ನವಿರಾ ನವಿರಾ, ಮಾಡುವಿ ಯಾಕೀ ಕವರಾ?
ಕವಿಯಿಲ್ಲದವರಾs ಕವರ್ದವರುಂ ಒಳರೇ
ಎಂದಾ ನೃಪತುಂಗ.
ಶ್ರೀ ವಿಜಯನ ಲಿಂಗಾ ಸಂಗಾ
ಶ್ರುತಿ ಇಪ್ಪತ್ತೆರಡೂ | ಕೃತಿ ಸಾವಿರದಾಹರಡು
ಕಳೆಬರಡು, ಮೊರಡಿಗೆ ಮೊರಡಿಗೆ ನವಿಲು
ವಿದ್ಯುದ್ರೇಖಾs | ಮೇಘಾಡಂಬರ ನೌಕಾ
ಎಲ್ಲಾ ಗಂಧರ್ವರ ನಗರಾ | ನಗಲಾ ನಗಲಾ
ನಗ ನಗ ನವಿಲಾ | ಹಾಡೇ ಹಗಲಾ
ಶ್ರಾವಣದಲಿ ಅಭಿಜಿದ್ಯೋಗ
ಕಾವ್ಯೋದ್ಯೋಗ

ಈ ಭಾಗದಲ್ಲಿ ನವಿಲಿನ ಪ್ರತಿಮೆಯಿದೆ. ಭ್ರಮರದಂತೆ ನವಿಲು ಕೂಡ ಕಾವ್ಯ ಪ್ರತಿಭೆಯ ಪ್ರತೀಕವಾಗಿದೆ. ‘ನೃತ್ಯಯಜ್ಞ’ ಕವಿತೆಯಲ್ಲಿ ಅದರ ಸವಿವರ ವರ್ಣನೆ ಇದೆ. ನವಿರು ಮತ್ತು ನವಿಲು ಮೂಲತಃ ಒಂದೆ ಆಗಿವೆ. ‘ಕವರು’ ಅಂದರೆ ರೋಷ, ಆಗ್ರಹ ಸುರಿಯುವ ಪ್ರವೃತ್ತಿ ಇವು ಕಾವ್ಯ ಪ್ರವೃತ್ತಿಗೆ ಹೊರತಾಗಿವೆ. ನೃಪತುಂಗನು ಕವಿಗಳಿಗೆ ರಾಜಮಾರ್ಗವನ್ನು ತೆರೆದವರನು. ಆದ್ದರಿಂದ ಸಂಪ್ರದಾಯದ ಪ್ರವರ್ತಕನಾಗುತ್ತಾನೆ. ಇಪ್ಪತ್ತೆರಡು ಶ್ರುತಿಗಳಿದ್ದು ಕೃತಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿರುವುದು ನಮ್ಮ ಸಂಗೀತದಲ್ಲಿ. ಇದು ಎಲ್ಲರಿಗೂ ಗೊತ್ತಿದ್ದ ವಿಷಯವಾಗಿದೆ. ಏಳು ಸ್ವರಗಳು, ಮೂರು ಗ್ರಾಮಗಳು ಒಂದು ಧ್ರುವಶ್ರುತಿ ಕೂಡಿಕೊಂಡು ಸಂಗೀತದಲ್ಲಿ ಇಪ್ಪತ್ತೆರಡು ಶ್ರುತಿಗಳು. ಗುಡ್ಡ ಗುಡ್ಡಕ್ಕೆ ನವಿಲು ನಿಂತು ಕೇಕೇ ಹಾಕಿದಾಗ ಕಾಡು ಗಂಧರ್ವರ ನಗರವಾಗುವುದರಲ್ಲಿ ಆಶ್ಚರ್ಯವಿಲ್ಲ. ನವಿಲಿನ ಕೇಕೆ ಷಡ್ಜಸ್ವರದಲ್ಲಿ ಎಂದು ಶಾಸ್ತ್ರ ಹೇಳುತ್ತದೆ. ಸಂಗೀತಕ್ಕೆ ಗಾಂಧರ್ವ ವಿದ್ಯೆ ಎಂಬ ಹೆಸರು ರೂಢವಾಗಿದೆ. ‘ಶ್ರಾವಣದಲ್ಲಿ ಅಭಿಜಿದ್ಯೋಗ’ ಎಂಬ ಮಾತು