[ಕುರುಕ್ಷೇತ್ರ ಶ್ಮಶಾನದ ಒಂದು ಭಾಗದಲ್ಲಿ ಪಾಂಡವ ಪಕ್ಷದವರ ಚಿತೆ. ಭೀಮ, ಅರ್ಜುನ, ಧರ್ಮರಾಯ, ದ್ರೌಪದಿ ಎಲ್ಲರೂ ಶೋಕ ವಿಹ್ವಲರಾಗಿ ನಿಂತಿದ್ದಾರೆ. ಸೂಡಿನ ಮೇಳೆ ಅಭಿಮನ್ಯು ಘಟೋತ್ಕಚರೇ ಮೊದಲಾದವರ ಶವಗಳಿವೆ. ಇದುವರೆಗೂ ಕಲ್ಮನಸ್ಸಿನಿಂದಿದ್ದ ಭೀಮನಿಗೆ ಇಂದು ಸೂಡಿನ ಮೆಲಿದ್ದ ಘಟೋತ್ಕಚನ ಶವವನ್ನು ನೋಡಿ ಮರುಕ ಮಿತಿಮೀರಿಹೋಗಿದೆ. ಆಸ್ಪಷ್ಟರೋದನ ಧ್ವನಿ ಎಲ್ಲೆಲ್ಲಿಯೂ ವ್ಯಾಪಿಸಿದೆ.]

ಧರ್ಮರಾಯ — ಭೀಮಸೇನ, ಮೊದಲ್ಗಯ್ದ ಕಜ್ಜಮಂ ಗೊನೆಗಾಣ್ಚು.
ಆದುದಾಯಿತು; ಚಿಂತೆಯಿಂದೇನ್? ಸೂಡಿಂಗೆ
ಬೆಂಕಿಯಿಡು. (ಭೀಮನು ಗೋಳಿಡುತ್ತಾನೆ.)
ನೀನಿಂತು ಗೋಳಾಡಿದೊಡೆ, ಭೀಮ,
ಉಳಿದರು ಸಂತಯ್ಪರಾರ್?

ಭೀಮ — ಅಣ್ಣಾ,
ಕೊಲೆಗಾರನ್ ಆನ್ ಎಂಬುದನ್ ಈಗಳರಿತೆನ್,
ಈ ಎನ್ನ ಮುದ್ದು ಶಿಶುಗಳ ಪೆಣಗಳೆಡೆ ನಿಂತು
ಗಾಂಧಾರಿ ಧೃತರಾಷ್ಟ್ರರಳಲಾಳಮಂ ತಿಳಿದೆನ್.
(ಅರ್ಜುನ ಮೊದಲಾದವರು ಅವನೊಡನೆ ರೋದಿಸುತ್ತಾರೆ)

ಧರ್ಮರಾಯ (ಸ್ವಗತ) ಬೀರರಾದೊಡಮೇನ್? ಸ್ಥಿತಪ್ರಜ್ಞರಲ್ಲದೀ
ಮಾನವರ್ ಕೋಪಮನೆ ಕೆಚ್ಚೆಂದು ಭ್ರಮಿಸುವರ್.
ಕೋಪಂ ಬತ್ತಲೊಡನೆ ಕೆಚ್ಚುಂ ಕರಗುವುದು.
ಕೋಪಮೆಂಬಾ ಮಧ್ಯಪಾನಮಿಲ್ಲದೆ ಇವರ್
ಕೊಲೆಗೆ ಕೈಯಿಡಲರಿದು! — ಚೆತೆಗೆ ನಾನೇ
ಬೆಂಕಿಯಿಡುವೆನ್. (ಬೆಂಕಿ ಇಡಲು ಹೋಗಿ ನಿಲ್ಲುತ್ತಾನೆ.
ಅದಾರಲ್ಲಿ ಬರ್ಪವರ್?
ಮಾತೆ ಕುಂತಿದೇವಿ! ಸೋದರನ್ ಸಹದೇವನ್!
ಆರನೋ ಪೊತ್ತು ತಂದಪರಲ್ತೆ?
(ಕುಂತಿ ಸಹದೇವರು ಕರ್ಣನನ್ನು ತರುತ್ತಾರೆ. ಎಲ್ಲರೂ ಕಡೆ ತಿರುಗಿ ನಿಲ್ಲುತ್ತಾರೆ. ಭೀಮನು ಮರುಕವನ್ನು ತೆಗೆದೊಗೆದು ನಿಂತು ಹುಬ್ಬು ಗಂಟಿಕ್ಕಿಕೊಂಡು ದುರುದುರನೆ ಕರ್ಣನ ಶವವನ್ನು ನೋಡುತ್ತಾನೆ.)

ಧರ್ಮರಾಯ — ಸಹದೇವ, ಇದೇನಯ್?

