[ಕುರುಕ್ಷೇತ್ರದ ಮತ್ತೊಂದೆಡೆ. ಸಂಜಯನೊಡಗೂಡಿ ಧೃತರಾಷ್ಟ್ರನೂ ಗಾಂಧಾರಿಯೂ ಬರುತ್ತಾರೆ. ಗದಾಯುದ್ಧದಲ್ಲಿ ಬೀಮನಿಂದ ಪರಾಜಿತನಾದ ಕೌರವನು ಎಲ್ಲಿರುವನೆಂದು ಹುಡುಕಿಕೊಂಡು ಹೋಗುತ್ತಿದ್ದಾರೆ.]

ಸಂಜಯ (ಸುತ್ತಲೂ ನೋಡಿ ದುಃಖದಿಂದಲೂ ವಿಸ್ಮಯದಿಂದಲೂ)
ಸದ್ದಿಲಿಯಿರುಳಿದೇನ್ ಸಯ್ತ ಪೆಣದಂತಿಹುದು!
ಆರ್ತನಾದಗಳೆಲ್ಲ ಮೌನಮನೆ ಪೆರ್ಚಿಪಪು.
ಕಣ್ಗಂ ಮನಕ್ಕಂ ಭಯಂಕರಮಾಗಿರ್ಪುದು
ಈ ಸುಡುಗಾಡ ನೋಟಂ! ಕಣ್ಗಳಿಲ್ಲದ ನೀನೆ
ಧನ್ಯನಾದಯ್ ಇಂದು, ದೃತರಾಷ್ಟ್ರ ಭೂಮಿಪನೆ.
ಐದಿಂದ್ರಿಯಂಗಳಿಂದೈತರ್ಪ ಬಲ್ಪೇನೆಗಿಂ
ನಾಲ್ಕಿಂದ್ರಿಯಂಗಳಿಂ ಬಹ ಬೇನೆ ತಾನ್
ಇನಿತು ಲಘುಅತರಮೈಸೆ?

ಧೃತರಾಷ್ಟ್ರ — ಪುಸಿಯದಿರ್, ಸಂಜಯ.
ಕಣ್ಣರಿಯದಿಹ ನೋವು ಕಿವಿಗಳಿಗೆರಡು ಮಡಿ
ಆದಪುದು. ಓ ವಿಧಿ, ಕುರುಡಿಂಗೇತರ್ಕೆ
ಕಿವುಡುಮಂ ಪೊರ್ದ್ದಿಸದೆ ನೀನೆನ್ನ ಮಾದಿದಯ್?

ಗಾಂಧಾರಿ (ದುಃಖದಿಂದ)
ಸಂಜಯ, ಪೊಳ್ತುಯೊಳೆನ್ನಣುಗಂ ಬೆರಸಿ
ರಣರಂಗಕೆಯ್ತಂದೆ. ತೋರವನನೀಗಳ್.
ಎಲ್ಲಿರ್ಪನಾತನ್? — ಹಾ ಮಗನೆ, ನಿನ್ನನಾನ್
ಬಯ್ದುದನ್ ಮನ್ನಿಸಯ್. ಆರ್ಗೆ ನೀನೇನಾದರೇನ್?
ನಲ್ಗುವರನೆನಗೆ ನೀನ್! ದೈವಕ್ಕೆ ದ್ರೋಹಿಯೋ?
ಧರ್ಮಕ್ಕೆ ಬಾಹಿರನೊ? ನನ್ನಿಗಪರಾಧಿಯೋ?
ಸಜ್ಜನಕೆ ಪಾಪಿಯೊ? ಭೀಮಂಗೆ ಶತ್ರುವೋ?
ಎನಗಂತುಂ, ಓ ಕಂದ, ಮುದ್ದು ಕುವರನ್!
ತಂದೆ ತೊರೆದನೆಂದು, ತಾಯಿ ಪಳಿದಳೆಂದು,
ಮಿತ್ರರ್ ಅಳಿದರೆಂದು, ಗರುಸುತನುಳಿದನೆಂದು
ನೊಂದೆಯೇನ್? ಬೆಂದಯೇನ್? ಸತ್ತೆನ್ನನ್ ಕೊಂದೆಯೇನ್?
ಅಯ್ಯೋ ಮುನಿಯಬೇಡೆನೆಗೆ ಕಂದಾ (ಅಳುತ್ತಾಳೆ)

