[ವೈಶಂಪಾಯನ ಸರೋವರದ ತೀರ. ಕತ್ತಲೆ ಕವಿದುಕೊಂಡಿದೆ. ಮೇಲೆ ವಿಶಾಲವಾಗಿ ಹಬ್ಬಿರುವ ನೀಲಿಮಾ ವಿತಾನದಂತೆ ತೋರುವ ದ್ವಾಪರಯುಗದ ಆಕಾಶವು ದ್ವಾಪರಯುಗದ ನಕ್ಷತ್ರಗಳಿಂದ ಖಚಿತವಾಗಿದೆ. ಸರೋವರದ ಸುತ್ತ ಕೆಲವು ದಿಕ್ಕುಗಳಲ್ಲಿ ಕುರುಕ್ಷೇತ್ರ ಶ್ಮಶಾನದ ಕರಾಳ ದೃಶ್ಯವಿದೆ. ಸರೋವರದ ತೀರದಲ್ಲಿ ಕೌರವೇಂದ್ರನು ಊರುಭಂಗ ಕಿರೀಟಭಂಗವಾಗಿ ನೋವಿಗೂ ಅವಮಾನಕ್ಕೂ ವಿಷಾದಿಸುತ್ತ ಬಿದ್ದಿದ್ದಾನೆ. ಅಷ್ಟಾದಶಾಕ್ಷೋಹಿಣೀ ಪತಿಯೂ ಚಕ್ರವರ್ತಿಯೂ ಆದ ಆತನು ಅಲ್ಲಿ ದೇಸಿಗನಂತೆ ಹೊರಳುತ್ತಿದ್ದಾನೆ. ಆತನೆದುರು ಇದ್ದರೂ ಇಲ್ಲದವನಂತೆ ಅಶ್ವತ್ಥಾಮನು ಗಗನದೆಡೆಗೆ ನೋಡುತ್ತ ನಿಷ್ಪಂದನಾಗಿ ಕಂಬನಿದುಂಬಿ ನಿಂತಿದ್ದಾನೆ.]

ಕೌರವ (ವಿಷಾದಿಂದಲೂ ನಿರಾಶೆಯಿಂದಲೂ)
ಪೋಗು, ನಡೆ, ಅಶ್ವತ್ಥಾಮ! ಅರಿರ್ದೊಡೇಗೈವರ್?
ತನಗೆ ತಾನಲ್ಲದಾರಾಗುವರ್ ಆಳ್ಗೆ?
ನಡೆ, ಪೂಗು; ಒಂಟಿಯಾಗೈತಂದವನ್‌ ನಾನ್‌
ಒಂಟಿಯಾಗಿಲ್ಲಿಂದೆ ತೆರಳ್ದಪೆನ್. ನಡೆ. ಪೂಗು!
(ಅಶ್ವತ್ಥಾಮನು ಮಾತಾಡದೆ ಕೌರವನಿಗೆ ಕೈಮುಗಿದು ನಿಧಾನವಾಗಿ ಹೋಗಿ ಮರೆಯಾಗುತ್ತಾನೆ. ಕೌರವನು ಮರಳಿ ಏನನ್ನೋ ಆಲೋಚಿಸಿ ಕರೆಯುತ್ತಾನೆ.)

ಕೌರವ — ಗುರುಪುತ್ರಾ! (ಅಶ್ವತ್ಥಾಮನು ಬಂದು)

ಅಶ್ವತ್ಥಾಮ — ಕೌರವೇಂದ್ರಾ, ಇದೋ ಬಂದೆನ್‌,
ಅರುಹು ಬೆಸನೇನಿಹುದು; ಮಾಳ್ಪೆನೆಲ್ಲಮನ್‌.
ತುತ್ತತುದಿಯಾಕಾಂಕ್ಷೆ ಏನಿರ್ದೊಡಂ ಪೇಳ್‌,
ಗುರಿ ತಪ್ಪದೆಸಗುವೆನ್‌!

