ಶ್ಯಾಮಶಾಸ್ತ್ರೀ

ವಾಗ್ಗೇಯಕಾರರು ಎಂದರೆ ಸಂಗೀತ-ಸಾಹಿತ್ಯಗಳನ್ನು ಸೇರಿಸಿ ಹಾಡುಗಳನ್ನು ರಚಿಸುವವರು.

ನೀನಲ್ಲದೆ ದಿಕ್ಕು
ಯಾರು?

ಶ್ಯಾಮಶಾಸ್ತ್ರಿಗಳೂ ಒಬ್ಬ ಹಿರಿಯ ವಾಗ್ಗೇಯಕಾರರು, ಸೊಗಸಾಗಿ ಹಾಡುವವರು. ಅವರು ಒಮ್ಮೆ ನಾಗಪಟ್ಟಣ ಎಂಬ ಸ್ಥಳಕ್ಕೆ ಹೋದರು, ಅಲ್ಲಿನ ದೇವಿ ನೀಲಾಯತಾಕ್ಷಿಯ ದರ್ಶನಕ್ಕೆಂದು.

ಅದೇ ಊರಿನಲ್ಲಿ ಅಪ್ಪುಕುಟ್ಟಿ ಎಂಬಾತ ಭರತನಾಟ್ಯ ಕಲಿಸುವ ಗುರು, ಒಳ್ಳೆಯ ಸಂಗೀತಗಾರ. ತಾಳದ ವಿಷಯದಲ್ಲಂತೂ ಬಹು ಗಟ್ಟಿಗ. ಅನೇಕ ಸಂಗೀತ ವಿದ್ವಾಂಸ ರನ್ನು ಸೋಲಿಸಿ, ತುಂಬಾ ಜಂಬದಿಂದ ಬೀಗುತ್ತಿದ್ದ.

ಶ್ಯಾಮಶಾಸ್ತ್ರಿಗಳು ದೇವಸ್ಥಾನಕ್ಕೆ ಹೋದಾಗ, “ನಾನೂ ಹಾಡುತ್ತೇನೆ, ನೀವೂ ಹಾಡಿ, ನೋಡೋಣ ಯಾರು ಗೆಲ್ಲುತ್ತಾರೊ” ಎಂದ ಅಪ್ಪುಕುಟ್ಟಿ. ಶಾಸ್ತ್ರಿಗಳು ಒಪ್ಪಲಿಲ್ಲ. ಅನೇಕ ಜನರು ಶಾಸ್ತ್ರಿಗಳಿಗೆ ಹೇಳಿದರು: “ಈತ ತುಂಬಾ ಅಹಂಕಾರಿ ಯಾಗಿದ್ದಾನೆ, ದಯೆಯಿಟ್ಟು ನೀವು ಅವನ ಅಹಂಕಾರವನ್ನು ಇಳಿಸಬೇಕು”. ಶಾಸ್ತ್ರಿಗಳು ಒಪ್ಪಲಿಲ್ಲ.

ಶಾಸ್ತ್ರಿಗಳು ಹೇಳಿದರು: “ನಾನು ಬಂದಿರುವುದು ದೇವಿಯ ದರ್ಶನಕ್ಕೆ, ಪೂಜೆಗೆ, ಇಲ್ಲಿ ನಾನು ದೊಡ್ಡವನು, ಇನ್ನೊಬ್ಬ ಚಿಕ್ಕವನು ಎನ್ನುವ ಅಹಂಕಾರದ ಸ್ಪರ್ಧೆ ಏಕೆ? ಅಪ್ಪುಕುಟ್ಟಿಗೆ ಸಂತೋಷವಾದ ರೀತಿಯಲ್ಲಿ ಆತ ದೇವಿಯನ್ನು ಪೂಜಿಸಲಿ, ನನಗೆ ಸಂತೋಷವಾದ ರೀತಿಯಲ್ಲಿ ನಾನು ಪೂಜಿಸುತ್ತೇನೆ. ಸಂಗೀತ ಇರುವುದೇ ದೇವರ ಆರಾಧನೆಗೆ ತಾನೆ?”

ಆದರೆ ಅಪ್ಪುಕುಟ್ಟಿ ಬಿಡಲಿಲ್ಲ. ಹಠ ಹಿಡಿದ. “ಶಾಸ್ತ್ರಿಗಳು ನನ್ನನ್ನು ಸೋಲಿಸಿದರೆ ನನ್ನ ತಂಬೂರಿ-ತಾಳಗಳನ್ನು ಬಿಟ್ಟು ಬಿಡುತ್ತೇನೆ. ಭರತನಾಟ್ಯ ಹೇಳಿಕೊಡುವುದಿಲ್ಲ” ಎಂದ.

ಬೇಡದಿದ್ದರೂ ಶ್ಯಾಮಶಾಸ್ತ್ರಿಗಳು ಈ ಸ್ಪರ್ಧೆಗೆ ಒಪ್ಪ ಬೇಕಾಯಿತು. ಹಲವು ಭಾಷೆಗಳಲ್ಲಿ ಅವರು ಹಾಡಿದರು. ಕನ್ನಡದಲ್ಲಿ ಪುರಂದರದಾಸರ ದೇವರ ನಾಮ ಹಾಡಿದಾಗ ಅಪ್ಪುಕುಟ್ಟಿ, “ಇದು ಯಾವ ದೇಶದ ಭಾಷೆ?” ಎಂದು ಹಾಸ್ಯಮಾಡಿದನಂತೆ. ಆದರೆ ಅವನು ಹಾಡಿದಾಗ ಶಾಸ್ತ್ರಿಗಳನ್ನು ಸರಿಗಟ್ಟಲಾಗಲಿಲ್ಲ. ಸೋಲನ್ನು ಒಪ್ಪಿ ತಾಳ-ತಂಬೂರಿಗಳನ್ನು ಕೆಳಗಿಟ್ಟ.

ಸ್ನೇಹದಿಂದ ಶಾಸ್ತ್ರಿಗಳು ಅಪ್ಪುಕುಟ್ಟಿಗೆ ಹೇಳಿದರು: “ಅಪ್ಪಾ, ಸಂಗೀತ ಎಷ್ಟು ಕಲಿತರೆ ತಾನೆ ಸಂಪೂರ್ಣವಾಗಿ ಬಂದೀತು? ನಾವೆಲ್ಲ ಇನ್ನೂ ಕಲಿಯುತ್ತಿರುವವರೇ. ಎಲ್ಲ ದೇವರ ಆರಾಧನೆಗಷ್ಟೆ; ನಾವು ದೊಡ್ಡವರು ಎಂದು ತೋರಿಸಿಕೊಳ್ಳುವುದಕ್ಕೆ ಇರುವುದಲ್ಲ ಸಂಗೀತ ಕಲೆ. ಸಂಗೀತದಲ್ಲಿ ಭಕ್ತಿ ಇರಬೇಕು.”

ಅಪ್ಪುಕುಟ್ಟಿಗೆ ನಾಚಿಕೆಯಾಯಿತು. ‘ಇಂತಹ ಹಿರಿಯರನ್ನು ಕಾಡಿ, ಅವಮಾನ ಮಾಡಲು ಪ್ರಯತ್ನಿಸಿದೆನೇ!’ ಎಂದು ಪಶ್ಚಾತ್ತಾಪವಾಯಿತು. ಅವರಿಗೆ ಕೈಮುಗಿದು, “ನೀವು ಸಂಗೀತದಲ್ಲಿಯೂ ಹಿರಿಯರು, ಸೌಜನ್ಯದಲ್ಲಿಯೂ ಹಿರಿಯರು, ನಿಮ್ಮನ್ನು ಎಂದೂ ನಾನು ಮರೆಯಲಾರೆ” ಎಂದ.

ಸ್ಪರ್ಧೆಯಲ್ಲಿ ಗೆದ್ದರೂ ಶಾಸ್ತ್ರಿಗಳಿಗೆ ಸಮಾಧಾನ ಇಲ್ಲ. ಈ ರೀತಿ ಸ್ಪರ್ಧೆಗೆ ಒಪ್ಪಬಾರದಾಗಿತ್ತು ಎನ್ನಿಸಿತು. ಸ್ವಲ್ಪ ಕಾಲದ ನಂತರ ಈ ಭಾವನೆಯನ್ನು ಕಂಚಿ ಕಾಮಾಕ್ಷಿಗೆ ಅರ್ಪಿಸಿದ ಒಂದು ಹಾಡಿನಲ್ಲಿ ತೋಡಿಕೊಂಡರು: “ನಿನುವಿನಗಾ ಮರಿದಿಕ್ಕೆವರುನ್ನಾರು?” (ನಿನ್ನನ್ನು ಬಿಟ್ಟರೆ ನನಗೆ ದಿಕ್ಕು ಯಾರು?)

ಇಂತಹ ಮಹಾತ್ಮರು ಶ್ಯಾಮಶಾಸ್ತ್ರಿಗಳು.

ದಕ್ಷಿಣ ಭಾರತದಲ್ಲಿ ವಾಗ್ಗೇಯಕಾರರ ಸರಣಿಯಲ್ಲಿ ಸಂಗೀತ ತ್ರಿಮೂರ್ತಿಗಳೆನಿಸಿಕೊಂಡವರು ತ್ಯಾಗರಾಜರು, ಶ್ಯಾಮಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದೀಕ್ಷಿತರು. ಇವರಲ್ಲಿ ಎರಡನೆಯವರಾದ ಶ್ಯಾಮಶಾಸ್ತ್ರಿಗಳು ದೇವೀಭಕ್ತರು, ಸಂಗೀತ ಮತ್ತು ಸಂಗೀತಶಾಸ್ತ್ರ ಇವುಗಳಲ್ಲಿ ಉನ್ನತ ಮಟ್ಟದ ಶ್ರೇಷ್ಠ ವಾಗ್ಗೇಯಕಾರರು ಎಂದು ಪ್ರಸಿದ್ಧಿ ಪಡೆದವರು.

 

‘ನಾವೆಲ್ಲ ಇನ್ನೂ ಕಲಿಯುತ್ತಿರುವವರೆ.’

ಪೂರ್ವಿಕರು

 

ಶಾಸ್ತ್ರಿಗಳ ಪೂರ್ವಿಕರು ಕಂಚಿಯಲ್ಲಿರುವ ಬಂಗಾರು ಕಾಮಾಕ್ಷಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು.

ಕೆಲ ಕಾಲಾನಂತರ ವಿಜಯನಗರವು ಪತನವಾಗಿ, ದೇಶದಲ್ಲಿ ಅವ್ಯವಸ್ಥೆ ಪ್ರಾರಂಭವಾಯಿತು. ಶ್ಯಾಮಶಾಸ್ತ್ರಿಗಳ ಪೂರ್ವಿಕರು ಇನ್ನು ಆ ಪ್ರದೇಶದಲ್ಲಿರುವುದು ಕ್ಷೇಮಕರ ವಲ್ಲವೆಂದು, ತಾವು ಅತ್ಯಂತ ಭಕ್ತಿಯಿಂದ ಪೂಜಿಸುತ್ತಿದ್ದ ಕಾಮಾಕ್ಷಿ ಅಮ್ಮನ ವಿಗ್ರಹವನ್ನು ತೆಗೆದುಕೊಂಡು ದೇಶದೇಶ ಗಳನ್ನು ಸುತ್ತಿದರು. ಕಡೆಗೆ ತಂಜಾವೂರಿಗೆ ಬಂದು ನೆಲೆಸಿದರು. ಅಲ್ಲಿನ ರಾಜನಾದ ತುಳಜಾಜಿ ಮಹಾರಾಜನ ಸ್ನೇಹ ಸಂಪಾದಿಸಿ ಅಲ್ಲಿಯೇ ಒಂದು ದೇವಾಲಯವನ್ನು ಕಟ್ಟಲು ನಿರ್ಧರಿಸಿದರು. ದೇವಾಲಯದ ನಿರ್ಮಾಣ ಕಾರ್ಯ ಮುಗಿಯಿತು. ಬಂಗಾರು ಕಾಮಾಕ್ಷಿ ಅಮ್ಮನವರ ವಿಗ್ರಹವನ್ನು ಅಲ್ಲಿ ಪ್ರತಿಷ್ಠಿಸಿ ಅಮ್ಮನವರ ನಿತ್ಯೋತ್ಸವ ಅರ್ಚನೆಯನ್ನು ವಹಿಸಿಕೊಂಡರು ಶ್ಯಾಮಶಾಸ್ತ್ರಿಗಳ ತಂದೆ.

