ಭಾರತದ ಅತ್ಯಂತ ದೊಡ್ಡ ನಗರವೆನಿಸಿದ ಕಲ್ಕತ್ತದ ಆಶುತೋಷ್‌ರಸ್ತೆಯ ೭೭ನೇ ನಂಬರು ಮನೆಯಲ್ಲಿ ೧೯೦೧ರ ಜುಲೈ ೭ರಂದು ಅತ್ಯಂತ ಸಂಭ್ರಮದ ದಿವಸ. ಅಂದು ಅಲ್ಲಿನ ಗೌರವಾನ್ವಿತ ಕುಟುಂಬದಲ್ಲಿ ಎರಡನೆಯ ಮಗುವಿನ ಜನನ.

ಮೇಧಾವಿ ತಂದೆ

ಕೆಲವೇ ದಿನಗಳ ನಂತರ ವಿಜೃಂಭಣೆಯಿಂದ ನಡೆದ ನಾಮಕರಣ ಮಹೋತ್ಸವದಲ್ಲಿ ಬಾಲಕನಿಗೆ “ಶ್ಯಾಮಾ ಪ್ರಸಾದ” ಎಂಬ ಹೆಸರನ್ನಿಡಲಾಯಿತು. ಈತನೇ ಮುಂದೆ ಭಾರತೀಯ ಜನಾಂಗಕ್ಕೆ ಜೀವವನ್ನು ತೆತ್ತು “ಭಾರತ ಸಂಸತ್‌ನ ಸಿಂಹ” ಮತ್ತು “ಭಾರತ ಕೇಸರಿ” ಎನಿಸಿಕೊಂಡವನು.

ಶ್ಯಾಮಾಪ್ರಸಾದ್‌ಮುಖರ್ಜಿ ಕಲ್ಕತ್ತೆಯ ಸುಪ್ರಸಿದ್ಧ, ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವರು. ತಂದೆ ಅಶುತೋಷ್‌ಮುಖರ್ಜಿ ಶಿಕ್ಷಣ ಕ್ಷೇತ್ರದಲ್ಲಿ ಅಸಾಮಾನ್ಯ ಹೆಸರು ಪಡೆದ ಮೇಧಾವಿ. ತಾಯಿ ಯೋಗಮಾಯಾ ದೇವಿ ಪತಿಪರಾಯಣೆ ಮತ್ತು ಸಂಪ್ರದಾಯಸ್ಥ ಹಿಂದೂ ಮಹಿಳೆ.

ಅಶುತೋಷ್‌ಮುಖರ್ಜಿ ಕಲ್ಕತ್ತದಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಲಂಡನ್‌ಮ್ಯಾಥಮ್ಯಾಟಿಕಲ್ ಸೊಸೈಟಿಯ ಸದಸ್ಯರಾಗಿ ರೇಖಾಗಣಿತದಲ್ಲಿ ಪರಿಣತಿ ಪಡೆದಿದ್ದರು. ರೇಖಾಗಣಿತದ ಸಮಸ್ಯೆಗಳಿಗೆ ಅವರು ಕಂಡು ಹಿಡಿದ ಉತ್ತರಗಳು ಇಂಗ್ಲೆಂಡ್‌ದೇಶದಲ್ಲಿ ಮಾನ್ಯತೆ ಗಳಿಸಿದ್ದವು. ಅನೇಕ ಶೋಧನೆಗಳು “ಮುಖರ್ಜಿ ಪ್ರಮೇಯ”ಗಳೆಂದು ಹೆಸರು ಪಡೆದಿದ್ದುವೆಂದರೆ ಹೆಮ್ಮೆಯ ಹಾಗೂ ಅಚ್ಚರಿಯ ಸಂಗತಿ. ಭೌತ ವಿಜ್ಞಾನ, ಸಂಸ್ಕೃತ, ಕಾನೂನು ವಿಷಯಗಳಲ್ಲೂ ಪರಿಪೂರ್ಣತೆ ಪಡೆದಿದ್ದ ಅಶುತೋಷ್‌ರವರ ಮೇಧಾವಿತನವನ್ನು ಗುರುತಿಸಿದ ಅಂದಿನ ವೈಸ್‌ರಾಯ್‌ಲಾರ್ಡ್‌ಕರ್ಜನ್‌, ಅವರನ್ನು ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಿಸಿದನು. “ಸರಸ್ವತಿ ಪುತ್ರ”ನೆಂದು ಹೆಸರು ಪಡೆದ ಅವರು ಕಲ್ಕತ್ತ ಹೈಕೋರ್ಟಿನ ನ್ಯಾಯಾಧೀಶರೂ ಆದರು. ಅವರ ರಾಷ್ಟ್ರೀಯ ಮನೋಭಾವ, ರಾಷ್ಟ್ರಪ್ರೇಮ, ಸ್ವಾತಂತ್ರ್ಯ ಪ್ರೇಮ ಹಾಗೂ ಉನ್ನತ ತತ್ತ್ವನಿಷ್ಠೆಗಳಿಗೆ ಯಾವ ತಡೆಯೂ ಇರಲಿಲ್ಲ. ಜನಸಾಮಾನ್ಯರು, ರಾಜಕಾರಣಿಗಳು ಬ್ರಿಟಿಷರ ಆಡಳಿತ ಮತ್ತು ಪ್ರಲೋಭಗಳಿಗೆ ಒಳಗಾಗಿ ಅವರ ದಯೆಗೆ ಪಾತ್ರರಾಗುತ್ತಿದ್ದ ಕಾಲದಲ್ಲಿ ಅಶುತೋಷರು ಪ್ರಾಂತದ ಮತ್ತು ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ನಿರ್ಭಯವಾಗಿ, ನಿರ್ದಾಕ್ಷಿಣ್ಯವಾಗಿ ತಮ್ಮ ಅಭಿಪ್ರಾಯಗಳನ್ನು ಸಿಂಹದಂತೆ ಗರ್ಜಿಸಿ ಸೂಚಿಸಿದರು. ಇಂಗ್ಲೆಂಡ್‌ಚಕ್ರವರ್ತಿ ಏಳನೇ ಎಡ್ವರ್ಡ್‌‌ನ ಕಿರೀಟಧಾರಣಾ ಸಮಾರಂಭಕ್ಕೆ ಲಾರ್ಡ್‌ಕರ್ಜನ್‌ಒತ್ತಾಯ ಮಾಡಿ ಕರೆದಾಗಲೂ ಇಂಗ್ಲೆಂಡಿಗೆ ಹೋಗುವುದನ್ನು ನಿರಾಕರಿಸಿದರು. ನಿರ್ಭಯತೆ, ಸ್ವತಂತ್ರ ಮನೋಭಾವ ಅವರಿಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಮುಂದೆ ಅಡ್ಡಿಯಾದುದು ಉಂಟು. ಅಶುತೋಷರು ತಮ್ಮ ಪುತ್ರಿಯ ಪುನರ್ವಿವಾಹ ನಡೆಸಲು ಸಾಹಸ ಮಾಡಿದ ಸಮಾಜ ಸುಧಾರಕರೂ ಹೌದು.

ಶ್ಯಾಮಾಪ್ರಸಾದ್‌ಮುಖರ್ಜಿಯವರು ತಮ್ಮ ಹೆಸರಾಂತ ತಂದೆಯವರಿಂದ ಅನೇಕ ಅಮೂಲ್ಯ ಹಿರಿಯ ಗುಣಗಳನ್ನು ಅನುವಂಶೀಯವಾಗಿ ಪಡೆದುದಲ್ಲದೆ, ಅವರ ಮಾರ್ಗದರ್ಶನದಿಂದಲೂ ಸೇವಾ ವೈವಿಧ್ಯತೆಗಳನ್ನು ಮೈಗೂಡಿಸಿಕೊಂಡರು. ಬಾಲ್ಯವು ಉತ್ತರ ಕಲ್ಕತ್ತದ ಭವಾನಿಪುರದಲ್ಲಿ ಕಳೆಯಿತು. 1917ರಲ್ಲಿ ಮಿತ್ರ ಇನ್‌ಸ್ಟಿಟ್ಯೂಟ್‌ನಿಂದ ಪ್ರಥಮ ಶ್ರೇಣಿಯಲ್ಲಿ ಮೆಟ್ರಿಕ್‌ಪೂರೈಸಿದರು.

ಹುಡುಗ ಮುಖರ್ಜಿ ಪ್ರಿನ್ಸಿಪಾಲರನ್ನು ಭೇಟಿ ಮಾಡಿದ.

ಚಿಕ್ಕಂದಿನಿಂದಲೇ ಶ್ಯಾಮಾಪ್ರಸಾದರು ದಯಾವಂತರು. ಅವರು ಶಾಲಾ ವಿದ್ಯಾರ್ಥಿಯಾಗಿದ್ದಾಗ ಬಡ ವಿದ್ಯಾರ್ಥಿಯೊಬ್ಬನು ಪರೀಕ್ಷೆಗೆ ಹಣ ಕಟ್ಟಲು ಸಾಧ್ಯವಾಗದೆ ಮೆಟ್ರಿಕ್‌ಪರೀಕ್ಷೆಗೆ ಕೂಡಲಾಗಲಿಲ್ಲ. ಹಣ ಕಟ್ಟುವ ಅಂತಿಮ ತಾರೀಖು ಕಳೆದಿತ್ತು. ಪ್ರಿನ್ಸಿಪಾಲರು ಕಟು ವ್ಯಕ್ತಿ ಮತ್ತು ಮಹಾ ಕೋಪಿಷ್ಟರು. ಅವರ ಬಳಿಗೆ ಹೋಗುವ ಸಾಹಸ ಯಾರಿಗೂ ಇರಲಿಲ್ಲ. ಮುಖರ್ಜಿಯವರು ಧೈರ್ಯವಾಗಿ ಪ್ರಿನ್ಸಿಪಾಲರ ಕೋಣೆಗೆ ಹೋಗಿ ಇಪ್ಪತ್ತು ನಿಮಿಷಗಳ ಕಾಲ ಮಾತನಾಡಿ ಬಡ ವಿದ್ಯಾರ್ಥಿಯ ಪರೀಕ್ಷಾ ಶುಲ್ಕವನ್ನು ಮಾಫಿ ಮಾಡಿಸಿ ಪರೀಕ್ಷೆಗೆ ಕೂಡುವಂತೆ ಮಾಡುವುದರಲ್ಲಿ ಸಫಲರಾದರು.

ಪ್ರತಿಭಾವಂತ ವಿದ್ಯಾರ್ಥಿ

1921ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎ. ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಮುಂದಿನ ವರ್ಷ ಎಂ.ಎ. ವಿದ್ಯಾರ್ಥಿಯಾಗಿದ್ದಾಗ ಸುಧಾದೇವಿಯವರೊಂದಿಗೆ ಅವರ ವಿವಾಹವಾಯಿತು. 1923ರಲ್ಲಿ ಬಂಗಾಳಿ ಭಾಷೆ ತೆಗೆದುಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ. ಪದವಿ ಪಡೆದರು. ಮರು ವರ್ಷದಲ್ಲೇ ಬಿ.ಎಲ್‌. ಪದವಿಯನ್ನೂ ಪ್ರಥಮ ದರ್ಜೆಯಲ್ಲಿ ಪಡೆದು ಕಲ್ಕತ್ತ ಹೈಕೋರ್ಟಿನ ವಕೀಲರಾಗಿ ಕಾರ್ಯ ಆರಂಭಿಸಿದರು. 24 ವರ್ಷದವರಾಗಿದ್ದಾಗಲೇ ಕಲ್ಕತ್ತ ವಿಶ್ವವಿದ್ಯಾಲಯದ ಸೆನೆಟ್‌ಸದಸ್ಯರಾಗಿ ಚುನಾಯಿತರಾದರು. 1926ರ ಮಾರ್ಚ್‌‌ನಲ್ಲಿ ಮುಖರ್ಜಿ ಇಂಗ್ಲೆಂಡಿಗೆ ತೆರಳಿ ಲಿಂಕನ್ಸ್‌ಇನ್‌ವಿದ್ಯಾಲಯದಲ್ಲಿ ವಕಾಲತ್‌ಪರೀಕ್ಷೆ ಪೂರೈಸಿ ಬಂದರು. ವಕೀಲಿ ವೃತ್ತಿಗಿಂತಲೂ ವಿಶ್ವವಿದ್ಯಾಲಯದ ಕೆಲಸಗಳಲ್ಲಿ ಅಧಿಕ ಸಮಯ ಕಳೆಯಬೇಕಾಗುತ್ತಿತ್ತು. ಹಗಲು ರಾತ್ರಿ ನಿರ್ವಹಿಸುತ್ತಿದ್ದ ಕೆಲಸಗಳನ್ನು ಕಂಡ ಜನರು ಅವರನ್ನು “ಶ್ರೇಷ್ಠ ತಂದೆಯ ಶ್ರೇಷ್ಠ ಮಗ” ಎನ್ನುತ್ತಿದ್ದರು.

