ಬಸವಪ್ಪ ಶಾಸ್ತ್ರಿಗಳ ಮತ್ತು ಪರಮೇಶ್ವರಭಟ್ಟರ ಅನುವಾದಗಳನ್ನು ನೋಡಿದಾಗ ಕೆಲವು ಮಾತುಗಳು ತಿಳಿಯುತ್ತವೆ. ಕಾಲಿದಾಸನ ಶಾರ್ದೂಲ ವಿಕ್ರೀಡಿತ ವೃತ್ತವನ್ನು ಬಸವಪ್ಪ ಶಾಸ್ತ್ರಿಗಳು ಚಂಪಕಮಾಲೆಯಾಗಿ ಅನುವಾದಿಸಿದ್ದಾರೆ. ಅವರ ಅನುವಾದದ ಭಾಷಾಶೈಲಿ ಹಳಗನ್ನಡವಾಗಿದೆ. ಪರಮೇಶ್ವರಭಟ್ಟರ ಅನುವಾದ ಹೊಸಗನ್ನಡ ಭಾವಗೀತೆಯಂತಿದ್ದು ಭಾವಗೀತೆಗೆ ಬೇಕಾಗುವ ಶೈಲಿಯನ್ನು ಬಳಸಿದ್ದಾರೆ. ‘ನ್ಯೂನ’ ಎಂಬ ಅಚ್ಚ ಸಂಸ್ಕೃತ ಪದವನ್ನೂ ಬಳಸಿದ್ದಾರೆ.

ಇನ್ನು ಇಂಗ್ಲೀಷಿನಿಂದಲೂ ಅನೇಕ ಸಾಹಿತ್ಯ ಕನ್ನಡಕ್ಕೆ ಅನುವಾದಗೊಂಡಿದೆ. ಮೂಲ ಇಂಗ್ಲೀಷಿನ ಲಯವನ್ನು ಕನ್ನಡದಲ್ಲಿ ತರುವುದು ಬಹು ಕಷ್ಟ. ಏಕೆಂದರೆ ಇಂಗ್ಲೀಷಿನ ಮತ್ತು ಕನ್ನಡದ ಭಾಷಾವಲಯಗಳು ಭಿನ್ನ ಜಾತಿಯವು. ಒಟ್ಟು ಸಾರಾಂಶ ಬಂದರೆ ಸಾಕೆಂದು ಬಹಳಷ್ಟು ಅನುವಾದಕರು ತೃಪ್ತಿಪಟ್ಟುಕೊಳ್ಳುತ್ತಾರೆ. ಉದಾಹರಣೆಗೆ ಆಲ್ಬರ್ಟ್‌ ಕಾಮು ಅವರ Outsider ಕಾದಂಬರಿಯನ್ನು ‘ಅನ್ಯ’ ಎಂದು ಡಿ. ಎ. ಶಂಕರ ಅವರು ಅನುವಾದಿಸಿದುದನ್ನು ಗಮನಿಸಬಹುದು. ಮೂಲ ಕಾದಂಬರಿಯಲ್ಲಿ ಕೋರ್ಟ್‌ ದೃಶ್ಯ ಬರುತ್ತದೆ. ಅಲ್ಲಿ ವಕೀಲರೊಬ್ಬರು ಮಾಡುವ ವಾದ ನೋಡಿ.

‘Not only did the man in the dock before you, indulge in the most shameful orgies, on the day following his mother’s funeral, but he killed a man cold bloodedly in the underworld of prostitutes and pimps’.

ಈ ಭಾಷಣದ ಶೈಲಿಯಿಂದಲೇ ಇದು ವಕೀಲರು ಕೋರ್ಟಿನಲ್ಲಿ ಮಾತಾಡುವ ಶೈಲಿ ಎಂದು ಮನದಟ್ಟಾಗುತ್ತದೆ. ಈ ಭಾಗದ ಕನ್ನಡ ಆವೃತ್ತಿಯನ್ನು ನೋಡಿ,

ಕಟಕಟೆಯಲ್ಲಿ ನಿಂತಿರುವ ಮನುಷ್ಯ ಅವನ ತಾಯಿ ಸತ್ತ ಮರುದಿನವೇ ತೀರಾ ನಾಚಿಗೇಡಿನ ಕಾಮಕೇಳಿಯಲ್ಲಿ, ವಿಷಯಲೋಲುಪತೆಯಲ್ಲಿ ಮುಳುಗಿದ. ಸೂಳೆಯರ, ತಲೆಹಿಡುಕರ ನಿಶಾಪ್ರಪಂಚದ ಯಾವುದೋ ಸೇಡು ತೀರಿಸಿಕೊಳ್ಳಲು ಮನುಷ್ಯನೊಬ್ಬನನ್ನು ನಿರ್ದಯೆಯಿಂದ ಕೊಲೆ ಮಾಡಿದ.

ಇಂಗ್ಲೀಷಿನ ಭಾವ ಬಂದಿದೆ. ಆದರೆ ಅಲ್ಲಿ ವಕೀಲರ ವಾದಸರಣಿಯ ಭಾಷಾಶೈಲಿ ಬಂದಂತೆ ಕನ್ನಡದಲ್ಲಿ ಬಂದಿಲ್ಲ. ಅಲ್ಲದೇ ‘ಕಾಮಕೇಳಿಯಲ್ಲಿ, ವಿಷಯಲೋಲುಪತೆಯಲ್ಲಿ’ (shameful orgies), ‘ತಲೆಹಿಡುಕರ’ (prostitutes and pimps) ‘ನಿಶಾಪ್ರಪಂಚ’ (underworld) ಮೊದಲಾದ ಗ್ರಾಂಥಿಕ ಶಬ್ಧಗಳ ಬಳಕೆ ಕೋರ್ಟನಲ್ಲಿ ಎಷ್ಟು ಸೂಕ್ತವಾಗಬಲ್ಲವು ಎಂಬ ಪ್ರಶ್ನೆಯೂ ಏಳುತ್ತದೆ.

.. ವಿವಿಧ ಶೈಲಿ ಪ್ರಯೋಗ

ಕನ್ನಡದಲ್ಲಿ ‘ಸ್ವೀಕೃತ ಭಾಷೆ’ ಅಂದರೆ ‘standard language’ ಎಂಬ ಒಂದು ಶೈಲಿಯಿದೆ. ಅದು ನಾಡಿನಾದ್ಯಂತ ಹೆಚ್ಚು ಕಡಿಮೆ ಒಂದೇ ಪ್ರಕಾರದ್ದಾಗಿದೆ ಎಂದು ಹೇಳಿದರೂ ಪ್ರಾದೇಶಿಕ ಶಬ್ಧಗಳ, ಪ್ರಯೋಗಗಳ ಬಳಕೆ ಆಯಾ ಶೈಲಿಯನ್ನು ಶ್ರೀಮಂತ ಗೋಳಿಸುತ್ತದೆ. ಯಾವುದೇ ಒಂದು ಪ್ರಾದೇಶಿಕ ಅಥವಾ ಸಾಮಾಜಿಕ ಉಪಭಾಷೆಯನ್ನು ಬಳಸಿ ಒಂದು ಸಂಪೂರ್ಣ ಕೃತಿಯನ್ನು ರಚಿಸಬಹುದಾದರೂ ಆ ಬರವಣಿಗೆಗಿಂತ ಅಲ್ಲಲ್ಲಿ ಉಪಭಾಷೆಯ ಪ್ರಯೋಗಗಳನ್ನು ಬಳಸುವ ಶೈಲಿ ಹೆಚ್ಚು ಪ್ರಚಲಿತವಾಗಿದೆ. ವರ್ಣಿಸಬೇಕೆಂದಿರುವ ವ್ಯಕ್ತಿಗಳ ಸನ್ನಿವೇಶಗಳ ಹಿನ್ನೆಲೆಯ ವಿವರಣೆಯಿಲ್ಲದೇ ಭಾಷಾ ಶೈಲಿಯಿಂದಲೇ ಪ್ರಾದೇಶಿಕತೆ ಮತ್ತು ಸಾಮಾಜಿಕತೆ ಸೂಚಿತವಾಗುತ್ತವೆ. ಉದಾಹರಣೆಗೆ,

            ‘ಯಾರ್ ದೋ ಜೋಡೀ ಮಾತಾಡಿಕೋತ ಅಲ್ಲೇ ನಿಂತ್ ಬಿಡಬ್ಯಾಡ್ರಿ. ಲಗೂನ ಬರ್ರಿ‘.

ಈ ರೀತಿಯ ವಾಕ್ಯಗಳು ಕರ್ನಾಟಕದ ಉತ್ತರ ಭಾಗದ ಬ್ರಾಹ್ಮಣ ಗೃಹಣಿಯ ಬಾಯಿಯಿಂದ ಬಂದಿರಬಹುದು ಎಂದೆನಿಸಲು ಮತ್ತು

            ‘ಯಾರ್ ಜೋತೇನೋ ಮಾತಾಡ್ತಾ ಅಲ್ಲೇ ನಿಂತ ಬಿಡಬೇದಿ. ಬೇಗ ಬನ್ನಿ‘.

ಈ ರೀತಿಯ ವಾಕ್ಯಗಳು ಕರ್ನಾಟಕದ ದಕ್ಷಿಣ ಭಾಗದ ಗೃಹಣಿಯ ಬಾಯಿಯಿಂದ ಬಂದಿರಬಹುದು ಎಂದೆನಿಸಲು ಆಯಾ ಉಕ್ತಿಗಳಲ್ಲಿಯ ಭಾಷಾಶೈಲಿ ಸೂಚಕವಾಗಿದೆ ಎಂಬುದನ್ನು ಗಮನಿಸಬೇಕು. ಈ ರೀತಿ ಸ್ಪಷ್ಟವಾದ ಸೂಚನೆಗಳು ದೊರೆಯಲು ಆಯಾ ಪ್ರದೇಶದಲ್ಲಿ ಪ್ರಚಲಿತವಿರುವ ಶಬ್ಧಗಳಷ್ಟೇ ಅಲ್ಲದೇ ಉಕ್ತಿಯ ಧ್ವನಿ ವ್ಯವಸ್ಥೆ, ವಾಕ್ಯರಚನೆಯ ರೀತಿಗಳೂ ಪ್ರಮುಖ ಕಾರಣಗಳಾಗಿವೆ ಎಂಬುದನ್ನು ಗಮನಿಸಬೇಕು.

