ಭಾಮಿನಿ
ಕೆಲವು ದಿನಗಳೆಯಲ್ಕೆ ಮತ್ತಾ |
ಚೆಲುವರಿಂತಾಡುತ್ತ ಬೀದಿಗ |
ಳೊಳಗೆ ಹರಿ ಹರಿದಾಡುತಿದ್ದರು ಕೆಳೆಯರೊಡಗೂಡಿ ||
ಲಲಿತ ರತ್ನಾಭರಣದಲಿ ಹೊಳೆ |
ಹೊಳೆವ ತನು ಕಾಂತಿಗಳಲಾ ಮಂ |
ಗಳ ಮನೋಹರರೆಸೆದ ರಿಂದುದಿನೇಶರಂದದಲಿ || ೧ ||
ವಾರ್ಧಿಕ
ನೆರೆಮನೆಯ ಮುಮ್ಮನೆಯನಿರದಯ್ದಿಯಾಡುವರ್ |
ತರುಣಿಯರ್ ಮೋದದಿಂ ಮೆಲ್ವುದಂ ನೀಡುವರ್ |
ಹರುಷದಿಂ ಕೊಂಡು ಮೆಲುತೊಡನೆ ಕುಣಿದಾಡುವರ್ ಬಾಲಕರ್ ಸೊಬಗಿನಿಂದ ||
ನೆರೆನೆರೆವುತೂರನಾರಿಯರೊಟ್ಟುಗೂಡುವರ್ |
ಮರೆದು ಮನೆಗೆಲಸಮಂ ಮರುಳಾಗಿ ನೋಡುವರ್ |
ಕರೆಕರೆವುತಪ್ಪಿ ಚುಂಬಿಸಿ ಮುದ್ದು ಮಾಡುವರ್ ಸತಿಯರೇಂ ಪುಣ್ಯಾತ್ಮರೋ || ೧ ||
ಒಂದು ದಿನವಣುಗನಾಡುತಲಯ್ದೆ ಮಣ್ದೆಗೆದು |
ತಿಂದನೆನೆ ಕೇಳ್ದಾ ಯಶೋದೆ ಸೆಳೆಕೊಂಡೆಯ್ದಿ |
ಕಂದನಂ ಬಾಯ್ದೆರೆದು ಕಂಡಳಾ ಬ್ರಹ್ಮಾಂಡ ಮಂಡಲದ ವಿಸ್ತರವನು ||
ನಂದಗೋಕುಲವನುಂ ಪಶುಗಳಂ ಗೋಪರಂ |
ನಂದನನನೊಡನೆ ಸೆಳೆಗೊಂಡಿರ್ಪ ತನ್ನ ಕ್ಷಿತಿ |
ಯಂದಮಂ ಕಂಡಂಜಿಕಣ್ಮುಚ್ಚಿ ಶಿವಯೆನಲ್ ಮುನ್ನಿನಂತೆಸೆದಿರ್ದನು || ೨ ||
ರಾಗ ಭೈರವಿ ಝಂಪೆತಾಳ
ನಗುತಂಜಿದಂತಿರುವ | ಮಗುವನೀಕ್ಷಿಸುತೆನ್ನ |
ಮಗುವೆ ಬಾರೆನುತಲಾ | ಮುಗುದೆ ಮುದ್ದಿಸುತ || ೧ ||
ಪಿರಿದಾದ ಚಿತ್ರವನು | ಮರೆದು ಮೊಲೆಯೂಡಿದಳು |
ಹರಿಯ ಮಾಯೆಗಳನಾ | ರರಿವರೈ ನೃಪತಿ || ೨ ||
ಮತ್ತೆ ಬಲರಾಮಸಹಿ | ತುತ್ತಮಚರಿತ್ರನಾ |
ಡುತ್ತಿರ್ದನರ್ಭಕರ | ಮೊತ್ತದೊಡಗೂಡಿ || ೩ ||
ರಾಗ ಪಂತುವರಾಳಿ ಪಂಚಾಗತಿ ಮಟ್ಟೆತಾಳ
ಬಾಲಕೃಷ್ಣನಾಡುತಿರ್ದನು ||
ಲೀಲೆಯಿಂದ ಊರ ಗೋ | ಪಾಲರಣುಗರೊಡನೆ ಕೂಡಿ || ಪ ||
ವೇದವೆಲ್ಲೊಂದುಗೂಡಿ | ವಾದವಿಲ್ಲದರಸಿಯರಸಿ |
ಶೋಧಿಸಲ್ಕೆ ತೀರದಯ್ದೆ ನಾಚುತಿರ್ಪವು ||
ಆದಿಪುರುಷನಾ ಮಹತ್ತ | ನುಳಿದು ಮಕ್ಕಳೊಡನೆ ಕೂಡಿ |
ಹಾದಿಬೀದಿಯಲಿ ಬಲು ವಿ | ನೋದದಿಂದಲೋಡಿಯಾಡಿ || ೧ ||
ಕರುಗಳನ್ನು ಬಾಲವಿಡಿವು | ತಿರದೆ ಜೋಲುತೆಳಸಿಕೊಳುತ |
