[ಶ್ಮಶಾನ ಕುರುಕ್ಷೇತ್ರದ ಮತ್ತೊಂದು ಭಾಗ. ದೂರ ಕತ್ತಲೆಯ ಅಂತರಾಳದಲ್ಲಿ ಪೋಜುಗಳ ಓಡಾಟವೂ, ಸ್ವಲ್ಪ ಮಾತ್ರ ಸ್ಪಷ್ಟ ಮನುಷ್ಯಾಕೃತಿಗಳ ಚಲನೆಯೂ ಕಾಣಿಸುತ್ತವೆ. ವ್ಯಕ್ತಿಗಳು ಬರಬರುತ್ತ ಸಮೀಪವಾಗುತ್ತವೆ. ಗೀರ್ವಾಣ, ನೀಲಾಕ್ಷ, ಚಾಣೂರರೆಂಬ ಮೂರು ಜನ ಕಿಂಕರರು ಪೊಂಜಿನ ಬೆಳಕಿನಲ್ಲಿ ಅತ್ತಿತ್ತ ತಿರುಗುತ್ತ , ಬಗ್ಗಿ ಬಗ್ಗಿ ನೋಡುತ್ತ ಹುಡುಕುತ್ತ ಬರುತ್ತಾರೆ. ಒಂದೊಂದು ಸಲ ತೇರುಗಳು ಮುರಿದು ಬಿದ್ದ ಸ್ಥಳಗಳನ್ನು ಬಗ್ಗಿ ಇಣಿಕೆ ನೋಡಿ ಪರೀಕ್ಷಿಸುತ್ತಾರೆ. ಒಂದೊಂದು ಸಲ ಹೆಣದಮೇಲೆ ಬಿದ್ದ ಹೆಣಗಳನ್ನು ನೂಕಿ ನೂಕಿ ನೋಡುತ್ತಾರೆ. ಒಂದೊಂದು ಸಲ ಕೆತ್ತಿಹೋದ ಮುಖ ಮಂಡಲಗಳನ್ನು ಪರೀಕ್ಷೀಸುತ್ತಾರೆ. ಅವರು ಕೌರವೇಂದ್ರನನ್ನು ಹುಡುಕಿಕೊಂಡು ಬಂದ ಚಾರರು. ತಮ್ಮ ಸ್ವಾಮಿಯ ಪರಾಭವವನ್ನು ಕೇಳಿ ಆತನಿರುವ ತಾಣವನ್ನು ಕಂಡುಹಿಡಿದು ಸೇವೆಮಾಡಲು ಆತುರರಾಗಿ ಬಂದಿದ್ದಾರೆ.]

ಗೀರ್ವಾಣ (ಪೊಂಜನ್ನು ಸ್ವಲ್ಪ ಮೇಲೆತ್ತಿ)  ಎಚ್ಚರಿಕೆ, ಎಚ್ಚರಿಕೆ, ಚಾಣೂರ, ಕತ್ತಲಲಿ ಮುಂಚಿ ಮುಂದೆ ನಡೆಯದಿರು. ನೆತ್ತರುಗೆಸರಿನಲಿ ನಿಮಿರಿ ನಿಂತ ಕೋಲ್ದುದಿಗಳಡಗಿಹವು.
(ಚಾಣೂರ ನಿಲ್ಲುತ್ತಾನೆ.)

ನೀಲಾಕ್ಷ — ಗೀರ್ವಾಣ, ದೀವಿಗೆಯನಿತ್ತ ಹಿಡಿ. ಮಣಿ ಮಕುಟ ಮಸ್ತಕದ ಕಲಿಯೊರ್ವನಿಲ್ಲಿ ಪಟ್ಟಿಹನು. ಆಕೃತಿಯೊಳೆಮ್ಮೊಡೆಯನನೆ ಹೋಲುವನು.

ಚಾಣೂರ (ಓಡಿಬಂದು)  ಎಲ್ಲಿ? ಎಲ್ಲಿ?
(ಮೂವರೂ ಪೊಂಜಿನ ಬೆಳಕಿನಲ್ಲಿ ಬಗ್ಗಿ ನೋಡುತ್ತಾರೆ.)

