ಕನ್ನಡ ಕಾವ್ಯ ಪರಂಪರೆಯಲ್ಲಿ ಪಂಪ, ಕುಮಾರವ್ಯಾಸನ ನಂತರದ ಪ್ರಸಿದ್ಧ ಕವಿಗಳಲ್ಲಿ ಬೇಂದ್ರೆಯವರು ಒಬ್ಬರು. ಧಾರವಾಡದಲ್ಲಿ ಹುಟ್ಟಿ, ಅಲ್ಲಿಯೇ ಬಾಳಿ ಬೆಳೆದು, ಆಧುನಿಕ ಕನ್ನಡ ಕಾವ್ಯ ಪರಂಪರೆಗೆ ಒಂದು ಹೊಸ ದಿಕ್ಕನ್ನು ತೋರಿಸಿಕೊಟ್ಟವರು ಇವರು. ೨೦ನೇ ಶತಮಾನ ಕಂಡ ಈ ದೇಶದ ಬಹುದೊಡ್ಡ ಕವಿ.

‘ವಸಂತ’ ಋತು ಕವಿಯ ಕಾವ್ಯರಚನೆಗೆ ಪ್ರಶಸ್ತಕಾಲ ಎನ್ನುವುದು ತಿಳಿದ ವಿಷಯ. ಆದರೆ ಬೇಂದ್ರೆ ಶ್ರಾವಣದ ಕವಿ. ಶ್ರಾವಣ ಈ ಕವಿಯ ಪ್ರಿಯಮಾಸ . ಏಕೆಂದರೆ ಬಂಧನದೊಳಗಿದ್ದವರ ಬಂಧನವ ಬಿಡಿಸಿದ ಹಾಗೂ ಭವ ಬಂಧನದಿಂದ ಜೀವಿಗಳನ್ನು ಮುಕ್ತಿಗೊಳಿಸಿದ ಶ್ರೀಕೃಷ್ಣ ಜನ್ಮತಾಳಿದ್ದು ಶ್ರಾವಣದಲ್ಲಿ. ಆಗಸ್ಟ್‌ ೧೫ ಭಾರತದ ಸ್ವಾತಂತ್ರ್ಯ ದಿನ. ದಿನಾಂಕದ ಪ್ರಕಾರ ಅರವಿಂದರು ಜನ್ಮತಾಳಿದ್ದು ಆಗಸ್ಟ್ ೧೫ರಂದು. ‘ನನ್ನ ವೈಯಕ್ತಿಕ ಜೀವನದಲ್ಲಿ ಶ್ರಾವಣ ಅನೇಕ ಸುಖದುಃಖಗಳನ್ನು ತಂದೊಡ್ಡಿದ ಮಾಸ’ ಎಂದು ಬೇಂದ್ರೆಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ. ಅವರ ತಾಯಿ ತೀರಿಕೊಂಡಿದ್ದು ಶ್ರಾವಣದಲ್ಲಿ. ಗೆಳೆಯ ಚನ್ನಮಲ್ಲಪ್ಪ ತೀರಿದ್ದು ಶ್ರಾವಣದಲ್ಲಿ ಬೇಂದ್ರೆಯವರ ಹೆಂಡತಿ ಹಾಗೂ ಸಖೀಗೀತದ ನಾಯಕಿ ಲಕ್ಷ್ಮೀಬಾಯಿ ಗತಿಸಿದ್ದು ಶ್ರಾವಣದಲ್ಲಿಯೇ. ಇದಿಷ್ಟೇಲ್ಲದೆ ಶ್ರಾವಣ ಅನೇಕ ಕನಸು ಕಲ್ಪನೆಗಳನ್ನು ಬೇಂದ್ರೆಯವರಿಗೆ ನೀಡಿದ ಮಾಸ.