ಸಂಸಾರ

ಮುಖರ್ಜಿಯವರ ಧರ್ಮಪತ್ನಿ ಸುಧಾದೇವಿಯವರು 1933ರಲ್ಲಿ ಕಾಲವಾದರು. ಮುಖರ್ಜಿಯವರಿಗೆ ನಾಲ್ವರು ಮಕ್ಕಳು. ಇಬ್ಬರು ಗಂಡುಮಕ್ಕಳು-ಅನುತೋಷ್‌ಮತ್ತು ದೇವತೋಷ್‌. ಇಬ್ಬರು ಹೆಣ್ಣು ಮಕ್ಕಳು-ಆರತಿ ಮತ್ತು ಸವಿತಾ. ಪತ್ನಿಯು ಕಾಲವಾದ ಮೇಲೆ ಅವರ ತಾಯಿ ಮಗನ ಮರುಮದುವೆಗೆ ಬಹಳ ಒತ್ತಾಯ ಮಾಡಿದರು. ಆದರೆ ಮುಖರ್ಜಿ ಅದಕ್ಕೆ ಒಪ್ಪದೆ ಉಳಿದ ಬದುಕಿದ ಕಾಲವನ್ನು ದೇಶಸೇವೆಗಾಗಿ ಕಳೆದರು.

ತರುಣ ಉಪಕುಲಪತಿ

1934ರಲ್ಲಿ ಶ್ಯಾಮಾಪ್ರಸಾದರು ಎರಡು ವರ್ಷಗಳ ಅವಧಿಗೆ ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಚುನಾಯಿತರಾದರು. ಆಗ ಅವರಿಗೆ ಮೂವತ್ತಮೂರು ವರ್ಷ. ಇವರೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಆ ಸ್ಥಾನ ಪಡೆದವರು. ಎರಡು ವರ್ಷಗಳ ತರುವಾಯ ಮತ್ತೆರಡು ವರ್ಷಗಳ ಅವಧಿಗೆ ಕಾರ್ಯಭಾರವು ಒಪ್ಪಿಸಲ್ಪಿಟ್ಟಿತು. ಆಗ ಮುಖರ್ಜಿ ನಿರ್ವಹಿಸಿದ ಸುಧಾರಣಾ ಕಾರ್ಯಗಳು ಬಹುತೇಕ, ಸೈನಿಕ ಶಿಕ್ಷಣ, ಮಹಿಳಾ ಶಿಕ್ಷಣ, ಅಧ್ಯಾಪಕರ ಶಿಕ್ಷಣ, ಲೋಕಸೇವಾ ಪರೀಕ್ಷೆಗಳ ವಿಶೇಷ ಬೋಧನೆ, ಮೆಟ್ರಿಕ್‌ನಲ್ಲಿ ವಿಜ್ಞಾನದ ಬೋಧನೆ, ಕಾಲೇಜು ಶಿಕ್ಷಣದಲ್ಲಿ ಬಂಗಾಳಿ ಭಾಷೆಯ ಮಾಧ್ಯಮ, ವಂಗಭಾಷೆಯ ಶಬ್ದಕೋಶ ರಚನೆ, ಬಿ.ಎ. ಪರೀಕ್ಷೆಗೆ ಬಂಗಾಳಿಯೊಂದಿಗೆ ಹಿಂದಿ ಬೋಧನೆ, ಚೀಣಿ ಹಾಗೂ ಟಿಬೆಟಿಯನ್‌ಭಾಷಾ ಬೋಧನೆಗಳು – ಹೀಗೆ ಹತ್ತು ಹಲವಾರು ದೊಡ್ಡ ಕಾರ್ಯಗಳೆಲ್ಲವೂ ಇವರ ಪ್ರಯತ್ನದಿಂದಲೇ ಪ್ರಾರಂಭವಾದವು.

ಪಾಂಡಿಚೇರಿಯ ಅರವಿಂದ ವಿಶ್ವವಿದ್ಯಾಲಯದ ಸ್ಥಾಪನಾ ಕಾರ್ಯಗಳಲ್ಲಿ ಮುಖರ್ಜಿಯವರ ಪಾತ್ರ ದೊಡ್ಡದು. ಅನೇಕ ವರ್ಷಗಳವರೆಗೆ ಅವರು ಪೋಸ್ಟ್‌ಗ್ರಾಜುಯೇಟ್‌ಕೌನ್ಸಿಲ್‌ಆಫ್‌ಆರ್ಟ್ಸ್‌ಅಂಡ್‌ಸೈನ್ಸ್‌ನ ಅದ್ಯಕ್ಷರಾಗಿದ್ದರು. 1938ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯವು ಅವರಿಗೆ ಡಿ.ಲಿಟ್‌. ಪದವಿ ನೀಡಿ ಗೌರವಿಸಿತು. ಅದೇ ವರ್ಷ ಬನಾರಸ್‌ವಿಶ್ವವಿದ್ಯಾನಿಲಯವೂ ಅವರಿಗೆ ಗೌರವ ಎಲ್‌ಎಲ್‌ಡಿ ಪದವಿ ಇತ್ತಿತ್ತು. ಭಾರತ ಸರ್ಕಾರವು ಅವರನ್ನು ಲೀಗ್‌ಆಫ್‌ನೇಷನ್ಸ್‌ನ ಬೌದ್ಧಿಕ ಸಹಕಾರ ಸಮಿತಿಗೆ ತನ್ನ ಪ್ರತಿನಿಧಿಯಾಗಿ ನೇಮಿಸಿತು. 1943ರಲ್ಲಿ ಬಂಗಾಳದ ರಾಯಲ್‌ಏಷ್ಯಾಟಿಕ್‌ಸೊಸೈಟಿಯ ಅಧ್ಯಕ್ಷರಾಗಿ ಚುನಾಯಿತರಾದರು. ಈ ಗೌರವಸ್ಥಾನ ಆಗಲೇ ಪ್ರಥಮ ಬಾರಿಗೆ ಭಾರತೀಯರೊಬ್ಬರಗೆ ದೊರೆತದ್ದು.

ಆ ದಿನಗಳಲ್ಲಿ ಬಂಗಾಳ ಪ್ರಾಂತದಲ್ಲಿ ಮುಸ್ಲಿಂ ಲೀಗ್‌ನ ಆಡಳಿವಿತ್ತು. ಸೂಕ್ಷ್ಮಮತಿಯವರಾದ ಮುಖರ್ಜಿ ಕುಲಪತಿಯವರಿಗೆ ಪತ್ರ ಬರೆದು ಉಪಕುಲಪತಿಯ ಸ್ಥಾನವು ಯಾರಾದರೂ ಮುಸ್ಲಿಮರಿಗೆ ದೊರೆಯುವುದು ಸರಿಯೆಂದು ಸೂಚಿಸಿದರು. ಕುಲಪತಿ ಲಾರ್ಡ್‌ಬ್ರೆಬೋರ್ನ್‌ಅವರ ವಿಶಾಲ ಭಾವನೆಗೆ ಮೆಚ್ಚಿಗೆ ಸೂಚಿಸಿ, ಒತ್ತಾಯಕ್ಕೆ ಮಣಿದು ಅವರ ಸ್ಥಾನದಲ್ಲಿ ಷಹಾಬುದ್ದಿನ್‌ಎಂಬ ಮುಸ್ಲಿಮರನ್ನು ಉಪಕುಲಪತಿಯಾಗಿ ನೇಮಿಸಿದರು.

ಹಿಂದೂ ಮಹಾಸಭೆಗೆ

1936ರಲ್ಲಿ ಶ್ಯಾಮಪ್ರಸಾದರು ವಿಶ್ವವಿದ್ಯಾನಿಲಯದ ಕ್ಷೇತ್ರದಿಂದ ಬಂಗಾಳ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು. 250 ಮಂದಿಯ ಸಭೆಯಲ್ಲಿ 80 ಮಂದಿ ಹಿಂದೂಗಳಿದ್ದರು. ಅವರಲ್ಲಿ ಬಹುತೇಕ ಕಾಂಗ್ರೆಸ್‌ಮಂದಿ. ಅದೇ ವರ್ಷ ಕೆಲವರು ಮುಸ್ಲಿಮರಿಂದ ಚಿಟ್ಟಿಗಾಂಗ್‌, ಮುನ್ಷಿಗಂಜ್‌, ಕೇಸರ್‌ಗಂಜ್‌, ಪಬನಾ ಮತ್ತು ಢಾಕಾಗಳಲ್ಲಿ ಹಿಂದೂ ಜನರಿಗೆ ತುಂಬ ತೊಂದರೆ ಆಯಿತು. ಕಾಂಗ್ರೆಸ್‌ನ ಹಿಡಿತವು ಮಹಾತ್ಮಗಾಂಧೀಜಿಯವರ ಕೈಗೆ ಬಂದಾಗ ಪಕ್ಷ ನೀತಿಯಲ್ಲಿ ಬದಲಾವಣೆ ಆಯಿತು. ಬಹು ಸಂಖ್ಯಾತರಾದ ಹಿಂದೂಗಳು ಮುಸ್ಲಿಮರ ವಿಶ್ವಾಸಗಳಿಸಲು ತೊಂದರೆಗಳನ್ನು ಸಹಿಸಿ ಸಹಜೀವನ ನಡೆಸಬೇಕೆಂಬುದು ಅಹಿಂಸಾವಾದಿ ಗಾಂಧಿಯವರ ಕರೆಯಾಗಿತ್ತು. ಆದ ಅಪಮಾನವನ್ನು ಕಾಂಗ್ರೆಸ್‌ಸದಸ್ಯರು ಮೌನವಾಗಿ ನುಂಗಬೇಕಾಯಿತು. ಶ್ಯಾಮಾಪ್ರಸಾದರಿಗೆ ಇದರಿಂದ ಅತೀವ ದುಃಖವಾಯಿತು. ಎಲ್ಲ ಮತಗಳವರಿಗೆ ಸಮಾನ ರಕ್ಷಣೆ ದೊರಕಬೇಕೆಂದು ಅವರ ಭಾವನೆ. ಹಿಂದೂ ಜನಾಂಗದ ಗತಿಯೇನು ಎಂಬ ಚಿಂತೆ ಕಾಡಿತು. ವಿಧಾನಸಭೆಯಲ್ಲಿ ಮುಸ್ಲಿಂಲೀಗ್‌ಮತ್ತು ಕಾಂಗ್ರೆಸ್‌ಪಕ್ಷಗಳೆರಡನ್ನೂ ಕಟುವಾಗಿ ವಿರೋಧಿಸಿದರು. 1939ರಲ್ಲಿ ಮುಖರ್ಜಿ ಹಿಂದೂ ಮಹಾಸಭೆಯ ಸದಸ್ಯರಾದರು. ಅವರು ಹಿಂದೂ ಮಹಾಸಭೆಗೆ ಸೇರಿದುದನ್ನು ಸ್ವಾಗತಿಸಿದ ಗಾಂಧೀಜಿ ಹೇಳಿದರು. “ಮದನ ಮೋಹನ ಮಾಳವೀಯರ ನಂತರ ಹಿಂದೂಗಳ ಮಾರ್ಗದರ್ಶನಕ್ಕೆ ಒಬ್ಬ ವ್ಯಕ್ತಿಯ ಅಗತ್ಯವಿತ್ತು. ಅದು ನೀವೇ. ಸಾಗರವನ್ನು ಕಡೆದ ಮೇಲೆ ವಿಷವನ್ನು ಕುಡಿದ ಶಿವನಂತೆ ಭಾರತದ ರಾಜಕೀಯ ವಿಷವನ್ನು ಕುಡಿಯುವ ಪಾಲು ನಿಮ್ಮದು.” 1940ರಲ್ಲಿ ಮುಖರ್ಜಿ ಹಿಂದೂ ಮಹಾಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು.

