[‘ಹದಿನೆಂಟು ದಿನಗಳು ರಣಕೋಲಾಹಲದಿಂದ ತುಂಬಿ ತುಳುಕಿದ ಮಹಾಭಾರತ ಸಂಗ್ರಾಮವು ಸಂಪೂರ್ಣವಾಗಿ ಕೊನೆಗಂಡ ದಿನದ ಘೋರ ವಿಷಣ್ಣ ರಾತ್ರಿ. ಅದುವರೆಗೂ ರಣರಂಗವಾಗಿದ್ದ ಕುರುಕ್ಷೇತ್ರವು ಅಂದು ಭೀಷಣ ಶ್ಮಶಾನಮಾತ್ರವಾಗಿದೆ. ವಿಸ್ತಾರವಾಗಿರುವ ರಣಭೂಮಿಯ ಬಯಲಿನಲ್ಲಿ ಕಗ್ಗತ್ತಲು ಕವಿದುಕೊಂಡಿದೆ. ಕೋಟ್ಯನುಕೋಟಿ ಯೋಧರ ಶವಗಳೂ ಅಸಂಖ್ಯವಾದ ಆನೆ ಕುದುರೆ ತೇರುಗಳೂ ಮಂದೆಮಂದೆಯಾಗಿ ಮುದ್ದೆಮುದ್ದೆಯಾಗಿ ಅಸ್ತವ್ಯಸ್ತವಾಗಿ ಬಿತ್ತರದ ಬಯಲಿನ ತುಂಬ ಬಿದ್ದಿವೆ.ಸಾಯುವವರೂ ಗಾಯಪಟ್ಟವರೂ ನರಳುತ್ತಿದ್ದಾರೆ. ಇರುಳಿನ ಗರ್ಭದಿಂದ ಹೊರಟ ರೋದನಧ್ವನಿ ಕುರುಕ್ಷೇತ್ರವನ್ನೆಲ್ಲ ಆವರಿಸಿದೆ. ಆದರೂ ಗೋಳಿನ ಧ್ವನಿಯನ್ನು ತಿಂದು ತೇಗುವಂತೆ ಯಾವುದೋ ಒಂದು ಭಯಾನಕವಾದ ಮೃತ್ಯುಮೌನವು ರುದ್ರಪ್ರದೇಶದಲ್ಲಿ ಸುಳಿದಾಡುತ್ತಿದೆ. ಹೆಪ್ಪುಗಟ್ಟಿದಂತಿರುವ ಕತ್ತಲಲ್ಲಿ, ವಿಸ್ತರವಾದ ಕುರುಕೇತ್ರದ ಬಯಲಿನಲ್ಲಿ, ಸಾವಿರಾರು ಅಸ್ಪಷ್ಟ ಆಕೃತಿಗಳು, ಅರೆಮುಸುಗು ಹಾಕಿಕೊಂಡು ಸುಳಿದಾಡುವ ಮನುಷ್ಯವ್ಯಕ್ತಿಗಳು, ಕೈಯಲ್ಲಿ ಸೊಡರು ಹಿಡಿದು ಏನನೊ ಹುಡುಕುವಂತೆ ಅಲ್ಲಲ್ಲಿ ಚಲಿಸುತ್ತಿವೆ. ಅವರೆಲ್ಲ ಭಾರತಯದ್ಧದಲ್ಲಿ ಮಡಿದವರ ಬಂಧುಗಳು : ತಂದೆತಾಯಂದರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ಸತಿಯರು, ಮಕ್ಕಳು, ಮುದುಕರು. ಕೌರವ ಪಾಂಡವ ಪಕ್ಷದವರು ಅಂದು ಶ್ಮಶಾನದಲ್ಲಿ ಭೇದವಿಲ್ಲದೆ ತಮ್ಮ ತಮ್ಮ ನಂಟರಿಷ್ಟರ ದೇಹಗಳನ್ನು ಅರಸುತ್ತಿದ್ದಾರೆ. ಎತ್ತ ನೋಡಿದರೂ ದುಃಖಮಯವಾದ ರುದ್ರದೃಶ್ಯ. ದಿನ ಸಾಯಂಕಾಲ ಭೀಮ ದುರ್ಯೋಧನರ ಗದಾಯುದ್ಧವು ಪೂರೈಸಿದೆ. ಕೌರವೇಂದ್ರನು ತೊಡೆಯೊಡೆದು ಮುಡಿಯುಡಿದು ವೈಶಂಪಾಯನ ಸರಸ್ಸಿನ ತೀರದಲ್ಲಿ ನರಳುತ್ತ ಇನ್ನೂ ಜೀವದಿಂದಿದ್ದಾನೆ.ಅದೇ ರಾತ್ರಿ ದ್ವಾಪರಯುಗ ಮುಗಿದು ಕಲಿಯುವಾಗ ಪ್ರಾರಂಭವಾಗುವುದು. ಅಂದಿಗೆ ದ್ವಾಪರಯುಗದ ಶ್ರೇಷ್ಠತಮ ಸಂಸ್ಕ್ರತಿಯೆಲ್ಲ ವಿನಾಶಹೊಂದಿ ಶ್ಮಶಾನ ಕುರುಕ್ಷೇತ್ರದಲ್ಲಿ ಪರಿಣಮಿಸಿದೆ. ರಂಗದ ಮಧ್ಯೆ ಧೀರನಾದರೂ ದುಃಖ ಮುಖಮುದ್ರೆಯಿಂದ ಕುಗ್ಗಿಹೋದ ಯುಗಪುರುಷ ದ್ವಾಪರನು ಚಿಂತಾಕ್ರಾಂತನಾಗಿ ಹೆಜ್ಜೆಯಮೇಲೆ ಹೆಜ್ಜೆಯಿಡುತ್ತ ಪ್ರವೇಶಿಸುತ್ತಾನೆ. ಎತ್ತರದ ಆಳು; ವೀರವ್ಯಕ್ತಿ. ರಾಜವೈಭವದ ಚಿಹ್ನೆಗಳೆಲ್ಲವೂ ಆತನಲ್ಲಿ ತೋರುತ್ತವೆ. ತಲೆಯಮೇಲೆ ಕಿರೀಟವೊಂದಿದೆ. ಒರೆಸೇರಿದ ಕತ್ತಿಯೊಂದು ಸೊಂಟದಲ್ಲಿ ನೇತಾಡುತ್ತಿದೆ.ಆತನನ್ನು ನೋಡಿದರೆ ಏನೊ ಒಂದು ಗೌರವವುಂಟಾಗುತ್ತದೆ. ಮುಖಚಿಹ್ನೆ ವಿಷಣ್ಣವಾಗಿದ್ದರೂ ಅದು ಅಲ್ಪಾತ್ಮನ ಅಧೀರತೆಯ ಖಿನ್ನತೆಯಲ್ಲ; ಅವಿಶ್ರಾಂತ ಪರಾಕ್ರಮಿಯಾದ ಮಹಾಪುರುಷನ ಪರಾಭವದ ನಿರ್ಭರತೆಯ ನಮ್ರ ಧೈರ್ಯಭಾವ. ಯುಗಪುರುಷ ದ್ವಾಪರನು ಪ್ರವೇಶಿಸಿ ಬಿಸುಸುಯ್ಯುತ್ತಾನೆ; ಸುತ್ತಲೂ ನೋಡುತ್ತಾನೆ; ಕಂಬನಿಗರೆಯ್ಯುತ್ತಾನೆ. ಕಡೆಗೆ ನಿಡುಸುಯ್ದು ತನ್ನಲ್ಲಿ ತಾನೆ ಹೇಳಿಕೊಳ್ಳುತಾನೆ.’]

