ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಹಲವೆಡೆ ಕೇಳಿರುತ್ತೇವೆ, ಓದಿರುತ್ತೇವೆ. ಅಂತೆಯೇ, ನಮ್ಮ ಭೂಮಂಡಲದಲ್ಲಿ ತಮ್ಮ ವಸಾಹತನ್ನು ಸ್ಥಾಪಿಸಿಕೊಂಡಿರುವ ಪುಟ್ಟ ಪುಟ್ಟ ಗಿಡ ಮರಗಳ ಬಗ್ಗೆ ಕೊಂಚ ಗಮನ ಹರಿಸೋಣ; ಪುಟ್ಟ ಮರ ಗಿಡ ಎಂದರೆ ನಾವು ಮಾತಾಡುತ್ತಿರುವುದು ಬೋನ್ಸಾಯ್ ಬಗ್ಗೆ ಅಲ್ಲ; ಸೂಕ್ಷ್ಮಾಣು ಜೀವಿ ಪ್ರಪಂಚದ ಪುಟ್ಟ ಪುಟ್ಟ ಹಸಿರು ಪ್ರತಿನಿಧಿಗಳೇ ‘ಆಲ್ಗೆ’. ಇವನ್ನು ಶೈವಲ, ಹಾವಸೆ, ಕಡಲ ಕಳೆ, ಪಾಚಿ ಎಂಬ ವಿವಿಧ ಹೆಸರಿನಲ್ಲಿ ಕರೆದರೂ, ಇವೆಲ್ಲವೂ ಸೇರಿ ಈ ಒಂದು ಸೂಕ್ಷ್ಮ ಸಸ್ಯಗಳ ಗುಂಪನ್ನು ಪ್ರತಿನಿಧಿಸುತ್ತವೆ. ಸರಳವಾಗಿ ಇವುಗಳ ಬಗ್ಗೆ ವ್ಯಾಖ್ಯೆ ಬರೆಯಬೇಕೆಂದರೆ, ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಬಲ್ಲ ಪುಟ್ಟ ಹಸಿರು ಜೀವಿಗಳು ಎನ್ನಬಹುದೇನೋ; ಆದರೆ, ಎಲ್ಲಾ ಶೈವಲಗಳೂ ಹಸಿರಾಗೇ ಕಂಡುಬರುವುದಿಲ್ಲ. ಸೂಕ್ಷ್ಮಲೋಕವನ್ನು ವರ್ಣರಂಜಿತವಾಗಿಸೋ ಈ ಶೈವಲಗಳನ್ನು,ಬಣ್ಣದ ಆಧಾರದ ಮೇಲೇ ಹಲವಾರು ಬಗೆಯಾಗಿ ವಿಂಗಡಣೆ ಮಾಡಲಾಗಿದೆ ಕೂಡ. ಒಟ್ಟಾರೆ, ಪತ್ರಹರಿತ್ತು ಅಥವಾ ಅದರ ಮಾರ್ಪಾಟು ರೂಪದ ವರ್ಣದ್ರವ್ಯವನ್ನು ಬಳಸಿಕೊಂಡು, ದ್ಯುತಿ ಸಂಶ್ಲೇಷಣೆಯ ಮೂಲಕ ಆಹಾರ ತಯಾರಿಸಿಕೊಂಡು, ಈ ಪ್ರಕ್ರಿಯೆಯ ಉಪಉತ್ಪನ್ನವಾಗಿ ಆಮ್ಲಜನಕವನ್ನು ಹೊರಹಾಕುವ, ನೆಲದ ಸಸ್ಯಗಳಂತೆ ದೇಹರಚನೆ ಇರದ ಸೂಕ್ಷ್ಮ ಸಸ್ಯಗಳೇ ‘ಆಲ್ಗೆ’. ಈ  ಪಾಚಿ ಮತ್ತಿತರ ‘ಆಲ್ಗೆ’ ಭೂಮಿಯ ಮೇಲೆ ಶತಕೋಟಿ ವರ್ಷಗಳ ಹಿಂದೆ ಕಾಣಿಸಿಕೊಳ್ಳದೆ ಇದ್ದಿದ್ದರೆ, ನಾವು ನೀವೆಲ್ಲ ಈ ಭೂಮಿಯ ಮೇಲೆ ಹುಟ್ಟಿ ಬರಲು ಸಾಧ್ಯವೇಇರಲಿಲ್ಲ ಎಂದರೆ ಆಶ್ಚರ್ಯ ಎನಿಸುತ್ತದೆ ಅಲ್ಲವೇ? ಆದರೆ ಇದು ಸರಳ ವೈಜ್ಞಾನಿಕ ಸತ್ಯ. ಈ ಶೈವಲಗಳು ಭೂಮಿಯ ಮೇಲೆ ಉದಿಸುವುದಕ್ಕೂ ಮೊದಲು ಇದ್ದ ಬ್ಯಾಕ್ಟೀರಿಯಾಗಳು, ತಮ್ಮ ಆಹಾರೋತ್ಪಾದನಾ ಪ್ರಕ್ರಿಯೆಯ ಸಹ ಉತ್ಪನ್ನವಾಗಿ ಇಂಗಾಲದ ಡೈ ಆಕ್ಸೈಡ್ ಅಥವಾ ಬೇರೆ ಸಂಯುಕ್ತ ಪದಾರ್ಥಗಳನ್ನು ಹೊರಸೂಸುತ್ತಿದ್ದವೇ ಹೊರತು ಆಮ್ಲಜನಕವನ್ನಲ್ಲ. ಪ್ರಾಣವಾಯುವಾದ ಆಮ್ಲಜನಕವೇ ಇಲ್ಲದ ವಾತಾವರಣದಲ್ಲಿ ನಾವು ಅಥವಾ ಮತ್ತಿತರ ಆಮ್ಲಜನಕವನ್ನು ಉಸಿರಾಡೋ ಪ್ರಾಣಿಗಳು ಹುಟ್ಟಲು, ಬದುಕಲು ಸಾಧ್ಯವೇ? ಆಗ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಹೊರಹಾಕುವ ಇಂಗಾಲದ ಡೈ ಆಕ್ಸೈಡ್ಅನ್ನು ಬಳಸಿಕೊಂಡು ಆಹಾರ ತಯಾರಿಸುವ ಶೈವಲಗಳು ಹುಟ್ಟಿಕೊಂಡವು, ಆಮ್ಲಜನಕವನ್ನು ಉತ್ಪಾದಿಸಿದವು ಮತ್ತು ಭೂಮಿಯ ವಾತಾವರಣವನ್ನು ಆಮ್ಲಜನಕಯುಕ್ತ ಸೂಕ್ತ ವಾತಾವರಣವನ್ನಾಗಿ ಮಾಡಿ, ಮನುಷ್ಯ ಮತ್ತಿತರ ಪ್ರಾಣಿಗಳ ಉದಯಕ್ಕೆ ಕಾರಣವಾದವು. ಹಾಗಾಗಿ ನಮ್ಮ ಅಸ್ತಿತ್ವಕ್ಕೆ ಮೂಲ ಕಾರಣಗಳಾದ ಶೈವಲಗಳಿಗೆ ವಂದನೆ ಸಮರ್ಪಿಸುತ್ತಾ, ಇವುಗಳ ಬಗ್ಗೆ ಕೂಲಂಕುಷವಾಗಿ ತಿಳಿಯುವ ಪ್ರಯತ್ನ ಮಾಡೋಣ.

