ಇನ್ನು ವೀರಶೈವರ ವಚನ ರಚನೆಯ ಉದ್ದೇಶವೂ ಧರ್ಮಪ್ರಚಾರ ಮತ್ತು ಜನರಲ್ಲಿ ಆತ್ಮ ಜಾಗ್ರತಿಯನ್ನು ಉಂಟುಮಾಡುವುದು ಆಗಿತ್ತು ಎಂಬುದು ಸ್ಪಷ್ಟವೇ ಇದೆ. ಬೇರೆ ಬೇರೆ ವಚನಕಾರರು ವಚನಗಳನ್ನು ಬರೆದಿದ್ದರೂ ಅವರೆಲ್ಲರ ವಚನಗಳು ಹೇಳುವ ತತ್ತ್ವ ಹೆಚ್ಚು ಕಡಿಮೆ ಒಂದೇ ಆಗಿದ್ದರೂ ಹೇಳಿದ ರೀತಿ ಅವರವರ ಅನುಭವ ಮತ್ತು ಅವರವರ ಸಾಂಸ್ಕೃತಿಕ ಹಿನ್ನೆಲೆಯನ್ನು ಅವಲಂಬಿಸಿ ಭಿನ್ನವಾಗಿರುತ್ತದೆ. ಉದಾಹರಣೆಗೆ ಅಲ್ಲಮನ ಈ ವಚನ ನೋಡಿ:

ಹಾಲನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ,
ಕಡಲೆಯ ನೇಮ ಹಿಡಿದಾತ ಕುದುರೆಯಾಗಿ ಹುಟ್ಟುವ,
ಅಗ್ಘವಣಿಯ ನೇಮ ಹಿಡಿದಾತ ಕಪ್ಪೆಯಾಗಿ ಹುಟ್ಟುವ,
ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ,
ಇವು ಷಟ್ಸ್ಥಲಕ್ಕೆ ಹೊಱಗು. ಭಕ್ತಿ ನಿಷ್ಠೆಯಿಲ್ಲದವರ ಕಂಡಡೆ
ಮೆಚ್ಚ ಗುಹೇಶ್ವರ.
(
ಅಲ್ಲಮನ ವಚನ ಚಂದ್ರಿಕೆ, ೧೨೦)

ಎಂಬ ವಚನದ ಸಾರ ಸ್ಪಷ್ಟವೇ ಆಗಿದೆ. ಆಗಿನ ಸಮಾಜದಲ್ಲಿ ನೇಮ ಹಿಡಿಯುವದು ಒಂದು ಪರಿಪಾಠವಾಗಿತ್ತು. ಅರ್ಥವಿಲ್ಲದ ಕುರುಡು ನಂಬಿಕೆಯಿಂದ ಮಾಡುವ ನೇಮನಿತ್ಯಗಳು ವ್ಯರ್ಥ ಎಂಬ ಮಾತು ಪರಿಣಾಮಕಾರಿಯಾಗಿದೆ.

ಇದನ್ನೇ ಬಸವೇಶ್ವರರು ಬೇರೆ ಮಾತುಗಳಲ್ಲಿ ಹೇಳುತ್ತಾರೆ.

ಒಳಗೆ ಕುಟಿಲ; ಹೊಱಗೆ ವಿನಯವಾಗಿ ಭಕ್ತರೆನಿಸಿಕೊಂಬವರ
ಬಲ್ಲನೊಲ್ಲನಯ್ಯಾ ಲಿಂಗವು!
ಅವರು ಸತ್ಪಥಕ್ಕೆ ಸಲ್ಲರು, ಸಲ್ಲರಯ್ಯಾ,
ಒಳಹೊಱಗೊಂದಾದವರಿಗೆ ಅಳಿಯಾಸೆದೋಱು
ಬಿಸಾಡುವನವರ ಜಗದೀಶ ಕೂಡಲ ಸಂಗಮದೇವ!
(
ಬಸವಣ್ಣನವರ ಷಟ್ಸ್ಥಲದ ವಚನಗಳು, ೯೬)

ಹೇಳಬೇಕೆಂದಿರುವ ಅನುಭವನದ ಮಾತು ಒಂದೇ ಆದರೂ ಅದನ್ನು ಹೇಳುವ ಪರಿ ಬೇರೆ ಬೇರೆಯಾಗಿರುವದರಿಂದ ಆ ಮಾತುಗಳನ್ನು ಆಯಾ ವಚನಕಾರರು ಅನುಭವಿಸಿ ಹೇಳುತ್ತಿದ್ದಾರೆಂಬ ವಿಶ್ವಾಸ ಹುಟ್ಟುತ್ತದೆ, ಅಲ್ಲದೇ ನೇರ ಪರಿಣಾಮ ಮಾಡುತ್ತದೆ.

ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಚನಕಾರರ ಮುಖ್ಯ ಕೊಡುಗೆ ಷಟ್‌ಸ್ಥಲದ ಕಲ್ಪನೆ. ಯೋಗ ಸಾಧನೆಯನ್ನು ಷಟ್ಚಕ್ರಗಳ ಕ್ರಮದಲ್ಲಿ ಹೇಳಿದುದು ಸುಪ್ರಸಿದ್ಧವೇ ಇದೆ. ಇದು ದೈಹಿಕ ರಚನೆಗೂ ಮಾನಸಿಕ ಸ್ಥಿತಿಗೂ ಸಂಬಂಧ ಕಲ್ಪಿಸಿ ಹೇಳಿದುದಾದರೆ ಷಟ್‌ಸ್ಥಲದ ಕಲ್ಪನೆ ಮಾನಸಿಕ ಸಾಧನೆಯ ಹಂತಗಳನ್ನು ಸೂಚಿಸುತ್ತದೆ. ಉದಾಹರಣೆಗೆ, ಭಕ್ತಿಸ್ಥಲದಲ್ಲಿ ತಾನು ಬೇರೆ, ತಾನು ಆರಾಧಿಸುವ ದೈವ ಬೇರೆ ಎಂಬ ಪ್ರಜ್ಞೆ ಇದ್ದು, ದೈವದೊಡನೆ ತಾನು ಹೇಗೆ ಒಂದಾಗಬಹುದೆಂಬ ಬಯಕೆ ಇರುತ್ತದೆ.

            ಕಾಯವಿಕಾರ ಕಾಡಿಹುದಯ್ಯಾ;
ಮನೋವಿಕಾರ ಕೂಡಿಹುದಯ್ಯಾ;
ಇಂದ್ರಿಯವಿಕಾರ ಸುಳಿವುದಯ್ಯಾ!
ಸುಳಿವಿನೊಳಗೆ ಸುಳಿಯುತ್ತಲಿದ್ದೇನೆ; ಸಿಲಿಕಿಸದಿರಯ್ಯಾ;
ಅನ್ಯಚಿತ್ತವಿರಿಸದಿರಯ್ಯಾ; ನಿಮ್ಮ ಚಿತ್ತವಿರಿಸಯ್ಯಾ;
ಅನುಪಮ ಸುಖಸಾರಾಯ ಶರಣರಲ್ಲಿ,
ಕೂಡಲ ಸಂಗಮದೇವಯ್ಯಾ, ಇದನೆ ಬೇಡುವನಯ್ಯಾ.
            (
ಬಸವಣ್ಣನವರ ಷಟ್ಸ್ಥಲದ ವಚನಗಳು, ೪೮)