ಉರುಬಿಯಾಡಲುರುಳಿ ನೆಲಕೆ ಬೀಳುತೇಳುತ ||
ತರಳರನ್ನು ಹಗಲನೇರಿ | ಕುದುರೆಯಹಹ ನೋಡೆನುತ್ತ |
ಮರಳಿಯವರ ಪೊತ್ತು ಧೊಪ್ಪ | ನುರುಳುಗೆಡಹಿಯಳಲಿಸುತ್ತ || ೨ ||
ಕಣ್ಣುಮುಚ್ಚಾಲೆಯಾಟ | ಚೆಂಡಿನಾಟ ಚೀನಿಕೋಲು |
ಮಿಣ್ಣನಡಗಿ ಹುಗುವ ಆಟ | ಗಜಿಗ ಸುಡುಗುಡಿ ||
ಬಣ್ಣ ಬುಗುರಿ ಬೋರುಬುಗುರಿ | ಯಾಟಗಳಲಿ ನಲಿವುತಿಪ್ಪ |
ಚಿಣ್ಣರೊಡನೆಯಾಡಿಯಾಡು | ತಣ್ಣಸಹಿತ ನಲವಿನಿಂದ || ೩ ||
ಭಾಮಿನಿ
ತರಳರೊಡನಿಂತಾಡುತಾಡುತ |
ನೆರೆಮನೆಯ ಮುಮ್ಮನೆಯ ಪೊಕ್ಕವ |
ರಿರದ ವೇಳೆಯನರಿದು ಪಾಲ್ ಮೊಸರುಗಳ ಸವಿಸವಿದು ||
ಮರಳಿ ಮಿಣ್ಣನೆ ಮುದ್ದೆ ಬೆಣ್ಣೆಯ |
ನಿರದೆ ಕೊಂಡಾರರಿಯದವೊಲಾ |
ತರಳರಿಂಗೀವುತ್ತ ತಾ ಮೆಲುತಿರ್ದನಡಿಗಡಿಗೆ || ೧ ||
ವಾರ್ಧಿಕ
ಎಂದಿನಂದದೊಳಿತ್ತಲಾ ಗೋಪನಾರಿಯರ್ |
ಮಿಂದುಮಡಿಗಳ ನುಟ್ಟು ತಂತಮ್ಮ ಬಾಲಕರಿ |
ಗಂದದಿಂದುಣಲಿಕ್ಕುತೀಕ್ಷಿಸಲ್ ಪಾಲ್ ಮೊಸರ ಪಾತ್ರೆಗಳ್ ಬರಿದಾಗಿರೆ ||
ನಿಂದು ನೋಡಿದರಿದೇನಾಶ್ಚರ್ಯಮೆಂದೆಲ್ಲ |
ರೊಂದುಗೂಡಿದರೊಡನೆ ತಂತಮ್ಮ ಮನೆಯಲಾ |
ದಂದಮಂ ಬಣ್ಣಿಸುತಲೇನೆಂಬೆನಚ್ಯುತನ ಲೀಲಾವಿನೋದಗಳನು || ೧ ||
ರಾಗ ಘಂಟಾರವ ಆದಿತಾಳ
ಅಕ್ಕ ನೋಡಿದೇನು ಚೋದ್ಯವೆ | ಮನೆಯನಾರೊ | ಪೊಕ್ಕನಾತಗೆಷ್ಟು ವಿದ್ಯವೆ ||
ಸಿಕ್ಕದೊಳಿಟ್ಟಿಪ್ಪ ಹಾಲು | ನೆಕ್ಕಿದಂತಾಗಿರ್ಪುದಲ್ಲೆ | ಮಕ್ಕಳಿಗೆಂದಿಟ್ಟೆನಾದ |
ರಿಕ್ಕಲೇನುಯಿಲ್ಲವಲ್ಲೆ || ೧ ||
ಬೆಣ್ಣೆಯಿಲ್ಲ ಭಾಂಡದೊಳಗೆ | ಮೊಸರಪಾತ್ರ | ನುಣ್ಣನಾಗಿಟ್ಟಿದ್ದ ಕೆಳಗೆ ||
ಹೆಣ್ಣುಗಳ ಚೇಷ್ಟೆಯಲ್ಲ | ಸಣ್ಣ ಮಕ್ಕಳಾಟವಲ್ಲ | ಬಣ್ಣಗಾರನಾರೊ ಬಂದು |
ಮಿಣ್ಣನಿಂತಾ ಕಜ್ಜಗೆಯ್ದ || || ೨ ||
ಸಜ್ಜಿನೂಟವೆನ್ನ ಗಂಡಗೆ | ಕೋಪದಿ ನಿತ್ಯ | ಘರ್ಜಿಸುವರುಂಬ ವೇಳೆಗೆ ||
ಕಜ್ಜವಿಂತು ಮೀರಿತಲ್ಲ | ಹೆಜ್ಜೆಯಿಡಲಾರೆನಲ್ಲೆ | ಲಜ್ಜೆಯಿಲ್ಲದಂತೆ ನೀರು |
ಮಜ್ಜಿಗೆಯೆಂತಿಕ್ಕಲಿಂದು || ೩ ||
ಹುಚ್ಚುಮಾತಿದಿಂತು ಪೇಳ್ವರೆ | ಕಾಣದ ಹಾಗೆ | ಮುಚ್ಚಿಯಿಟ್ಟಿದ್ದಾರು ಮೆಲ್ವರೆ ||
