ಈ ಮೂರನೆ ಭಾಗ ಪಾತರಗಿತ್ತಿಗಳ ವರ್ಣನೆಗೆ ಮೀಸಲಾಗಿದೆ. ಒಟ್ಟು ಕವನದ ಸುಮಾರು ಅರ್ಧಭಾಗ ಈ ಚಿಟ್ಟೆಗಳ ವೈಭವ ವರ್ಣಿತವಾಗಿದೆ. ‘ಪಾತರಗಿತ್ತಿ ಪಕ್ಕ’ದಂಥ ಕವಿತೆಯಲ್ಲಿಯ ಅಲಂಕಾರಗಳ ದುಂದು ಕವಿಗೆ ತೃಪ್ತಿಯಾದಂತಿಲ್ಲ. ಇಲ್ಲಿ ಮತ್ತೆ ಆ ದುಂದಿನೊಂದಿಗೆ ಬೇರೆ ವಿಸ್ಮಯಕರವಾದ ಉಪಮೆಗಳು ಬಂದಿವೆ. ‘ನಯವೆ ರೆಕ್ಕೆ ಪಡೆದು ಚೆಲ್ಲವರಿದು ಪಾರುತಿರುವುದು’ ‘ರೆಕ್ಕೆ ಹುಳಗಳಲ್ಲ ಇವೂ ಚಿಕ್ಕ ರೂಪ ತಾಳಿದ ಚೊಕ್ಕ ಅಪ್ಸರಸಿಯರೇ ನಕ್ಕು ನಲಿಯುತಿರುವರು, ‘ಇಂದ್ರ ಜಾಲದಿಂದ ಬಂದ ಸುಂದರಿಯರು’ ‘ಹೂವು ಪಕಳೆ ಪ್ರಾಣ ತುಂಬಿ ಚಿಟ್ಟೆಯಾಗಿ ಕಾಂಬವೋ’ ಮೊದಲಾದ ಅನೇಕ ಉಪಮೆ ಉತ್ಪ್ರೇಕ್ಷೆಗಳು ಇಲ್ಲಿವೆ.


ಹಾಳು ಬೀಳು ಪಡವು ಬಂಜೆ
ಹಕ್ಕಲೊಕ್ಕವೆಲ್ಲವೂ
ವ್ಯಾಪ್ತವಾಯ್ತು ಹೂವ ಹೂವ
ರಾಸಲೀಲೆಗೆಲ್ಲವೂ


ಹೂವ ಹಡಲಿಗೆಯನು ಹೊತ್ತ
ಭೂಮಿ ತಾಯಿ ಜೋಗಿತಿ
ಮೈ ತುಂಬಿ ಕುಣಿಯುತಿಹಳ
ನಂತಕಾಲವೀಗತಿ


ಎಷ್ಟು ಹೋಲಿಕೆಯನು ಕೊಟ್ಟು
ಹೊಗಳಿ ಮನವು ತಣಿಯದು
ರೂಪಗಳಿಗೆ ಚಿತ್ರಗಳಿಗೆ
ಉಪಮೆಗಳಿಗೆ ಗಣಿಯದು

ಕೊನೆಯ ಈ ಭಾಗದಲ್ಲಿ ಶ್ರಾವಣದ ವರ್ಣನೆಯಿದೆ. ಶ್ರಾವಣದ ಮಳೆ ಹಸಿರು, ಹೂವು, ಚಿಟ್ಟೆ ಮೊದಲಾದವುಗಳಿಂದ ತುಂಬಿಕೊಂಡು ನಲಿಯುವ ಭೂಮಿ ‘ಹೂವ ಹಡಲಿಗೆಯನು ಹೊತ್ತ ಭೂಮಿತಾಯಿ ಜೋಗತಿ’ ಎಂಬ ಅತ್ಯಂತ ಸಜೀವವಾದ ಪ್ರತಿಮೆಯಾಗಿ ಕಾಣುತ್ತದೆ.

ತಲೆಯ ಮೇಲೆ ಹೊತ್ತ ಹಡಲಿಗೆಯ ಪರಿವೆಯಿಲ್ಲದೆ ಕುಣಿಯುವ ಜೋಗತಿಯರ ಉನ್ಮಾದದೊಂದಿಗೆ ಶ್ರಾವಣದ ಉನ್ಮಾದವನ್ನು ಇಲ್ಲಿ ಹೋಲಿಸಲಾಗಿದೆ. ಈ ಪದ್ಯದ ಕೊನೆಗೆ ಶ್ರಾವಣದ ವೈಭವ ಕುರಿತು ಹೇಳುತ್ತಾರೆ.

