ನಾಗರಿಕತೆಯ ಬೆಳವಣಿಗೆಯಲ್ಲಿ ನದಿಯು ಅತ್ಯಂತ ಪ್ರಮುಖವಾದ ಪಾತ್ರ ವಹಿಸಿದುದು ಸರ್ವವಿದಿತ. ಕೃಷ್ಣಾನದಿಯು ನಮ್ಮ ರಾಜ್ಯ ಮತ್ತು ಆಂಧ್ರ ಪ್ರದೇಶದಲ್ಲಿ ಹರಿದ ದೊಡ್ಡ ನದಿ. ಕರ್ನಾಟಕದಲ್ಲಿ ಕೃಷ್ಣಾತೀರದ ಜಾನಪದ ಆಟಗಳಲ್ಲಿ ಇಂದಿಗೂ ಅತ್ಯಂತ ಜನಪ್ರಿಯವಾದ ಆಟವೆಂದರೆ “ಶ್ರೀಕೃಷ್ಣ ಪಾರಿಜಾತ”ವೆಂದೇ ಹೇಳಬಹುದು. ಆಂಧ್ರದ ಕೃಷ್ಣಾ ಜಿಲ್ಲೆಯ ಕೃಷ್ಣಾತೀರದ ಅತ್ಯಂತ ರಮಣೀಯ ಮತ್ತು ದೇಶ ಪ್ರಸಿದ್ಧವಾದ ನೃತ್ಯ ನಾಟಕ ‘ಭಾಮಾ ಕಲಾಪಮು’ ಎರಡರ ಮೂಲಕಥೆ ಒಂದೇ; ಪಾತ್ರಗಳ ಹರವು ಒಂದೇ. ಪಾರಿಜಾತದ ಕಥೆಯೇ ಒಂದು ಗ್ರಂಥಕ್ಕಾಗುವಷ್ಟು ವ್ಯಾಪ್ತಿಯನ್ನು ಹೊಂದಿದೆ. ಜನತೆಯಲ್ಲಿ ಭಾಗವತ ಸಂಪ್ರದಾಯವು ಹರಡಲೆಂದೋ, ಹರಡಿದ್ದು ಉಳಿಯಲೆಂದೋ ಭಾಗವತಕಥೆಯ ರೂಪರೇಷೆ ಜಾನಪದದಲ್ಲಿ ನೃತ್ಯ ಗೀತೆಯೋಪಾದಿಯಾಗಿ ಜನಸಾಮಾನ್ಯರನ್ನು ರಂಜಿಸಿದಂತೆ. ರಾಜಮರ್ಯಾದೆ ಹೊಂದಿ, ವಿದ್ವಾಂಸರಿಂದಲೂ ಪ್ರಶಸ್ತಿ ಹೊಂದಿದೆ.

ಒಂದು ಜಾನಪದ, ಇನ್ನೊಂದು ಅಭಿಜಾತ. ಎರಡರ ತುಲನಾತ್ಮಕ ಸಾಂಸ್ಕೃತಿಕ ಅಧ್ಯಯನ ಬುದ್ಧಿಗೆ ರಸದೌತಣ. ಆದರೆ ಈ ಕಾಲದಲ್ಲಿ ಔತಣಕ್ಕೆ ಲಕ್ಷ್ಮಿಯ ಕೃಪೆಯ ಅವಶ್ಯಕತೆ ಬಹಳ. ಘನ ಸರಕಾರವು ಈ ದಿಶೆಯಲ್ಲಿ ಧನ ಸಹಾಯ ಸಲ್ಲಿಸಿದ್ದನ್ನು ಕೃತಜ್ಞತೆಯಿಂದ ಇಲ್ಲಿ ಸ್ಮರಿಸುವೆ.

ಎಂ.ಟಿ. ಧೂಪದ
ಗುರುಕೃಪ, ೨೭೯೦
ಆರ್.ಪಿ.ಸಿ.
ಬೆಂಗಳೂರು-೫೬೦ ೦೪೦