-೧-

ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆಱವೋಲ್ ಮಂಜುವೋಲ್ ತೋಱಿ ಬೇಗಂ
ಪಿರಿಗುಂ ಶ್ರೀ ರೂಪಲೀಲಾಧನವಿಭವಮಹಾರಾಶಿಗಳ್ ನಿಲ್ಲವಾರ್ಗಂ
ಪರಮಾರ್ಥಂ ಮೆಚ್ಚೆನಾನೀ ಧರಣಿಯೊಳಿರವಾನೆಂದು ಸನ್ಯಾಸನಂಗೆ
ಯ್ದುರುಸತ್ವನ್ ನಂದಿಸೇನ ಪ್ರವರ ಮುನಿವರನ್ ದೇವಲೋಕಕ್ಕೆ ಸಂದಾನ್

ನಂದಿಸೇನ ಎಂಬ ಹೆಸರಿನ ಜೈನ ಯತಿಯೊಬ್ಬ ಈ ಬದುಕಿನ ನಶ್ವರತೆಯನ್ನು ಮನದಂದು, ಐಹಿಕ ಭೋಗಗಳನ್ನು ಮೆಚ್ಚದೆ, ಸನ್ಯಸನ ವಿಧಿಯಿಂದ ದೇವಲೋಕಕ್ಕೆ ಸಂದ ಸಂಗತಿಯನ್ನು ನಿರೂಪಿಸುವ ಈ ಪದ್ಯ ಕ್ರಿ.ಶ.ಏಳನೆಯ ಶತಮಾನದ ಶ್ರವಣಬೆಳುಗೊಳದ ಶಾಸನಗಳಲ್ಲಿ ಒಂದಾಗಿದೆ. ಇದು ಸನ್ಯಸನ ವಿಧಿಯಿಂದ ದೇಹತ್ಯಾಗ ಮಾಡಿದ ಮುನಿಯೊಬ್ಬನನ್ನು ಕುರಿತ ಸಂಗತಿ ಅಥವಾ ವಿಷಯ ನಿರೂಪಣೆ ಮಾತ್ರವಾಗದೆ, ಕಾವ್ಯೋಚಿತವಾದ ಉಪಮೆಗಳ ಮೂಲಕ ಆ ಸಂದರ್ಭವನ್ನು ರಸವತ್ತಾಗಿ ವರ್ಣಿಸುವ ಉದ್ದೇಶವುಳ್ಳದ್ದಾಗಿದೆ. ಈ ಲೋಕದ ಸೌಂದರ್ಯ, ಸಂಪತ್ತು, ವೈಭವಗಳು, ಸುರಚಾಪದ ಹಾಗೆ, ಮಿಂಚಿನ ಬಳ್ಳಿಗಳ ಹಾಗೆ, ಮಂಜಿನ ಹಾಗೆ ನೋಡ ನೋಡುತ್ತಲೇ ಇಲ್ಲವಾಗುತ್ತವೆ ಎಂಬ ಅಧ್ಯಾತ್ಮಿಕ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಯತಿಯೊಬ್ಬನ ಮನಸ್ಸು ಮುಟ್ಟಿದ ನಿಶ್ಚಲ ನಿರ್ಧಾರವನ್ನೂ, ತತ್ಪರಿಣಾಮವಾಗಿ ಆತ ಕೈಕೊಂಡ ಸನ್ಯಸನ ವಿಧಿಯಿಂದ ಆತ ದೇವಲೋಕಕ್ಕೆ ಸಂದ ಸಂಗತಿಯನ್ನೂ ಕ್ರಮಬದ್ಧವಾಗಿ ವರ್ಣಿಸುವುದರ ಮೂಲಕ, ಓದುಗರ ಮನಸ್ಸನ್ನು ಒಂದು ಬಗೆಯ ವಿಸ್ಮಯ ವಿಷಾದದಲ್ಲಿ ತನ್ಮಯಗೊಳಿಸುತ್ತ ಬದುಕಿನ ಬಗೆಗೆ ಬೇರೊಂದು ಎಚ್ಚರವನ್ನು ಹುಟ್ಟಿಸುತ್ತದೆ.

‘ಕವಿರಾಜ ಮಾರ್ಗ’ಪೂರ್ವದ ಮಬ್ಬು ಕವಿದ ಸಾಹಿತ್ಯದ ಹಾದಿಯಲ್ಲಿ ಹಠಾತ್ತನೆ ಹೊಳೆಯುವ ಚಿನ್ನದ ಗೆರೆಯಂಥ ಈ  ಶಾಸನ ಪದ್ಯ ಅಂದಿನ ಕನ್ನಡ ಕಾವ್ಯ ಸಾಧನೆಯ ದಾಖಲೆಯಾಗಿರಬಹುದೇ ಎಂಬ ಸಂಭ್ರಮವನ್ನು ಉಕ್ಕಿಸುತ್ತ, ಬಹುಶಃ ಕನ್ನಡದ ನಿಜವಾದ ಶಾಸನ ಕಾವ್ಯವಾಗಿದೆ. ಯಾಕೆಂದರೆ ಕ್ರಿ.ಶ. ೭೦೦ಕ್ಕೆ ಹಿಂದಿನ ಮತ್ತು ಅದೇ ಕಾಲದ ಹಲವು ಶಾಸನಗಳನ್ನು ಗಮನಿಸಿದರೆ, ಈ ಶಾಸನ ಪದ್ಯದಲ್ಲಿರುವ ಕಾವ್ಯಮಯತೆ ಅವುಗಳಲ್ಲಿಲ್ಲವೆಂದೇ ಹೇಳಬಹುದು. ಅಲ್ಲದೆ, ಈ ಪ್ರಸ್ತುತ ಶಾಸನ ಪದ್ಯದಲ್ಲಿನ ಉಪಮಾಸಾಮಗ್ರಿ, ಮುಂದಿನ ಕನ್ನಡ ಕವಿಗಳ ಅಭಿವ್ಯಕ್ತಿಯ ಮೇಲೆ, ಅದರಲ್ಲೂ  ಬದುಕಿನ ನಶ್ವರ ಮನೋಹರತೆಯನ್ನು ವರ್ಣಿಸುವ ವೈರಾಗ್ಯಪರವಾದ ಭಾವವನ್ನು ಹೇಳುವ ಸಂದರ್ಭಗಳ ಮೇಲೆ ತನ್ನ  ಪ್ರಭಾವವನ್ನು ಒತ್ತಿರುವುದು ಗಮನಿಸತಕ್ಕ ಸಂಗತಿಯಾಗಿದೆ. ಪಂಪನ ಆದಿಪುರಾಣದಲ್ಲಿ ನನ್ನ ಗಮನಕ್ಕೆ ಬಂದಂತೆ ಮೂರು ಕಡೆ, ಶ್ರವಣಬೆಳುಗೊಳದ ಈ ಶಾಸನದ ಉಪಮಾಸಾಮಗ್ರಿ ಬಳಕೆಯಾಗಿದೆ. ವಜ್ರದಂತ ಮಹಾರಾಜನಿಗೆ ಸಂಸಾರದ ಬಗೆಗೆ ವಿರಾಗ ಉಂಟಾದ ಸಂದರ್ಭದಲ್ಲಿ-

ತೃಣ ಶಿಖರಾದ್ಯುಷಿತಾಂಭಃ
ಕಣ ಸಂಚಲಮಮರಚಾಪ ಚಪಲಂ ವಿದ್ಯುತ್
ಕ್ಷಣಿಕಂ ನಿಟ್ಟಿಯೆ ತನು ಭೃ
ದ್ಗಣ ಯೌವನ ರೂಪವಿಭವಭೋಗಾಭೋಗಂ||    (ಅದಿಪುರಾಣಂ: ೪.೭೫)

ಎಂಬ ಮಾತು ಅವನ ಬಾಯಿಂದ ಬರುತ್ತದೆ. ಇದು ವಾಸ್ತವವಾಗಿ ಶ್ರವಣಬೆಳುಗೊಳದ ‘ಸುರಚಾಪಂಬೋಲೆ’ ಎಂಬ ಶಾಸನ ಪದ್ಯದ,  ಪ್ರೌಢವಾದ ರೂಪಾಂತರವೇ ಆಗಿದೆ. ಮತ್ತೆ ಅದೇ ಕೃತಿಯಲ್ಲಿ ನೀಲಾಂಜನೆಯ ನರ್ತನದ ಸಂದರ್ಭದಲ್ಲಿ ಆದಿದೇವನಿಗೆ ವೈರಾಗ್ಯೋದಯವಾದ ಪ್ರಸಂಗದಲ್ಲಿ-

ತನು ರೂಪ ವಿಭವ ಯೌವನ
ಧನ ಸೌಭಾಗ್ಯಾಯುರಾದಿಗಳ್ಗೆಣೆ ಕುಡುಮಿಂ
ಚಿನ ಪೊಳಪು, ಮುಗಿಲನೆೞಲಿಂ
ದ್ರನಬಿಲ್, ಬೊಬ್ಬುಳಿಯುರ್ಬು ಪರ್ಬಿದ ಭೋಗಂ||           (ಅದಿಪುರಾಣಂ: ೯-೪೬)

“ನರಭೋಗಮೆಂಬೀ ಪನಿಪುಲ್ಲ ನಕ್ಕೆ
ತೃಷ್ಣೆ ಪೇಳ್ ಪೋದಪುದೇ’        (ಅದಿಪುರಾಣಂ: ೯-೫೭)

ಎಂಬ ಮಾತುಗಳು ಆದಿದೇವನಿಂದ ಉಕ್ತವಾಗಿದೆ. ಇಲ್ಲಿಯೂ ಕಾಮನ ಬಿಲ್ಲು, ಮಿಂಚಿನ ಹೊಳಪು, ಹುಲ್ಲಮೇಲಿನ ಹನಿ (ಮಂಜು) ಈ ರೂಪಕಗಳೇ, ಬದುಕಿನ ನಶ್ವರತೆಯನ್ನು ಸೂಚಿಸಲು ಬಳಕೆಯಾಗಿವೆ. ಪಂಪನ ನಂತರದ ದುರ್ಗಸಿಂಹನ ‘ಪಂಚತಂತ್ರ’ದಲ್ಲಿ-

ಅನಿಮಿಷಚಾಪದಂತೆ ಸಿರಿ ಶಾರದ ನೀರದ ಕಾಂತಿಯಂತೆ ಯೌ
ವನದೆಸಕಂ ತೃಣಾಗ್ರಗತವಾಃಕಣಿಕಾಗಣದಂತೆ ಸಂದ ಜೀ
ವನಮದರಿಂ ಭವಪ್ರಭವ ಜೀವಿಗೆ ನಿರ್ಮಲ ಧರ್ಮಮಾರ್ಗದೊಳ್
ಮನಮೊಸೆದಾಗಳುಂ ನಡೆಯವೇೞ್ಪುದು ವಿಶ್ವಮೃಗೇಂದ್ರವಲ್ಲಭಾ
(ಪಂಚತಂತ್ರ: ಭೇದ ಪ್ರಕರಣಂ, ಪದ್ಯ ೧೬೬)

ಎಂಬ ಮಾತು ಬರುತ್ತದೆ. ಜನ್ನನ ‘ಅನಂತನಾಥ ಪುರಾಣ’ದಲ್ಲಿ-

‘ದಿವಿಜಚಾಪದಿಂ ಚಾಪಳಂ ಪೊದಳ್ದ ಸಿರಿಯೆಂಬುದು’          (ಅನಂ ಪು. ೯.೨೮)

“ಎಯ್ದೆ ತೋರ್ಪ ಮಿಂಚಿನಪೊಳಪು
….ಮಾನಸರ ಮಾನಸವಾಳ್    (ಅನಂ ಪು. ೯-೨೯)

ಎಂಬ ವರ್ಣನೆ ಬರುತ್ತದೆ. ಮನುಷ್ಯನ ಜೀವನ ಹಾಗೂ ಅದರ ವೈಭವಾದಿಗಳು, ನಶ್ವರವೆಂಬುದನ್ನು ಸಾಂಕೇತಿಸುವ ಕಾಮನಬಿಲ್ಲು (ಸುರಚಾಪ), ಮಿಂಚಿನ ಬಳ್ಳಿ (ವಿದ್ಯುಲ್ಲತೆ) ಮಂಜಿನಹನಿ-ಇತ್ಯಾದಿ ರೂಪಕಗಳು, ಶ್ರವಣಬೆಳುಗೊಳದ ಶಾಸನದಲ್ಲಿ ಯಾವಾಗ ರಮ್ಯವಾದ ಅಭಿವ್ಯಕ್ತಿಯನ್ನು ಪಡೆದುಕೊಂಡವೋ, ಆ ಆಭಿವ್ಯಕ್ತಿಯ ಸೊಗಸು, ಮುಂದಿನ ಕನ್ನಡದ ಪ್ರಮುಖ ಕವಿಗಳಾದ ಪಂಪ, ದುರ್ಗಸಿಂಹ ಮತ್ತು ಜನ್ನ ಇಂಥ ಕವಿಗಳ ಅಭಿವ್ಯಕ್ತಿಯಲ್ಲೂ ಅನುರಣನಗೊಂಡಿವೆಯೆಂಬುದನ್ನು ಗಮನಿಸಿದರೆ, ಈ ಪ್ರಸ್ತುತ ಶಾಸನ ಪದ್ಯ ಸಾಹಿತ್ಯದ ದೃಷ್ಟಿಯಿಂದ ಎಷ್ಟು ಮಹತ್ತಾಗಿದೆ ಎಂಬುದು ವಿಶೇಷದ ಸಂಗತಿಯಾಗಿದೆ. “ಶಾಸನಗಳು ಕನ್ನಡ ಸಾಹಿತ್ಯದ ತಲಕಾವೇರಿ”[1] ಎಂಬ ಮಾತನ್ನು ಇಂಥ ಶಾಸನಗಳು ಸಮರ್ಥಿಸುತ್ತವೆ.

ಕನ್ನಡ ನಾಡಿನ ಶಾಸನಗಳನ್ನು ಅಧ್ಯಯನ ಮಾಡುವವರ ಪಾಲಿಗೆ ಶ್ರವಣಬೆಳುಗೊಳವು ಶಾಸನದ ಗಣಿಗಳಲ್ಲಿ ಮುಖ್ಯವಾದುದು ಎನ್ನಬಹುದು. ಶ್ರವಣಬೆಳುಗೊಳ ಹಾಗೂ ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ದೊರೆತ ಹಾಗೂ ಉಲ್ಲೇಖಿತವಾದ ಕನ್ನಡ ಹಾಗೂ ಸಂಸ್ಕೃತ ಶಾಸನಗಳ ಸಂಖ್ಯೆ ಐನೂರ ಎಪ್ಪತ್ಮೂರು. ಸಮೀಪದ ಹಳ್ಳಿಗಳಲ್ಲಿ ದೊರೆತ  ಶಾಸನಗಳ ಸಂಖ್ಯೆ ಒಟ್ಟು ಐವತ್ತು. ಇವುಗಳನ್ನು ಬಿಟ್ಟರೆ ಶ್ರವಣಬೆಳುಗೊಳವೊಂದರಲ್ಲೇ ಇರುವ ಶಾಸನಗಳ ಸಂಖ್ಯೆ ಐನೂರ ಇಪ್ಪತ್ಮೂರು. ಇವುಗಳು ಕ್ರಿ.ಶ. ಆರು-ಏಳನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗಿನ ಕಾಲದವುಗಳು. ಅಂದರೆ ಸುಮಾರು ೧೩೦೦ ವರ್ಷಗಳ ಅವಧಿಯೊಳಗಿನ, ಶ್ರವಣಬೆಳುಗೊಳದ ಪ್ರದೇಶವನ್ನು ಒಳಗೊಂಡ ರಾಜ್ಯಗಳ, ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಈ ಶಾಸನಗಳು ಹಿಡಿದಿರಿಸಿಕೊಂಡಿವೆ. ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು ಮತ್ತು ಮೈಸೂರಿನ ರಾಜಮನೆತನದವರು ಈ ಎಲ್ಲ ರಾಜವಂಶಗಳವರು ಬರೆಯಿಸಿದ ಈ ಶಾಸನಗಳು, ಆಯಾ ರಾಜರ ಧರ್ಮಶ್ರದ್ಧೆ, ವೀರ, ತ್ಯಾಗ, ದಾನ ಹಾಗೂ ದೇವಾಲಯ ನಿರ್ಮಾಣ ಮತ್ತು ವಿವಿಧ ಜೈನ ಯತಿಗಳೊಂದಿಗೆ ಇದ್ದ ಸಂಬಂಧ, ಇವುಗಳನ್ನು  ಉಲ್ಲೇಖಿಸುವುದರ ಜತೆಗೆ, ಧರ್ಮದ ಹೆಸರಿನಲ್ಲಿ ಮುಡಿಪಿದ ಸಂಗತಿಗಳನ್ನು ಸಮೃದ್ಧವಾಗಿ ದಾಖಲಿಸುತ್ತವೆ.

ಶಾಸನಗಳು ರಚಿತವಾದದ್ದು ಮೂಲತಃ ಚಾರಿತ್ರಿಕ ಉದ್ದೇಶದಿಂದ; ಅಂದರೆ, ಸಂಗತಿಗಳನ್ನು ದಾಖಲಿಸುವುದಕ್ಕೆ. ಅವುಗಳು ಸಾಹಿತ್ಯವಾಗಬೇಕು, ಸಾಹಿತ್ಯವಾಗಲಿ ಎಂದು ರಚಿತವಾದವುಗಳಲ್ಲ. ಆದರೂ ಎಷ್ಟೋ ವೇಳೆ, ಅವುಗಳನ್ನು ಬರೆಸಿದ ಅಥವಾ ಬರೆದ ವ್ಯಕ್ತಿಯ ಮನೋಧರ್ಮದ ಅಥವಾ ಸಾಮರ್ಥ್ಯದ ಕಾರಣದಿಂದ, ಶಾಸನಗಳಲ್ಲಿ ಎಷ್ಟೋ ವೇಳೆ ಸಾಹಿತ್ಯದ ಸೊಗಸು ಅಥವಾ ಕಾವ್ಯಗುಣ ಕಾಣಿಸಿಕೊಳ್ಳುವುದುಂಟು. ಹೀಗೆ ‘ಕಾವ್ಯ ಗುಣ’ ಕಾಣಿಸಿಕೊಳ್ಳಲು ಮೊದಲ ಕಾರಣ, ಯಾವುದೇ ಒಂದು ವಿಷಯವನ್ನು ಕುರಿತು, ಭಾಷೆಯ ಮೂಲಕ ಹೇಳುವಾಗ, ಹಾಗೆ ಹೇಳುವ ವಿಧಾನ, ಕೇವಲ ವಿಷಯ ನಿರೂಪಣೆಯಷ್ಟರಲ್ಲೇ ಪರ‍್ಯವಸಾನವಾಗದೆ, ಅದೊಂದು ಭಾವನೆಯ ವರ್ಣನಾ ಕ್ರಮವಾದಾಗ, ಅದಕ್ಕೆ ವರ್ಣಕತ್ವ ಅಥವಾ ಕವಿತೆಯ ಬಣ್ಣ ಬಂದು ಸೇರಿಕೊಂಡು ಬಿಡುವುದುಂಟು. ವಾರ್ತೆಯ ಹಾಗೂ ವರದಿಯ ನೆಲೆಯನ್ನು ಮೀರಿದಾಗ, ಮತ್ತು ಅದು ಆಸ್ವಾದ ಹಾಗೂ ಪರಿಭಾವನೆಯ ವಿಷಯವಾದಾಗ ಅದು ಕಾವ್ಯದ ಪ್ರಾಂತ್ಯದೊಳಗೆ ಪ್ರವೇಶಿಸಿರುತ್ತದೆ.