ಕನ್ನಡ ಸಾಹಿತ್ಯ ಪ್ರಾರಂಭಕಾಲದಲ್ಲಿ ಅಂದರೆ ೯ರಿಂದ ೧೨ನೆಯ ಶತಮಾನದಲ್ಲಿ ರಚಿತವಾದ ಚಂಪೂ ಕಾವ್ಯಗಳಲ್ಲಿ ಪ್ರಾದೇಶಿಕತೆಯ ಸೂಚನೆಗಳು ಬಹಳ ಕಡಿಮೆ ದೊರೆಯುತ್ತಿದ್ದವು ಅಥವಾ ಇಲ್ಲವೇ ಇಲ್ಲ ಎಂಬುದಕ್ಕೆ ಮುಖ್ಯ ಕಾರಣ ನುರಿತ ಕವಿಗಳು ಪಳಗಿಸಿದ ಆ ಭಾಷಾಶೈಲಿ ಸಾರ್ವತ್ರಿಕವಾಗಿ ಬಳಕೆಯಾದುದು. ಉದಾಹರಣೆಗೆ ಶಿವಕೋಟ್ಯಾಚಾರ್ಯ ರಚಿಸಿದ ವಡ್ಡಾರಾಧನೆ (ಕ್ರಿ. ಶ. ಸುಮಾರು ೯೨೫)ಯ ಈ ಉದಾಹರಣೆಯನ್ನು ನೋಡಿ:

ಜಂಬೂದ್ವೀಪದ ಭರತಕ್ಷೇತ್ರದೊಳ್ ವತ್ಸೆಯೆಂಬುದು ನಾಡಲ್ಲಿ ಕೌಸಂಬಿಯೆಂಬುದು ಪೊೞಲದನಾಳ್ವೊನತಿಬಳನೆಂಬರಸನಾತನ ಮಹಾದೇವಿ ಮನೋ ಹರಿಯೆಂಬೊಳ್ ಪೆಸರ್ಗೆ ತಕ್ಕಂತೆ ನೋಡಿದರೆಲ್ಲರ್ಗಳ ಕಣ್ಣಾಲಿಗೆ ಸೋಗಯಿಸುವಳ್

ವಡ್ಡಾರಾಧನೆಯ ಮೇಲಿನ ಉದ್ಧರಣೆಯಲ್ಲಿ ಐದು ವಾಕ್ಯಗಳಿದ್ದರೂ ಅವು ಒಂದೇ ವಾಕ್ಯದಂತೆ ಓಡುತ್ತವೆ.  ವಡ್ಡಾರಾಧನೆಯ ರಚನೆಯ ಕಾಲ ಪೂರ್ವದ ಹಳಗನ್ನಡದ ಕಾಲವೆಂದು ಸಾಮಾನ್ಯವಾಗಿ ಹೇಳಲ್ಪಡುತ್ತಿದ್ದರೂ ಅದರ ಭಾಷಾ ಶೈಲಿಯನ್ನು ಗಮನಿಸಿ ಅದು ಪಂಪನ ಕಾಲಕ್ಕಿಂತ ಬಹಳ ರ್ಪೂದಲ್ಲಿ ರಚಿತವಾದುದಲ್ಲ ಎಂದು ಅದರ ಸಂಪಾದಕ ಡಿ. ಎಲ್‌. ನರಸಿಂಹಾಚಾರ್ ಅವರು ನಿರ್ಧರಿಸಿದರು. ಪೂರ್ವದ ಹಳಗನ್ನಡದಲ್ಲಿ ಕಾಣುವ ‘ದೇಗುಲಮಾನ್‌ (ದೇಗುಲಮಂ), ಏಱುದಾರ್ (ಏಱುದರ್), ತಪ್ಪಾದೆ (ತಪ್ಪದೆ), ವೆಟ್ಟದುಳ್‌ (ವೆಟ್ಟದೊಳ್‌)’ ಮೊದಲಾದ ಪ್ರಯೋಗಗಳು ಇಲ್ಲಿ ಕಾಣದಿರುವುದರಿಂದ ಇದು ಪಂಪನಿಗಿಂತ ಒಂದೆರಡು ದಶಕಗಳಷ್ಟು ಮಾತ್ರ ಹಿಂದಿರ ಬೇಕು ಎಂಬ ನಿರ್ಧಾರವನ್ನು ಭಾಷಾಧಾರಿತವಾಗಿ ಮಾಡಲಾಯಿತು. ಕಂಸಿನಲ್ಲಿ ತೋರಿದ ರೂಪಗಳು ಹಳಗನ್ನಡದ ರೂಪಗಳು.

ಇದಕ್ಕೆ ಪೂರಕವಾಗಿ ಇನ್ನೊಂದು ಉದಾಹರಣೆಯನ್ನು ಪಂಪನ (ಕ್ರಿ. ಶ. ೯೪೧) ವಿಕ್ರಮಾರ್ಜುನ ವಿಜಯದಿಂದ ನೋಡಬಹುದು.

ಅಂತು ಶಂತನವುಂ ಸತ್ಯವತಿಯಮನ್ಯೋನ್ಯಾಸಕ್ತ ಚಿತ್ತರಾಗಿ ಕೆಲವು ಕಾಲ ಮಿರ್ಪನ್ನೆಗಮವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳ್ಪುಟ್ಟಿ ಮಹಾಪ್ರಚಂಡರುಂ ಪ್ರತಾಪಿಗಳುಮಾಗಿ ಬಳೆಯುತ್ತಿರ್ಪನ್ನೆಗಂ ಶಂತನು ಪರಲೋಕ ಪ್ರಾಪ್ತನಾದೊಡೆ ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ ರಾಜ್ಯಂಗೆಯಿಸುತ್ತುಮಿರ್ಪನ್ನೆಗಮೊರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚಿ ಕುರುಕ್ಷೇತ್ರಮಂ ಕಳಂಬೇೞ್ದು ಕಾದಿ ಸತ್ತೊಡೆ ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ

ಮೇಲಿನ ಉದ್ಧರಣೆಯೂ ಹೊಸಗನ್ನಡದಲ್ಲಿ ಸುಮಾರು ಹನ್ನೊಂದು ವಾಕ್ಯಗಳಾಗಬಹುದಾದರೂ ಇಲ್ಲಿ ಒಂದೇ ವಾಕ್ಯದಂತೆ ಓಡುತ್ತದೆ. ಪ್ರತಿಜ್ಞೆ ಎಂಬ ಪದಕ್ಕೆ ನುಡಿವಳಿ ಎಂಬ ಕನ್ನಡ ಪದರಚನೆ ಮಾಡಿದುದು ಪಂಪನ ಕೊಡುಗೆ. ಅಲ್ಲದೇ ಕ್ರಿಯಾಪದದ ಬದಲು ಭೂತಕೃತದಂತಾವ್ಯಯಗಳು ಉಪಯೋಗವಾದುದರಿಂದ ಹೀಗೆ ಒಂದೇ ವಾಕ್ಯವಾಗಿದೆ ಎಂಬುದನ್ನು ನೋಡಬಹುದು. ಪದ್ಯಗಳಿಗೆ ಛಂದಸ್ಸಿನ ಕಟ್ಟು ಇರುವದರಿಂದ ಭಾಷೆಯಲ್ಲಿ ಕಾಣುವ ಸ್ವಾಭಾವಿಕ ಪದಕ್ರಮ (word order) ವ್ಯತ್ಯಸ್ತಗೊಳ್ಳುತ್ತದೆ ಎಂಬ ಕಾರಣದಿಂದ ಇಲ್ಲಿ ಗದ್ಯವನ್ನು ಉದಾಹರಿಸಲಾಗಿದೆ.

ಹಳಗನ್ನಡದ ಈ ಭಾಷಾಶೈಲಿ ಕಾಲನಿರ್ದಿಷ್ಟ ಎಂದು ಹೇಳಬಹುದಾದರೂ ಈ ಶೈಲಿಯಲ್ಲಿ ಯಾರೂ ಯಾವಾಗಲೂ ಬರೆಯಬಹುದು ಎಂಬುದನ್ನು ತೋರಿಸಲು ವಡ್ಡಾರಾಧನೆಯ ಸಂಪಾದಕನ ಕೆಲಸ ನಿರ್ವಹಿಸಿದ ಡಿ. ಎಲ್‌. ನರಸಿಂಹಾಚಾರ್ ಅವರು ತಮ್ಮ ಕೃತಿಯನ್ನು ಬಿ. ಎಂ. ಶ್ರೀಕಂಠಯ್ಯನವರಿಗೆ ಅರ್ಪಣೆ ಮಾಡಿದ ಪುಟದಲ್ಲಿ ಈ ಪದ್ಯಗಳನ್ನು ಬರೆದಿದ್ದಾರೆ,