ಕುಂತಿ — ಓ ಮಗೂ, ಯುದಿಷ್ಠಿರಾ, ಕರ್ಣನನ್ ಇದರೊಳೇ
ದಹನಂ ಗೈವಂತೆನಗೆ ಕೃಪೆಮಾಡೈ.

ಧರ್ಮರಾಯ — ತಾಯೆ,
ಸುಡುವ ಬೆಂಕೆಗೆ ಕರುಣೆಯಿಲ್ಲ, ಕರುಬಿಲ್ಲ.
ಆದೊಡಂ, ಇದರರ್ಥಮೇನ್? ತಿಳಿಯಲೆಳಸುವೆನ್.

ಕುಂತಿ — ಕಂದಾ, ನಾನಾವುದುಮಂ ಪೇಳಲಾರೆನ್;
ಎನ್ನಾಸೆಯಂ ನೀನ್ ನಡೆಸಿಕೊಡವೇಳ್ಕುಂ.

ಭೀಮ (ರೋಷದಿಂದ)
ಏಂ ಮಾಳ್ಕೆಯಿದು, ತಾಯೆ? ಎಮ್ಮ ಕುಲಘಾತುಕನ್
ಈತನನ್ ನಾವುರಿಪುವುದೆ? ನೋಡು, ನೋಡಿದನ್:
ಇವನೆ ಕೊಲೆಗೈದಿರ್ಪ ಅಭಿಮನ್ಯು ಘಟೋತ್ಕಚರ್.
(ಕಣ್ಣು ಅರಳಿಸಿ ಸಹದೇವನನ್ನು ನೋಡಿ)
ಸಹದೇವ, ಇದೇನನ್ ನೀನೆಸಗಿರ್ಪೆ! ತೊಲಗಿಸಿಲ್ಲಿಂ
ಈ ಮಿಗದ ಪೆಣಮಂ ! (ಕುಂತಿ ಆಳುತ್ತಾಳೆ.)
ಧರ್ಮಜಾ, ರೋದನಕೆ
ನೀನಳುಕಿದೊಡೆ ವಿಲಯಮಹುದಿಂದೆ!

ಅರ್ಜುನ — ಅಣ್ಣಾ,
ಅಭಿಮನ್ಯುವನ್ ಬೇಳ್ವ ಬೆಂಕೆ ಕರ್ಣನನ್
ಸುಡಲಾಗದು. — ಈ ಕರ್ಣನಿವನಾರ್ ನಮಗೆ?

ಭೀಮ — ಪಗೆಯ ಕೆಳೆ! ಅಭಿಮನ್ಯುವನ್ ಘಟೋತ್ಕಚನನ್
ಮೋಸದಿಂದಿರಿದವನ್!

ಕುಂತಿ (ಮರುಗಿ)  ಓ ಭೀಮ, ಓ ಆರ್ಜುನ,
ಓ ಎನ್ನ ಕಂದಗಳಿರಾ, ಕೈಮುಗಿದು ಬೇಡುವೆನ್,
ಸೆರಗೊಡ್ಡಿ ಬೇಡುವೆನ್ ಎನ್ನಾಸೆಯಂ ಸಲಿಸಿಂ!
ನಾನ್ ನಿಮಗೆ ತಾಯಿ ಅಹುದಾದೊಡೆ

ಭೀಮ — ತಾಯೆಂದೆ
ತಿಳಿದಿಂತು ಪೇಳ್ದಪೆನ್.

ಕುಂತಿ — ನಾನ್ ನಿಮಗೆ ತಾಯಲ್ತು;
ಮೇಣಿವಂಗೆ ತಾಯೆಂದು ತಿಳಿದೆನ್ನ ಬಯಕೆಯಂ
ದಕ್ಯಾಯಿಂ. ವಾದಿಸದಿರಿಂ, ಓ ನನ್ನ ಪುತ್ರರಿರಾ!
(ಅಶ್ವತ್ಥಾಮನು ಬರುತ್ತಾನೆ.)

ಅಶ್ವತ್ಥಾಮ — ಓ ಧರ್ಮಪುತ್ರಾ,
ವೀರನೊರ್ವನ ಕಟ್ಟಕಡೆ ಬಯಕೆಯಂ ಸಲಿಸೆ
ಇಲ್ಲಿಗೈತಂದಿಹೆನ್. ವೀರರಾಗಿಹ ನೀವು
ಎನಗೆ ನೆರವಾಗದಂ ನೆರವೇರಿಸಲೆವೇಳ್ಕುಂ.
ಕೌರವೇಂದ್ರನ್ ಮಡಿವ ಮೊದಲೆನ್ನನ್ ಕರೆದು
ಕರ್ಣನನ್ ತನ್ನೊಡನೆ ಸೂಡುಗೈಯಲ್ ಬಸಸಿ
ಪೋದನ್. ಪೋದವರ ಬಯಕೆಯಂ ಇರ್ಪವರ್
ಕೈಗೂಡಿಪುದೆ ಧರ್ಮಂ!

