ಇಲ್ಲಿಯ ವಿಶ್ಲೇಷಣೆಯನ್ನು Pragmatics ಎಂಬ ಶಾಸ್ತ್ರದ ಬೆಳಕಿನಲ್ಲಿ ನಡೆಸಲಾಗುತ್ತದೆ. ಹಿಂದಿನ ವಿಭಾದಲ್ಲಿ ಜ್ಞಾನಶಾಸ್ತ್ರದ ರೀತಿ ನೀತಿಗಳನ್ನು ಸ್ಥೂಲವಾಗಿ ನೋಡಿದ್ದೇವೆ.

ಕನ್ನಡ ಸಾಹಿತ್ಯದಲ್ಲಿ ವಿವಿಧ ಕಾಲಕ್ಕೆ ಪ್ರಯೋಗವಾದ ಭಾಷೆ ವಿಶಿಷ್ಟ ಭಾವವನ್ನು ಅಥವಾ ವಿಚಾರ ಸಂವಹನವನ್ನು ಹೇಗೆ ಮಾಡುತ್ತಿತ್ತು ಎಂಬುದರ ಅಧ್ಯಯನವೇ ಆಯಾ ಕೃತಿಯ ಜ್ಞಾನಶಾಸ್ತ್ರಾಧ್ಯಯನ ಎನ್ನಬಹುದು. ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯದ ಕಾಲದಲ್ಲಿ ಸಂಭಾಷಣಾರೂಪಗಳೇ ದೊರೆಯಬೇಕೆಂದು ನಿರ್ಬಂಧ ಹಾಕುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ಆಯಾ ಕಾಲದಲ್ಲಿ ಪ್ರಚುರವಾಗಿದ್ದ ಕಾವ್ಯ ಕಲೆಯ ಅನುಸಾರವಾಗಿ ಸಾಹಿತ್ಯ ಸೃಷ್ಟಿ ಆಗಿದೆ. ಆದುದರಿಂದ ಲಭ್ಯವಿದ್ದ ಸಾಹಿತ್ಯ ಪ್ರಕಾರದಿಂದ ಹೊರಡುವ ತಿಳುವಳಿಕೆಯನ್ನು ಮಾತ್ರ ಈಗ ಲಕ್ಷಿಸಲು ಸಾಧ್ಯವಾಗುತ್ತದೆ.

ಕನ್ನಡ ಸಾಹಿತ್ಯೇತಿಹಾಸದ ಪ್ರಾರಂಭದಲ್ಲಿ ಲೌಕಿಕ ಕಥೆ ಮತ್ತು ಜಿನಾಗಮಗಳನ್ನು ನಿವೇದಿಸುವ ಕಥೆಗಳು ಬಂದವು. ಪಂಪನ ಈ ಮಾತುಗಳನ್ನು ಲಕ್ಷಿಸಿರಿ.

ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮುಮಂ ಸಮಸ್ತ ಭೂ
ತಳಕೆ ಸಮಸ್ತ ಭಾರತಮುಮಾದಿ ಪುರಾಣಮುಮೆಂದು ಮೆಯ್ಯಸುಂ
ಗೊಳುತಿರೆ ಪೂಣ್ದು ಪೂಣ್ದ ತೆಱದೊಂದಱುದಿಂಗಳೊಳೊಂದು ಮೂಱು
ತಿಂಗಳೊಳೆ ಸಮಾಪ್ತಿಯಾದುದೆನೆ ಬಣ್ಣಿಸಿದಂ ಕವಿತಾ ಗುಣಾರ್ಣವಂ
(
ವಿಕ್ರಮಾರ್ಜುನ ವಿಜಯಂ, ೧೯೨೬, ಸಂಧಿ, ೧೪. ಪದ್ಯ, ೬೦)

ಹೀಗೆ ಲೌವಕಿಕ ವಸ್ತುವನ್ನೂ ಜಿನಾಗಮವನ್ನೂ ಹೇಳುವಲ್ಲಿ ಪಂಪನ ಕಾವ್ಯರಚನೆಯ ಉದ್ದೇಶಗಳು ಬೇರೆ ಬೇರೆಯಾಗಿದ್ದರೂ ಅವನ್ನು ಹೇಳುವಾಗ ಕಾವ್ಯಕೌಶಲದಲ್ಲಿ ಹೆಚ್ಚು ಕಡಿಮೆ ಮಾಡುವುದಿಲ್ಲ. ಈ ಮಾತು ರನ್ನನಿಗು ಪೊನ್ನನಿಗೂ ನಾಗಚಂದ್ರನಿಗೂ ಅನ್ವಯಿಸುತ್ತದೆ. ಹೀಗೆ ಅವರು ಎರಡು ವಿಧದ ಉದ್ದೇಶ ಸಫಲತೆಗಾಗಿ ಕಾವ್ಯ ಬರೆದರೂ ಕಾವ್ಯದ ಗುಣದಲ್ಲಿ ಹೇರುಪೇರು ಮಾಡಲಿಲ್ಲ. ಏಕೆಂದರೆ ಅದಕ್ಕೆ ವಿವರಣೆಯನ್ನೂ ಪಂಪನೇ ಕೊಟ್ಟಿದ್ದಾನೆ.

ಕವಿತೆಯೊಳಾಸೆಗೆಯ್ವ ಫಲಮಾವುದೊ ಪೂಜೆ, ನೆಗೞ್ತೆ ಲಾಭಮೆಂ
ಬಿಮೆ ವಲಮಿಂದ್ರಪೂಜೆ ಭುವನಸ್ತುತಮಪ್ಪ ನೆಗೞ್ತೆ ಮುಕ್ತಿ ಸಂ
ಭವಿಸುವ ಲಾಭಮೆಂಬಿವು ಜಿನೇಂದ್ರಗುಣಸ್ತುತಿಯಿಂದೆ ತಾಮೆ ಸಾ
ರವೆ ಪೆಱರೀವುದೇಂ ಪೆಱರ ಮಾಡುವುದೇಂ ಪೆಱರಿಂದಮಪ್ಪುದೇಂ
(
ಆದಿಪುರಾಣ ಸಂಗ್ರಹ, ೧೯೫೬, ೧ನೇ ಭಾಗ, ಪದ್ಯ. ೧೧)

ಕವಿತೆ ಬರೆಯುವ ಉದ್ದೇಶಗಳಾದ ಪ್ರಸಿದ್ಧಿ, ಲಾಭಗಳು ದೊರೆತರೆ ಸಾಕು, ಬೇರೆ ಯಾರಿಂದ ಏನಾಗಬೇಕಾಗಿದೆ ಎಂಬ ಪಂಪನ ಮಾತಿನಲ್ಲಿ ಕವಿಯ ಮನೋಭಾವ ವ್ಯಕ್ತವಾಗುತ್ತದೆ. ಇದೇ ತರಹದ ಮಾತನ್ನು ಲಕ್ಷ್ಮೀಶನೂ ಆಡುತ್ತಾನೆ,

ಜಾಣರಂ ತಲೆದೂಗಿಸದೆ ನುಡಿದೊಡಾ ಪದ
ಕ್ಕೂಣೆಯಂ ಬಹುದೆಂದು ಸರಸೋಕ್ತಿಯಿಂದೆ ಗೀ
ರ್ವಾಣಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾನಿಪುಣನು
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ
ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು
ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವದೆರೆದು ಕೇಳ್ವುದು
ಸುಜನರು
(
ಕನ್ನಡ ಜೈಮಿನಿ ಭಾರತ, ೧೯೫೬, ಸಂಧಿ. )

‘ಲಕ್ಷ್ಮೀವರನು ವೀಣೆಯಿಂದ ಗನವನ್ನು ನುಡಿಸುವಂತೆ ಕವಿತೆಯನ್ನು (ನನ್ನಿಂದ) ಪೇಳಿದನು’ ಎನ್ನುತ್ತಾನೆ. ಸಹೃದಯರು ಕೇಳಬೇಕು ಎಂಬುದೇ ತನ್ನ ಉದ್ದೇಶ, ಕವ್ಯಕ್ಕೆ ಸಫಲತೆ.