ವೆಂಕಟೇಶ್ವರನ ಅನುಗ್ರಹ

ವಿಶ್ವನಾಥಶಾಸ್ತ್ರಿಗಳಿಗೆ ಲಗ್ನವಾದಾಗ ಇಪ್ಪತ್ತೈದು ವರ್ಷ ವಯಸ್ಸು. ಬಹಳ ವರ್ಷಗಳು ಮಕ್ಕಳಿಲ್ಲದೆ ಆ ದಂಪತಿಗಳು ಬಹಳವಾಗಿ ಚಿಂತೆಗೀಡಾಗಿದ್ದರು. ಅವರ ಮನೆಯ ಸಮೀಪ ದಲ್ಲಿಯೇ ತಿರುಪತಿ ವೆಂಕಟರಮಣಸ್ವಾಮಿಯ ಉತ್ಸವ ಸಮಾರಾಧನೆ ನಡೆಯುತ್ತಿತ್ತು. ಪ್ರತಿದಿನ ಈ ದಂಪತಿಗಳೂ ಪೂಜಾ ವೇಳೆಗೆ ಹೋಗಿ ತಮ್ಮ ಕೊರತೆಯನ್ನು ದೇವರಲ್ಲಿ ಹೇಳಿಕೊಳ್ಳುತ್ತಿದ್ದರು.

ದೇವಾಲಯದಲ್ಲಿ ಒಂದು ದಿನ ವಿಶೇಷ ಸಂಗತಿ ನಡೆಯಿತು ಎಂದು ಹೇಳುತ್ತಾರೆ.

ಅಲ್ಲಿಯೇ ಇರುತ್ತಿದ್ದ ಒಬ್ಬ ವಯೋವೃದ್ಧ ಆ ದಂಪತಿ ಗಳನ್ನು ಕರೆದು, “ನೀವು ಅನನ್ಯ ಭಕ್ತಿಯಿಂದ ವೆಂಕಟೇಶ್ವರನ ಪೂಜೆ ನಡೆಸಿರುವಿರಿ. ಇನ್ನು ಒಂದು ವರ್ಷದಲ್ಲೇ ನಿಮ್ಮ ಆಸೆ ಕೈಗೂಡಿ ಒಳ್ಳೆಯ ಪ್ರತಿಭಾಶಾಲಿಯಾದ ಮಗನು ಜನಿಸುವನು” ಎಂದು ಹೇಳಿ ಆಶೀರ್ವಾದ ಮಾಡಿದರು.

ವೃದ್ಧರು ನುಡಿದ ಹಾಗೆಯೇ ಚೈತ್ರಮಾಸದ ಕೃತ್ತಿಕಾ ನಕ್ಷತ್ರದಲ್ಲಿ ವಿಶ್ವನಾಥಶಾಸ್ತ್ರಿಗಳ ಧರ್ಮಪತ್ನಿ ಗಂಡುಮಗುವಿಗೆ ಜನ್ಮವಿತ್ತಳು. ಮಗು ಲಕ್ಷಣವಾಗಿದ್ದು ನೋಡುವವರ ಮನಸ್ಸನ್ನು ಆಕರ್ಷಿಸುತ್ತಿತ್ತು. ಶ್ರೀ ವೆಂಕಟೇಶ್ವರನ ಅನುಗ್ರಹದಿಂದ ಜನಿಸಿದ ಮಗನಿಗೆ ವೆಂಕಟ ಸುಬ್ರಹ್ಮಣ್ಯನೆಂದು ಹೆಸರಿಟ್ಟರು. ಮಗುವಿನ ರೂಪು ಮತ್ತು ಆಟಪಾಟಗಳನ್ನು ನೋಡಿ ಮುದ್ದಿನಿಂದ ಶ್ಯಾಮ ಕೃಷ್ಣನೆಂದು ಕರೆಯುತ್ತಿದ್ದರು.

ಬಂಗಾರು ಕಾಮಾಕ್ಷಿ ಶಾಸ್ತ್ರಿಗಳ ಮನೆದೇವರಲ್ಲವೇ? ಆದ್ದರಿಂದಲೇ ಶ್ಯಾಮಶಾಸ್ತ್ರಿಗಳು ತಮ್ಮ ಕೃತಿರಚನೆಯ ಕೊನೆ ಯಲ್ಲಿ ‘ಶ್ಯಾಮಕೃಷ್ಣ ಸಹೋದರಿ’ ಎಂದೇ ಅಂಕಿತವಿಟ್ಟಿದ್ದಾರೆ.

ವಿದ್ಯಾಭ್ಯಾಸ

ಶ್ಯಾಮಶಾಸ್ತ್ರಿಗಳು ಚಿಕ್ಕಂದಿನಿಂದಲೂ ಬಹಳ ಬುದ್ಧಿವಂತರು, ಚುರುಕು ಸ್ವಭಾವದವರು. ಅಲ್ಲದೆ ದೇವರಲ್ಲಿ ತುಂಬಾ ಭಕ್ತಿ ಅವರಿಗೆ.

ಅವರ ವಿದ್ಯಾಭ್ಯಾಸ, ತಾಯಿಭಾಷೆಯಾದ ತೆಲುಗಿನಲ್ಲಿ. ಆದರೆ ವೇದಭಾಷೆಯಾದ ಸಂಸ್ಕೃತದಲ್ಲಿ ಮಹಾ ಪಂಡಿತ ರಾದುದಲ್ಲದೆ ತಮಿಳು ಬಾಷೆಯನ್ನೂ ಇತರ ಹಲವು ಭಾಷೆ ಗಳನ್ನೂ ಚೆನ್ನಾಗಿ ಕಲಿತಿದ್ದರು.

ಶ್ಯಾಮಶಾಸ್ತ್ರಿಗಳ ಪೂರ್ವಿಕರಾಗಲಿ, ತಂದೆಯವರಾಗಲಿ ಸಂಗೀತ ತಿಳಿದವರಲ್ಲ. ಶಾಸ್ತ್ರಿಗಳ ಸೋದರಮಾವನವರು ಸಂಗೀತ ಅಭ್ಯಾಸ ಮಾಡಿದ್ದರು. ಶ್ಯಾಮಶಾಸ್ತ್ರಿಗಳ ತಂದೆಯವರು ಪೂಜೆ ಮಾಡುವಾಗ ಶ್ಯಾಮಶಾಸ್ತ್ರಿಯವರು ಸಂಸ್ಕೃತ ಶ್ಲೋಕಗಳನ್ನು ತೆಲುಗು ಚೂರ್ಣಿಕೆಗಳನ್ನೂ ರಾಗವಾಗಿ ಹಾಡುತ್ತಿದ್ದರು.

ತಮ್ಮ ಮಗನು ವೇದ-ವೇದಾಂಗ ಪಾರಂಗತನಾಗಿ ತಮ್ಮ ವಂಶವೃತ್ತಿಯಾದ ಅರ್ಚನೆಯಲ್ಲಿ ಮುಂದುವರಿಯಲಿ ಎಂದು ವಿಶ್ವನಾಥಶಾಸ್ತ್ರಿಗಳ ಆಸೆ. ಆದರೆ ಸಂಗೀತದ ಕಡೆ ಮಗನ ಒಲವು ಇರುವುದನ್ನು ನೋಡಿ ಶಾಸ್ತ್ರಿಗಳು ಸೋದರಮಾವನಲ್ಲಿ ಸಂಗೀತ ಕಲಿಯಲು ಅನುಮತಿ ಇತ್ತರು.

ಸೋದರಮಾವನಲ್ಲಿ ಹುಡುಗನ ವಿದ್ಯಾಭ್ಯಾಸ ಚೆನ್ನಾಗಿ ನಡೆ ಯಿತು. ಆದರೆ ಹುಡುಗನು ಆಗಲೇ ಕೀರ್ತಿ ಪಡೆಯುತ್ತಿದ್ದು ದನ್ನು ನೋಡಿ ಸೋದರಮಾವನಿಗೆ ಅಸೂಯೆ.

ಸಂಗೀತಸ್ವಾಮಿ

ಈ ಸನ್ನಿವೇಶಕ್ಕೆ ತಕ್ಕಂತೆ ಒಂದು ಸಂಗತಿ ನಡೆಯಿತು. ಒಂದು ದಿನ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ಸಂಗೀತ ಮತ್ತು ನಾಟ್ಯಸೇವೆ ಸಲ್ಲಿಸುತ್ತಿದ್ದ ಸಂಗೀತಸ್ವಾಮಿಯೆಂಬ ಸಂನ್ಯಾಸಿಯು ಚಾತುರ್ಮಾಸವನ್ನು ಆಚರಿಸಲು ತಂಜಾವೂರಿಗೆ ಬಂದರು. ಶ್ಯಾಮಶಾಸ್ತ್ರಿಗಳು ಹಾಡಿದ್ದನ್ನು ಕೇಳಿ ಸಂಗೀತಸ್ವಾಮಿ ತುಂಬಾ ಸಂತೋಷಪಟ್ಟರು. ತಾವು ತಂಜಾವೂರಿನಲ್ಲಿರುವಷ್ಟು ಕಾಲವೂ ಸಂಗೀತದಲ್ಲಿನ ರಾಗ ತಾಳ ರಹಸ್ಯವನ್ನೆಲ್ಲಾ ಶ್ಯಾಮ ಶಾಸ್ತ್ರಿಗಳಿಗೆ ಮನಬಿಚ್ಚಿ ತಿಳಿಸಿದರು. ಶ್ಯಾಮಶಾಸ್ತ್ರಿಗಳು ಗುರುವು ಹೇಳಿಕೊಟ್ಟುದನ್ನು ಶ್ರದ್ಧೆಯಿಂದ ಕಲಿತು, ಕೈವಶ ಮಾಡಿಕೊಂಡರು. ಇದರಿಂದ ಆನಂದಿತರಾದ ಸಂಗೀತಸ್ವಾಮಿ ತಮ್ಮಲ್ಲಿದ್ದ ಅಮೂಲ್ಯ ಸಂಗೀತಶಾಸ್ತ್ರ ಗ್ರಂಥಗಳನ್ನು ಕೊಟ್ಟು ಶಾಸ್ತ್ರಿಗಳಿಗೆ, “ಇನ್ನು ಮುಂದೆ ನೀನು ತಂಜಾವೂರು ಆಸ್ಥಾನ ಸಂಗೀತ ವಿದ್ವಾಂಸರಾದ ಪಚ್ಚಿಮಿರಿಯ ಆದಿಯಪ್ಪನವರ ಸಂಗೀತವನ್ನು ಕೇಳುತ್ತಿರು. ನೀನು ಮುಂದೆ ಅದ್ವಿತೀಯ ಸಂಗೀತ ವಿದ್ವಾಂಸನಾಗುವೆ” ಎಂದು ಹರಸಿ ಆಶೀರ್ವದಿಸಿ ಕಾಶಿಗೆ ಹಿಂತಿರುಗಿದರು.

ಆದಿಯಪ್ಪನವರು

ಭೈರವಿ ರಾಗದ ಅಟ್ಟತಾಳ ವರ್ಣ ’ವೀರಿಬೋಣಿ’ ಪ್ರಸಿದ್ಧವಾದ ಕೃತಿ, ಜನಪ್ರಿಯವಾದ ಕೃತಿ. ಅದನ್ನು ರಚಿಸಿದವರು ಪಚ್ಚಿಮಿರಿಯ ಆದಿಯಪ್ಪನವರು. ಸಂಗೀತಸ್ವಾಮಿ ಹೇಳಿದ ರೀತಿ ಶ್ಯಾಮಶಾಸ್ತ್ರಿಗಳು ಪಚ್ಚಿಮಿರಿಯ ಆದಿಯಪ್ಪನವರಲ್ಲಿ ಅನೇಕ ವಿಷಯಗಳನ್ನು ಅರಿತರು. ಮುಖ್ಯವಾಗಿ ಅವರು ಹಾಡುವ ವಿಧಾನ, ಸಾಹಿತ್ಯ ರಚನಾಶೈಲಿ ಇವುಗಳನ್ನು ಪೂರ್ಣವಾಗಿ ತಿಳಿದುಕೊಂಡು ಆದಿಯಪ್ಪನವರ ಸಮಕ್ಷಮ ಹಾಡಿದರು. ಶ್ಯಾಮಶಾಸ್ತ್ರಿಗಳ ಕಂಠದ ಸೊಗಸು, ಸಾಹಿತ್ಯದ ಸ್ಪಷ್ಟತೆ, ತಾಳ ದಲ್ಲಿನ ಕ್ರಮವಾದ ಕಟ್ಟುನಿಟ್ಟು ಇವುಗಳನ್ನು ನೋಡಿದ ಆದಿ ಯಪ್ಪನವರಿಗೆ ಮಾತು ಬಾರದೆ ಕಣ್ಣಿನಲ್ಲಿ ಆನಂದ ಬಾಷ್ಪ ತುಂಬಿತು. ಶ್ಯಾಮಶಾಸ್ತ್ರಿಗಳನ್ನು ’ಕಾಮಾಕ್ಷಿ’ ಎಂದೇ ಕರೆದರಂತೆ.

ಸಂಸಾರ

ಶ್ಯಾಮಶಾಸ್ತ್ರಿಗಳು ಮೊದಲೇ ತೇಜಸ್ವಿಗಳು, ದೈವಭಕ್ತರು, ಸ್ಫುರದ್ರೂಪಿಗಳು, ಇನ್ನು ಸಂಗೀತ ಸರಸ್ವತಿ ಒಲಿದರೆ ಕೇಳಬೇಕೇ!