ದ್ವಾಪರ — ಇದೇನಿದೀ ಭಾರತ ಕುರುಕ್ಷೇತ್ರಮೀ ದಿನಂ
ಮೂಗುವಟ್ಟಿರ್ಪ ಸುಡುಗಾಡಿನಂತಿರ್ಪುದು?
ನಿಚ್ಚಮುಂ ನಾನಾಲಿಸಿರ್ದ ರಣಕಹಳೆಗಳ
ದೆಸೆದೆಸೆಗಳಂ ತಿವಿದ ದನಿಯಿಲ್ಲ. ಉರವಣಿಪ
ಬೀರರಟ್ಟಹಾಸದ ಕಾಕುಗಳ ಭೀಷಣ
ಸ್ವನಮಿಲ್ಲ. ಕಡಗಿ ಕಾದುವ ಭಟರ ಖಡ್ಗಗಳ
ಸಂಘಟ್ಟನಾ ಧ್ವಾನಮಿಲ್ಲ. ಅತಿರಥರ
ಕಲಕಲ ನಿನಾದದಿಂದೊಡಗೂಡಿ ಪೊರಮಡುವ
ಕೋದಂಡಪಾಣಿಗಳ ಸಿಂಜಿನಿಯ ಟಂಕೃತಿಯ
ನಿರ್ಘೋಷಮಿಂದೆತ್ತ ಪೋಗಿಹುದು? ಕಿಡಿಗರೆವ
ಮಂತ್ರಾಸ್ತ್ರಾ ಶಸ್ತ್ರಗಳ ರೂಕ್ತ ದೀಧಿತಿಯಲ್ಲಿ?
ಮುಗಿಲ್ದೆರೆಯನುಚ್ಚಳಿಸಿ ಎಡಬಿಡದೆ ಬಾಂದಳಕೆ
ಚಿಮ್ಮುತಿರ್ದಾ ಸರಲುಗಳ ಸುರಿಮಳೆಯದೆಲ್ಲಿ?
ಗದೆಯ ಗಾಳಿಯೊಳರಿಗಳೆಂಬುವ ತರಗೆಲೆಯ
ಮೊತ್ತಮಂ ಸುತ್ತಿದ ವಾಯುಜ ವಾಣಿಯೆಲ್ಲಿ?
ತನ್ನ ವಾಹಿನಿಯ ವೀರಾಳ್ಗಳನ್ ಹುರುಡಿಸಲ್
ಹುರಿಗೊಳಿಸಿದಾ ಸರ್ಪಕೇತನನ ಹರಿಕಂಠ
ಗರ್ಜನೆಯದೆತ್ತಲಿಂದಡಗಿದುದು? ಗಾಡೀವಮ್
ಏನಾಯ್ತು? ಕುರುದಳದ ಕೆಚ್ಚೆದೆ ಬಿರಿಯುವಂತೆ
ಮೊಳಗಿದಾ ಪಾಂಚಜನ್ಯಮದೆಲ್ಲಿ? ಬಿಂಕದಲಿ
ಕೊಂಕು ಕೊರಲಂಗೈದು ಕೆನೆದಾ ತುರಗತತಿಯ
ಹೇಷಾರವಂಗಳಂ ಇಂದಾವ ನೀರವತೆ
ನುಂಗಿದುದು? ಮೇಗೆತ್ತಿ ಸೊಂಡಿಲ್ಗಳಂ, ಮುಂದೆ
ನುಗ್ಗುತಿರ್ದಾ ಕರಿಯ ಬಲ್ಮೆಯ್ಯ ಗಜಗಳೇನ್
ಮುತ್ತುತಿರ್ಪೀ ಕತ್ತಲೆಯ ಕಡಲಿನಲಿ ಕರಗಿ
ಪೋದುವೇನ್? (ಸ್ವಲ್ಪ ಹೊತ್ತು ಸುತ್ತ ನೋಡಿ)
ಇಂದೆನ್ನೆವರೆಗಂ ಕುರುಕ್ಷೇತ್ರಂ
ಅರಸುಗಳ ರಣರಂಗಮಾಗಿತ್ತು; ಕೊಳೆಯಲಿಹ
ಪೆಣದ ಬಣಬೆಯ ಕಣವದಾಗಿರ್ಪುದೀ ಪೊಳ್ತು!
ನಿನ್ನೆಯಿದು ಮೆಯ್ಗಲಿಗಳಾಡುಂಬೊಲಾಗಿತ್ತು;
ಮರುಳ್ಗಳಾಡುತಿಹ ಮಸಣವಾಗಿಹುದಿಂದು!
ಕಾಳೆಗದ ನೆಲಗಳೆನೆ ಬಿತ್ತರದ ಮಸಣಗಳ್!
ಕಾಳಗವೊ ಬಿತ್ತರದ ಕೊಲೆಗೆಯ್ಮೆ! ಗೆಲವೆಂದರೇನ್?
ಸೋಲ್ವರ ಸಂತಾಪಂ; ವಿಜಯಿಗಳ ಪೆರ್ಮೆ!
(ಚಿಂತಿಸುತ್ತಾನೆ; ಕಣ್ಣು ಮುಚ್ಚಿ ಕಣ್ದೆರೆದು ಬಿಸುಸುಯ್ದು)
ಎನ್ನಾಳ್ವಿಕೆಯ ತುತ್ತತುದಿಯೊಳೆ ವೀರಾತ್ಮರ್
ಎನಿತಳಿದು ಪೋಗಿಹರ್? ಶಿವಶಿವಾ, ಮಸಣಮೆನಗೆ
ಈ ಚರಮ ಸೋಪಾನಮಾದುದೆ? — ನೆತ್ತರಲಿ
ಕಾಲೊಳೆಯುವಂತಾಯ್ತೆ ತಿರೆಯನಗಲುವ ಮುನ್ನಂ!
ಚಲದಂಕಮಲ್ಲರೆನಿತಳಿದಿಹರ್? ಪುಣ್ಯಾತ್ಮರ್
ಎನಿತಳಿದಿಹರ್? ತರುಣರೆನಿಬರ್ ಮಡಿದಿಹರ್?
ದ್ವಾಪರಯುಗದ ಮಹಾವ್ಯಕ್ತಿಗಳ್: ಆಚಾರ್ಯ
ಭೀಷನ್, ಕರ್ಣನ್, ದ್ರೋಣನ್, ಅಭಿಮನ್ಯು
ಮಹಾವೀರರನಿಬರುಂ ಸಮರ ಹುತವಹನಿಂದ
ಬೇಳ್ದ ಕೆಂಗೂಳಿನೊಲ್ ಬೂದಿಯಾಗಿರ್ಪರ್.
ಕೌರವ ಮಹಾನುಭಾವನ್ ಪಗೆಯ ಕೈತವಕೆ
ಸಿಲ್ಕಿ ತೊಡೆಯೊಡೆದು ತನ್ನ ತಿರೆಗುರುಳಿಹನ್!
ಉಕ್ಕೆವದ ಕಾಳಗದಿ ಅಳಿವಾಯ್ತು ಕರ್ಣಂಗೆ!
ಬಲಿಯಾದನಾ ದ್ರೋಣನ್ ಅರನ ಮಗನಾಡಿದಾ
ಮುಗ್ದಮಿಥ್ಯೆಯಂ ನಂಬಿ! (ಮೇಲೆ ನೋಡಿ ಭಾವದಿಂದ)
ಇಳಿದು ಬಾ, ಕಳ್ತಲೆಯೆ,
ಬಾನ ಹೊಡೆಯಿಂದಿಳಿದು, ಬಾ, ಮುಸುಕು ಮಸಣಮಂ.
ಕುರುಕುಲಾರ್ಕನ ಚರಮ ದುರವಸ್ಥೆಯಂ ಸಹಿಸಲ್
ಆರದೆಯ ಪಡುಗಡಲಿಗಿಳಿದ ಬೆಂಗದಿರನೇ,
ಮರಳೀ ನೀ ಮೂಡದಿರ್! ನಿನ್ನ ಪೊನ್ವೆಳಗಿನಿಂ
ಈ ಭಯಂಕರ ದೃಶ್ಯಮಂ ಮರಳಿ ಬೆಳಗದಿರ್!
ಇನ್ನಿದು ಕುರುಕ್ಷೇತ್ರಮಲ್ತು, ಇಳೆಯ ಬಲ್ಮಸಣಂ!