ಶ್ರೀಕಂಠಗುರುವ ಕಾವ್ಯಮ
ನಾಕರ್ಣಿಸಿ ರಸದ ಮಡುವೊಳಾೞದನಾವಂ |
ಕೇಕಿಕ ನೃತ್ಯದ್ಬರ್ಹಾ
ಲೋಕದವೋಲದುವೆ ಚಿತ್ರವರ್ಣಾಕೀರ್ಣಂ ||
ಆವಂ ಕನ್ನಡ ಕಲ್ಪಿಯೊಳ್ಪರಿಣತಂ ತಾನಾಗಿ ತನ್ನೞ್ತಿಯಿಂ |
ತೀವುತ್ತುಂ ನಿಜ ಶಿಷ್ಯವೃಂದರ್ದೆಯೊಳ್ಸಾಹಿತ್ಯ ಸಂಪ್ರೀತಿಯಂ |
ಭಾವಾವೇಶ ರಸಂಗಳಂ ತುಳುಕಿಪಾ ಶ್ರೀಕಂಠ ವಾಗ್ಧಾರೆಯಿಂ |
ದೋವೋ ಕೀರ್ತಿಯನಾಂತನಾ ಗುರುವರಂಗೀ ಗ್ರಂಥಮಾಯ್ತರ್ಪಿತಂ ||
            (
ವಡ್ಡಾರಾಧನೆ ಪ್ರ : ಶಾರದಾ ಮಂದಿರ, ಮೈಸೂರು ೧೯೪೯)

ಕಂದಪದ್ಯದಲ್ಲಿ ಮತ್ತು ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿ ರಚಿತವಾದ ಮೇಲಿನ ಪದ್ಯಗಳ ಶೈಲಿ ‘ಅೞದ’ದ ಪ್ರಯೋಗದಿಂದ ಮತ್ತು ‘ಎರ್ದೆಯೊಳ್‌’ ಎಂಬಲ್ಲಿಯ ಶಿಥಿಲದ್ವಿತ್ವ ಪ್ರಯೋಗದಿಂದ ಪಂಪನ ಕಾಲದ ಕನ್ನಡದಂತೆ ಕಂಡರೂ ಮುಂದೆ ‘ಲೋಕದವೋಲ್‌, ಕಲ್ಪಿ, ತುಳುಕಿಪ’ ಮೊದಲಾದ ಪದಪ್ರಯೋಗಗಳಿಂದ ಇದರ ಕಾಲ ಉದ್ದೇಶಿತ ಕಾಲಕ್ಕಿಂತ ಮುಂದೆ ಬರುತ್ತದೆ. ಹೀಗೆ ಭಾಷೆಯ ಶೈಲಿ ಹೇಳ ಬೇಕೆಂದಿದ್ದ ವಿಷಯವನ್ನಷ್ಟೇ ಅಲ್ಲದೇ ಹೆಚ್ಚಿನ ವಿವರಗಳನ್ನೂ ಕೊಡುತ್ತದೆ. ಅದನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಬೇಕು.

ಇನ್ನು ೧೨ನೆಯ ಶತಮಾನದ ವಚನಕಾರರೂ ತಮ್ಮ ಸಮಕಾಲೀನ ಭಾಷೆಯನ್ನು ಬಳಸುವ ಪ್ರಕ್ರಿಯೆಗೆ ಹೊರತಾಗಿರಲಿಲ್ಲ ಎಂದು ಹೇಳಬಹುದಾದರೂ ಪ್ರಾದೇಶಿಕತೆಯ ಸುಳುಹು ಅಲ್ಲಿ ದೊರೆಯುವುದಿಲ್ಲ. ಅಂದರೆ, ಅವರು ಬಳಸಿದ ಭಾಷೆಯ ಸ್ವರೂಪ ಮಾತ್ರದಿಂದಲೇ ವಚನಕಾರ ಯಾವ ಪ್ರದೇಶದಿಂದ ಬಂದಿದ್ದಾನೆ ಅಥವಾ ಯಾವ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿದ್ದಾನೆ ಎಂಬುದನ್ನು ಹೇಳುವದು ಸಾಧ್ಯವಾಗುವದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ವಿಶಿಷ್ಟ ಅನುಭವದ ನಿರೂಪಣೆಗಾಗಿ ವಿಶಿಷ್ಟ ಭಾಷಾ ಶೈಲಿಯ ಪ್ರಯೋಗ ವಚನಕಾರರಲ್ಲಿ ಪ್ರಚಲಿತವಾಗಿತ್ತು. ವಚನಗಳಲ್ಲಿ ವೈಯಕ್ತಿಕ ವಿವರಗಳು, ತಮ್ಮ ಪ್ರದೇಶದ ವರ್ಣನೆ ಮೊದಲಾದವುಗಳಿದ್ದಿದ್ದರೆ ಅವರು ಬಳಸಿದ ಭಾಷೆಯ ಪ್ರಾದೇಶಿಕತೆಯ ಸುಳಿವು ಸಿಗಬಹುದಾಗಿತ್ತು. ಇದಕ್ಕೊಂದು ಅಪವಾದವೆಂಬಂತೆ ಸೊನ್ನಲಿಗೆಯ ಉಲ್ಲೇಖ ಸಿದ್ಧರಾಮನ ವಚನಗಳಲ್ಲಿ ಬರುತ್ತದೆ; ಕಲ್ಯಾಣದ ಉಲ್ಲೇಖ ಬಸವೇಶ್ವರರ ವಚನಗಳಲ್ಲಿ ಬರುತ್ತದೆ. ಆದರೆ ಆದಯ್ಯನ ವಚನಗಳಲ್ಲಿ ಪುಲಿಗೆರೆಯ ಸುತ್ತಲಿನ ಭಾಷೆಯನ್ನು ಬಳಸಿರುವ ಸೂಚನೆ ಸಿಗುವುದಿಲ್ಲ.

ವಚನಗಳಲ್ಲಿ ಪ್ರಯೋಗವಾದ ವಿವಿಧ ರೀತಿಯ ಭಾಷಾ ಶೈಲಿಯನ್ನು ಸಮಾಲೋಚಿಸೋಣ. ಸಿದ್ಧರಾಮನ ಸ್ತೋತ್ರ ತ್ರಿವಿಧಿಗಳಲ್ಲಿ ಪ್ರಯೋಗವಾಗಿರುವ ಆರಿಕಲ್ಲು (= ಆಣೇಕಲ್ಲು), ಆವರ್ಚಿಸು (= ಪ್ರಕಾಶಿಸು), ಒಚ್ಚೊತ್ತಿ (= ಚೆನ್ನಾಗಿ ಒತ್ತಿ), ಚುಳುಕನು (= ಸಣ್ಣವನು), ತಾರೈಸು (= ಈಜಾಡು). ಬೀರು (= ಬಿತ್ತು), ಹತ್ತೆ ಸಾರು (= ಸಮೀಪಿಸು) ಮೊದಲಾದ ಶಬ್ದಗಳನ್ನು ಲಕ್ಷಿಸಿದರೆ ಇವು ಸೊಲ್ಲಾಪುರದ ಕಡೆಗೆ ಇರುವ ಶಬ್ದಗಳಾಗಿರಬಹುದೇ ಎಂಬ ಸಂದೇಹ ಬರುತ್ತದೆ. ಉಳಿದ ವಚನಕಾರರಲ್ಲಿ ಇವುಗಳ ಪ್ರಯೋಗ ಕಣ್ಣಿಗೆ ಬೀಳುವುದಿಲ್ಲ. ಆದುದರಿಂದ ಇವು ಸಿದ್ಧರಾಮನ ಪ್ರದೇಶವನ್ನು ಸೂಚಿಸುತ್ತಿರಬಹುದೇ ಎಂಬ ಊಹೆ ಮಾಡಬಹುದು. ಆದರೆ ವಚನಕಾರರೆಲ್ಲ ಒಂದು ನಿರ್ಧಾರಿತ ವಿಶಿಷ್ಟ ಅನುಭವದ ನಿರೂಪಣೆಗಾಗಿ ವಿಶಿಷ್ಟ ಭಾಷಾಶೈಲಿಯನ್ನು ಪ್ರಯೋಗಿಸುವುದರಿಂದ ಪ್ರಾದೇಶಿಕತೆಯನ್ನು ಸೂಚಿಸುವ ಶಬ್ದ ಪ್ರಯೋಗ ಅಥವಾ ವಾಕ್ಯರಚನೆ ಸಿಗುವುದು ದುರ್ಲಭ ಎನ್ನುವದನ್ನು ಮತ್ತೆ ಗಮನಿಸಬೇಕು.

ಆದಯ್ಯನ ವಚನಗಳಲ್ಲಿ ಒಮ್ಮೊಮ್ಮೆ ಪುಲಿಗೆರೆಯ ಪ್ರದೇಶದ ಶಬ್ದಗಳೆನಿಸಬಹುದಾದ ಪ್ರಯೋಗಗಳು ದೊರೆಯುತ್ತವೆ.

ಹಣ, ಬಂಗಾರ, ವಸ್ತ್ರ, ಕಪ್ಪಡ ಬಟ್ಟೆಯಲ್ಲಿ ನೆಟ್ಟನೆಬಿದ್ದಿರಲು,
ಕಂಡು ಕಾತರಿಸಿ ಕೈಮುಟ್ಟಿ ಎತ್ತದ ಭಾಷೆ,
ಕೊಟ್ಟೊಡೆ ಮುಟ್ಟದ ಭಾಷೆ,
ಪರಧನ ಪರಸತಿಗೆ ಅಳುಪದ ಭಾಷೆ,
ಇಂತಿವಕ್ಕಳುಪಿದೆನಾದಡೆ ಸೌರಾಷ್ಟ್ರ ಸೋಮೇಶ್ವರಾ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
(‘
ಆದಯ್ಯನ ವಚನಗಳು‘, ೧೯೫೭, ವಚನ, ೧೪೨)

ಇಲ್ಲಿ ‘ಬಂಗಾರ, ಕಪ್ಪಡ, ನೆಟ್ಟನೆ’ ಪ್ರಯೋಗಗಳ ಬಗ್ಗೆ ವಿಚಾರಿಸಬಹುದು. ಅವು ಆದಯ್ಯನ ಪ್ರದೇಶದ ಶಬ್ದಗಳಿರಬಹುದು.

