[ಕುರುಕ್ಷೇತ್ರ ಶ್ಮಶಾನ. ಎಲ್ಲಿಯೂ ನೀರವತೆ , ಕತ್ತಲು ಕವಿದಿದೆ. ಪೋಂಜುಗಳ ಬೆಳಕಿಲ್ಲ; ಸುಳಿದಾಡುವ ಮನುಷ್ಯಕೃತಿಗಳಿಲ್ಲ. ಎಲ್ಲ ಬಟ್ಟಬಯಲಾಗಿದೆ. ಆಕಾಶದ ಅನಂತ ನೀಲಪಟದಲ್ಲಿ ಖಚಿತವಾದ ಸಾವಿರಾರು ನಕ್ಷತ್ರಗಳ ಮಂದಕಾಂತಿ ನಸುಹಬ್ಬಿ ಘೋರ ದೃಶ್ಯವನ್ನು ಗೋರತರವಾಗಿ ಮಾಡಿದೆ. ಮಸಣದ ನಡುವೆ ಪಕ್ಕ ಪಕ್ಕದಲ್ಲಿ ಎರಡು ಭಸ್ಮರಾಶಿಗಳಿವೆ.. ಒಂದು ಪಾಂದವಪಕ್ಷ ವಿನಾಶದ ಪ್ರತಿನಿಧಿ; ಇನ್ನೊಂದು ಕೌರವಪಕ್ಷ ವಿನಾಶದ ಪ್ರತಿನಿಧಿ. ಒಂದೊಂದು ಭಸ್ಮ ಪರ್ವತದ ಮೇಲೆ ಒಂದೊಂದು ಕಾಲಿಟ್ಟುಕೊಂಡು ರುದ್ರಲಯಮೂರ್ತಿಯಾದ ಮಹಾದೇವನು ಉನ್ಮತ್ತನಾಗಿ ಭೀಮಾಕಾರನಾಗಿ ನಿಂತಿದ್ದಾನೆ. ಮುಡಿಗೆದರಿಹೋಗಿದೆ. ಕೊರಳಿನಲ್ಲಿರುವ ಹಾವುಗಳು ಭಯದಿಂದ ಹದುಗಿಕೊಂಡಿವೆ. ಹುಲಿದೊಗಲನ್ನು ತೊಟ್ಟಿದ್ದಾನೆ. ತ್ರಿಶೂಲಧಾರಿಯಾಗಿದ್ದಾನೆ. ಬೂದಿಯ ರಾಶಿಗಳಿಂದ ಆಗಾಗ ಬೂದಿ ತೆಗೆದುಕೊಂಡು ಬಳಿದುಕೊಳ್ಳುತ್ತಾನೆ. ಒಂದೊಂದು ಸಾರಿ ಬಳಿದುಕೊಳ್ಳುವಾಗಲೂ ಮಹಾಭಾರತದ ಒಬ್ಬೊಬ್ಬ ವೀರಪುರುಷನ ಹೆಸರನ್ನು ಕೂಗುತ್ತಾನೆ. ನಡುನಡುವೆ ಹುಚ್ಚನಂತೆ ಗಹಗಹಿಸಿ ಕೇಕೆ ಹಾಕಿ ನಗುತ್ತಾನೆ. ಎಲ್ಲೆಲ್ಲಿಯೂ ನಿಃಶಬ್ದ; ಭೀಷಣವಾಗಿದೆ. ಭೀಕರವಾಗಿದೆ; ಗಭೀರವಾಗಿದೆ; ರುದ್ರವಾಗಿದೆ.]

ರುದ್ರ — ದುರ್ಯ್ಯೋಧನನ್, ಭೀಷ್ಮನ್, ದ್ರೋಣನ್, ಕರ್ಣನ್. ಅಭಿಮನ್ಯು. ಘಟೋತ್ಕಚನ್, ಬೀಮನ್, ಅರ್ಜುನನ್, ದ್ರೌಪದಿ. ಯುಧಿಷ್ಠಿರನ್, ಕೃಷ್ಣನ್!

