[ಶ್ಮಶಾನ ಕುರುಕ್ಷೇತ್ರದ ಮಗುದೊಂದೆಡೆ. ಧರ್ಮರಾಯ, ಭೀಮ, ಅರ್ಜುನ, ದ್ರೌಪದಿ ಮೊದಲಾದವರು ಬರುತಾರೆ ಘಟೋತ್ಕಚ, ಅಭಿಮನ್ಯು ಮೊದಲಾದ ನೆಂಟರಿಷ್ಟರ ಅನ್ವೇಷಣೆಗಾಗಿ. ಧಮರಾಯನು ಶ್ಮಶಾನವನ್ನು ನೋಡಿ ದುಗುಡದಿಂದ ನಿಟ್ಟುಸಿರೆಳೆಯುತ್ತಾನೆ]

ಧರ್ಮರಾಯ — ಇದೆ ಎನ್ನ ಧರ್ಮಕ್ಕೆ ಪ್ರತಿಫಲಂ! ವಾಯುಸುತ,
ನೋಡಿದೋ ನಿನ್ನ ಬಲ್ಮೆಯ ಕಿಚ್ಚು ಬೇಳ್ದಿರ್ಪ
ದ್ವಾಪರ ಮಹಾಪುರುಷನುಪವನಂ!

ಭೀಮ — ಅಹುದಹುದು,
ಧರ್ಮಂ ಬೇಳ್ದಿರ್ಪ ಅಧರ್ಮದುದ್ಯಾನಂ;
ಪುಣ್ಯಾಗ್ನಿಗಾಹುತಿಯಾದ ಪಾಪದ ಬೆಳಸು!

ಅರ್ಜುನ — ಕೊಲೆಯ ಮುನ್ನುಡಿಯೇಕೆ ಧರ್ಮಸಂಸ್ಥಾಪನೆಗೆ?
ರಕ್ತರಣಧುನಿ ಹರಿಯದೆಯೆ ಧರ್ಮಂ ಭೂತಳಕೆ
ಕಾಲಿಡದೆ?
(ದ್ರೌಪದಿ ಅರ್ಜುನನ್ನು ನೋಡಿ ಮುಗುಳ್ನಗುತ್ತಾಳೆ.)

ಭೀಮ — ಪೋಗಿ ಕೇಳಾ ಕೃಷ್ಣನನ್. ಪೇಳ್ವನ್‌.
ವಿಕಾಸಮಾಗುವುದರೊಳೆ ವಿನಾಶಮೈತಂದಪುದು.
ಬೋಧನೆಯ ಮಾರ್ಗಕ್ಕೆ ಶತಮಾನಗಳೆ ವೇಳ್ಕುಂ;
ವಿಪ್ನವದ ಪಥವಿಡಿಯೆ ದಿನಮೆರಡೆ ಸಾಲ್ಗುಂ.
ಯುಗಯುಗಗಳೆದೆಗೆ, ಒರ್ದಿನಂ ಗದೆಗೆ!
ಪದಿನೆಂಟೆ ದಿನಗಳೊಳ್‌ ಮುಗಿದಿರ್ಪುದೊಂದು
ಕಲ್ಪದ ಕಜ್ಜಂ. ಸಿದ್ಧಯಿಂ ಬಹ ಪುಣ್ಯಮೇ ಗಂಗೆ,
ಸಾಧನೆಯ ಪಾಪಕ್ಕೆ!

ದ್ರೌಪದಿ — ಲೇಸನುಸಿರ್ದಯ್‌, ಭೀಮಸೇನ,
ವೀರರ್ಗೆ ಕ್ಲೈಬ್ಯಂ ತಕ್ಕುದಲ್ತು.
ಕೊಂದ ಮೇಲಿನ್‌ ನೊಂದೊಡೇನ್‌?
(ರಣರಂಗದಲ್ಲಿ ಬಿದ್ದು ಸಾಯುತ್ತಿರುವ ಅನಾಮಧೇಯ ಸೈನಿಕನೊಬ್ಬನುಅಯ್ಯೋ ನೀರು!” ಎಂದು ಕೂಗಿಕೊಳ್ಳುತ್ತಾನೆ.)

