ಶೈಲಿವಿಜ್ಞಾನವನ್ನು ಕುರಿತು ಬೇರೆ ಬೇರೆ ಪಂಡಿತರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸೋಣ.

. ವಿಚಾರಕ್ಕೂ ಆಭಿವ್ಯಕ್ತಿಗೂ ಇರುವ ಸಂಬಂಧದ ಭಾಷಾವೈಜ್ಞಾನಿಕ ಅಧ್ಯಯನವೇ ಶೈಲಿವಿಜ್ಞಾನ. ವಿಚಾರಗಳನ್ನು ಹಲವು ವಿಧದ ಶೈಲಿಗಳಲ್ಲಿ ಆಭಿವ್ಯಕ್ತಪಡಿಸಬಹುದ್ದಾದರೂ ಆಯ್ಕೆಯಾದ ಶೈಲಿಯ ಸೂಕ್ತತೆಯನ್ನು ವಿಶ್ಲೇಷಿಸುವ  ಭಾಷಾವೈಜ್ಞಾನಿಕ ವಿವವರಣೆಯೇ ಶೈಲಿವಿಜ್ಞಾನ.

. ವಿಶಿಷ್ಟ ಸನ್ನಿವೇಶದಲ್ಲಿ ರೂಪಕ ಮೊದಲಾದ ಅಲಂಕಾರಗಳನ್ನು ಪ್ರಯೋಗಿಸುವ ಶೈಲಿಯ ಆಧ್ಯಯನವೇ ಶೈಲಿವಿಜ್ಞಾನ. ಸಾಹಿತ್ಯ ಮೀಮಾಂಸೆಯಲ್ಲಿ ಅಲಂಕಾರಗಳ ಬಳಕೆ ಪರಂಪರೆಯಿಂದ ಬಂದ ಪ್ರಕ್ರಿಯೆ. ಆ ಪ್ರಕ್ರಿಯೆ ಕಾಲಕಾಲಕ್ಕೆ ಬದಲಾಗುತ್ತ ಹೊಸ ತಿಳುವಳಿಕೆಗಳನ್ನು ಅಳವಡಿಸಿಕೊಳ್ಳುತ್ತ ಬಂದಿತು. ಅಲಂಕಾರಗಳ ಬಳಕೆ ಭಾಷಾವೈಜ್ಞಾನಿಕವಾಗಿ ಹೇಗೆ ಆಗಿದೆ ಎಂಬ ಆಧ್ಯಯನವೇ ಶೈಲಿವಿಜ್ಞಾನ.

. ಲೇಖಕ ಶಬ್ಧಗಳನ್ನೂ ಭಾಷೆಯ ವ್ಯಾಕರಣವನ್ನೂ ವಾಕ್ಯಗಳ ವಿವಿಧ ರಚನೆಗಳನ್ನು ತನ್ನ ಬರವಣಿಗೆಯಲ್ಲಿ ಹೇಗೆ ಉಪಯೋಗಿಸುತ್ತಾನೆ ಎಂಬುದರ ಆಧ್ಯಯನವೇ ಶೈಲಿವಿಜ್ಞಾನ.

. ಸಾಹಿತ್ಯದಲ್ಲಿ ಪ್ರಜ್ಞಾಪೂರ್ವಕವಾಗಿ ಬಳಸಲಾದ ವಿಶಿಷ್ಟ ಭಾಷಾಪ್ರಯೋಗದ ಆಧ್ಯಯನವೇ ಶೈಲಿವಿಜ್ಞಾನ. ಸಾಹಿತ್ಯದಲ್ಲಿ ಹೇಳಬೇಕೆನಿಸಿದುದನ್ನು  ಹೇಳಲು ಆನೇಕ ದಾರಿಗಳಿವೆ. ವಿಶಿಷ್ಟ ನಿರೂಪಣೆಗಾಗಿ ವಿಶಿಷ್ಟ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಲು ಇರಬಹುದಾದ ಭಾಷಾವೈಜ್ಞಾನಿಕ ಕಾರಣಗಳನ್ನು ಅಭ್ಯಸಿಸುವದೇ ಶೈಲಿವಿಜ್ಞಾನ.

