ಹಿಂದೂಸ್ಥಾನಿ ಹಾಗೂ ಕರ್ನಾಟಕೀ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗಿ, ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತದಲ್ಲಿ ವಿಶೇಷ ಸಾಧನೆಗೈದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಸಂಗೀತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮೀಸಲಾಗಿರಿಸಿದ ಉಭಯ ಗಾನ ವಿದುಷಿ ಶ್ರೀಮತಿ ಶ್ಯಾಮಲಾ ಜಿ. ಭಾವೆ ಕರ್ನಾಟಕ ಮಹಿಳಾ ಸಂಗೀತಗಾರರಲ್ಲಿ ಅಗ್ರಗಣ್ಯರು.

ಶ್ಯಾಮಲಾ ಭಾವೆ ಅವರು ಜನಿಸಿದ್ದು ಬೆಂಗಳೂರಿನಲ್ಲಿ ೧೯೪೧ರ ಮಾರ್ಚ್ ೧೪ ರಂದು. ಅವರದು ಸಂಗೀತ ಹಾಗೂ ರಂಗಭೂಮಿ ಪರಂಪರೆಯ ಮನೆತನ. ಅವರ ಮುತ್ತಜ್ಜ ವಿಷ್ಣುದಾಸ ಭಾವೆ ಮರಾಠಿ ರಂಗಭೂಮಿಯ ಆದ್ಯ ಪ್ರವರ್ತಕರು. ತಂದೆ ಗೋವಿಂದ ವಿಠಲ ಭಾವೆ ಗಾಯಕ ಹಾಗೂ ಹದಿನಾಲ್ಕು ವಾದ್ಯ ನುಡಿಸಬಲ್ಲ ಪ್ರತಿಭಾನ್ವಿತರು. ಸಂಗೀತೋದ್ಧಾರಕ ಪಂ. ವಿಷ್ಣು ದಿಗಂಬರ ಪಲುಸ್ಕರ ಅವರ ಶಿಷ್ಯಂದಿರು. ತಾಯಿ ಶ್ರೀಮತಿ ಲಕ್ಷ್ಮೀ ಭಾವೆ ಜೇನು ಕಂಠದ ಗಾಯಕಿ. ಇಂತಹ ಸಂಗೀತ ವಾತಾವರಣದ ಮನೆತನದಲ್ಲಿ ಜನಿಸಿದ ಶ್ಯಾಮಲಾ ಅವರಿಗೆ ೩ನೇ ವಯಸ್ಸಿನಲ್ಲಿ ಸಂಗೀತ ಕಲಿಕೆಗೆ ನಾಂದಿ. ೬ನೇ ವಯಸ್ಸಿನಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ. ೧೨ನೇ ವಯಸ್ಸಿಗೆ ಸಾರ್ವಜನಿಕ ಸಂಗೀತ ಕಛೇರಿ ನೀಡಿಕೆ. ತಂದೆ-ತಾಯಿಯರಿಂದ ಹಿಂದೂಸ್ಥಾನಿ ಸಂಗೀತವನ್ನು ಬಿ. ದೊರೆಸ್ವಾಮಿ ಹಾಗೂ ಎ. ಸುಬ್ಬರಾಯ ಅವರಲ್ಲಿ ಕರ್ನಟಕೀ ಸಂಗೀತ ತಲೀಮು ಪಡೆದು ಉಭಯಗಾನ ವಿದುಷಿ ಎಂಬ ಖ್ಯಾತಿಗಳಿಸಿದರು.

೧೯೩೦ರಲ್ಲಿ ಬೆಂಗಳೂರಿನಲ್ಲಿ ಪ್ರಪ್ರಥಮ ಹಿಂದುಸ್ಥಾನಿ ಸಂಗೀತ ಶಾಲೆ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದವರು. ಶ್ಯಾಮಲಾ ಅವರ ತಂದೆ ಗೋವಿಂದ ವಿಠಲ ಭಾವೆಯವರು. ಅದನ್ನ ಸಮರ್ಥವಾಗಿ ಮುನ್ನಡೆಸುತ್ತ, ಸಹಸ್ರಾರು ಆಸಕ್ತರಿಗೆ ಸಂಗೀತ ಶಿಕ್ಷಣ ನೀಡುತ್ತಿರುವ ಶ್ಯಾಮಲಾ ಅವರು ವಿವಿಧ ದೇಶಗಳಲ್ಲಿ ಸಂಗೀತ ಕಛೇರಿ ನೀಡಿ ಭಾರತೀಯ ಸಂಗೀತಕ್ಕೆ ರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದ್ದಾರೆ. ಪಂ. ಜಸರಾಜ್‌ ಅವರ ಮಾರ್ಗದರ್ಶನದಲ್ಲಿ ಸಂಗೀತ ತಾಲೀಮು ಪಡೆದ ಅವರು ಅನೇಕ ಚಲನಚಿತ್ರ, ಸಾಕ್ಷಚಿತ್ರ, ಗ್ರಾಮಫೋನ್‌ ಹಾಗೂ ಕ್ಯಾಸೆಟ್‌ಗಳಲ್ಲಿ ಧ್ವನಿ ನೀಡಿ, ಸಂಗೀತ ನಿರ್ದೇಶನ ಮಾಡಿದ್ದಾರೆ. ಒಂಭತ್ತು ಭಾಷೆಗಳ ಸುಮಾರು ೧೩೦೦ಕ್ಕೂ ಹೆಚ್ಚಿನ ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಅಕಾಡೆಮಿಯ ಅಧ್ಯಕ್ಷರಾಗಿ ಸಂಗೀತ ಕ್ಷೇತ್ರದ ಸೇವೆ ಮಾಡಿದ್ದಾರೆ. ೧೯೯೭ರಲ್ಲಿ ಅವರ ಶಿಷ್ಯರು, ಅಭಿಮಾನಿಗಳು ಅವರ ಸುವರ್ಣ ಮಹೋತ್ಸವ ಆಚರಿಸಿ ‘ಸ್ವರ ಸಾಧನಾ’ ಎಂಬ ಅಭಿನಂದನ ಗ್ರಂಥ ಅರ್ಪಿಸಿದ್ದಾರೆ. ಅವರಿಗೆ, ಉಭಯಗಾನ ವಿಶಾರದೆ, ಉಭಯ ಗಾನ ವಿದುಷಿ, ಕರ್ನಾಟಕ ರಾಜ್ಯೋತ್ಸವ, ಗಾನ ಮಾಧುರಿ, ಸುರಮಣಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಅಮೇರಿಕಾದ ಹ್ಯೂಸ್ಟನ್‌ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೨೦೦೭), ಭಾರತ ಗೌರವ್‌, ‘ವರ್ಷದ ಮಹಿಳೆ’ (೧೯೯೭), ಗಾನ ಕೋಕಿಲ, ಕೃಷ್ಣಗಾನ ಮಾಧುರಿ ಮುಂತಾದ ಪ್ರಶಸ್ತಿ ಪುರಸ್ಕಾರ ದೊರೆತಿವೆ.