(ಮುಸುಗು ಹಾಕಿಕೊಂಡಿರುವ ಅಸ್ಪಷ್ಟ ಆಕಾರಗಾಳು ಕತ್ತಲಲ್ಲಿ ಪಂಕ್ತಿ ಪಂಕ್ತಿಯಾಗಿ ಬರುತ್ತವೆ. ಅವರಲ್ಲಿ ಗಂಡಸರು, ಹೆಂಗಸರು, ಮಕ್ಕಳು, ವಿಧವೆಯರು, ವೀರರು ಎಲ್ಲ ಇದ್ದಾರೆ. ಅವರೆಲ್ಲ ಮಡಿದ ಪಾಂಡವ ಕೌರವ ಪಕ್ಷದವರ ಬಂಧುಗಳು. ಕೌರವ ಪಕ್ಷದವರು ಒಂದು ಸಾಲಾಗಿ ಮಹಾರುದ್ರನ ಎಡದಿಂದ ಬಲಕ್ಕೆ ಹೋಗಿ ಮರೆಯಾಗುತ್ತಾರೆ. ಪಾಂಡವ ಪಕ್ಷದವರು ಇನ್ನೊಂದು ಸಾಲಾಗಿ ಬಲದಿಂದ ಎಡಕ್ಕೆ ಹೋಗಿ ಮರೆಯಾಗುತ್ತಾರೆ. ಮಹಾದೇವನು ಎಲ್ಲವನ್ನೂ ದುರುದುರನೆ ನೋಡುತ್ತಾ ನಿಂತಿದ್ದು ಪುನಃ ಪ್ರಾರಂಭಿಸುತ್ತಾನೆ. ಆತನ ಧ್ವನಿ ದೂರದ ಗುಡುಗಿನಂತೆ ಗಂಭೀರವಾಗಿ ಮೊಳಗುತ್ತವೆ; ಶ್ಮಶಾನ ಮೌನವನ್ನು ತೂಗಿ ಮಲಗಿಸುವ ಜೋಗುಳದಂತಿದೆ.)

ಎಲ್ಲ ದಾನಗಳು, ಎಲ್ಲ ಧರ್ಮಗಳು,
ಕಡೆಗಿಲ್ಲಿಗೇ — ಎನ್ನ ಬಳಿಗೆ!
ಎಲ ಪಾಪಗಳು, ಎಲ್ಲ ಪುಣ್ಯಗಳು,
ಕಡೆಗೊಂದು ನಗೆಗೇ — ಭಸ್ಮಮೆನಗೆ!
ನಕ್ಷತ್ರಖಚಿತಮೀ ನಭೋವಿತಾನಂ,
ಸಸ್ಯಶೋಭಿತಮಿ ಹಿರಿಯ ಭೂಮಿ,
ಮೊರೆದು ಭೋರಿಡುವ ಎಲ್ಲೆ ಕಾಣದಿಹ
ಕಡಲ ಹಬ್ಬುಗೆಯು — ಕಡೆಗಿಲ್ಲಿಗೇ!
 — ಕಡೆಗಿಲ್ಲಿಗೇ! — ಕಡೆಗಿಲ್ಲಿಗೇ!
ಕಾಲ ದೇಶಗಳು, ಜನನ ಮರಣಗಳು,
ಜೀವಕೋಟಿಗಳು. — ಮಸಣದೆಡೆಗೇ!
— ಮಸಣದೆಡೆಗೇ! ಕಟ್ಟ ಕಡೆಗೇ!
ಎನ್ನ ಹುಚ್ಚಿನಿಂದುದಿಸಿದೀ ಸೃಷ್ಟಿ
ಕಡೆಗೆ ತುತ್ತಾಗುವುದು — ಎನ್ನ ಹುಚ್ಚಿಗೇ!
— ಎನ್ನ ಹುಚ್ಚಿಗೇ! ಎನ್ನ ಹುಚ್ಚಿಗೇ!
ಇದೆ ಜಗದ ಮೊತ್ತ ಮೊದಲಿದೆ ಜಗದ ತುತ್ತತುದಿ,
ಇದೆ ಜಗದ ಕಟ್ಟಕಡೆ ನೆಚ್ಚಿಗೇ!
— ಕಡೆ ನೆಚ್ಚಿಗೇ! ಕಡೆ ನೆಚ್ಚಿಗೇ!
(ರುದ್ರನು ದೃಷ್ಟಿಜ್ವಾಲೆಯನ್ನು ಬೀರಿ ದ್ಯಾನಮಗ್ನನಾಗುತ್ತಾನೆ. ಶ್ರೀಕೃಷ್ಣನು ಮೆಲ್ಲಗೆ ಹೆಜ್ಚೆಯಿಡುತ್ತ ಗಂಭೀರವಾಗಿ ಪ್ರವೇಶಿಸುತ್ತಾನೆ. ರುದ್ರನನ್ನು ನಟ್ಟ ನೋಟದಿಮದ ನೋಡಿ ಕರೆಯುತ್ತಾನೆ.)

ಕೃಷ್ಣ — ಮಹಾದೇವ!

ರುದ್ರ (ನಿಧಾನವಾಗಿ ಕಣ್ಣು ತೆರೆದು ಕೃಷ್ಣನನ್ನು ನೋಡಿ)
ವಾಸುದೇವ, ಬಂದೇಯೇನ್‌?

ಕೃಷ್ಣ — ಬಂದೆನಯ್‌, ಭಗವನ್. ನೀನೇನ್ ರುದ್ರನಾಟಕದ ಕೊನೆಯ ದೃಶ್ಯಾಭಿನಯದೊಳ್
ತಲ್ಲಿನನಾಗಿರ್ಪೆಯೈಸೆ!