ಕಾವ್ಯಗುಣವನ್ನು, ಸಾಮಾನ್ಯವಾಗಿ ಗುರುತಿಸಬಹುದಾದ್ದು, ಅಭಿವ್ಯಕ್ತಿಗೆ ಒದಗುವ ಭಾಷೆಯ ಛಂದೋಬದ್ಧತೆಯ ಸೊಗಸಿನಿಂದ. ಆದರೆ ಕಾವ್ಯಗುಣ ಕೇವಲ ಛಂದೋಬದ್ಧ- ವಾಗಿರುವಿಕೆಯಲ್ಲಿ ಇಲ್ಲ; ಮತ್ತು ಹಿಂದೆ ಎಲ್ಲವನ್ನೂ ಛಂದೋಬದ್ಧವಾಗಿಯೆ ಬರೆಯುತ್ತಿದ್ದುದು ರೂಢಿ. ಮಸ್ತಕವೇ ಪುಸ್ತಕವಾಗಬೇಕಾಗಿದ್ದ ಪರಿಸ್ಥಿತಿಯಲ್ಲಿ ಎಲ್ಲ ವಿಷಯಗಳನ್ನೂ ಸುಲಭವಾಗಿ ನೆನಪಿಟ್ಟುಕೊಳ್ಳಲು, ಮತ್ತು ಬಾಯಿಂದ ಬಾಯಿಗೆ ರವಾನಿಸಲು ಛಂದೋಬದ್ಧವಾದ ‘ಪದ್ಯರೂಪ’ ಅನಿವಾರ‍್ಯವಾಗಿತ್ತೆಂಬುದನ್ನು ನಾವು ಮರೆಯಬಾರದು. ಆದರೆ, ಈ ಛಂದೋಬದ್ಧವಾದ ಬರವಣಿಗೆಯಲ್ಲಿ, ಯಾವುದರಲ್ಲಿ ಕಾವ್ಯಗುಣವಿದೆ ಮತ್ತು ಯಾವುದರಲ್ಲಿ ಕಾವ್ಯಗುಣವಿಲ್ಲ ಎಂಬುದನ್ನು ಗುರುತಿಸುವುದು ಕಷ್ಟವೇನಲ್ಲ.  ಒಂದು ನಿದರ್ಶನದ ಮೂಲಕ ಈ ಮಾತನ್ನು  ಸ್ಪಷ್ಟಪಡಿಸಬಹುದು: ಹೊಯ್ಸಳ ರಾಜ ವಿಷ್ಣುವರ್ಧನನ ದಂಡನಾಯಕ ಗಂಗರಾಜನು-

ಗಂಗವಾಡಿಯ ಬಸದಿಗಳೆನಿತೊಳವನಿತುಮಂ ತಾನೆಯ್ದೆ ಪೊಸಯಿಸಿದಂ
ಗಂಗವಾಡಿಯ ಗೊಮ್ಮಟದೇವರ್ಗೆ ಸುತ್ತಾಲಯಮನೆಯ್ದೆ ಮಾಡಿಸಿದಂ
[2]

ಎನ್ನುವ ಲಯಬದ್ಧವಾದ ರಚನೆ, ಗಂಗರಾಜ ಮಾಡಿಸಿ ಬಸದಿಗಳ ಜೀರ್ಣೋದ್ಧಾರವನ್ನೂ, ಗೊಮ್ಮಟದೇವರ ಸುತ್ತ ಪ್ರಾಕಾರವನ್ನು ಮಾಡಿಸಿದ್ದನ್ನೂ ಅತ್ಯಂತ ‘ನಿರ್ಭಾವ’ವಾಗಿ, ಒಂದು ಸಂಗತಿಯನ್ನು ತಿಳಿಸಲೆಂಬಂತೆ ಹೇಳುತ್ತದೆ ಅಷ್ಟೇ. ಆದರೆ, ವಿನಯಾದಿತ್ಯನು ಒಂದು ಜಿನಮಂದಿರವನ್ನು ಕಟ್ಟಿಸಿದ ಸಂಗತಿ ಹೀಗಿದೆ:

ಇಟ್ಟಿಗೆಗೆಂದಗೞ್ದ ಕುೞಿಗಳ್ ಕೆಱೆಯಾದವು ಕಲ್ಗೆಗೊಂಡ
ಪೆರ್ವೆಟ್ಟ ಧರಾತಳಕ್ಕೆ ಸರಿಯಾದವು ಸುಣ್ಣದ ಭಂಡಿ ಬಂದ ಪೆ
ರ್ವಟ್ಟೆಯೆ ಪಳ್ಳಮಾದುವೆನೆ ಮಾಡಿಸಿದಂ ಜಿನರಾಜಗೇಹಮಂ
ನೆಟ್ಟನೆ ಪೊಯ್ಸಳೇಶನೆನೆ ಬಣ್ಣಿಪರಾರ್ ಮಲೆರಾಜರಾಜನಂ
[3]

ವಿನಯಾದಿತ್ಯನು ಬಹು ದೊಡ್ಡ ಬಸದಿಯೊಂದನ್ನು ಕಟ್ಟಿಸಿದನೆಂಬುದು ಈ ಪದ್ಯ ಹೇಳಲಾಶಿಸುತ್ತಿರುವ ಚಾರಿತ್ರಿಕ ಸಂಗತಿ. ಆದರೆ, ಹೇಳಿದ ರೀತಿ ಅದ್ಭುತವಾಗಿದೆ : ಈ ಬಸದಿಯನ್ನು ಕಟ್ಟಿಸಲೆಂದು, ಇಟ್ಟಿಗೆ ಮಾಡಲು ಅಗೆದದ್ದರಿಂದ ಉಂಟಾದ ಗುಂಡಿಗಳೆಲ್ಲಾ ಕೆರೆಗಳಾದುವಂತೆ; ಕಟ್ಟಡದ ಕಲ್ಲುಗಳಿಗಾಗಿ ದೊಡ್ಡ ದೊಡ್ಡ ಬೆಟ್ಟಗಳನ್ನೆ ಕಡಿದು ತೆಗೆದಾಗ, ಅವು ನೆಲಸಮವಾದುವಂತೆ; ಈ ಬಸದಿಗಾಗಿ ಸುಣ್ಣವನ್ನು ಹೇರಿಕೊಂಡು ಬಂದ ಗಾಡಿಗಳ ದಾರಿಯೆಲ್ಲಾ ಹಳ್ಳವಾಗಿ  ಹೋದುವಂತೆ. ಎಷ್ಟು ಮಣ್ಣು, ಎಷ್ಟು ಇಟ್ಟಿಗೆ, ಎಷ್ಟು ಕಲ್ಲು, ಎಷ್ಟು ಸುಣ್ಣ- ಈ ಬಸದಿಯ ನಿರ್ಮಾಣಕ್ಕೆ ಒದಗಿರಬಹುದು; ಇನ್ನು ಹೀಗೆ ಕಟ್ಟಿಸಿದ ಬಸದಿ  ಎಷ್ಟು ದೊಡ್ಡದಿರಬಹುದು -ಎಂಬ ವಿಸ್ಮಯದಲ್ಲಿ ಮನಸ್ಸು ಮಗ್ನವಾಗುತ್ತದೆ.  ಒಟ್ಟಿನಲ್ಲಿ ಅತಿಶಯದ ಅಂಶ, ವಿಸ್ಮಯದ ಅಂಶಗಳು ಪ್ರಧಾನವಾಗಿದ್ದು, ಕೇವಲ ವಿಷಯವೊಂದನ್ನು ತಿಳಿದುಕೊಂಡಂತಹ ತೃಪ್ತಿಗೆ ಮೀರಿದ ನಿಲುವಿನಲ್ಲಿ ಮನಸ್ಸನ್ನು ಪರಿಭಾವನೆಗೆ ನಿಲ್ಲಿಸಿಕೊಂಡು, ಒಂದು ಭಾವತೀವ್ರತೆಯ ಅನುಭವದಲ್ಲೋ ಅಥವಾ ಬದುಕನ್ನು ಕುರಿತ ಚಿಂತನೆಗೋ ಮುಟ್ಟಿಸುವುದು ಕಾವ್ಯಗುಣದ ಲಕ್ಷಣ ಎನ್ನಬಹುದು. ಮಾಸ್ತಿಯವರ ಮಾತಿನಲ್ಲಿ ಹೇಳುವುದಾದರೆ ‘ಮಾತಿನ ಸೊಗಸು, ರೀತಿಯ ಸೊಗಸು, ಭಾವದ ಸೊಗಸು ಮತ್ತು ಅರ್ಥದ ಸೊಗಸು’[4] ಈ ನಾಲ್ಕೂ ಬಗೆಯ ಸೊಗಸುಗಳು ಎಲ್ಲಿ ಮೇಳವಿಸಿಕೊಂಡಿರುತ್ತವೊ ಅಲ್ಲಿ ಕಾವ್ಯಗುಣ ತಾನೇ ತಾನಾಗಿರುತ್ತದೆ.

ಕನ್ನಡ ಕಾವ್ಯಗಳು ಮೂಲತಃ ಸಾಹಿತ್ಯ ಕ್ಷೇತ್ರಕ್ಕೆ ಸೇರಿದವುಗಳಾದರೂ, ಆನುಷಂಗಿಕವಾಗಿ ಅವು ಆಯಾ ಕಾಲದ ಚರಿತ್ರೆಗೂ ಸಲ್ಲುವಂತೆ, ಶಾಸನಗಳು ಮೂಲತಃ ಚರಿತ್ರೆಯ ಕ್ಷೇತ್ರಕ್ಕೆ ಸೇರಿದಾದವುಗಳಾದರೂ, ಆನುಷಂಗಿಕವಾಗಿ ಕಾವ್ಯ ಅಥವಾ ಸಾಹಿತ್ಯಕ್ಕೂ ಕೊಂಚಮಟ್ಟಿಗೆ ಸಲ್ಲುವ ಲಕ್ಷಣಗಳನ್ನು ಪಡೆದುಕೊಂಡಿವೆ. ಕಾವ್ಯಗಳಿಗೂ ಶಾಸನಗಳಿಗೂ ಇರುವ ಬಹುಮುಖ್ಯವಾದ ವ್ಯತ್ಯಾಸವೆಂದರೆ, ಶಾಸನಗಳ ರಚನೆ ಸಾಂದರ್ಭಿಕವಾದದ್ದು; ಅಂದರೆ, ದೇವಾಲಯ ನಿರ್ಮಾಣ, ದಾನ-ದತ್ತಿಗಳನ್ನು ಬಿಡುವುದು, ನಿಸಿದಿಗೆ, ವೀರಗಲ್ಲುಗಳನ್ನು ಸ್ಥಾಪಿಸುವುದು ಇತ್ಯಾದಿ ಧಾರ್ಮಿಕ ಕ್ರಿಯೆ (Ritual)ಯ ಸಂದರ್ಭಕ್ಕೆ ಸಂಬಂಧಪಟ್ಟದ್ದು. ಅವು ಬಹುಮಟ್ಟಿಗೆ ‘ನಿರ್ದೇಶಿತ’ ರಚನೆಗಳು. ಬಹುಶಃ ಇಲ್ಲಿ ಮೂರು ಹಂತಗಳಲ್ಲಿ ಈ ಕ್ರಿಯೆ ನಡೆದಂತೆ ತೋರುತ್ತದೆ: ಒಂದು, ಶಾಸನವನ್ನು ಕಡೆಯಿಸಬೇಕೆಂಬ ಸಂಕಲ್ಪವುಳ್ಳ ‘ಪ್ರಭು ಶಕ್ತಿ’. ಎರಡನೆಯದು, ಅದನ್ನರಿತು ಅಥವಾ ಆದರ ನಿರ್ದೇಶನದ ಮೇರೆಗೆ ಆ ಸಂದರ್ಭದ ವಸ್ತುವಿಗೆ ತಕ್ಕ ಪದ ಸಂಯೋಜನೆಯ ಮೂಲಕ ಶಾಸನದ ಪಾಠವನ್ನು ಸಿದ್ದಪಡಿಸುವ ವ್ಯಕ್ತಿ; ಈತನನ್ನು ಶಾಸನ ಕವಿ ಎನ್ನಬಹುದು. ಮೂರನೆಯವನು, ಈ ಶಾಸನ ಪಾಠವನ್ನು ಕಲ್ಲಿನ ಮೇಲೆ ಕಂಡರಿಸುವ ರೂವಾರಿ. ಹೀಗೆ ಧಾರ್ಮಿಕ ವಿಧಿಯೆಂಬಂತೆ ನಡೆಯುವ ಈ ಕ್ರಿಯೆಯಲ್ಲಿ ತನಗೆ ತಾನೇ, ತನಗೆ ರುಚಿಸಿದ ವಸ್ತುವೊಂದನ್ನಾರಿಸಿಕೊಂಡು ಏಕಾಂತದಲ್ಲಿ ಕುಳಿತು ಕೃತಿರಚನೆ ಮಾಡುವ ಕವಿಯ ಕಾವ್ಯದಲ್ಲಿರುವ ‘ಕಾವ್ಯಗುಣ’ ಇರುವುದು ಸಾಧ್ಯವಿಲ್ಲ. ಕವಿಯಾದವನು ತನ್ನನ್ನು ನಿಯಂತ್ರಿಸುವ ಪ್ರಭುಶಕ್ತಿಗೆ ಎಷ್ಟೇ ನಿಷ್ಠನಾಗಿದ್ದರೂ ಬರೆಯುವ ಹೊತ್ತಿನಲ್ಲಿ  ಆತ ಆ ಬದ್ಧತೆಯನ್ನೂ ಮೀರಿ, ತಾನು ಆರಿಸಿಕೊಂಡ ವಸ್ತು ಹಾಗೂ ರಸಕ್ಕೆ ಅಧೀನವಾಗುವುದ ರಿಂದಲೇ, ಆತ ತನ್ನ ಬರವಣಿಗೆಯಲ್ಲಿ ಕಾವ್ಯತ್ವವನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದರೆ ಶಾಸನ ರಚನೆಯ ಕ್ರಿಯೆ ಹೀಗಿಲ್ಲ. ಅದು ಸಾಂದರ್ಭಿಕವಾದದ್ದು, ನಿರ್ದೇಶಿತವಾದದ್ದು ಮತ್ತು ತನ್ನ ಅಭಿವ್ಯಕ್ತಿಗೆ ಆಶ್ರಯಿಸಬೇಕಾದ ಮಾಧ್ಯಮದ ಪರಿಮಿತಿಯಿಂದಲೂ (ಕಲ್ಲು, ತಾಮ್ರಪಟ ಇತ್ಯಾದಿ) ನಿರ್ಬಂಧಿತವಾದದ್ದು. ಇಂಥ ಇಕ್ಕಟ್ಟುಗಳ ಮೂಲಕ ಲಿಖಿತವಾಗಬೇಕಾದ ಶಾಸನದ ಬರಹಗಳಲ್ಲಿ ಏನಾದರೂ ಕಾವ್ಯಗುಣ ಕಂಡುಬಂದಿದ್ದರೆ, ಅದು ಶಾಸನ ಬರೆದವನ ಮನೋಧರ್ಮ ಹಾಗೂ ರಚನಾ ಸಾಮರ್ಥ್ಯದ ಪರಿಣಾಮವಲ್ಲದೆ ಬೇರೆ ಅಲ್ಲ. ಶಾಸನಗಳನ್ನು ಬರೆದವರೂ ಎಷ್ಟೋ ವೇಳೆ, ಕಾವ್ಯ ಸಂಸ್ಕಾರದಿಂದ ಮನಸ್ಸನ್ನು ಹದಗೊಳಿಸಿಕೊಂಡವರೋ, ಸ್ವತಃ ಕವಿಗಳೋ ಆಗಿರುವ ಸಾಧ್ಯತೆ ಇರುವುದರಿಂದ, ಅವರು ಭಾಷಿಕ ಸಂದರ್ಭದಲ್ಲೂ ಕೆಲಸ ಮಾಡುತ್ತಿದ್ದುದರಿಂದ, ಹೇಳುವ ವಿಷಯವನ್ನು ತಮಗೆ ಹಿನ್ನೆಲೆಯಾದ ಕಾವ್ಯ ಪರಂಪರೆಯ ಭಾಷಾಸಾಮಗ್ರಿಯಿಂದ ಕಟ್ಟಿಕೊಡುವ ಕಲೆಗಾರಿಕೆಯನ್ನು ತಕ್ಕಮಟ್ಟಿಗೆ ಪ್ರಕಟಿಸಿದ್ದಾರೆ. ಇದರಿಂದಾಗಿ ಶಾಸನಗಳಲ್ಲಿ ಕಾವ್ಯಗುಣ ಪ್ರಾಸಂಗಿಕವಾಗಿ ಕಾಣಿಸಿಕೊಂಡಿದೆ. ಹೀಗೆ ಪ್ರಾಸಂಗಿಕವಾಗಿ ಪ್ರಕಟವಾಗಿರುವ ಕಾವ್ಯಗುಣ ಕಡೆಗಣಿಸುವಂಥಾದ್ದೇನೂ ಅಲ್ಲ. ಉತ್ತಮ ಕಾವ್ಯದ ಯಾವುದೇ ಭಾಗದಿಂದ ಒದಗುವ ಆಹ್ಲಾದವಿಶೇಷ, ಕೆಲವು ಶಾಸನಗಳನ್ನು ಓದುವಾಗ ಖಂಡಿತ ಒದಗುತ್ತದೆ. ಶ್ರವಣಬೆಳುಗೊಳದ ಎಷ್ಟೋ ಕನ್ನಡ ಶಾಸನಗಳು ಈ ಮಾತಿಗೆ ನಿದರ್ಶನವಾಗಿದೆ.

