ನಮ್ಮ ಬದುಕನ್ನು ಪ್ರಚೋದಿಸುವ ಶಕ್ತಿಗಳಲ್ಲಿ ಮುಖ್ಯವಾದವುಗಳು ಎರಡು: ಒಂದು ಶ್ರದ್ಧೆ, ಮತ್ತೊಂದು ಸ್ಪರ್ಧೆ. ಇವುಗಳಲ್ಲಿ ಮೊದಲನೆಯದು ಗುರುತಿಸಿದಲ್ಲದೆ ಕಾಣದ ರೀತಿಯಲ್ಲಿ ಕಾರ್ಯೋನ್ಮಖವಾಗುತ್ತದೆ; ಎರಡನೆಯದು ಎಲ್ಲರಿಗೂ ಕಾಣುವಂತೆ ವಿಜೃಂಭಿಸುತ್ತಾ ಕ್ರಿಯಾಭಿಮುಖವಾಗುತ್ತದೆ.

ಶ್ರದ್ಧೆಯ ಹೆಜ್ಜೆ ನಿಶ್ಯಬ್ದವಾದದ್ದು; ಸ್ಪರ್ಧೆಯ ನಡಿಗೆ ಸಶಬ್ದವಾದದ್ದು. ಸೂರ್ಯೋದಯ ಚಂದ್ರೋದಯಗಳಷ್ಟೆ ಸದ್ದಿಲ್ಲದೆ ಬೆಳಕಾಗುತ್ತದೆ ಶ್ರದ್ಧೆ; ಡೋಲು ಬಜಾವಣೆ ಜಾಹೀರಾತುಗಳಿಲ್ಲದೆ ಹೆಜ್ಜೆಯಿಡಲಾರದು ಸ್ಪರ್ಧೆ. ಶ್ರದ್ಧೆ ಅರಳುವ ಹೂವಿನಂತೆ ಮೌನವಾದದ್ದು; ಸ್ಪರ್ಧೆ ಮೊರೆಯುವ ಗಾಳಿಯಂತೆ ಧಾವಿಸತಕ್ಕದ್ದು, ಅದಕ್ಕೆ ಮೌನವೆಂದರೆ ಭಯ; ಶಬ್ದವೆಂದರೆ ಪ್ರಿಯ.

ಮುಗ್ಧವಾದದ್ದು ಶ್ರದ್ಧೆ; ಕುಟಿಲವಾದದ್ದು ಸ್ಪರ್ಧೆ. ಸ್ಪರ್ಧೆಗೆ ಸಂಖ್ಯೆಗಳ ಮೇಲೆ, ಗಾತ್ರಗಳ ಮೇಲೆ ಗಮನ. ಶ್ರದ್ಧೆಗೆ ಗುಣದ ಮೇಲೆ ಗಟ್ಟಿಯಾದದ್ದರ ಮೇಲೆ ಗಮನ. ಶ್ರದ್ಧೆಗೆ ನಿರಾಡಂಬರವೆ ಇಷ್ಟವಾದರೆ, ಸ್ಪರ್ಧೆಗೆ ಆಡಂಬರ, ಅಟ್ಟಹಾಸಗಳೆ ಇಷ್ಟ.