ಬೇಂದ್ರೆಯವರು ತೀರಿಕೊಂಡ ಸಂದರ್ಭದಲ್ಲಿ ಬೇಂದ್ರೆಯವರ ಕಾವ್ಯ ಕುರಿತು ಕನ್ನಡದ ಮೂವರು ಹಿರಿಯ ಕವಿಗಳು ಚರ್ಚಿಸುವಾಗ ಬೇಂದ್ರೆಯವರ ಕಾವ್ಯ ಶ್ರಾವಣ ಪ್ರತಿಭೆಯಿಂದ ಕೂಡಿದ್ದು ಎಂದು ಹೇಳಿದವರು ಡಾ.ಜಿ.ಎಸ್‌. ಶಿವರುದ್ರಪ್ಪನವರು. ಗೋಪಾಲಕೃಷ್ಣ ಅಡಿಗರು ತಮ್ಮ ‘ಸಾಕ್ಷಿ’ಯಲ್ಲಿ T.S. Eliot ಹೇಳುವ auditory imagination ಎಂಬ ಪದ ಸಮೂಹವನ್ನು ‘ಶ್ರಾವಣ ಪ್ರತಿಭೆ’ ಎಂದು ಅನುವಾದಿಸಿದ್ದಾರೆ.

ಕನ್ನಡದಲ್ಲಿ ಈ ಪದಗುಚ್ಛಕ್ಕೆ ಸರಿಸಾಟಿಯಾಗುವ ಕವಿ ಎಂದರೆ ಬೇಂದ್ರೆಯವರು ಎಂದು ಕನ್ನಡದ ಹಿರಿಯ ವಿಮರ್ಶಕರಾದ ಪ್ರೊ. ಕೀರ್ತನಾಥ ಕುರ್ತುಕೋಟಿ ಅವರು ಹೇಳಿದ್ದಾರೆ. ಬೇಂದ್ರೆಯವರ ಕಾವ್ಯವನ್ನು ಹಲವು ಮಜಲು ಹಾಗೂ ಮಗ್ಗಲುಗಳಲ್ಲಿ ಅರ್ಥೈಸಿದ ವಿಮರ್ಶಕರು ಕುರ್ತುಕೋಟಿ ಅವರು. ಬೇಂದ್ರೆ ಕಾವ್ಯ ಕುರಿತು ಅನೇಕ ಕೃತಿಗಳು ಇವರಿಂದ ರಚಿತಗೊಂಡಿವೆ. ಅನೇಕರಿಗೆ ಬೇಂದ್ರೆ ಕಾವ್ಯದ ಗುಂಗು ಹಿಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮನೋಹರ ಗ್ರಂಥಮಾಲೆ ತನ್ನ ೫೦ನೇ ವರ್ಷದ ನೆನಪಿಗೆ ಪುಟಬಂಗಾರ ಎಂಬ ಹೆಸರಿನ ಐದು ಸಂಪುಟಗಳನ್ನು ಹೊರತಂದಿತು. ಪುಟಬಂಗಾರದ ೫ನೇ ಸಂಪುಟವನ್ನು ‘ಶ್ರಾವಣ ಪ್ರತಿಭೆ’ ಎಂದು ಹೆಸರಿಸಿದ್ದಾರೆ. ಈ ಸಂಪುಟದಲ್ಲಿ ಪ್ರೊ. ಕುರ್ತಕೋಟಿ ಅವರು ಮತ್ತು ಡಾ. ವಾಮನ ಬೇಂದ್ರೆಯವರು ಅಂಬಿಕಾತನಯದತ್ತರ ನೂರು ಕವಿತೆಗಳನ್ನು ವಿಶ್ಲೇಷಿಸಿದ್ದಾರೆ. ಈ ಸಂಪುಟಕ್ಕೆ ಬರೆದ ಪ್ರಸ್ತಾವನೆಯಲ್ಲಿ ಬೇಂದ್ರೆ ಅವರ ಶ್ರಾವಣ ಪ್ರತಿಭೆಯನ್ನು ಅವರ ಕವನಗಳ ಮೂಲಕ ವಿಶ್ಲೇಷಿಸಿದ್ದಾರೆ. ಈ ಸಂಪುಟದಲ್ಲಿ ಶ್ರಾವಣದ ಕೆಲವು ಕವಿತೆಗಳಿಗೆ ವಿಶೇಷ ಅರ್ಥವಿವರಣೆಯನ್ನು ನೀಡಿದ್ದಾರೆ. ಇನ್ನು ಅನೇಕ ಕವನಗಳಲ್ಲಲಿ ಬಂದ ಶ್ರಾವಣದ ಹಾಗೂ ಶ್ರಾವಣನ ಉಲ್ಲೇಖವನ್ನು ಸಾಹಿತ್ಯ ಸಂಸ್ಕೃತಿ ಹಾಗೂ ಮತ್ತಿತ್ತರ ಮುಖಗಳಲ್ಲಿ ಅರ್ಥೈಸಿದ್ದಾರೆ, ವಿಶ್ಲೇಷಿಸಿದ್ದಾರೆ. ಕುರ್ತಕೋಟಿ ಅವರ ಹಾಗೂ ಪುಟಬಂಗಾರದ ಶ್ರಾವಣ ಪ್ರತಿಭೆಯ ಪ್ರಭಾವದಡಿಯಲ್ಲಿ ಇಲ್ಲಿ ಶ್ರಾವಣದ ಕವಿತೆಗಳನ್ನು ವಿಶ್ಲೇಷಿಸಲಾಗಿದೆ.

