ಧ್ವನಿಯ ಉತ್ಪಾದನೆ, ಧ್ವನಿಯ ಪ್ರಸಾರ ಮತ್ತು ಧ್ವನಿಶ್ರವಣ (ಅಥವಾ ಗ್ರಹಣ) ಇವು ಮೂರೂ ಹಂತಗಳಲ್ಲಿ ಧ್ವನಿ ವಿಶ್ಲೇಷಣೆ ನಡೆಯಬಹುದು. ಸಾಮಾನ್ಯ ಭಾಷಾ ವ್ಯವಹಾರಗಳಲ್ಲಿ ಮಾತಾಡುವುದನ್ನು ಕೇಳಿಸಿಕೊಳ್ಳುವವರು ಇರುತ್ತಾರೆ. ಪ್ರಸಾರಗೊಂಡ ಧ್ವನಿಯನ್ನು ಕೇಳಿ ಗ್ರಹಿಸಿಕೊಳ್ಳಲು ನೆರವಾಗುವ ಅಂಗವೇ ಕಿವಿ. ಕಿವಿಯೊಳಗೆ ಪ್ರವೇಶಿಸುವ ಧ್ವನಿತರಂಗಗಳು ಅಲ್ಲಿರುವ ಶ್ರವಣ ನರವ್ಯೆಹದ ಮೂಲಕ ಮೆದುಳನ್ನು ತಲುಪುತ್ತವೆ. ಅಲ್ಲಿ ಧ್ವನಿಗ್ರಹಣ ಕ್ರಿಯೆ ಸಂಭವಿಸುತ್ತದೆ. ಇದೊಂದು ಅತ್ಯಂತ ಸಂಕೀರ್ಣ ಕ್ರಿಯಾವರ್ತ. ಕಿವಿಯೊಳಗೆ ಈ ಕ್ರಿಯಾವರ್ತದ ಮೊದಲ ಮೂರು ಹಂತಗಳಿವೆ. ಈ ಮೂರು ಹಂತಗಳು ಕ್ರಮವಾಗಿ ಹೊರಗಿವಿ, ನಡುಗಿವಿ ಮತ್ತು ಒಳಗಿವಿ ಎಂಬ ಭಾಗಗಳಲ್ಲಿ ನಡೆಯುತ್ತವೆ.

ಹೊರಗಿವಿ

ನಮ್ಮೆಲ್ಲರ ಮುಖದ ಎರಡೂ ಬದಿಗೆ ಎದ್ದು ಕಾಣುವ ಅಂಗವೇ ಹೊರಗಿವಿಯ ಮೊದಲ ಭಾಗ. ವ್ಯವಹಾರದಲ್ಲಿ ಇದನ್ನಷ್ಟೇ ಕಿವಿ ಎನ್ನುತ್ತಾರೆ. ಇದೊಂದು ಆಲಿಕೆ. ವಿಶಿಷ್ಟ ಆಕಾರದಲ್ಲಿ ಸ್ನಾಯುಗಳು, ಮೃದ್ವಸ್ಥಿಗಳು ರೂಪಗೊಂಡಿರುವ ಭಾಗವಿದು. ದೇಹಕ್ಕೆ ಅಲುಗಾಡದಂತೆ ಅಂಟಿಕೊಂಡಿದ್ದರೂ ಚಾಚಿದ ಹೊರಭಾಗವನ್ನು ಹಿಂದುಮುಂದಕ್ಕೆ ಆಡಿಸುವುದಕ್ಕೆ ಅವಕಾಶವಿದೆ. ಕೆಲವು ಪ್ರಾಣಿಗಳಲ್ಲಿ ಈ ಆಲಿಕೆಯನ್ನು ಸುಲಭವಾಗಿ ಹಿಂದುಮುಂದಕ್ಕೆ ಚಲಿಸುವುದು ಸಾಧ್ಯ. ಧ್ವನಿಯ ಮೂಲದ ಕಡೆಗೆ ಆಲಿಕೆಯನ್ನು ಪ್ರಾಣಿಗಳು ತಿರುಗಿಸಬಲ್ಲವು. ಮನುಷ್ಯರಲ್ಲಿ ಅದಕ್ಕೆ ಅವಕಾಶವಿಲ್ಲ. ಧ್ವನಿ ಬಂದ ಕಡೆಗೆ ಸೂಕ್ತವಾಗಿ ಮುಖವನ್ನು ತಿರುಗಿಸಿ ಆಲಿಕೆಯೊಳಗೆ ಧ್ವನಿತರಂಗಗಳು ನುಗ್ಗುವಂತೆ ಮಾಡಬೇಕು. ಆಲಿಕೆಯ ಒಳಭಾಗದಲ್ಲಿ ಧ್ವನಿಯು ಕಿವಿಯೊಳಗೆ ಹೋಗಲು ರಂಧ್ರವಿದೆ. ಈ ರಂಧ್ರದೊಳಗೆ ಅವಶ್ಯಕತೆಗಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿತರಂಗಗಳು ಪ್ರವೇಶಿಸದಂತೆ ಆಲಿಕೆಯು ತಡೆಯೊಡ್ಡು ತ್ತದೆ. ಅಲ್ಲದೆ ಹೊರಗಿನಿಂದ ಕಿವಿಯ ಒಳಭಾಗಕ್ಕೆ ಯಾವ ಅಪಾಯವೂ ಉಂಟಾಗದಂತೆ ರಕ್ಷಿಸುತ್ತದೆ. ಆಲಿಕೆಯ ಹಿಂಬದಿಯಿಂದ ಮೆಲ್ಲಗೆ ಒತ್ತುವ ಮೂಲಕ ಕಿವಿಯ ಒಳಗಾಲುವೆಯನ್ನು ಮುಚ್ಚುವುದೂ ಸಾಧ್ಯ. ಹೀಗಾಗಿ ಆಲಿಕೆಯು ಧ್ವನಿತರಂಗ ಸಂಗ್ರಹ ಮತ್ತು ಅಪಾಯದಿಂದ ರಕ್ಷಣೆ ಈ ಎರಡೂ ಕೆಲಸಗಳನ್ನು ನಿರ್ವಹಿಸಲು ಉಪಯುಕ್ತವಾಗಿದೆ.

ಹೊರಗಿವಿಯ ಎರಡನೆಯ ಭಾಗವೊಂದು ಕೊಳವೆಯಂಥ ರಚನೆ. ಸುಮಾರು ಎರಡೂವರೆ ಸೆಂ.ಮೀ. ಉದ್ದವಿರುವ ಈ ಭಾಗವು ಆಲಿಕೆಯ ಹಿಂಬದಿಯಿಂದ ಮೊದಲಾಗುತ್ತದೆ. ಇದರೊಳಗೆ ಸಣ್ಣ ಸಣ್ಣ ರೋಮಗಳಿರು ತ್ತವೆ. ಅಂಟು ದ್ರವವನ್ನು ಜಿನುಗಿಸುವ ಗ್ರಂಥಿಗಳಿರುತ್ತವೆ. ಕಿವಿಯ ತಮಟೆ ಯನ್ನು ಸಣ್ಣ ಧೂಳಿನ ಕಣಗಳಿಂದ, ಕೀಟಗಳಿಂದ ರಕ್ಷಿಸಲು ಈ ಅಂಟುದ್ರವ ನೆರವಾಗುತ್ತದೆ. ಈ ದ್ರವ ಗಟ್ಟಿಯಾಗಿ ಗುಗ್ಗೆ ಎನಿಸಿಕೊಳ್ಳುತ್ತದೆ. ಈ ಕೊಳವೆಯು ಎಲ್ಲ ಧ್ವನಿತರಂಗಗಳು ಕಿವಿಯ ತಮಟೆಯ ಕಡೆಗೆ ಪ್ರವೇಶಿಸಲು ಅನುವು ಮಾಡಿಕೊಡುವ ಜತೆಗೆ ನಿರ್ದಿಷ್ಟ ಕಂಪನಾಂಕವುಳ್ಳ ಧ್ವನಿತರಂಗಗಳ ಬಲವೃದ್ದಿ ಮಾಡಬಲ್ಲದು. ಈ ಕಂಪನಾಂಕದ ಧ್ವನಿತರಂಗಗಳು ಕಿವಿಯ ಒಳಹೊಗುವ ಹೊತ್ತಿಗೆ ದುರ್ಬಲವಾಗಿದ್ದರೂ ಈ ಕೊಳವೆಯೊಳಗೆ ಸಬಲ ಗೊಳ್ಳುತ್ತವೆ. ಆಗ ಆ ಧ್ವನಿ ತರಂಗಗಳನ್ನು ಗಟ್ಟಿಯಾಗಿ ಕೇಳಿಸಿಕೊಳ್ಳಲು ಸಾಧ್ಯವಾಗುವುದು. ವಾತಾವರಣದ ಉಷ್ಣಮಾಪನದಲ್ಲಿ, ಹವೆಯ ಆರ್ದ್ರತೆ ಯಲ್ಲಿ ಉಂಟಾಗುವ ಅತಿ ಏರಿಳಿತಗಳು ಕಿವಿಯ ತಮಟೆಯ ಮೇಲೆ ದುಷ್ಪರಿಣಾಮ ಬೀರದಂತಿರಲು ಈ ಕೊಳವೆಯು ನೆರವಾಗುತ್ತದೆ.