ಇವರೆಲ್ಲರಲ್ಲಿ ಸಂಭಾಷಣೆಗಳು ಕಾವ್ಯಾತ್ಮಕವಾಗಿಯೇ ಬರುತ್ತವೆ. ಅಲ್ಲಿ ಕಾವ್ಯವೇ ಪ್ರಧಾನವಾಗಿ ಸಂಭಾಷಣೆ ಎನ್ನುವುದಕ್ಕೆ ವಿಶಿಷ್ಟ ಸ್ಥಾನವಿಲ್ಲ. ಈ ಮಾತು ಕುಮಾರವ್ಯಾಸನಿಗೂ ಅನ್ವಯಿಸುತ್ತದೆ. ದ್ರೌಪದಿ ಸ್ವಯಂವರದ ಸನ್ನಿವೇಶದ ಈ ಪದ್ಯ ನೋಡಿ,

ಏನು ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿಂಗಲ್ಲಲೇ ತಾ
ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ
ವೈನತೇಯನ ವಿಗಡಿಸಿದ ವಿಷ
ವೇನು ಸದರವೊ ಹಾವಡಿಗರಿಗಿ
ದೇನು ನಿಮ್ಮುತ್ಸಾಹವೆಂದುದು ಧೂರ್ತ ವಟುನಿಕರ
(
ಕರ್ನಾಟ ಭಾರತ ಕಥಾಮಂಜರಿ, ಆದಿಪರ್ವ, ೧೫೧೦)

ಇಲ್ಲಿಯ ಮಾತಿನ ಶೈಲಿ ಆಡಿದಂತೆ ಇದ್ದರೂ ‘ವೈನತೇಯನ ವಿಗಡಿಸಿದ’ ಎಂಬ ಮಾತು ಆಡುನುಡಿಯಲ್ಲಿ ಭಾರವೆನಿಸುತ್ತದೆ. ಅಲ್ಲದೇ ಇಲ್ಲಿ ಒಬ್ಬರೇ ಮಾತಾಡಿದುದು ಇದೆ. ಆದುದರಿಂದ ಇದು ಸಂಭಾಷಣೆ ಎನಿಸಿಕೊಳ್ಳುವದಿಲ್ಲ. ಇದರಿಂದ ಇಲ್ಲಿ ಕಾವ್ಯದ ತೂಕವೇ ಹೆಚ್ಚು ಎಂಬ ಮಾತು ದೃಢಪಡುತ್ತದೆ.

ವಚನಕಾರರ ವಚನಗಳು ಒಂದು ವಿಶಿಷ್ಟ ಸಾಂಸ್ಕೃತಿಕ ಅನುಭವವನ್ನು ಇತರರೊಡನೆ ಹಂಚಿಕೊಳ್ಳಲು ರೂಪಿಸಿಕೊಂಡ, ಸಾಮಾಜಿಕ ಪ್ರಕ್ರಿಯೆಯಲ್ಲಿ ಬಳಕೆಯಾಗುತ್ತಿದ್ದ. ವಿಶಿಷ್ಟ ಪ್ರಕಾರದ ಅಭಿವ್ಯಕ್ತಿ. ಅಂದರೆ ವಚನಗಳ ಮೂಲ ದ್ರವ್ಯ ಆಧ್ಯಾತ್ಮಿಕ ಅನುಭವ. ಅದರ ಬಗೆಗೆ ಜ್ಞಾನವನ್ನು ಎಲ್ಲರೂ ಉಂಟುಮಾಡಿಕೊಳ್ಳಬೇಕು ಎನ್ನುವುದು ಉದ್ದೇಶ. ತಮ್ಮಂತೆ ಇತರರೂ ಜ್ಞಾನವನ್ನು ವರ್ಧಿಸಿಕೊಳ್ಳಲು ಸಹಾಯ ಮಾಡುವುದೇ ಗುರಿಯಾಗಿರುತ್ತಿತ್ತು.

ವಚನಗಳು ಇಂದು ಲಿಖಿತ ಸಾಹಿತ್ಯವಾಗಿದ್ದರೂ ಹೆಚ್ಚಿನ ವಚನಗಳು ಮಾತಿನ ಸ್ವರೂಪವನ್ನು ಹೊಂದಿರುವುದರಿಂದಲೂ ವಿಶಿಷ್ಟವಾದ ಜ್ಞಾನವನ್ನು ಪ್ರಸಾರ ಮಾಡುತ್ತಿರುವುದರಿಂದಲೂ ಜ್ಞಾನಶಾಸ್ತ್ರದ ಬೆಳಕಿನಲ್ಲಿ ಅವುಗಳನ್ನು ವಿಶ್ಲೇಷಿಸಿದರೆ ಹೆಚ್ಚಿನ ಬೆಳಕು ಮೂಡಬಹುದು.

ವಚನಗಳಲ್ಲಿ ಬಳಕೆಯಾದ ವಿಶಿಷ್ಟ ಪದಪ್ರಯೋಗಗಳನ್ನು ಮತ್ತು ವಾಕ್ಯರಚನಾ ವಿನ್ಯಾಸವನ್ನು ಹಿಂದೆ ನೋಡಿದೆವು. ವಚನಕಾರ ತನಗೆ ಅನಿಸಿದುದನ್ನು, ತನ್ನ ಅನುಭವದಲ್ಲಿ ವೇದ್ಯವಾದುದನ್ನು, ನೇರವಾಗಿ ಅಭಿವ್ಯಕ್ತಿಗೊಳಿಸಿದ್ದಾನೆ ಎಂಬ ಭಾವನೆ ಬರುತ್ತದೆ. ಆದರೆ ಯಾರನ್ನು ಕುರಿತು ಆ ಮಾತುಗಳನ್ನು ಹೇಳುತ್ತಿದ್ದಾನೆ ಎಂಬುದು ಅನೇಕ ಸಂದರ್ಭದಲ್ಲಿ ವ್ಯಕ್ತವಾಗುವುದಿಲ್ಲ. ಅಂದರೆ ಅಲ್ಲಿ ವಚನಕಾರ ತನ್ನ ಅನುಭವದಲ್ಲಿ ಬಂದ ಸತ್ಯಕ್ಕೆ ಅಭಿವ್ಯಕ್ತಿ ಕೊಡುತ್ತಿದ್ದಾನೆ ಎಂಬ ಭಾವನೆ ಬರುತ್ತದೆ. ವಚಾಕಾರರ ವಚನಗಳನ್ನು ಓದುತ್ತಿದ್ದಾಗ ಇನ್ನೊಬ್ಬರೊಡನೆ ಅಥವಾ ಹಲವರೊಡನೆ ಚರ್ಚಿಸಿದಾಗ ‘ಮಾತಿಗೆ ಮಾತು ಮಥಿಸಿ ಬಂದ ನವನೀತವಿದು’ ಎಂದೆನಿಸುವುದಿಲ್ಲ. ಆಯಾ ವಚನಕಾರನ  ಅನುಭವಜನ್ಯ ರಸಪಾಕವಿದು ಎಂಬ ಭಾವನೆ ಬರುತ್ತದೆ. ವಚನಗಳಲ್ಲಿ ಒಂದೇ ತಿಳುವಳಿಕೆ ವಿವಿಧ ರೀತಿಯಲ್ಲಿ ಅಭಿವ್ಯಕ್ತಗೊಳ್ಳುವುದರಿಂದ ಅದರಲ್ಲಿ ಸ್ವತಃ ಅನುಭವ ಪಡೆದು ಆಡಿದ ಮಾತುಗಳು ಯಾವವು ಮತ್ತು ಬೇರೆಯವರ ಸ್ಫೂರ್ತಿಯಿಂದ ಆಡಿದ ಮಾತುಗಳು ಯಾವವು ಎಂಬುದನ್ನು ಕಂಡು ಹೀಡಿಯುವುದು ಸಾಧ್ಯವಾಗುವುದಿಲ್ಲ.

ಅಂತೂ ಒಬ್ಬ ವಚನಕಾರ ವಚನಗಳೆಂದು ಸಂಗ್ರಹವಾಗಿರುವ ಸಂಕಲನಗಳನ್ನು ಓದುತ್ತಿರುವಾಗ ವಚನಸಾಹಿತ್ಯದಲ್ಲಿ ವ್ಯಕ್ತವಾಗುವ ‘ಅನುಭವ ವಾಣಿ’ ನಿಶ್ಚಿತವಾದ ಸ್ವರೂಪವುಳ್ಳ ಅವರವರ ಅನುಭವ ಮಾತ್ರ ಎಂದಾಗಿ ಉಳಿಯದೇ ಸಾಮಾನ್ಯೀಕರಣ ಗೊಂಡ ‘ತತ್ತ್ವಜ್ಞಾನ’ ವಾಗಿದೆ ಎಂದೆನಿಸುತ್ತದೆ. ಆದುದರಿಂದ ಅದು ಪೂರ್ಣಸ್ವರೂಪದ ‘ಸಿದ್ಧಾಂತ’ (dogma) ವಾಗಿದೆ ಎಂಬ ವಿಶ್ವಾಸವನ್ನು ಹುಟ್ಟಿಸುತ್ತದೆ.