. ಸಾಹಿತ್ಯಿಕ ಭಾಷೆಯ ಅಭಿವ್ಯಕ್ತಿಯನ್ನು ಶೈಲಿಭಾಷಾವಿಜ್ಞಾನಕವಾಗಿ ಅಭ್ಯಸಿಸುವದೇ ಶೈಲಿವಿಜ್ಞಾನ.

ಮೇಲಿನ ವ್ಯಾಖ್ಯೆಗಳನ್ನು ಗಮನಿಸಿದರೆ ವಿಶಿಷ್ಟ ಸನ್ನಿವೇಶದಲ್ಲಿ ವಿಶಿಷ್ಟ ಶಬ್ದಗಳನ್ನು ಮತ್ತು ವಿಶಿಷ್ಟ ವಾಕ್ಯರಚನೆಯನ್ನು ಮಾತ್ರ ಏಕೆ ಆಯ್ದುಕೊಳ್ಳಲಾಗುತ್ತದೆ ಎಂಬುದನ್ನು ಶೈಲಿವಿಜ್ಞಾನ ವಿವರಿಸುತ್ತದೆ ಎಂದರ್ಥವಾಗುತ್ತದೆ. ಒಂದು ಮಾತನ್ನು ಹಲವು ರೀತಿಯಲ್ಲಿ ಹೇಳಬಹುದಾರೂ ವಿಶಿಷ್ಟ ರೀತಿಯಲ್ಲಿ ಏಕೆ ಹೇಳಲಾಗಿದೆ; ಒಂದೇ ಮಾತನ್ನು ಭಿನ್ನ ರೀತಿಯಲ್ಲಿ ಹೇಳಿದಾಗ ಭಿನ್ನ ಭಾವಗಳು ಹೇಗೆ ಉತ್ಪಾದನೆಯಾಗುತ್ತವೆ ಎಂಬುದರ ಕೂಲಂಕಷ ಅಭ್ಯಾಸವೇ ಶೈಲಿವಿಜ್ಞಾನದ ಗುರಿ ಎಂದರ್ಥವಾಗುತ್ತದೆ.

ಈ ಎಲ್ಲ ಪ್ರಕ್ರಿಯೆಗಳು ಭಾಷಾವಿಜ್ಞಾನದ ಸಾಮಾನ್ಯ ಪರಿಧಿಯಲ್ಲಿ ಬರುವುದಿಲ್ಲ. ಆದುದರಿಂದ ಶೈಲಿವಿಜ್ಞಾನವೆಂಬ ವಿಶಿಷ್ಟ ಶಾಸ್ತ್ರದ ಆವಿಷ್ಕಾರವಾಯಿತು. ಹೀಗೆ ಶೈಲಿವಿಜ್ಞಾನ ಭಾಷಾವಿಜ್ಞಾನದ  ಮೂಲತತ್ತ್ವಗಳ ಚೌಕಟ್ಟಿನಲ್ಲಿ ಸಾಹಿತ್ಯ ವಿಮರ್ಶೆ ಮತ್ತು ಅರ್ಥವಿಜ್ಞಾನ (semantics)ಗಳಿಗೆ ಹೊಸ ಆಯಾಮವನ್ನು ತಂದುಕೊಟ್ಟಿತು. ಅಭಿಪ್ರಾಯವನ್ನು ತಿಳಿಪಡಿಸುವ ಮೊದಲ ಕಾರ್ಯವನ್ನಷ್ಟೇ ಅಲ್ಲದೇ ಭಾಷೆ ಭಾವವನ್ನು ಹೊತ್ತೊಯ್ಯುವ ಕಾರ್ಯವನ್ನೂ ಮಾಡುತ್ತದೆ. ಈ ಭಾವಸಂಹವನ ಕಾರ್ಯಕ್ಕೆ ಭಾಷೆ ನಡೆದುಬಂದ ಇತಿಹಾಸ, ಸಂಸ್ಕೃತಿಯ ಹಿನ್ನಲೆ, ಬಹುಜನರ ಬಳಕೆ, ರೂಢಿಯಿಂದ ಬಂದ ಅರ್ಥವ್ಯಾಪ್ತಿ ಮೊದಲಾದವು ಸಹಾಕಾರಿಯಾಗಿರುತ್ತವೆ. ಸ್ಪಷ್ಟತೆಗಾಗಿ ಒಂದು ಚಿಕ್ಕ ಉದಾಹರಣೆಯನ್ನು ಕೊಡಬಹುದು.