ನಡುಗಿವಿ

ಹೊರಗಿವಿ ಮತ್ತು ನಡುಗಿವಿಗಳ ನಡುವಣ ಗೋಡೆಯಂತಿರುವುದೇ ಕಿವಿಯ ತಮಟೆ. ಕಿವಿಯ ತಮಟೆಯೊಂದು ತೆಳು ಪರದೆ ವೃತ್ತಾಕಾರದಲ್ಲಿರುವ ಈ ಪರದೆಯು ಹೊರಗಿವಿಯ ಕಾಲುವೆಗೆ ಅಂಟಿಕೊಳ್ಳುವ ರೀತಿ ವಿಶಿಷ್ಟವಾಗಿದೆ. ಮೇಲ್ಭಾಗದಲ್ಲಿ ಮುಂಭಾಗಕ್ಕೆ ಬಾಗಿರುವ ಈ ಪರದೆ ಕೆಳಮೂಲೆಯಲ್ಲಿ ಸುಮಾರು 550 ಕೋನವನ್ನು ಉಂಟುಮಾಡುವಂತಿರುತ್ತದೆ. ತಮಟೆಯಲ್ಲಿ ನಾರಿನಂಥ ರಚನೆಯಿದ್ದು ಸ್ಥಿತಿಸ್ಥಾಪಕತೆಯನ್ನು ಅಂದರೆ ಎಳೆದರೆ ಹಿಗ್ಗುವ ಕುಗ್ಗುವ ಗುಣ ಹೊಂದಿರುತ್ತವೆ. ಈ ತಮಟೆಯ ರಚನೆ ಹಾಗೂ ಅದು ಸ್ಥಿತಗೊಂಡಿರುವ ಕ್ರಮದಿಂದಾಗಿ ಅದಕ್ಕೆ ತಗುಲಿದ ಧ್ವನಿತರಂಗಗಳು ಗರಿಷ್ಠ ಕಂಪನಗಳನ್ನು ತಮಟೆಯ ಕೇಂದ್ರದಲ್ಲಿ ಉಂಟುಮಾಡುತ್ತವೆ. ಈ ತಮಟೆಗೆ ಹಿಂಬದಿಯಲ್ಲಿ ಒತ್ತಿಕೊಂಡಿರುವ ಮೂಳೆಯ ಮೂಲಕ ಈ ಕಂಪನಗಳು ನೇರವಾಗಿ ಒಳಗಿವಿಯನ್ನು ಪ್ರವೇಶಿಸುತ್ತವೆ.

ನಡುಗಿವಿ ಒಂದು ಪೆಟ್ಟಿಗೆಯಂತಿದೆ. ಮುಖದ ಬುರುಡೆ(ಮೂಳೆ ರಚನೆ)ಯೊಳಗೆ ಹುದುಗಿರುವ ಈ ಪೆಟ್ಟಿಗೆ ಎಲ್ಲ ಕಡೆಯೂ ಮುಚ್ಚಿದ್ದು ಹಿಂಬದಿಯ ಕೆಳಭಾಗದಲ್ಲಿ ಮಾತ್ರ ಗಾಳಿಯ ಪ್ರವೇಶಕ್ಕೆ ದ್ವಾರವಿದೆ. ಮೂಗು ಮತ್ತು ಗಂಟಲುಗಳಿಂದ ಈ ದ್ವಾರದೆಡೆಗೆ ಹರಿಯುವ ನಾಳವೊಂದಿದೆ. ಈ ನಾಳ ಮತ್ತದರ ಪ್ರಾಮುಖ್ಯತೆಯನ್ನು ಕಂಡುಕೊಂಡ ದೇಹರಚನಾಶಾಸ್ತ್ರಜ್ಞನಾದ ಜಿ.ಇ. ಯೂಸ್ತಾಚಿಯೋ (1520-74) ಹೆಸರಿನಲ್ಲಿ ಈ ನಾಳವನ್ನು ಯುಸ್ತಾಚಿಯನ್ ನಾಳವೆನ್ನುತ್ತಾರೆ. ಈ ನಾಳ ನಡುಗಿವಿ ತಲುಪುವ ಭಾಗ ಸಾಮಾನ್ಯವಾಗಿ ಮುಚ್ಚಿರುವುದು. ಆಗ ನಡುಗಿವಿಯೊಳಗೆ ಗಾಳಿ ನಿರ್ದಿಷ್ಟ ಒತ್ತಡದಲ್ಲಿ ತುಂಬಿರುತ್ತದೆ. ಆಕಳಿಸಿದಾಗ, ಆಹಾರವನ್ನು ನುಂಗುವಾಗ ಈ ಕೊಳವೆ ತೆರೆಯುವುದು. ಆಗ ನಡುಗಿವಿಯೊಳಗಿನ ಗಾಳಿಯ ಒತ್ತಡ ಮತ್ತು ಹೊರಗಿನ ವಾತಾವರಣದ ಒತ್ತಡ ಸರಿದೂಗಿಸಲು ಸಾಧ್ಯ. ಮೂಗು ಮತ್ತು ಬಾಯನ್ನು ಮುಚ್ಚಿ ಗಾಳಿಯನ್ನು ಹೆಚ್ಚು ಒತ್ತಡದಿಂದ ಹೊರಗೆ ನೂಕಿದರೆ ಈ ನಾಳದ ಮೂಲಕ ಗಾಳಿ ನಡುಗಿವಿಗೆ ನುಗ್ಗುವ ಅನುಭವವನ್ನು ಪಡೆಯ ಬಹುದು. ಕಿವಿಯ ತಮಟೆಯ ಹೊರಭಾಗ ಮತ್ತು ನಡುಗಿವಿಯೊಳಗಿನ ಗಾಳಿಯ ಒತ್ತಡ ಸಮಾನವಾಗಿರುವುದು ಅತ್ಯವಶ್ಯ.

ನಡುಗಿವಿಯಲ್ಲಿ ಧ್ವನಿಕಂಪನಗಳು ಯಾಂತ್ರಿಕ ಕಂಪನಗಳಾಗಿ ಪರಿವರ್ತನೆ ಹೊಂದುತ್ತವೆ. ತಮಟೆಯಲ್ಲಿ ಉಂಟಾದ ಕಂಪನಗಳು ಈ ಯಾಂತ್ರಿಕ ಕಂಪನಗಳಾಗಿ ಒಳಗಿವಿಯಲ್ಲಿರುವ ದ್ರವನ್ನು ತಲುಪಬೇಕು. ಈ ಪರಿವರ್ತನೆ ಗಾಗಿ ನಡುಗಿವಿಯಲ್ಲಿರುವ ಮೂರು ಮೂಳೆಗಳು ನೆರವಾಗುತ್ತವೆ. ಈ ಮೂಳೆಗಳನ್ನು ಆಸಿಕಲ್‌ಗಳೆನ್ನುವರು. ಇವುಗಳದ್ದು ಒಂದು ವಿಶೇಷ. ಇವು ದೇಹದ ಅತಿ ಚಿಕ್ಕ ಮೂಳೆಗಳು. ಮಗು ಹುಟ್ಟುವಾಗಲೇ ಇವು ತಮ್ಮ ಪೂರ್ಣ ಗಾತ್ರವನ್ನು ಪಡೆದಿರುತ್ತವೆ.

ನಡುಗಿವಿಯ ಮೇಲ್ಛಾವಣಿಯಿಂದ ತೂಗಾಡುವ ಈ ಮೂಳೆಗಳು ಸ್ನಾಯು ತಂತುಗಳಿಂದ ಆ ಛಾವಣಿಗೆ ಅಂಟಿಕೊಂಡಿರುತ್ತವೆ. ಮೂಳೆಗಳ ಹೊರ ಆಕಾರಗಳ ನಡುವೆ ವಿಶಿಷ್ಟ ರೀತಿಯ ಹೊಂದಾಣಿಕೆಯಿದೆ. ಒಂದರಲ್ಲಿ ಉಂಟಾದ ಕಂಪನ ಮುಂದಿನ ಮೂಳೆಗೆ ಸುಲಭವಾಗಿ ರವಾನೆಯಾಗುವಂತಿರು ತ್ತದೆ. ಈ ಮೂರೂ ಮೂಳೆಗಳು ವಿಶಿಷ್ಟ ಆಕಾರವನ್ನು ಪಡೆದಿವೆ. ಅವುಗಳನ್ನು ಕೊಡತಿ (ಸುತ್ತಿಗೆ), ಅಡಿಗಲ್ಲು ಮತ್ತು ರಿಕಾಪು ಎಂದು ಕರೆದಿದ್ದಾರೆ. ಪಾರಿಭಾಷಿಕವಾಗಿ ಮ್ಯಾಲೆಸ್, ಇಂಕಸ್ ಮತ್ತು ಸ್ಟೇಪಿಸ್ ಎಂಬ ಹೆಸರುಗಳಿವೆ. ಕೊಡತಿಯು ಕಿವಿತಮಟೆಗೆ ಅಂಟಿಕೊಂಡಿರುತ್ತದೆ. ಅದರ ಪಕ್ಕದಲ್ಲಿ ಅಡಿಗಲ್ಲು ಮತ್ತು ಕೊನೆಗೆ ರಿಕಾಪು ಇರುತ್ತವೆ. ನಡುಗಿವಿಯಿಂದ ಒಳಗಿವಿಯನ್ನು ಬೇರ್ಪಡಿಸುವ ಭಾಗದಲ್ಲಿ ಅಂಡಾಕಾರದ ಬಾಗಿಲೊಂದು ಮೂಳೆಯಲ್ಲಿ ರಚನೆಯಾಗಿದೆ. ರಿಕಾಪು ಮೂಳೆಯು ಈ ಬಾಗಿಲಿಗೆ ಹೊಂದಿಕೊಂಡು ಅಳವಟ್ಟು ಕೂರುವಂತಿರುತ್ತದೆ.