ಶಾಸ್ತ್ರಿಗಳಿಗೆ ಗುಣವತಿಯೂ ಅನುರೂಪಳೂ ಆದ ಕನ್ಯೆ ಯೊಡನೆ ವಿವಾಹವಾಯಿತು. ಆಗ ಶಾಸ್ತ್ರಿಗಳ ವಯಸ್ಸು ಹದಿನೆಂಟು.

ಕೆಲ ಕಾಲದನಂತರ ಶಾಸ್ತ್ರಿಗಳ ತಂದೆಯವರು ತೀರಿ ಕೊಂಡರು. ಈಗ ಶ್ಯಾಮಶಾಸ್ತ್ರಿಗಳಿಗೆ ಸಂಸಾರದ ಹೊರೆ ಯೊಂದು ಕಡೆ, ತಮ್ಮ ಆರಾಧ್ಯ ದೇವಿಯ ಪೂಜಾ ಕೈಂಕರ್ಯ ಇನ್ನೊಂದು ಕಡೆ. ಆದರೆ ಶಾಸ್ತ್ರಿಗಳು ಸಂಸಾರದಲ್ಲಿ ಅತಿ ಆಸಕ್ತಿ ತೋರಲಿಲ್ಲ. ಸದಾ ದೇವಿಯ ಆರಾಧನೆಯಲ್ಲಿ ಮತ್ತು ಕೃತಿರಚನಾ ಕಾರ್ಯದಲ್ಲಿ ಮಗ್ನರಾಗಿರುತ್ತಿದ್ದರು. ಶುಕ್ರವಾರ ದಂದು ಶಾಸ್ತ್ರಿಗಳು ತನ್ಮಯರಾಗಿ ಕಾಮಾಕ್ಷಿ ಅಮ್ಮನ ಸನ್ನಿಧಿಯಲ್ಲಿ ಹೆಚ್ಚಿನ ಕೃತಿರಚನೆ ಮಾಡಿ ಹಾಡುತ್ತಿದ್ದರು.

ಕಷ್ಟದ ದಾರಿ

ಶ್ಯಾಮಶಾಸ್ತ್ರಿಗಳ ಮೊಟ್ಟಮೊದಲ ಕೃತಿ ‘ಜನನೀ ನತಜನ ಪಾಲಿನಿ ಪಾಹಿಮಾಂ ಭವಾನಿ.’ ಇದು ಸಂಸ್ಕೃತ ಭಾಷೆಯಲ್ಲಿದೆ. ಶಾಸ್ತ್ರಿಗಳ ಅನೇಕ ರಚನೆಗಳು ತೆಲುಗು ಮಿಶ್ರವಾದ ಸಂಸ್ಕೃತ ಭಾಷೆಯಲ್ಲಿವೆ. ಸಾಹಿತ್ಯ ಬಹಳ ಕ್ಲಿಷ್ಟಕರವಾಗಿಯೂ ಕಷ್ಟವಾದ ತಾಳಗಳಿಂದಲೂ ಕೂಡಿದೆ.

ಶಾಸ್ತಿಗಳು ಸಾಮಾನ್ಯ ರಾಗಗಳಲ್ಲಿ ಮತ್ತು ಅಪರೂಪ ರಾಗಗಳಲ್ಲಿ ರಚನೆಗಳನ್ನು ಮಾಡಿದ್ದಾರೆ. ಆದರೆ ಸಾಮಾನ್ಯ ರಾಗಗಳಂತೆಯೇ ಅನಪರೂಪ ರಾಗ ರಚನೆಗಳನ್ನೂ ಕಷ್ಟವಿಲ್ಲದೆ ಲೀಲಾಜಾಲವಾಗಿ ಹಾಡುತ್ತಿದ್ದರು.

ಶ್ಯಾಮಶಾಸ್ತ್ರಿಗಳು ಬಂಗಾರು ಕಾಮಾಕ್ಷಿಯ ಭಕ್ತರಾದುದ ರಿಂದ ಶುಕ್ರವಾರದಂದು ಹೆಚ್ಚಿನ ಕೃತಿರಚನೆಯಾಗುತ್ತಿತ್ತು. ಅಂದು ಶಾಸ್ತ್ರಿಗಳು ಮೈಮರೆತು ಹಾಡುತ್ತಿದ್ದುದುಂಟು. ಹಾಡುವಾಗ ತಮ್ಮನ್ನೇ ದೇವಿಗೆ ಅರ್ಪಿಸಿಕೊಳ್ಳುತ್ತಿದ್ದರು. ಇವರ ಕೃತಿಗಳಲ್ಲಿ ಇವರ ಭಕ್ತಿಪಾರವಶ್ಯತೆಯನ್ನು ಕಾಣಬಹುದು.

ಇಂತಹ ಪ್ರತಿಭೆ ಶಾಸ್ತ್ರಿಗಳಲ್ಲಿದ್ದರೂ ಇವರಿಗೆ ಶಿಷ್ಯರು ಕಡಿಮೆಯೇ. ಒಂದು ವೇಳೆ ಒಬ್ಬಿಬ್ಬರು ಶಿಷ್ಯವೃತ್ತಿಗಾಗಿ ಬಂದರೂ ಎಲ್ಲವೂ ಅರ್ಧದಲ್ಲೆ ಕೈಬಿಡುವಂತಾಗುತ್ತಿತ್ತು. ಇದಕ್ಕೆ ಕಾರಣ ಶಾಸ್ತ್ರಿಗಳ ರಚನಾ ಶೈಲಿಯಲ್ಲಿನ ಕಠಿಣವಾದ ದಾರಿಯೇ. ಹೊಸದಾಗಿ ಕಲಿಯುವವರಿಗಂತೂ ಪಾಠ ಸಾಧ್ಯವೇ ಆಗುತ್ತಿರಲಿಲ್ಲ. ಸಂಗೀತ ಸಾಹಿತ್ಯದಲ್ಲಿ ಪಳಗಿದವರು ಮಾತ್ರ ಶಾಸ್ತ್ರಿಗಳಲ್ಲಿ ಶಿಷ್ಯವೃತ್ತಿ ಮಾಡಲು ಸಾಧ್ಯವಾಗುತ್ತಿತ್ತು.

ಶ್ಯಾಮಶಾಸ್ತ್ರಿಗಳು ಮನುಷ್ಯರನ್ನು ಹೊಗಳಲು ತಮ್ಮ ರಚನೆಗಳನ್ನು ಬಳಸಿದವರೇ ಅಲ್ಲ. ಸಂಗೀತ ಕಲೆ ಇರುವುದು ದೇವರನ್ನು ಸ್ತುತಿಸುವುದಕ್ಕೆ ಎಂದು ಅವರ ನಂಬಿಕೆ. ಮಗು ತಾಯಿಯನ್ನು ಬೇಡುವಂತೆ ಸಂಗೀತದ ಮೂಲಕ ಕಾಮಾಕ್ಷಿ ದೇವಿಯನ್ನು ಅವರು ಬೇಡಿಕೊಂಡರು. ಮನುಷ್ಯರನ್ನು ಹೊಗಳುವುದಿಲ್ಲ ಎಂಬ ತತ್ವವನ್ನು ಕೊನೆಯವರೆಗೂ ಪಾಲಿಸಿಕೊಂಡು ಬಂದರು.

ಸಂಗೀತವೇ ಪ್ರಾಣ

ಶ್ಯಾಮಶಾಸ್ತ್ರಿಗಳಿಗೆ ಸಂಗೀತ ಎಂದರೆ ಪ್ರಾಣ. ಅವರು ವಿದ್ವಾಂಸರಲ್ಲಿ ಸಂಭಾಷಣೆಗೆ ಕುಳಿತರೆ ಸ್ನಾನ, ಊಟ ಎಲ್ಲವನ್ನೂ ಮರೆಯುತ್ತಿದ್ದರಂತೆ.

ಒಂದು ಬಾರಿ ತ್ಯಾಗರಾಜರೂ ಶಾಸ್ತ್ರಿಗಳೂ ಸಂಗೀತದ ವಿಷಯ ಮಾತನಾಡುತ್ತ ಕುಳಿತರಂತೆ. ಮಧ್ಯರಾತ್ರಿ ಆಯಿತು. ತ್ಯಾಗರಾಜರ ಶಿಷ್ಯಮಂಡಳಿಗೂ ಇತರರಿಗೂ ಊಟವಿಲ್ಲ. ಈ ಪ್ರಸಂಗವನ್ನು ಕುರಿತು ಶಿಷ್ಯರು ಹೀಗೆ ಹೇಳಿದರಂತೆ: “ಈ ಮಾತುಗಳನ್ನು ಕೇಳಿ ನಮ್ಮ ಕೊನೆಗಾಲದವರೆವಿಗೂ ನಾವು ಯೋಚನೆ ಮಾಡಬೇಕಾದ ಸಂಗೀತದಲ್ಲಿನ ಅನೇಕ ಅಮೂಲ್ಯ ವಿಷಯಗಳನ್ನು ಕಲಿತೆವು. ಈ ಮಹಾನುಭಾವರ ಸಂಭಾಷಣೆ ಕೇಳಿ ಹಬ್ಬದ ಆರೋಗಣೆಯಾದಷ್ಟು ತೃಪ್ತಿಯಾಗಿದೆ.”

ಇಂತಹ ಎಷ್ಟೋ ಚರ್ಚೆಗಳು ಮುತ್ತುಸ್ವಾಮಿ ದೀಕ್ಷಿತರ ಜೊತೆಯಲ್ಲೂ ನಡೆದವು.

ಶ್ಯಾಮಶಾಸ್ತ್ರಿಗಳು ತೀರ್ಥಯಾತ್ರೆ ಮಾಡಿದವರಲ್ಲ, ಯಾವ ಕ್ಷೇತ್ರದರ್ಶನವನ್ನೂ ಮಾಡಿದವರಲ್ಲ. ಆದರೆ ಒಂದು ಬಾರಿ ಪುದುಕೋಟೆಯಲ್ಲಿನ ಒಬ್ಬ ಗಣ್ಯರ ಆಗ್ರಹದ ಮೇರೆಗೆ ಮಧುರೆಗೆ ಹೋಗಿ ಅಲ್ಲಿ ಮಧುರೆ ಮೀನಾಕ್ಷಿ ದೇವಿಯ ದರ್ಶನವಾದ ಮೇಲೆ, ಆ ದೇವಿಯ ಅಂಕಿತದಲ್ಲಿ ಒಂಬತ್ತು ಕೃತಿ ರಚನೆ ಮಾಡಿ ಹಾಡಿದರಂತೆ. ಆ ರಚನೆಗಳೇ ನವರಾಗ ಮಾಲಿಕೆಗಳು. ಅವುಗಳಲ್ಲಿ ಪ್ರಸಿದ್ಧವಾದ ಕೆಲವು ರಚನೆಗಳು ಇವು:

‘ಸರೋಜ ದಳನೇತ್ರಿ’ (ಶಂಕರಾಭರಣ ರಾಗ, ಆದಿತಾಳ), ‘ದೇವಿ ಮೀನನೇತ್ರಿ’ (ಶಂಕರಾಭರಣ ರಾಗ, ಆದಿತಾಳ), ‘ಮರಿ ವೇರಿ ಗತಿ ಎವರಮ್ಮ’(ಆನಂದಭೈರವಿ ರಾಗ, ಚಾಪುತಾಳ), ‘ನನ್ನು ಬ್ರೋವು ಲಲಿತ’ (ಲಲಿತ ರಾಗ, ಮಿಶ್ರಲಘು ತಾಳ), ‘ಮಾಯಮ್ಮ’ (ಅಹಿರಿ ರಾಗ, ಆದಿತಾಳ), ‘ದೇವಿ ನೀ ಪದ ಸಾರಸ’ (ಕಾಂಭೋಜಿ ರಾಗ, ಆದಿತಾಳ) ಮತ್ತು ‘ಮೀನಾ ಲೋಚನ ಬ್ರೋವ’ (ಧನ್ಯಾಸಿ ರಾಗ, ಚಾಪುತಾಳ).

ಆಗಿನ ಕಾಲದಲ್ಲಿ ಈಗಿನಂತೆ ಸಾಹಿತ್ಯವನ್ನು ಅಚ್ಚು ಹಾಕುವ ಯಂತ್ರಗಳಾಗಲಿ ಅಥವಾ ಇನ್ನಾವ ಸೌಕರ್ಯಗಳಾಗಲಿ ಇರಲಿಲ್ಲ. ಇದರಿಂದ ಘನ ವಿದ್ವಾಂಸರುಗಳ ಸಂಗೀತ ಯಾವ ಧಾಟಿಯಲ್ಲಿತ್ತು, ಅವರು ಹಾಡುತ್ತಿದ್ದ ರೀತಿ ಯಾವುದು ಎಂಬುದು ತಿಳಿಯುವುದು ಸಾಧ್ಯವಿಲ್ಲವಾಗಿದೆ. ಆದರೆ ಒಬ್ಬೊಬ್ಬ ಪ್ರಸಿದ್ಧ ವಾಗ್ಗೇಯಕಾರರಿಗೂ ಎಷ್ಟು ಮಂದಿ ಶಿಷ್ಯರಿದ್ದರೆ ಅಷ್ಟು ಕೃತಿಗಳ ಪ್ರಚಾರವಾಗುತ್ತಿತ್ತು. ಈ ಪ್ರಚಾರದಿಂದಲೇ ಹಲಕೆಲವು ಕೃತಿಗಳು ಉಳಿದಿವೆ ಎನ್ನಬಹುದು.