ಧರ್ಮರಾಯ (ಆಕಡೆ ನೋಡಿ) ಆವನದು ಆರ್ತಧ್ವನಿ?

ಭೀಮ (ಉದಾಸೀನದಿಂದ)
ಆವನೋ ಸಾಯುತಿಹ ರಣದಾಳ್‌ ಕೂಗುವನ್‌!

ಧರ್ಮರಾಯ — ಮನುಜನ್‌ ನರಳುತಿರೆ ಮನುಜನ್‌ ಸಂತವಿಸೆ
ಮನುಜನ್‌ ದೇವನ್‌ ತಾನಾದಪನ್‌. ಇಲ್ಲದಿರೆ
ಮನುಜನ್‌ ದನುಜನ್‌.
(ಧರ್ಮರಾಯನು ಸೈನಿಕನ ಬಳಿ ಗೋಗಿ ಮೊಣಕಾಲೂರುತ್ತಾನೆ.)

ಸೈನಿಕ(ಒಲರುತ್ತ) ಅಯ್ಯೋ ನೀರ್!

ಧರ್ಮರಾಯ — ಅರ್ಜುನಾ, ಪೋಗಿ ಬೇಗದಿಂದುದಕಮಂ
ಕೊಂಡುಬಾ. (ಅರ್ಜುನನು ಹೋಗುತ್ತಾನೆ.)

ಭೀಮ (ದೂರದಿಂದಲೆ) ಅಗ್ರಜಾ, ಮೊದಲ್‌ ಅವನಾರವನ್‌?
ಕೇಳದನ್‌! ನಮ್ಮವನೊ? ಕೌರವನ ಪಡೆಯವನೊ?

ಧರ್ಮರಾಯ — ಭೀಮಸೇನ,
ನೀನೀಗಳಾದೊಡಂ ವೈರಮಂ ಬೆಟ್ಟುಕಳೆ.
ಮಸಣದೊಳ್‌ ಮರಣದೊಳ್‌ ಆರಾದಡಾರವರ್?
ಎಲ್ಲರುಂ ಜವನವರ್! ನಮ್ಮವರ್ ನಿಮ್ಮವರ್
ಎಲ್ಲರುಂ ಅವನವರ್! ಇಂತಿರಲ್‌ ನೀನೇಕೆ
ನಿಷ್ಕರುಣೆಯಿಂದಾಡುತಿಹೆ? ಪಗೆಯುಂ, ಕಳೆಯುಂ,
ಪೇರಾಸೆ, ಮಚ್ಚರಂ, ಹೋರಾಟಮಿವೆಲ್ಲಂ
ಸ್ವರ್ಗದ ಸುನೀಲ ಔದಾರ್ಯದೊಳ್‌ ಮುಳುಂಗಿ
ತಲ್ಲೀನಮಾದಪವು ತುತ್ತತುದಿಗೆ!

ಭೀಮ (ದ್ರೌಪದಿಗೆ) ಕೃಷ್ಣೇ,
ಕೇಳ್ದೆಯೇನ್‌ ಅಗ್ರಜನ ನುಡಿಗಳನ್. ನಿಷ್ಕರುಣಿ
ನಾನಂತೆ. ತಾಮೆಲ್ಲರುಂ ಮಹಾಕರುಣಿಗಳ್!
ಸಮರದೊಳ್ ಗದೆಯಂ ಬಿಸುಟ್ಟಾನುಂ ಕರುಣೆಯನ್
ಕೈದುಮಾಡಿರ್ದೊಡೆ ಇವರ್ಗಾವ ಗತಿಯಿತ್ತು?