ಕೌರವ — ಆಕಾಂಕ್ಷೆ! ಆಕಾಂಕ್ಷೆ!
ಸುಡುಗಾಡಿನಾಕಾಂಕ್ಷೆ! ಇದನೊಂದನಾದರುಂ,
ಮಕ್ಕಳಂ ಮರಿಗಳಂ ಪುಶುಗಳಂ ಪೆಣ್ಗಳಂ
ಕಳ್ತಲೊಳ್ ಪಾಂಡವರ್ ಗೆತ್ತು ಕತ್ತರಿಸಿದೊಲೆ,
ಬೆಮೆಗೊಳ್ಳದೆಸಗುವೆಯಾ?

ಅಶ್ವತ್ಥಾಮ — ಋಣಪಿಂಗಲೆಸಗುವೆನ್‌

ಕೌರವ (ಮರಗುವ ದನಿಯಿಂದ)
ಕರ್ಣನನ್ ಎನ್ನೊಡನೆ ಚಿತೆಯಲ್ಲಿ ಬೇಳ್ದಪೆಯಾ?
ನಾವಿರ್ವರೊಂದಾಗಿ ಭೂಮಿಯೊಳ್‌ ಬಾಳಿದೆವು;
ನಾವಿರ್ವರೊಂದಾಗಿ ಸಾಮ್ರಾಜ್ಯವಾಳಿದೆವು;
ಸೌಇನೊಳು ಇರ್ವರುಂ ಒಂದಾಗಿ ನಲಿಯುವೆವು.
ಸೂಡೊಳುಂ ನಾವಿರ್ವರೊಂದಾಗಲೆಳಸುವೆನ್‌!
ನಮ್ಮೀರ್ವರಾ ಬೂದಿ ಎರಡರಿಯುದಂತಿರ್ಕೆ!
ಇದೆನೊಂದನಾದರುಂ ಬೆಮೆಗೊಳ್ಳದೆಸಗುವೆಯಾ?

ಅಶ್ವತ್ಥಾಮ — ರಾಜಾಜ್ಞೆ, ಪೋಗಿ ಬರ್ಪೆನ್‌. (ಹೋಗುತ್ತಾನೆ.)

ಕೌರವ — ನಿಮ್ಮೆಲ್ಲರಂ ನಂಬಿ ಮೋಸವೋದೆನ್‌!
ಓ ಪಿತಾಮಹ ಭೀಷ್ಮ, ಓ ಗರುಡಿಯಾಚಾರ್ಯ,
ನೀಮೆಲ್ಲರೆನ್ನ ಕಡೆಯವರಲ್ತೆ?
ತನುವನೆನಗಿತ್ತು ಮನವನವರ್ಗಿತ್ತು
ಜೋಳದ ಪಾಳಿಗೋಸುಗಮೆ
ಎನ್ನ ಮೇಳಣಭಿಮಾನದಿಂದಲ್ತು, ನಾನ್‌ ಬಲ್ಲೆನದನ್‌
ಬರಿಯ ಜೋಳದ ಪಾಳಿಗೋಸುಗಮೆ
ಎನ್ನ ಪಕ್ಷದಿ ನಿಂತು ತೋರ್ಕೆಗೆ ಪೊಣರ್ದ್ಧಿರಲ್ತೆ?
ನೀಮೆಲ್ಲರೆರ್ದೆಮುಟ್ಟಿ, ಮನಮುಟ್ಟಿ, ಕಾದಿರ್ದೊಡೆ
ಎನಗಾಗುತಿರ್ದುದೇ ಈ ಪರಾಭವಂ,
ಈ ಅಪಮಾನಂ, ಈ ಊರುಭಂಗಂ?
ಪುಸಿನೆವಗಳೊದಗಲ್‌ ಒಡನೆಯೆ ಜಾರಿದಿರಿ!
ಧರ್ಮದ ಮುಸುಂಗಂ ತೊಟ್ಟು ಕೈತವಂ ತೊರಿದಿರಿ!
ಓ ಎನ್ನ ನಚ್ಚಿನ ಸೋದರ! ದುಶ್ಯಾಸನ
ಓ ಕಳೆಯಾ, ಓ ಕರ್ಣಾ — ಆರದು?

ದ್ವಾಪರ — ಚಕ್ರವರ್ತಿ!