ಪ್ರಗತಿಯ ಊರ್ಧ್ವಗಾಮಿತ್ವಕ್ಕೆ ಬಂದಿದೆ. ‘ಮಘಾ ಶ್ರಾವಣಗಳ ಸಾತ್ವಿಕ ಕಂದಾ | ಅಭಿಜಿತ ಅಭಿಜಿತ್‌ ಎಂದಾ’ ಎಂದು ಒಂದು ಕವಿತೆಯಲ್ಲಿ ಬೇಂದ್ರೆಯವರು ಬರೆದಿದ್ದಾರೆ. ‘ಕಾವ್ಯದ ಉತ್‌ ಯೋಗ – ಊರ್ಧ್ವಗಾಮಿಯಾದ ಯೋಗ ಇಲ್ಲಿ ಪ್ರಾರಂಭವಾಗುತ್ತದೆ. ಎಂಬ ಸೂಚನೆಯೊಂದಿಗೆ ಕವಿತೆ ಮುಗಿಯುತ್ತದೆ. ಶ್ರಾವಣದಲ್ಲಿ ಅಭಿಜಿತ್‌ಯೋಗ ಕಾವ್ಯೋದೋಗ ಎಂದು ಹಾಡಿದ್ದಾರೆ. ಅಭಿಜಿತ್‌ ಎಂಬುದು ೨೮ನೇ ನಕ್ಷತ್ರ. ಇದು ಪ್ರತಿದಿವಸ ಸೂರ್ಯ ನಡು ನೆತ್ತಿಗೆ ಬಂದಾಗ ಇರುವ ಮುಹೂರ್ತ ಯೋಗ. ತೈತರೇಯ ಬ್ರಾಹ್ಮಣದಲ್ಲಿ ಇದರ ಉಲ್ಲೇಖವಿದೆ. ದೇವತೆಗಳು ಅಸುರರನ್ನು ಜಯಿಸಿದ್ದು. ಇದೇ ಮುಹೂರ್ತದಲ್ಲಿ. ಶ್ರಾವಣ ಮಾಸವು ವೇದ ವಿದ್ಯಾಶ್ರವಣಕ್ಕೆ ಮೀಸಲಾದ ಮಾಸ. ಹೀಗಾಗಿ ಶ್ರಾವಣ ಮಾಸದಲ್ಲಿ ಅಭಿಜಿತ್‌ ನಕ್ಷತ್ರ ಇರುವಾಗ ಮಾಡಿದ ಕಾವ್ಯರಚನೆ ಜ್ಞಾನದಾಯಕವಾದದ್ದು. ಅದು ಕತ್ತಲೆ ಅಂದರೆ ಅಜ್ಞಾನವನ್ನು ನಾಶ ಮಾಡುತ್ತದೆ ಎನ್ನುವುದು ಕವಿಯ ಆಶಯ. ಬೇಂದ್ರೆಯವರು ಹುಟ್ಟಿದ್ದು ಮಾಘಮಾಸದಲ್ಲಿ ಅವರಿಗೆ ಸ್ಫೂರ್ತಿಯ ಕೇಂದ್ರ ಶ್ರಾವಣ ಮಾಸ. ನಾಕುತಂತಿ ಕವನ ಸಂಕಲನದಲ್ಲಿಯ ಇನ್ನೊಂದು ಕವಿತೆ ‘ಮತ್ತೆ ಶ್ರಾವಣಾ ಬಂದಾ’

ಶ್ವೇತಾರವಿಂದಾ, ರಕ್ತಾರವಿಂದಾ
ಶ್ರವಣಾsಮಘಾಯೋಗಾ ತಂದಾ
ಮತ್ತೆ ಶ್ರಾವಣಾ ಬಂದಾ

ಶ್ರಾವಣಾ-ಆಗಸ್ಟ್‌, ಇದು ಅರವಿಂದರ ಮಾಸ. ಶ್ರೀ ಅರವಿಂದರ ಸಾವಿತ್ರಿ ಮಹಾಕಾವ್ಯದಿಂದ ಮತ್ತೇ ನವೀನ ಕಾವ್ಯಕ್ಕೆ ಶ್ರೀ ಗಣೇಶಾಯನಮಃ ಆಗಿದೆ ಎಂಬ ಧ್ವನಿ ‘ಮತ್ತೆ ಶ್ರಾವಣಾ ಬಂದಾ’ ಕವನ ಸೃಷ್ಟಿಯ ಹಿನ್ನೆಲೆ ಎಂದು ಬೇಂದ್ರೆಯವರು ಭಾವ ಸಂದರ್ಭದಲ್ಲಿ ಹೇಳಿದ್ದಾರೆ.

