ಶ್ರದ್ಧಾನಂದರು

೧೯೧೯ ನೇ ಇಸ್ವಿಯ ಮಾರ್ಚ್ ೩೦ ರಂದು ನಡೆದ ಒಂದು ಘಟನೆ ಇದು. ಸ್ವಾತಂತ್ರ್ಯ ಚಳವಳಿಗಾರರ ದೊಡ್ಡ ಮೆರವಣಿಗೆಯೊಂದು ದಿಲ್ಲಿಯ ಚಾಂದನೀಚೌಕದತ್ತ ಸಾಗಿತ್ತು. ಅದರ ನಾಯಕ ಒಬ್ಬ ಸನ್ಯಾಸಿ. ಶಸ್ತ್ರಧಾರಿ ಗೂರ್ಖಾ ಸೈನಿಕರು ಈ ಮೆರವಣಿಗೆಯನ್ನು ಘಂಟಾಘರ ಎಂಬಲ್ಲಿ ತಡೆದಿದ್ದರು. ಆಗ ಒಬ್ಬ ಭವ್ಯ ಕಾಯದ ದಿಟ್ಟ ಸನ್ಯಾಸಿಯು ಮುಂದೆ ಬಂದು, ತನ್ನ ಎದೆಯ ಮೇಲಿನ ಕಾಷಾಯ ವಸ್ತ್ರಗಳನ್ನು ಸರಿಸಿ, ಒಂದು ಕೈಯಿಂದ ತನ್ನ ಅನುಯಾಯಿಗಳಿಗೆ ಶಾಂತರಾಗಿರಲು ಸೂಚಿಸುತ್ತ, ಆ ಕ್ರೂರ ಸೈನಿಕರನ್ನುದ್ದೇಶಿಸಿ, “ತಪ್ಪಿಲ್ಲದ ಜನತೆಯ ಮೇಲೆ ಗುಂಡು ಹಾರಿಸುವುದಕ್ಕಿಂತ ಮೊದಲು ನನ್ನ ಎದೆಯನ್ನು ನಿಮ್ಮ ಹತ್ತಾರು ಬಂದೂಕದ ತುದಿಗಳಿಂದ ಇರಿಯಿರಿ. ಇಗೋ, ಇಲ್ಲದೆ ನನ್ನ ಎದೆ ; ಹಾರಿಸಿರಿ ಗುಂಡುಗಳನ್ನು” ಎಂದು ಗರ್ಜಿಸಿದರು. ಆ ಸನ್ಯಾಸಿಯ ಆವೇಶದ ಗರ್ಜನೆಯನ್ನು ಕೇಳಿ ಗೂರ್ಖಾಗಳು ಎದೆಗುಂದಿದರು.

ಇಂಥ ಅಪ್ರತಿಮ ಸಾಹಸವನ್ನು ತೋರಿ, ಇಡೀ ಭಾರತಕ್ಕೆ ನಿರ್ಭೀತಿಯ ಹಾಗೂ ಶೌರ್ಯದ ಸಂದೇಶವನ್ನು ಕೊಟ್ಟ ಆ ದಿಟ್ಟ ಸನ್ಯಾಸಿ ಶ್ರದ್ಧಾನಂದರು.

ಜನ್ಮ ಮತ್ತು ಬಾಲ್ಯ      

ಪಂಚ ನದಿಗಳ ಪ್ರಾಂತ ಪಂಜಾಬ್. ಅಲ್ಲಿ ತಲವನ ಎಂಬುದೊಂದು ಗ್ರಾಮ. ಇದೇ ಶ್ರದ್ಧಾನಂದರ ಹುಟ್ಟೂರು. ಇಲ್ಲಿಯ ಒಂದು ಕ್ಷತ್ರಿಯ ಮನೆತನದಲ್ಲಿ ೧೮೫೬ ರಲ್ಲಿ ಅವರು ಜನಿಸಿದರು. ಬೃಹಸ್ಪತಿ ಅವರ ಜನ್ಮನಾಮ. ’ಮುನ್‌ಶೀರಾಮ’ ಎಂಬುದು ಅವರ ಅಂಕಿತನಾಮ.

ಅವರ ತಂದೆ ನಾನಕಚಂದ್ರರು ಬಹು ಸ್ಪಷ್ಟವಾದಿಗಳೂ ಧರ್ಮನಿಷ್ಠರೂ ನಿರ್ಭಯರೂ ಆಗಿದ್ದರು. ಅವರು ಪೊಲೀಸ್ ಅಧಿಕಾರಿಗಳು.  ಆದುದರಿಂದ ಒಂದು ಸ್ಥಳದಲ್ಲಿ ನಿಲ್ಲುವಂತಿರಲಿಲ್ಲ. ಕೆಲವು ತಿಂಗಳು ತಲವನದಲ್ಲಿದ್ದರೆ, ಇನ್ನು ಕೆಲವು ತಿಂಗಳು ಬರೇಲಿಯಲ್ಲಿ, ಅಲ್ಲಿಂದ ಬದಾಯೂನ್‌ಗೆ, ಬದಾಯೂನ್‌ದಿಂದ ಕಾಶಿಗೆ, ಕಾಶಿಯಿಂದ ಬಾಂದಾಕ್ಕೆ. ಹೀಗೆ ಅವರದು ಸಂಚಾರಿ ಜೀವನವಾಗಿತ್ತು. ಮುನ್‌ಶೀರಾಮನ ಬಾಲ್ಯಜೀವನವೂ ಸಂಚಾರದಲ್ಲಿಯೇ ಕಳೆಯಿತು.

ನಾನಕಚಂದ್ರರು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ಒಬ್ಬ ಮೌಲ್ವಿಯನ್ನು ಗೊತ್ತುಮಾಡಿದ್ದರು. ಮೂರು ವರ್ಷದ ಬಾಲಕನಾದ ಮುನ್‌ಶೀರಾಮನು ಅಣ್ಣಂದಿರ ಸಂಗಡವಿದ್ದು ಅವರಿಗೆ ಹೇಳಿಕೊಟ್ಟ ಪಾಠಗಳನ್ನು ಸರಿಯಾಗಿ ಕೇಳಿ ನೆನಪಿನಲ್ಲಿಡುತ್ತಿದ್ದನು. ಮಾರನೆಯ ದಿನ ಅವರು ಮೌಲ್ವಿಯವರಿಗೆ ಪಾಠ ಒಪ್ಪಿಸುವಾಗ ತಪ್ಪಿದರೆ ಬಾಲಕ ಮುನ್‌ಶೀರಾಮನು ಸರಿಯಾದುದನ್ನೇ ಹೇಳುತ್ತಿದ್ದ. ಬರೆಯಲು ಕಲಿತ.

ವಿದ್ಯಾಭ್ಯಾಸ

ಮುನ್‌ಶೀರಾಮನ ಪ್ರಾಥಮಿಕ ವಿದ್ಯಾಭ್ಯಾಸವು ಮನೆಯಲ್ಲಿಯೇ ಪ್ರಾರಂಭವಾಯಿತು. ಅತ್ಯಲ್ಪಕಾಲದಲ್ಲಿಯೇ ಈತನು ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿತುಕೊಂಡನು.

ಶಾಲೆಗೆ ಸೇರಿದ ಕೆಲದಿನಗಳವರೆಗೆ ಮುನ್‌ಶೀರಾಮನ ಓದು ಚೆನ್ನಾಗಿ ಸಾಗಲಿಲ್ಲ. ಅವನು ತಂದೆಯೊಂದಿಗೆ ಮೇಲಿಂದಮೇಲೆ ಪ್ರವಾಸ ಮಾಡಬೇಕಾಗುತ್ತಿತ್ತು. ಇದರಿಂದಾಗಿ ಅವನು ಅನೇಕ ಪವಿತ್ರ ಕ್ಷೇತ್ರಗಳನ್ನೂ ಬಗೆಬಗೆಯ ವ್ಯಕ್ತಿಗಳನ್ನೂ ನಿಸರ್ಗದ ಸುಂದರ ದೃಶ್ಯಗಳನ್ನೂ ಕಾಣುವಂತಾಯಿತು. ಅಲ್ಲದೆ ಉರ್ದು, ಪಂಜಾಬಿ, ಪರ್ಷಿಯನ್, ಅರಬ್ಬಿ, ಭೋಜಪುರಿ, ಖಡೀಬೋಲಿ ಮತ್ತು ಇಂಗ್ಲಿಷ್ ಮುಂತಾದ ಭಾಷೆಗಳನ್ನು ಹುಡುಗನು ಅನಾಯಾಸವಾಗಿ ಕಲಿತುಕೊಂಡನು. ಮುಂದೆ ಕಾಶಿಯ ಕ್ವೀನ್ಸ್ ಕಾಲೇಜ್ ಸೇರಿದನಂತರವೇ ಮುನ್‌ಶೀರಾಮನ ಓದು ನಿಯಮಿತವಾಗಿ ಸಾಗಿತು. ಕ್ವೀನ್ಸ್ ಕಾಲೇಜು ಆ ಕಾಲದ ಪ್ರಸಿದ್ಧ ಅಧ್ಯಯನ ಕೇಂದ್ರವಾಗಿತ್ತು. ಅಲ್ಲಿಯ ಅಧ್ಯಾಪಕರು ಖ್ಯಾತ ವಿದ್ವಾಂಸರಾಗಿದ್ದರು. ವೇದಗಳನ್ನೂ ತುಳಸೀ ರಾಮಾಯಣವನ್ನೂ ಭಾಷಾಂತರಿಸಿದ ಪ್ರಿನ್ಸಿಪಾಲ್ ಗ್ರಿಫಿಥರು ಹಾಗೂ ಮಥುರಾಪ್ರಸಾದ ಮಿಶ್ರರು ಮುನ್‌ಶೀರಾಮನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದರು.

ಬೆಳಗ್ಗೆ ಬೇಗನೆ ಏಳುವುದು, ಪ್ರಾತರ್ವಿಧಿಗಳನ್ನು ಮುಗಿಸಿ ಅಂಗಸಾಧನೆ ಮಾಡುವುದು, ಕೂಡಲೇ ಗಂಗಾನದಿಗೆ ಹೋಗಿ ಸ್ನಾನಮಾಡಿ ಪೂಜಾಪರಿಕರಗಳೊಂದಿಗೆ ದೇವಸ್ಥಾನಗಳಿಗೆ ಹೋಗಿ ದೇವರ ಪೂಜೆ ಮಾಡುವುದು. ಅನಂತರ ಮನೆಗೆ ಬಂದು ಉಪಾಹಾರವನ್ನು ಮುಗಿಸಿ, ತುಸು ಹೊತ್ತು ಓದುವುದು, ತರುವಾಯ ಊಟಮಾಡಿ ಶಾಲೆಗೆ ಹೋಗುವುದು  ಇದು ಕಾಶಿಯಲ್ಲಿ ಆತನ ದಿನಚರಿಯಾಗಿತ್ತು.

ಧಾರ್ಮಿಕ ಶ್ರದ್ಧೆ

ಮುನ್‌ಶೀರಾಮನ ತಂದೆ ಹಾಗೂ ತಾತಂದಿರು ಪರಮ ಶಿವಭಕ್ತರು. ಅವರು ಪ್ರತಿದಿನ ಮಾಡುವ ಶಿವಾರ್ಚನೆಯನ್ನು ಕಂಡ ಮುನ್‌ಶೀರಾಮ ಹಾಗೂ ಅವನ ಅಣ್ಣಂದಿರು ಧಾರ್ಮಿಕ ವಿಧಿಗಳಲ್ಲಿ ಅಭಿರುಚಿ ತೋರಹತ್ತಿದರು. ಒಂದು ದಿನ ಮಕ್ಕಳೆಲ್ಲರೂ ಕೂಡಿ ಒಂದು ಹಾಳು ದೇವಾಲಯದಲ್ಲಿದ್ದ ಶಿವಲಿಂಗವನ್ನು ಮನೆಗೆ ತಂದು ನಿತ್ಯವೂ ಪೂಜೆಮಾಡತೊಡಗಿದರು. ಅನೇಕ ಸಲ ಮುನ್‌ಶೀರಾಮನು ಶಾಲೆಯಿಂದ ಮನೆಗೆ ಬಂದ ಕೂಡಲೇ ತಂದೆಯ ರಾಮಾಯಣ ಪುಸ್ತಕವನ್ನು ತೆಗೆದುಕೊಂಡು ಓದುತ್ತಿದ್ದರು.

