ಇಲ್ಲಿ ಶೈಲಿವಿಜ್ಞಾನ ಮತ್ತು ಜ್ಞಾನಶಾಸ್ತ್ರಗಳ ಶಾಸ್ತ್ರೀಯ ಹಿನ್ನೆಲೆಯನ್ನು ಚರ್ಚಿಸಿಲಾಗುತ್ತದೆ. ‘ಶೈಲಿವಿಜ್ಞಾನ’ ವನ್ನು Stylisticsಗೂ ‘ಜ್ಞಾನಶಾಸ್ತ್ರ’ವನ್ನು Pragmaticsಗೂ ಸಮಾನಪದಗಳಾಗಿ ಉಪಯೋಗಿಸಲಾಗಿದೆ. ಇವೆರಡೂ ಶಾಸ್ತ್ರಗಳು ಭಾಷಾವಿಜ್ಞಾನ (Linguistics) ದ ಅಂಗವಾಗಿ ಇತ್ತೀಚೆ ಬೆಳೆದು ಬಂದವು. ಇವುಗಳ ವಿಶ್ಲೇಷಣಾ ವಿಧಾನಗಳನ್ನೂ ಇತಿಮಿತಿಗಳನ್ನೂ ವಿವರವಾಗಿ ಪರಿಶೀಲಿಸುವ ಮುನ್ನ ಭಾಷಾ ವಿಜ್ಞಾನವು ಬೆಳೆದು ಬಂದ ರೀತಿಯನ್ನು ಸಂಕ್ಷಿಪ್ತವಾಗಿ ನೋಡೋಣ. 

ಭಾಷಾವಿಜ್ಞಾನ ಅಥವಾ ಭಾಷಾಶಾಸ್ತ್ರ (Linguistics)ವು ೧೯ನೆಯ ಶತಮಾನದ ಕೊನೆಗೆ ಹುಟ್ಟಿ ೨೦ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ವಿವಿಧ ಆಯಾಮಗಳಲ್ಲಿ ಬೆಳೆದುಬಂದಿತು. ಅದು ಮುಖ್ಯವಾಗಿ ಏಕಮುಖಿ (Synchronic) ಮತ್ತು ಬಹುಮುಖಿ (Diachronic) ವಿಶ್ಲೇಷಣೆಯಾಗಿ ವಿಭಾಗ ಪಡೆಯಿತು.

ಏಕಮುಖಿ ಭಾಷಾವಿಜ್ಞಾನದಲ್ಲಿ ವಿಶ್ಲೇಷಣೆಗೆ ಒಳಗಾದ ಭಾಷೆಯ ವಿವಿಧ ಆಯಾಮಗಳ ಶಾಸ್ತ್ರೀಯ ವಿವೇಚನೆ ಇರುತ್ತದೆ. ಈ ಧೋರಣೆಯಲ್ಲಿ ಬೆಳೆದು ಬಂದ ವರ್ಣನಾತ್ಮಕ ಭಾಷಾವಿಜ್ಞಾನ (Descriptive Linguistics) ವು ಬಹು ಪ್ರಚಾರವನ್ನು ಪಡೆಯಿತು. ಆ ತಂತ್ರದಲ್ಲಿ ಪ್ರಪಂಚದ ಅನೇಕ ಅಜ್ಞಾತ ಭಾಷೆಗಳು ಬೆಳಕನ್ನು ಕಂಡವು. ಅಷ್ಟೇ ಅಲ್ಲದೇ ಪ್ರಪಂಚದ ಯಾವುದೇ ಭಾಗದಲ್ಲಿರುವ, ಆ ವಿಜ್ಞಾನವನ್ನು ಬಲ್ಲ, ಪಂಡಿತರು ವಿಶ್ಲೇಷಿತ ಭಾಷೆಯ ಸ್ವರೂಪ ಲಕ್ಷಣಗಳನ್ನು ತಿಳಿದುಕೊಳ್ಳುವಂತಾಯಿತು. ವರ್ಣನಾತ್ಮಕ ಭಾಷಾವಿಜ್ಞಾನವು ಭಾಷೆಗೆ ಸಲ್ಲಿಸಿದ ಬಹುದೊಡ್ಡ ಕಾಣಿಕೆ ಇದು.

