‘ಸಖೀಗೀತ’ದಲ್ಲಿ ‘ಶ್ರಾವಣದ ವೈಭವ’ ಕವಿತೆಯಲ್ಲಿ ಹೇಳಿದಂತೆ ಶ್ರಾವಣ ಕವಿಯ ಪಾಲಿಗೆ ಉಪಮೆ, ರೂಪಕ ಮತ್ತು ಚಿತ್ರಗಳ ಗಣಿಯಾಗಿದೆ. ಪ್ರತಿ ವರುಷ ಬರುವ ಶ್ರಾವಣ ತನ್ನ ಚಿತ್ರಗಳನ್ನು ಹೊಸದಾಗಿ ಮೂಡಿಸುತ್ತಲೇ ಬರುತ್ತದೆ. ಆದರೆ ಕಾವ್ಯ ವ್ಯಾಪಾರ ಕವಿಯ ಸ್ವಂಥದ ಜವಾಬ್ದಾರಿಯಾಗಿರುತ್ತದೆ. ಪ್ರಾಕೃತಿಕ ಸೌಂದರ್ಯದ ಕಾವ್ಯಾರ್ಥವನ್ನು ಕಂಡು ಅದನ್ನು ಮೂಡಿಸುವುದು ಕವಿಯ ಜವಾಬ್ದಾರಿಯಾಗಿದೆ. ಶ್ರಾವಣದ ಹಗಲು ಇಲ್ಲಿ ಒಂದು ಅರ್ಥಪೂರ್ಣವಾದ ಕೇಂದ್ರ ಪ್ರತಿಮೆಯಾಗಿದೆ. ಕವಿತೆಯ ಎಲ್ಲ ಅರ್ಥವನ್ನು ಸೂಚಿಸಲು ಸಮರ್ಥವಾಗಿದೆ. ಪ್ರತಿಯೊಂದು ವಿವರ ಕೇಂದ್ರ ಪ್ರತಿಮೆಯ ಅರ್ಥವನ್ನು ಬೆಳೆಸುತ್ತದೆ.

‘ಗಂಗಾವತರಣ’ ಸಂಗ್ರಹದಲ್ಲಿ ‘ಬಂದಿಕಾರಾ ಶ್ರಾವಣ’ ಎಂಬ ಕವಿತೆ ಇದೆ. ಈಗಾಗಲೇ ಚರ್ಚೆಗೆ ಒಳಗಾದ ಶ್ರಾವಣದ ಕವಿತೆಗಳಂತೆ ಈ ಕವಿತೆಗೆ ನಿಸರ್ಗ ಚಿತ್ರಗಳನ್ನು ಮೂಡಿಸುವ ಹವ್ಯಾಸವೇ ಇಲ್ಲ. ‘ಶ್ರಾವಣ’ ಈ ಕವಿತೆಯ ನಾಯಕ. ಅವನು ‘ಬಂದಿಕಾರಾ ಶ್ರಾವಣ’ ಬಂದಿಕಾರಾ ಎಂಬ ಶಬ್ದ ಸೃಷ್ಟಿಸುವ ಅರ್ಥ ಪ್ರಪಂಚ ವಿಪುಲವಾಗಿದೆ. ಪ್ರತಿಯೊಬ್ಬ ನಾಯಕ ಅನುಯಾಯಿಗಳನ್ನು ತನ್ನ ಕೈಯಲ್ಲಿಟ್ಟುಕೊಂಡಿರುತ್ತಾನೆ. ಅವನು ಬಂದಿಕಾರನಾಗುತ್ತಾನೆ. ಅನುಯಾಯಿಗಳ ಗುಂಪು ಸ್ವೇಚ್ಛೆಯಿಂದ ಅವನ ಬಂಧನಕ್ಕೆ ಒಳಗಾಗುತ್ತದೆ. ಆದರೂ ನಿಜವಾದ ನಾಯಕ ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದಿಲ್ಲ. ‘ಬಂದಿಕಾರಾ’ ಶಬ್ದದಲ್ಲಿಯ ಅರ್ಥ ವಿರೋಧ ಈ ಬಗೆಯದು.

ಬಂದಿಯೊಳಗಿದ್ದವರ ಬಂಧವನ ಬಿಡಿಸುವಾ
ಬಂದಿಕಾರಾ ಶ್ರಾವಣಾ!
ಬಂಧನದೊಳಿಹರೊ ಜಗವಂದಿತರನಿಂದಿತರು
ಬಂದೆ ಬಿಡಿಸೈ ಶ್ರಾವಣಾ
ಅಂಧಕಾರವಿದಲ್ಲ ಮಂದೇಹ ಸಂಘವಿದೆ
ಸಂದೇಹವೇ ಶ್ರಾವಣಾ?
ಅಂದು ಗಾಯತ್ರಿ ಮನದಂದು ಕಿವಿದುಂಬಿಸಿದೆ
ಇಂದಾವುದೋ ಶ್ರಾವಣಾ?

ಬಂಧನದಲ್ಲಿದ್ದವರ ಬಂಧನವನ್ನು ಬಿಡಿಸುವ ಕೆಲಸ ಶ್ರಾವಣಕ್ಕೆ ಸಹಜವಾಗಿದೆ ಎಂಬ ಧ್ವನಿ ಇಲ್ಲಿದೆ. ಕಾರಣ ಶ್ರೀಕೃಷ್ಣನ ಸ್ಮೃತಿ. ಈ ಕವಿತೆಯ ತುಂಬ ತುಂಬಿಕೊಂಡದ್ದಾಗಿದೆ.

ಶ್ರೀಕೃಷ್ಣನ ಹುಟ್ಟು ಶ್ರಾವಣದಲ್ಲಿ.