(ತನ್ನ ಸುತ್ತಲೂ ಎಲ್ಲೆ ತೋರದೆ ಹಬ್ಬಿರುವ ಹೆಮ್ಮಸಣವನು ಎವೆಯಿಕ್ಕದೆ ನೋಡುತ್ತಾ ದ್ವಾಪರನು ಅಂತರ್ಮುಖಿಯಾಗಿ ನಿಲ್ಲುತ್ತಾನೆ. ಸುಂದರ ಭಾದ್ರಾಕಾರನಾದ ಕಲಿಪುರುಷನು ಪ್ರವೇಶಿಸಿ ಸುತ್ತಲೂ ದೃಷ್ಟಿಸಿನೋಡಿ ದೂರ ನಿಂತ ದ್ವಾಪರದೇವನನ್ನು ಗುರುತಿಸಿ ಮೆಲ್ಲಮೆಲ್ಲನೆ ಅವನ ಬಳಿ ಸಾರುತ್ತಾನೆ. ಆತನಿಗೆ ತುಸು ಬಳಿಯಲ್ಲಿ ನಿಂತು ಸ್ವಲ್ಪ ಹೊತ್ತು ನಿರೀಕ್ಷಿಸುತ್ತಾನೆ . ದ್ವಾಪರನು ಯಾವುದೋ ವಿಚಾರದಲ್ಲಿ ತಲ್ಲೀನನಾಗಿ ಬಹಿಃಪ್ರಪಂಚವನ್ನೆ ಮರತುಬಿಟ್ಟಿರುವನೆಂದು ತಿಳಿದು ಗಂಭೀರವಾಗಿ ಆತನನ್ನು ಕುರಿತು ಸಂಬೋಧಿಸುತ್ತಾನೆ.)