ಸಾಮಾನ್ಯವಾಗಿ ಬೇಂದ್ರೆ ಕವನ ಸಂಕಲನಗಳಲ್ಲಿ ಶ್ರಾವಣ ಚಿತ್ರಣ ಬೇರೆ ಬೇರೆ ಸ್ತರಗಳಲ್ಲಿ ಕಾಣುತ್ತದೆ. ಬೇಂದ್ರೆಯವರಿಗೆ ಶ್ರಾವಣ ಕಂಡಷ್ಟು ಕೇಳಿಸಿದೆ. ಕಂಡದ್ದನ್ನು ಕೇಳಿದ್ದನ್ನು ತಮ್ಮ ಕಾವ್ಯದ ಮೂಲಕ ಹೇಳಿದ್ದಾರೆ. ಸಖೀಗೀತದ ‘ಶ್ರಾವಣಧ ವೈಭವ’ದಿಂದ ಪ್ರಾರಂಭಿಸಿ – ಶ್ರಾವಣದ ಹಗಲು, ಶ್ರಾವಣ, ಶ್ರಾವಣಾ, ಬಂದಿಕಾರ ಶ್ರಾವಣ, ಪ್ರತಿವರ್ಷದಂತೆ ಬಂತು ಶ್ರಾವಣ – ಹೀಗೆ ಮುಂತಾದ ಕಾವ್ಯಗಳಲ್ಲಿ ಶ್ರಾವಣವನ್ನು ಕುರಿತು ಬೇಂದ್ರೆಯವರು ಹಾಡಿದ್ದಾರೆ.

ಶಿವನ ಕುದುರೆಯನೇರಿ ಶ್ರಾವಣದ ಹಸರಾಣಿ
ಹೂಗಣ್ಣ ತೆರೆದಾಡಿ ಕುಣಿಯುವೊಲು
ನನ್ನ ಚಿತ್ರಕ ಶಕ್ತಿ ಉತ್ಪ್ರೇಕ್ಷೆಯನೇರಿ
ಬಣ್ಣ ಬಣ್ಣದ ಬಣ್ಣನೆಗೆ ಒಲಿದಿತು ||

ಕೊಟ್ಟಿದ್ದೆ ರೂಪವು ಇಟ್ಟದ್ದೆ ನಾಮವು
ಕಟ್ಟಿದ್ದೆ ಹುರುಳೆಂಬ ಮನದೊಳಿರೆ
ಬ್ರಹ್ಮಪಟ್ಟವನೇರಿ ರೂಪಕಶಕ್ತಿಯು
ಸೃಷ್ಟಿಯನಳೆದಿತು ದೃಷ್ಟಿಯೊಳೆ ||

ಇವು ಸಖೀಗೀತದಲ್ಲಿಯ ಸಾಲುಗಳು.

ಬೇಂದ್ರೆಯವರ ‘ಸಖೀಗೀತ’ ಒಂದು ದೃಷ್ಟಿಯಿಂದ ಅವರ ಆತ್ಮಚರಿತ್ರೆಯಾಗಿದೆ: ‘ನನ್ನ ಜೀವನದ ಕಥೆಯ ಹಂದರದ ಮೇಲೆ ಸಾಮಾನ್ಯ ಸಂಸಾರ ಸುಖ-ದುಃಖದ ಹಂಬನ್ನು ಹಬ್ಬಿಬಿಟ್ಟಿದ್ದೇನೆ’ ಎಂದು ಮುನ್ನುಡಿಯಲ್ಲಿ ಹೇಳಿದ್ದಾರೆ. ಈ ಕವಿತೆಯ ನಾಯಕನಿಗೂ ಬೇಂದ್ರೆಯವರಿಗೂ ಇರುವ ಸಾಮಾನ್ಯ ಸಂಗತಿ ಎಂದರೆ ಕಾವ್ಯ ಶಕ್ತಿ. ತನ್ನ ಕಾವ್ಯ ಶಕ್ತಿಯ ಬಗ್ಗೆ ಈ ಕವಿತೆಯ ನಾಯಕ ಕೆಲವು ಮಾತುಗಳನ್ನು ಹೇಳಿದ್ದಾನೆ. ಅವುಗಳಲ್ಲಿ ಒಂದು ಮಾತು ಮೇಲೆ ಉದಾಹರಿಸಿದ ಪದ್ಯದಲ್ಲಿದೆ.