. ಬಂದು ಗೀತೆಯ ಹಾಡಿನೊಂದು ಯೋಗವ ಹೇಳಿ
ಒಂದು ಗೂಡೋ ಶ್ರಾವಣಾ.
ಒಂದು ಶ್ರುತಿಯವ ನೀನಮಂದ ನಂದನವಾಸಿ
ಮಂದಹಾಸಾ ಶ್ರಾವಣಾ.
ನಂದಗೋಹನ ಕಾಂತೆಗಂದೊಪ್ಪಿಸಿದೆ ತಾನೆ
ಬಂಧ ಮುಕ್ತನ ಶ್ರಾವಣ.
ಇಂದು ಬಂದಿಹುದು ಮತ್ತೊಂದು ಸಮಯವು ಅಂತೆ
ತಂದೆ ಬಿಡಿಸೈ ಶ್ರಾವಣ.

ಕೃಷ್ಣನನ್ನು ಕುರಿತು ಸಾಲುಗಳು ಹೇಳುತ್ತವೆ. ಅಂದು ಬಂಧನವನ್ನು ಬಿಡಿಸಿ ನಂದ ಗೋಪನ ಕಾಂತೆಗೆ ಕಂದನನ್ನು ಒಪ್ಪಿಸಿದಂತೆ ಇಂದು ಮತ್ತೊಂದು ಅಂತಹದೆ ಸಮಯ ಬಂದಿದೆ. ನಾವೆಲ್ಲರು ನಿನಗೆ ಶರಣು ಬಂದಿದ್ದೇವೆ. ತಂದೆ ನಮ್ಮನ್ನು ಬಿಡಿಸು. ಕವಿ ಇಲ್ಲಿ ಮತ್ತೊಂದು ಸಮಯವನ್ನು ಪ್ರಸ್ತಾಪಿಸಿದ್ದು ಅದೆಂದರೆ ಸ್ವಾತಂತ್ರ ಹೋರಾಟ ಕಾಲ. ಸ್ವತಂತ್ರ ಹೋರಾಟಗಾರರೆಲ್ಲ ಬಂಧನದಲ್ಲಿದ್ದರು. ಆ ಬಂಧನದ ಬಿಡುಗಡೆ ಕೂಡ ಬೇಕಾಗಿತ್ತು.

. ಮುಂದಿರುವ ಹೊಲಗಳಲಿ ಇಂದಿರೆಯ ನಲಿವಂತೆ
ಚೆಂದವೇನೋ ಶ್ರಾವಣಾ
ಬಂಧು ನೀ ಬೆಳಗೆ ಉಕ್ಕಂದ ನೀ ಹೊಳೆಗೆ
ನಂದ ಸಿಂಧೋ ಶ್ರಾವಣಾ.

ಶ್ರಾವಣದ ತೊಯ್ದಾಟದಿಂದ ರೈತರ ಮನಗಳಲ್ಲಿ ಆಗುವ ಸೂಕ್ಷ್ಮತೆಯನ್ನು ಹೇಳುತ್ತಾ ಬೆಳೆಗೆ ಮತ್ತು ಹೊಳಗೆ ಇರುವ ಅವಿನಾಭಾವ ಸಂಬಂಧವನ್ನು ಕವಿ ಹೇಳುತ್ತಾನೆ.

. ಚಂಡರಾಹು ಗ್ರಾಸದಿಂದ ಬಿಡಿಸೈ ಜಗದ
ಚಂದಿರನನೇ ಶ್ರಾವಣಾ
ನಿಂದಿಸುತ ಬಾಯ್ಮುಚ್ಚಿ ಸ್ಪಂದಿಸುತ ಬಡವರಾ
ಕ್ರಂದಿಸುವರೋ ಶ್ರಾವಣಾ.

ಚಂದಿರನನ್ನು ಚಂಡನಾದ ರಾಹುವಿನ ಕೈಯಿಂದ ಬಿಡಿಸು, ಚಂದ್ರನನ್ನು ರಾಹು ಹಿಡಿದಿಟ್ಟರೆ ಅದು ಪ್ರಕೃತಿಗೆ ಶೋಭೆಯಲ್ಲ. ರಾಹು ಎಂಬುದು ದುಷ್ಟನ ಕಪಿಮುಷ್ಟಿಯಲ್ಲಿ ಸಿಕ್ಕವರನ್ನು ಬಿಡಿಸುವವನು, ಶ್ರಾವಣ ಎಂಬ ಶಿರೋನಾಮೆಯಿಂದ ಕರೆಸಿಕೊಳ್ಳುವ ಕೃಷ್ಣ.

. ಬಂಧ ಮುಕ್ತಿಯ ದಿನವೆ ಬಂದೆಯಾ ಬಾ ಬಳಿಗೆ
ಎಂದು ಕರೆಯೋ ಶ್ರಾವಣಾ
ದುಂದುಕಂಸನ ಕೊಂದು ತಂದೆತಾಯ್ ಹೊರ ತಂದ
ಕಂದನ್ನ ಕರೆ ಶ್ರಾವಣಾ
ಕೇದಗೆಯ ಹೊಡೆತೂರಿ ಊದು ನಿನ್ನ ತುತ್ತೂರಿ
ಮೋದ ಬೀರೋ ಶ್ರಾವಣ
ನಾದವಿದು ಯಾವುದೊ ಅಗಾಧ ತಳದಿಂ ಬಂತು
ಊದೋದಿದೋ ಶ್ರಾವಣಾ

ಈ ಸಾಲುಗಳು ಆಗಿನ ಕಾಲದ ರಾಜಕೀಯ ಚಿತ್ರಣೌನ್ನು ನೀಡುತ್ತವೆ.