ಎಷ್ಟು ಹೋಲಿಕೆಯನು ಕೊಟ್ಟು
ಹೊಗಳಿ ಮನವು ತಣಿಯದು
ರೂಪಗಳಿಗೆ ಚಿತ್ರಗಳಿಗೆ
ಉಪಮೆಗಳಿಗೆ ತಣಿಯದು ||

ನಿಸರ್ಗಸೌಂದರ್ಯ ಕವಿಯನ್ನು ಮಂತ್ರ ಮುಗ್ಧನನ್ನಾಗಿ ಮಾಡಿ ತನ್ನೆಲ್ಲ ಸೌಂದರ್ಯದ ವಿವರಗಳನ್ನು ಕವಿಗೆ ಕಾಣಿಕೆಯಾಗಿ ನೀಡುತ್ತದೆ. ಶ್ರಾವಣ ಬೇಂದ್ರೆಯವರ ಕಾವ್ಯವನ್ನು ಉದ್ದೀಪಿಸುವ ಪ್ರೇರಕ ಶಕ್ತಿಯಾಗಿದೆ.

ಶ್ರಾವಣಕ್ಕೂ ಬೇಂದ್ರೆಯವರ ಕಾವ್ಯಕ್ಕೂ ಒಂದು ಬಲವಾದ ನಂಟು. ಶ್ರಾವಣಧ ಸೌಂದರ್ಯವನ್ನು ಸೂರೆಗೊಂಡ ಅವರ ಒಂದು ಪದ್ಯ ‘ಹಾಡು ಪಾಡು’ ಸಂಗ್ರಹದಲ್ಲಿದೆ. ಕವಿತೆಯ ಹೆಸರು ‘ಶ್ರಾವಣ’. ಈ ಕವಿತೆ ಲಾವಣಿ ಗತ್ತಿನಲ್ಲಿದ್ದು ‘ಲಯ’ ಕವಿಯ ತನ್ಮಯತೆಯನ್ನು ಪ್ರತಿಫಲಿಸುತ್ತಿದೆ.

ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ |
ಬಂತು ಬೀಡಿಗೆ | ಶ್ರಾವಣಾ ಬಂತು || ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ ||
ಕುಣಿದಾವಗಾಳಿ | ಭೈರವನ ರೂಪತಾಳಿ || ಅಪ ||


ಶ್ರಾವಣ ಬಂತು ಫಟಕ್ಕ | ರಾಜ್ಯ ಪಟ್ಟಕ್ಕ |
ಬಾನಮಟ್ಟಕ್ಕ |
ಏರ್ಯಾವಮುಗಿಲು | ರವಿಕಾಣೆ ಹಾಡೆಹಗಲು |


ಶ್ರಾವಣ ಬಂತು ಹೊಳಿಗಳಿಗೆ | ಅದೆ ಶುಭಗಳಿಗೆ |
ಹೊಳಿಗೆ ಮತ್ತಮಳಿಗೆ |
ಆಗೇದ ಲಗ್ನ | ಅದರಾಗ ಭೂಮಿಮಗ್ನ |


ಶ್ರಾವಣ ಬಂತು ಊರಿಗೆ | ಕೇರಿ ಕೇರಿಗೆ |
ಹೊಡೆದ ಝಾರಿಗೆ |
ಜೋಕಾಲಿ ಏರಿ | ಅಡರ್ಯಾವ ಮರಕ ಹಾರಿ |


ಶ್ರಾವಣ ಬಂತು ಮನಿಮನಿಗೆ | ಕೂಡಿದನಿದನಿಗೆ |
ಮನದ ನನಿಕೊನಿಗೆ |
ಒಡೆದಾವ ಹಾಡು | ರಸ ಉಕ್ಕತಾವ ನೋಡು |
ಶ್ರಾವಣ ಬಂತು

ಕಡಲಿಗೆ ಬಂದ ಶ್ರಾವಣ ಹಂತ ಹಂತವಾಗಿ ಮನೆಯವರೆಗೆ ಬಂದು ಮುಟ್ಟುತ್ತಾನೆ. ಈ ಲಾವಣಿಯ ಎರಡನೆ ಚರಣದಲ್ಲಿ ಶ್ರಾವಣದ ಸರ್ವವ್ಯಾಪ್ತಿತ್ವದ ವರ್ಣನೆಯಿದೆ. ಹೊಳೆ-ಮಳೆಯ ಮದುವೆ ಅದರಲ್ಲಿ ಭೂಮಿಯ ಮಗ್ನತೆಯನ್ನು ಕವಿ ಹೇಳುವುದರೊಂದಿಗೆ ಮನೆಯಲ್ಲಿಯ ‘ಶ್ರಾವಣ’ವನ್ನು ಕುರಿತು ಹೇಳುತ್ತಾನೆ. ಹಬ್ಬಗಳ ತಿಂಗಳದ ವರ್ಣನೆ ಇದರಲ್ಲಿದೆ. ನಮ್ಮ ಹಳ್ಳಿ ಹೆಣ್ಣುಮಕ್ಕಳಿಗಂತೂ ಶ್ರಾವಣದ ವೈಭವವೇ ವೈಭವ. ಮನೆಮನೆಯಲ್ಲಿ ಹೆಣ್ಣು ಮಕ್ಕಳು ಹಾಡು ಪೂಜೆಯಲ್ಲಿ ತೊಡಗಿದರೆ ಗಂಡಸರು ಗುಡಿ-ಗುಂಡಾರಗಳಲ್ಲಿ ಭಜನೆ ಮೇಳಗಳಲ್ಲಿ ಮಗ್ನರಾಗುತ್ತಾರೆ.