ಬಸವೇಶ್ವರರ ವಚನಗಳ ಶೈಲಿ ಇತರ ವಚನಕಾರ  ಶೈಲಿಗಿಂತ ಭಿನ್ನವಾಗಿದೆ. ಎಂಬ ಮಾತು ಈ ಮೊದಲೂ ಬಂದಿದೆ. ಅಂದರೆ  ಬಸವೇಶ್ವರರ ಶೈಲಿ ಯಾರನ್ನೋ ಕುರಿತು ತಮ್ಮ ಮಾತುಗಳನ್ನು ಹೇಳಿದಂತಿದೆ. ಆದರೆ ಇತರ ವಚನಕಾರರ ಶೈಲಿ ಸ್ವಗತ ವಿಚಾರಗಳನ್ನು ಹೇಳಿದಂತಿದೆ. ಉದಾಹರಣೆಗೆ ಮೋಳಿಗೆಯ ಮಾರಯ್ಯನ ಈ ವಚನ ನೊಡಿ:

            ಕ್ರಿ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗ ಪೂಜೆ.
ರೂಪು, ರುಚಿ, ಏಕವಾದಲ್ಲಿ ಪ್ರಾನಲಿಂಗ ಪೂಜೆ.
ರೂಪು ನಿರೂಪೆಂಬ ಉಭಯವ ತಿಳಿದಲ್ಲಿ
ಐಕ್ಯನ ಅನುಬಾವ ತೃಪ್ತಿ.
ಕೂಡುವನ್ನಬರ ನೋಟ ಸುಖಿಯಾಗಿ,
ಬೇಟದ ನೋಟ ಕೂಟದಲ್ಲಿ ಅಳಿದ ಮತ್ತೆ
ಉಭಯದ ದೃಷ್ಟ ಏಕವಾಯಿತು.
ಚರ ಅಚರವಾದಲ್ಲಿ ಉಭಯ ನಾಮರೂಪವು
ನೀನೇ ನಿಃ ಕಳಂಕ ಮಲ್ಲಿಕಾರ್ಜುನಾ.
            (
ಮೋಳಿಗೆಯ ಮಾರಯ್ಯನ ವಚನಗಳು, ೧೯೫೦,. ೩೭೪)

ಇಲ್ಲಿ ಸ್ವಾನುಭವದ ಅಭಿವ್ಯಕ್ತಿ ಇದೆ ಎಂದು ಸ್ಪಷ್ಟವಾಗುತ್ತದೆ. ಆದರೆ ಬಸವೇಶ್ವರ ವಚನಗಳನ್ನು ಓದುವಾಗ ಮಾತ್ರ ‘ಪ್ರಭು ಸಮ್ಮಿತ’ ವಲ್ಲ, ‘ಮಿತ್ರ  ಸಮ್ಮಿತ’ ಎಂಬ ಭಾವನೆ ಮೂಡುತ್ತದೆ. ಅಂದರೆ ಬಸವೇಶ್ವರರು ಪ್ರಭುವಿನಂತೆ ‘ಇದು ಹೀಗೇ ಇದೆ’ ಎಂದು ಅಪ್ಪಣೆ ಕೊಡಿಸುವುದರ ಬದಲು ನಮಗೆ ಮಿತ್ರನಂತೆ ‘ನೋಡಯ್ಯಾ, ಇದು ಹೀಗಿದೆ’ ಎಂದು ತನ್ನ ಅನುಭವಗಳನ್ನು ತಿಳಿಸಿ ಹೇಳುತ್ತಿದ್ದಾರೆ ಎಂದೆನಿಸುತ್ತದೆ. ಹೀಗೆ ಅನಿಸಲು ಮುಖ್ಯ ಕಾರಣ ಆ ವಚನಗಳು ಯಾವುದೋ ಒಂದು ಸಾಮಾಜಿಕ ಅಥವಾ ವ್ಯಕ್ತಿಗತ ಚರ್ಚಾ ಸಂದರ್ಭದಲ್ಲಿ ರಚಿತವಾಗಿವೆ ಎಂಬುದು ಸ್ಪಷ್ಟವಾಗುವದೇ ಮುಖ್ಯ ಕಾರಣವಾಗಿದೆ. ಪ್ರತಿಪಕ್ಷದವನ ಪ್ರತಿಕ್ರಿಯೆ ಇದ್ದಿದ್ದರೆ ಜ್ಞಾನಶಾಸ್ತ್ರದ ವಿಶ್ಲೇಷಣೆಗೆ ಒಳ್ಳೆಯ ಸಾಮಗ್ರಿ ಸಿಗಬಹುದಾಗಿತ್ತು. ಇರಲಿ, ಬಸವೇಶ್ವರರ ಈ ವಚನವನ್ನು ನೋಡಿ:

            ಹೊಱಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಾಗದನ್ನಕ್ಕ?
ಮಣಿಯ ಕಟ್ಟಿ ಏವೆನಯ್ಯಾ, ಮನ ಮುಟ್ಟದನ್ನಕ್ಕ?
ನೂಱನೋದಿ ಏವೆನಯ್ಯಾ, ನಮ್ಮ ಕೂಡಲ ಸಂಗಮ ದೇವರ
ಮನಮುಟ್ಟು ನೆನೆಯದನ್ನಕ್ಕ?
            (
ಬಸವಣ್ಣನವರ ಷಟ್ಸ್ಥಲದ ವಚನಗಳು, ೧೯೫೪, . ೪೭೬)

ಇಲ್ಲಿಯ ನೇರ ಮಾತಿನ ರೀತಿ ಇದಿರಿಗೆ ಅಥವಾ ಪಕ್ಕದಲ್ಲಿ ಕುಳಿತವನನ್ನು ಉದ್ದೇಶಿಸಿ ಮಾತಾಡಿದಂತಿದೆ. ಇಂಥ ಮಾತಿನ ಪರಿಣಾಮ ಹೆಚ್ಚು ತೀವ್ರವಾಗಿರುತ್ತದೆ. ಆದರೆ ಇಲ್ಲಿಯೂ ಕೇಳುವವನ ಅಥವಾ ಕೇಳಿದವನ ಪ್ರತಿಕ್ರಿಯೆ ಇಲ್ಲದುದರಿಂದ ಇದು ಸಂಭಾಷಣೇ ಎನಿಸಿಕೊಳ್ಳವುದಿಲ್ಲ

ಹೀಗೆ ನಮಗೆ ಲಭ್ಯವಿರುವ ವಚನಗಳನ್ನು ‘ಇನ್ನೊಬ್ಬರನ್ನು ಉದ್ದೇಶಿಸಿ ಹೇಳಲಾದ ವೈಯಕ್ತಿಕ ಉಕ್ತಿ’ ಎಂಬ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಇನ್ನೂ ಕೆಲವು ಮಾತುಗಳು ಹೊರಬರುತ್ತವೆ. ಎಲ್ಲ ವಚನಕಾರರ ಪ್ರತಿಯೊಂದು ವಚನವೂ ಈ ರೀತಿ ಇರದಿದ್ದರೂ ಕೆಲವರ ಕೆಲವು ವಚನಗಳಾದರೂ ಹೀಗಿವೆ ಎಂಬುದನ್ನು ಗಮನಿಸಬೇಕು.

ವಚನಕಾರರು ತಾವು ಧ್ಯಾನದಲ್ಲಿ ಕಂಡುಕೊಂಡ ಮತ್ತು ಸಮಾನಧರ್ಮಿಗಳು ಹೇಳುವವುದನ್ನು ಕೇಳಿ ತಿಳಿದುಕೊಂಡ ಸಂವಾದರೂಪೀ ಜ್ಞಾನವನ್ನು ಅಭಿವ್ಯಕ್ತ ಗೊಳಿಸಿರುವುದರಿಂದ ಅವರ ವಚನಗಳು ಮೇಲಿನ ವಿವರಣೆಯ ಪ್ರಕಾರ ಜ್ಞಾನಶಾಸ್ತ್ರದ ಪರಿಧಿಯಲ್ಲಿ ಬರುತ್ತವೆ. ಅಲ್ಲದೇ ಹೆಚ್ಚಿನ ಸಂದರ್ಭಗಳಲ್ಲಿ ಅಭೀಪ್ಸಿತಾರ್ಥಕ್ಕೂ ಸ್ವೀಕೃತಾರ್ಥಕ್ಕೂ ಒಂದು-ಒಂದು ಸಂಬಂಧವೇರ್ಪಡುತ್ತದೆ. ಎಂಬುದನ್ನೂ ಗಮನಸಬಹುದು. ಹೀಗೆ ಸಂಬಂಧವೇರ್ಪಡಲು ಮುಖ್ಯ ಕಾರಣವೆಂದರೆ, ವಚನಕಾರರು ಬಳಸುವ, ಹೆಚ್ಚು ಕಡಿಮೆ ಒಂದೇ ರೂಪದ, ಸಾಮಾನ್ಯ ಶಬ್ದ ಭಾಂಡಾರ, ಅಲ್ಲದೇ ಬಹುಶಃ ಬಸವೇಶ್ವರರು ತೋರಿಸಿಕೊಡುವ ವಿನಯಪೂರಿತ ನಿವೇದನಾ ಪದ್ಧತಿಯನ್ನು ಇತರರೂ ಅನುಸರಿಸುವುದು. ಈ ಮಾತು ಹೌದೇ? ಇಲ್ಲಿ ಒಂದು ಮೂಲಭೂತವಾದ ಪ್ರಶ್ನೆ ಏಳುತ್ತದೆ. ಬಸವೇಶ್ವರರ ಸಮಕಾಲೀನರ ವಚನಗಳಲ್ಲಿ ಕಾಣುವ ವಿಶಿಷ್ಟ ಶಬ್ದ ಭಾಂಡಾರ ಮತ್ತು ಅಭಿವ್ಯಕ್ತಿಯ ಪದ್ಧತಿಯ ಜನಕ ಯಾರು? ಅವರು ಬಸವೇಶ್ವರರೇ ಇರಬೇಕು ಎಂದು ಬಲವಾಗಿ ಅನಿಸುತ್ತದೆ. ಏಕೆಂದರೆ, ಬಸವೇಶ್ವರರ ಪೂರ್ವದಲ್ಲಿ, ಅಂದರೆ ಸುಮಾರು ಒಂದು ಶತಮಾನ ಮೊದಲು, ಇದ್ದನೆಂದು ನಂಬಲಾದ ದೇವರ (ಜೇಡರ) ದಾಸಿಮಯ್ಯನ ಕೆಳಗಿನ ವಚನವನ್ನು ನೋಡಿ:

            ಅನುಭಾವವಿಲ್ಲದವನ ಭಕ್ತಿ ತಲೆಕೆಳಗಪ್ಪುದಯ್ಯಾ!
ಅನುಭಾವವೇ ಭಕ್ತಿಗಾಧಾರ.
ಅನುಭಾವವೇ ಭಕ್ತಿಗೆ ನೆಲೆವನೆ.
ಅನುಭಾವವುಳ್ಳವರ ಕಂಡರೆ ತೂರ್ಯಾತೂರ್ಯ
ಸಂಭಾಷಣೆಯ ಮಾಡದಿರ್ದರೆ
ನರಕದಲಿಕ್ಕಯ್ಯಾ, ರಾಮನಾಥಾ.
(‘
ದೇವರ ದಾಸಿಮಯ್ಯನ ವಚನಗಳು, ೧೯೫೫, . ೪೦)

ಈ ವಚನದ ಶೈಲಿ ಬಸವೇಶ್ವರರ ಸಮಕಾಲೀನ ವಚನಕಾರರ ಶೈಲಿಗೆ ಹೋಲಿಸಬಹು ದಾದಂಥದಾದರೂ ಇಲ್ಲಿ ಅವರು ಬಳಸುವ ವಿಶಿಷ್ಟ ಪದಸಾಮಗ್ರಿಯಿಲ್ಲ. ದಾಸಿಮಯ್ಯನ ಎಲ್ಲ ವಚನಗಳನ್ನು ಅವಲೋಕಿಸಿದಾಗ ಲಿಂಗ, ಭವಿ, ಪ್ರಸಾದ, ಭಕ್ತ, ಮಂತ್ರ ಮೊದಲಾದ ಕೆಲವೇ ಪದಗಳನ್ನು ಬಿಟ್ಟು ವೀರಶೈವ ಧರ್ಮದ ವಿಶಿಷ್ಟ ಪದಪ್ರಯೋಗ ಕಾಣುವುದಿಲ್ಲ. ಆದುದರಿಂದ ವಚನಗಳಲ್ಲಿ ಕಾಣುವ ಅಭಿವ್ಯಕ್ತಿ ಶೈಲಿಯ ಪ್ರವರ್ತಕ ಬಸವೇಶ್ವರರೇ ಎಂಬ ಮೇಲಿನ ಮಾತಿಗೆ ಪುಷ್ಟಿ ದೊರೆತಂತಾಗುತ್ತದೆ.

ಆದರೆ ಬಸವೇಶ್ವರರ ವಚನಗಳನ್ನುಳಿದು ಅವರ ಸಮಕಾಲೀನ ವಚನಕಾರರ ವಚನಗಳು ತಮ್ಮ ಅನುಭವವನ್ನು ಮಾತ್ರ ಹೇಳಿದಂತಿರುವವೆಂಬ ಮಾತು ಈ ಮೊದಲು ಕೂಡ ಬಂದಿರುವುದರಿಂದ ಮೇಲಿನ ಜ್ಞಾನಶಾಸ್ತ್ರದ ವಿವರಣೆಗೆ ಅವು ಅತ್ಯುತ್ತಮ ಉದಾಹರಣೆಗಳಾಗಲಾರವು. ಆದರೆ ಶೂನ್ಯಸಂಪಾದನೆಯಲ್ಲಿ ನಾವು ಹುಡುಕುತ್ತಿರುವ ಜ್ಞಾನಶಾಸ್ತ್ರದ ಲಕ್ಷಣಗಳಿಗೆ ಸೂಕ್ತ ಉದಾಹರಣೆಗಳು ವಿಫುಲವಾಗಿ ಸಿಗುತ್ತವೆ.

ನಮ್ಮ ವಿಶ್ಲೇಷಣೆಗೆ ಸಂ. ಶಿ. ಭೂಸನೂರಮಠ ಅವರು ಸಂಪಾದಿಸಿದ, ೧೯೫೮ರಲ್ಲಿ ರಾವೂರ ಶ್ರೀ ಸಿದ್ಧಲಿಂಗೇಶ್ವರಮಠ ಮತ್ತು ಆದವಾನಿಯ ಕಲ್ಲುಮಠದ ಅಧಿಪತಿಗಳು ಪ್ರಕಟಿಸಿದ ‘ಪ್ರಭುದೇವರ ಶೂನ್ಯ ಸಂಪಾದನೆ’ ಎಂಬ ಗ್ರಂಥವನ್ನು ಉಪಯೋಗಿಸಲಾಗಿದೆ.

ಶೂನ್ಯ ಸಂಪಾದನೆಯಲ್ಲಿ ಅಲ್ಲಮಪ್ರಭುವಿನ ಜೊತೆ ಬಸವೇಶ್ವರ, ಚೆನ್ನಬಸವೇಶ್ವರ, ಸಿದ್ಧರಾಮಯ್ಯ, ಆಯ್ದಕ್ಕಿ ಮಾರಯ್ಯ, ಮೋಳಿಗೆಯ ಮಾರಯ್ಯ, ಮುಕ್ತಾಯಕ್ಕ, ಮಹಾದೇವಿಯಕ್ಕ ಮೊದಲಾದ ಶಿವಶರಣ ಶಿವಶರಣೆಯರು ನೇರವಾಗಿ ನಡೆಸಿದ ಸಂಭಾಷಣೆ ಇದೆ. ಅಲ್ಲಿ ಅಭೀಪ್ಸಿತಾರ್ಥಕ್ಕೂ ಸ್ವೀಕೃತಾರ್ಥಕ್ಕೂ ಸಂಬಂಧ ಹೇಗೆ ಏರ್ಪಡುತ್ತದೆ ಎಂಬುದನ್ನು ನೋಡೋಣ. ಪ್ರಭುದೇವರು ಬಸವೇಶ್ವರನನ್ನು ಕೇಳುತ್ತಾರೆ :

ಕಾಯವಿಡಿದು ಲಿಂಗವಿದೆ; ಲಿಂಗವಿಡಿದು ಕಾಯವಿದೆ.
ಅಱುವುವಿಡಿದು ವಚನವಿದೆ;
ವಚನವಿಡಿದು ತೋರುವ ಅಱುವಿದೆ.
ಲಿಂಗಾಂಗವೆರಡೂ ನಿಮ್ಮಲ್ಲಿ ಐಕ್ಯವಾದ ಪರಿ ಎಂತು ಹೇಳಾ?
ಸ್ವರವಿಡಿದು ಶಬುದ ಸಮರಸವಾದ ಪರಿ ಎಂತು ಹೇಳಾ?
ದೇವ ಭಕ್ತನೆಂಬ ನಾಮ ಸೀಮೆಯಡಗಿ,
ಗೋಹೇಶ್ವರಲಿಂಗದಲ್ಲಿ ತದುಗತವಾಗಿದ್ದ ಪರಿ ಎಂತು
ಹೇಳಾ ಸಂಗನಬಸವಣ್ಣಾ?
(
ಶೂನ್ಯ ಸಂಪಾದನೆಯಲ್ಲಿಬಸವೇಶ್ವರನ ಸಂಪಾದನೆ. ೧೪)

ಲಿಂಗಾಂಗವೆರಡೂ ನಿಮ್ಮಲ್ಲಿ ಐಕ್ಯವಾದ ಪರಿ ಎಂತು ಎಂದು ಕೇಳಿದ ಪ್ರಭುದೇವರ ಮಾತಿಗೆ ಬಸವಣ್ಣನವರು ಕೊಟ್ಟ ಉತ್ತರ ನೋಡಿ :

ಘನಗಂಭೀರ ಮಹಾಘನದೊಳಗೆ
ಘನಕ್ಕೆ ಘನವಾಗಿರ್ದೆನಯ್ಯಾ.
ಕೂಡಲಸಂಗನೆಂಬ ಬೆಳಗಿನೊಳಗೆ ಬೆಳಗಾಗಿದ್ದು
ಶಬ್ದಮುಗ್ಧವಾಗಿದುದನೇನೆಂಬೆನಯ್ಯಾ?
(
ಶೂನ್ಯ ಸಂಪಾದನೆಯಲ್ಲಿಬಸವೇಶ್ವರನ ಸಂಪಾದನೆ. ೧೫)

