ರಾಗ ಗೌಳ ಪಂತು ಆದಿತಾಳ

ಸಾಕು ಹರಟೆಗುಟ್ಟಬೇಡಿರೆ ಸುಮ್ಮನೆಲ್ಲರು   || ಪಲ್ಲವಿ ||
ಸಾಕು ಹರಟೆಗುಟ್ಟ ಬೇಡಿ | ಕಾಕುತನದ ಮಾತನು ವಿ |
ವೇಕವಿಲ್ಲದಾಡುತಿರುವಿ | ರೇಕೆ ಪೋಗಿ ಮನೆಗೆ ಬರಿದೆ ||    || ಅ.ಪ ||

ವರ್ಷ ಮೂರು ತುಂಬಲಿಲ್ಲ | ತರಳ ಮಾತನಾಡಲರಿಯ |
ಬರಿದೆಯಿಲ್ಲದಿರುವ ಕಳವ ಹೊರಿಸಿ ಪೇಳ್ವಿರಿ ||
ಹೆರಲಿಲ್ಲ ನೀವಿನ್ನು ನಿಮಗೆ | ಕರುಣವೆಂತಕ್ಕು ಬಾಲರಲ್ಲಿ |
ತೆರಳಿ ಸುಮ್ಮನೆನಲು ಕೇಳಿ | ತರುಣಿಯರಿಂತೆಂದರಾಗ         || ೧ ||

ನುಡಿವೆಯಮ್ಮ ನಿನ್ನ ಕಂದ | ಬೆಡಗನೇನರಿಯನೆಂದು |
ಕಡೆಗೆ ಕೇಳು ತಿಳಿಯದವನ  ದುಡುಕಿನಾಟವ ||
ಹುಡುನಿಯೊಮ್ಮೆ ತಡೆಯಲವಳ | ತುಡುಕಿ ಮೊಲೆಯ ಪಿಡಿದು ಮುತ್ತ
ಕೊಡುಯೆಂದಪ್ಪಿ ತೊಡರಿಯುರುಳೆ | ಗೆಡಹಿ ಲಜ್ಜೆಗೆಡಿಸುವಾಗ ||
ಬಾಲನೇನೆ ನಿನ್ನ ಕಂದನು || ೨ ||

ರಾಗ ಭೈರವಿ ಆದಿತಾಳ

ಬುದ್ಧಿಯ ಹೇಳಮ್ಮ ಗೋಪಮ್ಮ ||
ಕಡೆಗು ನೀ ಮಗನ | ಮುದ್ದು ಮಾಡಿ ಕೆಡಿಸುವೆಯಮ್ಮ    || ಪ ||

ಮನೆಮನೆಯ ಪೊಕ್ಕು | ಕದ್ದು ಮೆಲುವುದಾವಗುಣವಮ್ಮ ||
ಬೇಕಾದರೆಮ್ಮ | ಲಿದ್ದುದೆಲ್ಲ ತರಿಸಿಕೊಳ್ಳಮ್ಮ || ಇಂಥಾದ್ದೇ ನಮ್ಮ         || ೧ ||

ನೀರಿಗೆಯ್ದುವೆಳೆಯ ಹೆಂಗಳ | ನಿಂತು ತಾನಿತ್ತ |
ಬಾರೆ ಬಾರೆಯೆಂಬ ಬಗೆಗಳ ||

ಮಾಡುತ ಸನ್ನೆ | ದೋರಿ ನಗುತ ಸರಸವಾಡುವ ||
ಮುಂದೆಯ್ದಗೊಡದೆ | ದಾರಿಯಡ್ಡಗಟ್ಟಿ ಕಾಡುವ || ಇಂಥಾದ್ದೇನಮ್ಮ       || ೨ ||

ಮುಗುಳು ಮೊಲೆಗೆ ಕಯ್ಯುನಿಕ್ಕುವ ||
ಕೊಡಹಲ್ಕೆ ಬಿಡದೆ | ಬಿಗಿಯಪ್ಪುತ ಬದಿಯ ಕುಕ್ಕುವ ||
ಬಲ್ಪಿಂದ ಮೊಗಕೆ | ಮೊಗವಿಟ್ಟು ಚೆಂದುಟಿಯ ಹೀರುವ ||
ಅಹಹ ನೋಡೆಂತಾ | ಸೊಗಸಾಯ್ತೆಂದು ಬೆಡಗ ಬೀರುವ || ಇಂಥಾದ್ದೇ ನಮ್ಮ     || ೩ ||

ಅರಿಯದ ಕನ್ನೆವೆಣ್ಗಳನು | ಈ ರೀತಿ ಮಂಕು |
ಮರುಳು ಮಾಡಿ ಕೆಡಿಸಿ ಮನವನು ||
ಅಕೊಳ್ಳೆ ಕೃಷ್ಣ | ಬರುವನಾಡಪೋಪವೇಳೆಂದು |
ಮಲಗಿರ್ದು ನಡು |  ವಿರುಳು ಕನಸಿಲೆಂಬರಿಂತೆಂದು || ಇಂಥಾದ್ದೇನಮ್ಮಾ        || ೪ ||

