ಶೈಲಿಯನ್ನು ಕುರಿತು ವಿಚಾರಿಸುವಾಗ ನಮ್ಮ ಆಲಂಕಾರಿಕರು ಹೇಳಿದ ‘ರೀತಿ’ಯ ವಿವರಣೆ ಇದಕ್ಕೆ ಹತ್ತಿರವಾಗಿದೆ. ಎನಿಸುತ್ತದೆ. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಅಲಂಕಾರ, ರಸ, ಧ್ವನಿ ಮೊದಲಾವುಗಳ ಚರ್ಚೆಯೊಂದಿಗೆ ರೀತಿಯ ಪ್ರಸ್ತಪವೂ ಮಹತ್ತ್ವದ್ದಾಗಿದೆ. ೮ನೆಯ ಶತಮಾನದಲ್ಲಿ ಜೀವಿಸಿದ್ದ ವಾಮನ ತನ್ನ ‘ಕಾವ್ಯಾಲಂಕರ ಸೂತ್ರವೃತ್ತಿ’ ಎಂಬ ಗ್ರಂಥದಲ್ಲಿ ‘ಕಾವ್ಯವು ಅಲಂಕಾರದಿಂದ ಗ್ರಾಹ್ಯವಾದರೆ ಸೌಂದರ್ಯವು ಅಲಂಕಾರವಾಗಿದೆ.’ ಎಂದು ಹೇಳಿ ಅಲಂಕಾರದ ರೂಢವಾದ ಅರ್ಥವನ್ನೇ ಬದಲಿಸಿದ. ಅಲಂಕಾರಗಳಿಂದ ಕೃತ್ರಿಮವಾದ ಸೌಂದರ್ಯವು ವರ್ಧಿಸಿದರೆ ಕಾವ್ಯಗುಣದಿಂದ ಸ್ವಾಭಾವಿಕ ಸೌಂದರ್ಯವು ವರ್ಧಿಸುತ್ತದೆ ಎಂದು ಹೇಳಿದ. ಹೀಗೆ ಕಾವ್ಯಗುಣವು ಓಜಸ್ಸು, ಪ್ರಸಾದ, ಶ್ಲೇಷ, ಸಮತಾ, ಸಮಾಧಿ, ಮಾಧುರ್ಯ, ಸೌಕುಮಾರ್ಯ, ಉದಾರತಾ ಅರ್ಥವ್ಯಕ್ತಿ, ಕಾಂತಿ ಎಂದು ಹತ್ತು ಪ್ರಕಾರಗಳಲ್ಲಿದೆ ಎಂದು ಹೇಳಿದ.

ವಾಮನನ ‘ರೀತಿರಾತ್ಮಾ ಕಾವ್ಯಸ್ಯ’ ಎಂಬ ಉಕ್ತಿಯ ವಿವರಣೆ ವೈದರ್ಭಿ, ಗೌಡೀ, ಪಾಂಚಲೀ ಮೊದಲಾದ ಪ್ರಾದೇಶಿಕ ಶೈಲಿಗಳಿಗೆ ಸೀಮಿತವಾಯಿತು. ಅವನ ಪ್ರಕಾರ ಓಜಸ್ಸು, ಪ್ರಸಾದ ಮೊದಲಾದ ಹತ್ತು ಗುಣಗಳಿರುವದು ವೈದರ್ಭೀ ರೀತಿಯೆಂದೂ ಓಜಸ್ಸು ಮತ್ತು ಕಾಂತಿಯುಳ್ಳದ್ದು ಗೌಡೀ ಎಂದೂ ಮಾಧುರ್ಯ ಮತ್ತು ಸೌಕುಮಾರ್ಯವುಳ್ಳದ್ದು ಪಾಂಚಾಲೀ ಎಂದೂ ಪರಿಗಣಿತವಾಗಿವೆ. ಅಂದರೆ ರೀತಿ ಎಂಬುದು ಕಾವ್ಯ ನಿರೂಪಣೆಯ ಒಂದು ವಿಧಾನವಾಯಿತೇ ಹೊರತು ಕಾವ್ಯದಲ್ಲಿ ಬಳಸಿದ ಭಾಷೆಯ ವೈಶಿಷ್ಟ್ಯ ವನ್ನು, ಲಕ್ಷಣಗಳನ್ನು ಕುರಿತು ಹೇಳಿದಂತೆ ಆಗಲಿಲ್ಲ. ಒಂದೇ ‘ರೀತಿ’ಯಲ್ಲಿ ಭಾಷೆಯ ವಿವಿಧ ರೀತಿಯ ಬಳಕೆಯಿಂದ ವಿವಿಧ ಸಂವೇದನಗಳು ಹುಟ್ಟಬಲ್ಲವು ಎಂಬ ಮಾತನ್ನು ವಾಮನಾದಿ ರೀತಿವಾದಿಗಳು ಗಮನಿಸಲಿಲ್ಲ. ರೀತಿವಾದಿಗಳು ನಿರೂಪಿಸಿದ ಈ  ‘ರೀತಿ’ ಗಳು ಬೇರೆಯವರ ವಿಚಾರ ಮಂಥನದಲ್ಲಿ ಲಾಟಿ, ಆವಂತಿ, ಮಾಗಧಿ ರೀತಿಗಳೆಂದು ವಿಸ್ತಾರಗೊಂಡವು. ಏನೇ ಆದರೂ ‘ರೀತಿ’ ಯ ಮೂಲಭೂತ ಕಲ್ಪನೆ ಬದಲಾಗಲಿಲ್ಲ. ಇದರೊಡನೆ ಸಂಸ್ಕೃತ ಕಾವ್ಯಮೀಮಾಂಸೆಯಲ್ಲಿರುವ ಶಯ್ಯೆ, ಪಾಕಗಳ ಚರ್ಚೆಯನ್ನೂ ಇಲ್ಲಿ ಗಮನಿಸಬಹುದು.

ಕನ್ನಡದಲ್ಲಿ ಶೈಲಿಯನ್ನು ಕುರಿತು ಕೆಲವು ಚಿಂತನೆಗಳು ನಡೆದಿವೆ. ಆ ಚಿಂತನೆಗಳ ಮೂಂಚೂಣಿಯಲಿ ಎಸ್. ವಿ. ರಂಗಣ್ಣ ಅವರ ಹೆಸರು ನೆನಪಾಗುತ್ತದೆ. ಅವರ ‘ಶೈಲಿ’ ಎಂಬ ಹೆಸರಿನ ಎರಡು ಸಂಪುಟಗಳು ಮಹತ್ತ್ವದವು. ಅವರ ‘ಹೊನ್ನಶೂಲ’ ಎಂಬ ಗ್ರಂಥಗಳಲ್ಲಿ ಪಂಪ, ರನ್ನ, ಕುಮಾರವ್ಯಾಸ ಲಕ್ಷೀಶ ಮೊದಲಾದವರ ಶೈಲಿಗಳನ್ನು ವಿವೇಚಿಸಲಾಗಿದೆ. ಅಲ್ಲದೇ ಶೈಲಿಯನ್ನು ಕುರಿತ ಸಾಮಾನ್ಯ ವಿಶ್ಲೇಷಣಾತ್ಮಕ ಬರವಣಿಗೆಯೂ ಇದೆ. ಕಾವ್ಯದಲ್ಲಿ ರಸಸೃಷ್ಟಿಗೆ ಬೇಕಾಗುವ ವಿವಿಧ ವಿಧಾನಗಳನ್ನು ಅಲ್ಲಿ ಚರ್ಚಿಸಲಾಗಿದೆ. ಅಲ್ಲಿಯೂ ಭಾಷೆಯ ವಿವಿಧ ರೀತಿಯ ಬಳಕೆಯ ಆಯಾಮಗಳು ದೊರೆಯಲಾರವು.