ಹೆಚ್ಚಿದ್ದಾವೆ ಮಾಳಬೆಕ್ಕು | ನಚ್ಚಿಕೊಂಡುಹಾಲು ಮೊಸರ | ನಿಚ್ಚ ನಿಚ್ಚ ಬಾಹವಿಲ್ಲಿ |
ವೆಚ್ಚಗೆಯ್ದು ಹೋಹುದಲ್ಲೆ || ೪ ||
ಮಾಳನಾಗೆ ಭಾಂಡವೊಡೆಯದೆ | ನಮ್ಮಿಷ್ಟು ಮನೆಯ | ಹಾಲು ಮೊಸರನೆಲ್ಲ ಕುಡಿವುದೆ ||
ಜಾಲಮಾತಿದಲ್ಲ ಬಂದ | ಖೂಳನಾರೊ ಮಾಯದಿಂದ | ನಾಳೆ ನೋಡಿಕೊಂಬ ಸಾಕೆ |
ಹೋಲದಂಥ ಮಾತಿದೇಕೆ || ೫ ||
ಭಾಮಿನಿ
ವನಿತೆಯರು ನಾಳಿನಲಿ ನೋಡುವೆ |
ವೆನುತಲಿರೆ ಮರುದಿವಸ ಮತ್ತಾ |
ಚಿನುಮಯನು ಮೊದಲಿಂದಲತಿಶಯವಾದ ಚೇಷ್ಟೆಯಲಿ ||
ಮನೆಮನೆಗಳನು ಪೊಕ್ಕು ತಾ ಮಿ |
ಣ್ಣನೆ ವಿನೋದದಿ ಚೋರವೃತ್ತಿಯ |
ನನುಕರಿಸಿ ಪೋಗಿರಲು ಮಗುಳಿಂತೆಂದರಬಲೆಯರು || ೧ ||
ರಾಗ ಘಂಟಾರವ ಅಷ್ಟತಾಳ
ಮತ್ತಿಂದು ಬಂದನಲ್ಲೆ | ನಾಳೆಗೆ ಕಾಂಬು | ದುತ್ತಮವೆಂದೆವಲ್ಲೆ ||
ಅತ್ತಿತ್ತಲವ ತಿರು | ಗುತ್ತಿರ್ಪ ಸೋವದು | ದೆತ್ತಿರ್ಪನೆಂಬಂತೆ |
ಗೊತ್ತ ಕಾಣಿಸನಲ್ಲೆ || ೧ ||
ಮೊಸರ ಭಾಂಡವ ಜರಿದು | ನುಣ್ನೆಲವೆಲ್ಲ | ಕೆಸರಾಗಿದೆ ಹರಿದು ||
ಹಸುವಿನ ಹಾಲಿಲ್ಲ | ಶಿಶುವೆದ್ದಳುವುದಲ್ಲ | ಹಸಗೆಡಿಸಿದನಲ್ಲ |
ಹೊಸ ನೂತನದ ಕಳ್ಳ || ೨ ||
ಕುಳಿತಾವು ಕಾದಿದ್ದೆವೆ | ಗೆಜ್ಜೆಯ ಧ್ವನಿ | ಘಲಿರೆಂಬುದನು ಕೇಳ್ದೆವೆ ||
ನೆಲೆಯನೆಮಗೆ ತೋರ | ಕಳವಿಲಿ ಬಹುಧೀರ | ಸುಲಭನಲ್ಲವೆಚೋರ |
ಬಲು ಮಾಯಕಗಾರ || ೩ ||
ಸಣ್ಣವನಾತ ಕಾಣೆ | ನಾ ಕಂಡೆನು | ಮಿಣ್ಣನೆ ಬಂದ ಜಾಣೆ ||
ಬಣ್ಣಗಾರಿಕೆಯಿಂದ | ಬೆಣ್ಣೆಯೆಲ್ಲವ ತಿಂದ | ಹೆಣ್ಣೆಹೇಳದಿರೆಂದ |
ನುಣ್ಣನಾಚೆಗೆ ಸಂದ || ೪ ||
ಕಂಡು ನೀ ಬಿಡುವರೇನೆ | ಕೂರಿಗಿದರೆ ಬೆಂ | ಗೊಂಡಾವು ಬಾರೆವೇನೆ ||
ಪುಂಡನನೀರೀತಿ | ಯಂಡಿಸಲೇಂ ನೀತಿ | ಗಂಡೆ ಬರಿದೆ ಭೀತಿ |
ಗೊಂಡೆ ನೂತನಗಾರ್ತಿ || ೫ ||
ರಾಗ ಸಾರಂಗ ತ್ರಿವುಡೆತಾಳ
ಅಕ್ಕ ನೀ ಮುನಿವರೇನೆ | ಎನ್ನಲಿ ತಪ್ಪ | ನಿಕ್ಕಿ ಹೀಗೆಂಬರೇನೆ ||
ಚಿಕ್ಕವಳಾನೊರ್ವಳ್ | ಇಕ್ಕಟ್ಟಿನೆಡೆಯಲ್ಲಿ | ಮಿಕ್ಕೋಡುವವನ ಕ |