ಜನಸೇವೆ ಮಂತ್ರಿಸ್ಥಾನಕ್ಕಿಂತ ಮುಖ್ಯ

1941ರಲ್ಲಿ ಫಜಲ್‌ಹಕ್‌ರವರು ಹಿಂದೂಗಳೊಂದಿಗೆ ಸೇರಿ ಬಂಗಾಳದಲ್ಲಿ ಮಂತ್ರಿಮಂಡಲ ರಚಿಸಿದಾಗ ಶ್ಯಾಮಾಪ್ರಸಾದರಿಗೆ ಆರ್ಥಿಕ ಮಂತ್ರಿಯ ಸ್ಥಾನ ದೊರೆಯಿತು. 1942ರಲ್ಲಿ ಬಂಗಾಳದ ಸಮುದ್ರ ದಂಡೆಯಲ್ಲಿದ್ದ ಮಿಡ್ನಾಪುರ ಜಿಲ್ಲೆಯು ಭಯಂಕರ ಸಮುದ್ರಗಾಳಿಗೆ ತುತ್ತಾಯಿತು. ಸಹಸ್ರಾರು ಮಂದಿ ಬಿರುಗಾಳಿಯಲ್ಲಿ ಕೊಚ್ಚಿಹೋದರು. ಸಹಸ್ರಾರು ಮನೆಗಳು ಮುಳುಗಿ ಹೋದವು. ಆಸ್ತಿಪಾಸ್ತಿಗಳ ನಷ್ಟಕ್ಕೆ ಲೆಕ್ಕವಿರಲಿಲ್ಲ. ಮಿಡ್ನಾಪುರ ಜಿಲ್ಲೆಯ ಜನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ವೀರರು. ಈ ಕಾರಣದಿಂದ ಸರಕಾರವು ಆ ಜಿಲ್ಲೆಗೆ ಹೊರ ಭಾಗಗಳಿಂದ ಯಾವ ಸಹಾಯವೂ ಬರದಂತೆ, ಜನರೂ ಪ್ರವೇಶಿಸದಂತೆ ನಿರ್ಬಂಧ ಹಾಕಿತು. ಇಂಗ್ಲಿಷ್‌ಸರಕಾರವು ಆ ಜಿಲ್ಲೆಯ ಜನರನ್ನು ಹಸಿವಿನಿಂದ ಕೊಲ್ಲುವ ಇಚ್ಛೆ ಹೊಂದಿತ್ತು. ಮುಖರ್ಜಿಯವರಿಗೆ ಇದನ್ನು ಸಹಿಸಲಾಗಲಿಲ್ಲ. ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಸಂಚರಿಸಿ ನೊಂದ ಜನರಿಗೆ ಧೈರ್ಯ ತುಂಬಿದರು. ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹಗಲು ರಾತ್ರಿ ಸಂತ್ರಸ್ತರ ಸೇವೆಯಲ್ಲಿ ತೊಡಗಿದರು. ಸರಕಾರವು ಇವರಿಗೆ ವಿರೋಧವಾಗಿ ಇವರ ಕಾರ್ಯಗಳನ್ನು ವಿಘ್ನಗೊಳಿಸಲು ತನ್ನ ಪೂರ್ಣಶಕ್ತಿ ಪ್ರಯೋಗಿಸಿತು. ಆದರೆ ಮುಖರ್ಜಿ ತಮ್ಮ ಸೇವೆಯ ಹಾಗೂ ಕರ್ತವ್ಯದ ಪಥದಿಂದ ಸ್ವಲ್ಪವೂ ಹಿಂದಕ್ಕೆ ಸರಿಯಲಿಲ್ಲ.

1943ರಲ್ಲಿ ಬಂಗಾಳದಲ್ಲಿ ಭಯಂಕರ ಕ್ಷಾಮವು ತಲೆದೋರಿತು. ಮೂವತ್ತೈದು ಲಕ್ಷ ಮಂದಿ ಹಸಿವು, ಬಾಯಾರಿಕೆಗಳಿಂದ ತತ್ತರಿಸಿ, ಸತ್ತರು. ವೃತ್ತ ಪತ್ರಿಕೆಗಳು ಯವ ಸಂಗತಿಯನ್ನೂ ಪ್ರಕಟಿಸದಂತೆ ಸರಕಾರವು ಕಟುವಾದ ನಿರ್ಬಂಧ ಹಾಕಿತು. ಮುಖರ್ಜಿಯವರು ಮಹಾಬೋಧಿ ಸಂಘ, ರಾಮಕೃಷ್ಣ ಮಿಷನ್‌, ಮಾರ್ವಾಡಿ ರಿಲೀಫ್‌ಸೊಸೈಟಿ ಮುಂತಾದ ಸಂಸ್ಥೆಗಳ ಸಹಾಯದಿಂದ ದೇಶದಲ್ಲೆಲ್ಲಾ ಸುತ್ತಾಡಿ, ಧನ, ಧಾನ್ಯ ಸಂಗ್ರಹಿಸಿ ದುಃಖಿ ಜನರ ಕಷ್ಟಗಳನ್ನು ಪರಿಹರಿಸಿದರು.

ಅದೇ ದಿನಗಳಲ್ಲಿ ಢಾಕ್ಕಾದಲ್ಲಿ ಹಿಂದೂ ಮುಸಲ್ಮಾನರ ನಡುವೆ ಭೀಕರ ಘರ್ಷಣೆಯೂ ನಡೆಯಿತು. ಮುಖರ್ಜಿ ಕೂಡಲೇ ವಿಮಾನದಲ್ಲಿ ಢಾಕ್ಕಾಗೆ ತೆರಳಿ ಅಲ್ಲಿನ ನವಾಬನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅವರ ಪ್ರಯತ್ನದಿಂದಾಗಿ ದಂಗೆಯು ಶಾಂತವಾಯಿತು. ಮತ್ತು ಹಿಂದೂಗಳು ನೆಮ್ಮದಿಯ ಉಸಿರು ಹಾಕಿದರು.

ಪೂನಾದಲ್ಲಿ ನಡೆದ ಕಾಂಗ್ರೆಸ್‌ಅಧಿವೇಶನದಲ್ಲಿ ಕಾಂಗ್ರೆಸ್‌ವ್ಯಾವಹಾರಿಕ ನಿರ್ಣಯವೊಂದನ್ನು ತೆಗೆದುಕೊಂಡಿತು. ದೇಶದ ಸಂಘಟನೆಯಲ್ಲಿ ಕಾಂಗ್ರೆಸ್‌ಪೂರ್ಣ ವಿಶ್ವಾಸವಿಡುತ್ತದೆ. ಆದರೆ ದೇಶದ ಯಾವ ಭಾಗಗಳು ಕಾಂಗ್ರೆಸ್‌ನೊಂದಿಗಿರಲು ಇಚ್ಛಿಸುವುದಿಲ್ಲವೋ ಅವನ್ನು ಅದು ಒತ್ತಾಯಪಡಿಸುವುದಿಲ್ಲ ಎಂಬುದೇ ಆ ನಿರ್ಣಯ. 1946ರ ಚುನಾವಣೆಯಲ್ಲಿ ಕಾಂಗ್ರೆಸ್‌ತನ್ನ ನಿರ್ಣಯದ ಪ್ರಥಮ ಭಾಗವನ್ನು ಮಾತ್ರ ಪ್ರಕಟಣೆ ಮಾಡಿತು ಮತ್ತು ಹೋರಾಟ ನಡೆಸಿತು. ಹಿಂದೂಗಳು ಕಾಂಗ್ರೆಸ್‌ನಲ್ಲಿ ವಿಶ್ವಾಸವಿಟ್ಟು ಮತ ನೀಡಿದರು.

ಹಿಂದೂಗಳ ರಕ್ಷಣೆ

ಮುಸ್ಲಿಂಲೀಗ್‌ಮುಖಂಡ ಮಹಮದಾಲಿ ಜಿನ್ನಾ 1946ರ ಆಗಸ್ಟ್‌ನಲ್ಲಿ ಹಿಂದೂ ವಿರೋಧಿ ಪ್ರಚಾರವನ್ನು ಪ್ರಾರಂಭಿಸಿದರು. ಅಂದಿನ ಪಂಜಾಬ್‌ನಲ್ಲಿ ರಾವಲ್ಪಿಂಡಿಯ ಸುತ್ತಮುತ್ತಲೂ ಹಿಂದೂಗಳ ಒಂದೊಂದು ಹಳ್ಳಿಯೂ ಅಗ್ನಿಗೆ ಆಹುತಿಯಾಯಿತು. ಕಲ್ಕತ್ತ ನಗರದಲ್ಲಿ ಹಿಂದೂಗಳ ಸ್ಥಿತಿ ಕಷ್ಟವಾಯಿತು. ಮುಖರ್ಜಿ ಹಿಂದೂ ಮಹಾಸಭೆಯ ಸೇವಕರ್ತರೊಂದಿಗೆ ಒಂದೊಂದು ಮೊಹಲ್ಲಾಕ್ಕೂ ಹೊರಟು ಹಿಂದೂಗಳನ್ನು ರಕ್ಷಿಸಿದರು. ಅದೇ ವರ್ಷ ನವಖಾಲಿಯಲ್ಲಿ ಹಿಂದೂಗಳ ಮೇಲೆ ಘೋರ ಅತ್ಯಾಚಾರಗಳು ಸಾಗಿದವು. ಹೊರಭಾಗಗಳಿಗೆ ಸುದ್ದಿ ಹರಡದಂತೆ ಟೆಲಿಫೋನ್‌ಕಂಬಗಳನ್ನು ಉರುಳಿಸಲಾಗಿತ್ತು. ಮುಖರ್ಜಿ ತಮ್ಮ ಪ್ರಾಣದ ಹಂಗುತೊರೆದು ಒಂದು ದೋಣಿಯ ಮೂಲಕ ನವಖಾಲಿ ತಲುಪಿ ಮುಸ್ಲಿಂ ಮುಖಂಡರೊಡನೆ ಭೇಟಿಯಾಗಿ ಅತ್ಯಾಚಾರಗಳು ನಿಲ್ಲುವಂತೆ ಶ್ರಮಿಸಿದರು. ಈ ಘಟನೆ ನಡೆದ ಮೂರು ತಿಂಗಳ ನಂತರವೇ ಗಾಂಧೀಜಿ ನವಖಾಲಿಗೆ ಆಗಮಿಸಿದ್ದು.

ಭಾರತಕ್ಕೆ ಉಳಿಸಿಕೊಟ್ಟ ನೆಲ, ಜನ

ಸ್ವಾತಂತ್ರ್ಯದ ಪೂರ್ವಭಾವಿಯಾಗಿ ದೇಶದ ವಿಭಜನೆಗೆ ಕಾಂಗ್ರೆಸ್‌ತನ್ನ ಸಮ್ಮತಿ ನೀಡಿತು. ಪೂರ್ಣ ಪಂಜಾಬ್‌, ಪೂರ್ಣ ಬಂಗಾಳ, ಅಸ್ಸಾಂ, ಸಿಂಧ್‌ಮತ್ತು ಸೀಮಾ ಪ್ರಾಂತ್ಯಗಳನ್ನು ಮುಸ್ಲಿಂಲೀಗ್‌ಗೆ ಒಪ್ಪಿಸುವ ನಿಶ್ಚಯವಾಯಿತು. ಮುಖರ್ಜಿ ಇದರಿಂದ ತಲ್ಲಣಿಸಿದರು, ತತ್ತರಿಸಿದರು. ದೇಶದ ವಿಭಜನೆಯು ಯಾವುದರ ಆಧಾರದ ಮೇಲೂ ನಡೆಯಕೂಡದೆಂದು ಬಲವಾಗಿ ವಿರೋಧಿಸಿದರು. ಅವರ ಪ್ರಯತ್ನಗಳಿಗೆ ಫಲ ದೊರೆಯಲಿಲ್ಲ. ಸೋದಪುರದ ಆಶ್ರಮಕ್ಕೆ ಧಾವಿಸಿ ಮಹಾತ್ಮಗಾಂಧಿಯವರನ್ನು ಕಂಡರು. ಅನಂತರ ಇಂಗ್ಲಿಷ್‌ಸರಕಾರದ ಮುಖಂಡರು ಮತ್ತು ರಾಷ್ಟ್ರದ ಅನೇಕ ಮುಖಂಡರೊಂದಿಗೆ ಭೇಟಿಯಾಗಿ ಚರ್ಚಿಸಿದರು. ಅವರು ಹಗಲು ರಾತ್ರಿ ನಡೆಸಿದ ಪ್ರಯತ್ನಗಳಿಂದಾಗಿ ಅರ್ಧ ಬಂಗಾಳ, ಅರ್ಧ ಪಂಜಾಬ್‌, ಮತ್ತು ಮುಸ್ಲಿಂ ಲೀಗ್‌ನ ಕೈನಿಂದ ಪಾರಾಗಿ ಭಾರತಕ್ಕೆ ಉಳಿದವು. ಮುಖರ್ಜಿಯವರ ಪ್ರಾಂತವಾದ ಬಂಗಾಳವು ಇಬ್ಭಾಗವಾಗಿ ಪೂರ್ವ ಬಂಗಾಳ ಪಾಕಿಸ್ತಾನಕ್ಕೂ, ಪಶ್ಚಿಮ ಬಂಗಾಳ ಭಾರತಕ್ಕೂ ಸೇರಿತು. ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳ ರಕ್ಷಣೆಯು ಮುಸ್ಲಿಂಲೀಗ್‌ನ ಹೊಣೆಯೆಂದು ನಿಶ್ಚಯವಾಯಿತು. ಅಂತೆಯೇ ಭಾರತದಲ್ಲಿನ ಮುಸಲ್ಮಾನರ ರಕ್ಷಣೆಯ ಭಾರವನ್ನು ನೆಹರು ಸರಕಾರವು ವಹಿಸಿಕೊಂಡಿತು.