ಒಮ್ಮೆ ಬಾಲಕ ಮುನ್‌ಶೀರಾಮನಿಗೆ ಕಾಯಿಲೆಯಾಗಿತ್ತು. ಆತನ ಚಿಕಿತ್ಸೆಗೆ ಒಬ್ಬ ವೈದ್ಯನು ಮನೆಗೆ ಬರುತ್ತಿದ್ದ. ವೈದ್ಯನ ಹೆಸರು ಬುದ್ದೂಭಕ್ತನೆಂದು. ಅತನ ಕಣ್ಣುಗಳಲ್ಲಿ ಅಗಾಧ ಹೊಳಪಿತ್ತು. ಮುಖದಲ್ಲಿ ಮೋಹಕ ಮುಗುಳುನಗೆ ಇರುತ್ತಿತ್ತು. ಬುದ್ಧೂಭಕ್ತನು ತನ್ನ ನೆರೆಹೊರೆಯಲ್ಲಿದ್ದ ಎಲ್ಲ ಹಿಂದು ಬಾಂಧವರನ್ನು ಉಚ್ಚ-ನೀಚರೆನ್ನದೆ, ಶ್ರೀಮಂತ-ಬಡವರೆನ್ನದೆ ಬರಮಾಡಿಕೊಂಡು ಅವರ ಮುಂದೆ ತುಳಸೀ ರಾಮಾಯಣವನ್ನು ಪಠಿಸುತ್ತಿದ್ದನು. ಆದರ್ಶವೂ ನಿಸ್ವಾರ್ಥವೂ ಆದ ಜೀವನವನ್ನು ಸಾಗಿಸುತ್ತಿದ್ದನು. ಬಾಲಕ ಮುನ್‌ಶೀರಾಮನಲ್ಲಿ ಕಂಡುಬಂದ ಧಾರ್ಮಿಕ ಒಲವು ಬುದ್ಧೂಭಕ್ತನ ಪ್ರೇರಣೆಯಿಂದ ಸ್ಫುಟಗೊಂಡಿತು.

ಧರ್ಮಶ್ರದ್ಧೆ ಸಡಿಲಗೊಂಡಿತು

ಪಾಶ್ಚಾತ್ಯ ಶಿಕ್ಷಣದ ಪರಿಣಾಮದಿಂದಾಗಿ ಮುನ್‌ಶೀರಾಮ ನ ಧಾರ್ಮಿಕ ಶ್ರದ್ಧೆಯು ಕ್ರಮೇಣ ಸಡಿಲಗೊಳ್ಳತೊಡಗಿತು. ಧರ್ಮದ ಸೋಗಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಗಳನ್ನು ಕಂಡು ಮುನ್‌ಶೀರಾಮನ ಮನಸ್ಸು ಧರ್ಮದಿಂದ ತಿರುಗಿತು.

ಮುನ್‌ಶೀರಾಮನು ಮಿರ್ಜಾಪುರದಲ್ಲಿದ್ದಾಗ ವಿಂಧ್ಯಪರ್ವತದಲ್ಲಿಯ ವಿಂಧ್ಯವಾಸಿನಿ ದೇವಿಯ ನವರಾತ್ರೋತ್ಸವವನ್ನು ನೋಡಲು ತಂದೆಯವರೊಂದಿಗೆ ಹೋಗಿದ್ದ. ಜೊತೆಗೆ ಅವರ ಸೇವಕನಾದ ಜೋಖೂಮಿಸರ ಕೂಡ ಇದ್ದ. ಜೋಖೂಮಿಸರ ತನ್ನ ಅಡುಗೆಯನ್ನು ತಾನೇ ಮಾಡಿಕೊಳ್ಳುತ್ತಿದ್ದ. ಒಮ್ಮೆ ಅವನ ಒಲೆ ಉರಿಯುತ್ತಿತ್ತು. ನಾನಕಚಂದ್ರರ ಆಳು ಒಲೆಯಿಂದ ಒಂದು ಕೆಂಡವನ್ನು ತೆಗೆದುಕೊಂಡನು. ಇದನ್ನು ಕಂಡ ಜೋಖೂಮಿಸರನು ಸಿಟ್ಟಿನಿಂದ ಕೆಂಡವಾದ. ಆತನು ನಾನಕಚಂದ್ರರ ಹತ್ತಿರ ಬಂದು ಅವರನ್ನು ದುರುಗುಟ್ಟಿ ನೋಡುತ್ತ, “ನಾನೆಂದೂ ಧರ್ಮಕ್ಕೆ ಕುಂದು ಬರುವಂತೆ ವರ್ತಿಸಿಲ್ಲ. ನಾನು ಅಸತ್ಯವನ್ನು ನುಡಿದಿರಬಹುದು, ಸೆರೆ ಕುಡಿದಿರಬಹುದು, ಜೂಜು ಆಡಿರಬಹುದು, ಗಾಂಜಾ ಸೇದಿರಬಹುದು, ಲಂಚ ತೆಗೆದುಕೊಂಡಿರಬಹುದು, ಮೋಸ-ವಂಚನೆ ಮಾಡಿರಬಹುದು, ಮಾಂಸ ತಿಂದಿರಬಹುದು, ಆದರೆ ನನ್ನ ಧರ್ಮವನ್ನು ನಾನೆಂದಿಗೂ ಬಿಟ್ಟವನಲ್ಲ” ಎಂದು ಕೂಗಾಡಿದ. ಅವನ ಇಷ್ಟೆಲ್ಲ ಜಂಬದ ಮಾತುಗಳನ್ನು ಕೇಳುತ್ತಿದ್ದ ಮುನ್‌ಶೀರಾಮ ಬೆರಗಾದ. ’ಈ ಭ್ರಷ್ಟಾಚಾರಿಯು ತಿಳಿದುಕೊಂಡಿರುವ ’ಧರ್ಮ’ದ ಲಕ್ಷಣಗಳು ಹೇಗಿರಬಹುದು ?’ ಎಂದು ಅವನು ಚಿಂತಿಸತೊಡಗಿದನು. ’ಜೋಖೂಮಿಸರನಂತೆ ಅದೆಷ್ಟು ಜನ ಡಾಂಭಿಕರು ಮಡಿವಂತಿಕೆಯ ಹೆಸರಿನಲ್ಲಿ ಸಮಾಜ ಜೀವನವನ್ನು ಭ್ರಷ್ಟಗೊಳಿಸುತ್ತಿರಲಿಕ್ಕಿಲ್ಲ !’ ಎಂದು ಮರುಗಿದನು.

ಎಲ್ಲ ಧರ್ಮಗಳವರೂ ಹೀಗೆಯೇ !

ಹಿಂದು ಧರ್ಮದಲ್ಲಿ ಶ್ರದ್ಧೆಯನ್ನು ಕಳೆದು ಕೊಳ್ಳಲಾರಂಭಿಸಿದ್ದ ಮುನ್‌ಶೀರಾಮನು ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತನಾದನು. ಫಾದರ್ ಲೀಫೂಂ ಎಂಬ ಒಬ್ಬ ಕ್ರೈಸ್ತ ಪಾದ್ರಿಯ ಹತ್ತಿರ ಹೋಗಲಾರಂಭಿಸಿದ. ಕ್ರೈಸ್ತ ಮತದ ಬಗ್ಗೆ ಅವರೊಂದಿಗೆ ಚರ್ಚೆ ನಡೆಯುತ್ತಿತ್ತು. ಕ್ರೈಸ್ತ ಮತದ ತತ್ವಕ್ಕಿಂತಲೂ ಆ ಪಾದ್ರಿಯ ಶಿಷ್ಟ ಸಮ್ಮತ ನಡತೆಯೂ ವಿನಯಶೀಲ ಆಚಾರ-ವಿಚಾರಗಳೂ ಮುನ್‌ಶೀರಾಮನಿಗೆ ಬಹಳ ಹಿಡಿಸಿದವು. ಅದರಿಂದಾಗಿ ಮುನ್‌ಶೀರಾಮನಿಗೆ ಕ್ರೈಸ್ತ ಮತದ ದೀಕ್ಷೆ ಪಡೆಯುವ ಹಂಬಲವುಂಟಾಯಿತು. ಇದಾವುದೂ ಅವನ ಮನೆಯವರಿಗೆ ಗೊತ್ತೇ ಇರಲಿಲ್ಲ.

ಒಮ್ಮೆ ಮುನ್‌ಶೀರಾಮನು ಪಾದ್ರಿಯನ್ನು ಕಾಣಲು ಅವರ ವಾಸಸ್ಥಳಕ್ಕೆ ಹೋದನು. ಬಾಗಿಲಿಗೆ ಪರದೆ ತೂಗುಬಿಟ್ಟಿತ್ತು. ಪರದೆಯನ್ನು ಸರಿಸಿ ಒಳಗೆ ಕಾಲಿಡುತ್ತಿದ್ದಂತೆ ಅಲ್ಲಿಯೂ ಒಂದು ಅಸಹ್ಯ ದೃಶ್ಯವನ್ನು ಕಂಡನು. ಮುನ್‌ಶೀರಾಮನಿಗೆ ದಿಗ್ಭ್ರಮೆಯಾಯಿತು. ಇದರಿಂದಾಗಿ ’ಎಲ್ಲ ಧರ್ಮಗಳಲ್ಲಿಯೂ ಭ್ರಷ್ಟಾಚಾರವಿದೆ’ ಎಂಬ ನಿರ್ಣಯಕ್ಕೆ ಬಂದುದಲ್ಲದೇ ಧರ್ಮಶ್ರದ್ಧೆಯನ್ನೇ ಕಳೆದುಕೊಂಡವನಾದನು. ಅನೇಕ ತೀರ್ಥಕ್ಷೇತ್ರಗಳಲ್ಲಿಯೂ ಮಡಿವಂತಿಕೆಯ ಹೆಸರಿನಲ್ಲಿ ನಡೆಯುವ ಡಂಭಾಚಾರ, ಧರ್ಮದ ಹೆಸರಿನಲ್ಲಿ ನಡೆಯುವ ಹೇಯ ಕೃತ್ಯಗಳನ್ನು ನೋಡಿಯಂತೂ ಅವನಿಗೆ ಧರ್ಮದ ಬಗ್ಗೆ ಜಿಗುಪ್ಸೆಯೇ ಉಂಟಾಯಿತು.

ದಿಟ್ಟ ಯುವಕ

ಕಾಶಿಯಲ್ಲಿ ಮುನ್‌ಶೀರಾಮನು ತಪ್ಪದೇ ವ್ಯಾಯಾಮ ಶಾಲೆಗೆ ಹೋಗುತ್ತಿದ್ದನು. ದಂಡ, ಬೈಠಕ್, ಕುಸ್ತಿ, ಲಾಠಿಪ್ರಯೋಗ ಮುಂತಾದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದನು. ಅದರಿಂದಾಗಿ ಎತ್ತರ ನಿಲುವುಳ್ಳ ಮುನ್‌ಶೀರಾಮನು ದೃಢಕಾಯನೂ ಆಗಿದ್ದನು.

ಕಿಡಿಗೇಡಿಯು ಮೂರ್ಛೆಹೋಗಿ ಬಿದ್ದ.

 

ಅವನ ಶಕ್ತಿ, ಸಾಹಸ ಪ್ರವೃತ್ತಿಗಳನ್ನು ತೋರಿಸುವ ಎಷ್ಟೋ ಘಟನೆಗಳು ನಡೆದವು. ಒಮ್ಮೆ ತುಂಬಿ ಹರಿಯುತ್ತಿದ್ದ ನದಿಯಲ್ಲಿ ದೋಣಿಯಲ್ಲಿ ಹೋಗುತ್ತಿದ್ದನು. ಅವನ ಮೂವರು ಸಂಗಡಿಗರು ಹೆದರಿದರು, ಅವರಿಗೆ ಹುಟ್ಟು ಹಾಕಲು ಆಗಲಿಲ್ಲ. ಮುನ್‌ಶೀರಾಮನೇ ಹುಟ್ಟುಹಾಕಿ ನದಿ ದಾಟಿಸಿದನು.

ಕಾಶಿಯ ಗೋಪಾಲ ಮಂದಿರದಲ್ಲಿ ದೇವರ ದರ್ಶನಕ್ಕೆಂದು ಅಧಿಕಾರಿಯೊಬ್ಬರು ಹೆಂಡತಿ ಮಕ್ಕಳ ಜೊತೆಗೆ ಬಂದರು. ಮಂದಿರದಲ್ಲಿ ಕತ್ತಲು. ಸ್ವಲ್ಪ ಹೊತ್ತಿನಲ್ಲಿ ಒಬ್ಬ ಹುಡುಗಿಯ ಚೀತ್ಕಾರ ಕೇಳಿಸಿತು. ಮುನ್‌ಶೀರಾಮನು ಒಳಕ್ಕೆ ನುಗ್ಗಿದ. ಒಬ್ಬ ಗೋಸಾಯಿಯು ಜಿಲ್ಲಾಧಿಕಾರಿಯ ಮಗಳ ಕೈಹಿಡಿದು ಎಳೆಯುತ್ತಿದ್ದ. ಹುಡುಗಿ ಕಿರುಚುತ್ತಿದ್ದಳು. ಆಗ ಮುನ್‌ಶೀರಾಮನು ಆ ಹೆಣ್ಣುಮಗಳನ್ನು ತಂದೆಯ ಹತ್ತಿರ ಮುಟ್ಟಿಸಿ, ಗೋಸಾಯಿಯನ್ನು ಪೋಲೀಸರ ವಶಕ್ಕೊಪ್ಪಿಸಿದ.

