂಳೂರು ಸಿದ್ಧವೀರಣ್ಣೊಡೆಯರು ಸಂಪಾದಿಸಿದ ‘ಪ್ರಭುದೇವರ ಶೂನ್ಯ ಸಂಪಾದನೆ’ (೧೯೫೮)ಯಲ್ಲಿ ಅಲ್ಲಮ ಪ್ರಭುವಿನೊಡನೆ ಅನೇಕ ಶರಣರ ಸಂವಾದಗಳು ನಿರೂಪಿತವಾಗಿವೆ. ಅವು ಬಹುಶಃ ‘ಅನುಭವ ಮಂಟಪ’ದಲ್ಲಿ ನಡೆದ ಚರ್ಚೆಯಿರಬೇಕು. ಅಲ್ಲಿ ಆಡು ಮಾತಿನ ಶೈಲಿಯ ರೀತಿ ಕಾಣಬಹುದಾಗಿತ್ತು. ಆದರೆ ಆ ವಚನಗಳು ಸೃಷ್ಟಿಯಾದ ಸುಮಾರು ಮೂರು ಶತಮಾನದ ನಂತರ ಅವು ದಾಖಲೆಗೊಂಡುದರಿಂದ ಸಂಗ್ರಹಕಾರರು ತಮ್ಮ ಲೇಖನ ಶೈಲಿಗನುಗುಣವಾಗಿ ವಚನಗಳನ್ನು ಸಂಸ್ಕರಿಸಿ ಸಂಗ್ರಹಿಸಿದ್ದಾರೆ. ಆಡಿದ ವಚನಗಳನ್ನು ಆಡಿದಂತೆಯೇ ಸಂಗ್ರಹಿಸಬೇಕೆಂಬ ಉತ್ಕಟೇಚ್ಛೆ ಸಂಪಾದಕರಿಗಿರಲು ವೈಯಕ್ತಿಕ ಚರ್ಚೆಯಲ್ಲಿ ಆಡಿದ ಮಾತನ್ನು ಇಲ್ಲಿ ಉಲ್ಲೇಖಿಸಬೇಕು: ‘ವಚನಗಳ ಸಂಪಾದಕರು ಕಾಲಕಾಲಕ್ಕೆ ವಚನಗಳ ಭಾವವನ್ನು ಮಾತ್ರ ಇಟ್ಟುಕೊಂಡು ಭಾಷೆಯನ್ನು ತಮ್ಮ ಅನುಕೂಲ ಕಂಡಂತೆ ಬದಲಿಸಿಕೊಂಡಿದ್ದಾರೆ.’ ಇದು ಬಸವೇಶ್ವರರ ವಚನಗಳನ್ನು ಬಿಟ್ಟು ಉಳಿದವರ ವಚನಗಳಲ್ಲಿ ಆಡುಭಾಷೆ ಉದಾಹರಣೆಗಳು ಸಿಗದೇ ಇರಲು ಪ್ರಬಲ ಕಾರಣವಿರಬಹುದು. ಬಸವೇಶ್ವರರ ವಚನಗಳು ಸಂಪಾದಕರ ಸುಳಿಗೆ ಹೆಚ್ಚು ಸಿಲುಕಿಲ್ಲ. ಬಹುಶಃ ಇದಕ್ಕೆ ಇನ್ನೊಂದು ಕಾರಣವು ಇರುವ ಸಾಧ್ಯತೆ ಇದೆ. ಬಸವೇಶ್ವರರ ವಚನಗಳ ಜನಪ್ರಿಯತೆ. ಅನೇಕ ಜನರ ಬಸವೇಶ್ವರರ ವಚನಗಳನ್ನು ಇದ್ದಕ್ಕಿದ್ದಂತೆ ಪುನರುಚ್ಚರಿಸುತ್ತಿರಬೇಕು. ಆದುದರಿಂದ ಅವು ಜನರ ಬಾಯಲ್ಲಿ ಅಬಾಧಿತವಾಗಿ ಉಳಿದಿರಬಹುದು. ಇಂದಿನ ಸನ್ನಿವೇಶಕ್ಕೆ ಸರಿ ಹೊಂದುವಂತೆ ಇಂಥ ಊಹೆಯನ್ನು ಮಾಡಬೇಕಾಗುತ್ತದೆ.