-೨-

ಶ್ರವಣಬೆಳುಗೊಳದ ಶಾಸನಗಳ ವಸ್ತುವನ್ನು ಸ್ಥೂಲವಾಗಿ ಮೂರು ಬಗೆ ಎಂದು ವಿಂಗಡಿಸಬಹುದು. ಒಂದು, ಜಿನಮುನಿಗಳನ್ನು ಕುರಿತ ಶಾಸನಗಳು. ಇವುಗಳಲ್ಲಿ ಜೈನ ಆಚಾರ್ಯರುಗಳ ವಿದ್ವತ್ತು, ತಪಸ್ಸು ಹಾಗೂ ಅವರು ಪರೀಷಹಗಳನ್ನು ಜಯಿಸಿ ಸನ್ಯಸನವಿಧಿಯಿಂದ ಮುಡುಪಿದ ಸಂಗತಿ -ಇವುಗಳು ಮುಖ್ಯವಾಗುತ್ತವೆ. ಎರಡನೆಯವು; ರಾಜರು, ಮಂತ್ರಿಗಳು, ಹೆಗ್ಗಡೆಗಳು ಹಾಗೂ ದಂಡನಾಯಕರನ್ನು ಕುರಿತವು. ಇವರ ರಣವೀರತೆ, ದಿಗ್ವಿಜಯಗಳು, ದಾನ-ಧರ್ಮ-ದತ್ತಿಗಳನ್ನು ಬಿಟ್ಟು ದೇವಾಲಯಗಳನ್ನು ನಿರ್ಮಿಸಿದ ಮತ್ತು ಧಾರ್ಮಿಕ ವಿಧಿಯಿಂದ ಮುಡುಪಿದ ಸಂಗತಿಗಳು ಉಲ್ಲೇಖಿತವಾಗಿವೆ. ಮೂರನೆಯವು, ಸ್ತ್ರೀಯರನ್ನು ಕುರಿತವು. ಈ ಸ್ತ್ರೀಯರು ಮುಖ್ಯವಾಗಿ ರಾಜಪರಿವಾರಕ್ಕೆ ಸೇರಿದವರು. ಇವರ ರೂಪ ಗುಣ ಚಾರಿತ್ರ್ಯ ವರ್ಣನೆಗಳು, ಅವರು ಬಿಟ್ಟ ದಾನ-ದತ್ತಿಗಳು ಹಾಗೂ ಸಲ್ಲೇಖನಾದಿಗಳಿಂದ ಮುಡುಪಿದ ಸಂಗತಿಗಳೂ ಇಲ್ಲಿ ಕಾಣಿಸಿಕೊಳ್ಳುತ್ತವೆ.

ಶ್ರವಣಬೆಳುಗೊಳದ ಶಾಸನಗಳ ಒಂದು ವೈಶಿಷ್ಟ್ಯವೆಂದರೆ, ಇಲ್ಲಿನವು ಬಹುಮಟ್ಟಿಗೆ ನಿಷಿಧಿ ಶಾಸನಗಳಾಗಿವೆ. ಪರಮ ವೈರಾಗ್ಯಮೂರ್ತಿಯಾದ ಬಾಹುಬಲಿಯ ಪ್ರತಿಮೆಯ ಸನ್ನಿಧಿಯಲ್ಲಿ ಸನ್ಯಾಸನ ವಿಧಿ ಹಾಗೂ ಸಲ್ಲೇಖನ ವ್ರತದಿಂದ ದೇಹತ್ಯಾಗ ಮಾಡುವುದು  ತಮ್ಮಬದುಕಿನ ಪರಮಗುರಿ ಎಂದು ಭಾವಿಸಿದ್ದರಿಂದ, “ಸಮೀಪದ ಮತ್ತು ದೂರದ ಪ್ರದೇಶಗಳಿಂದ ಅನೇಕ ಜೈನ ಯತಿಗಳು ಮತ್ತು ಲೌಕಿಕ ಶಿಷ್ಯರು ಸಹ ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆಯಲು ಈ ಕ್ಷೇತ್ರಕ್ಕೆ ಬರುತ್ತಿದ್ದರು.”[5] ಹೀಗಾಗಿ ಇಲ್ಲಿ ಇಷ್ಟೊಂದು ನಿಷಿಧಿ ಶಾಸನಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿರುವ ನಿಷಿಧಿ ಶಾಸನಗಳ ಸಂಖ್ಯೆ೧೦೮. ಇವುಗಳಲ್ಲಿ “ಸುಮಾರು ೨೨ ಶಾಸನಗಳು ಸ್ತ್ರೀಯರಿಗೆ, ಉಳಿದವು ಪುರುಷರಿಗೆ ಸಂಬಂಧಿಸಿದವು. ಇವುಗಳಲ್ಲಿ ೬೦ ಶಾಸನಗಳು ಮುನಿಗಳ, ಗುರುಗಳ ಮರಣವನ್ನು, ಸುಮಾರು ೧೦ ಶಾಸನಗಳು ಅರಸರ, ಮಂತ್ರಿಗಳ ಮರಣವನ್ನು, ಸುಮಾರು ೯ ಸಾಮಾನ್ಯರ ಮರಣವನ್ನು ಅರುಹುತ್ತವೆ.”[6] ಶ್ರವಣಬೆಳುಗೊಳದ ಶಾಸನಗಳಲ್ಲಿ ಕಾವ್ಯಗುಣವನ್ನು ಗಮನಿಸತಕ್ಕವರು, ಮುಖ್ಯವಾಗಿ ಈ ನಿಷಿಧಿ ಶಾಸನಗಳನ್ನು ನೋಡಬೇಕು. ಅವುಗಳು ಕಡೆದು ನಿಲ್ಲಿಸುವ ಬಿಡಿಬಿಡಿಯಾದ ವ್ಯಕ್ತಿ ಚಿತ್ರಗಳು ಮತ್ತು ಅವುಗಳಲ್ಲಿರುವ ಕಾವ್ಯಗುಣ ವಿಶೇಷ ರೀತಿಯದ್ದಾಗಿದೆ.[7]

ಜಿನಮುನಿಗಳು ಮತ್ತು ಜೈನ ಆಚಾರ್ಯರುಗಳನ್ನು ಕುರಿತ ಶಾಸನಗಳು ಮುಖ್ಯವಾಗಿ ಅವರ ತಪಸ್ಸು, ವಿದ್ವತ್ತು ಇತ್ಯಾದಿಗಳನ್ನು ಪ್ರಸ್ತಾಪಿಸುತ್ತವೆ. ಕೆಲವು ಕಂತಿಯರ ಉಲ್ಲೇಖಗಳ ಜತೆಗೆ, ಮಾಸೇನರು, ಕಳಂತೂರಿನ ಗೊರವ, ನಂದಿಸೇನ, ಮಾಘನಂದಿ, ನಯಕೀರ್ತಿ, ಗೋಪನಂದಿ, ದಿವಾಕರ ನಂದಿ, ಮೇಘಚಂದ್ರ, ಶುಭಕೀರ್ತಿ, ದೇವಕೀರ್ತಿ, ವರ್ಧಮಾನ, ಮಳಧಾರಿ ದೇವ, ಶ್ರುತಕೀರ್ತಿ- ಮತ್ತಿತರ ವಿಷಯಗಳು ಪ್ರಸ್ತಾಪಿತವಾಗಿವೆ.

ಜಿನಮುನಿಗಳ ನಿಸಿದಿಗೆಗೆ ಸಂಬಂಧಿಸಿದ ಹಲವು ಶಾಸನ ಪದ್ಯಗಳು, ತಮಗೆ ತಾವೇ ಸೊಗಸಾದ ಬಿಡಿ ಬಿಡಿ ಕಾವ್ಯಗಳಂತಿವೆ. ಇವು ಜೈನ ಕಾವ್ಯದ ಸಂದರ್ಭದಲ್ಲಿ ಬಂದಿದ್ದರೆ, ಆ ಸಂದರ್ಭದ ಮಹಿಮೆಯಿಂದ ಇಡೀ ಕಾವ್ಯದ ಒಂದು ವರ್ಣನಾಭಾಗ ವಾಗಬಹುದಾದಂಥವು, ಇಲ್ಲಿ ಬಿಡಿ ಬಿಡಿ ಚಿತ್ರಗಳಾಗಿವೆ, ಅಷ್ಟೆ. ಈ ಚಿತ್ರಗಳಲ್ಲಿ ಕಂಡುಬರುವ ಶಾಂತರಸವ್ಯಂಜಕವಾದ ಅಭಿವ್ಯಕ್ತಿಗಳು ಗಮನಿಸತಕ್ಕವಾಗಿವೆ; ಕೊಲ್ಲಾಪುರದ ಮಾಘನಂದಿ ಯತಿಗಳಿಂದ, ಕೊಂಡಕುಂದಾನ್ವಯಕ್ಕೆ ಒದಗಿದ ಶೋಭೆ-

ಎಳಮಾವಿಂ ಬನಂ ಅಬ್ಜದಿಂ ತಿಳಿಗೊಳಂ ಮಾಣಿಕ್ಯದಿಂ ಮಂಡನಾ
ವಳಿ ತಾರಾಧಿಪನಿಂ ನಭಂ ಶುಭದಮಾಗಿರ್ಪಂತಿರಿರ್ದತ್ತು ನಿ
ರ್ಮಳಮೀಗಳ್
[8]

ಹೀಗಿತ್ತಂತೆ. ಇಲ್ಲಿ ಕಾಣುವ ಒಂದೊಂದು ಉಪಮೆಯೂ, ರಮ್ಯತೆ, ಸ್ವಚ್ಛತೆ, ಕಾಂತಿ ಮತ್ತು ಬೆಳುಗುಗಳನ್ನು ಧ್ವನಿಸುತ್ತ, ವ್ಯಕ್ತಿತ್ವವೊಂದರ ಪ್ರಸನ್ನತೆಯನ್ನು ಬಿಂಬಿಸುತ್ತದೆ. ದಿವಾಕರನಂದಿ ಮತ್ತು ಮೇಘಚಂದ್ರ ವ್ರತಿಗಳನ್ನು ಕುರಿತ ವರ್ಣನೆಗಳಲ್ಲಿ ಶಾಸನಕವಿ ಆಯಾ ವ್ಯಕ್ತಿಗಳ ಹೆಸರಿನಲ್ಲಿರುವ ‘ದಿವಾಕರ’ ಮತ್ತು ‘ಮೇಘಚಂದ್ರ’ ಇವು ಸೂಚಿಸುವ ಸೂರ‍್ಯ ಹಾಗೂ ಚಂದ್ರ, ಇವುಗಳ ಆಧಾರದ ಮೇಲೆ ತನ್ನ ಕಲ್ಪನೆಯನ್ನು ಹರಿಸಿರುವ ರೀತಿ ಚಮತ್ಕಾರಿಕವಾಗಿದೆ. ದಿವಾಕರನಂದಿಯ ಮಾತುಗಳು, ಸೂರ‍್ಯೋದಯದಂತೆ ಭೂಭಾಗವನ್ನು ಬೆಳುಗಿದ ವರ್ಣನೆ ಹೀಗಿದೆ:

ವರಭವ್ಯಾನನ ಪದಮುಳ್ಳಲರಲ್, ಅಜ್ಞಾನೀಕ ನೇತ್ರೋತ್ಪಳಂ
ಕೊರಗಲ್, ಪಾಪ ತಮಸ್ತಮಂ ಪರೆಯಲ್, ಎತ್ತಂ ಜೈನ ಮಾರ್ಗಾಮಳಾಂ
ಬರಂ ಅತ್ಯುಜ್ವಲಮಾಗಲ್ ಏಂ ಬೆಳುಗಿತೋ ಭೂಭಾಗಮಂ ಶ್ರೀದಿವಾ
ಕರಣಂದಿ ಪ್ರತಿವಾಕ್‌ದಿವಾಕರಕರಾಕಾರಂಬೊಲುರ್ವೀನುತಂ”
[9]

ಸೂರ‍್ಯೋದಯವಾದಾಗ, ಏನೇನಾಗುತ್ತದೋ, ಅದೇ, ದಿವಾಕರನಂದಿಯ ವಾಕ್ ದಿವಾಕರ ಕಿರಣಗಳಿಂದ ಆಯಿತೆಂಬ ಈ ವರ್ಣನೆ ತನ್ನ ಚಮತ್ಕಾರದಿಂದ ರಂಜಿಸುತ್ತದೆ. ಹಾಗೆಯೇ ಮೇಘಚಂದ್ರ ವ್ರತಿಗಳ ಕೀರ್ತಿಪ್ರಕಾಶವನ್ನು ಕುರಿತು,

ಇದೆ ಹಂಸೀಬೃಂದಂ ಈಂಟಲ್ ಬಗೆದಪುದು, ಚಕೋರೀಚಯಂ ಚಂಚುವಿಂದಂ
ಕರ್ದುಕಲ್ ಸಾರ್ದಪ್ಪುದು, ಈಶಂ ಮುಡಿಯೊಳಿರಿಸಲೆಂದಿರ್ದಪಂ, ಸಜ್ಜೆಗೇಱಲ್
ಪದೆದಪ್ಪಂ ಕೃಷ್ಣನೆಂಬಂತೆಸೆದು ವಿಲಸತ್ ಕಂದಳೀಕಂದಕಾಂತಂ
ಪುದಿದತ್ತೀ ಮೇಘಚಂದ್ರ ವ್ರತಿತಿಳಕ ಜಗದ್ವರ್ತಿತ ಕೀರ್ತಿಪ್ರಕಾಶಂ
[10]

-ಎಂಬ ಈ ಕವಿತೆ ಚಂದ್ರೋದಯದ ಪರಿಣಾಮಗಳನ್ನು ಮೇಘಚಂದ್ರಯತಿಗಳ ಕೀರ್ತಿಯೊಂದಿಗೆ ಸಮೀಕರಿಸುತ್ತದೆ. ಈ ಎರಡೂ ಪದ್ಯಗಳ ಪ್ರತಿಮಾವಿಧಾನ ಹಾಗೂ ನಿರೂಪಣಾ ಕ್ರಮ ಹಳಗನ್ನಡ ಕಾವ್ಯ ಪರಂಪರೆಯನ್ನು ಬಲ್ಲವರಿಗೆ ತೀರಾ ಹೊಸದೆನಿಸದೆಂಬಂತೆ ತೋರದಿದ್ದರೂ, ಈ ಪದ್ಯಬಂಧಗಳ ಸೊಗಸನ್ನು ತಳ್ಳಿಹಾಕುವಂತಿಲ್ಲ. ಕವಿಸಮಯದ ಸಾಮಗ್ರಿಗಳಾದ, ಕಮಲ, ಕನ್ನೆ ದಿಲೆ, ಹಂಸ-ಚಕೋರ ಇತ್ಯಾದಿಗಳನ್ನು ಈ ಪದ್ಯದ ಅಲಂಕಾರ ಸಾಮಗ್ರಿ ಒಳಗೊಂಡಿದ್ದರೂ, ಅವುಗಳ ಮೂಲಕವೇ ಪ್ರತೀತವಾಗುವ ಚಮತ್ಕಾರದ ಅಂಶ, ಓದುಗರ ಮನಸ್ಸನ್ನು ಸೆರೆಗೈದು ನಿಲ್ಲಿಸಿಕೊಳ್ಳುವಷ್ಟು ಪರಿಣಾಮಕಾರಿಯಾಗಿದೆ, ಮತ್ತು ಈ ಪದ್ಯಗಳ ರಚನಾತಂತ್ರವನ್ನು ಎಚ್ಚರಿಕೆಯಿಂದ ಗಮನಿಸಿದರೆ, ಅವು ಸಿದ್ಧಹಸ್ತವೊಂದರ ಸಾಮರ್ಥ್ಯದ ಕಡೆ ಬೆರಳು ಮಾಡುತ್ತವೆ. ಅದರಲ್ಲೂ ಮೇಘಚಂದ್ರವ್ರತಿಗಳ ಕೀರ್ತಿ ಪ್ರಕಾಶದ ವರ್ಣನೆಯಲ್ಲಿ ಹಂಸ, ಚಕೋರಗಳ ವ್ಯಾಪಾರವನ್ನು ಬದಿಗಿರಿಸಿ ನೋಡಿದರೂ, ಈ ಕೀರ್ತಿಪ್ರಕಾಶ ಚಂದ್ರಿಕೆಯನ್ನು ಈಶ್ವರನು ತನ್ನ ಮುಡಿಗೇರಿಸಲು ಆಸೆಪಟ್ಟನೆಂದೂ, ಕೃಷ್ಣನು ಅದನ್ನೇ ಹಾಸಿಕೊಂಡು ಮಲಗಲು ಅಪೇಕ್ಷೆಪಟ್ಟನೆಂದೂ ಹೇಳುವ ಮಾತು ಈ ಉಕ್ತಿಯ ಕಾವ್ಯಮಯತೆಯನ್ನು ಬೇರೊಂದು ನೆಲೆಗೇರಿಸಿಬಿಡುತ್ತದೆ.

ವರ್ಧಮಾನಮುನಿಗಳನ್ನು ಕುರಿತ ಇನ್ನೊಂದು ಶಾಸನೋಕ್ತ ವರ್ಣನೆಯಲ್ಲಿ-
ಸುರನದಿಯ ತಾರಹಾರದ| ಸುರದಂತಿಯ ರಜತಗಿರಿಯ ಚಂದ್ರನ ಬೆಳ್ಪಿಂ
ಪಿರಿದು ವರ್ಧಮಾನರ| ಪರಮ ತಪೋಧನರ ಕೀರ್ತಿ ಮೂಱುಂ ಜಗದೊಳ್
[11]

ಕವಿ ಬೆಳ್ಪಿನ ಮೇಲೆ ಬೆಳ್ಪುನ್ನು ಹೇರಿದ್ದಾನೆ. ಇದೊಂದು ಪರಿಭಾವನಾಯೋಗ್ಯವಾದ ಚಿತ್ರವಾಗಿದೆ.