ಒಂದು ಬಾರಿ ಮುನ್‌ಶೀರಾಮನು ಹೋಗುತ್ತಿರುವಾಗ ತುಂಟರ ಗುಂಪೊಂದು ದಾರಿಯಲ್ಲಿತ್ತು. ಕೆಲವರು ಅಶ್ಲೀಲ ಹಾಡುಗಳನ್ನು ಹಾಡತೊಡಗಿದರು. ಒಬ್ಬ ಕಿಡಿಗೇಡಿಯು ಮುಂದೆ ಬಂದು ಮುನ್‌ಶೀರಾಮನನ್ನು ಕೆಣಕಿದನು. ರೊಚ್ಚಿಗೆದ್ದ ಮುನ್‌ಶೀರಾಮನು ಅವನ ಕೆನ್ನೆಗೆ ಬಲವಾಗಿ ಬಾರಿಸಿದನು. ಕಿಡಿಗೇಡಿಯು ಮೂರ್ಛೆಹೋಗಿ ಬಿದ್ದ. ಆ ಗುಂಪಿನೊಳಗಿನ ಬೇರಾವನೂ ಇವನ ಗೊಡವೆಗೆ ಬರಲಿಲ್ಲ. ಮುಂದೆ ಎಂದೆಂದೂ ಮುನ್‌ಶೀರಾಮನಿಗೆ ಅವರಿಂದ ತೊಂದರೆಯಾಗಲಿಲ್ಲ.

ಮುನ್‌ಶೀರಾಮನು ಬೇಸಿಗೆಯ ರಜೆ ಮುಗಿಸಿ ಕಾಶಿಗೆ ಮರಳಿ ಬಂದಮೇಲೆ ಜಯನಾರಾಯಣ ಕಾಲೇಜಿನಲ್ಲಿ ಪ್ರವೇಶ ಪಡೆದನು.

ಮಾತೃವಿಯೋಗ

ಇದೇ ವೇಳೆಯಲ್ಲಿ ಮುನ್‌ಶೀರಾಮನ ತಾಯಿಗೆ ಕಾಯಿಲೆಯಾಯಿತು. ಕಾಶಿಯಲ್ಲಿ ಕೆಲವು ದಿನಗಳಿದ್ದು ಔಷಧೋಪಚಾರ ಪಡೆಯಲೆಂದು ಮಗನಲ್ಲಿಗೆ ಬಂದಳು. ಮುನ್‌ಶೀರಾಮನು ತಾಯಿ ಅಲ್ಲಿರುವವರೆಗೂ ಮನಃ ಪೂರ್ವಕವಾಗಿ ತಾಯಿಯ ಸೇವೆ ಮಾಡಿದ. ಎಷ್ಟು ದಿನಗಳಾದರೂ ಗುಣಮುಖಳಾಗುವಂತೆ ತೋರಲಿಲ್ಲ. ಆದುದರಿಂದ ತಾಯಿಯು ಮತ್ತೆ ಅಲ್ಲಿಂದ ಹಿಂತಿರುಗಿದಳು.

ಇದ್ದಕ್ಕಿದ್ದಂತೆಯೇ ಒಂದು ದಿನ ತಾಯಿಯ ಮರಣದ ವಾರ್ತೆ ಬಂದಿತು. ಈ ಸಾವು ಮುನ್‌ಶೀರಾಮನ ಹೃದಯವನ್ನು ತಲ್ಲಣಗೊಳಿಸಿಬಿಟ್ಟಿತು.

ಮುನ್‌ಶೀರಾಮನು ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣನಾದನು.

ದುಷ್ಟ ಚಟಗಳ ಜಾಲದಲ್ಲಿ

ಇಪ್ಪತ್ತು ವರ್ಷದ ಯುವಕನಾಗಿದ್ದಾಗಲೇ ಮುನ್‌ಶೀರಾಮನಿಗೆ ಧೂಮ್ರಪಾನದ ದುರಭ್ಯಾಸ ಅಂಟಿಕೊಂಡಿತು. ಅವನ ಕೋಣೆಯಲ್ಲಿ ಬಗೆಬಗೆಯ ಹುಕ್ಕಾ ಪಾತ್ರೆಗಳನ್ನು ಸಂಗ್ರಹಿಸಿದ್ದ. ಪ್ರತಿದಿವಸ ಸಾಯಂಕಾಲ ಅವನ ಕೋಣೆಯಲ್ಲಿ ಹುಕ್ಕಾ ಸೇದುವವರ ದರ್ಬಾರೇ ಸೇರುತ್ತಿತ್ತು.

ಕಾಲೇಜಿಗೆ ಬಿಡುವಿತ್ತು. ಮುನ್‌ಶೀರಾಮನು ತಲವನಕ್ಕೆ ಹಿಂತಿರುಗಿದನು. ಈ ಅವಧಿಯಲ್ಲಿಯೇ ಮುನ್‌ಶೀರಾಮನ ಮದುವೆ ಸಡಗರದಿಂದ ನಡೆಯಿತು. ವಧು ಶಿವದೇವಿಯ ವಯಸ್ಸು ಹನ್ನೆರಡು ವರ್ಷ ಮಾತ್ರ. ಆಗಿನ ರೂಢಿಯಂತೆ ಮುನ್‌ಶೀರಾಮನಿಗೆ ತನ್ನ ಹೆಂಡತಿಯ ಮುಖವನ್ನು ನೋಡಲು ಸಾಧ್ಯವಿರಲಿಲ್ಲ.

ಮದುವೆಯಾದ ಮೇಲೂ ಅವನ ದುಸ್ಸಹವಾಸ ತಪ್ಪಲಿಲ್ಲ. ಹೀಗಾಗಿ ಅವನ ಓದು ಸಾಗದಂತಾಯಿತು. ದುರ್ಜನರ ಸಹವಾಸದಲ್ಲಿ ಕುಸ್ತಿಗಳನ್ನು ನೋಡುವುದು, ಜೂಜಾಟವಾಡುವುದು, ಮದ್ಯಪಾನ ಮಾಡುವುದು ಮತ್ತು ವೇಶ್ಯೆಯರ ನೃತ್ಯಗಳನ್ನು ನೋಡುವುದು ಮುಂತಾದ ಕೆಟ್ಟ ಕೆಲಸಗಳಲ್ಲಿಯೇ ಅವನ ಸಮಯ ಕಳೆಯುತ್ತಿತ್ತು. ಹಗಲು ರಾತ್ರಿ ಎನ್ನದೆ ಈ ಕ್ರಮ ಮುಂದುವರಿದುದರಿಂದ ಮುನ್‌ಶೀರಾಮನ ಸ್ವಾಸ್ಥ್ಯ ಹದಗೆಟ್ಟು, ಅವನು ಹಾಸಿಗೆ ಹಿಡಿದನು. ಗುಣಮುಖವಾದಾಗ ಅಲಹಾಬಾದಿನ ಕಾಲೇಜಿನಲ್ಲಿ ಅಭ್ಯಾಸ ಪ್ರಾರಂಭಿಸಿದ. ಮನಸ್ಸುಗೊಟ್ಟು ಹಗಲಿರುಳು ಅಭ್ಯಾಸಕ್ಕೆ ತೊಡಗಿದ. ಆದರೆ ಪರೀಕ್ಷಾ ಸಮಯದಲ್ಲಿ ಜ್ವರ ಬಂದುದರಿಂದ ಎಫ್.ಎ. ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ.

ಕತ್ತಲೆಯಿಂದ ಬೆಳಕಿನೆಡೆಗೆ

ನಾನಕಚಂದ್ರರಿಗೆ ಇದೇ ಅವಧಿಯಲ್ಲಿ ಬಾಂಸಬರೇಲಿಗೆ ವರ್ಗವಾಗಿತ್ತು. ಆರ್ಯಸಮಾಜದ ಸಂಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿಯವರು ಅಲ್ಲಿಗೆ ಆಗಮಿಸಿದ್ದರು. ಸ್ವಾಮೀಜಿಯವರಿಂದ ಪ್ರಭಾವಿತರಾದ ಅವರು ತಮ್ಮ ಮಗನನ್ನೂ ಕರೆಯಿಸಿಕೊಂಡರು. ಮಹರ್ಷಿ ದಯಾನಂದರ ಪ್ರಥಮ ದರ್ಶನವು ಮುನ್‌ಶೀರಾಮರ ಮನಸ್ಸಿನ ಮೇಲೆ ಅಚ್ಚಳಿಯದ ಮುದ್ರೆಯೊತ್ತಿತು. ಸ್ವಾಮೀಜಿಯವರ ಉಪನ್ಯಾಸ ಕೇಳಲು ಅನೇಕ ಖ್ಯಾತ ಬ್ರಿಟಿಷ್ ವಿದ್ವಾಂಸರೂ ಪಾದ್ರಿಗಳೂ ಅನೇಕ ಹಿರಿಯ ಅಧಿಕಾರಿಗಳೂ ಬರುತ್ತಿದ್ದುದನ್ನು ಕಂಡ ಮುನ್‌ಶೀರಾಮರಿಗೆ ಸ್ವಾಮೀಜಿಯವರ ಬಗ್ಗೆ ಆಸ್ಥೆ ಹೆಚ್ಚತೊಡಗಿತು. ಉಪನ್ಯಾಸ ಕೇಳುತ್ತ ಹೋದಂತೆಲ್ಲ ಅವರ ನಾಸ್ತಿಕತೆಯ ವಿಚಾರಗಳು ಸಡಿಲವಾಗತೊಡಗಿದವು. ಪೂಜಾರಿ-ಪಾದ್ರಿಗಳ ದುರಾಚಾರ, ಡಾಂಭಿಕತೆ ಹಾಗೂ ಸ್ವಾರ್ಥಮಯ ಜೀವನವನ್ನು ಕಂಡು ಧರ್ಮಶ್ರದ್ಧೆಯನ್ನೇ ಕಳೆದುಕೊಂಡಿದ್ದ ಮುನ್‌ಶೀರಾಮರು ಸ್ವಾಮೀಜಿಯವರ ಋಷಿ ಸಮಾನ ಜೀವನವನ್ನು ಕಂಡು, ಅವರ ದಿವ್ಯೋಪದೇಶವನ್ನು ಕೇಳಿ ಜೀವನದಲ್ಲಿ ಹೊಸ ಬೆಳಕನ್ನು ಕಂಡರು ; ಹೊಸ ಚೈತನ್ಯ ಪಡೆದರು ; ಧರ್ಮದಲ್ಲಿ ಶ್ರದ್ಧೆ ತಳೆದರು.

ತಹಸೀಲ್ದಾರ್ ಮುನ್‌ಶೀರಾಮರು

ಮುನ್‌ಶೀರಾಮರ ಅಣ್ಣನೂ ತಂದೆಯಂತೆ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ತಂದೆ ಮತ್ತು ಅಣ್ಣನ ಪ್ರಭಾವದಿಂದಾಗಿ ಮುನ್‌ಶೀರಾಮರು ಬರೇಲಿಯ ನಾಯಬ್ ತಹಸೀಲ್ದಾರರಾಗಿ ನೇಮಕವಾದರು.

ಬರೇಲಿಯ ತಹಸೀಲ್ದಾರರಾದ ಕೆಲವೇ ದಿನಗಳಲ್ಲಿ ಅವರ ಸ್ವಾಭಿಮಾನ ಕೆರಳುವ ಪ್ರಸಂಗವೊಂದು ಜರುಗಿತು. ಬರೇಲಿಯಲ್ಲಿ ಬ್ರಿಟಿಷ್ ಸೈನ್ಯದ ಒಂದು ಪಡೆಯು ಬಂದು ತಂಗಿದ್ದಿತು. ತಹಸೀಲ್ದಾರರಾದ ಮುನ್‌ಶೀರಾಮರು ಸೈನಿಕರ ಎಲ್ಲ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತಿತ್ತು. ಮುನ್‌ಶೀರಾಮರು ಕೆಲವು ಅಂಗಡಿಕಾರರಿಗೆ ಸೈನಿಕರ ಅವಶ್ಯಕತೆಗಳನ್ನು ಪೂರೈಸುವಂತೆ ಹೇಳಿ ಅಲ್ಲಿಯೇ ಅಂಗಡಿಗಳನ್ನು ತೆರೆಯುವ ವ್ಯವಸ್ಥೆ ಮಾಡಿದ್ದರು. ಆದರೆ ಸೈನಿಕರು ವ್ಯಾಪಾರಿಗಳ ಮೇಲೆ ದೌರ್ಜನ್ಯ ವೆಸಗತೊಡಗಿದರು. ಅಂಗಡಿಕಾರರಿಗೆ ಬೆಲೆ ಕೊಡದೇ ವಸ್ತುಗಳನ್ನು ಬಲಾತ್ಕಾರವಾಗಿ ಕಿತ್ತುಕೊಳ್ಳತೊಡಗಿದರು. ಈ ಅನ್ಯಾಯದ ಘಟನೆಗಳ ಬಗ್ಗೆ ಮುನ್‌ಶೀರಾಮರು ಸೈನ್ಯದ ಮುಖ್ಯಸ್ಥರಿಗೆ ದೂರು ಕೊಡುತ್ತ, ’ಈ ರೀತಿ ಸೈನಿಕರು ದೌರ್ಜನ್ಯವನ್ನು ಮುಂದುವರಿಸಿದ್ದಾದರೆ ಅಗತ್ಯ ವಸ್ತುಗಳ ಸರಬರಾಜನ್ನೇ ನಿಲ್ಲಿಸುವಂತೆ ವರ್ತಕರಿಗೆ ತಿಳಿಸುತ್ತೇನೆ’ ಎಂದು ನಿರ್ದಾಕ್ಷಿಣ್ಯದಿಂದ ತಿಳಿಸಿದರು. ಸೈನ್ಯದ ಕರ್ನಲ್‌ರವರು ಇದರಿಂದ ಸಿಟ್ಟಿಗೆ ಬಂದು ಮುನ್‌ಶೀರಾಮರಿಗೆ ಬೆದರಿಕೆ ಹಾಕಿದರು. ಮುನ್‌ಶೀರಾಮರು ಅವರ ಬೆದರಿಕೆಗೆ ಸೊಪ್ಪು ಹಾಕದೆ ಅವರಿಗಿಷ್ಟ ಬಂದಂತೆ ಮಾಡಬಹುದೆಂದು ತಿಳಿಸಿದರು. ಇದರಿಂದ ಇನ್ನಷ್ಟು ರೇಗಿದ ಕರ್ನಲ್‌ರವರು ಮುನ್‌ಶೀರಾಮನ ಕಡೆಗೆ ನುಗ್ಗಿದರು. ಆಗ ಮುನ್‌ಶೀರಾಮರು ಸ್ವಲ್ಪವೂ ಹಿಂಜರಿಯದೆ ಕೈಯಲ್ಲಿದ್ದ ಚಾಟಿಯಿಂದ ಹೊಡೆಯಲು ಪ್ರಯತ್ನಿಸಿದರು. ಭೀತರಾದ ಕರ್ನಲ್‌ರು ಹಿಂಜರಿದ ತಕ್ಷಣ ಅಲ್ಲಿಂದ ಕಾಲ್ದೆಗೆದರು. ಈ ಘಟನೆಯಿಂದ ಮುನ್‌ಶೀರಾಮರಿಗೆ ಸರ್ಕಾರಿ ಸೇವೆಯ ಬಗ್ಗೆ ಜಿಗುಪ್ಸೆ ಹುಟ್ಟಿತು. ಇಂಥ ಅಪಮಾನಕರ ಜೀವನ ಬೇಡವೆಂದು ರಾಜೀನಾಮೆ ಕೊಟ್ಟರು.

ವಕೀಲ ಮುನ್‌ಶೀರಾಮರು

ಈ ಘಟನೆ ಜರುಗಿದನಂತರವೂ ಅನೇಕ ಬಿಳಿಯ ಅಧಿಕಾರಿಗಳು ಮುನ್‌ಶೀರಾಮರನ್ನು ಸರ್ಕಾರಿ ಸೇವೆಯಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ನಾನಕಚಂದ್ರರ ಮನವೊಲಿಸ ತೊಡಗಿದರು. ಆದರೆ ಮಗನ ಸ್ವಾಭಿಮಾನದ ಸ್ವಭಾವವನ್ನು ಅರಿತಿದ್ದ ನಾನಕಚಂದ್ರರು ಮಗನಿಗೆ ನ್ಯಾಯಶಾಸ್ತ್ರದ ಅಭ್ಯಾಸ ಮಾಡಿಸುವುದೇ ವಿಹಿತವೆಂದು ತೀರ್ಮಾನಿಸಿದರು. ತಂದೆಯ ಇಚ್ಛೆಯಂತೆ ಮುನ್‌ಶೀರಾಮರು ತಮ್ಮ ಇಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಕಾನೂನಿನ ಅಭ್ಯಾಸಮಾಡಲು ಲಾಹೋರ್ ಪಟ್ಟಣಕ್ಕೆ ಹೋದರು. ’ಮುಖ್ತಾರಿ’ ಎಂಬ ಪರೀಕ್ಷೆಯಲ್ಲಿ ತೇರ್ಗಡೆಯಾದರು.

ಜಲಂಧರ್ ನಗರದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದ ಕೆಲವೇ ತಿಂಗಳುಗಳಲ್ಲಿ ಮುನ್‌ಶೀರಾಮರು ಯಶಸ್ಸನ್ನು ಸಂಪಾದಿಸಿದರು. ಅವರು ಕೇವಲ ವೃತ್ತಿಯಲ್ಲೇ ತೊಡಗಿರದೆ ಕಾಲಕಾಲಕ್ಕೆ ಕವಿಗೋಷ್ಠಿಗಳನ್ನೂ ಏರ್ಪಡಿಸುತ್ತಿದ್ದರು. ಅಲ್ಲೆಲ್ಲಾ ಅವರದೇ ಮುಂದಾಳುತನ. ಆದರೆ ಸರ್ಕಾರವು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ವಕೀಲ ವೃತ್ತಿ ಕೈಗೊಳ್ಳಲು ಅನುಮತಿ ನೀಡಬೇಕೆಂದು ನಿರ್ಧರಿಸಿತ್ತು. ಮುನ್‌ಶೀರಾಮರು ಮುಖ್ತಾರಿ ಪರೀಕ್ಷೆ ಪಾಸು ಮಾಡಿದವರಾಗಿದ್ದರು. ಆದ್ದರಿಂದ ಪದವಿ ಪರೀಕ್ಷೆಗೆ ಓದಬೇಕೆಂದು ಮತ್ತೊಮ್ಮೆ ಲಾಹೋರಿಗೆ ಹೊರಟರು.

ಸಾಮಾಜಿಕ, ಧಾರ್ಮಿಕ ಚಟುವಟಿಕೆ

ಲಾಹೋರ್ ನಗರದಲ್ಲಿ ಪದವಿ ಪರೀಕ್ಷೆಗಾಗಿ ಅಭ್ಯಾಸ ಮಾಡುತ್ತಿರುವಾಗಲೇ ಮುನ್‌ಶೀರಾಮರು ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತರ ಸಂಪರ್ಕದಲ್ಲಿ ಬರತೊಡಗಿದರು. ಸ್ವಾಮಿ ದಯಾನಂದರ ಸತ್ಯಾರ್ಥ ಪ್ರಕಾಶ ಎಂಬ ಅಧ್ಯಯನದಿಂದ ಮುನ್‌ಶೀರಾಮರು ಆರ್ಯಸಮಾಜದ ಕಡೆಗೆ ಆಕರ್ಷಿತರಾದರು. ಕೂಡಲೇ ಅವರು ಅದರ ಸದಸ್ಯರಾದರು. ದಯಾನಂದರ ಎಲ್ಲ ಗ್ರಂಥಗಳನ್ನೂ ಅತ್ಯಂತ ಆಸ್ಥೆಯಿಂದ ಅಭ್ಯಸಿಸಿದರು. ಇದರಿಂದಾಗಿ ಅವರಲ್ಲಿ ಧರ್ಮದ ಬಗೆಗೂ ಆರ್ಯಸಮಾಜದ ಬಗೆಗೂ ಶ್ರದ್ಧೆ ಹೆಚ್ಚಿತು. ಮುನ್‌ಶೀರಾಮರು ಆರ್ಯಸಮಾಜದ ನಿಷ್ಠಾವಂತ ಅನುಯಾಯಿಗಳಾದರು. ಸನಾತನಿಗಳೂ ಸಂಪ್ರದಾಯಸ್ಥರೂ ಆದ ನಾನಕಚಂದ್ರರಿಗೂ, ಆರ್ಯಸಮಾಜದ ವಿಚಾರಧಾರೆಯ ಮಗನಿಗೂ ಅನೇಕ ಧಾರ್ಮಿಕ ಆಚಾರವಿಚಾರಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಲಾರಂಭಿಸಿದವು. ಅಷ್ಟೇ ಅಲ್ಲ, ತಂದೆಯ ಕೆಲವೊಂದು ಧಾರ್ಮಿಕ ಕಟ್ಟಳೆಗಳನ್ನು ಉಲ್ಲಂಘಿಸಿದ್ದೂ ಉಂಟು. ತನಗೆ ಸರಿಕಂಡುದನ್ನು ಆಚರಿಸುವ ಹಟ ಮುನ್‌ಶೀರಾಮರದು. ಹೀಗೆ ತಂದೆ-ಮಕ್ಕಳಲ್ಲಿ ಅಭಿಪ್ರಾಯಭೇದ ತಲೆದೋರಿದಾಗ ತಂದೆ ಕೊಟ್ಟ ಹಣವನ್ನು ಕೂಡ ಅವರು ಸ್ವೀಕರಿಸಲಿಲ್ಲ.

‘ಇಲ್ಲಿದೆ ನನ್ನ ಎದೆ. ಹಾರಿಸಿರಿ ಗುಂಡುಗಳನ್ನು.’

 

ಇದೇ ವೇಳೆಗೆ ನಾನಕಚಂದ್ರರು ಕೆಲಸದಿಂದ ನಿವೃತ್ತರಾದರು. ನಿವೃತ್ತರಾದ ಕೆಲಕಾಲದಲ್ಲಿಯೇ ಅವರು ಪಾರ್ಶ್ವವಾಯುವಿನಿಂದ ಬಳಲತೊಡಗಿದರು. ಪಿತೃಭಕ್ತರಾದ ಮುನ್‌ಶೀರಾಮರು ಮನಃಪೂರ್ವಕವಾಗಿ ಅವರ ಸೇವೆ ಮಾಡಿದರು. ಅವರ ನಿಸ್ವಾರ್ಥ ಹಾಗೂ ಪ್ರೇಮಪೂರ್ಣ ಸೇವೆಯನ್ನು ಕಂಡ ನಾನಕಚಂದ್ರರು ಮಗನಲ್ಲಿಯೂ ಅತನ ಆರ್ಯಸಮಾಜದ ಬಗೆಗೂ ಸಹಾನುಭೂತಿ ತೋರಹತ್ತಿದರು. ಈ ಕಾಲದಲ್ಲಿ ಅವರು ಮಾಡಿದ ಕಾರ್ಯ, ತೋರಿದ ಕಾರ್ಯದಕ್ಷತೆ ಹಾಗೂ ಬಹುಮುಖ ಕಾರ್ಯಕ್ಷೇತ್ರಗಳಲ್ಲಿ ತೋರಿದ ಆಸಕ್ತಿ ಮುಂತಾದವುಗಳು ಅಸದೃಶವಾದವುಗಳು. ಪರೀಕ್ಷೆಗಾಗಿ ಓದುವುದು, ತಂದೆಯವರ ಸೇವೆ, ಆರ್ಯಸಮಾಜದ ಪ್ರಚಾರ ಕಾರ್ಯ, ಆಲ್ಲಲ್ಲಿ ಸಭೆಗಳನ್ನು ಏರ್ಪಡಿಸುವುದು, ಭಾಷಣ ಮಾಡುವುದು ಇತ್ಯಾದಿಯಾಗಿ ಎಲ್ಲದರಲ್ಲೂ ನಿರಂತರ ತತ್ಪರತೆಯಿಂದ ಕಾರ್ಯ ಮಾಡುತ್ತಿದ್ದರು.

