ಶೈಲಿವಿಜ್ಞಾನ ಮೂಭೂತವಾಗಿ ಕೆಳಗಿನ ತತ್ತ್ವಗಳನ್ನು ಗಮನದಲ್ಲಿ ಇಟ್ಟು ಕೊಳ್ಳುತ್ತದೆ:

. ಸಾಹಿತ್ಯದ ಪ್ರಕಾರ ಪದ್ಯವೇ ಇರಲಿ, ಗದ್ಯವೇ ಇರಲಿ ಅದು ಆಭಿವ್ಯಕ್ತಿಯ ಸಾಧನವಾದ ಭಾಷೆಯ ಲಕ್ಷಣಗಳನ್ನು ಎತ್ತಿ ತೋರಿಸುತ್ತದೆ.

. ಒಂದು ಭಾವವನ್ನು ಅಥವಾ ವಿಚಾರವನ್ನು ಹಲವು ವಿಧದಲ್ಲಿ ಆಭಿವ್ಯಕ್ತಪಡಿಸುವ ಸಾಧ್ಯತೆ ಇರುವಾಗ ಒಂದು ರೀತಿಯಲ್ಲಿ ಮಾತ್ರ ಏಕೆ ಆಭಿವ್ಯಕ್ತಪಡಿಸಲಾಗಿದೆ, ಬೇರೆ ರೀತಿಗಿಂತ ಆ ರೀತಿಗೆ ಇರುವ ವೈಶಿಷ್ಟವೇನು ಎಂಬುದರ ವ್ಯಕ್ತ ಚಿಂತನೆ.

. ರಸಾತ್ಮಕತೆಯೇ ಆಭಿವ್ಯಕ್ತಿಯ ಮೂಲ ಗುರಿಯಾಗಿರುವುದರಿಂದ ಆ ಗುರಿಯನ್ನು ಎಷ್ಟರಮಟ್ಟಿಗೆ ಯಶಸ್ವಿಯಾಗಿ ಸಾಧಿಸಲಾಗಿದೆ ಎಂಬ ಬಗ್ಗೆ ಅನ್ವೇಷಣೆ.

. ಅಭಿವ್ಯಕ್ತಿ ಮೂಲತಃ ಭಾವವನ್ನು ಉದ್ದೀಪಿಸುತ್ತದೆ. ಆ ಭಾವಗಳಲ್ಲಿ ಸ್ಥಿರವಾದುದು, ಬಹುಕಾಲದವರೆಗೆ ನಿಲ್ಲುವಂಥದ್ದು ರಸದಲ್ಲಿ ಪರಿಪಾಕಗೊಳ್ಳುತ್ತದೆ. ಈ ಪ್ರಕ್ರಿಯೆ ಭಾಷೆಯ ಮೂಲಕ ಹೇಗೆ ಮತ್ತು ಎಷ್ಟು ಸಮರ್ಥವಾಗಿ ನಡೆದಿದೆ ಎಂಬುದರ ಮೌಲ್ಯಮಾಪನ ಶೈಲಿ ವಿಜ್ಞಾನದ ಗುರಿ.

. ಈ ಗುರಿಯ ಸಾಧನೆಗಾಗಿ ಬಳಸಲಾದ ಭಾಷಾಭಿವ್ಯಕ್ತಿಯ ತಂತ್ರಗಳು ಯಾವುವು ಮತ್ತು ಅವು ಹೇಗೆ ವ್ಯಕ್ತಿ ವಿಶಿಷ್ಟವಾಗಿದೆ ಎಂಬುದರ ವಿವೇಚನೆ .

. ಒಟ್ಟಿನಲ್ಲಿ ಆಭಿವ್ಯಕ್ತಿ ಮಾಧ್ಯಮಕ್ಕೂ ಆಭಿವ್ಯಕ್ತಿಯ ವಸ್ತುವಿಗೂ ಸಂಬಂಧದ ವಿಶ್ಲೇಷಣೆ.

ಮೇಲಿನ ತತ್ತ್ವಗಳು ವಿಶ್ಲೇಷಣೆಯಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಒಂದು ಪುಟ್ಟ ಉದಾಹರಣೆಯಿಂದ ನಿರೂಪಿಸಬಹುದು.

            ಅನೇಕ ರಸ್ತೆಯ ಸೂಚನೆಗಳಲ್ಲಿ
ನಿಂತು ಹೊರಡಿಅಥವಾ
ಎಡಬದಿ ಹಿಡಿಯಬೇಕು

ಮೊದಲಾದ ಸೂಚನೆಗಳನ್ನು ನೋಡುತ್ತೇವೆ. ಇವುಗಳ ಭಾಷಾಲಕ್ಷಣಗಳನ್ನು ಹೀಗೆ ಹೇಳಬಹುದು.