1947ರ ಆಗಸ್ಟ್‌15ರಂದು ಭಾರತವು ಸ್ವತಂತ್ರ ದೇಶವಾಯಿತು. ಇತ್ತ ದೆಹಲಿಯಲ್ಲಿ ವಿಜೃಂಭಣೆಯಿಂದ ಸ್ವಾತಂತ್ರ‍್ಯ ಸಮಾರಂಭಗಳು ಜರುಗುತ್ತಿದ್ದರೆ, ಅತ್ತ ಪಾಕಿಸ್ತಾನದಲ್ಲಿ ಬಂಗಾಳ, ಪಂಜಾಬ್, ಸಿಂಧ್‌ಮತ್ತು ಸೀಮಾ ಪ್ರಾಂತ್ಯಗಳಲ್ಲಿ ಹಿಂದೂಗಳ ಪ್ರಾಣಹಾನಿ, ಆಸ್ತಿ ಸಂಪತ್ತುಗಳ ಲೂಟಿ ತಡೆಯಿಲ್ಲದೆ ನಡೆಯುತ್ತಿತ್ತು. ಹಿಂದೂ ಮಹಿಳೆಯರ ಅವಮಾನವಾಗುತ್ತಿತ್ತು. ಹಿಂದೂ ಸೋದರರು ತಮ್ಮ ಆಸ್ತಿ, ಸಂಪತ್ತು, ಬಂಧುಗಳು, ಸ್ಥಾನ, ಪ್ರತಿಷ್ಠೆ ಎಲ್ಲವನ್ನೂ ಕಳೆದುಕೊಂಡು ಅತೀವ ಶ್ರಮ, ಸಾಹಸಗಳಿಂದ ಭಾರತದ ಗಡಿ ತಲುಪಿದರು. ಆದರೆ ಅತಿ ಕಡಮೆ ಸಂಖ್ಯೆಯಲ್ಲಿ ಮಾತ್ರ ಬಂಗಾಳಿ ಹಿಂದೂಗಳು ಭಾರತವನ್ನು ತಲುಪುವುದು ಸಾಧ್ಯವಾಯಿತು.

ಕೇಂದ್ರದಲ್ಲಿ ಮಂತ್ರಿ

ಸ್ವಾತಂತ್ರ್ಯ ದಿನಾಚರಣೆಯಂದು ಮೊದಲನೆ ಮಂತ್ರಿ ಮಂಡಲವು ರಚಿತವಾದಾಗ ಅದರಲ್ಲಿ ಕೈಗಾರಿಕಾ ಮಂತ್ರಿಯ ಕಾರ್ಯಭಾರವು ಶ್ಯಾಮಪ್ರಸಾದರ ಹೆಗಲಿಗೆ ಬಂತು. ಎರಡೂವರೆ ವರ್ಷಗಳವರೆಗೆ ಆ ಪದವಿಯಲ್ಲಿದ್ದು ದೇಶದ ಸೇವೆಯನ್ನು ಪ್ರಶಂಸನೀಯವಾಗಿ ಸಲ್ಲಿಸಿದರು. ಬೆಂಗಳೂರಿನ ವಿಮಾನ ಕಾರ್ಖಾನೆ, ವಿಶಾಖಪಟ್ಟಣದ ಹಡಗು ನಿರ್ಮಾಣ, ಸಿಂಧ್ರಿಯ (ಬಿಹಾರದಲ್ಲಿ) ರಾಸಾಯನಿಕ ಗೊಬ್ಬರಗಳ ತಯಾರಿಕೆ, ಚಿತ್ತರಂಜನ್‌(ಪಶ್ಚಿಮ ಬಂಗಾಳದಲ್ಲಿ) ರೈಲ್ವೆ ಇಂಜಿನ್‌ಗಳ ಮಹಾನ್‌ಕಾರ್ಖಾನೆ ಮೊದಲಾದವು ಅವರ ಕಾರ್ಯದಕ್ಷತೆಯ ಜೀವಂತ ಪ್ರಮಾಣಗಳು. ಮೂರನೆ ದರ್ಜೆ ರೈಲ್ವೆ ಡಬ್ಬಿಗಳಲ್ಲಿ ಪ್ರಥಮವಾಗಿ ಸುಧಾರಣೆ ತಂದವರು ಮುಖರ್ಜಿ.

ಹೈದರಾಬಾದ್‌ಸಮಸ್ಯೆ

ಹೈದರಾಬಾದ್‌ನಲ್ಲಿ ನಿಜಾಮನ ಆಡಳಿತವಿತ್ತು. ಅಲ್ಲಿ ರಜಾಕಾರರು ಹಿಂದೂಗಳ ಬದುಕಿಗೆ ವಿಪರೀತ ಕಿರುಕುಳ ಕೊಟ್ಟರು. ದಿನೇದಿನೇ ಹಿಂದೂಗಳ ಮೇಲಿನ ಅತ್ಯಾಚಾರ ಅಧಿಕವಾಯಿತು. ಕೇಂದ್ರ ಸರಕಾರಕ್ಕೆ ದೊಡ್ಡಚಿಂತೆ ಹತ್ತಿತ್ತು. ಮುಖರ್ಜಿಯವರು ಹೈದರಾಬಾದ್ ಸಮಸ್ಯೆಗೆ ಗೃಹಮಂತ್ರಿ ಸರ್ದಾರ್ ವಲ್ಲಭಬಾಯ್‌ಪಟೇಲ್‌ಮತ್ತು ಇತರ ಮಂತ್ರಿಗಳೊಂದಿಗೆ ಸಮಾಲೋಚಿಸಿ ಹೈದರಾಬಾದ್‌ಸಮಸ್ಯೆಯನ್ನು ಸರ್ದಾರ್ ಪಟೇಲರಿಗೆ ಬಿಡುವಂತೆ ನೆಹರು ಅವರನ್ನು ಒಪ್ಪಿಸಿದರು.

ಜನನಾಯಕ (ಬೃಹತ್‌ಸಾರ್ವಜನಿಕ ಸಭೆಯಲ್ಲಿ ಭಾಷಣ)

ಹೀಗಾಗಿ ಹೈದರಾಬಾ‌ದ್‌ಸಮಸ್ಯೆ ಸಮರ್ಥ ವ್ಯಕ್ತಿಯ ಮುಂದೆ ಬಂತು. ಗೃಹಮಂತ್ರಿ ಪಟೇಲರು ಸ್ವಲ್ಪವೂ ತಡಮಾಡದೆ “ಪೊಲೀಸ್‌ಕಾರ್ಯಾಚರಣೆ”ಯ ಮೂಲಕ ನಿಜಾಮನನ್ನು ಬಗ್ಗಿಸಿ ಹದಕ್ಕೆ ತಂದು ಹೈದರಾಬಾದನ್ನು ಭಾರತದ ಅಂಗವಾಗಿ ಮಾಡಿದರು.

ಪೂರ್ವ ಬಂಗಾಳದ ಹಿಂದೂಗಳ ಸಂಕಟ

ಪೂರ್ವ ಬಂಗಾಳದಲ್ಲಿ ಹಿಂದೂಗಳನ್ನು ಕೊಲ್ಲುವ, ಲೂಟಿ ಮಾಡುವ ಹೇಯ ಕಾರ್ಯಗಳು ಸರಕಾರದ ಬೆಂಬಲದಿಂದ ಸುವ್ಯವಸ್ಥಿತವಾಗಿ ಪ್ರಾರಂಭವಾದವು. ಅಲ್ಲಿದ್ದವರು ಒಂದು ಕೋಟಿ ಮೂವತ್ತು ಲಕ್ಷ ಹಿಂದೂಗಳು. ಅನೇಕ ಸಂಪತ್ತುಗಳ ಮಾಲೀಕರಾಗಿದ್ದರು. 1290 ಹೈಸ್ಕೂಲುಗಳು ಮತ್ತು 47 ಕಾಲೇಜುಗಳು ಹಿಂದೂಗಳ ಮೂಲಕವೇ ಕಾರ್ಯನಿರತವಾಗಿದ್ದವು. ಢಾಕಾ, ಕೋಮಿಲ್ಲಾ, ಸಿಲಹಟ್ ಮತ್ತು ರಾಜಶಾಹಿಗಳಲ್ಲಿ ದೊಡ್ಡ ಸಂಸ್ಕೃತ ವಿದ್ಯಾಲಯಗಳಿದ್ದವು. ಚಿಟ್ಟಗಾಂಗ್‌ನಲ್ಲಿ ಬೌದ್ಧ ಧರ್ಮ ಅನುಸರಿಸುತ್ತಿದ್ದವರು 5 ಲಕ್ಷ ಮಂದಿ. 1950ರಲ್ಲಿ ಸ್ಥಿತಿ ಮತ್ತಷ್ಟು ತೀವ್ರಗೊಂಡಿತು. 20 ಲಕ್ಷ ಹಿಂದೂಗಳು ಮನೆ, ಆಸ್ತಿ ತೊರೆದು ಆಹಾರ ಬಟ್ಟೆಗಳಿಲ್ಲದೆ ಕಲ್ಕತ್ತಾಗೆ ಬಂದರು. 50 ಸಹಸ್ರಗಳ ಹಿಂದೂಗಳ ಕೊಲೆಯಾಗಿತ್ತು. ಮಹಿಳೆಯರ ಅಪಮಾನವಾಗಿತ್ತು. ಕಲ್ಕತ್ತಾಗೆ ಬಂದು ನಿರಾಶ್ರಿತ ಹಿಂದೂಗಳ ಶೋಚನೀಯ ಪರಿಸ್ಥಿತಿ ಕಂಡ ಮುಖರ್ಜಿಯವರು ದೆಹಲಿಗೆ ಹಿಂತಿರುಗಿ ಭಾರತ ಸರ್ಕಾರಕ್ಕೆ ಹಿಂದೂಗಳ ದೈನ್ಯ ಅವಸ್ಥೆಯ ವಿವರಣೆ ನೀಡಿದರು.

ಮಂತ್ರಿಸ್ಥಾನ ಬಿಟ್ಟರು

ಅದೇ ದಿನಗಳಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಲಿಯಾಕತ್‌ಅಲಿಖಾನ್‌ದೆಹಲಿಗೆ ಆಗಮಿಸಿದರು. ಭಾರತ ಸರಕಾರವು ಅವರೊಂದಿಗೆ ಒಂದು ಒಪ್ಪಂದಕ್ಕೆ ಬಂದಿತು. ಪೂರ್ವ ಬಂಗಾಳದಲ್ಲಿ ವಾಸಿಸುವ ಹಿಂದೂಗಳಿಗೆ ಸಂಪೂರ್ಣ ರಕ್ಷಣೆ ದೊರೆಯಬೇಕೆಂದು ಒಪ್ಪಂದದ ಅಂಶ. ಆದರೆ ನಡೆದುಹೋದ ಅತ್ಯಾಚಾರ, ದುರ್ಘಟನೆಗಳ ಬಗೆಗೆ ಏನೊಂದೂ ಪರಿಹಾರವಿಲ್ಲ. ಒಪ್ಪಂದದಲ್ಲಿ ಹೊಸದು ಯಾವುದೂ ಇಲ್ಲ. ರಾಷ್ಟ್ರವಿಭಜನೆಯ ಸಮಯದಲ್ಲೇ ಈ ವಿಷಯದಲ್ಲಿ ಪೂರ್ಣ ನಿಶ್ಚಯವಾಗಿತ್ತು. ಕೇವಲ ಕಾಗದದ ಮೇಲಿನ ಜೊಳ್ಳು ಒಪ್ಪಂದವನ್ನು ಮುಖರ್ಜಿ ಕಟುವಾಗಿ ವಿರೋಧಿಸಿದರು. ಮತ್ತು ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳ ಪೂರ್ಣ ರಕ್ಷಣೆಯ ಭಾರವು ನಮ್ಮದೇ ಎಂಬುದಾಗಿ ನೆಹರೂರವರಿಗೆ ಮನವರಿಕೆ ಮಾಡಿಕೊಟ್ಟರು. ಪಾಕಿಸ್ತಾನಿ ಸರಕಾರದೊಂದಿಗೆ ಬಿಗಿ ನೀತಿ ಅನುಸರಿಸಬೇಕೆಂದು ಮಂತ್ರಿಮಂಡಲದ ಸಭೆಯಲ್ಲಿ ತಿಳಿಸಿದರು.

ಮುಖರ್ಜಿಯವರ ಈ ವಿರೋಧವನ್ನು ನೆಹರು ಸಹಿಸಲಿಲ್ಲ. ಮುಖರ್ಜಿಯವರು 1950ರ ಏಪ್ರಿಲ್‌ನಲ್ಲಿ ಸರಕಾರವನ್ನು ತ್ಯಜಿಸಿ ಬಂದರು. ಹಾಗೂ, ಬಂಗಾಳದ ದುಃಖಿತ ಹಿಂದೂ ಸೋದರರ ಸೇವೆಯಲ್ಲಿ ತೊಡಗಿದರು.