ಭಾಮಿನಿ

ನಕ್ಕಳಂದಚು ಯಶೋದೆಯಾ ಹೆ |
ಮ್ಮಕ್ಕಳಾಡಿದ ನುಡಿಗಿದೇನೌ |
ಮಕ್ಕಳಾಟಿಕೆಯೊರ್ವಳಿವಳೆಂದೊರ್ವ ಹಿರಿಯಳನು ||
ಮಕ್ಕಳನು ಪಡೆದವಳು ನೀ ಬಾ |
ರಕ್ಕಯೆನುತಲಿ ಕರೆದು ಪೇಳೌ |
ತಕ್ಕ ಮಾತನೆನಲ್ಕೆ ನಗುತಿಂತೆಂದ ಳಾ ವನಿತೆ ||

ರಾಗ ಕೇದಾರಗೌಳ ಅಷ್ಟತಾಳ

ಕೇಳಮ್ಮ ಗೋಪಮ್ಮ ಬಾಲಕೃಷ್ಣನು ಮಾಳ್ಪ | ಲೀಲೆ ಸುಳ್ಳಲ್ಲವಮ್ಮ ||
ಭೂಲೋಕದೊಳಗುಳ್ಳ ಬಾಲಕರಂತಲ್ಲ | ಗೋಳು ಗುಟ್ಟಿಸುವನಮ್ಮ       || ೧ ||

ಒಮ್ಮೆ ಸಣ್ಣವನಾಗಿ ಬರುವ ನೋಡಲಿಕೆ ಮ | ತ್ತೊಮ್ಮೆ ದೊಡ್ಡವನಾಗುವ ||
ಒಮ್ಮೆ ದಿವ್ಯಾಂಗದಿ ಮೆರೆವ ನೋಡುತಲಿ ತಾ | ನೊಮ್ಮೆ ಇದ್ದಂತಿಹನೆ    || ೨ ||

ಇಲ್ಲಿ ನಿನ್ನಯ ತೊಡೆಯಲಿರ್ಪ ಬೀದಿಗ | ಳಲ್ಲಿ ಮಕ್ಕಳೊಳಾಡುವ ||
ಎಲ್ಲರ ಮನೆಯಲ್ಲಿ ಮೆಲ್ಲನ್ನೈದುವನು ಊ | ರೆಲ್ಲ ಕಾಣಿಸಿಕೊಂಬನೆ        || ೩ ||

ಪೆಣ್ಮಕ್ಕಳನು ಪಿಂದಣಿಂದ ಬಂದೊಯ್ಯನೆ | ಕಣ್ಮುಚ್ಚಿ ಚುಂಬಿಪೆನೆ ||
ನುಣ್ಮೊಲೆವಿಡಿದಪ್ಪಿ ಜಾಣ್ಮೆಯ ವಿಟರಂತೆ | ಗೊಣ್ಮೊಳಗಿಸುವನಲ್ಲೆ       || ೪ ||

ಕಂದ

ಎನುತವಳಾಡಿದ ನುಡಿಗಂ | ಮನದೊಳ್ ನಸುನಗುತ ಯಶೋದೆಯುರೆ ಸಂಶಯದಿಂ ||
ವನಿತೆಯರಿಗೆ ಹಿತಮಾಗಿಯೆ | ತನಯನ ಮೇಲ್ ಮುನಿದ ತೆರದೊಳೊಯ್ಯನೆ ನುಡಿದಳ್  || ೧ ||

ರಾಗ ನಾದನಾಮಕ್ರಿಯೆ ಏಕತಾಳ

ಯಾಕೊ ರಂಗಯ್ಯ ನೀ ವ್ಯಾಕುಲಪಡಿಸುವು | ದೀ ಕಾಂತೆಯರನವಿವೇಕದಲಿ ||
ಸಾಕಪ್ಪ ಬೇಡಿಂಥ ಕಾಕುತನವ ಮಾಡಿ | ಪೋಕನೆನಿಸಿಕೊಂಬುದೇಕೆಂದಳು        || ೧ ||

ಪಾಲುಂಟು ಮೊಸರುಂಟು ಬಾಲ ಬೆಣ್ಣೆಗಳುಂಟು | ಪೇಳು ಬೇಕಾದರೆ ನಾನೀವೆನು ||
ಲೀಲೆಯಿಂದಲಿ ಪರರಾಲಯವನು ಪೊಕ್ಕು | ಪೋಲಿಮಾಡದಿರಿನ್ನುಮೇಲೆಂದಳು    || ೨ ||

ಮಡದಿಯರನು ಮೊಲೆವಿಡಿಯೆ ಕೇಳುವರೇನೊ | ಹುಡುಗನೆಂದೊಮ್ಮೆಗೆ ತಡೆದಿರ್ಪರು ||
ಕಡೆಗೂ ನೀನಿಂತು ಮಾಡೆ ಹಿಡಿದು ತರಿಸಿ ಪೆಟ್ಟ | ಕೊಡುವೆ ನಿನ್ನನು ಹೀಗೇ ಬಿಡೆನೆಂದಳು  || ೩ ||

ವಚನ

ಇಂತೆಂದಾ ತಾಯ ಮಾತಿಗೆ ರಂಗನುತ್ತರಂ ಕೊಟ್ಟ ಬಗೆಯದೆಂತೆನೆ :

ರಾಗ ಪಂತುವರಾಳಿ ಪಂಚಾಗತಿ ಮಟ್ಟೆತಾಳ

ಅಮ್ಮ ಮುನಿವೆಯೇಕೆ ತನ್ನಲಿ | ಸುಮ್ಮನಿವರು ಪೇಳ್ವ ಮಾತ |
ನೊಮ್ಮೆಯಹುದೆನುತ್ತ ಬರಿದೆ || ಯಮ್ಮ ಮುನಿವೆಯೇಕೆ ತನ್ನಲಿ   || ಪಲ್ಲವಿ ||