. ಅಷ್ಟಮಿಯ ದಿನ ಮಧ್ಯರಾತ್ರಿ ಜನರಿಗೆ ಜಾತ್ರಿ
ಇಷ್ಟದವನಿಷ್ಟರಲ್ಲಿ
ಹುಟ್ಟಿ ಬರುವನೊ ಚಂದ್ರ ಕುಟ್ಟಿ ಬಂದಂತೆ ತಮ
ದಿಟ್ಟಿ ದಿಟವಾಗುವಲ್ಲಿ
ಕತ್ತಲೆಯ ತುಟ್ಟತುದಿ ಹತ್ತಿರವೆ ಬೆಳಕು ಬದಿ
ಎಂದು ಸಾರೋ ಶ್ರಾವಣಾ
ಮುಂದೆ ಬರುವ ಸ್ವತಂತ್ರ ವಂದಿಮಾಗಧ
ನೀನು ಬಂಧುರಾಂಗ ಶ್ರಾವಣಾ.

ಅಷ್ಟಮಿಯ ದಿನ ಮಧ್ಯರಾತ್ರಿ ಜನರಿಗೆ ಜಾತ್ರಿ
ಇಷ್ಟದವನಿಷ್ಟರಲ್ಲಿ, ಹುಟ್ಟಿ ಬರುವನೊ |
ನಂಧಗೋಪನ ಕಾಂತೆಗಂದೊಪ್ಪಿಸಿದೆ ತಾನೆ
ಬಂಧ ಮುಕ್ತನ ಶ್ರಾವಣಾ

ಈ ಸಾಲುಗಳಲ್ಲಿ ಕೃಷ್ಣನ ಹುಟ್ಟು ಮತ್ತು ಅವನು ನೆರವೇರಿಸಿದ ಮಹತ್‌ ಕಾರ್ಯ ಉಕ್ತವಾಗಿದೆ. ಇದೇ ತರ್ಕದಿಂದ ಶ್ರಾವಣವೆಂದರೆ ಬಿಡುಗಡೆಯ ಕಾಲ ಎಂಬ ಧ್ವನಿಯು ಹುಟ್ಟುತ್ತದೆ.

ಇಂದು ಬಂದಿಹುದು ಮತ್ತೊಂದು ಸಮಯವು ಅಂಥೆ
ತಂದೆ ಬಿಡಿಸೈ ಶ್ರಾವಣಾ

ಕವಿತೆಗೆ ಬರೆದ ಭಾವಸಂದರ್ಭದಲ್ಲಿ ಇದನ್ನು ಬರೆದದ್ದು ೧೯೪೨ರಲ್ಲಿ ಎಂದು ಹೇಳಿದೆ. ನಮ್ಮ ನಾಡಿಗೆ ಸ್ವಾತಂತ್ರ್ಯ ಬರುವುದಕ್ಕಿಂತ ಐದು ವರ್ಷ ಮೊದಲು ಬರೆದದ್ದು. ಈ ಕವಿತೆಯಲ್ಲಿ ಆ ಸ್ವಾತಂತ್ರ್ಯದ ಭವಿಷ್ಯ ಕಥನವಿದೆ.

‘ಮುಂದೆ ಬರುವ ಸ್ವತಂತ್ರ ವಂದಿಮಾಗಧ ನೀನು ಬಂಧುರಾಂಗ ಶ್ರಾವಣಾ’ ಎಂದು ಶ್ರಾವಣವನ್ನು ಕರೆದಿದ್ದಾರೆ.

ಬಂಧ ಮುತಿಯ ದಿನವೆ ಬಂದೆಯ ಬಾ ಬಳಿಗೆ
ಎಂದು ಕರೆಯೋ ಶ್ರಾವಣಾ ||

ಈ ಮಾತುಗಳಲ್ಲಿ ಆಗಿನ ಕಾಲದ ರಾಜಕೀಯ ಪರಿಸ್ಥಿತಿ ಸ್ವಾತಂತ್ರ್ಯಕ್ಕೆ ಹಣ್ಣಾಗಿದ್ದದ್ದನ್ನು ಸೂಚಿಸುತ್ತದೆ. ಶ್ರೀ ಕೃಷ್ಣ ಹುಟ್ಟಿದ್ದು ಶ್ರಾವಣಧಲ್ಲಿ, ಅರವಿಂದರ ಜನ್ಮ ಶ್ರಾವಣದಲ್ಲಿಯೇ ಈ ಐತಿಹಾಸಿಕ ಸ್ಮೃತಿಗಳು ಹುಟ್ಟಿಸುವ ತರ್ಕ ಮುಂದೆ ಬರುವ ಸ್ವಾತಂತ್ರ್ಯವನ್ನು ಈಗಲೇ ಧ್ವನಿಸುತ್ತವೆ.

ಬಂಧನ ಮತ್ತು ಬಿಡುಗಡೆ ಇವೆರಡು ಸಾಪೇಕ್ಷ ಸ್ಥಿತಿಗಳು. ಸ್ವೇಚ್ಛೆಯಿಂದ ಪ್ರೀತಿಯಿಂದ ಒಪ್ಪಿಕೊಂಡರೆ ಬಂಧನಕ್ಕೂ ಬಿಡುಗಡೆಯಾಗಬಲ್ಲದು. ಆದರೆ ಮನುಷ್ಯನ ಮನಸ್ಸು ಬಂಧನದ ಬಲಾತ್ಕಾರಕ್ಕೆ ಒಳಗಾದಾಗ ಹುಟ್ಟುವ ಪರಿಸ್ಥಿತಿ ದಾರುಣವಾಗುತ್ತದೆ. ಈ ಕವಿತೆಯಲ್ಲಿ ಸ್ವಾತಂತ್ರ್ಯವನ್ನು ಒಂದು ಪಾರಮಾರ್ಥಿಕ ಅರ್ಥದಲ್ಲಿ ಪ್ರಯೋಗಿಸಲಾಗಿದೆ. ಸ್ವಾತಂತ್ರ್ಯವೆನ್ನುವುದು ಅನಾಯಕ ಸ್ಥಿತಿಯಲ್ಲ. ತನ್ನ ತಂತ್ರವನ್ನು ತಾನೇ ರೂಪಿಸಿಕೊಳ್ಳುವ ಎಂಬ ಅರ್ಥ ಇದಕ್ಕಿದೆ.