ಜನಸಂಘದ ಮೊದಲನೆ ಅಧ್ಯಕ್ಷರು

ಮಂತ್ರಿಪದವಿಯ ಕಟ್ಟುಪಾಡು ಕಳೆದಮೇಲೆ ಸರಕಾರದ ನೀತಿಯ ವಿರುದ್ಧ ಪ್ರಚಾರ ಪ್ರಾರಂಭಿಸಿದರು. ಅಂತಹ ಕಾರ್ಯಕ್ಕೆ ದಳಗಳ ಅವಶ್ಯಕತೆ ಬಹಳ. ಇವರ ಯತ್ನದಿಂದ 1951ರ ಏಪ್ರಿಲ್‌28ರಂದು ಭಾರತೀಯ ಜನಸಂಘದ ಘೋಷಣೆ ಆಯಿತು. ದೆಹಲಿಯಲ್ಲಿ ಅಕ್ಟೋಬರ್ 29ರಂದು ಸಂಘದ ಸಂಘಟನೆ ಆಯಿತು. ಪಂಜಾಬ್‌, ಪೆಪ್ಸು, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಮಧ್ಯಭಾರತ, ರಾಜಾಸ್ತಾನ, ಬಿಹಾರ ಮತ್ತು ಬಂಗಾಳ ಪ್ರಾಂತಗಳ ಒಂದು ಸಾವಿರ ಪ್ರತಿನಿಧಿಗಳು ಒಂದೆಡೆ ಸೇರಿದರು. ಮುಖರ್ಜಿಯವರು ಜನಸಂಘದ ಪ್ರಥಮ ಅಧ್ಯಕ್ಷರಾಗಿ ಚುನಾಯಿತರಾದರು. ಈ ಮಧ್ಯೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನೆ ಮತ್ತು ಕಾರ್ಯಗಳಿಂದಲೂ ಬಹಳವಾಗಿ ಪ್ರಭಾವಿತರಾದರು. ಅವರಲ್ಲಿನ ಉತ್ಸಾಹಿ ದೇಶಪ್ರೇಮಿ ಯುವಕರನ್ನು ಜನಸಂಘಕ್ಕೆ ಸೇರಿಸುವ ಪ್ರಯತ್ನಗಳನ್ನು ಮಡಿದರಾದರೂ ಆ ಯುವಕರು ರಾಜಕೀಯದಲ್ಲಿ ಬರಲು ತಯಾರಿರಲಿಲ್ಲ.

ಪಾರ್ಲಿಮೆಂಟಿನಲ್ಲಿ

ಸ್ವತಂತ್ರ ಭಾರತದ ಪ್ರಥಮ ಚುನಾವಣೆಯ ಕಾಲಕ್ಕೆ ಜನಸಂಘವು ಕೇವಲ ಮೂರು ತಿಂಗಳ ಶಿಶು. ಚುನಾವಣೆಯ ಪ್ರತಿ ಸ್ಥಾನಕ್ಕೂ ತೀವ್ರ ಹೋರಾಟ. ಕಾಂಗ್ರೆಸ್‌ಪಕ್ಷ ಅಧಿಕಾರದಲ್ಲಿತ್ತು. ನೆಹರು ಅವರು ವಿಮಾನದಲ್ಲಿ ಪ್ರಯಾಣ ಮಾಡಿ ಕಾಂಗ್ರೆಸ್‌ಪಕ್ಷಕ್ಕಾಗಿ ಪ್ರಚಾರ ನಡೆಸಿದರು. ಹಾಗೂ ಜನಸಂಘವನ್ನು ಸಂಪ್ರದಾಯದ ಗೊಡ್ಡು ಸಂಸ್ಥೆ ಎಂದು ಅವಹೇಳನ ಮಾಡಿದರು. ಮುಖರ್ಜಿಯವರು ಕೆಲವು ಪ್ರದೇಶಗಳಿಗೆ ಮೋಟಾರಿನಲ್ಲಿ ಕೆಲವು ಕಡೆಗೆ ರೈಲು ಗಾಡಿಯಲ್ಲಿ ಮತ್ತೆ ಕೆಲವು ಭಾಗಗಳಿಗೆ ನಡೆದು ಕಾಂಗ್ರೆಸ್‌ನ ಆಕ್ಷೇಪಣೆಗಳಿಗೆ ಸೂಕ್ತ ಉತ್ತರ ಕೊಟ್ಟರು. ಅವರು ಸ್ವತಃ ದಕ್ಷಿಣ ಕಲ್ಕತ್ತ ಕ್ಷೇತ್ರದಿಂದ ಸ್ಪರ್ಧಿಸಿದರು. ಅಲ್ಲಿನ ಮೂರು ಲಕ್ಷ ಮತದಾರರಲ್ಲಿ ಕಾಲು ಭಾಗದಷ್ಟು ಮುಸ್ಲಿಮರು. ಹಾಗಿದ್ದೂ ಅವರು ಚುನಾವಣೆಯಲ್ಲಿ ಗೆದ್ದರು. ಇಡೀ ಭಾರತದಲ್ಲಿ ಸ್ಪರ್ಧಿಸಿದ್ದ 742 ಜನಸಂಘದ ಪ್ರತಿನಿಧಿಗಳ ಪೈಕಿ 33 ಮಂದಿ ಸಫಲರಾದರು. ಪಾರ್ಲಿಮೆಂಟಿನಲ್ಲಿದ್ದವರಂತೂ ಕೇವಲ ಮೂರು ಮಂದಿ. ಸಂಸತ್ತಿನಲ್ಲಿ 364 ಸ್ಥಾನಗಳು ಕಾಂಗ್ರೆಸ್‌ಗೂ, ವಿರೋಧಪಕ್ಷಕ್ಕೆ 125 ಸ್ಥಾನಗಳೂ ದೊರಕಿದ್ದವು. 1952ರ ಮಾರ್ಚ್‌28ರಂದು ಮುಖರ್ಜಿ ವಿರೋಧಿ ದಳಗಳಾದ ಹಿಂದೂ ಮಹಾಸಭೆ, ರಾಮರಾಜ್ಯ ಪರಿಷತ್‌, ಅಕಾಲಿ ದಳ ಇವುಗಳನ್ನು ಒಂದುಗೂಡಿಸಿ 30 ಸದಸ್ಯರುಳ್ಳ ನ್ಯಾಷನಲ್‌ಡೆಮಾಕ್ರಾಟಿಕ್‌ದಳವನ್ನು ರಚಿಸಿದರು.

ನಿರ್ಭಯ ಟೀಕೆ

ಮೇ ತಿಂಗಳಲ್ಲಿ ಪ್ರಾರಂಭವಾದ ಸಂಸತ್‌ಸಭೆಯಲ್ಲಿ ವಿದೇಶ ನೀತಿಗಳ ಚರ್ಚೆ ಪ್ರಾರಂಭವಾದಾಗ ಮುಖರ್ಜಿ ಪಾಕಿಸ್ತಾನದ ಸಂಬಂಧದಲ್ಲಿ ಭಾರತದ ತಪ್ಪುಗಳನ್ನು ಘೋರವಾಗಿ ಟೀಕಿಸಿದರು. ಪೂರ್ವ ಬಂಗಾಳದಲ್ಲಿ ಸಿಕ್ಕಿ ಹೋದ ಹಿಂದೂಗಳ ಸಂಪೂರ್ಣ ರಕ್ಷಣೆಯಾಗಬೇಕೆಂದು ನೆಹರೂರವರಿಗೆ ಕಳಕಳಿಯಿಂದ ಮನವಿ ಮಾಡಿದರು. ಪಾಕಿಸ್ತಾನವು ಭಾರತದಲ್ಲಿ ಕೆಲವು ಮುಖಂಡರು ಮಾತ್ರ ವ್ಯರ್ಥವಾಗಿ ಕೂಗಾಡುತ್ತಿದ್ದಾರೆಂದೂ, ಹಿಂದೂಗಳು ತಮ್ಮ ದೇಶದಲ್ಲಿ ಸುರಕ್ಷಿತವಾಗಿದ್ದಾರೆಂದೂ ಹೇಳಲು ಪ್ರಾರಂಭಿಸಿತು. ಅವರೊಂದಿಗೆ ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ಮತ್ತಷ್ಟು ಹೆಚ್ಚಿಸಿತು. ಇದನ್ನರಿತ ಮುಖರ್ಜಿ ತಲ್ಲಣಿಸಿದರು. ನೆಹರೂರವರ ಸ್ವಲ್ಪ ಎಚ್ಚರಿಕೆಯ ಮಾತನಾಡಿ ಪಾಕಿಸ್ತಾನವು ಅನುಚಿತ ಲಾಭ ಪಡೆಯದಂತೆ ನೋಡಿಕೊಳ್ಳಬೇಕೆಂದು ಹೃದಯಪೂರ್ವಕವಾಗಿ ಕಳಕಳಿಯಿಂದ ಕೇಳಿಕೊಂಡರು.

ವಿದೇಶ ನೀತಿಗಳ ಬಗೆಗೆ ಚರ್ಚೆ ನಡೆಯುತ್ತಿದ್ದಾಗ ಒಮ್ಮೆ ಮುಖರ್ಜಿ ಹೇಳಿದರು, “ಭಾರತದ ವಿದೇಶಾಂಗ ನೀತಿಯ ವಿಷಯದಲ್ಲಿ ನಮಗೆ ಅಭಿಮಾನವಿದೆ. ಅದರಿಂದ ಭಾರತದ ಪ್ರತಿಷ್ಠೆಗೆ ಕಿರೀಟವಿಟ್ಟಂತಾಗಿದೆ. ಆದರೆ ಪಾಕಿಸ್ತಾನದ ಸಂಬಂಧದಲ್ಲಿ ನಮ್ಮ ನೀತಿ ನಗೆಪಾಟಲಾಗಿದೆ. ಪಾಕಿಸ್ತಾನವು ನಮ್ಮ ವಿಮಾನವನ್ನು ಕರಾಚಿಯ ಮೇಲಿನಿಂದ ಹಾರದಂತೆ ನಿರ್ಬಂಧಿಸಿದ್ದಾರೆ. ನಮ್ಮ ರಾಷ್ಟ್ರದ ಮೇಲೆ ಅವರು ಪೂರ್ವ ಬಂಗಾಳಕ್ಕೆ ಹಾರಿಸುವ ಅವರ ವಿಮಾನಗಳನ್ನು 24 ಗಂಟೆಗಳ ಕಾಲವಾದರೂ ಪ್ರತಿಬಂಧಿಸುವ ಶಕ್ತಿ ನಮಗಿಲ್ಲವೆ? ನಮ್ಮೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಅವರು ಪದೇ ಪದೇ ಮುರಿದು ಹಾಕಿದ್ದಾರೆ. ನಮ್ಮಿಂದ ಅವರಲ್ಲಿಗೆ ಸಾಗುವ ಕಲ್ಲಿದ್ದಲು ಮುಂತಾದ ಸಾಮಗ್ರಿಗಳನ್ನು ನಿಲ್ಲಿಸಬಾರದೇಕೆ?”

ನೆಹರು ಅವರು ಶ್ಯಾಮಪ್ರಸಾದರ ಆಕ್ಷೇಪಣೆಗಳಿಗೆ ಸರಿಯಾಗಿ ಉತ್ತರ ಕೊಡಲಿಲ್ಲ.

ಅನೇಕರಿಗೆ ಭಾರತ ಸರ್ಕಾರದ ದುರ್ಬಲ ನೀತಿಗಳನ್ನು ಸಂಸತ್ತಿನಲ್ಲಿ ನೇರವಾದ, ನಿರ್ದಾಕ್ಷಿಣ್ಯ, ಮುಕ್ತ ಶಬ್ದಗಳಿಂದ ಖಂಡಿಸಬಲ್ಲ ಸಾಹಸಿ ಡಾಕ್ಟರ್ ಶ್ಯಾಮಾಪ್ರಸಾದ ಮುಖರ್ಜಿಯೊಬ್ಬರೇ ಎನ್ನಿಸಿತು. “ಭಾರತದ ಕೇಸರಿ” ಎಂಬುದು ಅವರಿಗೆ ದೊರೆತ ಸಾರ್ಥಕ ನಾಮ.