ಇಲ್ಲಿ ಸಾಧಕನ ಬಾಹ್ಯಪ್ರಜ್ಞೆ ಎದ್ದು ಕಾಣುತ್ತದೆ. ಆ ಪ್ರಜ್ಞೆಯಲ್ಲಿ ಪ್ರಾರ್ಥನೆ, ಬೇಡಿಕೆಗಳು ಸಾಮಾನ್ಯ. ಅದೇ ಐಕ್ಯಸ್ಥಲದ ಈ ವಚನವನ್ನು ನೋಡಿ :

            ಅಂತರಂಗ ಬಹಿರಂಗ ಆತ್ಮಸಂಗ ಒಂದೇ ಅಯ್ಯಾ!
ನಾದಬಿಂದುಕಳಾತೀತ, ಆದಿಯಾಧಾರ ನೀನೇ ಅಯ್ಯಾ!
ಆರೂಢದ ಕೂಟದ ಸುಖವ
ಕೂಡಲಸಂಗಯ್ಯ ತಾನೇ ಬಲ್ಲ!
(
ಬಸವಣ್ಣನವರ ಷಟ್ಸ್ಥಲದ ವಚನಗಳು, ೯೫೮)

ಇಲ್ಲಿ ಸಾಯುಜ್ಯದ ಅನುಭವವಿದೆ. ಅಂತರಂಗ ಪ್ರಜ್ಞೆ ಮತ್ತು ಬಹಿರಂಗ ಪ್ರಜ್ಞೆ ಎಂಬವುಗಳು ಇಲ್ಲಿ ಒಂದಾಗಿ ಬಿಡುತ್ತವೆ. ಹೀಗೆ ಅನುಭವದ ಸಾರವನ್ನು ವಚನಗಳು ಯಶಸ್ವಿಯಾಗಿ ಅಭಿವ್ಯಕ್ತಿಯಲ್ಲಿ ಇಳಿಸುತ್ತವೆ.

ಇನ್ನು ಷಟ್ಟದಿ ಯುಗದಲ್ಲಿ ಕಾವ್ಯದ ಸಾರ ಪುರಾಣ ಕಥೆಯೊಂದರ ಅಭಿವ್ಯಕ್ತಿಯಾಗಿರುತ್ತದೆ. ಹೀಗಾಗಿ ಅವುಗಳ ಸಾರ ಅನೇಕ ಸಲ ಸಾರ್ವಜನಿಕವಾಗಿ ಗೊತ್ತಿದ್ದುದೇ ಆಗಿರುತ್ತದೆ. ಅಲ್ಲಿ ಅದೇ ಕಥೆಯನ್ನು ಬೇರೆ ಬೇರೆಯವರು ಹೇಗೆ ನಿರೂಪಿಸಿದ್ದಾರೆ ಎಂಬುದನ್ನು ನೋಡುವುದಾಗಿರುತ್ತದೆ. ಕುಮಾರವ್ಯಾಸನ ಭಾರತವಿರಲಿ, ತಿಮ್ಮಣ್ಣ ಕವಿಯ ಕೃಷ್ಣರಾಜ ಭಾರತವಿರಲಿ, ಚಾಟುವಿಠಲನಾಥನ ಭಾರತವಿರಲಿ ಕಥೆಯ ಸಾರ ಗೊತ್ತಿದ್ದುದೇ. ಆದರೆ ಹೇಳಿದ ವಿಧಾನ, ಶೈಲಿ ಭಿನ್ನವಾಗಿರುತ್ತದೆ. ಅದೇ ರೀತಿ ಪ್ರಭುದೇವನ ಚರಿತ್ರೆಯನ್ನು ಅಥವಾ ತೀರ್ಥಂಕರರ ಚರಿತ್ರೆಯನ್ನು ಅನೇಕ ಕವಿಗಳು ಹೇಳಿದ್ದಾರೆ.

ವಸ್ತುವಿನಲ್ಲಿ ಹೊಸ ಹೊಸ ಸಾರಗಳು ಬೇಕೆಂದಾಗ ಹೊಸಗನ್ನಡಕ್ಕೇ ಬರಬೇಕು. ಹೊಸಗನ್ನಡದಲ್ಲಿ ಕವಿತೆ, ಕಥೆ, ಕಾದಂಬರಿ, ನಾಟಕ, ಆತ್ಮಕಥೆ ಮೊದಲಾದ ಪ್ರಕಾರಗಳಲ್ಲಿ ‘ಸಾರ’ ಎಂದು ಸಂಗ್ರಹಿಸಬಲ್ಲ ಅಂಶಗಳು ತುಂಬಾ ಕಡಿಮೆ. ಉದಾಹರಣೆಗೆ ಬೇಂದ್ರೆಯವರ ‘ಬೆಳಗು’ ಪದ್ಯದ ಸಾರ ಬೆಳಗಿನ ವರ್ಣನೆ. ಆದರೆ ಆ ವರ್ಣನೆಯ ಕೊನೆಗೆ ‘ಇದು ಬರಿ ಬೆಳಗಲ್ಲೋ ಅಣ್ಣಾ!‘ ಎಂದಾಗ ಕವಿತೆಯ ಸಾರ ಬರಿ ಬೆಳಗಿನ ವರ್ಣನೆಯಾಗಿ ಉಳಿಯುವುದಿಲ್ಲ. ಓದುಗ ಊಹೆಯಿಂದ ಇನ್ನೂ ಏನನ್ನೋ ತುಂಬಿ ಕೊಳ್ಳಬೇಕಾದ ಪ್ರಸಂಗ ಬರುತ್ತದೆ. ಅವರವರ ಸಂಸ್ಕಾರದ ಹಿನ್ನೆಲೆಗನುಗುಣವಾಗಿ ಪದ್ಯದ ಸಾರ ವಿಸ್ತಾರವಾಗುತ್ತದೆ.

ಬಿ. ಎ. ಸನದಿ ಅವರ ‘ಮತ್ತೆ ಬೆಳಗಾಯಿತು‘ ಪದ್ಯದ ಪ್ರಾರಂಭ ನೋಡಿ,

            ಕಾಲು ಶತಮಾನದ ಕಾಲು
ಕಟ್ಟಿ ಹಾಕಿದ ಹಾಗೆ
ನಿನ್ನ ಸೆರೆಮನೆಯಲ್ಲಿಟ್ಟವರ ಕಣ್ಣ ಪೊರೆ
ಹರಿವ ಕಾಲವೆ ಬರಲು
ಕರಿ ಜನಾಂಗದ ತುಂಬೆಲ್ಲ ಹೊಸ ಬೆಳಕಾಡಿತು.
(‘
ಸಂಭವ‘, ೧೯೯೧, ಕವನ ಸಂಗ್ರಹದಿಂದ)

ಹಿಂದು ಮುಂದಿನ ಸಂದರ್ಭವನ್ನು ಹೇಳದಿದ್ದರೂ ಈ ಪದ್ಯ ‘ಇದು ದಕ್ಷಿಣ ಆಫ್ರಿಕ ಮುಖಂಡ ನೆಲ್ಸನ್‌ ಮಂಡೇಲಾನನ್ನು ಕುರಿತ ವರ್ಣನೆ’ ಎಂಬುದು ಸೂಚಿತವಾಗುತ್ತದೆ. ಅದಕ್ಕೆ ಮುಖ್ಯ ಸೂಚನೆಗಳೆಂದರೆ ‘ಕಾಲು ಶತಮಾನ ಕಟ್ಟಿಹಾಕಿದ‘ ಮತ್ತು ‘ಕರಿ ಜನಾಂಗದ’ ಎಂಬ ಪದಗಳಿಂದ ಸಿಗುವ ಸೂಚನೆ. ಪದ್ಯದ ಶೀರ್ಷಿಕೆಯಲ್ಲಿ ‘ಬೆಳಗಾಯಿತು’ ಎಂಬ ಪದವಿದ್ದರೂ ಇದು ಸೂರ್ಯೋದಯದ ನೇರ ವರ್ಣನೆಯಲ್ಲ. ಆಲಂಕಾರಿಕ ಹೇಳಿಕೆ ಎಂದರ್ಥವಾಗುತ್ತದೆ. ಹೀಗೆ ಸಾರವು ನೇರವಾಗಿ ಉಕ್ತವಾಗಿರಬಹುದು ಅಥವಾ ಸೂಚ್ಯವಾಗಿ ವ್ಯಕ್ತವಾಗಿರಬಹುದು.

