ಕನ್ನಡ ನುಡಿ ಹಬ್ಬದ ನಿಮಿತ್ತ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಶೈಲಿ ವಿಜ್ಞಾನ (Stylistics) ಮತ್ತು ಜ್ಞಾನಶಾಸ್ತ್ರ (Pragmatics)’ ವನ್ನು ಕುರಿತು ಹೊತ್ತಗೆ ಯೊಂದನ್ನು ಬರೆಯಲು ಪ್ರಸ್ತಾಪ ಬಂದಾಗ ಸಂತಸವಾಯಿತು. ಈ ವಿಷಯವನ್ನು ಕುರಿತು ಕನ್ನಡದಲ್ಲಿ ಹೆಚ್ಚು ಕೆಲವಾಗಿಲ್ಲ. ಆದುದರಿಂದ ಕನ್ನಡದ ವಿವಿಧ ಹಂತದ ಭಾಷಾಶೈಲಿ ಮತ್ತು ಕನ್ನಡ ಭಾಷೆಯ ಮುಖಾಂತರ ಉಂಟಾಗುವ ಜ್ಞಾನಶಾಸ್ತ್ರವನ್ನು ವಸ್ತುವನ್ನಾಗಿ ಇಟ್ಟುಕೊಂಡು ನನಗೆ ಗೊತ್ತಿದ್ದ ಮೂಲಗಳಿಂದ ಸಾಮಗ್ರಿಯನ್ನು ಆಕಲಿಸಿ ಒಂದು ಸಮಗ್ರ ತಿಳುವಳಿಕೆಯ ಪುಸ್ತಕವನ್ನು ಮಾಡಬಹುದು ಎಂದು ಮನಸ್ಸು ಲೆಕ್ಕ ಹಾಕಿತು. ಆ ಪ್ರಕಾರ ಪ್ರಕೃತ ಕೃತಿಯನ್ನು ಕನ್ನಡದ ಓದುಗರ ಮುಂದೆ ಇಡುತ್ತಿದ್ದೇನೆ.

‘ಕನ್ನಡ ಶೈಲಿ ಕೈಪಿಡಿ’ ಎಂಬ ಹೊತ್ತಿಗೆಯನ್ನು ಈ ವಿಶ್ವವಿದ್ಯಾಲಯವೇ ೧೫ ವರ್ಷಗಳ ಹಿಂದೆ ಹೊರತಂದಿದೆ. ಅದರಲ್ಲಿ ಕನ್ನಡ ಬರವಣಿಗೆಯ ಬಾಹ್ಯ ಸ್ವರೂಪದ ಲಕ್ಷಣಗಳು, ನಿಯಮಗಳು, ಮುದ್ರಣ ವಿಷಯಗಳು ಇವೆ. ಆ ಪುಸ್ತಕ ಕನ್ನಡ ಬರವಣಿಗೆಯ ಶೈಲಿ (Style) ಎಂಬ ಹೊರಮೈಯನ್ನು ಕುರಿತಾದುದಾದರೆ ಪ್ರಕೃತ ಪುಸ್ತಕ ಶೈಲಿವಿಜ್ಞಾನ (Stylistics) ಎಂಬ ಕನ್ನಡ ಭಾಷೆಯ ಒಳಮೈಯನ್ನು ಕುರಿತಾದುದಾಗಿದೆ. ಅಲ್ಲದೇ ಜ್ಞಾನಶಾಸ್ತ್ರ (Pragmatics) ದ ರೂಪರೇಶೆಗಳನ್ನು ಕನ್ನಡಕ್ಕೆ ಅನುವರ್ತಿಸಿ ವಿವರಿಸಲಾಗಿದೆ.

ಭಾಷಾ ವಿಜ್ಞಾನದ ಅಂಗವಾಗಿ ಬೆಳೆದ ಶೈಲಿ ವಿಜ್ಞಾನವನ್ನು ಕುರಿತು ಇಂಗ್ಲಿಷನಲ್ಲಿ ಕಳೆದ ಶತಮಾನದ ಉತ್ತರಾರ್ಧದಿಂದ ಇಂದಿನವರೆಗೆ ಸಾಕಷ್ಟು ಕೆಲಸವಾಗಿದೆ. ಕನ್ನಡದಲ್ಲಿ ಆ ದಿಸೆಯಲ್ಲಿ ಕೆಲಸ ಆಗಿಲ್ಲ.  ಭಾಷಾ ವಿಜ್ಞಾನದಲ್ಲಿಯೇ ಹೆಚ್ಚು ಕೆಲಸವಾಗಿಲ್ಲ. ಅಂದ ಮೇಲೆ  ಶೈಲಿ ವಿಜ್ಞಾನವಂತೂ ದೂರವೇ ಉಳಿಯಿತು. ಜ್ಞಾನಶಾಸ್ತ್ರವಂತೂ ಇನ್ನೂ ದೂರ. ಆ ದೂರವನ್ನು ಹತ್ತಿರ ಮಾಡುವ ಪ್ರಯತ್ನದಲ್ಲಿ ಈ ಪುಸ್ತಕ ತನ್ನ ಕಿರು ಕಾಣಿಕೆಯನ್ನು ಸಲ್ಲಿಸುತ್ತದೆ. ಶೈಲಿವಿಜ್ಞಾನ ಮತ್ತು ಜ್ಞಾನಶಾಸ್ತ್ರಗಳನ್ನು ಕನ್ನಡಕ್ಕೆ ಅನುವರ್ತಿಸಿ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆದು ಬಂದ ಕನ್ನಡ ಸಾಹಿತ್ಯದ ದಾರಿಯ ಸಿಂಹಾವಲೋಕನವನ್ನು ಇಲ್ಲಿ ಮಾಡಲಾಗಿದೆ. ಇಲ್ಲಿ ಮಾಡಲಾದ ಹೊಸ ರೀತಿಯ ಪ್ರಯೋಗ ಪ್ರಥಮ ಬಾರಿಯಾಗಿದ್ದುದರಿಂದ ಆ ದಿಶೆಯಲ್ಲಿ ಹೆಚ್ಚಿನ ಕೆಲಸಕ್ಕಾಗಿ ಇದು ಪ್ರಚೋದನೆ ನೀಡಿದರೆ ಪ್ರಕೃತ ಶ್ರಮ ಸಾರ್ಥಕವಾಯಿತೆಂದು ಭಾವಿಸುತ್ತೇನೆ.