‘ಆಲ್ಗೆ’ಯ ಆವಾಸಸ್ಥಾನ:

ಶೈವಲಗಳು ಸಸ್ಯಗಳಾಗಿರುವುದರಿಂದ ಅವುಗಳಿಗೆ ನೀರು ಬೇಕೇಬೇಕು; ಹಾಗಾಗಿ ಸಮುದ್ರಗಳು, ಸಿಹಿನೀರಿನ ಆಗರಗಳಾದ ಕೆರೆ, ಕುಂಟೆ, ಬಾವಿ, ತೊರೆ ಇತ್ಯಾದಿ ಶೈವಲಗಳ ಆವಾಸಸ್ಥಾನ. ಹಾಗೆಂದು ಬೃಹತ್ ಪ್ರಮಾಣದಲ್ಲಿ ನೀರು ಇರಲೇಬೇಕೆಂದೇನೂ ಇಲ್ಲ. ಅಲ್ಪ ಸ್ವಲ್ಪ ನೀರಿನಂಶ ಇದ್ದರೂ ಸಾಕೆಂದು ಬಂಡೆಗಳ ಮೇಲೆ, ಒದ್ದೆ ನೆಲದ/ಗೋಡೆಯ ಮೇಲೆ ಸಲೀಸಾಗಿ ವಾಸ್ತವ್ಯ ಹೂಡಿಬಿಡುತ್ತವೆ. ಹಾಗಾಗಿಯೇ ಮಳೆ ಬಂದಾಗಲೋ, ಅಥವಾ ಯಾವುದೊ ಒಂದೆಡೆ ಸ್ವಲ್ಪ ಕಾಲ ನೀರು ನಿಂತಾಗಲೋ, ಪಾಚಿಯ ಉಗಮ ಮತ್ತು ನಾವು ಜಾರಿ ಬೀಳುವ ಸಂಭವ ನಮಗೆಲ್ಲಾ ಅನುಭವಕ್ಕೆ ಬಂದಿರಲಿಕ್ಕೆ ಸಾಕು. ಇವು ಸಸ್ಯಗಳಂತೆ ಆಹಾರ ತಯಾರಿಕೆ ಮಾಡುವ ಜೀವಿಗಳಾದ್ದರಿಂದ, ಇವುಗಳಿಗೂ ಮಣ್ಣು ನೆಲ ಬೇಕು ಎಂದುಕೊಂಡಿರಾ? ಬಂಡೆ/ ಮರದ ತೊಗಟೆಯಂತಹಾ ಗಟ್ಟಿ ನೆಲವಿದ್ದರೂ ಆಯ್ತು, ಜಲಪಾತ್ರಗಳ ಮೇಲೆ ತೇಲುತ್ತಾ ಬದುಕುವುದೆಂದರೂ ಆಯ್ತು, ನೀರು ಮತ್ತು ಸೂರ್ಯಕಿರಣ ದೊರೆಯುವ ಯಾವುದೇ ಸ್ಥಳ, ಶೈವಲಗಳ ನೆಲೆಬೀಡಾಗಲು ಯೋಗ್ಯ.