ಇನ್ನು ಕಥೆಯಲ್ಲಿ ಅಥವಾ ಕಥೆಯ ವಿಸ್ತಾರವಾದ ಕಥನವಾದ ಕಾದಂಬರಿಯಲ್ಲಿಯೂ ಸಾರವನ್ನು ಹುಡುಕುವ ಪ್ರಯತ್ನ ಅನೇಕ ಸಲ ವಿಫಲವಾಗುತ್ತದೆ. ಏಕೆಂದರೆ ಅವುಗಳಲ್ಲಿ ಬರುವ ವ್ಯಕ್ತಿಗಳು ವಿವಿಧ ಸನ್ನಿವೇಶದಲ್ಲಿ ವಿವಿಧ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಅದರಿಂದ ತತ್ತ್ವವನ್ನು ಹಿಂಡುವುದು ಸಾಧ್ಯವಾಗದೇ ಹೋಗಬಹುದು. ಒಳ್ಳೆಯವರು, ಕೆಟ್ಟವರು ನಡೆದುಕೊಳ್ಳುವ ರೀತಿಯನ್ನು ಹೇಳಬಹುದು ಅಷ್ಟೇ. ಎಂ. ಕೆ. ಇಂದಿರಾ ಅವರ ‘ಸದಾನಂದ’ದ ಅನೇಕ ಪುಟಗಳನ್ನು ಓದಿದಾಗ ಕೆಲವು ಸಾರಾಂಶದ ಮಾತು ಹೇಳಬಹುದು. ಮಾಸ್ತಿ ವೆಂಕಟೇಶ ಐಯಂಗಾರ್ ಅವರ ‘ಸುಬ್ಬಣ್ಣ’ (೧೯೨೮) ಓದಿದಾದ ಆ ಕಾಲದ ಸಂಗೀತಗಾರನೊಬ್ಬನಿಗೆ ಮೈಸೂರಲ್ಲಿ ಎಲ್ಲ ಅನುಕೂಲತೆಗಳು ಇದ್ದರೂ ಹೇಗೆ ಅವನು ಕಷ್ಟಪಟ್ಟು ಕಲಕತ್ತೆಗೆ ವಲಸೆ ಹೋಗಬೇಕಾಯಿತು ಎಂದು ಸಾರಾಂಶ ಹೇಳಬಹುದು. ಹೀಗೇಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಲೇಖಕನ ಯೋಜನೆ ಅದು ಅಷ್ಟೇ. ಶಿವರಾಮ ಕಾರಂತರ ‘ಚೋಮನದುಡಿ’ (೧೯೩೩) ಯಲ್ಲಿ ಕ್ಷುಲ್ಲಕ ಹಣಕ್ಕಾಗಿ ಜೀತ ಮಾಡಬೇಕಾಗಿ ಬಂದ ಚೋಮ ತನ್ನ ಮಕ್ಕಳು ಛಿದ್ರವಾಗಿ ಹೋಗುವುದನ್ನು ಅಸಹಾಯಕನಾಗಿ ಸಹಿಸುವ ಪ್ರಸಂಗ ಬರುತ್ತದೆ. ಹೀಗೆ ಸಾರವನ್ನು ಹೇಳಬಹುದಾದರೂ ಕಥೆಯ ಕಥನದಲ್ಲಿರುವ ಶಕ್ತಿಯನ್ನು ಬಿಂಬಿಸಿದಂತೆ ಆಗುವುದಿಲ್ಲ.

.. ಅರ್ಥದ ಶ್ರೀಮಂತಿಕೆ

ಯಾವುದೇ ಬರವಣಿಗೆಗೆ ಒಂದು ಸಂದರ್ಭದಲ್ಲಿ ಒಂದು ಅರ್ಥವಿರುತ್ತದೆ ಎಂಬುದಿದ್ದರೂ ಕೆಲವೊಮ್ಮೆ ಅನೇಕಾರ್ಥಗಳನ್ನು ಧ್ವನಿಸುವ ಬರವಣಿಗೆಯನ್ನೂ ಕಾಣುತ್ತೇವೆ. ಕಾವ್ಯಗಳಲ್ಲಂತೂ ಈ ತಂತ್ರವನ್ನು ಅನೇಕ ವಿಧದಲ್ಲಿ ಬಳಸಿದುದನ್ನು ಕಾಣುತ್ತೇವೆ. ವಿಭಿನ್ನ ಅರ್ಥಗಳನ್ನು ತೆರದಿಡುವ ಉದ್ದೇಶದಿಂದ ಅನೇಕ ಅಲಂಕಾರಗಳನ್ನು ಬಳಸುವುದನ್ನೂ ನೋಡುತ್ತೇವೆ. ಉದಾಹರಣೆಗೆ ಲಕ್ಷ್ಮೀಶನ ಜೈಮಿನಿ ಭಾರತದ ‘ಕೊಡೆ ಎಂಬರಾತಪತ್ರಮಂ’ ಎಂದು ಪ್ರಾರಂಭವಾಗುವ ಪದ್ಯವನ್ನು ನೋಡಿ. ಆ ಪದ್ಯಕ್ಕೆ ‘ಆತಪತ್ರಕ್ಕೆ ಮಾತ್ರ ಕೊಡೆ ಎನ್ನುತ್ತಿದ್ದರೇ ಹೊರತು ಕೊಡೆ ಅಂದರೆ ಕೊಡುವುದಿಲ್ಲ ಎಂದು ಅನ್ನುತ್ತಿರಲಿಲ್ಲ’ ಎಂಬ ಅರ್ಥದಲ್ಲಿಯ ಪದಶ್ಲೇಷವನ್ನು ಗಮನಿಸಬಹುದು. ಇಂಥ ಬರವಣಿಗೆ ವೈಯಕ್ತಿಕ ಪತ್ರದಲ್ಲಾಗಲೀ ಜಾಹೀರಾತಿನಲ್ಲಾಗಲೀ ಬರಲು ಸಾಧ್ಯವಿಲ್ಲವೆಂದೇ ಹೇಳಬಹುದು. ಒಂದು ವೇಳೆ ಇದ್ದರೆ ಅದು ಬರವಣಿಗೆಯ ಉದ್ದೇಶಕ್ಕೆ ಸಹಾಯಕವಾಗುವುದರ ಬದಲು ಮಾರಕವೇ ಆಗುವ ಸಂಭವವಿರುತ್ತದೆ. ಉದಾಹರಣೆಗೆ ಪತ್ರವೊಂದರಲ್ಲಿ ಇದೆಯೆಂದು ಊಹಿಸಬಹುದಾದ ಕೆಳಗಿನ ಉತ್ಪ್ರೇಕ್ಷೆಯನ್ನು ಗಮನಿಸಿ.