. ಇವು ಅತ್ಯಂತ ಸಂಕ್ಷೇಪವಾಗಿವೆ. ಆದುದರಿಂದ ವೇಗವಾಗಿ ಓದಿಕೊಳ್ಳಲು ಸಾಧ್ಯ.

. ಎಲ್ಲರೂ ಇವನ್ನು ಓದಿಕೊಂಡು, ತಿಳಿದುಕೊಂಡು ತಪ್ಪದೇ ಪಾಲಿಸಬೇಕು ಎಂಬ ಉದ್ದೇಶ ಹೊಂದಿವೆ.

. ಇವುಗಳಲ್ಲಿ ಮೊದಲಿನದು ಆಜ್ಞೆಯಂತೆ ಇದ್ದರೆ ಎರಡನೆಯದು ಉಪದೇಶದಂತೆ ಇದೆ.

. ಈ ಸೂಚನೆಗಳಿಗೆ ಯಾವುದೇ ವಿರಾಮ ಚಿಹ್ನೆಗಳಿಲ್ಲ.

. ಮೊದಲಿನದು ದ್ವೀತಿಯ ಪುರುಷದ ನೀವು ಅಥವಾ ತಾವು ಎಂಬ ಕರ್ತೃವನ್ನು ಸೂಚಿಸುತ್ತಿದ್ದರೆ ಎರಡನೆಯದು ಕರ್ತೃವಿಲ್ಲದ ರಚನೆಯಾಗಿ ಅಥವಾ ಅಲ್ಲಿ ‘ಎಲ್ಲರೂ’ ಎಂಬುದನ್ನು ಆಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ.

. ‘ಎಷ್ಟು ಹೊತ್ತು ನಿಲ್ಲಬೇಕು?’ ಮತ್ತು ‘ಯಾವುದರ ಎಡಬದಿಯಲ್ಲಿ ಚಲಿಸಬೇಕು?’ ಎಂಬ ಉಪಪ್ರಶ್ನೆಗಳು ಸಂಭಾವ್ಯವಾದರೂ ಆ ಫಲಕಗಳನ್ನು ಹಾಕಿದ ಸ್ಥಳಗಳೇ ಇವುಗಳಿಗೆ ಉತ್ತರವನ್ನು ಕೊಡುತ್ತವೆ’. ‘ಎಡಗಡೆಯಿಂದ ಅಥವಾ ಬಲಗಡೆಯಿಂದ ವಾಹನಗಳು ಬರುತ್ತಿಲ್ಲ ಎನ್ನುವ ವರೆಗೆ’ ಅಥವಾ ‘ನೀವು ಕ್ರಮಿಸುತ್ತಿರುವ ರಸ್ತೆಯ ಎಡಬದಿಯಲ್ಲಿಯೇ ಹೊರತು ಅದರ ನಡುವೆ ಅಥವಾ ಬಲಗಡೆಗೆ ಅಲ್ಲ’ ಎಂಬ ಉತ್ತರಗಳು ಉಕ್ತವಾಗಿರದಿದ್ದರೂ ವ್ಯಕ್ತವಾಗಿ ಇವೆ.

. ಇಲ್ಲಿ ಬಳಸಿದ ಶಬ್ಧಗಳು ಸಾದಾ ಶಬ್ಧಗಳಾಗಿವೆಯೇ ಹೊರತು ಪಂಡಿತರಿಗೆ ಮಾತ್ರ ಅರ್ಥವಾಗುವಂಥ ಗ್ರಾಂಥಿಕ ಪ್ರೌಢ ಶಬ್ಧಗಳಲ್ಲ. ‘ನಾಮ, ದಕ್ಷಿಣ ದಿಶೆ ಪರೀಕ್ಷಿಸಿ ಚಲಿಸಿ’ ಎಂದೋ ‘ಪಥದ ವಾಮಪಾರ್ಶ್ವದಲ್ಲಿ ಚಲಿಸಿ’ ಎಂದೋ ಆ ಸೂಚನೆಗಳಿಲ್ಲ.

ಇಷ್ಟು ಸಣ್ಣ ಉಕ್ತಿಗಳಿಗೇ ಹೀಗೇ ಲಕ್ಷಣಗಳನ್ನು ಹೇಳಬಹುದಾದರೆ ಒಂದು ಕಾವ್ಯಕೃತಿಯಲ್ಲಿಯೋ ಕಥೆ, ಕಾದಂಬರಿ, ಆತ್ಮಕಥೆ, ವಿಚಾರ ಲೇಖನಗಳಲ್ಲಿಯೋ ಬಳಕೆಯಾದ ಭಾಷೆಯ ಮತ್ತು ಆಭಿವ್ಯಕ್ತಿಯ ಲಕ್ಷಣಗಳನ್ನು ಎಷ್ಟೊಂದು ಸ್ತರಗಳಲ್ಲಿ ವಿಶ್ಲೇಷಿಸುವುದು ಸಾಧ್ಯಎಂಬುದನ್ನು ಊಹಿಸಬಹುದು.