ಮೇಲಿನ ಚರ್ಚೆಯಿಂದ ಕನ್ನಡ ಸಾಹಿತ್ಯದ ವಿವಿಧ ಹಂತಗಳ ಭಾಷಾಶೈಲಿಯ ಸ್ವರೂಪದ ದರ್ಶನವಾಗುತ್ತದೆ. ಸಾರಾಂಶದಲ್ಲಿ ಹೇಳಬಹುದಾದರೆ ಅದನ್ನು ಮೂರು ಹಂತಗಳಲ್ಲಿ ಮಾಡಲಾಗಿದೆ. ಒಂದು, ಶಬ್ದ ಭಾಂಡಾರದ ಹಂತದಲ್ಲಿ, ಎರಡು, ವಾಕ್ಯಗಳ ಹಂತದಲ್ಲಿ, ಮೂರು, ಸಾಮಾಜಿಕ ಪರಿಸರದ ಹಂತದಲ್ಲಿ. ಈ ಮೂರೂ ಹಂತಗಳು ಒಂದಕ್ಕೊಂದು ಪುರಕವಾಗಿವೆ. ಜ್ಞಾನಶಾಸ್ತ್ರದ ವಿಶ್ಲೇಷಣೆಯನ್ನು ಇನ್ನೂ ವಿಸ್ತಾರವಾಗಿ ಮಾಡಲು ಸಾಧ್ಯವಿದೆ. ಆದರೆ ಅದು ಮೂಲತಃ ಆಡು ಭಾಷೆಯ ವಿಶ್ಲೇಷಣೆಯಾದ್ದರಿಂದ ವಿಫುಲವಾದ ಸಂಭಾಷಣೆಯ ಸಾಮಗ್ರಿ ಬೇಕು. ಕನ್ನಡ ಸಾಹಿತ್ಯದ ಆಕರದಲ್ಲಿ ಬೇಕಾದ ಸಂಭಾಷಣಾ ಸಾಮಗ್ರಿ ಹೆಚ್ಚು ಲಭ್ಯವಾಗದ ಕಾರಣ ಇಲ್ಲಿ ಜ್ಞಾನಶಾಸ್ತ್ರದ ಸಂಕೇತಿಕ ವಿಶ್ಲೇಷಣೆಯನ್ನು ಮಾತ್ರ ಮಾಡಿ ತೊರಿಸಲಾಗಿದೆ.

ಶೈಲಿ ವಿಜ್ಞಾನ ಮತ್ತು ಜಾನಶಾಸ್ತ್ರ ಎಂಬ ಈ ಚಿಕ್ಕ ಹೊತ್ತಗೆಯಲ್ಲಿ ಶೈಲಿ ವಿಶ್ಲೇಷಣೆ ಮತ್ತು ಜ್ಞಾನಶಾಸ್ತ್ರದ ಬಗ್ಗೆ ತಿಳುವಳಿಕೆ ಕೊಡುವ ಹೊಸ ಸಾಹಸಕ್ಕೆ ಕೈ ಹಾಕಲಾಗಿದೆ. ಇದನ್ನೋದಿದ ರಸಿಕರು ಹೆಚ್ಚಿನ ಅಭ್ಯಾಸದಲ್ಲಿ ತೊಡಗಿ ಇನ್ನೂ ವಿವರವಾದ, ವಿಧವಿಧ ರೀತಿಯ ವಿಶ್ಲೇಷಣೆ ಮಾಡಿದರೆ ಕನ್ನಡಿಗರ ಜ್ಞಾನವೃದ್ಧಿ ಖಂಡಿತ ಆಗುತ್ತದೆ.