ಶ್ರದ್ಧೆಗೆ  ಅಶಿವದ ಭೀತಿಯಿಲ್ಲ; ಆದರೆ ಸ್ಪರ್ಧೆಗೆ ಸದಾ  ಅಮಂಗಳದ ಶಂಕೆ. ಶ್ರದ್ಧೆ ಯಾವುದರಲ್ಲೂ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ. ಸ್ಪರ್ಧೆಗೆ ತಾನು ಗೆಲ್ಲುವುದರಲ್ಲಿ ಹೊರತು ಇನ್ನಾವುದರಲ್ಲೂ ಆಸಕ್ತಿ ಇಲ್ಲ. ಅದರ ಜೊತೆಗೆ ಪ್ರತಿಯೊಂದೂ ಪ್ರತಿಯೊಬ್ಬರೂ ತನಗೆ ಪ್ರತಿಸ್ಪರ್ಧಿಯಾಗಿದ್ದಾರೆಂಬ ಭ್ರಮೆಯೇ ಅದಕ್ಕೆ ಪ್ರಚೋದಕ. ಎಲ್ಲರನ್ನೂ ಹಿಂದೆ ಹಾಕುವುದು ಹೇಗೆ, ತಾನು ಮಾತ್ರ ಮುಂದುವರಿಯುವುದು ಹೇಗೆ ಎನ್ನುವುದೇ ಅದರ ಧ್ಯಾಸ. ಆದರೆ ಶ್ರದ್ಧೆಯ ನಿಲುವೇ ಬೇರೆ. ಅದರ ಪಾಲಿಗೆ ಜಗತ್ತೆಲ್ಲಾ ಒಂದು ರಣರಂಗವೆಂಬ ಭ್ರಮೆಯಿಲ್ಲ; ಜಗತ್ತೆಲ್ಲಾ ಸ್ನೇಹರಂಗವೆಂಬ ವಿಶ್ವಾಸವಿದೆ. ಇತರರ ಪ್ರತಿಸ್ಪರ್ಧೆಯಿಂದ ತನಗೇನೂ ತೊಂದರೆಯಿಲ್ಲ ಎಂಬ ಧೈರ್ಯವಿದೆ. ಎಲ್ಲರ ಜೊತೆಗೆ, ಎಲ್ಲರೊಂದಿಗೆ ಸಹಯಾತ್ರಿಯಾಗುವುದರಲ್ಲೇ ಅದಕ್ಕೆ ಆಸಕ್ತಿ; ಯಾರನ್ನಾದರೂ ಹಿಂದೆ ಹಾಕುವುದರ ಮೂಲಕವೇ ತಾನು ಮುಂದುವರಿಯಬಲ್ಲೆನೆಂಬ ಭಾವನೆಯೇ ಅದಕ್ಕೆ ಸಮ್ಮತವಿಲ್ಲ.

ಹಾಗೆಂದರೆ ಶ್ರದ್ಧೆ ಎಂಬುದು ಜಡವೆಂದಾಗಲೀ, ನಿರೋಧಪ್ರಿಯವೆಂದಾಗಲಿ, ತಟಸ್ಥವೆಂದಾಗಲಿ ಅರ್ಥವಲ್ಲ. ಅದಕ್ಕೆ ಗೆಲ್ಲಲೇಬೇಕೆಂಬ ಹಠವಿಲ್ಲ. ಆದರೆ ನಿಲ್ಲಬಾರದೆಂಬ ವಿವೇಕವಿದೆ. ಓಡುವುದೇ ಪ್ರಗತಿಯ ಲಕ್ಷಣವೆಂಬ ತಪ್ಪು ತಿಳವಳಿಕೆ ಇಲ್ಲ. ನಿಲ್ಲದೆ, ನಿಂತ ನೀರಾಗಿ ಕೊಳೆಯದೆ, ನಿರಂತರವಾಗಿ, ನಿರಾತಂಕವಾಗಿ ಪ್ರವಹಿಸುವುದೆ ಪ್ರಗತಿಯ ಲಕ್ಷಣವೆಂಬ ಅರಿವಿದೆ.

