ಶೈಲಿ ವಿಜ್ಞಾನ ಬೆಳೆದು ಬರಲು ಭಾಷಾವೈಜ್ಞಾನಿಕ  ವಿಶ್ಲೇಷಣೆಯಲ್ಲಿ ಸಾಹಿತ್ಯಿಕ ಅಂಶಗಳು ಇಲ್ಲದಿರುವ ಕಾರಣಗಳಿದ್ದವು. ಹೀಗೆ ಶೈಲಿವಿಜ್ಞಾನ ಮತ್ತು  ಜ್ಞಾನ ಶಾಸ್ತ್ರಗಳೆರಡೂ ೨೦ನೆಯ ಶತಮಾನದ ಉತ್ತರಾರ್ಧದಿಂದೀಚೆಗೆ ಭಾಷಾವಿಜ್ಞಾನದ ಅಂಗವಾಗಿ ಬೆಳೆದು ಬಂದವು ಎಂಬ ಮಾತನ್ನು ಹಿಂದೆ ಹೇಳಿದೆ. ಭಾಷೆ ಎಂಬುದು ಒಂದು ಸಾಮಾಜಿಕ ಪ್ರಕ್ರಿಯೆಯಾದುದರಿಂದ ಸಾಮಾಜಿಕ ಹಿನ್ನೆಲೆಯನ್ನು ಲಕ್ಷಿಸದೇ ಭಾಷೆಯ ಬಗೆಗಿನ ಚರ್ಚೆ ಅಪೂರ್ಣವಾಗುತ್ತದೆಯಲ್ಲದೇ ಕೆಲವೊಮ್ಮೆ ತಪ್ಪು ತಿಳುವಳಿಕೆಗೂ ಅವಕಾಶ ಮಾಡಿ ಕೊಡುತ್ತದೆ. ಆದುದರಿಂದ ಭಾಷೆಯ ಪ್ರಯೋಗವನ್ನು ಸಾಮಾಜಿಕ  ಪ್ರಕ್ರಿಯೆಯ ಪ್ರತಿಬಿಂಬವಾಗಿ ವಿಶ್ಲೇಷಿಸುವುದೇ ಶೈಲಿವಿಜ್ಞಾನ ಮತ್ತು ಜ್ಞಾನ ಶಾಸ್ತ್ರಗಳ ಗುರಿ. ಒಂದರ್ಥದಲ್ಲಿ ಇವೆರಡೂ ಸಾಹಿತ್ಯವಿಮರ್ಶೆಯ ವೈಜ್ಞಾನಿಕ ಆವೃತ್ತಿಗಳೆಂದೇ ಹೇಳಬಹುದಾರೂ ಸಾಹಿತ್ಯ ವಿಮರ್ಶೆಯ ಧೋರಣೆಯಿಂದ ಇವು ಸಾಕಷ್ಟು ಭಿನ್ನವಾಗಿವೆ. ಹೇಗೆ ಎಂಬುದನ್ನು ನೋಡುವದೂ ಇಲ್ಲಿಯ ಉದ್ದೇಶಗಳಲ್ಲೊಂದಾಗಿದೆ.

ಸಾಹಿತ್ಯ ವಿಮರ್ಶೆ ಎಂಬುದು ಬಹುಕಾಲದಿಂದ ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಇತ್ತು. ಈ ದಿಶೆಯಲ್ಲಿ ೧೯ನೆಯ ಮತ್ತು ೨೦ನೆಯ ಶತಮಾನದಲ್ಲಿ ಇಂಗ್ಲಿಷಿನಲ್ಲಿ ವಿಪುಲ ಸಾಹಿತ್ಯ ಸೃಷ್ಟಿಯಾಗಿದೆ. ಕನ್ನಡದಲ್ಲಿಯೂ ಸಾಹಿತ್ಯ ವಿಮರ್ಶೆಗೆ ನೆರವಾಗಲು ಸಂಸ್ಕೃತದಿಂದ ಭಾಷಾಂತರಗೊಂಡ ಅಥವಾ ಸಂಸ್ಕೃತ ಕೃತಿಗಳಲ್ಲಿಯ ಕಲ್ಪನೆಗಳನ್ನು ಕನ್ನಡಕ್ಕೆ ಅಳವಡಿಸಿಕೊಂಡ ಆನೇಕ ಶಾಸ್ತ್ರ ಗ್ರಂಥಗಳು ರಚನೆಗೊಂಡಿವೆ. ಹೀಗೆ ಸಂಸ್ಕೃತದ ಅಲಂಕಾರ, ರೀತಿ, ರಸ, ಧ್ವನಿ ಮೊದಲಾದವುಗಳನ್ನು ವಿವರಿಸುವ ಕೃತಿಗಳೂ ಸ್ವತಂತ್ರವಾಗಿ ಸಾಹಿತ್ಯ ವಿಮರ್ಶೆಯನ್ನು ನಿರೂಪಿಸುವ ಕೃತಿಗಳೂ ಕನ್ನಡದಲ್ಲಿ ಸಾಕಷ್ಟು ರಚನೆಗೊಂಡಿವೆ. ಅವೆಲ್ಲ ಒಂದರ್ಥದಲ್ಲಿ ಭಾವವನ್ನೂ ಬಾವಾಭಿವ್ಯಕ್ತಿಯನ್ನೂ ವಿಶ್ಲೇಷಿಸುತ್ತವೆ. ಆದರೆ ಶೈಲಿವಿಜ್ಞಾನ ಮತ್ತು ಜ್ಞಾನ ಶಾಸ್ತ್ರಗಳು ನಿರೂಪಿಸುವ ಭಾಷೆಯ ಸಾಮಾಜಿಕ  ಪ್ರಕ್ರಿಯೆ ಸಾಹಿತ್ಯ ವಿಮರ್ಶೆಯಿಂದ ಭಿನ್ನವಾದ ದೃಷ್ಟಿಕೋನವನ್ನು ನೀಡುತ್ತದೆ. ಮೊದಲು ಶೈಲಿವಿಜ್ಞಾನದ ವಿವಿಧ ಆಯಾಮಗಳನ್ನು ನೋಡೋಣ.