ಕೌರವ (ವಿಕಟ ಹಾಸ್ಯದಿಂದ) ಆರಿವರ್ ‘ಚಕ್ರವರ್ತಿಯನ್‌’ ಕರೆಯುವರ್?

ದ್ವಾಪರ — ಕುರುಕುಲ ಸಾರ್ವಭೌಮ, ನಾನದೋ ದ್ವಾಪರನ್‌!

ಕೌರವ — ದ್ವಾಪರ ಮಹಾನುಭಾವ, ಅಸ್ಥಾನಮೆನಗಿಲ್ಲ ನಿನ್ನನ್‌ ಪೀಠದೊಳ್‌ ಕುಳ್ಳಿರಿಸೆ!
ಅದರಿಂದಂ ಕ್ಷಮಿಸು!

ದ್ವಾಪರ — ರಾಜೇಂದ್ರ, ಮಣಿಯದೆಯೆ ಬಾಳ್ವ ನರನೆರ್ದೆಯೆ ಮಹಾಸ್ಥಾನಂ. ಸ್ವಾತಂತ್ರ್ಯಮೇ ಸಾಮ್ರಾಜ್ಯಮಲ್ತೆ? ಸ್ವತಂತ್ರಿಗಿಂ ಮಿಗಿಲಪ್ಪ ಚಕ್ರವರ್ತಿಗಳಿನ್ನೊಳರೇ? ನೀನಾವಗಂ ಚಕ್ರವರ್ತಿ!

ಕೌರವ — ಯುಗಪುರಷ, ನೀನೈತಂದ ಕಜ್ಜಮೇನ್‌

ದ್ವಾಪರ — ಎನ್ನಾಳ್ಕೆ ಕೊನೆಗಂಡುದಿಂದಿಗೆ. ನಿನ್ನಾಣತಿಯಂ ಪಡೆದು ಬೀಳ್ಕೊಳೆ ಬಂದಿಹೆನ್‌.

ಕೌರವ — ಅದರ್ಕೆನ್ನನೇನ್‌ ಕೇಳ್ವುದು? ಪಾಂಡವರಿರ್ಪರ್! ಧರ್ಮರಾಯ ನಿರ್ಪನ್‌! ಆ ಕೃಷ್ಣನಿರ್ದಪನ್‌! ಈಗಳವರಲ್ತೆ ಚಕ್ರವರ್ತಿಗಳ್‌?

ದ್ವಾಪರ — ನೀನಿರ್ಪನ್ನೆವರಂ ಮಿಕ್ಕವರ್ ಸಾರ್ವಭೌಮರೆಂತಪ್ಪರ್? ಎನಗೆ ನೀನೆ ಸಾರ್ವಭೌಮಂ! ಎನಗೆ ನೀನೆ ಚಕ್ರವರ್ತಿ! ನೀನೆನಗನ್ನುಂ ಕೌರಮ ಕುಲೇಂದ್ರನ್‌! ಬೀಳ್ಕೊಳ್ಳುವನ್‌. ದಯಪಾಲಿಸಾಜ್ಞೆಯಂ. ಆಗಳೆಯೆ ಕಲಿಗಿತ್ತೆನಧಿಕಾರಮಂ. ಪೋಗಿ ಬರಲೇನ್‌?

ಕೌರವ — ಪೋಗಿಬಾ, ದ್ವಾಪರದೇವ. ಅನುಂ ಪೊಗಿ ಬರ್ಪೆನ್‌.

ದ್ವಾಪರ — ಅಂತಕ್ಕೆ; ನಾಮೀರ್ವರಿನ್ನೊಮ್ಮೆ ಸರುವಂ. (ಹೋಗುತ್ತಾನೆ.)