ಇಂದು stylistics ಎಂಬ ಶಾಸ್ತ್ರದ ವಿಶಾಲ ಕೊಡೆಯ ಕೆಳಗೆ ಹಲವು ವಿಧದ ಚರ್ಚೆ ನಡೆದಿದೆ. ಇದನ್ನೇ ಕನ್ನಡದಲ್ಲಿ ‘ಶೈಲಿ ವಿಜ್ಞಾನ’ ಎಂದು ಹೇಳಬಹುದು. ಆದರೆ ಕನ್ನಡದಲ್ಲಿ ಶೈಲಿ ವಿಜ್ಞಾನದ ವಿಷಯದಲ್ಲಿ ಹೆಚ್ಚು ಚರ್ಚೆ ನಡೆದಿಲ್ಲ. ವಿ. ಕೃ. ಗೋಕಾಕರು ಸಂಪಾದಿಸುತ್ತಿದ್ದ ‘ಸಮನ್ಯಯ’ ತ್ರೈಮಾಸಿಕ  ಪ್ರತ್ರಿಕೆಯಲ್ಲಿ (೧೯೬೮) ‘ಭಾಷೆ ಮತ್ತು ಅರ್ಥಗಳ ಗುಟ್ಟು ‘ ಎಂಬ ಸುದೀರ್ಘ ಲೇಖನದಲ್ಲಿ ಶೈಲಿವಿಜ್ಞಾನದ ತತ್ತ್ವಗಳನ್ನು ವಿಶ್ಲೇಷಿಸಿದೆ. ಮುಂದೆ ಅದೇ ಬೆಳಕಿನಲ್ಲಿ ಗೋಪಾಲಕೃಷ್ಣ ಅಡಿಗರು ಸಂಪಾದಿಸುತ್ತಿದ್ದ ‘ಸಾಕ್ಷಿ ‘ಯಲ್ಲಿ (೧೯೭೮) ‘ಕುವೆಂಪು ರಾಮಾಯಣ – ಬರಹಗಾರರ ಪ್ರತಿಕ್ರಿಯೆ’ ಎಂಬ ಲೇಖನವನ್ನು ಪ್ರಕಟಿಸಿದೆ. ಇವು ಆಗ ಪಂಡಿತರ ಮೆಚ್ಚಿಗೆಯನ್ನೇನೋ ಪಡೆದವು. ಆದರೆ ಮುಂದೆ ಆ ಜಾಡಿನಲ್ಲಿ ಅಥವಾ ಬೇರೆಯೇ ಆದ ಜಾಡಿನಲ್ಲಿ ವಿಮರ್ಶೆಯನ್ನು ಯಾರೂ ಬರೆಯಲಿಲ್ಲ. ಬರೆದಿದ್ದರೆ ಕನ್ನಡದಲ್ಲಿ ಶೈಲಿ ವಿಜ್ಞಾನ ಅಥವಾ stylistics ತನ್ನ ಸ್ವಾಭಾವಿಕ ಹರವು ಕಂಡುಕೊಳ್ಳಬಹುದಾಗಿತ್ತು.

ಇಂಗ್ಲೀಷ್ ಸಾಹಿತ್ಯದಲ್ಲಿ styleಎಂಬ ಹೆಸರಿನಲ್ಲಿ ಚರ್ಚೆ ಬಹುಕಾಲದಿಂದ ನಡೆಯುತ್ತಿದೆ. ‘Style is the man’  ಎಂಬ ಮಾತಾಗಲೀ ‘Carly has a style’ ಎಂಬ ಮಾತಾಗಲಿ ಇಂದು ಬಳಕೆಯಲ್ಲಿರುವ stylisticsನ ಅರ್ಥದಲ್ಲಿ ಇರಲಿಲ್ಲ. ಇಂದು ಇಂಗ್ಲೀಷ್ ಜಗತ್ತಿನಲ್ಲಿ ಮತ್ತು ಜಪಾನ್,  ರಶಿಯಾಗಳಲ್ಲಿ stylistics ಹಲವು ಆಯಾಮಗಳಲ್ಲಿ ವಿಸ್ತಾರಗೊಂಡಿದೆ. ರಶಿಯಾ ದೇಶದ ಮಾಸ್ಕೋ ಸ್ಟೇಟ್ ಲಿಂಗ್ವಿಸ್ಟಿಕ್ ಯುನಿವರ್ಸಿಟಿಯಲ್ಲಿ ಮತ್ತು ಪರ್ಮ್ ವಿಶ್ವವಿದ್ಯಾಲಯದಲ್ಲಿ stylistics ಎಂಬುದು ಅಭ್ಯಾಸದ ವಿಷಯವಾಗಿದೆ. ಅದೇ ಪ್ರಕಾರ ಜಪಾನಿನ ಕೆಲವು ವಿಶ್ವವಿದ್ಯಾಲಯಗಳಲ್ಲಿಯೂ ಅದು ಅಭ್ಯಾಸದ ವಿಷಯವಾಗಿದೆ. ಭಾರತದಲ್ಲಿ ಮಾತ್ರ ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆದಿಲ್ಲ.