‘ನನ್ನ ಚಿತ್ರಕ ಶಕ್ತಿ ಉತ್ಪ್ರೇಕ್ಷೆಯನೇರಿ, ಬಣ್ಣ ಬಣ್ಣದ ಬಣ್ಣನೆಗೆ ಒಲಿದಿತು’ ಎಂದು ಹೇಳುತ್ತಾನೆ. ‘ವರ್ಣಾನಿ ನಿಪುಣೋ ಕವಿಃ’ ಎಂಬುದು ಸಂಸ್ಕೃತದಲ್ಲಿಯ ಒಂದು ಮಾತು. ಬಣ್ಣಿಸುವುದು ಕವಿಯ ವಿಶೇಷ ಅಧಿಕಾರ. ಬೇಂದ್ರೆಯವರು ಅದನ್ನು ಚಿತ್ರಕಶಕ್ತಿ’ ಎಂದು ಕರೆದಿದ್ದಾರೆ. ಚಿತ್ರಕಶಕ್ತಿಗೆ ಉಪಮಾನವಾಗಿ ಶ್ರಾವಣದ ಹಸರಾಣಿಯನ್ನು ಉದಾಹರಿಸಿದ್ದಾರೆ. ಶಿವನ ಕುದುರೆ ಉತ್ಪ್ರೇಕ್ಷಿಸಿ ಉಪಮಾನವಾಗುತ್ತದೆ. ಉತ್ಪ್ರೇಕ್ಷೆ ಎಂದರೆ ವಿಭಾವನಾ ಶಕ್ತಿ. ಒಂದು ವಸ್ತುವನ್ನು ಇನ್ನೊಂದು ವಸ್ತು ಎಂಬಂತೆ ಭ್ರಮೆಯನ್ನುಂಟು ಮಾಡುವ ಶಕ್ತಿ ಶ್ರಾವಣಕ್ಕಿದೆ. ಶ್ರಾವಣದ ಮಳೆಯಲ್ಲಿ ನೆನೆದ ಭೂಮಿ ಹಸಿರನ್ನು ಮೈತುಂಬ ಹೊದ್ದುಕೊಳ್ಳುವುದೇ ಒಂದು ಸೋಜಿಗ. ನೆಲದಲ್ಲಿ ಅಡಗಿದ ಲಕ್ಷಗಟ್ಟಲೆ ಹುಲ್ಲಿನ ಬೀಜಗಳು ಮಳೆಯಲ್ಲಿ ಅಂಕುರಿಸಿ ಹುಲ್ಲಿನ ಹಾಸಿಗೆ ತಯಾರಾಗುತ್ತಿರಬೇಕು. ಅದೇನೆ ಇದ್ದರೂ ಮಳೆ ಬಿದ್ದೊಡನೆ ನೆಲಹಸಿರಾಗುವುದು, ಕಣ್ಣಿಗೆ ಅಚ್ಚರಿಯನ್ನುಂಟು ಮಾಡುತ್ತದೆ.

ಇನ್ನೊಂದು ನುಡಿ ಶ್ರಾವಣವು ಕೊಡಮಾಡುವ ರೂಪಕಗಳನ್ನು ಕುರಿತು ಹೇಳುತ್ತದೆ. ಶ್ರಾವಣದ ನಿಸರ್ಗ ಬ್ರಹ್ಮಪಟ್ಟವನೇರಿ ರೂಪಕಗಳನ್ನು ಸೃಷ್ಟಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಧಾರವಾಡ, ಧಾರವಾಡದ ಹಸಿರು ಮೊದಲಿನಿಂದಲೂ ಬೇಂದ್ರೆಯವರ ಕಲ್ಪನಾ ಶಕ್ತಿಯನ್ನು ಉದ್ದೀಪಿಸಿತು. ಬಾಲ್ಯಕಾಂಡದಲ್ಲಿ ಅವರ ಒಂದು ಸಾಲು ಹೀಗೆ ಹೇಳುತ್ತದೆ.