ಬೆಟ್ಟ ತೊಟ್ಟಾವ ಕುತನಿಯ ಅಂಗಿ |
ಹಸಿರ ನೋಡ ತಂಗಿ |
ಹೊರಟಾವೆಲ್ಲೊ ಜಂಗಿ |
ಜಾತ್ರಿಗೇನೋ | ನೆರದs ಇಲ್ಲೆ ತಾನೋ |


ಬನಬನ ನೋಡು ಈಗ ಹ್ಯಾಂಗ |
ಮದುವಿಮಗನ್ಹಾಂಗ |
ತಲಿಗೆ ಬಾಸಿಂಗ |
ಕಟ್ಟಿಗೊಂಡು | ನಿಂತಾವ ಹರ್ಷಗೊಂಡು ||


ಹಸಿರುಟ್ಟ ಬಸರಿಯ ಹಾಂಗ |
ನೆಲ ಹೊಲಹ್ಯಾಂಗ |
ಅರಿಸಿಣ ಒಡೆದಾಂಗ |
ಹೊಮ್ಮತಾವ | ಬಂಗಾರ ಚಿಮ್ಮತಾವ ||


ಗುಡ್ಡ ಗುಡ್ಡ ಸ್ಥಾವರಲಿಂಗ |
ಅವಕ ಅಭ್ಯಂಗ | ಎರಿತಾವನ್ನೋ ಹಾಂಗ |
ಕೂಡ್ಯಾವ ಮೋಡ |
ಸುತ್ತೆಲ್ಲ ನೋಡ ನೋಡ ||


ನಾಡೆಲ್ಲ ಏರಿಯ ವಾರಿ |
ಹರಿತಾವ ಝರಿ |
ಹಾಲಿನ ತೊರಿ |
ಈಗ ಯಾಕs | ನೆಲಕೆಲ್ಲ ಕುಡಿಸಲಾಕ ||
ಶ್ರಾವಣ ಬಂತು || ||

ಇದು ಕವಿತೆಯ ಎರಡನೆ ನುಡಿ – ‘ಶ್ರಾವಣಾಬಂತು’ ಅನ್ನುತ್ತ ಮೊದಲನೆ ನುಡಿಯಲ್ಲಿ ಹೇಳಿ ನಿಸರ್ಗದಲ್ಲಾದ ಬದಲಾವಣೆ ಅಲ್ಲದೆ ತಮ್ಮ ಕಲ್ಪನಾ ಶಕ್ತಿಗೆ ಕಂಡದ್ದನ್ನು ಇಲ್ಲಿ ಚಿತ್ರಿಸಿದ್ದಾರೆ. ಗುಡ್ಡಗಳ ಮೇಲೆ ಮಳೆ ಸುರಿಯುವ ಚಿತ್ರ ಸ್ಥಾವರಲಿಂಗಕ್ಕೆ ಮಳೆಯೆರೆಯುವ ಅಭಿಷೇಕ! ಬಂಗಾರ ಬಣ್ಣದ ಹೂಗಳನ್ನು ತಳೆದ ಗಿಡಗಳು ಬಾಸಿಂಗ ಕಟ್ಟಿಕೊಂಡ ವಧು-ವರರು! ದೂರಾನ್ವಯದ ಸಂಬಂಧ ಇಲ್ಲಿದೆ. ಈ ಪದ್ಯದಲ್ಲಿಯ ಚಿತ್ರಗಳೆಲ್ಲ ಒಂದಾದ ಮೇಲೆ ಒಂದರಂತೆ ಮೂಡಿ ಮರೆಯಾಗಿ ಬಿಡುತ್ತವೆ.

ಪದ್ಯದ ಕೊನೆಯ ಸಾಲುಗಳಲ್ಲಿ ಶ್ರೀಕೃಷ್ಣ ಹುಟ್ಟಿದ ಮಾಸ ಎಂದು ಹೇಳಿದ್ದಾರೆ.