ಇನ್ನು ಕುಮಾರವ್ಯಾಸ ಮತ್ತು ಅವನ ಸಮಕಾಲೀನರ ಭಾಷಾಶೈಲಿಯನ್ನು ಗಮನಿಸೋಣ. ಅಭಿವ್ಯಕ್ತಿಯಲ್ಲಿ ವಚನಕಾರರಿಗೆ ಇದ್ದ ಸ್ವಾತಂತ್ರ್ಯ ಷಟ್ಪದಿಕಾರರಿಗೂ ಇರಲಿಲ್ಲ. ಚಂಪೂ ಕಾವ್ಯಗಳಿಗೆ ಒಂದು ರೀತಿಯ ನಿರ್ಬಂಧವಿದ್ದರೆ ಷಟ್ಪದಿಗೆ ಇನ್ನೊಂದು ರೀತಿಯ ನಿರ್ಬಂಧ ಕಾಣುತ್ತದೆ. ಆ ನಿರ್ಬಂಧದಲ್ಲಿಯೇ ಪ್ರತಿಭೆಯನ್ನು ತೋರಿಸುತ್ತಾರೆ ನಮ್ಮ ಕವಿವರ್ಯರು. ಸ್ವಯಂವರದ ಸಭೆಯನ್ನು ಪ್ರವೇಶಿಸಿದ ದ್ರೌಪದಿಯ ಸೌಂದರ್ಯವನ್ನು ನೋಡಿ ರಾಜಕುಮಾರರೆಲ್ಲ ಬೆರಗಾದ ಬಗೆಯನ್ನು ನೋಡಿ.

            ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಸೆದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪ ಶರವವ
ಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ
(
ಕುಮಾರವ್ಯಾಸ ಭಾರತ, ಆದಿಪರ್ವ, ೧೩೬೭)

‘ಆಶ್ಚರ್ಯದಿಂದ ಬೆರಳನ್ನು ಮೂಗಿನ ಮೇಲೆ ಇಟ್ಟರು’ ಎಂಬ ಮಾತನ್ನು ‘ಬೆರಳ ಮೂಗಿನ’ ಎಂದು ಸಂಕ್ಷಿಪ್ತವಾಗಿಯಾದರೂ ಪರಿಣಾಮಕಾರಿಯಾಗಿ ಹೇಳುತ್ತಾನೆ. ‘ಭಯಮುಖದ ದುಗುಡದಲಿ’ ಎಂದು ಮುಖಭಾವದ ಲಕ್ಷಣವನ್ನು ಸಂಕ್ಷಿಪ್ತವಾಗಿ ಹೇಳುತ್ತಾನೆ. ‘ನಾಚಿದಳುಂಗುಟದೊಳೌಕುತ ಮಹೀತಳವ’ ಎಂಬಲ್ಲಿ ದ್ರೌಪದಿ ನಾಚಿ ಉಂಗುಷ್ಟದಿಂದ ಭೂಮಿಯನ್ನು ಒತ್ತಿದುದನ್ನು ಚಿತ್ರವತ್ತಾಗಿ ಹೇಳುತ್ತಾನೆ. ಹೀಗೆ ಹೆಜ್ಜೆ ಹೆಜ್ಜೆಗೆ ಕುಮಾರವ್ಯಾಸನ ಭಾಷಾ ಪ್ರತಿಭೆ ಕಂಡುಬರುತ್ತದೆ.

ರಾಘವಾಂಕನಲ್ಲಿ ಈ ಪ್ರತಿಭೆ ಇನ್ನೊಂದು ರೀತಿಯಲ್ಲಿ ಕಾಣುತ್ತದೆ. ಹರಿಶ್ಚಂದ್ರ ಕಾಡಿಗೆ ಹೊರಟು ನಿಂತಾಗ ಪುರಜನರೆಲ್ಲ ಮರುಗಿದ ರೀತಿಯನ್ನು ನೋಡಿ,

ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ
ಪರಿಜನದ ಭಾಗ್ಯವಡವಿಗೆ ನಡೆಯುತಿದೆ ಸಪ್ತ
ಶರಧಿಪರಿವೃತಧರೆಯ ಸಿರಿಯ ಸೊಬಗಜ್ಞಾತವಾಸಕ್ಕೆ ಪೋಗುತಿದೆ ಕೋ
ಎರೆವ ದೀನಾನಾಥಾರಾನಂದವಡಗುತಿದೆ
ವರಮುನೀಂದ್ರರ ಯಾಗರಕ್ಷೆ ಬಲವಳಿಯುತಿದೆ
ನಿರುತವೆಂದೊಂದಾಗಿಬಂದು ಸಂದಿಸಿನಿಂದ ಮಂದಿ ನೆಱೆ ಮೊಱೆಯಿಟ್ಟುದು
(
ಹರಿಶ್ಚಂದ್ರ ಕಾವ್ಯ ಸಂಗ್ರಹ, ೧೭)

ಇಲ್ಲಿಯ ರೂಪಕಗಳ ಸರಣಿ ಪರಿಣಾಮಕಾರಿಯಾಗಿದೆ. ಪ್ರಾರಂಭದಲ್ಲಿಯ ಪ್ರಕಾರದ ಅನುಪ್ರಾಸ, ಉತ್ತರಾರ್ಧದಲ್ಲಿಯ ಅನುಸ್ವಾರದ ನಾದ ದುಃಖದ ಭಾವನೆಯನ್ನು ತುಂಬುವಲ್ಲಿ ಯಶಸ್ವಿಯಾಗುತ್ತವೆ.