ನಿಧಿಯಂತೆ ನಿಂತಿತ್ತು ಸಲ್ಲಿಸಲು ಸಲುವಳಿ
ಅದೃಷ್ಟ ಎನಿಸುವ ನಾಳಿನೊಲು

ಧಾರವಾಡ ಈ ಕವಿಯ ಕಾವ್ಯಕ್ಕೆ ಬೇಕಾಗುವ ನಿಸರ್ಗ, ರೂಪ ಚಿತ್ರಗಳನ್ನು ನೀಡಲು ಸಿದ್ಧವಾಗಿ ನಿಂತಿತ್ತು. ಅದು ಸಲ್ಲಿಸಿದ ಸಲುವಳಿಯನ್ನು ನಾನು ಸರಿಯಾಗಿ ಉಪಯೋಗಿಸಿಕೊಂಡೆ ಎಂದು ತಮ್ಮ ಕವಿತೆಗಳಲ್ಲಿ ಹೇಳಿದ್ದಾರೆ.

‘ಸಖೀಗೀತ’ದಲ್ಲಿ ಶ್ರಾವಣ ಕುರಿತು ಕೆಲವು ಚೌಪದಿಗಳಿವೆ.

ಆಷಾಢದ ಮುಗಿಲು ಬೀಸಾಡಿ ಬಂದವು
ಈಸಾಡಿ ಬಂದಂಥ ಆನೆಗಳೇ |
ರೋಷದ ತೋಷದ ಬೆಡಗು ಬಿನ್ನಾಣವ
ಬೀರುವ ಬಿಂಕದಿ ಮೆರೆಯುವೋಲೇ ||

ಮಳೆಗಾಲದ ಪ್ರಾರಂಭವನ್ನು ಈ ಸಾಲುಗಳು ಹೇಳುತ್ತವೆ. ನದಿಯಲ್ಲಿ ಈಜಾಡುವ ಆನೆಗಳ ವೈಭವವನ್ನು ಮುಗಿಲಿನ ಮೋಡಗಳಲ್ಲಿ ಕವಿ ಕಂಡಿದ್ದಾರೆ. ಆಷಾಡದ ಮೋಡಗಳು ಮಳೆಸುರಿಸುವ ಮೊದಲು ತೋರುವ ಬಿಂಕವನ್ನು ಮರೆಯುವುದು ಹೇಗೆ ಎನ್ನುತ್ತಾರೆ ಬೇಂದ್ರೆ.

ಎಚ್ಚತ್ತ ಕಾಮಗೆ ಪಚ ಚೆಯ ಪಸದನ
ಕಾಣಿಕೆಗೊಡುವಂತೆ ನೆಲವಲ್ಲವೆ!
ಹಚ್ಚ ಹಸಿರಾಯಿತ್ತೊ ಹುಚ್ಚು ಹಸಿರಾಯಿತ್ತೊ
ಹುಚ್ಚು ಹಿಡಿಸಿತು ನೋಡೆ ಲೋಚನಕೆ ||

ಮಳೆಯಿಂದ ತೋಯ್ದು ತಪ್ಪಡಿಯಾದ ನೆಲ ನೋಡುಗನ ಕಣ್ಣಿಗೆ ಹುಚ್ಚು ಹಿಡಿಸುತ್ತದೆ. ನೆಲವು ಪ್ರಕೃತಿ ಪುರುಷನಿಗೆ ಪಚ್ಚೆಯ ಆಭರಣ ನೀಡಲು ಸನ್ನದ್ಧವಾಗಿರುವಂತಗೆ ನೆಲವೆಲ್ಲ ತೋರುತ್ತದೆ. ಶ್ರಾವಣ ಮನಸ್ಸಿಗೆ ಮುದನೀಡುವ ಸಮಯ.

