ಶೈಲಿ (Style) ಮತ್ತು ಶೈಲಿವಿಜ್ಞಾನ (Stylistics) ದ ಬಗ್ಗೆ ಮೇಲೆ ಸಂಕ್ಷಿಪ್ತವಾದ ಉಲ್ಲೇಖ ಬಂದಿದೆ. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಭಾಷಾಶೈಲಿಯನ್ನು ಕುರಿತು ವಿಶದವಾಗಿ ವಿವೇಚಿಸುವಾಗ ಶೈಲಿ ಅಂದರೇನು ಎಂಬುದನ್ನು ವಿವರವಾಗಿ ನೋಡಬೇಕಾಗುತ್ತದೆ.

ಜೆ. ಮಿಡ್ಲ್‌ಟನ್‌ ಮರೆಯ ಪ್ರಕಾರ,
Style is a quality of language which communicates precisely emotions or thoughts, or a system of emotions or thoughts, peculiar to the author.

ಶೈಲಿ ಅಂದರೆ ಲೇಖಕನ ಭಾವನೆಗಳನ್ನೂ ವಿಚಾರಗಳನ್ನೂ ಯಥಾವತ್ತಾಗಿ ಓದುಗನಿಗೆ ಸಂವಹಿಸುವ ಭಾಷೆಯ ಗುಣಧರ್ಮ ಅಥವಾ ಲೇಖನ ವಿಶಿಷ್ಟವಾದ ಭಾವ ಮತ್ತು ವಿಚಾರಗಳ ಸಂವಹನ ಮಾಧ್ಯಮದ ವ್ಯವಸ್ಥೆ.

ಮುಂದೆ ಅವನೇ ಹೇಳುವ ಪ್ರಕಾರ,
…a true idiosyncrasy of style is the result of an author’s success, in compelling language to conform to his mode of exiperience.

ಅನುಭವ ಅಥವಾ ವಿಚಾರಗಳನ್ನು ವ್ಯಕ್ತಿವಿಶಿಷ್ಟವಾದ ಭಾಷೆಯಲ್ಲಿ ನಿರೂಪಿಸುವುದು ಶೈಲಿ ಅದರಲ್ಲಿ ಲೇಖಕ ಪಡೆಯುವ ಯಶಸ್ಸಿನಿಂದ ಅವನ ಶೈಲಿಯ ಪರಿಣಾಮ ನಿರ್ಧಾರವಾಗುತ್ತದೆ.

ನೀಲ್ಸ್‌ ಎರಿಕ್‌ ಎನ್‌ಕ್ವಿಸ್ಟ್‌ನ ಪ್ರಕಾರ Style ಎಂಬುದು
Style is a contextually restricted linguistic variation.
ಶೈಲಿ ಎಂಬುದು ಭಾಷೆಯಲ್ಲಿ ವಿವರಿಸಲ್ಪಡುವ ವಿಶಿಷ್ಟ ಸನ್ನಿವೇಶದಿಂದ ನಿರ್ಧಾರವಾಗುವ ಅಂಶ.

ಆದರೆ ಭಾಷಾವಿಜ್ಞಾನಿ ಲಿಯೋನಾರ್ಡ್‌ ಬ್ಲೂಂಫೀಲ್ಡನ ಪ್ರಕಾರ Style ಎಂಬುದು
Style is a selection of non-distinctive features of language.

ಅಂದರೆ ಸಾಧಾರಣೀಕೃತ (distinctive) ಶೈಲಿ ಎಲ್ಲರಿಂದಲೂ ಬಳಕೆಯಾಗುತ್ತದೆ. ಆದುದರಿಂದ ವಿಶಿಷ್ಟ ಲೇಖಕನಿಗೆ ವಿಶಿಷ್ಟವಾದ (non-distinctive) ಶೈಲಿಯನ್ನು ಗುರುತಿಸಬೇಕಾದರೆ ಅದು ಅಸಾಧಾರಣೀಕೃತವಾಗಿರಬೇಕೆಂಬುದು ಬ್ಲೂಂಫೀಲ್ಡನ ವಿಚಾರ.