ಮಹಾಘನದೊಳಗೆ ಒಂದಾದ ಮೇಲೆ ಲಿಂಗ ಅಂಗ ಎಂಬ ಭಿನ್ನತೆಯ ಅರಿವೂ ಉಳಿಯದ ಅನುಭವ ಬರುತ್ತದೆ. ಬೆಳಕಿನಲ್ಲಿ ಬೆಳಕು ಸೇರಿಕೊಂಡ ಮೇಲೆ ಎರಡೂ ಬೆಳಕುಗಳನ್ನು ಬೇರ್ಪಡಿಸಿ ನೋಡಲು ಸಾಧ್ಯವೇ? ಶಬ್ದಗಳಿಗೂ ನಿಲುಕದ ಆ ಸ್ಥಿತಿಯನ್ನು ವರ್ಣಿಸಲು ಕೂಡ ಸಾಧ್ಯವಿಲ್ಲ. ಏಕೆಂದರೆ ವರ್ಣಿಸುವುದು ಒಂದರಿಂದ ಇನ್ನೊಂದು ಬೇರೆಯಾಗಿದ್ದಾಗ ಮಾತ್ರ ಸಾಧ್ಯ. ಲಿಂಗದಲ್ಲಿ ಐಕ್ಯನಾಗಿರುವ ಅನುಭವದ ನಿವೇದನೆ ತುಂಬಾ ಚೆನ್ನಾಗಿದೆ. ಬಸವೇಶ್ವರರು ಕೊಟ್ಟ ಉತ್ತರ ಪ್ರಭುದೇವರ ಪ್ರಶ್ನೆಗೆ ತುಂಬಾ ಸಮರ್ಪಕವಾಗಿದೆ.

ಇನ್ನೊಂದು ಸಂದರ್ಭದಲ್ಲಿ ಬಸವಣ್ಣನೇ ತನಗೆ ಸಾಧನೆಯ ದಾರಿ ತೋರಿದನೆಂದು ಪ್ರಭುದೇವರು ನುಡಿಯುತ್ತಾರೆ ನೋಡಿ :

ಗುರು ಒಂದೆ ಬಸುಱು, ಲಿಂಗ ಒಂದೆ ಬಸಱು.
ಜಂಗಮ ಒಂದೆ ಬಸಱು, ಪ್ರಸಾದ ಒಂದೆ ಬಸಱು.
ಇವನಾರಯ್ಯಾ ಅಮಳೋಕ್ಯವ ಮಾಡಿ ತೋಱುದವರು?
ಇವನಾರಯ್ಯಾ ಪ್ರಜ್ವಲಿತವ ಮಾಡಿ ಬೇಱೆ ಬೇಱೆ
ಕರತಳಾಮಳಕವ ಮಾಡಿ ತೋಱುದವರು?
ಪೂರ್ವಾಚಾರಿ ಭಕ್ತಿ ಭಂಡಾರಿ ಬಸವಣ್ಣಾ,
           
ನೀನೆನಗೆ ಗೊಹೇಶ್ವರಲಿಂಗವ ತೋಱುದೆಯಾಗಿ
ಲೋಕಾದಿಲೋಕವೆಲ್ಲವು ಕಿಂಚಿತ್ತು!
(
ಶೂನ್ಯ ಸಂಪಾದನೆಯಲ್ಲಿಬಸವೇಶ್ವರನ ಸಂಪಾದನೆ. ೨೦)

ಪ್ರಭುದೇವರೂ ಸಾಧನೆಯ ಹಾದಿಯಲ್ಲಿ ಸಾಕಷ್ಟು ಸಿದ್ಧಿಯನ್ನು ಪಡೆದಿದ್ದರೂ ಬಸವಣ್ಣನಿಗೆ ಗೌರವದಿಂದ ಗುರುಸ್ಥಾನವನ್ನು ಕೊಡುತ್ತಾರೆ. ಆದರೆ ಸೌಜನ್ಯದಲ್ಲಿ ಬಸವಣ್ಣನನ್ನು ಮೀರುವವರಿಲ್ಲ! ಅವರ ಉತ್ತರ ನೋಡಿ :

ಎನ್ನಂತರಂಗದೊಳಗೆ ಅಱುವಾಗಿ,
ಎನ್ನ ಬಹಿರಂಗದೊಳಗಾಚಾರವಾಗಿ ನೀನೆಡೆಗೊಂಡು,
ಎನ್ನ ಮನದೊಳಗೆ ಘನ ನೆನಹಾಗಿ ಮೂರ್ತಿಗೊಂಡು,
ಗುರುಸ್ಥಲ, ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಿಸ್ಥಲವೆಂಬ
ಚತುರ್ವಿಧವನು ಎನಗೆ ಸ್ವಾಯತವ ಮಾಡಿ ತೋಱು,
ಪ್ರಾಣಲಿಂಗವೆಂಬ ಹಾದಿಯ ಸೆಱಗ ತೋಱಿಸಿ
ಎಲ್ಲಾ ಅಸಂಖ್ಯಾತರನು ಪಾವನವ ಮಾಡಿದಿರಾಗಿ,
ಕೂಡಲಸಂಗಮದೇವಾ, ನಿಮ್ಮಿಂದ ಸಕಲ ಸನುಮತವ
ನಾನಱುದೆನಲ್ಲದೆ ಎನ್ನಿಂದ ನೀನಾದೆಯೆಂಬುದ
ನಿಮ್ಮ ಪ್ರಮಥರು ಮೆಚ್ಚರು ನೋಡಯ್ಯಾ!
(
ಶೂನ್ಯ ಸಂಪಾದನೆಯಲ್ಲಿಬಸವೇಶ್ವರನ ಸಂಪಾದನೆ. ೨೧)

‘ನಿಮ್ಮಿಂದಲೇ ನಾನು ಸನ್ಮತವನ್ನು ಅರಿತೆ; ನನ್ನಿಂದ ನೀನಾದೆ ಎಂಬುದು ಸೂಕ್ತವಲ್ಲ’ ಎಂದು ಬಸವೇಶ್ವರರು ಪ್ರಭುದೇವರಿಗೆ ಹೇಳುತ್ತಾರೆ. ಹೇಳುವ ರೀತಿ ವಿನಯಪೂರಿತವೂ ಆಗಿದೆಯಲ್ಲದೇ ಸಾಧಾರವಾಗಿದೆ.

ಅಕ್ಕಮಹಾದೇವಿ ದೇಹದ ಪರಿವೆಯನ್ನು ಮರೆತು ವಸ್ತ್ರತ್ಯಾಗ ಮಾಡಿ ಅನುಭವ ಮಂಟಪವನ್ನು ಪ್ರವೇಶಿಸಿದಾಗ ಎಲ್ಲರಂತೆ ಪ್ರಭುದೇವನಿಗೂ ಆಶ್ಚರ್ಯವಾಗುತ್ತದೆ. ಅವರ ನಡುವಿನ ಸಂಭಾಷಣೆ ಆಧ್ಯಾತ್ಮದ ಮೇಲೆ ವಿಶೇಷ ಬೆಳಕು ಬೀರುತ್ತದೆ ಈ ಮಾತನ್ನು ಪ್ರಭುದೇವರು ನೇರವಾಗಿ ಕೇಳುತ್ತಾರೆ, ನೊಡಿ :

ತಪ್ಪ ಹೊಱುಸಿ ಹೊರಟಿಹೆನೆಂಬುದು ಸತ್ಯವೇ?
ತನು ಸೀರೆಯನಳಿದು ನಿರ್ವಾಣದಲ್ಲಿ ಮನದ ಭ್ರಾಂತು
ನಿಶ್ಚಯವಾಗದು.
ಕೇಶವೆಂಬ ಸೀರೆ ಅಂಗಕ್ಕೆ ಮಱೆಯಾಯಿತ್ತು.
ಅಪಮನವೆಂತು ಹಱುಯಿತ್ತು?
ಅದು ಗೊಹೇಶ್ವರಲಿಂಗಕ್ಕೆ ಸಲ್ಲದ ವೇಷ.
(
ಶೂನ್ಯ ಸಂಪಾದನೆ, ‘ಮಹಾದೇವಿಯಕ್ಕಗಳ ಸಂಪಾದನೆ. ೧೫)