ತಮಟೆಯಲ್ಲಿ ಉಂಟಾದ ಕಂಪನಗಳನ್ನು ಒಳಗಿವಿಗೆ ತಲುಪಿಸಲು ಇಷ್ಟೆಲ್ಲಾ ಗೋಜಲಿನ ವ್ಯವಸ್ಥೆ ಏಕೆಂಬ ಪ್ರಶ್ನೆಯೇಳುವುದು ಸಾಧ್ಯ. ಒಂದೇ ಮೂಳೆಯಿಂದಲೂ ಕಂಪನ ರವಾನೆಯಾಗುವುದಷ್ಟೆ. ಆದರೆ ಈ ಸಂಕೀರ್ಣ ವ್ಯವಸ್ಥೆಗೆ ಒಂದು ಉದ್ದೇಶವಿದ್ದಂತಿದೆ. ಮುಖ್ಯವಾಗಿ ಈ ಮೂಳೆಗಳ ಮೂಲಕ ಹಾದು ಹೋಗುವಾಗ ಧ್ವನಿತರಂಗಗಳು ಸಬಲಗೊಳ್ಳುತ್ತವೆ. ಈ ಸಬಲ ಗೊಳ್ಳುವ ಪ್ರಮಾಣ ಸುಮಾರು 30 ಡೆಸಿಬಲ್‌ಗಳಷ್ಟಿರುವುದೆಂದು ಗೊತ್ತಾಗಿದೆ. ಹೊರಗಿನಿಂದ ಬಂದ ಧ್ವನಿತರಂಗಗಳು ಒಳಗಿವಿಯನ್ನು ತಲುಪುವ ವೇಳೆಗೆ ಹೀಗೆ ಸಬಲಗೊಳ್ಳದಿದ್ದರೆ ಅವು ಒಳಗಿವಿಯಲ್ಲಿ ಮತ್ತಷ್ಟು ಕ್ಷೀಣಗೊಂಡು ಕೇಳಿಸುವುದೇ ಕಷ್ಟವಾಗುತ್ತದೆ. ಒಳಗಿವಿಯಲ್ಲಿ ತರಂಗಗಳನ್ನು ಸಬಲಗೊಳಿಸುವ ಪ್ರತ್ಯೇಕ ವ್ಯವಸ್ಥೆ ಇಲ್ಲ. ಈ ಮೂಳೆಗಳಿಂದ ಮತ್ತೂ ಒಂದು ಪ್ರಯೋಜನ ವಿದ್ದಂತಿದೆ. ಕಿವಿಯ ತಮಟೆಯಿಂದ ಒಳಗಿವಿಯವರೆಗೆ ಚಲಿಸುವ ಧ್ವನಿ ತರಂಗಗಳು ತಟಕ್ಕನೆ ಒಳಗಿವಿಯನ್ನು ತಲುಪದಂತೆ ಇವು ತಡೆಯುತ್ತವೆ. ಭಾರಿ ಸದ್ದುಗಳು ಹೀಗಾಗಿ ಒಳಗಿವಿಯನ್ನು ಪ್ರವೇಶಿಸುವುದಿಲ್ಲ. ಕಿವಿಯ ತಮಟೆ ಮತ್ತು ರಿಕಾಪುಗಳನ್ನು ನಿಯಂತ್ರಿಸುವ ಸ್ನಾಯುಗಳು ವಿಶಿಷ್ಟ ರೀತಿಯ ಹೊಂದಾಣಿಕೆ ಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಭಾರಿ ಸದ್ದುಗಳಿಂದ ಮತ್ತು ಧ್ವನಿತರಂಗಗಳ ಕ್ಷಿಪ್ರ ಆಘಾತದಿಂದ ಒಳಗಿವಿಗೆ ರಕ್ಷಣೆ ದೊರಕುತ್ತದೆ. ಹೀಗಿದ್ದರೂ ಇದೇನೂ ಪರಿಪೂರ್ಣ ರಕ್ಷಣಾ ವ್ಯವಸ್ಥೆಯೆಂದು ತಿಳಿಯುವಂತಿಲ್ಲ. ಏಕೆಂದರೆ ಈ ಸ್ನಾಯು ಚಲನೆಯ ವೇಗ ಹೆಚ್ಚಿಲ್ಲ. ನಿಧಾನವಾಗಿ ಪ್ರತಿಕ್ರಿಯಿಸುತ್ತವೆ. ಆ ಅವಧಿಯಲ್ಲಿ ಆಗಬಾರದ್ದು ಆಗಿಯೇ ಬಿಡುತ್ತದೆ. ಒಳಗಿವಿಗೆ ಸರಿಪಡಿಸಲಾಗದ ನಷ್ಟ ಸಂಭವಿಸುತ್ತದೆ.

ಒಳಗಿವಿ

ಒಳಗಿವಿಯೊಂದು ಸಂಕೀರ್ಣ ರಚನೆ. ತಲೆಬುರುಡೆಯ ಮೂಳೆಯ ರಚನೆ ಯನ್ನು ಗಮನಿಸಿದರೆ ಈ ಭಾಗದಲ್ಲಿ ಹಲವಾರು ಖಾಲಿ ಕೋಣೆಗಳಿರುವುದು ಕಂಡುಬರುತ್ತದೆ. ಈ ಕೋಣೆಗಳ ನಡುವೆ ಸಂಪರ್ಕ ಕಲ್ಪಿಸುವ ಹಾದಿಗಳೂ ಇರುತ್ತವೆ. ಈ ಖಾಲಿ ಕೋಣೆಗಳಲ್ಲಿ ಎರಡು ವಿಧಗಳಿವೆ. ಒಂದು ವಿಧದ ಕೋಣೆಗಳು ಅರೆ ವೃತ್ತಾಕಾರದಲ್ಲಿರುತ್ತವೆ. ಇವುಗಳಿಗೆ ಒಂದು ಮುಖ್ಯ ಜವಾಬ್ದಾರಿ ಇದೆ. ನಾವು ದೇಹದ ಸಮತೋಲವನ್ನು ಕಾಯ್ದುಕೊಳ್ಳುವುದಕ್ಕೆ, ಸಮತೋಲವನ್ನು ಅನುಭವಿಸುವುದಕ್ಕೆ ಈ ರಚನೆಗಳೇ ಕಾರಣ. ಇನ್ನೊಂದು ವಿಧದ ಖಾಲಿಕೋಣೆಯನ್ನು ಕಾಕ್ಲಿಯಾ ಎನ್ನುತ್ತಾರೆ. ಇದು ಬಸವನ ಹುಳುವಿನಂತೆ ಸುತ್ತಿಕೊಂಡಿರುವ ರಚನೆ. ಸುಮಾರು 35 ಸೆಂ.ಮೀ. ಉದ್ದ ವಿರುತ್ತದೆ. ಧ್ವನಿ ತರಂಗ ಪ್ರವಹಣಕ್ಕೆ ಸಂಬಂಧಿಸಿದಂತೆ ಕಾಕ್ಲಿಯಾದಲ್ಲಿ ಮುಖ್ಯ ಕ್ರಿಯೆಗಳು ಸಂಭವಿಸುತ್ತದೆ. ನಡುಗಿವಿಯಿಂದ ಬಂದ ಯಾಂತ್ರಿಕ ರೂಪದ ಧ್ವನಿ ಕಂಪನಗಳು ಇಲ್ಲಿ ವಿದ್ಯುತ್ ತರಂಗಗಳಾಗಿ ಮಾರ್ಪಡುತ್ತವೆ. ಈ ತರಂಗಗಳು ಇಲ್ಲಿಂದ ಶ್ರವಣ ನರತಂತುಗಳ ಮೂಲಕ ಮೆದುಳನ್ನು ತಲುಪುತ್ತವೆ.