ಬೆನೆಡಿಟ್ಟೋ ಕ್ರೋಚೆ ಅವರ ವಿಚಾರ ನೋಡಿ,
Style is simply synonymous with form or expression and hence a superfluous term.

ಶೈಲಿಯೆಂಬುದು ಬರವಣಿಗೆಯ ಒಂದು ಪ್ರಕಾರವಾಗಿರುವದರಿಂದ ಶೈಲಿ ಎಂಬ ಪದವೇ ಅನಗತ್ಯವೆನಿಸುತ್ತದೆ.

ಒಂದು ರೀತಿಯಲ್ಲಿ ಕ್ರೋಚೆ ಅವರ ವಿಚಾರ ಸರಿಯೆನಿಸುತ್ತದೆ. ಬರವಣಿಗೆಯ ಅಭಿವ್ಯಕ್ತಿ ಮತ್ತು ರೀತಿಗಳು ಬೇಕಾದ ವಿಷಯವನ್ನು ಹೇಳುತ್ತಿರುವದರಿಂದ ‘ಶೈಲಿ’ ಎಂಬ ಹೊಸ ಪದವೇಕೆ ಬೇಕು? ಪರಂಪರೆಯ ಪರವಾದಿಗಳೆಲ್ಲರೂ ಹೀಗೆಯೇ ಹೇಳುತ್ತಾರೆ. ಅವರ ದೃಷ್ಟಿಯಲ್ಲಿ ಹೊಸದು ಎಂಬುದು ನಿರ್ವಿವಾದವಾಗಿ ಸ್ಥಾಪಿತವಾಗಬೇಕು.

ಆದರೆ ರೋಲ್ಯಾಂಡ್‌ ಬಾರ್ಥೆ ಹೊಸ ದಿಶೆಯಲ್ಲಿ ಶೈಲಿಯನ್ನು ಅರ್ಥೈಸುತ್ತಾರೆ ನೋಡಿ,
Style is essentially a citational process, a body of formula, a memory (almost in the cybernetic sense of the word), a cultural and not an expresive inheritance.