ಬಂದಿತು ಶ್ರಾವಣ ಹೃದಯ ವಿದ್ರಾವಣ
ಕಾನನ ಕಾವಣವಾಗುತಿರೆ |
ಪಡುಗಾಳಿ ಹಾಡಿತು ಗಿಡಬಳ್ಳಿ ಆಡಿತು
ಹೊಲ ಹುಲ್ಲು ನೋಡಿತು ಲೀಲೆಯೊಳೆ ||

ಗಾಳಿಯ ಹಾಡು, ಗಿಡಬಳ್ಳಿಯ ಆಟವನ್ನು ಹೊಲದ ಹುಲ್ಲು ಕೌತುಕದಿಂದ ನೋಡುವ ಸಂಭ್ರಮ ಇಲ್ಲಿದೆ. ಇದೇ ಕವಿಯ ಚಿತ್ರಕ ಶಕ್ತಿ ಇಳೆಯ ಸಂಭ್ರಮಾವತಾರಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರ ಬಿಡಿಸಿ ಹೇಳುವ ಪರಿ.

ನೀರ್ವಕ್ಕಿ ಬಾನಕ್ಕಿ ಬೆಳ್ಳಕ್ಕಿ ಹಾಲಾಗಿ
ಸಾಲಾಗಿ ಮೇಲಾಗಿ ಹಾರುತಿರೆ
ಮೀನ್ಗಳು, ಮಿಂಬುಲಿಗ ಮಿಂಚುಳ ಮಿಂಚಿನ
ಬಳಗವು ಎಂಬಂಥೆ ತೊಳತೊಳಗಿರೆ ||

ಆಗಸದಲ್ಲಿಯ ಹಕ್ಕಿಗಳ ಸಾಲು, ನೀರಿನಲ್ಲಿಯ ಮೀನುಗಳ ಮಿಂಚುಳಗಳ ಗುಂಪು ಜಗದ ಜೀವನದಲ್ಲಿ ಶ್ರಾವಣದ ಮಿಂಚಿನ ಸಂಚಾರದ ಪ್ರತೀಕದಂತೆ ಬಳಗವೆಲ್ಲ ಸಂಭ್ರಮಪಡುತ್ತಿವೆ.

ಮೋಡದ ದುರ್ದಿನಕೆ ಮಾರ್ದನಿ ಬರಲಿಲ್ಲ
ಎದೆಯೆಲ್ಲ ಘನನೀಲ ವ್ಯಾಪಿಸಿರೆ
ಗುಡುಗಿಗೆ ನಡುಗದೆ ಅಡಗಿದ ದುಂದುಭಿ
ರವವೊಂದು ಒಳಗಿವಿ ಕೇಳುತಿರೆ ||

ಗಕ್ಕನೆ ನಿಲ್ಲಲು ಹೌಹಾರಿ ಹಗಲೆಲ್ಲ
ಇರುಳಾಗೆ, ಧ್ವನಿಯೊಂದು ಏಳುತಿದೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ ||

‘ಸಖೀಗೀತ’ ಸಂಗ್ರಹದಲ್ಲಿ ಬರುವ ಕವಿತೆ ‘ಶ್ರಾವಣದ ವೈಭವ’. ಶ್ರಾವಣದ ನಿಸರ್ಗ ವೈಭವ ಈ ಕಾವ್ಯದಲ್ಲಿದೆ. ಮೂರು ಮಾತ್ರೆಗಹಳ ಗಣಗಳುಳ್ಳ ಛಂದಸ್ಸಿನ ಕವಿತೆ ಇದಾಗಿದೆ. ಕವಿತೆಯಲ್ಲಿ ಒಟ್ಟು ನಾಲ್ಕು ಭಾಗಗಳಿವೆ.

ಏನು ಹಸಿರು | ಏನು ಹಳದಿ!
ಸುತ್ತು ಮುತ್ತು ನೋಡು ಕೆಳದಿ || ಪಲ್ಲ ||


ಹುಲ್ಲು ಹೂವು ಆದರೇನು,
ಹಬ್ಬದುಬ್ಬಿನಲ್ಲಿವೆ;
ದಿಬ್ಗಳನು ತಬ್ಬಲೆಂದು
ಎಲ್ಲನೆಲಕು ಹಬ್ಬಿವೆ.


ಮಳೆಯ ಬಿಲ್ಲು ಮುರಿದು ಹತ್ತು
ಕಡೆಗೆ ಹಂಚಿದಂತಿದೆ,
ಹುಲ್ಲು ಕಸವು ಬಣ್ಣ ಬಡೆದು
ಹೂತು ಹಿಗ್ಗಿ ನಿಂತಿದೆ.


ನೆಲದ ಬಸಿರ ರತ್ನ ರತ್ನ
ತನ್ನ ಸೊಬಗ ಕಳಿಸಿದೆ;
ಬಣ್ಣದೊಂದು ಜಾತ್ರೆಗಾಗಿ
ತನ್ನ ಪಯಣ ಬೆಳಸಿದೆ.