ಕೌರವ — ಅಂತಲ್ಲದಿನ್ನೇನ್‌?
ನಾಮೆಲ್ಲರುಂ ಮರಳಿ ಬರಲ್ಕೆಂದೆ ಪೋಪವರ್‌!
(ಸ್ವಲ್ಪಹೊತ್ತು ಮೌನವಾಗಿದ್ದು ಉದ್ರೇಕದಿಂದ)
ಧರ್ಮಂ! ಅಧರ್ಮಂ!
ಧರ್ಮಿಗಳಾರ್! ಅಧರ್ಮಿಗಳಾರ್?
ಆಹಾ, ಧರ್ಮಸಂಸ್ಥಾಪಕನಲ್ತೆ ಆ ಕೃಷ್ಣನ್‌!
ಧರ್ಮಕ್ಕೆ ಬೆಂಗೊಟ್ಟು ಪೊರೆದನಲ್ತೆ ಆ ಕೃಷ್ಣನ್‌?
ಆ ಬಡ ಗೋಪನ್‌!
ಆ ಪಚ್ಚಪಸಿಯ ತುರುಕಾರನ್‌?
ಅಸಂಸ್ಕೃತಂ, ಅನಾಗರಿಕನ್‌!
ಇರ್ಕೆ,
ನಾನಂತುಂ ಅರಗುಲಿ ಇರ್ಕೆ,
ಪಾಂಡವರೊ?
ಅದಾವ ಧರ್ಮಮಂ ಪಿಡಿದರ್?
ಮುದುಕನನ್‌ ಭೀಷ್ಮನಂ ಬೇಡಿ ಕೊಂದರ್;
ಒಳಸಂಚುಗಳಂ ನಡೆಸಿ ಕಡೆಗಾಣ್ಚಿದರ್!
ಎಮ್ಮೆಲ್ಲರ್ಗಮಾಚಾರ್ಯನ್‌, ಆ ದ್ರೋಣನನ್
ಛದ್ಮನೆಯಿಂದೆ ಪರಲೋಕಕಟ್ಟಿದರ್!
ಕರ್ಣನನ್ (ಮರುಗುತ್ತಾನೆ.)
ಆ ಎನ್ನ ನಚರಚಿನ ಕರ್ಣನನ್‌,
ಬರ್ದಿಲರುಂ ಪೂಜಿಸುವ ಆ ಸೂರ್ಯಪುತ್ರನನ್
ಕಂಡಂತೆ ಕಣ್ಣೆದುರೊಳೆ ಕೈತವದಿ ಕೊಂದರ್‌!
ಎನ್ನುಮಂ ಮಲ್ಲಗಾಳೆಗಕೆ ತಗದ ರೀತಿಯೊಳೆ
ತೊಡೆಯಂ ಪೊಯ್ದು ಕೆಡಪಿದರ್.
ಇವರೆಲ್ಲರುಂ ಧರ್ಮಿಗಳ್‌?
ನಾನೊರ್ವನ್‌ ಅಧರ್ಮಿ!
ಇದೆಲ್ಲಂ ಆ ಕೃಷ್ಣನ ಕುಹಕಂ!
ಕೈತವದ ಶಿಕ್ಷಾಗುರವಲ್ತೆ ಆತನ್‌? (ಕೋಪದಿಂದ)
ಎಲವೋ ಕೃಷ್ಣಾ! ಕುಷ್ಣಾ! ಕೃಷ್ಣಾ!
(ಕೃಷ್ಣನು ಫಕ್ಕನೆ ಪ್ರತ್ಯಕ್ಷನಾಗುತ್ತಾನೆ.)

ಕೃಷ್ಣ — ರಾಜೇಂದ್ರ, ಬಂದೆನಿದೊ!
(ಕೌರವನು ನಸು ತಲೆಯೆತ್ತಿ ನೋಡಿ, ಸಂಶಯ ದೃಷ್ಠಿಯನ್ನು ಬೀರಿ)

ಕೌರವ — ನೀನಾರಯ್‌?

ಕೃಷ್ಣ — ನೀನೀಗಳೆ ಕರೆದಾ ಕೃಷ್ಣನ್‌!
(ಕೌರವನ ಮುಖ ವಿಕಟ ಕರ್ಕಶವಾಗುತ್ತದೆ. ಔಡುಗಚ್ಚುತ್ತಾನೆ. ಬುಸುಗುಟ್ಟುತ್ತಾನೆ. ಸರ್ಪ ಹೆಡೆಯೆತ್ತುವಂತೆ ಅರ್ಧಮೇಲೆದ್ದು ಕೈಮೇಲೆ ಒರಗುತ್ತಾನೆ.)