ಶ್ರಾವಣ ಮಾಸ ಭಾರತೀಯ ಸಂಸ್ಕೃತಿಯ ದೃಷ್ಟಿಯಿಂದ ಅತ್ಯಂತ ಮಹತ್ವದ ಮಾಸ. ಬೇಂದ್ರೆಯವರು ಹುಟ್ಟಿದ್ದು ಚಂದ್ರ ನಕ್ಷತ್ರ ಮಘಾ-ಮತ್ತು ಸೂರ್ಯ ನಕ್ಷತ್ರ ಶ್ರವಣ. ಈ ಮಘಾ ಹಾಗೂ ಶ್ರವಣಾ ನಕ್ಷತ್ರ ಯೋಗದಿಂದ ಬೇಂದ್ರೆಯವರು ಧಾರವಾಡದ ಭೂಮಿಯ ಸ್ಪರ್ಶ ಪಡೆದು ಜನಿಸಿದರು. ಈ ಸ್ಪರ್ಶ, ಬೇಂದ್ರೆ ಜೀವನ ಸ್ಪರ್ಶಮಣಿ. ಆದುದರಿಂಧ ಕವಿ ಬೇಂದ್ರೆಯವರ ಕೌಟುಂಬಿಕ, ಸಾಹಿತ್ಯಿಕ, ಸಾಂಸ್ಕೃತಿಕ ಜೀವನದಲ್ಲಿ ಶ್ರಾವಣಮಾಸವು, ಮಹತ್ವದ ಕಾರ್ಯ ಮಾಡುತ್ತದೆ ಎಂಬುದನ್ನು ಬೇಂದ್ರೆಯವರು ಅನುಭವ ಹಾಗೂ ಅನುಭಾವದಿಂದ ಖಚಿತಪಡಿಸಿಕೊಂಡಿದ್ದರು. ಈ ಕವಿ ಮನಕ್ಕೆ ಶ್ರಾವಣಮಾಸದಲ್ಲಿ ಕಾಮ್ಯೋನ್ಮಾದ ಹೆಚ್ಚು.

ತೆರೆಗೆ ಇಹುದೋ ಮೇರೆ
ಬಯಲಿಗೆ ಯಾವುದು ಬೇರೇ?
ಬೇರಾಗಿ ಬೆರೆಯುವುದೇ ಕಾರ್ಯ
ಆರ್ಯಾಎಂದ.
ವಿಶ್ವಂ ಆರ್ಯಂ ಕೃರ್ಣವನ್‌’
ಅಮೃತಸ್ಯ ಪುತ್ರಾಃ
ಓಂ ದೇವಾಯ ಜನ್ಮನೇ |
ದೇವನಿಗೂ ಮಾನವಗೂ ಸಂಬಂಧ
ಮುಕ್ತಿಯ ಆಚೆಯ ಭಕ್ತಿಯ
ಭಗವತ್ ಸೃಷ್ಟಿಯ ಬಂಧಾ
ಸಾಮಪ್ರಬಂಧಾ

ವೃಂದಾ, ವೃಂದಾ, ವೃಂದಾ
ವೃಂದಾವನದಂದಾ | ಛಂದಾ
ಇದು ರಾಸದ ಲೀಲೆ Global’ ಎಂದಾ
ಭೂಮಂಡಲದೇವನ ಮನೆ ಚಂದಾ
ಬಿಡು ಮೀನಾ ಮೇಷಾ
ತುಂಬಲಿ ಕುಂಭಾ | ಸಿಂಹಕೆ ರವಿ ಬಂದಾ
ಧನಿಷ್ಠಾನಿಷ್ಠಾ | ವಸುಗಳಿಗೆ ಪ್ರತಿಷ್ಠಾ
ಶತತಾsರಕಾ | ವರುಣನ ಮುಪ್ಪುರಿ ಪಾಶಾ