ಗೀರ್ವಾಣ — ನೀಲಾಕ್ಷ, ನಿನಗೇನ್ ಹುಚ್ಚು ಹಿಡಿದಿದೆಯೆ? ಕಂಡ ಕಂಡ ಪೆಣನೆಲ್ಲಮಂ ಎಮ್ಮೊಡೆಯನೆಂದೊದರುತಿಹೆ!

ಚಾಣೂರ — ಕರಡಿಯನ್ ಕಂಡುಳಿಕಿದಾತಂಗೆ ಕಗ್ಗಲ್ಲೆ ಕರಡಿಯಹುದಂತೆ. ಅಂತೆ ನೀಲಾಕ್ಷಂ ಗನಿಬರುಂ ಕುರುಚಕ್ರವರ್ತಿಯಂತೆ ತೋರುವರು.

ನೀಲಾಕ್ಷ (ದುಃಖದಿಂದ ನಿಡುಸುಯ್ದು)  ಅಯ್ಯೊ, ಕೌರಕುಲೇಂದ್ರನನ್ ನೋಡುವಾಸೆ ನನಗೆ ಮರುಳಮರಿದಂತಿಹುದು. (ಕಣ್ಣೀರ್ಮಿಡಿದು) ಈ ಪೆಣದ ಬಣಬೆಗಳೊಳು ಕುರುಪತಿಯನೆಂತು ಹುಡುಕುವುದೊ ನಾನರಿಯೆ. ಶವಗಳಂ ತುಳಿತುಳಿದು ಪೆಣದಿನಿಗಳಾಗುತಿಹೆವು.

ಚಾಣೂರ — ಬಾಣದಮೊನೆಗಳಂ ಮೆಟ್ಟಿ ಮೆಟ್ಟಿ ನನ್ನಡಿಗಳೆರಡೂ ಜಜ್ಜರಿತವಾಗಿಹವು. ಇದೇನು ರಣರಂಗವೊ! ಪಾಳ್ಗೊಲೆಯ ನೆಲೆ!

ನೀಲಾಕ್ಷ — ಇನ್ನೆಗಂ ಸಮರರಂಗಂ ಇನಿತು ಭಯಂಕರಮೆಂದು ನಾನರಿದುದಿಲ್ಲ. ಸಮರ ಸಮಯಕಿಂತಲೂ ಸಮರೋಪಸಂಹಾರದೀ ಮಸಣಮೇ ಮಿಗಿಲಗುರ್ವುವಡೆದಿಹುದಲ್ತೆ?

ಗೀರ್ವಾಣ — ಕಾಳಗದಿಂತೈತಹ ನಾಶದಗುಂದಲೆಯಂ ನಾನಿಂದು ಮನಗಂಡೆ. ಕಟ್ಟಕಡೆಗಿಂತುಟಾಗುವುದೆಂದು ಮೊದಲಂದು ತಿಳಿದರಾರು?

ಚಾಣೂರ — ಸಮರ ಕಲಾಕೋವಿದರೆಂದು ಪೆಸರಾಂತ ಮೆಯ್ಗಲಿಗಳನ್ ತುಳಿಲಾಳ್ಗಳನ್ ಬಿಲ್ಲೋಜರನ್ ಇಚ್ಛಾಮರಣಿಗಳನ್ ಚಿರಂಜೀವಿಗಳನ್ ತನ್ನ ದಳದೊಳೆ ಪಡೆದೆ ಎಮ್ಮೊಡೆಯಂಗೆ ಸೋಲಪ್ಪುದೆಂದಾರು ಬಗೆದಿರ್ದರು?

ನೀಲಾಕ್ಷ — ಆರೇನನ್ ಮಾಳ್ಪರು, ಬಿದಿಯಡ್ಡಬರ್ಪಾಗಳ್?

ಚಾಣೂರ — ಮುಂದೆ ನಡೆ, ಗೀರ್ವಾಣ. ಎಮ್ಮೊಡೆಯಂಗೆ ಕಟ್ಟೆಕಡೆಯ ಸೇವೆಯನಾದರುಂ. ಗೈದು ಸೈಪಂ ಪಡೆವಂ.