ಜಿನಮುನಿಗಳ ಈ ಪ್ರಶಾಂತ ತೇಜಸ್ಸು ಹಾಗೂ ಕೀರ್ತಿಗಳನ್ನು ವರ್ಣಿಸುವುದರ ಜತೆಗೆ, ಈ ಆಚಾರ್ಯರುಗಳ, ವಿದ್ವತ್ತನ್ನೂ, ವಾದ ವೈಖರಿಗಳನ್ನೂ ಶಾಸನಗಳು ಉದ್ಘೋಷಿಸುತ್ತವೆ. ದೇವಕೀರ್ತಿಯ ವಿದ್ವತ್ತನ್ನು ಕುರಿತು-

ಚತುರತೆ ಸತ್ಕವಿತ್ವದೊಳ್, ಅಭಿಜ್ಞತೆ ಕಳಾಪದೊಳ್, ಪ್ರಸ
ನ್ನತೆ ಮತಿಯೊಳ್, ಪ್ರವೀಣತೆ ನಯಾಗಮ ತರ್ಕ ವಿಚಾರದೊಳ್, ಸುಪೂ
ಜ್ಯತೆ ತಪದೊಳ್, ಪವಿತ್ರತೆ ಚರಿತ್ರದೊಳೊಂದಿ ವಿರಾಜಿಸಲ್ ಪ್ರಸಿ
ದ್ಧತೆ ಮುನಿದೇವಕೀರ್ತಿ ವಿಬುಧಾಗ್ರಣಿಗೊಪ್ಪುವುದೀ ಧರಿತ್ರಿಯೊಳ್
[12]

ಎಂಬ ಪ್ರಶಂಸೆಯಲ್ಲಿ ಯಾವುದೇ ಅಲಂಕಾರಗಳಿಲ್ಲದ, ದೇವಕೀರ್ತಿಯ ವಿದ್ವತ್ತಿನ ಮುಖ್ಯ ಲಕ್ಷಣಗಳನ್ನು ಅತ್ಯಂತ ಅಡಕವಾಗಿ ನಿರೂಪಿಸುವುದರ ಮೂಲಕ, ಆ ವ್ಯಕ್ತಿಯ ಬಗೆಗೆ ಗೌರವವನ್ನು ಹುಟ್ಟಿಸುವುದರಲ್ಲಿ ಈ ಅಭಿವ್ಯಕ್ತಿ ಸಫಲವಾಗಿದೆ. ಈ ಜೈನ ಮುನಿಗಳ ವಿದ್ವತ್ತನ್ನು ಡಂಗುರ ಹೊಯ್ಯುವ ಇನ್ನೂ ಕೆಲವು, ಅನುಕರಣ ಸಿದ್ಧ ಪದ್ಯಗಳೂ ಇವೆ.[13]

ಇನ್ನು ಈ ವ್ರತಿಗಳ ತಪಸ್ಸಿನ ವರ್ಣನೆ ಈ ವ್ಯಕ್ತಿಗಳ ವೈರಾಗ್ಯ ವೀರತೆಯ ನಿದರ್ಶನಗಳಾಗಿವೆ. ನಂದಿಸೇನಪ್ರವರಮುನಿ ಈ ಲೋಕದ ಐಶ್ವರ‍್ಯ, ರೂಪ, ವೈಭವ ಇತ್ಯಾದಿಗಳ ಅಸಾರತೆಯನ್ನು ಮನದಂದು, ಈ ಲೋಕದಲ್ಲಿ ನಾನು ನಿಶ್ಚಯವಾಗಿಯೂ ಇರುವುದನ್ನು ಮೆಚ್ಚುವುದಿಲ್ಲವೆಂದು, ಸನ್ಯಾಸನಂಗೆಯ್ದು ದೇವಲೋಕಕ್ಕೆ ಸಂದನೆಂದು ವರ್ಣಿಸುವ ಪದ್ಯದ ಸೊಗಸು, ವಿಶೇಷವಾದದ್ದಾಗಿದೆ. ಈ ಶಾಸನದ ಕಾಲಕ್ಕೆ ಸಂಬಂಧಿಸಿದ ಕಳಂತೂರಿನ ಗೊರವನ ತಪಸ್ಸನ್ನು ವರ್ಣಿಸುವ ಶಾಸನವು ಗಮನಿಸತಕ್ಕದ್ದಾಗಿದೆ. ಕಟವಪ್ರ (ಶ್ರವಣಬೆಳುಗೊಳ) ಶೈಲವನ್ನು ಅಡರ್ದು ಅಲ್ಲಿ ನೂರೆಂಟು ವರ್ಷ ತಪಸ್ಸುಮಾಡಿದ, ಕಳಂತೂರಿನ ಗೊರವನ ಈ ಸಾಧನೆ “ಬಾಳಾ ಮೇಲ್, ಶಿಖಿ ಮೇಲ್, ಸರ್ಪದ ಮಹಾದಂತಾಗ್ರದೋಳ್ ಸಲ್ವವೊಲ್”[14] ಇತ್ತಂತೆ. ಈ ತಪಸ್ಸಿನ ಕಠೋರತೆಯನ್ನು ವರ್ಣಿಸಲು ಇಲ್ಲಿ ಬಳಕೆಯಾದ ಮೂರು ಉಪಮೆಗಳು, ಅತ್ಯಂತ ಸಾರ್ಥಕವಾದವುಗಳಾಗಿವೆ. ಮತ್ತೊಂದೆಡೆ, ಸಾಧ್ಯವಾದಷ್ಟು ನಿರಲಂಕಾರವಾದ ರೀತಿಯಲ್ಲಿ ಜಿನಮುನಿಯ ಕಠೋರ ತಪಸ್ಸಿನ ವರ್ಣನೆ ಬಂದಿದೆ. ಅದು ಮಲಧಾರಿದೇವನನ್ನು ಕುರಿತದ್ದು:

ನೆಱೆಯ ತನುತ್ರಮಿಕ್ಕಿದವೊಲಿರ್ದ ಮಲಂ ತಿನೆ ಮೈಯ್ಯನೊರ್ಮೆಯುಂ
ತುಱಿಸುವುದಿಲ್ಲ, ನಿದ್ದೆವರೆ ಮಗ್ಗುಲನಿಕ್ಕುವುದಿಲ್ಲ, ಬಾಗಿಲಂ
ಕಿಱುತೆಱೆಯೆಂಬುದಿಲ್ಲ, ಉಗುೞ್ವುದಿಲ್ಲ, ಮಲಂಗುವುದಿಲ್ಲ, ಅಹೀಂದ್ರನುಂ
ನೆಱೆವನೆ ಬಣ್ಣಿಸಲ್ ಗುಣಗಣಾವಳಿಯಂ ಮಲಧಾರಿದೇವರಾ
[15]

‘ಎಂದೆಂದೂ ಸ್ನಾನ ಮಾಡದೆ ಇರುವುದರಿಂದ ಅವರ ಮೈಯನ್ನು ಕೊಳೆ ಕವಚವಿಟ್ಟಹಾಗೆ ಸುತ್ತಿಕೊಂಡು, ತುರಿಕೆಯನ್ನುಂಟುಮಾಡುತ್ತಿದೆ; ಆದರೆ ಒಂದು ಸಲವೂ ಅವರು  ಮೈಯನ್ನು ಕೆರೆದುಕೊಳ್ಳುವುದಿಲ್ಲ; ಅದನ್ನು ಸಹಿಸಿಕೊಳ್ಳುತ್ತಾರೆ. ನಿದ್ದೆ ಬಂದರೂ, ಮಗ್ಗುಲಾಗುವುದಿಲ್ಲ; ಒಂದಿಷ್ಟು ಗಾಳಿ ಬರಲಿ ಎಂದು ಸ್ವಲ್ಪವಾದರೂ ಬಾಗಿಲು ತೆಗೆಯಿರಿ ಎನ್ನುವುದಿಲ್ಲ; ಉಗುಳುವುದಿಲ್ಲ; ಮಲಗಿ ನಿದ್ರೆ ಮಾಡುವುದಿಲ್ಲ. ಇಂಥ ಕಠೋರನಿಷ್ಠೆಯ ಮಲಧಾರಿ ದೇವರ ಗುಣಗಳನ್ನು ಹೊಗಳಲು ಆದಿಶೇಷನಿಗೂ ಸಾಧ್ಯವಿಲ್ಲ.’ ಮಾತಾಡಿದ ಹಾಗೆ ಇರುವ ಧಾಟಿಯಲ್ಲಿ ಮಲಧಾರಿದೇವ ಮುನಿಗಳ ತಪಸ್ಸಿನ ಸಂಯಮಪೂರ್ಣವಾದ ನಡವಳಿಕೆಯನ್ನು ಯಥಾವತ್ತಾಗಿ ನಿರೂಪಿಸುವುದರ ಮೂಲಕ, ಶಾಸನದ ಕವಿ ಓದುಗರ ಮನಸ್ಸಿನಲ್ಲಿ ವಿಸ್ಮಯ-ಗೌರವಗಳನ್ನು ಉಕ್ಕಿಸುತ್ತ, ಋಷಿಗಳ ತಪಸ್ಸಿನ ಕಠೋರತೆಯನ್ನು ಅರಿವಿಗೆ ತರುತ್ತಾನೆ. ಈ ಪದ್ಯದಲ್ಲಿರುವ ಅದ್ಭುತದ ಅಂಶ ಗಮನಿಸತಕ್ಕದ್ದಾಗಿದೆ.

ಇಂಥ ತಪಸ್ಸಿನ ಮೂಲಕ ಈ ಋಷಿಯರು ಪಡೆದ ಪರಮಪದವನ್ನು ಕುರಿತು ಹೇಳುವಾಗ ಸಾಮಾನ್ಯವಾಗಿ ಬಳಸುವ ನುಡಿಗಟ್ಟು ‘ದೇವಲೋಕಕ್ಕೆ ಸಂದಾನ್’ ‘ಸ್ವರ್ಗಾಗ್ರಮಾನ್ ಏರಿದಾರ್’ ಎಂಬುದು. ಇದನ್ನೆ ಒಂದಿಷ್ಟು ಕಾವ್ಯಮಯವನ್ನಾಗಿ ಮಾಡುವಾಗ  ‘ಪ್ರಾಸಾದಾಂತರಮಾನ್ ವಿಚಿತ್ರ ಕನಕ ಪ್ರಜ್ವಲ್ಯದಿನ್ ಮಿಕ್ಕುದಾನ್…. ಸ್ವರ್ಗಾಗ್ರಮಾನೇಱದಾರ್’ ಎಂದು ವೈಭವಿಸಲಾಗಿದೆ.[16]

ಜಿನಮುನಿಗಳನ್ನು ಕುರಿತ ಶಾಸನ ಪದ್ಯಗಳಿಗಿಂತ, ರಾಜರು, ಮಂತ್ರಿಗಳು, ದಂಡನಾಯಕರುಗಳನ್ನು ಕುರಿತ ಶಾಸನದ ತುಣುಕುಗಳು, ಶೈಲಿ ಹಾಗೂ ರಸದೃಷ್ಟಿಯಿಂದ ಒಂದಷ್ಟು ಬೇರೆಯಾಗಿವೆ. ಈ ಶಾಸನಗಳಲ್ಲಿರುವ ವ್ಯಕ್ತಿಗಳು ಮೂಲತಃ ಲೌಕಿಕ ವ್ಯಕ್ತಿಗಳು. ಜಿನಮುನಿಗಳನ್ನು ಕುರಿತ ಶಾಸನಗಳು ಮುಖ್ಯವಾಗಿ ‘ಜಿನಾಗಮ’ವನ್ನು ಬೆಳುಗಿದರೆ, ರಾಜಾದಿಗಳನ್ನು ಕುರಿತ ಶಾಸನಗಳು ಮುಖ್ಯವಾಗಿ ‘ಲೌಕಿಕ’ವನ್ನು ಬೆಳುಗುತ್ತಿವೆ. ಈ ಲೌಕಿಕ ವ್ಯಕ್ತಿಗಳ ಲೌಕಿಕ ಕ್ರಿಯೆಯ ಸಂದರ್ಭಗಳಿಗಿಂತ ಮಿಗಿಲಾದ, ಧಾರ್ಮಿಕ ಅಥವಾ ಧರ್ಮಶ್ರದ್ಧೆಯ ಸಂದರ್ಭಗಳಲ್ಲಿ, ಅಂದರೆ ಅವರು ಜಿನಮುನಿಗಳಿಗೊ ಅಥವಾ ತಮ್ಮ ಕಡೆಯವರು ಸಲ್ಲೇಖನ ಕೈಕೊಂಡು ಮುಡಿಪಿದಾಗಲೋ, ನಿಸಿದಿಗಳನ್ನು ನಿರ್ಮಿಸುವಾಗ, ಅಥವಾ ದೇವಾಲಯ ನಿರ್ಮಾಣ, ದಾನ ದತ್ತಿಗಳನ್ನು ಬಿಡುವಾಗಲೋ, ಬರೆಯಿಸಿದ ಶಾಸನಗಳಲ್ಲಿ, ಅವರ ಮಾನವೀಯವಾದ ಉದ್ತಾತ ಗುಣಗಳ, ಅವರ ವಂಶಗಳ, ಅವರ ವೀರ-ತ್ಯಾಗ-ಶೌಚಾದಿಗಳ ಪ್ರಸ್ತಾಪವು ಕಂಡುಬರುತ್ತದೆ. ಗಂಗರಾಜ ಮಾರಸಿಂಹನು ಅಜಿತಸೇನಭಟ್ಟಾಚಾರ್ಯರ ಸನ್ನಿಧಿಯಲ್ಲಿ ಸಮಾಧಿಮರಣ ಪಡೆದದ್ದನ್ನು ಹೇಳುವಾಗ, ಆತ-

ಗಂಗರೊಳ್ಗಂಡಂ| ಗಂಗರ ಸಿಂಗಂ| ಗಂಗ ಚೂಡಾಮಣಿ| ಗಂಗ ಕಂದರ್ಪಂ
ಗಂಗ ವಜ್ರಂ| ಚಲದುತ್ತರಂಗಂ| ಗುತ್ತಿಯ ಗಂಗಂ|
ಧರ್ಮಾವತಾರಂ| ಜಗದೇಕವೀರಂ| ನುಡಿದನ್ತೆಗಂಡಂ
ಅಹಿತಮಾರ್ತಾಂಡಂ|
[17]

ಎಂದು ವಂಧಿಮಾಗದ ಶೈಲಿಯಲ್ಲಿ ಪ್ರಶಂಸಿಸಲಾಗಿದೆ. ಇನ್ನೊಂದೆಡೆ ಹೊಯ್ಸಳ ಬಲ್ಲಾಳನನ್ನು ಕುರಿತು-

ಶನಿವಾರ ಸಿದ್ಧಿ| ಸದ್ಧರ್ಮಬುದ್ಧಿ
ಗಿರಿದುರ್ಗಮಲ್ಲ| ರಿಪುಹೃದಯಮಲ್ಲ
ಚಲದಂಕರಾಮ| ರಣರಂಗಭೀಮ
ಕದನ ಪ್ರಚಂಡ| ಮಲಪರೊಳ್ಗಂಡಂ
[18]

ಎಂದು ವರ್ಣಿಸಲಾಗಿದೆ. ವಾಸ್ತವವಾಗಿ ಈ ಎರಡು ತುಣುಕುಗಳೂ ಗದ್ಯದ ಪಂಕ್ತಿಗಳೇ. ಪದ್ಯದಂತೆ ತೋರುತ್ತವೆ, ಅವುಗಳ ಪದವಿನ್ಯಾಸದಿಂದ. ವಿನಯಾದಿತ್ಯನನ್ನು ಕುರಿತು-

ಎರೆದ ಮನುಜಂಗೆ ಸುರುಭೂ| ಮಿರುಹಂ ಶರಣೆಂದವಂಗೆ ಕುಳಿಶಾಗಾರಂ
ಪರವನಿತೆಗನಿಲತನಯಂ| ಧುರದೊಳ್ ಪೊಣರ್ದಂಗೆ ಮೃತ್ಯು ವಿನಯಾದಿತ್ಯಂ
[19]

ಇಂಥವನು,

ಬಲಿದೊಡೆ ಮಲೆದೊಡೆ ಮಲೆಪರ ತಲೆಯೊಳ್ ಬಾಳಿಡುವನ್,
ಉದಿತ ಭಯರಸವಶದಿಂ ಬಲಿಯದ ಮಲೆಯದ ಮಲೆಪರ
ತಲೆಯೊಳ್ ಕೈಯಿಡುವನ್ ಒಡನೆ ವಿನಯಾದಿತ್ಯಂ
[20]

ಈ ಎರಡು ಶಾಸನ ಪದ್ಯಗಳಲ್ಲಿ ಮೊದಲನೆಯದು ಪುರಾಣಸಾಮಗ್ರಿಯ ಚಿತ್ರಗಳಿಂದ ಆತನ ಆಶ್ರಿತ ಗುಣ, ತ್ಯಾಗ, ಶೌಚ ಹಾಗೂ ವೀರಗಳನ್ನು ವರ್ಣಿಸಿದರೆ, ಎರಡನೆಯದು ಆತ, ಯಾರ ತಲೆಯ ಮೇಲೆ ಯಾಕೆ ತನ್ನ ಖಡ್ಗವನ್ನಿಡುತ್ತಾನೆ ಮತ್ತು ಯಾರ ತಲೆಯ ಮೇಲೆ ಯಾಕೆ ಕೈ ಇಡುತ್ತಾನೆ, ಎಂಬುದರ ಚಮತ್ಕಾರಿಕ ವರ್ಣನೆಯಿಂದ ಆತನ ಪರಾಕ್ರಮ ಹಾಗೂ ಅಭಯಪ್ರಧಾನ ಪ್ರವೃತ್ತಿಯನ್ನು ಚಿತ್ರಿಸುತ್ತದೆ. ಎರಡನೆಯ ಈ ಪದ್ಯದ ಉಕ್ತಿಯ ಸೊಗಸು ಗಮನಿಸತಕ್ಕದ್ದಾಗಿದೆ.

ಹೊಯ್ಸಳ ಎರೆಯಂಗದೇವ, ವೀರಬಲ್ಲಾಳ ಮತ್ತು ನರಸಿಂಹ ಇವರ ರಣವೀರತೆಯ ವರ್ಣನೆಗಳು ಮೈನವಿರೇಳಿಸುವಂಥವು. ಎರಡನೆಯ ಬಲ್ಲಾಳನು-

ರಿಪುಭೂಪಾಳೇಭಸಿಂಹಂ, ರಿಪುನೃಪನಳಿನಾನೀಕ ರಾಕಾಶಶಾಂಕಂ
ರಿಪುರಾಜನ್ಯೌಘಮೇಘ ಪ್ರಕರ ನಿರಸನೋದ್ಧೂತ ವಾತಪ್ರಪಾತಂ
ರಿಪುಧಾತ್ರೀಶಾದ್ರಿವಜ್ರಂ, ರಿಪುನೃಪತಿ ತಮಸ್ತೋಮ ವಿಧ್ವಂಸನಾರ್ಕಂ
ರಿಪು ಪೃಥ್ವೀಪಾಳ ಕಾಳಾನಳನ್ ಉದಯಿಸಿದಂ ವೀರಬಲ್ಲಾಳದೇವಂ
[21]

ಈ ಪದ್ಯ, ಚಂಪೂ ಮಹಾರಣ್ಯದಿಂದ ತಪ್ಪಿಸಿಕೊಂಡು ಬಂದ ವೃತ್ತಮತ್ತಮಹಾಗಜದಂತೆ ತೋರುವುದಿಲ್ಲವೆ? ಈ ಪದ್ಯದ ಭಾವ-ಭಾಷೆ ಹಾಗೂ ಬಂಧಗಳು ನೂರಕ್ಕೆ ನೂರರಷ್ಟು ಕಾವ್ಯಗುಣದಿಂದ ಕೂಡಿವೆ. ಕವಿಯಲ್ಲದವನು ಇಂಥದನ್ನು ಬರೆಯಲಾರ ಅನ್ನಿಸುತ್ತದೆ. ಎರಡನೆ ಪಂಕ್ತಿಯಂತೂ ‘ಕುರುಭೂಭೃದ್‌ಬಲ ಕಾಲ ತೂಲಪವನಂ’ ಎಂಬ ಕವಿ ರನ್ನನ ಉಕ್ತಿಯನ್ನು ನೆನಪಿಗೆ ತರುವಂತಿದ್ದರೂ, ರಿಪುರಾಜನ್ಯ ಮೇಘ ಪ್ರಕರವನ್ನು ನಿರಸನಗೊಳಿಸುವ ವಾತಪ್ರಪಾತ- ಎಂಬಲ್ಲಿ, ‘ವಾತ ಪ್ರಪಾತ’ ಎಂಬ ವಿನೂತನ ಪ್ರತಿಮೆ ಉಂಟುಮಾಡುವ ಅರ್ಥಪ್ರತೀತಿ ಅದ್ಭುತವಾಗಿದೆ. ಇದು ಪಾರ್ಶ್ವನಾಥ ಬಸದಿಯನ್ನು ಆಚಿಯಕ್ಕನು ಬೆಳುಗೊಳದಲ್ಲಿ ಕಟ್ಟಿಸಿದಾಗ, ಹೊಯ್ಸಳ ಬಲ್ಲಾಳನು ಅದಕ್ಕೆ ಗ್ರಾಮವೊಂದನ್ನು ದತ್ತಿಯಾಗಿ ಬಿಟ್ಟ ಸಂಗತಿಯನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ, ಮೊಳಗುವ ವೀರಬಲ್ಲಾಳನ ಪ್ರತಾಪ ತೂರ‍್ಯವರ್ಣನೆ. ಗಮನಿಸಬೇಕಾದ ಇನ್ನೆರಡು ಪದ್ಯಗಳಲ್ಲಿ ಒಂದು ಎರೆಯಂಗನನ್ನು ಕುರಿತದ್ದು, ಮತ್ತೊಂದು ನಾರಸಿಂಹನನ್ನು ಕುರಿತದ್ದು, ಈ ಎರಡೂ ಧಗಧಗಿಸುವ ಬೆಂಕಿಯಿಂದ ಕಡೆದವುಗಳು.