ಕಾಕ್ಲಿಯಾದ ರಚನೆ ಗಮನಾರ್ಹವಾಗಿದೆ. ಈ ಕೊಳವೆಯ ಉದ್ದಕ್ಕೂ ನಡುಭಾಗದಲ್ಲಿ ಬೇರ್ಪಡಿಸುವ ನಡುಗೋಡೆಯೊಂದಿದೆ. ಇದರಿಂದ ಎರಡು ಖಾಲಿಕೋಣೆಗಳುಂಟಾಗುತ್ತವೆ. ಮೇಲಿನ ಕೋಣೆಯನ್ನು (ಹೊರಕೋಣೆ) ಸ್ಕಾಲಾ ವೆಸ್ಟಿಬುಲಿ ಎನ್ನುವರು. ಕೆಳಕೋಣೆಯನ್ನು (ಒಳಕೋಣೆ) ಸ್ಕಾಲಾ ಟಿಂಫನಿ ಎನ್ನುತ್ತಾರೆ. ನಡುವಣ ಅಡ್ಡ ಗೋಡೆಯನ್ನು ಕಾಕ್ಲಿಯರ್ ಡಕ್ಟ್ ಎನ್ನುವರು. ಈ ಎರಡೂ ಭಾಗಗಳ ತುಂಬ ತಿಳಿಯಾದ ಸ್ನಿಗ್ಧದ್ರವ ತುಂಬಿರುತ್ತದೆ. ಈ ದ್ರವಕ್ಕೆ ಪೆರಿಲಿಂಫ್ ಎಂದು ಹೆಸರು. ನಡುಗಿವಿಯಿಂದ ಹೊರಟ ಕಂಪನಗಳು ಈ ದ್ರವದ ಮೂಲಕವೇ ಚಲಿಸುವುದು. ಅಂಡಾಕಾರದ ಬಾಗಿಲಿಗೆ ಅಂಟಿಕೊಂಡಿರುವ ಹೊರಕೋಣೆಯೊಳಗೆ ಧ್ವನಿತರಂಗಗಳು ನಡುಗಿವಿಯಿಂದ ಪ್ರವೇಶಿಸುತ್ತವೆ. ಅಲ್ಲಿ ಉದ್ದಕ್ಕೂ ಚಲಿಸಿ ಕಾಕ್ಲಿಯಾದ ಒಳತುದಿ ಭಾಗದಲ್ಲಿರುವ ರಂಧ್ರದ ಮೂಲಕ ಒಳಕೋಣೆಯನ್ನು ಪ್ರವೇಶಿಸುತ್ತವೆ. ಒಳಕೋಣೆಯ ದ್ರವದ ಮೂಲಕ ಚಲಿಸುತ್ತ ಕೊನೆಗೆ ಕಾಕ್ಲಿಯಾ ಅಂಟಿ ಕೊಂಡಿರುವ ಗುಂಡಾದ ಬಾಗಿಲನ್ನು ತಲುಪುತ್ತವೆ.

ಒಳಕೋಣೆ ಸ್ಕಾಲಾ ಟಿಂಪನಿಯ ಕಡೆಗೆ ಇರುವ ನಡುಗೋಡೆಯ ಭಾಗದಲ್ಲಿ ತೆಳುವಾದ ಪೊರೆಯೊಂದಿದೆ. ಇದರ ಹೆಸರು ಬೆಸಿಲಾರ್ ಮೆಂಬ್ರೆನ್. ಕಾಕ್ಲಿಯಾರ್ ಡಕ್ಟ್ ಎಂಬ ಈ ನಡುಗೋಡೆಯೊಳಗೆ ಎಂಡೊ ಲಿಂಫ್ ಎಂಬ ದ್ರವವಿರುತ್ತದೆ. ಬೆಸಿಲಾರ್ ಮೆಂಬ್ರೆನ್ ಪೊರೆಯು ಕಾಕ್ಲಿಯಾದ ಮೇಲ್ತುದಿಯಲ್ಲಿ ತೆಳುವಾಗಿರುತ್ತದೆ. ಅಲ್ಲಿ ಅದರ ದಪ್ಪ ಸುಮಾರು 0.04 ಮಿ.ಮೀ. ಒಳಸರಿದಂತೆ ಈ ಪೊರೆಯು ದಪ್ಪವಾಗುತ್ತ ಹೋಗುವುದು. ಕಾಕ್ಲಿಯಾದ ಒಳತುದಿಯಲ್ಲಿ ಅದರ ದಪ್ಪ ಸುಮಾರು 0.05 ಮಿ.ಮೀ. ಈ ಪೊರೆಯು ಹೀಗೆ ಉದ್ದಕ್ಕೂ ದಪ್ಪದಲ್ಲಿ ಬದಲಾಗುವುದಕ್ಕೆ ನಿರ್ದಿಷ್ಟ ಉದ್ದೇಶವಿದೆ. ಒಳಬರುವ ಕಂಪನಗಳ ಒತ್ತಡಕ್ಕೆ ಈ ಪೊರೆಯ ವಿವಿಧ ಭಾಗಗಳು ಭಿನ್ನರೀತಿಯಲ್ಲಿ ಪ್ರತಿಸ್ಪಂದಿಸುತ್ತವೆ. ಅತಿ ಹೆಚ್ಚಿನ ಕಂಪನಾಂಕವುಳ್ಳ ತರಂಗಗಳು ಈ ಪೊರೆಯ ತೆಳುತುದಿಯನ್ನು ಪ್ರಭಾವಿಸಿದರೆ, ಕಡಿಮೆ ಕಂಪನಾಂಕದ ತರಂಗಗಳು ದಪ್ಪತುದಿಯನ್ನು ಪ್ರಭಾವಿಸುತ್ತವೆ. ನಡುವಣ ಕಂಪನಾಂಕದ ತರಂಗಗಳ ಪ್ರಭಾವ ಇಡೀ ಪೊರೆಯುದ್ದಕ್ಕೂ ಆಗುವುದು.

ಈ ಪೊರೆಗೆ ಅಂಟಿಕೊಂಡಂತೆ ಕಾರ್ಟಿ ಎಂಬುದೊಂದು ಅಂಗವಿದೆ. ನಮ್ಮ ಶ್ರವಣ ವ್ಯವಸ್ಥೆಯ ಅತ್ಯಂತ ಸೂಕ್ಷ್ಮ ಅಂಗವಿದು. ಇಟಲಿಯ ದೇಹರಚನಾ ಶಾಸ್ತ್ರಜ್ಞ ಅಲ್ಪಾನ್ಸೊ ಕಾರ್ಟಿ (1822-36) ಎಂಬಾತ ಈ ಅಂಗವನ್ನು ಗುರುತಿಸಿದನೆಂದು ಅದಕ್ಕೆ ಆತನ ಹೆಸರನ್ನೇ  ಇಡಲಾಗಿದೆ. ಈ ಅಂಗದಲ್ಲೇ ತರಂಗದ ಯಾಂತ್ರಿಕ ಕಂಪನಗಳು ನರಸ್ಪಂದನಗಳಾಗಿ ಮಾರ್ಪಡುವುದು.

ಕಾರ್ಟಿಯಲ್ಲಿ ಏನಿದೆ? ಜೀವಕೋಶಗಳು ಇಲ್ಲಿ ವ್ಯವಸ್ಥಿತ ರೀತಿಯಲ್ಲಿ ಜೋಡಣೆಯಾಗಿರುತ್ತವೆ. ಈ ಜೀವಕೋಶಗಳು ಅತಿ ತೆಳುವಾದ ರೋಮಗಳಿಂದ ಆವೃತ್ತವಾಗಿರುತ್ತವೆ. ಈ ರೋಮಗಳು ಸಾಲುಸಾಲಾಗಿ ಹಲವು ಪದರುಗಳಲ್ಲಿ ಹರಡಿಕೊಂಡಿರುತ್ತವೆ. ಈ ರೋಮಯುಕ್ತ ಜೀವಕೋಶಗಳು ಎಂಡೊಲಿಂಫ್ ದ್ರವದಲ್ಲಿ ಧ್ವನಿ ತರಂಗಗಳಿಂದಾಗುವ ಸೂಕ್ಷ್ಮ ಕಂಪನಗಳನ್ನು ಗ್ರಹಿಸುವ ಕೆಲಸ ಮಾಡುತ್ತವೆ. ಈ ರೋಮಗಳ ಗ್ರಹಿಕೆಯಿಂದಾಗಿ ವಿಶಿಷ್ಟ ಬಗೆಯ ವಿದ್ಯುತ್ ರಸಾಯನಿಕ ಕ್ರಿಯೆಯೊಂದು ಮೊದಲಾಗುತ್ತದೆ. ಈ ಕ್ರಿಯೆಯು ಶ್ರವಣ ನರತಂತುಗಳನ್ನು ಉದ್ದೀಪಿಸುತ್ತವೆ. ಇಲ್ಲಿಂದ ಸ್ಪಂದನಗಳು ಮುಂದು ವರಿದು ಮೆದುಳಿನಲ್ಲಿರುವ ಸೂಕ್ತಭಾಗ(ನಡುಮೆದುಳು)ವನ್ನು ತಲುಪುತ್ತವೆ.