stylistics ಎಂಬ ಪದರಚನೆ ೧೯೩೦ರ ಸುಮಾರಿಗೆ ಆಗಿ ಕೆಲವು ಭಾಷಾತಜ್ಞರ ಮತ್ತು ವಿಮರ್ಶಕರ ಗಮನವನ್ನು ಸೆಳೆಯಿತು. ಆ ಪೂರ್ವದಲ್ಲಿ ಭಾಷಾವಿಜ್ಞಾನ ಗಟ್ಟಿಮುಟ್ಟಾದ ನೆಲೆಯ ಮೇಲೆ ರೂಪಗೊಂಡುದರಿಂದ ‘ಶೈಲಿವಿಜ್ಞಾನ’ ವನ್ನು ಭಾಷಾವಿಜ್ಞಾನದ ಒಂದು ಅಂಗವೆಂದೇ ತಿಳಿಯಾಲಾಗುತ್ತಿತ್ತು. ಆದರೆ ಮುಂದೆ ೧೯೫೮ರಲ್ಲಿ ಅಮೇರಿಕೆಯ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ  ನಡೆದ ವಿಚಾರ ಗೋಷ್ಠಿಯಲ್ಲಿ ಮಂಡಿಸಲಾದ ಲೇಖನಗಳನ್ನು ಥಾಮಸ್ ಸೀಬಿಯೋಕ್ ‘Style in Language’  (೧೯೬೦) ಎಂಬ ಪುಸ್ತಕದಲ್ಲಿ ಸಂಗ್ರಹಿಸಿದ ನಂತರ stylistics ಗೆ ಅಂತಾರಾಷ್ಟ್ರೀಯ ಮಹತ್ತ್ವ ಬಂದಿತು. ಅದರಲ್ಲಿಯ ರೋಮನ್ ಯಾಕೋಬ್ಸನ್ ಅವರ Closing Statements; Linguistics and Poetics ಎಂಬ ಲೇಖನ ಎಲ್ಲರ ಗಮನ ಸೆಳೆದು, ಶೈಲಿವಿಜ್ಞಾನ ಎಂಬ ಸ್ವತ್ರಂತ್ರ ಶಾಸ್ತ್ರದಜನನಕ್ಕೆ ನಾಂದಿ ಹಾಡಿತು. ಅಲ್ಲಿಂದ ಮುಂದೆ  ಶೈಲಿವಿಜ್ಞಾನದಲ್ಲಿ ಗಂಭೀರ ಚಿಂತನೆಗಳು ನಡೆದವು . ಅವರಲ್ಲಿ ವ್ಯಾಲೇಸ್ ಚಾಛೆ, ಡರ್ಬಿಶಾಯರ್, ಎನ್ ಕ್ವಿಸ್ಟ್, ರೋಗರ್ ಫೌಲರ್, ಗಾಲ್ಪರಿನ, ಎಂ ಎ. ಕೆ. ಹ್ಯಾಲಿಡೇ, ಮಿಡ್ಲ್ ಟನ್ ಮರೆ, ಚಾಟ್ಮನ್ ಮೊದಲಾದ ಪ್ರಮುಖ ಲೇಖಕರು ಶೈಲಿವಿಜ್ಞಾನವನ್ನು ಕುರಿತು ಬರೆದ ಲೇಖನ, ಪುಸ್ತಕಗಳೂ ಪಂಡಿತರ ಗಮನ ಸೆಳೆದವು.