ಬೊಬ್ಬಿಲಿ ಕೇಶವಯ್ಯ

ಶ್ಯಾಮಶಾಸ್ತ್ರಿಗಳ ಕೀರ್ತಿ ಹರಡಿದಂತೆ ಸಂಗೀತ ಪ್ರಪಂಚದ ಅನೇಕ ಹಿರಿಯರು ಅವರನ್ನು ಗೌರವಿಸಿದರು. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಅವರನ್ನು ವಿಶ್ವಾಸದಿಂದ ಕಂಡರು. ಶಾಸ್ತ್ರಿಗಳಿಗೆ ಸಂಗೀತದಲ್ಲಿ ಸ್ಪರ್ಧೆ, ಬಿರುದುಬಾವಲಿಗಳು. ಇಷ್ಟ ವಿರಲಿಲ್ಲ. ಆದರೆ ಅನಿವಾರ್ಯವಾದಾಗ ಸ್ಪರ್ಧೆಗೆ ಇಳಿಯು ತ್ತಿದ್ದರು. ಅಪ್ಪುಕುಟ್ಟಿಯ ಒಂದು ಪ್ರಸಂಗವನ್ನು ಆಗಲೇ ನೋಡಿ ದೆವಲ್ಲ? ಅಂತಹದೇ ಇನ್ನೊಂದು ಪ್ರಸಂಗ ನಡೆಯಿತು. ಇದರಲ್ಲಿ ಅವರ ಪ್ರತಿಸ್ಪರ್ಧಿ ಬೊಬ್ಬಿಲಿ ಸಂಸ್ಥಾನದ ಕೇಶವಯ್ಯ ಎಂಬುವರು.

ಕೇಶವಯ್ಯ ದಕ್ಷಿಣ ದೇಶದಲ್ಲಿ ತಮ್ಮ ಜೊತೆ ಪೋಟಿ ಮಾಡಿ ಹಾಡುವ ವಿದ್ವಾಂಸರೇ ಇಲ್ಲವೆಂದು ಸಾರಿದರು. ತಾವು ’ಭೂಲೋಕ ಚಾಪಗುಟ್ಟಿ’ (’ಪ್ರಪಂಚದಲ್ಲಿರುವ ಸಂಗೀತವನ್ನೆಲ್ಲಾ ಚಾಪೆಯಂತೆ ಸುತ್ತಿ ನನ್ನ ವಶಪಡಿಸಿಕೊಂಡಿರುವೆ’) ಎಂಬ ಬಿರುದುಳ್ಳವರೆಂದು ಜಂಬದಿಂದ ಹೇಳಿಕೊಳ್ಳುತ್ತಿದ್ದರು.

ತಾವು ಹಾಡಿದ ಸ್ಥಳಗಳಲ್ಲೆಲ್ಲಾ ತಮ್ಮ ಬಿರುದು, ಪಾರಿ ತೋಷಕಗಳನ್ನು ಪ್ರದರ್ಶಿಸಿ ಎಲ್ಲರನ್ನೂ ಭಯ ಪಡಿಸುತ್ತಿದ್ದರು. ಇವರ ಈ ರೀತಿಯ ಆರ್ಭಟವನ್ನು ನೋಡಿ ಎಲ್ಲರೂ ಮೌನವಾಗಿರುತ್ತಿದ್ದರಂತೆ.

ಈ ಬೊಬ್ಬಿಲಿ ವಿದ್ವಾಂಸರು ತಂಜಾವೂರಿಗೆ ಬಂದರು. ‘ನನ್ನ ಎದುರು ಸ್ಪರ್ಧೆ ಬರುವವರು ಸಿದ್ಧರಾಗಲಿ’ ಎಂದು ಸಾರಿದರು.

ತಂಜಾವೂರು ಆಸ್ಥಾನ ವಿದ್ವಾಂಸರು ಶ್ಯಾಮಶಾಸ್ತ್ರಿಗಳಲ್ಲಿ ಹೀಗೆ ಮನವಿ ಮಾಡಿಕೊಂಡರಂತೆ: “ಸ್ವಾಮಿ, ತಾವು ದೇವೀ ಆರಾಧಕರು ಮತ್ತು ಸ್ವಲ್ಪವೂ ಆಟಾಟೋಪವಿಲ್ಲದವರು. ತಮ್ಮ ವಿದ್ವತ್ ಪ್ರತಿಭೆಯ ಮುಂದೆ ಯಾವ ವಿದ್ವಾಂಸರೂ ಗೆಲ್ಲ ಲಾರರು, ಈ ನಮ್ಮ ಆಸ್ಥಾನದ ಗೌರವ ತಮ್ಮಿಂದಲೇ ಉಳಿಯಬೇಕು. ತಾವು ಆಸ್ಥಾನದಲ್ಲಿ ಹಾಡಿ ಆ ಆಟಾಟೋಪದ ವಿದ್ವಾಂಸರನ್ನು ಇಲ್ಲಿಂದ ಹೇಗಾದರೂ ಮಾಡಿ ಓಡಿಸಬೇಕು.”

ಶಾಸ್ತ್ರಿಗಳು ಮೊದಲಿನಿಂದ ಯಾವ ರಾಜಾಶ್ರಯ ಅಥವಾ ಬಿರುದು-ಬಾವಲಿಗಳಿಗೆ ಆಸೆಪಟ್ಟವರಲ್ಲ. ಸ್ಪರ್ಧೆ ತಂಜಾವೂರಿನ ರಾಜ ಶರಭೋಜನ ಆಸ್ಥಾನದಲ್ಲಿ ನಡೆಯುವುದು. ಆದರೆ ಈಗ ಬಂದಿರುವ ಪ್ರಶ್ನೆ ಸಂಗೀತ ವಿದ್ವತ್ತಿನ ಘನತೆಗೇ ಸವಾಲು. ಕೇಶವಯ್ಯ ಸಂಗೀತಗಾರರು ಹೇಗೆ ನಡೆದುಕೊಳ್ಳಬಾರದೋ ಹಾಗೆಯೇ ನಡೆದು ಕೊಳ್ಳುತ್ತಿದ್ದಾರೆ.

ಶ್ಯಾಮಶಾಸ್ತ್ರಿಗಳು ಶಾಂತರಾಗಿ ಎಲ್ಲವನ್ನೂ ಯೋಚಿಸಿದರು. ವಿದ್ವಾಂಸರ ಪ್ರಾರ್ಥನೆಯನ್ನು ನಿರಾಕರಿಸ ಲಾಗಲಿಲ್ಲ. ರಾಜಸಭೆ ಯಲ್ಲಿ ಬೊಬ್ಬಿಲಿ ಕೇಶವಯ್ಯನವರ ಜೊತೆ ಸ್ಪರ್ಧೆಗೆ ಬರಲು ಒಪ್ಪಿದರು.

 

ಶ್ಯಾಮಶಾಸ್ತ್ರಿಗಳು ಬಂಗಾರು ಕಾಮಾಕ್ಷಿಯ ಅರ್ಚನೆ ಮಾಡುತ್ತಿರುವುದು.

ಆ ಸ್ಪರ್ಧೆಗೆ ಮೊದಲು ಶಾಸ್ತ್ರಿಗಳು ತಮ್ಮ ಆರಾಧ್ಯ ದೇವತೆ ಕಾಮಾಕ್ಷಿ ಅಮ್ಮನವರಲ್ಲಿ ಪ್ರಾರ್ಥಿಸಿದರಂತೆ. ಅಂದು ರಚನೆ ಯಾದ ಚಿಂತಾಮಣಿ ರಾಗದ ಕೃತಿ ’ದೇವಿ ಬ್ರೋವ ಸಮಯ ವಿದೆ ಅತಿ ವೇಗಮೆ ವಚ್ಚಿ’ (ದೇವಿ ವೇಗವಾಗಿ ಬಂದು ನನ್ನನ್ನು ಕಾಪಾಡಲು ಇದೇ ಸಮಯ). ಹೀಗೆ ದೇವೀ ಸನ್ನಿಧಿಯಲ್ಲಿ ಹಾಡಿ, ತಮ್ಮ ಜಯಾಪಜಯಗಳನ್ನು ದೇವಿಯ ಚಿತ್ತಕ್ಕೆ ಒಪ್ಪಿಸಿ ರಾಜಸಭೆಗೆ ಬಂದರು. ಈ ಸ್ಪರ್ಧೆಯನ್ನು ನೋಡಲು ರಾಜನಿಗೂ ಆಸ್ಥಾನಿಕರಿಗೂ ಸಂಗೀತ ವಿದ್ವಾಂಸರಿಗೂ ಕುತೂಹಲ. ಆಸ್ಥಾನ ತುಂಬಿಹೋಗಿತ್ತು.

ಮೊದಲು ಹಾಡಿದವರು ಬೊಬ್ಬಿಲಿ ವಿದ್ವಾಂಸರು. ಅವರು ಅನೇಕ ಸುವರ್ಣಪದಕಗಳಿಂದ ಅಲಂಕೃತರಾಗಿ, ಜರತಾರಿ ಶಾಲು ಹೊದೆದು, ನವರತ್ನಖಚಿತವಾದ ತೋಡಾವನ್ನು ಧರಿಸಿ, ಹತ್ತು ಬೆರಳುಗಳಿಗೂ ವಜ್ರದ ಉಂಗುರಗಳನ್ನು ತೊಟ್ಟು ಕೊಂಡು, ಠೀವಿಯಿಂದ ರಾಜಸಭೆಗೆ ಬಂದರು. ಅವರ ಪದಕ ಗಳು, ತೋಡಾ, ಉಂಗುರಗಳೆಲ್ಲ ಅವರೇ ತೊಟ್ಟುಕೊಂಡದ್ದು. ಯಾರೂ ಗೌರವಕ್ಕೆ ಕೊಟ್ಟದ್ದಲ್ಲ. ಕೇಶವಯ್ಯ, “ಎಲ್ಲರೂ ಶ್ರದ್ಧೆಯಿಟ್ಟು ಇಂದು ನನ್ನ ಸಂಗೀತವನ್ನು ಕೇಳಿರಿ, ಈ ಅವಕಾಶ ನಿಮಗೆ ಯಾವಾಗಲೂ ಸಿಕ್ಕಲಾರದು” ಎಂದು ಹೇಳಿ ಬಹಳ ಜಂಬದಿಂದ ಹಾಡಲು ಪ್ರಾರಂಭಿಸಿದರು.

ಕೇಶವಯ್ಯ ಮೊದಲು ಕೆಲವು ರಾಗಗಳನ್ನು ವಿಸ್ತಾರವಾಗಿ ಹಾಡಿ, ಬೇರೆಬೇರೆ ತಾಳದ ಗತಿಗಳಲ್ಲಿ ತಾನಗಳನ್ನು ಹಾಡುತ್ತ ಕಡೆಗೆ ಸಿಂಹನಂದನವೆಂಬ ತಾಳದಲ್ಲಿ ಪಲ್ಲವಿಯನ್ನು ಹಾಡಿ ದರು. (ಈ ಸಿಂಹನಂದನವೆಂಬ ತಾಳವು ಬಹಳ ಅಕ್ಷರ ಗಳುಳ್ಳದ್ದು. ಈ ತಾಳದಲ್ಲಿ ಬೊಬ್ಬಿಲಿ ಕೇಶವಯ್ಯನವರು ಬಹಳ ಹೆಸರು ಪಡೆದಿದ್ದರು.) ಅವರ ಸಂಗೀತವನ್ನು ಕೇಳಿ ಸಭಾಸದರು ತಲೆದೂಗಿದರು. ನಿಜವಾಗಿ ಅದ್ಭುತವಾದ ಸಂಗೀತ. ಆದರೆ ಹಾಡುವಾಗ ಬಹಳವಾಗಿ ಶರೀರವನ್ನು ತೂಗಾಡಿಸುತ್ತ, ತಮ್ಮ ಬೆರಳುಗಳನ್ನು ಚಕ್ರಾಕಾರವಾಗಿ ತಿರುಗಿಸಿ, ಕಣ್ಣುಗಳನ್ನು ದೊಡ್ಡದಾಗಿ ಮಾಡಿಕೊಂಡು ಹುಬ್ಬು ಹಾರಿಸುತ್ತ,

ತಾವು ಕುಳಿತ ಸ್ಥಳದಿಂದ ಮೇಲಕ್ಕೆ ಜಿಗಿಯುತ್ತ ಬಹಳವಾದ ಆರ್ಭಟದಿಂದ ಹಾಡುತ್ತಿದ್ದರು.