ನನ್ನ ಅತ್ಯಂತ ಪ್ರೀತಿಯ ಪತ್ನಿಯೇ

ಎಂದು ಹೆಂಡತಿಯನ್ನು ಸಂಬೋಧಿಸಿ ಪತ್ರ ಬರೆದರೆ

ನಿಮಗೆ ನಾನು ಅತ್ಯಂತ ಪ್ರೀತಿಯ ಪತ್ನಿಯಾದರೆ ಸಾದಾ ಪ್ರೀತಿಯ ಬೇರೆ ಪತ್ನಿಯರು ಎಷ್ಟು ಜನರಿದ್ದಾರೆ?’

ಎಂಬ ಪ್ರತಿಕ್ರಿಯೆ ಹೆಂಡತಿಯಿಂದ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ! ಸಾಹಿತ್ಯದಲ್ಲಿ, ವಿಶೇಷವಾಗಿ ಕಾವ್ಯದಲ್ಲಿ, ಸ್ವಲ್ಪಮಟ್ಟಿಗೆ ಗದ್ಯದಲ್ಲಿಯೂ, ಇಂಥ ಪ್ರಯೋಗಗಳು ಅರ್ಥದ ಶ್ರೀಮಂತಿಕೆಯನ್ನು ನಿರೂಪಿಸುವ ಗುಣವೆಂದೇ ಪರಿಗಣಿತವಾಗುತ್ತವೆ. ಆದರೆ ಸೂಕ್ತ ಸಂದರ್ಭಗಳಲ್ಲಿ ವಿಶಿಷ್ಟ ಅರ್ಥಾಭಿವ್ಯಕ್ತಿಗಾಗಿ ಮಾತ್ರ ಇವನ್ನು ಬಳಸಬಹುದು.

ಪಂಪನಲ್ಲಿ ಅರ್ಥಾಭಿವ್ಯಕ್ತಿಯ ಸಮೃದ್ಧಿಯನ್ನು ವಿಫುಲವಾಗಿ ಕಾಣಬಹುದು. ಉದಾಹರಣೆಗೆ ದುರ್ಯೋಧನನ ವಧೆಯ ನಂತರ ಭೀಮಸೇನ ದ್ರೌಪದಿಯ ಕೇಶದ ವರ್ಣನೆ ಮಾಡಿದುದು ಹೊಸ ರೀತಿಯಲ್ಲಿದೆಯಷ್ಟೇ ಅಲ್ಲದೇ ತುಂಬಾ ಪರಿಣಾಮಕಾರಿಯಾಗಿದೆ. ನೋಡಿ.

            ಇದರೊಳ್ಶ್ವೇತಾತಪತ್ರ ಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ
ಪುದಿದೞ್ಕಾಡಿತ್ತಡಂಗಿದಱೊಳೆ ಕುರುರಾಜಾನ್ವಯಂ ಮತ್ಪ್ರತಾಪ
ಕ್ಕಿದಱುಂದಂ ನೋಡಗುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತು
ಬ್ಜದಳಾಕ್ಷೀ ಪೇೞ, ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂಚಂ
            (ವಿಕ್ರಮಾರ್ಜುನ ವಿಜಯಂ, ೧೨೧೫೬)

‘ನಿನ್ನ ಈ ಕೇಶಪಾಶ ಪ್ರಪಂಚ ಸಾಮಾನ್ಯವೇ! ಇದೇ ಮಹಾಭಾರತಕ್ಕೆ ಆದಿಯಾಯ್ತು!!’ ಎಂಬ ಭೀಮನ ಮಾತು ಎಷ್ಟು ಅರ್ಥಪೂರ್ಣವಾಗಿದೆ!

ಅನಂತರದ ಕಾವ್ಯಗಳಲ್ಲಿ ಉಪಮೆ. ರೂಪಕ ಉತ್ಪ್ರೇಕ್ಷೆ ಮೊದಲಾದವುಗಳಿಂದ ಅರ್ಥದ ಶ್ರೀಮಂತಿಕೆಯನ್ನು ತುಂಬುತ್ತಿದ್ದರು. ರಾಘವಾಂಕನ (ಸು. ೧೨೨೫) ‘ಹರಿಶ್ಚಂದ್ರ ಕಾವ್ಯ’ದ ಈ ಪದ್ಯ ನೋಡಿ.

            ಪುರದ ಪುಣ್ಯಂ ಪುರುಷರೂಪಿಂದೆ ಪೋಗುತಿದೆ
ಪರಿಜನದ ಭಾಗ್ಯವಡವಿಗೆ ನಡೆಯುತಿದೆ ಸಪ್ತ
ಶರಧಿಪರಿವೃತಧರೆಯ ಸಿರಿಯ ಸೊಬಗಜ್ಞಾತವಾಸಕ್ಕೆ ಪೋಗುತಿದೆ ಕೋ
ಎರೆವ ದೀನಾನಾಥರಾನಂದವಡಗುತಿದೆ
ವರಮುನಿಂದ್ರರ ಯಾಗರಕ್ಷೆ ಬಲವಳಿಯುತಿದೆ
ನಿರುತವೆಂದೊಂದಾಗಿಬಂದುಸಂದಿಸಿ ನಿಂದ ಮಂದಿ ನೆಱೆಮೊಱೆಯಿಟ್ಟುದು
(
ಹರಿಶ್ಚಂದ್ರ ಕಾವ್ಯ ಸಂಗ್ರಹ, ೬೦೧೭)

ಹರಿಶ್ಚಂದ್ರ ತನ್ನ ರಾಜ್ಯವನ್ನು ವಿಶ್ವಾಮಿತ್ರನಿಗೆ ದಾನಕೊಟ್ಟು ಊರು ಬಿಟ್ಟು ಹೋಗುತ್ತಿರುವಾಗ ಊರ ಜನ ದುಃಖಿಸಿದ ಪರಿ ಎಷ್ಟು ಕರುಣಾಜನಕವಾಗಿದೆ!

ಅದೇ ರೀತಿಯ ವರ್ಣನೆ ಲಕ್ಷ್ಮೀಶನ ‘ಜೈಮಿನಿ ಭಾರತ’ದಲ್ಲಿ ಅನೇಕ ಕಡೆ ಬರುತ್ತವೆ. ಉದಾಹರಣೆಗೆ, ಲೋಕಾಪವಾದಕ್ಕೆ ಅಂಜಿ ಸೀತೆಯನ್ನು ಅರಣ್ಯದಲ್ಲಿ ಬಿಟ್ಟು ಬರಲು ರಾಮ ಲಕ್ಷ್ಮಣನಿಗೆ ಆಜ್ಞೆ ಮಾಡುತ್ತಾನೆ. ಆ ಪ್ರಕಾರ ಮುನಿಪೋತ್ತಮರ ದರ್ಶನ ಮಾಡಿಸುವದಾಗಿ ಹೇಳಿ ಲಕ್ಷ್ಮಣ ಸೀತೆಯನ್ನು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ನಿಜ ಹೇಳುತ್ತಾನೆ. ಅದನ್ನು ಕೇಳಿದೆ ಸೀತೆ

            ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ
ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ
ಧರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳಂಗನೆ ಧರೆಗೆ ನಡುನಡುಗುತೆ
ಮರೆದಳಂಗೋಪಾಂಗಮಂ ಬಳಿಕ ಸೌಮಿತ್ರಿ
ಮರುಗಿ ಕಣ್ಣೀರ್ದಳೆದು ಪತ್ರದೊಳ್ಕೊಡೆವಿಡಿದು
ಸೆರಗಿಂದೆ ಬೀಸಿ ರಾಮ ಸೇವೆ ಸಂದುದೇ ತನಗೆಂದು ರೋದಿಸಿದನು
(
ಜೈಮಿನಿ ಭಾರತ, ೧೯೧೬)

ಇಲ್ಲಿ ಆಘಾತದಿಂದ ಸೀತೆ ಮೂರ್ಛೆ ಹೋಗಿ ಬಿದ್ದಳು ಎಂಬುದನ್ನು ಕವಿ ‘ಫಲಿತ ಕದಳಿ ಮುರಿದು ಇಳೆಗೊರಗುವಂತೆ’ ಎಂದು ವರ್ಣಿಸಿದುದು ಎಷ್ಟೊಂದು ಸೂಕ್ತವಾಗಿದೆ! ಏಕೆಂದರೆ ಆಗ ಸೀತೆ ಗರ್ಭಿಣೆಯಾಗಿದ್ದಳು. ಫಲಬಿಟ್ಟ ‘ಬಾಳೆಯ ಗಿಡದಂತೆ’ ಎಂಬ ಮಾತಿನಿಂದ ಆಕೆಯ ಸ್ಥಿತಿಯನ್ನು ಹೇಳುತ್ತಾನೆ. ಅಲ್ಲದೇ ಲಕ್ಷ್ಮಣ ಅತ್ತಿಗೆಯನ್ನು ಮುಟ್ಟದೇ ದೂರದಿಂದಲೇ ಕಣ್ಣೀರು ತುಂಬಿ ಆಕೆಗೆ ಎಲೆಗಳಿಂದ ಕೊಡೆ ಹಿಡಿದು ‘ರಾಮನ ಸೇವೆ ಮುಗಿಯಿತೇ!’ ಎಂದು ದುಃಖದಿಂದ ನುಡಿಯುತ್ತಾನೆ. ಇಲ್ಲಿ ಆ ಸನ್ನಿವೇಶದ ಗಂಭೀರತೆಯನ್ನೂ ಆ ಕಾಲದ ಸಾಂಸ್ಕೃತಿಕ ಅಂಶಗಳನ್ನೂ ಒಂದೇ ನುಡಿಯಲ್ಲಿ ಬಿಂಬಿಸುತ್ತಾನೆ.

ಇನ್ನು ವಚನಗಳಲ್ಲಿ ಕಾಣುವ ಅರ್ಥದ ಶ್ರೀಮಂತಿಕೆ ಭಿನ್ನ ರೀತಿಯದಾಗಿದೆ. ಕಾವ್ಯಗಳಲ್ಲಿ ಕಾಣುವ ಉಕ್ತಿಯನ್ನು ರಮ್ಯವಾಗಿಸುವ ಅಲಂಕಾರಗಳು, ವರ್ಣನೆಗಾಗಿ ವರ್ಣನೆಗಳು, ವಚನದಲ್ಲಿ ಕಾಣುವುದಿಲ್ಲ. ಅಲ್ಲದೇ ಶ್ಲೇಷ ಮೊದಲಾದ ಪ್ರಕ್ರಿಯೆಗಳಂತೂ ಅವರಿಗೆ ನಿಷಿದ್ಧವಾಗಿದ್ದವೆಂದೇ ಅನಿಸುತ್ತದೆ. ಏಕೆಂದರೆ ಇದಕ್ಕೆ ಮುಖ್ಯ ಕಾರಣವಿದೆ. ಎಲ್ಲ ವಚನಕಾರರೂ ತಮ್ಮ ಅನುಭವದಲ್ಲಿ ಬಂದ ಧರ್ಮದ ಸಾಕ್ಷಾತ್ಕಾರವನ್ನು ಬೇರೆ ಬೇರೆ ಮಾತುಗಳಲ್ಲಿ ಹೇಳುತ್ತಾರೆ. ಅದು ಎರಡು ಅರ್ಥವಾಗದಂತೆ ಶ್ರೋತೃಗಳಿಗೆ ಮುಟ್ಟಬೇಕು ಎಂಬುದು ಅವರ ಗುರಿಯಾಗಿತ್ತು. ಈ ಕಾರಣಕ್ಕಾಗಿ ಅವರ ಪ್ರಮಾಣಿಕ ಅಭಿವ್ಯಕ್ತಿಯಲ್ಲಿ ಉಕ್ತಿಯನ್ನು ಸುಂದರಗೊಳಿಸುವ ಬಾಹ್ಯ ಉಪಕರಣಗಳು ಗೋಚರವಾಗುವದಿಲ್ಲ. ಆದರೂ ಹೇಳಬೇಕೆಂದಿರುವ ವಿಷಯವನ್ನು ಪರಿಣಾಮಕಾರಿಯಾಗಿ ಹೇಳುವ ಅನೇಕ ವಿಧಾನಗಳು ಕಂಡುಬರುತ್ತವೆ. ಅವುಗಳ ಕೆಲವು ಉದಾಹರಣೆಗಳನ್ನು ನೋಡಬಹುದು.

            ಹೊಟ್ಟೆಯ ಮೆಲೆ ಕಟ್ಟೋರಗದ ಮೊಟ್ಟೆಯ ಕಟ್ಟಿದರೇನು?
ಹಸಿವು ಹೋಹುದೇ?
            ಅಂಗದ ಮೇಲೆ ಲಿಂಗಸ್ವಾಯತವಾದರೇನು?
ಭಕ್ತನಾಬಲ್ಲನೇ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ ಕಲ್ಲು ಲಿಂಗವೇ?
ಮೆಳೆ ಭಕ್ತನೇ? ಇಟ್ಟಾತ ಗುರುವೇ?
ಇಂತಪ್ಪವರ ಕಂಡಡೆ ನಾಚುವೆನಯ್ಯ, ಗುಹೇಶ್ವರ.
(
ಅಲ್ಲಮನ ವಚನ ಚಂದ್ರಿಕೆ, ೧೭೯)

ಇಲ್ಲಿ, ನೇರ ಮಾತು ಉಂಟುಮಾಡುವ ಪರಿಣಾಮವನ್ನು ಬೇರೆ ಯಾವ ವಿಧಾನವೂ ಮಾಡಲಾರದೆಂದೆನಿಸುತ್ತದೆ. ಆದರೆ ಹೇಳಬೇಕೆಂದಿರುವ ಮಾತಿನ ಪುಷ್ಟಿಗಾಗಿ ಕೊಡುವ ಉದಾಹರಣೆಗಳು ಆ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡುತ್ತವೆ. ಅರ್ಥದ ಶ್ರೀಮಂತಿಕೆಯನ್ನು ತರಲು ಅನೇಕ ವಚನಕಾರರು ಈ ವಿಧಾನವನ್ನು ಬಳಸಿದುದನ್ನು ನೋಡುತ್ತೇವೆ.