ಕೇಳಿಸಿಕೊಳ್ಳುವ ಬಗೆಯನ್ನು ಕುರಿತ ಸಿದ್ಧಾಂತಗಳು : ಕಾಕ್ಲಿಯಾದ ಒಳಗೆ ಬರುವ ಧ್ವನಿತರಂಗಕ್ಕೆ  ಹಲವು ಕಂಪನಾಂಕಗಳಿರುತ್ತವೆ. ಈ ಕಂಪನಾಂಕ ಕುರಿತ ಮಾಹಿತಿಯು ನಿರ್ದಿಷ್ಟ ಬಗೆಯ ನರಸ್ಪಂದನವಾಗಿ ಮಾರ್ಪಡುವುದು ಹೇಗೆ? ಹೀಗೆ ಮಾರ್ಪಡುವ ಮೂಲಕವೇ ನಾವು ‘ಕೇಳು’ವುದು ಸಾಧ್ಯವಷ್ಟೆ. ಈ ಪರಿವರ್ತನೆ ನಡೆಯುವ ಕ್ರಮವನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸಲಾಗಿದೆ. ಹತ್ತೊಂಬತ್ತನೆ ಶತಮಾನದ ನಡುಭಾಗದಿಂದಲೂ ಈ ಸಮಸ್ಯೆಯನ್ನು ಬಿಡಿಸುವ ಪ್ರಯತ್ನಗಳು ನಡೆಯುತ್ತಾ ಬಂದಿವೆ.

ಅನುರಣನ ಸಿದ್ಧಾಂತ : ಹೆರ್ಮನ್ ವಾನ್ ಹೆಲ್ಮ್‌ಹೋಲ್ಜ್ (1821-94) ಎಂಬ ಜರ್ಮನ್ ಸಂಶೋಧಕ ಮಂಡಿಸಿದ ಸಿದ್ಧಾಂತವಿದು. ಈ ಸಿದ್ಧಾಂತದಂತೆ ಕಾಕ್ಲಿಯಾದ ಬೇರೆ ಬೇರೆ ಭಾಗದಲ್ಲಿರುವ ತಂತುಗಳಲ್ಲಿ ಒಂದೊಂದು ಬೇರೆ ಬೇರೆ ಕಂಪನಾಂಕಗಳಿಗೆ ಪ್ರತಿಸ್ಪಂದಿಸುತ್ತವೆ; ಅನುರಣಿಸು ತ್ತವೆ. ಕಂಪನಾಂಕಗಳು ಬದಲಾದಂತೆ ಬೆಸಿಲಾರ್ ಮೆಂಬ್ರೆನ್‌ನಲ್ಲಿ ಅನುರಣನ ಉಂಟಾಗುವ ಸ್ಥಾನಗಳೂ ಬದಲಾಗುತ್ತಾ ಹೋಗುತ್ತವೆ. ಇದರಿಂದಾಗಿ ಬೇರೆ ಬೇರೆ ಧ್ವನಿಗಳನ್ನು ‘ಕೇಳು’ವುದು ಸಾಧ್ಯವೆಂದು ಈ ಸಿದ್ಧಾಂತ ಹೇಳಿ ದಂತಾಯ್ತು. ವಾಸ್ತವವಾಗಿ ಈ ಪೊರೆಯು ನಿರ್ದಿಷ್ಟ ಕಂಪನಾಂಕಕ್ಕೆ ಗೊತ್ತಾದ ಒಂದು ಬಿಂದುವಿನಲ್ಲಿ ಅನುರಣಿಸದೆ, ಬಹುಮಟ್ಟಿಗೆ ತನ್ನ ಉದ್ದಕ್ಕೂ ಅನುರಣಿಸುವುದು. ಈ ಅಂಶವೀಗ ಸಾಬೀತಾಗಿರುವುದರಿಂದ ಈ ಮೇಲಿನ ಸಿದ್ಧಾಂತ ಬಿದ್ದುಹೋಗಿದೆ.

ಕಂಪನಾಂಕ ಇಲ್ಲವೆ ಕಾಲಭೇದ ಸಿದ್ಧಾಂತ : 1886ರಲ್ಲಿ ವಿಲಿಯಂ ರುದರ್‌ಫರ್ಡ್‌ ಎಂಬಾತ ಈ ಸಿದ್ಧಾಂತವನ್ನು ಮಂಡಿಸಿದನು. ಈ ಸಿದ್ಧಾಂತದ ತಿರುಳು ಹೀಗಿದೆ. ನರತಂತುಗಳು ವಿವಿಧ ಬಗೆಯ ಕಂಪನಾಂಕಗಳಿಗೆ ಬೇರೆ ಬೇರೆಯ ರೀತಿಯಲ್ಲಿ ಮಿಡಿಯುತ್ತವೆ. ಈ ಮಿಡಿತಗಳನ್ನು ಸೆಕೆಂಡಿಗೆ ಇಂತಿಷ್ಟು ಎಂದು ಲೆಕ್ಕ ಹಾಕಬಹುದಾಗಿದೆ. ಬೆಸಿಲಾರ್ ಮೆಂಬ್ರೆನ್ ಪೊರೆಯುದ್ದಕ್ಕೂ ಇರುವ ರೋಮಗಳಲ್ಲಿ ಪ್ರತಿಯೊಂದೂ ಪ್ರತಿ ಕಂಪನಾಂಕಕ್ಕೂ ಅನುರಣಿಸು ತ್ತವೆ. ಆದರೆ ನರತಂತುಗಳು ಕಂಪನಾಂಕಗಳ ವ್ಯತ್ಯಾಸವನ್ನು ಬೇರೆ ಬೇರೆ ಪ್ರಮಾಣದ ಮಿಡಿತಗಳನ್ನಾಗಿ ಪರಿವರ್ತಿಸಿಕೊಳ್ಳುವುದರಿಂದ ಧ್ವನಿಗಳ ವ್ಯತ್ಯಾಸದ ಗ್ರಹಿಕೆ ಸಾಧ್ಯವಾಗುತ್ತದೆ. ಈ ಸಿದ್ಧಾಂತವನ್ನು ಒಪ್ಪಲು ಕೆಲವು ಅಡ್ಡಿಗಳಿವೆ. ನರತಂತುಗಳು ಮಿಡಿಯುವ ಪ್ರಮಾಣಕ್ಕೂ ಮಿತಿಗಳಿದ್ದಂತಿವೆ. ಯಾವ ನರತಂತುವೂ 1000 ಹರ್ಟ್ಜ್‌ಗಳಿಗೆ ಮಿಗಿಲಾದ ಕಂಪನಗಳಿಗೆ ಮಿಡಿಯಲಾರದು. ಇವುಗಳ ಮಿಡಿತವೇನಿದ್ದರೂ ಇದಕ್ಕಿಂತ ಕಡಿಮೆ ಸಂಖ್ಯೆಯ ಕಂಪನಾಂಕಗಳಿಗೆ ಮಿತಗೊಂಡಿರುವುದು ಖಚಿತವಾಗಿದೆ. ಆದರೆ ಮನುಷ್ಯರು 20,000 ಹರ್ಟ್ಜ್‌ನಷ್ಟು ಕಂಪನಾಂಕವುಳ್ಳ ಧ್ವನಿತರಂಗಗಳನ್ನು ಆಲಿಸಬಲ್ಲರು. ಇದು ಹೇಗೆ ಸಾಧ್ಯ? ಈ ಸಿದ್ಧಾಂತದಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲ.

ಸಮನ್ವಯ ಸಿದ್ಧಾಂತ : 1949ರಲ್ಲಿ ಇ.ಜಿ. ವೇವರ್ ಈ ಸಿದ್ಧಾಂತವನ್ನು ಮಂಡಿಸಿದನು. ಈ ಮೇಲೆ ಹೇಳಿದ ಎರಡೂ ಸಿದ್ಧಾಂತಗಳನ್ನು ಆತ ಸಮನ್ವಯಗೊಳಿಸುತ್ತಾನೆ. 5,000 ಹರ್ಟ್ಜ್‌ಗಳಿಗಿಂತ ಕಡಿಮೆ ಕಂಪನಾಂಕ ವುಳ್ಳ ಧ್ವನಿತರಂಗಗಳ ಗ್ರಹಣವು ಕಂಪನಾಂಕ ಸಿದ್ಧಾಂತದ ಅನ್ವಯ ನಡೆಯುತ್ತದೆ ಮತ್ತು ಅದಕ್ಕೆ ಮಿಗಿಲಾದ ಕಂಪನಾಂಕಗಳ ಧ್ವನಿತರಂಗಗಳ ಗ್ರಹಣ ವಿಧಾನವನ್ನು ವಿವರಿಸಲು ಅನುರಣನ ಸಿದ್ಧಾಂತದ ನೆರವು ಬೇಕು. ಇದು ಸಮನ್ವಯದ ತಿರುಳು.