ಒಂದೇ ರೀತಿಯ ಅನುಭವ ವಚನಕಾರರಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯ ಶಬ್ದಗಳ ಬಳಕೆಯೊಡನೆ ನಿರೂಪಿತವಾಗುತ್ತದೆ. ಉದಾಹರಣೆಗೆ ನೋಡಿ

            ಭಕ್ತನೆಂತೆಂಬೆನಯ್ಯಾ ಭವಿಸಂಗ ಬಿಡದನ್ನಕ್ಕ?
ಮಾಹೇಶ್ವರನೆಂತೆಂಬೆನಯ್ಯಾ ಪರಸ್ತ್ರೀಯ ಪರರರ್ಥದಾಸೆ
ಬಿಡದನ್ನಕ್ಕ?
ಪ್ರಸಾದಿಯೆಂತೆಂಬೆನಯ್ಯಾ ಆಧಿ ವ್ಯಾಧಿ ನಷ್ಟವಾಗದನ್ನಕ್ಕ?
ಪ್ರಾಣಲಿಂಗಿಯೆಂತೆಂಬೆನಯ್ಯಾ ಪ್ರಾಣ ಸುಸ್ಥಿರವಾಗದನ್ನಕ್ಕ?
ಶರಣನೆಂತೆಂಬೆನಯ್ಯಾ ಪಂಚೇದ್ರಿಯ ನಾಸ್ಥಿಯಾಗದನ್ನಕ್ಕ?
ಐಕ್ಯನೆಂತೆಂಬೆನಯ್ಯಾ ಜನನ ಮರಣ ವಿರಹಿತವಾಗದನ್ನಕ್ಕ?
ಇಂತಪ್ಪ ಭಾಷೆ ವ್ರತ ನೇಮಂಗಳ ನಾನಱುಯೆನಯ್ಯಾ!
ಅಘಟಿತ ಘಟಿತ ವರ್ತಮಾನವ ನಾನಱುಯೆನಯ್ಯಾ!
ನಿಮ್ಮ ಶರಣರ ತೊತ್ತು, ಭೃತ್ಯಾಚಾರವ ಮಾಡುವೆ,
ಕೂಡಲ ಸಂಗಮದೇವಾ.
(
ಬಸವಣ್ಣನವರ ವಚನಗಳು, ೧೯೫೧, ವಚನ, ೫೦೯)

ಮೇಲಿನ ಬಸವೇಶ್ವರ ವಚನದಲ್ಲಿ ಷಟ್‌ಸ್ಥಲಗಳ ಸ್ಥಿತಿಯನ್ನು ವರ್ಣಿಸಲಾಗಿದೆ. ಕೆಳಗಿನ ಅಲ್ಲಮನ ವಚನದಲ್ಲಿಯ ಅಭಿವ್ಯಕ್ತಿಯ ಶೈಲಿಯನ್ನು ಮೇಲಿನ ವಚನದೊಡನೆ ಹೋಲಿಸಿ ನೋಡಿ.

            ಭಕ್ತ ಭಕ್ತನೆಂಬರು ಪೃಥ್ವಿಯ ಪೂರ್ವಾಶ್ರಯವ ಕಳೆಯದನ್ನಕ್ಕ
ಅಪ್ಪುವಿನ ಪೂರ್ವಾಶ್ರಯವ ಕಳೆಯದನ್ನಕ್ಕ,
ತೇಜದ ಪೂರ್ವಾಶ್ರಯವ ಕಳೆಯದನ್ನಕ್ಕ,
ವಾಯುವಿನ ಪೂರ್ವಾಶ್ರಯವ ಕಳೆಯದನ್ನಕ್ಕ,
ಆಕಾಶದ ಪೂರ್ವಾಶ್ರಯವ ಕಳೆಯದನ್ನಕ್ಕ,
ಸೋಮ ಸೂರ್ಯರ ಪೂರ್ವಾಶ್ರಯವ ಕಳೆಯದನ್ನಕ್ಕ,
ಭಕ್ತರೆಂದು ಲಿಂಗವ ಪೂಜಿಸುವವರ ಕಂಡು
ನಾನು ಬೆಱಗಾದೆನು ಗುಹೇಶ್ವರ.
(
ಅಲ್ಲಮನ ವಚನ ಚಂದ್ರಿಕೆ, ೧೯೬೧, ವಚನ, ೧೩೬)

ಅಲ್ಲಮನ ಈ ವಚನದಲ್ಲಿ ಪಂಚ ಭೂತಗಳ ಆವರಣದಿಂದ ಭಕ್ತನು ಹೊರಬರಬೇಕೆಂಬ ಅನುಭಾವದ ಹೇಳಿಕೆಯಿದೆ. ಮೇಲಿನ ಬಸವೇಶ್ವರರ ವಚನಕ್ಕಿಂತ ಇಲ್ಲಿ ಆಯಾಮ ಬೇರೆಯಾಗಿದ್ದರೂ ಹೇಳುವ ಶೈಲಿ ಹೋಲಿಸುವಂಥದಾಗಿದೆ. ಹೀಗೆ ವಚನಕಾರರಲ್ಲಿ ಹೋಲಿಸಬಹುದಾದಂಥ ಅನುಭವಗಳ ಕಥನ ಶೈಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಹೊಸಗನ್ನಡ ಅರುಣೋದಯದ ಕಾಲದಲ್ಲಿ ಪರಕೀಯರು ಕನ್ನಡ ಕಲಿತು ಕನ್ನಡದಲ್ಲಿ ಬರಹವನ್ನು ಪ್ರಾರಂಭಿಸಿದಾಗ ಶೈಲಿ ವಿವಿಧ ಆವಿಷ್ಕಾರಗಳನ್ನು ಪಡೆಯಿತು. ಹೊಸಗನ್ನಡಕ್ಕೆ ಒಂದರ್ಥದಲ್ಲಿ ದಾರಿ ಮಾಡಿಕೊಟ್ಟಿತು. ಇಂದಿನ ಕನ್ನಡದಲ್ಲಿಯೂ ಪ್ರಾದೇಶಿಕತೆ ನುಸುಳಿಯೇ ನುಸುಳುತ್ತದೆ. ಉದಾಹರಣೆಗೆ ವ್ಯಾಸರಾವ ನಿಂಜೂರ ಅವರ ಕಾದಂಬರಿಯಲ್ಲಿಯ ಈ ಉಲ್ಲೇಖ ನೋಡಿ,

ಪುಟ್ಟಣ್ಣಯ್ಯ ಏನು ಕಾಣುವುದಿಲ್ಲವಮ್ಮಎಂದು ಅನಂತಯ್ಯನವರು ಕೇಳಿದ್ದಕ್ಕೆ,
ಇಲ್ಲೆ ಅಡ್ಪುವಿನಲ್ಲಿ ನಮ್ಮ ಪೈಕಿ ಒಂದು ಉಪನಯನ ಉಂಟು, ಮಾವ. ಬೆಳಗಾತ ನಾವೆಲ್ಲ ಹೋಗಿದ್ದೆವು. ನನಗೆ ಹಸು ಕರೆಯಲಿಕ್ಕಿತ್ತು ಬಂದು ಬಿಟ್ಟೆ‘.
ಅಂದರೆ ನಿನಗೆ ಇನ್ನು ಹೋಗಬೇಕು ಅನ್ನು
ಛೆ, ಛೆ, ಇಲ್ಲವಪ್ಪ. ಅನ್ನಕ್ಕೆ ನೀರು ಇಟ್ಟಿದ್ದೇನೆ. ಹ್ಯಾಗೂ ನೀವು ಬಂದಿರಿ. ಒಂದು ತಂಬಳಿ, ಹಾಗಲಕೋಡುಪಲ್ಯ ಮಾಡುತ್ತೇನೆ. ಉದ್ನಿಟ್ಟು, ಮೊಸರು. ಸಾಕಲ್ಲ?’
ಪರಮಾಯಿಶಿಯಾಯಿತು ಬಿಡಮ್ಮ. ಪುಟ್ಟಣ್ಣ ಬರುವಾಗ ಬಯ್ಯವಾದೀತ?’
(‘
ಉಸಿರು‘, ೧೯೬೭)

ದಕ್ಷಿಣ ಕನ್ನಡದ ಭಾಷೆಯ ಲಕ್ಷಣಗಳು ಇಲ್ಲಿ ಖಚಿತವಾಗಿ ಗೋಚರಿಸುತ್ತವೆ. ‘ಬೆಳಗಾತ, ಉಂಟು, ಕರೆಯಲಿಕ್ಕಿತ್ತು, ಹಾಗಲಕೋಡಪಲ್ಯ, ಪರಮಾಶಿ, ಬಯ್ಯ’ ಮೊದಲಾದ ಕೆಲವೇ ಪದಗಳು ಸಾಕು.