ಕನ್ನಡದಲ್ಲಿ ಎಲ್ಲ ಇದೆ ಎಂದು ನಾವು ಅಭಿಮಾನದಿಂದ ಹೇಳಿದರೂ ಎಲ್ಲ ಇಲ್ಲ ಎಂಬುದು ಇಂದಿನ ತಿಳುವಳಿಕೆಯ ವಿವಿಧ ಆಯಾಮಗಳನ್ನು ನೋಡಿದರೆ ಮನದಟ್ಟಾಗುತ್ತದೆ. ಈ ಪುಸ್ತಕದಲ್ಲಿ ಇರುವದು ಬೇರೆಲ್ಲೂ ಇಲ್ಲ. ಆದುದರಿಂದ ಇದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ತಂದುಕೊಡುತ್ತದೆ ಎಂದು ಹೇಳಬಹುದು. ತಿಳಿವಳಿಕೆಯನ್ನು ಬಯಸುವ ಜ್ಞಾನೇಚ್ಛುಗಳಿಗೆ ಇದು ಆಹಾರವನ್ನು ಒದಗಿಸಬಲ್ಲದು. ಅದರೂ ಇದೆಲ್ಲವನ್ನು ತಿಳಿದುಕೊಂಡರೆ ಆಗುವ ಪ್ರಯೋಜನವೇನು ಎಂದು ಕೆಲವು ಪಂಡಿತರು ಪ್ರಶ್ನೆ ಮಾಡಬಹುದು. ಪ್ರಯೋಜನ ಎಂಬುದು ವೈಯಕ್ತಿಕ ಅಭಿರುಚಿಯನ್ನು ಅವಲಂಬಿಸಿರುವದರಿಂದ ಅದಕ್ಕೆ ಸಾರ್ವತ್ರಿಕ ಉತ್ತರ ಕೊಡುವುದು ಕಷ್ಟ. ಪಂಡಿತರೇ ಉತ್ತರ ಕೊಡಬೇಕು.

ಭಾಷಾವಿಜ್ಞಾನ ಭಾಷೆಯ ವರ್ಣನಾತ್ಮಕ ವಿಶ್ಲೇಶಣೆಯಿಂದ ಹಿಡಿದು ಶೈಲಿ ವಿಜ್ಞಾನದವರೆಗೆ ವಿಸ್ತಾರವಾದ ಭೂಮಿಕೆಯನ್ನು ಹೊಂದಿದೆ. ಅದರ ಎಲ್ಲ ವಿಭಾಗಗಳಿಗೆ ವೈಜ್ಞಾನಿಕ ತಡಿಕೆ ಮೂಲಭಾತವಾಗಿದೆ.  ವೈಜ್ಞಾನಿಕ ಎನ್ನುವಾಗ ವ್ಯಕ್ತಿಯ ಅಭಿರುಚಿ ನಿರಪೇಕ್ಷವಾದ ವಿಧಾನ ಇರುತ್ತದೆ ಎಂದರ್ಥ. ವೈಜ್ಞಾನಿಕ ವಿಧಾನಗಳಲ್ಲಿ ಸಾರ್ವತ್ರಿಕತೆಯೂ ಒಂದು ಅಂಶ. ಅಂದರೆ ಒಬ್ಬರಿಗೆ ಅನಿಸಿದುದು ಆ ಶಾಸ್ತ್ರದ ಚೌಕಟ್ಟಿನಲ್ಲಿ ಎಲ್ಲರಿಗೂ ಅನಿಸಬೇಕು. ಇದೇ ಅದರ ಸಾರ್ವತ್ರಿಕತೆ. ಪ್ರಸ್ತುತ ಗ್ರಂಥದಲ್ಲಿ ಈ ದೃಷ್ಟಿಕೋನವನ್ನು ಇಟ್ಟುಕೊಳ್ಳಲಾಗಿದೆ.

ಈ ಕೃತಿಯನ್ನು ಪ್ರಕಟಿಸಿ ಕನ್ನಡ ಜನತೆಯ ಮುಂದಿಟ್ಟ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ಮಿರಿಗೆಪ್ಪ ಅವರಿಗೂ ಯಶಸ್ವಿಯಾಗಿ ಹೊರತಂದ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಡಾ. ಮಂಜುನಾಥ ಬೇವಿನಕಟ್ಟಿ ಮತ್ತು ಅವರ ಸಹೋದ್ಯೋಗಿ ಶ್ರೀ. ಬಿ. ಸುಜ್ಞಾನಮೂರ್ತಿ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲಬೇಕು. ಓದುಗರೂ ಇಷ್ಟಪಡುವರೆಂದು ನಂಬಿದ್ದೇನೆ.

ಡಾ. ಬಿ. ಬಿ. ರಾಜಪುರೋಹಿತ
ಮೈಸೂರು