ಕೇಶವಯ್ಯನವರ ಕಚೇರಿ ಮುಗಿಯಿತು. ಇನ್ನು ಶ್ಯಾಮಶಾಸ್ತ್ರಿಗಳ ಸರದಿ. ಶಾಸ್ತ್ರಿಗಳು ಹೀಗೆಂದರು: “ಸ್ವಾಮಿ, ಇನ್ನೂ ಹಾಡುವುದಿದ್ದರೆ ಹಾಡಿಮುಗಿಸಿರಿ.”

ಇದನ್ನು ಕೇಳಿ ಕೇಶವಯ್ಯನವರಿಗೆ ಸಿಟ್ಟು ಬಂದಿತು. ಮನಸ್ಸಿನಲ್ಲೆ, ‘ಇವನು ಯಾರು, ಈ ರೀತಿ ನನ್ನನ್ನು ಪ್ರಶ್ನೆ ಮಾಡುತ್ತಿದ್ದಾನೆ? ಇರಲಿ’, ಎಂದುಕೊಂಡು, “ನೀವು ನಿಮ್ಮ ಸರಕನ್ನು ಸ್ವಲ್ಪ ಹಾಡಿ ತೋರಿಸಿರಿ, ನಾನು ಹಾಡಿದ ಪಲ್ಲವಿ ಹಾಡಿ. ಅನಂತರ ನಾನು ಏನು ಎಂಬುದು ತಿಳಿಯುತ್ತದೆ” ಎಂದರು.

ಶ್ಯಾಮಶಾಸ್ತ್ರಿಗಳು ಶಾಂತಚಿತ್ತರಾಗಿ ದೇವಿಯನ್ನು ಧ್ಯಾನಿಸಿ ದರು. ತಮ್ಮ ಮಧುರವಾದ ಕಂಠದಿಂದ ಕೆಲವು ಅಪೂರ್ವ ರಾಗಗಳನ್ನು ಕಷ್ಟಪಡದೆ ಸುಶ್ರಾವ್ಯವಾಗಿ ಹಾಡಿದರು. ಅನೇಕ ನಡೆಗಳಲ್ಲಿ ತಾನವನ್ನು ವಿರಳವಾಗಿ ಹಾಡಿ, ಶರಭನಂದನ ವೆಂಬ ತಾಳದಲ್ಲಿ ಒಂದು ಪಲ್ಲವಿಯನ್ನು ಹಾಡಿ, ಸಾಹಿತ್ಯ ವಿನ್ಯಾಸ ಮಾಡಿ, ಸ್ವರಕಲ್ಪನೆಯನ್ನು ಮೂರು ಕಾಲಗಳಲ್ಲಿಯೂ ಹಾಡಿದಾಗ, ಸಭೆಯಲ್ಲಿದ್ದವರೆಲ್ಲರೂ ಮಂತ್ರಮುಗ್ಧರಾಗಿ ಕುಳಿತಿದ್ದರು.

ಬೊಬ್ಬಿಲಿ ಕೇಶವಯ್ಯನವರು ಸಂಗೀತವನ್ನು ಕೇಳುತ್ತ ಮೈಮರೆತಿದ್ದರು. ಸಂಗೀತ ಮುಗಿಯುತ್ತಲೇ ಕಣ್ಣೀರು ಸುರಿಸುತ್ತ ದಿಗ್ಗನೆ ಎದ್ದು ಶ್ಯಾಮಶಾಸ್ತ್ರಿಗಳ ಎರಡೂ ಕಾಲುಗಳನ್ನು ಹಿಡಿದು, “ಶಾಸ್ತ್ರಿಗಳೇ, ನನ್ನ ಉದ್ಧಟತನವನ್ನು ಕ್ಷಮಿಸಿ. ನನ್ನ ಗರ್ವದ ಮಾತು ತಮ್ಮನ್ನು ಎಷ್ಟು ನೋಯಿಸಿತೋ! ನನ್ನಿಂದ ಸರ್ವಾಪರಾಧವಾಗಿದೆ” ಎಂದು ಬಿಕ್ಕುತ್ತಾ ಸಾಷ್ಟಾಂಗ ಪ್ರಣಾಮ ಮಾಡಿದರಂತೆ. ಅಂದೇ ಬೇರೆ ಊರಿಗೆ ಹೊರಟು ಹೋದರಂತೆ.

ಶರಭೋಜ ಮಹಾರಾಜನಿಗೆ ಬಹಳ ಸಂತೋಷವಾಯಿತು. ಆತನಿಗೆ ಲಲಿತಕಲೆಗಳೆಂದರೆ ತುಂಬಾ ಆದರ, ಕಲಾವಿದರಲ್ಲಿ ಅಭಿಮಾನ. ಅವನು ಶ್ಯಾಮಶಾಸ್ತ್ರಿಗಳ ಗೆಳೆಯನೇ ಆದ. ಅವರ ಮನೆಗೆ ಆಗಾಗ ಬರುತ್ತಿದ್ದ.

ಶ್ಯಾಮಶಾಸ್ತ್ರಿಗಳು ಸುಮಾರು ಮುನ್ನೂರು ಕೃತಿಗಳನ್ನು ರಚಿಸಿದ್ದಾರೆ. ಆದರೆ ಅವುಗಳಲ್ಲಿ ಮೂವತ್ತು-ನಲವತ್ತು ಕೃತಿಗಳು ಮಾತ್ರ ಉಳಿದುಬಂದಿವೆ. ಇವುಗಳಲ್ಲೂ ಹಾಡಲು ಪ್ರಚಾರದಲ್ಲಿರುವುದು ಇಪ್ಪತ್ತೈದಕ್ಕೂ ಕಡಿಮೆ ಎಂದೇ ಎನ್ನಬಹುದು.

ಶಾಸ್ತ್ರಿಗಳ ಕೃತಿರಚನೆಗಳ ವೈಶಿಷ್ಟ್ಯವೆಂದರೆ, ಕೃತಿಗಳಲ್ಲಿ ರಾಗದ ಹೆಸರು ಬಂದಿರುವುದು. ಉದಾಹರಣೆಗೆ: ಭೈರವಿ ರಾಗದ ಸ್ವರಜತಿ, ಇದರಲ್ಲಿ ಕೊನೆಯ ಚರಣದಲ್ಲಿ ‘ಶ್ಯಾಮಕೃಷ್ಣ ಸಹೋದರಿ’ ಎಂಬ ಇವರ ಅಂಕಿತವನ್ನೂ ಕೊನೆಗೆ ‘ಶ್ರೀಭೈರವಿ’ ಎಂಬುದಾಗಿ ರಾಗದ ಹೆಸರನ್ನೂ ನೋಡಬಹುದು.

ವ್ಯಕ್ತಿತ್ವ-ಸ್ವಭಾವ

ಶಾಸ್ತ್ರಿಗಳದು ನೋಡಿದರೆ ಗೌರವ ಬರುವಂತಹ ಆಕಾರ, ಮುಖ. ಅವರು ಆಜಾನುಬಾಹು. ಗಂಭೀರ ಮುಖ. ನಡಿಗೆ ನಿಧಾನ, ಗಂಭೀರ. ಶುಭ್ರ ಬಿಳಿ ಪಂಚೆ, ಭುಜದಿಂದ ಇಳಿಬಿದ್ದ ಬಣ್ಣದ ಶಾಲು. ಕಿವಿಯಲ್ಲಿ ವಜ್ರದ ಕಡಕುಗಳು, ಕುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆ. ಮಾತಿನಲ್ಲಿ ಸೌಜನ್ಯ ತುಂಬಿರುತ್ತಿತ್ತು. ದೇವೀ ಉಪಾಸಕರೆಂದೇ ಬಹು ಮಂದಿ ಅವರನ್ನು ಹೆಸರಿಸುತ್ತಿದ್ದುದು.

ಶ್ಯಾಮಶಾಸ್ತ್ರಿಗಳು ಗಾನವಿದ್ಯೆಯಲ್ಲಿ ಎಷ್ಟು ಜ್ಞಾನಿಗಳೋ ಅಷ್ಟೇ ನಿಗ್ರಹ-ಅನುಗ್ರಹ ಶಕ್ತಿಯನ್ನೂ ಪಡೆದಿದ್ದರಂತೆ. ಅಲ್ಲದೆ ಜ್ಯೋತಿಷ ಶಾಸ್ತ್ರದಲ್ಲೂ ಬಹಳ ಜ್ಞಾನವನ್ನು ಪಡೆದಿದ್ದರು.

ಶಾಸ್ತ್ರಿಗಳದು ಬಹು ಮೃದು ಸ್ವಭಾವ. ಯಾರೇ ಆಗಲಿ ತಮ್ಮ ಕಷ್ಟಕಾರ್ಪಣ್ಯಗಳನ್ನೂ ಇತರ ತೊಂದರೆಗಳನ್ನೂ ಶಾಸ್ತ್ರಿಗಳಲ್ಲಿ ಅರಿಕೆ ಮಾಡಿದಾಗ, ಬಹಳ ಕರುಣೆಯಿಂದ ಅವರ ಕಷ್ಟ ನಿವಾರಣೆಗೆ ದೇವೀ ಪ್ರಸಾದವಿತ್ತು ಸಂತೈಸುತ್ತಿದ್ದರಂತೆ. ಒಂದು ಸಾರಿ ಒಬ್ಬ ದಂಪತಿಗಳು ಅವರ ಬಳಿಗೆ ಬಂದರು. ಅವರಿಗೆ ಒಬ್ಬಳೇ ಮಗಳು. ಹುಟ್ಟಿ ನಾಲ್ಕಾರು ವರ್ಷಗಳಾದರೂ ಏನೂ ತಿಳಿಯದೆ ಸದಾ ಮಂಕಾಗಿ, ಕುಳಿತ ಕಡೆಯೇ ಇರುತ್ತ, ತಂದೆ ತಾಯಿಗಳನ್ನೂ ಗುರುತಿಸಲಾರದ ಸ್ಥಿತಿಯಲ್ಲಿತ್ತು. ದಂಪತಿಗಳು ಆ ಮಗುವನ್ನು ಶ್ಯಾಮಶಾಸ್ತ್ರಿಗಳ ಬಳಿ ತಂದು, “ಇವಳೇ ನಮ್ಮ ವಂಶದ ಕುಡಿ. ಈ ಮಗುವಿಗೆ ಪ್ರಜ್ಞೆ ತಿಳಿಯುವ ಹಾಗೆ ಅನು ಗ್ರಹಿಸಿ” ಎಂದು ಬೇಡಿಕೊಂಡರು. ಶಾಸ್ತ್ರಿಗಳು ನಲವತ್ತೆಂಟು ಶುಕ್ರವಾರಗಳು ಕಾಮಾಕ್ಷಿದೇವಿ ಯನ್ನು ಆರಾಧಿಸಿದರಂತೆ. ಆ ವೇಳೆಯಲ್ಲಿ ಆ ಮಗುವಿಗೆ ಅಮ್ಮನವರ ಮಂತ್ರೋಚ್ಛಾರಣೆ ಯಿಂದ ಲಭ್ಯವಾದ ಪ್ರಸಾದವನ್ನು ಕೊಡುತ್ತಿದ್ದರಂತೆ. ದಿನ ಕಳೆದಂತೆ ಆ ಹೆಣ್ಣುಮಗು ಕಾಮಾಕ್ಷಿ ಅಮ್ಮನವರಿಗೆ ನಮಸ್ಕಾರ ಮಾಡುವುದು, ಪತ್ರಪುಷ್ಪಗಳನ್ನು ಪೂಜೆಗೆ ಅಣಿ ಮಾಡು ವುದು- ಹೀಗೆ ಮಾಡತೊಡಗಿತು. ಕಾಲ ಕ್ರಮದಲ್ಲಿ ಎಲ್ಲರಂತೆ ಆ ಮಗುವೂ ಆರೋಗ್ಯದಿಂದಲೂ ಚಟುವಟಿಕೆಯಿಂದಲೂ ಇರಲು ಮೊದಲಾಯಿತು. ಶಾಸ್ತಿಗಳು ಆ ಮಗುವಿನಲ್ಲಿ ಅಮ್ಮನವರ ಸಾಕ್ಷಾತ್ಕಾರವನ್ನು ಕಾಣುತ್ತಿದ್ದರಂತೆ.

ಹೀಗೆ ಅನೇಕರಿಗೆ ಒಳ್ಳೆಯದಾಯಿತು ಎಂದು ಜನರು ಹೇಳುತ್ತಾರೆ.

ದೇವಿಯಲ್ಲಿ ಐಕ್ಯರಾದರು

ಶ್ಯಾಮಶಾಸ್ತ್ರಿಗಳಿಗೆ ಅರವತ್ತನಾಲ್ಕು ವರ್ಷವಾಗಿದ್ದಾಗ ಅವರ ಹೆಂಡತಿ ತೀರಿಕೊಂಡರು. ಶಾಸ್ತ್ರಿಗಳಿಗೆ ಸಮಾಧಾನ ಹೇಳಲು ಬಂದವರಿಗೆ ಅವರು ‘ತಾನ್ ಚಗ ಅಂಜಿನಾಳ್’ ಎಂದಷ್ಟೆ ಹೇಳಿದರಂತೆ. ಜನರು ಅವರ ಮಾತಿನ ಅರ್ಥ ‘ಅವಳಿಗೆ ಸಾವೆಂದರೆ ಹೆದರಿಕೆ ಇತ್ತು’ ಎಂದು ಅಂದುಕೊಂಡರು.