ಗೀರ್ವಾಣ — ಎಮ್ಮೊಡೆಯನನ್ನರ್ ಮತ್ತಾವ ದಾತಾರನಂ ಇನ್ನಿಳೆಯ ಮೇಲಾವು ಕಾಣುವೆವು? ದಯೆಯೊಳಾತಂಗೆ ದೊರೆಯಪ್ಪರಾರಿಹರು? ಡಿಂಗರಿಗರ್ಗೆ ಆತನೊಲು ಕಡುನೇಹಮಂ ತೋರ್ಪ ಚಕ್ರವರ್ತಿಗಳಾರು ಈ ತಿರೆಯೊಳಿರ್ಪರು?

ನೀಲಾಕ್ಷ — ನಮಗಾತನೇ ತಂದೆಯಾಗಿರ್ದನ್. ಆತನಳಿದ ಬಳಿಕ್ಕ ನಾಮೆಲ್ಲರುಂ ತಿರಿದುಂಬ ದೇಸಿಗರಲ್ತೆ?

ಚಾಣೂರ — ಹಾ ತಂದೆ, ಎಲ್ಲಿ ನರಳುತ್ತ ಪುಡಿಯೊಳು ಪವಡಿಸಿ ಪೊರಳುತಿಹೆ? ಗೀರ್ವಾಣ, ಎಮ್ಮೊಡೆಯನ ಎದೆಯನರಿವ ನಲ್ಗತೆಯೊಂದನ್ ನಿಮಗೊರೆವೆನ್; ಆಲಿಸಿಂ. ಒರ್ದಿನಂ ನಟ್ಟಿರುಳ್. ಆನ್ ರುಜೆಯಿಂ ನೊಂದು ನರಳಿ ಸಜ್ಜೆಯೊಳ್ ಪವಡಿಸಿರ್ದೆ. ಎನ್ನಾಕೆ ಎನ್ನ ಪೊರೆಯೊಳೆ ಕುಳಿತು ಕಂಬನಿಗಳಂ ಸೂಸುತ್ತಲಿರ್ದಳು. ಎನಗೆ ಕಡೆಗಾಲಂ ಬಳಿಸಾರಿ ಬಂದಿತ್ತು. ಆ ಪೊಳ್ತಿನೊಳೆಮ್ಮ ಬೀಡಾರದ ಬಾಗಿಲನ್ ಆರೊ ತಳ್ಳಿದವೊಲಾಯ್ತು. ಎನ್ನಾಕೆ ‘ಆರವರ್?’ ಎಂದುಕುಳಿತಲ್ಲಿಯೆ ಕೂಗಿದಳು. ಆಗ ಕರುಣೆಯಿಂ ತುಂಬಿ ತುಳುಕುವ ಕೊರಲದೊಂದು ‘ಆನ್ ಬಂದಿಹೆನ್, ಚಾಣೂರ, ಬಾಗಿಲನ್ ತೆರೆ’ ಎಂದಿತು. ತೆರೆಯೆ, ಚರರೊಬ್ಬರಿಲ್ಲದೆಯೆ ಒಂಟಿಗನಾಗಿ ಮೈಮರೆಸಿಕೊಂಡು ಬಂದ ಕೌರವ ಸ್ವಾಮಿಯನ್ ಕಂಡೆ. ಎನಗೆ ಪರಮಾತ್ಮನಂ ದರ್ಶಿಸಿದ ಭಕ್ತನಂತೆ ಸಂತಸಂ ಮಿಗಿಲಾಗಿ ರುಜೆಯಡಗಿದುದು! ಕುರುಕುಲ ಸಾರ್ವಭೌಮನೆಲ್ಲಿ? ಆನೆಲ್ಲಿ? ಆತನೆಮ್ಮ ಇಷ್ಟದೈವಮೆ ದಿಟಂ!

ನೀಲಾಕ್ಷ — ಸೋತೊಡೇನ್? ಗೆದ್ದೊಡೇನ್? ಎದ್ದಡೇನ್? ಬಿದ್ದಡೇನ್?, ನರಕದೊಳಿರ್ದೊಡೇನ್? ಸಗ್ಗದೊಳಿರ್ದೊಡೇನ್? ಎಮ್ಮೊಡೆಯನ್ ತಾನಾವಾಗಂ ಎಮ್ಮೊಲ್ಮೆಯೊಡೆಯನೈಸೆ!