ಸ್ವಾರ್ಥಮೂಲವಾದುದು ಸ್ಪರ್ಧೆ; ಪರಾರ್ಥ ಪ್ರಿಯವಾದದ್ದು ಶ್ರದ್ಧೆ. ಸಿಕ್ಕ ಅವಕಾಶದಲ್ಲಿ ಹೇಗಾದರೂ ಮಾಡಿ ಬೇರೂರಿ ಬೆಳೆದು ಆಕ್ರಮಿಸುವ ಸ್ವಭಾವದ್ದು ಸ್ಪರ್ಧೆ; ತನ್ನ ಜತೆಗೆ ಬೇರೆಯವರನ್ನೂ ಬೆಳೆಯಗೊಡುವ ಔದಾರ್ಯದ್ದು ಶ್ರದ್ಧೆ.  ಸ್ಪರ್ಧೆ ತಾತ್ಕಾಲಿಕವಾದದ್ದನ್ನು ಮುಖ್ಯವೆಂದು ಭಾವಿಸುತ್ತದೆ; ಶ್ರದ್ಧೆಗೆ ಅನಂತಕಾಲದ ಕಲ್ಪನೆಯಲ್ಲಿ ವಿಶ್ವಾಸವಿದೆ. ಯಾವುದು ತಾತ್ಕಾಲಿಕ, ಯಾವುದು ಚಿರಕಾಲಿಕ ಎಂಬ ಮೌಲ್ಯ ವಿವೇಚನೆ ಇದೆ. ಶ್ರದ್ಧೆಗೆ ಮುಖ್ಯವಾದದ್ದು ನಿಷ್ಠೆ; ಸ್ಪರ್ಧೆಗೆ ಮುಖ್ಯವಾದದ್ದು ಪ್ರತಿಷ್ಠೆ. ಇದ್ದುದನ್ನು ಕೆಡಹುವುದರಲ್ಲಿ ಸ್ಪರ್ಧೆಗೆ ಆಸಕ್ತಿ; ಬಿದ್ದುದನ್ನು ನಿಲ್ಲಿಸುವುದರಲ್ಲಿ ಶ್ರದ್ಧೆಗೆ ಆಸಕ್ತಿ. ಸದ್ಯಃ ಪ್ರಯೋಜನವೆ ಸ್ಪರ್ಧೆಯ ಗುರಿ; ಅಂದಂದಿನದು ಅಂದಂದೇ ಫಲ ಕೊಡುವಂತಾಗಬೇಕೆಂಬುದು ಅದರ ದೃಷ್ಟಿ. ಶ್ರದ್ಧೆಗೆ ಮಾಡುವ ಕೆಲಸವನ್ನು ಸರಿಯಾಗಿ ಮಾಡಬೇಕೆಂಬ ಕಡೆ ಗಮನವೇ ಹೊರತು, ಅದು ತಕ್ಷಣದಲ್ಲಿ ಫಲವಾಗಿ ದಕ್ಕಬೇಕೆಂಬ ಕಡೆಗೆ ಆಸಕ್ತಿಯಿಲ್ಲ. ಮಹಾತ್ವಾಕಾಂಕ್ಷಿಗಳ ಅಹಂಕಾರ ವಿಲಾಸಗಳಲ್ಲಿ ಸ್ಪರ್ಧೆ ವಿಜೃಂಭಿಸುತ್ತದೆ; ಸದ್ದಿರದ ಸಮಸ್ತ ಸಾಧನೆಗಳಲ್ಲಿ ಶ್ರದ್ಧೆ ಪ್ರತಿಬಿಂಬಿತವಾಗುತ್ತದೆ. ಸ್ಪರ್ಧೆ ಮೇಲುನೋಟಕ್ಕೆ ಗೆಲ್ಲುವಂತೆ ಅಥವಾ ಗೆದ್ದಂತೆ ತೋರುತ್ತದೆ; ಶ್ರದ್ಧೆ ಮೇಲುನೋಟಕ್ಕೆ ಸೋತಂತೆ ಅಥವಾ ಸೋಲುವಂತೆ ತೋರುತ್ತದೆ. ಆದರೆ ಕಡೆಗೂ ಗೆಲ್ಲುವುದು ಶ್ರದ್ಧೆ. ಯಾಕೆಂದರೆ ಅದಕ್ಕೆ ಅಪಾರವಾದ ಆತ್ಮವಿಶ್ವಾಸವಿದೆ. ಕಾಯುವ ತಾಳ್ಮೆ ಇದೆ; ಶ್ರೇಯಸ್ಸಿನಲ್ಲಿ ನಂಬಿಕೆ ಇದೆ.

ಚದುರಿದ ಚಿಂತನೆಗಳು : ೨೦೦೦