ಶೈವಲಗಳ ರೂಪವಿಜ್ಞಾನ ಮತ್ತು ಶರೀರವಿಜ್ಞಾನ

ಶೈವಲಗಳು ಬ್ಯಾಕ್ಟೀರಿಯಾ ಮತ್ತು ಸಸ್ಯಗಳ ನಡುವಿನ ಕೊಂಡಿ ಜೀವಿ. ಹಾಗಾಗಿ ಶೈವಲಗಳ ಜೀವಕೋಶದ ಕೆಲವು ಗುಣಲಕ್ಷಣಗಳು ಬ್ಯಾಕ್ಟೀರಿಯದಂತೆಯೂ ಮತ್ತೂ ಕೆಲವು ಸಸ್ಯಗಳಂತೆಯೂ ಇರುವುದು ಕಂಡುಬಂದಿದೆ. ಸಾಮಾನ್ಯವಾಗಿ ಇವುಗಳಲ್ಲಿ ‘ಸೆಲ್ಯುಲೋಸ್’ಯುಕ್ತ ಕೋಶ ಗೋಡೆಯು ಹೊರಪದರವಾಗಿದ್ದು, ಒಳಪದರವು ಕೋಶಪೊರೆ ಆಗಿರುತ್ತದೆ. ಕೆಳಹಂತದ ಆಲ್ಗೆ, ಪೊರೆಯಿಂದ ಆವೃತವಾದ  ನ್ಯೂಕ್ಲಿಯಸ್ ಅನ್ನು ಒಳಗೊಂಡಿರುವುದಿಲ್ಲ; ಆದರೆ ನೆಲದ ಸಸ್ಯಗಳನ್ನು ಹೋಲುವ ದೊಡ್ಡ ಶೈವಲಗಳು, ಮೇಲಿನಹಂತದ ಜೀವಿಗಳಂತೆ ಪೊರೆಯಿಂದ ಆವೃತವಾದ ಸಂಕೀರ್ಣ ನ್ಯೂಕ್ಲಿಯಸ್ ಅನ್ನು ಒಳಗೊಂಡಿರುತ್ತವೆ. ‘ಕ್ಲಾಮೈಡೋಮೊನಾಸ್’ನಂತಹ ಕೆಳ ಹಂತದ ಆಲ್ಗೆ ಒಂಟಿಕೋಶಜೀವಿಗಳಾಗಿದ್ದು, ಸಾಮಾನ್ಯವಾಗಿ ‘ಫ್ಲಾಜೆಲ್ಲಾ’ ಎಂಬ ಕೂದಲಿನಂತಹಾ ಕೊಶೀಯ ಹೊರಚಾಚುವಿಕೆಗಳನ್ನು ಬಳಸಿಕೊಂಡು ನೀರಿನಲ್ಲಿ ಚಲಿಸುತ್ತವೆ.ಇಂತಹಾ ಏಕ ಕೊಶೀಯ ಆಲ್ಗೆ, ಒಂಟಿಯಾಗಿ ಜೀವಿಸುವುದು ಕಡಿಮೆ. ಇವು ಹತ್ತಾರು, ನೂರಾರು ಒಟ್ಟಿಗೆ ಸೇರಿ ವಸಾಹತನ್ನು ಸ್ಥಾಪಿಸಿಕೊಂಡು ಬದುಕುತ್ತವೆ. ಮೇಲಿನ ಹಂತದ ‘ಅಲ್ಗೆ’ ಸಂಕೀರ್ಣ ಕೋಶ ರಚನೆಯನ್ನು ಹೊಂದಿದ್ದು, ‘ಕೆಲ್ಪ್’ನಂತಹಕೆಲವಂತೂ ಹಲವಾರು ಮೀಟರ್ಗಳಷ್ಟು ಉದ್ದದ ದೇಹಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಕೆರೆ ಕುಂಟೆ ಸಮುದ್ರಗಳಲ್ಲಿ ತೇಲುತ್ತಾ ಕಂಡುಬರುವ ಹಸಿರು ಜೀವಿಗಳು ಇವೇ ಶೈವಲಗಳು. ಕಡಲ ಕಳೆ ಎಂಬ ಹೆಸರು ಬರಲು ಇದೇ ಕಾರಣ. ಲ್ಯಾಟಿನ್ ಭಾಷೆಯಲ್ಲಿ ‘ಆಲ್ಗಾ’ ಎಂದರೆ ಕಡಲ ಕಳೆ ಎಂದೇ ಅರ್ಥ. ಕೆಳ ಮತ್ತು ಮೇಲ್ಹಂತದ ಶೈವಲಗಳಿಗೆ ಒಂದು ಪ್ರಮುಖ ಸಾಮ್ಯತೆಯೆಂದರೆ ‘ಹರಿದ್ರೇಣು’ವಿನ ಉಪಸ್ಥಿತಿ. ಪತ್ರಹರಿತ್ತನ್ನು ಒಳಗೊಂಡಿರುವ ಕೋಶವಾದ ಹರಿದ್ರೇಣುವು ಇರುವ ಕಾರಣದಿಂದಲೇ, ಗಾತ್ರ ಮತ್ತು ಸಂಕೀರ್ಣತೆಯಲ್ಲಿನ ವ್ಯತ್ಯಾಸದ ಹೊರತಾಗಿಯೂ ಎಲ್ಲಾ ಬಗೆಯ ಶೈವಲಗಳೂಕೂಡ, ದ್ಯುತಿಸಂಶ್ಲೇಷಕ ಸ್ವಪೋಷಕಗಳು; ಅಂದರೆ,ಎಲ್ಲಾ ಬಗೆಯ ಶೈವಲಗಳೂ, ಹರಿದ್ರೇಣುವಿನ ಸಹಾಯದಿಂದ ಸೂರ್ಯಕಿರಣವನ್ನು ಬಳಸಿಕೊಂಡು ನೀರು ಮತ್ತು ಇಂಗಾಲದ ಡೈ ಆಕ್ಸೈಡ್ ಅನ್ನು ಆಹಾರ ಮತ್ತು ಆಮ್ಲಜನಕವನ್ನಾಗಿ ಪರಿವರ್ತಿಸುತ್ತವೆ.