ಬಹುಮುಖ ಕಾರ್ಯಗಳು

ಆ ಕಾಲದಲ್ಲಿ ಕ್ರೈಸ್ತ ಪಾದ್ರಿಗಳು ಏನೂ ತಿಳಿಯದ ಬಡ ಹಿಂದು ಜನರಿಗೆ ಅನೇಕ ರೀತಿಯ ಆಶೆ-ಆಮಿಷಗಳನ್ನು ತೋರಿಸಿ ಮತಾಂತರಿಸುತ್ತಿದ್ದರು. ಅವರ ಈ ಕಾರ್ಯವು ಭರದಿಂದ ಸಾಗಿದ್ದುದು ಮುನ್‌ಶೀರಾಮರ ಲಕ್ಷ್ಯಕ್ಕೆ ಬಂದಾಗ, ಆವರು ಆ ದಿಶೆಯಲ್ಲೂ ಕಾರ್ಯರಂಗಕ್ಕಿಳಿದರು. ಮುನ್‌ಶೀರಾಮರು ಆ ಅಜ್ಞಾನಿ ಹಿಂದು ಬಾಂಧವರಿಗೆ ಸರಿಯಾದ ತಿಳಿವಳಿಕೆ ಕೊಟ್ಟು ಮತಾಂತರಗೊಳ್ಳದಂತೆ ತಡೆಯತೊಡಗಿದರು. ಈ ದುಷ್ಟ ಶಕ್ತಿಗಳನ್ನು ಮೆಟ್ಟಲು ಅವರು ಅತ್ಯಂತ ಸಾಹಸದಿಂದ ಮುಂದುವರಿದರು. ಈ ಕಾರ್ಯಕ್ಕೆ ಬೇಕಾಗುವ ಆರ್ಥಿಕ ಸಹಾಯಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದರು. ಆರ್ಯಸಮಾಜದ ಬಗ್ಗೆ ಸಹಾನುಭೂತಿ ಹಾಗೂ ಸದಭಿಪ್ರಾಯವುಳ್ಳ ಸಹೃದಯರ ಮನೆಯಲ್ಲಿ ಒಂದು ಪಾತ್ರೆಯಿಟ್ಟು, ಪ್ರತಿದಿನ ಒಂದಿಷ್ಟು ಹಿಟ್ಟು ಸಂಗ್ರಹಿಸಲಾಗುತ್ತಿತ್ತು. ಇದರಂತೆಯೇ ಬೇರೆ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದ್ದ ಹಣವನ್ನೂ ತಮ್ಮ ಕಾರ್ಯಗಳಿಗಾಗಿ ವಿನಿಯೋಗಿಸುತ್ತಿದ್ದರು. ಇದರಿಂದ ಯಾವ ಕಾರ್ಯಕರ್ತನ ಮೇಲೂ ಭಾರ ಬೀಳುತ್ತಿರಲಿಲ್ಲ.

ಇಷ್ಟೆಲ್ಲ ಕಾರ್ಯಬಾಹುಳ್ಯದ ಮಧ್ಯದಲ್ಲಿಯೂ ಅವರು ವಕೀಲ ಪರೀಕ್ಷೆಯ ಅಭ್ಯಾಸವನ್ನು ಅಲಕ್ಷಿಸಿರಲಿಲ್ಲ. ತಮ್ಮ ಮೂವತ್ತೆರಡನೇ ವರ್ಷದಲ್ಲಿ ಕಾನೂನಿನ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಜಲಂಧರ್‌ನ ಶ್ರೇಷ್ಠ ಗಣ್ಯ ನ್ಯಾಯವಾದಿಗಳಲ್ಲಿ ಇವರೂ ಒಬ್ಬರಾಗಿ ಹೆಸರು ಪಡೆದರು.

ಆರ್ಯಸಮಾಜದ ಸಂಪರ್ಕದಲ್ಲಿ ಬಂದನಂತರದ ಮುನ್‌ಶೀರಾಮರ ಜೀವನವು ಅತ್ಯಂತ ಆದರ್ಶಪ್ರಾಯವಾಯಿತು. ಪ್ರತಿನಿತ್ಯ ಬೆಳಗ್ಗೆ ಬೇಗ ಏಳುವರು, ಓಡಾಟ, ಪೂಜೆ, ಆಧ್ಯಯನ, ವೃತ್ತಿಯ ಕೆಲಸ, ಟೆನಿಸ್ ಆಟ ಎಲ್ಲವನ್ನೂ ಶಿಸ್ತಿನಿಂದ, ಶ್ರದ್ಧೆಯಿಂದ ಮಾಡುವರು. ಹೀಗೆ ಶರೀರ ಬುದ್ಧಿ ಎರಡರ ಆರೋಗ್ಯಕ್ಕೂ ಗಮನ ಕೊಡುತ್ತಿದ್ದರು.

ವಿದ್ಯಾಪ್ರೇಮಿ ಮುನ್‌ತೀರಾಮರು

ಹೆಂಗಸರಿಗೆ ವಿದ್ಯಾಭ್ಯಾಸ ಕೊಡಬೇಕೆಂದು ಮುನ್‌ಶೀರಾಮರ ವಿಚಾರ. ತಮ್ಮ ಪತ್ನಿ ಶಿವದೇವಿಗೆ ಅವರೇ ಸ್ವತಃ ಓದು ಬರಹ ಕಲಿಸಿದರು. ಆಗಿನ ಕಾಲದ ಕ್ಷತ್ರಿಯರಲ್ಲಿಯೂ ’ಪರದಾ’ ಪದ್ಧತಿಯು ರೂಢಿಯಲ್ಲಿತ್ತು. ಮುನ್‌ಶೀರಾಮರು ಆ ಸಂಪ್ರದಾಯವನ್ನು ಕಿತ್ತೆಸೆದು ತಮ್ಮ ಧರ್ಮಪತ್ನಿಯನ್ನು ತಮ್ಮೊಡನೆ ತಿರುಗಾಡಲು ಕರೆದುಕೊಂಡು ಹೋಗುತ್ತಿದ್ದರು.

ಆಗಿನ್ನೂ ಸ್ತ್ರೀ ಶಿಕ್ಷಣದ ಪ್ರಚಾರ ಈಗಿನಷ್ಟಿರಲಿಲ್ಲ. ಹೆಣ್ಣುಮಕ್ಕಳ ಶಾಲೆಗಳು ಇರಲಿಲ್ಲವಾದ್ದರಿಂದ ಅವರು ತಮ್ಮ ಮಗಳಾದ ವೇದಕುಮಾರಿಯನ್ನು ಕ್ರಿಶ್ಚಿಯನ್ ಶಾಲೆಗೆ ಕಳಿಸುವುದು ಅನಿವಾರ್ಯವಾಗಿತ್ತು. ಒಂದು ದಿನ ಅವರು ನ್ಯಾಯಾಲಯದಿಂದ ಮನೆಗೆ ಬಂದಾಗ ಅವರ ಮಗಳು ತನ್ನಷ್ಟಕ್ಕೆ ಹಾಡಿಕೊಳ್ಳುತ್ತಿರುವುದು ಕಿವಿಗೆ ಬಿತ್ತು. ಹಾಡು ಹಿಂದು ದೇವತೆಗಳನ್ನು ತಿರಸ್ಕರಿಸಿ ಯೇಸುವನ್ನು ಹೊಗಳುತ್ತಿತ್ತು. ಅದನ್ನು ಕೇಳಿದ ಮುನ್‌ಶೀರಾಮರು ಅತ್ಯಂತ ಕಳವಳಗೊಂಡರು. ಆ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿದಾಗ ತಮ್ಮ ಮಗಳು ಓದುತ್ತಿದ್ದ ಶಾಲೆಯಲ್ಲಿ ಹಿಂದು ದೇವತೆಗಳ, ಧರ್ಮದ ಹಾಗೂ ವೇದಾಶಾಸ್ತ್ರಗಳ ಅವಹೇಳನವು ಹೇರಳವಾಗಿ ನಡೆಯುತ್ತದೆಯೆಂಬ ಸಂಗತಿ ತಿಳಿದು ಬಂತು. ಇದರಿಂದ ಅವರಿಗೆ ಅತೀವ ವ್ಯಥೆಯಾಯಿತು. ಆವರು ಕೂಡಲೇ ಹುಡುಗಿಯರಿಗಾಗಿಯೇ ಶಾಲೆಯನ್ನು ಸ್ಥಾಪನೆಮಾಡಲು ಕೃತ ಸಂಕಲ್ಪರಾದರು. ಅತ್ಯಂತ ಪರಿಶ್ರಮದಿಂದ ಹಣ ಸಂಗ್ರಹಿಸಿ ’ಕನ್ಯಾ ಮಹಾವಿದ್ಯಾಲಯ’ವನ್ನು ಸ್ಥಾಪಿಸಿದರು. ಆಗಿನ್ನೂ ಅವರಿಗೆ ಕೇವಲ ಮೂವತ್ತನಾಲ್ಕು ವರ್ಷ ವಯಸ್ಸು. ಅಣ್ಣ ಲಾಲಾ ದೇವರಾಜರು ತಮ್ಮ ಜೀವನವನ್ನೇ ಈ ಕಾರ್ಯಕ್ಕಾಗಿ ಮುಡುಪಾಗಿಟ್ಟರು. ಇದರಿಂದಾಗಿ ಇಡೀ ಪಂಜಾಬ್ ಪ್ರಾಂತದಲ್ಲಿ ಎಲ್ಲೆಡೆಯಲ್ಲಿಯೂ ’ಕನ್ಯಾಶಾಲೆ’ಗಳ ಜಾಲ ಹರಡುವಂತಾಯಿತು. ಮುನ್‌ಶೀರಾಮರ ’ಬೃಹಸ್ಪತಿ’ ಎಂಬ ಜನ್ಮನಾಮವು ಸಾರ್ಥಕ್ಯ ಪಡೆಯುವಂತಾಯಿತು.

ಪತ್ರಿಕೋದ್ಯಮಿ

ಆರ್ಯಸಮಾಜದ ತತ್ವಗಳನ್ನು ಪ್ರಸಾರ ಮಾಡುವುದಕ್ಕಾಗಿ ಒಂದು ವಾರಪತ್ರಿಕೆಯ ಅವಶ್ಯಕತೆ ಕಂಡುಬಂತು. ಕೂಡಲೇ ಹಣ ಸಂಗ್ರಹಿಸಿ ಒಂದು ಮುದ್ರಣ ಯಂತ್ರವನ್ನು ಕೊಂಡುದಾಯಿತು. ಹಿಂದಿ ಭಾಷೆಯಲ್ಲಿ ’ಸದ್ಧರ್ಮ ಪ್ರಚಾರಕ’ ವೆಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯ ಮುಖಾಂತರ ಆರ್ಯಸಮಾಜದ ಪ್ರಚಾರಕಾರ್ಯ ಭರದಿಂದ ಸಾಗಿತು. ಮೊದಮೊದಲು ಅವರು ಈ ಕಾರ್ಯದಲ್ಲಿ ನಷ್ಟ ಅನುಭವಿಸಬೇಕಾಯಿತು. ಆದರೂ ಎದೆಗುಂದದೆ ಪ್ರಚಾರಕಾರ್ಯ ಮುಂದುವರಿಸಿದರು.

ಈ ಪತ್ರಿಕೆಯ ಮೂಲಕ ಪಂಜಾಬಿನ ಮೂಲೆಮೂಲೆಗಳಿಗೂ ಅವರು ಆರ್ಯಸಮಾಜದ ತತ್ವ ಪ್ರಚಾರ ಮಾಡಿದರು. ಅಲ್ಲದೆ ವ್ಯಾಖ್ಯಾನ, ಪ್ರವಚನ, ಚರ್ಚಾಕೂಟ ಮತ್ತು ಭಾಷಣಗಳ ಮೂಲಕವೂ ಧರ್ಮ ಜಾಗೃತಿಯ ಕಾರ್ಯ ಕೈಗೊಂಡರು. ಈ ರೀತಿ ಪ್ರಚಾರ ಮಾಡುವಾಗ ಸನಾತನ ಧರ್ಮಾನುಯಾಯಿಗಳಿಂದ ಅನೇಕ ಬಗೆಯ ವಿರೋಧ, ಕಿರುಕುಳಗಳನ್ನು ಅನುಭವಿಸಬೇಕಾಯಿತು. ಈ ಪ್ರಚಾರಕರು ಅದೆಲ್ಲವನ್ನೂ ನಗುಮುಖದಿಂದಲೂ ತಾಳ್ಮೆಯಿಂದಲೂ ಸಹಿಸುತ್ತಿದ್ದರು. ಮುನ್‌ಶೀರಾಮರ ಉತ್ಸಾಹವು ಅದಮ್ಯವಾದುದು. ಅವರು ಉತ್ಸಾಹದ ಭರದಲ್ಲಿ ಎಂದೂ ತಮ್ಮ ಪಾವಿತ್ರ್ಯ ಕಳೆದುಕೊಂಡವರಲ್ಲ. ಅವರು ಚಾರಿತ್ರ್ಯಕ್ಕೆ ಬಹು ಹೆಚ್ಚಿನ ಮಹತ್ವ ಕೊಡುತ್ತಿದ್ದರು. ಲೋಕಪ್ರಿಯರಾಗುವ ಅಭಿಲಾಷೆ ಅವರಿಗಿರಲಿಲ್ಲ. ಅವರ ಕರ್ತೃತ್ವಶಕ್ತಿಯನ್ನು ಕಂಡುಕೊಂಡ ಜನ ಅವರನ್ನು ’ಆರ್ಯ ಪ್ರತಿನಿಧಿ ಸಭೆ’ಯ ಅಧ್ಯಕ್ಷರನ್ನಾಗಿ ಆರಿಸಿದರು.