ಇನ್ನು ಹೊಸಗನ್ನಡಕ್ಕೆ ಬಂದರೆ ಅಲ್ಲಿ ಆಡು ಮಾತಿನ ಶೈಲಿಯನ್ನೂ ಗ್ರಾಂಥಿಕ ಭಾಷೆಯ ಶೈಲಿಯನ್ನೂ ಹದವಾಗಿ ಮಿಶ್ರಣ ಮಾಡಿದುದು ಕಾಣುತ್ತದೆ. ಬೇಂದ್ರೆಯವರ ಕೆಳಗಿನ ಸಾಲುಗಳನ್ನು ನೋಡಿ,

ಹುಡುಕ್ತಾನ ಹಿಗ್ಗಿನಾ ದಾರಿ, ಹುಡುಗ ಸುಖ ದುಃಖ ಸಾಗರಾ ಸೇರಿ
ಮದವೀಯ ಹಡಗವನ್ನೇರಿ
(‘
ಸಂಸಾರಕಾಮಕಸ್ತೂರಿ, ೧೯೩೪)

ಎಂಬಲ್ಲಿಯ ಆಡುಮಾತಿನ ಶೈಲಿಯನ್ನು ನೋಡಬಹುದಾದರೆ,

ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ ಬೆಳೆದಿದೆ
ಮುಗಿಲ ತುಂಬಿ ಉಳಿದಿದೆ.
( ‘
ಚೆನ್ನನಾದಲೀಲೆ, ೧೯೩೮)

ಎಂಬಲ್ಲಿ ಗ್ರಾಂಥಿಕ ಶೈಲಿಯನ್ನು ನೋಡಬಹುದು. ಅದೇ ಕುವೆಂಪು ಅವರಲ್ಲಿ ಆಡುಭಾಷೆಯ ಶೈಲಿ ಕಡಿಮೆ. ಅದಕ್ಕೆ ಬಹುಶಃ ಒಂದು ಪ್ರಬಲ ಕಾರಣವಿರಬಹುದು. ಕಾವ್ಯಕರ್ಮ ಅವರಿಗೆ ಒಂದು ಸುಸಂಸ್ಕೃತ ವಿದ್ಯೆ. ಆಡಿದಂತೆಯೇ ಬರೆದರೆ ‘ಕಾವ್ಯ’ ಹೇಗಾದೀತು ಎಂಬ ಅಂತರ್ಮನದ ತರ್ಕವೂ ಕೆಲಸ ಮಾಡುತ್ತಿರಬಹುದು. ಬಹುಶಃ ಅವರ ಅತ್ಯಂತ ಸರಳ ಪದ್ಯಗಳಲ್ಲೊಂದು ಇದು. ನೋಡಿ,

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸುಗಾಳಿಗೆ ಬೀಳುತೇಳುತ ತೆರೆಯ ಮೇಗಡೆ ಹಾಯಲಿ
(
ಕುವೆಂಪು ಅವರನವಿಲುಸಂಕಲನ, ೧೯೩೭)

ಇಲ್ಲಿ ಜೀವನ ತತ್ತ್ವವು ಪ್ರಮುಖವಾಗಿ ಅದರ ಸರಳ ನಿರೂಪಣೆಯತ್ತ ಗಮನ ಹರಿದಿದೆ. ಅದೇ ಕೆಳಗಿನ ಪದ್ಯದಲ್ಲಿ ಪ್ರೌಢ ಶೈಲಿ ಇದೆ. ನೋಡಿ,

ಬೈಗುಗೆಂಪೋಕಳಿಯ
ನೆರೆತೆರೆಗೆ ಹರಡಿಹುದು;
ಹಸಿರು ತಲೆದೂಗುವದು,
ಕೆರೆಯಂಚಲಿ
ಗೂಡು ಬಿಡು, ಬಾ ಹೊರಗೆ
ಗೀತೆಯಿರಲಿ.
(
ಕುವೆಂಪು ಅವರಕೊಳಲುಸಂಕಲನ, ೧೯೩೦)

ಹೊಸಗನ್ನಡ ಗದ್ಯಶೈಲಿ ವಿವಿಧವಾಗಿದೆ. ಕಥೆ ಕಾದಂಬರಿಗಳಲ್ಲಿ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಆದರೆ ಸಂಭಾಷಣೆಗಳು ಬಂದಾಗ ಆಡು ಭಾಷೆ ಪ್ರಾಧಾನ್ಯ ಪಡೆಯುತ್ತದೆ. ಅಲ್ಲಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರಚಲಿತವಿರುವ ಭಾಷೆ ಬಳಕೆಯಾಗುತ್ತದೆ. ದೆವನೂರ ಮಹಾದೇವ ಅವರ ‘ಕುಸುಮಬಾಲೆ’ (೧೯೯೦)ಯಂತೆ ಪೂರ್ತಿ ಆಡುಭಾಷೆಯಲ್ಲಿ ರಚಿತವಾದ ಕೃತಿಗಳು ಅಪರೂಪ. ಹೀಗೆ ಕನ್ನಡ ಸಾಹಿತ್ಯದಲ್ಲಿ ಪ್ರಯೋಗವಾದ ಭಾಷೆಯ ಲಕ್ಷಣಗಳ ಪಕ್ಷಿನೋಟ ಕೊಡಬಹುದು.