ಮಣ್ಣು ಹುಡಿಯ ಕಣಕಣವೊ
ಕಣ್ಣು ಪಡೆದ ಹಾಗಿದೆ
ಬಾನಿನಂಚಿನಲ್ಲಿ ಮೋಡ
ನೋಡಲಿದನೆ ಬಾಗಿದೆ.


ಮುಗಿಲು ನೆಲಕೆ ಮುಕ್ಕು ಚಿಕ್ಕೆ
ಕಾಳುಗಳನು ಬಿತ್ತಿದೆ;
ನೆಲವು ಮುಗಿಲಿಗರ್ತಿಯಿಂದ
ಆರತಿಯನ್ನೆತ್ತಿದೆ.


ಬಸಿರ ಹೊಲಕೆ ಹೂವು ಮುಡಿಸ
ಲೆಂದು ಬಂದ ಸಂಭ್ರಮ;
ಸೃಷ್ಟಿಯಲ್ಲೆ ಕಾಣುತಿಹುದು
ಮನುಜನೆತ್ತಿದೀಕ್ರಮ

ಈ ಮೊದಲ ಭಾಗದಲ್ಲಿ ಶ್ರಾವಣದ ನೆಲ ಹಸಿರು ಹುಲ್ಲು ಮತ್ತು ಬಣ್ಣಬಣ್ಣದ ಹೂಗಳಿಂದ ತುಂಬಿಕೊಂಡದ್ದರ ವರ್ಣನೆಯಿದೆ. ಬರಡು ನೆಲದ ಈ ಸಿಂಗಾರ ಕವಿಗೆ ಬಸಿರ ನೆಲಕೆ ಹೂವು ಮುಡಿಸಲೆಂದು ಬಂದ ಸಂಭ್ರಮದಂತೆ ಕಾಣುತ್ತದೆ.


ರಂಗು ಇಹುದು ರೂಪವಿಹುದು,
ಗಂಧ ಒಳ್ಳಿತೆಲ್ಲವು;
ನಯವು ನುಣುಪು ಇದ್ದು ಏನು?
ವ್ಯರ್ಥವಾಯಿತೆಲ್ಲವು!


ಚದುರು ಹೂ ಲವಂಗ ಮತ್ತೆ
ಇದಕೆ ಹೆಸರು ಹೇಸಿಗೆ
ಹೆಸರು ಪಡೆದ ಹೂವೆ ನಿನಗೆ
ಇಲ್ಲ ಮಳೆಯು ಬೇಸಿಗೆ


ರಂಗವಲ್ಲಿ ಹಸೆಯ ಹಾಗೆ
ಏನು ರಂಗು ರಂಗಿದೆ!
ಗುತ್ತನಾಗಿ ಒತ್ತಿ ಬೆಳೆದು
ತಂಗಿದಲ್ಲಿ ತಂಗಿದೆ!


ಡೊಂಕು ಇಲ್ಲ ಬಿಂಕವಿಲ್ಲ
ಮುರಕ ಮಾಟವಿಲ್ಲದೆ,
ಹೊಲದ ಹೂವು ನೆಲದ ಹಾಗೆ
ನಿಂತ ಕಡೆಗೆ ನಿಲ್ಲದೆ?


ಗಾಳಿಬೀಸಿ ಹಾಸಿ ಹೋಗಿ
ಘಾಸಿ ಮಾಡಬಂದರೂ
ವಾಸಿಯಾಯಿತೆಂಬುವಂತೆ
ಇಹುದು ನೋಡು ನೊಂದರೂ.

ಈ ಭಾಗದಲ್ಲಿ ಬೇರೆ ಬೇರೆ ಬಣ್ಣಗಳುಳ್ಳ ಬೇಸಿಗೆ ಹೂವಿನ ವರ್ಣನೆಯಿದೆ. ಈ ಹೂವು ಯಾವ ಋತುವಿನಲ್ಲೂ ಅರಳಬಹುದು. ಅದಕ್ಕೆ ‘ಇಲ್ಲ ಮಳೆಯು ಬೇಸಿಗೆ’. ಈ ಭಾಗದಲ್ಲಿ ಹೂವಿನ ವರ್ಣನೆಯನ್ನು ಬಿಟ್ಟರೆ ಬೇರೇನೂ ಇಲ್ಲ. ಸಾಲುಸಾಲಾಗಿ ಬಂದಿರುವ ಉಪಮೆಗಳೂ ಹೂವಿನಷ್ಟೆ ವೈವಿಧ್ಯಪೂರ್ಣವಾಗಿವೆ.