ಇದೇ ರೀತಿ ಶಿವರಾಮಕಾರಂತರ ‘ಬೆಟ್ಟದ ಜೀವ’ ಕಾದಂಬರಿಯಲ್ಲಂತೂ ಕುಂದಾಪುರ, ಕೋಟದ ಸುತ್ತಲಿನ ಭಾಷೆಯ ಪ್ರಯೋಗಗಳು ತುಂಬಾ ಸಿಗುತ್ತವೆ. ಏಕೆಂದರೆ ಆ ಕಾದಂಬರಿ ಅಲ್ಲಿಯ ಜೀವನವನ್ನು ಚಿತ್ರಿಸುತ್ತದೆ. ನೋಡಿ,

ಅವರುಇವರು ಎಂದರೆ? ‘
ಈಗ ಸಾರಸ್ವತರು, ಗೌಡ ಸಾರಸ್ವತರು, ಹವ್ಯಕರು, ಕೋಟದವರು ಎಂದಿಲ್ಲವೇ?’
ಸಾರಸ್ವತರು ಊರು ಬಿಟ್ಟು ಕೆಲಸ ಸಂಪಾದಿಸಲಿಕ್ಕೆ ಹುಷಾರು; ಗೌಡ ಸಾರಸ್ವತರು ಊರು ಬಿಡದೇ ದುಡ್ಡು ಮಾಡಲಿಕ್ಕೆ ಹುಷಾರು. ಅಡಿಕೆ ತೋಟ ಮಾಡಲು ಹವ್ಯಕರು ಹುಷಾರು. ಕೋರ್ಟು ಲೇವಾದೇವಿಗೆ ನಮ್ಮವರು ಅಂದರೆ ಕೋಟದವರು ಹುಷಾರು. . . .’
ಈಗ ನಿಮ್ಮ ಕೋಟದವರೂ ನಮ್ಮ ಹಾಗೆಯೇ?’
ನಮ್ಮ ಹಾಗೆಯೇ ಎಂದರೆ? ‘
ಅಲ್ಲ, ನಮ್ಮ ಹವ್ಯಕರೂ ಕೋರ್ಟು ವಹಿವಾಟಿಗೆ ಕಡಿಮೆಯೆನ್ನುತ್ತೀರಾ? ಅವರಿಗೆ ತಮ್ಮ ಮನೆಯ ತೋಟದ ಅಡಿಕೆ ಕಾಣುವದಕ್ಕಿಂತ ನೆರೆಮನೆಯವನ ತೋಟದಲ್ಲಿದ್ದ ಅಡಿಕೆ ಒಂದಕ್ಕೆ ಹತ್ತರ, ಹಾಗೆ ಕಾಣಿಸುತ್ತದೆ ‘.
(‘
ಬೆಟ್ಟದ ಜೀವ, ೧೯೪೩)

ಇಲ್ಲಿ ಭಾಷೆಗಿಂತ ಸಾಮಾಜಿಕ ಚಿತ್ರಣ ಪ್ರಮುಖವಾಗಿ ಕಾಣುತ್ತದೆ.

ಇನ್ನು ಆತ್ಮಕಥೆಯಲ್ಲಿ ಪ್ರಥಮ ಪುರುಷದ ಕರ್ತೃಗಳು ಕ್ರಿಯಾಪದಗಳು ಬರುವದು ಅನಿವಾರ್ಯ. ಹೀಗೆ ಯಾವುದೇ ಸಾಹಿತ್ಯದಲ್ಲಿ ಅದರ ಸ್ವರೂಪಕ್ಕನುಸಾರವಾಗಿ ಭಾಷಾ ಶೈಲಿ ತನ್ನದೇ ಆದ ಛಾಪು ಮೂಡಿಸಯೇ ಇರುತ್ತದೆ.

.. ಅನುಭವದ ಆಳ ಮತ್ತು ವಿಸ್ತಾರ

ಈ ಆಯಾಮದ ವಿಶ್ಲೇಷಣೆಯನ್ನು ಮಾಡುವಾಗ ಈ ಪೂರ್ವದಲ್ಲಿ ಚಿರ್ಚಿಸಿದ ನಾಲ್ಕು ಆಯಾಮಗಳ ಚರ್ಚೆಯನ್ನು ಜೊತೆ-ಜೊತೆಗೇ ಲಕ್ಷಿಸಬೇಕು. ಈ ಆಯಾಮದ ವೈಶಿಷ್ಟ್ಯವೆಂದರೆ ಅದು ಎಲ್ಲ ಬರಹಗಾರರಿಗೆ, ಒಂದೇ ಆಗಿರುವುದು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಅನುಭವದ ಆಳ ಮತ್ತು ವಿಸ್ತಾರಗಳು ಅವನವೇ ಆದ ರೀತಿಯಲ್ಲಿರುತ್ತದೆ. ಯಾವುದೇ ಬರವಣಿಗೆಯಲ್ಲಿ ಲೇಖಕನ ಅನುಭವದ ಆಳ ಮತ್ತು ವಿಸ್ತಾರಗಳು ಅವನ ಬರವಣಿಗೆಯ ಯಶಸ್ಸಿಗೆ ಮುಖ್ಯವಾದ ಕಾರಣಗಳಾಗುತ್ತವೆ ಎಂಬುದು ನಿರ್ವಿವಾದವಾದ ಮಾತು. ಅವು ನಿರೀಕ್ಷಿತ ಮಟ್ಟದಲ್ಲಿರದಿದ್ದರೆ ಅಥವಾ ಸಾಮಾನ್ಯರ ಅನುಭವಕ್ಕಿಂತ ಭಿನ್ನ ಮತ್ತು ವಿಶಾಲವಾಗಿರದಿದ್ದರೆ ಬರವಣಿಗೆ ಉಂಟುಮಾಡಬೇಕಾದ ಪರಿಣಾಮವನ್ನು ಉಂಟುಮಾಡದೇ ಹೋಗುತ್ತದೆ. ಅಂದರೆ ಅಂಥ ಬರವಣಿಗೆ ಒಂದು ರೀತಿಯಲ್ಲಿ ವ್ಯರ್ಥವೆಂದೇ ಅರ್ಥಮಾಡಬೇಕಾಗುತ್ತದೆ.

‘ಅನುಭವ’ ಎಂಬುದು ವ್ಯಕ್ತಿವಿಶಿಷ್ಟವಾದ ಸಾಮಗ್ರಿ ಬದುಕಿ ಬಾಳುವ ಪ್ರತಿಯೊಬ್ಬ ವ್ಯಕ್ತಿಗೆ ಅನುಭವ ಎನ್ನುವುದು ಬಂದೇ ಬರುತ್ತದೆ. ಆದರೆ ಆ ವ್ಯಕ್ತಿ ತನಗೆದುರಾದ ಸನ್ನಿವೇಶಗಳಿಗೆ ಹೇಗೆ ಸ್ಪಂದಿಸುತ್ತಾನೆ ಎಂಬುದು ಆ ವ್ಯಕ್ತಿಯ ಸಂಸ್ಕಾರದ ಹಿನ್ನೆಲೆಯನ್ನು ಅವಲಂಬಿಸಿರುತ್ತದೆ. ಒಂದೇ ಸನ್ನಿವೇಶಕ್ಕೆ ಬೇರೆ ಬೇರೆ ಸಂಸ್ಕಾರದ ಹಿನ್ನೆಲೆಯ ವ್ಯಕ್ತಿಗಳು ಬೇರೆ ಬೇರೆಯಾಗಿ ಸ್ಪಂದಿಸುತ್ತಾರೆ ಎಂಬುದು ಎಲ್ಲರ ಅನುಭವ. ಇದು ಕಾವ್ಯದಲ್ಲಿಯೂ ಕಥೆ, ಕಾದಂಬರಿಗಳಲ್ಲಿಯೂ ಆತ್ಮಕಥೆ, ಪ್ರವಾಸ ಸಾಹಿತ್ಯದಲ್ಲಿಯೂ ಕಂಡು ಬರುತ್ತದೆ. ಕಾವ್ಯದಲ್ಲಿ ಅದು ನಿರಾಶೆಯ ಧ್ವನಿಯ ಆಕ್ರೋಶವಾಗಿರಬಹುದು. ಉದಾಹರಣೆಗೆ ಬೇಂದ್ರೆಯವರ ಈ ಪದ್ಯ ಭಾಗ ನೋಡಿ,

ದೇವರದೊಂದು ಗೋರಿಯ ಕಟ್ಟಿ,
ಧರ್ಮದ ಧೂಪಕೆ ಬೆಂಕಿಯನಿಕ್ಕಿ,
ಗಣಗಣ ಬಾರಿಸಿ ಪ್ರಾಣದ ಗಂಟೆಯ,
ಸಾವಿನ ನೋವಿಗೆ ಕಲಮಲವೆದ್ದು,
ನೆಲವನ್ನೆಲ್ಲಾ ತುತ್ತುವೆನೆಂದು
ದಗರುತ್ತಿಹುದು ಗರ್ಜಿಸುತಿಹುದು
ಬಡವರ ಬಗ್ಗರ ತುತ್ತಿನ ಚೀಲದ
ಒಳಗಿನ ಒಳಗಿನ ಒಳದನಿಯೊಂದು!
            (‘
ಗರಿ‘, ೧೯೩೨, ಸಂಕಲನದಲ್ಲಿಯತುತ್ತಿನ ಚೀಲಪದ್ಯ)

ಈ ಪದ್ಯದಲ್ಲಿ ಹಸಿದವನ ಆಕ್ರೋಶವಿದೆ. ಅದೇ ರೀತಿ ಸಮಾಜದಿಂದ ತುಳಿತಕ್ಕೊಳಗಾದವನ ಆಕ್ರೋಶ ಮ. ನ. ಜವರಯ್ಯ ಅವರ ಈ ಪದ್ಯದಲ್ಲಿದೆ,

            ಗಲ್ಲಿಗೊಂದು ಗುಡಿ ಗಂಟೆಗಳ
ಭಂಡ ಭಜನೆ ಷಂಡರುಗಳ
ಮೂಳೆ ಸಿಗಿದು ಪಾಳಿ ಜಡಿದು
ರಾಜ ರಾಣಿ ಪರದೆ ಹರಿದು
ಬಯಲು ರಂಗವಾಗಿದೆ
ದಲಿತ ರಾಗ ಗುಡುಗಿದೆ.
(”
ಕೇಳು ಜಗಮಾದಿಗ ಹೊಲೆಯ೧೯೮೧. ಅಲ್ಲಿದಲಿತ ರಾಗಪದ್ಯ)

ಹೀಗೆ ಮನುಷ್ಯನ ಅದುಮಿಟ್ಟ ಭಾವಗಳ ಆಭಿವ್ಯಕ್ತಿ ತಡೆಯಾಲಾರಾದೆ ಉಕ್ಕಿ ಹೊರಬರುತ್ತವೆ.