ಅಧಮಾs ಮಧ್ಯಮಾs ಉತ್ತಮಾs
ತಮಸಸ್ಪರಿ ಹರಿಹರಿ, ಪ್ರಸ್ತರ ಹರಹರ
ಎನ್ನುತ್ತಿವೆ ಅಜೈಕ ಚರಣಾ

‘ವಿಶ್ವಂ ಆರ್ಯಂ ಕೃಣ್ವನ್‌’ ‘ಅಮೃತಸ್ಯ ಪುತ್ರಾಃ ಓಂ ದೇವಾಯ ಜನ್ಮನೆ, ಎಂದು ವಾದ ಮಂತ್ರ ಸೃಷ್ಟಿಯಾದ ಭಾರತದಲ್ಲಿ ತೆರೆಯ ಮರೆಯಾಗಿ ಇರುವ ಬಯಲಿನ ಬೇರನ್ನು ಕಂಡುಹಿಡಿದು, ಜ್ಞಾನ ವೃಕ್ಷವನ್ನು ಬೆಳೆಸಿದ ಮಹಾಋಷಿಗಳು ಆಗಿ ಹೋಗಿದ್ದಾರೆ. ಈ ಪುಣ್ಯ ಸಂಚಯದ ಮೂಲಕ ಈ ಕಾಲಕ್ಕೆ ಶ್ರೀ ಅರವಿಂದರು ಕಂಡ ದರ್ಶನವು ‘ದೇವನಿಗೂ ಮಾನವಗೂ ಇರುವ ಸಂಬಂಧ ಹಾಗೂ ಮುಕ್ತಿಯ ಆಚೆಯ ಭಕ್ತಿಯಲ, ಭಗವತ ಸೃಷ್ಟಿಯ ಮಹತ್ವ ಸಾವಿತ್ರಿ ಮಹಾಕಾವ್ಯದ ಮೂಲಕ ಪ್ರಕಟವಾಗಿದೆ ಎಂಬುದು ಬೇಂದ್ರೆಯವರ ಸ್ವಾನುಭವ. ಸಾವಿತ್ರಿ ಮಹಾಕಾವ್ಯವು ‘ಸಾಮ ಪ್ರಬಂಧ’ವಾದ ವೇದ ಹೃದಯವನ್ನು ಅರಿತಿದೆ ಎಂದು ಹೇಳಿ; ವೇದಗಳಿಗೂ ವೇದಪುರುಷನಾದ ಶ್ರೀಕೃಷ್ಣನಿಗೂ ಇರುವ ಸಂಬಂಧ ಹಾಗೂ ಶ್ರೀಕೃಷ್ಣನ ರಾಸಲೀಲೆಯ ಅಂತರ್ ಕಥನವನ್ನು ಭಾರತೀಯರು ಅರಿತುಕೊಳ್ಳಬೇಕು ಎಂಬುದಾಗಿ ಬೇಂದ್ರೆ ವಿವರಿಸಿದ್ದಾರೆ.

ಭಾರತೀಯರು ‘ಮೀನಾ-ಮೇಷ’ ಪ್ರವೃತ್ತಿಯನ್ನು ಸಂಕುಚಿತ ಭಾವನೆಯನ್ನು ತ್ಯಜಿಸಿ ವಿಶ್ವ ಮಾನವನ ಅರಿವು ಉಳ್ಳವರಾಗಿ ಬಾಳಬೇಕು. ಸಿಂಹರಾಶಿಯರವಿ, ಧನಿಷ್ಠಾ ಹಾಗೂ ಶತತಾರಕಾ ನಕ್ಷತ್ರಗಳು ಮುಪ್ಪರಿಗೊಂಡು “ಭೂಮಂಡಲ ದೇವನ ಮನೆ ಚಂದಾ” ಎಂಬ ಪ್ರಜ್ಞೆಯ ಮಳೆಯನ್ನು ನಮ್ಮ ಭಾರತದ ಮೇಲೆ ಕರೆಯಲಿ ಎಂಬ ಅಭೀಪ್ಸೆ ಈ ಕವನದ್ದು.