ಹುಡಿಯು ಅರಳಿ ಹೂ ಆಗೆ,
ಹುಳಕೆ ರೆಕ್ಕೆ ಒಡೆದವು;
ಮುಸುಕು ಹರಿದು ಪಕ್ಕ ತೆರೆದು
ಚಿಟ್ಟ ಮುಕ್ತಿ ಪಡೆದವು


ಮುಕ್ತಿ ಪಡೆದ ಹರ್ಷವೆನಲೊ!
ಸೆರೆಯ ಬಿಟ್ಟ ಹುಚ್ಚೆದು
ಏನು ಆದರೇನು ಇಹುದು
ಅಚ್ಚ ಅಚ್ಚಮೆಚ್ಚಿದು


ಪಾತ್ರದವಳು ನೂರು ನಾಟ್ಯ
ಆಡುವಂತೆ ಆಡುವ
ಹುಡುಗನಂತೆ ಹುಡುಗಿಯಂತೆ
ಸಿಕ್ಕ ಕಡೆಗೆ ಓಡುವ


ನಯವೆ ರೆಕ್ಕೆ ಪಡೆದು ಚೆಲ್ಲ
ವರಿದು ಪಾರುತಿರುವದು;
ಹುಚ ಚುಹಿಗ್ಗಿಗೆಗ್ಗು ಇಲ್ಲ
ಎಂದು ಸಾರುತಿರುವುದು


ರೆಕ್ಕೆ ಹುಳಗಳಲ್ಲ ಇವೂ
ಚಿಕ್ಕ ರೂಪ ತಾಳಿದ
ಚೊಕ್ಕ ಅಪ್ಸರಸಿಯರೆ
ನಕ್ಕು ನಲಿಯುತಿರುವರು


ಇಂದ್ರ ಜಾಲದಿಂದ ಬಂದ
ಸುಂದರಿಯರುಎಂಬುದು
ಊಹೆ ಕೂಡ ಊಹಿಸಿಯೂ
ತನ್ನ ತಾನೆ ನಂಬದು;


ಒಂದನ್ನೊಂದು ಅಟ್ಟುತಿಹವು
ಒಂದನೊಂದು ಮುಟ್ಟಲು,
ಅಲ್ಲು, ಇಲ್ಲು, ಎಲ್ಲು ಚಿಟ್ಟೆ
ಸಾಲು ಸಾಲು ಮೆಟ್ಟಿಲು


ಪ್ರಣಯಭಂಗ ಪಂಕ್ತಿ ಪಂಕ್ತಿ
ಸ್ವರ್ಗ ಸೋಪಾನವು!
ಎದೆಯಲಿದ್ದ ತನನ ತಾನ
ಮೌನವೆತ್ತ ಗಾನವ !


ಹೂವುಪಕಳೆ ಪ್ರಾಣತುಂಬಿ
ಚೆಟ್ಟೆಯಾಗಿ ಕಾಂಬವೋ!
ಕುಣಿದು ದಣಿದು ಚಿಟ್ಟೆ ಪಕ್ಕ
ಹೂವು ಎನಿಸಿಕೊಂಬವೋ!

೧೦
ಒಂದನೊಂದು ತಬ್ಬಿ ಮುತ್ತಿ
ಏಕಜೀವವಾಗಿವೆ
ಜಡವ ಜೀವವೆಂದು ಸುಳ್ಳೆ
ಎರಡು ರೂಪವಾಗಿವೆ.

೧೧
ಎಂಟು ಹತ್ತು ಗುಂಪು ಗುಂಪು
ಒಂದನೊಂದು ಬಳಸುತ
ಒಂದನೊಂದು ಎಳೆದು ಎಳಸಿ
ಹಿಂದೆ ಮುಂದೆ ಕಳಿಸುತ

೧೨
ಚಿಟ್ಟೆದುಂಬ ಒಟ್ಟಿಲಾಗಿ
ದೊಂಬಿಯಾಡುತಿರುವವು
ಗೊಂಬಿ ಬರೆದ ಹಾಗೆ ಹೂವು
ಅದನು ನೋಡುತಿರುವವು