ಹರವಿಹರವಿಯಲ್ಲಿ ತುಂಬಿ | ಸಿರುವ ಹಾಲು ಮೊಸರನೆಲ್ಲ |
ಬರಿದು ಮಾಡಿ ಕುಡಿಯಲೇನು | ಕೆರೆಯೆ ತನ್ನ ಹೊಟ್ಟೆ ನೋಡು ||
ಹುರುಡಿಗೆಂಬ ತರಳೆ ಮಾತಿದು | ಈ ನಿಜದ ನೆಲೆಯ | ನರಿವರಣ್ಣನೊಡನೆ ಕೇಳ್ವದು ||
ಇವರ ಮಾತು | ಸರಿಯೆನುತ್ತ ನುಡಿದನಾದ | ಡಿರದೆ ಕೊಲ್ಲು ಮರುಗೆ ನಾನು ||
ಅಮ್ಮ ಮುನಿವೆಯೇಕೆ ತನ್ನಲಿ        || ೧ ||

ಮಗಳಿಗೀತ ಗಂಡನಕ್ಕು | ಸೊಗಸುಗಾರನೆಂದು ತನ್ನ |
ಮಗಳ ಕೂಡೆಯೆನ್ನನೆಳೆಸಿ | ಬಿಗಿವುತಪ್ಪೆನುತ್ತ ಬಿಡದೆ ||
ಮುಗುದೆಯೊಡನೆ ಪಿಡಿದು ಮಲಗಿಸಿ | ಮೂಡಿ ಬರ್ಪ |
ಮುಗುಳು ಮೊಲೆಯನೆದೆಗೆ ಮರ್ದಿಸಿ | ಯೊಲ್ಲೆನೆಂದ |
ಡಗಲಗೊಡದೆ ದಣಿಸುತೆನ್ನ | ನಗುತ ಸೊಗಸ ನೋಳ್ಪಳೀಕೆ || ಅಮ್ಮ    || ೨ ||

ಪುಟ್ಟ ರನ್ನಸರವ ಮಗಳಿ | ಗಿಟ್ಟು ನೋಳ್ಪೆ ಕೊಡು ಕೊಡೆಂದು | ಗಟ್ಟಿ ಮಾಡುತಿನ್ನ ಹರಟೆ | ಗುಟ್ಟುಲಾನು ಕೊಡದೆ ಮನೆಗೆ | ತಟ್ಟನೆದ್ದು ಬರಲು ಕಂಡಳು ||
ಹಿರಿಯಳಯ್ದೆ | ಹೊಟ್ಟೆಗಿಚ್ಚಿಗಿಲ್ಲಿ ಬಂದಳು | ಇಲ್ಲದಿರುವ |
ಚೇಷ್ಟೆಗಳನು ನಿನ್ನೊಳುಸಿರಿ ಪೆಟ್ಟ ನನಗೆ ಕೊಡಿಸಬಗೆವ | ಳಮ್ಮ ಮುನಿವೆಯೇಕೆ ತನ್ನಲಿ    || ೩ ||

ಕಂದ

ತನಯನ ಜಾಣುವೆನುಡಿಯಂ | ವನಜಾಂಬಕಿಯಾಲಿಸುತ್ತಲು ಮೋಹದೊಳಂ ||
ವಿನಯದಿ ಚುಂಬಿಸುತಪ್ಪಿದು | ವನಿತೆಯರಂ ನೋಡಿನಗು ತೊಯ್ಯನೆ ನುಡಿದಳ್

ರಾಗ ಭೈರವಿ ಝಂಪೆತಾಳ

ಬಾಲೆಯರು ಕೇಳಿರೌ | ಪೇಳುವಿರಿ ನೀವೆನ್ನ |
ಬಾಲಕನ ಮೇಲೆ ಪೊಸ | ಲೀಲೆಗಳನಿನಿತು   || ೧ ||

ಇನ್ನು ಬಂದರೆ ಪಿಡಿದು | ತನ್ನಿ ನೀವೀತನನು |
ತನ್ನೆಡೆಗೆಯೆನುತವರ | ಮನ್ನಿಸುತಲಂದು    || ೨ ||

ಮನೆಗೆ ಬೀಳ್ಗೊಡಲಾಗ | ವಿನಯದಿಂದೊಡಬಟ್ಟು |
ವನಿತೆಯರು ನಡೆಯಲಾ | ವನಜಲೋಚನನು         || ೩ ||

ಅವರಿಂದ ಮುನ್ನವರ | ಭವನವನು ತಾ ಪೊಕ್ಕು |
ನವನೀತವನು ಕದ್ದು | ಸವಿವುತಿರೆ ಕಂಡು     || ೪ ||

ಯುವತಿಯರು ಸಿಕ್ಕಿದನು | ತನಗೆ ಮಗುಳೆನುತ ಪಿಡಿ |
ದವಕಿದರು ತಮತಮ್ಮ | ಭವನದೊಳಗಾಗ   || ೫ ||

ವಾರ್ಧಿಕ

ಅವನೀಶ ಕೇಳ್ ಕೌತುಕವನಿಂತು ನಾರಿಯರ್ |
ತವತವಗೆ ಕಯ್ ಬಾಯ್ಗೆಲಿಪ್ತಮಾಗಿರುವಂತ |
ನವನೀತಗೂಡಿ ಪಿಡಿದಾ ಯಶೋದೆಗೆ ತೋರ್ಪೆವೆಂದು ಪೊರಟಾಲಯವನು ||
ಅವಳಲಿಹುದಿವಳರಿಯದಿವಳಲಿಹುದವಳರಿಯ |
ಳವರೆಲ್ಲರಿಂತೆತ್ತಿಕೊಂಡು ಬರೆ ಮಾತೆಯಂ |
ಕವನೇರಿ ಕುಳ್ಳಿರ್ಪನಂ ಕಂಡು ಬರಿಗಯ್ಯೊಳಬಲೆಯರ್ ಬೆರಗಾದರು     || ೧ ||