ವರ್ಣನಾತ್ಮಕ ಭಾಷಾವಿಜ್ಞಾನದಲ್ಲಿ ಮುಖ್ಯವಾಗಿ ವಿಶ್ಲೇಷಣೆಗೆ ಒಳಗಾದ ಭಾಷೆಯ ಧ್ವನಿವಿಶ್ಲೇಷಣೆ (Phonetics) ಅಂದರೆ ಆ ಭಾಷೆಯಲ್ಲಿ ಬಳಕೆಯಾಗುವ ಧ್ವನಿಗಳ ಉಚ್ಚಾರಣಾ ವಿಧಾನಗಳ ವಿವರವಾದ ಚರ್ಚೆ; ಧ್ವನಿಮಾ ವಿಶ್ಲೇಷಣೆ (Phonology) ಅಂದರೆ ಬಳಕೆಯಾದ ಧ್ವನಿಗಳು ಆ ಭಾಷೆಯಲ್ಲಿ ಯಾವ ವ್ಯವಸ್ಥೆಯಲ್ಲಿ ಬರುತ್ತವೆ ಎಂಬುದರ ಚರ್ಚೆ; ಆಕೃತಿಮಾ ವಿಶ್ಲೇಷಣೆ (Morphology) ನಾಮಸೂಚಕ, ಕ್ರಿಯಾಸೂಚಕ ಮತ್ತು ಇತರ ಪ್ರಕ್ರಿಯೆಯನ್ನು ಸೂಚಿಸುವ ಪದಗಳು ಹೇಗೆ ವ್ಯವಸ್ಥೆಗೊಂಡಿವೆ ಎಂಬುದರ ಚರ್ಚೆ; ವಾಕ್ಯ ವಿಶ್ಲೇಷಣೆ (Syntax) ಆ ಭಾಷೆಯಲ್ಲಿಯ ವಾಕ್ಯರಚನೆಯ ಲಕ್ಷಣಗಳ ಚರ್ಚೆ, ಅರ್ಥ ವಿಶ್ಲೇಷಣೆ (Semantics) ಭಾಷಾ ಪ್ರಯೋಗಕ್ಕೂ ಅವುಗಳ ಅರ್ಥಕ್ಕೂ ಇರುವ ಸಂಬಂಧದ ಚರ್ಚೆ ಎಂಬ ಪ್ರಮುಖ ವಿಭಾಗಗಳಿರುತ್ತವೆ.

ಹೀಗೆ ವಿಶ್ಲೇಷಣೆ ಮಾಡುವ ಪ್ರಕ್ರಿಯೆಯಿಂದ ಪ್ರಾರಂಭವಾದ ಈ ವಿಜ್ಞಾನಕ್ಕೆ ಕೆಲವೊಂದು ಸೀಮಾಬಂಧನಗಳಿದ್ದವು. ಉದಾಹರಣಾರ್ಥವಾಗಿ ವಾಕ್ಯದಲ್ಲಿ ಕರ್ತೃ, ಕರ್ಮ, ಕ್ರಿಯಾಪದಗಳು ಬರುತ್ತವೆ ಎಂಬುದು ವರ್ಣನಾತ್ಮಕ ಭಾಷಾವಿಜ್ಞಾನದ ಒಂದು ನಿಯಮವಾದರೆ ಆ ವಾಕ್ಯದಲ್ಲಿ ಕರ್ತೃವಿನ ಸ್ಥಾನದಲ್ಲಿ ಅಥವಾ ಕರ್ಮದ ಸ್ಥಾನದಲ್ಲಿ ಆ ಭಾಷೆಯಲ್ಲಿರುವ ಎಲ್ಲ ನಾಮಪದಗಳು ಬರುವುದಿಲ್ಲ. ಈ ನಿರ್ಬಂಧದ ರೂಪರೇಷೆಗಳೇನು, ಅವುಗಳನ್ನು ನಿಯಮ ಮಾಡಿ ಲಕ್ಷಣಿಸಲು ಸಾಧ್ಯವೇ ಎಂಬುದನ್ನು ವಿವರವಾಗಿ ಚರ್ಚಿಸಿ ವಾಕ್ಯದಲ್ಲಿ ಪದಗಳಿರುವ ಆಗಮನ ಸಾಮರ್ಥ್ಯವನ್ನು ಲಕ್ಷಣಿಸುವ  ಪ್ರಯತ್ನದಲ್ಲಿ ಪರಿವರ್ತನ – ಉತ್ಪಾದನ ವ್ಯಾಕರಣ (Transformational Generative Grammar,  ಸಂಕ್ಷೇಪದಲಿ TG Grammar ) ಗಣನೀಯ ಕಾಣಿಕೆಯನ್ನು ಸಲ್ಲಿಸಿತು. ಅದೇ ಪ್ರಕಾರ ಇನ್ನೂ ವಿಸ್ತೃತ ವಿಶ್ಲೇಷಣೆಯನ್ನು ಪ್ರಕ್ರಿಯಾ ಸಿದ್ಧಾಂತ (Tagmemic Theory) ಮಾಡಿತು. ಇವು ಭಾಷಾ ಪ್ರಯೋಗದ ತಿಳುವಳಿಕೆಗೆ ವಿಶೇಷ ಕಾಣಿಕೆಯನ್ನು ನೀಡಿದವು. ಇನ್ನೂ ಇತ್ತಿಚೆ, ಪರಿವರ್ತನ – ಉತ್ಪಾದನ ವ್ಯಾಕರಣವನ್ನು ಆಧರಿಸಿ ಹುಟ್ಟಿಬಂದ ಸಾಮಗ್ರಿ – ವ್ಯಾಕರಣ (Corpus Linguistics) ವೂ ಭಾಷೆಯ ಅರ್ಥ ಚಟುವಟಿಕೆಯ ಮೇಲೆ ವಿಶೇಷ ಬೆಳಕು ಬೀರಿತು. ಈ ಸಿದ್ಧಾಂತವನ್ನು ಆಧರಿಸಿ ಬೆಳೆದು ಬಂದ ರೂಪನಿರ್ಮಿತಿ ವ್ಯಾಕರಣ (Cobulid Grammar) ಇಂಗ್ಲೀಷಿಗೆ ಒಳ್ಳೆಯ ನಿಘಂಟನ್ನೂ ಪ್ರಯೋಗ ಪ್ರಮಾಣ ವ್ಯಾಕರಣವನ್ನೂ ಕೊಟ್ಟಿತು.

ಇನ್ನೂ ಇತ್ತೀಚೆ ಶೈಲಿವಿಜ್ಞಾನ (Stylistics) ಮತ್ತು ಜ್ಞಾನಶಾಸ್ತ್ರ (Pragmatics) ಗಳು ಬೆಳೆದು ಬಂದವು. ಇವುಗಳ ಶಾಸ್ತ್ರೀಯ ಹಿನ್ನಲೆಯನ್ನೂ ಅವುಗಳು ಮಾಡುವ ವಿಶ್ಲೇಷಣೆಯ ವಿಧಿ ವಿಧಾನಗಳನ್ನೂ ಈ ಗ್ರಂಥದಲ್ಲಿ ವಿವರವಾಗಿ ನೋಡಲ್ಲಿದ್ದೇವೆ.  