ಸಾಯು, ಮರಣಹೊಂದು, ತೀರಿಕೊಳ್ಳು, ನಿಧನಹೊಂದು ಮೊದಲಾದ ವಾಚ್ಯಾರ್ಥದ ಶಬ್ದಗಳಲ್ಲದೇ ಬೈಗುಳವಾಗಿ ಬಳಕೆಯಾಗುವ ಇನ್ನೂ ಅನೇಕ ಶಬ್ದಗಳಿವೆ. ‘ಮಠದ ಸ್ವಾಮಿಗಳು ನಿಧನರಾದರು’ ಎನ್ನಬಹುದು. ಇಲ್ಲಿ ಅವರು ‘ಸತ್ತರು’ ಎಂದರೆ ‘ಜನರಿಗೆ ಬೇಡವಾಗಿದ್ದರು’ ಎಂಬರ್ಥ ಧ್ವನಿತವಾಗುತ್ತದೆ. ‘ಅಪಘಾತದಲ್ಲಿ ೯ ಮಕ್ಕಳು ಸತ್ತರು’. ಎಂದಾಗ ‘ಅಯ್ಯೋ ಪಾಪ!’ ಅನಿಸುತ್ತದೆ. ಅದರ ಬದಲು ‘ಮರಣ ಹೊಂದಿದರು’ ಎಂದರೆ ‘ಯಾರದೋ ತಪ್ಪಿಗೆ ಯಾರೋ ಬಲಿಯಾದರು’ ಎಂಬರ್ಥ ಬರುತ್ತದೆ. ‘ತೀರಿಕೊಂಡರು’ ಎಂದರೆ ‘ಅವರ ಕಾಲ ತುಂಬಿ ಬಂದಿತ್ತೆಂದು ಕಾಣುತ್ತದೆ’ ಎನಿಸುತ್ತದೆ. ‘ನಿನ್ನೆ ನಮ್ಮ ತಂದೆ ಸತ್ತು ಹೋದರು’ ಎಂದು ಒಬ್ಬ ಹುಡುಗ ಶಿಕ್ಷಕರಿಗೆ ಹೇಳಿದಾಗ ಶಿಕ್ಷಕರು ‘ಊರಿಗೇ ದೊಡ್ಡ ಮನುಷ್ಯರು ನಿಮ್ಮ ತಂದೆ. ಅವರು ನಿಧನರಾದರು ಎಂದು ಹೇಳಬೇಕು’ ಎಂದು ತಿದ್ದಬಹುದು. ನಿಘಂಟಿನಲ್ಲಿ ನಿಧನರಾಗು = ತೀರಿಕೊಳ್ಳು, ಮರಣಹೊಂದು, ಸಾಯು ಎಂದು ಕೊಡಲು ಮಾತ್ರ ಸಾಧ್ಯವೇ ಹೊರತು ಆಯಾ ಶಬ್ದಗಳ ಸಾಮಾಜಿಕ ಮತ್ತು ಭಾವನಾತ್ಮಕ ಹಿನ್ನೆಲೆಯನ್ನು ಕೊಡಲು ಸಾಧ್ಯವಿಲ್ಲ. ಶಬ್ದಗಳಿಗೆ ವಿಶಿಷ್ಟವಾದ ಸಾಮಾಜಿಕ ಮತ್ತು ಭಾವನಾತ್ಮಕ ಹಿನ್ನೆಲೆ ಹೇಗೆ ಮತ್ತು ಎಂದಿನಿಂದ ಹುಟ್ಟಿಕೊಂಡಿತು ಎಂದು ಹೇಳುವದು ಸಾಧ್ಯವಿಲ್ಲ. ಈ ದಿಕ್ಕಿನಲ್ಲಿ ಒಂದು ಉದಾಹರಣೆಯನ್ನು ನೋಡಿ,

ಕಾವ್ಯದಲ್ಲಿ ವರ್ಣನೆ ಅಧಿಕವಾಗಿದೆ
ಎಂದಾಗ ಅದು ಒಳ್ಳೆಯ ಗುಣವೆಂದೂ
ಕಾವ್ಯದಲ್ಲಿ ವರ್ಣನೆ ಹೆಚ್ಚಾಗಿದೆ