ಭಾಮಿನಿ

ಬಾಲತನದಚ್ಯುತನ ಮಾಯದ |
ಲೀಲೆಗುರೆ ಬೆರಗಾಗಿ ಲಜ್ಜಿಸು |
ತಾಲಯಕೆ ಗಮಿಸಿದರು ಮೌನದೊಳಿರದೆ ಗೋಪಿಯರು ||
ಲೋಲನೇತ್ರೆ ಯಶೋದೆ ತನ್ನಯ |
ಬಾಲಕಗೆ ಮೊಲೆಯೂಡಿ ಸಂತಸ |
ದಾಳುತಪ್ಪುತ ಚುಂಬಿಸುತ ಮುದ್ದಿಸಿದಳಡಿಗಡಿಗೆ       || ೧ ||

ವಾರ್ಧಿಕ

ಮತ್ತೊಂದು ದಿನವಣುಗನೊರಗಿರಲ್ ಕಾಣುತ್ತ |
ಮತ್ತಗಾಮಿನಿ ಮೊಸರ ಕಡೆದಳೊಯ್ಯನೆ ಕುವರ |
ನುತ್ತಮಗುಣಂಗಳಂ ಪಾಡುತಾನಂದ ರಸವೆತ್ತತಿ ವಿಲಾಸದಿಂದ ||
ಇತ್ತಲಚ್ಯುತನೆದ್ದು ಮೆಯ್‌ಮುರಿದು ಕಣ್ದೆರೆದು |
ನಿತ್ತಾಲಿಸುತಲವ್ವೆಯಿಪ್ಪಡೆಗೆ ಬಂದೊಡನ |
ಳುತ್ತಯ್ದೆ ಕಡೆವ ಕಡೆಗೋಲ್ ಪಿಡಿದು ಚಾಲುವರಿದಮ್ಮ ಮೊಲೆಯೂಡೆಂದನು      || ೧ ||

ರಾಗ ಗೌಳಪಂತು ಆದಿತಾಳ

ಅಮ್ಮಿಯ ಕೊಡೆ | ಅಮ್ಮ | ಅಮ್ಮಿಯ ಕೊಡೆ ||
ಅಮ್ಮಯ್ಯ ನೀ ಮೊಸರಕಡೆವದಮ್ಮಯ್ಯ ಬಿಡೆ    || ಪ ||

ಎತ್ತಿಕೊಳ್ಳೆ ಮೊದಲು ತನ್ನ | ಮತ್ತೆ ಕಡೆಯಬಹುದು ಮೊಸರ |
ಅತ್ತು ನಾ ಚಾಲ್ವರಿದೆನಲ್ಲೆ | ಹೆತ್ತ ಹೊಟ್ಟೆ ಮರುಗದಲ್ಲೆ  || ೧ ||

ಮಕ್ಕಳನಳಿಸುವುದು ಹೆ | ಮ್ಮಕ್ಕಳಿಗೆ ನಡತೆಯೇನೆ |
ರಕ್ಕಸಿಯಂತೇಕೆ ಮನಸು | ಕಕ್ಕಸವಾಯ್ತಮ್ಮ ನಿನಗೆ  || ೨ ||

ತುಡುವೆದ್ದಿದೆ ನಿಮಿಷವನ್ನು | ತಡೆವನಲ್ಲ ಕಡೆಗು ಮೊಲೆಯ |
ಕೊಡದಿರಯ್ಯಗುಸಿರಿ ಪೆಟ್ಟ | ಕೊಡಿಸುವೆ ನಾನೊಡನೆ ಮತ್ತೆ     || ೩ ||

ಭಾಮಿನಿ

ಎಂದಳುವ ಕುವರನ ತೊದಲ್ನುಡಿ |
ಯಂದವನು ಕೇಳುತ್ತ ನಗುತಾ |
ನಂದಗೋಪಿ ನಿಜಾರ್ಭಕನನೊಲಿದೆತ್ತಿ ಮುದ್ದಿಸುತ ||
ಚಂದದಲಿ ಮೊಲೆಯೂಡಲೊಲೆಯಲಿ |
ಕಂದಲದ ಹಾಲುಕ್ಕಿ ಸೂಸಲು |
ನಂದನನನಿಳೆಗಿಕ್ಕು ತೋಡಿದಳಬಲೆ ವೇಗದಲಿ        || ೧ ||