ಪತ್ನಿ ವಿಯೋಗ

ಇಷ್ಟೆಲ್ಲ ಕೆಲಸಕಾರ್ಯಗಳಲ್ಲಿ ಎಡೆಬಿಡದೆ ತೊಡಗಿದ ಮನ್‌ಶೀರಾಮರಿಗೆ ಶಾರೀರಿಕ ಸ್ವಾಸ್ಥ್ಯ, ಮನಃಶಾಂತಿ ಹಾಗೂ ಆತ್ಮಬಲವನ್ನು ನೀಡುತ್ತಿದ್ದವರು ಅವರ ಪತ್ನಿ ಶಿವದೇವಿಯವರು. ದುಷ್ಟ ಚಟಗಳ ಜಾಲದಲ್ಲಿ ಸಿಲುಕಿ ಬಳಲುತ್ತಿದ್ದ ಯುವಕ ಮುನ್‌ಶೀರಾಮರನ್ನು ತನ್ನ ಪ್ರೀತಿ, ಸಹನೆ, ಸೇವೆಯ ಮೂಲಕ ಅಧಃಪತನದಿಂದ ಉದ್ಧರಿಸಿದ ಕೀರ್ತಿ ಸತಿ ಶಿರೋಮಣಿ ಶಿವದೇವಿಯವರಿಗೆ ಸಲ್ಲುವುದು.

ಇಂತಹ ನಿಷ್ಠಾವಂತ ಪತ್ನಿಯ ಆಧಾರವನ್ನು ಮುನ್‌ಶೀರಾಮರು ತಮ್ಮ ೩೫ ನೇ ವರ್ಷದಲ್ಲಿ ಕಳೆದುಕೊಂಡರು. ಆಗ ಅವರು ನಾಲ್ಕು ಮಕ್ಕಳ ಭಾರ ವಹಿಸಿಕೊಳ್ಳಬೇಕಾಗಿ ಬಂತು. ಮಕ್ಕಳು ತುಂಬಾ ಚಿಕ್ಕವರು, ದೊಡ್ಡ ಮಗುವಿಗೆ ಹತ್ತು ವರ್ಷ, ಕಡೆಯದಕ್ಕೆ ಎರಡು ವರ್ಷ. ತಮ್ಮ ಪತ್ನಿಯ ಕೊನೆಯ ಇಚ್ಛೆಯ ಮೇರೆಗೆ ಈ ಭಾರವನ್ನು ಆತ್ಮಬಲದಿಂದ ಸ್ವೀಕರಿಸಿ, ಮತ್ತೊಮ್ಮೆ ಮದುವೆಯ ಬಂಧನದಲ್ಲಿ ಸಿಲುಕದೆ ಅವರು ತಮ್ಮ ಜೀವನದ ಕನಸುಗಳನ್ನು ನನಸಾಗುವಂತೆ ಮಾಡಲು ಇನ್ನಿಷ್ಟು ನಿಷ್ಠೆಯಿಂದ ಉದ್ಯುಕ್ತರಾದರು.

’ಗುರುಕುಲ’ದ ಸ್ಥಾಪನೆ

ವೈದಿಕ ಶಿಕ್ಷಣ ಪ್ರಣಾಲಿಯನ್ನು ಅಳವಡಿಸಿಕೊಂಡು, ಆದರ್ಶ ಗುರು-ಶಿಷ್ಯ ಸಂಬಂಧವೇರ್ಪಡುವಂತಹ ಹಾಗೂ ಬ್ರಹ್ಮಚರ್ಯಯುಕ್ತ ಸಂಯಮಪೂರ್ಣ ಜೀವನ ಸಾಗಿಸಲು ಅನುಕೂಲ ವಾತಾವರಣ ನಿರ್ಮಿಸುವಂತಹ ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಮುನ್‌ಶೀರಾಮರು ನಿರ್ಧರಿಸಿದರು. ವಿದ್ಯಾರ್ಥಿಗಳು ಮನೆಯನ್ನು ಬಿಟ್ಟುಬರಬೇಕು, ಎಲ್ಲ ಒಟ್ಟಿಗೆ ವಾಸಿಸಬೇಕು, ಸದಾ ಗುರುಗಳ ಮಾರ್ಗದರ್ಶನದಲ್ಲಿ ಇರಬೇಕು, ಹೀಗೆ ಹಲವು ವರ್ಷಗಳು ವಿದ್ಯಾಭ್ಯಾಸ ಮಾಡಬೇಕು. ಇದು ಗುರುಕುಲ ಪದ್ಧತಿ. ಒಂದು ಒಳ್ಳೆಯ ವಿಚಾರವು ಸ್ಫುರಿಸುವುದೊಂದೇ ತಡ ಅದನ್ನು ಅನುಷ್ಠಾನಕ್ಕೆ ತರುವ ಛಲ ಮತ್ತು ಮನೋಧೈರ್ಯ ಮುನ್‌ಶೀರಾಮರದು. ಪಾಶ್ಚಾತ್ಯ ಸಂಸ್ಕೃತಿ, ಸಭ್ಯತೆಗೆ ಮನಸೋತು ವಿಲಾಸಮಯ ಜೀವನದಲ್ಲಿ ಮುಳುಗಿದ ಭಾರತೀಯ ಸಮಾಜಕ್ಕೆ ’ಗುರುಕುಲ’ ಶಿಕ್ಷಣ ಪದ್ಧತಿಯಲ್ಲಿ ಒಲವು ಹುಟ್ಟಿಸುವುದು ಸುಲಭವಾಗಿರಲಿಲ್ಲ.

ಮುನ್‌ಶೀರಾಮರು ಈ ಪವಿತ್ರ ಕಾರ್ಯಕ್ಕಾಗಿ ಮನೆ ತೊರೆದು ಹೊರಟರು. ಗುರುಕುಲದ ಸ್ಥಾಪನೆಗೆ ಬೇಕಾಗುವ ಹಣವನ್ನು ಸಂಗ್ರಹಿಸುವವರೆಗೆ ಹಿಂದಿರುಗಬಾರದೆಂಬ ನಿರ್ಧಾರದೊಂದಿಗೆ ಹೊರಬಿದ್ದರು. ಅತ್ಯಲ್ಪ ಕಾಲದಲ್ಲಿಯೇ ಮೂವತ್ತು ಸಹಸ್ರ ರೂಪಾಯಿಗಳಷ್ಟು ಹಣ ಸಂಗ್ರಹವಾಯಿತು. ಇದಾದನಂತರ ಅವರಿಗೆ ಮತ್ತೊಂದು ಸಮಸ್ಯೆ ಎದುರಾಯಿತು. ಗುರುಕುಲಕ್ಕೆ ಸರಿಹೊಂದುವ ಸದಾಚಾರ ಸಂಪನ್ನರೂ, ತ್ಯಾಗಿಗಳೂ ಆದ ಅಧ್ಯಾಪಕರನ್ನು ಎಲ್ಲಿಂದ ತರಬೇಕೆಂಬುದೇ ಆ ಸಮಸ್ಯೆಯಾಗಿತ್ತು. ಆಗ ಅವರು ಸ್ವತಃ ವಾನಪ್ರಸ್ಥಾಶ್ರಮಿಗಳಾಗಿ ಅಧ್ಯಾಪನ ಕಾರ್ಯಕ್ಕೆ ಅಣಿಯಾದರು. ಲಾಲಾ ಶಾಲಿಗ್ರಾಮ, ಪಂಡಿತ ಗಂಗಾದತ್ತ ಹಾಗೂ ಪಂಡಿತ ವಿಷ್ಣುಮಿತ್ರ ಎಂಬವರೂ ಈ ಕಾರ್ಯಕ್ಕಾಗಿ ಸಿದ್ಧರಾದರು.

ಗುರುಕುಲವನ್ನೇನೋ ಆರಂಭಿಸಿದ್ದಾಯಿತು. ಆದರೆ ಶಿಷ್ಯರು ಎಲ್ಲಿಂದ ಬರಬೇಕು ! ಪಾಶ್ಚಾತ್ಯ ಶಿಕ್ಷಣಕ್ಕೆ ಮರುಳಾದ ಪಾಲಕರು ದೀರ್ಘಕಾಲದವರೆಗೆ ತಮ್ಮ ಮಕ್ಕಳನ್ನು ಅಗಲಿರಲು ಸಿದ್ಧರಾಗುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಆಗಲೂ ಕೂಡ ಮುನ್‌ಶೀರಾಮರೇ ಆದರ್ಶಪ್ರಾಯರಾದರು. ತಮ್ಮ ಇಬ್ಬರು ಮಕ್ಕಳಾದ ಹರಿಶ್ಚಂದ್ರ ಮತ್ತು ಇಂದ್ರ ಎಂಬವರನ್ನು ಈ ಗುರುಕುಲದಲ್ಲಿ ಸೇರಿಸಿದರು. ಇನ್ನುಳಿದ ಮೂವರು ಅಧ್ಯಾಪಕರೂ ಅವರನ್ನನುಸರಿಸಿ ತಮ್ಮ ತಮ್ಮ ಮಕ್ಕಳನ್ನೂ ಆಶ್ರಮ ಜೀವನಕ್ಕಾಗಿ ಸೇರಿಸಿದರು. ಗುರುಕುಲವು ಹೀಗೆ ಅಧ್ಯಾಪಕರ ಮಕ್ಕಳಿಂದಲೇ ಪ್ರಾರಂಭವಾಯಿತು.

ಗುರುಕುಲಕ್ಕಾಗಿ ಸರಿಯಾದ ಸ್ಥಳವನ್ನು ಆರಿಸಲು ಮುನ್‌ಶೀರಾಮರು ಸುತ್ತಾಡಬೇಕಾಯಿತು. ಸುತ್ತಾಡುತ್ತ ಅವರು ಹರಿದ್ವಾರದ ಬಳಿ ಇರುವ ಕಾಂಗಡಿ ಎಂಬ ಹಳ್ಳಿಗೆ ಬಂದರು. ಅದು ಅವರಿಗೆ ಯೋಗ್ಯ ಸ್ಥಾನವಾಗಿ ಕಂಡಿತು. ಅಗ ಮುನ್‌ಶೀರಾಮರು ಅಲ್ಲಿಯ ಜಮೀನುದಾರರಾದ ಅಮನ್‌ಸಿಂಹ ಎಂಬುವರನ್ನು ಕಂಡು ತಮ್ಮ ವಿಚಾರವನ್ನು ಅವರ ಮುಂದಿಟ್ಟರು. ಅವರ ಈ ಉದಾತ್ತ ಹಾಗೂ ಸರ್ವಶ್ರೇಷ್ಠ ಕಾರ್ಯವನ್ನು ಮೆಚ್ಚಿಕೊಂಡು ಅಮನ್‌ಸಿಂಹರು ತಮ್ಮ ಎಲ್ಲ ಜಮೀನನ್ನೂ ಸಂಪತ್ತನ್ನೂ ಗುರುಕುಲಕ್ಕಾಗಿ ಧಾರೆ ಎರೆದರು. ಎಂತಹ ಅದ್ಭುತ ಮೋಡಿ ಮುನ್‌ಶೀರಾಮರದು!

ಕಾಂಗಡಿಯ ಗೊಂಡಾರಣ್ಯದಲ್ಲಿ ಇಪ್ಪತ್ತಾರು ಗುರುಶಿಷ್ಯರಿಂದ ಕೂಡಿದ ಗುರುಕುಲ ರೂಪುಗೊಂಡಿತು. ಪ್ರಾಚೀನ ಅರ್ಯಪದ್ಧತಿಯಂತೆ ಪಾಠಪ್ರವಚನದ ಏರ್ಪಾಟು ಮಾಡಲಾಯಿತು. ಆಧುನಿಕ ಕಾಲಕ್ಕೆ ಸರಿಹೊಂದುವಂತೆ ಆಂಗ್ಲಭಾಷೆ ಹಾಗೂ ವಿಜ್ಞಾನ ವಿಷಯಗಳಿಗೂ ಪ್ರಾಶಸ್ತ್ಯ ನೀಡಲಾಯಿತು. ಈ ರೀತಿ ಜನ್ಮ ತಳೆದ ಗುರುಕುಲವು ಅತ್ಯಲ್ಪ ಕಾಲದಲ್ಲೇ ರಾಷ್ಟ್ರೀಯ ಸ್ವರೂಪವನ್ನು ತಳೆಯಿತು. ಅನೇಕ ರಾಷ್ಟ್ರೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಗುರುಕುಲವನ್ನು ಸಂದರ್ಶಿಸಲು ಬರತೊಡಗಿದರು.