ಪ್ರವಾಸ ಕಥನದಲ್ಲಿ, ಅದು ನಮ್ಮ ದೇಶದ ಪ್ರವಾಸವೇ ಇರಲಿ, ವಿದೇಶದ ಪ್ರವಾಸವೇ ಇರಲಿ, ತಮ್ಮ ಅನುಭವದ ನಿರೂಪಣೆ ಇರುತ್ತದೆ.

ಕೃಷ್ಣಾನಂದ ಕಾಮತರ ‘ನಾನೂ ಆಮೇರಿಕೆಗೆ ಹೋಗಿದ್ದೆ’ (೧೯೬೯)ಯಲ್ಲಿ ವಿದ್ಯಾರ್ಥಿಯಾಗಿ ಆಮೇರಿಕೆಯಲ್ಲಿ ಕಳೆದ ಅನುಭವದ ನಿರೂಪಣೆ ಇದ್ದರೆ ಗುರುಮೂರ್ತಿ ಪೆಂಡಕೂರ್ ಅವರ ‘ಥಾಯ್ ಲ್ಯಾಂಡ್ ಇಂಡೋನೇಶಿಯ ತಿರುಗಾಟ’ (೨೦೦೧)ದಲ್ಲಿ ಆ ಪ್ರದೇಶದಲ್ಲಿ ಪ್ರವಾಸ ಮಾಡಿದ ಅನುಭವವಿದೆ. ಇವು ಉದಾಹರಣೆಗಾಗಿ ಉದ್ಧರಿಸಿದವುಗಳು ಹೀಗೆ ಯಾವುದೇ ಪ್ರವಾಸ ಕಥನದಲ್ಲಿ ನೇರ ಅನುಭವದ ನಿರೂಪಣೆ ಇರುತ್ತದೆ. ಒಮ್ಮೊಮ್ಮೆ ಆ ನಿರೂಪಣೆ ಸಾರ್ವತ್ರಿಕ ಕುತೂಹಲವನ್ನು ತಣಿಸುವದಾಗಿರಬಹುದು ಅಥವಾ ಕೆಲಸಕ್ಕೆ ಬಾರದ ವಿವರಣೆಗಳೂ ಇರಬಹುದು. ಇದನ್ನು ನಿರ್ಧರಿಸಲು ಯಾವ ಮಾನದಂಡಗಳಿಲ್ಲ. ಕಾಲವೇ ಅತ್ಯುತ್ತಮ ನಿರ್ಣಾಯಕ. ಸಾರ್ವತ್ರಿಕವಾದುದು ಮಾತ್ರ ಚಿರಕಾಲ ಉಳಿಯುತ್ತದೆ.

ಇನ್ನು ಆತ್ಮ ಕಥೆಗಳಲ್ಲಿಯಂತೂ ಲೇಖಕರ ಸುಖದ, ದುಃಖದ ಅನುಭವಗಳ ನಿರೂಪಣೆಯೇ ಇರುತ್ತದೆ. ತಮ್ಮ ಸಂಸ್ಕಾರದ ಹಿನ್ನೆಲೆಯಲ್ಲಿ ಜೀವನವನ್ನು ನೋಡಿದ ವಿವರಣೆ ಇರುತ್ತದೆ. ಉದಾಹರಣೆಗೆ ಆಲೂರ ವೆಂಕಟರಾಯರ (೧೮೮೦-೧೯೬೪) ‘ನನ್ನ ಜೀವನ ಸ್ಮೃತಿಗಳು’ ಎಂಬ ಗ್ರಂಥ ನೋಡಬಹುದು. ಅದರಲ್ಲಿಯ ಲೇಖನಗಳು ‘ಜಯಕರ್ನಾಟಕ’ ಪ್ರತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದವು. ಆ ಲೇಖನಗಳನ್ನೆಲ್ಲ ಪುಸ್ತಕ ರೂಪದಲ್ಲಿ ಮನೋಹರ ಗ್ರಂಥಮಾಲೆಯ ೧೯೭೪ರಲ್ಲಿ ಪ್ರಕಟಿಸಿತು. ಅದರಲ್ಲಿ ಪೂರ್ವರಂಗ ಮತು ಉತ್ತರರಂಗ ಎಂಬ ಎರಡು ಭಾಗಗಳಿವೆ.  ಪೂರ್ವರಂಗದಲ್ಲಿ ಅವರ ವೈಯಕ್ತಿಕ ಜೀವನದ ಅನುಭವವಿದ್ದರೆ ಉತ್ತರ ರಂಗದಲ್ಲಿ ಅವರ ಸಾಮಾಜಿಕ ರಾಜಕೀಯ ಜೀವನದ ವಿವರಗಳಿವೆ. ವೆಂಕಟರಾಯರ ಬಾಲ್ಯ. ಶಿಕ್ಷಣಗಳು ೧೯ನೆಯ ಶತಮಾನದ ಕೊನೆಯ ಬಾಗದಲ್ಲಿದ್ದ ನಮ್ಮನಾಡಿನ ಸಾಮಾಜಿಕ ಚಿತ್ರಣವನ್ನು ಕೊಡುತ್ತವೆ.

ಅದೇ ರೀತಿ ಬಿ. ಬಿ. ರಾಜಪುರೋಹಿತರ ‘ಏಳುಬೀಳಿನ ಕಡಲು’ (೨೦೦೮) ಎಂಬ ಆತ್ಮಕಥೆ ೨೦ನೆಯ ಶತಮಾನದ ಪೂರ್ವಭಾಗದಲ್ಲಿಯ ಸಾಮಾಜಿಕ ಚಿತ್ರಣವನ್ನು ಕೊಡುತ್ತದೆ. ಅಲ್ಲದೇ ಅವರು ನೋಡಿದ ಭಾರತದ ಅನೆಕ ಭಾಗಗಳ ಸಾಂಸ್ಕೃತಿಕ ಚಿತ್ರಣವನ್ನೂ ಅವರು ಮಾಡಿದ ಜಪಾನ್‌, ಅಮೇರಿಕಾ, ಇಂಗ್ಲೇಂಡ್‌, ಫ್ರಾನ್ಸ್‌ ಮೊದಲಾದ ದೇಶಗಳ ಸಾಮಾಜಿಕ ಜೀವನವನ್ನೂ ವರ್ಣಿಸುತ್ತದೆ.

ಬಿ. ಆರ್. ಕಾವೇರಮ್ಮ ಅವರ ‘ಏಳುಬೀಳುಗಳ ಪಯಣ’ (೨೦೦೭) ತಮ್ಮ ಇಳಿವಯಸ್ಸಿನಲ್ಲಿ, ಅಂದರೆ ೯೦ನೆಯ ವರ್ಷದಲ್ಲಿ, ರಚಿಸಿದ ಆತ್ಮಕಥೆ. ಅದರಲ್ಲಿ ಬರುವ ಸನ್ನಿವೇಶಗಳು ಪಾತ್ರಗಳು ಎಲ್ಲವೂ ಸಾಮಾನ್ಯ ಓದುಗರಿಗೆ ಅಪರಿಚಿತ. ಸಾರ್ವತ್ರಿಕತೆಯನ್ನು ಅಲ್ಲಿ ಹುಡುಕುವದು ಸಾಧ್ಯವಿಲ್ಲ. ಈ ಕಟ್ಟಿನಿಟ್ಟು ಎಲ್ಲ ಆತ್ಮಕಥೆಗಳಿಗೆ ಅನ್ಯಯಿಸುತ್ತದೆ.

ಕನ್ನಡ ಸಾಹಿತ್ಯದ ಇತಿಹಾಸವನ್ನು ನೋಡಿದರೆ ಆತ್ಮಕಥೆ ಅಥವಾ ಪ್ರವಾಸ ಕಥನ ಮೊದಲಾದ ವಸ್ತುಗಳ ಕುರಿತು ರಚಿಸಿದ ಗ್ರಂಥಗಳು ಕವನ, ಕಥೆ, ಕಾದಂಬರಿಗಳಿಗಿಂತ ಸಂಖ್ಯೆಯಲ್ಲಿ ಕಡಿಮೆ. ಮಹಾನುಭಾವರ ಚರಿತ್ರೆಯನ್ನು ಬರೆಯುವುದು ತಿಳುವಳಿಕೆಯ ಹೊಸ ಮುಖವನ್ನು ಪರಿಚಯಿಸಿದಂತೆ ಇರುತ್ತಿದ್ದಿತು. ಪಂಪ, ರನ್ನ ಮೊದಲಾದ ಮಹಾಕವಿಗಳು ತೀರ್ಥಂಕರರ ಚರಿತ್ರೆಗಳನ್ನು ಬರೆದಿದ್ದಾರೆ. ತೀರ್ಥಂಕರರೆಲ್ಲ ಐತಿಹಾಸಿಕ ವ್ಯಕ್ತಿಗಳೇ ಆಗಿದ್ದುದರಿಂದ ಅವೆಲ್ಲ ಚರಿತ್ರೆ ಎಂದೇ ಎನಿಸಿಕೊಳ್ಳುತ್ತವೆ. ಅಲ್ಲಿ ಪವಾಡಗಳಂಥ ಸನ್ನಿವೇಶ ನಡೆದಿರಬಹುದು. ಮಹಾತ್ಮರ ಚರಿತ್ರೆಯಲ್ಲಿ ಇಂಥವೆಲ್ಲ ಸಾಮಾನ್ಯ.