ಶೈವಲಗಳ ವರ್ಗೀಕರಣ

ಶೈವಲಗಳನ್ನು ಸ್ಥೂಲವಾಗಿ ೬ ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ಈ ವರ್ಗೀಕರಣವು, ಶೈವಲದಲ್ಲಿ ಸಾಮಾನ್ಯ ಪತ್ರಹರಿತ್ತಿನ ಜೊತೆಗೆ ಯಾವ ವರ್ಣದ್ರವ್ಯವಿದೆ ಎಂಬ ಆಧಾರದ ಮೇಲೆ ಮತ್ತು ಕೋಶೀಯ ಸೂಕ್ಷ್ಮ ಗುಣಲಕ್ಷಣದ ಆಧಾರದ ಮೇಲೆ ಮಾಡಲಾಗಿದೆ.

‘ರೋಡೋಫೈಟಾ’ ಎಂಬ ಮೊದಲನೆಯ ವರ್ಗದ ಪ್ರತಿನಿಧಿಗಳು ಕೆಂಪು ಬಣ್ಣದ ಶೈವಲಗಳು. ಈ ವರ್ಗವು ಸುಮಾರು ೭೦೦೦ ಪ್ರಭೇದಗಳನ್ನು ಒಳಗೊಂಡಿದ್ದು, ‘ಫೈಕೋಎರಿಥ್ರಿನ್’ ಮತ್ತು ‘ಫೈಕೊಸೈನಿನ್’ ಎಂಬ ವರ್ಣದ್ರವ್ಯಗಳ ಉಪಸ್ಥಿತಿಯ ಕಾರಣದಿಂದ, ಕೆಂಪು ಬಣ್ಣವನ್ನು ಹೊಂದಿರುತ್ತವೆ. ಇವು ಸಾಮಾನ್ಯವಾಗಿ ಸಮುದ್ರಗಳಲ್ಲೇ ಹೆಚ್ಚು ಕಂಡುಬರುತ್ತವೆ. ‘ಪಾರ್ಫೈರಾ’, ‘ಕೊರಾಲ್ಲಿನಾ’ ಮತ್ತು ‘ಜೆಲಿಡಿಯಂ’ ಕೆಲವು ಪ್ರಮುಖ ಕೆಂಪು ಶೈವಲಗಳು.

‘ಕ್ಲೋರೋಫೈಟಾ’ ಎಂಬ ಎರಡನೆಯ ವರ್ಗದ ಪ್ರತಿನಿಧಿಗಳು ಹಸಿರು ಬಣ್ಣದ ಶೈವಲಗಳು; ಇವು ಹೆಚ್ಚಿನ ಪ್ರಮಾಣದಲ್ಲಿ ‘ಪತ್ರಹರಿತ್ತು ಎ’ ಮತ್ತು ‘ಪತ್ರಹರಿತ್ತು ಬಿ’ಯನ್ನು ಹೊಂದಿರುವ ಕಾರಣ, ಮೇಲ್ಹಂತದ ಸಸ್ಯಗಳಂತೆಯೇ ಹಸಿರು ಬಣ್ಣವನ್ನು ಹೊಂದಿರುತ್ತವೆ; ಈ ವರ್ಗದಲ್ಲಿ ೯೦೦೦ದಿಂದ ೧೨೦೦೦ ಪ್ರಭೇದಗಳು ಕಂಡುಬಂದಿವೆ. ‘ಕ್ಲಮೈಡೋಮೊನಾಸ್’, ‘ಕ್ಲೋರೆಲ್ಲಾ’, ‘ವೋಲ್ವೊಕ್ಸ್’ನಂತಹ ಶೈವಲಗಳು ಈ ವರ್ಗದ ಕೆಲವು ಪ್ರಮುಖ ಸದಸ್ಯರು. ಇವು ಹೆಚ್ಚಾಗಿ ಸಿಹಿನೀರಿನ ಆಗರಗಳಲ್ಲಿ ಕಂಡುಬರುತ್ತವೆ.

‘ಫೆಯೋಫೈಟಾ’ ಎಂಬ ಮೂರನೆಯ ವರ್ಗದ ಪ್ರತಿನಿಧಿಗಳು ಕಂದು ಬಣ್ಣದ ಶೈವಲಗಳು; ಇವು ಸಾಮಾನ್ಯವಾಗಿ ಸಮುದ್ರಗಳಲ್ಲೇ ಹೆಚ್ಚು ಕಂಡುಬರುತ್ತವೆ. ‘ಫುಕೋಕ್ಸಾಂಥಿನ್’ ಎಂಬ ವರ್ಣದ್ರವ್ಯದ ಉಪಸ್ಥಿತಿಯು ಇವಕ್ಕೆ ಹಸಿರು ಮಿಶ್ರಿತ ಕಂದು ಬಣ್ಣವನ್ನು ನೀಡುತ್ತದೆ. ಜಗತ್ತಿನ ಅತೀ ದೊಡ್ಡ ಶೈವಲವಾದ ‘ಕೆಲ್ಪ್’ ಇದೇ ವರ್ಗಕ್ಕೆ ಸೇರಿದ್ದು, ನೀರಿನೊಳಗೇ ಇವು ಸುಮಾರು ೬೦ ಮೀಟರ್ಗಳಷ್ಟು ಎತ್ತರ ಬೆಳೆದು ಸಮುದ್ರದೊಳಗೊಂದು ಕಾಡನ್ನೇ ನಿರ್ಮಿಸುತ್ತವೆ. ಕೆಲ್ಪ್ ಅಲ್ಲದೆ ‘ಅಸ್ಕೊಫಿಲ್ಲಂ’, ‘ಸರ್ಗಾಸಂ’ ಇತ್ಯಾದಿ ಪ್ರಮುಖ ಶೈವಲಗಳು ಈ ವರ್ಗದ ಸದಸ್ಯರು.