ಅಂಥ ಸ್ವಾತಂತ್ರ್ಯಕ್ಕಾಗಿ ದುಡಿಯುವ ನಾಯಕರನ್ನು ಬಂಧನದೊಳಗಿಟ್ಟರೆ ಪರಿಸ್ಥೀತಿ ಹದಗೆಡುತ್ತದೆ. ‘ಬಂಧನದೊಳಿಹರೊ ಜಗವಂದಿತರ ನಿಂದಿತರು’ ಈ ಮಾತುಗಳಲ್ಲಿ ಆಗಿನ ಕಾಲದ ರಾಜಕೀಯ ಜೀವನ ಚಿತ್ರವಿದೆ. ಗಾಂಧಿ, ನೆಹರು ಇಂಥ ನಾಯಕರಿಗೆ ವೈಯಕ್ತಿಕ ಸ್ವಾತಂತ್ರ್ಯ ಸಮಸ್ಯೆಯಾಗಿರಲಿಲ್ಲ. ಅವರು ಬಂಧನದಲ್ಲಿದ್ದು ಸ್ವತಂತ್ರವಾಗಿ ಇರಬಲ್ಲ ಮನಸ್ಸನ್ನು ಬೆಳೆಸಿಕೊಂಡಿದ್ದರು. ಆದರೆ ಅಂಥವರ ಬಂಧನ ನಾಡಿನ ಬಂಧನದ ಸಂಕೇತವಾಗಿತ್ತು.

ಅಂಧಕಾರವಿದಲ್ಲ ಮಂದೇಹ ಸಂಘವಿದೆ
ಸಂದೇಹವೇ ಶ್ರಾವಣಾ?

ಈ ಮಾತುಗಳಲ್ಲಿ ಬಂಧ ಮೋಕ್ಷದ ರಹಸ್ಯ ಸಂಬಂಧ ಪೌರಾಣಿಕ ಪ್ರತಿಮೆಗಳಲ್ಲಿ ವ್ಯಕ್ತವಾಗುತ್ತದೆ. ಸೂರ್ಯನಿಗೆ ಕತ್ತಲೆಯ ಹೆದರಿಕೆ ಇಲ್ಲ. ಆದರೆ ಮಂದೇಹ ರಾಕ್ಷಸರು ಕತ್ತಲೆಯ ರೂಪದಲ್ಲಿ ಬಂದು ಹಿಡಿದುಕೊಂಡರೆ ಗಾಯತ್ರಿ ಮಂತ್ರದಿಂದ ಅವನನ್ನು ಬಿಡಿಸಬೇಕಾಗುತ್ತದೆ.

ಅಂದು ಗಾಯತ್ರಿ ಮನದಂದು ಕಿವಿದುಂಬಿಸಿದೆ
ಇಂದಾವದೋ ಶ್ರಾವಣಾ?

ಗಾಯತ್ರಿಯ ಮಂತ್ರ ವಿಶ್ವಾಮಿತ್ರನ ಮನಸ್ಸಿಗೆ ಗೋಚರವಾದದ್ದು ಶ್ರಾವಣದಲ್ಲಿ ಆರ್ದ್ರಾ, ಶ್ರವಣಾ ನಕ್ಷತ್ರಗಳು ಒಂದೇ ರೇಖೆಯಲ್ಲಿದ್ದಾಗ. ಈ ಕವಿತೆಯಲ್ಲಿ ಒಂದೆರಡು ನಿಸರ್ಗ ಚಿತ್ರಗಳು ಸಾಂಕೇತಿಕವಾಗಿ ವಸ್ತುವನ್ನೇ ಪ್ರತಿಪಾದಿಸುತ್ತವೆ.

ಮುಂದಿರುವ ಹೊಲಗಳು ಇಂದಿರೆಯೆ ನಲಿವಂತೆ
ಚೆಂದವೇನೋ ಶ್ರಾವಣಾ
ಕೇದಗಿಯ ಹೊಡೆ ತೂರಿ ಊದು ನಿನ್ನ ತುತ್ತೂರಿ
ಮೋದ ಬೀರೋ ಶ್ರಾವಣಾ
ಚಿತ್ರಗಳಲ್ಲಿ ಮತ್ತೆ ಬಂದ ಮೋಕ್ಷಗಳ ಪ್ರಸ್ತಾಪವಿದೆ..
ಕತ್ತಲೆಯ ತುಟ್ಟ ತುದಿ ಹತ್ತಿರವೆ ಬೆಳಕು ಬದಿ
ಎಂದು ಸಾರುವ ಶ್ರಾವಣಾ

ಈ ಸಾಲು ಪೌರಾಣಿಕ, ಪಾರಮಾರ್ಥಿಕ ಮತ್ತು ಅನುಭವ ಸಿದ್ಧವಾದ ಅರ್ಥಗಳನ್ನು ಒಮ್ಮೆಲೆ ಬೀರುತ್ತದೆ.

‘ಅರಳು ಮರಳು’ ಕವನ ಸಂಗ್ರಹದಲ್ಲಿ ‘ಪ್ರತಿವರ್ಷದಂತೆ ಬಂತುs ಶ್ರಾವಣಾ’ ಎಂಬ ಕವಿತೆ ಇದೆ. ಈ ಕವಿತೆಯ ತಲೆಬರಹ ಶ್ರಾವಣದ ಬಗ್ಗೆ ಇನ್ನೊಂದು ಮಹತ್ವದ ಸತ್ಯವನ್ನು ಸೂಚಿಸುತ್ತದೆ. ಇದಕ್ಕಿಂತ ಮೊದಲಿನ ಶ್ರಾವಣ ಗೀತಗಳಲ್ಲಿ ಶ್ರಾವಣದ ಪುನರಾವರ್ತನೆಯ ಮಾತಿಲ್ಲ. ಈ ಕವಿತೆಯಲ್ಲಿ ಮಾತ್ರ ಪುನರಾವರ್ತನೆ ಮುಖ್ಯ ವಸ್ತುವಾಗಿದೆ. ಮುಂದಿನ ಅವರ ಶ್ರಾವಣ ಗೀತಗಳಲ್ಲಿ ಈ ಮಾತು ಮತ್ತೆ ಕೇಳಿ ಬರುತ್ತದೆ.