ಇಂಥ ಕೃತಿಗಳಲ್ಲಿ ಹರಿಹರನ ‘ಬಸವರಾಜದೇವರ ರಗಳೆ’ (ಸಂ : ಟಿ. ಎಸ್‌. ವೆಂಕಣ್ಣಯ್ಯ, ೧೯೩೦) ಒಂದು ಮಹತ್ತ್ವದ ಕೃತಿ. ಹರಿಹರನ ರಚನೆಯೆಂದೇ ಪ್ರಖ್ಯಾತವಾಗಿರುವ ಈ ಕೃತಿ ತನ್ನ ಸಮಕಾಲೀನ ಮಹಾಪುರಷನೊಬ್ಬನ ಜೀವನವನ್ನು ಮಹಾಕಾವ್ಯವಾಗಿಸಿದೆ. ಸು. ೧೨೦೦ರಲ್ಲಿ ಇದ್ದ ಹರಿಹರ ೧೧೫೦ರ ಸುಮಾರಿಗೆ ಇದ್ದ ಬಸವೇಶ್ವರನನ್ನು ನೋಡಿರಲು ಸಾಕು. ಟಿ. ಎಸ್‌. ವೆಂಕಣ್ಣಯ್ಯನವರು ಪೀಠಿಕೆಯಲ್ಲಿ ಹೇಳಿದಂತೆ ‘ವಸ್ತು ರಚನೆ, ಪಾತ್ರ ಪೋಷಣೆ, ವರ್ಣನೆ, ಶೈಲಿ ಮೊದಲಾದವುಗಳಲ್ಲಿ ಈ ಕಾವ್ಯವೂ ಉದ್ಗ್ರಂಥವೆಂದು ಹೊಗಳಿಸಿಕೊಳ್ಳುವ ಅನೇಕ ಕಾವ್ಯಗಳಿಗಿಂತಲೂ ಶೇಷ್ಠತರವಾಗಿರುತ್ತದೆ’. ಈ ಮಾತುಗಳು ಯಥಾರ್ಥವಾಗಿವೆ.

ಹೀಗೆ ಆತ್ಮಕಥೆಯಲ್ಲದಿದ್ದರೂ ಸ್ವಂತ ಅನುಭವದ ನಿರೂಪಣೆಯಲ್ಲಿ ವಚನಕಾರರ ಕೊಡುಗೆ ಅಪೂರ್ವವಾಗಿದೆ. ಒಂದು ರೀತಿಯಲ್ಲಿ ವಚನಕಾರರ ಅನುಭವಗಳಲ್ಲಿ ಏಕರೂಪತೆ ಇದೆ. ಏಕೆಂದರೆ ವಚನಕಾರರೆಲ್ಲ ತಮ್ಮ ಅನುಭವಗಳನ್ನೂ ಷಟ್‌ಸ್ಥಲದ ಸಿದ್ಧಾಂತವನ್ನೂ ಹೇಳುತ್ತಾರೆ. ಆ ಸಿದ್ಧಾಂತ ವಚನಕಾರರು ಮೊದಲು ಇರಲಿಲ್ಲವಾದುದರಿಂದಲೂ ಎಲ್ಲರೂ ಅದೇ ಸಿದ್ಧಾಂತವನ್ನು ತಮ್ಮ ತಮ್ಮ ಮಾತುಗಳಲ್ಲಿ ಹೆಳಿರುವುದರಿಂದಲೂ ಭಿನ್ನತೆಯನ್ನೂ ಅಭಿರುಚಿಯನ್ನೂ ಉಳಿಸಿಕೊಳ್ಳುವುದು ಬಹು ಕಷ್ಟದ ಕೆಲಸವಾಗುತ್ತದೆ. ಆ ಕೆಲಸವನ್ನು ವಚನಕಾರರು ಹೇಗೆ ಯಶಸ್ವಿಯಾಗಿ ಮಾಡಿದ್ದಾರೆ ಎಂಬುದನ್ನು ಪರೀಕ್ಷಿಸುವುದೂ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಮಹತ್ತ್ವದ ವಿಷಯವಾಗುತ್ತದೆ.

ವೀರಶೈವರ ಪ್ರಮುಖ ದರ್ಶನವಾದ ಷಟ್‌ಸ್ಥಲ ಸಿದ್ಧಾಂತದ ನೆಲೆಯನ್ನು ನಿರೂಪಿಸುವಾಗ ಪ್ರತಿಯೊಬ್ಬ ವಚನಕಾರನ ಸ್ವಂತ ಅಧ್ಯಾತ್ಮಿಕತೆಯ ದರ್ಶನವಾಗುತ್ತದೆ. ಭಕ್ತ, ಮಹೇಶ, ಪ್ರಾಣಲಿಂಗಿ, ಪ್ರಸಾದಿ, ಶರಣ ಮತ್ತು ಐಕ್ಯ ಎಂಬ ಆರು ಸ್ಥಲಗಳಲ್ಲಿ ಜೀವದ ವಿಕಾಸವಾಗುತ್ತದೆ. ಸಾಧನೆ ಪರಿಪಕ್ವವಾದಂತೆ ಈ ಸ್ಥಲಗಳ ಸಾಕ್ಷಾತ್ಕಾರವಾಗುತ್ತದೆ. ಎಂಬುದು ತತ್ತ್ವ. ಯಾವುದೇ ಒಬ್ಬ ವಚನಕಾರನ ವಿವಿಧ ಸ್ಥಲಗಳಲ್ಲಿಯ ವಚನಗಳನ್ನು ಗಮನಿಸಿದರೆ ಅವನ ಸಾಧನೆಯ ಹಾದಿಯ ಹೆಜ್ಜೆ ಗುರುತು ಸಿಗುತ್ತದೆ. ಆದರೆ ಇದು ಅಷ್ಟು ಸುಲಭವಲ್ಲ. ಏಕೆಂದರೆ ಅನೇಕ ವಚನಗಳು ಮಿಶ್ರಗೊಂಡು ಅವು ಸಾಮಾನ್ಯ ಅನುಭವವನ್ನು ಹೇಳುತ್ತಿರುತ್ತವೆಯೇ ಹೊರತು ವಿಶಿಷ್ಟ ಸ್ಥಲದ ವಿಶಿಷ್ಟ ಅನುಭವವನ್ನು ಹೇಳುವುದಿಲ್ಲ. ಉದಾಹರಣೆಗೆ

ದುರ್ವ್ಯಸನಿ ದುರಾಚಾರಿಯೆಂದೆನಿಸದಿರಯ್ಯಾ, ಎನ್ನ
ಲಿಂಗವ್ಯಸನಿ, ಜಂಗಮಪ್ರೇಮಿಯೆನಿಸಯ್ಯಾ;
ಅವಶ್ಯಮನುಭೋಕ್ತವ್ಯವೆಂದೆನಿಸದಿರಯ್ಯಾ
ಕೂಡಲ ಸಂಗಮದೇವಾ, ಸೆಱಗೊಡ್ಡಿ ಬೇಡುವನು!
(
ಬಸವಣ್ಣನವರ ಷಟ್ಸ್ಥಲದ ವಚನಗಳು, ೧೯೫೧, . ೨೬೨)

ಎಂಬ ಭಕ್ತಿಸ್ಥಲದ ವಚನದಲ್ಲಿ ‘ಸದಾಚಾರಿ ಎಂದೆನಿಸಿದರೆ ಸಾಕು ಜೀವನ ಸಾರ್ಥಕವಾಗುತ್ತದೆ’. ಎಂಬ ವ್ಯಾವಹಾರಿಕ ಭಾವನೆಯಿದೆ. ಆದುದರಿಂದ ಇದು ಸಾಧನೆಯ ಪ್ರಾರಂಭದ ಹಂತದಲ್ಲಿ ರಚಿತವಾದ ವಚನವಿರಬೇಕು ಎನ್ನಬಹುದು. ಇನ್ನು ಐಕ್ಯಸ್ಥಲದ ವಚನವೊಂದನ್ನು ನೋಡಿ.

ಘನಗಂಭೀರ ಮಹಾಘನದೊಳಗಿನ ಘನಕ್ಕೆ
ಘನವಾಗಿದ್ದೆನಯ್ಯಾ.
ಕೂಡಲ ಸಂಗಮದೇವಯ್ಯನೆಂಬ ಮಹಾಬೆಳಗಿನ
ಬೆಳಗಿನೊಳಗಿದ್ದೇನೆಂಬ ಶಬ್ದ
ಮುಗ್ಧವಾದುದೇನೆಂಬೆನಯ್ಯಾ?
(
ಬಸವಣ್ಣನವರ ಷಟ್ಸ್ಥಲದ ವಚನಗಳು, ೧೯೫೧, . ೯೫೬)

ಇಲ್ಲಿ ಪ್ರಾಪಂಚಿಕ ಐಹಿಕ ಪ್ರಜ್ಞೆಯನ್ನು ಮೀರಿದ ಪ್ರಜ್ಞಾವಸ್ಥೆಯಲ್ಲಿ ಐಕ್ಯನಾದ ಭಾವ ವ್ಯಕ್ತವಾಗಿದೆ. ಆದುದರಿಂದ ಇದು ಐಕ್ಯಸ್ಥಲದ ವಚನವಿರಬೇಕು ಎಂದೆನಿಸುತ್ತದೆ. ಹೀಗೆ ಅನುಭವದ ವಿವಿಧ ಸ್ತರಗಳನ್ನು ಎಲ್ಲ ವಚನಕಾರರ ವಚನಗಳಲ್ಲಿ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವದಿಲ್ಲ. ಆದುದರಿಂದಲೇ ಬಹುಶಃ ಅನೇಕ ವಚನಕಾರರ ವಚನಗಳನ್ನು ಷಟ್‌ಸ್ಥಲಗಳಿಗೆ ಸಂಬಂಧಿಸಿ ವಿಂಗಡಿಸುವುದು ಸಾಧ್ಯವಾಗುತ್ತಿಲ್ಲ. ಏನಿದ್ದರೂ ವಚನಗಳನ್ನು ನಾವು ಓದುವಾಗ ಸ್ಥಲಗಳ ಕಲ್ಪನೆಯನ್ನು ಹಿನ್ನೆಲೆಗೆ ಇಟ್ಟುಕೊಂಡು ಓದಿದರೆ ಅರ್ಥಕ್ಕೆ ಆಧ್ಯಾತ್ಮದ ಮೆರಗು ಬರುತ್ತದೆ.