ಬಾರ್ಥೆ ಅವರ ಮಾತುಗಳು ಕನ್ನಡ ಸಾಹಿತ್ಯದ ಶೈಲಿ ವಿಶ್ಲೇಷಣೆಯ ಸಂದರ್ಭದಲ್ಲಿ ತುಂಬಾ ಪ್ರಸ್ತುತವಾಗಿವೆ. ಅಂದರೆ ಪ್ರಮುಖವಾಗಿ ಹೊಸ ಸಾಹಿತ್ಯ ಸಂಸ್ಕೃತಿಯ ಪ್ರಸ್ಥಾಪನೆಯ ಕಡೆಗೆ ಹೊಸಗನ್ನಡ ಸಾಹಿತಿಗಳ ದೃಷ್ಟಿಯಿತ್ತು. ಭಾಷೆಯ ದೃಷ್ಟಿಯಿಂದ ಹೊಸ ಶೈಲಿಯನ್ನು ಬಿಡುಗಡೆ ಮಾಡಬೇಕೆಂಬ ಹಂಬಲ ಮಾತ್ರ ಇರಲಿಲ್ಲ ಎಂಬ ಮಾತು ಮೇಲ್ನೋಟಕ್ಕೆ ಸತ್ಯವಾಗಿ ಕಾಣುತ್ತದೆ. ಆದರೆ ಹೊಸ ಸಂಸ್ಕೃತಿಯ ಪ್ರಸ್ಥಾಪನೆಯ ಯತ್ನದಲ್ಲಿ ಯಾವ ಪ್ರಕಾರದ ಭಾಷಾ ಮಾಧ್ಯಮವನ್ನು ಬಳಸಿದ್ದಾರೆ, ಅದರ ಲಕ್ಷಣಗಳೇನು, ಅದು ಆ ಪೂರ್ವದಲ್ಲಿ ಇದ್ದ ಅಭಿವ್ಯಕ್ತಿ ಪ್ರಕಾರಗಳಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಗಮನಿಸಿದರೆ ಸಾಹಿತಿಗಳು ರಚಿಸಿದ ಸಾಹಿತ್ಯದಲ್ಲಿ ಹೊಸ ಪದಗಳ ರಚನೆ, ಹೊಸ ವಾಕ್ಯ ರಚನಾ ವ್ಯವಸ್ಥೆ, ಕನ್ನಡದ ವಿವಿಧ ಆಡು ಭಾಷಾ ಪ್ರಕಾರಗಳನ್ನು ಪರಿಣಾಮಕಾರಿಯಾಗಿ ಬಳಸಿದುದರ ಪರಿಣಾಮವಾಗಿ ಅವರು ಹೇಳಬೇಕೆಂದಿರುವ ವಿಷಯವನ್ನು ಓದುಗರಲ್ಲಿ ನೆಲೆಯೂರಿಸಲು ಸಾಧ್ಯವಾಯಿತು ಎಂಬುದನ್ನು ಅಲ್ಲಗಳೆಯಲಾಗದು. ಆದುದರಿಂದ ಕನ್ನಡ ಸಾಹಿತ್ಯದ ಅಭಿವ್ಯಕ್ತಿಯನ್ನೇ ಆಕರವಾಗಿಟ್ಟುಕೊಂಡು ಮಾಡುವ ಅಧ್ಯಯನವೇ ಕನ್ನಡದ ಭಾಷಾಶೈಲಿ ಅಧ್ಯಯನವೆನಿಸಿಕೊಳ್ಳುತ್ತದೆ.

ಈ ನಿಟ್ಟಿನಲ್ಲಿ ಐ. ಆರ್. ಗಾಲ್ಪರಿನ್‌ ಸಾರಾಂಶದಲ್ಲಿ ಮಾಡಿದ Stylistics ನ ಕೆಳಗಿನ ವ್ಯಾಖ್ಯೆಯನ್ನು ಗಮನಿಸಬೇಕು:
Stylistics is regarded as a language science which deals with the results of the act of communication.

ಅಂದರೆ ಭಾಷೆಯ ಮುಖಾಂತರ ಭಾವ ಸಂವಹನದ ಪ್ರಕ್ರಿಯೆಯಲ್ಲಿ ಬಳಸಲಾದ ವ್ಯಕ್ತಿವಿಶಿಷ್ಟ ಭಾಷೆಯ ಅಧ್ಯಯನವೇ ಶೈಲಿವಿಜ್ಞಾನ.

ಈ ವ್ಯಾಖ್ಯೆಯನ್ನು ಅನುಮೋದಿಸುವಂತೆ ಆರ್ಕಿಬಾಲ್ಡ್‌ ಹಿಲ್‌ ಮೊದಲಾದ ಪ್ರಸಿದ್ಧ ಭಾಷಾವಿಜ್ಞಾನಿ ಮತ್ತು ಸಾಹಿತ್ಯ ವಿಮರ್ಶಕರು ಕೊಟ್ಟ ವಿವರಣೆಗಳು ತುಂಬಾ ತೃಪ್ತಿಕರವಾಗಿವೆ. ನೋಡಿ,

A current definition of style and stylistics is that structures, sequences and patterns which extend or may extend beyond the boundaries of individual sentences, define style and that the study of them is stylistics.

ಬರಿ ಪದಗಳ ವಿಶಿಷ್ಟ ಸಾಹಚರ್ಯವಲ್ಲದೇ ವಾಕ್ಯ ರಚನಾ ವೈವಿಧ್ಯವ್ಯೂ ಸೇರಿದಂತೆ ವಾಕ್ಯದಾಚೆಯ ಹೇಳುವಿಕೆಗಳ ಆಧ್ಯಯನವೂ ಶೈಲಿವಿಜ್ಞಾನದಲ್ಲಿ ಸಮಾವೇಶಗೊಳ್ಳುತ್ತವೆ.