ಭೀಮ — ಅಶ್ವತ್ಥಾಮ, ಕರ್ಣನನ್
ಕೊಂಡುಪೋಗಯ್, ನೀನಿವಂಗೆ ಸಂಸ್ಕಾರಂ
ಎಸಗುವುದೆ ಧರ್ಮಂ!

ಕುಂತಿ — ಓ ಅಶ್ವತ್ಥಾಮ,
ಕರ್ಣನನ್ ಈ ಎಮ್ಮ ಚಿತೆಯೊಳೇ ದಹಿಪುದಯ್
ಎನ್ನಾಸೆ. ಆ ಬಯಕೆಗಡ್ಡ ಬರಬೇಡಯ್ , ತಂದೆ.

ಅಶ್ವತ್ಥಾಮ — ದೇವಿ, ಕೌರವನಾಶೆ! ಮೇಣೆನ್ನ ಬಾಸೆ!
ಕೈಮುಗಿದು ಕೇಳ್ವೆನ್; ಬೀಳ್ಕೊಡಿಂ ಕರ್ಣನನ್.

ಭೀಮ — ತಡಮೇನ್? ಕೊಂಡುಪೋಗಯ್, ಅಶ್ವತ್ಥಾಮ!

ಕುಂತಿ (ಭೀಮನ ಕಡೆ ತಿರುಗಿ ಹೇಳುತ್ತಾಳೆ.)
ಓ ಭೀಮ,
ತಾಯಿಗೋಸುಗಮಾದೊಡಂ ಕರಗಲಾರೆಯೇನ್?
ಬೆಂದೊಡಲ್ಗಿಂತು ಕರ್ಬ್ಬುನಂ ಚುರ್ಚುವರೇನ್?
(ಆಶ್ವತ್ಥಾಮನು ಕರ್ಣನನ್ನು ಕೊಂಡುಹೋಗುತ್ತಾನೆ. ಕುಂತಿ ತಿರುಗಿ ನೋಡಿ
ಬಿದ್ದು ಗೋಳಾಡುತ್ತಾಳೆ.)
ಓ ಕಂದಾ, ಓ ಕರ್ಣಾ, ನಿನ್ನನಿದಕಾಗಿಯೇ
ಪೆತ್ತೆನೇನ್? ಸುಮ್ಮನಿರ್ದಪೆ ಏಕೆ, ಓ ಸಹದೇವ?

ಧರ್ಮರಾಯ — ಇದೇನಿದು ಸಹದೇವ? ತಾತಿ ಕರ್ಣನನ್
ಪಡೆದೆನ್ ಎಂದಳಲ್ವಳಲ್ಲಾ!

ಸಹದೇವ — ಮನ್ನಿಸೆನ್ನನ್, ಅಣ್ಣಾ;
ತಾಯಿಯೊಡಲೊಳೆ ಬಂದ ರಾಧೇಯನೆಮಗೆಲ್ಲ
ಪಿರಿಯಣ್ನನ್!

ಧರ್ಮರಾಯ (ಸಿಡಿಲೆರಗಿದವನಂತೆ) ಏನನ್ ಪೇಳ್ದಯ್?

ಭೀಮ — ಪುಸಿಯಾಡದಿರ್!

ಅರ್ಜುನ — ಅಯ್ಯೋ ಏನಾದುದು ಕಡೆಗೆ?

ಸಹದೇವ — ವಿವರಂ ಅನಂತರಂ. ನಾನ್ ಪೇಳ್ದುದದು ದಿಟಂ!

ಕುಂತಿ — ಓ ಎನ್ನ ಕಂದಾ, ಓ ಕರ್ಣಾ,
ಈಗಳಿವರೆಲ್ಲರುಂ ನಿನ್ನವರೆ. ನಾನೆ,
ಪಾಪಿ ಪರಕೀಯಳಾದೆನಲ್ತೆ?
ಲೋಕಮಿವರಾರನುಂ ನಿಂದಿಸದು, ಎನ್ನನೋ,
ಮಗನ ಕೊಲೆಯಂಗೈದ ಕಡುಪಾಪಿ ಎಂದು
ಪೇಸುವುದು! (ಅಳುತ್ತಾಳೆ.)

ಧರ್ಮರಾಯ — ತಾಯೇ, ಏನನೆಸಗಿರ್ಪೆ ನೀನ್?

ಅರ್ಜುನ — ಓ ಕೃಷ್ಣಾ, ಪುಸಿವೇಳ್ದು ಕೊಲಿಸಿದೆಯಾ!

ಭೀಮ — ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ!
(ದೃಶ್ಯ ಮಾಯವಾಗುತ್ತದೆ.)