ಕಲಿ — ದ್ವಾಪರದೇವ!

ದ್ವಾಪರ (ಅನನ್ಯಚಿತ್ತನಾಗಿ ತನ್ನೊಳು ತಾನೆ)
ಏನ್ ರೌದ್ರಮೇನ್ ಕ್ರೂರಮೇನ್ ದುಃಖಮಯ ದೃಶ್ಯಂ!
ದಿಟ್ಟಪರಿವನ್ನೆವರಂ ಎತ್ತ ನೋಡಿದೊಡತ್ತ
ನಾಶಮೇ ನಗುತಿಹುದು ವಿಕಟಾಟ್ಟಹಾಸದಿಂ!
ಕಣ್ಣಿಡುವ ಕಡೆ ಮುರಿದ ಪೊಂದೇರುಗಳ ರಾಶಿ;
ಎತ್ತ ನೋಡಿದಡತ್ತ ಸತ್ತಾನೆಗಳ ಮೊತ್ತ;
ರುಂಡಗಳ ಚೆಂಡಾಡುತಿಹ ಮರುಳ್ಗಳ ಬಳಗಂ;
ಬೆನ್ನ ಬೀವಂ ಸಿಗಿವ ಸೃಗಾಲಗಳ ಗುಂಪು!
ಎನ್ನ ಯುಗದಂತ್ಯದೊಳೆ ವಿಲಯಮಾದಂತಿಹುದು!
(ಚಿಂತಾಮಗ್ನನಾಗಿ ನಿಲ್ಲುತ್ತಾನೆ)

ಕಲಿ — ಆವುದೋ ಎದೆಬಿರಿವ ಚಿಂತೆಯೊಳ್ ಮುಳುಗಿಹನ್.
ಕರೆದರೂ ಎನ್ನ ದನಿ ಕೇಳಿಸದು. ದ್ವಾಪರನ್
ಇಂತು  ಚಿಂತಾಕ್ರಾಂತನಾಗಿ ಮೈಮರೆತುದನ್
ಆನಾವಗಂ ಕಂಡದಿಲ್ಲಂ. — ದ್ವಾಪರದೇವ!