ಯ್ಯಿಕ್ಕಿ ಹಿಡಿವವಳೇನೆ || ೧ ||
ಸಣ್ಣವನೆಂದೆಯಲ್ಲೆ | ಪಿಡಿಯೆ ನಿನ್ನ | ಬಣ್ಣಗುಂದುವುದೆಬಾಲೆ ||
ಕಣ್ಣಲಿ ಕಂಡು ಕ | ಳ್ಳನ ಬಿಟ್ಟೋಡಿಸಿ ಮತ್ತೆ | ಬಣ್ಣಗಾರಿಕೆ ಮಾತ |
ನುಣ್ಣನಾಡುವೆಯಲ್ಲೆ || ೨ ||
ಹೆಣ್ಣೆ ನೀ ಚದುರೆ ಕಾಣೆ | ಕಳ್ಳನ ಬಿಟ್ಟು | ಮಿಣ್ಣನೋಡಿಸಿದೆ ಜಾಣೆ ||
ಎಣ್ಣೆಗೆ ಸೀಗೆಯನಿಕ್ಕಿದ ತೆರದಲ್ಲಿ | ಬಣ್ಣಗಾರಿಕೆ ಮಾತ |
ನುಣ್ಣನಾಡುವೆಯಲ್ಲೆ || ೩ ||
ಇಂದಿಗೆ ಹೋದರೇನೆ | ನಾಳೆಗೆ ಕಳ್ಳ | ಬಂದಲ್ಲದಿರುವನೇನೆ ||
ಸಂದಿಗೊಂದಿಯಲಂಡಿ | ನಿಂದು ಚೋರನ ಪಿಡಿ | ದೊಂದ ಕರೆವೆನೆಲ್ಲ |
ಬಂದು ಪಿಡಿಯಿರವ್ವ || ೪ ||
ಕಂದ
ಈದಿನ ಹೋಗಲಿ ನಾಳೆಗೆ | ಭೇದಿಸುತಂ ಪಿಡಿವೆನೊರ್ವಳಾತನ ನೆನುತಂ ||
ಸಾಧಿಸುತಾದಿನವಿರೆ ದಾ | ಮೋದರನರಿತು ಪೊಕ್ಕನವಳಾಲಯಮಂ ||
ವಾರ್ಧಿಕ
ಇಲ್ಲಿ ಕಾದಿರ್ಪಳೆನ್ನಂ ಪಿಡಿವೆನೆಂದಿವಳ |
ನೆಲ್ಲರೊಳ್ ಮೊಗವೆತ್ತದಂತೆ ಮಾಡುವೆನಿದಕೆ |
ಬಲ್ಲೆನಾಟವನೆಂದು ಮಿಣ್ಣನರಿಯದವೊಲಾಡುತ್ತೆಯ್ದಿಪಾಲ್ ಮೊಸರನು ||
ಚೆಲ್ಲಿ ಭಾಂಡವನೊಡೆದು ಬೆಣ್ಣೆಗೊಂಡೋಡುತಿರೆ |
ನಿಲ್ಲು ಸಿಕ್ಕಿದೆ ಚೋರಯೆಂದವಳ್ ಪಿಡಿಯೆ ನಗು |
ತಿಲ್ಲದಿಹೆ ಚೇಷ್ಟೆಯನ್ನೆಸಗಿ ಮೊಲೆ ವಿಡಿದಪ್ಪಿ ಜುಣುಗಿ ಮೆಲ್ಲನೆ ನಡೆದನು || ೧ ||
ರಾಗ ತೋಡಿ ಅಷ್ಟತಾಳ
ಈ ರೀತಿಯಲಿ ಮಾನಗೆಡಿಸಿ ಪೋಗಲು ಮೊಗ | ದೋರಲಾಕೆಯು ನಾಚುತ್ತ ||
ನಾರಿಯೆರೆಲ್ಲರ ಕರೆದೆಂದಳೆನ್ನ ಕಯ್ ಮೀರಿಯೋಡಿದನೆನ್ನುತ || ೧ ||
ಕರೆವೆನೆಂದೆಲ್ಲರೊಳೊರೆದಿರ್ಪೆ ನೀನೊಮ್ಮೆ | ಸ್ವರಗೆಯ್ಯಲಿಲ್ಲವಲ್ಲೆ ||
ಬರಿದೆ ಬನ್ನಣೆಯ ಮಾತುಗಳ ನೀನಾಡುವೆ | ತರಳೆ ನೀ ಜಾಣೆಯಲ್ಲೆ || ೨ ||
ಮರುಳಾದೆಯೇನಕ್ಕ ಬರಿದೆ ಜರೆದೆಯೆನ್ನ | ನರಿಯೆ ನೀನವನಾಟವ ||
ಅರುಹುವರೆನಗೆ ನಾಚಿಗೆಯಪ್ಪುದೇನೆಂಬೆ | ತರಳ ಮಾಡಿದ ಮಾಟವ || ೩ ||
ಬರುತ ಚಿಕ್ಕವನಾಗಿ ತೋರ್ಪ ಪಿಡಿಯೆ ಹೊಸ | ಹರೆಯದಲಿರ್ದ ಕಾಣೆ ||