ತನ್ನ ಮನೆಮಠವನ್ನೂ ವೃತ್ತಿಯನ್ನೂ ಸಂತೋಷದಿಂದ ತ್ಯಾಗಮಾಡಿ ಗುರುಕುಲಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿಕೊಂಡ ಮುನ್‌ಶೀರಾಮರನ್ನು ಜನತೆಯು ’ಮಹಾತ್ಮ’ ಎಂದು ಸಂಬೋಧಿಸಲಾರಂಭಿಸಿತು.

ಸತ್ವಪರೀಕ್ಷೆ

ಕಾಲಕಾಲಕ್ಕೆ ಮುನ್‌ಶೀರಾಮರು ಸಾಹಸಮಯ ಕಾರ್ಯಗಳಲ್ಲಿ ಜಯಶಾಲಿಯಾದುದನ್ನು ನಾವು ಕಾಣುತ್ತೇವೆ. ಎಂತಹ ಸತ್ವಪರೀಕ್ಷೆಯ ಕಾಲದಲ್ಲೂ ಅವರು ಧೃತಿಗೆಟ್ಟವರಲ್ಲ. ಗುರುಕುಲದ ವಿದ್ಯಾರ್ಥಿಗಳಿಗೆ ಕುದುರೆ ಸವಾರಿ ಮತ್ತು ಧನುರ್ವಿದ್ಯೆಯನ್ನೂ ಕಲಿಸಲಾಗುತ್ತಿತ್ತು. ಇದನ್ನು ಕಂಡ ಬ್ರಿಟಿಷ್ ಸರ್ಕಾರಕ್ಕೆ ಈ ಗುರುಕುಲದ ಬಗ್ಗೆ ಸಂದೇಹ ಉಂಟಾಯಿತು. ಗುರುಕುಲದಲ್ಲಿ ಸರ್ಕಾರದ ವಿರುದ್ಧವಾಗಿ ದಂಗೆಯೇಳುವಂತಹ ಶಿಕ್ಷಣ ನೀಡಲಾಗುತ್ತಿದೆಯೆಂಬ ಶಂಕೆಯಿಂದ ಸರ್ಕಾರ ಭಯಗೊಂಡು ಗುರುಕುಲದ ಪ್ರತಿಯೊಂದು ಕಾರ್ಯಚಟುವಟಿಕೆಯ ಮೇಲೂ ಸರ್ಪಕಾವಲನ್ನಿಡಲಾರಂಭಿಸಿತು; ಸರ್ಕಾರದ ಸೇವೆಯಲ್ಲಿದ್ದ ಆರ್ಯಸಮಾಜದ ಕಾರ್ಯಕರ್ತರನ್ನೂ ಸಂಶಯದ ದೃಷ್ಟಿಯಿಂದ ನೋಡತೊಡಗಿತು. ಇದೇ ಸಮಯದಲ್ಲಿ ’ಪಂಜಾಬಿನ ಕೇಸರಿ’ ಎಂದು ಹೆಸರಾದ ಲಾಲಾ ಲಜಪತ್ ರಾಯ್ ಅವರನ್ನು ಗಡಿಪಾರು ಮಾಡಲಾಯಿತು. ಆದರೂ ಮುನ್‌ಶೀರಾಮರು ಕಿಂಚಿತ್ತೂ ವಿಚಲಿತರಾಗದೇ ಕಾರ್ಯನಿರತರಾಗಿದ್ದರು.

ಪಾಟಯಾಲ ಸಂಸ್ಥಾನದಲ್ಲಿಯ ಆರ್ಯಸಮಾಜದ ಕಾರ್ಯಕರ್ತರ ಮೇಲೆ ವಿದ್ರೋಹದ ಸಂಶಯದಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು. ಅನೇಕ ಕಾರ್ಯಕರ್ತರನ್ನು ಬಂಧಿಸಿ ಸರ್ಕಾರವು ಅವರ ಮೇಲೆ ಘೋರ ಅತ್ಯಾಚಾರವನ್ನೆಸಗಿತು. ಈ ಸಂಗತಿಯನ್ನು ಮುನ್‌ಶೀರಾಮರು ಕೇಳಿದ ತಕ್ಷಣ ಪಾಟಯಾಲಕ್ಕೆ ತೆರಳಿ, ಆಪಾದಿತರ ಪರವಾಗಿ ಅಲ್ಲಿಯ ನ್ಯಾಯಾಸ್ಥಾನದಲ್ಲಿ ವಾದಮಾಡಿ, ಆ ಎಲ್ಲ ಕಾರ್ಯಕತ್ರನ್ನು ಬಿಡುಗಡೆ ಮಾಡಿಸಿದರು.

ಸ್ವಾಮೀ ಶ್ರದ್ಧಾನಂದ

ಮುನ್‌ಶೀರಾಮರು ನಿರಂತರವಾಗಿ ಹದಿನೈದು ವರ್ಷಗಳವರೆಗೆ ಗುರುಕುಲದ ಏಳಿಗೆಗಾಗಿ ದುಡಿದು ೧೯೧೭ರಲ್ಲಿ ಸನ್ಯಾಸವನ್ನು ಸ್ವೀಕರಿಸಿದರು. ಮಹಾತ್ಮಾ ಮುನ್‌ಶೀರಾಮರು ಸ್ವಾಮೀ ಶ್ರದ್ಧಾನಂದರಾದರು. ಸನ್ಯಾಸವನ್ನು ಸ್ವೀಕರಿಸಿದನಂತರ ದೆಹಲಿಗೆ ತೆರಳಿ ಅಲ್ಲಿ ಹಿಂದೂ ಧರ್ಮದ ಜಾಗೃತಿ ಮತ್ತು ಸುಧಾರಣಾ ಕಾರ್ಯ ಕೈಗೊಂಡರು. ದೆಹಲಿಯು ರಾಜಧಾನಿಯಾಗಿದ್ದರೂ ಕೂಡ ಆಳರಸರ ಪ್ರಭಾವ ಹಾಗೂ ದೌರ್ಜನ್ಯಗಳಿಂದ ಹಿಂದೂಗಳಲ್ಲಿ ಯಾವ ಜಾಗೃತಿಯೂ ಆಗಿರಲಿಲ್ಲ. ಆದುದರಿಂದ ಸ್ವಾಮಿ ಶ್ರದ್ಧಾನಂದರು ದೆಹಲಿಯ ಓಣಿ-ಓಣಿಗಳಲ್ಲಿ ಕಾರ್ಯಮಗ್ನರಾದರು.

ಕಾಂಗ್ರೆಸ್ ಸಂಸ್ಥೆಯೊಂದಿಗೆ ಸಂಬಂಧ

ಗಾಂಧೀಜಿಯವರು ದಕ್ಷಿಣ ಆಫ್ರಿಕದಲ್ಲಿ ಅಲ್ಲಿಯ ಭಾರತೀಯರಿಗಾಗಿ ಸತ್ಯಾಗ್ರಹ ನಡೆಸಿದ್ದರು. ಸ್ವಾಮಿ ಶ್ರದ್ಧಾನಂದರು ಈ ಸತ್ಯಾಗ್ರಹಕ್ಕಾಗಿ ಗುರುಕುಲದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ದೊಡ್ಡ ಮೊತ್ತದ ನಿಧಿಯನ್ನು ಗಾಂಧೀಜಿಯವರಿಗೆ ಕಳಿಸಿಕೊಟ್ಟರು. ಈ ಹಣವನ್ನು ವಿದ್ಯಾರ್ಥಿಗಳು ಒಂದು ವೇಳೆಯ ಊಟದ ಉಳಿತಾಯದಿಂದಲೂ ಕೂಲಿಯ ಕೆಲಸದಿಂದಲೂ ಸಂಗ್ರಹಿಸಿದ್ದರು.

ಪಂಜಾಬ್ ಪ್ರಾಂತದ ಇತಿಹಾಸದಲ್ಲಿಯೇ ಅತ್ಯಂತ ಕರಾಳವಾದ ಪ್ರಸಂಗವೊಂದು ಜರುಗಿತು. ಸರ್ಕಾರವು ’ರೌಲಟ್’ ಕಾಯ್ದೆಯನ್ನು ಅಲ್ಲಿಯ ಜನತೆಯ ಮೇಲೆ ಹೇರಿತು. ಇದರ ಪ್ರಕಾರ ಯಾರನ್ನು ಬೇಕಾದರೂ ದಸ್ತಗಿರಿ ಮಾಡಿ ವಿಚಾರಣೆ ಇಲ್ಲದೇ ಸೆರೆಮನೆಗೆ ನೂಕಬಹುದಾಗಿತ್ತು. ಇದರ ವಿರೋಧದಲ್ಲಿ ದೇಶಾದ್ಯಂತ ಸಭೆ-ಮೆರವಣಿಗೆಗಳಾದವು. ದೆಹಲಿಯಲ್ಲಿ ಆಂದೋಲನದ ನೇತೃತ್ವವನ್ನು ಸ್ವತಃ ಸ್ವಾಮೀಜಿಯವರೇ ವಹಿಸಿದ್ದರು. ಆ ಪ್ರಸಂಗದಲ್ಲಿ ಪೋಲೀಸರ ಗುಂಡಿಗೆ ಎದೆಗೊಟ್ಟು ನಿಂತ ಸ್ವಾಮೀಜಿಯವರ ಧೈರ್ಯ ಎಂಥವರಲ್ಲಿಯೂ ಕೆಚ್ಚೆದೆಯನ್ನು ನಿರ್ಮಿಸುವಂಥದು. ಈ ರೀತಿ ಅವರು ಕಾಂಗ್ರೆಸಿನ ಆಂದೋಲನದಲ್ಲಿಯೂ ಸಕ್ರಿಯ ಪಾತ್ರ ವಹಿಸುತ್ತಿದ್ದರು. ಅಮೃತಸರದಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸ್ವಾಮೀಜಿಯವರು ಕಾರ್ಯ ನಿರ್ವಹಿಸಿದರು. ಕಾಂಗ್ರೆಸಿನ ಚರಿತ್ರೆಯಲ್ಲಿ ಸಂನ್ಯಾಸಿಯೊಬ್ಬರು ಮೊಟ್ಟಮೊದಲಬಾರಿಗೆ ಅತ್ಯಂತ ಯಶಸ್ವೀ ರೀತಿಯಿಂದ ನೇತೃತ್ವ ವಹಿಸಿದ ಪ್ರಸಂಗವು ಸುವರ್ಣಾಕ್ಷರಗಳಿಂದ ಬರೆಯುವಂತಹದು.

ಹಿಂದೂ-ಮುಸಲ್ಮಾನರ ಐಕ್ಯತಾ ಕಾರ್ಯ

ಸ್ವಾಮೀ ಶ್ರದ್ಧಾನಂದರು ಹಿಂದೂ-ಮುಸಲ್ಮಾನರ ಐಕ್ಯತೆ ಪ್ರತಿಪಾದಕರಾಗಿದ್ದರು. ಅಷ್ಟೆ ಅಲ್ಲ ಅವರು ಹಿಂದೂ-ಮುಸಲ್ಮಾನರ ಐಕ್ಯತೆಯ ಸಾಕಾರಮೂರ್ತಿಯಂತಿದ್ದರು. ಅವರು ಹಿಂದೂ-ಮುಸಲ್ಮಾನರ ಐಕ್ಯತೆಗಾಗಿ ಆಗಾಗ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಅವರ ಅಮೃತವಾಣಿಯನ್ನು ಕೇಳಲು ಹಿಂದೂ-ಮುಸ್ಲಿಮರೆಂಬ ಭೇದಭಾವವನ್ನು ತೊರೆದು ಜನರು ಸೇರುತ್ತಿದ್ದರು.

ಅವರ ಎಷ್ಟೋ ಉಪನ್ಯಾಸಗಳು ಮಸೀದಿಗಳಲ್ಲಿ ನಡೆದದ್ದುಂಟು- ಅದೂ ವೇದಮಂತ್ರ ಘೋಷದೊಂದಿಗೆ.

ಮುಸಲ್ಮಾನರು ಸ್ವಾಮೀಜಿಯವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರಲ್ಲದೇ ಅತ್ಯಂತ ಪ್ರಸನ್ನರಾಗಿದ್ದರು. ಅಷ್ಟೇ ಅಲ್ಲ ಕೆಲವು ಮುಸ್ಲಿಮರು ಅವರ ನಿವಾಸವನ್ನು ರಕ್ಷಿಸುತ್ತಿದ್ದರು. ಇದು ಅವರ ಅದ್ಭುತ ಪವಾಡವೇ ಸರಿ !