ಎರೆಯಂಗನ ಕೋಪದ ಬೆಂಕಿ ಎಂಥದು? ಶಾಸನ ಕವಿ ವರ್ಣಿಸುತ್ತಾನೆ:

ಅರಿಪುರದೊಳ್ ಧಗದ್ಧಗಿಲ ದಂಧಗಿಲ್ ಎಂಬುದು, ಅರಾತಿಭೂಮಿಪಾ
ಳರ ಶಿರದೊಳ್ ಗರಿಲ್ ಗರಿಗರೀಗರಿಲ್ ಎಂಬುದು, ವೈರಿಭೂತಳೇ
ಶರ ಕುರುಳೊಳ್ ಚಿಮಿಲ್ ಚಿಮಿಚಿಮೀ ಚಿಮಿಲ್ ಎಂಬುದು ಕೋಪವಹ್ನಿ ದು
ರ್ಧರ ತರಂ ಎಂದೊಡೆ ಅಳ್ಕುಱದೆ ಕಾದುವರಾರ್ ಎಱೆಯಂಗದೇವನೊಳ್
[22]

ಬೆಂಕಿಯೊಂದು, ಕಾಡನ್ನು ಮುತ್ತಿ ಸುಡುವಾಗಿನ ಶಬ್ದಾನುಕರಣವನ್ನು, ಕವಿ ಎರೆಯಂಗದೇವನ ಕೋಪಾಗ್ನಿ ಶತ್ರುಗಳ ಪುರಗಳನ್ನು, ತಲೆಗಳನ್ನು, ಅವರ ತಲೆಯ ಕೂದಲುಗಳನ್ನು ಸುಡುವ ಕ್ರಿಯೆಗೆ ಅನ್ವಯಿಸಿ ಅವನ ಪ್ರತಾಪವನ್ನು ವರ್ಣಿಸಿದ್ದಾನೆ. ಈ ವರ್ಣನೆ ಬರುವುದು ವಿಷ್ಣುವರ್ಧನನ ರಾಣಿ ಶಾಂತಲೆ ಬೆಳುಗೊಳದಲ್ಲಿ ಸವತಿಗಂಧವಾರಣಬಸದಿಯನ್ನು ಕಟ್ಟಿಸಿದ್ದನ್ನು ಹೇಳುವ ಸಂದರ್ಭದಲ್ಲಿ. ಇನ್ನು ಒಂದನೆಯ ನರಸಿಂಹನನ್ನು ಕುರಿತು:

ಪಡೆಮಾತೇಂ ಬಂದುಕಂಡಂಗಮೃತಜಳಧಿ ತಾಂ ಗರ್ವದಿಂ ಗಂಡವಾತಂ
ನುಡಿವಂಗೇನನೆಂಬೈ ಪ್ರಳಯಸಮಯದೊಳ್ ಮೇರೆಯಂ ಮೀರಿಬರ್ಪಾ
ಕಡಲನ್ನಂ, ಕಾಳನನ್ನಂ, ಮುಳಿದ ಕುಳಿಕನನ್ನಂ, ಯುಗಾಂತಾಗ್ನಿಯನ್ನಂ,
ಸಿಡಿಲನ್ನಂ, ಸಿಂಗದನ್ನಂ, ಪುರಹರನುರಿಗಣ್ಣನ್ನನ್ ಈ ನಾರಸಿಂಹಂ
[23]

ಈ ಪದ್ಯದ ಹಾಸುಬೀಸು, ಮತ್ತು ವ್ಯಕ್ತಿತ್ವದ ರಭಸ-ರೌದ್ರಪ್ರತಾಪಗಳನ್ನು ವರ್ಣಿಸಲು ಬಳಸಿದ ವಿವಿಧ ಪ್ರತಿಮೆಗಳ ಸರಣಿ ಅಪೂರ್ವವಾದ ಕಾವ್ಯಗುಣವನ್ನು ಒಳಗೊಂಡಿವೆ. ಈ ಪದ್ಯ ಕೂಡಾ ದೇವಾಲಯ ನಿರ್ಮಾಣದ ಸಂದರ್ಭವನ್ನು ಕುರಿತು ಹೇಳುವಂಥಾದ್ದು.

ರಾಜರ ವ್ಯಕ್ತಿಚಿತ್ರವನ್ನು ಕೊಡುವ ಶ್ರವಣಬೆಳುಗೊಳದ ಶಾಸನಗಳಲ್ಲಿ ತುಂಬ ದೀರ್ಘವಾದದ್ದು, ರಾಷ್ಟ್ರಕೂಟ ಮೂರನೆಯ ಕೃಷ್ಣನ ಮೊಮ್ಮಗನಾದ ಇಂದ್ರರಾಜನನ್ನು ಕುರಿತದ್ದು. ಕ್ರಿ.ಶ. ೯೮೨ರ ಶಾಸನ ಇಂದ್ರರಾಜನು ಸನ್ಯಸನ ವಿಧಿಯಿಂದ ಮುಡಿಪಿದ ಸಂಗತಿಯನ್ನು ಕುರಿತದ್ದು. ಇದರಲ್ಲಿ ಇಂದ್ರರಾಜನ ದಾನ, ಶೌಚ, ರಣವೀರತೆ ಮತ್ತು ಸಮಕಾಲೀನ ರಾಜರುಗಳೊಂದಿಗೆ ಅವನನ್ನು ಇರಿಸಿ ನೋಡುವ ತೌಲನಿಕ ವಿವೇಚನೆ ಇವುಗಳು ಈ ದೀರ್ಘ ಶಾಸನದ ಮುಖ್ಯ ಅಂಶಗಳಾಗಿವೆ. ಈ ದೀರ್ಘಶಾಸನದ ಒಂದೆರಡು ಪದ್ಯಗಳು ಹೀಗಿವೆ:

ಕಿಡದ ಜಸಕ್ಕೆ ತಾನೆ ಗುಱಿಯಾದ ಚಲಂ, ನೆಱೆದರ್ಥಿಗರ್ಥಮಂ
ಕುಡುವ ಚಲಂ, ತೊದಳ್ನುಡಿಯದಿರ್ಪ ಚಲಂ, ಪರವೆಣ್ಣೊಳೋತೊಡಂ
ಬಡದ ಚಲಂ, ಶರಣ್ಗೆವರೆ ಕಾವ ಚಲಂ, ಪರಸೈನ್ಯಮಂ ಪೆಱಂ
ಗೆಡೆಗುಡದಟ್ಟಿ ಕೊಲ್ವ ಚಲಂ, ಆಳ್ದ ಚಲಂ, ಚಲದಂಕಕಾರನಾ
[24]

ಇಡೀ ಪದ್ಯ ಪಂಪನ ಪದಸಾಮಗ್ರಿಯಿಂದ ಕಟ್ಟಿದ ಕಟ್ಟಡವಾಗಿದೆ. ಆದರೂ ಈ ಪದ್ಯಕ್ಕೆ ತನ್ನದೇ ಆದೊಂದು ಸೊಗಸಿದೆ. ಹೇಳಬೇಕಾದ್ದನ್ನು ಅತ್ಯಂತ ಅಚ್ಚುಕಟ್ಟಾಗಿ ಹೇಳುತ್ತದೆ. ಇಂದ್ರರಾಜನ ‘ಚಲ’ದ ವಿವಿಧ ಪದರುಗಳ ಮೂಲಕ ಆತನ ವ್ಯಕ್ತಿತ್ವದ ಮೌಲ್ಯಪ್ರಜ್ಞೆಯನ್ನು ಇದು ಪ್ರಸ್ತಾಪಿಸುತ್ತದೆ. ಇಂದ್ರರಾಜನ ‘ನೆಗೞ್ತೆ ಕಲ್ಪಭೂರುಹದಿನ್ ಅಗ್ಗಳಂ’, ‘ನುಡಿ ಸುರಾಚಳದಿಂದ ಅಚಳಮ್’ ‘ಪರಾಕ್ರಮಂ ಖರತೇಜದಿಂ ಬಿಸಿದು’ ಹೀಗೆ ವರ್ಣಿಸುತ್ತಾ,

ದುಸ್ಥಿತಲೋಕ ಕಲ್ಪತರುವೆಂಬುದು, ವೈರಿನರೇಂದ್ರ ಕುಂಭಿ ಕುಂ
ಭಸ್ಥಳ ಪಾಟನ ಪ್ರಣವ ಕೇಸರಿಯೆಂಬುದು, ಕಾಮಿನೀಜನೋ
ರಸ್ಥಳ ಹಾರಮೆಂಬುದು, ಮಹಾಕವಿಚಿತ್ತ ಸರೋರುಹಾಕರಾ
ವಸ್ಥಿತ ಹಂಸನೆಂಬುದು ಸಮಸ್ತ ಮಹೀಜನಮಿಂದ್ರರಾಜನಾ
[25]

ಈ ಪದ್ಯ ಇಂದ್ರರಾಜನ ತ್ಯಾಗ, ವೀರ, ರಸಿಕತೆ, ಹಾಗೂ ಕಾವ್ಯಪ್ರಿಯತೆಗಳನ್ನು ಎತ್ತಿಹಿಡಿಯುತ್ತ, ಅಂದಿನ ಸಮಕಾಲೀನ ರಾಜರುಗಳನ್ನೂ ವಿಡಂಬನಕ್ಕೆ ಗುರಿಮಾಡಿ, ಇಂದ್ರರಾಜನ ವೈಶಿಷ್ಟ್ಯವನ್ನು ಹೀಗೆ ವಿಮರ್ಶೆ ಮಾಡುತ್ತದೆ-

ಪುಸಿವುದೆ ತಕ್ಕು, ಕೊಟ್ಟು ಅಳುಪಿ ಕೊಳ್ವುದೆ ಮಂತಣಂ, ಅನ್ಯರಿಗಾ
ಟಿಸುವುದೆ ಚಿತ್ತ, ಈಯದುದೆ ಬಿನ್ನಣಂ, ಆರುಮನ್ ಎಯ್ದೆ ಕೂರ್ತು ಬಂ
ಚಿಸುವುದೆ ಕಲ್ತ ಕಲ್ಪಿ, ಎನೆ, ಮತ್ತವರಂ ಪೆಸರ್ಗೊಂಡು ಅದೆಂತು ಪೋ
ಲಿಸುವುದೋ ಪೇೞಿಂ ಈಗಡಿನ ರಾಜತನೂಜರೊಳ್ ಇಂದ್ರರಾಜನಂ
[26]

ಇದು ‘ಈಗಡಿನ’ ಅಂದರೆ ಅಂದಿಗೆ ಸಮಕಾಲೀನರಾದ ರಾಜರನ್ನು ಕುರಿತ ಒಂದು ವಿಶ್ಲೇಷಣೆಯಾಗಿದೆ. ಆ ರಾಜತನೂಜರು ಎಂಥವರು? ‘ಅವರಿಗೆ ಸುಳ್ಳು ಹೇಳುವುದೇ ಸಹಜವಾದದ್ದು; ಒಮ್ಮೆ ದಾನ ಕೊಟ್ಟು, ಅನಂತರ ಆಸೆಪಟ್ಟು ಕೊಟ್ಟದ್ದನ್ನು ಹಿಂದಕ್ಕೆ ಕಿತ್ತುಕೊಳ್ಳುವುದೇ ಮಂತ್ರಾಲೋಚನೆ; ಪರಸ್ತ್ರೀಯರಿಗೆ ಆಸೆಪಡುವುದೆ ಅವರ ಮನಸ್ಸಿನ ಲಕ್ಷಣ; ಯಾರಿಗೂ ಏನನ್ನೂ ಕೈಎತ್ತಿ ಕೊಡದೆ ಇರುವುದೇ ಅವರ ಕೌಶಲ; ಎಂಥವರನ್ನೂ ನಂಬಿಸಿ ಅನಂತರ ವಂಚಿಸುವುದೇ ಅವರು ಕಲಿತ ವಿದ್ಯೆ. ಹೀಗಿರುವ ಈಗಳಿನ ಈ ರಾಜತನೂಜರನ್ನು ಹೆಸರೆತ್ತಿ, ಇಂದ್ರರಾಜನೊಂದಿಗೆ ಹೇಗೆ ಹೋಲಿಸೋಣ ನೀವೇ ಹೇಳಿ’ -ಎಂಬ ಈ ಪದ್ಯ ಸಮಕಾಲೀನ ರಾಜರನ್ನು ಕುರಿತ ಸೊಗಸಾದ ಒಂದು ವಿಡಂಬನ ಕವಿತೆಯಾಗಿದೆ.

ರಾಜರನ್ನು ಕುರಿತ ಶಾಸನಗಳ ಜತೆಗೆ, ಮಂತ್ರಿ ಮತ್ತಿತರರನ್ನೂ ಕುರಿತ ಶಾಸನಗಳೂ ತಕ್ಕಷ್ಟು ಕಾವ್ಯಮಯವಾಗಿ ನಿರೂಪಿತವಾಗಿವೆ. ಹೊಯ್ಸಳರಾಜ ಒಂದನೆಯ ನರಸಿಂಹನ ಮಂತ್ರಿಯಾದ ಹುಳ್ಳನು ಬೆಳುಗೊಳದಲ್ಲಿ ಬಸದಿಯೊಂದನ್ನು ಕಟ್ಟಿಸಿದಾಗ, ಆತನ ವ್ಯಕ್ತಿತ್ವವನ್ನು ಶಾಸನವೊಂದು ಹೀಗೆ ವರ್ಣಿಸುತ್ತದೆ:

ಧರೆಯಂ ಗೆಲ್ದಿರ್ದ ತಿಣ್ಪುಳ್ಳನನ್, ಉದಧಿಯನ್ ಏನ್ ಎಂಬ ಗುಣ್ಪುಳ್ಳನನ್, ಮಂ
ಧರಮಂ ಮಾರ್ಕೊಳ್ವ ಪೆಂಪುಳ್ಳನನ್, ಅಮರಮಹೀಜಾತಮಂ ಮಿಕ್ಕ ಲೋಕೋ
ತ್ತರಮಪ್ಪ ಆರ್ಪುಳ್ಳನನ್, ಪುಳ್ಳನನ್, ಎಸೆವ ಜಿನೇಂದ್ರಾಂಘ್ರೀಪಂಕೇಜ ಪೂಜೋ
ತ್ಕರದೊಳ್ ತಳ್ಪೊಯ್ದ ಅಲಂಪುಳ್ಳನನ್ ಅನುಕರಿಸಲ್ ಮರ್ತ್ಯನಾವೊಂ ಸಮರ್ಥಂ
[27]

ಈ ಪದ್ಯದಲ್ಲಿ ಅತಿಶಯತೆ ಧಾರಾಳವಾಗಿದ್ದರೂ, ‘ಹುಳ್ಳನನ್’ ಎಂಬುದಕ್ಕೆ ಸಪ್ರಾಸವಾಗಿ ಹೊಂದಿಕೊಳ್ಳುವ ‘ಉಳ್ಳನನ್’ ಎಂಬ ಪದಗಳನ್ನು ಪ್ರಯೋಗಿಸುವುದರ ಮೂಲಕ, ಹುಳ್ಳನ ವ್ಯಕ್ತಿತ್ವದ ಘನತೆಯನ್ನು ವರ್ಣಿಸುವ ಈ ಚಮತ್ಕಾರ, ಹಳಗನ್ನಡ ಕಾವ್ಯದ ಗರುಡಿಯಲ್ಲಿ ಪಳಗಿದ ಕವಿಮಲ್ಲನ ಪಟ್ಟುಗಳನ್ನು ನೆನಪಿಗೆ ತರುತ್ತದೆ.

ಈ ಎಲ್ಲ ರಾಜರ ಹಾಗೂ ಅವರ ಪರಿವಾರದವರ ಪ್ರತಾಪ-ವೀರಗಳ ಸಂಗತಿಗಳು ಕಾಣಿಸಿಕೊಳ್ಳುವುದು ದಾನ-ದತ್ತಿ-ದೇವಾಲಯ ನಿರ್ಮಾಣ ಮತ್ತು ನಿಷಿಧಿ ಶಾಸನಗಳಲ್ಲಿ. ವಾಸ್ತವವಾಗಿ ಇವು ಯುದ್ಧದ ತುದಿಗೆ ನಿಲ್ಲಿಸಿದ ವೀರಶಾಸನಗಳಲ್ಲ; ಆದರೆ, ರಾಜರ ಪರಾಕ್ರಮವನ್ನು ಬಹುಮಟ್ಟಿಗೆ ಘೋಷಿಸುವ ಇವು ಒಂದು ಧಾರ್ಮಿಕ ಸಂದರ್ಭದಲ್ಲಿ ಆಯಾ ವ್ಯಕ್ತಿಗಳ ಪೂರ್ವೋತ್ತರಗಳನ್ನು ದಾಖಲಿಸುವ ಪ್ರಯತ್ನಗಳಾಗಿವೆ. ಶೌರ‍್ಯ, ಪ್ರತಾಪ, ತ್ಯಾಗ, ಶೌಚ-ಇತ್ಯಾದಿ ಗುಣಸಮನ್ವಿತರಾದ ಈ ರಾಜಾಧಿರಾಜರ ವ್ಯಕ್ತಿತ್ವ ಹೇಗೆ ಧರ್ಮಕ್ಕೆ ಶರಣಾಗುತ್ತದೆಂಬುದನ್ನೂ, ಭೋಗ ವೈಭವಗಳ ತುತ್ತತುದಿಯ ಧಾರ್ಮಿಕ ವಿನಯದ ನಿಲುವನ್ನೂ ಇವು ಸೂಚಿಸುತ್ತವೆ.