ಬೆತ್ತಲೆಯಾಗಿ ತನ್ನ ಕೇಶದಿಂದಲೇ ಮಾನವನ್ನು ಮರೆಮಾಡಿ ಅದ್ಭುತ ವಿರಕ್ತಿಯನ್ನು ಹೊಂದಿದ ಅಕ್ಕಮಹಾದೇವಿ ಸಭೆಯನ್ನು ಪ್ರವೇಶಿಸಿದಾಗ ಪ್ರಭುದೇವ ಅದನ್ನೇ ಕುರಿತು ಮೊದಲ ಪ್ರಶ್ನೆ ಕೇಳುತ್ತಾನೆ. ಮಹಾದೇವಿಯನ್ನು ಅಪಮಾನಿಸ ಬೇಕೆಂದು ಅಥವಾ ಆಕೆಯ ನಗ್ನತೆಯನ್ನು ಎತ್ತಿ ತೋರಿಸಬೇಕೆಂದು ಈ ಪ್ರಶ್ನೆ ಕೇಳುತ್ತಾನೆಂದಲ್ಲ. ಆಕೆಯ ಅಂತರಂಗದ ಪರಿಪಕ್ವತೆಯನ್ನು ಸಭೆಗೆ ಮನದಟ್ಟು ಮಾಡಿಕೊಡುವುದಕ್ಕಾಗಿ ಕೇಳುತ್ತಾನೆ. ಅಕ್ಕಮಹಾದೇವಿಯ ದಿಟ್ಟ ಉತ್ತರ ನೋಡಿ :

ಕಾಯ ಕಱ್ಱನೆ ಕಂದಿದಡೇನಯ್ಯ?
ಕಾಯ ಮಿಱ್ಱನೆ ಮಿಂಚಿದಡೇನಯ್ಯಾ?
ಅಂತರಂಗ ಶುದ್ಧವಾದ ಬಳಿಕ,
ಚೆನ್ನಮಲ್ಲಿಕಾರ್ಜುನ ಲಿಂಗವು ಒಲಿದ ಕಾಯವು
ಹೇಗಿದ್ದಡೇನಯ್ಯಾ?
(
ಶೂನ್ಯ ಸಂಪಾದನೆ, ‘ಮಹಾದೇವಿಯಕ್ಕಗಳ ಸಂಪಾದನೆ. ೧೬)

ಮಾಯಾಪಾಶದಿಂದ ಹೊರಬಂದ ಮೊದಲ ಉದಾಹರಣೆ ಆಕೆಯ ಇರುವಿಕೆಯಲ್ಲಿಯೇ ವ್ಯಕ್ತವಾಗುತ್ತದೆ. ಪ್ರಭುವಿನ ಪ್ರಶ್ನೆಗೆ ಅಕ್ಕನ ಉತ್ತರ ತುಂಬಾ ಸಮರ್ಪಕವಾಗಿದೆ. ಆದರೆ ಪ್ರಭುವಿಗೆ ಸಮಾಧಾನವಿಲ್ಲ. ಅವನು ಕೇಳುತ್ತಾನೆ :

ದೇವನೊಲಿದ, ನೀನೊಲಿದೆನೆಂಬುದು ಅದಾವುದಕ್ಕ?
ಭಾವ ಶುದ್ಧವಾದಲ್ಲಿ ಸೀರೆಯನಳಿದು
ಕೂದಲ ಮಱೆಸಲೇತಕ್ಕೆ?
ಅದು ಅಂತರಂಗದ ನಾಚಿಕೆ ಬಾಹ್ಯದಲ್ಲಿ ತೋಱುತ್ತು.
ಅದು ಗೊಹೇಶ್ವರಲಿಂಗಕ್ಕೆ ಒಲವರವಲ್ಲ.
(
ಶೂನ್ಯ ಸಂಪಾದನೆ, ‘ಮಹಾದೇವಿಯಕ್ಕಗಳ ಸಂಪಾದನೆ. ೧೭)

ಸೀರೆಯನ್ನು ಬಿಟ್ಟು ಕೂದಲಿನಿಂದ ಮರೆ ಮಾಡುವದೇಕೆ? ಅಂದರೆ ಇದೂ ಕೂಡ ನಾಚಿಕೆಯ ಪ್ರಕಟನೆಯೇ ಅಲ್ಲವೇ ಎಂಬ ಪ್ರಭುವಿನ ಪ್ರಶ್ನೆಗೆ ಅಕ್ಕಮಹಾದೇವಿಯ ಉತ್ತರ ತುಂಬಾ ಸಮರ್ಪಕವಾಗಿದೆ.

ಫಳ ಒಳಗೆ ಪಕ್ವವಾಗಿಯಲ್ಲದೆ
ಹೊಱಗನ ಸಿಪ್ಪೆ ಒಪ್ಪಗೆಡದು.
ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು,
ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ? ಕಾಡದಿರಣ್ಣಾ,
ಚೆನ್ನಮಲ್ಲಿಕಾರ್ಜುನದೇವರ ದೇವನ ಒಳಗಾದವಳ
(
ಶೂನ್ಯ ಸಂಪಾದನೆ, ‘ಮಹಾದೇವಿಯಕ್ಕಗಳ ಸಂಪಾದನೆ. ೧೮)

ಉತ್ತರ ತುಂಬಾ ಪರಿಣಾಮಕಾರಿಯಾಗಿದೆ. ‘ಕಾಮನ ಮುದ್ರೆಯನ್ನು ಕೂದಲಿನಿಂದ ಮುಚ್ಚಿದ್ದು ನೋಡಿದವರಿಗೆ ನೋವಾಗದಿರಲೆಂದೇ ಹೊರತು ನನ್ನ ನಾಚಿಕೆಯಿಂದಲ್ಲ’ ಎಂಬ ಅಕ್ಕಮಹಾದೇವಿಯ ಉತ್ತರ ಆಕೆಯ ವೈರಾಗ್ಯದ ಪರಿಪಕ್ವಸ್ಥಿತಿಯನ್ನು ಮುಟ್ಟಿದುದನ್ನು ಸೂಚಿಸುತ್ತದೆ.

ಇಲ್ಲಿ ಅಭೀಪ್ಸಿತಾರ್ಥ ಮತ್ತು ಸ್ವೀಕೃತಾರ್ಥಗಳು ಒಂದಕ್ಕೊಂದು ಅವ್ಯವಹಿತವಾಗಿ ಬೆಸೆದುಕೊಂಡಿವೆ.

ಮತ್ತೊಂದು ಸಂದರ್ಭದಲ್ಲಿ ಅಲ್ಲಮಪ್ರಭು ಮತ್ತು ಸಿದ್ಧರಾಮೇಶ್ವರ ಅವರ ಸಂಭಾಷಣೆಯನ್ನು ನೋಡಬಹುದು. ಸಿದ್ಧರಾಮ ಸೊನ್ನಲಿಗೆ (ಈಗಿನ ಸೊಲ್ಲಾಪುರ)ಯಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸಿ ಜನೋಪಕಾರಿ ಕೆಲಸಗಳನ್ನು ಮಾಡಿದ ಶರಣ. ಅವನನ್ನು ಕುರಿತು ಅಲ್ಲಮ ಹೀಗಳೆದು ಮಾತಾಡಿದ ಪರಿಯಿದು :

ಕೆಱೆಯ ಕಟ್ಟಿಸುವ ಒಡ್ಡನ ಪ್ರತಾಪವನೇನೆಂಬೆನಯ್ಯಾ!
ನೆಲನನಗಿದು ಜಲವ ತೆಗೆದಿಹೆನೆಂಬ ಬಳಲಿಕೆಯ ನೋಡಾ!
ಒಂದು ಕಲ್ಲನು ಕಡಿದು ಮತ್ತೊಂದು ಕಲ್ಲಿಗೆ ಭೋಗವ
ಕೊಟ್ಟಿಹೆನೆಂಬ ಅಜ್ಞಾನವಿದೇನೋ?
ಗೊಹೇಶ್ವರಾ, ಇರವಿನ ಪರಿಗೆ ಬೆಱಗಾದೆನು.
(
ಶೂನ್ಯ ಸಂಪಾದನೆ, ‘ಸಿದ್ಧರಾಮಯ್ಯಗಳ ಸಂಪಾದನೆ. )

ಬಾವಿಯನ್ನು ತೆಗೆಯುವಾಗ ಕೆಲವು ಕಲ್ಲುಗಳನ್ನು ಪುಡಿಮಾಡಿ ಎಸೆಯಬೇಕಾಗುತ್ತದೆ. ಆದರೆ ಕೊನೆಗೆ ಅದೇ ರೀತಿಯ ಕಲ್ಲುಗಳನ್ನು ಉಪಯೋಗಿಸಿ ಬಾವಿಗೆ ಕಟ್ಟೆ ಕಟ್ಟಿ ಉಪಯೋಗಕ್ಕೆ ಅಣಿಗೊಳಿಸಬೇಕಾಗುತ್ತದೆ. ಈ ವ್ಯವಹಾರದ ಮಾತನ್ನು ರೂಪಾತ್ಮಕವಾಗಿ ಆಧ್ಯಾತ್ಮಕ್ಕೂ ಅನ್ವಯಿಸಿ ಜಾಣ್ಮೆಯಿಂದ ಪ್ರಭುದೇವನಾಡಿ ಮುಂದೆ ನೇರವಾಗಿ ಸಿದ್ಧರಾಮಯ್ಯನನ್ನು ಹೀಯಾಳಿಸುತ್ತಾನೆ :