ದೇಶದ ಕೆಲವು ಭಾಗಗಳಲ್ಲಿ ಬರಗಾಲ ಕಾಣಿಸಿತು. ಆಂಧ್ರದ ರಾಯಲಸೀಮೆ ಮತ್ತು ಪಶ್ಚಿಮ ಬಂಗಾಳದ ಜನರು ಆಹಾರವಿಲ್ಲದೆ ಸಾಯುತ್ತಿದ್ದರು. ಸರಕಾರವು ತನ್ನ ಸರ್ವತ್ರ ಶಕ್ತಿಯೊಂದಿಗೆ ಕ್ಷಾಮ ಪೀಡಿತರ ರಕ್ಷಣೆ ಮಾಡಬೇಕೆಂದು ಮುಖರ್ಜಿ ಹೃತ್ಪೂರ್ವಕ ಶಬ್ದಗಳಲ್ಲಿ ಮನವಿ ಮಾಡಿಕೊಂಡರು. ಅದರೊಂದಿಗೆ ಸಂಸತ್ ಸದಸ್ಯರಿಗೂ ಬೇಡಿಕೆ ಸಲ್ಲಿಸಿದರು. “ಸೋದರರೆ, ನಮಗೆ ದಿನವೊಂದಕ್ಕೆ 40 ರೂಪಾಯಿ ಭತ್ಯೆ ದೊರೆಯುತ್ತಿದೆ. ನಾವು ಅದರಲ್ಲಿ 10 ರೂಪಾಯಿ ಪ್ರತಿದಿನ ಹಸಿದು ಸಾಯುತ್ತಿರುವ ಸೋದರರಿಗೆ ನೀಡೋಣ.” ಬಹುಮಂದಿ ಸದಸ್ಯರು ಇಂತಹ ನೇರವಾದ, ಕಳಕಳಿಯ ಸತ್ಯದ ಕರೆಗೆ ಕಿವಿಗೊಡಲಿಲ್ಲ.

ಪಾಕಿಸ್ತಾನಕ್ಕೆ ಹೋಗಿದ್ದ ಸಹಸ್ರಾರು ಮುಸ್ಲಿಮರು ಭಾರತಕ್ಕೆ ಹಿಂತಿರುಗಿದರು. ನೆಹರು ಸರಕಾರವು ಒಪ್ಪಂದದ ಪ್ರಕಾರ ಅವರಿಗೆಲ್ಲಾ ಇಲ್ಲಿನ ಭೂಮಿ ಮತ್ತು ಸಂಪತ್ತುಗಳನ್ನು ಹಿಂತಿರುಗಿಸಿತು. ಆದರೆ ಒಬ್ಬ ಹಿಂದುವೂ ಪಾಕಿಸ್ತಾನಕ್ಕೆ ಹಿಂತಿರುಗಲಿಲ್ಲ. ಪಾಕಿಸ್ತಾನ ಸೇರಿದ ಹಿಂದೂ ಮಹಿಳೆಯರು ಮತ್ತು ಭಾರತದಲ್ಲಿ ಸೇರಿದ ಮುಸ್ಲಿಂ ಮಹಿಳೆಯರು ಇವರನ್ನು ಹುಡುಕಿ ಅವರ ದೇಶಗಳಿಗೆ ಹಿಂತಿರುಗಿಸಬೇಕೆಂದು ಎರಡು ದೇಶಗಳ ನಡುವೆ ಆಗಿದ್ದ ಮತ್ತೊಂದು ಒಪ್ಪಂದ. ಭಾರತ ಸರಕಾರವು ಸಹಸ್ರಾರು ಮುಸ್ಲಿಮ್‌ಮಹಿಳೆಯರನ್ನು ಸುರಕ್ಷಿತವಾಗಿ ಪಾಕಿಸ್ತಾನಕ್ಕೆ ಹಿಂತಿರುಗುವಂತೆ ಮಾಡಿತು. ಆದರೆ ಆರಿಸಿ ಹೊರಬಂದವರಂತೆ ಪಾಕಿಸ್ತಾನದಿಂದ ಹಿಂತಿರುಗಿಸಲ್ಪಟ್ಟ ಹಿಂದೂ ಮಹಿಳೆಯರು ಕೆಲವು ನೂರರಷ್ಟು ಮಾತ್ರ.

ಬೌದ್ಧ ಧರ್ಮಕ್ಕಾಗಿ

ಮುಖರ್ಜಿಯವರು ಭಾರತದಲ್ಲಿ ಬೌದ್ಧಧರ್ಮದ ಮಹಾಬೋಧಿ ಸಭೆಯ ಅಧ್ಯಕ್ಷರು. 1851ರ ಇಂಗ್ಲಿಷ್‌ಆಳ್ವಿಕೆಯ ಕಾಲದಲ್ಲಿ ಜನರಲ್‌ಕನಿಂಗ್‌ಹ್ಯಾಂ ಸಾಂಚಿಯಲ್ಲಿದ್ದ ಸ್ತೂಪದಿಂದ ಬುದ್ಧನ ಪವಿತ್ರ ಅವಶೇಷಗಳನ್ನು ತೆಗೆಸಿ ಇಂಗ್ಲೆಂಡಿಗೆ ಕಳುಹಿಸಿದ್ದ. ಅವು ಅಲ್ಲಿನ ವಸ್ತು ಪ್ರದರ್ಶನಾಲಯದಲ್ಲಿದ್ದು, ಭಾರತವು ಸ್ವತಂತ್ರವಾದ ಮೇಲೆ ನಮಗೆ ಹಿಂತಿರುಗಿಸಲ್ಪಟ್ಟವು. 1949ರ ಜನವರಿ 14ರಂದು ಕಲ್ಕತ್ತದ ದೊಡ್ಡ ಸಮಾರಂಭದಲ್ಲಿ ನೆಹರುರವರು ಅವಶೇಷಗಳನ್ನು ಮುಖರ್ಜಿಯವರಿಗೆ ಒಪ್ಪಿಸಿದರು.

ಬೌದ್ಧಧರ್ಮವನ್ನು ಅವಲಂಬಿಸಿರುವ ದೇಶಗಳು ಈ ಪವಿತ್ರ ಅವಶೇಷಗಳ ದರ್ಶನ ಪಡೆಯಲು, ಪೂಜಿಸಲು ಇಚ್ಛಿಸಿದವು. ಆ ದೇಶಗಳಿಂದ ಸತತವಾಗಿ ಆಹ್ವಾನಗಳು ಬಂದ ಮೇಲೆ ಮುಖರ್ಜಿಯವರು 1952ರ ಮಾರ್ಚ್‌‌ನಲ್ಲಿ ಬರ್ಮಾ ದೇಶಕ್ಕೆ ತೆರಳಿದರು. ಆ ದಿನಗಳಲ್ಲಿ ಬರ್ಮಾದಲ್ಲಿ ಅಂತರ್ಯುದ್ಧ ನಡೆಯುತ್ತಿತ್ತು. ಮುಖರ್ಜಿಯವರು ಅಲ್ಲಿಗೆ ಆಗಮಿಸಿದಾಗ ಎಲ್ಲಾ ಪಂಗಡಗಳೂ ಒಂದಾಗಿ ರಂಗೂನ್‌ನಗರದ ಬಾಂಡೂಲಾ ಚೌಕದಲ್ಲಿ ಅವರಿಗೆ ಅಪೂರ್ವ ಸ್ವಾಗತ, ಸನ್ಮಾನ ನೀಡಿದರು. ವೈಷಮ್ಯ ಮರೆತು ಎಲ್ಲರೂ ಒಂದಾಗಿ ಅವಶೇಷಗಳನ್ನು ಪೂಜಿಸಿದರು.

“ಅವಶೇಷಗಳನ್ನುಹೊತ್ತು…”

ಅನಂತರ ಅಕ್ಟೋಬರ್‌ನಲ್ಲಿ ಮುಖರ್ಜಿ ಕಂಬೋಡಿಯಾ ರಾಜಧಾನಿ ಫನೋಮ್‌ಪೆನ್‌ಗೆ, ವಿಯಟ್‌ನಾಂ ದೇಶದ ರಾಜಧಾನಿ ಸೈಗಾನ್‌ಗೆ, ಅನಂತರ ಬ್ಯಾಂಕಾಕ್‌ಗೆ ಭೇಟಿಕೊಟ್ಟರು. ಎರಡು ಸ್ಥಳಗಳಲ್ಲಿಯೂ ಸಹಸ್ರಾರು ಜನರಿಂದ ಅವಶೇಷಗಳ ದರ್ಶನ ನಡೆಯಿತು. ಮುಖರ್ಜಿಯವರ ಈ ವಿದೇಶಯಾತ್ರೆಯಿಂದ ಈ ಎಲ್ಲ ದೇಶಗಳ ನಡುವೆ ಆತ್ಮೀಯತೆ ಬೆಳೆಯಿತು. ತಮ್ಮ ಹಿಂದಿನ ಸ್ನೇಹದ ನೆನಪು ಮರುಕಳಿಸಿತು.

1952ರ ನವೆಂಬರ್ 30ರಂದು ಮುಖರ್ಜಿ ಸಾಂಚಿಯಲ್ಲಿ ಬೃಹತ್‌ಸಮಾರಂಭವೊಂದರಲ್ಲಿ ಅವಶೇಷಗಳನ್ನು ಪುನಃ ಪ್ರತಿಷ್ಠಾಪೂರ್ವಕವಾಗಿ ಸ್ಥಾಪಿಸಿದರು. ಅಂದು ವಿಶ್ವದ ಎಲ್ಲಾ ಬೌದ್ಧ ದೇಶಗಳಿಂದಲೂ ಪ್ರತಿನಿಧಿಗಳು ಆಗಮಿಸಿದ್ದರು.

ಮತ್ತೆ ಪಾಕಿಸ್ತಾನದ ಹಿಂದೂಗಳಿಗಾಗಿ

1952ನೇ ಅಕ್ಟೋಬರ್ 15ರಿಂದ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪಾಸ್‌ಪೋರ್ಟ್‌ಕಾಯಿದೆ ಜಾರಿಗೆ ತರುವ ನಿಶ್ಚಯವಾಯಿತು.

ಪೂರ್ವ ಬಂಗಾಳದ ಹಿಂದೂಗಳು ಈ ಸುದ್ದಿಯಿಂದ ಬೆದರಿದರು. ಪಾಕಿಸ್ತಾನದಲ್ಲೇ ಅವರು ನಾಶಹೊಂದುವುದು ಖಚಿತವೆಂದೂ, ಭಾರತದ ಗಡಿಯನ್ನು ತಲುಪಲಾರರೆಂದೂ ನಿಶ್ಚಯಿಸಿಕೊಂಡರು. ಮನೆ, ಆಸ್ತಿಗಳನ್ನು ಬಿಟ್ಟು ಆ ನಿರ್ಭಾಗ್ಯ ಹಿಂದೂಗಳು ಭಾರತದ ಕಡೆಗೆ ಧಾವಿಸಿದರು. ಮಾರ್ಗಗಳಲ್ಲಿ ವಿಪರೀತ ತೊಂದರೆಗೆ ಒಳಪಡಿಸಿದರು. ಹಸಿದು ಕಂಗೆಟ್ಟ ಲಕ್ಷಾಂತರ ಹಿಂದೂಗಳು ದೂರದೂರುಗಳಿಂದ ಕಲ್ಕತ್ತ ತಲುಪಿದರು. ಸಹಸ್ರಾರು ಮಂದಿ ಮಾರ್ಗ ಮಧ್ಯೆ ಹತರಾದರು.