ಕರೆವೆನೆಂದರೆ ಬಾಯನವಚಿ ಪಿಡಿವುತ್ತೆನ್ನ | ಮರಿಯಾದೆಯಳಿದ ಜಾಣೆ || ೪ ||
ಥಳಥಳಿಸುವ ನವರತ್ನಭೂಷಣದಿಂದ | ಹೊಳೆವುತ್ತಲಿರ್ಪನಲ್ಲೆ ||
ಒಳಗಾತ ಬರಲು ಕತ್ತಲೆಯ ಮನೆಯೊಳೆಲ್ಲ | ಬೆಳಕಾಗಿ ತೋರ್ಪುದಲ್ಲೆ || ೫ ||
ನೀಲವರ್ಣದಲಿಹ ಬಾಲಹರೆಯನು ಪೂ | ಗೋಲಿದೆ ಕಯ್ಯೊಳಗೆ ||
ಹೋಲಿಕೆಯೊಳಗೆ ಯಶೋದೆಯ ಮಗನನ್ನು | ಹೋಲಿಸಬಹುದಾತಗೆ ||೬||
ಭಾಮಿನಿ
ಎನಲು ಕೇಳುತ ಬೆರಗುವಟ್ಟಾ |
ವನಿತೆಯರು ಸಂಶಯದೆಲೇಳೆ ಜ |
ವ್ವನದವರು ಬೇಡೆಂದು ಮುಪ್ಪಿನ ಸತಿಯನೊರ್ವಳನು ||
ಮನೆಯ ಕಾದಿರುಮಿಂದು ಬಹವಾ |
ವೆನುತಿರಿಸಿ ನೆರೆದೆಯ್ದಲಿತ್ತಲು |
ವನಜಲೋಚನನರಿತು ಪೊಕ್ಕನು ಕಾವಲಿಹ ಮನೆಯ || ೧ ||
ಮುಗುಳುನಗೆಯಲಿ ಬೆಣ್ಣೆಗೊಂಡಿವ |
ಳಗಡುತನವನು ಮಾಣಿಸುವೆನೆಂ |
ದಘಹರನು ಬಿಸಿ ಬಿಸಿಯ ಬೂದಿಯಕೊಂಡು ಮರೆಯಿಂದ ||
ಮೊಗಕೆ ಚೆಲ್ಲಿದಡವಳೊದರಿ ಕ |
ಣ್ಣೆಗೆಯಲಾರದೆ ಬಾಯ ಬಿಡುತಿರೆ |
ನಗುತಲೋಡಿದನಿರದೆ ಕೆಳೆಯರ ಬಳಿಗೆ ವೇಗದಲಿ || ೨ ||
ರಾಗ ಶಂಕರಾಭರಣ ತ್ರಿವುಡೆತಾಳ
ಇತ್ತ ಗೋಪಾಂಗನೆಯರೆಯ್ತಂ | ದತ್ತು ಕಂಗಳನೆರಡು ಕಯ್ಯಿಂ |
ದೊತ್ತಿ ಕೊಂಡೊರಲುವಳ ಮಿಗೆ ಕಾ | ಣುತ್ತಲಂದು || ೧ ||
ಏನಿದೇನೇನವ್ವ ಮರುಗುವೆ | ನೀನದೇತಕೆ ನಿನ್ನ ಕಂಗಳಿ |
ಗೇನು ತಾಗಿತು ನಮ್ಮೊಳುಸಿರು ನಿ | ಧಾನಮಾಗಿ || ೨ ||
ಎನಲು ಮರುಗುತ ನೋಡಿಕೋ ಕ | ಣ್ಣಿನಲಿ ಬೂದಿಯ ಹಾಕುತೋಡಿದ |
ಎನಗೆ ನೇತ್ರಗಳಡಗಿತೇ ನೀ | ಮ್ಮಿನಿಬರಿಂದ || ೩ ||
ಎಂದೆನುತಲಳುತಿಪ್ಪವಳ ನಲ | ವಿಂದಲೊಡಬಡಿಸುತ್ತ ತಮ್ಮೊಳ |
ಗೆಂದರಾ ಗೋಪಾಲನಾರಿಯ | ರೊಂದುಗೂಡಿ || ೪ ||
ರಾಗ ಸೌರಾಷ್ಟ್ರ ಗೌಳ ಪಂತುವರಾಳಿ ಆದಿತಾಳ
ನೋಡಿರವ್ವ ಕಳ್ಳನಿಂದು ಮಾಡಿದಾಟವ | ಜೋಡಿಸಿದನು ಮಾಡಬಾರದಂಥ ಮಾಟವ || ಪ ||
ಒಮ್ಮೆ ಹಾಲು ಮೊಸರ ಕುಡಿವ | ನೊಮ್ಮೆ ಭಾಂಡಗಳನೊಡೆವ |
ನೊಮ್ಮೆ ಕರುಗಳನ್ನು ಬಿಡುವ | ಮಗುವನಳಿಸುವ ||
ಒಮ್ಮೆಸದ್ದಿಲ್ಲದೆ ಬರುವ | ಒಮ್ಮೆ ಧ್ವನಿಯ ತೋರುತಿರುವ |