ನಮ್ಮಲ್ಲಿ ಕಾಲ ಸರಳರೇಖೆಯಂತೆ ಸಾಗುವುದಿಲ್ಲ. ಅದಕ್ಕಿರುವುದು ಒಂದು ವೃತ್ತದ ಕಥೆ. ಕಾಲದ ಚಕ್ರನೇಮಿ ಕ್ರಮವನ್ನು ನಮ್ಮ ಸಂಸ್ಕೃತ ಕವಿಗಳು ಮತ್ತೆ ಮತ್ತೆ ಬಣ್ಣಿಸಿದ್ದಾರೆ. ‘ಚಕ್ರಾರ ಪಂಕ್ತಿರಿವಗಚ್ಛತಿ ಭಾಗ್ಯಪಂಕ್ತಿ’ ಈ ಮಾತು ಭಾಸನ ‘ಸ್ವಪ್ನ ವಾಸವದತ್ತ’ ನಾಟಕದಲ್ಲಿದೆ. ಬೇಂದ್ರೆಯವರಿಗೂ ಕಾಲದ ವೃತ್ತ ಗತಿಯಲ್ಲಿ ನಂಬಿಕೆಯಿದೆ. ಕಾಲದ ಚಕ್ರದ ಗತಿಯನ್ನು ಪ್ರತಿ ವರ್ಷ ಬರುವ ಶ್ರಾವಣ ಮೂರ್ತವಾಗಿ ಪ್ರತಿನಿಧಿಸುತ್ತದೆ.

ಜೀವಲಹರಿ’ ಸಂಕಲನದ ಕೊನೆಯ ಪದ್ಯ ‘ಮಳೆಗಾಲ’ ಇದಕ್ಕೆ ಬರೆದ ಭಾವ ಸಂದರ್ಭ ಈ ರೀತಿ ಇದೆ. ‘ವರ್ಷ ವರ್ಷಕ್ಕೂ ಹೊಸತನ ತರುವುದು ವರ್ಷಕಾಲ. ಕೆಲವರು ತಮ್ಮ ವಸಂತ ಇಳಿಸುತ್ತಾರೆ. ಕೆಲವರು ಚಳಿಗಾಲದ ಲೆಕ್ಕವನ್ನು ಇಡುತ್ತಾರೆ. ಬೇಂದ್ರೆಯವರಿಗೆ ಶ್ರಾವಣ ಹೊಸತನವನ್ನು ತರುತ್ತದೆ.’

ಅಹಹಹಾ ಬಂತು ಶ್ರಾವಣಾ
ಜಗದ ಜೀವನಾ | ಕರುಳ ಹೂವಣಾ |
ಹೊರಳಿ ಬಂತು | ಹಸಿರಾಗಿ ಪಸರಿಸಿಂತು |
ಇದು ವಿಶ್ವ ಜೀವದಾಕರ್ಷ
ಹೊಮ್ಮಿತೋ ಹರ್ಷ | ಏನು ಪ್ರತಿ ವರ್ಷ
ದಂತೆ ಬಂತು | ಮೈದಾಳಿದಂತೆ ಕಂತು

ಈ ಕವಿತೆಯಲ್ಲಿ ಶ್ರಾವಣ ‘ಜಗದ ಜೀವನ’. ‘ಏನು ಪ್ರತಿವರ್ಷದಂತೆ ಬಂತು ಮೈದಾಳಿದಂತೆ ಕಂತು’ ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಲಾಗಿದೆ. ಶ್ರಾವಣವು ಪ್ರತಿವರ್ಷ ಮಾಡುವ ಪವಾಡವನ್ನು ಈ ಕವಿತೆ ಸಾಕ್ಷಿಯಾಗಿ ನೋಡುತ್ತದೆ.

ಮೋಡದೊಡ್ಡಿನ ಮ್ಯಾಲಾ
ಮಂಜಿನ ಖ್ಯಾಲಾ | ಹೊಚಿ ಕೊಂಡ ಶಾಲಾ |
ಗಿರಿಯಜಾಲಾ | ನಿಂತs ಮಳಿಯ ಮ್ಯಾಳಾ ||
ಇದು ನೆಲದಗರ್ಭದಾ ಹೊನ್ನು
ನೀಲಿ ನೀರನ್ನು | ಕುಡಿದು ಹಸಿರನ್ನು ಉಗುಳಿತಿಂತು
ಜಗ ನೋಡತs ನಿಂತು

ನೆಲದ ಗರ್ಭದಲ್ಲಿರುವ ಹೊನ್ನು ನೀಲಿ ನೀರನ್ನು ಕುಡಿದು ಹಸಿರನ್ನು ಉಗುಳುವ ಈ ಪವಾಡ ನಿಜವಾಗಿಯೂ ಆಶ್ಚರ್ಯಜನಕವಾಗಿದೆ. ಆದರೆ ಈ ಪವಾಡದಲ್ಲಿ ಜೀವನದ ಮೂಲತಂತ್ರ ಬೇಂದ್ರೆಯವರ ಕಣ್ಣಿಗೆ ಕಂಡಿದೆ.