-೩-

ಮಹಿಳೆಯರನ್ನು ಕುರಿತ ಶಾಸನಗಳೂ, ಇದುವರೆಗೂ ಪ್ರಸ್ತಾಪಿಸಿದ ಕಾವ್ಯ ಸಂಪ್ರದಾಯದ ಲಕ್ಷಣಗಳಿಗೆ ಹೊರತಾಗಿಲ್ಲ. ಇಲ್ಲಿ ರಾಣಿಯರಿದ್ದಾರೆ, ಮಂತ್ರಿ, ಸಾಮಂತರ ಪತ್ನಿಯರಿದ್ದಾರೆ. ಆದರೆ ಅವರೆಲ್ಲರ ವರ್ಣನೆ ಬಹುಮಟ್ಟಿಗೆ ಒಂದೇ ಎರಕದಲ್ಲಿ ಹೊಯ್ದಂತಿದೆ. ರಾಜರ ವರ್ಣನೆಯನ್ನು ಕುರಿತ ಶಾಸನಗಳಲ್ಲಿ ಎಷ್ಟೋ ವೈವಿಧ್ಯತೆ ಇದೆ. ಆದರೆ ಮಹಿಳೆಯರನ್ನು ಕುರಿತ ವರ್ಣನೆಗಳಲ್ಲಿ ಒಬ್ಬರಿಂದ ಇನ್ನೊಬ್ಬರನ್ನು ಬೇರ್ಪಡಿಸುವುದು ಕಷ್ಟವಾಗುತ್ತದೆ. ಶಾಂತಲೆ, ಮಾಚಿಕಬ್ಬೆ, ಲಕ್ಷ್ಮೀಮತಿ, ಸಾವಿಯಬ್ಬೆ, ಆಚಲದೇವಿ, ಪದ್ಮಾವತಿ, ಕಾಳವ್ವೆ, ಚಂದವ್ವೆ- ಇತ್ಯಾದಿ ಮಹಿಳೆಯರ ರೂಪವರ್ಣನೆಯ ಅಲಂಕಾರ ಸಾಮಗ್ರಿಯಂತೂ ಒಂದೇ ಮಾದರಿಯದಾಗಿರುವುದು ವಿಲಕ್ಷಣವಾದ ಸಂಗತಿಯಾಗಿದೆ. ಈ ಕೆಲವು ನಿದರ್ಶನಗಳನ್ನು ನೋಡಿ-

ಇಭಗಮನೆ ಹರಿಣೀಲೋಚನೆ ಶುಭಲಕ್ಷಣೆ
ತಾನಭಿನವ ರುಕ್ಮಿಣಿಯೆನಲ್ ಈ ಭುವನದೊಳ್
ಪೋಲ್ವರೊಳರೆ ಲಕ್ಷ್ಮೀಮತಿಯಂ
[28]

ಆ ನೆಗೞ್ದ ವಿಷ್ಣುನೃಪನ ಮನೋನಯನಪ್ರಿಯೆ
ಚಲಾಳಿನೀಲಾಳಕೆ ಚಂದ್ರಾನನೆ ಕಾಮನ ರತಿಯೊಳ್
ತಾನೆಣೆ ತೊಣೆ ಸರಿಸಮಾನ ಶಾಂತಲದೇವೀ
[29]

ಹರಿಣೀಲೋಚನೆ, ಪಂಕಜಾನನೆ, ಘನಶ್ರೋಣೀಸ್ತನಾಭೋಗ ಭಾ
ಸುರೆ ಬಿಂಬಾಧರೆ, ಕೋಕಿಳಸ್ವನೆ, ಸುಗಂಧಶ್ವಾಸೆ…
ಭೃಂಗಾವಳಿನೀಳಕೇಶ, ಕಳಹಂಸೀಯಾನೆ, ಕಂಬುಕಂಧರೆ
ಯಪ್ಪಾಚಲದೇವಿ
[30]

ಸರಸಿರುಹವದನೆ ಘನಕುಚೆ ಹರಿಣಾಕ್ಷಿ ಮದೋತ್ಕೋಕಿಳಸ್ವನೆ
ಮದವತ್ಕರಿಪತಿಗಮನೆ ತನೂದರಿ
ಧರೆಯೊಳ್ ಕಾಳವ್ವೆ ರೂಪಿನಾಗರಮಾದಳ್
[31]

ಕಮನೀಯಾನನ ಹೇಮತಾಮರಸದಿಂ
ನೇತ್ರಾಸಿತಾಂಭೋಜದಿಂದಮಳಾಂಗದ್ಯುತಿಕಾಂತಿಯಿಂ
ಕುಚ ರಥಾಂಗದ್ವಂದ್ವದಿಂ…
ಪದ್ಮಾವತೀ ಲಲನಾರತ್ನದ ರೂಪಶೀಲಗುಣಮಂ
ಪೋಲ್ವನ್ನರಾರ್ ಕಾಂತೆಯರ್?
[32]

ಈ ನಿದರ್ಶನಗಳಲ್ಲಿ ವರ್ಣಿತವಾಗಿರುವ ಸ್ತ್ರೀಯರ ಹೆಸರು ಮಾತ್ರ ಬೇರೆ ಬೇರೆ; ಆದರೆ ವರ್ಣನೆಯ ಸಾಮಗ್ರಿ ಬಹುಮಟ್ಟಿಗೆ ಒಂದೇ. ಇಲ್ಲಿ ಯಾರಿಂದ ಯಾರು ಹೇಗೆ ಭಿನ್ನ ಎಂಬುದೇ ತಿಳಿಯದಷ್ಟು ಸವಕಲು ಸಾಮಗ್ರಿಯಿಂದ ಮೂಡಿವೆ ಈ ಹೆಣ್ಣುಗಳ ಚಿತ್ರ. ಇದ್ದುದರಲ್ಲಿ ಮಹಾರಾಣಿ ಶಾಂತಲೆಯನ್ನು ಕುರಿತು, ಗದ್ಯರೂಪದಲ್ಲಿ ಬರೆಯಲಾದ ಒಂದು ಶಾಸನ ಮಾತ್ರ ಅವಳ ವ್ಯಕ್ತಿತ್ವದ ವಿವಿಧ ಮುಖಗಳನ್ನು ಪರಿಚಯ ಮಾಡಿಕೊಡುತ್ತದೆ. ಆ ಶಾಸನದ ಸ್ವಲ್ಪ ಭಾಗ ಹೀಗಿದೆ:

“ಸ್ವಸ್ತ್ಯನವರತ ಪರಮ ಕಲ್ಯಾಣಾಭ್ಯುದಯ ಸಹಸ್ರಫಲಭೋಗಭಾಗಿನಿ ದ್ವಿತೀಯ ಲಕ್ಷ್ಮೀ ಲಕ್ಷಣಸಮಾನೆಯುಂ; ಸಕಲಗುಣಗಣಾನೂನೆಯುಂ; ವಿವೇಕೈಕ ಬೃಹಸ್ಪತಿಯುಂ; ಪ್ರತ್ಯುತ್ಪನ್ನವಾಚಸ್ಪತಿಯುಂ; ಮುನಿಜನವಿನೇಯಜನವಿನೀತೆಯುಂ; ಚತುಸ್ಸಮಯ ಸಮುದ್ಧರಣೆಯುಂ; ಬ್ರತಗುಣಶೀಳಚಾರಿತಾಂತಃಕರಣೆಯುಂ; ಲೋಕೈಕ ವಿಖ್ಯಾತೆಯುಂ; ಪತಿಬ್ರತಾಪ್ರಭಾವ ಪ್ರಸಿದ್ಧ ಸೀತೆಯುಂ; ಸಕಳವಂದಿತಜನ ಚಿಂತಾಮಣಿಯುಂ; ಸಮ್ಯಕ್ತ್ವ ಚೂಡಾಮಣಿಯುಂ; ಮನೋರಾಜ ವಿಜಯ ಪತಾಕೆಯುಂ; ನಿಜ ಕಳಾಭ್ಯುದಯ ದೀಪಿಕೆಯುಂ; ಗೀತವಾದ್ಯಸೂತ್ರಧಾರೆಯುಂ; ಜಿನಸಮಯ ಸಮುದಿತ ಪ್ರಕಾರೆಯುಂ; ಜಿನಧರ್ಮ ಕಥಾಕಥನ ಪ್ರಮೋದೆಯುಂ; ಆಹಾರಾಭಯಭೈಶಜ್ಯ ಶಾಸ್ತ್ರದಾನ ವಿನೋದೆಯುಂ, ಜಿನಧರ್ಮ ನಿಳಯೆಯುಂ;  ಭವ್ಯಜನಚೂಳೆಯುಂ; ಜಿನ ಗಂಧೋದಕ ಪವಿತ್ರೀಕೃತೋತ್ತಮಾಂಗೆಯುಂ…”[33]

-೪-

ಇದುವರೆಗಿನ ಸಮೀಕ್ಷೆ, ಶ್ರವಣಬೆಳುಗೊಳದ ಗೊಮ್ಮಟೇಶ್ವರನ ಸುತ್ತ, ತಪಸ್ಸು ಮಾಡಿದವರ, ಮುಡುಪಿದವರ, ಬಸದಿಗಳನ್ನು ನಿರ್ಮಿಸಿದವರ, ಜಿನಮುನಿಗಳ, ರಾಜರು, ಮಂತ್ರಿ ದಂಢಾಧೀಶರ, ರಾಣಿಯರು ಮತ್ತಿತರರ ಸಂಗತಿಗಳನ್ನೊಳಗೊಂಡ ಶಾಸನಗಳ ಕಾವ್ಯಗುಣಕ್ಕೆ ಸಂಬಂಧಪಟ್ಟದ್ದು. ಆದರೆ, ಈ ಎಲ್ಲದಕ್ಕೂ ಕೇಂದ್ರದಲ್ಲಿರುವ ಬಾಹುಬಲಿಯನ್ನು ಕುರಿತು ಯಾರೂ ಸ್ಫೂರ್ತಿ ಪಡೆದು ಕವಿತೆ ಕಟ್ಟಲಿಲ್ಲವೇ ಎಂಬ ಪ್ರಶ್ನೆಗೆ ಮೊದಲ ಉತ್ತರವಾಗಿದೆ, ಕವಿ ಬೊಪ್ಪಣನ ‘ಗೊಮ್ಮಟ ಸ್ತುತಿ’. ಕ್ರಿ.ಶ. ಸುಮಾರು ೧೧೮೦ರ ಈ ಗೊಮ್ಮಟ ಸ್ತುತಿ, ಕನ್ನಡದ ಶಾಸನ ರೂಪದ ಮೊತ್ತಮೊದಲ ಕಾವ್ಯವಾಗಿದೆ. ಅಷ್ಟೇ ಅಲ್ಲ, ಕನ್ನsಡದ ಏಕೈಕ ಶಾಸನ ಕಾವ್ಯವಾಗಿದೆ, ಇದು.

ಶ್ರೀ ಗೊಮ್ಮಟಜಿನನಂ ನರನಾಗಾಮರ ದಿತಿಜ ಖಚರಪತಿಪೂಜಿತನಂ
ಯೋಗಾಗ್ನಿ ಹತಸ್ಮರನಂ ಯೋಗಿಧ್ಯೇಯನನ್ ಅಮೇಯನಂ ಸ್ತುತಿಯಿಸುವೆಂ
[34]

ಎಂದು ಮೊದಲಾಗುವ, ಮೂವತ್ತೆರಡು ವೃತ್ತಗಳನ್ನುಳ್ಳ ಈ ‘ಸ್ತುತಿಕಾವ್ಯ’ ಶ್ರೀ ಗೊಮ್ಮಟನ ದಿವ್ಯ-ಭವ್ಯ ವ್ಯಕ್ತಿತ್ವದ ಉದಾತ್ತ ಕಥನವಾಗಿದೆ. ಬೆಳುಗೊಳದ ಗೊಮ್ಮಟಮೂರ್ತಿಯನ್ನು ಕಂಡು, ಅದರ ಶಿಲ್ಪಭವ್ಯತೆಯ ಬಗೆಗೆ.

ಅತಿ ತುಂಗಾಕೃತಿಯಾದೊಡೆ ಆಗದು ಅದರೊಳ್ ಸೌಂದರ್ಯಮೌನ್ನತ್ಯಮುಂ
ನುತ ಸೌಂದರ್ಯಮುಮಾಗೆ ಮತ್ತತಿಶಯಂ ತಾನಾಗದೌನ್ನತ್ಯಮುಂ,
ನುತ ಸೌಂದರ್ಯಮುಂ, ಊರ್ಜಿತಾತಿಶಯಮುಂ ತನ್ನಲ್ಲಿ ನಿಂದಿರ್ದುವು, ಏಂ
ಕ್ಷಿತಿ ಸಂಪೂಜ್ಯಮೋ ಗೊಮ್ಮಟೇಶ್ವರ ಜಿನ ಶ್ರೀರೂಪಮಾತ್ಮೋಪಮಂ
[35]

‘ಸಾಮಾನ್ಯವಾಗಿ ಅತ್ಯಂತ ಎತ್ತರವಾದ ಶಿಲ್ಪದಲ್ಲಿ, ಸೌಂದರ್ಯ ಹಾಗೂ ಔನ್ನತ್ಯಗಳು ಮೂಡಲಾರವು; ಒಂದು ವೇಳೆ ಪ್ರಶಂಸಾರ್ಹವಾದ ಸೌಂದರ್ಯ ಒದಗಿದರೂ, ಅದು ಅತಿಶಯತೆಯನ್ನು ಪಡೆಯಲಾರದು; ಹೀಗಿದ್ದರೂ ಈ ಗೊಮ್ಮಟ ವಿಗ್ರಹದಲ್ಲಿ ಔನ್ನತ್ಯವೂ, ಸೌಂದರ್ಯವೂ, ಊರ್ಜಿತವಾದ ಅತಿಶಯತೆಯೂ ಮುಪ್ಪುರಿಗೊಂಡು, ಗೊಮ್ಮಟನ ಈ ಮೂರ್ತಿ ಕ್ಷಿತಿ ಸಂಪೂಜ್ಯವಾಗಿದೆ. ಹಾಗೆ ನೋಡಿದರೆ ಈ ಗೊಮ್ಮಟಮೂರ್ತಿ ಕೇವಲ ಮರ್ತ್ಯದ ಚೆಲುವಿನ ಮೂರ್ತಿಯಲ್ಲ; ಇದು ಗೊಮ್ಮಟನ ಶ್ರೀರೂಪ, ಒಳಗಿನ ಆತ್ಮಕ್ಕೆ ನಿರ್ಮಿಸಿದ ಹೋಲಿಕೆಯಷ್ಟೆ?’ ಸೌಂದರ್ಯವು ಶ್ರೇಷ್ಠತೆಯನ್ನೂ ಅತಿಶಯತೆಯನ್ನೂ ಪಡೆಯುವುದು, ಅದು ಒಳಗಿನ ಆತ್ಮಸೌಂದರ್ಯದ ಪ್ರತೀಕವಾದಾಗ ಎನ್ನುವ ಬೊಪ್ಪಣನ ಈ ಶಿಲ್ಪ ಕಲಾ ಮೀಮಾಂಸೆ ತೀರಾ ಅಪೂರ್ವವಾಗಿದೆ. ಆದುದರಿಂದಲೇ, ಆತ ತನ್ನ ಈ ಸ್ತುತಿಕಾವ್ಯದ ಮೊದಲಲ್ಲಿ ‘ಅಮೇಯನಂ ಸ್ತುತಿಯಿಸುವೆಂ’ ಎಂದು ಹೇಳಿಕೊಂಡಿರುವುದು ಸರಿಯಾಗಿದೆ.

ಮುಂದಿನ ಪದ್ಯಗಳಲ್ಲಿ ಬೊಪ್ಪಣನು, ಈ ಗೊಮ್ಮಟವಿಗ್ರಹ ಮೂಡಿಸುವ ‘ಆಶ್ಚರ್ಯ’ವನ್ನೂ, ಈ ತೆರೆದ ಲೋಕವೇ ಗೊಮ್ಮಟನ ಆಲಯವಾಗಿರುವುದನ್ನೂ, ಗೊಮ್ಮಟನಿಗೆ ಮಸ್ತಕಾಭಿಷೇಕ ಸಮಯದಲ್ಲಿ ಮೇಲಿಂದ ಸುರಿದ ಹೂವಿನ ಮಳೆ, ನಕ್ಷತ್ರ ಲೋಕವೇ ಆತನ ಪಾದಸೇವೆಗೆ ಇಳಿದಂತೆ ತೋರಿದ್ದನ್ನೂ ವರ್ಣಿಸಿ, ಗೊಮ್ಮಟಮೂರ್ತಿ ಮನುಷ್ಯರಾದ ನಮಗೆ ಮೌನದಿಂದ ನೀಡುವ ಅಮೋಘ ಸಂದೇಶವನ್ನು ವರ್ಣಿಸುತ್ತಾನೆ. ಗೊಮ್ಮಟಸ್ತುತಿ, ಕಲ್ಲಿನ ಮೇಲೆ ಕೊರೆದ, ಉತ್ತಮ ಕಾವ್ಯಗುಣವುಳ್ಳ ಒಂದು ಭಾವಗೀತೆಯಾಗಿದೆ.