ಭಾಷಾವಿಜ್ಞಾನದಲ್ಲಿ ನಡೆದ ಈ ಬೆಳವಣಿಗೆಗಳನ್ನು ಆವಲೋಕಿಸಿದರೆ ಕನ್ನಡದಲ್ಲಿಯೂ ಭಾಷೆಯ ಬಗೆಗಿನ ಮೂಲಭೂತ ತಿಳುವಳಿಕೆಯನ್ನು ರೂಪಿಸುವ ಹೊಸ ಹೊಸ ವಿಶ್ಲೇಷಣಾ ತಂತ್ರಗಳು ಮೂಡಿಬರಬೇಕು ಎಂಬ ದಿಕ್ಸೂಚಿಯನ್ನು ಇವು ತೋರಿಸುತ್ತವೆ. ಈ ದಿಶೆಯಲ್ಲಿ ಕೆಲಸ ನಡೆದರೆ ಕನ್ನಡ ಸಾಹಿತ್ಯದ ಅರ್ಥಯಿಕೆ ಇನ್ನೂ ಸಮೃದ್ಧವಾಗಿ ಬೆಳೆದುಬರಬಲ್ಲುದು. ಈಗ ಕನ್ನಡದಲ್ಲಿ ಸಾಹಿತ್ಯ ವಿಮರ್ಶೆ ವ್ಯಕ್ತಿ ಸಾಪೇಕ್ಷವಾಗಿದೆ. ಅಂದರೆ ಒಬ್ಬ ವ್ಯಕ್ತಿಗೆ ಅಥವಾ ಒಂದು ಗುಂಪಿಗೆ ಹಿಡಿಸಿದ ಸಾಹಿತ್ಯವೇ ಶ್ರೇಷ್ಠ ಎಂಬ ಪ್ರಚಾರ ಮಾದ್ಯಮವನ್ನವಲಂಬಿಸಿದ ಸನ್ನೀವೇಶ ಸೃಷ್ಟಿಯಾಗಿದೆ. ಇದು ತಪ್ಪಬೇಕು. ಸಾಹಿತ್ಯದ ಗುಣ ವ್ಯಕ್ತಿ ನಿರಪೇಕ್ಷವಾಗಿ ನಿರ್ಧಾರಿತವಾಗಬೇಕು. ಅದು ಸಾಧ್ಯವೇ? ಎಂಬ ಪ್ರಶ್ನೆ ಎಲ್ಲ ವಿವೇಕಯುಕ್ತ ಚಿಂತಕರನ್ನು ಬಾಧಿಸುತ್ತಿದೆ. ಈ ಪ್ರಶ್ನೆಗೆ ಶೈಲಿವಿಜ್ಞಾನ ಮತ್ತು ಜ್ಞಾನಶಾಸ್ತ್ರಗಳು ಉತ್ತರ ನೀಡಬಲ್ಲವು. ಆದರೂ ಇಲ್ಲಿ ಒಂದು ಕಟ್ಟುನಿಟ್ಟನ್ನು ಮೊದಲೇ ಹೇಳಬೇಕು. ಇಲ್ಲಿ ಇವೆರಡೂ ಶಾಸ್ತ್ರಗಳ ದೃಷ್ಟಿಯಲ್ಲಿ ಅಭಿವ್ಯಕ್ತಿಯ ಲಕ್ಷಣಗಳನ್ನು ಮಾತ್ರ ಗಮನಿಸಲಾಗುತ್ತದೆಯೇ ಹೊರತು ಆಯಾ ಕೃತಿಗಳು ನಿರೂಪಿಸುವ ವಸ್ತು – ವಿಷಯಗಳ ಸಾಮಾರ್ಥ್ಯವನ್ನಾಗಲಿ ಸೂಕ್ತತೆಯನ್ನಾಗಲಿ ಪರಿಶೀಲಿಸುವುದಿಲ್ಲ. ಈ ದಿಕ್ಕಿನಲ್ಲಿ ಪ್ರಕೃತ ಗ್ರಂಥದಲ್ಲಿ ಶೈಲಿವಿಜ್ಞಾನ (Stylistics) ಮತ್ತು ಜ್ಞಾನಶಾಸ್ತ್ರ (Pragmatics)ಗಳ ಶಾಸ್ತ್ರೀಯ ವಿಸ್ತಾರವನ್ನೂ ಕನ್ನಡ ಸಾಹಿತ್ಯಕ್ಕೆ ಅವುಗಳನ್ನು ಅನುವರ್ತಿಸಿದಾಗ ಉದ್ಭವವಾಗುವ ಹೊಸ ತಿಳುವಳಿಕೆಗಳನ್ನೂ ಇಲ್ಲಿ ವಿವರವಾಗಿ ಚರ್ಚಿಸಲಾಗುತ್ತದೆ.