ಇದು ಎಂಥ ಹಸುರಿನ ಕಂಪ
ತಿಳಿಯತದ ತಂಪ | ಮೂರ್ತ ಜಗಜಂಪ | ತುರ್ತು ಬಂದು
ಮನಪೂರ್ತವಾಗಿ ಸಂದು |
ಬೆಳಗೆಲ್ಲಾ ಹಸುರೆ ಕಾರಣ
ಹೃದಯದಕಣಾ | ಆಗತಾವ ಹೆಣಾ | ಹಸಿರು ನಂದಿ
ಹಸಿ ಬೀರಿ ಬಿಸಯ ಹೊಂದಿ

ಹಸಿರು ಜೀವನದ ಬೆಳವಣಿಗೆಯ ಸಂಕೇತವಾಗಿ ಕಾಣುತ್ತದೆ. ಹಸಿರು ನಂದಿದರೆ ಹೃದಯದ ಕಲಣ ಸತ್ತು ಹೋಗುತ್ತವೆ. ಭೂಮಿಯ ಉಸಿರು ಅಂದರೆ ಈ ಹಸಿರು.

ಆಹಾ ಭೂಮಿತಾಯಿಯ ಉಸಿರು
ಅವಳ ಬಸಿರು | ಪಚ್ಚೆಯಾ ಹಸಿರು | ಬಂತು ಅರತು
ಬುದ್ಧಿಗೆ ಭಕ್ತಿ ಬೆರತು
ಭಲ ಏನು ಬನದ ಕಾವಣಾ
ಸುಳಿವಭಾವನಾ | ಹೊಳೆವ ಹಾವಣಾ | ಶ್ರಾವಣಾ ಹೌದೋ ?
ಇದು ಹೌದು ಶ್ರಾವಣಾ ಹೌದು

ಮುಂದಿನ ಪದ್ಯಗಳಲ್ಲಿ ವೇಗವಾಗಿ ಬೀಸುವ ಶ್ರಾವಣದ ಗಾಳಿಯ ವರ್ಣನೆ ಇದೆ.

ಬೀಸ್ತs ಶ್ರಾವಣದ ಗಾಳಿ
ಹಿಡಿದ ಹೆಗ್ಗಾಳಿ | ಹೊರಟs ದಾಳಿ | ಶಿವನ ಗಣಕ
ಹುಟ್ಯs ಜೀವ ಹೆಣಕ
ಮದಗುಣಿಕಿ ಊದಿ ತುತ್ತೂರಿ
ಹೇಳತs ಗರಿ | ಹಾಡು ಇದು ಭಾರಿ | ಆತುಜನಕ
ಮೆಚ್ಚಾತು ಶಿವನ ಮನಕ
ಶ್ರಾವಣಕ ತಪ್ಪಿತ ಗ್ಯಾನಾ
ಎಲ್ಲಿದೋ ಧ್ಯಾನಾ | ಹುಚ್ಚ ಆಗ್ಯಾನ | ಮದೋನ್ಮತ್ತಾ |
ಅಂಬಿಕಾತನಯದತ್ತಾ

ಈ ಗಾಳಿ ಕಹಳೆಯನ್ನು ಊದುತ್ತ ಶಿವನ ಗಣದ ಮೇಲೆ ದಾಳಿ ಮಾಡಲು ಹೊರಟಂತೆ ಕಾಣುತ್ತದೆ. ಗಾಳಿಯ ಮಾಟಗಾರಿಕೆ ಹಸಿರಿನ ಪವಾಡಕ್ಕಿಂತ ಕಡಿಮೆ ಏನೂ ಇಲ್ಲ. ಗಾಳಿ ಬೀಸಿದರೆ ಹೆಣಕ್ಕೆ ಜೀವ ಹುಟ್ಟುತ್ತದೆ. ಮದುಗುಣಿಕೆಯ ಹೂವಿನ ತುತ್ತೂರಿ ಗಾಳಿಯ ಕಹಳೆಯಂತೆ ಇದೇ ಸತ್ಯವನ್ನು ಸಾರುತ್ತದೆ.

ಬೇಂದ್ರೆಯವರ ಮೊದಲಿನ ಶ್ರಾವಣ ಕವಿತೆಗಳಲ್ಲಿ ಪ್ರತಿಭೆಯ ಮತ್ತು ಕಲ್ಪನಾ ಶಕ್ತಿಯ ಅತಿಶಯ ವೈಭವ ಕಾಣುತ್ತಿದೆ. ನಂತರದ ಕವಿತೆಗಳಲ್ಲಿ ಸಂಯಮ ಅಭಿವ್ಯಕ್ತಿ ಮುಖ್ಯವಾಗುತ್ತದೆ. ಶ್ರಾವಣದ ಪುನರಾವರ್ತನದಲ್ಲಿ ಜನನ-ಮರಣಗಳ ಚಕ್ರ ನೇಮಿಕ್ರಮ ಮತ್ತು ಅವುಗಳ ನಡುವಿನ ಜೀವನ ಕಾಣುತ್ತದೆ. ಈ ಕವಿತೆಯಲ್ಲಿ ಶ್ರಾವಣದ ಹಸಿರು ಮತ್ತು ಗಾಳಿ ಮೃತ್ಯವಿಗೆ ಆಹ್ವಾನ ನೀಡುತ್ತದೆ ಮತ್ತು ಹೆಣಕ್ಕೆ ಜೀವವನ್ನು ಹುಟ್ಟಿಸುತ್ತದೆ. ಹೊಸತನವನ್ನು ನೀಡುವ ಶಕ್ತಿ ಶ್ರಾವಣಕ್ಕಿದೆ.