ಶೈಲಿವಿಜ್ಞಾನವನ್ನು ಕುರಿತು ಮೇಲೆ ಸಂಗ್ರಹಿಸಿದ ಎಲ್ಲ ವ್ಯಾಖ್ಯೆಗಳು ಮತ್ತು ವಿವರಣೆಗಳು ಹೆಚ್ಚಾಗಿ ಅಭಿವ್ಯಕ್ತಿವಿಧಾನವನ್ನು ಮಾತ್ರ (Form ಅಥವಾ Expression) ಲಕ್ಷಿಸಿ ಮಾಡಿದಂಥವುಗಳಾಗಿವೆ ಎಂಬ ಟೀಕೆಯಿದೆ. ಅಂದರೆ ಭಾಷೆಯಲ್ಲಿ ವ್ಯಕ್ತವಾದ ತಿರುಳನ್ನು (Content) ಗಮನಿಸದೇ ಆಭಿವ್ಯಕ್ತಿ ತಂತ್ರವನ್ನು ಮಾತ್ರ ಗಮನಿಸಿದಂತೆ ಅಗಿದೆ. ಯಾವುದೇ ಒಂದು ಸಾಹಿತ್ಯಕ್ಕೆ ಎರಡು ಮುಖಗಳಿರುತ್ತವೆ: ಒಂದು ಆಭಿವ್ಯಕ್ತಿಯ ಬಹಿರ್ಮುಖ. ಇನ್ನೊಂದು ಅದರ ತಿರುಳನ್ನು ಗಮನಿಸಿವ ಅಂತರ್ಮುಖ. ಇವನ್ನು ಇಂಗ್ಲೀಷಿನಲ್ಲಿ Form ಅಥವಾ Expression ಮತ್ತು Content ಎಂದು ಗುರುತಿಸಲಾಗಿದೆ. ಯಾವುದೇ ಒಂದು ಸಾಹಿತ್ಯ ಪ್ರಕಾರದ ಶೈಲಿಯನ್ನು ಕುರಿತು ವಿವೇಚಿಸುವಾಗ  ಎರಡನ್ನೂ ಗಮನಿಸಬೇಕಾದುದು ಆಗತ್ಯ. ಅದರ ಬದಲು ಯಾವುದೇ ಒಂದನ್ನು ಗಮನಿಸಿದರೆ ಶೈಲಿಯ ಎಲ್ಲ ಆಯಾಮಗಳನ್ನು ಗಮನಿಸಿದಂತೆ ಆಗುವುದಿಲ್ಲ.

ಈ ದಿಶೆಯಲ್ಲಿ ಸಿ. ಕೆ. ಆಗ್ಡನ್ ಮತ್ತು ಐ. ಎ. ರಿಚಾರ್ಡ್ಸ್ ಅವರು ಈ ಪ್ರಕ್ರಿಯೆಯನ್ನು ಇನ್ನೊಂದು ದಿಕ್ಕಿನಿಂದ ವಿವರಿಸುತ್ತಾರೆ. ಕೆಳಗಿನ ಚಿತ್ರ ನೋಡಿ:

[ಚಿತ್ರ ೦೧]