ವಾರ್ಧಿಕ

ಇತ್ತಲುಂ ಹರಿ ಕನಲ್ದಳುತೌಡುಗಚ್ಚಿ ಮೊಲೆ |
ಯಿತ್ತು ತೃಪ್ತಿಯ ನಯ್ದಿಸದೆ ಪೋದಳೆಂದು ಖತಿ |
ವೆತ್ತೆಡಬಲನನೀಕ್ಷಿಸುತಲಿರ್ದುದೊಂದೆಸೆವ ಕಲ್ಲದಂ ಸತ್ತ್ವದಿಂದ ||
ಪೊತ್ತು ತಂದಾಮರನ ಭಾಜನದಮೇಲ್ ಭರದೊ |
ಳೊತ್ತಿಹಾಕಿದರೊಡೆದು ಹೊಳೆಯಾದುದೊಳಗೆ ಜಾ |
ರುತ್ತೇಳುತೋಡಿದಂ ಬೆಣ್ಣೆಗೊಂಡಯ್ದೆ ನೆರೆಮನೆಗಾಗಿ ವಹಿಲದಿಂದ        || ೧ ||

ರಾಗ ಮಾರವಿ ಆದಿತಾಳ

ಇತ್ತ ಯಶೋದೆಯಣುಗ ಮುಳಿದಳುವನೆ | ನುತ್ತಲಿ ನಡೆತಂದು ||
ನಿತ್ತೀಕ್ಷಿಸಿದಳು ಮಗನಾಟವ ಖತಿ | ವೆತ್ತಿ ಬೆರಗಿಲಂದು || ೧ ||

ಎಲ್ಲಿಗೆ ಪೋದನು ಕಳ್ಳನೆನುತ ತಾ | ನಿಲ್ಲದೆ  ನಡೆತಂದು ||
ಮೆಲ್ಲನೆ ಪಚ್ಚೆವಿಡಿದು ಬಂದಳು ಸ | ದ್ದಿಲ್ಲದೆ ಮರೆಗೊಂಡು        || ೨ ||

ದೂರದಲಿರೆ ಮಾತೆಯ ಜಾಣುವೆಗಳ | ನೋರೆಯಲೀಕ್ಷಿಸುತ ||
ಏರಿದು ಮರದೊರಳನು ಕುಳಿತೋಡಲು | ದಾರಿಯ ಗುತ್ತಿಡುತ || ೩ ||

ಕೋಡಗಗಳ ಕರೆದೊಯ್ಯನೆ ಬೆಣ್ಣೆಯ | ನೀಡುತ ತಾ ಮೆಲುತ ||
ಆಡುವ ಮಕ್ಕಳಿಗೀವುತ ಹಿಂದಕೆ | ನೋಡುತ ನಸುನಗುತ      || ೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹತ್ತಿರಕೆ ಸೆಳೆವಿಡಿದು ಬಂದಳೆ | ನುತ್ತರಿದು ಮರದೊರಳಿನಿಂದಿಳಿ |
ವುತ್ತಲೋಡುವ ನಂದನನ ಬೆಂ | ಬತ್ತುತಾಗ ||
ಬೆರಸಿದಳು ಸೆಳೆವಿಡಿದು ನಿಲು ನಿಲು | ದುರುಳಯೆನುತಲನಂತವೇದಗ |
ಳರಸಿ ಕಾಣದಪಾರಮಹಿಮನ | ಸರಸಿಜಾಕ್ಷಿ  || ೨ ||

ಚಲಕುಚದ್ವಯಭಾರದಲಿ ನಡು | ವಳುಕುತುಸಿರಿಡುತಟ್ಟುವವ್ವೆಯ |
ಬಳಲಿಕೆಯ ಕಂಡೋಡುವುದನುಳಿ | ದಳುತನಿಂದ     || ೩ ||

ಒಡನೆ ಮೊಗವನು ಮುಚ್ಚಿ ಕಯ್ವೆರ | ಳೆಡೆಯಲೀಕ್ಷಿಸುತಂಜಿದೋಲಿರೆ |
ಬೆಡಗಬೀರುವ ಮಗನ ಕಂಡಾ | ಮಡದಿ ನಗುತ       || ೪ ||

ಭಾಮಿನಿ

ಬೆದರುವನು ಮಗನೆಂದು ಕೊಲಲರಿ |
ಯದೆ ಯಶೋದೆ ಕುಚೇಷ್ಟನಿಗೆತ |
ಕ್ಕುದನು ಮಾಳ್ಪೆನು ಕಟ್ಟಿಹಾಕುವೆನೆಂದು ನೇಣೊಂದ ||
ಸದನದಿಂತರಿಸಿದು ನಿಜಾತ್ಮಜ |
ನುದರವನು ಬಂಧಿಸಲಿಕಿಬ್ಬೆರ |
ಳೊದಗದಿರೆ ಮೇಣೊಂದ ಸಂದಿಸಿದಳು ಸರೋಜಾಕ್ಷಿ  || ೧ ||

ವಾರ್ಧಿಕ

ಅದು ಸಾಲದಿರೆ ಜೋಡಿಸಿದಳೊಂದು ನೇಣನಂ |
ತದು ನೆರೆಯದಿರೆ ಬಂಧಿಸಿದಳೊಂದು ನೇಣನಂ |
ತದುವೆ ಮೊದಲಂದದೊಳಿರಲ್ಕೊಂದು ಮತ್ತೊಂದು ಮಗುಳೊಂದು ಮೇಣೊಂದನು ||
ಸುದತಿಯಿಂತಾಲಯದೊಳಿರ್ಪನೇಣೆಲ್ಲಮಂ |
ಒದಗಿನಿಂತರಿಸಿ ಕಟ್ಟಿದರಯ್ದದದಿರಲೂರ |
ಸದನಂಗಳೊಳಗುಳ್ಳ ನೇಣ್ಗಳಡಗಿದವಜಾಂಡೋದರನ ಕಟಿತಟಿದೊಳು || ೧ ||