            ಮಂಡಲ ಸುತ್ತಿದ ಹಾವಿನಂತೆ ಮಡಿಲಲ್ಲಿ ಕಟ್ಟಿದರೇನು?
ಕೊರಳ ಸುತ್ತಿದ ಹಾವಿನಂತೆ ಕೊರಳಲ್ಲಿ ಸುತ್ತಿದರೇನು?
ಹುಸಿ, ಕಳವು, ಪರದಾರ, ಅನ್ಯದೈವ ಭಜನೆ ಭವಿ ಬಳಕೆ
ಬಿಡದನ್ನಕ್ಕರ ಲಿಂಗಭಕ್ತನೆನಿಸಬಾರದು. ಭಕ್ತ ಲಿಂಗವೆನಲಿಲ್ಲ.
ಆಚಾರ ಸಹಿತ ಭಕ್ತ, ಅನಾಚಾರ ಸಹಿತ ನರರು
ಇಂತೆನಲಾಗಿ ಆಚಾರ ಭ್ರಷ್ಟರಾದ ಅನಾಮಕರ
ನಮ್ಮ ಕೂಡಲ ಚೆನ್ನಸಂಗಯ್ಯ ಬಲ್ಲನಾಗಿ ಒಲ್ಲನು.
(
ಚೆನ್ನಬಸವಣ್ಣನ ವಚನಗಳು)

ಇಲ್ಲಿಯೂ ಉದಾಹರಣೆಗಳ ಸಹಾಯದಿಂದಲೇ ಆಚಾರವಂತಿಕೆಯ ಮಹತ್ತ್ವವನ್ನು ಬಿಂಬಿಸಲಾಗುತ್ತಿದೆ.

ಅರ್ಥದ ಶ್ರೀಮಂತಿಕೆ ಎನ್ನುವದು ಯಾವುದೇ ಒಂದು ಶಬ್ದದಿಂದ ಅಥವಾ ಕೆಲವು ವಾಕ್ಯವೇಷ್ಟನಗಳಿಂದ ಮಾತ್ರ ಹುಟ್ಟುವಂಥದಲ್ಲ. ಹೇಳಿದ ಮಾತುಗಳ ಒಟ್ಟು ತಿರುಳಿನಲ್ಲಿ ಹೊಸ ಸಂವೇದನೆ, ತಿಳುವಳಿಕೆ, ಪ್ರಾಮಾಣಿಕ ಅನಿಸಿಕೆಗಳು ವ್ಯಕ್ತವಾಗಿರುತ್ತವೆ. ಆ ಅನಿಸಿಕೆಗಳು ನಿಜವೋ ಸುಳ್ಳೋ ಎಂಬ ಜಿಜ್ಞಾಸೆಗೂ ಓದುಗ ಹೋಗುವದಿಲ್ಲ. ಹೇಳಿದ ಮಾತುಗಳು ಈ ವರೆಗೂ ಯಾರೂ ಹೇಳಿರದಂಥವುಗಳಾಗಿದ್ದರೆ ಅವುಗಳಿಗೆ ಅರ್ಥದ ಹೊಸ ಸಂವೇದನೆ ತಾನಾಗಿಯೇ ಬರುತ್ತದೆ. ನವನವೋನ್ಮೇಷಶಾಲಿನಿಯಾದ ಪ್ರತಿಭೆಯ ಪ್ರಮುಖ ಲಕ್ಷಣಗಳಲ್ಲಿ ಇದೂ ಒಂದು ಎಂದು ಹೇಳಬಹುದು. ಉದಾಹರಣೆಗೆ ಮೋಳಿಗೆಯ ಮಾರಯ್ಯನ ಈ ವಚನ ನೋಡಿ.

            ನಾನೇಕೆ ಬಂದೆ ಸುಖವ ಬಿಟ್ಟು?
ಬಂದುದಕ್ಕೆ ಒಂದೂ ಆದುದಿಲ್ಲ.
ಸಂಸಾರದಲ್ಲಿ ಸುಖವಿಲ್ಲ.
ಪರಮಾರ್ಥದಲ್ಲಿ ಪರಿಣಾಮವಿಲ್ಲ.
ಸಿಕ್ಕಿದೆ ಅರ್ತಿಗಾರಿಕೆ ಎಂಬ ಭಕ್ತಿಯಲ್ಲಿ.
ದಾಸಿಯ ಕೂಸಿನಂತೆ ಒಡವೆಗಾಶೆ ಮಾಡಿ
ಘಾಸಿಯಾದೆ ಮನೆಯೊಡೆಯನ ಕೈಯಲ್ಲಿ.
ಭಾಷೆ ಇನ್ನೇಸು ಕಾಲ ನಿಃಕಳಂಕ ಮಲ್ಲಿಕಾರ್ಜುನಾ?
            (
ಮೋಳಿಗೆಯ ಮಾರಯ್ಯನ ವಚನಗಳು, ೧೫೦)

ಇಲ್ಲಿಯ ಅನುಭವ ಅನನ್ಯ. ಅತಿ ಸರಳವಾದ ಮಾತುಗಳಲ್ಲಿಯೇ ಅಂತರಂಗವನ್ನು ಬಿಚ್ಚಿಡಲಾಗಿದೆ. ಪ್ರಾಪಂಚಿಕ ಸುಖ ಎಂಬುದು ಇದ್ದರೂ ಅದನ್ನು ತೊರೆದು ಪರಮಾರ್ಥ ಮಾರ್ಗ ಹಿಡಿದ ಪ್ರಾರಂಭದಲ್ಲಿ ಇಂಥ ವಿರಕ್ತಿ ಬರುವುದು ಸಹಜ.

            ‘ದಾಸಿಯ ಕೂಸಿನಂತೆ ಒಡವೆಗಾಶೆ ಮಾಡಿ
ಘಾಸಿಯಾದೆ ಮನೆಯೊಡೆಯನ ಕೈಯಲ್ಲಿ

ಎಂಬ ವ್ಯಾವಹಾರಿಕ ಅನುಭವ ವಿರಕ್ತಿಯ ತಾತ್ಕಾಲಿಕ ನಿಷ್ಫಲತೆಯನ್ನು ಸೂಚಿಸಿದರೂ ಅದರ ಬಗ್ಗೆ ನಿರಾಶಾದಾಯಕ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಹೀಗೆ ಅರ್ಥಧ ಶ್ರೀಮಂತಿಕೆ ಯಾವುದು. ಎಲ್ಲಿ ಹುಟ್ಟುತ್ತದೆ ಎಂಬುದನ್ನು ಪ್ರಮಾಣಿಸಿ ಹೇಳುವದು ಕಷ್ಟ. ಅದು ಅನುಭವಕ್ಕೆ ವೇದ್ಯವಾಗುವ ವಿಷಯ.

ಇನ್ನು ಹೊಸಗನ್ನಡದಲ್ಲಿ ಅರ್ಥದ ಶ್ರೀಮಂತಿಕೆಯನ್ನು ತರಲು ಹಲವು ವಿಧದ ಪ್ರಯೋಗಗಳು ನಡೆದುದನ್ನು ನೋಡುತ್ತೇವೆ. ಕಾವ್ಯದಲ್ಲಿ ಇದನ್ನು ತರಲು ಕವಿಗೆ ಚತುರ್ಮುಖವೇ ಇರುತ್ತದೆ. ಬೇಂದ್ರೆಯವರ ‘ಚಿಗರಿಗಂಗಳ ಚಲುವಿ’ ಎಂಬ ಪದ್ಯದ ಈ ಸಾಲುಗಳನ್ನ ನೋಡಿ.

