೧೯೩೯ರಲ್ಲಿ ಚೆನ್ನೈನಲ್ಲಿ ಜನಿಸಿದ ಶ್ರೀಮತಿ ಶ್ಯಾಮಲಾ ಮುರುಳಿಕೃಷ್ಣ ಅವರದು ಕಲೆ ಸಂಗೀತಗಳ ಪರಂಪರೆಯುಳ್ಳ ಕುಟುಂಬ. ನೀಲಾ ಬಾಲಸುಬ್ರಹ್ಮಣ್ಯಂ ಅವರಿಂದ ಭರತನಾಟ್ಯ, ವೇದಾಂತಂ ಲಕ್ಷ್ಮಿನಾರಾಯಣಶರ್ಮರಿಂದ ಕೂಚುಪುಡಿ, ಶ್ರೀ ರಾಧಾಕೃಷ್ಣ ಅವರಿಂದ ವಡುವೂರು ಪದ್ದತಿಯ ನೃತ್ಯ ಶೈಲಿ, ನಟನಂ ಗೋಪಾಲಕೃಷ್ಣ ರಾಮಮೂರ್ತಿ ಅವರಿಂದ ಕೇರಳೀಯ ಶೈಲಿಗಳನ್ನೂ ಅಭ್ಯಾಸ ಮಾಡಿರುವ ಶ್ಯಾಮಲಾ ಅವರು ನೃತ್ಯವನ್ನೇ ಆರಾಧಿಸುತ್ತಾ ಬಂದವರು.

ಇವರ ತಾತ ಆಂಧ್ರ ಕೇಸರಿ ಟಂಗುಟೂರಿ ಪ್ರಕಾಶಂ ಅವರು ಆಂಧ್ರ ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಇವರ ಅಜ್ಜಿ ಶ್ರೀಮತಿ ಅನ್ನಪೂರ್ಣಮ್ಮನವರು ವಿಜಯನಗರದ ಅಂದಿನ ಅರಸರಾಗಿದ್ದ ವಿಜಯ ಗಜಪತಿ ರಾಜು ಅವರ ಆಸ್ಥಾನ ವಿದುಷಿಯಾಗಿದ್ದರು.

ತಮ್ಮ ಕಲಿಕೆಯ ಅವಧಿಯಲ್ಲಿ ತಾವು ಅನುಭವಿಸಿದ ನೋವು ತಮ್ಮ ಮುಂದಿನ ಪೀಳಿಗೆಗೆ ಬರಬಾರದೆಂಬ ಉದ್ದೇಶದಿಂದ ನೃತ್ಯ ಪ್ರಕಾಶ ವರ್ಷಿಣಿ ಶಾಲೆ ತೆರೆದು ನಿರ್ವಂಚನೆಯಿಂದ ಬೋಧಿಸುವ ಕೈಕಂರ್ಯ ಕೈಗೊಂಡಿದ್ದಾರೆ ಶ್ಯಾಮಲಾ

ಗುರುವಾಗಿ ಹೆಚ್ಚು ತೃಪ್ತಿ ಕಾಣುವ ಶ್ಯಾಮಲಾ ತಮ್ಮ ಮಕ್ಕಳೂ ಸೇರಿದಂತೆ ಹಲವು ಶಿಷ್ಯರನ್ನು ತಯಾರು ಮಾಡಿ, ಮಾದರಿ ಗುರು ಎಂದು ಗೌರವಿಸಲ್ಪಡುತ್ತಾರೆ. ಇವರ ನಿರ್ದೇಶನಲ್ಲಿ ಮೂಡಿಬಂದ ಹಲವು ನೃತ್ಯ ನಾಟಕಗಳು ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ಶ್ಯಾಮಲಾರಿಗೆ ೧೯೯೯-೨೦೦೦ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.