ಇದಾದನಂತರ ಶಾಸ್ತ್ರಿಗಳು ಮೌನವನ್ನು ಆಚರಿಸಿದರಂತೆ.

ಐದು ದಿನಗಳು ಕಳೆದವು. ಆರನೆಯ ದಿನ ಶಾಸ್ತ್ರಿಗಳು ಮಗ ಸುಬ್ಬರಾಯಶಾಸ್ತ್ರಿಗಳನ್ನು ಕರೆದು, ತಮ್ಮ ಉಪಾಸನೆಯನಂತರ ತಮಗೆ ಕರ್ಣಮಂತ್ರ ಹೇಳಬೇಕೆಂದು ಹೇಳಿದರು. (ಕರ್ಣ ಮಂತ್ರ ಸಾಯುವವರ ಬಲಗಿವಿಯಲ್ಲಿ ಹೇಳುವ ಮಂತ್ರ.)

ಶ್ಯಾಮಶಾಸ್ತ್ರಿಗಳು ಅಂದು ತೀರಿಕೊಳ್ಳುವುದಾಗಿ ಹೇಳುತ್ತಿ ದ್ದಾರೆ ಎಂದು ಅರ್ಥಮಾಡಿಕೊಂಡ ಮಗನಿಗೆ ದಿಗ್ಭ್ರಮೆ ಯಾಯಿತು. ಶಾಸ್ತ್ರಿಗಳು ಸಮಾಧಾನ ಹೇಳಿದರು.

‘ತಾನ್ ಚಗ ಅಂಜಿನಾಳ್’ ಎಂದರೆ ‘ನಾನಿರುವುದು ಇನ್ನು ಐದೇ ದಿನಗಳು’ ಎಂಬುದಾಗಿ ಅರ್ಥ ಎಂದು ಆಗ ಎಲ್ಲರಿಗೂ ಗೊತ್ತಾಯಿತು.

ಶಾಸ್ತ್ರಿಗಳು ದೇಹ ಬಿಡುತ್ತಾರೆ ಎಂಬ ಸುದ್ದಿ ಹಬ್ಬಿತು. ನೂರಾರು ಜನ ದುಃಖದಿಂದ ಸೇರಿದರು. ಶಾಸ್ತ್ರಿಗಳ ಚಿತ್ರವನ್ನು ಚಿತ್ರಿಸಲು ರಾಜ ಮುತ್ತುಕೃಷ್ಣ ಎಂಬ ಚಿತ್ರಕಾರನನ್ನು ಕಳುಹಿಸಿದ. ಮುತ್ತುಕೃಷ್ಣ ಅವರ ಚಿತ್ರ ಚಿತ್ರಿಸಿದ, ಅವರು ಅವನನ್ನು ಆಶೀರ್ವದಿಸಿದರು.

ಮಧ್ಯಾಹ್ನ ಮೂರು ಗಂಟೆ. ಶಾಸ್ತ್ರಿಗಳು ಮಗನ ತೊಡೆಯ ಮೇಲೆ ತಲೆ ಇಟ್ಟು ಬಂಗಾರು ಕಾಮಾಕ್ಷಿಯ ಧ್ಯಾನಮಾಡುತ್ತ ಕಣ್ಣು ಮುಚ್ಚಿದರು.

೧೮೨೭ರ ಫೆಬ್ರವರಿ ೬ರಂದು- ವ್ಯಾಸ ನಾನು ಸಂವತ್ಸರದ ಶುಕ್ಲ ದಶಮಿಯಂದು- ದೇವಿಯ ಪಾದದಲ್ಲಿ ಐಕ್ಯರಾದರು.

ಶಿಸ್ತಿನ ಜೀವನ

ಶ್ಯಾಮಶಾಸ್ತ್ರಿಗಳದು ಬಹು ಕಟ್ಟುನಿಟ್ಟಾದ ಶಿಸ್ತಿನ ಜೀವನ.

ಶಾಸ್ತ್ರಿಗಳು ಸೂರ್ಯೋದಯಕ್ಕೆ ಮೊದಲೇ ಎದ್ದು, ಬೇವಿನ ಮರಗಳ ಕೆಳಗೆ ಕುಳಿತು, ಶ್ವಾಸವನ್ನು ದೀರ್ಘವಾಗಿ ಒಳಕ್ಕೆ ತೆಗೆದುಕೊಳ್ಳುತ್ತಲೂ ಅಷ್ಟೇ ನಿಧಾನವಾಗಿ ಹೊರಕ್ಕೆ ಬಿಡುತ್ತಲೂ ಸುಮಾರು ಒಂದು ಗಂಟೆ ಕಾಲ ವ್ಯಾಯಾಮವನ್ನು ಮಾಡುತ್ತಿದ್ದರು. ಅನಂತರ ಎಳ್ಳಿನಿಂದ ತೆಗೆದ ಎಣ್ಣೆ ಲೇಪಿಸಿಕೊಂಡು ಅಭ್ಯಂಜನ ಮಾಡಿ, ಶುಭ್ರವಾದ ಬಿಳಿಯ ಬಣ್ಣದ, ಕೆಂಪು ಅಂಚಿನಿಂದ ಕೂಡಿದ ಪಂಚೆ ಉಟ್ಟು ಶಲ್ಯವನ್ನು ಹೊದ್ದು, ಗಂಧವನ್ನು ಮೈಗೆ ಲೇಪಿಸಿಕೊಂಡು, ಹಣೆಗೆ ಕಾಮಾಕ್ಷಿ ದೇವಿಯ ಪ್ರಸಾದವಾದ ಕುಂಕುಮ ಬೊಟ್ಟನ್ನಿಟ್ಟುಕೊಂಡು ಅಮ್ಮನವರ ಅರ್ಚನೆಗೆ ಕೂಡುತ್ತಿದ್ದರು. ಶಾಸ್ತ್ರಿಗಳು ಅರ್ಚನೆ ಮಾಡುವಾಗ ಅನೇಕ ಜನ ಬರುತ್ತಿದ್ದುದೂ ಉಂಟು. ಅರ್ಚನೆ ಮುಗಿಯುವ ವೇಳೆಗೆ ಸುಮಾರು ಮಧ್ಯಾಹ್ನವೇ ಆಗಿರುತ್ತಿತ್ತು. ಅಲ್ಲಿಯವರೆಗೂ ಶಾಸ್ತ್ರಿಗಳು ತಮ್ಮ ಭಕ್ತಿ ವಿಶೇಷವನ್ನು ಕೃತಿರೂಪದಲ್ಲಿ ಹಾಡುತ್ತ ತನ್ಮಯರಾಗಿರುತ್ತಿದ್ದರು.

ಗಾನಸುಧೆ-ಸುಂದರ ಜೀವನ

ಶಾಸ್ತ್ರಿಗಳು ಅಂದಂದು ರಚಿಸಿದ ಕೃತಿಗಳನ್ನು ಪೂಜಾ ವೇಳೆಯಲ್ಲಿ ಹಾಡುತ್ತಿದ್ದರು. ಆ ಸುಯೋಗದ ಲಾಭ ಪಡೆ ಯಲು ಕೆಲವು ಪಂಡಿತರೂ ಸಂಗೀತ ವಿದ್ವಾಂಸರೂ ಬರುತ್ತಿದ್ದರು. ಬಂದವರಿಗೆ ಸಂಗೀತಸುಧೆ. ಅನಂತರ ಊಟ ಉಪಚಾರಗಳಿಂದ ಸತ್ಕರಿಸುತ್ತಿದ್ದರು.

ಯಾವುದಾದರೂ ವಿಶೇಷದ ದಿನವಾಗಿದ್ದು ಅಂದು ಶುಕ್ರವಾರವಾಗಿದ್ದರಂತೂ ಶಾಸ್ತ್ರಿಗಳ ಮುಖದಲ್ಲಿನ ತೇಜಸ್ಸು ಇಮ್ಮಡಿಯಾಗಿ, ಕಾಮಾಕ್ಷಿದೇವಿಯ ಅರ್ಚನೆ ವಿಶೇಷ ವೈಭವ ದಿಂದ ನಡೆಯುತ್ತಿತ್ತು. ಅಂದು ಅನೇಕರು ಕಾಮಾಕ್ಷಿ ದೇವಿಯ ಪೂಜೆಯನ್ನು ನೋಡಲು ಬರುತ್ತಿದ್ದರು. ಒಂದೊಂದು ಸಂದರ್ಭದಲ್ಲಿ ತ್ಯಾಗರಾಜರೂ ಮುತ್ತುಸ್ವಾಮಿ ದೀಕ್ಷಿತರೂ ಬಂದಿದ್ದುಂಟು. ಹೀಗೆ ಬಂದ ನೂರಾರು ಮಂದಿಗೆ ಮೃಷ್ಟಾನ್ನ ಭೋಜನ ಮತ್ತು ಬಡಬಗ್ಗರಿಗೆ ವಸ್ತ್ರದಾನವೂ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕೆಲವರು ತಮ್ಮ ಮಕ್ಕಳ ಮದುವೆ, ಮುಂಜಿಗಳಿಗಾಗಿ ಹಣವನ್ನು ದಾನವಾಗಿ ಶಾಸ್ತ್ರಿಗಳಿಂದ ಪಡೆಯುತ್ತಿದ್ದರು.

ಅಂದಿನ ರಾತ್ರಿ ಪ್ರತಿಯೊಬ್ಬ ವಿದ್ವಾಂಸರೂ ತಮ್ಮ ಸಂಗೀತ ಸೇವೆಯನ್ನು ಸಲ್ಲಿಸಿ, ಶಾಸ್ತ್ರಿಗಳಿಂದ ಪ್ರಶಂಸೆ ಪಡೆದು ಸಂತೋಷದಿಂದ ಹಿಂತಿರುಗುತ್ತಿದ್ದರು.

ಆ ವಿಧವಾದ ಉತ್ಸವಾದಿ ಕೈಂಕರ್ಯಕ್ಕೆ ಶಾಸ್ತ್ರಿಗಳು ಯಾವ ಶ್ರೀಮಂತರನ್ನೂ ಹಣಕ್ಕಾಗಿ ಯಾಚಿಸಿದವರಲ್ಲ. ಅವರದೇ ಆದ ಸ್ವಂತ ಭೂಮಿ ಕಾಣಿಯಿದ್ದು, ಅದರಿಂದ ಬಂದದೆಲ್ಲವನ್ನೂ ಈ ಕಾರ್ಯಕ್ರಮಕ್ಕೆ ವಿನಿಯೋಗಿಸುತ್ತಿದ್ದರು. ಈ ಸೇವೆಯಲ್ಲಿ ಶಾಸ್ತ್ರಿಗಳ ಧರ್ಮಪತ್ನಿಯು ಅನ್ನಪೂರ್ಣೆ ಯಂತೆ ಸಹಕರಿಸಿ, ಸದಾ ನಗುಮುಖದಿಂದ, ಬಂದ ಅತಿಥಿಗಳನ್ನು ಆದರಿಸಿ ಸತ್ಕರಿಸುತ್ತಿದ್ದರು.

ಸಂಗೀತ ಕಲಿಸಿ

ಈ ರೀತಿಯ ನಿರಾಡಂಬರವೂ ಶಾಂತಿಯುತವೂ ಆದ ಧಾರ್ಮಿಕ ವ್ಯವಹಾರಗಳಲ್ಲಿ ತೊಡಗಿ, ಎಲ್ಲರಿಂದಲೂ ಗೌರವ ಪಡೆದ ಶಾಸ್ತಿಗಳನ್ನು ನೋಡಿದ ಕೆಲವರ ಮನಸ್ಸು ಅಸೂಯೆ ಯಿಂದ ಕಲಕಿದಂತಾಗಿ, ಹೇಗಾದರೂ ಮಾಡಿ ಶಾಸ್ತ್ರಿಗಳಿಗೆ ಕಿರುಕುಳ ಕೊಡಬೇಕೆಂದು ಯೋಚಿಸಿದರು.

ಒಂದು ಪ್ರಾತಃಕಾಲ. ಶಾಸ್ತ್ರಿಗಳು ಬಂಗಾರು ಕಾಮಾಕ್ಷಿದೇವಿ ಪೂಜೆಯನ್ನು ಮುಗಿಸಿ, ಅಂದು ತಾವು ರಚಿಸಿದ ಒಂದು ಕೃತಿಯನ್ನು ಹಾಡಿ, ಆ ಕೃತಿಯ ಭಾವಾರ್ಥವನ್ನು ಕೆಲವು ಮಿತ್ರರಿಗೆ ವಿವರಿಸುತ್ತಿದ್ದರು. ಆಗ ಒಬ್ಬ ಆಗಂತುಕನು ಬಂದು ಸ್ವಲ್ಪ ಗಡುಸಾದ ಧ್ವನಿಯಲ್ಲಿ, “ಶ್ಯಾಮಶಾಸ್ತ್ರೀ ಎಂಬುವ ಪೂಜಾರಿಯ ಮನೆ ಇದೇಯೊ? ಎಲ್ಲಿದ್ದಾನೆ ಆತ? ಸ್ವಲ್ಪ ಕರೆಯಿರಿ” ಎಂದನಂತೆ.

