ವರ್ಣನಾತ್ಮಕ ಭಾಷಾವಿಜ್ಞಾನವು ಪ್ರಾರಂಭದಲ್ಲಿ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಲು ಬೇಕಾದ ಹೊಸ ತಂತ್ರಗಳನ್ನು ರೂಪಿಸುವತ್ತ ಗಮನ ಹರಿಸಿದರೆ ಮುಂದೆ ಅದುವರೆಗೂ ವಿಶ್ಲೇಷಿಸದೇ ಇರುವ ಭಾಷೆಗಳ ವಿಶ್ಲೇಷಣಾ ತಂತ್ರಗಳ ಕಡೆ ಗಮನ ಹರಿಸಿತು ಎಂಬುದನ್ನು ಮೇಲೆ ನೋಡಿದ್ದೇವೆ. ಈ ಕ್ಷೇತ್ರದಲ್ಲಿ ಅದು ಗಣನೀಯ ಕಾಣಿಕೆಯನ್ನು ಸಲ್ಲಿಸಿತು. ಹೊಸ ಭಾಷೆಯನ್ನು ವಿಶ್ಲೇಷಿಸುವಾಗ ವರ್ಣನಾತ್ಮಕ ಭಾಷಾವಿಜ್ಞಾನವು ಭಾಷೆಯನ್ನು ಮಂಗಳಲೋಕದಿಂದ ಬಂದವರ ಹಾಗೆ ವಿಶ್ಲೇಷಿಸಬೇಕು ಎಂಬ ಧೋರಣೆಯನ್ನು ತಾಳಿತು. ಅಂದರೆ ವಿಶ್ಲೇಷಕನ ಸ್ವಂತ ಭಾಷೆ, ಅಥವಾ ಅವನಿಗೆ ಗೊತ್ತಿದ್ದ ಭಾಷೆ ವಿಶ್ಲೇಷಣೆಗೆ ಒಳಪಡುವ ಭಾಷೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಾರದು ಎಂಬುದು ಅದರ ಹಿಂದೆ ಇದ್ದ ತತ್ತ್ವ. ಈ ಪ್ರಕ್ರಿಯೆ ಲಿಪಿಯಿಲ್ಲದ ಭಾಷೆಯನ್ನು ಲಿಪಿಗಿಳಿಸಿ ಅದರ ಬಗೆಗೆ ವಿಶೇಷ ಅಧ್ಯಯನ ನಡೆಸಲು ಅನುಕೂಲತೆಯನ್ನು ಒದಗಿಸಿಕೊಟ್ಟಿತು. ಭಾಷೆಯ ಧ್ವನಿರೂಪಿ ಸಾಮಗ್ರಿಯನ್ನು ಲಿಪಿಗಿಳಿಸಲು ಬೇಕಾಗುವ ಧ್ವನಿಲಿಪಿಯನ್ನೂ ಅದು ರೂಪಿಸಿಕೊಂಡಿತು. ಆ ಲಿಪಿಯಲ್ಲಿ ಒಂದು ಧ್ವನಿಗೆ ಒಂದೇ ಸಂಕೇತವಿರುವದರಿಂದ ಉಚ್ಚಾರದಲ್ಲಿದ್ದ ಸಾಮಗ್ರಿಯನ್ನು ಯಥಾವತ್ತಾಗಿ ಲಿಪಿಗಿಳಿಸಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಧ್ವನ್ಯಾಲೇಖ ಲಿಪಿಮಾಲೆ (International Phonetic Alphabet)ಯನ್ನು ನೆನೆಯ ಬೇಕು. ಅದನ್ನು ರೂಪಿಸುವದಕ್ಕಾಗಿ ೧೮೮೬ರಲ್ಲಿ ಪ್ಯಾರಿಸ್ ನಗರದಲ್ಲಿ ಸಂಸ್ಥೆಯೊಂದು ಸ್ಥಾಪಿತವಾಗಿ ಆನಂತರ ಅದು ಇಂಗ್ಲಂಡಿಗೆ ಸ್ಥಳಾಂತರಗೊಂಡಿತು. ಇದುವರೆಗೆ ಅಲ್ಲಿಯೇ ಅದು ಕೆಲಸ ಮಾಡುತ್ತಿದೆ. ೨೦೦೫ರಲ್ಲಿ ಅಲ್ಲಿಯವರೆಗೆ ಸುಧಾರಿತವಾದ ಮತ್ತು ಹೊಸದಾಗಿ ರೂಪಿತವಾದ ಧ್ವನಿಸಂಕೇತಗಳನ್ನು ಒಳಗೊಂಡ ಲಿಪಿಮಾಲೆಯನ್ನು ಪ್ರಕಟಿಸಿತು.

ಒಂದು ಭಾಷೆಯ ಉಚ್ಚಾರಣಾ ರೀತಿಯನ್ನು ಯಥಾವತ್ತಾಗಿ ಬರೆಯಲು ಮತ್ತು ಅರ್ಥ ಮಾಡಿಕೊಳ್ಳಲು ಅಂತಾರಾಷ್ಟ್ರೀಯ ಧ್ವನ್ಯಾಲೇಖ ಲಿಪಿಮಾಲೆಯಿಂದ ಸಾಧ್ಯವಾಯಿತು. ಆದರೆ ಅದು ಭಾಷೆಯ ಸಾಮಾಜಿಕ ಪ್ರಕ್ರಿಯೆಯನ್ನು ಲಕ್ಷಿಸುತ್ತಿರಲಿಲ್ಲ. ಆ ಕೆಲಸವನ್ನು ಮಾಡಲು ಸಾಮಾಜಿಕ ಭಾಷಾಶಾಸ್ತ್ರ ಬರಬೇಕಾಯಿತು. ಆದರೆ ಸಾಮಾಜಿಕ ಭಾಷಾ ಶಾಸ್ತ್ರದಲ್ಲಿಯೂ ಸಾಹಿತ್ಯಕ್ಕೆ ಉಪಯೋಗವಾಗುವ ಅಂಶಗಳು ಬಹಳ ಇರಲಿಲ್ಲ. ಈ ಕಾರಣದಿಂದ ಶೈಲಿವಿಜ್ಞಾನ ಮತ್ತು ಜ್ಞಾನಶಾಸ್ತ್ರಗಳೆರಡೂ ಸಾಮಾಜಿಕ ಹಿನ್ನೆಲೆಯಲ್ಲಿ ಭಾಷೆಯ ಪ್ರಯೋಗವನ್ನು ಸಾಹಿತ್ಯಿಕವಾಗಿ ಅರ್ಥಮಾಡಿಕೊಳ್ಳಲು ಸಹಕರಿಸುವ ವಿಶ್ಲೇಷಣೆಗಳಾಗಿ ಹುಟ್ಟಿಬಂದವು. ಇದು ಆ ಎರಡೂ ಶಾಸ್ತ್ರಗಳ ಸ್ಥೂಲ ಲಕ್ಷಣವಾದರೂ ಅವುಗಳ ವಿವರವಾದ ಚರ್ಚೆ ಭಾಷೆಯ ಸಾಮಾಜಿಕ ರೀತಿನಿತಿಗಳ ಬಗೆಗೆ ಹೆಚ್ಚಿನ ಬೆಳಕನ್ನು ಬೀರಬಲ್ಲದು.