ಹೆಮ್ಮಕ್ಕಳೆಂದರಿದು ನಮ್ಮ | ಸೊಮ್ಮನೆಲ್ಲ ಮುರಿದನಮ್ಮ || ೧ ||
ಹುಡುಗಿಯನ್ನು ತುಡುಕಿ ಪಿಡಿದ | ಮುದುಕಿಯನ್ನು ಕಣ್ಣ ತೆಗೆದ |
ತಡೆವೆವಾನಿನ್ನೆಂತು ಇಂಥಾ | ದುಡುಕುತನವನು ||
ಕುಡಿವ ಹಾಲು ಮೊಸರನೆಲ್ಲ | ಗಡಿಗೆ ಮಡಕೆಯೊಡೆವನಲ್ಲ |
ಕಡೆಗು ಕಷ್ಟಪಡುವದಲ್ಲದೆ | ಪಿಡಿಯಲರಿಯದಾದೆವಲ್ಲ || ೨ ||
ಚೋರನನ್ನು ತುಬ್ಬುಗೆಯ್ವು | ದಾರಿಂದಲಾಗದೆ ಹೋಯ್ತು |
ತೀರದಿದ್ದ ಕೆಲಸವನಿ | ನ್ನಾರಿಗೆಂಬೆವೆ ||
ಊರೊಳು ಕಾದಿರ್ಪತಳ | ವಾರರಿಂಗಾದರು ನಾವು |
ದೂರಿದಲ್ಲದಾಗದಿನ್ನು | ಬೇರೊಂದ್ಯತ್ನ ಕಾಣೆವಮ್ಮ || ೩ ||
ಕಂದ
ಇಂತಳುಲುವ ಸತಿಯರನೇ | ಕಾಂತಾಶ್ರಿತಭಕ್ತರೆಂಬ ಕಾರುಣ್ಯದೊಳಂ ||
ಕಂತುಪಿತಂ ಸಿಲುಕುವೆ ನೀ | ನಿಂತುರಿಸಲ್ ಬಾರದೆಂದು ಕೃಪೆಯಂ ತಳೆದಂ || ೧ ||
ವಾರ್ಧಿಕ
ಇತ್ತಲಾ ಗೋಪಾಲನಾರಿಯರ್ ಬಲು ದುಗುಡ |
ವೆತ್ತಿರದೆ ಮನೆಗೆಲಸ ಕೆಯ್ದುತಿರೆ ಕಾಣುವಂ |
ತತ್ತಲಚ್ಯುತನಯ್ದೆ ಬೆಣ್ಣೆಯಂ ಗೆಳೆಯರಿಂಗೀವು ತೊಯ್ಯನೆ ಮೆಲ್ಲುತ ||
ಮೊತ್ತದಿಂದ ಕಪಿಗಳಂ ಕರೆದು ಕೊಡುತಲಾ |
ಡುತ್ತಲಿರೆ ನೋಡಿದರ್ ಕಯ್ಬಾಯ್ಗೆ ಲೇಪಿಸಿದು |
ಮೆತ್ತಿರುವ ಬೆಣ್ಣೆಗಳ್ಳನನಿದಕೊ ಸಿಕ್ಕಿದನೆನುತ್ತಬಲೆಯರ್ ಮುದದೊಳು || ೧ ||
ರಾಗ ಸೌರಾಷ್ಟ್ರ ಅಷ್ಟತಾಳ
ಇಕ್ಕೊಳ್ಳಿರೌ ಕಣ್ಗೆ ಸಿಕ್ಕಿದ ಬಲು ಕಳ್ಳ | ನೀತ ಕಾಣೆ || ತನ್ನ |
ಠಕ್ಕ ನಡೆಸಿ ನಮ್ಮ ಮಿಕ್ಕೋಡಿ ಪೋದವ | ನೀತ ಕಾಣೆ || ೧ ||
ಸಕ್ಕರೆಯನು ಕದ್ದು | ಮುಕ್ಕಿ ನಡೆದ ಪುಂಡ | ನೀತ ಕಾಣೆ || ಮಾಳ |
ಬೆಕ್ಕಿನಂದದಿ ಹಾಲ | ನೆಕ್ಕಿ ಕುಡಿವ ಲಂಡ | ನೀತ ಕಾಣೆ || ೨ ||
ಒಡೆದು ಭಾಂಡಗಳನ್ನು | ಪುಡಿಗೆಯ್ದು ಪೋದವ | ನೀತ ಕಾಣೆ || ಎವೆ |
ಮಿಡುಕದಂದದಿ ಬಂದು | ಹುಡುಕುವ ಬಗೆಗಾರ || ನೀತ ಕಾಣೆ || ೩ ||
ಕಡೆವ ನೇಣ ಕೊಯ್ದು | ಕಡೆಗೋಲ ಕೊಂಡೊಯ್ದ | ನೀತ ಕಾಣೆ || ದಾರಿ |
ಯೆಡೆಯಲಾ ಹುಡುಗಿಯ | ಮಿಡಿಮೊಲೆವಿಡಿದವ | ನೀತ ಕಾಣೇ || ೪ ||
