ನುಗ್ಗು ಎದೆಯೊಳಸುಳಿಯ ತಳದಾಳಕೆ
ನೋವಿನಕ್ಷಯ ಪಾತ್ರೆಯೊಡಲಾಳಕೆ
ಬಿಡು ಒಳಗೆ ಬಿಡು ಒಳಗೆ
ಪಾತಾಳ ಗರುಡ
ಅದೊ ನೋಡ ನೋಡ.

ಯಾರು ಯಾರೋ ಸೇರಿ ಇರಿದ ಚೂರಿಯ ತುಣುಕು
ಅಣಕು ಮಿಣುಕು !
ನೂರಾನೆ ಕಾಲುಗಳು ನುಗ್ಗುನುರಿ ಮಾಡಿರುವ
ಬಿಂದಿಗೆಯ ಸರಕು !
ಎದೆಯ ಮಿದುವಾಸಿನಲಿ ಕಾವು ಪಡೆಯುತಲಿದ್ದ
ಮೊಟ್ಟೆಗಳ ಹೋಳು !
ಮುಗಿಲೊಳಾಡಿದ ಹಲವು ಪಾರಿವಾಳದ ರೆಕ್ಕೆ
ನೂರು ಸೀಳು !

ಹಲವು ಬಾಗಿಲೊಳಲೆದು ತಿರಿದು ತುಂಬಿದ ಪಾತ್ರೆ-
ಯೊಡಕು ರಾಶಿ,
ಅಯ್ಯೋ ಪರದೇಶಿ !
ನೂರು ಚೆಲುವೆಯ ಮೊಗವ ತನ್ನ ಎದೆಯೊಳು ಹಿಡಿದ
ಕನ್ನಡಿಯ ಚೂರು
ಬರಿ ಕೆಸರು ಕೆಸರು !
ಎನಿತೊ ಬೆಳಕನು ಹಿಡಿದು ಕಡೆದಿಟ್ಟ ವಿಗ್ರಹದ
ಭಗ್ನಾವಶೇಷ
ಮತ್ತೇನ್ ವಿಶೇಷ ?…..
ಇನ್ನು ಏನೇನಿಹುದೊ ! ಇರಲಿ ಬಿಡು ತೆಗೆದೆದೆಯ
ಕಲಕಬೇಡ,
ಹಳೆಯ ನೆನಪಿನ ಕೊಳವ ಕದಡಬೇಡ.