ತರಂಗಚಲನ ಸಿದ್ಧಾಂತ : ಹಂಗೆರಿಯ ಜಾರ್ಜ್ ವಾನ್‌ಬೆಕೆಸ್ಕಿ (1899-1972) ಒಂದು ಪ್ರಯೋಗವನ್ನು ಮಾಡಿದನು. ಸ್ಟ್ರೊಬೊಸ್ಕೋಪ್ ಎಂಬ ವಿಶಿಷ್ಟ ಬಗೆಯಲ್ಲಿ ಬೆಳಕು ಚೆಲ್ಲುವ ಯಂತ್ರದ ನೆರವಿನಿಂದ ಬೆಸಿಲಾರ್ ಮೆಂಬ್ರೆನ್ ಮೇಲೆ ಬೆಳಕು ಹಾಯಿಸಿದನು. ಧ್ವನಿತರಂಗಗಳನ್ನು ಈ ಪೊರೆಯು ಗ್ರಹಿಸುವಾಗ ಬೆಳಕು ಈ ಪೊರೆಯ ಮೇಲೆ ತರಂಗದಂತೆ ಚಲಿಸುವುದು ಕಂಡುಬಂದಿತು. ಆದ್ದರಿಂದ ಕಾಕ್ಲಿಯಾದಲ್ಲೂ ಧ್ವನಿಯು ತರಂಗರೂಪದಲ್ಲೇ ಗ್ರಹಿಕೆಯಾಗುವುದನ್ನು ಸಿದ್ಧಪಡಿಸಿದಂತಾಯಿತು. ಈ ಬೆಳಕಿನ ತರಂಗದಲ್ಲಿ ಅತಿ ಹೆಚ್ಚಿನ ತರಂಗಾಂತರವುಳ್ಳ ಬಿಂದುವನ್ನು ಬೆಸಿಲಾರ್ ಪೊರೆಯ ಮೇಲೆ ಗುರುತಿಸುವ ಮೂಲ ಧ್ವನಿಯ ಕಂಪನಾಂಕವನ್ನು ಲೆಕ್ಕ ಹಾಕಬಹುದು.

ಒಂದು ಶತಮಾನದ ಅವಧಿಯಲ್ಲಿ ಈ ಎಲ್ಲ ಸಿದ್ಧಾಂತಗಳ ಮಂಡನೆ ಯಾಗಿದೆ. ಹೀಗಿದ್ದರೂ ಸಮರ್ಪಕ ಉತ್ತರ ದೊರಕಿಲ್ಲ. ಧ್ವನಿಯು ಗಾಳಿಯಲ್ಲಿ ಪ್ರವಹಿಸುವ ವಿಧಾನ ಮತ್ತು ಶ್ರವಣಾಂಗಗಳು ಧ್ವನಿಯನ್ನು ಗ್ರಹಿಸುವ ವಿಧಾನ ಇವೆರಡೂ ಸಂಕೀರ್ಣವಾಗಿದೆ. ಅಲ್ಲದೆ ಅವೆರಡರ ನಡುವೆ ಇಂಥದೇ ಎಂದು ಗುರುತಿಸಬಲ್ಲ ನೇರ ಸಂಬಂಧವೊಂದು ಇದ್ದಂತಿಲ್ಲ. ಮುಂದುವರೆದು ಹೇಳುವುದಾದರೆ ಕಾಕ್ಲಿಯಾದ ದ್ರವದೊಳಗೆ ನಡೆಯುವ ಚಲನವಲನಕ್ಕೂ ನರತಂತುಗಳ ಸ್ಪಂದನಕ್ಕೆ ನೇರವಾದ ಸಂಬಂಧಗಳು ಇರುವಂತಿಲ್ಲ. ಈ ಪ್ರಕ್ರಿಯೆಗಳನ್ನು ವಿವರಿಸಲು ಇನ್ನೂ ಸಂಕೀರ್ಣವಾದ ತಾತ್ವಿಕ ಚೌಕಟ್ಟುಗಳ ಅವಶ್ಯಕತೆ ಇದೆ.

ಧ್ವನಿಯಲ್ಲಿ ಪಿಸುಗುಟ್ಟುವುದು, ಗಟ್ಟಿಯಾಗಿ ಮಾತಾಡುವುದು, ಕೂಗುವುದು ಎಂದು ಹಲವು ವ್ಯತ್ಯಾಸಗಳಿವೆಯಷ್ಟೆ. ಕಾಕ್ಲಿಯಾದಲ್ಲಿ ಧ್ವನಿಯ ಈ ಏರಿಳಿತಗಳನ್ನು ಹೇಗೆ ಗ್ರಹಿಸಲಾಗುತ್ತದೆ ಎನ್ನುವುದು ಅಧ್ಯಯನ ಯೋಗ್ಯವಾಗಿದೆ. ಕೆಲವು ಶೋಧಕರು ಹೇಳುವಂತೆ ನರತಂತುಗಳ ಮಿಡಿತದ ಪ್ರಮಾಣದ ಏರಿಳಿತದಿಂದ ಈ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ. ಆ ಪ್ರಕಾರ ಧ್ವನಿಯು ಕ್ಷೀಣಗೊಳ್ಳುತ್ತ ನಡೆದಂತೆ ಮಿಡಿತದ ದರವೂ ಕಡಿಮೆ ಯಾಗುವುದು. ಧ್ವನಿ ಗಟ್ಟಿಯಾಗುತ್ತಾ ನಡೆದಂತೆ ಮಿಡಿತದ ದರವೂ ಹೆಚ್ಚುತ್ತದೆ. ಈ ವಿವರಣೆ ಹೆಚ್ಚು ಸೂಕ್ತವೆನಿಸದು. ಏಕೆಂದರೆ ಪ್ರತಿ ನರತಂತುವೂ ಸುಮಾರು ಡೆಸಿಬಲ್‌ಗಳಷ್ಟು ವ್ಯತ್ಯಾಸಕ್ಕೆ ಪ್ರತಿಕ್ರಿಯಿಸಲು ಶಕ್ತವಾಗಿದೆ. ಹಾಗಾಗಿ ನಾವು ಇನ್ನೂ ಹೆಚ್ಚಿನ ಪ್ರಮಾಣದ ವ್ಯತ್ಯಾಸವುಳ್ಳ ಧ್ವನಿಗಳನ್ನು ಗ್ರಹಿಸುವುದು ಹೇಗೆಂಬುದು ಗೊತ್ತಾಗುವುದಿಲ್ಲ.

ಮಾತಿನ ಗ್ರಹಿಕೆ : ನಮ್ಮ ದೇಹದಲ್ಲಿರುವ ಧ್ವನ್ಯಂಗಗಳು ಭಾಷಾಧ್ವನಿ ಗಳನ್ನು ಮಾತ್ರವಲ್ಲದೆ ಇನ್ನಿತರ ‘ನಿರುಪಯುಕ್ತ’ ಧ್ವನಿಗಳನ್ನು ಹೊರಡಿಸ ಬಲ್ಲವು. ಆದರೆ ನಮಗೆ ಅವಶ್ಯವೆಂದಾಗ ಭಾಷಾ ಧ್ವನಿಗಳನ್ನಷ್ಟೇ ಅವು ಹೊರಡಿಸುವಂತೆ ನಿಯಂತ್ರಿಸುವುದು ಸಾಧ್ಯ. ಹಾಗೆಯೇ ನಮ್ಮ ಶ್ರವಣಾಂಗಗಳು ಎಲ್ಲಾ ಬಗೆಯ ಸದ್ದುಗಳನ್ನೂ ಕೇಳಿಸಿಕೊಳ್ಳಲು ಶಕ್ತವಾಗಿವೆ. ನಮಗೆ ಅವಶ್ಯವಾದಾಗ ಅವು ಭಾಷಾಧ್ವನಿಗಳನ್ನು ಮಾತ್ರ ಕೇಳುವಂತೆ ನಾವು   ನಿಯಂತ್ರಿಸಲು ಸಾಧ್ಯ. ಇತರ ಸದ್ದುಗಳನ್ನು ಮತ್ತು ಭಾಷಾಧ್ವನಿಗಳನ್ನು ಬೇರೆಯಾಗಿಡಲು ನಮ್ಮ ಶ್ರವಣಾಂಗಗಳು ಸಮರ್ಥವಾಗಿವೆ. ಅಂದರೆ ನಾವು ಏನನ್ನಾದರೂ ಕೇಳಿಸಿಕೊಂಡರೆ ಅದನ್ನು ಸದ್ದು (ಭಾಷೇತರವಾದದ್ದು) ಇಲ್ಲವೇ ಮಾತು ಎಂದೇ ತಿಳಿಯುತ್ತವೆ. ಮೂರನೆಯ ಬಗೆ ಎಂಬುದಿಲ್ಲ. ಸದ್ದುಗಳಲ್ಲಿ ಹಲವು ಬಗೆಗಳಿರಬಹುದು. ಅವುಗಳಲ್ಲಿ ಕೆಲವು ಅಪೇಕ್ಷಣೀಯವಾಗಿರ ಬಹುದು. ಅದೆಲ್ಲವೂ ಬೇರೆ ವಿಚಾರ. ಆದರೆ ನಾವು ಕೇಳಿಸಿಕೊಳ್ಳುವ ಧ್ವನಿಗಳಲ್ಲಿ ಮಾತ್ರ ಎರಡೇ ವಿಧ. ಸದ್ದು ಅಥವಾ ಮಾತು. ಮಾತನ್ನು ಕೇಳುವಾಗ ನಾವು ಅದನ್ನು ಕೇವಲ ಸದ್ದು ಎಂದು ತಿಳಿಯುವುದಿಲ್ಲ. ನಮಗೆ ಸಂಪೂರ್ಣವಾಗಿ ಅಪರಿಚಿತವಾದ ಭಾಷೆಯೊಂದನ್ನು ನಾವು ಕೇಳುತ್ತೇವೆಂದು ಕೊಳ್ಳೋಣ. ಆಗಲೂ ಆ ಧ್ವನಿಸರಣಿಯನ್ನು ಮಾತು ಎಂದು ಗುರುತಿಸುವುದು ನಮಗೆ ಸಾಧ್ಯ ಮತ್ತು ಅಂಥ ಸಂದರ್ಭದಲ್ಲೂ ಆ ಧ್ವನಿಸರಣಿಯನ್ನು ಕೇವಲ ಸದ್ದು ಎಂದು ತಿಳಿಯಲಾರೆವು. ಅಂದರೆ ಮಾತನ್ನು ಕೇಳುವಾಗ ನಾವು ಕೆಲವು ನಿರ್ದಿಷ್ಟ ಧ್ವನಿಗಳು ನಿಯಮಾನುಸಾರ ಸಂಯೋಜನೆಗೊಂಡಿರುವುದನ್ನು ಗುರುತಿಸುತ್ತಿರುತ್ತೇವೆ. ಹೀಗೆ ಧ್ವನಿಸರಣಿಯೊಂದನ್ನು ಭಾಷಾ ಧ್ವನಿಗಳನ್ನಾಗಿ ವಿಭಜಿಸಿಕೊಂಡು ನಮ್ಮ ಶ್ರವಣಾಂಗಗಳು ಗ್ರಹಿಸುವುದು ಹೇಗೆ ಅಂಥ ಯಾವ ವ್ಯವಸ್ಥೆ ಈ ಅಂಗಗಳಲ್ಲಿ ಅಥವಾ ಮೆದುಳಿನಲ್ಲಿದೆ ಎಂಬುದು ಸಂಶೋಧನೆಯ ವಿಷಯವಾಗಿದೆ.