‘ಕ್ರೈಸೋಫೈಟಾ’ ಎಂಬ ನಾಲ್ಕನೆಯ ವರ್ಗದ ಪ್ರತಿನಿಧಿಗಳು ಬಂಗಾರ ಬಣ್ಣದ ಶೈವಲಗಳು; ಇವುಗಳಲ್ಲೇ ಹಲವು ಉಪವರ್ಗಗಳಿದ್ದರೂ, ಇವುಗಳಲ್ಲಿ ಅತ್ಯಂತ ಪ್ರಮುಖವಾದವು ‘ಡಯಾಟಮ್’ಗಳು. ಹೊಳೆಯುವ ಮೈಯನ್ನುಳ್ಳ ‘ಡಯಾಟಮ್’ಗಳು, ಏಕಕೊಶೀಯ ಜೀವಿಗಳು. ಇವು ಒಂದರೊಡನೆ ಮತ್ತೊಂದು ಸೇರಿ ಅದ್ಭುತ ವಿನ್ಯಾಸಗಳ ವಸಾಹತು ನಿರ್ಮಿಸುತ್ತವೆ. ರಿಬ್ಬನ್. ಫ್ಯಾನ್, ನಕ್ಷತ್ರದಂತಹ ಹಲವಾರು ವಿನ್ಯಾಸಗಳ ವಸಾಹತಿನಲ್ಲಿ ಕಂಡುಬರುವ ‘ಡಯಾಟಮ್’ಗಳು, ಸಿಲಿಕಾಯುಕ್ತ ಕೋಶಗೋಡೆಯನ್ನು ಹೊಂದಿರುತ್ತವೆ ಎಂಬುದು ಮತ್ತೊಂದು ಅಪರೂಪವಾದ ವಿಶೇಷ. ‘ಕರೋಟಿನಾಯ್ಡ್ ಫುಕೊಕ್ಸಾಂಥಿನ್’ ಎಂಬ ವರ್ಣದ್ರವ್ಯವು, ಇವುಗಳ ಸುಂದರ ಬಣ್ಣಕ್ಕೆ ಕಾರಣ. ಇವುಗಳ ಅಸ್ತಿಪಂಜರವು ವಾಣಿಜ್ಯಿಕವಾಗಿ ಬಹಳ ಉಪಯುಕ್ತ.

‘ಡೈನೋಫ್ಲಜೆಲ್ಲೇಟಾ’ ಎಂಬ ಐದನೆಯ ವರ್ಗದ ಪ್ರತಿನಿಧಿಗಳು ಅಸಮವಾದ ದೇಹ  ಹೊಂದಿರುವ ಕಂದು – ಬಂಗಾರ ಬಣ್ಣದ ಶೈವಲಗಳು. ‘ಪೆರಿಡಿನಿನ್’, ‘ಡೈನೋಕ್ಸಾಂಥಿನ್’, ‘ಡಿಯಡೈನೋಕ್ಸಾಂಥಿನ್’ ಎಂಬ ವಿಶೇಷ ವರ್ಣದ್ರವ್ಯಗಳು ಈ ಶೈವಲಗಳಿಗೆ ವಿಶೇಷ ಬಂಗಾರದ ಕಂದುಬಣ್ಣವನ್ನು ಕೊಡಮಾಡಿವೆ. ಎರಡು ಅಸಮವಾದ ಉದ್ದುದ್ದ ಕೂದಲಿನಂತಹಾ ಕಶಾಂಗಗಳನ್ನುಈ ಶೈವಲಗಳಲ್ಲಿ ಕಾಣಬಹುದು. ಈ ವರ್ಗದ ಶೈವಲಗಳ ವಿಶೇಷತೆಯೇನೆಂದರೆ, ಇವು ಕೆಲವೊಮ್ಮೆ ದ್ಯುತಿಸಂಶ್ಲೆಷಣೆಯ ಮೂಲಕ ಆಹಾರ ಪಡೆದುಕೊಂಡರೆ, ಮತ್ತೆ ಕೆಲವೊಮ್ಮೆ ಪುಟ್ಟ ಜೀವಿಗಳನ್ನು ಆಪೋಶನ ತೆಗೆದುಕೊಂಡು ಜೀರ್ಣಿಸಿಕೊಳ್ಳುತ್ತವೆ. ಈ ವರ್ಗದ ಮತ್ತೊಂದು ಅಪೂರ್ವ ವಿಶೇಷತೆಯೆಂದರೆ, ಇವು ‘ಬಯೋಲುಮಿನೆಸೆನ್ಸ್’ ಅಥವಾ ಜೈವಿಕ ದೀಪ್ತಿಯನ್ನು ಪ್ರದರ್ಶಿಸುತ್ತವೆ. ಎಂದಾದರೂ ಕತ್ತಲೆಯ ರಾತ್ರಿಯಲ್ಲಿ ನೀಲಿ ದೀಪದಂತೆ ಹೊಳೆಯುವ ಸಮುದ್ರವನ್ನು ಕಂಡರೆ ಬೆಚ್ಚಿಬೀಳಬೇಡಿ; ಅದರ ಹಿಂದಿನ ಕಾರಣ ಈ ಶೈವಲಗಳೇಇರಬಹುದು!