ಅಸ್ಪೃಶ್ಯತಾ ನಿವಾರಣಾ ಕಾರ್ಯ

ಹಿಂದೂಗಳು ತಮ್ಮ ಸಮಾಜ ಬಾಂಧವರೇ ಆದ ಕೆಲವು ಜಾತಿಯವರನ್ನು ಅಸ್ಪೃಶ್ಯರೆಂದು ದೂರವಿರಿಸಿದುದು ಸ್ವಾಮೀಜಿಯವರಿಗೆ ನೋವನ್ನುಂಟುಮಾಡಿತ್ತು. ಎಲ್ಲೆಡೆ ಕ್ರೈಸ್ತ ಪಾದ್ರಿಗಳು ಅಸ್ಪೃಶ್ಯರಿಗೆ ಅನೇಕ ಬಗೆಯ ಆಶೆ-ಆಮಿಷಗಳನ್ನು ತೋರಿಸಿ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಆಗ ಮಹಾತ್ಮಾ ಗಾಂಧೀಜಿಯವರೂ ಹರಿಜನೋದ್ಧಾರದ ದೀಕ್ಷೆ ತೊಟ್ಟಿದ್ದರು. ಸ್ವಾಮೀಜಿಯವರು ತಾವೇ ಸ್ವತಂತ್ರ ಕಾರ್ಯಾರಂಭ ಮಾಡಿದರು. ಆರ್ಯಸಮಾಜದ ಮುಖಾಂತರ ಈ ಕಾರ್ಯವು ದೇಶವ್ಯಾಪಿಯಾಗುವಂತೆ ಮಾಡಿದರು. ಅವರು ಸ್ವತಃ ಅಸ್ಪೃಶ್ಯರೊಂದಿಗೆ ಕುಳಿತು ಊಟ ಮಾಡಿದರು. ಈ ರೀತಿ ಅವರು ನುಡಿದಂತೆ ನಡೆದು ದೇಶಕ್ಕೆ ಮೇಲ್ಪಂಕ್ತಿಯಾದರು.

ಅವರ ಅಮೃತವಾಣಿಯನ್ನು ಕೇಳಲು ಹಿಂದೂಗಳೂ ಮುಸ್ಲಿಮರೂ ಸೇರುತ್ತಿದ್ದರು.

 

ಶುದ್ಧೀಕರಣ ಮತ್ತು ಹಿಂದೂ ಸಂಘಟನೆ

ಸ್ವಾಮೀಜಿಯವರು ಅಸ್ಪೃಶ್ಯ ನಿವಾರಣೆಗೆ ಚಾಲನೆ ಕೊಟ್ಟನಂತರ ಶುದ್ಧೀಕರಣ ಹಾಗೂ ಹಿಂದೂ ಸಂಘಟನೆಯ ಕಾರ್ಯಗಳನ್ನು ಕೈಗೆತ್ತಿಕೊಂಡರು. ಒಂದು ಕಾಲದಲ್ಲಿ ಮುಸಲ್ಮಾನ ಧರ್ಮಕ್ಕೆ ಮತಾಂತರಗೊಂಡು ಅದುವರೆಗೂ ಮುಸ್ಲಿಮರಾಗಿಯೇ ಉಳಿದಿದ್ದ ಮಲಕಾನಾ ರಜಪೂತರ ಹಿಂದೂ ಧರ್ಮದ ಬಗೆಗಿನ ಉತ್ಕಟ ಶ್ರದ್ಧೆಯನ್ನು ಕಂಡ ಸ್ವಾಮಿ ಶ್ರದ್ಧಾನಂದರು ಶುದ್ಧೀಕರಣ ಆಂದೋಲನವನ್ನು ಪ್ರಾರಂಭಿಸಿದರು. ಈ ಆಂದೋಲನದ ಪರಿಣಾಮವಾಗಿ ಇಡೀ ಗ್ರಾಮಕ್ಕೆ ಗ್ರಾಮವೇ ಶುದ್ಧೀಕರಣಗೊಂಡು ಮಾತೃಧರ್ಮಕ್ಕೆ ಸೇರತೊಡಗಿತು. ಈ ರೀತಿ ಮಾತೃಧರ್ಮಕ್ಕೆ ಸೇರಿದವರನ್ನು ಹಿಂದೂಗಳು ಅತ್ಯಂತ ಹಾರ್ದಿಕವಾಗಿ ಸ್ವಾಗತಿಸುತ್ತಿದ್ದರು. ಅಲ್ಲಲ್ಲಿ ಶುದ್ಧೀಕರಣ ಸಭೆಗಳನ್ನು ಸ್ಥಾಪಿಸಲಾಯಿತು. ಭಾರತಾದ್ಯಂತ ಈ ಕಾರ್ಯವು ಭರದಿಂದ ಸಾಗಿತು.

ಸ್ವಾಮೀಜಿಯವರು ತಮ್ಮ ಅನೇಕ ವರ್ಷಗಳ ಸಾಮಾಜಿಕ ಹಾಗೂ ರಾಜನೈತಿಕ ಜೀವನದ ಅನುಭವದಿಂದ ಹಿಂದೂಗಳು ಎಷ್ಟೆ ಬಹುಸಂಖ್ಯಾತರಾಗಿದ್ದರೂ ಶ್ರೀಮಂತರಾಗಿದ್ದರೂ ಅನೇಕ ಸಣ್ಣ ಸಣ್ಣ ಭೇದಗಳಿಂದ ಸಂಘಟಿತರಾಗಿಲ್ಲವೆಂಬುದನ್ನು ಕಂಡಿದ್ದರು. ಆದುದರಿಂದ ಹಿಂದೂ ಸಂಘಟನೆಗೆ ಕಾರ್ಯಪ್ರವೃತ್ತರಾದರು.

ಒಂದು ಕಾಲಕ್ಕೆ ಸ್ವಾಮೀಜಿಯವರಲ್ಲಿ ನಿಷ್ಠೆ ಹಾಗೂ ಶ್ರದ್ಧೆ ತಾಳಿದ್ದ ಮುಸ್ಲಿಮರಲ್ಲಿ ಹಲವರು ಅವರ ಶುದ್ಧೀಕರಣ ಮತ್ತು ಹಿಂದೂ ಸಂಘಟನೆಯ ಕಾರ್ಯಗಳಿಂದ ಅಸಂತುಷ್ಟರಾಗಿ ಅವರನ್ನು ವಿರೋಧಿಸಿದರು. ಆದರೂ ಶ್ರದ್ಧಾನಂದರು ಹಿಮ್ಮೆಟ್ಟದೇ ಸ್ಥಾನಸ್ಥಾನಗಳಲ್ಲಿ ಶುದ್ಧೀಕರಣದ ಕಾರ್ಯ, ಸಂಘಟನಾ ಕಾರ್ಯ ಹಾಗೂ ಅಸ್ಪೃಶ್ಯತಾ ನಿವಾರಣಾ ಕಾರ್ಯಗಳಿಗೆ ಸಮಿತಿಗಳನ್ನು ರಚಿಸಿದರು.

ಬಹುವಿಧ ಕಾರ್ಯಕ್ಷೇತ್ರ

ಶ್ರದ್ಧಾನಂದರ ಜೀವನವು ವಿವಿಧ ಕಾರ್ಯಕ್ಷೇತ್ರಗಳ ಸಮನ್ವಯವಾಗಿತ್ತು. ಹದಿನೈದು ವರ್ಷಗಳವರೆಗೆ ಕಾಂಗಡಿ ಗುರುಕುಲದ ಸಂಸ್ಥಾಪಕ ಪ್ರಾಚಾರ್ಯರಾಗಿದ್ದರು. ಮಹರ್ಷಿ ದಯಾನಂದ ಸರಸ್ವತಿಯವರ ಜನ್ಮಶತಾಬ್ದಿ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು; ದಲಿತೋದ್ಧಾರಕ ಸಮಿತಿಯ ಸಂಚಾಲಕರಾಗಿದ್ದರು; ಶುದ್ಧೀಕರಣ ಚಳವಳಿಯ ಪ್ರೇರಕರಾಗಿದ್ದರು; ಹಿಂದೂ ಸಂಘಟನೆಯ ಮಂತ್ರ ದ್ರಷ್ಟಾರರಾಗಿದ್ದರು. ಅವರು ಕೈಕೊಂಡ ಕೆಲಸಗಳು ಲೆಕ್ಕವಿಲ್ಲದಷ್ಟು. ಯಾವ ಸ್ಥಾನವನ್ನಲಂಕರಿಸಿದರೂ ನಾಮಮಾತ್ರದವರಾಗಿ ಉಳಿಯದೇ ಸಕ್ರಿಯರಾಗುತ್ತಿದ್ದುದು ಸ್ವಾಮೀಜಿಯವರ ವೈಶಿಷ್ಟ್ಯವಾಗಿತ್ತು.

ಬಲಿದಾನ

ಅವರ ಜೀವನದ ಕೊನೆಯ ನಾಲ್ಕಾರು ವರ್ಷಗಳಲ್ಲಿ ಅವರ ಆರೋಗ್ಯವು ತೀರ ಹದಗೆಟ್ಟಿತ್ತು. ದೂರದ ಪ್ರವಾಸದಿಂದಾಗುವ ತೊಂದರೆಗಳಿಗಾಗಿ ಅವರ ದೇಹ ಶಿಥಿಲವಾಗುತ್ತ ಬಂದಿತ್ತು, ಇದಾವುದನ್ನೂ ಲೆಕ್ಕಿಸದೇ ಅವರು ಕಾರ್ಯಮಗ್ನರಾಗುತ್ತಿದ್ದರು. ತಮ್ಮ ಜೀವನದ ಒಂದೊಂದು ಕ್ಷಣವನ್ನೂ ಸದ್ವಿನಿಯೋಗಗೊಳಿಸುತ್ತಿದ್ದರು.

೧೯೨೬ರ ಡಿಸೆಂಬರ್ ೨೩ನೇ ದಿವಸವು ಭಾರತೀಯರಿಗೆ ಕರಾಳ ದಿನ. ದೆಹಲಿಯ ಶ್ರದ್ದಾನಂದ ಬೀದಿಯಲ್ಲಿಯ ತಮ್ಮ ಮನೆಯಲ್ಲಿ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಒಬ್ಬ ಮತಾಂಧ ಮುಸ್ಲಿಮನು ಇದ್ದಕ್ಕಿದ್ದಂತೆ ಅವರ ಕೊಲೆ ಮಾಡಿದ. ಅವರ ಕೊಲೆಯ ಸಮಾಚಾರವು ಜಗತ್ತಿನಾದ್ಯಂತ ತಡವಿಲ್ಲದೇ ಹಬ್ಬಿತು. ದೇಶದ ನಾಯಕರೆಲ್ಲರೂ ಅವರ ಮರಣಕ್ಕಾಗಿ ಶೋಕ ವ್ಯಕ್ತಪಡಿಸಿದರು. ಪ್ರಮುಖ ಪತ್ರಿಕೆಗಳು ಶೋಕ ವ್ಯಕ್ತಪಡಿಸಿ ಅಗ್ರಲೇಖ ಬರೆದವು. ಮಹಾತ್ಮಾ ಗಾಂಧಿ, ಲಾಲಾ ಲಜಪತ್ ರಾಯ್, ಮೌಲಾನ ಅಬುಲ್ ಕಲಾಂ ಆಜಾದ್, ಮೌಲಾನ ಷೌಕತ್ ಅಲಿ ಮೊದಲಾದ ನಾಯಕರೆಲ್ಲ ಕೊಲೆಯನ್ನು ಖಂಡಿಸಿದರು.

ಅವರ ಮರಣದಿಂದ ದೇಶಕ್ಕೆ ಅದರಲ್ಲಿಯೂ ಹಿಂದೂ ಜನಾಂಗಕ್ಕೆ ತುಂಬಿಬಾರದ ಹಾನಿಯಾಯಿತು. ಭಾರತದ ಕಣ್ಮಣಿಯಾಗಿದ್ದ ಶ್ರದ್ಧಾನಂದರು ಇನ್ನಿಲ್ಲ. ಹಿಂದೂ ಜನಾಂಗದ ಸ್ಫೂರ್ತಿ ಚಿಲುಮೆ ಬತ್ತಿತು. ಒಂದು ದಾರಿದೀಪ ನಂದಿತು.

ಅವರ ದಿಟ್ಟ ನಿರ್ಮಲ ಬಾಳು ನಮಗೆ ಬೆಳಕಾಗಲಿ.