‘ನಾಕುತಂತಿ’ ಕವನ ಸಂಕಲನದಲ್ಲಿ ಶ್ರಾವಣ ಕುರಿತು ಎರಡು ಕವಿತೆಗಳಿವೆ. ‘ಮತ್ತ ಶ್ರಾವಣಾ’, ಮತ್ತು ‘ಮತ್ತೆ ಶ್ರಾವಣಾ ಬಂದಾ’ ‘ಮತ್ತ ಶ್ರಾವಣಾ’ ಎಂಬ ಶಿರೋನಾಮೆ ಅರ್ಥಗೌರವದಿಂದ ಕೂಡಿದೆ. ವರ್ಷಗಳು ಉರುಳಿದಂತೆ ಶ್ರಾವಣ ಮತ್ತೆ ಮತ್ತೆ ಬರಬೇಕಾದ ತಿಂಗಳು. ಮತ್ತೆ ಮತ್ತೆ ಅದೇ ಶ್ರಾವಣ ಬಂದರೂ ಶ್ರಾವಣದ ಅರ್ಥ ಹೊಸದಾಗುತ್ತದೆ. ಉನ್ಮತ್ತನಾದ ಶ್ರಾವಣ ಎನ್ನುವುದು ಇನ್ನೊಂದು ಅರ್ಥವಾಗಿದೆ. ಧಾರವಾಡದ ಪರಿಸರದಲ್ಲಿಯ ಶ್ರಾವಣಕ್ಕೆ ಉನ್ಮತ್ತತೆ ಸಹಜವಾಗಿದೆ. ಮತ್ತ ಶ್ರಾವಣಾ ಎಂಬ ಕವಿತೆಯಲ್ಲಿ ನಿಸರ್ಗ ಸೌಂದರ್ಯದ ಪ್ರತಿಮೆಗಳು ಇಲ್ಲವೆನ್ನಬಹುದು. ಇಲ್ಲಿ ಶ್ರಾವಣ ದೇವಲೋಕದ ಹರಿಕಾರ. ಅವನು ತಂದ ಸಂದೇಶವನ್ನು ಕೇಳುವುದು ಕವಿಯ ಕೆಲಸ.

ಶ್ರಾವsಣಾ | ಶ್ರಾವಣಾ |
ಮೈದಂಡಿಗಿ ಮಾಡೀ | ಹಾಡಿದೀ ಕವನಾ |
ಕೈಲಾಸದ ಬುಡಕs ಸಿಕ್ಕವನಾ | ಹತ್ತು ತಲೆಯವನಾ
ಬಿಡಿಸೋ | ಹಿಡಿಸೋ | ಆತ್ಮಾರಾಮನ ಭವನಾ | ಶಿವನಾ
ಹರಹರಿ ಒಂದಾದವನಾ | ದವನಾ | ನೀಡಿದೆ | ಅಡಿಗಿ
ಚೈತ್ರದವನಾ | ಬೇರೆಲ್ಲೀ ಹವನಾ | ಪಂಪೀಯವನಾ
ಕೊಂಪೀಯವನನ್ನ ಬ್ಯಾಡಾ | ತುಂಗೀಗೆ | ಭದ್ರೀಗೆ |
ಸರಿಸರ ಗೂಡಿಸಿ | ಹಾಡೋ ಕವನಾ | ಹಾಡಿದವನಾ

ಕವಿ ಎಷ್ಟು ತನ್ಮಯನಾಗಿ ಕೇಳುತ್ತಿದ್ದಾನೆಂದರೆ, ತನ್ನ ಮೈಯನ್ನು ದಂಡಿಗೆ ಮಾಡಿ ತನ್ಮಯನಾಗಿ ಹಾಡುತ್ತಿದ್ದಾನೆ. ಕೈಲಾಸದ ಬುಡಕೆ ಸಿಕ್ಕವನು ಹತ್ತು ತಲೆಗಳ ರಾವಣ. ಕೈಲಾಸ ಪರ್ವತವನ್ನು ಎತ್ತಿದ ರಾವಣ ಅದರ ಬುಡಕ್ಕೆ ಸಿಗುವುದು ಸ್ವಾಭಾವಿಕವಾಗಿದೆ. ರಾವಣ ಅಹಂಕಾರದ ಪ್ರತೀಕ. ಅಹಂಕಾರ ಬುದ್ಧಿಯನ್ನು ಬಿಡಿಸಿ ಆತ್ಮಾರಾಮನ ಪಾದಕ್ಕೆ ಒಪ್ಪಿಸಬೇಕು. ಶಿವ ಅಂದರೆ ‘ಹರ-ಹರಿ ಒಂದಾದವನಾ’ ಹರ-ಹರಿ. ಇವರತ ಬೆಲೆ ಸಂಖ್ಯೆಯಲ್ಲಿ ಕೂಢ ಒಂದು. ಹರ-೮೨, ಹರಿ-೮೨, ಹರಿ-ಹರ ಉಪಾಸನೆ ಇಲ್ಲಿ ಮುಖ್ಯವಾದದ್ದು. ‘ದವನಾ ನೀಡಿದೆ. ಅಡಿಗಿ! ಚೈತ್ರದವನಾ’, -ದವನಾ’ ಚೈತ್ರಮಾಸದಲ್ಲಿ ಸಿಗುವ ಪರಿಮಳ ಸಸ್ಯ ಚೈತ್ರಮಾಸದಲ್ಲಿ ಹುಟ್ಟಿದವನು ರಾಮ. ರಾಮಾನಾಮ ಶಿವನಗಂಟಲ;ಲ್ಲಿಯ ವಿಷದ ಬೇಗೆಯನ್ನು ತಣಿಸಿತೆಂದು ಪ್ರತೀತಿ. ಹರ-ಹರಿ ಒಂದಾದ ದೇವತೆಯ ಅಡಿಗೆ ಚೈತ್ರದವನನ್ನು ನೀಡುವುದು ಹೀಗೇ ತರ್ಕಬದ್ಧ. ದವನ ಬೆಳೆಯುವುದು ಹಂಪಿಯ ಪರಿಸರದಲ್ಲಿ. ‘ತೇರೆಳೆದು ದವನ ಮಾರಿ ಹೋಯಿತು’ ಎನ್ನುವುದು ಈ ಪರಿಸರದಲ್ಲಿ ಹುಟ್ಟಿದ ಗಾದೆಯ ಮಾತು. ಹಂಪೆಯ ಅಧಿದೇವತೆ ವಿರೂಪಾಕ್ಷ. ಹರ-ಹರಿ ಒಂದಾದ ದೇವತೆ. ಅದನ್ನು ಹಳೆಯ ಮಾತೆಂದು ತಿರಸ್ಕರಿಸದೆ, ತುಂಗಭದ್ರೆಯ ಕಲರವಕ್ಕೆ ಸ್ವರಕೂಡಿಸಿ ಕವನ ಹಾಡಬೇಕು.