ರುದ್ರ — ಅಹುದಹುದು, ಸೂತ್ರಧಾರ! (ನಸುನಕ್ಕು) ನಿನ್ನ ನಾಟಕಂ ನೇರಮಾದುದೇ?

ಕೃಷ್ಣ — ನಿನ್ನ ನೆರೆಮೊಂದಿರೆ ನೇರಮಾಗದೇನ್!

ರುದ್ರ — ರಸಿಕರ್ಗೆ ಗುರು ನೀನ್. ನಿನ್ನ ದೃಶ್ಯಕಾವ್ಯದ ಸೊಬಗಮಂ ಗಭೀರಮುಮಂ ಬಣ್ಣಿಸ
ಲರಿದು. — ಪೂರ್ಣಂ; ನವರಸ ಪರಿಪೂರ್ಣಂ!

ಕೃಷ್ಣ — ನಿನ್ನೊಂದಾವೇಶಮಿರೆ ಸಫಲಂ ರುದ್ರಕಾವ್ಯಂ!

ರುದ್ರ — ವಾಸುದೇವ, ಮುಂದಾವ ಕಾವ್ಯಮಂ ಕಟ್ಟುವಯ್?

ಕೃಷ್ಣ — ಕಲಿಯುಗ ಮಹಕಾವ್ಯಮನ್! ನಾಳೆಯೆ ಪೀಠಿಕಾ ದೃಶ್ಯಾರಂಭಂ; ಕಲಿಯುಗ
ಪ್ರಾರಂಭಂ!

ರುದ್ರ — ರಸಮೂರ್ತಿ, ನೋಡಲಾಟಿಪೆನ್ ಆ ಕಥಾಸಂವಿಧಾನಮನ್.

ಕೃಷ್ಣ — ತೋರ್ದಪೆನ್ ದಿವ್ಯದರ್ಶನಮನ್. ಕಾಣದೊ, ಮತ್ರ್ಪಣೇತಂ ಕಲಿಯುಗ
ಮಹಾಲಲಿತಕಾವ್ಯಂ.
(ಶ್ರೀ ಕೃಷ್ಣನು ಕೈ ತೋರುತ್ತಾನೆ. ಕಾಲದ ಪರದೆಗಳು ಒಂದೊಂದಾಗಿ ತೆರೆಯುತ್ತವೆ. ರುದ್ರನು ಪ್ರಸನ್ನನಾಗಿ ನೋಡುತ್ತಾನೆ.)

ರುದ್ರ — ವರ್ಣಿಸಯ್, ವಿಶ್ವಕವಿ, ಆ ಮಿಂಚುವ ದೃಶ್ಯಮಾಲೆಗಳನ್!