ಮೇಲಿನ ಚರ್ಚೆಯನ್ನು ವಚನಗಳು ನಿರೂಪಿಸುವ ಅರ್ಥವನ್ನು, ತಿಳುವಳಿಕೆಯ ತಿರುಳನ್ನು ಲಕ್ಷಿಸಿ ಮಾಡಲಾಗಿದೆ. ಇವುಗಳಿಂದ ವಚನಕಾರರ ಅನುಭವದ ಆಳ ಮತ್ತು ವಿಸ್ತಾರಗಳ ಕಲ್ಪನೆ ಬರುತ್ತದೆ. ವಚನಗಳ ಭಾಷಾಶೈಲಿ ಆ ಅನುಭವದ ನಿರೂಪಣೆಗೆ ಸೂಕ್ತವಾಗಿದೆ ಎಂದು ತಿಳಿಯಬಹುದು.

ಇನ್ನು ಮಧ್ಯಯುಗದಲ್ಲಿ ಬರುವ ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದ ಕವಿಗಳಲ್ಲಿ ಸಾಮಾಜಿಕ ಮತ್ತು ರಾಜಕೀಯ ಅನುಭವ ಸಮೃದ್ಧವಾಗಿತ್ತು. ಅದರಿಂದಾಗಿ ಅವರ ಅಭಿವ್ಯಕ್ತಿ ಶಕ್ತಿಯುತವಾಗಿತ್ತು.

ಅನಂತರದಲ್ಲಿ ಬಂದ ಷಡಕ್ಷರಿಯ ಅನುಭವವೈಶಾಲ್ಯ, ಕಲ್ಪನಾ ವಿಲಾಸ, ಕಾವ್ಯಕಲೆ ಅದ್ವಿತೀಯವಾಗಿದ್ದವು. ‘ರಾಜಶೇಖರ ವಿಳಾಸ’ದ ಈ ಪದ್ಯ ನೋಡಿ.

            ಸುರನದಿಯಲ್ಲಿ ಮಿಂದು ಸುರಮಾರ್ಗಕಚೌಘಮನೈದೆ ಬಿರ್ಚ್ಚಿ ವಿ
ಸ್ಫುರಿತ ತದುತ್ಪ್ರತಾಪ ತಪನಾತಪದಾರಿಸಿ ಸೂಡಿ ತಾರಕೋ
ತ್ಕರ ಕುಸುಮಂಗಳಂ ತಳೆದು ಚಂದ್ರಿಕೆಯೆಂಬ ವಿಶಾಲ ಚೇಲಮಂ
ಧರಣಿಪ ಕೀರ್ತಿಕಾಂತೆ ವಿಧುದರ್ಪಣಮಂ ನೆರೆನಿಂದು ನಿಟ್ಟಿಪಳ್
            (ಷಡಕ್ಷರಿಯರಾಜಶೇಖರ ವಿಳಾಸಂ‘, ೧೯೪೯)

ಇಲ್ಲಿಯ ಅದ್ಭುತ ಕಲ್ಪನೆಯನ್ನು ನೋಡಬೆಕು. ಇನ್ನು ಅವನ ‘ಶಬರ ಸಂಕರ ವಿಳಾಸ’ವೂ ಅಷ್ಟೇ ಪ್ರೌಢವಾದ ರಸವತ್ತಾದ ಕೃತಿ. ಇವನ್ನೆಲ್ಲ ರಚಿಸಲು ಬೇಕಾದ ಅನುಭವದ ಆಳ ಮತ್ತು ವಿಸ್ತಾರ ಆಗಾಧವಾಗಿದ್ದವು.

ಹೊಸಗನ್ನಡಕ್ಕೆ ಬರುವಾಗ ಕಾವ್ಯರಚನೆಗೆ ಬೇಕಾದ ಅನುಭವದ ಆಳ ಮತ್ತು ವಿಸ್ತಾರಗಳು ಕಥೆ ಕಾದಂಬರಿಗಳ ರಚನೆಗೆ ಬೇಕಾದ ಅನುಭವದ ಆಳ ಮತ್ತು ವಿಸ್ತಾರಗಳಿಗಿಂತ ಭಿನ್ನವಾಗಿವೆ. ಉದಾಹರಣೆಗೆ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’, ಕುವೆಂಪು ಅವರ ‘ಕಾನುರು ಹೆಗ್ಗಡಿತಿ’ ಅಥವಾ ಗೋಕಾಕರ ‘ಸಮರಸವೇ ಜೀವನ’ ಮೊದಲಾದ ಕಾದಂಬರಿಗಳಲ್ಲಿ ಲೇಖಕರು ಸಮಾಜವನ್ನು ನೋಡಿದ ರೀತಿ ವಿಶಿಷ್ಟವಾಗಿದೆ. ಎಲ್ಲ ಕೃತಿಗಳಲ್ಲಿಯೂ ವ್ಯಕ್ತಿಗಳು ತಮಗೆದುರಾದ ಸನ್ನಿವೇಶವನ್ನು ಎದುರಿಸುತ್ತವೆ. ಆದರೆ ಎದುರಿಸುವ ರೀತಿಯಲ್ಲಿ ಅವರವರ ಸಂಸ್ಕಾರದ ಹಿನ್ನೆಲೆ ಎದ್ದು ಕಾಣತ್ತದೆ. ಹೇಗೆ ಎದುರಿಸಿದರೆ ಏನರ್ಥ ಬರುತ್ತದೆ ಎಂಬುದನ್ನು ಕೃತಿಕಾರ ನಿರ್ಧರಿಸುತ್ತಾನೆ. ಅಲ್ಲಿ ಅವನ ಒಟ್ಟು ಮನೋಧರ್ಮ ವ್ಯಕ್ತವಾಗುತ್ತದೆ.

ಇತ್ತೀಚಿನ ‘ಅನು ದೇವಾ ಹೊರಗನವನು’ (೨೦೦೭) ಎಂಬ ಕೃತಿಯಲ್ಲಿ ಬಂಜಗೆರೆ ಜಯಪ್ರಕಾಶ ಅವರ ಬಸವಣ್ಣ ಮಾದಿಗರವನು ಎಂದು ಸಿದ್ಧಪಡಿಸಲು ನೋಡುತ್ತಾರೆ. ಬಸವೇಶ್ವರರ ವಚನಗಳಲ್ಲಿ ‘ಮಾದಾರನ ಮಗ ನಾನಯ್ಯ’ (ಬಸವಣ್ಣನವರ ಷಟ್‌ಸ್ಥಲದ ವಚನಗಳು, ೩೪೭). ‘ಚೆನ್ನಯ್ಯನೆನ್ನ ಮುತ್ತಯ್ಯ’ (ಅದೇ ವಚನ), ‘ಅಪ್ಪನು ಡೊಹಾರ ಕಕ್ಕಯ್ಯ’ (ಬಸವಣ್ಣನವರ ಷಟ್‌ಸ್ಥಲದ ವಚನಗಳು, ೩೪೨), ಎಂದು ಮೊದಲಾಗಿ ಅನೇಕ ಕಡೆ ಬರುತ್ತದೆ. ಲಿಂಗದೀಕ್ಷೆ ಹೊಂದಿದ ಶರಣರೆಲ್ಲ ಒಂದೇ ಅವರಲ್ಲಿ ಜಾತಿಭೇದವಿಲ್ಲ ಎಂದು ಬಿಂಬಿಸಲು ಬಸವಣ್ಣನವರು ಡೋಹಾರ ಕಕ್ಕಯ್ಯ, ಮಾದಾರ ಚೆನ್ನಯ್ಯ ನನ್ನ ಅಪ್ಪಂದಿರು, ನಾನು ಅವರ ಮಗ ಎಂದು ಆಲಂಕಾರಿಕವಾಗಿ ಹೇಳಿದ್ದಾರೆ. ಅದನ್ನು ಐತಿಹಾಸಿಕ ಸತ್ಯವೆನ್ನಲಾದೀತೇ? ಐತಿಹಾಸಿಕ ಸತ್ಯವಾಗಿದ್ದರೆ ಇಬ್ಬರು ಬೇರೆ ಬೇರೆ ವ್ಯಕ್ತಿಗಳನ್ನು ‘ಅಪ್ಪ’ ಎಂದು ಹೇಳಿದುದರ ಅರ್ಥವೇನು? ಹೀಗೆ ಆಲಂಕಾರಿಕ ಅರ್ಥವನ್ನು ನಿಜವೆಂದು ಭಾವಿಸಿ ಗೊಂದಲಕ್ಕೀಡಾದ ಉದಾಹರಣೆ ಬಂಜಾಗೆರೆಯವರ ಕೃತಿ. ಅನುಭವದ ಆಳದ ಜೊತೆಗೆ ಸಹಜತೆ, ಸಾಧ್ಯತೆಗಳನ್ನೂ ಸೇರಿಸಬೇಕಾಗುತ್ತದೆ.

ಮೇಲೆ ವಿವರಿಸಿದ ಐದು ಆಯಾಮಗಳಲ್ಲಿ ಕನ್ನಡ ಸಾಹಿತ್ಯದ ಭಾಷಾಶೈಲಿಯ ವಿಶ್ಲೇಷಣೆಯನ್ನು ನಡೆಸುವುದು ಓದುಗರಲ್ಲಿ ಹೊಸ ತಿಳುವಳಿಕೆಯನ್ನು ಮೂಡಿಸುತ್ತದೆ. ಇಲ್ಲಿ ಆ ಪ್ರಕ್ರಿಯೆಯ ಮಾದರಿಯನ್ನು ತೋರಿಸಲಾಗಿದೆ.