ಕೌರವ — ಆರೊ ಕರೆದರ್‌ ನಿನ್ನನ್‌? ಎನ್ನೀ ಕೀಳ್ದೆಸೆಯಂ ಕಂಡು ನಗಲ್ಕೆಂದೈತಂದೆಯೇಂ?

ಕೃಷ್ಣ(ಮುಗುಳ್ನಗೆಯಿಂದ) ಕೌರವೇಂದ್ರಾ, ನೀನೆನ್ನನ್ ಪೆಸರ್ ಕೂಗಿ ಕರೆದೆಯಲ್ತೆ?

ಕೌರವ — ಕೂಗಿದೆನೊ, ಕರೆದೆನಲ್ತು! ನೀನ್ ಗೈದ ಕಪಟಮಂ ನೆನೆ ನೆನೆದು ಸಿಗ್ಗಿನಿಂ ಹೊಡೆಯುರಿಯಿಂ ಕೂಗಿದೆನೊ, ಕರೆದೆನಲ್ತು! ” ಕೃಪಾಕರ, ಮುರಾರಿ, ಕರುಣಾಸಾಗರ, ಬಾ, ಪೊರೆಯಯ್” ಎಂದೀ ಮಹಾನುಭಾವನನ್ ಮೊರೆದು ಕರೆದೆನಲ್ತು! — ಬಂದ ಬಟ್ಟೆಯೊಳೆ ಮರಳೊ! ತೊಲಗಿಲ್ಲಿಂ, ನೀಚ! ನಿಲ್ಲದಿರ್ ನನ್ನೆದುರ್! ತೊಲಗೋ, ಕಣ್ ಬೇನೆ ಬರ್ಕುಂ!

ಕೃಷ್ಣ — ಸಾವಧಾನಂ! ಚಕ್ರವರ್ತಿ, ಸಾವಧಾನಂ!

ಕೌರವ — ಎಲವೋ ದುರುತ್ಮಾ, ಚಕ್ರವರ್ತಿ ಎಂದೆನ್ನಂ ಹಂಗಿಪೆಯೇನ್? ಎನ್ನ ಚಕ್ರಾಧಿಪತ್ಯಮಂ ಪಾಳ್ಗಯ್ದ ಕೇಡಿಗನ್ ನೀನಲ್ತೆ?

ಕೃಷ್ಣ — ರಾಜೇಂದ್ರ, ಪಾಳ್ಗಯ್ದ ಕೇಡಿಗನ್ ನಾನಲ್ತು;
ನೀನೆ ನಿನ್ನಂ ಕೇಡಿಗೀಡುಮಾಡಿದೆಯಲ್ತೆ?
ಮಚ್ಚರದಿ ಪಾಂಡುಸುತರಂ ಜೂದಿನ ವ್ಯಾಜದಿಂ
ಮೋಸದಿಂದಡವಿಗಟ್ಟಿದ ಪಾಪಿ ನಾನಲ್ತು.
ದ್ರೌಪದಿಯ ಮಾನಮಂ ರಾಜಸಭೆಯೊಳ್ ನೆರೆದ
ಮಹಾಜನಗಳೆದುರಿನೊಳೆ ಭಂಗಿಸಿ, ಧರ್ಮಮಂ
ಕೆಣಕಿದವನಾನಲ್ತು. ಪಾಂಡುಸುತರಿಗೆ ನೆಲಮಂ
ಕೊಡು ಎಂದು ನಾನ್ ಬಂದು ಬೇಡೆ ಕಿವುಡುಗೇಳ್ದು,
ಹಿರಿಯರೊಳ್ನುಡಿಗಳಂ ಕಡೆಗಣ್ಚಿ, ಸಮರಮಂ
ಪೊತ್ತಿಸಿದನ್ ನಾನಲ್ತು. ನೀನೆ ಕಾರಣಂ!
ನಿನ್ನಿಂದಲೇ ಈ ಕುರುಕ್ಷೇತ್ರ ರಣರಂಗಮ್
ನೋಡಿಗಳೆಂತು ರುದ್ರಭೂಮಿಯಾಗಿರ್ಪುದು!
ನಿನ್ನಿಂದಲೇ ಕರ್ಣ ಭೀಷ್ಮದ್ರೋಣಾದಿಗಳ್,
ದ್ವಾಪರಯುಗದ ಅನರ್ಘ್ಯರತ್ನಂಗಳ್ ನುಚ್ಚೆಳ್ದು
ಪೋಗಿರ್ಪವೈಸೆ?