ದ್ವಾಪರ (ಎರಡು ಹೆಜ್ಜೆ ಮುಂದೆ ನಡೆದು ತನ್ನೊಳು ತಾನೆ)
ಎನಿದೀ ಸದ್ದುಗಳ್? ಆರ್ತನಾದಗಳೇನ್?
ಮೌನಮೇ ನೋವಿನಿಂದೊಯ್ಯೆಯ್ಯನಳುವಂತೆ
ತೋರುತಿದೆ. ಕವಿದಿರ್ಪ ನಟ್ಟಿರುಳೆ ಬಿಸುಸುಯ್ದು
ನರಳುವಂತಿರ್ಪುದು. ಕೈಮುರಿದ ಕಾಲ್ಮುರಿದ
ಹೊಡೆಯೊಡೆದ ತಲೆ ಸಿಡಿದ ನೂರಾರು ಸೈನಿಕರ
ಅಸ್ಪಷ್ಟ ವಾಣಿಗಳ ತುಮುಲ ರೋದನಂ
ಜವನೆದೆ ಬೆದರಿಪಂತೆ ಬಾನ್ಗೇರುತಿಹುದು.
ಹಾ ಕೈರವೇಂದ್ರ! ಹಾ ಭೀಷ್ಮ! ಹಾ ದ್ರೋಣ!
ಹಾ ದಿವಾಕರತನಯ ! (ಆಲೋಚಿಸುತ್ತ ನಿಲ್ಲುತ್ತಾನೆ.)

ಕಲಿ (ಗಟ್ಟಿಯಾಗಿ) ದ್ವಾಪರದೇವ!

ದ್ವಾಪರ (ತಿರುಗಿನೋಡಿ, ನಿಂತಲ್ಲಿಂದ ಅಲುಗದೆ ಗಂಭೀರವಾಗಿ)
ಕಲಿ ಮಹಾಶಯ!

ಕಲಿ — ಏನಿದಿಂತೊರ್ವನೇ
ನಿಂತು ಚಿಂತಾಮಗ್ನನಾಗಿರ್ಪೆ? ಕರೆದೊಡೆಂ
ಕೇಳಿಸದು. ಆವ ಮೆಯ್ಯಿಲಿಯೊಡನೆ ನುಡಿಯುತಿಹೆ?

ದ್ವಾಪರ (ಉಕ್ಕಿಬರುವ ದುಃಖವನ್ನು ತಡೆದು ನೀಳ್ದನಿಯಿಂದ)
ಕಲಿದೇವ, ದ್ವಾಪರನ್ ಕಲಿಯನೀ ಮಸಣದಲಿ
ಎದುರುಗೊಳ್ವಂತಾಯ್ತೆ? ಮಂದೆ ಬಹ ಯುಗಪುರುಷನ್
ಆಗಲಿಹ ನಿನಗೆ ಈ ಸತ್ತ ಸುಡುಗಾಡಿನಲಿ
ಪಟ್ಟಾಭಿಷೇಕಮಪ್ಪಂತುಟಾಯ್ತೆ? ಎನಿತೆನತೊ
ಬರಿಸಗಳ ಗೆಯ್ಮಯಿಂ ಗಳಿಸಿರ್ದ ಸಂಸ್ಕೃತಿಯ
ಚೆಲ್ವಿಕೆ ತುತ್ತತುದಿಯಲಿ ಪುಚ್ಚಳಿದು ಪೋಯ್ತೆ?
ನಿನಗೆನ್ನ ಕಾಲಸಾಮ್ರಾಜ್ಯಮಂ ಮರಳೀವ
ಸಮಯದಲಿ, ಆವ ಪೆರ್ಮೆಯೊಳಾವ ಮೆಚ್ಚುಗೆಯ
ವಸ್ತುವನ್‌ ಎನ್ನಕೃತಿ ಎಂದಾನು ತೋರಿಸಲಿ?
ಈ ಮಹಾಕುರುಕ್ಷೇತ್ರ ಶ್ಮಶಾನಮಂ ತೋರಲೇನ್‌?
ಅಳಿದ ತುಳಿಲಾಳ್ಗಳ ಶವಂಗಳಂ ನಿನಗಿತ್ತಪೆನೆ?
ಮುರಿದ ಹೊಂದೇರುಗಳ ಮುಂದೆಯಂ ತೋರ್ದಪೆನೆ?
ನಿನಗಾವ ಮಂಗಳದ ಸಿರಿಯನೀಯಲಿ? ಹೇಳು!