ತೊಟ್ಟಿಲಿಳಿದವು ನೆಲಕೆ ವಸನಂಗಳಂ ಬಿಗಿದು |
ಕಟ್ಟಿರ್ದ ದಿಂಡನುಂ ಬಿಡಿಸಿದರ್ ಪಶುಗಳಂ |
ಬಿಟ್ಟರಾನೇಣ್ಗಳೆಲ್ಲವು ಬಂದದಯ್ದಡಿನ್ನೇನೆಂಬೆನಚ್ಚರಿಯನು ||
ನಿಟ್ಟಿಸಿ ಯಶೋದೆ ಬೆರಗಾಗುತಿರೆ ಬಳಲಿ ಬುಸು |
ಗುಟ್ಟುತಿರೆ ತಾಯ್ ದಣಿದಳೆಂಬ ಕಾರುಣ್ಯದಿಂ |
ಕಟ್ಟುವಡೆದಂ ದಯಾನಿಧಿಯೊಂದೆ ನೇಣಿಂದಲರಸ ಕೇಳ್ ಕೌತುಕವನು  || ೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳೇನೆಂಬೆ ನೇಣಿನ | ಗಿರಿಗಳೆಂಬಂದದಲಿ ರಾಶಿಗ |
ಳಿರಲು ಕಂಡಾಶ್ಚರ್ಯವಡುತಾ | ತರುಣಿಯಂದು      || ೧ ||

ತೆಗೆಸಿ ನೇಣ್ಗಳನೆಲ್ಲವನು ಕೇಳ್ | ಮಗನೆ ಚೇಷ್ಟೆಯನಿನ್ನು ಮಾಡುವ |
ಬಗೆಯ ನೋಳ್ಪೆನು ತಾನೆನುತ ನಸು | ನಗುತಲಾಗ  || ೨ ||

ಹರಿಯ ಮರದೊರಳಿಂಗೆ ಕಟ್ಟಿದು | ಹರುಷದಲಿ ಮನೆಗೆಲಸಕಾ ಸತಿ |
ಭರದಿ ಪೋಗಲು ನೆನೆದನೊಂದ | ಚ್ಚರಿಯ ಬಗೆಯ    || ೩ ||

ಭಾಮಿನಿ

ನಾರದನ ಶಾಪದಲಿ ಮುನ್ನ ಕು |
ಬೇರನಾತ್ಮಜರೀರ್ವರರ್ಜುನ |
ಭೂರುಹಗಳಾಗಿರ್ದರಭ್ರವ ತುಡುಕಿ ಜೋಡಿನಲಿ ||
ಶ್ರೀರಮಣನದನರಿದು ಶಾಪನಿ |
ವಾರಣವ ನಾ ಮಾಳ್ಪೆ ಧನದಕು |
ಮಾರರಿಂಗೆನುತೊರಳ ಸೆಳೆವುತ ಬಂದನಾಯೆಡೆಗೆ   || ೧ ||

ಅವಳಿ ಮತ್ತಿಗಳೆಡೆಯಲಾ ಮಾ |
ಧವನು ಪೊಕ್ಕಡೆ ಸಿಕ್ಕಿದೊರಳನು |
ತವಕ ಮಿಗುತೆಳೆಯಲ್ಕೆ ನಿರಿ ನಿಳಿ ನಿಟಿಲು ನಿಟಿಲೆನುತ ||
ಭುವನದಂತ್ಯದ ಸಿಡಿಲ ರವದಂ |
ತವನಿಗೊರಗಲು ಮರಗಳಾ ವೈ |
ಶ್ರವಣ ತನುಜರು ಕಂಡರಚ್ಯುತನಮಲಮೂರ್ತಿಯನು || ೨ ||

ವಾರ್ಧಿಕ

ಇಂದಿರಾನಾಥನಂ ಈಶಸಂಪ್ರೀತನಂ |
ಸುಂದರಾಕಾರನಂ ಸುಮನಸೋದ್ಧಾರನಂ |
ಚಂದನವಿಲೇಪನಂ ಚಾರುಚಿದ್ರೂಪನಂ ಬಾಲನಂ ಗೋಪಾಲನಂ ||
ನಂದಸುಕುಮಾರನಂ ನವನೀತಚೋರನಂ |
ಕುಂದಸಮರದನನಂ ಕುಮುದಾಪ್ತವದನನಂ |
ಕಂಧರಾಭಾಂಗನಂ ಕಸ್ತೂರಿರಂಗನಂ ಕಂಡವರ್ ಪೊಡಮಟ್ಟರು         || ೧ ||

ರಾಗ ಕಾಂಭೋಜ ಝಂಪೆತಾಳ

ಎರಗಿ ನುತಿಗೆಯ್ವ ನಳಕೂಬರಮಣಿಗ್ರೀವ | ರಿರವ ಕಂಡಚ್ಯುತನು ಮುದದಿ ||
ಚಿರಕಾಲ ಬಳಲಿದಿರಿ ಸುಖದೊಳಿಹುದಿನ್ನೆನುತ | ಪರಸಿ ಕಳುಹಿದನು ಕೃಪೆಯಿಂದ  || ೧ ||