ತನ್ನ ತಾ ಸುತ್ತ್ಯಾಳೊ
ಹೊತ್ತಿನ ಬೆನ್ಹತ್ತಾಳೊ
ತಿಂಗಳಿನ ಬಗಲಾಗೆತ್ತ್ಯಾಳೊ
ಗೆಳೆಯಾ, ಎತ್ತ್ಯಾಳೊ;
ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೋ;
ನಿಂತ ನೆಲವೆಂದು ಕಡಿಲ್ಯಾsಕೊ
ಹಡಿಲ್ಯಾsಕೊ
ಒಡಿಲ್ಯಾsಕೊ
ಒಡವ್ಯಲ್ಲೋ ಮಗನೆ, ಉಸಿರದ್ದೊಡಲಂತಾಳೋ
ಚಿಗರಿಗಂಗಳ ಚೆಲುವಿ
ಚೆದsರಿ ನಿಂತಾಳ ನೋಡೋ
ಬೆದರಿ ನಿಂತಾಳ
(
ಸಖೀಗೀತದಲ್ಲಿಚಿಗರಿಗಂಗಳ ಚೆಲುವಿ‘, ೧೯೩೭)

ಇಲ್ಲಿಯ ಭಾವ ತೀವ್ರತೆ ಮತ್ತು ಅರ್ಥದ ಶ್ರೀಮಂತಿಕೆ ಅಘಾಧವಾಗಿದೆ. ತನ್ನ ಮಕ್ಕಳು ತನ್ನ ಒಡಲನ್ನೇ ಹರಿದು ಹಂಚಿಕೊಳ್ಳುವದನ್ನು ನೋಡಿದ ಭೂಮಿತಾಯಿಯ ವೇದನೆ ಕರುಳು ಕಿತ್ತು ಬರುವಂತಿದೆ. ಅದರೊಡನೆ ಭೂಮಿ, ಚಂದ್ರ, ಸೂರ್ಯರ ಆಕಾಶದಲ್ಲಿಯ ಸ್ಥಿತಿಯ ಚಿತ್ರ ಯಥಾವತ್ತಾಗಿದ್ದರೂ ಅದನ್ನು ಕಾವ್ಯಾತ್ಮಕವಾಗಿ ಹೇಳಲಾಗಿದೆ. ಅರ್ಥದ ಶ್ರೀಮಂತಿಕೆಗೆ ಉತ್ತಮ ಉದಾಹರಣೆ. ಇನ್ನೊಂದೆಡೆ ಬೇಂದ್ರೆಯವರು ಸೂರ್ಯೋದಯವನ್ನು

ಮೂಡಲ ಮನೆಯಾ ಮುತ್ತಿನ ನೀರಿನ
ಎರಕs ಹೊಯ್ದಾ, ನುಣ್ಣನ್ನೆರಕs ಹೊಯ್ದಾ.

ಎಂದೂ

            ರತ್ನದ ರಸದಾ ಕಾರಂಜಿಯು
ಪುಟಪುಟನೆ ಪುಟಿದು

ಎಂದೂ ವರ್ಣಿಸುತ್ತಾರೆ. ಕುವೆಂಪು ಅವರು ಅದೇ ಸೂರ್ಯೋದಯದ ವರ್ಣನೆಯನ್ನು ಹೀಗೆ ಕೊಡುತ್ತಾರೆ :

            ದಿಗುತಟದಲಿ ತೆರೆಯುತಿತ್ತು ಹಗಲಿನಕ್ಷಿ
ಮುಗಿಲ ಗರಿಯ ಕಾಯಿಸಿತ್ತು ಗಗನಪಕ್ಷಿ

ಈ ಎರಡೂ ವರ್ಣನೆಗಳನ್ನು ಉಲ್ಲೇಖಿಸಿ ಎಚ್‌. ತಿಪ್ಪೇರುದ್ರಸ್ವಾಮಿ ಅವರು ‘ನಿಜವಾದ ವಿಮರ್ಶಕ ಅವರವರ ಮನೋಧರ್ಮದ ಮೂಲಕ ಅವರು ಏನನ್ನು ಸಾಧಿಸಿದ್ದಾರೆ ಎಂಬುದನ್ನು ನೋಡಬೇಕೇ ಹೊರತು ಇವರ ಹಾಗೆ ಅವರು ಬರೆಯಲಿಲ್ಲ ಎಂಬುದರ ಮೇಲೆ ಅಳೆಯಬಾರದು’ (‘ತೌಲನಿಕ ಕಾವ್ಯ ವಿಮರ್ಶೆ’, ೧೯೮೩) ಎಂದು ಮನೋಜ್ಞವಾಗಿ ಹೇಳಿದ್ದಾರೆ.

ಇನ್ನು ಅನುವಾದದಲ್ಲಿ ಮೂಲದಲ್ಲಿ ವ್ಯಕ್ತವಾದ ಅರ್ಥ ಸಂಪತ್ತಿ ಅನುವಾದದಲ್ಲಿಯೂ ಬರಬೇಕೆಂಬುದು ಉದ್ದೇಶ. ಉದಾಹರಣೆಗೆ ಸಂಸ್ಕೃತದ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಕೆಲವು ಮೂಲದಷ್ಟೇ ರಸವತ್ತಾಗಿ ಪರಿಣಾಮಕಾರಿಯಾಗಿವೆ. ಅಂಥವುಗಳಲ್ಲಿ ಬೇಂದ್ರೆಯವರ ‘ಮೇಘದೂತ’ದ ಕನ್ನಡ ಅನುವಾದವನ್ನು ಉಲ್ಲೇಖಿಸಬಹುದು. ಅದರ ಮೊದಲ ಶ್ಲೋಕವನ್ನು ನೋಡಿ :

            ಕಶ್ಚಿತ್ಕಾಂತಾ ವಿರಹಾಗುರುಣಾ ಸ್ವಾಧಿಕಾರಾತ್ ಪ್ರಮತ್ತಃ
ಸಾಪೇನಾಸ್ತಂಗಮಿತ ಮಹಿಮಾ ವರ್ಷ ಭೋಗ್ಯೇಣ ಭರ್ತುಃ
ಯಕ್ಷಶ್ಚಕ್ರೇ ಜನಕತನಯಾ ಸ್ನಾನ ಪುಣ್ಯೋದಕೇಷು
ಸ್ನಿಗ್ಧಚ್ಛಾಯಾ ತರುಷು ವಸತಿಂ ರಾಮಗಿರ್ಯಾಶ್ರಮೇಷು
(
ಕಾಲಿದಾಸನಮೇಘದೂತಕಾವ್ಯ)

ಇಲ್ಲಿ, ಭಾವದ ಯಶಸ್ವೀ ಅಭಿವ್ಯಕ್ತಿಗಾಗಿ ಕಾಲಿದಾಸ ಮಂದಾಕ್ರಾಂತ ವೃತ್ತವನ್ನು ಬಳಸಿದ್ದಾನೆ. ಅದರ ಮಂದ ಮಂದ ನಡೆ ಯಕ್ಷನ ವಿರಹ ವ್ಯಥೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಅದರ ಕನ್ನಡ ಅನುವಾದಕ್ಕೆ ಬೇಂದ್ರೆಯವರು ೩|೫||೩|೫||೩|೫||ಗು ಈ ಗಣವಿನ್ಯಾಸವುಳ್ಳ ಹೊಸ ಛಂದೋಗತಿಯನ್ನು ಸೃಷ್ಟಿಸಿಕೊಳ್ಳುತ್ತಾರೆ. ಅದು ‘ಮೇಘರಗಳೆ’ ಎಂದೇ ಪ್ರಸಿದ್ಧವಾಯಿತು. ಭಾಷಾಂತರ ನೋಡಿ.