ಈ ವಲಯದಲ್ಲಿ ಹಲವು ದಶಕಗಳ ಸಂಶೋಧನೆಯ ಅನಂತರವೂ ಪ್ರಶ್ನೆಗಳು ಹಾಗೇ ಉಳಿದಿವೆ. ಅಂಥ ಪ್ರಶ್ನೆಗಳ ಜಟಿಲತೆಯೇ ಸಂಶೋಧನೆಯ ಕುಂಠಿತ ಪ್ರಗತಿಗೆ ಕಾರಣ.

ಕೆಲವು ಪ್ರಶ್ನೆಗಳು ಹೀಗಿವೆ : ನಾವು ಮಾತನ್ನು ಕೇಳಿದಾಗ ಧ್ವನಿಸರಣಿಯಲ್ಲಿ ಬಿಡಿಬಿಡಿ ಧ್ವನಿಗಳನ್ನು, ಪದಗಳನ್ನು ಗುರುತಿಸಬಲ್ಲೆವು. ಆದರೆ ಧ್ವನಿ ತರಂಗದಲ್ಲಿ ಈ ವಿಭಜನೆ ಗೋಚರಿಸುವುದಿಲ್ಲ. ಒಂದೇ ಸಮನೆ ಹರಿಯುವ ಈ ತರಂಗದಲ್ಲಿ ಎಲ್ಲಿ ಯಾವ ಧ್ವನಿಯು ಮುಗಿದು ಇನ್ನೊಂದು ಧ್ವನಿ ಆರಂಭಗೊಳ್ಳುವುದೆಂದು ಗುರುತಿಸುವುದು ಸಾಧ್ಯವಿಲ್ಲ. ಹಾಗಿದ್ದರೆ ಮೆದುಳು ಈ ಸರಣಿಯಲ್ಲಿ ‘ಅರ್ಥಪೂರ್ಣ’ ಘಟಕಗಳನ್ನು ಬೇರ್ಪಡಿಸಿ ಗುರುತಿಸಲು ಸಮರ್ಥವಾಗುವುದು ಹೇಗೆ?

ಒಂದೇ ಕೋಣೆಯಲ್ಲಿ ನಾವಿರುವಾಗ ಹಲವು ಜನ ಮಾತಾಡುತ್ತಿರ ಬಹುದು. ಅವರೆಲ್ಲ ಮಾತೂ ನಮ್ಮ ಕಿವಿಯೊಳಗೆ ಹೋಗುತ್ತಿರುತ್ತದೆ. ಆದರೂ ನಮಗೆ ಬೇಕಾದ ವ್ಯಕ್ತಿಯ ಧ್ವನಿಯನ್ನು ನಾವು ಕೇಳುವುದು ಸಾಧ್ಯ. ಅಂದರೆ ಆ ಮಾತಿಗೆ ಮಾತ್ರ ಸ್ಪಂದಿಸುವುದು ಸಾಧ್ಯ. ಮೆದುಳು ಹೀಗೆ ಹಲವು ಧ್ವನಿಸರಣಿಗಳು ಏಕಕಾಲಕ್ಕೆ ಎದುರಾದಾಗ ಬೇಕಾದ ಧ್ವನಿಸರಣಿಯನ್ನು ಮಾತ್ರ ಗ್ರಹಿಸಲು ಹೇಗೆ ಶಕ್ತವಾಗುತ್ತವೆ?

ಒಂದು ಧ್ವನಿಯನ್ನು ನಾವು ಬೇರೆ ಬೇರೆ ಸಂದರ್ಭದಲ್ಲಿ ಕೇಳಿಸಿಕೊಂಡರೂ ಅದನ್ನು ಒಂದೇ ಧ್ವನಿಯೆಂದು ಗ್ರಹಿಸುತ್ತೇವೆ. ಉದಾಹರಣೆಗೆ ‘ಕ’ಕಾರವನ್ನೆ ಗಮನಿಸಿ. ಹತ್ತಾರು ಸಂದರ್ಭಗಳಲ್ಲಿ ಹತ್ತಾರು ಜನ ಉಚ್ಚರಿಸಿದ ‘ಕ’ಕಾರ ಗಳನ್ನು ಯಂತ್ರಗಳ ಮೂಲಕ ವಿಶ್ಲೇಷಿಸಿದರೆ ಒಂದು ಇನ್ನೊಂದರಿಂದ ಭಿನ್ನ ವಾಗಿಯೇ ಇರುವುದು ಗೊತ್ತಾಗುತ್ತದೆ. ಆದರೂ ಆ ಎಲ್ಲವನ್ನು ‘ಕ’ಕಾರವೆಂದೇ ನಾವು ಗ್ರಹಿಸಬಲ್ಲೆವು. ‘ಕಿವಿ’ ಮತ್ತು ‘ಕುಡಿ’ ಎಂಬ ಎರಡೂ ಪದಗಳಲ್ಲಿನ ‘ಕ’ಕಾರಗಳು ಬೇರೆ ಬೇರೆಯಾದ  ಧ್ವನಿಲಕ್ಷಣಗಳನ್ನು ಹೊಂದಿವೆ. ಹೀಗೆ ಬೇರೆ ಬೇರೆ ವ್ಯಕ್ತಿಗಳು, ಬೇರೆ ಬೇರೆ ಭೌಗೋಳಿಕ ಪ್ರದೇಶ ದಿಂದ ಬಂದವರು ಉಚ್ಚಾರಣೆಯಲ್ಲಿ ವ್ಯತ್ಯಾಸಗಳನ್ನುಂಟು ಮಾಡುತ್ತಾರೆ. ಆದರೂ ಆ ವ್ಯತ್ಯಾಸಗಳನ್ನು ಮೀರಿ ಸಮಾನಗೊಳಿಸುವುದು ಮೆದುಳಿಗೆ ಹೇಗೆ ಸಾಧ್ಯ ವಾಗುತ್ತದೆ?