ಧರ್ಮರಾಯ — ಕಟ್ಟಕಡೆಯೊಳ್ ಎಮಗೆ ಕುರಣೆಯೆ ಶರಣ್ಯಂ!
ದೆಯೆ ಎಂಬುದಾ ಸಚ್ಚಿದಾನಂದಮಾಗಿರ್ಪನ
ಮಾರ್ಪೊಳಪಲ್ತೆ? ಅನುಜ, ನೀನರಿಯೆಯಾ:
ಬಾನಿನಿಂ, ಮುಗಿಲ ಮನೆಯಿಂ, ಮೇಣ್‌ ಸಗ್ಗದಿಂ
ಇಳಿದೈತರ್ಪ ಹೂವುಗಳ ಸೋನೆಮಳೆಯಂದದೊಳ್‌
ಕರುಣೆ ತಾಂ ಪೇರರ್ದೆಗಳಿಂದೊಯ್ಯುನಿಳಿತಂದುಪುದು.
ರಾಜ ಕರವಾಲಕಿಂತಲುಂ ಕರ್ಕಶಂ ಕರುಣೆ;
ಶತ್ರುಗಳನೊಲಿಸುವುದು ಮಿತ್ರರನ್‌ ಮಾಡಿ.
ಭಗವಂತನೆರ್ದೆಗಿಂತಲುಂ ಕೋಮಲಂ ಕರುಣೆ;
ಪರಮಾತ್ಮನೆರ್ದೆಯನೇ ಸೊರೆಗೊಂಡಪುದಲ್ತೆ?
ಕೊಡುವವನ ಹರಸುವುದು; ಕೊಲ್ಳುವನ ಸಲಹುವುದು;
ಕರುಣೆಯೆಂಬೈಶ್ವರ್ಯಂ, ಅಳಿದೊಡಂ, ಉಳಿದೊಡಂ,
ಪೋದೊಡಂ ಬಂದೊಡಂ, ಪಡೆದವನದಾವಗಂ
ಶ್ರೀಮಂತನಾಗಿರ್ಪನ್‌! ಪಡೆದು ಕೊಡುವರ್ಗೆ ಅದು
ಮುಕ್ತಿಗೆ ಮಹಾದ್ವಾರಂ; ಮೇಣೇಸಿಕೊಂಬರ್ಗೆ
ಸ್ವರ್ಗಕ್ಕೆ ಸೋಪಾನಂ!

ಭೀಮ (ಸ್ವಗತ) ಮುಂ ಪಲರ್ಮೆ
ಕೇಳಿರ್ದೆನ್ ಆನಿದನ್!
(ಅರ್ಜುನನು ನೀರು ತರುತ್ತಾನೆ. ಧರ್ಮರಾಯನು ಸೈನಿಕನಿಗೆ ನೀರು ಕುಡಿಸುತ್ತಾನೆ. ಸೈನಿಕನು ನಿಟ್ಟುಸಿರೆಳೆದು ಕಣ್ದೆರೆದು ನೋಡಿ)

ಸೈನಿಕ — ಆರಿವರ್? ಪಾಂಡವರೆ! ಅಯ್ಯೋ,
ಕೌರವ ಸ್ವಾಮಿಯೊಳ್‌ ಅಪರಾಧಮೆಸಗಿದೆನೆ
ತುತ್ತತುದಿಯೊಳ್‌ ಪಾಂಡವರ ಕೈನೀರನೀಂಟಿ?
ಮನ್ನಿಸೆನ್ನನ್, ಪ್ರಭು! ಮನ್ನಿಸಯ್‌! ಮನ್ನಿಸಯ್‌!
(ಸಾಯುತ್ತಾನೆ)

ಭೀಮ — ಈತನೀಗಳ್‌ ಎನಗೆ ಮೆಚ್ಚಿನ ಬೀರನ್‌!
ಬಾಳಿನೊಳ್‌ ಎಂತುಟೋ ಅಂತೆಯೇ ಸಾವಿನೊಳುಂ
ನೋವಿನೊಳುಂ ಎರ್ದೆಗಿಡದೆ ಪಗೆಯಂ ಸಾಧಿಪನೆ
ಸಹಜ ವೀರನ್‌! ಮಿಕ್ಕವರ್ ಕೃತ್ರಿಮದ ವೀರರ್!

(ದೃಶ್ಯ ಕಣ್ಮರೆಯಾಗುತ್ತದೆ.)