ಇತ್ತ ನಂದಾದಿಗೋಪರು ಕೇಳ್ದು ಭೀತಿ ತಾ | ಳುತ್ತಿದೇನುತ್ಪಾತಮೆನುತ ||
ಹತ್ತಿರಕೆ ಬಂದು ನೋಡಿದರಿಳೆಗೆ ಕೆಡೆದವಳಿ | ಮತ್ತಿಯ ಮರಂಗಳನು ಭರದಿ      || ೨ ||

ತರಳನದರೆಡೆಯೊಳಾಮರದೊರಳನೆಳೆವುತ್ತ | ಲಿರೆ ಕಂಡು ನಂದನುರು ಭಯದಿ ||
ಮುರಿದುವೇಕೀ ತರುಗಳಣುಗನಿದರಡಿಯಾಗ | ದಿರುವುದಿದು ಪುಣ್ಯವೆನುತಿರ್ದ     || ೩ ||

ಒರಳ ಸಳೆವುತ ಕೃಷ್ಣ ಬರೆಸಿಲುಕಿತದರೆಡೆಯೊ | ಳಿರದೆ ಮತ್ತೆಳೆಯೆ ಬುಡಸಹಿತ ||
ಮುರಿದವೀ ಮರಗಳಾವ್ ಕಂಡೆವೆನುತಾಡುತಿಹ | ತರಳರುಸಿರಲು ಕೇಳ್ದನಾಗ    || ೪ ||

ಲಲನೆಯನು ಕರೆದೆಲೆಗೆ ಪಾಪಿ ನೀ ನಂದನನ | ಕೊಲಲೆಳಸಿ ಬಂಧಿಸಿದೆಯೆನುತ ||
ಮುಳಿವುತುರೆ ಬಯ್ದು ಬಾಲನನೆತ್ತಿ ಮುದ್ದಿಸುತ | ಉಳಿಸಿದನು ದೇವರೆನುತಿರ್ದ    || ೫ ||

ವಾರ್ಧಿಕ

ನಂದನಿಂತೆನುತತುಳ ಮೋಹದಿಂದೈದೆ ನಿಜ |
ನಂದನನಪ್ಪಿ ಮುದ್ದಿಸಿ ಚುಂಬಿಸುತ್ತಲಾ |
ನಂದಪಡುತೆಂದನುತ್ಪ್ರಾತಂಗಳಹವೀರಬೃಹದ್ವನದೊಳಿನ್ನಿರ್ದೊಡೆ ||
ಕಂದನಿಗೆ ಲೇಸಾಗದದರಿಂದಲೆಮಗಿರ |
ಲ್ಕಂದಮಲ್ಲೀ ಸ್ಥಳಂ ನಡೆವ ವೃಂದಾವನ |
ಕ್ಕೆಂದನುಜರಟ್ಟುಳಿಗಳಾಗದಲ್ಲಿಗೆ ಪೋಪೆವೆಂದೂರ್ಗೆ ಸಾರಿಸಿದನು        || ೧ ||

ಕೇಳುತವೆ ಗೋಪಾಲಕರ್ ತಮ್ಮ ತಮ್ಮ ಪಶು |
ಜಾಲದೊಡನಯ್ದಿದರ್ ಸರಕಿಗುರು ಭಂಡಿಗಳ್ |
ಸಾಲಾಗಿ  ನಡೆವುತಿರೆ ನಂದಗೋಪಂ ಕುಮಾರರ್‌ವೆರಸುತರವ ಕೂಡೆ ||
ಲೀಲೆಯಿಂದಯ್ದಿದಂ ವೃಂದಾವನಕ್ಕೆ ನ |
ವ್ಯಾಲಯಗಳಾದವೆಲ್ಲರಿಗಲ್ಲಿಯನುದಿನಂ |
ಬಾಲರಂ ಸಲಹುತ್ತ ನಂದನಾನಂದದಿಂದಿರುತಿರ್ದನುತ್ಸಹದೊಳು        || ೨ ||

ತರವಿಡಿದ ತರುಗಳಿಂ ಕಳಪಿಕಸ್ವರಗಳಿಂ |
ಸುರುಚಿರದ ಶಿಲೆಗಳಿಂ ಪೊಳೆವ ತಳಿರೆಲೆಗಳಿಂ |
ಪರಿವುತಿಹ ಜಲಗಳಿಂ ತನುವೆತ್ತ ನೆಲಗಳಿಂ ಕೋಮಲಿತ ಲತೆಗಳಿಂದ ||
ಪರಿಮಳಿಪೆಲರ್ಗಳಿಂ ಕಂಪೆಸೆವಲರ್ಗಳಿಂ |
ದರಗಿಳಿಯ ಸೊಲ್ಗಳಿಂ ಪಸುರೆಲೆಯ ಪುಲ್ಗಳಿಂ |
ಸರಸಿಜಸುಮಾಳಿಯಿಂ ನೆರೆದಿಹ ಮದಾಳಿಯಿಂ ಬೃಂದಾವನಂ ಮೆರೆದುದು        || ೩ ||