‘ಸೈನೋಫೈಟಾ’ ಎಂಬ ಆರನೆಯ ವರ್ಗದ ಪ್ರತಿನಿಧಿಗಳು ಸುಂದರವಾದ ನೀಲಿ-ಹಸಿರು ಬಣ್ಣದ ಶೈವಲಗಳು; ಇವು ಹೆಚ್ಚಾಗಿ ಸಿಹಿನೀರಿನ ಪಾತ್ರಗಳಲ್ಲಿ ಮತ್ತು ತೇವಾಂಶಹೆಚ್ಚಿರುವ ಮಣ್ಣು/ಗೋಡೆ/ಬಂಡೆಗಳ ಮೇಲೆಕಂಡುಬರುತ್ತವೆ. ಭತ್ತದ ಗದ್ದೆಗಳಲ್ಲಿ ನಿಂತ ನೀರು ನೀಲಿ-ಹಸಿರಾಗಿ ಕೊರೈಸುವುದಕ್ಕೆ ಈ ಶೈವಲಗಳೇ ಕಾರಣ. ಇವುಗಳಲ್ಲಿಪತ್ರಹರಿತ್ತಿನ ಜೊತೆಗೆ ಫೈಕೋಬಿಲ್ಲಿನ್ ಎಂಬ ವರ್ಣದ್ರವ್ಯದ ಉಪಸ್ತಿತಿ ಇರುವ ಕಾರಣ, ಇವು ನೀಲಿ ಹಸಿರು ಬಣ್ಣದಲ್ಲಿ ಕಂಗೊಳಿಸುತ್ತವೆ. ಇವು ವಾತಾವರಣದಿಂದ ಸಾರಜನಕವನ್ನು ಹೀರಿಕೊಂಡು, ಅದನ್ನು ಬೇರೆರೂಪಕ್ಕೆ ಮಾರ್ಪಾಟು ಮಾಡಿ, ಸಸ್ಯಗಳಿಗೆ ಒದಗಿಸುತ್ತವೆ; ಹಾಗಾಗಿ ಇದು ಬಹಳ ಪ್ರಾಮುಖ್ಯತೆಯನ್ನುಳ್ಳ ಶೈವಲಗಳ ವರ್ಗ ಎನಿಸಿಕೊಂಡಿದೆ.

ಶೈವಲಗಳ ಪ್ರಾಕೃತಿಕ  ಉಪಯುಕ್ತತೆ:

ಪ್ರಾಕೃತಿಕವಾಗಿ ಶೈವಲಗಳು ಆಹಾರಚಕ್ರದ ಮುಖ್ಯ ಆಹಾರೋತ್ಪಾದಕ ಸ್ವಪೋಷಿತ ಜೀವಿಗಳು. ಇವುಗಳನ್ನು ಆಹಾರವಾಗಿ ಸ್ವೀಕರಿಸುವ ಕೀಟಗಳು, ಕಪ್ಪೆ, ಮೀನು, ಸೀಗಡಿ, ಮೊಸಳೆ, ಪಕ್ಷಿ ಮತ್ತು ಸಣ್ಣ ಸಣ್ಣಇತರ ಪ್ರಾಣಿಗಳ ಪೋಷಣೆ ಶೈವಲಗಳ ಕರ್ತವ್ಯ. ಯಾವುದೇ ಇತರ ಜೀವಿಯಂತೆ ಶೈವಲಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಅಥವಾ ಇಳಿಕೆ ಕಂಡುಬಂದಲ್ಲಿ, ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಕೋಲಾಹಲ ಖಂಡಿತ.

ಉದ್ಯಾನಗಳಲ್ಲಿ ಕಲ್ಲುಬೆಂಚುಗಳ ಮೇಲೆ, ಕಾಡು ಮೇಡುಗಳಲ್ಲಿ ಮರಗಳ, ಬಂಡೆಗಳ ಮೇಲೆ ಕಲ್ಲರಳಿ ಹೂವಾದಂತೆ ಕಂಡು ಬರುವ ವಿನ್ಯಾಸಗಳನ್ನು ಗಮನಿಸಿದ್ದೀರಾ? ಅದು ಜೀವಂತವಿದೆ ಎಂದರೆ ನಂಬುತ್ತೀರಾ? ಅದಕ್ಕಿಂತಲೂ ಆಶ್ಚರ್ಯ ಎಂದರೆ, ಅದು ಒಂದು ಜೀವಿಯಲ್ಲ, ಬದಲಿಗೆ ಎರಡು ಜೀವಿಗಳ ಸಹಬಾಳ್ವೆಯ ದ್ಯೋತಕ! ಹೌದು, ಕಲ್ಲುಹೂವು, ಶಿಲಾವಲ್ಕ ಅಥವಾ ಲೈಕೆನ್ಸ್ ಎಂದು ಕರೆಯಲ್ಪಡುವ ಈ ಸಹಬಾಳ್ವೆಯ ವ್ಯವಸ್ಥೆಗಳಲ್ಲಿ ಎರಡು ಜೀವಿಗಳಿರುತ್ತವೆ – ಒಂದು ಶಿಲೀಂಧ್ರ, ಮತ್ತೊಂದು ಶೈವಲ. ಶಿಲೀಂಧ್ರಗಳು ಶೈವಲಗಳಿಗೆ ಸೂಕ್ತವಾದ ವಸಾಹತು ನಿರ್ಮಿಸಲು ಆಸರೆ ನೀಡಿದರೆ, ಶಿಲೀಂಧ್ರಕ್ಕೆ ಬೇಕಾದ ಆಹಾರವನ್ನು ಶೈವಲಗಳು ತಯಾರಿಸುತ್ತವೆ. ಹೀಗೆ ಒಂದಕ್ಕೊಂದು ಉಪಕಾರ ಮಾಡಿಕೊಂಡು ಸಹಬಾಳ್ವೆ ನಡೆಸುವ ಇವನ್ನು ಕಂಡು ನಾವೂ ಪಾಠ ಕಲಿಯಬೇಕೇನೋ! ಈ ಶಿಲಾವಲ್ಕಗಳು ಕ್ಲಿಷ್ಟಕರ ವಾತಾವರಣದಲ್ಲಿ ಸುಲಭವಾಗಿ ಜೀವಿಸಿಬಿಡಬಲ್ಲವು, ಆದರೆ ಗಂಧಕದ ಡೈ ಆಕ್ಸೈಡ್ ಇತ್ಯಾದಿ ಮಾಲಿನ್ಯಕಾರಕಗಳನ್ನು ಸಹಿಸಿಕೊಳ್ಳಲಾರವು ಮತ್ತು ಮಾಲಿನ್ಯ ಹೆಚ್ಚಿದಂತೆ ಇವು ಇನ್ನಿಲ್ಲವಾಗುತ್ತವೆ; ಹಾಗಾಗಿ ಇವನ್ನು ಪರಿಸರ ಮಾಲಿನ್ಯದ ಇರುವನ್ನು ಸಾರುವ ಜೈವಿಕ ಸೂಚಕಗಳು ಎಂದು ಪರಿಗಣಿಸಲಾಗಿದೆ.