ಜಗದ್ಗುರು ಹುಟ್ಟಿದ ಮಾಸ |
ಕಟ್ಟಿ ನೂರು ವೇಷ |
ಕೊಟ್ಟ ಸಂತೋಷ |
ಕುಣಿತದ | ತಾನs ದಣಿತದ |
ಶ್ರಾವಣ ಬಂತು ಕಾಡಿಗೆ | ಬಂತು ನಾಡಿಗೆ |
ಬಂತು ಬೀಡಿಗೆ | ಶ್ರಾವಣಾ ಬಂತು ||

‘ನಾದಲೀಲೆ’ ಸಂಗ್ರಹದಲ್ಲಿ ‘ಶ್ರಾವಣ’ ಎಂಬ ಹೆಸರಿನ ಕವಿಯೊಂದಿದೆ. ಈ ಕವಿತೆ ಆ ‘ಶ್ರಾವಣ’ದ ಕವಿತೆಗಿಂತ ಭಿನ್ನವಾಗಿದೆ. ಇದರಲ್ಲಿ ಬೇಂದ್ರೆಯವರ ಕಲ್ಪನಾಶಕ್ತಿ ಮತ್ತು ಕಾವ್ಯಸಂಕಲ್ಪ ಶಕ್ತಿ ಕೆಲಸ ಮಾಡಿರುವುದು ತೋರುತ್ತದೆ.

ಪದ್ಯದ ಮೊದಲಿನ ಭಾಗ ಹೀಗಿದೆ.


ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ
ಹಸಿರಿನ ಹಸುಗೂಸದೊಂದು
ಆಗ ಈಗ ಹೊರಳುತಿಹುದು
ಏನೊ ಎಂತೊ ಒರಲುತಿಹುದು

s ಹಸಿರ ಒಳಗೆ ಹೊರಗೆ
ನೀರ ಬೆಳಕ ತುಣುಕು ಮಿಣುಕು
ಅಲ್ಲಿನಿಂದ ಬಂದೆಯಾ !
ಕುಣಿವ ಮಣಿವ ಹೆಡೆಯ ಹಾವುಗಳನು ಹಿಡಿದು ತಂದೆಯಾ?


ಏಕೆ ಬಂದೆ? ಏನು ತಂದೆ?
ಹೇಳೋಹೇಳು ಶ್ರಾವಣಾ
ನೀ ಬಂದ ಕಾರಣಾ

ಈ ಸಾಲುಗಳು ಶ್ರಾವಣದ ಸೃಷ್ಟಿ ಪುರಾಣವನ್ನು ಹೇಳುವ ಹವಣಿಕೆಯಲ್ಲಿವೆ. ‘ಶ್ರಾವಣ’ ಈ ಕವಿತೆಯ ನಾಯಕ. ಶ್ರಾವಣದ ಮಾನವೀಕರಣ ಈ ಕವಿತೆಯ ಮಟ್ಟಿಗೆ ಒಂದು ಗೃಹೀತ ಸತ್ಯವಾಗಿರುವುದರಿಂದ, ಶ್ರಾವಣದ ಹುಟ್ಟು, ಬೆಳವಣಿಗೆ ಮತ್ತು ವ್ಯಕ್ತಿತ್ವವನ್ನು ಕುರಿತು ಈ ಕವಿತೆ ಕೆಲವು ಮಾತುಗಳನ್ನು ಹೇಳುತ್ತದೆ. ಶ್ರಾವಣದ ದಿಕ್ಕು ದೆಸೆಗಳನ್ನು, ಕುಲ-ಗೋತ್ರಗಳನ್ನು, ಹುಟ್ಟು ಬೆಳವಣಿಗೆಯನ್ನು ತಿಳಿದುಕೊಳ್ಳುವ ಕುತೂಹಲವಿದೆ. ‘ಅಲ್ಲಿನಿಂದ ಬಂದೆಯಾ’? ಎಂಬ ಪ್ರಶ್ನೆ ಕುತೂಹಲದ್ದು.