ಇನ್ನು ಬಹುಮುಖಿ ಭಾಷಾವಿಜ್ಞಾನ (Diachronic)ದ ರೂಪರೇಷೆಗಳನ್ನು ಸಂಕ್ಷೇಪದಲ್ಲಿ ನೋಡೋಣ. ಈ ಕ್ಷೇತ್ರದಲ್ಲಿ ಪ್ರಮುಖ ಕಾಣಿಕೆ ನೀಡಿದ ಶಾಸ್ತ್ರ ಎಂದರೆ ಸಾಮಾಜಿಕ ಭಾಷಾ ವಿಜ್ಞಾನ. ಇಲ್ಲಿ ವಿಶ್ಲೇಷಣೆಗೆ ಒಳಗಾದ ಭಾಷೆಯ ಸಾಮಾಜಿಕ ವಿಜ್ಞಾನ (Sociolinguistics) ಮಾಡಲಾಗುತ್ತದೆ. ಅಂದರೆ ವ್ಯಕ್ತಿ ಸಮಾಜದ ಅವಿಭಾಜ್ಯ ಅಂಗವಾಗಿರುವದರಿಂದ ಅವನು ಎಲ್ಲ ಸಂದರ್ಭಗಳಲ್ಲಿ ಒಂದೇ ಪ್ರಕಾರದ ಭಾಷೆಯನ್ನು ಬಳಸುವುದಿಲ್ಲ. ಹೇಗೆಂದರೆ ಅವನು ಹೆಂಡತಿಯೊಡನೆ, ಮಕ್ಕಳೊಡನೆ, ಸ್ನೇಹಿತರೊಡನೆ, ಅಪರಿಚಿತರರೊಡನೆ ಬಳಸುವ ಭಾಷೆ ಒಂದೇ ಪ್ರಕಾರದ್ದಿರುವದಿಲ್ಲ. ಸಭೆಯಲ್ಲಿ ಭಾಷಣ ಮಾಡುವಾಗಲೂ ಅವನು ಬಳಸುವ ಭಾಷೆ ಭಿನ್ನವಾಗಿರುತ್ತದೆ. ಒಬ್ಬ ವ್ತ್ಯಕ್ತಿ ಬಳಸುವ ಭಾಷೆಗೇ ಇಷ್ಟೊಂದು ವೈವಿಧ್ಯಗಳಿರುವಾಗ ಸಮಾಜದಲ್ಲಿ ಅವುಗಳ ಸಾಮಾನ್ಯೀಕೃತ ಲಕ್ಷಣಗಳು ಯಾವುವು ಎಂಬುದನ್ನು ಸಾಮಾಜಿಕ ಭಾಷಾವಿಜ್ಞಾನ ಅಭ್ಯಸಿಸುತ್ತದೆ.

ಮಾನಸಿಕ ಭಾಷಾವಿಜ್ಞಾನ (Psycholinguistics)ದಲ್ಲಿ ಮನುಷ್ಯ ತನ್ನ ಬಾಲ್ಯದಲ್ಲಿ ಭಾಷೆಯನ್ನು ರೂಢಿಸಿಕೊಳ್ಳುವ ವಿಧಾನವನ್ನು ಚರ್ಚಿಸಲಾಗುತ್ತದೆ ಆ ವಿಧಾನವನ್ನು ನರವಿಜ್ಞಾನ (Neuroscience)ದ ಪರಿಧಿಯಲ್ಲಿ ಇಟ್ಟು ನೋಡಲಾಗುತ್ತದೆ. ಇದರಿಂದ ತಡವಾಗಿ ಬರುವ ಭಾಷೆಯ ಸ್ವರೂಪವನ್ನು ಲಕ್ಷಣಿಸಲಾಗುತ್ತದೆ. ಅಲ್ಲದೇ ಮಾನಸಿಕ ಭಾಷೆಗೂ  ಆಭಿವ್ಯಕ್ತ ಭಾಷೆಗೂ ಇರುವ ಒಂದು – ಒಂದು ಸಂಬಂಧವನ್ನೂ ವಿಶ್ಲೇಷಿಸಲಾಗುತ್ತದೆ. ಮನುಷ್ಯನ ಮನಸ್ಸಿನಲ್ಲಿ ನಡೆಯುವುದನ್ನು ತಿಳಿಯಲು ಭಾಷೆ ಒಂದು ಉತ್ತಮ ಸಾಧನವಾದರೂ ಅನೇಕರು ತಮ್ಮ ಮನಸ್ಸಿನಲ್ಲಿ ಬಂದುದನ್ನು ಸರಿಯಾಗಿ ಹೇಳಿದ್ದೇನೆ ಎಂದು ತಿಳಿಯಲಾರರು. ಮಾನಸಿಕ ಭಾಷೆಗೂ ವ್ಯಕ್ತ ಭಾಷೆಗೂ ಒಂದು – ಒಂದು ಸಂಬಂಧವನ್ನು ಹೇಗೆ ಕಲ್ಪಿಸುವುದು ಎಂದೂ ಮಾನಸಿಕ ಭಾಷಾವಿಜ್ಞಾನ ತಲೆಕೆಡಿಸಿಕೊಳ್ಳುತ್ತದೆ.