ನೀರಿನಂಶ ಹೆಚ್ಚಿರುವ ತೋಟ ಗದ್ದೆಗಳಲ್ಲಿ, ಪ್ರಮುಖವಾಗಿ ಭತ್ತದ ಗದ್ದೆಗಳಲ್ಲಿ, ಶೈವಲಗಳ ಉಪಸ್ಥಿತಿ ಮಣ್ಣಿನ, ನೀರಿನ ಸಾರವನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಇವುಗಳಿಗಿರುವ ಸಾರಜನಕವನ್ನು ಹಿಡಿದಿಟ್ಟುಕೊಳ್ಳುವ ವಿಶೇಷ ಶಕ್ತಿ; ಇದರ ಮೂಲಕ ಶೈವಲಗಳು ಆ ತೋಟ ಗದ್ದೆಗಳಲ್ಲಿ ಬೆಳೆಯುವ ಸಸ್ಯಗಳ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೇ ಅವುಗಳ ಬೆಳವಣಿಗೆಯ ಓಘವನ್ನೂಹೆಚ್ಚಿಸುತ್ತವೆ.

ಶೈವಲಗಳ ಮಾನವನಿರ್ಮಿತ  ಉಪಯುಕ್ತತೆ:

ಶೈವಲಗಳಲ್ಲಿರುವ  ದ್ಯುತಿಸಂಶ್ಲೇಷಣೆಯ ಶಕ್ತಿ, ಹಲವಾರು ವರ್ಣದ್ರವ್ಯಗಳ ಉಪಸ್ಥಿತಿ, ಅಪಾರ ಪ್ರಮಾಣದ ಪ್ರೋಟೀನ್ ಮತ್ತು ನಾರಿನಂಶದ ಲಭ್ಯತೆ ಮುಂತಾದ ಕಾರಣಗಳಿಂದ ಇವುಗಳ ಉಪಯೋಗಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ಕೆಂಪು ಆಲ್ಗೆಯನ್ನು ಬಳಸಿ ‘ಅಗಾರ್’ ತಯಾರಿಸಲಾಗುತ್ತದೆ; ಈ ‘ಆಗಾರ್’ಅನ್ನು ಬ್ಯಾಕ್ಟೀರಿಯ, ಶಿಲೀಂಧ್ರ ಇತ್ಯಾದಿ ಸೂಕ್ಷ್ಮಾಣು ಜೀವಿಗಳನ್ನು ಪ್ರಯೋಗಾಲಯಗಳಲ್ಲಿ ಬೆಳೆಸಲು ಮಾಧ್ಯಮವಾಗಿ ಉಪಯೋಗಿಸಲಾಗುತ್ತದೆ.

ಕಂದು ಶೈವಲಗಳಿಂದ ‘ಆಲ್ಜಿನೆಟ್’ ಎಂಬ ಸಂಯುಕ್ತ ಪದಾರ್ಥವನ್ನುಹೊರತೆಗೆದು ‘ಜೆಲ್’ನಂತಹ ಅರೆಘನ ಪದಾರ್ಥಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ಬಗೆಯ ಜೆಲ್ ಅನ್ನು ಆಹಾರ ಕ್ಷೇತ್ರದಿಂದ ಮೊದಲ್ಗೊಂಡು ವೈದ್ಯಕೀಯ ಕ್ಷೇತ್ರದವರೆಗೂ ಅಪಾರ ಅನ್ವಯಿಕೆಗಳಲ್ಲಿ ಬಳಸಲಾಗುತ್ತದೆ.

ಹಲವಾರು ಶೈವಲಗಳಿಂದ ನಾರಿನಂಶವನ್ನು ಹೊರತೆಗೆದು, ಜೈವಿಕ ಪ್ಲಾಸ್ಟಿಕ್ ತಯಾರಿಯಲ್ಲಿ ಉಪಯೋಗಿಸಲಾಗುತ್ತದೆ. ಹೀಗೆ ತಯಾರಾದ ಜೈವಿಕ ಪ್ಲಾಸ್ಟಿಕ್ ಸುಲಭವಾಗಿ ಜೈವಿಕ ವಿಘಟನೆಯ ನಂತರ ಮಣ್ಣಿನಲ್ಲಿ ಬೆರೆತುಹೋಗುತ್ತದೆ; ಹಾಗಾಗಿ ಪರಿಸರಸ್ನೇಹಿ.