ಹರಹರ ಶ್ರಾವಣಕ ಬಂದೀs ಶ್ರುತಿ ತಂದಿss
ಹರಿಹರಿ ಶ್ರಾವಣಕ ಬಂದಿs | ಕೃತಿ ತಂದಿss
ನೀವು ತಂದಿತಾಯಿ ನಮಗs
ಸ್ಕಂದನ ಶಾಖೇ ನಮಗ | ನಾರದನ ಶಿಖೆ ನಮಗs
ಉದ್ದನಾಮಾ | ಮತ್ತs ಅಡ್ಡs ನಾಮಾ
ಯಾವಿವನs ಕಾಮಾಬಂದಾ | ಶಿವಶಕ್ತೀ ನಡುವs
ಅಡುವs ಇಡರವನs
ವಸುದೇವs ದೇವಕಿ ಗರ್ಭಾ | ತುಂಬಿದ ತುಂಬಿ
ಸೆರೆ ಬಿಡಿಸಿ ಬಂದಿ | ವಿಶ್ವದ ತಂದಿ
ಸುರಅಸುರರ ಕಸರs ಕಳೆದೊ
ಮೈ ತಳೆದು ಬಾರಯ್ಯಾ
ಶ್ರಾವsಣಾ, ಶ್ರವಣಕೆ ಭವಣೀಯೆ ಬೇಕೇ?
ಭ್ರಮರಾ | ಭ್ರಮರಾಂಬಾ | ನಮ್ಮ ನಿಮ್ಮಾ ತವರಾ
ಗೊತ್ತಿಲ್ಲೇನೋ ಜವರಾ

ಈ ಭಾಗದಲ್ಲಿ ಹರ-ಹರಿ ಈ ವಸ್ತುವನ್ನು ಮತ್ತೆ ಎತ್ತಿಕೊಳ್ಳಲಾಗಿದೆ. ಹರನದು ಶ್ರುತಿ ಮಾರ್ಗವಾದರೆ; ಹರಿಯದು ಕೃತಿಮಾರ್ಗ. ಎರಡರಲ್ಲಿ ಭೇದವಿಲ್ಲ. ಹರ ಶೃತಿಯನ್ನು ತಂದರೆ; ಹರಿ ಕೃತಿಯನ್ನು ತರುತ್ತಾನೆ. ಮಾರ್ಗ ಮತ್ತು ದೇಸಿಗಳಂತೆ ಶೃತಿ ಮತ್ತು ಕೃತಿಗಳು ಒಂದಾಗಲು ಕಾತರಗೊಂಡು ನಿಂತ ಮಾರ್ಗಗಳು.

‘ಯಾವಿವನs ಕಾಮಾ ಬಂದಾ | ಶಿವಶಕ್ತಿ ನಡುವ’ ಶಿವ ಮತ್ತು ಶಕ್ತಿಯರನ್ನು ಕೂಡಿಸಲು ಬಂದ ಕಾಮ. ದೇವ ಕಾಮನಾದ್ದರಿಂದ ಅವನ ಶಕ್ತಿ ಅಮೋಘ. ಆ ಕಾಮನೇ ವಸುದೇವ ದೇವಕಿಯ ಗರ್ಭದಲ್ಲಿ, ಕೃಷ್ಣನಾಗಿ ಹುಟ್ಟಿಬಂದು ತಂದೆ ತಾಯಿಗಳ ಸೆರೆಯನ್ನು ಬಿಡಿಸಿ, ವಿಶ್ವಕ್ಕೆ ತಂದೆಯಾದ. ಸುರ-ಅಸುರರ ಕಸರು ಕಳೆದು, ಅವನು ಶ್ರಾವಣದಲ್ಲಿ ಮೈದಾಳೀ ಬರಲು, ಇಲ್ಲಿ ಪ್ರಾರ್ಥನೆಯಿದೆ. ಬೇಂದ್ರೆಯವರ ದೃಷ್ಟಿಯಲ್ಲಿ ಆ ದೇವ ಜನನಕ್ಕೆ ಅದ್ಭುತವಾದ ಮಹತ್ವವಿದೆ. ಶ್ರೀಕೃಷ್ಣ ಹುಟ್ಟಿದ್ದು, ಶ್ರಾವಣದಲ್ಲಿ. ‘ಭ್ರಮರಾಭ್ರಮರಾಂಬಾ ನಮ್ಮ ನಿಮ್ಮ ತವರಾ’ ಕೃಷ್ಣನ ಉಪಾಸನೆ ಮಾಡುವ ಭಾಗವತ ಪಂಥದ ವೈಷ್ಣವ ಕವಿಗಳದು ‘ಭ್ರಮರ ಜಾತಿ’ ಎಂದು ಬೇಂದ್ರೆಯವರು ಹೇಳಿದ್ದಾರೆ. ಭ್ರಮರ ಅವರ ಕಾವ್ಯದಲ್ಲಿ ಪ್ರತಿಭೆಯ ಪ್ರತೀಕವಾಗಿ ಬಂದಿದೆ. ಜೇನು ಸಂಗ್ರಹಿಸುವ ಮಧುವಿದ್ಯೆ ಅದಕ್ಕೆ ಸಹಜ. ಹೀಗೆ ಇದು ಹರ-ಹರಿ ಕೃಷ್ಣೋಪಾಸನೆಯ, ಮಧುಮೃತದ ಕಾವ್ಯಮಾರ್ಗ.