ಈ ಪ್ರಶ್ನೆಗೆ ಕೊಟ್ಟಿರುವ ಉತ್ತರ ಗಡಸಾಗಿದೆ. ನೆಲಮುಗಿಲು ಕೂಡಿದಂತೆ ಕಾಣುವ ಹಸಿರು ಶ್ರಾವಣಕ್ಕೆ ಜನ್ಮ ಕೊಟ್ಟಿತೆ? ಶ್ರಾವಣಕ್ಕೆ ಜನ್ಮ ಕೊಡಲಿರುವ ಹಸಿರು ತಾನೆ ಒಂದು ಹಸುಗೂಸಾಗಿ ಒರಲುತ್ತಿದೆ. ಬಹುಶಃ ಈ ಕೂಸು ಬೆಳೆದು ಬಂದ ಶ್ರಾವಣವಾಗಿರಬೇಕು. ‘ಹಸಿರು, ನೀರು ಮತ್ತು ಬೆಳಕು’ ಇವು ಕೂಡಿಕೊಂಡು ಶ್ರಾವಣವಾಗಿರಬೇಕು ಎಂಬ ಊಹೆ. ಆದರೆ ‘ಅಲ್ಲಿನಿಂದ ಬಂದೆಯಾ?’ ಎಂಬ ಪ್ರಶ್ನೆಯ ನಂತರ ಇನ್ನೊಂದು ಪ್ರಶ್ನೆ ಇದೆ. “ಕುಣಿವ ಮಣಿವ ಹೆಡೆಯ ಹಾವುಗಳನ್ನು ಹಿಡಿದು ತಂದೆಯಾ?” ಶ್ರಾವಣದ ಮಳೆ ನೀರು, ನೆಲದ ಹುತ್ತಗಳಲ್ಲಿ ಸೇರಿ ಹಾವುಗಳನ್ನು ಹೊರಗೆ ಹಾಕುತ್ತದೆ. ಅಲ್ಲದೆ ನಾಗರಪಂಚಮಿ ಬರುವುದು ಶ್ರಾವಣ ಮಾಸದಲ್ಲಿಯೇ. ಕವಿತೆ ವಾಸ್ತವ ಸತ್ಯವನ್ನು ಉಪಯೋಗಿಸುವಂತೆ ಕಾಣಿಸುವುದಿಲ್ಲ. ಕುಣಿವ ಮಣಿವ ಹೆಡೆಯ ಹಾವುಗಳು ಕೃಷ್ಣ ಕುಣಿದ ಕಾಳಿಂಗ ಸರ್ಪದ ಸಂಗಾತಿಗಳು ಆಗಿರಬಹುದು. ಅರ್ಥ ಸ್ಪಷ್ಟವಾಗದೆ ಊಹಾವಿಲಾಸಕ್ಕೆ ಎಡೆ ಮಾಡಿಕೊಡುತ್ತದೆ. ಮುಂದಿನ ನುಡಿಯಲ್ಲಿ ಶ್ರಾವಣದ ವಾಸ್ತವ ಮತ್ತು ಕಲ್ಪಿತವಾದ ವರ್ಣನೆಯಿದೆ.

ಪಡುವ ದಿಕ್ಕಿನಿಂದ ಹರಿವ
ಗಾಳಿಕುದುರೆಯನ್ನು ಏರಿ
ಪರ್ಜನ್ಯ ಗೀತವನ್ನು
ಹಾsಡುತ್ತ ಬಂದಿತು.


ಬನದ ಮನದ ಮೇಳವೆಲ್ಲ
ಸೋs ಎಂದು ಎಂದಿತು
ಬಿದರಿ ಕೊಳಲ ನುಡಿಸಿತು
ಮಲೆಯ ಹೆಳಲ ಮುಡಿಸಿತು
ಬಳ್ಳಿಮಾಡ ಬಾಗಿಸಿತ್ತು
ಗಿಡಗಳ ತಲೆದೂಗಿಸಿತ್ತು
ಮರದ ಹನಿಯ ಮಣಿಗಳನ್ನು
ಅತ್ತ ಇತ್ತ ತೂರುತಾ
ಹಸಿರು ಮುರಿವ ತೊಂಗಲನ್ನು
ಕೆಳಗೆ ಮೇಲೆ ತೂಗುತಾ
ಬರುವ ನಿನ್ನ ಅಂದ ಚೆಂದ
ಸೂಸು ಸೊಗಸು ಆನಂದ

ಗುಳ್ಳಗಂಜಿ ತೊಡುವ ತೊಟ್ಟು
ಹಾವಸೆಯಾ ಉಡುಪನುಟ್ಟು
ನಗುವ ತುಟಿಯ ನನೆದ ಎವೆಯ
ತರಳ ನೀನು ಶ್ರಾವಣಾ,
ಅಳಲು ನಗಲು ತಡವೆ ಇಲ್ಲ
ಇದುವೆ ನಿನಗೆ ಆಟವೆಲ್ಲ
ಬಾರೋದಿವ್ಯ ಚಾರಣಾ
ತುಂಟ ಹುಡುಗ ಶ್ರಾವಣಾ !