ಬೊಪ್ಪಣನ ಗೊಮ್ಮಟಸ್ತುತಿಯೊಂದನ್ನು ಬಿಟ್ಟರೆ ಶ್ರವಣಬೆಳುಗೊಳದ ಕಾವ್ಯಗುಣದಿಂದ ಮನಸೆಳೆಯುವ ಎಷ್ಟೋ ಶಾಸನಗಳನ್ನು ಬರೆದವರು ಯಾರಿರಬಹುದು -ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಕನ್ನಡ ಕಾವ್ಯಪರಂಪರೆಯ ಬದಿಗೇ, ಈ ಶಾಸನ ಪರಂಪರೆಯೂ ಜತೆಜತೆಗೇ ಬಂದಿದ್ದರೂ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದ ಕೆಲವು ಕವಿಗಳು, ಶಾಸನಗಳನ್ನೂ ರಚಿಸಿರುವ ದಾಖಲೆಗಳಿದ್ದರೂ, ಮುಕ್ಕಾಲುಪಾಲಿಗಿಂತ ಮಿಗಿಲಾದ ಕನ್ನಡ ಶಾಸನಗಳನ್ನು ಬರೆದವರು  ಯಾರೆಂಬುದು ಇನ್ನೂ ತಿಳಿಯದಾಗಿದೆ. ಶ್ರವಣಬೆಳುಗೊಳದ ಹಲವು ಶಾಸನಗಳಲ್ಲಿ, ಕೊರೆದವನ (ಕಂಡರಿಸಿದವನ) ಹೆಸರುಗಳು ಪ್ರಾಸಂಗಿಕವಾಗಿ ಕಾಣಿಸಿಕೊಂಡರೂ, ವಾಸ್ತವವಾಗಿ ಮೂಲಶಾಸನ ಪಾಠಗಳನ್ನು ಸಿದ್ಧಪಡಿಸಿದವರು ಯಾರು ಎಂಬುದು ತಿಳಿಯದಾಗಿದೆ.[36] ಶ್ರವಣಬೆಳುಗೊಳಕ್ಕೆ ನೇರವಾಗಿ ಸಂಬಂಧಪಟ್ಟ, ಚಾವುಂಡರಾಯ, ರನ್ನ, ನಾಗವರ್ಮ, ಅಗ್ಗಳ ಮೊದಲಾದ ಕವಿಗಳಿದ್ದಾರೆ. ಇಲ್ಲಿಗೆ ಸಂಬಂಧಿಸಿದ ಅನೇಕ ಪಂಡಿತರು, ಆಚಾರ್ಯರು ಮುನಿಗಳೂ ಇದ್ದಾರೆ. ಇವರಲ್ಲಿ ಬಹುಮಂದಿ ಪ್ರಕಾಂಡ ಪಂಡಿತರೂ, ಕಾವ್ಯಗಳನ್ನು ಬರೆದ ಕವಿಗಳೂ ಆಗಿದ್ದರೆಂದು ಅನೇಕ ಶಾಸನಗಳು ಹೇಳುತ್ತವೆ. ಗೋಪನಂದಿ ‘ಸಕಳಕಳಾಕೋವಿದಂ ಕಾವ್ಯ ಕಂಜಾಸನನ್’ -ಎಂದು ವರ್ಣಿತನಾಗಿದ್ದಾನೆ:[37] ಶಾಂತಿನಾಥ ಪಂಡಿತ ಮತ್ತು ಪದ್ಮನಾಭ ಪಂಡಿತರು (ಕ್ರಿ.ಶ.ಸು ೧೦೦೦), ಕ್ರಿ.ಶ ೧೧೨೯ ರ ಶಾಸನದ ಪ್ರಕಾರ ಅಜಿತಸೇನರ ಶಿಷ್ಯರಾಗಿದ್ದರೆಂದೂ ಮತ್ತು ಅವರು ಕವಿತಾಕಾಂತ, ವಾದಿ ಕೋಲಾಹಲ ಎಂದು ಅನುಕ್ರಮವಾಗಿ ಅನ್ಯನಾಮಗಳನ್ನು ಹೊಂದಿದ್ದರೆಂದೂ ತಿಳಿದುಬರುತ್ತದೆ.[38] ಕ್ರಿ.ಶ. ೧೧೦೦ರ, ೬೯ನೇ ಶಾಸನದಲ್ಲಿ ಜಿನಚಂದ್ರನೆಂಬಾತನು ಸಾಹಿತ್ಯದಲ್ಲಿ ಭಾರವಿ, ಕಾವ್ಯ ಗಮಕ ವಾದಿ ವಾಗ್ಮಿತ್ವಗಳಲ್ಲಿ ಶ್ರೇಷ್ಠನೆಂದು ಪ್ರಶಂಸಿತನಾಗಿದ್ದಾನೆ. ಚತುರ್ಮುಖದೇವ (ಕ್ರಿ.ಶ.ಸು. ೧೦೬೫)ರಿಗೆ ಕವಿ ಗಮಕಿ ವಾದಿ ವಾಗ್ಮಿ ಪ್ರವರನುತರಾದ ೮೪ ಜನ ಶಿಷ್ಯರಿದ್ದರೆಂದೂ, ಅವರಲ್ಲಿ ಗೋಪನಂದಿ ಶ್ರೇಷ್ಠನಾದವನೆಂದೂ, ಈತ ಕಾವ್ಯದಲ್ಲಿ ಬ್ರಹ್ಮ, ತರ್ಕದಲ್ಲಿ ವರಿಷ್ಠನಾಗಿದ್ದನೆಂದೂ ಶಾಸನವೊಂದು ತಿಳಿಸುತ್ತದೆ.[39] ಬಾಲಚಂದ್ರ ಮುನಿಯನ್ನು ೧೧೦೦ರ, ಬೆಳುಗೊಳದ ೬೯ನೆಯ ಶಾಸನವು “ವ್ಯಾಕರಣ ಅರ್ಥಶಾಸ್ತ್ರ ಭರತ ಅಳಂಕಾರ ಸಾಹಿತ್ಯದಿಂ ರಾದ್ಧಾಂತೋತ್ತಮ”ನೆಂದು ಹೇಳುತ್ತದೆ.[40] ದೇವಕೀರ್ತಿ (ಕ್ರಿ.ಶ.ಸು. ೧೧೬೩)ಯು ‘ಕವಿ ವಾದಿ ವಾಗ್ಮಿ’ ‘ಯಾಗಿದ್ದು, ಆತನಿಗೆ ‘ಚತುರತೆ ಸತ್ಕವಿತ್ವದೊಳ್ ಅಭಿಜ್ಞತೆ ಶಬ್ದಕಳಾಪದೊಳ್’ ಮೈಗೂಡಿತ್ತೆಂದು, ಶಾಸನವು ಪ್ರಶಂಸಿಸುತ್ತದೆ.’[41]

ಶ್ರವಣಬೆಳುಗೊಳದೊಂದಿಗೆ ಹೆಣೆದುಕೊಂಡ ಇಷ್ಟೊಂದು ಜನ, ಕವಿಗಳು, ಪಂಡಿತರು, ಆಚಾರ್ಯರುಗಳು ಇರುವಾಗ, ಅವರಲ್ಲಿ ಹಲವರಾದರೂ, ಸಂದರ್ಭಾನುಸಾರವಾಗಿ, ಕೆಲವು ಶಾಸನಗಳನ್ನು- (ಕೇವಲ ವಿಷಯ ನಿರೂಪಣೆಯ, ಹೇಳಿಕೆಯ ರೂಪದವುಗಳನ್ನು ಬರೆಯಲು ವಿಶೇಷ ವಿದ್ವತ್ತೇನೂ ಬೇಕಾಗುವುದಿಲ್ಲ) ಅದರಲ್ಲೂ ಪದ್ಯಬಂಧ ಶಾಸನಗಳನ್ನು ಬರೆದಿರ ಬಹುದೆಂದು ಊಹಿಸುವುದು ಸತ್ಯದೂರವಾಗುವುದಿಲ್ಲವೆಂದು ತಿಳಿದಿದ್ದೇವೆ. ಹಾಗಿದ್ದರೆ, ಬರೆದವರು ತಮ್ಮ ಹೆಸರುಗಳನ್ನೇಕೆ ಹೇಳಿಕೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಹೆಸರು ಹಾಕಿಕೊಳ್ಳುವುದು ಅನಗತ್ಯವೆಂಬ ಭಾವನೆಯೂ ಇದರ ಹಿಂದೆ ಕೆಲಸ ಮಾಡಿರಬಹುದು. ಸಾಂದರ್ಭಿಕವಾದ ಹಾಗೂ ಸಂಕ್ಷಿಪ್ತವಾದ ಶಾಸನ ರಚನೆಯಂಥ ಬರೆಹಕ್ಕೆ, ಸಾಹಿತ್ಯಕ ಸಂದರ್ಭಗಳಲ್ಲಿಯಂತೆ, ತಮ್ಮ ಹೆಸರು ಹಾಕಿಕೊಳ್ಳುವುದು ಮುಖ್ಯವಲ್ಲ ಎಂದೋ, ಬಹುಮಟ್ಟಿಗೆ ಪ್ರಭುಶಕ್ತಿಯಿಂದ ನಿರ್ದೇಶಿತವಾದ ಈ ಬರಹಗಳಲ್ಲಿ, ತಮ್ಮ ಹೆಸರು ಹಾಕಿಕೊಳ್ಳಲು ಇಷ್ಟಪಡದಿದ್ದುದರಿಂದಲೋ ಹೀಗಾಗಿರಬಹುದು. ಹಾಗೆ ನೋಡಿದರೆ, ಕಾವ್ಯರಚನಾ ಸಂದರ್ಭಗಳಲ್ಲೇ, ತಮ್ಮ ನಾಮ-ದೇಶ-ಕಾಲಗಳನ್ನು ನಮೂದಿಸುವ ಬಗ್ಗೆ ನಮ್ಮ ಕವಿಗಳಿಗಿರುವ ಉದಾಸೀನತೆ, ಅಪರಿಚಿತವಾದುದೇನಲ್ಲ.

ಇದು ಏನೇ ಇರಲಿ, ಶ್ರವಣಬೆಳುಗೊಳದ ಈವರೆಗೂ ಪರಿಶೀಲಿಸಿದ ಎಷ್ಟೋ ಶಾಸನಗಳು ತಕ್ಕಮಟ್ಟಿಗೆ ಒಳ್ಳೆಯ ಕಾವ್ಯದ ತುಣುಕುಗಳೇ ಆಗಿವೆ. ಇವುಗಳನ್ನು ಬರೆದವರು, ಬಹುಶಃ ಕವಿಗಳಾಗಿರಬೇಕು ಅಥವಾ ಕಾವ್ಯರಚನೆಯನ್ನು ಚೆನ್ನಾಗಿ ಬಲ್ಲವರಾಗಿರಬೇಕು. ಜತೆಗೆ ಕನ್ನಡ ಕಾವ್ಯದ, ಅದರಲ್ಲೂ ಚಂಪೂಕಾವ್ಯ ಸಂಪ್ರದಾಯವನ್ನು ಅವರು ಬಲ್ಲವರಾಗಿದ್ದರೆಂಬುದನ್ನು ಈ ಶಾಸನಗಳ ಭಾವ-ಬಂಧ-ಶೈಲಿಗಳು ಖಚಿತಪಡಿಸುತ್ತವೆ. ಮೊದಲಿನಿಂದಲೂ ಶಾಸನಗಳು ಭಾಷೆ ಮತ್ತು ರಚನೆಯ ದೃಷ್ಟಿಯಿಂದ ಚಂಪೂ ಕಾವ್ಯಗಳನ್ನು ತಮ್ಮ ಆದರ್ಶವನ್ನಾಗಿಟ್ಟುಕೊಂಡಂತೆ ತೋರುತ್ತವೆ.[42] ಹೀಗಾಗಿ ಇವುಗಳು ಎಷ್ಟೋ ವೇಳೆ ಪಂಪ-ರನ್ನರಂಥ ಕವಿಗಳ ಅನುಕರಣೆಗಳೋ ಅಥವಾ ಆಯಾ ಕವಿಗಳ ಪದ್ಯಾಂತರಗಳೋ ಆಗಿವೆ. ನಿದರ್ಶನಕ್ಕೆ ಕ್ರಿ.ಶ.ಸು ೯೫೦ರ ಶ್ರವಣಬೆಳುಗೊಳದ ಶಾಸನ, ಬಾಯಿಕನನ್ನು ಕುರಿತು-

‘ಶ್ರೀಯುವತಿಗೆ ನಿಜವಿಜಯ ಶ್ರೀಯುವತಿಯೆ ಸವತಿಯೆನಿಸಿ’

ಎಂದು ಪ್ರಾರಂಭವಾಗುತ್ತದೆ. ಇಲ್ಲಿನ ಇದೇ ಪಾದ, ರನ್ನನ ಗದಾಯುದ್ಧ (೪-೧)ದಿಂದ ಎತ್ತಿಕೊಂಡದ್ದು; ಕ್ರಿ.ಶ.ಸು. ೧೧೪೫ರ ಶಾಸನದಲ್ಲಿ ಶುಭ ಕೀರ್ತಿಯ ವಿದ್ವತ್ತಿನ ಬಗೆಗೆ,  ‘ಶುಭಕೀರ್ತಿ ಮುನಿಪನೊಳೇಂಗಡ ನುಡಿಯಲ್ಕೆ ವಾದಿಗಳ್ಗೆಂಟೆರ್ದೆಯೆ’ ಎಂಬ ಸವಾಲಿನೊಳಗಿನ ‘ಎಂಟೆರ್ದೆ’ ರನ್ನನದೇ; ಕ್ರಿ.ಶ.ಸು. ೧೧೨೩ರ ಶಾಸನದಲ್ಲಿ ಬರುವ ಶಾಂತಲೆಯ ವರ್ಣನೆ, ‘ಆ ನೆಗೞ್ದ ವಿಷ್ಣುನೃಪನ ಮನೋನಯನ ಪ್ರಿಯೆ ಚಲಾಳಿ ನೀಲಾಲಕೆ ಚಂದ್ರಾನನೆ’ ಎಂಬುದು. ಪಂಪಭಾರತದ (೧-೩೯) ‘ಆ ನರಸಿಂಹ ಮಹೀಶ ಮನೋನಯನಪ್ರಿಯೆ ವಿಳೋಳ ನೀಳಾಳಕಿ ಚಂದ್ರಾನನೆ’ ಎಂಬ ಪಂಕ್ತಿಯ ಯಥಾನುಕರಣೆಯಾಗಿದೆ. ಇಂಥವಲ್ಲದೆ, ‘ಸಾಹಸಭೀಮ’, ‘ಚಲದಂಕರಾಮ’, ‘ಕದನ ಪ್ರಚಂಡ’ ಇಂಥ ಎಷ್ಟೋ ಬಿರುದುಗಳನ್ನು ಈ ಶಾಸನ ಕವಿಗಳು ಸಮಯೋಚಿತವಾಗಿ ಬಳಸಿಕೊಂಡಿದ್ದಾರೆ. ಈ ಶಾಸನ ಕವಿಗಳ ಅಲಂಕಾರ ಸಾಮಗ್ರಿ ಕೂಡ ಚಂಪೂ ಪರಂಪರೆಯದೇ. ಋಷಿ ಮುನಿಗಳ ವರ್ಣನೆಯಲ್ಲಿ, ಬೆಳುದಿಂಗಳು, ಎಳೆಮಾವಿನ ಬನ, ತಿಳಿಗೊಳ, ಸೂರ‍್ಯ-ಚಂದ್ರ ಇತ್ಯಾದಿಗಳು, ಅವರ ಪ್ರಶಾಂತತೆ ಹಾಗೂ ತಪಸ್ಸನ್ನು ಸೂಚಿಸಲು ಬರುವಂತೆ, ರಾಜರು-ದಂಡಾಧೀಶರ ವೀರಾದಿ ವರ್ಣನೆಯಲ್ಲಿ ಸಿಂಹ, ಪ್ರಳಯಮಾರುತ, ಸಿಡಿಲು, ಕಾಳಾನಳ, ಪುರಹರನ ಉರಿಗಣ್ಣು ಇತ್ಯಾದಿಗಳೂ, ಅವರ ಧೈರ‍್ಯ ಹಾಗೂ ಆಶ್ರಿತಗುಣಗಳನ್ನು ಹೇಳುವಾಗ, ಮಂದರಾಚಲ, ಅಮೃತ ಸಮುದ್ರ, ಕಲ್ಪವೃಕ್ಷ ಇತ್ಯಾದಿ ಮಾತುಗಳೂ ಬರುತ್ತವೆ. ಇನ್ನು ಸ್ತ್ರೀವರ್ಣನೆಗಳಂತೂ ಒಂದೇ ಥರ. ಎಲ್ಲರೂ, ಅವರು ಯಾರೇ ಆದರೂ ಘನಕುಚೆ, ಹರಿಣೀಲೋಚನೆ, ಭೃಂಗಾವಳಿ, ನೀಳಕೇಶೆ, ಮದವತ್ಕರಿಗಮನೆ, ಕೋಕಿಳಸ್ವನೆ. ಒಟ್ಟಿನಲ್ಲಿ ಚಂಪೂ ಕಾವ್ಯ ಪರಂಪರೆಯ, ತೀರಾ ಪರಿಚಿತವಾದ ಸಾಮಗ್ರಿಗಳಿಂದಲೇ, ತಮ್ಮ ಸಮಕಾಲೀನವಾದ ಸಂದರ್ಭಗಳನ್ನೂ, ವ್ಯಕ್ತಿಚಿತ್ರಗಳನ್ನೂ ಈ ಶಾಸನಗಳು ಕಟ್ಟಿಕೊಡುತ್ತವೆ. ಹೀಗಾಗಿ ಈ ಶಾಸನ ಪದ್ಯಗಳು ಚಂಪೂ ಕಾವ್ಯ ಪರಂಪರೆಯಿಂದ ಹೊರತಾದ ವಿಶೇಷ ಅನುಭವವನ್ನೇನೂ ಕಟ್ಟಿಕೊಡುವುದಿಲ್ಲವೆಂದು ಎಷ್ಟೋ ವೇಳೆ ಅನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಇವೆಲ್ಲವೂ ಕೇವಲ ಚಂಪೂಕಾವ್ಯದ ಅನುಕರಣೆಗಳು ಮಾತ್ರವೆಂದೂ, ನಿಜವಾದ ಕಾವ್ಯಗುಣ ಇವುಗಳಲ್ಲಿ ಇಲ್ಲವೆಂದೂ ಅರ್ಥವಲ್ಲ. ಈಗಾಗಲೇ ಹಿಂದೆ ಚರ್ಚಿಸಿರುವಂತೆ, ಎಷ್ಟೋ ಬಿಡಿ ಬಿಡಿ ಪದ್ಯಗಳು ಉತ್ತಮ ಕವಿಗಳ ಕಾವ್ಯದೊಳಗಿನ ಬಿಡಿ ಬಿಡಿ ಭಾಗಗಳೆಂಬಂತೆ ತೋರುವಷ್ಟು ಕಾವ್ಯದ ಕಾವಿನಿಂದ ಹೊಳೆಯುತ್ತವೆ; ಎಷ್ಟೋ ಪದ್ಯಗಳ ಬಂಧ, ಕೇವಲ ಅನುಕರಣೆಗಳೆನ್ನಿಸದೆ, ಪಳಗಿದ ಕೈಯ್ಯ ನಿರ್ಮಿತಿಗಳಂತೆ ತೋರುತ್ತವೆ. ಮತ್ತೆ ಎಷ್ಟೋ ಪದ್ಯಗಳು, ಕನ್ನಡ ಕಾವ್ಯ ಪರಂಪರೆಯಿಂದ ಬೇರೆಯಾದ ಹೊಸ ಹೊಗರನ್ನು ಪ್ರಕಟಿಸಿಕೊಂಡಿವೆ. ಎಲ್ಲಕ್ಕಿಂತ ಮಿಗಿಲಾಗಿ, ಬಿಡಿ ಬಿಡಿಯಾದ ಹಾಗೂ ಸ್ಫುಟವಾದ ವ್ಯಕ್ತಿ ಚಿತ್ರಗಳನ್ನು ನಿರ್ಮಿಸುವುದರ ಮೂಲಕ ಸಂಪ್ರದಾಯದ ಕಾವ್ಯ ಮಾಡದಿದ್ದ ಕೆಲಸವನ್ನು ಇವು ಮಾಡುತ್ತ, ಋಷಿಗಳ, ಆಚಾರ್ಯರ, ಹಾಗೂ ರಾಜ, ಮಂತ್ರಿ, ದಂಡಾಧೀಶರ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸುತ್ತವೆ.