ಗಣಪತಿ, ಶಿವ ಮತ್ತು ವಿಷ್ಣು ಇವು ವೇದದೊಳಗಿನ ಅತ್ಯಂತ ಮಹತ್ವದ ದೇವತೆ. ಇವರೇ ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣ. ಇವರೇ ಅಧಮಾs, ಮಧ್ಯಮಾs ಮತ್ತು ಉತ್ತಮಾs ಈ ಚಿಂತನೆಯನ್ನು ಪಡೆದದ್ದು ಅರವಿಂದರ ವೇದಾರ್ಥ ಚಿಂತನದಿಂದ ಬ್ರಹ್ಮಣಸ್ಪತಿ ಎಂದರೆ ಗಣಪತಿ. ಗಣಪತಿ ಸೃಷ್ಟಿಯ ದೇವತೆ. ವಿಷ್ಣು ಹಾಗೂ ಮಹೇಶ ಸ್ಥಿತಿ ಹಾಗೂ ಲಯಕಾರಕ ದೇವತೆಗಳು. ಗಣಪತಿಯ ಬಗ್ಗೆ ಭಾರತೀಯರಿಗೆ ಇರುವ ಅಜ್ಞಾನವನ್ನು ಹಾಗೂ ಅಂಧಃಕಾರವನ್ನು ಹರ-ಹರಿ ಪರಿಹರಿಸಬೇಕೆಂದು ಪ್ರಾರ್ಥಿಸಿ ಕೊಂಡಿದ್ದಾರೆ. ಬೇಂದ್ರೆಯವರು ಮೂಲತಃ ಗಣಪತಿ ಉಪಾಸಕರು. ಇದು ಅವರ ಕವನಗಳಲ್ಲಿ ಕಾಣುತ್ತದೆ.

ಒರುಂಗಾಲ್ ಚಾಂಗುಭಲಾ
ಭದ್ರಾಕರಣಾ, ಚಂದ್ರಾಭರಣಾ
ಭಾಲಚಂದ್ರಾ, ಏಕದಂತಾಲ, ಕುಣಿ, ಇಲಿ, ವಿಲಿವಿಲಿ
ತದ್ದಿತಾಂತಾ, ಕೃದಂತಾ, ವಕ್ರದಂತಾ
ಸ್ವಭಾವೋಕ್ತಾ ವಕ್ರಾ | ವಕ್ರತುಂಡಾ | ಸುಂಡಲಿನಲಿ
ದುಂಢಾ | ಸುತ್ತಿದಾ ಮೋದಕಾ | ಮಕರಂದಾ
ಮಝಾ, ಪೂತು, ಬೊಪ್ಪಾ, ಶಿವಶಿವ ಎಂದಾ
ಹಸ್ತಾಕರಾ, ಶುಂಡಾ, ಕಿಷ್ಕಿಂದಾ, ಸಾಸಿವೆ ಗಣಪಾ
ವಾತಾಪಿಯ ತಣಿಪಾ |
ವಿಘ್ನಕರ್ತಾ ಹರ್ತಾ
ಕಳೆಯಲಿ ಮೋಷಕ ದೋಷಾ

ಓಯಕ್ಷಾ, ಯಜ್ಞಾ, ಸರ್ವತ್ರ ಓಂಕಾರಿ
ಪುಳಿನದ ದಾರಿ ಮರುಳ್, ಮರುಳ್
ಮೃತ್ತಿಕಾವತಿ | ಧೂಲಿs ಧೂಸರಾ
ಸದಾs ಉದಯೋನ್ಮುಖಾ ನೇಸರಾ
ನಿಸರ್ಗಾ, ವಿಸರ್ಗಾ, ಭರ್ಗಾ, ದುರ್ಗಾ
ಹೇರಂಭಾ, ಪಿರಿಯಾ, ಮಹಾ ಉದರಾ ||
ಆನಂದಾ | ತುಂಬಾ
ಕೃಷ್ಣನ ಕೈಯಲಿ ಕೊಟ್ಟಾ | ಚಂದ್ರಭಟ್ಟ
ಸಾವಿತ್ರಿಯ ಪಟ್ಟಾ