ಮೊಸರ ಚೆಲ್ಲಿದು ನೆಲ | ಕೆಸರೆಬ್ಬಿಸಿದ ಖೂಳ | ನೀತ ಕಾಣೆ || ಮಲ |
ಗಿಸಿದ ಮಕ್ಕಳ ಬೆವುರಿ | ಹೆಸಗೆಡಿಸಿದ ಪೋಕ | ನೀತ ಕಾಣೆ || ೫ ||
ಪುಸಿಯಲ್ಲವಿನ್ನೇನ | ನುಸಿರುವೆನತಿಜಾಣ | ನೀತ ಕಾಣೆ || ಇವ |
ನೊಸಗೆಯ ಗೋಪ್ಯಮ್ಮ | ಗುಸಿರಿದಲ್ಲದೆ ಮಾಣ | ನೀತ ಕಾಣೆ ||೬||
ಭಾಮಿನಿ
ಶಶಿಮುಖಿಯರಿಂತೆಂದು ಕೃಷ್ಣನ |
ಹೊಸ ಪರಿಯ ಲೀಲೆಯ ಯಶೋದೆಯೊ |
ಳುಸಿರಲೆಂದೆಯ್ತರಲು ಕಾಣುತಲವರನುಪಚರಿಸಿ ||
ಬಿಸಜಲೋಚನೆ ಕುಳ್ಳಿರಿಸಿ ಮ |
ನ್ನಿಸುತಲೇನೆಯ್ತಂದಿರೆಂದೆನೆ |
ನಸುನಗುತಲುಸಿರಿದರು ತಮ್ಮಯ ಮನೆಯ ದುಸ್ಥಿತಿಯ || ೧ ||
ರಾಗ ಯರಕಲಕಾಂಭೋಜ ತ್ರಿವುಡೆತಾಳ
ಅಮ್ಮ ಕೇಳಿಂದೇನನುಸಿರುವೆವಾವಿಂದು | ನಿಮ್ಮ ನಂದನನಾಟವ ||
ನಮ್ಮ ಮನೆಯ ಸೂರೆಗೊಂಡ ಪೇಳಲು ತೀರ | ದೊಮ್ಮೆಗೀತನ ಕಾಟವ || ೧ ||
ಕಾಣದಂದು ಬಂದು ಹಾಲುಮೊಸರನೆತ್ತಿ | ಜಾಣತನದಿ ಕುಡಿವ ||
ಮಾಣದೆ ಮತ್ತೂ ಬೆಣ್ಣೆಯ ಕದ್ದು ಮೆಲುವ ನೀ | ನ್ನಾಣೆ ಸುಳ್ಳಲ್ಲೋಡುವ || ೨ ||
ನಿಲುಕದಂದಿ ಕಯ್ಗೆ ಮೇಲಕೇರಿಸಿ ಕಟ್ಟಿ | ನೆಲುವಿಲಿಟ್ಟರೆಯಾಡುವ ||
ಕೆಳೆಯರ ಹೆಗಲೇರಿ ತೆಗೆದು ಮೊಸ | ರಳಗೆಯನೀಡಾಡುವ || ೩ ||
ಮತ್ತೂ ಮೇಲಿಡೆ ಕಂಡು ನಿತ್ತು ಕೋಲಿನಲಿ ತಾ | ಕುತ್ತಿ ಬಾಯೊಡ್ಡುವನೆ ||
ಸುತ್ತಣ ಮಕ್ಕಳು ಸಹಿತ ಕಲ್ಲಿನಲಿಡು | ತತ್ತಿತ್ತ ಚೆಲ್ಲುವನೆ || ೪ ||
ಕುಡಿದರಲ್ಲೆಂಬುದಿಲ್ಲೊಡೆದು ಭಾಂಡವನೆಲ್ಲ | ಪುಡಿಗೆಯ್ದು ಚೆಲ್ಲುವನೆ ||
ಪಿಡಿಯಲರಿದು ನೆಲ್ಲಕುಡಿದೆಲ್ಲ ಕೆಸರಾಗಿ | ಕೆಡುವುದಿನ್ನೇನೆಂಬೆವೆ || ೫ ||
ಕಂದ
ಎಂದಾಡಿದ ಸತಿಯರ ಮಾತುಗ | ಳಂದವನಾಲಿಸುತಲಣುಗನಂ ಮುದ್ದಿಸುತಂ ||
ನಂದನ ಸತಿಯಂದವದಿರೊ | ಳೆಂದಳ್ ಮುದದಿಂದನೊಯ್ಯ ನೊಂದುತ್ತರಮಂ || ೧ ||
ರಾಗ ಯರಕಲಕಾಂಭೋಜ ಅಷ್ಟತಾಳ
ಯಾಕಮ್ಮ ದೂರುವಿರಿ | ರಂಗಯ್ಯನ | ಯಾಕಮ್ಮ ದೂರುವಿರಿ ||
ಶ್ರೀಕರಶೀಲಸಂಪನ್ನ ಮೂರ್ತಿಯನಿಂತು | ಪೋಕನೆಂದೆಂಬಿರಲ್ಲ | ನೀವೆಲ್ಲ || ೧ ||