ಈ ಮಧ್ಯೆ ಪಾಕಿಸ್ತಾನಿ ಸರಕಾರವು ತನ್ನ ಎಲ್ಲಾ ಸ್ಥಾನಗಳಿಗೂ ಗುಪ್ತ ಆಜ್ಞೆಗಳನ್ನು ಕಳುಹಿಸಿತು. ಸರಕಾರದ ಅನುಮತಿ ಇಲ್ಲದೆ ಹಿಂದೂಗಳಿಗೆ ನೌಕರಿ ನೀಡಬಾರದೆಂದು ಎಲ್ಲಾ ಕಾರ್ಖಾನೆಗಳಿಗೆ, ವಾಣಿಜ್ಯ ಸಂಸ್ಥೆಗಳಿಗೆ ಆಜ್ಞೆ ಬಂತು. ಪಾಕಿಸ್ತಾನ್‌ಅಸೆಂಬ್ಲಿಯಲ್ಲಿ ಹಿಂದೂ ಸದಸ್ಯರಾಗಿದ್ದ ಭೂಪೇಂದ್ರಕುಮಾರ ದತ್ತರು 14 ಪುಟಗಳ ಈ ತುಚ್ಛಗುಪ್ತ ಆಜ್ಞೆಯ ಒಂದು ಪ್ರತಿಯನ್ನು ಹೇಗೋ ಪಡೆದುಕೊಂಡು ಅಸೆಂಬ್ಲಿಯ ಮುಂದಿಡಲು ಸಾಹಸ ಮಾಡಿದರು. ಕಾನೂನು ಪ್ರಕಾರ ಹಿಂದೂಗಳ ಸಂಪೂರ್ಣ ರಕ್ಷಣೆಯ ಹೊಣೆ ಸರಕಾರದ್ದೆಂದು ವಾದಿಸಿದರು. ಈ ತುರ್ತು ಸಂಗತಿಗಳನ್ನೆಲ್ಲಾ ಕೇಳಿದ ಮುಖರ್ಜಿ ದುಃಖಿತ ಸೋದರರ ಸಹಾಯಕ್ಕಾಗಿ ಕಲ್ಕತ್ತೆಗೆ ಬಂದರು. 1957ರ ನವೆಂಬರ್ 1ನೇ ತಾರೀಕು ಹಲವು ಪಕ್ಷಗಳ ಒಂದು ಸಮಿತಿ ರಚಿತವಾಯಿತು. ಸೋಷಿಯಲಿಸ್ಟ್‌ಫಾರ್ವರ್ಡ್‌ಬ್ಲಾಕ್‌, ಮಜದೂರ್ ಸಂಘ, ಅಚೂರ್ ಫೆಡರೇಷನ್‌, ಹಿಂದೂ ಮಹಾಸಭೆ ಮತ್ತು ಅಕಾಲಿದಳದ ಪ್ರತಿನಿಧಿಗಳು ಒಂದಾಗಿ ಸೇರಿ ಸಂಯುಕ್ತ ಸಮಿತಿಗೆ ಶ್ರೀಮತಿ ಸುಚೇತಾ ಕೃಪಲಾನಿ ಅಧ್ಯಕ್ಷಿಣಿಯಾದರು. ಸಮಿತಿಯಿಂದ ಪ್ರಬಲ ಘೋಷಣೆಗಳು ಹೊರಬಿದ್ದವು. ಅದರ ಪ್ರಕಾರ ಪಾಕಿಸ್ತಾನದೊಂದಿಗೆ ಆಗಿದ್ದ ಕಾಗದ ಒಪ್ಪಂದವು ಪೂರ್ತಿಯಾಗಿ ಸತ್ತುಹೋದ ಒಪ್ಪಂದ. ಪಾಕಿಸ್ತಾನವು ಒಂದು ಸಭ್ಯ ನಾಗರಿಕ ಸರಕಾರದ ರೀತಿಯಲ್ಲಿ ಹಿಂದೂಗಳೊಂದಿಗೆ ವರ್ತಿಸುವವರೆಗೆ ಆ ದೇಶಕ್ಕೆ ಕಳುಹಿಸಬೇಕಾದ ವಸ್ತುಗಳನ್ನು ಮತ್ತು ನೀಡಬಹುದಾದ ಸಹಾಯಗಳನ್ನು ನಿಲ್ಲಿಸಬೇಕೆಂದು ಭಾರತ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪೂರ್ವ ಮತ್ತು ಪಶ್ಚಿಮ ಬಂಗಾಳಗಳ ಮಧ್ಯೆ ಪಾಸ್‌ಪೋರ್ಟ್‌ಪದ್ಧತಿ ರದ್ದಾಗಬೇಕೆಂದು ಒತ್ತಾಯ ಪಡಿಸಲಾಯಿತು. ದೇಶದಾದ್ಯಂತ ಸಭೆಗಳು ನಡೆದವು. ಕಲ್ಕತ್ತದ ಪಾಕ್‌ಸರ್ಕಸ್‌ಮೈದಾನದಲ್ಲಿ ನಡೆದ ಬೃಹತ್‌ಸಭೆಗೆ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಬಂದರು. ಮಾನವತೆಯ ಹೆಸರಿನಲ್ಲಿ ಭಾರತೀಯರು ಪಾಕಿಸ್ತಾನದ ಅನ್ಯಾಯಗಳನ್ನು ಘೋರವಾಗಿ ವಿರೋಧಿಸುವುದಾಗಿ ಮುಖರ್ಜಿ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರ

ಈ ವಿಪತ್ತುಗಳು ಉಳಿದಿರುವಂತೆಯೇ ಜಮ್ಮು ಮತ್ತು ಕಾಶ್ಮೀರದ ಜನತೆಯ ಕೂಗು ಮುಖರ್ಜಿಯವರ ಕಿವಿ ಮುಟ್ಟಿತು. ಅಲ್ಲಿಯ ಜನತೆ ಭಾರತದ ಶಾಸನ ಮತ್ತು ಭಾರತದ ತ್ರಿವರ್ಣ ಧ್ವಜವು ತಮಗೆ ಇರಬೇಕೆಂದೂ ಮತ್ತು ಜಮ್ಮು ಕಾಶ್ಮೀರವು ಭಾರತದ ಅಂಗವಾಗಿರಬೇಕೆಂದೂ ಇಚ್ಛಿಸುತ್ತಿದ್ದರು. ಪ್ರಜಾಪರಿಷತ್‌ಆಶ್ರಯದಲ್ಲಿ ಪಂಡಿತ ಪ್ರೇಮನಾಥ ಡೋಗರಾರವರ ಮುಖಂಡತ್ವದಲ್ಲಿ ಅಲ್ಲಿನ ಜನರು ಸತ್ಯಾಗ್ರಹ ಪ್ರಾರಂಭಿಸಿದರು. ಆರು ತಿಂಗಳ ಅವಧಿಯಲ್ಲಿ ಅಲ್ಲಿನ ಸರಕಾರ 2500 ಸತ್ಯಾಗ್ರಹಿಗಳನ್ನು ಜೈಲಿಗೆ ತಳ್ಳಿತು. ಅಲ್ಲಿನ ಹಿಂದೂಗಳಿಗೆ ಸಾಕಷ್ಟು ರಕ್ಷಣೆ ದೊರೆಯುತ್ತಿಲ್ಲ ಎಂದು ಶ್ಯಾಮಾಪ್ರಸಾದರಿಗೆ ಮನವರಿಕೆಯಾಯಿತು. ಕೇಂದ್ರ ಸರಕಾರವೂ ತನ್ನ ಕರ್ತವ್ಯವನ್ನು ಮಾಡುತ್ತಿಲ್ಲ, ಹಿಂದೂಗಳಿಗೆ ತೀರ ಹಿಂಸೆಯಾಗುತ್ತಿದೆ ಎಂದು ತೋರಿತು.

ಶ್ಯಾಮಾಪ್ರಸಾದರು ಹಲವು ಘಟನೆಗಳನ್ನು ಕೇಳಿ ಕೆರಳಿದರು. ಅವರ ಕರೆಯಂತೆ ಡಿಸೆಂಬರ್ 14ರಂದು ದೇಶದಲ್ಲೆಲ್ಲಾ ಹರತಾಳಗಳು, ಖಂಡನಾ ಸಭೆಗಳು ನಡೆದವು. ಜಮ್ಮು ಘಟನೆಗಳು ಜನರಿಗೆ ಪೂರ್ತಿಯಾಗಿ ಮನವರಿಕೆಯಾದವು. 1953ರ ಜನವರಿ 9 ರಿಂದ ಮುಖರ್ಜಿಯವರು ಪ್ರಧಾನಮಂತ್ರಿ ನೆಹರು ಮತ್ತು ಪೇಕ್‌ಅಬ್ದುಲ್ಲಾರೊಂದಿಗೆ ಪತ್ರ ವ್ಯವಹಾರ ಪ್ರಾರಂಭಿಸಿದರು. ಎರಡೂ ಕಡೆಗಳಿಂದ 11 ಪತ್ರಗಳು ಬರೆಯಲ್ಪಟ್ಟವು. ಎಲ್ಲವೂ ವ್ಯರ್ಥವಾಗಿತ್ತು.

ಜಮ್ಮುವಿನ ಹುತಾತ್ಮರ ಅಸ್ಥಿಗಳು ದೆಹಲಿಗೆ ಬಂದವು. ದೆಹಲಿ ನಗರವಾಸಿಗಳು ಮಾರ್ಚ್‌6ರಂದು ಅವುಗಳೊಂದಿಗೆ ಮೆರವಣಿಗೆ ಹೊರಟರು. ಭಾರತ ಸರಕಾರವು ಶ್ಯಾಮಾಪ್ರಸಾದ್‌ಮುಖರ್ಜಿ, ಎನ್‌.ಸಿ.ಚಟರ್ಜಿ, ಮೌಲಿಚಂದ್ರ ಶರ್ಮ ಮೊದಲಾದ 19 ಮುಖಂಡರನ್ನು ಜೈಲಿಗೆ ಕಳುಹಿಸಿತು. ಮುಖರ್ಜಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು ಮತ್ತು ಸುಪ್ರೀಂ ಕೋರ್ಟ್‌‌ನಲ್ಲಿ ಮೊಕದ್ದಮೆ ಸಾಗಿತು. ಈ ಮಧ್ಯೆ ಅವರು ಗ್ವಾಲಿಯರ್, ಇಂದೋರ್, ಕಲ್ಕತ್ತ, ಜಯಪುರ, ಮುಂಬಯಿ, ಪಾಟ್ನ ಮತ್ತು ಪಾಟಿಯಾಲಾಗಳಿಗೆ ಭೇಟಿ ನೀಡಿದರು ಮತ್ತು ಅಲ್ಲಿನ ಜನಗಳಿಗೆ ಜಮ್ಮು ಜನತೆಯ ದುಃಖದ ಕತೆಗಳನ್ನು ವಿವರಿಸಿದರು. ಅವರ ಕರೆಗೆ ಮನ್ನಣೆ ನೀಡಿದ ಜನರು ದೇಶದ ಮೂಲೆ ಮೂಲೆಗಳಿಂದ ದೆಹಲಿಗೆ ಬಂದು ಸತ್ಯಾಗ್ರಹ ಆಚರಿಸಿದರು. 1800 ಮಂದಿ ಸತ್ಯಾಗ್ರಹಿಗಳು ಜೈಲು ಸೇರಿದರು. ಅವರಲ್ಲಿ 1000ಕ್ಕೂ ಹೆಚ್ಚಿನವರು ಡಾಕ್ಟರುಗಳು, ವಕೀಲರು, ಉಪಾಧ್ಯಾಯರು, ಪ್ರೊಫೆಸರುಗಳು ಮೊದಲಾದ ಸುಶಿಕ್ಷಿತ ವರ್ಗದವರು.

ಸೆರೆಮನೆಯಲ್ಲಿ

ಜಮ್ಮು ಜನತೆಯ ಕರೆಗೆ ಕೇಂದ್ರ ಸರಕಾರವು ಕಲ್ಲಾಗಿ ಕುಳಿತಾಗ ಶ್ಯಾಮಾಪ್ರಸಾದ್‌ಮುಖರ್ಜಿ ಸ್ವಯಂ ತಾವೇ ಜಮ್ಮುವಿಗೆ ಹೋಗಲು ನಿಶ್ಚಯಿಸಿದರು. ಭಾರತ ಸರಕಾರದಿಂದ ಅನುಮತಿ ಕೇಳಿದಾಗ ಸರಕಾರ ನಿರಾಕರಿಸಿತು. ಮುಖರ್ಜಿಯವರು ವೈದ್ಯಗುರುದತ್ತ, ಅಟಲ್‌ಬಿಹಾರಿ ವಾಜಪೇಯಿ, ಡಾಕ್ಟರ್ ಜರ್ಮನ್‌ಮತ್ತು ಟೇಕ್‌ಚಂದ್‌ರವರೊಂದಿಗೆ 1953ರ ಮೇ 8ರಂದು ಪ್ರಾತಃಕಾಲ 6-30ರ ರೈಲು ಹತ್ತಿದರು. ದೆಹಲಿ ಸ್ಟೇಷನ್‌ನಲ್ಲಿ ಸಹಸ್ರಾರು ಮಂದಿ ನೆರೆದು “ಭಾರತ ಮಾತಾ ಕಿ ಜಯ್‌” ಮತ್ತು “ಭಾರತ ಕೇಸರಿ ಕಿ ಜಯ್‌” ಎಂಬ ಆಕಾಶ ಬಿರಿಯುವ ಘೋಷಣೆಗಳೊಂದಿಗೆ ಅವರನ್ನು ಬೀಳ್ಕೊಟ್ಟರು. ಪ್ರಯಾಣದ ಮಧ್ಯೆ ಪಾಣಿಪಟ್‌, ನೀಲೊಖೇಡಿ, ಷಾಹಬಾದ್‌, ಕರ್ನಾಲ್‌, ಅಂಬಾಲಾ, ಫಗವಾಡ, ಜಲಂಧರ್ ಮತ್ತು ಅಮೃತಸರಗಳಲ್ಲಿ ಲಕ್ಷ ಲಕ್ಷಗಳಲ್ಲಿ ಜನ ಅವರ ಭಾಷಣ ಕೇಳಿದರು.