ಒಳಗೆ ತೊಳೆದು ಜಲವ ತುಂಬಲಱಿಯದ
ಅರೆಮರುಳನೇನಾದ ಹೇಳಿರೆ?
ಜಲದ ಸಂಗವ ತೊಳೆಯಲಿಱಿಯದೆ,
ಜಲವ ಬಯಸುತಿರ್ದಹ ಹೇಳಿರೆ?
ನೆಲನ ಶೋಧಿಸಿ ನೆಲೆಯನಱಿಯದೆ,
ಕೆಱೆಯ ಕಟ್ಟಿಸುವ ಒಡ್ಡರಾಮಯ್ಯನ
ಇರವೆಂತು ಹೇಳಿರೆ?
ನಮ್ಮ ಗೊಹೇಶ್ವರನ ನಿಲವನಱಿಯದ
ಮರುಳ ಸಿದ್ಧರಾಮಯ್ಯನೆಂತಿರ್ದಹ ಹೇಳಿರೆ?
(
ಶೂನ್ಯ ಸಂಪಾದನೆ, ‘ಸಿದ್ಧರಾಮಯ್ಯಗಳ ಸಂಪಾದನೆ. )

ತನ್ನ ಸಾಧನೆಯನ್ನು ಲಕ್ಷಿಸದೇ ಕೆರೆ ಕಟ್ಟಿಸಿದ ಒಡ್ಡನೆಂದು ಹೀಗಳೆದು ಆಡಿದ ಮಾತಿನಿಂದ ಸಿದ್ಧರಾಮಯ್ಯ ತುಂಬಾ ನೊಂದುಕೊಂಡು ಮಾತಿಗೆ ಮಾತು ಕೊಡುವ ಬದಲು ತನ್ನ ಸಾಧನಾ ಶಕ್ತಿಯನ್ನು ಪ್ರದರ್ಶಿಸುತ್ತಾನೆ. ಮಹಾಶಿವನಂತೆ ತನ್ನ ಹಣೆಯ ಕಣ್ಣನ್ನು ತೆರೆಯುತ್ತಾನೆ.

ಎಕ್ಕೆವಿಂಡುಗಳೆಂಬವರು ಮುಕ್ಕಣ್ಣಾ, ನಿಮ್ಮ ಗಣಂಗಳು.
ಬತ್ತಿದ ಕೆಱೆಗೆ ಬಾಯ ಬಿಟ್ಟಂತೆ ಮೊರೆಯಿಟ್ಟು ಬರಲು,
ಹೊತ್ತಿದ ಅಂಗಾಲ ಕಿಚ್ಚು ನೆತ್ತಿಯ ಮುಟ್ಟಿದರೆ,
ಚಿಕ್ಕನೆ ಕಪಿಲಸಿದ್ಧಮಲ್ಲಿನಾಥ ನೊಸಲ ಕಣ್ಣ ತೆಗೆದನು.
(
ಶೂನ್ಯ ಸಂಪಾದನೆ, ‘ಸಿದ್ಧರಾಮಯ್ಯಗಳ ಸಂಪಾದನೆ. ೧೪)

ಅದರ ಮಹಾಜ್ವಾಲೆಯ ದಾಳಿ ಬ್ರಹ್ಮಾಂಡ ಮಂಡಲವನ್ನು ಮುಸುಕುತ್ತದೆ. ಅದನ್ನು ಕಂಡು ಸಿದ್ಧರಾಮಯ್ಯನೇ ಆಶ್ಚರ್ಯ ಪಡುತ್ತಾನೆ.

ಮೇಲೆ ಉದಾಹರಿಸಿದ ಸಂವಾದ ರೂಪದ ವಚನಗಳಲ್ಲಿ ಬೆಳೆದು ಬರುವ ತಿಳುವಳಿಕೆಯ ಸ್ವರೂಪ ಸಾಧಾರಣೀಕೃತವಾಗಿದ್ದು ಅವು ಹೆಚ್ಚು ಕಡಿಮೆ ಒಂದೇ ರೀತಿಯ ಶಬ್ದ ಭಾಂಡರವನ್ನು ಬಳಸುತ್ತವೆ. ಇದರಿಂದ ವಚನಕಾರರ ಅಭಿವ್ಯಕ್ತಿಯ ಜಾಡು ಮನದಟ್ಟಾಗುತ್ತದೆ.

ದಾಸರ ಕೀರ್ತನೆಗಳಲ್ಲಿಯೂ ಇಂಥ ಅನುಭಾವದ ಪರಿಯನ್ನು ಆಡುನುಡಿಯಲ್ಲಿ ಹೇಳಿದುದನ್ನು ನೋಡುತ್ತೇವೆ. ಪುರಂದರ ದಾಸರ ಕೀರ್ತನೆಗಳಲ್ಲಿ (ಪುರಂದರದಾಸರ ಕೀರ್ತನೆಗಳು, ೧೯೬೩, ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ.) ವೈವಿಧ್ಯ ಪೂರ್ಣ ರಚನೆಗಳು ಗೋಚರಿಸುತ್ತವೆ. ಕೆಳಗಿನ ಹಾಡಿನಲ್ಲಿ ಅವರ ಅನುಭವವಿದೆ.

ಕಂಡೆ ನಾ ಕನಸಿನಲಿ ಗೋವಿಂದನ
ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ

ಇಲ್ಲಿ ಅವರ ಅನುಭವದ ಪ್ರಾಮಾಣಿಕ ಕಥನವಿದೆ. ಅದೇ ಕೆಳಗಿನ ಹಾಡಿನಲ್ಲಿ ಮಾತಿನ ರೀತಿಯಿದೆ.

ಅಮ್ಮ, ಎನ್ನ ಕೂಡಾಡುವ ಮಕ್ಕಳು ಅಣಕಿಸುವರು ನೋಡೆ
ಯಾರು ಪಡೆದನೆಂಬೊರೆ, ಅಮ್ಮಯ್ಯ

ಇಲ್ಲಿ ಆಧ್ಯಾತ್ಮಿಕ ಅನುಭವವನ್ನು ಮಕ್ಕಳು ಚಾಡಿ ಹೇಳುವ ರೀತಿಯಲ್ಲಿ ಹೇಳಿದ್ದಾರೆ. ಇನ್ನೊಂದು ಹಾಡಿನಲ್ಲಿ ಶಬ್ದಗಳ ಮೇಲೆ ಆಟವಾಡುತ್ತಾರೆ. ನೋಡಿ,

ರಾಗಿ ತಂದೀರ್ಯಾ ಭಿಕ್ಷಕೆ ರಾಗಿ ತಂದೀರ್ಯಾ!
ಯೋಗ್ಯರಾಗಿ ಭೋಗ್ಯರಾಗಿ, ಭಾಗ್ಯವಂತರಾಗಿ ನೀವು
ರಾಗಿ ತಂದೀರ್ಯಾ

ಇಲ್ಲಿಯ ‘ಯೋಗ್ಯ ರಾಗಿ’ ಮತ್ತು ‘ಯೋಗ್ಯರು ಆಗಿ’ ಎಂಬಲ್ಲಿಯ ಪದಶ್ಲೇಷ ಪರಿಣಾಮಕಾರಿಯಾಗಿದೆ. ಇದರ ರೀತಿ ಪ್ರಶ್ನೆಯಾಗಿದ್ದರೂ ಉತ್ತರದ ನಿರೀಕ್ಷೆಯಿಲ್ಲ. ಹೀಗೆ ಅತ್ಯಂತ ವೈವಿಧ್ಯಪೂರ್ಣ ಮಾತಿನ ರೀತಿಗಳು ದಾಸರ ಹಾಡಿನಲ್ಲಿ ದೊರೆಯುತ್ತವೆ.

ಇನ್ನು ಹೊಸಗನ್ನಡಕ್ಕೆ ಬಂದರೆ ಅಲ್ಲಿ ಸಂಭಾಷಣೆಗಳು ಕವನಗಳಲ್ಲಿ ದೊರೆಯುವುದಿಲ್ಲ. ಆದರೆ ಕಥೆ ಕಾದಂಬರಿಗಳಲ್ಲಿ ಅವು ವಿಫುಲವಾಗಿ ದೊರೆಯುತ್ತವೆ. ಅಲ್ಲಿ ಕಥೆಯ ಸನ್ನಿವೇಶ ಚಿತ್ರಣ ಮತ್ತು ಮುಂದುವರಿಕೆಯಲ್ಲದೇ ತಮ್ಮ ಭಾಷೆಯ ಪ್ರಾದೇಶಿಕತೆ ಮತ್ತು ಸಂಸ್ಕೃತಿಯ ಹಿನ್ನೆಲೆ ದೊರೆಯುತ್ತವೆ. ಅಂದರೆ ಅವು ಕಥೆಯನ್ನಷ್ಟೇ ಅಲ್ಲದೇ ಇನ್ನೂ ಅನೇಕ ವಿಷಯಗಳನ್ನು ಹೇಳುತ್ತವೆ. ಉದಾಹರಣೆಗೆ ಎಂ. ಕೆ. ಇಂದಿರಾ ಅವರ ‘ಸದಾನಂದ’ ಕಾದಂಬರಿಯಲ್ಲಿಯ ಈ ಸಂಭಾಷಣೆ ನೋಡಿ.