ಕೃಷ್ಣ — ಬಣ್ಣಿವೆನ್ ಮುಖ್ಯಮನ್:
ನೋಡದೋ ಭಾರತವರ್ಷಂ, ಉಪನಿಷದಾರಾಮಂ. . .
ಗೌತಮ ಬುದ್ಧನವನ್, ಮೌಢ್ಯನಿವಾರಕನ್!. . .
ಅಶೋಕನ್, ಚಕ್ರವರ್ತಿಶ್ರೇಷ್ಠನ್!. . .
ಏಷ್ಯಾಖಂಡಂ!. . . ಕ್ರಿಸ್ತನ್! ದೀನರಕ್ಷಕನ್. . .
ಯವನದೇಶಂ!. . . ಜ್ಞಾನಿಗಳವರ್!. . .
ರೋಮನ್ ಚಕ್ರಾಧಿಪತ್ಯಂ. . . ಐರೋಪ್ಯ ಖಂಡಂ. . .
ಆಂಗ್ಲೇಯ ದೇಶಂ!. . . ಯಂತ್ರಕೌಶಲಂ!. . . ಇದೋ,. . .
ಅರಬ್ಬೀಸ್ಥಾನಂ. . . ಮಹಮ್ಮದನ್. . . ಕೇರಳಂ. . .
ಅಚಾರ್ಯ ಶಂಕರನ್. . . ಮೇಧಾವಿ, ಸಿದ್ಧನ್!. . .
ಮೊಗಲ ಸಾಮ್ರಾಜ್ಯಂ. . . ಮಹಾರಾಷ್ಟ್ರಂ. . .
ಕನ್ನಡದೇಶಂ. . . ಕವಿರನ್ನನ್. . . ವಿಜಯನಗರಂ. . .
ಪಾಶ್ಚಾತ್ಯ ಘೋರ ಯದ್ಧಂ!. . . ರಷ್ಯಾದೇಶಂ!. . .
ವಿಪ್ಲವಂ. . . ಪ್ರಜಾಧಿಪತ್ಯಂ. . . ಚಕ್ರವರ್ತಿವಿನಾಶಂ. . .
ವಿಪ್ಲವಮತ ಪ್ರಚಾರಂ. . . ಚೀನಾದೇಶಂ. . .
ರಕ್ತಪ್ರವಾಹಂ. . . ಸಿಡಿಗುಂಡುಗಳಾಟಂ. . . ರೌದ್ರಂ!
ಪಿಶಿತಾಶಾಕ್ರಾಂತ ಭಾರತವರ್ಷಂ. . . ದಾರಿದ್ರ್ಯಂ. . .
ದೌರ್ಬಲ್ಯಂ. . . ಶ್ರೀರಾಮಕೃಷ್ಣ ಪರಮಹಂಸನ್!
(ರುದ್ರನೂ ಕೃಷ್ಣನೂ ನಮಸ್ಕಾರ ಮಾಡುತ್ತಾರೆ.)
ಸರ್ವಧರ್ಮ ಸಮನ್ವಯಾಚಾರ್ಯನ್. . . ವಿವೇಕಾನಂದನ್. . .
ಸ್ವಾತಂತ್ರ್ಯಸಂಗ್ರಾಮಂ. . . ಅಹಿಂಸಾವ್ರತಂ. . .
ಮಹಾತ್ಮನ್. . . ಸತ್ಯಾಗ್ರಹಂ!. . . ಅತ್ಯಾಚಾರಂ!!. . . !
ದೌರಾತ್ಮ್ಯಂ!!
(ರುದ್ರನು ಶೂಲವೆತ್ತುತ್ತಾನೆ)
ತಾಳ್ಮೆ, ತಾಳ್ಮೆ, ಓ ರುದ್ರ. ಕೆಡಿಸದಿರ್ ಕಾವ್ಯಮನ್. . .
ಮುಂಗಾಣಯ್. . . ಸಾರ್ವಭೌಮತ್ವ ಭಂಗಂ. . .
ಸ್ವತಂತ್ರ ಭಾರತರಂಗಂ. . . ಸರ್ವಪ್ರಜಾಧಿಪತ್ಯಂ. . .
ಸರ್ವಸಮತ್ವಂ. . . ಜಗತ್‌ಕಲ್ಯಾಣಂ. . .
ಭೂವೈಕುಂಠಂ. . . ನೋಡದೋ:. . .
ದೂರದೊಳ್, ಬಹುದೂರದೊಳ್, ಕಾಲಗರ್ಭದೊಳ್. . .
ಸಾಮಾನ್ಯ ಮಾನವ ಸಂಸಾರಂ. . . ಸತಿಪತಿಗಳ ಶ್ರಂಗಾರಂ.
ಮಕ್ಕಳಾಟಂ, ನೋಟಂ, ಕಾವ್ಯಂ,
ಸುಮಧುರಂ. . . ದಿವ್ಯಂ. . . ಸುಶ್ರಾವ್ಯಂ!

(ಇದ್ದಕ್ಕಿದ್ದಹಾಗೆ ದೃಶ್ಯ ಮಾಯಾವಾಗಿ. ಕವಿದಿದ್ದ ಕತ್ತಲೆ ಇನ್ನೂ ದಟ್ಟವಾಗಿ ಫಕ್ಕನೆ ಅತ್ಯಂತ ಕಾಂತಿಯುಕ್ತವಾಗುತ್ತದೆ. ಮಾಯವಾದ ಕೃಷ್ಣ ರುದ್ರರ ಸಮ್ಮಿಳಿತ ಅಟ್ಟಹಾಸ ಗಗನದ ಸುನೀಲ ಶೂನ್ಯದಿಂದ ತರಂಗ ತರಂಗವಾಗಿ ಕೇಳಿಬರುತ್ತದೆ. ಕಾಂತಿ ಮತ್ತೂ ಹೆಚ್ಚುತ್ತದೆ. ಲಯಮೂರ್ತಿಯಾದ ರುದ್ರನ ನಗೆಯೊಂದಿಗೆ ಸೃಷ್ಟಿ ಮೂರ್ತಿಯಾದ ಶ್ರೀಕೃಷ್ಣನ ನಗೆ ಲಗ್ನವಾಗಿ, ಮಹಾ ಜಗದ್ವ್ಯಕ್ತಿಗಳ ಸುಮಧುರ ವಿಕಟಾಟ್ಟಹಾಸ ಮಾಯವಾದ ಶ್ಮಶಾನ ಮೌನದ ಗರ್ಭದಿಂದ ಗಭೀರವಾಗಿ ಹೊರಹೊಮ್ಮಿ ವಿಶ್ವವ್ಯಾಪಿಯಾಗುತ್ತದೆ.)