ಕಡೆಯದಾಗಿ ಒಂದು ಮಾತನ್ನು ನಾವು ಮರೆಯಬಾರದು. ಶಾಸನಗಳು ಮೂಲತಃ ಒಂದು ದೇಶದ ಚರಿತ್ರೆಯ ಅಥವಾ ಸಂಸ್ಕೃತಿಯ ಒಂದು ಭಾಗ. ಅವು ಒಂದು ದೇಶದ ಭಾಷಿಕ ಸಂದರ್ಭದಲ್ಲಿ ರಚಿತವಾಗುವುದರಿಂದ ಮತ್ತು ಪರಿಮಿತ ಮಾಧ್ಯಮಗಳ ಮೂಲಕ ಅಭಿವ್ಯಕ್ತವಾಗಬೇಕಾಗಿದ್ದುದರಿಂದ, ತಮ್ಮ ಸಂಕ್ಷಿಪ್ತತೆ ಹಾಗೂ ತೀವ್ರತೆಗಾಗಿ ಇನ್ನೊಂದು ಭಾಷಿಕ ಅಭಿವ್ಯಕ್ತಿಯಾದ ಸಾಹಿತ್ಯದಿಂದ ಮಾರ್ಗದರ್ಶನ ಪಡೆದಂತೆ ತೋರುತ್ತವೆ. ಹೀಗಾಗಿ ಎಷ್ಟೋ ವೇಳೆ ಇವುಗಳಲ್ಲೂ ‘ಕಾವ್ಯಗುಣ’ ಕಾಣಿಸಿಕೊಳ್ಳಬಹುದು. ಆದರೆ, ಶಾಸನಗಳ ಕಾವ್ಯಗುಣ, ಶಾಸನಗಳ ಮೌಲ್ಯವನ್ನು ನಿರ್ಣಯಿಸುವ ಸಾಧನವಲ್ಲ; ಶಾಸನಗಳಲ್ಲಿ ಕಾವ್ಯಗುಣವಿದ್ದ ಮಾತ್ರಕ್ಕೆ ಅವುಗಳ ಮೌಲ್ಯ ಮಹತ್ವದ್ದಾಗುತ್ತದೆ ಎಂದೂ ಭಾವಿಸಬೇಕಾಗಿಲ್ಲ. ಯಾಕೆಂದರೆ ಶಾಸನಗಳ ಮೌಲ್ಯವಿರುವುದು ಅವು ಎಷ್ಟರಮಟ್ಟಿಗೆ ಒಂದು ದೇಶದ ಚಾರಿತ್ರಿಕ-ಸಾಂಸ್ಕೃತಿಕ ದಾಖಲೆಗಳಾಗಿವೆ ಎನ್ನುವುದರ ಮೇಲೆ.

ಬೆಡಗು (೧೯೮೯)

* * *


[1] ಡಾ. ಎಂ. ಚಿದಾನಂಮೂರ್ತಿ: ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಮೊದಲ ಮುದ್ರಣ) ಪು. .

[2] ಶಾಸನ ಪದ್ಯಮಂಜರಿ (೧೯೭೩, ಎರಡನೆ ಮುದ್ರಣ) ಶಾ. ೪೦೯, ಪು. ೬೮

[3] ಎಪಿಗ್ರಾಫಿಯಾ ಕರ್ನಾಟಕ : ಸಂಪುಟ ೨. ಶಾ. ೧೭೬ (೧೪೩) ಪು. ೧೨೯.

[4] ಬೇಂದ್ರೆ : ನಾದಲೀಲೆ (ಮುನ್ನುಡಿಯಲ್ಲಿ)

[5] ಎಪಿಗ್ರಾಫಿಯಾ ಕರ್ನಾಟಕ : ಸಂ. II ಪೀಠಿಕೆ xiviii

[6] ಡಾ. ಎಂ.ಎಂ. ಕಲಬುರ್ಗಿ : ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು: ಪು. II

[7] “ಕನ್ನಡ ಸಾಹಿತ್ಯದ ಪ್ರಥಮ ಘಟ್ಟದ ಅವಶೇಷಗಳೆಂದರೆ ಶಾಸನಗಳು. ಇವು ಕ್ರಿ.ಶ. ೫ನೇ ಶತಮಾನದಿಂದ ಪ್ರಾರಂಭವಾಗುತ್ತಿದ್ದರೂ, ಅಲ್ಲಿ ಶ್ರೀಮಂತ ಸಾಹಿತ್ಯ ಕಂಡುಬರುವುದು ನಿಷಿಧಿ ಶಾಸನಗಳಲ್ಲಿಯೇ. ಹೀಗಾಗಿ ನಿಷಿಧಿ ಶಾಸನಗಳನ್ನು ಕನ್ನಡನಾಡಿನ ಪ್ರಥಮ ಸಾಹಿತ್ಯ ಪಾಠಗಳೆಂದು ಕರೆಯಬಹುದು.” -ಅಲ್ಲೇ ಪು. ೧೬.

[8] ಎಪಿಗ್ರಾಫಿಯಾ ಕರ್ನಾಟಕ, ಸಂ|| ಶಾ. ೭೧ (೬೪) ಪು. ೨೮ (ಕ್ರಿ.ಶ. ೧೧೬೩)

[9] ಅಲ್ಲೇ ೧೩೫ (೧೧೭) ಪು. ೮೧ (ಕ್ರಿ.ಶ. ೧೧೨೩)

[10] ಅಲ್ಲೇ, ಶಾ. ೧೫೬ (೧೨೭) ಪು. ೯೭ (ಚಾಮರಾಜಂ ಬರೆದ) ಕ್ರಿ.ಶ. ೧೧೧೫

[11] ಅಲ್ಲೇ, ಶಾ. ೮೧ (೭೧,೭೨) ಪು. ೬೩ (೧೨ ನೇ ಶತಮಾನ)

[12] ಅಲ್ಲೇ, ಶಾ. ೭೦ (೬೩) ಪು. ೨೬ (ಕ್ರಿ.ಶ. ೧೧೬೩)

[13] ಸಿಂಗದ ಸರಮಂ ಕೇಳ್ದ ಮತಂಗಜದಂತಳ್ಕಿಬಳ್ಕಲಲ್ಲದೆ ಸಭೆಯೊಳ್ ಪೊಂಗಿ ಶುಭಕೀರ್ತಿ ಮುನಿಪನೊಳೇಂಗಡ ನುಡಿಯಲ್ಕೆ ವಾದಿಗಳ್ಗೆಂಟೆರ್ದೆಯೇ. ಶಾ. ೮೧ (೭೧-೭೨) ಪು. ೬೧

[14] ಎಪಿಗ್ರಾಫಿಯಾ ಕರ್ನಾಟಕ, ಸಂ. II ೨೫, (೨೨) ಪು. ೧೦ (ಕ್ರಿ.ಶ. ೭ನೇ ಶತಮಾನ)

[15] ಅಲ್ಲೇ ಶಾ. ೪೮೪ (೩೫೧) ಪು. ೩೦೪ (ಕ್ರಿ.ಶ. ೧೧೧೯)

[16] ನಿಷಿಧಿ ಶಾಸನಗಳು, ಸಾರ್ಥಕ ಮರಣದ ಸಂತೃಪ್ತಿಯನ್ನು ಕುರಿತು, ಅದೊಂದು ರೀತಿಯ ಸಿದ್ಧಿಯೆಂಬಂತೆ ಹೇಳುತ್ತವೆ. ಆದರೆ ಅವು ಚರಮಗೀತ(Elegy)ಗಳೆನ್ನಲುಬಾರದು.

ಚರಮಗೀತೆಗಳಲ್ಲಿ, ಈ ಮರಣದಿಂದ ಎಲ್ಲೋ, ಯಾರಿಗೋ, ನಷ್ಟವಾಯಿತೆಂಬ ಭಾವನೆ ಬರಬೇಕು. ಅಂಥ ಒಂದು ಶಾಸನಪದ್ಯ ನನ್ನ ಕಣ್ಣಿಗೆ ಬಿದ್ದಿದೆ. ಗಂಗರಾಜನ ಹೆಂಡತಿ ಲಕ್ಷ್ಮಿ ತನ್ನ ಸಹೋದರ ಬೂಚಣನು ಸಾಯಲು ಅವನಿಗೆ ನಿಸಿದಿಗೆ ನಿಲ್ಲಿಸಿದ ಸಂದರ್ಭದ ಶಾಸನ-

ಧರೆ ಲಘುವಾಯ್ತು ವಿಶ್ರುತವಿನೇಯನಿಕಾಯಮನಾಥಮಾಯ್ತು ವಾ

ಕ್ತರುಣಿಯುಮೀಗಳೀ ಜಗದೊಳಾರ್ಗಮನಾದರಣೀಯೆಯಾದಳೆಂ
ದಿರದೆ ವಿಷಾದಮೊದವುತ್ತಿರೆ ಭವ್ಯಜನಾಂತರಂಗದೊಳ್
ನಿರುಪಮನೆಯ್ದಿದಂ ನೆಗೞ್ದ ಬೂಚಿಯಣಂ ದಿವಿಜೇಂದ್ರಲೋಕಮಂ
-ಶಾ.ಸ. ಮಂ. ೮೦/೩೩/೨

ಈ ದೃಷ್ಟಿಯಿಂದ ಇದೊಂದು ಚರಮಗೀತೆ (Elegy) ಎನ್ನಬಹುದು. ಇಲ್ಲಿ ‘ವಿಷಾದಮೊದವುತ್ತಿರೆ’ ಎಂಬ ಮಾತನ್ನು ಗಮನಿಸಿ.

[17] ಅಲ್ಲೇ, ಶಾ. ೬೪ (೫೯) ಪು. ೨೩ (ಕ್ರಿ.ಶ. ೧೦ನೇ ಶತಮಾನ)

[18] ಅಲ್ಲೇ, ಶಾ. ೫೭೧ (ಎ.ಕ v ಪು. ೧೫೦) ಪು. ೩೫೫ (ಕ್ರಿ.ಶ. ೧೧೮೧)

[19] ಎಪಿಗ್ರಾಫಿಯಾ ಕರ್ನಾಟಕ, ಸಂ.II ಶಾ. ೧೬೨ (೧೩೨) ಪು. ೧೦೩ (ಕ್ರಿ.ಶ. ೧೧೨೩) ಮತ್ತೆ ಮತ್ತೆ ಬಂದಿದೆ. ಪು. ೧೧೩; ೧೨೯; ೩೫೦.

[20] ಅಲ್ಲೇ, ಶಾ. ೧೬೨ (೧೩೨) ಪು. ೧೦೩ (ಕ್ರಿ.ಶ. ೧೧೨೩) ಮತ್ತೆ ಬಂದಿದೆ. ಪು. ೧೦೩ ಶಾಸನ ಪದ್ಯ ಮಂಜರಿ (೨೩೭) ಚನ್ನರಾಯಪಟ್ಟಣ, ಶಾಪಮಂ (೭೦೪) ಅರಸೀಕೆರೆ ಎಂದಿದೆ.

[21] ಅಲ್ಲೇ, ಶಾ.೪೪೪ (೩೨೭) ಪು. ೨೬೯.೭೦ (ಕಿ.ಶ ೧೧೮೧)

[22] ಎ.ಕ. II, ಶಾ. ೧೬೨ (೧೩೨) ಪು. ೧೦೪ (ಕ್ರಿ.೧೧೨೩)

[23] ಎ.ಕ. II, ಶಾ. ೪೭೬ (೩೪೫) ಪು. ೨೮೮ (ಕ್ರಿ.ಶ. ೧೧೫೯)

[24] ಎ.ಕ. II, ಶಾ. ೧೬೩ (೧೩೩) ಪು. ೧೦೬, ೧೦೭ (ಕ್ರಿ.ಶ. ೯೮೨)

[25] ಅಲ್ಲೇ, ಅದೇ ಶಾಸನ, ಪು. ೧೦೭ (ಕ್ರಿ.ಶ. ೯೮೨)

[26] ಅಲ್ಲೇ, ಅದೇ ಶಾಸನ, ಪು. ೧೦೭ (ಕ್ರಿ.ಶ. ೯೮೨)

[27] ಎ.ಕ. II ಶಾ. ೪೭೬ (೩೪೫) ಪು. ೨೮೯ (ಕ್ರಿ.ಶ. ೧೧೫೯)

[28] ಎ.ಕ. II ಶಾ. ೧೫೭ (೧೨೮) ಪು. ೯೯ (ಕ್ರಿ.ಶ.೧೧೨೧)

[29] ಎ.ಕ. II ಶಾ. ೧೭೬ (೧೪೨) ಪು. ೧೩೦-೧೩೧ (ಕ್ರಿ.ಶ. ೧೧೩೧)

[30] ಅಲ್ಲೇ, ಶಾ. ೪೪೬ (೩೨೭)ಪು. ೨೭೧ (ಕ್ರಿ.ಶ. ೧೧೮೧)

[31] ಅಲ್ಲೇ, ಶಾ. ೪೪೪ (೩೨೭) ಪು. ೧೭೨ (ಕ್ರಿ.ಶ. ೧೧೮೧)

[32] ಅಲ್ಲೇ, ಶಾ. ೪೭೭ (೩೪೬) ಪು. ೨೯೧ (ಕ್ರಿ.ಶ. ೧೧೫೯)

[33] ಎ.ಕ II, ಶಾ. ೧೬೨ (೧೩೨) ಪು. ೧೦೫ (ಕ್ರಿ.ಶ. ೧೧೨೩)

[34] ಅಲ್ಲೇ, ಶಾ. ೩೩೬ (೨೩೪) ಪು. ೧೮೭-೧೮೮ (ಕ್ರಿ.ಶ. ೧೨ನೇ ಶತಮಾನ)

[35] ಅಲ್ಲೇ, ಶಾ. ೩೩೬ (೨೩೪) ಪು. ೧೮೭-೧೮೮ (ಕ್ರಿ.ಶ. ೧೨ನೇ ಶತಮಾನ)

[36] ಕೆಲವು ಶಾಸನಕವಿಗಳ ಉಲ್ಲೇಖವಿದ್ದರೂ, ಶ್ರವಣಬೆಳುಗೊಳದ ಶಾಸನಗಳಲ್ಲಿ ಕೆಲವನ್ನು ಬರೆದವರು, ಹನ್ನೆರಡನೆಯ ಶತಮಾನ ಮತ್ತು ನಂತರದವರು.

‘ಚಾಮರಾಜಂ ಬಳಹದಲ್ಪರೆದುದ ಗಂಗಚಾರಿ ಕಂಡರಿಸಿದ’ (ಎ.ಕ. II ಪು. ೯೬;) ೯೭ ‘ಗಂಗಣ್ಣನ ಲಿಖಿತ’ (ಎ.ಕ. II ಪು. ೧೧೯)

‘ಲಿಖಿತಾಮನೋಹರ ಪರನಾರೀ ಸಹೋದರನಪ್ಪ ಗಂಗಣ್ನಪ್ಪ ಲಿಖಿತ’ (ಎ.ಕ. II  ಪು. ೧೨೧)

ಗಂಗಣ್ಣ ಲಿಖಿತ| ಸೆವಣುಬಲ್ಲರ ದೇವ ರೂವಾರಿ

ರಾಮೋಜನ ಮಗ ದಾಸೋಜ ಕಂಡರಿಸಿದ (ಎ.ಕ. ಪು. ೧೨೨)

ಬೋಕಿಮಯ್ಯ (೧೭೬ನೇ ಶಾಸನ) ಈತ ಕವಿಯೋ, ಏನೋ ತಿಳಿಯದು. ದುಗುಣ ಬರೆದ, ಪಲ್ಲವಾಚಾರಿ ಲಿಖಿತಂ

ಬೊಪ್ಪಣನ ಗೊಮ್ಮಟಜಿನಸ್ತುತಿಯನ್ನು ಕವಡಮಯ್ಯನ ದೇವನಾಣತಿಯಂತೆ ಬಾಗಡಗೆಯ ರುದ್ರ ಪ್ರತಿಷ್ಠಾಪಿಸಿದ.

[37] ಡಾ. ಬಿ.ವಿ. ಶಿರೂರ: ಶ್ರವಣಬೆಳ್ಗೊಳ: ಪು. ೨೧೪

[38] ಅಲ್ಲೇ, ಪು. ೨೧೭

[39] ಅಲ್ಲೇ, ಪು. ೨೨೦

[40] ಅಲ್ಲೇ, ಪು. ೨೨೨

[41] ಅಲ್ಲೇ, ಪು. ೨೨೮

[42] ಕನ್ನಡ ಶಾಸನಗಳು ಅನುಸರಿಸಿದ್ದು, ಚಂಪೂ ಸಂಪ್ರದಾಯವನ್ನು; ಷಟ್ಪದಿ, ರಗಳೆ ಸಾಂಗತ್ಯಗಳು ಬಂದಾಗಲೂ ಈ ಶಾಸನಗಳ ಭಾಷೆಯ ಹಾಗೂ ರಚನೆಯ ದೃಷ್ಟಿಯಿಂದ ಚಂಪೂ ಕಾವ್ಯಗಳನ್ನು ಆದರ್ಶವಾಗಿಟ್ಟುಕೊಂಡವು ಎಂಬುದನ್ನು ವಿದ್ವಾಂಸರೆಲ್ಲರೂ ಗುರುತಿಸಿದ್ದಾರೆ. ಶ್ರವಣಬೆಳುಗೊಳದ ಶಾಸನಗಳೂ ಈ ಮಾತಿಗೆ ಹೊರತಲ್ಲ. ಇದಕ್ಕೆ ಕಾರಣ ಶಾಸನಗಳು, ಪ್ರಭುಸಮ್ಮಿತವೆಂಬ ಹಾಗೂ ಅಧಿಕೃತ ದಾಖಲೆಗಳಾಗಬೇಕೆಂಬ ಉದ್ದೇಶ ಪ್ರಧಾನವಾದದ್ದರಿಂದ, ದಾಖಲೆಗಳು ತಕ್ಕಷ್ಟು ‘ಪ್ರೌಢ’ವಾಗಿದ್ದರೆ, ಜನ ಅವುಗಳಿಗೆ ಮನ್ನಣೆ ಕೊಡುವರೆಂಬ ಉದ್ದೇಶದಿಂದ ಅವುಗಳ ಭಾಷೆಯ ರಚನೆ ಹೀಗಿರಬಹುದೇನೋ. ಕನ್ನಡದ ಅತ್ಯಂತ ಹಳೆಯ ಬಾದಾಮಿ ಶಾಸನ- ಕಪ್ಪೆ ಅರಭಟ್ಟನನ್ನು ಕುರಿತದ್ದು ವಾಸ್ತವವಾಗಿ ತ್ರಿಪದಿಯಲ್ಲಿದೆ. ಮುಂದಿನ ಶಾಸನಗಳು ಅದನ್ನು ಮಾದರಿಯಾಗಿರಿಸಿಕೊಳ್ಳ ಬಹುದಾಗಿತ್ತು. ಆದರೂ ಚಂಪೂ ನಿಷ್ಠೆಯದೇ ಮೇಲುಗೈ ಆದದ್ದು ಅದಕ್ಕೆ ಕಾರಣವಿರಬಹುದು. ಬಹುಶಃ ‘ಶಾಸನ’ ಆ ಮಾತಿಗೆ ತಕ್ಕದಾಗಿರಬೇಕಾದರೆ, ಪ್ರೌಢವೂ ಗಂಭೀರವೂ ಆಗಿರಬೇಕೆಂಬ ಭಾವನೆ ಪ್ರಧಾನವಾಗಿತ್ತೋ ಏನೋ- ಯೋಚನೆ ಮಾಡಬೇಕು.