ಶಾಸ್ತ್ರಿಗಳು ಆತನು ಬಂದ ರೀತಿಯಲ್ಲೇ ಆತನ ಸ್ವಭಾವವನ್ನು ತಿಳಿದುಕೊಂಡರು. “ಹೌದಪ್ಪಾ, ಇದು ಅವರ ಮನೆಯೇ ಕುಳಿತುಕೋ. ಸ್ವಲ್ಪ ಹಾಲು ಹಣ್ಣು ತೆಗೆದುಕೋ. ಕಾಮಾಕ್ಷಿದೇವಿಯ ಪ್ರಸಾದ. ನೀನು ಬಂದ ಕಾರ್ಯವೇನು?” ಎಂದರು.

ಆತನು ಸುತ್ತಲೂ ಇದ್ದವರನ್ನು ನೋಡಿ, “ನಾನು ನಿಮ್ಮಲ್ಲಿಯೇ ಮಾತನಾಡಬೇಕು” ಎಂದನಂತೆ.

ಶಾಸ್ತ್ರಿಗಳು ಅಲ್ಲಿದ್ದವರಿಗೆ ಕಾಮಾಕ್ಷಿದೇವಿಯ ಪ್ರಸಾದ ಕೊಟ್ಟು ಬೀಳ್ಕೊಟ್ಟರು. ಅನಂತರ ಆತನಿಗೂ ಪ್ರಸಾದ ಕೊಡಲು ಹೋದರು. ಆತ, “ನಾನು ನಿಮ್ಮಲ್ಲಿ ಪ್ರಸಾದ ತೆಗೆದುಕೊಳ್ಳಲು ಭಿಕ್ಷುಕನಲ್ಲ ಸ್ವಾಮಿ. ನಾನು ಬಂದದ್ದು ನಿಮ್ಮಲ್ಲಿ ಸಂಗೀತ ಕಲಿಯಲು” ಎಂದು ತನ್ನಲ್ಲಿದ್ದ ಸುಮಾರು ಮೂರುನೂರು ಬೆಳ್ಳಿಯ ನಾಣ್ಯಗಳನ್ನು ಝಣ-ಝಣ ಶಬ್ದವಾಗುವಂತೆ ಶಾಸ್ತ್ರಿಗಳು ಕುಳಿತಲ್ಲಿಗೆ ಸುರಿದ.

ಶಾಸ್ತ್ರಿಗಳು ಮುಗುಳು ನಕ್ಕು, “ಅಯ್ಯಾ, ಈ ನಿನ್ನ ಹಣ ನಿನ್ನಲ್ಲಿಯೇ ಇರಲಿ……” ಎಂದು ವಾಕ್ಯಪೂರ್ಣ ಮಾಡುವ ಮೊದಲೇ ಆತ, “ಓಹೋ ಅರ್ಥವಾಯಿತು. ಇನ್ನೂ ಜಾಸ್ತಿ ಬೇಕೇನು? ತೆಗೆದುಕೊಳ್ಳಿ. ನಾನು ನಿಮ್ಮ ಹಾಗೆ ಪೂಜೆಮಾಡಿ ಜೀವನ ಮಾಡುವವನಲ್ಲ” ಎಂದು ಇನ್ನೂ ಮೂರುನೂರು ನಾಣ್ಯಗಳನ್ನು ಸುರಿದನಂತೆ.

ಶಾಸ್ತ್ರಿಗಳು ಮರುಕದಿಂದ, “ಅಯ್ಯಾ, ನೀನು ಸಂಗೀತ ಕಲಿಯಲು ಬಂದಿರುವೆ ಅಲ್ಲವೇ? ನಿನ್ನ ಹಣವನ್ನು ನೀನು ತೆಗೆದಿಟ್ಟುಕೊ. ಇನ್ನು ಯಾವುದಾದರೂ ಒಳ್ಳೆಯ ಕೆಲಸದ ಉಪಯೋಗಕ್ಕೆ ಬರುತ್ತೆ” ಎಂದು ಹೇಳಿದರು. ಅನಂತರ, “ನೀನು ಸಂಗೀತ ಕಲಿಯಬೇಕೆ? ಸಂತೋಷ. ನೀನು ಈ  ದಿನದಿಂದಲೇ ಕಾಮಾಕ್ಷಿ ಅಮ್ಮನ ಪೂಜಾ ವೇಳೆಗೆ ಬಂದು, ಸನ್ನಿಧಿಯಲ್ಲಿ ಕುಳಿತುಕೋ” ಎಂದರು.

ಪ್ರಶ್ನೆ-ಉತ್ತರ

ಆ ವ್ಯಕ್ತಿಯು, “ಏನು ಶಾಸ್ತ್ರಿಗಳೇ? ನೀವು ದೊಡ್ಡ ಸಂಗೀತ ವಿದ್ವಾಂಸರೆಂದು ಬಹಳ ದೊಡ್ಡಸ್ತಿಕೆ ಇರುವಂತಿದೆ. ನಾನು ಈ ಬೂಟಾಟಿಕೆ ಹೆಣ್ಣು ದೇವರಲ್ಲಿ ಸಂಗೀತ ಕಲಿಯಲು ಅಷ್ಟೊಂದು ದೂರದಿಂದ ಇಲ್ಲಿ ಬರಬೇಕಿತ್ತೇನು? ನಿಮಗೆ ಸಂಗೀತ ಹೇಳಿಕೊಡಲು ಬರುವುದಿಲ್ಲವೆಂದು ಬಾಯಿಬಿಟ್ಟು ಹೇಳಿ. ನಿಮಗಿಂತ ನೂರು ಪಟ್ಟು ಸಂಗೀತ ತಿಳಿದಿರುವ ಘನ ವಿದ್ವಾಂಸರಲ್ಲಿ ಹೋಗಿ, ಸಂಗೀತ ಕಲಿತು, ನಿಮ್ಮನ್ನೂ ಮೀರಿಸಬಲ್ಲೆನು” ಎಂದು ಆರ್ಭಟಿಸಿದ.

ಶಾಸ್ತ್ರಿಗಳು ಕೋಪ ಮಾಡಿಕೊಳ್ಳದೆ ಆತನಿಗೆ ಹೀಗೆ ಹೇಳಿದರಂತೆ: “ನೋಡು, ನೀನು ಬಹಳ ಹಣವಂತನೂ ಬುದ್ಧಿಶಾಲಿಯೂ ಆಗಿರುವಿ ಎಂದು ನಿನ್ನ ಮಾತುಗಳಿಂದಲೇ ತಿಳಿಯಿತು. ಹೋಗಲಿ, ಒಂದೆರಡು ಪ್ರಶ್ನೆ ಕೇಳುವೆನು. ಉತ್ತರ ಕೊಡುವೆಯಾ?”

“ಓಹೋ, ಒಂದಲ್ಲ ಸಾವಿರ ಪ್ರಶ್ನೆ ಕೇಳಿ. ನಾನು ಉತ್ತರ ಕೊಡಬಲ್ಲೆ.”

“ಅಪ್ಪಾ, ನನ್ನನ್ನು, ನಿನ್ನನ್ನು ಹೆತ್ತು ಪಾಲಿಸಿದವರು ಯಾರು?”

“ಇದೇ ಏನು ನಿಮ್ಮ ಮಹಾ ಪ್ರಶ್ನೆ!” ಎಂದು ನಕ್ಕು ಆತ ಹೇಳಿದ, “ನನ್ನನ್ನು ಹೆತ್ತು ಪಾಲಿಸಿದವಳು ನನ್ನ ತಾಯಿ, ಸ್ವಂತ ತಾಯಿ ತಿಳಿಯಿತೇ!”

ಶಾಸ್ತ್ರಿಗಳು ಮತ್ತೊಂದು ಪ್ರಶ್ನೆಯನ್ನು ಕೇಳಿದರು.

“ನಾನು, ನೀನು, ಪ್ರಪಂಚದಲ್ಲಿನ ಎಲ್ಲರೂ ತಿನ್ನುವ ಪದಾರ್ಥಗಳನ್ನು ಕೊಡುವವರು ಯಾರು?” ಆತನು, “ಸರಿ ಸರಿ, ಭೂಮಿ ತಾಯಿ” ಎಂದ.

ಶಾಸ್ತ್ರಿಗಳು ಮತ್ತೊಂದು ಪ್ರಶ್ನೆಯನ್ನು ಕೇಳಿದರು: “ವಿದ್ಯೆಗೆ ಅಧಿದೇವತೆ ಯಾರು? ವೀಣೆಯನ್ನು ಧರಿಸಿರುವ ದೇವತೆ ಯಾವುದು.” “ಓ, ಅದೇ? ಸರಸ್ವತಿ. ಇದು ಯಾವ ಮಹಾ ಪ್ರಶ್ನೆ ಎಂದು ನೀವು ಕೇಳಿದಿರಿ?” ಶಾಸ್ತ್ರಿಗಳು ಹೇಳಿದರು, “ಅಪ್ಪಾ, ನೀನು ಕೋಪಿಸಿಕೊಳ್ಳಬೇಡ. ನೀನು ಕೊಟ್ಟ ಉತ್ತರ ದಲ್ಲಿಯೇ ನಿನ್ನನ್ನು ಹೆತ್ತ ತಾಯಿ ಹೆಣ್ಣು, ನಿನಗೆ ಅನ್ನವನ್ನು ಬೆಳೆದು ಕೊಡುವ ಭೂಮಿತಾಯಿ ಹೆಣ್ಣು, ವಿದ್ಯೆಗೆ ಅಧಿದೇವತೆ ಹೆಣ್ಣು ಎಂದು ಸ್ಪಷ್ಟವಾಯಿತಲ್ಲವೆ? ಅಂದಮೇಲೆ ನಿನಗೆ ಆ ತಾಯಿಯ ಮೇಲೆ ಏಕಪ್ಪಾ ಇಷ್ಟು ಕೋಪ!

“ನನಗಿಂತಲೂ ಹೆಚ್ಚಿನ ವಿದ್ಯೆ ಕಲಿತವರಲ್ಲಿ, ನೀನು ಸಂಗೀತ ಕಲಿಯುವುದು ನನಗೂ ಸಂತೋಷ. ನಾನು ಇನ್ನೂ ವಿದ್ಯಾರ್ಥಿ. ನಾನೂ ಕೂಡ ಇನ್ನೂ ಕಲಿಯುವುದು ಎಷ್ಟೋ ಇದೆ. ಬಾಪ್ಪಾ, ಈ ಹಣ್ಣು ಹಾಲನ್ನಾದರೂ ತೆಗೆದುಕೋ.

ಬಂದವನಿಗೆ ನಾಚಿಕೆಯಾಯಿತು. ತಲೆ ಬಗ್ಗಿಸಿ ಅವರ ಪಾದಗಳನ್ನು ಹಿಡಿದು ಹೇಳಿದ:

“ಸ್ವಾಮಿ, ತಾವು ನಿಜವಾಗಿಯೂ ಮನುಷ್ಯರಲ್ಲಿ ತಪ್ಪಿ ಹುಟ್ಟಿರುವಿರಿ. ನೀವು ದೇವತೆ. ನನ್ನ ಸ್ವಬುದ್ಧಿಯಿಂದ ಈ ರೀತಿ ತಮ್ಮಲ್ಲಿ ನಡೆದುಕೊಳ್ಳುವಂತೆಯೂ ತಮ್ಮನ್ನು ಅವಮಾನಿಸ ಬೇಕೆಂತಲೂ ಹೇಳಿದ್ದರಿಂದ ನಾನು ಮಾತನಾಡಿದೆನು. ಅವರ ಮಾತು ಕೇಳಿ ಬುದ್ಧಿ ಇಲ್ಲದ ಈ ತಾಯಿಯ ಸನ್ನಿಧಿಯಲ್ಲಿ ಹೇಳಿದ ಹೊರತು, ಈ ತಮ್ಮ ಪಾದಗಳನ್ನು ಬಿಡುವವನಲ್ಲ.”

ಶಾಸ್ತ್ರಿಗಳು ಆತನನ್ನು ಅನುಕಂಪದಿಂದ ನೋಡಿ, “ಏಳಪ್ಪಾ, ನಿನ್ನಿಂದ ಖಂಡಿತ ಅಪರಾಧ ಆಗಿಲ್ಲ, ನನ್ನ ತಾಯಿಯಾದ ಕಾಮಾಕ್ಷಿದೇವಿಯು ಈ ರೀತಿ ನನ್ನನ್ನು ಪರೀಕ್ಷಿಸಲು ನಿನ್ನನ್ನು ಕಳುಹಿಸಿರುವಳು. ನೀನು ನೆಮ್ಮದಿಯಿಂದ ಮನೆಗೆ ಹೋಗಿ, ಶಾಂತಿಯಿಂದ ಇರು” ಎಂದರಂತೆ.