ಅದ್ಯಾರು ಗೊತ್ತಾತನು ನಿಂಗೆ? ‘
ನೂರೆಂಟ್ಜನ ಬರ್ತಾರೆ ನಿಮ್ಮ ಗುರುತಿನೋರು. ನಂಗೆ ಹ್ಯಾಗೆ ಗೊತ್ತಾಗ್ಬೇಕು? ‘
ಕಟ್ಟೆಮನೆ ಕೇಶವಯ್ನೋರ ಮಗ ಅವರು
ಅಚ್ಚಮ ಕಣ್ಣು ತೇಲಿಸಿದರು.
ಅವರ ಹಿರೀ ಹೆಂಡ್ತೀಗೆ ಮಕ್ಳೇ ಆಗಿರಲಿಲ್ವಂತೆ!’
ಹೌದು, ಎರಡ್ನೇ ಹೆಂಡ್ತೀ ಮಗ ಈತ. ಒಂದು ಹುಡುಗೀನೂ ಇರ್ಬೇಕು.’
ಏನೋ ಒಂದು ನಮೂನೆಯಾಗಿದಾರಪ್ಪ.’
ಅದೇ ಕುಂದಾಪುರದ ಹವೀಕರ ಹೆಣ್ಣಲ್ವನೆ ಅವರ ಎರಡ್ನೇ ಸಂಬಂಧ? ಆಕೆಯ ಮಗ ಈತ. ಅಮ್ಮನ ಹಾಗೇ ಅದಾನೆ.’
ಅದೇ ನಾನು ಅಂದದ್ದು. ಉಡುಪಿಯೋರ ಹಾಗೇ ಮಾತಾಡ್ತಾರಲ್ಲ.’
(
ಎಂ. ಕೆ. ಇಂದಿರಾ ಅವರಸದಾನಂದ ‘, ೧೯೬೭)

ಇಲ್ಲಿ ಅನೇಕ ಸೂಚನೆಗಳು ಗೋಚರವಾಗುತ್ತದೆ. ತೀರ್ಥಹಳ್ಳಿ, ಶಿವಮೊಗ್ಗೆಯ ಕಡೆಯ ಭಾಷೆ ಮತ್ತು ಸಂಸ್ಕೃತಿಯ ಒಂದು ಝಲಕ್ ಇಲ್ಲಿದೆ. ಸಂದರ್ಭ ಗೊತ್ತಿರದಿದ್ದರೂ ಕೆಲವು ಸೂಚನೆಗಳನ್ನು ಇದು ಕೊಡುತ್ತದೆ. ಸಂಭಾಷಣೆ ಗಂಡ ಹೆಂಡತಿಯರ ನಡುವಿನದು. ಕಥಾಸಂದರ್ಭಕ್ಕೆ ಇಲ್ಲಿಯ ಎಲ್ಲ ಮಾಹಿತಿ ಬೇಕಾಗದಿದ್ದರೂ ಕಥಾನಕದ ಸ್ವಾಭಾವಿಕತೆಗಾಗಿ ಇವೆಲ್ಲ ಇವೆ. ಭಾಷೆಯ ಮೇಲಿಂದ ಪ್ರದೇಶ ಗುರುತಿಸಬಹುದು ಎಂಬ ಮಾತೂ ಇದೆ.

ಇನ್ನೊಂದು ಉದಾಹರಣೆಯನ್ನು ತ.ರಾ.ಸು. ಅವರ ‘ಕಸ್ತೂರಿ ಕಂಕಣ’ (೧೯೬೬) ಕಾದಂಬರಿಯಿಂದ ನೋಡೋಣ.

ನಿಮ್ಮ ದುಃಖ ಪರಿಹಾರವಾಗುತ್ತದೆ ಎಂದು ತಾಯಿ ಅಪ್ಪಣೆ ಕೊಡಿಸಿದಳಲ್ಲಾ, ಮತ್ತೇಕೆ ದುಃಖ? ಆಕೆಯ ಮಾತಿನಲ್ಲಿ ನಿಮಗೆ ನಂಬಿಕೆ ಇಲ್ಲವೇ? ‘
ಸಹಾನುಭೂತಿ ತುಂಬಿದ ಧ್ವನಿಯಲ್ಲಿ ಕೇಳಿದರು ಸ್ವಾಮಿಗಳು.
ತಮ್ಮ ದಿವ್ಯ ಚಕ್ಷುಗಳಿಗೆ ನನ್ನ ಸೊಸೆಯ ದುಃಖ ಏನೆಂದು ತಿಳಿದಿರಬೇಕು. . . . .’
ಸುಬ್ಬರಾಯಶಾಸ್ತ್ರಿಗಳು ಹೇಳಿದರು.
ಅದಾವುದೂ ನನಗೆ ತಿಳಿಯದು. ತಾಯಿ ಪ್ರೇರೇಪಣೆ ಮಾಡಿಸಿದ ಮಾತನ್ನು ಮಾತ್ರ ಹೇಳಿದೆ. ನೀವೂ ಮಾತನ್ನು ನಂಬುವುದಾದರೆ ನಂಬಿ, ಬಿಟ್ಟರೆ ಬಿಡಿ.’
ನನ್ನ ಮಾತನ್ನು ತಾವು ತಪ್ಪು ತಿಳಿಯಬಾರದು. ಎಷ್ಟಾದರು ನಾವು ಅಜ್ಞ ಜನ. . . . . ‘
ನಿಮಗಿಂತಲೂ ನಾನು ಹೆಚ್ಚಿನ ಜ್ಞಾನಿಯೇನೂ ಅಲ್ಲ.’
ಆದರೆ ತಾವು ಮಾತೆಯ ಅನುಗ್ರಹಕ್ಕೆ ಪಾತ್ರರಾದವರು. . . . . ‘
ಲೋಕದ ಜನವೆಲ್ಲ ಆಕೆಯ ಮಕ್ಕಳು. ಆದ್ದರಿಂದ ಎಲ್ಲರೂ ಆಕೆಯ ಅನುಗ್ರಹಕ್ಕೆ ಪಾತ್ರಾರಾದವರೇ. ಅದರಲ್ಲಿ ನನ್ನ ವಿಶೇಷವೇನೂ ಇಲ್ಲ.’
ಹಾಗೆನ್ನುವುದು ತಮ್ಮ ಹಿರಿಮೆ.’
(‘
ಕಸ್ತೂರಿ ಕಂಕಣ೧೯೬೬)

ಈ ಸಂಭಾಷಣೆ ಒಬ್ಬ ದೈವೀ ಮನುಷ್ಯನಾದ ಸ್ವಾಮೀಜಿ ಮತ್ತು ಒಬ್ಬ ಗೃಹಸ್ಥನ ನಡುವೆ ನಡೆದಿದೆ. ದೈವ ಕೃಪೆಯನ್ನು ಹೇಳುವ ಸ್ವಾಮಿ ಮತ್ತು ಪ್ರಾಪಂಚಿಕ ಕಷ್ಟದಲ್ಲಿ ಸಿಲುಕಿದ ವ್ಯಕ್ತಿಗಳ ನಡುವೆ ಇದೆ. ಜೀವನದಲ್ಲಿ ಶ್ರದ್ಧೆಯಿಂದ ಶಾಂತಿಯನ್ನು ತುಂಬಲು ಮಾಡುವ ಪ್ರಯತ್ನದ ವರ್ಣನೆ ಇದೆ. ಇದರ ಪರಿಣಾಮ ಅವರವರ ಭಾವುಕತೆಯನ್ನು ಅವಲಂಬಿಸಿದೆ. ಸನ್ನಿವೇಶ ಹೊರ ಆವರಣವನ್ನು ನಿರೀಕ್ಷಿಸುತ್ತದೆ. ಚಿತ್ರದುರ್ಗದ ಪರಿಸರದ ವರ್ಣನೆ ಮತ್ತು ಭಾಷೆ ಇಲ್ಲಿ ಸೂಚಿತವಾಗಿಲ್ಲ. ಕಾದಂಬರಿಯ ಬೇರೆ ಭಾಗಗಳಲ್ಲಿ ಆಗಿದೆ. ಹೀಗೆ ಸನ್ನಿವೇಶವನ್ನು ವಿಶ್ಲೇಷಿಸಿ ಅನೇಕ ಉಪಯುಕ್ತ ಮಾಹಿತಿಯನ್ನು ಹೊರತರಲು ಜ್ಞಾನಶಾಸ್ತ್ರದಿಂದ ಸಾಧ್ಯವಿದೆ.