ಶ್ಯಾಮಾಪ್ರಸಾದರು ರಾವಿ ನದಿಯ ಸೇತುವೆಯನ್ನು ತಲುಪಿದಾಗ ಭಾರತೀಯ ಅಧಿಕಾರಿಗಳು ಅವರನ್ನು ತಡೆಯಲಿಲ್ಲ. ಮುಂದಿನ ಪ್ರಯಾಣಕ್ಕೆ ಸುಖ ಕೋರಿದರು. ಅವರ ಜೀಪ್‌ಸೇತುವೆಯ ಮಧ್ಯೆಭಾಗಕ್ಕೆ ಬರುತ್ತಲೇ ಕಾಶ್ಮೀರದ ಪೊಲೀಸ್‌ಜಿಲ್ಲಾಧಿಕಾರಿ ಅವರನ್ನು ಬಂಧಿಸಿದರು. ವೈದ್ಯ ಗುರುದತ್ತ ಮತ್ತು ಟೇಕ್‌ಚಂದ್‌ಸಹ ಅವರೊಂದಿಗೆ ಬಂಧಿತರಾದರು. ಮುಖರ್ಜಿಯವರನ್ನು ಉಧಮ್‌ಪುರ ಮತ್ತು ಬಟೋಟ್‌ಮೂಲಕವಾಗಿ ಶ್ರೀನಗರಕ್ಕೆ ತಂದು ಅಲ್ಲಿನ ನಿಶಾತ್‌ಬಾಗ್‌ಜೈಲಿನಲ್ಲಿ ಇರಿಸಲಾಯಿತು. ಅವರು ಪ್ರಯಾಣದ ಆಯಾಸದಿಂದ ಬಳಲಿದ್ದರು. ಆಹಾರ ಪಾನೀಯಗಳ ಬಗ್ಗೆ ಸರಕಾರವು ನಿಬಂಧನೆ ವಿಧಿಸಿತ್ತು. ಮುಖರ್ಜಿಯವರ ಪಚನಶಕ್ತಿ ಕೆಡಲಾರಂಭಿಸಿತು. ಜೈಲಿನಲ್ಲಿದ್ದಾಗ ಅವರನ್ನು ಯಾರೂ ಭೇಟಿಯಾಗುವಂತಿರಲಿಲ್ಲ. ಅವರ ಹಿರಿಯ ಮಗ ಅನುತೋಷ್‌ಮುಖರ್ಜಿಯವರು ತಂದೆಯನ್ನು ಕಾಣಲು ದೆಹಲಿಯಲ್ಲಿ ಸರಕಾರದೊಂದಿಗೆ ಪ್ರಯತ್ನ ನಡೆಸಿ ವಿಫಲರಾದರು. ಸಂಬಂಧಿಗಳು ಬರೆದ ಪತ್ರಗಳು ಮುಖರ್ಜಿಯವರ ಕೈ ಸೇರಲಿಲ್ಲ.

ಸೆರೆಮನೆಯಲ್ಲಿ ನಿಧನ

ಮೇ 17ರಂದು ಅವರಿಗೆ ಸಣ್ಣ ಜ್ವರ ಮತ್ತು ಕಾಲುಗಳಲ್ಲಿ ನೋವು ಕಾಣಿಸಿತು. ಜೂನ್‌4ರ ಹೊತ್ತಿಗೆ ಕಾಲುನೋವು ಅಧಿಕವಾಗಿ ಹಸಿವು ಕಡಮೆಯಾಗತೊಡಗಿತು. 19 ಮತ್ತು 20ರಂದು ಹಿಂದೆಂದೂ ಸಂಭವಿಸದ ವಿಚಿತ್ರ ಬೆನ್ನುನೋವು ಕಾಣಿಸಿತು. ವೈದ್ಯರು ಔಷಧ ನೀಡಿದರು. 1953ರ ಜೂನ್‌23ರಂದು ಅವರು ನಿಧನರಾದರು.

ಮುಖರ್ಜಿಯವರ ಪಾರ್ಥಿವ ಶರೀರವು ವಿಮಾನದಲ್ಲಿ ಜೂನ್‌23ರ ರಾತ್ರಿ 8-50ಕ್ಕೆ ಕಲ್ಕತ್ತದ ಢಂಢಂ ನಿಲ್ದಾಣದಲ್ಲಿ ಇಳಿಯಿತು. ಮಹಾನ್‌ವ್ಯಕ್ತಿಯ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಮಂದಿ ಮಧ್ಯಾಹ್ನದಿಂದಲೇ ಕಾದು ನಿಂತಿದ್ದರು. ರಾತ್ರಿಯ ಅಂಧಕಾರದಲ್ಲಿ ಹತ್ತು ಮೈಲಿನ ಜನಭರಿತ ರಸ್ತೆಯ ಉದ್ದಕ್ಕೂ ಚಲಿಸಿದ ದೇಹವು ಮರುದಿನ ಪ್ರಾತಃಕಾಲ ಐದು ಗಂಟೆಯ ಹೊತ್ತಿಗೆ ಅಶುತೋಷ್‌ರಸ್ತೆಯ ಮನೆಯನ್ನು ತಲುಪಿತು.

ಜೂನ್‌24ರಂದು ಬೆಳಗ್ಗೆ 11 ಗಂಟೆಗೆ ಮುಖರ್ಜಿಯವರ ದೇಹದ ಅಂತಿಮ ಯಾತ್ರೆಯು ಐದು ಮೈಲಿಗಳ ಉದ್ದದವರೆಗೆ ಸಾಗಿ 3 ಗಂಟಗೆ ಸ್ಮಶಾನ ತಲುಪಿತು. ಮಾರ್ಗದಲ್ಲಿ ಮನೆಗಳ ಚಾವಣಿಗಳ ಮೇಲೆ, ಮಳಿಗೆಗಳ ಮೇಲೆ ಮತ್ತು ಕಿಟಕಿಗಳಲ್ಲಿ ನಿಂತು ಕಲ್ಕತ್ತೆಯ ಲಕ್ಷಾಂತರ ಪ್ರಜೆಗಳು ತಮ್ಮ ಆತ್ಮೀಯ ಮುಖಂಡನ ಮೇಲೆ ಪುಷ್ಪವೃಷ್ಟಿ ಕರೆದರು ಮತ್ತು ಶ್ರದ್ಧಾಂಜಲಿ ಅರ್ಪಿಸಿದರು. ಹಿಂದೂ ಧರ್ಮದ ಪ್ರಕಾರ ಅವರ ದೇಹದ ಸಂಸ್ಕಾರವಾಯಿತು.

ಶ್ಯಾಮಾಪ್ರಸಾದರಿಗೆ ಜೈಲಿನಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯಿತೆ ಎಂಬ ವಿಷಯ ವಿಚಾರಣೆಯಾಗಬೇಕೆಂದು ಹಲವರು ಒತ್ತಾಯಪಡಿಸಿದರು. ಆದರೆ ಸರಕಾರ ಒಪ್ಪಲಿಲ್ಲ.

ಮೇಧಾವಿ, ಕರ್ಮವೀರ, ಸಾಹಸಿ

ಶ್ಯಾಮಾಪ್ರಸಾದರು ಹಿಂದೂ ಸಂಸ್ಕೃತಿಯಲ್ಲಿ ಹೃದಯ, ಭಾವನೆ, ಮನಸ್ಸುಗಳನ್ನು ಬೇರೂರಿಸಿದ ಶುದ್ಧ ಹಿಂದೂ ಪ್ರಜೆ.

ಮುಖರ್ಜಿಯವರು ಜೀವನದ ನಾನಾ ಪಥಗಳಲ್ಲಿ ಯಶಸ್ವಿಯಾಗಿ ಚಲಿಸಿದ ಮೇಧಾವಿ. ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಅಪಾರ. ಮಹಾಬೋಧಿ ಸಂಘ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮಹಾಸಭೆಯ ಮೂಲಕ ಜನಾಂಗಕ್ಕೆ ಮಹಾನ್‌ಸೇವೆ ಸಲ್ಲಿಸಿದ ಕರ್ಮವೀರರು. ರಾಜಕೀಯ ರಂಗದಲ್ಲಿ ಭಾರತ ಸಂಸತ್ತಿನ ಸದಸ್ಯರಾಗಿ ರಾಷ್ಟ್ರದ ಒಳಿತಿಗಾಗಿ ಅಹರ್ನಿಶಿ ಹೋರಾಡಿದ ಧೀಮಂತ ಸಾಹಸಿಗಳು. ಭಾರತದ ಐಕ್ಯತೆಗಾಗಿ ಶ್ರಮಿಸಿ ಅದ್ಭುತ ಸನ್ನಿವೇಶದಲ್ಲಿ ಕಾಲಿಟ್ಟು ಪ್ರಾಣ ತೆತ್ತ ಹುತಾತ್ಮರು.

ಡಾಕ್ಟರ್ ಶ್ಯಾಮಾಪ್ರಸಾದ್‌ಮುಖರ್ಜಿ ಭಾರತ ಪಾರ್ಲಿಮೆಂಟಿನ ಸಿಂಹ. ಪ್ರಧಾನಮಂತ್ರಿ ನೆಹರು ಮತ್ತು ಅವರ ನಡುವೆ ಸಂಸತ್ತಿನಲ್ಲಿ ಪದೇ ಪದೇ ಮಾತುಗಳ ಚಕಮಕಿ ನಡೆಯುತ್ತಿತ್ತು. ಭಾರತದಲ್ಲಿ ಅಸಾಧಾರಣ ಪ್ರಭಾವವಿದ್ದ ಪ್ರಧಾನಿ ನೆಹರು ಅವರನ್ನು ಶ್ಯಾಮಾಪ್ರಸಾದರಂತೆ ನಿರ್ಭಯವಾಗಿ ಟೀಕಿಸುತ್ತಿದ್ದವರು ವಿರಳ. ಭಾರತ ಕೇಸರಿಯ ಅಂದಿನ ಗರ್ಜನೆ ಇಂದಿಗೂ ಭಾರತ ಸಂಸತ್‌ಭವನದಲ್ಲಿ ಪ್ರತಿಧ್ವನಿಸುವಂತಿದೆ.

ಶ್ಯಾಮಾಪ್ರಸಾದರು ವೀರ ದೇಶಾಭಿಮಾನಿಗಳು, ನ್ಯಾಯಯೋಧರು, ಅವರು ಮುಸ್ಲಿಮರ ವಿರೋಧಿಗಳಲ್ಲ. ಅವರೇ ಮುಸ್ಲಿಮರೊಬ್ಬರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಬೇಕೆಂದು ಸಲಹೆ ಮಾಡಿದರು. ಸಾವಿರಾರು ಮಂದಿ ಮುಸ್ಲಿಮರಿದ್ದ ಕ್ಷೇತ್ರದಿಂದ ಅವರು ಚುನಾಯಿತರಾಗಿದ್ದರು. ಪಾಕಿಸ್ತಾನ ಹಿಂದೂಗಳಿಗೆ ಅನ್ಯಾಯ ಮಾಡಿದರೂ ಭಾರತದ ಮುಸ್ಲಿಮರ ಹಕ್ಕುಗಳನ್ನು ಮೊಟಕುಗೊಳಿಸಬೇಕೆಂದು ಎಂದೂ ಅವರು ಹೇಳಲಿಲ್ಲ. ಹಿಂದೂಗಳೂ ಮುಸ್ಲಿಮರೂ ಸಂತೋಷ ಸೌಹಾರ್ದಗಳಿಂದ ಒಟ್ಟಿಗೆ ಬಾಳಬೇಕು ಎಂದೇ ಅವರ ಹಂಬಲ. ಆದರೆ, ಯಾವುದಾದರೊಂದು ದೇಶವನ್ನು ತೃಪ್ತಿಪಡಿಸುವುದಕ್ಕೆ ಅಥವಾ ವ್ಯಕ್ತಿಯನ್ನು ಸಂತೋಷಪಡಿಸುವುದಕ್ಕೆ ಹಿಂದೂಗಳನ್ನು ಅಥವಾ ಯಾವುದೇ ಮತದವರನ್ನು ಬಲಿಕೊಡಲು ಅವರು ಸಿದ್ಧರಿರಲಿಲ್ಲ. ಅನ್ಯಾಯಕ್ಕೆ ಎಂದೂ ತಲೆಬಾಗದ ವೀರರು ಶ್ಯಾಮಾಪ್ರಸಾದರು.

ಪ್ರಜಾಪ್ರಭುತ್ವದಲ್ಲಿ ಆಳುವ ಪಕ್ಷ ಯಾವುದೇ ಇರಲಿ, ವಿರೋಧ ಪಕ್ಷ ಒಂದಿರುವುದು ಅಗತ್ಯ. ಆಳುವ ಪಕ್ಷದ ತಪ್ಪುಗಳನ್ನು ನಿರ್ಭಯವಾಗಿ ತೋರಿಸುವವರು ಇರಬೇಕು. ಶ್ಯಾಮಾಪ್ರಸಾದರು ಒಂದು ಶಕ್ತಿಯುತವಾದ ವಿರೋಧ ಪಕ್ಷವನ್ನು ಕಟ್ಟುವ ಕಾರ್ಯದಲ್ಲಿ ಶ್ರಮಿಸಿದರು.

ಹಿಂದೆ ಆಗಿಹೋದದ್ದನ್ನು ಮರೆತು ಭಾರತ, ಪಾಕಿಸ್ತಾನಗಳು ಸ್ನೇಹದಿಂದ ಬಾಳಬೇಕಾಗಿದೆ. ಆದರೆ ಶ್ಯಾಮಾಪ್ರಸಾದರ ನ್ಯಾಯನಿಷ್ಠೆ, ನಿರ್ಭಯ ನಡತೆ ಇಂದಿಗೂ ಸ್ಫೂರ್ತಿ ಕೊಡುವಂತಹುವು.