ಒಬ್ಬ ಯಕ್ಷ ತನ್ನೊಡೆಯನಿಂದ ನಲ್ಲೆಯನು ಅಗಲಿ ಬೆಂದು
ಶಪಿತ ವರುಷವನು ಕಳೆಯಲಾಗದೇ ಮಹಿಮೆ ಕಳೆದುಕೊಂಡು
ಜನಕತನಯೆ ಮಿಂದುದಕಗಳಲಿ ತಣ್ನೆಳಲ ಅಂಗಳಲ್ಲಿ
ವಸತಿ ನಿಂದನೋ ರಾಮಗಿರಿಯ ಪುಣ್ಯಾಶ್ರಮಂಗಳಲ್ಲಿ
            (
ಕನ್ನಡಮೇಘದೂತ‘, ೧೯೪೩)

ಮೂಲದ ಭಾವವೂ ಲಯವೂ ಪರಿಣಾಮಕಾರಿಯಾಗಿ ಬಂದಿವೆ. ಅದೇ ರೀತಿ ಕಾಲಿದಾಸನ ಶಾಕುಂತಲ ನಾಟಕವನ್ನು ಕನ್ನಡದಲ್ಲಿ ತಂದ ಪಂಡಿತರಲ್ಲಿ ಬಸವಪ್ಪ ಶಾಸ್ತ್ರಿಗಳು, ವಿ. ಸೀತಾರಾಮಯ್ಯನವರು ಮತ್ತು ಎಸ್‌. ವಿ. ಪರಮೇಶ್ವರಭಟ್ಟರು ಈ ಮೂವರು ಪ್ರಮುಖರು.

ಅವರ ಅನುವಾದ ಕೌಶಲವನ್ನು ನೋಡೋಣ. ಕಾಲಿದಾಸನ ‘ಶಾಕುಂತಲ’ ನಾಟಕದ ನಾಲ್ಕನೆಯ ಅಂಗದಲ್ಲಿಯ ಈ ಶ್ಲೋಕ ನೋಡಿ,

ಶುಶ್ರೂಷಸ್ವ ಗುರೂನ್ಕುರು ಪ್ರಿಯಸಖೀ ವೃತ್ತಿಂ ಸಪತ್ನೀಜನೇ
ಭರ್ತುರ್ವಿಪ್ರಕೃತಾಪಿ ರೋಷಣತಯಾ ಮಾ ಸ್ಮ ಪ್ರತೀಪಂ ಗಮಃ
ಭೂಯಿಷ್ಠಂ ಭವ ದಕ್ಷಿಣಾ ಪರಜನೇ ಭಾಗ್ಯೇಷ್ವನುತ್ಸೇಕಿನೀ
ಯಾನ್ತ್ಯೇವಂ ಗೃಹಿಣೀಪದಂ ಯುವತಯೋ ವಮಾಃ ಕುಲಸ್ಯಾಧಯಃ
(
ಕಾಲಿದಾಸನಅಭಿಜ್ಞಾನ ಶಾಕುಂತಲಅಂಕ. . ಶ್ಲೋಕ, ೧೭)

ಶಕುಂತಲೆ ದುಷ್ಯಂತನನ್ನು ಗಾಂಧರ್ವ ರೀತಿಯಿಂದ ವರಿಸಿ ಗಂಡನ ಮನೆಗೆ ತೆರೆಳುವ ದುಃಖದ ಸನ್ನಿವೇಶವಿದು. ಇದನ್ನು ಬಸವಪ್ಪ ಶಾಸ್ತ್ರಿಗಳು ಹೀಗೆ ಅನುವಾದಿಸದ್ದಾರೆ :

ಪಿರಿಯರ ಸೇವೆಗೆಯ್ಸವತಿಯರ್ಕಳೊಳಿಷ್ಠ ವಯಸ್ಯೆಯಂದದಿಂ
ದಿರು ಪತಿಯೊರ್ಮೆ ಹೇವಗೊಳಿಸಲ್ಮುಳಿಸಿಂ ಪ್ರತಿಕೂಲೆಯಾಗದಿರ್
ಪರಿಜನವಂ ಕರಂ ಸಲಹು ಭಾಗ್ಯದೆ ಬಾಗಿರು ಪೆಣ್ಗಳಿಂತಿರಲ್
ಗರತಿಯರಪ್ಪರಿಂತಿದರನ್ವಯಕಾಧಿಯನುಂಟುಮಾಳ್ಪರೌ
(
ಅಭಿಜ್ಷಾನ ಶಾಂಕುಂತಲ, ೧೯೫೯, ೧೦ನೆಯ ಮುದ್ರಣ)

ಅದೇ ಶ್ಲೋಕವನ್ನು ವಿ. ಸೀತಾರಾಮಯ್ಯ ಅವರು ‘ಅಭಿಜ್ಞಾನ ಶಾಕುಂತಲ ನಾಟಕ’ ಎಂಬ ವಿಮರ್ಶಾ ಲೇಖನದಲ್ಲಿ ಉದ್ಧರಿಸಿದ್ದಾರೆ.

ಪರಿಯರ ಸೇವೆಗೆಯ್ಸವತಿಯರ್ಕಳೊಳಿಷ್ಟ ವಯಸ್ಯೆಯಂದದಿಂ
ದಿರು ಪತಿಯೊರ್ಮೆ ಹೇವಗೊಳಿಸಲ್ಮುಳಿಸಿಂ ಪ್ರತಿಕೂಲೆಯಾಗದಿರ್
ಪರಿಜನವಂ ಕರಂ ಸಲಹು ಭಾಗ್ಯದೆ ಬಾಗಿರು ಪೆಣ್ಗಳಿಂತಿರಲ್
ಗರತಿಯುರಪ್ಪರಿಂತಿರದರನ್ವಯಕಾಧಿಯನುಂಟು ಮಾಳ್ಪರ್
(‘
ವಿ. ಸೀ. ೭೫‘, ೧೯೭೪, ಪುಟ. ೧೧೨, ಜಿ. ಎಸ್‌. ಶಿವರುದ್ರಪ್ಪ ಅವರ ಲೇಖನ.)

ಇನ್ನು ಕಾಲಿದಾಸನ ‘ಅಭಿಜ್ಞಾನ ಶಾಕುಂತಲ’ ನಾಟಕದ ಅದೇ ಪದ್ಯವನ್ನು ಎಸ್‌. ವಿ. ಪರಮೇಶ್ವರಭಟ್ಟರು ಹೀಗೆ ಅನುವಾದಿಸಿದ್ದಾರೆ.

            ಹಿರಿಯರನು ಓಲೈಸು ಮತ್ತೆ ನೀಂ. ಪ್ರಿಯಸಖಿಯತೆರದೊಳಿರು
ಸವತಿಯರೊಳು
ಮುಳಿದು ನೀಂ ಪ್ರತಿಕೂಲೆಯಾಗಿದಿರು ಅಪಚಾರವೆಸಗಿದರು,
ಪತಿಯ ಹಳಿದು
ಪರಿಜನರ ವಿಷಯದೊಳು ದಾಕ್ಷಿಣ್ಯವಶಳೆನಿಸು ಭಾಗ್ಯದೊಳು
ಬೀಗದಿರು ನೀನು
ಪೆಣ್ಗಳಿಂತಿರ್ಪವರು ಗರತಿಯರು ತಾವಹರು ಕುಲಪೀಡ
ರಿನ್ನನ್ಯರು ನ್ಯೂನ
(‘
ಕಾಲಿದಾಸ ಮಹಾ ಸಂಪುಟ‘, ೧೯೭೨)