ಭಾಷೆಯ ಐತಿಹಾಸಿಕ ಹಿನ್ನೆಲೆಯ ವಿಶ್ಲೇಷಣೆಯನ್ನು ಐತಿಹಾಸಿಕ ಭಾಷಾವಿಜ್ಞಾನ (Historical Linguistics) ಮಾಡುತ್ತದೆ ಅಂದರೆ ಒಂದು ಭಾಷೆ ಕಾಲಕ್ರಮದಲ್ಲಿ ಬೆಳೆದುಬಂದ ರೀತಿಯನ್ನು ಇದು ಚರ್ಚಿಸುತ್ತದೆ. ಒಂದು ಭಾಷೆಯ ಬಗೆಗಿನ ಚರ್ಚೆ ಇಲ್ಲಿ ಬರುವುದರಿಂದ ಒಂದರ್ಥದಲ್ಲಿ ಇದು ಏಕ ಮುಖಿ ವಿಶ್ಲೇಷಣೆಯೆನಿಸಿದರೂ ಕಾಲದ ವಿವಿಧ ಸ್ತರಗಳಲ್ಲಿ ಈ ಕಾರ್ಯ ನಡೆಯುವದರಿಂದ ಇದೂ ಬಹುಮುಖಿ ವಿಶ್ಲೇಷಣೆ ಎಂದೇ ಪರಿಗಣಿತವಾಗಿದೆ.

ಇನ್ನು ಭಾಷಾಂತರ (Translation) ವನ್ನು ನೋಡೋಣ. ಅದು ಮೂಲ ಭಾಷೆಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನಸಿಕ ಹಿನ್ನೆಲೆಯನ್ನು ಗಮನಿಸಿ ಗುರಿಭಾಷೆಯಲ್ಲಿ ಸೂಕ್ತವಾಗಿ ಅವನ್ನು ಅವತರಿಸಲಾಗುತ್ತದೆ. ಭಾಷಾಂತರ ಮೂಲಭೂತವಾಗಿ ಎರಡು ಅಥವಾ ಹೆಚ್ಚು ಭಾಷೆಗಳನ್ನು ಒಳಗೊಳ್ಳುವುದರಿಂದ ಇದು ಕೂಡ ಬಹುಮುಖಿ ಭಾಷಾ ಕ್ರಿಯೆಯಾಗಿದೆ.

ಇವಲ್ಲದೇ ಇನ್ನೂ ಕೆಲವು ಆಯಾಮಗಳು ಬಹುಮುಖ ಭಾಷಾವಿಜ್ಞಾನದಲ್ಲಿ ಇತ್ತೀಚೆ ಬೆಳೆದುಬಂದಿವೆ. ಅವುಗಳನ್ನು ಆನ್ವಿಕ ಭಾಷಾ ವಿಜ್ಞಾನ (Applied Linguistics)ದ ಶಾಖೆಗಳೆಂದು ಗುರುತಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ನಮೂದಿಸಬಹುದು, ಭಾಷಾ ಸ್ವೀಕರಣ (Language Acquisition), ಭಾಷೆಯ ಮಾನವೇತಿಹಾಸ (Linguisitic Anthropology), ಗಣಕ ಭಾಷಾವಿಜ್ಞಾನ (Computational Linguistics), ತುಲನಾತ್ಮಕ ಭಾಷಾವಿಜ್ಞಾನ (Comparative Linguistics), ವ್ಯುತ್ಪತ್ತಿಶಾಸ್ತ್ರ (Etymology) ಮೊದಲಾದವುಗಳನ್ನು ಉಲ್ಲೇಖಿಸಬಹುದು. ಹೀಗೆ ಬಹುಮುಖಿ ಭಾಷಾವಿಜ್ಞಾನ ತನ್ನ ವಿಸ್ತಾರವನ್ನು ಬೆಳೆಸಿದೆ. ಇಲ್ಲಿ ಉಲ್ಲೇಖಿಸಿದ ಒಂದೊಂದು ಕ್ಷೇತ್ರದಲ್ಲಿಯೂ ಅನೇಕ ಗ್ರಂಥಗಳನ್ನು ಬರೆಯುವಷ್ಟು ವಿಪುಲ ಕೆಲಸವಾಗಿದೆ.