ಎಂದಾಗ ಅದು ಕೆಟ್ಟ ಗುಣವೆಂದೂ ಅನಿಸಬಹುದು. ಸಂಸ್ಕೃತದಲ್ಲಿ ‘ಅಧಿಕ’ ಎಂದರೆ ಕನ್ನಡದಲ್ಲಿ ‘ಹೆಚ್ಚು’. ಆದರೂ ಪ್ರಯೋಗದಲ್ಲಿ ಅವು ಭಿನ್ನ ಭಾವನಾತ್ಮಕತೆಯನ್ನು ಸೂಚಿಸುತ್ತವೆ. ಶೈಲಿವಿಜ್ಞಾನ ಭಾಷೆಯ ಭಾವನಾತ್ಮಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅವುಗಳ ವ್ಯವಸ್ಥಿತ ವಿಶ್ಲೇಷಣೆಗೆ ತಂತ್ರಗಳನ್ನು ರೂಪಿಸುತ್ತದೆ.

ಈ ಚರ್ಚೆಯನ್ನು ಐ. ಆರ್. ಗಾಲ್ಪರಿನ್‌ ಅವರ ಕೆಳಗಿನ ವಾಕ್ಯವೃಂದ ಸಮಾರೋಪ ಮಾಡುತ್ತದೆ:

Stylistic analysis in linguistics refers to the identification of patterns of usage in speech and writing. Stylistic analysis in literary studies is usually made for the purpose of commenting on quality and meaning in a text. Stylistics, in other words, is the study of style used in literary and verbal language and the effect writer or speaker wishes to communicate to the reader or hearer. It attempts to establish principles capable of explaining the particular choices made by individual and social groups in their use of language, such as socialization, the production or reception of meaning, literary criticism and critical discourse analysis.

ಮೇಲಿನ ಉದ್ಧರಣೆಯನ್ನು ಹೀಗೆ ಸಂಹ್ರಹಿಸಬಹುದು:

ಭಾಷಾ ಬಳಕೆಯ ವಿವಿಧ ಪರಿಗಳ ಆಧ್ಯಯನವೇ ಶೈಲಿವಿಜ್ಞಾನ. ಬರವಣಿಗೆಯಲ್ಲಿ ವಿವಿಧ ಪದಗಳ ಬಳಕೆ ಹೇಗೆ ಭಿನ್ನ ಭಿನ್ನ ಅರ್ಥ ಸಂಪತ್ತಿಯನ್ನು ಕೊಡುತ್ತದೆ ಎಂಬುದನ್ನು ಅದು ವಿಶ್ಲೇಷಿಸುತ್ತದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಶಿಷ್ಟಾರ್ಥ ಓದುಗನಿಗೆ ತಲುಪಲು ಅಭಿವ್ಯಕ್ತಿಯ ಯಾವ ವಿಧಾನ ಸಹಕಾರಿಯಾಗಿದೆ ಎಂಬುದರ ಆಧ್ಯಯನವೇ ಶೈಲಿವಿಜ್ಞಾನ.

ಪದ್ಯ ಸಾಹಿತ್ಯದಲ್ಲಿಯೇ ಆಗಲಿ, ಗದ್ಯ ಸಾಹಿತ್ಯದಲ್ಲಿಯೇ ಆಗಲಿ, ವಿಶಿಷ್ಟ ಸನ್ನಿವೇಶದಲ್ಲಿ ವಿಶಿಷ್ಟಾರ್ಥ ಸಂವಹನಕ್ಕಾಗಿ ವಿಶಿಷ್ಟ ಪದಪ್ರಯೋಗವಾಗುತ್ತದೆ ಎಂಬುದು ಎಲ್ಲ ಬರಹಗಾರರ, ಬುದ್ಧಿವಂತ ಓದುಗರ ಅನುಭವ. ಆ ಪದಪ್ರಯೋಗ ವೈವಿಧ್ಯದ ವಿಶ್ಲೇಷಣೆಯೇ ಶೈಲಿವಿಜ್ಞಾನ ಅಂಬುದು ಮೇಲಿನ ಉದ್ಧರಣೆಯಿಂದ ಸ್ಪಷ್ಟವಾಗುತ್ತದೆ.