ಅವರ Meanaing of Meaning (೧೯೨೩)  ಎಂಬ ಗ್ರಂಥದಲ್ಲಿ ವಿವರಿಸಿದ ಪ್ರಕಾರ ಭಾಷೆಯಲ್ಲಿ ಬಳಸಿದ ಶಬ್ಧರೂಪಿ ಸಂಕೇತಗಳಿಗೂ (symbol) ಮತ್ತು ಅವು ಏನನ್ನು ಹೇಳಬೇಕೆಂದಿದೆಯೋ ಆ ನಿರ್ದೇಶಿತಗಳಿಗೂ (referent) ನೇರ  ಸಂಬಂಧವಿರುವುದಿಲ್ಲ. ಅವುಗಳ ನಡುವೆ ಆರೋಪಿತ ಸಂಬಂಧ (imputed relation) viruttade, ಅಷ್ಟೇ. ಅದರೆ ಸಂಕೇತಗಳಿಗೂ ಅವುಗಳು ನಿರ್ದೇಶಿಸುವ ವಿಚಾರ ಅಥವಾ ನಿರ್ದೇಶಗಳಿಗೂ ಆಕಸ್ಮಾತ್ ಸಂಬಂಧ (casual relation) ಏರ್ಪಟ್ಟಿರುತ್ತದೆ. ಆಕಸ್ಮಾತ್ ಏಕೆಂದರೆ ಆಯಾ ಸಂಕೇತಗಳಿಗೂ ಅವುಗಳು ನಿರ್ದೇಶಿಸಬೇಕೆಂದಿರುವ ವಿಚಾರಕ್ಕೂ ಹೇಗೋ ಪರಂಪರೆಯಿಂದ ಬಂದ ರೂಢಿಗತವಾದ  ಸಂಬಂಧ ಏರ್ಪಟ್ಟಿರುತ್ತದೆ. ಅದು ಹೇಗೆ ಮತ್ತು ಯಾಕೆ ಏರ್ಪಟ್ಟಿತು ಎಂಬ ಕಾರಣವನ್ನು ವಿವರಿಸುವುದು ಸಾಧ್ಯವಾಗುವುದಿಲ್ಲ. ಆದರೆ ವಿಚಾರಕ್ಕೂ ನಿರ್ದೇಶಿತಕ್ಕೂ ಸಂಬಂಧ ಆಕಸ್ಮಾತ್ ಅಲ್ಲ. ಅಂದರೆ ಒಂದರ್ಥದಲ್ಲಿ ಅದು ಇತರ ಆಕಸ್ಮಾತ್ ಸಂಬಂಧ (other casual relation). ಏನಿದ್ದರೂ ವಿಚಾರವನ್ನು ಮೂರ್ತಗೊಳೊಸುವದೇ ನಿರ್ದೇಶಿತ. ಅದು ಭಾಷೆಯಲ್ಲಿಯ ಸಂಕೇತಗಳ ಸಹಾಯ ಪಡೆದು ಆವಿಷ್ಕಾರಗೊಳ್ಳುತ್ತದೆ.  ಈ ಸಂಬಂಧಗಳನ್ನು ಆಗ್ಡನ್ ಮತ್ತು ರಿಚಾರ್ಡ್ಸ್ ಅವರು ತಮ್ಮ Meaninng of Menaninag ಎಂಬ ಪುಸ್ತಕದಲ್ಲಿ ತ್ರಿಕೋನದ ಸಹಾಯದಿಂದ ವಿವರಿಸಿದ್ದಾರೆ. ಆ ನಕ್ಷೆಯನ್ನು ಕನ್ನಡೀಕರಿಸಿ ಮೇಲೆ ಕೊಡಲಾಗಿದೆ:

ಈ ಮಾತುಗಳು ಕನ್ನಡ ಸಾಹಿತ್ಯದ ಶೈಲಿಯನ್ನು ಕುರಿತು ಹೇಳುವಾಗ ಅತ್ಯಂತ ಮಹತ್ತ್ವದ್ದಾಗುತ್ತವೆ. ಏಕೆಂದರೆ ಪ್ರತಿಯೊಬ್ಬ ಸಾಹಿತಿ ತನ್ನ ಅನುಭವದ ಸಾಮಗ್ರಿಯಲ್ಲಿ ಹಾಸುಹೊಕ್ಕಾಗಿರುವ ತನ್ನ ಅನುಭವ ಮತ್ತು ತನ್ನ ಮೇಲೆ ಪರಿಣಾಮ ಮಾಡಿದ ಸಾಹಿತ್ಯ ಗುರುವಿನಿಂದ ಪಡೆದ ಅನುಭವ ಎರಡನ್ನೂ ಸಮನ್ವಯಿಸಿ ತನ್ನ ಮನೋ ಲೋಕದಲ್ಲಿ ಪರಿಪೂರ್ಣ ಕಲ್ಪನೆಯನ್ನು ರೂಪಿಸಿಕೊಂಡು ಆ ಕಲ್ಪನೆ ಅದೇ ನಿರ್ದೇಶಿತವನ್ನು ನಿರೂಪಿಸುವಂತೆ ಸೂಕ್ತವಾದ ಭಾಷಾ ಮಾಧ್ಯಮದ ಆಭಿವ್ಯಕ್ತಿಯಲ್ಲಿ ವಿನೂತನವಾಗಿ ನಿರೂಪಿಸುವದು ಕಷ್ಟದ ಕೆಲಸವಾದರೂ ಅದನ್ನು ಸಾಹಿತಿಗಳು ಯಶಸ್ವಿಯಾಗಿ ಹೇಗೆ ಮಾಡಿದ್ದಾರೆ ಮತ್ತು ಪ್ರತಿಯೊಬ್ಬ ಸಾಹಿತಿಯೂ ಹೊಸ ಹೊಸ ಮಾತುಗಳಲ್ಲಿ ತನ್ನ ಅನುಭವವನ್ನು ಹೇಗೆ ಹೇಳುತ್ತಾನೆ ಎಂಬುದನ್ನು ನೋಡುವದು ಇಲ್ಲಿ ಮುಖ್ಯ. ಅಂದರೆ ನಮಗೆ ಲಭ್ಯವಿರುವ ಸಾಹಿತ್ಯದ Form ಮತ್ತು Content ಎರಡರಲ್ಲೂ ವಿಶಿಷ್ಟತೆ ಹೇಗೆ ಕಾಣುತ್ತದೆ ಎಂಬುದನ್ನು ನೋಡುವದು ಮುಖ್ಯ.

Form ಮತ್ತು Content ಎಂಬವೆರಡೂ ವಿಭಜಿಸಲಾಗದ ಅಂಶಗಳು ಎಂಬ ಮಾತೂ ಸಾಹಿತ್ಯವಿಮರ್ಶೆಯಲ್ಲಿ ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಹಾಸ್ಯ ಚಟಾಕಿಯೊಂದು ಪ್ರಚಲಿತವಿದೆ. ಒಬ್ಬ ಕವಿ ಇನ್ನೊಬ್ಬ ಕವಿಗೆ, ‘ನಿನ್ನ ಹೊಸ ಪದ್ಯವನ್ನು ಓದಿ ತೋರಿಸು’. ಎಂದು ಕೇಳಿದನಂತೆ. ಅದಕ್ಕೆ ಆ ಇನ್ನೊಬ್ಬ ಕವಿ ‘ನಾನೀಗ ಪದ್ಯವನ್ನು ಮಾತ್ರ ಬರೆದಿದ್ದೇನೆ; ಅರ್ಥವನ್ನಿನ್ನೂ ಬರೆದಿಲ್ಲ’. ಎಂದು ಹೇಳಿದನಂತೆ. ಈ ಮಾತು ತೀರಾ ಅಸತ್ಯವೇನಲ್ಲ. ಆ ಇನ್ನೊಬ್ಬ ಕವಿಯ ಕಲ್ಪನೆಯಲ್ಲಿ ಅಭಿವ್ಯಕ್ತಿ ಮತ್ತು ತಿರುಳು ಎರಡೂ ವಿಭಜಿಸಬಹುದಾದ ಅಂಶಗಳು ಎಂದಾಯಿತು. ಕೆಲವು ಕವಿಗಳು ಒಂದು ಪದ್ಯದಲ್ಲಿ ಕೆಲವು ಪದಗಳನ್ನು ಬದಲಿಸಿ ಅರ್ಥಕ್ಕೆ ಹೆಚ್ಚು ಪುಷ್ಟಿ ಬರುವಂತೆ ಮಾಡುವ ರೀತಿಯನ್ನು ನಾವು ನೋಡುತ್ತೇವೆ. ‘ಪದವಿಟ್ಟು ಅಳುಪದೊಂದಗ್ಗಳಿಕೆ’ ಎಂಬ ಮಾತು ಕುಮಾರವ್ಯಾಸನಂಥ ಕವಿಗೇ ಸಾಧ್ಯವಾಗಬಹುದೇ ಹೊರತು ಸಾಮಾನ್ಯ ಕವಿಗಲ್ಲ. ಈ ಸಂದರ್ಭದಲ್ಲಿ ಎಸ್‌. ವಿ. ರಂಗಣ್ಣ ಅವರು ಧಾರವಾಡದ ಒಂದು ಸಭೆಯಲ್ಲಿ ಹೇಳಿದ ಮಾತು ನೆನಪಾಗುತ್ತದೆ. “ಪದವಿಟ್ಟು ಅಳುಪದೆ” ಬರೆದುದೇನೂ ದೊಡ್ಡ ಹೆಗ್ಗಳಿಕೆಯಲ್ಲ. ಅನೇಕ ಸಲ ಅಳುಪಿ ಬರೆದಿದ್ದರೆ ಕುಮಾರವ್ಯಾಸನ ಭಾರತ ಇನ್ನೂ ಶ್ರೇಷ್ಠ ಕೃತಿಯಾಗಬಹುದಿತ್ತು!