ಅರಸ ಕೇಳ್ ಗೋವರ್ಧನಾಚಲದ ಪಾರ್ಶ್ವದೊಳ್ |
ಪರಿವ ಯಮುನಾಕೂಲದೊಳ್ ರಾಮಕೃಷ್ಣರುರು |
ತರವಿನೋದಂಗಳಿಂ ತುರುಗಾಯಿತನದೊಳಾ ಗೋಪಾಲಬಾಲರೊಡನೆ ||
ಪರಿಪರಿಯ ಲೀಲೆಯಿಂದಾಡುತನವರತ ಮಿಂ |
ತಿರೆ ಕಂಸನಾಜ್ಞೆಯಿಂದಯ್ತಂದ ವತ್ಸನಂ |
ಮುರಿದು ಬಕನಂ ಕೊಂದಘಾಸುರನ ಮುರಿದಚ್ಯುತಂ ಮುದದೊಳಿರುತಿರ್ದನು    || ೪ ||

ವನಜಭವನೊಮ್ಮೆ ನೋಡುವೆನಿವನ ನರಲೀಲೆ |
ಯನುವನೆಂದಾ ಗೋಪಬಾಲರಂ ಗೋವುಗಳ |
ನನಿತುವನಡಂಗಿಸಲದಂ ತಿಳಿವುತಚ್ಯುತಂ ಕಪಟದಿಂ ಮುನ್ನಿನಂತೆ ||
ಎನಿತುಗೋವಳರು ಗೋವುಗಳಿರ್ದವೆಂದಿನವೊ |
ಲನಿತುಮಂ ನಿರ್ಮಿಸಿದು ವರ್ಷಪರಿಯಂತಿರಲ್ |
ಮನದೊಳಜನಂಜುತಡಗಿಸಿದುದಂ ತಂದೀಯಲರಿಯದಡಿಗೆರಗಿರ್ದನು || ೫ ||

ದಂಡದಂತೆರಗಿರ್ಪ ಕಮಲಜನ ಭಾವಮಂ |
ಕಂಡು ಕರುಣದೊಳಯ್ದೆ ನಿರ್ಮಿಸಿದ ಗೋವುಗಳ |
ತಂಡಮಂ ಗೋಪರಂ ತನ್ನ ತೇಜದೊಳಡಗಿಸುತ್ತಡಗೆಡದ ಮಗನನು ||
ಮಂಡೆವಿಡಿದೆತ್ತುತಂಜದಿರೆಂದು ಸಂತಯಿಸಿ |
ಪುಂಡರೀಕಾಕ್ಷನವನಂ ಕಳುಹಿ ಮೊದಲ ತುರು |
ವಿಂಡನುಂ ಗೋಪಾಲ ಬಾಲಕರನೊಡಗೊಂಡು ಗೋಕುಲಕೆ ನಡೆತಂದನು         ||೬||

ತಾಳವನಮಂ ಮುರಿದು ಗಾರ್ದಭಾಕೃತಿಯೊಳಿಹ |
ಖೂಳಧೇನುಕ ಮಡುಹಿ ವಿಷದ ಮಡುವಂ ಕಲಕಿ |
ಕಾಳಿಯನ ಪೆಡೆಮೆಟ್ಟಿ ಕುಣಿದಂಬುನಿಧಿಗಟ್ಟಿ ಕಾಳಿಂದಿಯಿಂದಲಾಗ ||
ಕಾಳಗಿಚ್ಚನು ನುಂಗಿ ಗೋಗೋಪಜಾಲಮಂ |
ಪಾಲನಂಗೆಯ್ದಣ್ಣನಿಂದಾ  ಪ್ರಲಂಬನಂ |
ಕಾಲಗಾಣಿಸಿದು  ನರಲೀಲೆಯಿಂದಚ್ಯುತಂ ಗೋಕುಲದೊಳೆಸೆದಿರ್ದನು   || ೭ ||

ಇಂತಾಡುತಿರುತಿರಲ್ ಗೋಪರೆಳೆವೆಣ್ಗಳುಂ |
ಕಂತುಜನಕನ ಚೆಲ್ವ ಮೂರ್ತಿಯಂ ಕಂಡು ತ |
ಮ್ಮಂತರಂಗದಿ ಮರುಳ್‌ಗೊಂಡಂಗಸಂಗಮಂ ನಿಚ್ಚಮಂ ಬಯಸಿ ಬಯಸಿ ||
ಸಂತಾಪದಿಂ ಕುದಿವುತನವರತಮೆಲ್ಲರುಂ |
ಭ್ರಾಂತಿಯೋಗದೊಳಚ್ಯುತನ ಗುಣಗಣಂಗಳಂ |
ತಂತಮ್ಮ ಗೃಹಕೃತ್ಯಮಂ ಮರೆತು ಪಾಡುತುರೆ ಸಂತಸಂಪಡುತಿರ್ದರು  || ೮ ||

ಕೆಳೆಯರೊಡನಾಡುವಂ ಕರೆದೊಟ್ಟುಗೂಡುವಂ |
ಕೊಳಲೊಳುರೆ ಪಾಡುವಂ ಕುಣಿದು ನಲಿದಾಡುವಂ |
ಸಲೆ ಸೊಗಸುಮಾಡುವಂ ಸತಿಯರಂ ನೋಡುವಂ ರಂಗನರೆಗಂಗಳಿಂದ ||
ಲಲನೆಯರ್ ಬಾಡುವರ್ ಬಳಲಿ ನಲಿದಾಡುವರ್ |
ನಿಲುನಿಲುಕಿ ನೋಡುವರ್ ನೆರೆದೊಡನೆ ಪಾಡುವರ್ |
ಚೆಲುವಿಕೆಯನಾಡುವರ್ ದೇವರೊಳ್ ಬೇಡುವರ್ ಕೃಷ್ಣನಾಲಿಂಗನವನು  || ೯ ||