ಕೆಲವೊಮ್ಮೆ ಎರಡು ಪದಗಳ ನಡುವೆ ಇರುವ ವ್ಯತ್ಯಾಸ ಯಾವುದಾದ ರೊಂದು ಧ್ವನಿಗೆ ಸೀಮಿತವಾಗಿರುತ್ತದೆ. ‘ಕಲ್ಲು’ ಮತ್ತು ‘ಗಲ್ಲು’ ಪದಗಳ ನಡುವಣ ವ್ಯತ್ಯಾಸ ಪದಾದಿಯ ‘ಕ’ಕಾರ ಮತ್ತು ‘ಗ’ಕಾರಗಳ ನಡುವಣ ಉಚ್ಚಾರಣೆಗಳಲ್ಲಿದೆ. ಇಂಥ ಪದಗಳ ಧ್ವನಿತರಂಗಗಳ ಭೌತಿಕ ಮಾದರಿಗಳನ್ನು ಚಿತ್ರಗಳನ್ನು ಪರಿಶೀಲಿಸಿದರೆ ನಾವು ಗುರುತಿಸಿದ ಧ್ವನಿಗಳ ನಡುವಣ ವ್ಯತ್ಯಾಸ ಏಕಕಾಲಕ್ಕೆ ಪದೋಚ್ಚಾರಣೆಯ ವಿವಿಧ ಭಾಗಗಳಲ್ಲಿ ಹರಡಿ ಹೋಗಿರುವುದು ಗೊತ್ತಾಗುತ್ತದೆ. ಅಂದರೆ ಆ ಚಿತ್ರಗಳಲ್ಲಿ ಗೊತ್ತಾದ ಧ್ವನಿಗಳ ಚಿತ್ರಭಾಗದಲ್ಲಿ ಮಾತ್ರ ವ್ಯತ್ಯಾಸವಿರುವುದೆಂದು ಹೇಳಲಾಗುವುದು. ಈ ಧ್ವನಿಗಳಲ್ಲಿನ ವ್ಯತ್ಯಾಸದ ಪರಿಣಾಮವು ಆಚೀಚೀನ ಧ್ವನಿಗಳ ಉಚ್ಚಾರಣೆಯನ್ನೂ ಪ್ರಭಾವಿಸಿರುತ್ತದೆ. ಉದಾಹರಣೆಗೆ ‘ರಾಗ’ ಮತ್ತು ‘ರಾಮ’ ಪದಗಳಲ್ಲಿ ‘ಗ’ಕಾರ ಮತ್ತು ‘ಮ’ಕಾರಗಳ ಉಚ್ಚಾರಣೆಯಲ್ಲಿ ಮಾತ್ರ ವ್ಯತ್ಯಾಸವಿದೆ ಎಂದರೆ ಸಾಲದು. ವಾಸ್ತವವಾಗಿ ಅವುಗಳ ಹಿಂದಿನ ಆ ಧ್ವನಿಯ ಉಚ್ಚಾರಣೆಯಲ್ಲಿ ವ್ಯತ್ಯಾಸಗಳಿರುತ್ತವೆ. ‘ಮ’ಕಾರದ ಪರಿಣಾಮವಾಗಿ ಆ ಧ್ವನಿಯು, ಮುಖ್ಯವಾಗಿ ಸ್ವರವು ಕೊಂಚಮಟ್ಟಿಗೆ ಅನುನಾಸೀಕರಣ ಗೊಂಡಿರುತ್ತದೆ. ಹೀಗಿದ್ದರೂ ನಮ್ಮ ಮೆದುಳು ‘ಗ’ಕಾರ ಮತ್ತು ‘ಮ’ ಕಾರಗಳನ್ನು ಮಾತ್ರ ಭಿನ್ನವೆಂದು ಗ್ರಹಿಸುತ್ತದೆ: ಸ್ವರಗಳ ನಡುವಣ ವ್ಯತ್ಯಾಸವನ್ನು ನಿರ್ಲಕ್ಷಿಸುತ್ತದೆ. ಇದು ಹೇಗೆ ಸಾಧ್ಯ?

ನಾವು ಮಾತಾಡುವಾಗ ಧ್ವನಿಗಳನ್ನು ಒಂದೇ ಸಮನೆ ಉಚ್ಚರಿಸುತ್ತಿರು ತ್ತೇವೆ. ವೇಗದ ಪರಿಣಾಮವಾಗಿ ಹಲವು ಧ್ವನಿಗಳು ಪೂರ್ಣವಾಗಿ ಉಚ್ಚಾರ ಗೊಳ್ಳದಿರಬಹುದು. ಒಂದರೊಳಗೊಂದು ಬೆರೆತು ಹೋಗಬಹುದು. ಸವೇಗವಾದ ಈ ಉಚ್ಚಾರಣೆಯಲ್ಲಿರುವ ಲೋಪಗಳನ್ನು ತುಂಬಿಕೊಂಡು ಮೆದುಳು ಎಲ್ಲಾ ಧ್ವನಿಗಳನ್ನೂ ಸರಿಯಾಗಿಯೇ ಗುರುತಿಸಿಕೊಳ್ಳಬಲ್ಲುದು. ‘ಹೆಂಡತಿ’ ಎಂಬ ಪದವನ್ನು ವೇಗವಾಗಿ ಮಾತಾಡುವಾಗ, ವಾಕ್ಯಗಳ ನಡುವೆ ‘ಹೆಣ್ತಿ’ ಎಂದು ಉಚ್ಚರಿಸುತ್ತೇವೆ. ‘ಡ’ಕಾರವನ್ನು ಉಚ್ಚರಿಸುವುದಿಲ್ಲ. ಆದರೂ ಮೆದುಳು ಆ ಲುಪ್ತಧ್ವನಿಯನ್ನು ಗ್ರಹಿಸುವುದು. ಇದು ಹೇಗೆ?

ಇಂಥ ಪ್ರಶ್ನೆಗಳು ಹಲವು. ಆದರೆ ಅಧ್ಯಯನಕ್ಕೆ ಹಲವು ತೊಡಕುಗಳಿವೆ. ಮುಖ್ಯವಾದ ತೊಡಕೆಂದರೆ ಉಚ್ಚಾರಣೆ ಮತ್ತು ಧ್ವನಿಗ್ರಹಣಗಳ ನಡುವಣ ಸಂಬಂಧವನ್ನು ನೇರವಾಗಿ ಅಧ್ಯಯನ ಮಾಡುವುದು ಸಾಧ್ಯವಿಲ್ಲ. ಕಣ್ಣಿಗೆ ಕಾಣುವಂತೆ ಇವು ಸಂಭವಿಸುವುದಿಲ್ಲ. ಕಿವಿಯೊಳಗೆ ಏನು ನಡೆಯುತ್ತದೆ; ನರಗಳ ಸ್ಪಂದನ ಸ್ವರೂಪವೇನು; ಮೆದುಳಿನಲ್ಲಿ ಆಗುವುದೇನು; ಇವು ಯಾವುವೂ ನಮಗೆ ಗೋಚರಿಸುವುದಿಲ್ಲ. ಹಾಗಾಗಿ ಈ ಎಲ್ಲ ಅಧ್ಯಯನಗಳು ಪರೋಕ್ಷ ಮಾಹಿತಿಯನ್ನು ಅವಲಂಬಿಸಿಯೇ ನಡೆಯಬೇಕಾಗಿದೆ.

ಧ್ವನಿಯ ಭೌತಿಕ ಲಕ್ಷಣಗಳನ್ನು ಅಧ್ಯಯನ ಮಾಡಬಹುದಷ್ಟೇ. ಅಂಥ ಅಧ್ಯಯನಗಳಿಂದ ದೊರೆತ ಮಾಹಿತಿಯನ್ನು ಮಾತಾಡುವವರು ಬೇರೆ ಬೇರೆ ಧ್ವನಿಗಳನ್ನು ಗ್ರಹಿಸುವ ರೀತಿಗಳಿಗೆ ಹೋಲಿಸುವುದು ಒಂದು ಅಧ್ಯಯನ ಸಾಧ್ಯತೆ. ಇನ್ನೊಂದು ವಿಧಾನ  ಹೀಗಿದೆ: ಧ್ವನಿಗಳನ್ನು ವಿಕೃತಗೊಳಿಸುತ್ತ ಹೋಗುವುದು. ಎಷ್ಟು ಪ್ರಮಾಣದ ವಿಕೃತಿಯ ಅನಂತರ ಭಾಷಿಕರು ಆ ಧ್ವನಿಗಳನ್ನು ಗುರುತಿಸಲು ಅಶಕ್ತರಾಗುತ್ತಾರೆಂಬುದನ್ನು ಗೊತ್ತುಮಾಡುವುದು. ಕೃತಕವಾಗಿ ಧ್ವನಿಗಳನ್ನು ಸಂಯೋಜಿಸಿ ಅವುಗಳಲ್ಲಿನ ವ್ಯತ್ಯಾಸ ನಮ್ಮ ಗ್ರಹಿಕೆಯಲ್ಲಿ ಯಾವ ಬಗೆಯ ಪಲ್ಲಟಗಳನ್ನು ತರುವುದೆಂದು ಗುರುತಿಸುವುದು ಇನ್ನೊಂದು ಮಾದರಿ. ಈ ನಿಟ್ಟಿನಲ್ಲಿ ಪ್ರಯೋಗ ಮಾದರಿಗಳನ್ನು ರೂಪಿಸುವುದು ನಿಧಾನ ಹಾಗೂ ಕಷ್ಟ. ಆದರೂ ಪೂರ್ವಭಾವೀ ಚಿಂತನೆಗಳು ಸಾಕಷ್ಟು ನಡೆದಿವೆ.