’ನನಗೆ ಏನೂ ಬೇಡ’

ಶ್ಯಾಮಶಾಸ್ತ್ರಿಗಳ ಘನತೆಯನ್ನು ತೋರಿಸುವ ಎಷ್ಟೋ ಘಟನೆಗಳು ಪ್ರಸಿದ್ಧವಾಗಿವೆ. ನಾಗಪಟ್ಟಣದಲ್ಲಿ ಅಪ್ಪುಕುಟ್ಟಿ ಎಂಬ ಭರತನಾಟ್ಯ ಶಿಕ್ಷಕನು ಅವರೊಂದಿಗೆ ಹಠಮಾಡಿ ಸ್ಪರ್ಧಿಸಿ ಸೋತನಲ್ಲವೇ? ಆತ ತನ್ನ ಪ್ರತಿಜ್ಞೆಯಂತೆಯೇ ಭರತನಾಟ್ಯವನ್ನು ಬಿಟ್ಟೇಬಿಟ್ಟನು. ಸಂಗೀತವನ್ನೆ ಮುಂದುವರಿಸಿ ಪ್ರಸಿದ್ಧ ನಾದ. ಮೈಸೂರು ಸಂಸ್ಥಾನದ ಮಹಾರಾಜರ ಆಸ್ಥಾನದಲ್ಲಿ ವಿದ್ವಾಂಸನಾದ. ಮಹಾರಾಜರು ಅವನ ಸಂಗೀತವನ್ನು ಮೆಚ್ಚಿದ್ದರು. ಅವನು ಶ್ಯಾಮಶಾಸ್ತ್ರಿಗಳನ್ನು ಹೊಗಳುವುದನ್ನು ಕೇಳಿ ಅವರಿಗೂ ಶಾಸ್ತ್ರಿಗಳನ್ನು ಕಾಣಬೇಕು, ಅವರ ಸಂಗೀತ ಕೇಳಬೇಕು ಎಂದು ಹಂಬಲವಾಯಿತು. “ಆಸ್ಥಾನಕ್ಕೆ ಶ್ಯಾಮ ಶಾಸ್ತ್ರಿಗಳನ್ನು ಕರೆದುಕೊಂಡು ಬನ್ನಿ, ನಾನು ಪ್ರಾರ್ಥಿಸಿದೆ ಎಂದು ನನ್ನ ಪರವಾಗಿ ಮಾತನಾಡಿ” ಎಂದು ಅಪ್ಪುಕುಟ್ಟಿಯನ್ನು ಕಳುಹಿಸಿದರು.

ಅಪ್ಪುಕುಟ್ಟಿ ಶಾಸ್ತ್ರಿಗಳ ಬಳಿಗೆ ಬಂದ. ಶಾಸ್ತ್ರಿಗಳು ಹಣ್ಣು ಕೊಟ್ಟರು. “ಎಷ್ಟು ವರ್ಷಗಳಾಯಿತು ನಿಮ್ಮನ್ನು ನೋಡಿ! ಚೆನ್ನಾಗಿದ್ದೀರಾ?” ಎಂದು ಆತ್ಮೀಯತೆಯಿಂದ ಮಾತ ನಾಡಿಸಿದರು. ಅಪ್ಪುಕುಟ್ಟಿಯ ಬಿರುದು, ಪದಕಗಳನ್ನು ನೋಡಿ ಸಂತೋಷಪಟ್ಟರು.

ಅಪ್ಪುಕುಟ್ಟಿ ತನ್ನ ಬಿರುದುಗಳನ್ನೂ ಪದಕಗಳನ್ನೂ ಅವರ ಮುಂದಿಟ್ಟು ನಮಸ್ಕಾರ ಮಾಡಿದ. “ಇವೆಲ್ಲ ತಮ್ಮ ಕೃಪೆಯಿಂದ ನನಗೆ ಬಂದದ್ದು. ಅಹಂಕಾರ ತುಂಬಿದ್ದ ನನಗೆ ಬುದ್ಧಿ ಕಲಿಸಿದಿರಿ, ಸರಿಯಾದ ಮಾರ್ಗ ತೋರಿದಿರಿ. ಇವೆಲ್ಲವನ್ನೂ ನೀವು ಸ್ವೀಕರಿಸಬೇಕು. ನನ್ನನ್ನು ಆಶೀರ್ವದಿಸಬೇಕು. ಮೈಸೂರಿನ ಮಹಾ ಪ್ರಭುಗಳು ತಮ್ಮನ್ನು ಕಾಣಲು ಕಾತರ ರಾಗಿದ್ದಾರೆ. ಬಂದು ಅವರ ಅಪೇಕ್ಷಿಯನ್ನು ನಡೆಸಿಕೊಡಬೇಕು” ಎಂದ.

ಶ್ಯಾಮಶಾಸ್ತ್ರಿಗಳು, “ಅಪ್ಪಾ, ಈ ಬಿರುದುಗಳ ಪದಕಗಳು ನಿನ್ನವು, ನನಗೆ ಸೇರಿದವಲ್ಲ. ಅವನ್ನು ನಾನು ಮುಟ್ಟಲಾರೆ. ನಿನ್ನ ಪ್ರತಿಭೆಯಿಂದ ಪಡೆದಿದ್ದೀಯೆ. ನನಗೆ ನಿಜವಾಗಿ ಸಂತೋಷ. ಮೈಸೂರಿನ ಆಸ್ಥಾನಕ್ಕೂ ಬರಲಾರೆ. ಮಹಾರಾಜ ರಿಗೆ ನನ್ನ ಕೃತಜ್ಞತೆಯನ್ನೂ ನಮಸ್ಕಾರವನ್ನೂ ತಿಳಿಸು. ಆದರೆ ನಾನು ಯಾವ ಮಹಾರಾಜರ ಆಸ್ಥಾನಕ್ಕೂ ಬರುವುದಿಲ್ಲ. ಬಂಗಾರು ಕಾಮಾಕ್ಷಿಯ ಸನ್ನಿಧಿಯೇ ನನಗೆ ಸಾಕು” ಎಂದರು.

 

 

‘ಕಾಮಾಕ್ಷಿದೇವಿಯು ನನ್ನನ್ನು ಪರೀಕ್ಷಿಸಲು ನಿನ್ನನ್ನು ಕಳುಹಿಸಿರುವಳು.’

ಅಪ್ಪುಕುಟ್ಟಿ ಎಷ್ಟು ಕಾಡಿದರೂ ಬೇಡಿದರೂ ಒಂದೇ ಒಂದು ಪದಕವನ್ನೂ ಸ್ವೀಕರಿಸಲಿಲ್ಲ, ರಾಜರ ಆಸ್ಥಾನಕ್ಕೆ ಹೋಗಲಿಲ್ಲ.

ಮಾ ತಲ್ಲಿ ಮಾ ತಲ್ಲಿ

ಶ್ಯಾಮಶಾಸ್ತ್ರಿಗಳ ರಚನೆಗಳು ಗಾಯನ ನೂರಾರು ಮಂದಿಗೆ ಸಂತೋಷವನ್ನು ಕೊಟ್ಟವು. ಒಂದು ಸಂಜೆ ಅವರು ದೇವಿಯ ಪೂಜೆ ಮುಗಿಸುವ ಹೊತ್ತಿಗೆ ಸಂನ್ಯಾಸಿಯೊಬ್ಬ ಅವರನ್ನು ಕಾಣಬೇಕೆಂದಿದ್ದಾನೆ ಎಂದು ಮನೆಯವರು ಹೇಳಿದರು. ಶಾಸ್ತ್ರಿಗಳು ಹೊರಕ್ಕೆ ಬರುತ್ತಲೇ ಸಂನ್ಯಾಸಿ ಪ್ರಣಾಮ ಮಾಡಿ ಅವರ ಪಾದಗಳನ್ನು ಮುಟ್ಟಿದನಂತೆ. ಶಾಸ್ತ್ರಿಗಳಿಗೆ ದಿಗ್ಭ್ರಮೆಯಾಯಿತು. ‘ಸಂನ್ಯಾಸಿ ನನ್ನ ಪಾದಗಳನ್ನು ಮುಟ್ಟುವುದೇ! ಛೆ, ಎಂತಹ ಅಪಚಾರ ನನ್ನಿಂದ ಆಯಿತು!’ ಎಂದು ಕಾಲನ್ನು ಹಿಂದಕ್ಕೆ ಸರಿಸಿದರಂತೆ.

ಎದ್ದವನೇ ಸಂನ್ಯಾಸಿ ಆನಂದದಿಂದ ಶ್ಯಾಮಶಾಸ್ತ್ರಿಗಳ ಆನಂದಭೈರವಿ ರಾಗದ ಕೃತಿ ‘ಓ ಜಗದಂಬಾ’ ಹಾಡಲು ಪ್ರಾರಂಭಿಸಿದನಂತೆ.

ಶಾಸ್ತ್ರಿಗಳ ಮೊಟ್ಟಮೊದಲನೆಯ ಶಿಷ್ಯ ಆತ. ಅವನಿಗೆ ಈ ಕೃತಿಯನ್ನು ಹೇಳಿಕೊಟ್ಟಿದ್ದರು. ಆತ ಒಂದು ದಿನ ಇದ್ದಕ್ಕಿದ್ದಂತೆ ಮಾಯವಾಗಿ ಬಿಟ್ಟಿದ್ದ!

ಶಾಸ್ತ್ರಿಗಳ ಕೃತಿಗಳನ್ನು ಹಾಡುವುದು ಕಷ್ಟ. ಆದರೂ ‘ಜನನೀ ನತಜನಪರಿಪಾಲಿನಿ’, ‘ದೇವಿ ಬ್ರೋವ ಸಮಯವಿದೆ’, ‘ಮೀನಲೋಚನ’, ‘ನನ್ನು ಬ್ರೋವ’, ‘ಸರೋಜದಳ ನೇತ್ರಿ’, ‘ಓ ಜಗದಂಬಾ’, ‘ಪಾಲಿಂಚು ಕಾಮಾಕ್ಷಿ’ ಮೊದಲಾದವನ್ನು ಈಗಲೂ ಸಂಗೀತದ ಕಚೇರಿಗಳಲ್ಲಿ ಕೇಳಬಹುದು. ಶ್ರದ್ಧೆ, ವಿದ್ವತ್ತು, ಪ್ರತಿಭೆ ಮೂರೂ ಬೆರೆತವು ಶಾಸ್ತ್ರಿಗಳಲ್ಲಿ. ಇವಕ್ಕೆ ಕಳಶವಿಟ್ಟಂತೆ ಅವರ ವಿನಯ; ಎಂದೂ ತಾವು ವಾಗ್ಗೇಯಕಾರ ರೆಂದು, ಸಂಗೀತಗಾರರೆಂದು ಹೆಮ್ಮೆಪಡಲಿಲ್ಲ. ‘ನಾನಿನ್ನೂ ವಿದ್ಯಾರ್ಥಿ, ಕಲಿಯಬೇಕಾದದ್ದು ಎಷ್ಟೋ ಇದೆ’ ಎಂದೇ ಹೇಳುತ್ತಿದ್ದರು. ರಾಜರ ಆಸ್ಥಾನಕ್ಕೆ ಕಾಲಿಡಲಿಲ್ಲ. ಹಣ, ಬಿರುದು ಬಯಸಲಿಲ್ಲ. ತೆಗಳಿಕೆಗೆ ಅಳುಕಲಿಲ್ಲ. ಅವರ ಸಂಗೀತವೆಲ್ಲ ಬಂಗಾರು ಕಾಮಾಕ್ಷಿಗೆ, ಭಕ್ತರಿಗೆ ಅರ್ಪಣೆ. ಬಂಗಾರು ಕಾಮಾಕ್ಷಿ ಅವರಿಗೆ ತಾಯಿ. ಎಲ್ಲ ಮನುಷ್ಯರೂ ಅವಳ ಮಕ್ಕಳು.

ಅವರ ಒಂದು ಹಾಡು ಹೀಗೆ ಪ್ರಾರಂಭವಾಗುತ್ತದೆ:

‘ಕರುಣ ಜೂಡವಮ್ಮ ವಿನಮಮ್ಮ ಶ್ರಿತಜನ ಕಲ್ಪವಲ್ಲಿ ಮಾ ತಲ್ಲಿ ಮಾತಲ್ಲಿ’

(ನನ್ನಲ್ಲಿ ಕರುಣೆ ತೋರು, ನನ್ನ ಮಾತನ್ನು ಕೇಳು, ಆಶ್ರಿತರ ಕಲ್ಪವಲ್ಲಿ ನೀನು, ನನ್ನ ತಾಯಿ ನನ್ನ ತಾಯಿ.)

ಆ ತಾಯಿಯನ್ನು ನೆನೆಸುತ್ತ ಭಜಿಸುತ್ತ ದಿವ್ಯ ಜೀವನ ಬಾಳಿದರು ಶ್ಯಾಮಶಾಸ್ತ್ರಿಗಳು.