ಗೀರ್ವಾಣ — ಅವನ ಮತಿ ನಮಗೆ ಮತಿ; ಗತಿ ನಮಗೆ ಗತಿ. ಬನ್ನಿಂ? ತಂದೆಯಂ ಪುಡುಕುವಂ!
(ಕಿಂಕರರು ಹುಡುಕುತ್ತ ಹೋಗಿ ಕತ್ತಲಲ್ಲಿ ದೂರಾಗುತ್ತಾರೆ. ಮಾತೆಯೊಬ್ಬಳು ತನ್ನ ಕಂದನನ್ನು ಕೂಡಿಕೊಂಡು ರೋದಿಸುತ್ತ ಬರುತ್ತಾಳೆ. ಆಕೆಯ ಗಂಡನು ಮಡಿದ ಪಾಂಡವ ಪಕ್ಷದವರಲ್ಲಿ ಒಬ್ಬ ಕಾಲಾಳು. ರಾತ್ರಿ ಪತಿಯ ದೇಹವನ್ನು ಹುಡುಕಲು ಶ್ಮಶಾನ ಕುರುಕ್ಷೇತ್ರಕ್ಕೆ ಬರುತ್ತಾಳೆ.)

ಕಂದ — ಅಮ್ಮಾ, ಕತ್ತಲೆಯೊಳೆಲ್ಲಿಗೆ ಹೋಗಿತಿಹೆ?

ಮಾತೆ — ಮಗೂ, ತಿರೆಗೆ ನಿನ್ನನ್ ಪಡೆದವನ ರುದ್ರಭೂಮಿಗೆ.

ಕಂದ — ಎಷ್ಟು ದೂರ? ಅದು ಇರುವುದೆಲ್ಲಿ?

ಮಾತೆ — ಅದನೆ ಹುಡುಕುತಿಹೆನು, ಕಂದಾ. (ಬಗ್ಗಿ ಒಂದು ಹೆಣವನ್ನು ನೋಡುತ್ತಾಳೆ. ಕಂದನೂ ಹೋಗಿನೋಡಿ)

ಕಂದ — ಅಮ್ಮಾ, ಯಾರಿವನು?

ಮಾತೆ — ಯಾವನೋ ನಿನ್ನಂತಹ ಮುದ್ದು ಕಂದನನ್ ಪಡೆಸಿರುವ ತಂದೆಯೀತನು, ಮಗೂ.

ಕಂದ — ಇಲ್ಲೇಕೆ ಮಲಗಿಹನು? ಇವನಿಗೆ ಮನೆಯಿಲ್ಲವೆ? ದೇಸಿಗನೆ?

ಮಾತೆ (ಸ್ವಗತ) ಬಾಳು ಏನೆಂದುದನ್ ಅರಿಯದಿರುವ ಈ ಕೂಸಿಗೆ ಸಾವಿನ ಪರಿಚಯಮಂ ನಾನೆಂತು ಮಾಡಿಕೊಡಲಿ! (ಮಗುವಿಗೆ)  ಕಂದಾ, ಕಾಳೆಗದ ನೆಲದೊಳೆ ವೀರರಿಗೆ ಬೀಡಿಲ್ಲ ಎಂದು ಹೇಳುವುದೆಂತು? ಸತ್ತವರ ಸಂಗದಲಿ, ಸತ್ತವರ ನೇಹದಲಿ ಬಾಳುತಿರುವ ಈತನನು ದೇಸಿಗನೆಂದು ಕರೆವುದೆಂತು? ಸಮರವಿಲಯಾಗ್ನಿಗೆ ಬಾಳನ್ನು ಬೇಳಿದಿವನು ಜವನಿದ್ದೆಯಲ್ಲಿಹನು. ಮರಳಿ ಎಚ್ಚರನು!

ಕಂದ — ಮರಳಿ ಮೇಲೇಳನೇ?

ಮಾತೆ — ಮೇಲೇಳನು.

ಕಂದ — ಮರಳಿ ಮಾತಾಡನೇ?

ಮಾತೆ — ಇಲ್ಲ.

ಕಂದ — ನನ್ನಂತೆ ಇವನಿಗೊಬ್ಬ ಕಂದನಿಹನೆಂದು ಹೇಳಿದೆಯಲ್ಲಾ, ಆ ಕಂದನನು ಮರಳಿಎದೆಗಪ್ಪಿ ನಲಿಯನೇ?