ಕಲಿ — ದ್ವಾಪರದೇವ, ನೀನಿಂತೇಕೆ ಉಮ್ಮಳಂ
ಪಡುತಿರ್ಪೆ? ಶಾಂತನಾಗಯ್. ನೀನಿತ್ತುದಂ
ಸಂತಸದಿ ಕೈಕೊಂಡು ಎನ್ನುಜ್ಜಗಂ ಗೈವೆನ್‌.
ನಿನ್ನೊಳೂಣೆಯಮೇನ್‌? ವ್ಯಕ್ತ ಸೃಷ್ಟಿಯನೆಲ್ಲ
ತನ್ನೊಡಲಿನೊಳ್‌ ಪುತ್ತು ಸಲಹಿದಾ ನಿತ್ಯತೆಯೆ
ಮರಳಿಯದನ್‌ ಅವ್ಯಕ್ತಮನ್ನಾಗಿ ಮಾಡಲ್ಕೆ
ಯುಗಪುರಷನಾದ ನೀನದಕೇಕೆ ದುಮ್ಮಾನಂ
ಗೊಳ್ಳುತಿಹೆ? ರಸಪೂರ್ಣ ಶೂನ್ಯದಿಂದೊಗತಂದುದೀ
ವಿಶ್ವಂ; ಅದರೊಳೆ ವಿಲೀನಮಾಗಡಗುವುದು ತಾನ್‌.
ಆದೊಡೇನ್‌? ಮರಳಿ ಬೇರೊಂದಾಕೃತಿಯ ತಳೆದು,
ಬೇರೊಂದು ಕಟ್ಟಳೆಗೆ ತಲೆಬಾಗಿ, ಬೇರೊಂದು
ಕಾಲದಲಿ ಮೂಡುವುದು. ಲೀಲೆಯೆಂಬುವುದೆಲ್ಲ
ಮೂಡುವುದು ಮುಳುಗುವುದರಲ್ಲಿಹುದು. ಅದಕೇಕೆ
ಮರುಗುವುದು? ಕನಸಿನಲಿ ಕಂಡ ಕಡವರಮಳಿಯೆ
ಎಚ್ಚತ್ತು ಶೋಕಿಪುದುಚಿತಮಲ್ತು.

ದ್ವಾಪರ (ಬಿಸುಸುಯ್ದು, ಕಲಿಯ ಹತ್ತಿರ ಹೋಗಿ ಹೆಗಲಮೇಲೆ ಕೈಯಿಟ್ಟು)
ಕಲಿದೇವ,
ಇಂದಳಿದುದನಿತುಮುಂ ಮುಂದೆ ಐತಂದಪುದೆ?

ಕಲಿ — ಅಹುದು, ಸಂದೇಹಮಿಲ್ಲ.

ದ್ವಾಪರ (ಸುತ್ತಲೂ ಕೈನೀಡಿ ತಿರುಗಿಸಿ ರಣರಂಗದಲ್ಲಿ ಕೆಡೆದ ವೀರರೆಲ್ಲರನು ನಿರ್ದೇಶಿಸಿ)
ಈ ಬೀರರನಿಬರಂ?

ಕಲಿ — ಈ ಬೀರರನಿಬರಂ!

ದ್ವಾಪರ — ಬಂದೊರೆಯ ಕಂದನಹ
ಭೀಷ್ಮನಂತಹ ಬ್ರಹ್ಮಚಾರಿಗಳ್‌?

ಕಲಿ (ಒಂದು ವಿಧವಾದ ಮೊಂಡ ಕೆಚ್ಚಿನಿಂದ) ಭೀಷ್ಮನನ್
ಮೀರಿದಪರೈತಹರ್‌!

ದ್ವಾಪರ — ಭೀಷ್ಮನೊಲ್‌ ಸೂರಳಂ
ತಪ್ಪದಿಹ ಪಾರ್ಥಿವರ್?

ಕಲಿ — ಅದಕೆರಡು ಮಡಿಯಹರ್
ಜನಿಸುವರ್

ದ್ವಾಪರ — ದ್ರೋಣನೊಲ್‌ ಬಿಲ್ಲೋಜರೈತಹರೆ?

ಕಲಿ (ತಿರಸ್ಕಾರದಿಂದಲೂ ಹೆಮ್ಮೆಯಿಂದಲೂ)
ಕರ್ಬೊಗೆಯ ಕಾರುವ ಸಿಡಿಲ್ಗಳನೆ ನಿರ್ಮಿಪರ್?
ಗ್ರಹ ಚಂದ್ರ ತಾರೆಗಳನಲೆಯುವರ್; ತೂಗುವರ್!

ದ್ವಾಪರ — ಕರ್ಣನಂತಹ ದಾನಿಗಳ್‌ ಬಹರೆ?

ಕಲಿ — ಬರದಿರರ್!

ದ್ವಾಪರ — ಬಿಂಕದಲಿ, ಚಲದಲ್ಲಿ, ಕಡುದಿಟ್ಟತನದಲ್ಲಿ,
ಬಳಲದಿರ್ಪದಟಿನಲಿ, ಪೆಂಪಿನಲಿ, ಪೆರ್ಮೆಯಲಿ,
ಬಲ್ಮೆಯಲಿ, ನೇಹದಲಿ, ಪರಮ ಗಾಂಭೀರ್ಯದಲಿ
ಕೌರವಂಗೆಣೆಯಹ ಮಹಾನುಭಾವರು ಬಹರೆ?

ಕಲಿ — ಅಹುದು ಅದಕೆ ಸಂದೆಯಮೇಕೆ?