ಕೌರವ(ಉಕ್ಕುವ ಸಿಟ್ಟಿನಿಂದ) ಓ ಮಾರಿ! ಮಾಯಾವಿ!
ಎಲವೋ ಕೊಲೆಪಾತಕಾ, ರಣರಕ್ತ ರಾಕ್ಷಸಾ,
ಗಳಪದಿರ್ ಎನ್ನದುರೀ ತಿಕ್ತವಾಕ್ಯಂಗಳಂ
ಎಲವೋ ಮಸಣಗಾಹಿ, ನಾನಲ್ತೆ ಕೊಂದವನ್?
ನಾನಲ್ತೆ ಪೆರ್ಬಡೆಯ ಬೀರರ್ಕಳಂ ತಿಂದ
ಪೆಣದಿನಿ? ಇರ್ಕೆಲದ ಸುಭಟರ್ಕಳೆಲ್ಲರಂ
ಅಸುವೀಂಟಿ ಸುಡುಗಾಡುಗೈದವನ್ ನಾನಲ್ತೆ? —
ಓ ಹುಟ್ಟುನೆತ್ತರುಣಿ, ನೀನಂದು ವಿದುರನ
ಬೀಡಿನಿಂದೆನ್ನ ಆಸ್ಥಾನಕೈತಂದಾಗಳೆ
ಪಜ್ಜೆ ಪಜ್ಜೆಗುಂ ಸೂಡುಗಳನೊಟ್ಟಿ, ಮಸಣಮಂ
ಗೈಯುತ್ತೆ ಬಂದೆಯಲ್ತೆ? ಕಪಟಮಂ ಮರೆಮಾಡಿ
ಗಳಪುವೆಯಾ ಎನ್ನೊಡನೆ? (ಬುಸುಗುಟ್ಟುತ್ತಾನೆ.)

ಕೃಷ್ಣ(ಗಂಭೀರವಾಗಿ ತನ್ನಲ್ಲಿಯೆ) ಸಾಲ್ಗುಮೀ ಆಟಂ!
ಕನಸನೊಡೆಯುವ ಪೊಳ್ತು ಬಳಿಸಾರಿರ್ಪುದು.
ಮಾಯಾಮೋಹಂ ಎನಿತು ಕುರುಡುಗೈವುದು ಜಗಮಂ!
(ಕೌರವನನ್ನು ನಟ್ಟ ನೋಟದಿಂದ ದುರದುರನೆ ನೋಡಿ, ಎರಡು ಹೆಜ್ಜೆ ಮುಬರಿದು ಶಕ್ತಿಯನ್ನು ಸೂಸುವ ದಿವ್ಯವಾಣಿಯಿಂದ ಹೇಳುತ್ತಾನೆ.)
ವೀರ ಕೌರವಾ, ತತ್ವಜ್ಞಾನಿ ಕೌರವಾ,
ಸಾಲ್ಗುಮಿ ಆಭಿನಯಂ? ಹೊಂಗನಸನೊಡೆದೇಳ್!
ಎಚ್ಚತ್ತು ಕಣ್ದೆರೆದು ನೋಡು! ನೋಡಯ್!
ಆಟಮಂ ಮರೆವರೇನ್ ಮೂಢರಂತೆ?