ಭದ್ರಾಕರಣ, ಚಂದ್ರಾಭರಣಾ, ಬಾಲಚಂದ್ರಾ, ಚಾಂಗುಭಲಾ ಇವು ಶಿವನಿಗೆ ಸಂಬೋಧನಗಳು, ಏಕದಂತಾ ವಕ್ರದಂತಾ, ವಕ್ರತುಂಡಾ ಸೊಂಡಲಿನಲಿ ದುಂಡಾ ಮುಂತಾದವು ಗಣಪತಿಯ ಸ್ವಭಾವೋಕ್ತ ಅಲಂಕಾರ ಸೂಚಕಗಳು. ಸೊಂಡಲಿನಿಂದ ಮೋದಕ, ಮಕರಂದ, ಸಂಗ್ರಹಿಸಿದ ಗಣಪತಿಯ ಬಾಲಲೀಲೆಯನ್ನು ಕಂಡು ತಂದೆಯಾದ ಶಿವನಿಗೆ ಆನಂದವಾಗುತ್ತದೆ. ಈ ಗಣಪತಿ ಸಾಮಾನ್ಯನಲ್ಲ. ಇವನು ಸಾಸಿವೆ ಕಾಳು ಆಗಬಲ್ಲಾ ಇಡೀ ವಾತಾಪಿಗೆ ಹರ್ಷವನ್ನು ಕೊಡಬಲ್ಲನು. ಇವನು ಓಂಕಾರ ಸ್ವರೂಪನು. ಸರ್ವವ್ಯಾಪಿಯಾದ ಇವನ ಜ್ಞಾನ ಮಾಡಿಕೊಳ್ಳುವುದು ಅವಶ್ಯ ಎಂದು ಶಿವನು ಅರಿತನು. ಈ ಬಗೆಯ ಚಿಂತನ ಮಾಡುತ್ತ ಶಿವನು, ಮರಳಿನ ಪ್ರದೇಶದಲ್ಲಿ ಅಡ್ಡಾಡುತ್ತಾ ಮಣ್ಣು. ಸೂರ್ಯ, ನಿಸರ್ಗಸೃಷ್ಟಿ, ವಿಶೇಷ ಸೃಷ್ಟಿ, ಪ್ರಕಾಶ, ಶಕ್ತಿ ಮತ್ತು ಕೊನೆಗೆ ದೊಡ್ಡ ಹೊಟ್ಟೆಉಳ್ಳ, ಅನಾಕಲನೀಯ ಗಣಪತಿಯ ವಿಚಾರ ಮಾಡುತ್ತ ನಿರ್ಣಯಕ್ಕೆ ಬಂದನು. ಆ ನಿರ್ಣಯ ಹೀಗೆ. ಈ ಗಣಪತಿ ನನ್ನ ಮಗನಾಗಿದ್ದರೂ ನನ್ನವನಲ್ಲ. ಇವನು ಸೃಷ್ಟಿ ದೇವತೆ – ಬ್ರಹ್ಮ ಆದುದರಿಂದ ಇವನು ನನ್ನ ಮಗನಾಗುವುದಕ್ಕಿಂತ ಶ್ರೀಕೃಷ್ಣನ ಮಗನಾಗಲಿ, ಅದರಂತೆ ಚಂದ್ರಭಟ್ಟಾ (ಶಿವ), ಗಣಪತಿಯನ್ನು ಬ್ರಹ್ಮರೂಪದಲ್ಲಿ ಕೃಷ್ಣನ ಹೊಕ್ಕಳದ ಕಮಲದಲ್ಲಿ ಜನಿಸುವಂತೆ ಮಾಡಿರಬೇಕು ಎಂಬುದು ಇಲ್ಲಿಯ ಕವಿಯ ಕಲ್ಪನೆ.

ಇದರಿಂದ ಈ ಬ್ರಹ್ಮನಿಗೆ = ಗಣಪತಿಗೆ ಸಾವಿತ್ರಿಯ ಪಟ್ಟಾ

ಸಾವು ಇಲ್ಲದ ಪಟ್ಟಲಭಿಸಿತು ಎಂಬುದು ಒಂದು ಅರ್ಥವಾದರೆ, ಮಹಾಗಣಪತಿ ಸದೃಶರಾದ ಶ್ರೀ ಅರವಿಂದರು ಸೃಷ್ಟಿಸಿದ ಸಾವಿತ್ರಿ’ ಮಹಾಕಾವ್ಯಕ್ಕೆ ಅಮರವಾದ ಸ್ಥಾನವಿದೆ ಎಂಬ ಅರ್ಥವೂ ಇಲ್ಲಿ ಅಡಗಿದೆ. ಇದೇ ಈ ಕವನದ ಪ್ರಮುಖವಾದ ಧ್ವನಿ.

‘ಓಂ-ಈಂ ಮಹಾಗಣಪತಿಯೋ ನಮಃ’ ಎಂಬ ಮಂತ್ರದಲ್ಲಿ ಓಂ ಸ್ಥಾನಕ್ಕೆ ಗಣಪತಿ=ಬ್ರಹ್ಮನಿದ್ದಾನೆ, ಈ ಸ್ಥಾನಕ್ಕೆ ಸರಸ್ವತಿ ಇದ್ದಾಳೆ. ಈ ಬ್ರಹ್ಮ ಸರಸ್ವತಿ ದಾಂಪತ್ಯಕ್ಕೆ ಅಳಿವಿಲ್ಲಾ ಇವು ಎರಡು ಸೃಷ್ಟಿಯ ಬೀಜಗಳು ಎಂಬುದನ್ನು ಬೇಂದ್ರೆಯವರು ಮಂತ್ರಶಾಸ್ತ್ರ ಅಧ್ಯಯನದಿಂದ ಧೃಡಪಡಿಸಿಕೊಂಡಿದ್ದರಿಂದ ಈ ಕವನ ಸೃಷ್ಟಿಯ ಹಿನ್ನೆಲೆ ಭದ್ರವಾಯಿತು.