ದ್ವಾಪರ (ಸಂತೋಷದಿಂದ)
ಧನ್ಯನ್‌?
ಅವರನಾಳುವ ಪುಣ್ಯವಿಹ ನೀನೆ ಧನ್ಯನ್‌!
ಆದೊಡಂ, ಕಲಿದೇವ, ನಿನ್ನ ಯುಗದಾಳುಗಳ್‌
ಕುಬ್ಜರೆಂಬುದು ಶಾಸ್ತ್ರಸಿದ್ಧಮಾಗಿರ್ಪುದೈಸೆ?

ಕಲಿ (ಬಿಂಕದಿಂದ)
ಕುಬ್ಜರಾದೊಡಮೇನ್‌? ದೀರ್ಘದೇಹಿಗಳಪ್ಪ
ತಮ್ಮ ಪೂರ್ವಿಕರ ಭುಜವನಡರುವರೈಸೆ?
ಅದರಿಂದ ಪೂರ್ವಯುಗಗಳ ನರರಿಗಿಂತಲುಂ
ಉನ್ನತರ್; ಬಿತ್ತರದ ದಿಟ್ಟಿಯಂ ಪಡೆದವರ್!
ಚಳಿವೆಟ್ಟಿಗಿಂತಲುಂ ಅದರ ನೆತ್ತಿಯೊಳಿರ್ಪ
ಧವಳಗಿರಿ ಶೃಂಗಮೇ ಪಿರಿದುಪ್ಪುದೈಸೆ?
ಸಾವಿನಲಿ ಹೊಸಬಾಳು ಹುದುಗಿಹುದು; ನಾಶದಲಿ
ನವಸೃಷ್ಟಿ ಪವಡಿಸಿದೆ. ನೂರು ಮಾತಿಂದೇನ್‌?
ಸಾವೆ ಹೊಸಬಾಳಿಗಾಧಾರಮಾಗಿರ್ಪುದು.
ನಾಶಮೇ ನವಸೃಷ್ಟಿಗುತ್ಸಾಹಮಾದಪುದು!

ದ್ವಾಪರ — ಯುಗಗಳೊಳ್‌ ಕಲಿಯುಗಮೆ ಶ್ರೇಷ್ಠಮೆಂದೆಂಬೆಯೇನ್‌?

ಕಲಿ — ಶ್ರೇಷ್ಠಮಪ್ಪುದೊ ಅಲ್ತೊ ಅದನ್‌ ಆನೀಗಳೊರೆಯೆನ್‌?
ಉನ್ನತೋನ್ನತಮೆಂದು ಕೆಚ್ಚಿನಿಂ ನಿಚ್ಚಿಹೆನ್‌.
ಪೂರ್ವಯುಗದನುಭವದ ತಳಹದಿಯ ಮೇಲೆಯೇ
ಬರುವ ಕಾಲದ ಭವ್ಯಮಂದಿರವ ನಿರ್ಮಿಪೆನ್‌.

ದ್ವಾಪರ (ಹರ್ಷದಿಂದ)
ನವಯುಗದ ನವಚಕ್ರವರ್ತಿ, ಕಲಿದೇವ,
ನಿನಗೆ ಮಂಗಳಮಕ್ಕೆ! ಇಂದಗೆನ್ನಾಳ್ವಿಕೆ
ತುದಿಯನೈದಿರ್ಪುದು. — ನಾನಿನ್ ತೆರಳ್ದಪೆನ್‌:
ಕೌರವೇಂದ್ರನ್‌ ಕಡೆಯುಸಿರನೆಳೆವ ಮುನ್ನಮೇ
ನಾನಾತನನ್ ಕಂಡು ಮಾತಾಡಬೇಕೆಂಬ
ನಿಡುಬಯಕೆಯಿದೆ. ಎನ್ನ ಯುಗದೊಳಾತನೆ ನರನ್‌
ತನ್ನ ಚಲದಿಂ, ತನ್ನ ಶಕ್ತಿಯಿಂ, ತನ್ನತುಳ
ದೃಢತೆಯಿಂದೆಂತುಟು ಮಹಾಸತ್ವನಹನೆಂಬ
ಸ್ವತ್ವಮಂ ತಿರೆಗೆಲ್ಲ ತೋರಿಹನ್‌. — ನಿನಗದೋ
ಎನ್ನೀ ಕಿರೀಟಮಂ ನೀಡುವೆನ್‌. (ಕಿರೀಟವನ್ನು ತೊಡಿಸಿ)
ಮೇಣಿದೋ
ರಾಜಕರವಾಲಮಿದೆ! (ಕೊಡುತ್ತಾನೆ)