ಪಶ್ಚಿಮ ದಿಕ್ಕಿನಿಂದ ಕುದುರೆಯೇರಿ ಪರ್ಜನ್ಯ ಗೀತವನ್ನು ಹಾಡುತ್ತ ಬರುವ ಗಾಳಿ ಕಾಡನ್ನು ಆವರಿಸಿ ಬಿಡುತ್ತದೆ. ಬಿದಿರು ಮೆಳೆ ಕೊಳಲನ್ನು ನುಡಿಸುತ್ತದೆ. ಇಂಥ ರಮ್ಯವಾದ ವಾತಾವರಣದಲ್ಲಿ ‘ತರಳ ಶ್ರಾವಣ’ನ ದರ್ಶನವಾಗುತ್ತದೆ. ತುಂಟ ಹುಡುಗನಾದ ಶ್ರಾವಣನ ವೇಷ ಭೂಷಣಗಳ ವರ್ಣನೆ ಉಚಿತವಾಗಿದೆ. ಶ್ರಾವಣನಿಗೆ ಗುಲಗಂಜಿಯ ಅಲಂಕಾರ ಮತ್ತು ಹಾವಸೆಯ ಉಡುಪು. ಅವನ ತುಟಿ ನಗುತ್ತಿದ್ದರೂ ಕಣ್ಣಿನಲ್ಲಿ ಯಾವಾಗಲೂ ನೀರು “ಅಳಲು ನಗಲು ತಡವೇ ಇಲ್ಲ, ಇದು ನಿನಗೆ ಆಟವೆಲ್ಲ” ಬಾರೋ ದಿವ್ಯ ಚಾರಣಾ” ಇಲ್ಲಿ ಚಾರಣಶಬ್ದ ಶ್ರಾವಣಕ್ಕೆ ಪ್ರಾಸಬದ್ಧತೆ ಅಷ್ಟೆ.

ಕವಿತೆಯ ಕೊನೆಯ ಭಾಗದಲ್ಲಿ ಶ್ರಾವಣನ ತಂದೆ-ತಾಯಿಗಳ ಚಿತ್ರವಿದೆ.

ನೀನು ನಡೆದು ಬಂದ ಮಾಸ
ಹೆಣ್ಗೆ ತವರು ಮನೆಯ ವಾಸ
ಬರಿಯ ಆಟ ಬರಿಯ ಹಾಸ
ಮಧು ಮಾಸಕು ಹಿರಿದದು
ಮಧುರ ಮಾಸ ಸರಿಯದು


ಮೋಡಗವಿದ ಕಣ್ಣಿನವನು
ಮುದಿಯ ತಂದೆ ಮುಗಿಲರಾಯ
ನಿನ್ನನ್ನೆ ಬಯಸಿದಾ
ಕಣ್ಣು ಕೆನ್ನೆ ತೊಯ್ಸಿದಾ
ಬಿಸಿಲಹಣ್ಣ ತಿಂದು ಹೊತ್ತು
ಹೆತ್ತ ನಿನ್ನ ಭೂಮಿ ತಾಯಿ
ಪಾಪ, ನಿನ್ನ ನೆನಸಿತು
ಎದೆಯ ಸೆರಗ ನನೆಸಿತು
ಅಂತೆ ಬಂದೆ ಚಾರಣಾ
ಬಾರೊ ಮಗುವೆ ಶ್ರಾವಣಾ

ಮೋಡಗವಿದ ಕಣ್ಣಿನವನು ‘ಮುದಿಯ ತಂದೆ ಮುಗಿಲರಾಯ, ನಿನ್ನನ್ನೆ ಬಯಸಿದಾ, ಕಣ್ಣು ಕೆನ್ನೆ ತೊಯ್ಸಿದಾ’ ಮತ್ತು ‘ಬಿಸಿಲಹಣ್ಣ ತಿಂದು ಹೊತ್ತು, ಹೆತ್ತ ನಿನ್ನ ಭೂಮೀ ತಾಯಿ ಪಾಪ, ನಿನ್ನ ನೆನಸಿತು, ಎದೆಯ ಸೆರಗ ನನೆಸಿತು’ ಈ ಎರಡು ಚಿತ್ರಗಳು ಕವಿತೆಯಲ್ಲಿ ಅದ್ಭುತವಾದ ಕಲ್ಪನಾ ಶಕ್ತಿಯ ಫಲವಾಗಿವೆ. ಶ್ರಾವಣ ಒಂದು ದೃಷ್ಟಿಯಿಂದ ದ್ಯವಾ-ಪೃಥ್ವಿಯರ ಮಗ. ಆದರೆ ಇಲ್ಲಿ ತಂದೆ ತಾಯಿಗಳ ಈ ಚಿತ್ರದಲ್ಲಿ ನೋವಿನ ಸಂಬಂಧ ಮತ್ತು ಸಂಬಂಧದ ನೋವು ಹಾಸು ಹೊಕ್ಕಾಗಿದೆ. ಶ್ರಾವಣನ ವ್ಯಕ್ತಿತ್ವ ತಂದೆ-ತಾಯಿಗಳ ವ್ಯಕ್ತಿತ್ವಕ್ಕಿಂತ ತೀರ ಭಿನ್ನವಾದದ್ದು, ಶ್ರಾವಣನಿಗೆ ಅಳಲು-ನಗಲು ತಡವೇ ಇಲ್ಲ. ಅವನು ಕಾಲಿಟ್ಟಲೆಲ್ಲಾ ಆಟ ಮತ್ತು ಉತ್ಸಾಹ. ಅವನು ಬಂದರೆ ಹೆಣ್ಗೆ ತವರು ಮನೆ ವಾಸ. ‘ಬರಿಯ ಆಟ ಬರಿಯಹಾಸ’ ತಂದೆ ತಾಯಿಯರ ಮುಪ್ಪು ಮಗನ ಜೀವನೋತ್ಸಾಹ. ಎರಡೂ ಕೂಡಿಕೊಂಡು ನವೋದಯ ಕಾಲ ಕಂಡುಕೊಂಡ ಒಂದು ಹೊಸ ಸತ್ಯವ ನ್ನು ಮೂಡಿಸಲು ಯತ್ನಿಸುತ್ತದೆ.