ಇದು ಕಾವ್ಯಗಳ ಕಥೆಯಾಯಿತು. ಇದೇ ಮಾತನ್ನು ಇತರ ಸಾಹಿತ್ಯ ಪ್ರಕಾರಗಳಿಗೂ ಹೇಳಬಹುದು. ಆದರೆ ವಚನಸಾಹಿತ್ಯದ ಬಗೆಗೆ ಈ ಮಾತನ್ನು ಹೇಳುವದು ಕಷ್ಟ. ಏಕೆಂದರೆ ವಚನಕಾರರು ವಚನಗಳನ್ನು ಬೇರೆ ಕವಿಗಳು ಕಾವ್ಯ ಬರೆದ ಹಾಗೆ ಕುಳಿತು ಬರೆದಿಲ್ಲ ಎಂಬ ಬಲವಾದ ನಂಬುಗೆ ಇದೆ. ಆಯಾ ಸಂದರ್ಭದಲ್ಲಿ ಆಯಾ ವಚನಕಾರರು ಆಡಿದ ಮಾತುಗಳನ್ನು ಕೇಳಿದವರು ಸಂಗ್ರಹಿಸಿಕೊಂಡಿದ್ದಾರೆ ಎಂಬ ನಂಬುಗೆ ಬಲವಾಗಿದೆ. ಅಲ್ಲದೇ ಅನುಭವ ಮಂಟಪದಲ್ಲಿ ಸೇರಿದ್ದ ಅನುಭಾವಿಗಳು ತಮ್ಮ ತಮ್ಮ ಆಧ್ಯಾತ್ಮಿಕ ಅನುಭವದ ಕಥನ ಮಾಡುತ್ತಿದ್ದರು. ಅದನ್ನು ಲಿಪಿಗಿಳಿಸಿಕೊಳ್ಳಲು ಕೋಲಶಾಂತಯ್ಯ ಮೊದಲಾದ ಲಿಪಿಕಾರರು ಉದ್ಯುಕ್ತರಾಗಿರುತ್ತಿದ್ದರು ಎಂಬ ಹೇಳಿಕೆಯೂ ಇದೆ. ಹೀಗಿರುವಾಗ ಆಡಿದ ಮಾತನ್ನು ಲಿಪಿಗಿಳಿಸುವ ಪ್ರಕ್ರಿಯೆಯಲ್ಲಿ ಆದ ಬದಲಾವಣೆಗಳ ಬಗೆಗೆ ನಮಗೆ ಸಾಮಾಗ್ರಿ ಸಿಗುತ್ತಿಲ್ಲ. ಈ ರೀತಿ ಲಿಪಿಗಿಳಿಸುವ ಕ್ರಮ ಅನುಭವ ಮಂಟಪದಲ್ಲಿ ಮಾತ್ರ ಇತ್ತೆಂಬ ಮಾತು ಇರುವುದರಿಂದ ಉಳಿದೆಡೆ ವಚನಗಳನ್ನು ಯಾರು ಬರೆಯುತ್ತಿದ್ದರು ಎಂಬ ಬಗ್ಗೆ ದಾಖಲೆಯಿಲ್ಲ. ಸಂಪಾದನೆಯ ಚೆನ್ನಂಜೆದೇವ, ಎಳಮಲೆಯ ಗುರುಶಾಂತದೇವ ಮೊದಲಾದವರು ವಚನಗಳ ಮಹತ್ವದ ಸಂಪಾದಕರಾಗಿದ್ದಾರೆ. ಅವರು ವಚನಕಾರರ ಸಮಕಾಲೀನರಾಗಿರದೇ ಅವರ ನಂತರದ ಕಾಲದಲ್ಲಿ ಬಂದವರು. ಅಂದರೆ ಅವರಿಗೆ ಪುರಾತನ ವಚನಗಳ ಲಿಖಿತ ಆವೃತ್ತಿಗಳು ಲಭ್ಯವಾಗಿರಬೇಕು. ಆಧ್ಯಯನ ವಚನಗಳಲ್ಲಿ ಅನೇಕ ಸಂಸ್ಕೃತ ಶ್ಲೋಕಗಳ ಉದ್ಧರಣೆಗಳು ಬರುತವೆ. ಅವನ್ನೆಲ್ಲ ಅವನೇ ರಚಿಸಿದ ಕೃತಿಯಲ್ಲಿ ಅವನೇ ಸೇರಿಸಿರಬಹುದೆಂದು ನಂಬಲು ಸಾಧ್ಯವಿದೆ. ಏಕೆಂದರೆ ನಂತರದ ಸಂಪಾದಕರಿಗೆ ಯಾವ ಶ್ಲೋಕವನ್ನು ಎಲ್ಲಿ ಸೇರಿಸಬೇಕೆಂಬ ಬಗ್ಗೆ ತೀರ್ಮಾನಿಸುವುದು ಕಷ್ಟ.