ಸಂಜಯ (ಸ್ವಗತ)  ಸಂತವಿಡಲಾರೆನ್ : ಸುಮ್ಮನಿರಲೂ ಆರೆನ್;
ಅಳುವರನ್‌ ಸಂತವಿಡೆ ಅಳಲುಕ್ಕಿ ಪರಿದಪುದು.
ಅಳಲು ಕಂಬನಿಯಾಗಿ ಪರಿಯಲ್ಕದುವೆ ಶಾಂತಿ.
ಮಸಣದಲಿ ಒಣತತ್ವಗಳನೊರೆಯ ತರಮಲ್ತು!
ಗೋಳಾಡುವರ ಕೂಡೆ ಗೋಳಿಡುವುದೇ ಲೇಸು!
ಪಡೆದ ಬಸಿರಿನ ನೋವನಾರು ಸಂತೈಸುವರ್?
(ಬಹಿರಂಗವಾಗಿ ಗಾಂಧಾರಿಯ ಕಡೆ ತಿರುಗಿ)
ದೇವಿ, ಕುರುಕುಲ ಲಲಾಮನನ್ವೇಷಣೆಗೆ
ಸೇವಕರನಟ್ಟಿಹೆನ್‌. (ಧೃತರಾಷ್ಟ್ರನ ಕಡೆಗೆ ಮರುಗಿ)
ದೊರೆಯೆ, ಬಾ ತೆರಳುವಂ;
ಬಿಳ್ದ ಮಗನನ್ ಮಡಿವ ಮುನ್ನಮೆ ಕಾಣುವಂ,
ತಳುವಿದರೆ ಕೈಮಿಂಚುವುದು ಕಜ್ಜಂ.

ಧೃತರಾಷ್ಟ್ರ — ಸಂಜಯ, ನೀನೆನ್ನ ಕಣ್ಬೆಳಕು; ನೀನೆನ್ನ
ಕಯಗೋಲು. ಮುಂದೆ ನಡೆ, ಬಂದಪೆನ್‌. (ಗಾಂಧಾರಿಗೆ)
ಬಾ, ಬಾ;
ಕಂಬನಿಯ ಪೊಳೆಯೊಳೆ ತೇಲಿ ಪೋಗುವಂ, ಬಾ!
(ಎಲ್ಲರೂ ತೆರಳುತ್ತಾರೆ. ಭಾನುಮತಿ ಒಬ್ಬಳು ಸಖಿಯೊಡನೆ ಬರುತ್ತಾಳೆ. ಆಕೆಯ ದುಗುಡ ಮಾತಿಗೆ ಮೀರಿದೆ. ಹುಚ್ಚಳಂತಿದ್ದಾಳೆ)

ಸಖಿ — ಭನುಮತಿ, ತಾಯಿ, ಇತ್ತಲೈತರು, ಅದೋ
ಸಂಜಯನೊಡಗೂಡಿ ದೇವರುಂ ದೇವಿಯುಂ
ಪೋದಪರ್. (ಸ್ವಗತ) ಕಂಬನಿಯ ಮುನ್ನೀರೊಳನಿಬರುಂ
ಮುಳುಗಿರೆ ಆರನಾರ್ ದಡಕೆಳೆದು ರಕ್ಷಿಪರ್?

(ಭಾನುಮತಿ ಮುಸುಕಹಾಕಿಕೊಂಡು ಶೋಕದ ಛಾಯೆಯಂತೆ ಸಖಿಯೊಡನೆ ಹೋಗುತ್ತಾಳೆ.)