ಈ ಕವಿತೆಯ ವೈಶಿಷ್ಟ್ಯವೆಂದರೆ ಶ್ರಾವಣದ ಮಾನವೀಕರಣ. ಸಾಧನಕೇರಿಯಲ್ಲಿ ಮೊದಲು ಕಂಡ ಶ್ರಾವಣದ ದರ್ಶನವನ್ನು ಬೇಂದ್ರೆ ಇಲ್ಲಿ ಸಾರಿದ್ದಾರೆ. ಇದನ್ನು ಬರೆದದ್ದು ೧೯೩೦ ಜುಲೈ ತಿಂಗಳಲ್ಲಿ.

ಉಯ್ಯಾಲೆ ಕವನ ಸಂಗ್ರಹದಲ್ಲಿ ‘ಶ್ರಾವಣದ ಹಗಲು’ ಎಂಬ ಹನ್ನೆರಡು ಸಾಲಿನ ಒಂದು ಚಿಕ್ಕ ಕವಿತೆ ಇದೆ. ಇದನ್ನು ಕವಿ ಬರೆದದ್ದು ೧೯೨೭ರಲ್ಲಿ. ಈ ಕವಿತೆಯ ಉದ್ದೇಶ ಸ್ಪಷ್ಟವಾಗಿ ಶ್ರಾವಣದ ಹಗಲನ್ನು ಬಣ್ಣಿಸುವುದು. ಹಗಲಿನ ವಿವರಗಳನ್ನೆಲ್ಲಾ ವಾಸ್ತವತೆಗೆ ಅನ್ಯಾಯವಾಗದಂತೆ ಒಂದು ಕಡೆ ಕಲೆ ಹಾಕಿದಂತಿದೆ. ಆದರೆ ಕವಿ ಜಿಜ್ಞಾಸು ಆಗಿರುವುದರಿಂದ ಇದೆಲ್ಲದರ ಅರ್ಥವೇನು ಎಂಬ ಪ್ರಶ್ನೆಯನ್ನು ಕವಿತೆ ಕೇಳುತ್ತದೆ.

ನೆಲ ಹಸಿರು : ಹೊಲ ಹಸಿರು : ಗಿಡಗಂಟಿ ಹಸಿರು;
ಫಲ ಏನೊ? ಬಳೆಯುತಿದೆ ಬಯಲ ಬಸಿರು.

ಈ ಸೂಕ್ಷ್ಮವಾದ ನಿರೀಕ್ಷಣೆಯಲ್ಲಿ, ಅನಿರೀಕ್ಷಣೆಯಿಂದ ಹುಟ್ಟುವ ಪ್ರಶ್ನೆಯ ಆಳವಾದ ನೋವಿದೆ. ಶ್ರಾವಣದಲ್ಲಿ ಎಲ್ಲವೂ ಹಸಿರಾಗಿದೆ. ಎಲ್ಲವೂ ಬೆಳೆಯುತ್ತಿದೆ. ಆದರೆ ಬೆಳವಣಿಗೆ ಕೇವಲ ಒಂದು ಪ್ರಾಕೃತಿಕ ವ್ಯಾಪಾರವೇ ಹೊರತು ಕ್ರತು ಶಕ್ತಿಯಿಂದ ಕೂಡಿದ ಸಂಕಲ್ಪವಲ್ಲ. ಅದಕ್ಕೆಂದೆ ಫಲ ಏನು ಎಂದು ಪ್ರಶ್ನೆ ಕೇಳಬೇಕಾಗುತ್ತದೆ. ಬಯಲು ಬಸಿರು ಸುಮ್ಮನೆ ಬೆಳೆದರೆ ಬಂಜೆಗೆ ಬಸಿರು ಬೆಳೆದಂತಾಗುತ್ತದೆ. ಬಹುಶಃ ಕವಿತೆ ಕಾವ್ಯದ ಕ್ರತು ಶಕ್ತಿಯನ್ನು ಪ್ರಶ್ನಿಸುವಂತೆ ಕಾಣುತ್ತದೆ.