ಮಾತೆ (ಶೋಕ ಹೆಚ್ಚಿ) ಇಲ್ಲ, ಮಗೂ, ಇಲ್ಲ! ಇನ್ನಿನವನು ಚೆಲುವಾದ ಈ ತಿರೆವೆಣ್ಣಿನಂಕದಲಿ ಸಂಚರಿಸಲಾರನು: ಕಾಲ್ಗಳುಡುಗಿಹವು! ಇನ್ನಿವನ ಕೊರಲಿಂದ ಮಾನವರಾಡುವ ಇಂಚರದ ಮಾತುಗಳು ಹೊರಹೊಮ್ಮಲಾರವು : ನಾಲಗೆಯಳಿದಿಹುದು! ಇನ್ನೀತನೆದೆಯಲಿ ಸತಿಪ್ರೇಮ, ಸುತವಾತ್ಸಲ್ಯ, ಬಂಧುಮಮತೆ, ಕರುಣೆ, ನಯ, ದಯೆ ಮೊದಲಾದ ಮಾನವೀಯ ದಿವ್ಯಭಾವಗಳಲಿ ಒಂದಾದರೂ ಮೂಡಲರಿದು! (ಬಿಕ್ಕಿ ಬಿಕ್ಕಿ ಅಳುತ್ತಾಳೆ.) ನಗಲಾರನಿವನು! ಈತನಳಲೂ ಆರನು! ಸುಖಪಡಲಾರನು! ದುಃಖಪಡಲೂ ಆರನು! — ಶಿವಶಿವಾ, ಸಾವಿನ ಮೌನಕಿಂತಲು ಬಾಳಿನ ಗೋಳೆ ಲೇಸಲ್ತೆ? — ಕಂದಾ, ಈತನೀಗೊಂದು ಬರಿಯ ಎಲುಬು ಬಾಡುಗಳ ಗೂಡು! ಬರುವವರು ಹೇಳದಿಹ, ಇರುವವರು ಕಾಣದಿಹ, ಹೋದವರು ಬಾರದಿಹ ಸಾವಿನ ನಾಡು ಇವನಿಗೆ ಬೀಡು! ಈಗಳೀತಂಗೆ ಪಿತೃತ್ವಮಿಲ್ಲ, ಪತಿತ್ವಮಿಲ್ಲ, ಬಂಧುತ್ವಮಿಲ್ಲ, ಶತ್ರುತ್ವಮಿಲ್ಲ! ಈತನಿಗಳಣ್ಣನೂ ಅಲ್ಲ, ತಮ್ಮನೂ ಅಲ್ಲ

ಕಂದ (ಬೆಚ್ಚಿ) ಇನ್ನೇನಾಗಿರುವನಮ್ಮಾ?

ಮಾತೆ (ದುಃಖಾತಿಶಯದಿಂದ) ಹೆಣ! ಹೆಣ! ಸತ್ತ ಸುಡುಗಾಡಿನ ಹೆಣ!

ಕಂದ (ಕಂಬನಿ ತುಂಬಿ) ಅಮ್ಮಾ, ನಾವರಸುತಿರುವ ನನ್ನ ತಂದೆಯೂ ಇವನಂತೆಯೆ ಆಗಿರುವನೇನು?

ಮಾತೆ (ಕಂದನನ್ನು ಬಿಗಿದಪ್ಪಿ ರೋದಿಸುತ್ತ)  ಅಯ್ಯೊ, ನನ್ನ ಜೀವನದ ಕಣ್ಣೇ, ಬಾಳಿನ ನಲ್ಮೆಯನಿಂತು ತೋರುತಿಹ ನಿನ್ನ ಮುಗ್ದತನದೆದುರು ಸಾವೆನಿತು ಕರ್ಕಶತರ ಮಾಗಿತೋರುತಿದೆ!
(ಮಾತೆ ಬಿಕ್ಕಿ ಬಿಕ್ಕಿ ಅಳುವ ಕಂದನನ್ನು ಕರೆದುಕೊಂಡು ಗೋಳಿಡುತ್ತ ಕತ್ತಲೆಯಲ್ಲಿ ಅದೃಶ್ಯಳಾಗುತ್ತಾಳೆ.)