ಈ ಪ್ರಶ್ನೆ ಕನ್ನಡ ಸಾಹಿತ್ಯದ ಇತಿಹಾಸವನ್ನು ಅವಲೋಕಿಸುವಾಗ ಬರುವದಿಲ್ಲ. ಏಕೆಂದರೆ ಆಯಾ ಕವಿಯ ಹೆಸರಿನಲ್ಲಿ ದೊರೆಯುವ ಹಸ್ತಪ್ರತಿಗಳ ಸಂಗ್ರಹವನ್ನು ನೋಡಿದರೆ ಪ್ರತಿಕಾರರು ಮಾಡಿದ ಬದಲಾವಣೆಗಳನ್ನು ಸಂಪಾದಕರು ಗಮನಿಸಿ ಕೊನೆಯ ಆವೃತ್ತಿಯನ್ನು ಸಿದ್ಧಪಡಿಸುತ್ತಾರೆ. ಇನ್ನು ಆಧುನಿಕ ಕನ್ನಡ ಸಾಹಿತ್ಯದ ಬಗ್ಗೆ ಈ ಪ್ರಶ್ನೆ ಬರುವದಿಲ್ಲ. ಹೆಚ್ಚಿನ ಲೇಳಕರು ತಾವೇ ಬರೆದುದು ಇಂದು ಲಭ್ಯವಿದೆ.