(ಸಾಮಾನ್ಯ ಗುರುಗಳ ಶಕ್ತಿದಾಯಕ ಮಂತ್ರೋಪದೇಶದಿಂಅ ಮಾಯೆಯ ಸ್ವಪ್ನ ಒಡೆದು ಜ್ಞಾನೋದಯವಾಗುತ್ತದೆ. ಎಂದಮೇಲೆ, ಸರ್ವಜಗದ್ಗುರುವಾದ ಭಗವಾನ್ ಶ್ರೀ ಕೃಷ್ಣನ ಅಧಿಕಾರಿಯುತವಾದ ಮಂತ್ರವಾಣಿಯಿಂದ ಆಸನ್ನ ವಿಮೋಚನನಾದ ಕೌರವನ ಸುವರ್ಣಸ್ವಪ್ನ ಜಲಬುದ್ಭುದದಂತೆ ಸಿಡಿದೊಡೆಯುತ್ತದೆ. ಇದ್ದಕ್ಕಿದ್ದ ಹಾಗೆ ಕೌರವನ ಮುಖದಲ್ಲಿ ಶಾಂತಿ ಮೈದೋರುತ್ತದೆ; ಮುಗುಳ್ನಗೆ ಸುಳಿದಾಡುತ್ತದೆ : ಕಣ್ಣರಳುತ್ತದೆ. ನೀಳವಾಗಿ ನಿಟ್ಟುಸಿರೆಳೆದು ಪ್ರಸನ್ನಚಿತ್ತನಾಗಿ ಶ್ರೀ ಕೃಷ್ಣನನ್ನು ನೋಡುತ್ತಾನೆ. ಶ್ರೀ ಕೃಷ್ಣನೂ ಮುಗುಳ್ನಗುತ್ತಾನೆ. ಸೂತ್ರಧಾರನೂ ಕಥಾನಾಯಕನೂ ನಾಟಕರಂಗದಿಂದ ನೇಪಥ್ಯಮಂದಿರಕ್ಕೆ ಬಂದಂತಾಗುತ್ತದೆ.)

ಕೃಷ್ಣ — ಸ್ವರ್ಣಸ್ವಪ್ನವನೊಡೆದೆಯಾ, ಕೌರವೇಂದ್ರಾ?

ಕೌರವ(ಹಸನ್ಮುಖಿಯಾಗಿ)  ಜಗದ್ಗುರು, ನಿನ್ನ ಮಂತ್ರಾಘಾತದಿಂದೊಡೆದುದಾ ಸ್ವಪ್ನಂ. (ಸುಯ್ದು)  ಕಮಲಾಕ್ಷ, ಸ್ವರ್ಣಸ್ವಪ್ನಮಾದೊಡಂ ಏನ್ ಭಯಂಕರ ಸ್ವಪ್ನಂ! — ಸೂತ್ರಧಾರ, ನಾನೆನ್ನ ಪಾತ್ರಮಂ ನೇರಮಾಗಭಿನಯಿಸಿ ತೋರ್ದೆನೇನ್? ಮೇಣ್ ಅದರೊಳೇನಾದರುಂ ತಪ್ಪಿದೆನೊ?

ಕೃಷ್ಣ — ನಟರೊಳ್ ನಟನೆಂದೊಡೆ ನೀನಲ್ತೆ, ಕೌರವಾ! ನಿನ್ನವೊಲಾರುಂ ಅಭಿನಯ ಚತುರರಿನ್ನಿಲ್ಲ. ಏನಭಿನಯಂ! ನಿನ್ನಭಿನಯಕೆ ನಾನೆ ಮಾರುವೋದೆನ್!

ಕೌರವ — ಕರ್ಣನಭಿನಯವನೇನೆಂಬೆ? ಬೆಲುಸೊಗಸಲ್ತೆ?

ಕೃಷ್ಣ — ನಿನಗೆರಡನೆಯವನಾತನ್! ಆ ದಿನಂ ಕಡೆಯ ಕಾಳೆಗದೊಳ್ ತನ್ನನ್ ತಾನೆ ಮೀರ್ದನವನ್. ನೋಡಿ, ನೋಡುತ್ತೆ ನಾನ್ ಬಲು ಹಿಗ್ಗಿದೆನ್.