ಕಲಿ (ನಮ್ರನಾಗಿ ಸ್ವೀಕರಿಸಿ)
ಅಗ್ರಜನೆ, ನಿನಗದೋ
ನಮಿಸುವೆನ್‌. ನಿನ್ನ ಅನುಭವಮೆನಗೆ ಬಟ್ಟೆದೋರಲಿ!
(ಇಬ್ಬರು ಒಬ್ಬರನ್ನೊಬ್ಬರು ಪ್ರಶಂಸನೀಯ ದೃಷ್ಟಿಯಿಂದ ನೋಡುತ್ತಾರೆ. ಕಣ್ಣೀರು ತುಂಬಿ ಆಲಿಂಗಿಸುತ್ತಾರೆ. ತರುವಾಯ ದ್ವಾಪರನು ಸುತ್ತಲೂ ತಿರುಗಿ ಶ್ಮಶಾನವನ್ನು ನೋಡಿ ನಿಟ್ಟುಸಿರು ಬಿಟ್ಟು ಎರಡು ಹೆಜ್ಜೆ ಹಿಂಚರಿಯುತ್ತಾನೆ. ಕಲಿ ದ್ವಾಪರನನ್ನೇ ನೋಡುತ್ತ ಬೆರಗಾಗುತ್ತಾನೆ.)

ಕಲಿ — ಅಣ್ಣಾ, ಏನ ನಿಟ್ಟಿಸುತಿರ್ಪೆ? ಏಕೆ ಬಿಸುಸುಯ್ಯತಿಹೆ?

ದ್ವಾಪರ (ಹೋದ ದೃಷ್ಟಿಯನ್ನು ತಿರುಗಿಸದೆ ಮರುಕದಿಂದ)
ನೊಡಲ್ಲಿ, ಕಲಿದೇವ?

ಕಲಿ — ಏನಿದೀ ಬೆಳಕುಗಳ್‌? ಕತ್ತಲೆಯ ನೂರಾರು
ಸೊಡರ್ಗಳಂ ತೆಕ್ಕನೆ ಬೆಸಲೆಯಾದಂದದಲಿ
ಕಣ್ಣಿಟ್ಟಿ ಪರಿವನ್ನೆವರಂ ಎತ್ತಲುಂ ಚಲಿಸಿ
ರಂಜಿಸಿರ್ಪುದು ಪೊಂಜುಗಳ ಬಲ್ಬಳಗಂ!

ದ್ವಾಪರ — ನೋಡಯ್‌, ಮತ್ತೇನನ್ ಕಾಂಬೆ, ನೋಡಯ್‌.

ಕಲಿ (ವಿಸ್ಮಿತನಾಗಿ)
ಏನಿದೀ ರೂಪಗಳ್‌? ಕೆಂಜೊಡರ್ಗಳ ಮಬ್ಬು
ಬೆಳಕಿನಲಿ ಮುಸುಕು ಮುಸುಕಾಗಿರ್ಪ ಮಾನವರ
ನೂರಾರು ಛಾಯೆಗಳ್‌ ಮೆಲ್ಲನೆ ಚರಿಸುತಿಹವು.

ದ್ವಾಪರ (ದುಃಖದಿಂದ)
ಅರಿಯೆಯೇನ್‌, ಕಲಿದೇವ, ಅರಿಯೆಯೇನ್‌? ಪಾಂಡವರ
ಕೌರವರ ಪಕ್ಷದಲಿ ಕಾದಾಡಿ ಮಡಿದವರ
ಅಕ್ಕರೆಯ ಬಂಧುಗಳ ತಮ್ಮವರ ಪೆಣಂಗಳಂ
ಪುಡುಕುತ್ತೆ, ದೇಹಮಿಹ ಪ್ರೇತಗಳ ತೆರದಿಂದೆ,
ಬೆಸುಸುಯ್ದು ಕಂಬನಿಯ ಸೂಸಿ ಅಲೆಯುತ್ತಿಹರ್!

ಕಲಿ — ಜನನ ಮರಣದ ದುಃಖಗಳ್‌ ಪಿಂಡುಗೊಂಡು ಈ
ಮಸಣದಲಿ ಮೆರವಣಿಗೆ ಮಾಳ್ಪಂತೆ ತೋರ್ದಪುದು!

ದ್ವಾಪರ — ಇದೆ ಪರಾಕ್ರಮಶಾಲಿಗಳ ರಣೋತ್ಸಾಹಕ್ಕೆ
ಪ್ರತಿಫಲಂ! ನೋಡಿದೆ ರಣೋನ್ಮತ್ತರಾಗಿರ್ದ
ಮೆಯ್ಗಲಿಗಳದುಟಿನಿಂದುದಿಸಿರ್ಪ ಮಸಣಂ!
ಮೇಣಿದೆ ಮಹಾಭಾರತದ ಕುರುಕ್ಷೇತ್ರದಿಂ,
ವೀರ ಸಂಗ್ರಾಮದಿಂ, ಲೋಕಪ್ರಸಿದ್ಧವಹ
ವಿಜಯದಿಂ ಮೂಡಿ ಬಂದಿಹ ಸೂಡುಗಳ ಬೀಡು!
ಶವಗಳುಗ್ರಾಣಂ! ನಿಶಾಚರಿಗಳಿಗೆ ನಾಡು!

(ಇಪ್ಪರೂ ನೋಡುತ್ತಾರೆ ನೋಡುತ್ತ ದೂರವಾಗಿ ಕತ್ತಲಲ್ಲಿ ಕರಗಿಹೋಗುತ್ತಾರೆ.)