ತೀರಿತು ಬೆಳದಿಂಗಳ ಇರುಳು
ಸೂರ್ಯನ ಹಗಲಿನ ಕರುಳು
ಕರೆಯುತ್ತಿದೆ ಮಾಘಾ, ಮಘಾ ಮಘಾ
ಘಮಾ, ಘಮಾ, ಗಂಧಾ
ಅರವಿಂದಾ ಬಂದಾ
ಅಗ್ನಿಗು ಸೋಮಗು ಕೊಡುಕೊಳೆ
ತಂದಾ
ಶ್ರಾವಣಾ ಬಂದಾ | ಕಿವಿತೆರಿ ಎಂದಾ.

ಈ ಎಲ್ಲ ಚಿಂತನೆಯನ್ನು ಬೇಂಧ್ರೆಯವರು ಒಂದು ಬೆಳದಿಂಗಳ ರಾತ್ರಿ ಮೂಡಿರಲು ಕಂಡರು. ಅದರಿಂದ ಆದ ಪ್ರಕಾಶ, ಸೂರ್ಯ, ಆನಂದ, ಕವಿಯ ಪ್ರಾಪ್ತಿ. ಈ ಪ್ರಾಪ್ತಿಗೆ ಅಗ್ನಿ ಹಾಗೂ ಸೋಮಸೂತ್ರಗಳ ವಿವರಣೆಯನ್ನು ಕೊಟ್ಟ ಶ್ರೀ ಅರವಿಂದರೇ ಕಾರಣ. ಅವರಿಂದ ಹೊರಹೊಮ್ಮಿ ಬಂದ ಘಮಾ ಘಮಾಗಂಧ ಈ ಕವನ ಎಂಬುದಾಗಿ ಬೇಂದ್ರೆಯವರು ಕವನ ಮುಕ್ತಾಯಕ್ಕೆ ತಮ್ಮ ಕವನದ ಆಕರವನ್ನು ವಿನಯ ಪೂರ್ವಕವಾಗಿ ಬಹಿರಂಗಪಡಿಸಿ, ವಾಚಕರ ಮೇಲೆ ಉಪಕಾರ ಮಾಡಿದ್ದಾರೆ. ಈ ಚಿಂತನ ಮತ್ತು ಕವನ ಸೃಷ್ಟಿ ಶ್ರಾವಣ ಮಾಸದಲ್ಲಿಯೇ ಆಗಿದೆ ಎಂಬುದನ್ನು “ಶ್ರಾವಣಾ ಬಂದಾ | ಕಿವಿ ತೆರಿ ಅಂದಾ” ಎಂಬ ಸಾಲು ಸಮರ್ಥಿಸುತ್ತದೆ. ಇದು ಬೇಂದ್ರೆಯವರ ಶ್ರಾವಣ ಪ್ರತಿಭೆಯ ಒಂದು ರೀತಿಯು ಹೌದು.