ಕೌರವ — ನೀಂ ಕಲಾಕೋವಿದನಲ್ತೆ? ವಿಶ್ವಕವಿಯಲ್ತೆ? (ಮೇಲೆ ನೋಡಿ ಸ್ವಲ್ಪ ಆಶ್ಚರ್ಯದಿಂದ)  ಭಗವನ್, ಎತ್ತಪೋದುದು ಆ ತಾರಾಪರಿಶೋಭಿತ ನೀಲಾಕಾಶಂ? (ಸುತ್ತ ನೋಡಿ) ಶ್ಮಶಾನಮಾಗಿರ್ದ ಆ ಕುರುಕ್ಷೇತ್ರ ರಣರಂಗಮೆಲ್ಲಿ? (ಕಿವಿಗೊಟ್ಟು ಆಲಿಸಿ) ಕಿವಿಬಿರಿಯುವಂತೇಳುತಿರ್ದ ಆ ಕ್ರಂದನಧ್ವನಿಗಳೆಲ್ಲಿ?

ಕೃಷ್ಣ (ಹಸಿತವದನನಾಗಿ) ಕನಸೊಡೆದಮೇಲೆ ಅದರೊಳೇನಿಹುದು, ಕೌರವ ಕೃಷ್ಣ? ಅದೆಲ್ಲಂ ಸವಿಸುಳ್ಳಿನಿಂ ಕೆತ್ತಿರುವ ಪುಸಿ ಸೊನ್ನೆಯಲ್ತೆ? — ಅದೋ!
(ಪರದೆಯೊಳಗೆಸಂಜಯಾ ದಾರಿ ತೋರುಎಂಬ ದನಿಯಾಗುತ್ತದೆ.)
ಅದೋ, ಗಾಂಧಾರಿ ಧೃತರಾಷ್ಟ್ರರ್ ಸಂಜಯನೊಡಗೂಡಿ ಬರುತಿರ್ಪರೀಯೆಡೆಗೆ. ನಾಟಕಮಂ ನೇರವಾಗಿ ಕೊನೆಗಾಣ್ಚು! ನಾನ್ ಪೋಗಿ ಬರ್ಪೆನ್. (ನಡೆಯುತ್ತ) ಅಲ್ಲಿ ನಿನ್ನನ್ ಮರಳಿ ಕಾಣುವೆನ್! (ಅದೃಶ್ಯನಾಗುತ್ತಾನೆ.)
(
ಕೌರವನು ಪುನಃ ಮಾಯೆ ಕವಿದು ನೆಲದಮೇಲೆ ಬಿದ್ದು ನರಳುತ್ತಾನೆ. ಸಂಜಯ , ಧೃತರಾಷ್ಟ್ರ, ಗಾಂಧಾರಿ, ಭಾನುಮತಿ ಮೊದಲಾದವರು ಬರುತ್ತಾರೆ.)

ಕೌರವ (ಹೊರಳುತ್ತ) ಹಾ, ಏನಪಮಾನಂ! ಅಯ್ಯೋ, ಏನೂರುಭಂಗಂ; ಏನಪಮಾನಂ!

ಸಂಜಯ — ಧೃತರಾಷ್ಟ್ರ, ನೋಡೀ ಎಡೆಯೊಳೆ ಪೊರಳ್ದು ನೋಯುತಿರ್ಪನ್ ಕುರುಕುಲ ಸಾರ್ವಭೌಮನ್.

ಧೃತರಾಷ್ಟ್ರ — ಅಪ್ಪಾ, ಮಗೂ, ಎಲ್ಲಿರ್ಪಯ್?

ಗಾಂಧಾರಿ — ಅಯ್ಯೋ ಮಗೂ!

ಭಾನುಮತಿ — ಅಯ್ಯೋ! ಅಯ್ಯೋ!
(ಎಲ್ಲರೂ ಕೌರವನಮೇಲೆ ಬಿದ್ದು ಗೋಳಾಡುತ್ತರೆ . ಆ ಭಯಂಕರವಾದ ಶ್ಮಶಾನ ಮೌನದಲ್ಲಿ ಆ ರೋದನಧ್ವನಿ ಕಡಲ ಮೊರೆಯಾಗಿ ಹಬ್ಬುತ್ತದೆ.)