ಸಣ್ಣವನಲ್ಲವೇನೆ | ನಿಮ್ಮಲ್ಲಿ ಬಂದು | ಬೆಣ್ಣೆಯ ಮೆಲುವನೇನೆ ||
ಕಣ್ಣ ಮರೆಯಲೀತ | ಮಿಣ್ಣನೆ ಬರುವಂತ | ಬಣ್ಣವನರಿವನೇನೆ | ಇದೇನೆ || ೨ ||
ಇಂದಿಗೆ ಹೋಗಿರಿನ್ನು | ನಾಳೆಗೆ ಬಾರ | ದಂದದಿ ಪೇಳ್ವೆ ನಾನು ||
ಬಂದವನಾರೆಂಬ ನಿಜವನರಿದುಕೊಳ್ಳಿ | ಹೊಂದದೀ ಮಾತುಗಳು | ಬಾಲನೊಳು || ೩ ||
ಹಾಲನೆರೆದರುಣ್ಣನು | ಮೊಸರನಿಕ್ಕೆ | ಬೀಳುತ್ತಳುವ ಚಿಣ್ಣನು ||
ಹಾಲುಮೊಸರ ಕದ್ದು ಮೆಲುವನೆಂಬೀ ಮಾತು | ಪೋಲಿಕೆ ಸಮನಪ್ಪುದೆ | ನೀವ್ ಬರಿದೆ || ೪ ||
ಭಾಮಿನಿ
ಲಲನೆಯರು ಕೇಳುತ ಯಶೋದೆಯ |
ಲಲಿತ ವಚನವನಂದು ಕೃಷ್ಣನ |
ಚೆಲುವ ಮೂರ್ತಿಯಕಂಡು ಕಂಗಳಲಪ್ಪಿ ಮೆಯ್ಮರೆದು ||
ನಿಳೆಯ ಕೆಯ್ದಲು ತೀರದೊಯ್ಯನೆ |
ಮುಳಿದು ದೂರುವ ನೆಪದಿ ಮತ್ತವ |
ರಳುಕದೆಂದರು ಗೋಪಿಯೊಡನಚ್ಯುತನ ಲೀಲೆಗಳ || ೧ ||
ರಾಗ ಘಂಟಾರವ ಅಷ್ಟತಾಳ
ಕೇಳಮ್ಮ ನಿನ್ನ ಬಾಲನಟ್ಟುಳಿಯನ್ನು |
ಪೇಳರಿಯೆವು ಬಾಳಲರಿಯೆವು | ತಾಳಲರಿಯೆವು ಲಾಲಿಸಿ || ೧ ||
ಚಿಣ್ಣನೆಂದೆಮ್ಮೊಳಾಡುವೆ ಇವನೆಂಥ | ಚಿಣ್ಣನೌ ಬಲು ಮಿಣ್ಣನೆಯ್ದುತ |
ಬೆಣ್ಣೆಯನು ಕದ್ದೋಡುವ || ೨ ||
ಸಣ್ಣ ಮಕ್ಕಳಿಗಿತ್ತು ತಾ ಮೆಲುತಿರ್ಪ | ಬಣ್ಣಗಾರಿಕೆಯಣ್ಣನೀತನು |
ಕಣ್ಣಿನಲಿ ನಾವ್ ಕಂಡೆವೆ || ೩ ||
ತಡೆವುದಿಲ್ಲವು ಮೆದ್ದರೆ ಮೆಲಲೀತ | ಹುಡುಗರಿಗೆ ತಾ ಕೊಡುವ ಕಪಿಗಳ |
ಗಡಣಕೀವುತ ಕೆಡಿಸುವ || ೪ ||
ಅಡಗಿಸಿಟ್ಟರೆ ಸುಡಲೀಮನೆಯವನೆಂದು | ಗಡಿಗೆ ಮಡಕೆಯನೊಡನೆ ಬಡೆಬಡೆ |
ದೊಡೆದು ಪುಡಿಪುಡಿಗೆಯ್ವನೆ || ೫ ||
ದೊರಕಲಿಲ್ಲೆಂಬ ಮುಳಿಸಿಂದ ತೊಟ್ಟಿಲ | ನುರುಳಿಚುತ ಮಲಗಿರುವ ಮಕ್ಕಳ |
ಧರೆಗೆ ಕೆಡಹಿದು ಮರುಗಿಸಿ ||೬||
ಕರುಗಳೆಲ್ಲವ ಮೊಲೆಯುಣುವರೆ ಬಿಟ್ಟು | ಒರಳೊಳುಚ್ಚೆಯನಿರದೆ ಹೊಯ್ವನು |
ತರಳರಿಂತವರಿರುವರೆ || ೭ ||
ಕಂದ
ತನಯನನೀಪರಿ ದೂರುವ | ವನಿತೆಯರಂ ನೋಡುತಾ ಯಶೋದೆಯು ಮತ್ತಾ ||
ಕನಕಾಂಗಿಯರೊಡನೆ ನಸು | ಮುನಿಸಿಂದಂ ನುಡಿದಳಣುಗನಂ ಮುದ್ದಿಸುತಂ || ೧ ||
Leave A Comment