ನಾರಿನಂಶ ಹಾಗೂ ಅಪಾರ ಪ್ರಮಾಣದ ಪ್ರೋಟೀನ್ ಲಭ್ಯತೆಯಿಂದಾಗಿ ‘ಸ್ಪಿರುಲಿನಾ’, ‘ಕ್ಲಾಮಾಕ್’, ‘ನೋಸ್ಟಾಕ್’ನಂತಹ ಶೈವಲಗಳನ್ನು ರುಚಿಯಾದ ಆಹಾರ ತಯಾರಿಸಲು ಮತ್ತು ಪುಷ್ಟಿದಾಯಕ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ.

ಶಿಲಾವಲ್ಕಗಳು ಅಥವಾ ಕಲ್ಲುಹೂವುಗಳನ್ನು ಪರಂಪರಾಗತವಾಗಿ ಮಸಾಲೆ ಪದಾರ್ಥದ ರೂಪದಲ್ಲಿ ಬಳಸಲಾಗುತ್ತಿದೆ. ಅದು ಆಹಾರಕ್ಕೆ ವಿಶಿಷ್ಟ ಘಮ ಮತ್ತು ರುಚಿಯನ್ನು ಕೊಡಮಾಡುತ್ತದೆ ಎಂದು ಹಲವು ಶತಮಾನಗಳ ಕೆಳಗೇ ಆಹಾರಪ್ರೇಮಿಗಳು ಕಂಡುಕೊಂಡಿದ್ದಾರೆ.

‘ಸ್ತೈಕೊಕಾಕಸ್’ನಂತಹಾ ಶೈವಲಗಳನ್ನು ತ್ಯಾಜ್ಯ ನಿರ್ವಹಣೆಗಾಗಿ ಬಳಸಲಾಗುತ್ತದೆ. ಇವು ‘ಸಿಲಿಕೋನ್ ರೇಸಿನ್’ನಂತಹ ಕೃತಕ ಸಂಯುಕ್ತ ಪದಾರ್ಥಗಳನ್ನೂ ಜೀರ್ಣಿಸಿಕೊಂಡು ಅವುಗಳನ್ನು ಜೈವಿಕವಾಗಿ ವಿಘಟನೆಗೊಳಿಸುತ್ತದೆ.

ಬಹುಪಾಲು ಎಲ್ಲಾ ಬಗೆಯ ಶೈವಲಗಳನ್ನೂ ಅವುಗಳೊಳಗೆ ಇರುವ ವರ್ಣದ್ರವ್ಯಗಳನ್ನು ಪಡೆಯಲು ಬಳಸಿಕೊಳ್ಳಲಾಗುತ್ತದೆ. ಈ ವರ್ಣದ್ರವ್ಯಗಳನ್ನು ಬಳಸಿಕೊಂಡು ನೈಸರ್ಗಿಕ ಬಣ್ಣಗಳನ್ನು ತಯಾರಿಸಿ, ಈ ಬಣ್ಣಗಳನ್ನು ಹಲವಾರು ವಾಣಿಜ್ಯಿಕ ಅನ್ವಯಗಳಲ್ಲಿ ಬಳಸಲಾಗುತ್ತದೆ.

ಕ್ಲೋರೆಲ್ಲಾ, ಗ್ರಾಸಿಲ್ಲೆರಿಯಾ, ಸೈಕ್ಲೋತೆಲ್ಲಾದಂತಹ ಶೈವಲಗಳ ಪ್ರಭೇದಗಳನ್ನು ಬಳಸಿಕೊಂಡು ಜೈವಿಕ ಇಂಧನವನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಇದು ಪೆಟ್ರೋಲ್, ದೀಸೆಲ್ನಂತಹ ನವೀಕರಿಸಲಾಗದ ಇಂಧನಗಳ ಮೇಲಿನ ಒತ್ತಡವನ್ನು ಕಡಿತಗೊಳಿಸುತ್ತದೆ.

ಕಡಲ ಕಳೆ ಮತ್ತು ಸ್ಪಿರುಲಿನಾದಂತಹ ನೀಲಿ-ಹಸಿರು ಶೈವಲಗಳನ್ನು ಜೈವಿಕ ಗೊಬ್ಬರವಾಗಿ, ಮಣ್ಣಿನ ಸಾರವನ್ನು ಹೆಚ್ಚಿಸುವ ಸಾಧನದ ರೊಪದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

‘ಡಯಾಟಮ್’ಗಳ ಹೊರಕವಚವನ್ನು ಅಪಘರ್ಶಕವಾಗಿ ದಂತಮಾರ್ಜಕಗಳಲ್ಲಿ, ಕೀಟನಾಶಕಗಳಲ್ಲಿ, ನೀರಿನ ಶೋಧಕಗಳಲ್ಲಿ ಮತ್ತು ಹಲವಾರು ಅಲಂಕಾರಿಕ ವಸ್ತುಗಳಲ್ಲಿ ಬಳಸಲಾಗುತ್ತದೆ.

ಶೈವಲಗಳ ಉಪಯೋಗಗಳ ಯಾದಿ ದೊಡ್ಡದಿದೆ; ಇಂತಹ ಅತ್ಯುಪಯುಕ್ತ ಶೈವಲಗಳ ಬಗ್ಗೆ ಕೊಂಚ ಗಮನ ಹರಿಸಿ, ಅವುಗಳನ್ನು ಕೇವಲ ಪಾಚಿ ಎಂಬಂತೆ ನೋಡದೇ, ಅವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ, ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿರುವುದು ತಾರ್ಕಿಕ ಬುದ್ಧಿಮತ್ತೆಯನ್ನುಳ್ಳ ಮಾನವ ಪ್ರಾಣಿಯ ಕರ್ತವ್ಯ.

– ಕ್ಷಮಾ ವಿ ಭಾನುಪ್ರಕಾಶ್