ನೆನೆನೆನೆಸಿ ಅತ್ತಂತೆ ಆಗಾಗ ಮಳೆಯು,
ಅನಿತರೊಳು ನಡು ನಡುವೆ ಹೊಂಬಿಸಿಲ ಕಳೆಯು

ಹಿಂದಿನ ಕವಿತೆಯಲ್ಲಿನ ‘ನಗುವ ತುಟಿಯ ನನೆದ ಎವೆಯ’ ಎಂಬ ವರ್ಣನೆಯಲ್ಲಿಯ ವಿರೋಧಾಭಾಸ ಕೇವಲ ಅಲಂಕಾರಿಕವಾಗಿತ್ತು. ಇಲ್ಲಿ ಅದೇ ವಿರೋಧಾಭಾಸ ಅರ್ಥಪೂರ್ಣವಾಗಿದೆ. ಕಾರಣವಿಲ್ಲದ ನಗು ಮತ್ತು ಅಳು ಅಸ್ವಸ್ಥ ಮನಸ್ಸನ್ನು ಸೂಚಿಸುತ್ತವೆ.

ಗಾಳಿ ಗೋಳಿಡುವಂತೆ ಭೋರಾಡುತಿಹುದು;
ಬಾಳುವೆಯ ಹೊಸದೊಂದು ಒಗಟವಾಗಿಹುದು
ನಲೆಯರಿಯದೇ, ತೂಗು ಜೋಕಾಲಿಯಾಗಿ
ತಲೆ ತಿರುಗಿಸುವದೊಮ್ಮೆ ಕೆಳಗೆ ಮೇಲಾಗಿ

ಶ್ರಾವಣದಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ವಿವರಕ್ಕೆ ಈ ಕವಿತೆಯಲ್ಲಿ ಒಂದು ವಿಶೇಷ ಅರ್ಥ. ಕವಿತೆ ಜೀವನದ ಆಳದಲ್ಲಿರುವ ನೋವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಕವಿತೆಯ ಕೊನೆಯಲ್ಲಿ ಕವಿ ಅಸ್ವಸ್ಥತೆಯನ್ನು ತನ್ನದಾಗಿಸಿಕೊಂಡು ಹೇಳುತ್ತಾನೆ.

ತೂಗಿ ತಲೆದೂಗುವದು ತಲ್ಲೀನವಾಗಿ
ಬೇಗನೆ ಮತ್ತೆ ಹಾಲ್ಗುಡಿದ ಹಾವಾಗಿ
ತನ್ನ ಬಾಳುವೆಯಹುದು ಶ್ರಾವಣದ ಹಗಲು
ನನ್ನ ತೊಯ್ದಾಟದಲಿ ಅದಕಿಂತ ಮಿಗಿಲು

ಈ ಸಾಲುಗಳು ಕವಿಯ ಜೀವನವನ್ನು ಕುರಿತು ಏನೇ ಹೇಳಿರಲಿ, ಅದು ಈಗ ಪ್ರಸ್ತುವಲ್ಲ. ಕವಿಯ ಅಂತರಂಗದ ಭಾವನೆಯನ್ನು ಮೀರಿ ಕವಿತೆ ಶ್ರಾವಣದ ಹಗಲನ್ನು ಒಂದು ಜೀವಂತ ಪ್ರತಿಮೆಯಾಗಿಸಲು ಹವಣಿಸುತ್ತದೆ. ಒಂದು ಸಾಮಾನ್ಯ ಸತ್ಯವನ್ನು ನಿರ್ದೇಶಿಸಲು ಪ್ರಯತ್ನ ಮಾಡುತ್ತದೆ. ಪ್ರಾಕೃತಿಕವಾದ ಬೆಳವಣಿಗೆ ತನ್ನ ತಾನೇ ನಡೆದು ಮತ್ತೆ ಮರೆಯಾಗುವ ವ್ಯಾಪಾರ, ಅದರ ಫಲ, ಪ್ರಕೃತಿ ಕೊಟ್ಟಷ್ಟು, ನಾವು ಪಡೆದುಕೊಂಡಷ್ಟು. ನಿರಂತರವಾಗಿ ಸುರಿಯುವ ಮಳೆಯಿಂದ ಹದಗೊಂಡ ಭೂಮಿಯಲ್ಲಿ ಸಂಕಲ್ಪದ ಬೀಜಗಳನ್ನು ಬಿತ್ತಿದಾಗ, ಅದರ ಕೃಷಿಯಲ್ಲಿ ಮನಸ್ಸು ತೊಡಗಿಸಿದಾಗ ನಿರೀಕ್ಷಿತವಾದ ಫಲ ದೊರಕಬಹುದು. ಪ್ರಸ್ತುತ ಕವಿತೆ ಈ ಮಾತನ್ನು ಕಾವ್ಯಕ್ಕೂ ಅನ್ವಯಿಸಿ ಹೇಳುತ್ತದೆ ಎಂದು ಅನಿಸುತ್ತದೆ.