ಸಂವತ್ಸರ ಸೂರ್ಯಪಾನ
ಅಭಿಜಿನ್ಮನ ಊರ್ಧ್ವಧ್ಯಾನ
ಧ್ರುವ ಮಂಡಲ ಭಕ್ತಿಗಾನ
ಸರಿಗಮಪದ ಏಕತಾನ
ಬರುತಲಿಹುದು ಶ್ರಾವಣಾ
ಮತ್ತೆ ಬಂತು ಶ್ರಾವಣಾ
ದಿನ ದಿನಾ ನವೀನ ಜನನ
ಗಗನ ಗಹನ ಯಂತ್ರ ಘನ
ನಮಮ ನಮೋ ಮಂತ್ರ ಮನ
ತನು ತಾನೆನೆ ತಂತ್ರ ತನ
ಬರುತಲಿಹುದು ಶ್ರಾವಣಾ
ಮತ್ತೆ ಬಂತು ಶ್ರಾವಣಾ ||
ತನುಮನ ಘನ ಪ್ರಾಣಿಯಾಗಿ
ಜತೆಗು ನಾಗವೇಣಿಯಾಗಿ
ಪಥದಲಿ ತತ್ ಪ್ರಾಣಿಯಾಗಿ
ಬಿನ್ನಾಣದ ಶ್ರೇಣಿಯಾಗಿ
ಬರುತಲಿಹುದು ಶ್ರಾವಣಾ
ಮತ್ತೆ ಬಂತು ಶ್ರಾವಣಾ ||
ಖಗ ನಗ ಜಗ ಸಂಮುಖ
ಬಾಡುವ ರವಿ ಕಿರಣಾನಖ
ತಮದ ಬಸಿರೊಳಮರ ಮುಖ
ನಿರಂತರದ ಸಖಸಖಿಸುಖ
ಬರುತಲಿಹುದು ಶ್ರಾವಣಾ
ಮತ್ತೆ ಬಂತು ಶ್ರಾವಣಾ ||
ರಾಧಾ ಧರ ಸುರಿಯುವಲ್ಲಿ
ಯಮುನಾ ಜಲ ಹರಿಯುವಲ್ಲಿ
ವೃಂದೆಯ ಚಿತೆ ಉರಿಯುವಲ್ಲಿ
ತುಲಸಿಯ ಒಡ ಮುರಿಯುವಲ್ಲಿ
ಬರುತಲಿಹುದು ಶ್ರಾವಣಾ
ಮತ್ತೆ ಬಂತು ಶ್ರಾವಣಾ ||
ಸಖಿಸ್ಮರಣ ಮುಕುರದಲ್ಲಿ
ಮಂಗಲ ಮುಖದೂರದಲ್ಲಿ
ಮಿಲಿಂದ ತೀರದಲ್ಲಿ
ಮಧುರಸ್ಮಿತ ಪೂರದಲ್ಲಿ
ಬರುತಲಿಹುದು ಶ್ರಾವಣಾ
ಮತ್ತೆ ಬಂತು ಶ್ರಾವಣಾ ||
ಬ್ರಹ್ಮರಂಧ್ರ ಗೀತಾಗಮ
ಬೆನ್ ಬಿದರಿಗೆ ಧ್ವನಿ ಸಂಗಮ
ಶೇಷ ಶ್ವಾಸ ಸಮ ಘಮ ಘಮ
ಜೀವ ಭಾವ ಹೃದಯಂಗಮ
ಬರುತಲಿಹುದು ಶ್ರಾವಣಾ
ಮತ್ತೆ ಬಂತು ಶ್ರಾವಣಾ

ಕವಿಗೆ ಶ್ರಾವಣ ಮೂಲ ಪ್ರತಿಮೆಯಾಗಿದೆ. ಶ್ರಾವಣವನ್ನು ಕುರಿತು ಬರೆದ ಕವನಗಳಲ್ಲಿ ಶ್ರಾವಣದ ಬಾಹ್ಯ ವೈಭವ, ಉನ್ಮಾದ ಅಂತಃಸತ್ವ ಮತ್ತು ಅದರಲ್ಲಿ ಆರೋಪಿತವಾದ ಕವಿಯ ಸ್ವಂತದ ವಿಷಾದ ತೋರುತ್ತದೆ. ಇದಲ್ಲದೆ ಶ್ರಾವಣದ ತಾತ್ವಿಕ ಹಾಗೂ ಪೌರಾಣಿಕ ಮಹತ್ವ ಹೀಗೆ ಅರ್ಥವಂತಿಕೆಯ ಅನೇಕ ಪದರುಗಳನ್ನು ತೋರಿಸುತ್ತ ತಮ್ಮ ಕಾವ್ಯ ತೋಟದಲ್ಲಿ ಶ್ರಾವಣವನ್ನು ಹಾಗೂ ಶ್ರಾವಣನನ್ನು ಹಿಡಿದು ಹಾಕಿದ್ದಾರೆ. ಬೇಂದ್ರೆಯವರ ಕಾವ್ಯಜೀವನಕ್ಕೂ ಶ್ರಾವಣಕ್ಕೂ ಇರುವ ಪ್ರತಿಭಾ-ಸಂಬಂಧಗಳು ಇಲ್ಲಿ ಕವನಗಳಾಗಿವೆ. ಇದು ಬೇಂದ್ರೆಯವರ ಶ್ರಾವಣ.